ಪ್ರಾದೇಶಿಕ ಅಸಮಾನತೆಯ ಲಿಂಗ ಸಂಬಂಧಿ ಆಯಾಮಗಳು

ಅಭಿವೃದ್ಧಿ ಮತ್ತು ಲಿಂಗ ಸಂಬಂಧಗಳ ನಡುವಿನ ಸಂಬಂಧ ಕುರಿತಂತೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಅಭಿವೃದ್ಧಿ ಕುರಿತ ಸಿದ್ಧಾಂತಗಳಲ್ಲಿ ಲಿಂಗ ಸಂಬಂಧಗಳನ್ನು ಕುರಿತಂತೆ ಚರ್ಚೆ ನಡೆಸಲು ಹಿಂಜರಿಕೆಯಿರುವುದನ್ನು ಸೇನ್ ಗುರುತಿಸಿದ್ದಾರೆ (೧೯೯೦). ಲಿಂಗ ಸಂಬಂಧಗಳ ಚರ್ಚೆಯನ್ನು ವಿಚ್ಛಿದ್ರಕಾರಿ ಎಂದು ಪರಿಗಣಿಸುವುದು ರೂಢಿಯಲ್ಲಿದೆ. ವರಮಾನವಾದಿ – ವರ್ಗವಾದಿ ಅಸಮಾನತೆ ಕುರಿತಂತೆ ಅಭಿವೃದ್ಧಿ ಸಿದ್ಧಾಂತಗಳು ಹೆಚ್ಚಿನ ಗಮನವನ್ನು ನೀಡಿವೆ. ಆದರೆ ಲಿಂಗ ಸಂಬಂಧಿ ಅಸಮಾನತೆಯನ್ನು ನಿರ್ಲಕ್ಷಿಸಲಾಗಿದೆ. ಈ ಬಗೆಯ ಚರ್ಚೆಗಳು ವರಮಾನವಾದಿ – ವರ್ಗವಾದಿ ಅಸಮಾನತೆ ಕುರಿತ ಚರ್ಚೆಗಳಿಗೆ ಪೂರಕವಾಗಿರುತ್ತವೆ ವಿನಾ ಪ್ರತಿಕೂಲ ವಾಗಿರಲು ಸಾಧ್ಯವಿಲ್ಲ.

ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಗಳಲ್ಲೂ ಲಿಂಗ ಸಂಬಂಧಿ ಆಯಾಮಗಳನ್ನು ಮೂಲೆಗುಂಪು ಮಾಡಲಾಗಿದೆ. ಲಿಂಗ ನಿರಪೇಕ್ಷತೆಯೆಂಬುದು ಸಮಾಜವಿಜ್ಞಾನಿಗಳಿಗೆ ಸಂಬಂಧಿಸಿದ ಸಿದ್ಧಾಂತಗಳ ಅಂತರ್ಗತ ಭಾಗವಾಗಿ ಬಿಟ್ಟಿದೆ.

ಜಮೀನುದಾರಿ ಪಾಳೆಗಾರಿಕೆ – ಊಳಿಗಮಾನ್ಯ ವ್ಯವಸ್ಥೆ – ಅಭಿವೃದ್ಧಿ – ಲಿಂಗ ಸಂಬಂಧಗಳು ಇವುಗಳ ನಡುವೆ ಕುತೂಹಲಕಾರಿ ಸಂಬಂಧವನ್ನು ಗುರುತಿಸುವುದು ಸಾಧ್ಯ. ಈ ಕುರಿತಂತೆ ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್ (೨೦೦೨) ಒಂದು ಪ್ರಮೇಯವನ್ನು ರೂಪಿಸಿದ್ದಾರೆ. ಅವರ ಪ್ರಕಾರ ಯಾವ ಪ್ರದೇಶದಲ್ಲಿ ಜಮೀನು ದಾರಿಕೆಯು ಗಟ್ಟಿಯಾಗಿರುತ್ತದೋ, ಯಾವ ಪ್ರದೇಶವು ಹಿಂದುಳಿದ ಸ್ಥಿತಿಯಲ್ಲಿರುತ್ತದೋ, ಯಾವ ಪ್ರದೇಶವು ಜನಸಂಖ್ಯೆಯ ಗಾತ್ರ ಮತ್ತು ಗುಣಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತದೋ ಅಲ್ಲಿ ಲಿಂಗ ಸಂಬಂಧಿಗಳು ತೀವ್ರ ಅಸಮಾನತೆಯಿಂದ ಕೂಡಿರುತ್ತವೆ. ಇದಕ್ಕೆ ಅವರು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನಗಳ ಉದಾಹರಣೆ ನೀಡುತ್ತಾರೆ. ಇದೇ ಪ್ರಮೇಯವನ್ನು ಕರ್ನಾಟಕದ ವಿವಿಧ ಪ್ರಾದೇಶಿಕ ಘಟಕಗಳಿಗೆ ಅನ್ವಯಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಬಹುದಾಗಿದೆ.

ಈ ಹಿಂದೆ ವಿವರಿಸಿರುವಂತೆ ರಾಜ್ಯದ ಬಿಜಾಪುರ, ಬಾಗಲಕೋಟೆ, ಬೀದರ್, ಗುಲಬರ್ಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಗಟ್ಟಿಯಾಗಿ ಇಂದಿಗೂ ಮುಂದುವರಿದಿದೆ. ಇಲ್ಲಿ ಭೂರಹಿತ ಕೃಷಿಕಾರ್ಮಿಕರಲ್ಲಿ ಮಹಿಳೆಯ ಪ್ರಮಾಣವು ಅಧಿಕವಾಗಿದೆ. ಬಡತನವು ತೀವ್ರವಾಗಿದೆ. ಬಡತನದ ನಿರ್ವಹಣೆಯ ಜವಾಬುದಾರಿಯು ಮಹಿಳೆಯರ ಮೇಲೆ ಅಧಿಕವಾಗಿದೆ. ಆದರೆ ಈ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಫಲಗಳಿಂದ ತೀವ್ರವಾಗಿ ಮಹಿಳೆಯರು ವಂಚಿತರಾಗಿದ್ದಾರೆ. ಇಲ್ಲಿ ಲಿಂಗ ಅಸಮಾನತೆಯು ವ್ಯಾಪಕವಾಗಿದೆ.

ಈಗಾಗಲೇ ತಿಳಿಸಿರುವಂತೆ ಕರ್ನಾಟಕದ ಸಂದರ್ಭದಲ್ಲಿ ಪ್ರಾದೇಶಿಕ ಅಸಮಾನತೆಯೆಂಬುದು ಚಾರಿತ್ರಿಕವಾದ ಸಂಗತಿಯಾಗಿದೆ. ಊಳಿಗಮಾನ್ಯ – ಜಮೀನುದಾರಿ ಪಾಳೆಗಾರಿಕೆಯು ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ೧೯೫೦ರ ನಂತರವೂ ಮುಂದುವರೆದುಕೊಂಡು ಬಂದಿರುವ ಸಂಗತಿಯನ್ನು ಗುರುತಿಸಲಾಗಿದೆ. ಇಂತಹ ವ್ಯವಸ್ಥೆಯಲ್ಲಿ ಲಿಂಗ ಸಂಬಂಧಗಳು ಯಾವ ಸ್ವರೂಪದಲ್ಲಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

[1]

  • ರಾಜ್ಯದ ೭ ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಅಧಿಕವಿದೆ. ಅದು ರಾಜ್ಯ ಸರಾಸರಿಗಿಂತ ಅಧಿಕವಿದೆ. ಇದನ್ನು ಸ್ವಾಗತಾರ್ಹ ಸಂಗತಿಯನ್ನಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಮುಂದುವರಿದ ಜಿಲ್ಲೆಗಳಲ್ಲೂ ಇದು ಅಧಿಕವಿದೆ.

ಆದರೆ ಇವೆರಡೂ ಬಗೆಯ ಜಿಲ್ಲೆಗಳಲ್ಲಿನ ದುಡಿಮೆಗಾರರ ವೃತ್ತಿ ಸಂಬಂಧಿ ಸ್ವರೂಪವನ್ನು ನಾವು ಪರಿಗಣಿಸಬೇಕಾಗುತ್ತದೆ.

  • ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳೆಯರ ಕೃಷಿ ಅವಲಂಬನೆಯು ಪುರುಷರ ಕೃಷಿ ಅವಲಂಬನೆಗಿಂತ ಅಧಿಕವಿದೆ.

ಅಭಿವೃದ್ಧಿ – ಪ್ರಾದೇಶಿಕ ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಪ್ರಾದೇಶಿಕ ಅಸಮಾನತೆಯೆಂಬುದು ಮುಖ್ಯವಾದ ಸಂಗತಿಯಾಗಿ ಪರಿಗಣಿತವಾಗುತ್ತಿಲ್ಲ. ಅದಕ್ಕೆ ಲಿಂಗ ಸಂಬಂಧಿ ಆಯಾಮವಿರುವುದನ್ನು ನಾವು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಕೋಷ್ಟಕ – ೧ ರಲ್ಲಿ ತೋರಿಸಿರುವಂತೆ ರಾಜ್ಯದ ಹಿಂದುಳಿದ ಪ್ರದೇಶ – ಜಿಲ್ಲೆಗಳಲ್ಲಿ ಮಹಿಳೆಯರು ಹೆಚ್ಚಿನ ದುಸ್ಥಿತಿ ಅನುಭವಿಸುತ್ತಿರುವುದು ಕಂಡುಬರುತ್ತಿದೆ. ಒಟ್ಟು ಮಹಿಳಾ ದುಡಿಮೆ ಗಾರರಲ್ಲಿ ಕೃಷಿ ಕೂಲಿಕಾರ ಮಹಿಳೆಯರ ಪ್ರಮಾಣವು ಹಿಂದುಳಿದ ಜಿಲ್ಲೆಗಳಲ್ಲಿ ಅಧಿಕವಾಗಿದೆ. ಈ ಜಿಲ್ಲೆಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣವು ಕನಿಷ್ಟವಾಗಿದೆ. ಲಿಂಗಸಂಬಂಧಗಳ ಪ್ರಾದೇಶಿಕ ವಿಭಿನ್ನತೆಯನ್ನು ನಾವು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ಈ ಗುಂಪಿನಲ್ಲಿ ಗದಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳು ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತವೆ. ಈ ಜಿಲ್ಲೆಗಳಲ್ಲಿ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಅಧಿಕವಾಗಿದ್ದರೂ ಮಹಿಳೆಯರ ಸಾಕ್ಷರತೆ ಮತ್ತು ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕವು ಅಧಿಕ ಮಟ್ಟದಲ್ಲಿವೆ.

ಕರ್ನಾಟಕದಲ್ಲಿ ಮಹಿಳಾ ಕೃಷಿ ಕಾರ್ಮಿಕರು : ೨೦೦೧

ಕೋಷ್ಟಕ

ಜಿಲ್ಲೆಗಳು ಒಟ್ಟು ಮಹಿಳಾ ದುಡಿಮೆಗಾರರಲ್ಲಿ ಕೃಷಿ ಕೂಲಿಕಾರ ಮಹಿಳೆಯರ ಪ್ರಮಾಣ : ೨೦೦೧ ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕ : ೨೦೦೧ ಮಹಿಳೆಯರ ಸಾಕ್ಷರತೆ ೨೦೦೧
. ಮಹಿಳಾ ಕೃಷಿ ಕಾರ್ಮಿಕರು ಅಧಿಕವಿರುವ ಜಿಲ್ಲೆಗಳು
(ಒಟ್ಟು ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಶೇಕಡಾ ಪ್ರಮಾಣ ಶೇ. ೬೦+)
೧. ಬಾಗಲಕೋಟೆ ೬೧.೭೦ ೦.೫೭೧ ೪೪.೧೦
೨. ಬಿಜಾಪುರ ೬೬.೫೧ ೦.೫೭೩ ೪೬.೧೯
೩. ಗದಗ ೬೧.೮೫ ೦.೬೨೫ ೫೨.೫೮
೪. ಹಾವೇರಿ ೬೭.೩೭ ೦.೫೯೬ ೫೭.೬೦
೫. ಬಳ್ಳಾರಿ ೬೦.೯೦ ೦.೬೦೬ ೪೬.೧೬
೬. ಗುಲಬರ್ಗಾ ೬೫.೧೯ ೦.೫೪೩ ೩೮.೪೦
೭. ಕೊಪ್ಪಳ ೬೩.೯೬ ೦.೫೬೧ ೪೦.೭೬
೮. ರಾಯಚೂರು ೭೧.೩೧ ೦.೫೩೦ ೩೬.೮೪
. ಮಹಿಳಾ ಕೃಷಿ ಕಾರ್ಮಿಕರು ಕಡಿಮೆಯಿರುವ ಜಿಲ್ಲೆಗಳು (ಶೇ. ೪೦<)
೧. ಬೆಂಗಳೂರು ಗ್ರಾಮೀಣ ೩೩.೦೩ ೦.೬೪೦ ೫೫.೧೨
೨. ಬೆಂಗಳೂರು ನಗರ ೫.೩೮ ೦.೭೩೧ ೭೮.೯೮
೩. ತುಮಕೂರು ೩೭.೫೩ ೦.೬೧೮ ೫೭.೧೮
೪. ದ.ಕನ್ನಡ ೩.೫೧ ೦.೭೧೪ ೭೭.೩೯
೫. ಹಾಸನ ೨೪.೪೬ ೦.೬೩೦ ೫೯.೩೨
೬. ಕೊಡಗು ೫.೩೫ ೦.೬೯೦ ೭೨.೫೩
೭. ಉಡುಪಿ ೨೫.೧೯ ೦.೭೦೪ ೭೪.೦೨
೮. ಉ.ಕನ್ನಡ ೨೫.೩೧ ೦.೬೩೯ ೬೮.೪೮
೯. ಚಿಕ್ಕಮಗಳೂರು ೩೩.೯೦ ೦.೬೩೬ ೬೪.೪೭
೧೦. ಮೈಸೂರು ೩೮.೨೬ ೦.೬೦೫ ೫೫.೮೧
೧೧. ಮಂಡ್ಯ ೩೮.೭೦ ೦.೫೯೩ ೫೧.೬೨
. ಮಧ್ಯಮ ಸ್ಥಿತಿಯ ಜಿಲ್ಲೆಗಳು (>ಶೇ. ೪೦ < ಶೇ. ೬೦)
೧. ಚಿತ್ರದುರ್ಗ ೫೨.೭೧ ೦.೬೧೮ ೫೪.೬೨
೨. ದಾವಣಗೆರೆ ೫೭.೧೦ ೦.೬೨೧ ೫೮.೪೫
೩. ಕೋಲಾರ ೪೦.೪೫ ೦.೬೧೩ ೫೨.೮೧
೪. ಶಿವಮೊಗ್ಗ ೫೨.೬೦ ೦.೬೬೧ ೬೭.೨೪
೫. ಚಾಮರಾಜನಗರ ೫೯.೯೪ ೦.೫೫೭ ೪೩.೦೨
೬. ಬೆಳಗಾವಿ ೫೦.೮೯ ೦.೬೩೫ ೫೨.೫೩
೭. ಧಾರವಾಡ ೪೯.೭೯ ೦.೬೨೬ ೬೨.೨೦
೮. ಬೀದರ್‌ ೫೯.೩೩ ೦.೫೭೨ ೫೦.೦೧

ಮೂಲ: ಕರ್ನಾಟಕ ಸರ್ಕಾರ, ೨೦೦೬, ಸೆನ್ಸ್ನ್ಆಫ್ ಇಂಡಿಯಾ : ೨೦೦೧

ಕೋಷ್ಟಕ – ೧ರಲ್ಲಿ ಎರಡು ವಿವರಗಳನ್ನು ನೀಡಲಾಗಿದೆ. ಮೊದಲನೆಯದು ಜಿಲ್ಲೆಯ ಒಟ್ಟು ಮಹಿಳಾ ದುಡಿಮೆಗಾರರಲ್ಲಿ ಕೃಷಿ ಕೂಲಿಕಾರ ಮಹಿಳೆಯರ ಪ್ರಮಾಣ. ಎರಡನೆಯದು ಜಿಲ್ಲಾವಾರು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ. ಯಾವ ಜಿಲ್ಲೆಗಳಲ್ಲಿ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣವು ಶೇ. ೬೦ ಕ್ಕಿಂತ ಅಧಿಕವಾಗಿದೆಯೋ ಆ ಜಿಲ್ಲೆಗಳಲ್ಲಿ ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವು ಕಡಿಮೆಯಿದೆ. ಗದಗ ಮತ್ತು ಬಳ್ಳಾರಿಗಳ ಅಪವಾದ ಬಿಟ್ಟರೆ ಉಳಿದ ೬ ಜಿಲ್ಲೆಗಳಲ್ಲಿ ಜಿಡಿಐಯು ೦.೬೦೦ರ ಒಳಗಿದೆ. ಯಾವ ಜಿಲ್ಲೆಗಳಲ್ಲಿ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣವು ಅತ್ಯಂತ ಕಡಿಮೆಯಿದೆಯೋ ಅಂತಹ ಜಿಲ್ಲೆಗಳಲ್ಲಿ ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವು ಅಧಿಕವಾಗಿದೆ. ಈ ಬಗೆಯ ೧೧ ಜಿಲ್ಲೆಗಳ ಗುಂಪಿನ್ಲಿ ಮಂಡ್ಯವೊಂದನ್ನು ಬಿಟ್ಟರೆ ಉಳಿದ ೧೦ ಜಿಲ್ಲೆಗಳ ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವು ೦.೬೦೦ ಕ್ಕಿಂತ ಅಧಿಕವಿದೆ. ಈ ಜಿಲ್ಲೆಗಳಲ್ಲಿ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣವು ಶೇ. ೪೦ ಕ್ಕಿಂತ ಕಡಿಮೆಯಿದೆ.

ರಾಜ್ಯದಲ್ಲಿ ಎಂಟು ಜಿಲ್ಲೆಗಳು ಮಧ್ಯಮ ಅಭಿವೃದ್ಧಿ ಸ್ಥಿತಿಯಲ್ಲಿವೆ. ಈ ಜಿಲ್ಲೆಗಳಲ್ಲಿ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣವು ಶೇ. ೬೦ಕ್ಕಿಂತ ಕಡಿಮೆಯಿದೆ ಮತ್ತು ಶೇ. ೪೦ ಕ್ಕಿಂತ ಅಧಿಕವಿದೆ. ಈ ಗುಂಪಿನ ಜಿಲ್ಲೆಗಳಲ್ಲಿ ಲಿಂಗ ಸಂಬಂಧಿ ಮಾನವ ಅಭಿವೃದ್ಧಿ ಸೂಚ್ಯಂಕವು ಮಧ್ಯಮ ಸ್ತಿತಿಯಲ್ಲಿದೆ. ಊಳಿಗಮಾನ್ಯ ಭೂಸಂಬಂಧಗಳಿಗೂ ಮತ್ತು ಲಿಂಗ ಸಂಬಂಧಿ ದುಸ್ಥಿತಿಗೂ ಸಂಬಂಧವಿರುವುದು ಮೇಲಿನ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಕೋಷ್ಟಕದ ಕೊನೆಯ ಅಂಕಣದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣವನ್ನು ನೀಡಲಾಗಿದೆ. ಯಾವ ಜಿಲ್ಲೆಗಳಲ್ಲಿ ಕೃಷಿ ಕೂಲಿಕಾರ ಮಹಿಳೆಯರ ಪ್ರಮಾಣವು ಶೇ.೬೦ ಕ್ಕಿಂತ ಅಧಿಕವಾಗಿದೆಯೋ ಅಲ್ಲಿ ಮಹಿಳಾ ಸಾಕ್ಷರತೆಯು ಕಡಿಮೆಯಿದೆ. ಈ ಗುಂಪಿನ ಎಂಟು ಜಿಲ್ಲೆಗಳ ಪೈಕಿ ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಬಿಟ್ಟರೆ ಉಳಿದ ಆರು ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣವು ಶೇ. ೪೬ ರಿಂದ ಶೇ.೩೬ರ ಪರಿಧಿಯಲ್ಲಿದೆ.

ಆದರೆ ಕೃಷಿ ಕೂಲಿಕಾರ ಮಹಿಳೆಯರ ಪ್ರಮಾಣವು ಶೇ. ೪೦ಕ್ಕಿಂತ ಕಡಿಮೆಯಿರುವ ಎರಡನೆಯ ಗುಂಪಿನ ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಸಾಮಾನ್ಯವಾಗಿ ಅಧಿಕವಾಗಿರುವುದನ್ನು ಕಾಣಬಹುದು. ಈ ಗುಂಪಿನಲ್ಲಿ ಮಂಡ್ಯ ಜಿಲ್ಲೆಯೊಂದನ್ನು ಬಿಟ್ಟರೆ ಉಳಿದಂತೆ ಸಾಕ್ಷರತಾ ಪ್ರಮಾಣವು ಶೇ. ೫೫ ಕ್ಕಿಂತ ಅಧಿಕವಿದೆ. (ರಾಜ್ಯ ಸರಾಸರಿ ಮಹಿಳಾ ಸಾಕ್ಷರತೆ ಶೇ. ೫೭.೪೫). ಮಧ್ಯಮಗತಿ ಜಿಲ್ಲೆಗಳನ್ನು ಒಳಗೊಂಡ ಮೂರನೆಯ ಗುಂಪಿನಲ್ಲಿ ಮಹಿಳೆಯರ ಸಾಕ್ಷರತೆಯು ಮಧ್ಯಮ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಊಳಿಗಮಾನ್ಯ ವ್ಯವಸ್ಥೆಗೂ ಮತ್ತು ಲಿಂಗ ಅಸಮಾನತೆಗು ನಡುವೆ ಸಂಬಂಧವಿರುವುದನ್ನು ಇದರಿಂದ ಕಂಡುಕೊಳ್ಳಬಹುದಾಗಿದೆ.

ಅಭಿವೃದ್ಧಿ ರಾಜಕಾರಣ

ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ರಾಜಕಾರಣದ ಸ್ವರೂಪವು ಬದಲಾಗಬೇಕು. ಪ್ರಾದೇಶಿಕ ಅಸಮಾನತೆಯ ಸಂಗತಿಯನ್ನು ಜನಸಮೂಹದ ನೆಲೆಯಿಂದ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಪ್ರಾದೇಶಿಕ ಅಸಮಾನತೆಯ ನಿವಾರಣೆಯಿಂದಾಗಿ ರಾಜ್ಯದಲ್ಲಿ ಹಿಂದುಳಿದಿರುವ ಜಿಲ್ಲೆಗಳಿಗೆ ತುಂಬಾ ಅನುಕೂಲ ಒದಗಿಬಿಡುತ್ತವೆ ಎಂದು ಭಾವಿಸುವ ಪರಿಯಿದೆ. ಇದು ನಿಜ. ಆದರೆ ಇದಕ್ಕೆ ಪ್ರತಿಯಾಗಿ ಪ್ರಾದೇಶಿಕ ಅಸಮಾನತೆ ನಿವಾರಣೆಯು ಯಾಕೆ ಮುಖ್ಯವೆಂದರೆ ಅದರ ಮೂಲಕ ರಾಜ್ಯದಲ್ಲಿ ಬಡತನದ ಪ್ರಮಾಣವನ್ನು ಕಡಿಮೆ ಮಾಡಬಹುದು. ಲಿಂಗ ಸಂಬಂಧಿ ಅಸಮಾನತೆಯನ್ನು ಕಡಿಮೆ ಮಾಡಬಹುದು. ಪರಿಶಿಷ್ಟರ ಬದುಕನ್ನು ಉತ್ತಮಪಡಿಸಬಹುದು (ಜಾವೇದ್ ಆಲಮ್ : ೧೯೮೪).

ಮೇಲ್ವರ್ಗವಾದಿ ನೆಲೆಯಿಂದ ಪ್ರಾದೇಶಿಕ ಅಸಮಾನತೆಯನ್ನು ಪರಿಭಾವಿಸಿಕೊಂಡಾಗ ಹಿಂದುಳಿದ ಪ್ರದೇಶಗಳಿಗೆ ಹೈಕೋರ್ಟು ಮುಖ್ಯವಾಗುತ್ತದೆ. ವಿಮಾನ ನಿಲ್ದಾಣಗಳು ಮುಖ್ಯವಾಗುತ್ತವೆ. ಸಿಈಟಿಯಲ್ಲಿ ಮೀಸಲಾತಿ ಆದ್ಯತೆಯಾಗಿ ಬಿಡುತ್ತದೆ. ಈ ಬಗೆಯ ಮೇಲ್ವರ್ಗವಾದಿ ಅಭಿವೃದ್ಧಿ ರಾಜಕಾರಣವನ್ನು ಬದಲಾಯಿಸಬೇಕಾಗಿದೆ. ಜನಸಮೂಹವಾದಿ ಅಭಿವೃದ್ಧಿ ರಾಜಕಾರಣವನ್ನು ರೂಪಿಸಬೇಕಾಗಿದೆ. ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಕ್ರಮವೇ ಬದಲಾಗಬೇಕಾಗಿದೆ. ವರಮಾನದ ವರ್ಧನೆಯೇ ಅಭಿವೃದ್ಧಿಯೆಂಬ ವಿಚಾರ ಪ್ರಣಾಳಿಕೆಯನ್ನು ಕೈಬಿಟ್ಟು ಜನರ ಧಾರಣ ಸಾಮರ್ಥ್ಯದ ವರ್ಧನೆಯ ನೆಲೆಯಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ.

ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಆಹಾರ ಭದ್ರತೆ, ವಲಸೆಯ ನಿಯಂತ್ರಣ, ಲಿಂಗ ಸಂಬಂಧಿ ಸಮಾನತೆ ಮುಂತಾದವು ಅಭಿವೃದ್ಧಿ ರಾಜಕಾರಣದಲ್ಲಿ ಆದ್ಯತೆಯ ಸಂಗತಿಗಳಾಗಬೇಕು. ಅತ್ಯಂತ ತುರ್ತಾಗಿ ಅಭಿವೃದ್ಧಿಯು ಬೆಂಗಳೂರಾಭಿಮುಖವಾಗಿರುವುದನ್ನು ತಲೆಕೆಳಗು ಮಾಡಬೇಕು. ಕೃಷ್ಣಕುಮಾರ್ ಕಲ್ಲೂರ ಹೇಳಿದಂತೆ ಬೆಂಗಳೂರು ಉತ್ತರಾಭಿಮುಖವಾಗಬೇಕು. ಈ ಬಗೆಯ ಅಭಿವೃದ್ಧಿ ರಾಜಕಾರಣದಿಂದ ರಾಜ್ಯದ ಹಿಂದುಳಿದ ಪ್ರದೇಶದ ಜಿಲ್ಲೆಗಳು ಚರಿತ್ರೆಯ ಭಾರದಿಂದ ಹೊರಬರುವುದು ಸಾಧ್ಯವಾಗುತ್ತದೆ.

ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಬಂಡವಾಳಶಾಹಿಯು ಹುಟ್ಟು ಹಾಕಿರುವ ಅಭಿವೃದ್ಧಿಗೆ ಸಂಬಂಧಿಸಿದ ಕೇಂದ್ರೀಕರಣ ಪ್ರಕ್ರಿಯೆಯನ್ನು ಜಾಗತೀಕರಣವು ಗಟ್ಟಿಗೊಳಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು ಉತ್ತರಾಭಿಮುಖವಾಗುವ ಬದಲು ಅದು ಜನರಿಂದ ದೂರವಾಗುವ ಪ್ರಕ್ರಿಯೆಗೆ ಒಳಗಾದಂತೆ ಕಾಣುತ್ತದೆ. ಅದು ರಾಜ್ಯದ ಹಿಂದುಳಿದ ತಾಲ್ಲೂಕುಗಳಾದ ದೇವದುರ್ಗ, ಜೇವರ್ಗಿ, ಸುರಪುರಗಳಿಗೆ ಅಭಿಮುಖವಾಗುವುದಕ್ಕೆ ಪ್ರತಿಯಾಗಿ ಅದು ಸಿಂಗಪುರವಾಗುವ ಪ್ರಕ್ರಿಯೆಗೆ ಪಕ್ಕಾಗಿ ಬಿಟ್ಟಿದೆ.

ಕರ್ನಾಟಕದ ಏಕೀಕರಣದ ಉದ್ದೇಶಗಳು ವಿಫಲವಾಗಿ ಬಿಟ್ಟಿದೆ. ರಾಜ್ಯದ ಅಭಿವೃದ್ಧಿಯೇನೋ ಉನ್ನತ ಮಟ್ಟಕ್ಕೇರಿದೆ. ಬೆಂಗಳೂರು ಸಿಂಗಪುರವಾಗುತ್ತಿದೆ. ಎಲ್ಲ ಜಿಲ್ಲೆಗಳು ವಿಮಾನ ನಿಲ್ದಾಣ ಕೇಳುವಂತಾಗಿದೆ. ಆದರೆ ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ಜನರ ಬದುಕು ಜರ್ಜರಿತವಾಗಿ ಬಿಟ್ಟಿದೆ. ದುಡಿಮೆಯನ್ನು ಅರಸಿಕೊಂಡು ಬೆಂಗಳೂರಿಗೆ ವಲಸೆ ಬರುವ ಗುಲಬರ್ಗಾ, ರಾಯಚೂರು, ಬಾಗಲಕೋಟೆ, ಬಿಜಾಪುರ, ಕೊಪ್ಪಳ ಜಿಲ್ಲೆಯ ದುಡಿಮೆಗಾರರ ಬದುಕು ಅಲ್ಲಿನ ಕಟ್ಟಡಗಳ – ಬೃಹತ್ ಸೌಧಗಳ ಕುಸಿತಕ್ಕೆ ಸಿಕ್ಕು ಚಿಂದಿಯಾಗುತ್ತಿದೆ. ಇದು ನಿಲ್ಲಬೇಕು.

ಒಣಭೂಮಿ ಬೇಸಾಯ

ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮಾನತೆಯ ಚಾರಿತ್ರಿಕ – ಸಾಮಾಜಿಕ ಸಂಗತಿಗಳನ್ನು ಚರ್ಚಿಸುವ ಸಂದರ್ಭದಲ್ಲಿ ಅಗತ್ಯವಾಗಿ ಪರಿಗಣಿಸಬೇಕಾದ ಸಂಗತಿಯೆಂದರೆ ಅಲ್ಲಿನ ಪ್ರತಿಕೂಲ ನೈಸರ್ಗಿಕ ಸನ್ನಿವೇಶ. ನಮ್ಮ ರಾಜ್ಯದಲ್ಲಿನ ಹಿಂದುಳಿದ ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಹಾಗೂ ಬಿಜಾಪುರ ಒಣಭೂಮಿ ಬೇಸಾಯವನ್ನು ಪ್ರಧಾನವಾಗಿ ಪಡೆದಿರುವ ಜಿಲ್ಲೆಗಳಾಗಿವೆ.[2]

ಹೈದರಾಬಾದ್ ನಿಜಾಮ ಸಂಸ್ಥಾನವನ್ನು ಭಾಷಾವಾರು ಮೂರು ಭಾಗಗಳಾಗಿ ವಿಭಜಿಸಿ ಮಹಾರಾಷ್ಟ್ರ (ಮರಾಠವಾಡ), ಆಂಧ್ರಪ್ರದೇಶ (ತೆಲಂಗಾಣ) ಮತ್ತು ಕರ್ನಾಟಕ (ಹೈದರಾಬಾದ್ – ಕರ್ನಾಟಕ) ರಾಜ್ಯಗಳಲ್ಲಿ ವಿಲೀನಗೊಳಿಸಲಾಯಿತು. ಹೀಗೆ ನಿಜಾಮ ಸಂಸ್ಥಾನದಿಂದ ವರ್ಗಾವಣೆಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ವಿಲೀನವಾದ ಪ್ರದೇಶಗಳೆಲ್ಲವೂ ಒಣಭೂಮಿ ಬೇಸಾಯ ಪ್ರಧಾನ ಪ್ರದೇಶಗಳಾಗಿವೆ. ರಾಜಸ್ಥಾನದಿಂದ ದಕ್ಷಿಣಾಭಿಮುಖವಾಗಿ ಹರಿದಿರುವ ಒಣಭೂಮಿ ಪ್ರದೇಶವು (ಸೆಮಿ ಅರಿಡ್ ರೀಜನ್ಸ್) ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಬರುವ ಜಿಲ್ಲೆಗಳೆಲ್ಲವೂ ಸಂಬಂಧಿಸಿದ ರಾಜ್ಯಗಳಲ್ಲಿ ಹಿಂದುಳಿದ ಜಿಲ್ಲೆಗಳಾಗಿವೆ.

ಈಗಾಗಲೆ ತಿಳಿಸಿರುವಂತೆ ಹೈದರಾಬಾದ್ ನಿಜಾಮನ ಸಂಸ್ಥಾನವು ವಸಾಹತುಶಾಹಿ ಆಡಳಿತದ ಹಾಗೂ ಅಭಿವೃದ್ಧಿಯ ಅನುಕೂಲಗಳಿಂದ ವಂಚಿತವಾಗಿತ್ತು. ಈ ಪ್ರದೇಶದಲ್ಲಿ ನೀರಾವರಿ ಯೋಜನೆಗಳು ಬೆಳೆಯಲಿಲ್ಲ. ಬ್ರಿಟಿಷ್‌ವಸಾಹತುಶಾಹಿ ಆಡಳಿತದ ಪ್ರದೇಶಗಳು ನೀರಾವರಿ ಸೌಲಭ್ಯವನ್ನು ವ್ಯಾಪಕವಾಗಿ ಪಡೆದುಕೊಂಡವು.

‘ಬರಗಾಲ – ಒಣಭೂಮಿ ಬೇಸಾಯ – ಹಿಂದುಳಿದಿರುವಿಕೆ’ – ಇವುಗಳ ನಡುವಣ ಸಂಬಂಧ ಕುರಿತಂತೆ ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಬಗ್ಗೆ ಚರ್ಚಿಸುವಾಗ ಮೇಲಿನ ಮೂರು ಸಂಗತಿಗಳ ನಡುವಣ ಸಂಕೀರ್ಣ – ಸೂಕ್ಷ್ಮ ಸಂಬಂಧಗಳನ್ನು ಅವಶ್ಯವಾಗಿ ಪರಿಗಣಿಸಬೇಕಾಗುತ್ತದೆ. ಚರಿತ್ರೆಯ ಜೊತೆಗೆ ಸದರಿ ಪ್ರದೇಶಗಳು ಪ್ರತಿಕೂಲ ಪರಿಸರದ ಹೆಣಬಾರವನ್ನು ಹೆಗಲಿಗೇರಿಸಿಕೊಂಡಿವೆ.

ಮೇಲ್ವರ್ಗವಾದಿ ಅಭಿವೃದ್ಧಿ ರಾಜಕಾರಣ

ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಚಾರಿತ್ರಿಕ, ಸಾಮಾಜಿಕ ಹಾಗೂ ನೈಸರ್ಗಿಕ ಮುಖಗಳನ್ನು ಗುರುತಿಸಲಾಗಿದೆ. ಇವುಗಳ ಜೊತೆ ಪ್ರಾದೇಶಿಕ ಅಸಮಾನತೆಯನ್ನು ಹುಟ್ಟು ಹಾಕುತ್ತಿರುವ ಮೇಲ್ವರ್ಗವಾದಿ – ಬಂಡವಾಳ ಶಾಹಿ ಅಭಿವೃದ್ಧಿ ರಾಜಕಾರಣದ ಪಾತ್ರವನ್ನು ನಾವು ಪರಿಗಣಿಸಬೇಕಾಗುತ್ತದೆ. ಗ್ರಾಮೀಣಕ್ಕೆ ಪ್ರತಿಯಾಗಿ ನಗರವನ್ನು, ಕೃಷಿಗೆ ಪ್ರತಿಯಾಗಿ ಉದ್ದಿಮೆಯನ್ನು, ಕೃಷಿಯೊಳಗೆ ಒಣಭೂಮಿ ಬೇಸಾಯಕ್ಕೆ ಪ್ರತಿಯಾಗಿ ನೀರಾವರಿಯನ್ನು, ಭೂರಹಿತ ಕೃಷಿ ಕೂಲಿಕಾರರಿಗೆ ಪ್ರತಿಯಾಗಿ ಭೂಮಾಲಿಕರನ್ನು ಓಲೈಸುವ ಅಭಿವೃದ್ಧಿ ರಾಜಕಾರಣದ ಪಾತ್ರವನ್ನು ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಯಲ್ಲಿ ಪರಿಗಣಿಸಬೇಕಾಗುತ್ತದೆ.

ಅಭಿವೃದ್ಧಿ ರಾಜಕಾರಣವು ಯಾವಾಗಲೂ ಉಳ್ಳವರ ಪರವಾಗಿರುತ್ತದೆ ವಿನಾ ಉಳಿದವರ ಪರವಾಗಿರುವುದಿಲ್ಲ. ಅದು ಸಾಮಾನ್ಯವಾಗಿ ಪಟ್ಟಭದ್ರವನ್ನು ಒಲೈಸುತ್ತದೆ. ವಂಚಿತರನ್ನು, ಅಂಚಿನಲ್ಲಿರುವವರನ್ನು ಅದು ನಿರ್ಲಕ್ಷಿಸುತ್ತದೆ. ಅದೇ ಪ್ರಕಾರ ಅದು ಮುಂದುವರಿದ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡುತ್ತದೆ ವಿನಾ ಹಿಂದುಳಿದ ಪ್ರದೇಶಕ್ಕೆ ಆದ್ಯತೆಯನ್ನು ನೀಡುವುದಿಲ್ಲ. ಹಿಂದುಳಿದ ಪ್ರದೇಶವನ್ನು ನಿರ್ಲಕ್ಷಿಸಿ ರಾಜಕಾರಣವನ್ನು ನಡೆಸಬಹುದು. ಆದರೆ ಮುಂದುವರಿದ ಪ್ರದೇಶದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ರಾಜಕಾರಣ ನಡೆಸುವುದು ಸಾಧ್ಯವಾಗುವುದಿಲ್ಲ. ಎಲ್ಲಿಯವರೆಗೆ ಅಭಿವೃದ್ಧಿ ರಾಜಕಾರಣವು ಮೇಲ್ವರ್ಗವಾದಿಯಾಗಿರುತ್ತದೋ, ಪಟ್ಟಭದ್ರರನ್ನು ಮಾತ್ರ ಒಲೈಸುತ್ತಿರುತ್ತದೊ ಅಲ್ಲಿಯವರೆಗೆ ಹಿಂದುಳಿದ ಪ್ರದೇಶಗಳಿಗೆ ನ್ಯಾಯ ದೊರೆಯುವುದು ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಸರ್ಕಾರಗಳು ಯಾವತ್ತೂ ಗಂಭೀರವಾಗಿ ಪರಿಗಣಿಸಲಿಲ್ಲ. ಪ್ರಾದೇಶಿಕ ಅಭಿವೃದ್ಧಿ ನೀತಿ ಎಂಬುದನ್ನು ಇನ್ನೂ ಅದಕ್ಕೆ ರೂಪಿಸಲು ಸಾಧ್ಯವಾಗಲಿಲ್ಲ. ಈ ರೀತಿಯಲ್ಲಿ ಹಿಂದುಳಿದ ಪ್ರದೇಶದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿಯೂ ರಾಜಕಾರಣ ನಡೆಸಬಹುದು ಎಂಬುದೇ ನಮ್ಮ ಮುಂದಿರುವ ದುರಂತ. ಅಲ್ಲದಿದ್ದರೆ ೫೦ ವರ್ಷಗಳ ನಂತರವೂ ಸಾಕ್ಷರತೆ ಪ್ರಮಾಣ ಶೇ. ೫೦ ದಾಟಿದ್ದರೂ ಅಂತಹ ತಾಲ್ಲೂಕುಗಳಲ್ಲಿ ಶಾಸಕರು ೪ ಬಾರಿ – ೫ ದಾರಿ, ೬ ಬಾರಿ ಆಯ್ಕೆಯಾಗುತ್ತಾರೆಂದರೆ ಇನ್ನೇನು ಅರ್ಥ? ಈ ಬಗೆಯ ಅಭಿವೃದ್ಧಿ ರಾಜಕಾರಣವನ್ನು ಬದಲಾಯಿಸಬೇಕಾಗುತ್ತದೆ. ಅದನ್ನು ಬಡವರ, ಅಂಚಿನಲ್ಲಿರುವವರ, ವಂಚಿತರ, ಮಹಿಳೆಯರ ಪರವಾಗುವಂತೆ ಪುನಾರೂಪಿಸಬೇಕಾಗುತ್ತದೆ. ಆಗ ಪ್ರಾದೇಶಿಕ ಅಸಮಾನತೆಯ ನಿವಾರಣೆಯು ಆದ್ಯತೆಯ ಸಂಗತಿಯಾಗುತ್ತದೆ.

ಸಾರಾಂಶ

ಪ್ರಸ್ತುತ ಪ್ರಬಂಧದಲ್ಲಿ ಪ್ರಾದೇಶಿಕ ಅಸಮಾನತೆಯ ಬೃಹತ್‌ಸ್ವರೂಪವನ್ನು ಹಿಡಿದಿಡುವುದಕ್ಕೆ ಪ್ರತಿಯಾಗಿ ಅದಕ್ಕೆ ಕಾರಣವಾಗಿರುವ ಸಾಮಾಜಿಕ – ಚಾರಿತ್ರಿಕ ಸಂಗತಿಗಳನ್ನು ಗುರುತಿಸುವುದಕ್ಕೆ, ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಲಾಗಿದೆ. ಸಾಮಾಜಿಕ – ರಾಜಕೀಯ ಪರಿವರ್ತನೆಯ ನೆಲೆಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಪರಿಭಾವಿಸಿ ಕೊಳ್ಳುವ ಪ್ರಯತ್ನ ಇಲ್ಲಿದೆ. ಜನಸಮೂಹದ ನೆಲೆಯಿಂದ ಪ್ರಾದೇಶಿಕ ಅಸಮಾನತೆಯನ್ನು ಪರಿಚಯಿಸುವ ದೃಷ್ಟಿಕೋನ ಇಲ್ಲಿದೆ.

ಆಕರಸೂಚಿ

೧. ಅಮರ್ತ್ಯಸೆನ್, ೧೯೯೦, ‘ಜೆಂಡರ್ ಆಂಡ್ ಕೋಆಪರೇಟಿವ್ ಕಾನ್ಪಿಕ್ಷ್‌’. ಇಲ್ಲಿ ಐರ‍್ನಿ ಟಿಂಕರ್ (ಸಂ.) ಪರ್ಸಿಸ್ಟಿಂಗ್ ಇನೀಕ್ವಾಲಿಟೀಸ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂಯಾರ್ಕ್.

೨. ಕರ್ನಾಟಕ ಸರ್ಕರ, ೨೦೦೬, ಕರ್ನಾಟಕದ ಮಾನವ ಅಭಿವೃದ್ಧಿ ವರದಿ ೨೦೦೫, ಯೋಜನಾ ಇಲಾಖೆ, ಬೆಂಗಳೂರು.

೩. ಕರ್ನಾಟಕ ಸರ್ಕಾರ, ೨೦೦೨, ಪ್ರಾದೇಶಿಕ ಅಸಮತೋಲನ ಅಧ್ಯಯನದ ಉನ್ನತಾಧಿಕಾರ ಸಮಿತಿಯ ಅಂತಿಮ ವರದಿ, ಯೋಜನಾ ಇಲಾಖೆ, ಬೆಂಗಳೂರು

೪. ಕರ್ನಾಟಕ ಸರ್ಕಾರ, ೧೯೯೯, ಬಿಜಾಪುರ ಜಿಲ್ಲಾ ಗ್ಯಾಸೆಟಿಯರ್ (ಅವಿಭಜಿತ) ಸಂ.ಆರ್. ಮುನಿಸ್ವಾಮಿ, ಕರ್ನಾಟಕ ಗ್ಯಾಸೆಟಿಯರ್ ಕಚೇರಿ, ಬೆಂಗಳೂರು

೫. ಕರ್ನಾಟಕ ಸರ್ಕಾರ, ೧೯೭೦, ಎಕಾನಾಮಿಕ್ ಡೆವಲಪ್ಮೆಂಟ್ ಆಫ್ ಮೈಸೂರು :” ೧೯೫೬೧೯೬೯, ಬ್ಯುರೋ ಆಫ್ ಇಕಾನಾಮಿಕ್ಸ್ ಆಂಡ್ ಸ್ಟಾಟಿಸ್ಟಿಕ್ಸ್‌, ಬೆಂಗಳೂರು.

೬. ಕೃಷ್ಣ ಕೊಲ್ಲಾರ ಕುಲಕರ್ಣಿ, ೧೯೯೪, ಕೃಷ್ಣಕುಮಾರ್ ಕಲ್ಲೂರ್ ಸಾಹಿತ್ಯ ವಾಚಿಕೆ, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು, ಪು. ೧೫೧ – ೨೦೮.

೭. ಕೃಷ್ಣಕುಮಾರ್ ಕಲ್ಲೂರು, ೧೯೫೬, ಕನ್ನಡ ನಾಡಿನ ಸಾರಿಗೆಸಂಪರ್ಕ, ಸಂ. ಚಂದ್ರಶೇಖರ ಟಿ.ಆರ್., ಪ್ರಸಾರಾಮಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦)

೮. ಕೋದಂಡರಾವ್ ಎಂ., ೨೦೦೭, ‘ಮೂವ್‌ಮೆಂಟ್ ಫಾರ್‌ತೆಲಂಗಾಣ ಸ್ಟೇಟ್ ; ಎ ಸ್ಟ್ರಗಲ್ ಫಾರ್‌ಅಟಾನಮಿ’, ಇಕಾನಾಮಿಕ್ ಆಂಡ್ ಪೊಲಿಟಿಕಲ್ವೀಕ್ಲಿ, ಜನವರಿ ೧೩, ಪು. ೯೦ – ೯೪

೯. ಕಾರ್ಲ್‌‌ಮಾರ್ಕ್ಸ್ ಮತ್ತು ಫೆಡ್ರಿಕ್ ಏಂಜೆಲ್ಸ್, ೧೯೫೯, ಆನ್ ಕಲೋನಿಯಲಿಸಮ್, ಪ್ರೊಗ್ರೆಸ್ ಪಬ್ಲಿಷರ‍್ಸ್‌, ಮಾಸ್ಕೋ, ಪು.೮೨

೧೦. ಗುನ್ನಾರ್ ಮಿರ್ಡಾಲ್, ೧೯೫೬, ಎಕಾನಾಮಿಕ್ ಥಿಯರಿ ಆಂಡ್ ಅಂಡರ್ ಡೆವಲಪ್ಡ್ ರೀಜನ್ಸ್‌, ಮಿಥ್ಯಿಯನ್ ಅಂಡ್ ಕಂಪನಿ, ಲಂಡನ್.

೧೧. ಚಂದ್ರಶೇಖರ ಟಿ.ಆರ್., ೨೦೦೪, ‘ಮಹಿಳಾ ವಿಶ್ವವಿದ್ಯಾಲಯ : ಒಂದು ಚರ್ಚೆ’, ಮಹಿಳಾ ಅಧ್ಯಯನ, ಸಂ.೫, ಸಂ.೧ ಮತ್ತು ೨, ಪು. ೧೮೩ – ೪೧೯೦.

೧೨. ಚಂದ್ರಶೇಖರ ಟಿ.ಆರ್., ೨೦೦೫, ‘ಅಸ್ಪೃಶ್ಯತೆ ಆರ್ಥಿಕತೆ ಮತ್ತು ಅಭಿವೃದ್ಧಿ’, ಅಭಿವೃದ್ಧಿ ಅಧ್ಯಯನ, ಸಂ.೪, ಸಂ.೨, ಪು. ೬ – ೩೪

೧೩. ಮಿಹಿರ್‌ ಶಹಾ ಮತ್ತು ಇತರರು, ‘ಡ್ರೈಲ್ಯಾಂಡ್ಸ್‌ಆಫ್ ಇಂಡಿಯಾ’, ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

೧೪. ಮುಧೋಳ್‌ಕರ್‌ ಎ., ಮತ್ತು ವೋರಾ ಆರ್., ೧೯೮೪, ‘ರೀಜನಲಿಸಮ್‌ ಇನ್ ಮಹಾರಾಷ್ಟ್ರ’. ಇಲ್ಲಿ ಆಕ್ತರ್ ಮಜೀದ್ (ಸಂ). ರೀಜನಲಿಸಮ್ : ಡೆವಲಪ್ಮೆಂಟಲ್ ಟೆನ್ಷನ್ ಇನ್ ಇಂಡಿಯಾ, ಕಾಸ್ಮೊ ಪಬ್ಲಿಕೇಶನ್ಸ್, ನವದೆಹಲಿ. ಪು. ೮೯ – ೧೧೪.

೧೫. ರಾಜ್‌ಕೃಷ್ಣ, ೧೯೯೦, ‘ದಿ ಸೆಂಟರ್ ಆಂಡ್ ಫೆರಿಫೆರಿ : ಇಂಟರ್‌ಸ್ಟೇಟ್ ಡಿಸ್ ಪ್ಯಾರಿಟೀಸ್ ಇನ್ ಇಕಾನಾಮಿಕ್‌ಡೆವಲಪ್‌ಮೆಂಟ್.’ ಇಲ್ಲಿ ಚೌದರಿ, ಶಾಮಗಮ್‌ಕರ್ ಆಂಡ್ ಅರಬಿಂದೋ ಘೋಷ್ (ಸಂ). ದಿ ಇಂಡಿಯನ್ ಇಕಾನಮಿ ಆಂಡ್ ಇಟ್ಸ್ ಪರ್ಫಾರ್ಮೆನ್ಸ್ ಸಿನ್ಸ್ ಇಂಡಿಪೆಂಡೆನ್ಸ್, ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು. ೪೩ – ೮೫.

೧೬. ಸುಬ್ರಮಣ್ಯಮ್‌ಎಂ., ೧೯೮೪, ‘ಇನ್‌ಟ್ರಾರೀಜನಲಿಸಮ್ ಇನ್‌ ಆಂಧ್ರ ಪ್ರದೇಶ್‌’. ಇಲ್ಲಿ ಅಕ್ತರ್ ಮಜೀದ್ (ಸಂ.) ರೀಜನಲಿಸಮ್: ಡೆವಲಪ್ಮೆಂಟಲ್ಟೆನ್ಷನ್ ಇನ್ ಇಂಡಿಯಾ, ಕಾಸ್ಮೋ ಪಬ್ಲಿಕೇಶನ್ಸ್, ನವದೆಹಲಿ, ಪು. ೧೧೫ – ೧೩೨.

೧೭. ಸ್ವಾಮಿ ರಮಾನಂದತೀರ್ಥ, ೧೯೭೭, ಹೋರಾಟದ ನೆನಪುಗಳು, ಅನು: ಸೂರ್ಯನಾಥ ಕಾಮತ್, ಗೀತಾ ಬುಕ್ ಹೌಸ್, ಮೈಸೂರು.

೧೮. ಶೇಷಾದ್ರಿ ಬಿ., ೧೯೯೧, ಇಂಡಸ್ಟ್ರಿಯಲೈಸೇಶನ್ ಆಂಡ್ ರೀಜನಲ್ ಡೆವಲಪ್ಮೆಂಟ್, ಕಾನ್ಸೆಪ್ಟ್‌ಪಬ್ಲಿಶಿಂಗ್ ಕಂಪನಿ, ನವದೆಹಲಿ.

ಶೇಷಾದ್ರಿ ಬಿ., ೨೦೦೨, ‘ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ : ಕರ್ನಾಟಕದ ಅನುಭವಗಳು’ ಅಭಿವೃದ್ಧಿ ಅಧ್ಯಯನ, ಸಂ.೧, ಸಂ.೨, ಪು.೩೩ – ೬೩.


[1] ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಲಿಂಗಸಂಬಂಧಗಳು ಹಾಗೂ ಮಹಿಳೆಯರ ಬವಣೆ ಹೇಗಿದೆ ಎಂಬುದಕ್ಕೆ ನೋಡಿ : ಚಂದ್ರಶೇಖರ ಟಿ.ಆರ್., ೨೦೦೪.

[2] ಒಣಭೂಮಿ ಬೇಸಾಯದ ಬಗ್ಗೆ ನೋಡಿ : ಮಿಹಿರ್ ಷಹಾ ಮತ್ತು ಇತರರು.