ದಿನಗೂಲಿ ದುಡಿಮೆಗಾರರು

ಕರ್ನಾಟಕದಲ್ಲಿ ಇಂದು ಸರಿಸುಮಾರು ೩೮ ಲಕ್ಷ ದುಡಿಮೆಗಾರರ ಬದುಕು ದಿನಗೂಲಿಯ ಮೇಲೆ ನಿಂತಿದೆ. ಕೃಷಿಗೆ ಸಂಬಂಧಿಸಿದಂತೆ ದಿನಗೂಲಿಯ ಸ್ವರೂಪವು ಜೀತವಾಗಿರಲೂಬಹುದು. ಜೀತಪದ್ಧತಿಯನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅದು ಬೇರೊಂದು ರೂಪದಲ್ಲಿ ದುಡಿಮೆಯಗಾರರನ್ನು ಕಾಡುತ್ತಿರಬಹುದು. ಈಗಾಗಲೇ ತಿಳಿಸಿರುವಂತೆ ಕೃಷಿಯನ್ನು ಅವಲಂಬಿಸಿಕೊಂಡಿರುವವರಲ್ಲಿ ಸಾಗುವಳಿಗಾರರ ಪ್ರಮಾಣವು ದಿನಗೂಲಿಗಳ ಪ್ರಮಾಣಕ್ಕಿಂತ ಶಿಷ್ಟರಲ್ಲಿ ಅಧಿಕವಾಗಿದ್ದರೆ ಪರಿಶಿಷ್ಟರಲ್ಲಿ ದಿನಗೂಲಿಗಳ ಪ್ರಮಾಣವು ಸಾಗುವಳಿದಾರರ ಪ್ರಮಾಣಕ್ಕಿಂತ ಅಧಿಕವಾಗಿದೆ. ಕೃಷಿಯನ್ನು ಅವಲಂಬಿಸಿ ಕೊಂಡಿರುವ ಪರಿಶಿಷ್ಟರಲ್ಲಿ ದಿನಗೂಲಿಗಳ ಪ್ರಮಾಣ ಶೇ. ೫೬.೭೩ರಷ್ಟಿದ್ದರೆ ಸಾಗುವಳಿ ದಾರರ ಪ್ರಮಾಣ ಕೇವಲ ಶೇ. ೪೩.೨೭ ಆದರೆ ಕೃಷಿಯನ್ನು ಅವಲಂಬಿಸಿ ಕೊಂಡಿರುವ ಶಿಷ್ಟರಲ್ಲಿ ಸಾಗುವಳಿದಾರರ ಪ್ರಮಾಣ ಶೇ ೬೯.೪೮ರಷ್ಟಿದ್ದರೆ ದಿನಗೂಲಿಗಳ ಪ್ರಮಾಣ ಕೇವಲ ಶೇ೩೦.೫೨.

ಕೃಷಿ ಅವಲಂಬನೆ: ಏರಿಕೆಯಾಗುತ್ತಿರುವ ಪರಿಶಿಷ್ಟರ ಪ್ರಮಾಣ ೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು ರಾಜ್ಯದ ಒಟ್ಟು ಮೊತ್ತ ಪರಿಶಿಷ್ಟ/ ದಲಿತರು ಶಿಷ್ಟ / ದಲಿತೇರರು
೧೯೯೧ ೨೦೦೧ ೧೯೯೧ ೨೦೦೧ ೧೯೯೧ ೨೦೦೧
೧. ಕೃಷಿ ಅವಲಂಬನೆ (ಸಾಗುವಳಿದಾರರು + ದಿನಗೂಲಿ ಕೃಷಿ ದುಡಿಮೆಗಾರರು) ಒಟ್ಟು ೧೦೬.೧೬ ೯೯.೭೦ ೨೯.೦೨ ೨೮.೨೪ ೮೦.೧೪ ೭೧.೪೬
(೨೬.೫೮) (೨೮.೩೨) (೭೪.೪೨) (೭೧.೬೮)
೩೭.೭೬ ೩೩.೪೧ ೧೧.೭೧ ೧೦.೭೧ ೨೬.೨೧ ೨೨.೭೦
(೩೦.೫೯) (೩೨.೦೬) (೬೯.೪೧) (೬೭.೯೪)
ಪು ೭೧.೪೦ ೬೬.೨೯ ೧೭.೫೩ ೧೭.೫೩ ೫೩.೯೩ ೪೮.೭೬
(೨೪.೪೭) (೨೬.೪೪) (೭೫.೫೩) (೭೩.೫೬)

ಟಿಪ್ಪಣಿ: ಆವರಣದಲ್ಲಿ ಕೊಟ್ಟಿರುವ ಶೇಕಡ ಪ್ರಮಾಣವು ರಾಜ್ಯದ ಒಟ್ಟು ಮೊತ್ತದಲ್ಲಿನ ಪಾಲನ್ನು ಸೂಚಿಸುತ್ತದೆ.

ಪರಿಶಿಷ್ಟರಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರಲ್ಲಿ ಸಾಗುವಳಿಗಾರರಿಗಿಂತ ದಿನಗೂಲಿಗಳ ಸಂಖ್ಯೆ ಅಧಿಕವಾಗಿರುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಾರದು. ದಿನಗೂಲಿಗಳ ಸಂಖ್ಯೆ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿದೆ. ಭೂಮಾಲೀಕತ್ವದಿಂದ ಪರಿಶಿಷ್ಟಜಾತಿಯ ಜನರನ್ನು ಬಹಿಷ್ಕರಿಸಲಾಗಿತ್ತು. ಗತಕಾಲದ ಆಚರಣೆಯ ಪರಿಣಾಮವನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಇಂದಿಗೂ ಕಾಣಬಹುದಾಗಿದೆ. ಒಟ್ಟು ದುಡಿಮೆಗಾರರನ್ನು ತೆಗೆದುಕೊಂಡಾಗ ಮಹಿಳೆಯರ ಪ್ರಮಾಣವು ಕೇವಲ ಶೇ ೨೭.೭೬ ಆದರೆ ದಿನಗೂಲಿಗಳನ್ನು ತೆಗೆದುಕೊಂಡರೆ ಮಹಿಳೆಯರ ಪ್ರಮಾಣ ಶೇ ೪೮.೧೬.

ದಿನಗೂಲಿ ಕೃಷಿ ದುಡಿಮೆಗಾರರ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಕೋಷ್ಟಕ – ೭ ರಲ್ಲಿ ನೋಡಬಹುದು.

ದಿನಗೂಲಿ ದುಡಿಮೆಗಾರರು: ಶಿಷ್ಟಪರಿಶಿಷ್ಟ ನೆಲೆಗಳು೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು

ಒಟ್ಟು ಮಹಿಳೆಯರು ಪುರುಷರು
೧೯೯೧ ೨೦೦೧ ೧೯೯೧ ೨೦೦೧ ೧೯೯೧ ೨೦೦೧
ಒಟ್ಟು ರಾಜ್ಯದ ದಿನಗೂಲಿ ದುಡಿಮೆಗಾರರು ೫೦.೦೦ ೩೭.೮೩ ೨೪.೮೮ ೧೮.೨೨ ೨೫.೧೨ ೧೯.೬೧
ಪರಿಶಿಷ್ಟ ದಿನಗೂಲಿ ದುಡಿಮೆಗಾರರು ೧೮.೭೯ ೧೬.೦೨ ೯.೨೫ ೭.೬೩ ೯.೫೪ ೮.೩೯
(೩೭.೫೮) (೪೨.೩೫) (೩೭.೧೮) (೪೧.೮೮) (೩೭.೯೮) (೪೨.೭೮)
ಶಿಷ್ಟ ದಿನಗೂಲಿ ದುಡಿಮೆಗಾರರು ೩೧.೨೧ ೨೧.೮೧ ೧೫.೬೩ ೧೦.೫೯ ೧೫.೫೮ ೧೧.೨೨
(೬೨.೪೨) (೫೭.೬೫) (೬೨.೮೨) (೫೮.೧೨) (೬೨.೦೨) (೫೭.೨೨)

ಟಿಪ್ಪಣಿ: ಆವರಣದಲ್ಲಿರುವ ಅಂಕಿಗಳು ಒಟ್ಟು ರಾಜ್ಯ ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಪರಿಶಿಷ್ಟರಿಗೆ ಸಂಬಂಧಿಸಿದಂತೆ ದಿನಗೂಲಿಗಳ ಪ್ರಮಾಣವು ಸಾಗುವಳಿದಾರರಿಗಿಂತ ಅಧಿಕವೆಂಬುದು ಸ್ಪಷ್ಟವಾಗಿದೆ. ಶಿಷ್ಟರಿಗೆ ಸಂಬಂಧಿಸಿದಂತೆ ಪ್ರತಿ ಸಾಗುವಳಿದಾರರಿಗೆ ೦.೪೪ರಷ್ಟು ದಿನಗೂಲಿಗಳಿದ್ದರೆ (೨೦೦೧) ಪರಿಶಿಷ್ಟರಲ್ಲಿ ಇದರ ಪ್ರಮಾಣ ೧.೩೨ರಷ್ಟಿದೆ. ಇದು ಪರಿಶಿಷ್ಟರ ಭೂಹೀನತೆಯನ್ನು ತೋರಿಸುತ್ತದೆ.

ಕೋಷ್ಟದ – ೭ ಅನೇಕ ರೀತಿಯಿಂದ ಕುತೂಲಹಕಾರಿಯಾಗಿದೆ. ಕೋಷ್ಟಕದಲ್ಲಿ ಆವರಣದೊಳಗಿನ ಅಂಕಿಗಳು ಒಟ್ಟು ದಿನಗೂಲಿ ದುಡಿಮೆಗಾರರಲ್ಲಿ ಶಿಷ್ಟರ ಮತ್ತು ಪರಿಶಿಷ್ಟರ ಪಾಲನ್ನು ತೋರಿಸುತ್ತವೆ. ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರು ಎಷ್ಟು ಪಾಲು ಪಡೆದಿದ್ದಾರೋ ಅದಕ್ಕಿಂತ ಅಧಿಕವಾದ ಪಾಲನ್ನು ದಿನಗೂಲಿಗಳಿಗೆ ಸಂಬಂಧಿಸಿದಂತೆ ಪಡೆದಿದ್ದಾರೆ. ಆದರೆ ಜನಸಂಖ್ಯೆಯಲ್ಲಿ (೨೦೦೧) ಶೇಕಡ ೭೭.೧೯ರಷ್ಟು ಪಾಲು ಪಡೆದಿರುವ ಶಿಷ್ಟರು ದಿನಗೂಲಿಗಳಲ್ಲಿ ಮಾತ್ರ ಶೇ. ೫೭.೬೫ರಷ್ಟು ಪಾಲು ಪಡೆದಿದ್ದಾರೆ. ದಿನಗೂಲಿ ದುಡಿಮೆ ಮಾಡುವ ಪ್ರಮೇಯ ಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿಲ್ಲ. ಆದರೆ ಪರಿಶಿಷ್ಟರಿಗೆ ದಿನಗೂಲಿಯು ಅನಿವಾರ್ಯವಾಗಿದೆ. ಏಕೆಂದರೆ ದುಡಿಮೆಯ ವಿಕಲ್ಪಗಳು ಪರಿಶಿಷ್ಟರಿಗೆ ಕಡಿಮೆ.

ದಿನಗೂಲಿಗಳಾಗಿ ದುಡಿಯುವ ಪರಿಶಿಷ್ಟರು ವರ್ಗ ಸಂಬಂಧದ ನೆಲೆಯಲ್ಲಿ ಸಂಘಟಿತರಾಗುವುದು ಸಾಧ್ಯವಾಗಿಲ್ಲ. ನಮ್ಮ ಸಮಾಜದ ಸಂದರ್ಭದಲ್ಲಿ ಅತ್ಯಂತ ಅಸಂಘಟಿತ ವರ್ಗವೆಂದರೆ ದಿನಗೂಲಿಗಳು. ಏಕೆಂದರೆ ದಿನಗೂಲಿಗಳು ಅನೇಕ ಸಂಗತಿಗಳ ಆಧಾರದ ಮೇಳೆ ವಿಘಟಿತರಾಗಿದ್ದಾರೆ. ಇಲ್ಲಿ ಕಂಡುಬರುತ್ತಿರುವ ಒಂದು ಆಶಾದಾಯಕ ಸಂಗತಿಯೆಂದರೆ ಜಾತಿಯ ಆಧಾರದ ಮೇಲೆ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಜನರು ಸಂಘಟಿತವಾಗುತ್ತಿದ್ದಾರೆ. ಈಜಾತಿ ಆಧರಿತ ದುಡಿಯುವ ವರ್ಗದ ಸಂಘಟನೆಗಳನ್ನು ವರ್ಗಸಂಘರ್ಷಕ್ಕೆ ಪೂರಕವಲ್ಲವೆಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಜಾತಿ ಪ್ರಜ್ಞೆ ಮತ್ತುವರ್ಗ ಪ್ರಜ್ಞೆಗಳು ನಮ್ಮ ಸಮಾಜದ ಸಂದರ್ಭದಲ್ಲಿ ಪರಸ್ಪರ ಪೂರಕವಾಗಿರುವುದನ್ನು ಗುರುತಿಸಬಹುದಾಗಿದೆ. ಬಂಡವಾಳ ಮತ್ತು ಶ್ರಮ ಮಾರುಕಟ್ಟೆಯು ಜಾತಿ ಸಂಬಂಧದಿಂದ ಕೂಡಿರುವಾಗ ದುಡಿಮೆಗಾರರು ಜಾತಿ ಆಧಾರದ ಮೇಲೆ ಸಂಘಟಿತರಾಗುವುದು ಹೋರಾಟಕ್ಕೆ ಅನಾನುಕೂಲಕರವೆನ್ನಲು ಸಾಧ್ಯವಿಲ್ಲ. ಪರಿಶಿಷ್ಟರಲ್ಲಿ ಕಂಡುಬರುತ್ತಿರುವ ಸಂಘಟನೆ, ರಾಜಕೀಯ ಪಕ್ಷಗಳಲ್ಲಿ ಸಹಭಾಗಿತ್ವ, ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿರುವುದು ಮುಂತಾದ ಸಂಗತಿಗಳಿಂದಾಗಿ ಪರಿಶಿಷ್ಟರಿಗೆ ಅನೇಕ ಹಕ್ಕುಗಳು ದೊರೆಯುವಂತಾಗಿವೆ.

ದಿನಗೂಲಿಗಳು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ ಅಭದ್ರತೆ, ದಿನ ಗೂಲಿಗಳು ದಿನವೂ ದುಡಿಮೆಯನ್ನು ಎದುರು ನೋಡಬೇಕಾಗಿರುತ್ತದೆ. ದಿನಗೂಲಿಗಳಿಗೆ ಸಂಬಂಧಿಸಿದಂತೆ ತಾತ್ಕಲಿಕ ನಿರುದ್ಯೋಗ ಮತ್ತು ಉದ್ಯೋಗ ಎರಡೂ ಏಕಕಾಲದಲ್ಲಿ ಸಂಭವಿಸುತ್ತಿರುತ್ತವೆ. ಉದ್ಯಮಪತಿಗಳು ದುಡಿಮೆಗಾರರನ್ನು ಅಭದ್ರ ಸ್ಥಿತಿಯಲ್ಲಿಡಲು ಪ್ರಯತ್ನಿಸುತ್ತಾರೆ. ಇದರಿಂದ ಕೂಲಿಯನ್ನು ಅತ್ಯಂತ ಕೆಳಮಟ್ಟದಲ್ಲಿ ಕಾಯ್ದುಕೊಳ್ಳಬಹುದು.

[1] ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ದುಡಿಮೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳೂ ಮೌಖಿಕವಾಗಿರುತ್ತವೆ. ಈ ಮೌಖಿಕ ಒಪ್ಪಂಧಗಳು ಭೂಮಾಲೀಕರಿಗೆ ಅನುಕೂಲಕರವಾಗಿರುತ್ತವೆ ವಿನಾ ದಿನಗೂಲಿಗಳಿಗಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದ ದಿನಗೂಲಿಗಳಿಗೆ ಯಾವುದೇ ಬಗೆಯ ಕಾನೂನುಗಳ ರಕ್ಷಣೆಯಿಲ್ಲ. ಸಾಮಾಜಿಕ ಭದ್ರತೆ ಎಂಬುದಿಲ್ಲ. ದಣಿಗಳ/ಭೂಮಾಲೀಕರ ಕೃಪೆ ದೊರೆಯಬಹುದು. ಆದರೆ ಇಂತಹ ಕೃಪೆಯು ದಿನಗೂಲಿಗಳಿಗೆ ಸಂಕೋಲೆಯಾಗಿರುತ್ತದೆ ವಿನಾ ಅನುಕೂಲಕರವಾಗಿರುವುದಿಲ್ಲ.

ದುಡಿಮೆಯ ಲಿಂಗ ಸಂಬಂಧಿ ಸ್ವರೂಪ

ಮಹಿಳೆಯರ ಸಂತಾನೋತ್ಪತ್ತಿ ದುಡಿಮೆಯು ಶ್ರಮಶಕ್ತಿಯ ಪೂರೈಕೆಯ ಮೂಲವಾಗಿದೆ. ಬಡತನದ. ನಿರುದ್ಯೋಗದ, ಅಸ್ವಸ್ಥತೆಯ, ವೃದ್ಧಾಪ್ಯದ ಸಂದರ್ಭದಲ್ಲಿ ಮಹಿಳೆಯರ ಸಂಗೋಪನಾ ದುಡಿಮೆಯು ಪುರುಷ ಶ್ರಮಶಕ್ತಿಯ ಆರೈಕೆಯ ಮೂಲವಾಗಿದೆ. ಸಂತಾನೋತ್ಪತ್ತಿ ದುಡಿಮೆಯು ಪುರುಷ ಶ್ರಮಶಕ್ತಿಯ ಆರೈಕೆಯ ಮೂಲವಾಗಿದೆ. ಸಂತಾನೋತ್ಪತ್ತಿ ದುಡಿಮೆ ಹಾಗೂ ಸಂಗೋಪನೆ ದುಡಿಮೆಗಳನ್ನು ನಿರ್ವಹಿಸುತ್ತಿರುವ ಮಹಿಳೆಯರಿಗೆ ಮನೆಯ ಹೊರಗಿನ ಉತ್ಪಾದನಾ ದುಡಿಮೆಗಳನ್ನು ನಿರ್ವಹಿಸುತ್ತಿರುವ ಮಹಿಳೆಯರಿಗೆ ಮನೆಯ ಒಳಗಿನ ಉತ್ಪಾದನಾ ದುಡಿಮೆಯಿಂದ ವಿನಾಯಿತಿಯೇನೂ ದೊರೆಯುವುದಿಲ್ಲ. ಈ ಮಾತು ಬಡಕುಟುಂಬಗಳು, ಪರಿಶಿಷ್ಟ ಕುಟುಂಬಗಳ ಮಹಿಳೆಯರಿಗೆ ಹೆಚ್ಚಾಗಿ ಅನ್ವಯವಾಗುತ್ತದೆ. ಮಹಿಳೆಯರು ನಿರ್ವಹಿಸುವ ಮೂರು ಬಗೆಯ ದುಡಿಮೆಗಳಲ್ಲಿ ಮೊದಲಿನ ಎರಡೂ ದುಡಿಮೆಗಳಿಗೆ ಯಾವುದೇ ಬಗೆಯ ಸಂಭಾವನೆಯಿರುವುದಿಲ್ಲ. ಸಂತಾನೋತ್ಪತ್ತಿ ದುಡಿಮೆ ಹಾಗೂ ಸಂಗೋಪನಾ ದುಡಿಮೆಗಳನ್ನು ಲಿಂಗ ನಿರ್ದಿಷ್ಟ ದುಡಿಮೆಗಳೆಂದು ವರ್ಗೀಕರಿಸಲಾಗಿದೆ. ಮಹಿಳೆಯರು ನಿರ್ವಹಿಸಬೇಕಾದ ದುಡಿಮೆ ಇವುಗಳಾಗಿವೆ. ಈ ಕಾರಣದಿಂದಾಗಿ ಉತ್ಪಾದನಾ ದುಡಿಮೆಯು ಮಹಿಳೆಯರಿಗೆ ಪೂರಕವಾದುದೆಂದು ಅದು ಬಿಡುವಿನ ವೇಳೆಯಲ್ಲಿ ನಡೆಸುವ ರ್ಶರಮವೆಂದು ಪರಿಗಣಿಸಲಾಗಿದೆ. ಮಹಿಳೆಯರ ದುಡಿಮೆ ಮಾರುಕಟ್ಟೆಯು ಸಂಪೂರ್ಣವಾಗಿ ಅನೌಪಚಾರಿಕವಾಗಿದೆ ಮತ್ತು ವಿಘಟಿತವಾಗಿದೆ.

ಮಹಿಳೆಯರ ದುಡಿಮೆಯನ್ನು ಲಿಂಗ ಸಂಬಂಧಿ ಶ್ರಮ ವಿಭಜನೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗುತ್ತಿದೆ. ಆದರೆ ಕುಟುಂಬದ ಚೌಕಟ್ಟಿನಲ್ಲಿ ಮಾತ್ರ ಅದು ಹೆಚ್ಚು ಗಟ್ಟಿಯಾಗೆ ಮುಂದುವರಿದಿದೆ. ಇದರಿಂದಾಗಿ ಮಹಿಳೆಯರ ಮನೆಯ ಹೊರಗಿನ ಉತ್ಪಾದನಾ ದುಡಿಮೆಯನ್ನು ಪ್ರಾಸಂಗಿಕವೆಂದೂ ತಿಳಿಯಲಾಗಿದೆ. ಮಹಿಳೆಯರು ಉತ್ಪಾದನಾ ದುಡಿಮೆಗೆ ಸಂಬಂಧಿಸಿದಂತೆ ಬೆವರು ಹರಿಸುತ್ತಿದ್ದಾರೆ. ಸಂಗೋಪನಾ ದುಡಿಮೆ ಅಥವಾ ಕೌಟುಂಬಿಕ ದುಡಿಮೆಗೆ ಸಂಬಂಧಿಸಿದಂತೆ ಕಣ್ಣೀರು ಹರಿಸುತ್ತಿದ್ದಾರೆ. ಸಂತಾನೋತ್ಪತ್ತಿ ದುಡಿಮೆಯಲ್ಲಿ ರಕ್ತ ಹರಿಸುತ್ತಿದ್ದಾರೆ.[2] ಆದರೆ ದುಡಿಮಗೆ ತಕ್ಕ ಪ್ರತಿಫಲ ಅವರಿಗೆ ದೊರೆಯುತ್ತಿಲ್ಲ. ಲಿಂಗಶಾಹಿ ವಿಚಾರ ಪ್ರಣಾಳಿಕೆಯಿಂದಾಗಿ ಅವರು ಹೆಚ್ಚಿನ ಶೋಷಣೆಗೆ ಒಳಗಾಗಿದ್ದಾರೆ.

ಪರಿಶಿಷ್ಟ ಮಹಿಳೆಯರ ದುಡಿಮೆ

ದುಡಿಮೆಯ ಒತ್ತಡವು ಪರಿಶಿಷ್ಟ ಮಹಿಳೆಯರಿಗೆ ಅಧಿಕವಾಗಿದೆ. ಕರ್ನಾಟಕದ ಒಟ್ಟು ದುಡಿಮೆಗಾರರಲ್ಲಿ ಶಿಷ್ಟರಿಗೆ ಸಂಬಂಧಿಸಿದಂತೆ ಮಹಿಳಾ ದುಡಿಮೆಗಾರರ ಪ್ರಮಾಣ ಕೇವಲ ಶೇ. ೨೬.೦೯. ಆದರೆ ಪರಿಶಿಷ್ಟರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ. ೩೪.೨೫. ಈಗಾಗಲೇ ತಿಳಿಸಿರುವುಂತೆ ಪರಿಶಿಷ್ಟರಿಗೆ ಸಂಬಂಧಿಸಿದಂತೆ ದುಡಿಮೆಯ ವ್ಯಾಪ್ತಿ ಸೀಮಿತವಾದುದು. ಅಲ್ಲಿ ವಿಕಲ್ಪಗಳು ತುಂಬಾ ಕಡಿಮೆ. ಪರಿಶಿಷ್ಟ ಮಹಿಳೆಯರ ದುಡಿಮೆ ಅವಕಾಶಗಳು ತುಂಬಾ ಸೀಮಿತವಾಗಿವೆ. ಲಿಂಗಶಾಹಿ ವಿಚಾರ ಪ್ರಣಾಳಿಕೆಯಿಂದಾಗಿ ಕೌಟುಂಬಿಕ ದುಡಿಮೆಯನ್ನು ಅವರು ನಿರ್ವಹಿಸಬೇಕಾಗಿದೆ. ಅಸ್ಪೃಶ್ಯತೆ ಮತ್ತು ಬಡತನದ ಕಾರಣವಾಗಿ ಅವರು ಮನೆಯ ಹೊರಗೆ ಕೂಲಿಯನ್ನು ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಪುರುಷ ದುಡಿಮೆಗಾರರು ಇಂದು ದುಡಿಮೆಯನ್ನು ಅರಸಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುವುದು ಕಂಡುಬರುತ್ತದೆ. ಸಂಚಾರ – ಸಂಚಲನೆಯೆಂಬುದು ಪುರುಷ ದುಡಿಮೆಗಾರರಿಗೆ ಸಮಸ್ಯೆಯಲ್ಲ. ಆದರೆ ಕೌಟುಂಬಿಕ ದುಡಿಮೆಯ ಜವಾಬ್ದಾರಿ ಹಾಗೂ ಮಕ್ಕಳ ಮತ್ತು ವೃದ್ಧರ ಪಾಲನೆಯ ಜವಾಬ್ದಾರಿಯು ಮಹಿಳೆಯರ ಮೇಲೆರುವುದರಿಂದ ಮಹಿಳಾ ದುಡಿಮೆಗಾರರು ವಲಸೆ ಹೋಗುವುದು ಸಾಧ್ಯವಾಗುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಸಂಚಾರ – ಸಂಚಲನೆಯು ಮಹಿಳಾ ದುಡಿಮೆಗಾರರಿಗೆ ಸುಲಭದ ಸಂಗತಿಯಲ್ಲ.

ಅಸ್ಪೃಶ್ಯತೆಯು ಮಹಿಳೆಯರ ಅಭಿವೃದ್ಧಿಗೆ ತುಂಬಾ ಮಾರಕವಾದ ಸಂಗತಿಯಾಗಿಬಿಟ್ಟಿದೆ. ಈ ಸಂಗತಿಯು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಧಾನ ಸ್ಥಾನವನ್ನು ಪಡೆದುಕೊಂಡಿಲ್ಲ. ಪರಿಶಿಷ್ಟ ಮಹಿಳಾ ದುಡಿಮೆಗಾರರ ಅಭಿವೃದ್ಧಿಯನ್ನು ಸರ್ಕಾರವು ಪ್ರತ್ಯೇಕವಾಗಿ ವಿಶೇಷವಾಗಿ ನಿರ್ವಹಿಸುವ ಅಗತ್ಯವಿದೆ.[3] ಪುರುಷಶಾಹಿಯು ಪರಿಶಿಷ್ಟರಿಗೆ ಮತ್ತು ಶಿಷ್ಟರಿಗೆ ಸಮಾನವಾಗಿದೆ. ಆದರೆ ಇದರ ಪರಿಣಾಮಗಳು ಪರಿಶಿಷ್ಟ ಮಹಿಳೆಯರಿಗೆ ಹೆಚ್ಚು ಅಘಾತಕಾರಿಯಾಗಿವೆ. ಕೋಷ್ಠಕ – ೮ರಲ್ಲಿ ಮಹಿಳೆಯರ ದುಡಿಮೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ತೋರಿಸಲಾಗಿದೆ. ದುಡಿಮೆಯ ಒತ್ತಡವು ಶಿಷ್ಟ ಮಹಿಳೆಯರಿಗಿಂತ ಪರಿಶಿಷ್ಟ ಮಹಿಳೆಯರಿಗೆ ಅಧಿಕವಾಗಿರುವುದನ್ನು ಅಲ್ಲಿ ನೋಡಬಹುದಾಗಿದೆ. ಶಿಷ್ಟ ಮಹಿಳೆಯರಿಗೆ ಅಧಿಕವಾಗಿರುವುದನ್ನು ಅಲ್ಲಿ ನೋಡಬಹುದಾಗಿದೆ. ಶಿಷ್ಟ ಮಹಿಳೆಯರಿಗೆ ಸಂಬಂಧಿಸಿದಂತೆ ಭೂರಹಿತ ಕೃಷಿ ದಿನಗೂಲಿ ಮಹಿಳೆಯರ ಪ್ರಮಾಣವು ಪರಿಶಿಷ್ಟರಲ್ಲಿ ಶೇ. ೫೦.೧೬ರಷ್ಟಿದ್ದರೆ ಶಿಷ್ಟ ಮಹಿಳೆಯರಲ್ಲಿ ಅದರ ಪ್ರಮಾಣ ಕೇವಲ ಶೇ. ೨೭.೨೧. ಕೃಷಿ ಅವಲಂಬನೆಯ ಪ್ರಮಾಣದಲ್ಲೂ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅದು ಅಧಿಕವಾಗಿದೆ. ಪರಿಶಿಷ್ಟ ಮಹಿಳಾ ದುಡಿಮೆಗಾರರಲ್ಲಿ (೧೫.೨೧ಲಕ್ಷ) ಸರಿಸುಮಾರು ಶೇ. ೭೦.೪೧ರಷ್ಟು ಮಹಿಳಾ ದುಡಿಮೆಗಾರರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಕೃಷಿ ಅವಲಂಬನೆ ಶಿಷ್ಟ ಮಹಿಳಾ ದುಡಿಮೆಗಾರರಿಗೆ ಸಂಬಂಧಿಸಿದಂತೆ ಶೇ.೫೮.೩೨ರಷ್ಟಿದೆ.

ಇಲ್ಲಿನ ಚರ್ಚೆಯ ಮೂಲ ತಥ್ಯವೆಂದರೆ ಸಾಮಾಜಿಕ ಏಣಿಶ್ರೇಣಿಗಳಲ್ಲಿ ಅತ್ಯಂತ ಅಂಚೆಗೆ ದೂಡಲ್ಪಟ್ಟವರು ಹಾಗೂ ವಂಚಿತರು ಅಂದರೆ ಪರಿಶಿಷ್ಟ ಮಹಿಳೆಯರು ಎಂಬುದಾಗಿದೆ. ಆದ್ದರಿಂದ ಅಭಿವೃದ್ಧಿಯಲ್ಲಿ ಪರಿಶಿಷ್ಟ ಮಹಿಳೆಯರ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಮತ್ತು ಅವರ ನೆಲೆಯಿಂದ ಅದನ್ನು ಕಟ್ಟಬೇಕಾಗುತ್ತದೆ. ಅಂತ್ಯೋದಯವೆನ್ನುವುದು ಇದನ್ನೇ ಸೂಚಿಸುತ್ತದೆ.

ಭಾಗ
ಅಸ್ಪೃಶ್ಯತೆ: ಅಭಿವೃದ್ಧಿಗೆ ತೊಡಿಸಿದ ಸಂಕೋಲೆ

ಅಸ್ಪೃಶ್ಯತೆ ಕುರಿತಂತೆ ನಾವು ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ನಮ್ಮ ಸಮಾಜದ ಸಂದರ್ಭದಲ್ಲಿ ಅದು ಯಾರ ಸಮಸ್ಯೆ ಎಂಬುದಾಗಿದೆ. ಅದು ಎಷ್ಟರಮಟ್ಟಿಗೆ ಪರಿಶಿಷ್ಟರ ಸಮಸ್ಯೆ? ಬಾಬಾಸಾಹೇಬ್ ಅಂಬೇಡ್ಕರ್ ಸರಿಯಾಗಿ ಗುರುತಿಸಿರುವಂತೆ ಶಿಷ್ಟರು ಪರಿಶಿಷ್ಟರನ್ನು ಅಸ್ಪೃಶ್ಯರೆಂದು ಪರಿಭಾವಿಸಿಕೊಂಡಿರುವುದರಿಂದ ಅಂತಹ ಸಮಸ್ಯೆ ನಮ್ಮ ಸಮಾಜದಲ್ಲಿದೆ. ಸಮಾಜ ಹಾಗೂ ಜನರಲ್ಲಿ ‘ತಾವು ಶ್ರೇಷ್ಟರು’ ಮತ್ತು ‘ತಮ್ಮ ಶ್ರೇಷ್ಟತೆ ಹುಟ್ಟಿನಿಂದ ಪ್ರಾಪ್ತವಾದುದು’ ಎಂಬ ನಂಬಿಕೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿವರೆಗೆ ಅಸ್ಪೃಶ್ಯತೆ ಇರುತ್ತದೆ. ಅಸ್ಪೃಶ್ಯತೆಯೆಂಬ ಸಂಸ್ಥೆಯು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಅದರ ಆಚರಣೆಯನ್ನು ಶಾಸನಗಳ ಮೂಲಕ ನಿಷೇಧಿಸಲಾಗಿದೆ. [ಅಸ್ಪೃಶ್ಯತಾ (ಅಪರಾಧಗಳು) ಶಾಸನ: ೧೯೫೫, ನಾಗರಿಕ ಹಕ್ಕುಗಳ ರಕ್ಷಣ(ತಿದ್ದುಪಡಿ ಶಾಸನ: ೧೯೭೬,ಪ.ಜಾ/ಪ.ವರ್ಗ ಮೇಲಿನ ದೌರ್ಜನ್ಯ ನಿವಾರಣಾ ಶಾಸನ: ೧೯೮೯ ಮುಂತಾದವು] ಶಾಸನಗಳಿಂದ – ಸಂವಿಧಾನದಿಂದ ಅಸ್ಪೃಶ್ಯತೆಯಂತಹ ಸಂಸ್ಥೆಯನ್ನು ನಾಶಮಾಡುವುದು ಸಾಧ್ಯವಿಲ್ಲ. ಅದನ್ನು ನೇರವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಎದುರಿಸಬೇಕಾಗುತ್ತದೆ.[4]

ಸ್ವಾತಂತ್ರ್ಯಾನಂತರ ಭಾರತದಲ್ಲಿ ಬದಲಾವಣೆಗಳಾಗಿವೆ. ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರು ‘ಕ್ರಾಂತಿಯೊಂದರ ಪ್ರಕ್ರಿಯೆಯಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ಉದ್ಗಾರ ತೆಗೆದಿದ್ದಾರೆ(೧೯೯೨).[5] ಅನುಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ – ಆರ್ಥಿಕ ಅಸಮಾನತೆಗಳು ಬದಲಾಗುತ್ತಿಲ್ಲವೆಂದು ಹೇಳುವುದು ಸಾಧ್ಯವಿಲ್ಲವೆಂದು ಅಮರ್ತ್ಯಸೆನ್ ಬರೆಯುತ್ತಾರೆ. (೨೦೦೨:೩೫೬) ಈ ಬದಲಾವಣೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅರ್ಥಪೂರ್ಣವಾಗಿಲ್ಲವೆಂಬುದನ್ನು ಮನೋಹರ್ ಯಾದವ್ ದಾಖಲಿಸುತ್ತಾರೆ(೨೦೦೩). ಅವರ ಪ್ರಕಾರ ಕ್ರಾಂತಿ ಪ್ರಕ್ರಿಯೆಯ ಫಲಗಳನ್ನು ಅಧಿಕವಾಗಿ ಉನ್ನತ ಜಾತಿಗಳು ಗುತ್ತಿಗೆ ಹಿಡಿದುಕೊಂಡು ಬಿಟ್ಟಿವೆ. ಈ ಬಗ್ಗೆ ಅವರೊಂದು ಪ್ರಶ್ನೆಯನ್ನು ಕೇಳುತ್ತಾರೆ. ರಾಜ್ಯದ ಯಾವುದೇ ವಾಣಿಜ್ಯ, ವ್ಯಾಪಾರ, ಉದ್ದಿಮೆ ವಲಯಗಳಲ್ಲಿ ಯಾಕೆ ಅಸ್ಪೃಶ್ಯರು ಪ್ರವೇಶಿಸಿಲ್ಲ? ಜಾತಿಯ ಕಾರಣವಾಗಿ ಪರಿಶಿಷ್ಟರಿಗೆ ಕೃಷಿಯೇತರ ಕ್ಷೇತ್ರಗಳನ್ನು ಪ್ರವೇಶಿಸುವುದು ಕಷ್ಟವಾಗಿದೆ (ಬಾರ್ಬರಾ ಹ್ಯಾರಿಸ್ ವೈಟ್ (೨೦೦೪:೩೧)) ದುಡಿಮೆಯ ವ್ಯಾಪ್ತಿ ತುಂಬಾ ಸೀಮಿತವಾಗಿರುವುದರಿಂದಾಗಿ, ದುಡಿಮೆಗೆ ಸಂಬಂಧಿಸಿದಂತೆ ವಿಕಲ್ಪಗಳು ಕಡಿಮೆಯಿರುವುದರಿಂದಾಗಿ ಪರಿಶಿಷ್ಟರು ಕೃಷಿಯನ್ನು, ದಿನಗೂಲಿಯನ್ನು ಹೆಚ್ಚಾಗಿ ಅವಲಂಬಿಸಿಕೊಂಡಿದ್ದಾರೆ. ಕಸುಬು ಮತ್ತು ಜಾತಿಗಳ ನಡುವಿನ ಸಂಬಂಧ ಕುಸಿದುಬಿದ್ದಿದೆ ಎಂಬ ವಾದವನ್ನು ಎಂ.ಎನ್. ಶ್ರೀನಿವಾಸ್ ಮಾಡುತ್ತಾರೆ. ಆದರೆ ಇದನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಅಸ್ಪೃಶ್ಯರು ಸಮಾಜದಲ್ಲಿ ಶಿಷ್ಟರಿಗಿಂತ ಎರಡುಪಟ್ಟು ಅಧಿಕವಾಗಿ ಕೃಷಿಯನ್ನು, ಕೂಲಿಯನ್ನು ಅವಲಂಬಿಸಿಕೊಳ್ಳಬೇಕಾದ ಮತ್ತು ಬಡತನವನ್ನು ಅನುಭವಿಸಬೇಕಾದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅತ್ಯಂತ ಕನಿಷ್ಟ ಕೂಲಿಗೆ ಪರಿಶಿಷ್ಟ ಮಹಿಳೆಯರು ದುಡಿಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಟ ದುಡಿಮೆಗಾರರಲ್ಲಿ ಮೂರು ಮುಕ್ಕಾಲು ವೀಸೆಯಷ್ಟು ಜನರು ಬಡತನದ ರೇಖೆಯ ಕೆಳಗೆ ಜೀವನ ದೂಡುತ್ತಿದ್ದಾರೆ.

ಮಹಿಳಾ ದುಡಿಮೆಗಾರರ ಶಿಷ್ಟಪರಿಶಿಷ್ಟ ಸ್ವರೂಪ: ೧೯೯೧ ಮತ್ತು ೨೦೦೧

ಕೋಷ್ಟಕ

ವಿವರಗಳು

ಒಟ್ಟು

ಪರಿಶಿಷ್ಟ / ದಲಿತರು ಶಿಷ್ಟರು / ದಲಿತೇತರರು
೧೯೯೧ ೨೦೦೧ ೧೯೯೧ ೨೦೦೧ ೧೯೯೧ ೨೦೦೧
೧. ಒಟ್ಟು ಮಹಿಳಾ ದುಡಿಮೆಗಾರರು ೫೦.೦೭ ೫೪.೧೩ ೧೩.೯೭ ೧೫.೨೧ ೩೬.೧೦ ೩೮.೯೨
೨. ಒಟ್ಟು ಮಹಿಳಾ ಸಾಗುವಳಿದಾರರು ೧೨.೮೮ ೧೬.೧೯ ೨.೩೦ ೩.೦೮ ೧೦.೫೮ ೧೨.೧೧
(೨೫.೭೨) (೨೯.೯೧) (೧೩.೯೭) (೨೦.೨೫) (೨೯.೯೨) (೩೧.೧೨)
೩. ಒಟ್ಟು ಮಹಿಳಾ ಭೂರಹಿತ ಕೃಷಿ ದಿನಗೂಲಿಗಳು ೨೪.೮೮ ೧೮.೨೨ ೯.೨೫ ೭.೬೩ ೧೫.೬೩ ೧೦.೫೯
(೪೯.೬೯) (೩೩.೬೬) (೬೬.೨೧) (೫೦.೧೬) (೪೩.೩೦) (೨೭.೨೧)
೪. ಒಟ್ಟು ಕೃಷಿ ಅವಲಂಬಿತ ದುಡಿಮೆಗಾರರು ೩೭.೭೬ ೩೩.೪೧ ೧೧.೫೫ ೧೦.೭೧ ೨೬.೨೧ ೨೨.೭೦
(೭೫.೦೯) (೬೧.೭೨) (೮೨.೬೮) (೭೦.೪೧) (೭೨.೬೦) (೫೮.೩೨)

ಟಿಪ್ಪಣಿ: ಆವರಣದಲ್ಲಿ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಭಾಗ
ಮರಣ ಪ್ರಮಾಣ:ಶಿಷ್ಟ ಪರಿಶಿಷ್ಟನೆಲೆಗಳು

ಜನಗಣತಿ ವರದಿಗಳಲ್ಲಿ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯುತ್ತದೆ. ಇದನ್ನು ಅಮರ್ತ್ಯಸೆನ್ ಆರೋಗ್ಯ ಸೂಚಿಯನ್ನಾಗಿ ಬಳಸುತ್ತಾರೆ. ಮರಣ ಪ್ರಮಾಣ ಮತ್ತು ಜನರ ಜೀವನ ಮಟ್ಟಗಳ ನಡುವೆ ವಿಲೋಮ ಸಂಬಂಧವಿರುವುದನ್ನು ತಜ್ಞರು ಗುರುತಿಸಿದ್ದಾರೆ. ಆದರೆ ಮರಣ ಪ್ರಮಾಣಕ್ಕೆ ಸಂಬಂಧಿಸಿದ ಸಂಗತಿಗಳು ಜಾತಿ ರಚನೆಗೆ ಅನುಗುಣವಾಗಿ ಪ್ರಯುಕ್ತವಾಗುತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ.

ಶಿಶು ಮರಣ, ಮಕ್ಕಳ ಮರಣ ಮತ್ತು ಐದುವರ್ಷದ ಮಕ್ಕಳ ಮರಣ ಪ್ರಮಾಣ : ೧೯೯೮೧೯೯೯

ಕೋಷ್ಟಕ

ಕ್ರ.ಸಂ ಸಾಮಾಜಿಕ ಗುಂಪುಗಳು ಶಿಶುಮರಣ ಪ್ರಮಾಣ ಮಕ್ಕಳ ಮರಣ ಪ್ರಮಾಣ ಐದು ವರ್ಷದ ಮಕ್ಕಳ ಮರಣ ಪ್ರಮಾಣ
ಪರಿಶಿಷ್ಟ ಜಾತಿ ೭೦ ೩೭ ೧೦೫
೨. ಪರಿಶಿಷ್ಟ ಪಂಗಡ ೮೫ ೩೯ ೧೨೧
೩. ಹಿಂದುಳಿದ ವರ್ಗಗಳು (ಒಬಿಸಿ) ೬೧ ೧೯ ೭೮
೪. ಇತರೆ ೫೬ ೧೪ ೭೦

ಮೂಲ: ಕರ್ನಾಟಕ ಸರ್ಕಾರ ೨೦೦೪, ಆರ್ಥಿಕ ಸಮೀಕ್ಷೆ : ೨೦೦೩೨೦೦೪ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು ಪು. ೧೬೨

ಜನರ ಆರೋಗ್ಯ ಸೂಚಿಯಾದ ಮರಣ ಪ್ರಮಾಣವು ಜಾತಿ – ವರ್ಗಗಳ ನಡುವೆ ಭಿನ್ನವಾಗಿರುವುದನ್ನು ಕೋಷ್ಟಕ ೮ರಲ್ಲಿ ತೋರಿಸಲಾಗಿದೆ. ಪರಿಶಿಷ್ಟ ಜನರ ಬದುಕಿನ ಗುಣಮಟ್ಟವು ಶಿಷ್ಟ ಜನರ ಬದುಕಿನ ಗುಣಮಟ್ಟಕ್ಕಿಂತ ಕೆಳಗಿರುವುದು ಇದರಿಂದ ಸ್ಪಷ್ಟವಾಗಿದೆ. ಮರಣ ಪ್ರಮಾಣಕ್ಕೆ ಸಂಬಂಧಿಸಿದ ಮೂರು ಸೂಚಿಗಳಲ್ಲೂ ಪರಿಶಿಷ್ಟರ ಸ್ಥಿತಿಯು ಉಳಿದೆರಡು ವರ್ಗಗಳಗಿಂತ ಕೆಳಗಿರುವುದು ಆತಂಕಕಾರಿಯಾಗಿದೆ. ಐದು ವರ್ಷದ ಮಕ್ಕಳ ಮರಣ ಪರಮಾಣವು ಪರಿಶಿಷ್ಟರ ಎರಡು ಗುಂಪಿನಲ್ಲೂ ನೂರಕ್ಕಿಂತ ಅಧಿಕವಾಗಿರುವುದು ಆರೋಗ್ಯಕ್ಕೆ ಸಂಬಂಧಿಸಿದ ಜಾತಿ – ವರ್ಗಗಳ ನಡುವಿನ ಅಸಮಾನತೆಯನ್ನು ಸೂಚಿಸುತ್ತದೆ.

ಪರಿಶಿಷ್ಟರು ಆರೋಗ್ಯ ಭಾಗ್ಯದಿಂದ ವಂಚಿತರಾಗಿದ್ದಾರೆ. ಪ್ರತಿಷ್ಠಿತರು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸವಲತ್ತು – ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಅಭಿವೃದ್ಧಿ, ಸಾಕ್ಷರತೆ, ಆರೋಗ್ಯ ಮತ್ತು ದುಡಿಮೆಗೆ ಸಂಬಂಧಿಸಿದ ಸಂಗತಿಗಳು ಜಾತಿ ರಚನೆಗನುಗುಣವಾಗಿ ಸಂಭವಿಸುತ್ತಿರುವುದನ್ನು ಪ್ರಸ್ತುತ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಜಾತಿ ಸಂಬಂಧಿ ಏಣಿಶ್ರೇಣಿಗಳನ್ನು ಅಭಿವೃದ್ಧಿಯು ಗಟ್ಟಿಗೊಳಿಸುತ್ತಿರುವಂತೆ ಕಾಣುತ್ತದೆ. ಅಭಿವೃದ್ಧಿಯನ್ನು ಕುರಿತ ಸಿದ್ಧಾಂತಗಳು ಇಂತಹ ಸಾಮಾಜಿಕ ಸಂಗತಿಗಳ ಬಗ್ಗೆ ನಿರ್ಲಿಪ್ತವಾಗಿಬಿಟ್ಟರೆ ಅಸಮಾನತೆಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ. ಅಭಿವೃದ್ಧಿಯು ಏಣಿಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಪರಿಶಿಷ್ಟರ ಬದುಕಿಗೆ ಅಭಿಮುಖವಾಗಿರಬೇಕಾಗುತ್ತದೆ. ಅಂತಹ ಅಭೀವೃದ್ಧಿ ಪ್ರಣಾಳಿಕೆಯನ್ನು ರೂಪಿಸುವ ಅಗತ್ಯವಿದೆ. ಬಡತನ, ಆಹಾರಭದ್ರತೆ, ಪೌಷ್ಟಿಕತೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆಯೂ ನಮಗೆ ಮೇಳೆನದಕ್ಕಿಂತ ಭಿನ್ನವಾದ ಚಿತ್ರವೇನೂ ಕಂಡುಬರುವುದಿಲ್ಲ. ಇಂತಹ ಸಾಮಾಜಿಕ ಸಂಕೋಲೆಯಿಂದ (ಉದಾ: ಅಸ್ಪೃಶ್ಯತೆ) ಅಭಿವೃದ್ಧಿಯನ್ನು ಬಿಡುಗಡೆಗೊಳಿಸದಿದ್ದರೆ ಅದು ಅಂಚಿನಲ್ಲಿರುವವರನ್ನು ತಬ್ಬಿಕೊಳ್ಳುವುದು ಸಾಧ್ಯವಿಲ್ಲ.

ಸಾರಂಶ

ಇಡೀ ಪ್ರಬಂಧದಲ್ಲಿ ಅಭಿವೃದ್ಧಿ – ಬಂಡವಾಳ ಸಂಚಯನಗಳು ನಮ್ಮ ಸಮಾಜದ ಸಂದರ್ಭದಲ್ಲಿ ಪರಿಶಿಷ್ಟರಿಗೆ ವಿಮುಖವಾಗಿದ್ದರೆ ಶಿಷ್ಟರಿಗೆ ಅಭಿಮುಖವಾಗಿವೆ. ಎಂಬುದನ್ನು ಕುರಿತಂತೆ ಚರ್ಚಿಸಲಾಗಿದೆ. ಯಾವುದನ್ನು ವಿದ್ವಾಂಸರು ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ – ಆರ್ಥಿಕ ಅಸಮಾನತೆಗಳು ಎಂದು ಕರೆದಿದ್ದಾರೋ ಆ ಅಸ್ಪೃಶ್ಯತೆಯ ಆಚರಣೆಯು ಪರಿಶಿಷ್ಟರ ಅಭಿವೃದ್ಧಿಗೆ ಕಂಟಕ ಪರಿಣಮಿಸಿದೆ. ಈ ಕಂಟಕವನ್ನು ಅಭಿವೃದ್ಧಿಯಿಂದ, ಶಿಕ್ಷಣದಿಂದ, ಶಾಸನಗಳಿಂದ, ಉಪದೇಶದಿಂದ ಪರಿಹರಿಸಬಹುದೆಂದು ನಂಬಿಕೊಂಡು ಬರಲಾಗಿದೆ ಮತ್ತು ಅದೇ ನೆಲೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಅದು ತನ್ನಷ್ಟಕ್ಕೆ ತಾನೆ ಪರಿಹಾರವಾಗುವ ಸಂಗತಿಯಲ್ಲ. ಅದನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಚರಿತ್ರೆಯ ಹುಳುಕುಗಳನ್ನು ಮರೆಮಾಡುವುದರಿಂದ ಪ್ರಯೋಜನವಿಲ್ಲ. ಅದರ ಬಗ್ಗೆ ಪ್ರಜ್ಞಾ, ಪೂರ್ವಕವಾಗಿ ಅನುಸಂಧಾನ ನಡೆಸುವುದರ ಮೂಲಕ ಅದನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅದರಿಂದ ಬಿಡಿಸಿಕೊಳ್ಳಬಹುದು. ಅದಿಲ್ಲವೆಂದುಕೊಂಡು ಬಿಟ್ಟರೆ ಅದು ಇಲ್ಲವಾಗುವುದಿಲ್ಲ. ವಿದ್ವಾಂಸರು ಗುರುತಿಸಿರುವಂತೆ ಅಭಿವೃದ್ಧಿಯೆಂಬುದು, ಅದರ ಸೂಚಿಗಳಾದ ಅಕ್ಷರ, ಆಹಾರ, ಆರೋಗ್ಯ, ಆಶ್ರಯ, ಅಭಯಗಳೆಲ್ಲವೂ ಪರಿಶಿಷ್ಟರಿಗೆ ‘ಅಪರೂದ ಸರಕುಗಳಾಗಿ’ ಬಿಟ್ಟಿವೆ (ರೇರ್ ಗೂಡ್ಸ್). ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಬಂಧದಲ್ಲಿ ಸಾಕ್ಷರತೆ ಹಾಗೂ ದುಡಿಮೆಗಳ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಇದನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಲೈಪ್ ಆಫ್ ಕಾಂಟ್ರಡಿಕ್ಷನ್ಸ್’ ಎಂದು ಕರೆದಿದ್ದಾರೆ. ಅವರು ಜನವರಿ ೨೬, ೧೯೫೦ರಂದು ಸಂವಿಧಾನವನ್ನು ಭಾರತಕ್ಕೆ ಅರ್ಪಿಸುವ ಸಂದರ್ಭದಲ್ಲಿ ಗುರುತಿಸಿದ್ದ ಕಾಂಟ್ರಡಿಕ್ಷನ್ಸ್‌ಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಅನೇಕ ವಿದ್ವಾಂಸರು ತಿಳಿದುಕೊಂಡಿರುವಂತೆ ಅವು ಪೂರ್ಣವಾಗಿ ಮಾಯವಾಗಿಲ್ಲ. ಈ ದಿಶೆಯಲ್ಲಿ ನಾವು ಮತ್ತಷ್ಟು ಚಿಂತಿಸುವ ಅಗತ್ಯವಿದೆ. ಸಮಾಜದ ಅಂಚಿನಲ್ಲಿರುವ ಪರಿಶಿಷ್ಟರ ನೆಲೆಯಿಂದ ಅಭಿವೃದ್ಧಿಯ ಆರಂಭ ನಡೆಯಬೇಕು.

ಆಕರ ಸೂಚಿ

೧. ಚಂದ್ರಶೇಖರ ಟ.ಆರ್., ೨೦೦೦, ಬೆವರು, ಕಣ್ಣೀರು, ರಕ್ತ ಮತ್ತು ಮಹಿಳಾ ದುಡಿಮೆ, ಕನ್ನಡ ಅಧ್ಯಯನ, ಸಂ.೨, ಸಂ.೧, ಪು. ೧೦೨ – ೧೦೩.

೨. ಜೀನ್‌ಡ್ರೀಜ್, ಅಮರ್ತ್ಯಸೆನ್, ೨೦೦೨, ಇಂಡಿಯಾ: ಡೆವಲಪ್ಮೆಂಟ್ ಅಂಡ್ ಪಾರ್ಟಿಸಿಪೇಶನ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು. ೩೪೭ – ೩೮೦.

೩. ಬಾರ್ಬರಾ ಹ್ಯಾರಿಸ್ ವೈಟ್, ೨೦೦೪, ಇಂಡಿಯಾ ವರ್ಕಿಂಗ್ಎಸ್ಸೆಸ್ಆನ್ ಸೊಸೈಟಿ ಅಂಡ್ ಎಕನಾಮಿ, ಕೆಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು.೧೭ – ೪೨(ಎರಡನೇ ಅಧ್ಯಾಯ).

೪. ಮನೋಹರ್ ಯಾದವ್, ೨೦೦೩, ಸೋಶಿಯೋ ಎಕಾನಾಮಿಕ್ ಸರ್ವೆ ಆಫ್ ಶೆಡ್ಯೂಲ್ಡ್ ಕಾಸ್ಟ್ ಅಂಡ್ ಶೆಡ್ಯೂಲ್ಡ್ಟ್ರೈಬ್ ಇನ್ ಕರ್ನಾಟಕ ಕ್ರಿಟಿಕಲ್ ಅನಾಲಿಸಸ್, ಇನ್ಸಿಟ್ಯುಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ ಚೇಂಜ್, ಬೆಂಗಳೂರು.
೫. ವಲೇರಿಯನ್ ರೊಡ್ರಿಗಸ್(ಸಂ), ೨೦೦೨, ದಿ ಎಸೆನ್ಸಿಯಲ್ ರೈಟಿಂಗ್ಸ್ ಆಫ್ ಬಿ.ಆರ್. ಅಂಬೇಡ್ಕರ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್‌, ನವದೆಹಲಿ, ಪು.೧ – ೪೩(ಪ್ರಸ್ತಾವನೆ).

೬. ಶ್ರೀನಿವಾಸ್ ಎಂ.ಎನ್., ೧೯೯೨, ಆನ್ ಲಿವಿಂಗ್ ಇನ್ ರೆವಲ್ಯೂಷನ್ ಆಂಡ್ ಅದರ್ ಎಸ್ಸೆಸ್, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

೭. ಶೇಷಾದ್ರಿ ಬಿ., ೧೯೯೧, ಇಂಡಸ್ಟ್ರೀಯಲೈಜೇಶನ್ ಆಂಡ್ ರೀಜಿನಲ್ ಡೆವಲಪ್ಮೆಂಟ್, ಕಾನ್ಸೆಪ್ಟ್ ಪಬ್ಲಿಶಿಂಗ್ ಕಂಪನಿ, ನವದೆಹಲಿ.

೮. ಸೆನ್ಸ್‌ಸ್ ಆಫ್ ಇಂಡಿಯಾ, ೧೯೯೧, ಸಿರೀಸ್ – ೧೦ ಕರ್ನಾಟಕ – ಪಾರ್ಟ್‌೧೧ – ಬಿ(ii), ಪೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್‌: ಜನರಲ್ ಪಾಪುಲೇಶನ್, ಡೈರಕ್ಟರ್ ಆಫ್ ಸೆನ್ಸ್‌ಸ್‌ಆಫರೇಶನ್ಸ್, ಕರ್ನಾಟಕ.

೯. ಸೆನ್ಸ್‌ಸ್ ಆಫ್ ಇಂಡಿಯಾ ೧೯೯೧, ಸಿರೀಸ್ – ೧೧, ಕರ್ನಾಟಕ – ಪಾರ್ಟ್‌೧೧ – ಬಿ(ii), ಪೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್‌:.ಜಾತಿ ಮತ್ತು .ಪಂ. ಡೈರಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

೧೦. ಸೆನ್ಸ್‌ಸ್ ಆಫ್ ಇಂಡಿಯಾ ೨೦೦೧, ಸಿರೀಸ್ – ೩೦, ಕರ್ನಾಟಕ ಪೇಪರ್ ೩, ೨೦೦೧, ಪ್ರಾವಿಶನಲ್ ಪಾಪ್ಯೂಲೇಶನ್ ಟೋಟಲ್ಸ್, ಡಿಸ್ಟ್ರಿಬ್ಯುಶನ್ ಆಫ್ ವರ್ಕಸ್‌ð ಮತ್ತು ನಾಲ್ ವರ್ಕಸ್‌ð, ಡೈರಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

೧೧. ಸೆನ್ಸ್‌ಸ್ ಆಫ್ ಇಂಡಿಯಾ ೨೦೦೧, ಸಿರೀಸ್ – ೩೦, ೨೦೦೧, ಡಿಸ್ಟ್ರಿಬ್ಯುಶನ್ ಆಫ್ ವರ್ಕಸ್‌ð ಮತ್ತು ನಾಲ್ ವರ್ಕರ್ಸ್‌, ಡೈರಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

೧೨. ಸೆನ್ಸ್‌ಸ್ ಆಫ್ ಇಂಡಿಯಾ ೨೦೦೧, ಸಿರೀಸ್ – ೩೦, ಕರ್ನಾಟಕ. ಫೈನಲ್ ಪಾಪ್ಯುಲೇಶನ್ ಟೋಟಲ್ಸ್ ಪ.ಜಾತಿ ಮತ್ತು ಪ.ವರ್ಗ ಡೈರಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

[1] ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಇಲ್ಲದಿರುವುದನ್ನು ದುಸ್ಥಿತಿ – ಬಡತನವೆಂದು ಕರೆಯಲಾಗಿದೆ. ದುಡಿಮೆ – ದಿನಗೂಲಿಯು ಪರಿಶಿಷ್ಟರಿಗೆ ಆಯ್ಕೆ ಆಗುವುದಕ್ಕೆ ಪ್ರತಿಯಾಗಿ ಅನಿವಾರ್ಯವಾಗಿದೆ. ಈ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಮಾಜದ ಶಿಷ್ಟರು – ಪ್ರತಿಷ್ಟಿತರು ಕೂಲಿ ಪ್ರಮಾಣವನ್ನು ಅತ್ಯಂತ ಕೆಳಮಟ್ಟದಲ್ಲಿರುವಂತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಪರಿಶಿಷ್ಟರು ಅನೇಕ ಬಗೆಯ ಅಭದ್ರತೆಗಳಿಂದ ನರಳುತ್ತಿದ್ದಾರೆ. ಉದಾ. ಆಹಾರ ಅಭದ್ರತೆ, ಆರೋಗ್ಯ ಅಭದ್ರತೆ, ಉದ್ಯೋಗದ ಅಭದ್ರತೆ ಇತ್ಯಾದಿ.

[2] ಇದಕ್ಕೆ ಸಂಬಂಧಿಸಿದ ಚರ್ಚೆಗೆ ನೋಡಿ: ಚಂದ್ರಶೇಖರ ಟಿ.ಆರ್. ೨೦೦೦:೧೦೨ – ೧೦೩.

[3] ನೋಡಿ: ಟಿಪ್ಪಣಿ ೪

[4] ನೋಡಿ: ಮನೋಹರ್ ಯಾದವ್: ೨೦೦೩:೯೮ – ೧೦೦. ಮಲೆಏರಿಯನ್‌ರೊಡ್ರಿಗಸ್ (ಸಂ) : ೨೦೦೨ – ೨೭. ಪರಿಶಿಷ್ಟರ ಸಂಘಟನೆಯ ಅವಶ್ಯಕತೆಯನ್ನು, ಅವರು ಸ್ವಸಾಮರ್ಥ್ಯದಿಂದ ಅಸ್ಪೃಶ್ಯತೆ ವಿರುದ್ಧ ಹೋರಾಡಬೇಕಾದ ಅಗತ್ಯವನ್ನು ಕುರಿತಂತೆ ಅಲ್ಲಿ ಚರ್ಚಿಸಲಾಗಿದೆ.

[5] ಅವರ ಒಂದು ಸಂಕಲನದ ಶೀರ್ಷಿಕೆಯೇ ‘ಆನ್ ಲಿವಿಂಗ್ ಇನ್ ಎ ರೆವಲ್ಯೂಷನ್’(೧೯೯೨)