ನಿಜಾಮನ ಸಂಸ್ಥಾನ

ಆದರೆ ನಿಜಾಮನ ಪ್ರಾಂತದಿಂದ ಬಂದು ಕರ್ನಾಟಕದಲ್ಲಿ ವಿಲೀನವಾದ ಜಿಲ್ಲೆಗಳಿಗೆ ವಸಾಹತುಶಾಹಿ ಆಡಳಿತದ – ಅಭಿವೃದ್ಧಿಯ ಸೌಭಾಗ್ಯ ದೊರೆತಿರಲಿಲ್ಲ. ಈ ಪ್ರದೇಶದಲ್ಲಿ ೧೯೦೦ – ೧೯೫೦ ವರೆಗೆ ಒಂದು ರೀತಿಯ ಅರಾಜಕತೆ, ಅಶಾಂತಿ, ಘರ್ಷಣೆಗಳು ಮೆರೆದಾಡಿದವು. ಎಲ್ಲಕ್ಕಿಂತ ಹೆಚ್ಚಾಗಿ ಅನ್ಯಭಾಷೆಯೊಂದರ ದಬ್ಬಾಳಿಕೆಯಿಂದಾಗಿ ಜನರ ಬದುಕು ಜರ್ಜರಿತವಾಗಿತ್ತು. ಪ್ರಭುತ್ವಕ್ಕೆ ಜನಕಲ್ಯಾಣವು ಮುಖ್ಯವಾಗಿರಲಿಲ್ಲ. ಈ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಾಗ ಅವುಗಳ ಅಭಿವೃದ್ಧಿ ಸ್ಥಾನವು ಉಳಿದೆಲ್ಲ ಪ್ರದೇಶಗಳ ಅಭಿವೃದ್ಧಿ ಸ್ಥಾನಗಳಿಗಿಂತ ಕೆಳಮಟ್ಟದಲ್ಲಿತ್ತು (ಕೋದಂಡರಾವ್ ಎಂ., ೨೦೦೭) (ನೋಡಿ ಟಿಪ್ಪಣಿ : ೩)

ರಾಜ್ಯ ಪುನರ್ವಿಂಗಡಣೆ ಸಂದರ್ಭದಲ್ಲಿ ನಿಜಾಮ ಸಂಸ್ಥಾನದ ಒಂದು ಭಾಗ ಮಹಾರಾಷ್ಟ್ರದಲ್ಲಿ ವಿಲೀನಗೊಂಡರೆ ಮತ್ತೊಂದು ಭಾಗ ಕರ್ನಾಟಕದಲ್ಲಿ ವಿಲೀನಗೊಂಡಿತು. ಉಳಿದ ತೆಲಂಗಾಣ ಪ್ರದೇಶ ಹಾಗೂ ಮದರಾಸು ಪ್ರಾಂತದ ಭಾಗವಾಗಿದ್ದ ಆಂಧ್ರದ ಭಾಗಗಳನ್ನು ಸೇರಿಸಿ ವಿಶಾಲಾಂಧ್ರ ರಾಜ್ಯವನ್ನು ೧೯೫೬ ರಲ್ಲಿ ರೂಪಿಸಲಾಯಿತು. ಕುತೂಹಲದ ಸಂಗತಿಯೆಂದರೆ ನಿಜಾಮನ ಸಂಸ್ಥಾನದಿಂದ ಯಾವ ಯಾವ ಭಾಗಗಳು ಬೇರೆ ರಾಜ್ಯಗಳಲ್ಲಿ ವಿಲೀನಗೊಂಡವೋ ಅವು ಆಯಾ ರಾಜ್ಯಗಳಲ್ಲಿ ಇಂದಿಗೂ ಹಿಂದುಳಿದ ಪ್ರದೇಶಗಳಾಗಿ ಉಳಿದಿವೆ.

ಈಗಾಗಲೆ ತಿಳಿಸಿರುವಂತೆ ನಿಜಾಮ ಪ್ರಾಂತದಿಂದ ಒಂದು ಭಾಗ ಮಹಾರಾಷ್ಟ್ರದಲ್ಲಿ ವಿಲೀನಗೊಂಡಿತು. ಹೀಗೆ ನಿಜಾಮ ಪ್ರಾಂತದಿಂದ ಒಂದು ಮಹಾರಾಷ್ಟ್ರದಲ್ಲಿ ವಿಲೀನ ಗೊಂಡ ಭಾಗವನ್ನು ಅಲ್ಲಿ ಮರಾಠವಾಡ ಪ್ರದೇಶವೆಂದು ಕರೆಯಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠವಾಡ ಪ್ರದೇಶವು ಉಳಿದ ಪ್ರದೇಶಗಳಾದ ವಿಧರ್ಭ ಹಾಗೂ ಪಶ್ಚಿಮ ಕರಾವಳಿ ಪ್ರದೇಶಗಳಿಗಿಂತ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ.

ನಿಜಾಮ ಪ್ರಾಂತದಿಂದ ಬಂದು ಕರ್ನಾಟಕದಲ್ಲಿ ವಿಲೀನಗೊಂಡ ಜಿಲ್ಲೆಗಳು ಅಲ್ಲಿ ಹಿಂದುಳಿದ ಸ್ಥಿತಿಯಲ್ಲಿವೆ. ಅದೇ ರೀತಿ ಆಂಧ್ರ ಪ್ರದೇಶದಲ್ಲಿ ನಿಜಾಮ ಆಡಳಿತದ ಭಾಗವಾಗಿದ್ದ ತೆಲಂಗಾಣವು ವಸಾಹತುಶಾಹಿ ಆಡಳಿತವನ್ನು ಅನುಭವಿಸಿದ ಆಂಧ್ರದ ಭಗಕ್ಕಿಂತ ಹೆಚ್ಚು ಹಿಂದುಳಿದ ಸ್ಥಿತಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಮರಾಠವಾಡ, ಆಂಧ್ರದಲ್ಲಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬೀದರ್, ಗುಲಬರ್ಗಾ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಹೈದರಾಬಾದ್ ಕರ್ನಾಟಕ ಪ್ರದೇಶವು ಆಯಾ ರಾಜ್ಯಗಳ ಉಳಿದ ಪ್ರದೇಶಗಳಿಗಿಂತ ಅತ್ಯಂತ ದುಸ್ಥಿತಿ ಅನುಭವಿಸುತ್ತಿವೆ.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಬಗ್ಗೆ ಚರ್ಚೆ ಮಾಡುವಾಗ ಅದರ ಚಾರಿತ್ರಿಕ ಹಿನ್ನೆಲೆಯನ್ನು ಅಗತ್ಯವಾಗಿ ಪರಿಗಣಿಸಬೇಕಾಗುತ್ತದೆ. ವಸಾಹತುಶಾಹಿ ಆಡಳಿತ ಹಾಗೂ ಅಭಿವೃದ್ಧಿಯ ಅನುಕೂಲಗಳಿಂದ ವಂಚಿತವಾದ ಪ್ರದೇಶಗಳು ೨೦ನೆಯ ಶತಮಾನದ ಕೊನೆಯ ೫೦ ವರ್ಷಗಳ ಅವಧಿಯಲ್ಲಿ ‘ಯಥಾಸ್ಥಿತಿವಾದಿ’ ಸ್ಥಿತಿಯನ್ನು ಅನುಭವಿಸಿದವು. ಅಲ್ಲಿ ಜಮೀನುದಾರಿ ಪಾಳೆಗಾರಿಕೆಯು ಮುಂದುವರಿಯಿತು. ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿವಿಕೆಯನ್ನು ಅಲ್ಲಿ ಇಂದಿಗೂ ಕಾಣಬಹುದಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಸಣ್ಣಪುಟ್ಟ ನೌಕರರು, ರೈತರು, ಕಾರ್ಮಿಕರು, ಸರ್ಕಾರಿ ಅಧಿಕಾರಿಗಳ ಕೊಠಡಿ ಪ್ರವೇಶಿಸವಾಗ ಚಪ್ಪಲಿ ಬಿಟ್ಟು ಪ್ರವೇಶಿಸುವುದನ್ನು ಕಾಣಬಹುದು. ಚಪ್ಪಲಿ ಬಿಟ್ಟು ಬರಬೇಕೆಂದು ಯಾವ ಅಧಿಕಾರಿಯೂ ಆದೇಶ ನೀಡಿಲ್ಲ. ಆದರೆ ಅದೊಂದು ಸಾಮಾಜಿಕ ಶಿಷ್ಟಾಚಾರವಾಗಿದೆ. ಆದರೆ ಹಿಂದಿರುವ ಜಮೀನುದಾರಿ ಪಾಳೆಗಾರಿಕೆಯ ಮೌಲ್ಯಗಳನ್ನು ನಾವು ಗುರುತಿಸಬೇಕಾಗುತ್ತದೆ.

ವಸಾಹತುಶಾಹಿ ಆಡಳಿತದ ಅನುಕೂಲಗಳನ್ನು ಹಾಗೂ ಅಭಿವೃದ್ಧಿಯ ಫಲಗಳನ್ನು ಅನುಭವಿಸಿದ ಪ್ರದೇಶಗಳು ಊಳಿಗಮಾನ್ಯ ವ್ಯವಸ್ಥೆಯ ಸಂಕೋಲೆಗಳನ್ನು ಮುರಿದು ಕೊಂಡು ಬಂಡವಾಳಶಾಹಿಯ ಚಹರೆಗಳನ್ನು ಪಡೆದುಕೊಳ್ಳುತ್ತಿರುವಾಗ ನಿಜಾಮ ಪ್ರಾಂತದಿಂದ ಬಂದು ಬೇರೆ ಬೇರೆ ರಾಜ್ಯಗಳಲ್ಲಿ ವಿಲೀನಗೊಂಡ ಪ್ರದೇಶಗಳು ಸ್ವಾತಂತ್ರ್ಯಾ ನಂತರದಲ್ಲೂ ಊಳಿಗಮಾನ್ಯ ವ್ಯವಸ್ಥೆಯ ಸಂಕೋಲೆಯಲ್ಲಿ ಮುಂದುವರಿದಿರುವುದನ್ನು ಕಾಣಬಹುದು.

ಸಾಮಾಜಿಕ ಪರಿವರ್ತನೆ : ೧೯೫೦೨೦೦೦

ಈಗಾಗಲೇ ತಿಳಿಸಿರುವಂತೆ ವಸಾಹತುಶಾಹಿ ಆಡಳಿತ ಮತ್ತು ಅಭಿವೃದ್ಧಿಯ ಅನುಕೂಲಗಳಿಂದ ವಂಚಿತವಾದ ಪ್ರದೇಶಗಳು ಇಪ್ಪತ್ತನೆಯ ಶತಮಾನದ ಕೊನೆಯ ಅರ್ಧ ಭಾಗದಲ್ಲಿ ‘ಯಥಾಸ್ಥಿತಿವಾದಿ’ತನವನ್ನು ಅನುಭವಿಸಿದವು. ಇದರಿಂದಾಗಿ ಸ್ವಾತಂತ್ರ್ಯ ಪೂರ್ವದ ಭೂ ಸಂಬಂಧಗಳು, ದುಡಿಮೆಗಾರರ ಸ್ವರೂಪ ಮುಂತಾದವು ಊಳಿಗಮಾನ್ಯ ನೆಲೆಯಲ್ಲೇ ಮುಂದುವರಿದವು. ಆದರೆ ವಸಾಹತುಶಾಹಿ ಆಡಳಿತದ ಅನುಕೂಲ ಪಡೆದ ಪ್ರದೇಶಗಳು ಹಾಗೂ ಮೈಸೂರು ರಾಜ ಸಂಸ್ಥಾನದ ಜಿಲ್ಲೆಗಳು ಇದೇ ಅವಧಿಯಲ್ಲಿ ಬಂಡವಾಳಶಾಹಿ ಚಹರೆಯನ್ನು ಪಡೆದುಕೊಳ್ಳ ತೊಡಗಿದವು.

ಸ್ವಾತಂತ್ರ್ಯಾನಂತರ ದ.ಕ.ಪ್ರದೇಶವು ತೀವ್ರ ಸ್ವರೂಪದ ಸಾಮಾಜಿಕ ಪರಿವರ್ತನೆಗೆ ಹಾಗೂ ರಾಜಕೀಯ ಜಾಗೃತಿಗೆ – ಜನಸಂಘಟನೆಗೆ ಒಳಗಾದರೆ ಉ.ಕ.ಪ್ರ.ವು ಅದರಲ್ಲೂ ಗುಲಬರ್ಗಾ ವಿಭಾಗದ ೫ ಜಿಲ್ಲೆಗಳು ಹಾಗೂ ಬಾಂಬೆ ಕರ್ನಾಟಕದ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಚಾರಿತ್ರಿಕ ವಿಕಲತೆಗೆ ಒಳಗಾದವು.

ಈ ಪ್ರಬಂಧದಲ್ಲಿ ಭೂಸಂಬಂಧಗಳ ಸ್ವರೂಪದ ಆಧಾರದ ಮೇಲೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಉಂಟಾಗಿರುವ ಸಾಮಾಜಿಕ – ರಾಜಕೀಯ ಬದಲಾವಣೆಯ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ.

ಈ ಕುರಿತಂತೆ ಮೊದಲನೆಯ ಸೂಚಿಯೆಂದರೆ ಕೃಷಿ ಅವಲಂಬನೆ ಪ್ರಮಾಣ. ದ.ಕ.ಪ್ರ.ದಲ್ಲಿ ೨೦೦೧ರ ಜನಗಣತಿ ವರದಿ ಪ್ರಕಾರ ಒಟ್ಟು ದುಡಿಮೆಗಾರರಲ್ಲಿ ಕೃಷಿ ಅವಲಂಬಿತರ ಪ್ರಮಾಣ ಶೇ. ೧೮.೫೧. ಆದರೆ ಉ.ಕ.ಪ್ರ.ದಲ್ಲಿ ಅದು ಶೇ. ೬೬.೧೫. ಗುಲಬರ್ಗಾ ವಿಭಾಗವನ್ನು ತೆಗೆದುಕೊಂಡರೆ ಕೃಷಿ ಅವಲಂಬನೆಯ ಪ್ರಮಾಣ ಶೇ. ೬೮.೩೭. ಸ್ವಾತಂತ್ರ್ಯಾನಂತರ ಉ.ಕ.ಪ್ರ.ದಲ್ಲಿ ಹಾಗೂ ಗುಲಬರ್ಗಾ ವಿಭಾಗದಲ್ಲಿ ಕೃಷಿಯೇತರ ಚಟುವಟಿಕೆಗಳು ತೀವ್ರಗತಿಯಲ್ಲಿ ಬೆಳೆಯಲಿಲ್ಲ. ಆದರೆ ದ.ಕ.ಪ್ರ.ದಲ್ಲಿ ಒಟ್ಟು ದುಡಿಮೆಗಾರರಲ್ಲಿ ಅರ್ಥಕ್ಕಿಂತ ಅಧಿಕ ದುಡಿಮೆಗಾರರು ಕೃಷಿಯನ್ನು ಬಿಟ್ಟು ಕೃಷಿಯೇತರ ಕ್ಷೇತ್ರಗಳಿಗೆ ಪ್ರವೇಶಿಸಿಬಿಟ್ಟರು.

ಎರಡನೆಯ ಸೂಚಿಯೆಂದರೆ ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರರ ಪ್ರಮಾಣ. ಕೃಷಿ ಅವಲಂಬಿತದಲ್ಲಿ ಎರಡು ವರ್ಗಗಳಿವೆ.

೧. ಭೂ ಮಾಲಿಕರು ಅಥವಾ ಸಾಗುವಳಿದಾರರು

೨. ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರರು

ದ.ಕ.ಪ್ರದಲ್ಲಿನ ಒಟ್ಟು ಕೃಷಿ ಅವಲಂಬಿತರಲ್ಲಿ ಭೂರಹಿತ ಕೃಷಿ ದಿನಗೂಲಿಗಳ ಪ್ರಮಾಣ ಶೇ. ೩೯.೯೩. ಅಂದರೆ ಇಲ್ಲಿ ಭೂಮಾಲಿಕರ ಪ್ರಮಾಣವು ದಿನಗೂಲಿಗಳ ಪ್ರಮಾಣಕ್ಕಿಂತ ಅಧಿಕವಾಗಿದೆ. (ಶೇ. ೬೦.೦೭) ಇದಕ್ಕೆ ಪ್ರತಿಯಾಗಿ ಉ.ಕ.ಪ್ರ.ದಲ್ಲಿನ ಒಟ್ಟು ಕೃಷಿ ಅವಲಂಬಿತರಲ್ಲಿ ದಿನಗೂಲಿಗಳ ಪ್ರಮಾಣ ಶೇ. ೫೪.೭೧. ಗುಲಬರ್ಗಾ ವಿಭಾಗದಲ್ಲಿ ಅವರ ಪ್ರಮಾಣ ಶೇ. ೫೯.೩೭. ಈ ಪ್ರದೇಶದಲ್ಲಿ ಭೂಹೀನರ ಅಂದರೆ ಕೃಷಿಯ ಜೊತೆ ಸಂಕೋಲೆ ರೀತಿಯ ಸಂಬಂಧ ಪಡೆದ ದುಡಿಮೆಗಾರರ ಪ್ರಮಾಣ ಅಗಾಧವಾದುದು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದ.ಕ.ಪ್ರ.ದ ಪಾಲು ಶೇ. ೫೭.೩೦ ಮತ್ತು ಉ.ಕ.ಪ್ರ.ದ ಪಾಲು ಶೇ. ೪೨.೭೦. ಆದರೆ ಭೂರಹಿತ ಕೃಷಿ ದಿನಗೂಲಿಗಳ ಪ್ರಮಾಣವನ್ನು ತೆಗೆದುಕೊಂಡರೆ, ಅವರಲ್ಲಿ ದ.ಕ.ಪ್ರ.ದ ಪಾಲು ಶೇ. ೪೨.೭೪ ರಷ್ಟಾದರೆ ಉ.ಕ.ಪ್ರ.ದ ಪಾಲು ಶೇ. ೫೭.೨೬. ಅಂದರೆ ಇಲ್ಲಿ ಅದು ತಿರುವು ಮುರುವು ಆಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. ೫೭.೩೦ ರಷ್ಟುಪಾಲು ಪಡೆದಿರುವ ದ.ಕ.ಪ್ರ.ವು ಭೂರಹಿತ ಕೃಷಿ ಕೂಲಿಕಾರರಲ್ಲಿ ಮಾತ್ರ ಶೇ. ೪೨.೭೪ ಪಾಲು ಪಡೆದಿದೆ(೨೦೦೧). ಅಂದರೆ ಕಳೆದ ೫೦ ವರ್ಷಗಳ ಅವಧಿಯಲ್ಲಿ ದ.ಕ.ಪ್ರ.ದಲ್ಲಿ ಕೃಷಿಯೇತರ ಚಟುವಟಿಕೆಗಳು ಅಗಾಧ ಪ್ರಮಾಣದಲ್ಲಿ ಬೆಳೆದಿವೆ. ಇದರಿಂದಾಗಿ ಅಲ್ಲಿ ಕೃಷಿ ಅವಲಂಬನೆ ಕಡಿಮೆಯಾಗಿದೆ ಮತ್ತು ಕೃಷಿಕೂಲಿಕಾರರ ಪ್ರಮಾಣ ಕೆಳಮಟ್ಟದಲ್ಲಿದೆ.

ಇದಕ್ಕೆ ಪ್ರತಿಯಾಗಿ ಉ.ಕ.ಪ್ರ. ಅದರಲ್ಲೂ ಗುಲಬರ್ಗಾ ವಿಭಾಗವು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿದೆ. ಕೃಷಿಯೇತರ ಚಟುವಟಿಕೆಗಳು ಕಳೆದ ೫೦ ವರ್ಷಗಳ (೧೯೫೬ – ೨೦೦೬) ಅವಧಿಯಲ್ಲಿ ತೀವ್ರವಾಗಿ ಅಲ್ಲಿ ಬೆಳೆಯಲಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಅದರ ಪಾಲು ಶೇ.೪೨.೭೦. ಆದರೆ ಕೃಷಿಕೂಲಿಕಾರರನ್ನು ತೆಗೆದು ಕೊಂಡರೆ ಅದರ ಪಾಲು ಶೇ. ೫೭.೨೬. ಇಲ್ಲಿ ಏನನ್ನು ಹೇಳಲು ಪ್ರಯತ್ನಿಸಲಾಗುತ್ತಿದೆ ಯೆಂದರೆ ಸ್ವಾತಂತ್ರ್ಯಾ ನಂತರ ಉ.ಕ.ಪ್ರ. ಮತ್ತು ಅದರಲ್ಲಿ ಮುಖ್ಯವಾಗಿ ಗುಲಬರ್ಗಾ ವಿಭಾಗವು ಸಾಮಾಜಿಕ – ಆರ್ಥಿಕ – ರಾಜಕೀಯ ಯಥಾಸ್ಥಿತಿವಾದಿತನದಿಂದ ನರಳುತ್ತಿದ್ದರೆ ದ.ಕ.ಪ್ರ.ವು ತೀವ್ರ ಸ್ವರೂಪದ ಪರಿವರ್ತನೆಯನ್ನು ಅನುಭವಿಸಿತು. ಈ ಸಂಗತಿಯನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿದರೆ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ನೆಲೆಗಳನ್ನು ಗ್ರಹಿಸುವುದು ಸಾಧ್ಯವಾಗುತ್ತದೆ.

ನಿಜಾಮ ಸಂಸ್ಥಾನದಲ್ಲಿನ ತೆಲಂಗಾಣ ಪ್ರದೇಶದ ಸಾಮಾಜಿಕ – ಆರ್ಥಿಕ ಸ್ವರೂಪದ ಬಗ್ಗೆ ಸ್ವಾಮಿ ರಮಾನಂದ ತೀರ್ಥ ಅವರು ಹೀಗೆ ಬರೆದಿದ್ದಾರೆ. “…..ಅಲ್ಲಿನ ವಿಚಿತ್ರ ಭೂ ಸಮಸ್ಯೆ ಅದಕ್ಕೊಂದು ವೈಶಿಷ್ಟ್ಯವನ್ನೇ ನೀಡಿದ್ದು ಅಲ್ಲಿನ ಎಲ್ಲ ಸಮಸ್ಯೆಗಳಲ್ಲಿ ಆರ್ಥಿಕ ಸಾಮಾಜಿಕ ಮುಖವನ್ನು ಗಮನಿಸಲೇಬೇಕು. ಹೆಚ್ಚು ಕಡಿಮೆ ಹಳ್ಳಿಗಾಡುಗಳಲ್ಲಿ ಎರಡೇ ವರ್ಗಗಳು – ಭೂಮಾಲಿಕ ಶ್ರೀಮಂತ ವರ್ಗ ಹಾಗೂ ಭೂರಹಿತ ರೈತವರ್ಗ. ಭೂಮಾಲಿಕರ ಸಂಖ್ಯೆ ಕಡಿಮೆಯಾದರೂ ಅವರು ಭಾರಿ ಭೂಮಿಯನ್ನು ಹೊಂದಿದ್ದು ರೈತರು ಕೂಲಿಯಾಲುಗಳಾಗಿ ದುಡಿಯಬೇಕು. ಇದರಿಂದ ಎಲ್ಲ ರೀತಿಯ ಅಸಮಾನತೆಗಳು ಬೆಳೆದಿದ್ದವು. ಭೂ ಮಾಲಿಕರಿಗೆ ತಪ್ಪದೇ ನಿರಂಕುಶ ಆಳರಸರ ಬೆಂಬಲ…………………………” (ಸ್ವಾಮಿ ರಮಾನಂದ ತೀರ್ಥರ ಹೋರಾಟದ ನೆನಪುಗಳು, ಪು. ೧೬೬).

ಹೈದರಾಬಾದ್ ನಿಜಾಮ ಸಂಸ್ಥಾನದಲ್ಲಿ ಮೂರು ಭಾಷಾ ಪ್ರಾಂತಗಳಿದ್ದವು. ಈ ಮೂರು ಭಾಗಗಳಲ್ಲಿ ಜಮೀನುದಾರಿ ಪಾಳೆಗಾರಿಕೆ ಮೆರೆದಾಡುತ್ತಿತ್ತು. ನಿಜಾಮಾ ಸಂಸ್ಥಾನದಲ್ಲಿದ್ದ ಮೂರು ಭಾಷಾ ಪ್ರದೇಶಗಳನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಲ್ಲಿ ವಿಲೀನಗೊಳಿಸಲಾಯಿತು. ಹೀಗೆ ಭಾಷಾ ಪ್ರಾಂತ ಸೇರಿದ ಭಾಗ ಗಳೆಲ್ಲವೂ ಆಯಾ ಭಾಷಾ ಪ್ರಾಂತಗಳಲ್ಲಿ ಊಳಿಗಮಾನ್ಯ ವ್ಯವಸ್ಥೆಯನ್ನು ಹೊಂದಿದ್ದವು. ಮತ್ತು ಹಿಂದುಳಿದ ಸ್ಥಿತಿಯಲ್ಲಿದ್ದವು.

(ಇದಕ್ಕೆ ಸಂಬಂಧಿಸಿದ ವಿವರಗಳಿಗೆ ನೊಡಿ : ಸ್ವಾಮಿ ರಮಾನಂದ ತೀರ್ಥ ೧೯೭೭, ಹೋರಾಟದ ನೆನಪುಗಳು, ಅನು: ಸೂರ್ಯನಾಥ ಕಾಮತ್‌, ಗೀತಾಬುಕ್‌ಹೌಸ್, ಮೈಸೂರು)

ಈ ಬಗೆಯ ಚಾರಿತ್ರಿಕ – ಸಾಮಾಜಿಕ ಸ್ವರೂಪದ ಸಂಗತಿಗಳನ್ನು ಗುರುತಿಸಿಕೊಂಡೆರೆ ಅದಕ್ಕೆ ಸಂಬಂಧಿಸಿದ ಉಳಿದ ಸಂಗತಿಗಳನ್ನು ವಿವರಿಸುವುದು ಸಾಧ್ಯವಾಗುತ್ತದೆ. ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ, ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಕ್ಷರತೆ, ಅದರಲ್ಲೂ ಮಹಿಳೆಯರ ಸಾಕ್ಷರತೆ, ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ, ಶಾಲೆಯ ಹೊರಗುಳಿದ ಮಕ್ಕಳು, ವಲಸೆ, ಒಣಭೂಮಿ ಬೇಸಾಯ, ಬರಗಾಲ ಮುಂತಾದ ಸಂಗತಿಗಳನ್ನು ವಿವರಿಸುವುದು ನಮಗೆ ಕಷ್ಟವಾಗಬಾರದು. ಈ ಪ್ರದೇಶದಲ್ಲಿನ ಭೂ ಸಂಬಂಧಗಳು, ದುಡಿಮೆಗಾರರ ಸ್ವರೂಪ ಮುಂತಾದವುಗಳಿಗೂ ಮತ್ತು ಅಭಿವೃದ್ಧಿ ಸಂಬಂಧಿ ದುಸ್ಥಿತಿಗೂ ಸಂಬಂಧವಿದೆ.

ಅವಿಭಜಿತ ಬಿಜಾಪುರ ಜಿಲ್ಲೆ

ಹೈದರಾಬಾದ್ ಕರ್ನಾಟಕವೆಂಬ ಅಭಿದಾನ ಪಡೆದ ಬೀದರ್, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ವಸಾಹತುಶಾಹಿ ಅನುಕೂಲಗಳಿಂದ ವಂಚಿತವಾಗಿದ್ದ ಕಾರಣದಿಂದ ಹಾಗೂ ಊಳಿಗಮಾನ್ಯ ವ್ಯವಸ್ಥೆಯ ಕಪಿಮುಷ್ಟಿಯಿಂದಾಗಿ ಇಂದಿಗೂ ಹಿಂದುಳಿದ ಸ್ಥಿತಿಯಲ್ಲಿವೆ.[1] ಆದರೆ ಅವಿಭಜಿತ ಬಿಜಾಪುರ ಜಿಲ್ಲೆಯು ಬಾಂಬೆ ಸಂಸ್ಥಾನದ ಭಾಗವಾಗಿ ವಸಾಹತುಶಾಹಿ ಆಡಳಿತದ ಹಾಗೂ ಅಭಿವೃದ್ಧಿಯ ಅನುಕೂಲಗಳನ್ನು ಪಡೆದುಕೊಂಡಿತ್ತು. ಆದರೂ ಸಹ ಅದರ ಅಭಿವೃದ್ಧಿಯ ಸ್ವರೂಪವು ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಸಮಾನವಾಗಿದೆ. ಸ್ವಲ್ಪಮಟ್ಟಿಗೆ ಅದರ ಸ್ಥಾನ ಉತ್ತಮವಾಗಿರಬಹುದು. ಉದಾಹರಣೆಗೆ ೨೦೦೧ ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವು ಬೀದರ್, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕ್ರಮವಾಗಿ ೦.೫೯೯, ೦.೫೪೭ ಮತ್ತು ೦.೫೮೨ ರಷ್ಟಿದ್ದರೆ ಬಿಜಾಪುರ ಹಾಗೂ ಬಾಗಲಕೋಟೆಗಳ ಮಾನವ ಅಭಿವೃದ್ಧಿ ಸೂಚ್ಯಂಕ ಕ್ರಮವಾಗಿ ೦.೫೮೯ ಮತ್ತು ೦.೫೯೧ ರಷ್ಟಿದೆ. ಆದರೆ ಬಾಂಬೆ ಸಂಸ್ಥಾನದಿಂದ ವರ್ಗಾವಣೆಯಾಗಿ ಕರ್ನಾಟಕದಲ್ಲಿ ವಿಲೀನವಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳು ೦.೬೦೦ ಕ್ಕಿಂತ ಅಧಿಕ ಮಟ್ಟದಲ್ಲಿವೆ (ಕರ್ನಾಟಕ ಸರ್ಕಾರ, ೨೦೦೬).

ಈ ಕಾರಣದಿಂದ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಹಿಂದುಳಿದಿರುವಿಕೆ ಯನ್ನು ಬೇರೆ ನೆಲೆಯಲ್ಲಿ ಚರ್ಚಿಸಬೇಕಾಗುತ್ತದೆ.

ಮೊದಲನೆಯದಾಗಿ ಈ ಜಿಲ್ಲೆಗಳ ಸಾಮಾಜಿಕ – ಚಾರಿತ್ರಿಕ ಹಾಗೂ ರಾಜಕೀಯ ಸ್ವರೂಪವು ಹೈ.ಕ.ಪ್ರ.ದ ಜಿಲ್ಲೆಗಳ ಸ್ವರೂಪಕ್ಕೆ ಸಮಾನವಾಗಿದೆ. ಈ ಜಿಲ್ಲೆಗಳು ಯಾವ ರೀತಿಯಲ್ಲೂ ಬೆಳಗಾವಿ ವಿಭಾಗದ ಉಳಿದ ಜಿಲ್ಲೆಗಳಿಗೆ ಸಮಾನವಾದ ಅಂಶವನ್ನು ಹೊಂದಿಲ್ಲ. ಏಕೀಕರಣದ ನಂತರ ಈ ಜಿಲ್ಲೆಗಳನ್ನು ಬೆಳಗಾವಿ ವಿಭಾಗಕ್ಕೆ ಸೇರಿಸಿದ ಸಂಗತಿಯಲ್ಲೇ ಕೆಲವು ಸಮಸ್ಯೆಗಳಿರುವಂತೆ ಕಾಣುತ್ತದೆ. ಸ್ವಾತಂತ್ರ್ಯಾನಂತರ ಹಾಗೂ ಏಕೀಕರಣದ ನಂತರ ಇವು ತೀವ್ರ ರೀತಿಯ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗಲಿಲ್ಲ. ಈ ಜಿಲ್ಲೆಗಳು ಬೆಳಗಾವಿ ವಿಭಾಗದಲ್ಲಿ ಆಡಳಿತಾತ್ಮಕವಾಗಿ ಇದ್ದ ಕಾರಣದಿಂದಾಗಿ ಅವು ತೀವ್ರಗತಿಯಲ್ಲಿ ಅಭಿವೃದ್ಧಿ ಸಾಧಿಸಿಕೊಳ್ಳಲು ಆಧ್ಯವಾಗಲಿಲ್ಲವೆಂದು ಹೇಳಬಹುದು.[2]

ಎರಡನೆಯದಾಗಿ, ಚಾರಿತ್ರಿಕವಾಗಿ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಅನೇಕ ಪ್ರಭುತ್ವಗಳ ನಡುವಿನ ಘರ್ಷಣೆಯ ಕೇಂದ್ರವಾಗಿದ್ದವು. ಸ್ಥಳೀಯ ಸಂಸ್ಥಾನಗಳು, ಹೈದರಾಲಿ, ಟಿಪ್ಪೂ ಸುಲ್ತಾನ, ಪೇಶ್ವೆಗಳು, ಹೈದರಾಬಾದ್ ನಿಜಾಮ ಹಾಗೂ ಬ್ರಿಟಿಷರ ನಡುವಿನ ಘರ್ಷಣೆಯ ಕಾರ್ಯಸ್ಥಾನ ಇದಾಗಿತ್ತು.

ಅದಿ‌ಲ್‌ಶಾಹಿ, ಪೇಶ್ವೆಗಳು ಹಾಗೂ ಬ್ರಿಟಿಷ್ ಆಡಳಿತಗಳು ಜಿಲ್ಲೆಯಲ್ಲಿದ್ದ ಭೂಮಾಲಿಕ ವ್ಯವಸ್ಥೆಯನ್ನು ಊಳಿಗಮಾನ್ಯ ಸ್ವರೂಪದಲ್ಲೇ ಮುಂದುವರಿಸಿದವು. ದೇಸಾಯಿಗಳು, ದೇಶಮುಖರು, ನಾಡಗೌಡರು, ಜಹಗೀರ್‌ದಾರರು, ಪಾಟೀಲರು ಮುಂತಾದವರು ಭೂಮಾಲಿಕರಾಗಿದ್ದರು.[3] ಪ್ರಭುತ್ವ ಬದಲಾಯಿತೆ ವಿನಾ ಜಮೀನುದಾರ ಪಾಳೆಗಾರಿಕೆಯು ಇಲ್ಲಿ ಬದಲಾಗಲಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಾನಗಳು ೧೯೯೧ರಲ್ಲಿ ಕ್ರಮವಾಗಿ ೨೧ ಮತ್ತು ೨೦ ಆಗಿತ್ತು. ಆದರೆ ೨೦೦೧ ರಲ್ಲಿ ಸದರಿ ಜಿಲ್ಲೆಗಳ ಸ್ಥಾನಗಳು ಕುಸಿದಿರುವುದು ತುಂಬಾ ಆತಂಕಕಾರಿಯಾಗಿ ಕಾಣುತ್ತದೆ. ಈ ಜಿಲ್ಲೆಗಳು ಸ್ಥಾನಗಳು ೨೦೦೧ರಲ್ಲಿ ಕ್ರಮವಾಗಿ ೨೩ ಮತ್ತು ೨೨.

ಮೂರನೆಯದಾಗಿ ಹೈದರಾಬಾದ್ – ಕರ್ನಾಟಕ ಪ್ರದೇಶದ ಜಿಲ್ಲೆಗಳಂತೆ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಒಣಭೂಮಿ ಬೇಸಾಯದ ಜಿಲ್ಲೆಗಳಾಗಿವೆ. ಇಂದಿಗೂ ನೀರಾವರಿ ಪ್ರದೇಶದ ಪ್ರಮಾಣವು ಬಿಜಾಪುರ ಜಿಲ್ಲೆಯಲ್ಲಿ ಶೇ. ೨೦ ಮೀರಲಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ನೀರಾವರಿ ಪ್ರದೇಶವು ತೀವ್ರ ವಿಸ್ತರಿಸಿದೆ.

ಹೈದರಾಬಾದ್ – ಕರ್ನಾಟಕ ಪ್ರದೇಶದ ಜಿಲ್ಲೆಗಳಂತೆ ಅವಿಭಜಿತ ಬಿಜಾಪುರ ಜಿಲ್ಲೆ ೧೮ ಮತ್ತು ೧೯ನೆಯ ಶತಮಾನಗಳಲ್ಲಿ ಮರಾಠಿ ಭಾಷೆಯ ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಇಂದಿಗೂ ಅದರ ಪ್ರಭಾವವು ಅಲ್ಲಿನ ವ್ಯಾಪಾರ – ವ್ಯವಹಾರ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಹೈದರಾಬಾದ್ – ಕರ್ನಾಟಕ ಪ್ರದೇಶದ ಜಿಲ್ಲೆಗಳು ಭಿನ್ನವಾದ ಚಾರಿತ್ರಿಕ ಕಾರಣಗಳಿಗೆ ಹಿಂದುಳಿದಿದ್ದರೆ ಬಿಜಾಪುರ – ಬಾಗಲಕೋಟೆ ಜಿಲ್ಲೆಗಳು ಅದಕ್ಕಿಂತ ಭಿನ್ನ ವಾದ ಚಾರಿತ್ರಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಹಿಂದುಳಿದಿವೆ.

ಇಂದಿಗೂ ಇವೆರಡೂ ಜಿಲ್ಲೆಗಳಲ್ಲಿ ಕೃಷಿ ಅವಲಂಬನೆ ಅತ್ಯಧಿಕವಾಗಿದೆ. ಜಮೀನು ದಾರಿ ಪಾಳೆಗಾರಿಕೆಯ ದಬ್ಬಾಳಿಕೆಯು ಇಂದಿಗೂ ಇಲ್ಲಿ ಮುಂದುವರಿದಿದೆ. ಹೀಗೆ ರಾಜ್ಯದ ಒಟ್ಟು ಏಳು ಜಿಲ್ಲೆಗಳು ಭಿನ್ನ ಭಿನ್ನವಾದ ಚಾರಿತ್ರಿಕ ಕಾರಣಗಳಿಗೆ, ನೈಸರ್ಗಿಕ ಕಾರಣಗಳಿಗೆ ಹಾಗೂ ಆಡಳಿತಾತ್ಮಕ ಕಾರಣಗಳಿಗೆ ಅತ್ಯಂತ ಹಿಂದುಳಿದಿರುವ ಸ್ಥಿತಿ ಯಲ್ಲಿವೆ.

ಕೇಂದ್ರಾಭಿಮುಖಿ ಸಂಚಲನ

ಸ್ವಾತಂತ್ರ್ಯಾನಂತರ ಬಂಡವಾಳಶಾಹಿ ಚಹರೆಯನ್ನು ಪಡೆದುಕೊಂಡ ದ.ಕ.ಪ್ರ.ವು ತೀವ್ರ ಸ್ವರೂಪದ ಅಭಿವೃದ್ಧಿಯನ್ನು ಸಾಧಿಸಿಕೊಂಡಿತು. ಅಭಿವೃದ್ಧಿಯಲ್ಲಿ ಹಿಂದುಳಿದ ಉ.ಕ.ಪ್ರ.ದಿಂದ, ಅದರಲ್ಲೂ ಮುಖ್ಯವಾಗಿ ಗುಲಬರ್ಗಾ ವಿಭಾಗದಿಂದ ಎಲ್ಲ ಬಗೆಯ ಸಂಪನ್ಮೂಲವನ್ನು ಅದು ಆಕರ್ಷಿಸತೊಡಗಿತು. ಇದರಿಂದಾಗಿ ಅಭಿವೃದ್ಧಿಯು ದ.ಕ.ಪ್ರ. ದಲ್ಲಿ ಕೇಂದ್ರೀಕೃತಗೊಳ್ಳತೊಡಗಿತು. ರಾಜ್ಯದಲ್ಲಿ ದ.ಕ.ಪ್ರ.ವು ಕೇಂದ್ರವಾಗಿ ಬಿಟ್ಟರೆ ಉ.ಕ.ಪ್ರ.ವು ಪರಿಧಿಯಾಗಿ ಬಿಟ್ಟಿತು. ಬಂಡವಾಳಶಾಹಿಯ ಮೂಲಗುಣವೇ ಅಧಿಕಾರದ – ಆದಾಯದ ಕೇಂದ್ರೀಕರಣ. ಪರಿಧಿಯು ಕೇಂದ್ರಕ್ಕೆ ಸಂಪನ್ಮೂಲವನ್ನು ಒದಗಿಸುವ ಘಟಕವಾಗಿ ಬಿಟ್ಟಿತು. ಸರ್ಕಾರದ ಕ್ರಮಗಳೂ ಕೂಡ ಇಂತಹ ಕೇಂದ್ರಾಭಿಮುಖಿ ಸಂಚಲನೆಗೆ ಪೂರಕವಾಗಿದ್ದವು. ಬಂಡವಾಳದ ಕೇಂದ್ರೀಕರಣದಿಂದಾಗಿ ಅಭಿವೃದ್ಧಿಯ ಸ್ವರೂಪವು ದ.ಕ.ಪ್ರ.ದಲ್ಲಿ ಭಿನ್ನವಾಗಿ ಬಿಟ್ಟಿತು. ಕೃಷಿಯೇತರ ಚಟುವಟಿಕೆಗಳು ಅಗಾಧ ಪ್ರಮಾಣದಲ್ಲಿ ಅಧಿಕಗೊಂಡವು.

ಏಕೀಕರಣಕ್ಕೆ ಹೋರಾಟ ಮಾಡಿದ ಹಿರಿಯರು ಏಕೀಕರಣದ ನಂತರ ಬೆಂಗಳೂರು ‘ಉತ್ತರಾಭಿಮುಖವಾಗಬೇಕು’ ಎಂದು ಕರೆ ನೀಡಿದ್ದರು.

ಕೃಷ್ಣಕುಮಾರ ಕಲ್ಲೂರ ಎನ್ನುವ ಕನ್ನಡದ ಖ್ಯಾತ ಕಥೆಗಾರರೊಬ್ಬರು ೧೯೫೬ ರಲ್ಲಿ ಇದನ್ನು ಕುರಿತಂತೆ ಹೀಗೆ ಬರೆದಿದ್ದಾರೆ.

ನಿಜ ಕರ್ನಾಟಕ ಕೊಡಗು, ಕನ್ನಡ ಜಿಲ್ಲೆ, ಶಿವಮೊಗ್ಗ, ಬಿಜಾಪುರ, ಚಿತ್ರದುರ್ಗ, ಗುಲಬರ್ಗಾಗಳ ಪ್ರದೇಶದಲ್ಲಿರುವುದಲ್ಲದೆ ಬೆಂಗಳೂರುಮಂಗಳೂರು ಮೈಸೂರು ನಗರಗಳಲ್ಲಿಲ್ಲ ………………. ಕರ್ನಾಟಕದ ಬಹುಭಾಗ ನಾಡಿನ ಪಶ್ಚಿಮ ಹಾಗೂ ಉತ್ತರ ನಿಟ್ಟಿನಲ್ಲಿರುವುದರಿಂದಲೂ ಅದರಲ್ಲೂ ಕೆಲಭಾಗ ರಾಜಧಾನಿಯಿಂದ ಅತಿದೂರದಲ್ಲಿರುವುದರಿಂದಲೂ ಬೆಂಗಳೂರು ಇನ್ನು ಮುಂದೆ ಉತ್ತರಾಭಿಮುಖವಾಗಬೇಕು.” (೧೯೫೬).

ಕಲ್ಲೂರ ಅವರ ಆಶಯವು ಕೈಗೂಡಲಿಲ್ಲ. ಇದಕ್ಕೆ ಪ್ರತಿಯಾಗಿ ಇಡೀ ಕರ್ನಾಟಕವು ಬೆಂಗಳೂರಿಗೆ ಅಭಿಮುಖವಾಗಿ ಬಿಟ್ಟಿತು.

ರಾಜ್ಯದ ನಿವ್ವಳ ಜಿಲ್ಲಾ ವರಮಾನದಲ್ಲಿ ದ.ಕ.ಪ್ರ.ದ ಪಾಲು ೧೯೬೦ – ೬೧ ರಲ್ಲಿ ಶೇ. ೫೭.೯೪ ರಷ್ಟಿತ್ತು. ಇದಕ್ಕೆ ಪ್ರತಿಯಾಗಿ ಉ.ಕ.ಪ್ರ.ದ ಪಾಲು ಅಂದು ಶೇ. ೪೨.೦೬ ರಷ್ಟಿತ್ತು. ಇವೆರಡೂ ಪ್ರದೇಶಗಳ ನಡುವಿನ ಜನಸಂಖ್ಯೆಯ ವಿತರಣೆಗೆ ಇದು ಸರಿ ಸಮಾನವಾಗಿತ್ತು.[4]

ಆದರೆ ಇಡೀ ರಾಜ್ಯವು ಬೆಂಗಳೂರಾಭಿಮುಖವಾದುದರಿಂದ ವರಮಾನದ ಪ್ರದೇಶವಾರು ಹಂಚಿಕೆಯು ೧೯೯೯ – ೨೦೦೦ ರಲ್ಲಿ ತೀವ್ರ ಬದಲಾಯಿತು. ರಾಜ್ಯದ ನಿವ್ವಳ ಜಿಲ್ಲಾ ವರಮಾನದಲ್ಲಿ ದ.ಕ.ಪ್ರ. ಪಾಲು ೧೯೯೯ – ೨೦೦೦ ರಲ್ಲಿ ಶೇ. ೬೫.೩೧ ರಷ್ಟಾದರೆ ಉ.ಕ.ಪ್ರ.ದ ಪಾಲು ಶೇ. ೩೪.೬೯ ಕ್ಕೆ ಇಳಿಯಿತು.

ಉ.ಕ.ಪ್ರ. ಮತ್ತು ದ.ಕ.ಪ್ರ.ಗಳ ನಡುವಿನ ರಾಜ್ಯ ನಿವ್ವಳ ಆಂತರಿಕ ಉತ್ಪನ್ನದ ಹಂಚಿಕೆಯು ತೀವ್ರ ಅಸಮಾನತೆಯಿಂದ ಕೂಡಿರುವುದು ಇಂದು ಸ್ಪಷ್ಟವಾಗಿದೆ. ಈ ಅಸಮಾನತೆಯ ಪ್ರಮಾಣ ತೀವ್ರವಾಗುತ್ತ ನಡೆದಿದೆ. ಇವೆರಡೂ ಪ್ರದೇಶಗಳ ನಡುವಿನ ರಾಜ್ಯ ನಿವ್ವಳ ಆಂತರಿಕ ಉತ್ಪನ್ನದ ಹಂಚಿಕೆ ೨೦೦೫ – ೦೬ ರಲ್ಲಿ ಹೀಗಿತ್ತು :

ರಾಜ್ಯ ನಿವ್ವಳ ಆಂತರಿಕ ಉತ್ಪನ್ನದಲ್ಲಿ ೨೦೦೫ – ೦೬ ರಲ್ಲಿ ದ.ಕ.ಪ್ರ.ದ ಪಾಲು ಶೇ. ೬೬.೭೦ ರಷ್ಟಿದ್ದರೆ ಉ.ಕ.ಪ್ರ.ದ ಪಾಲು ಶೇ. ೩೩.೩೦ಕ್ಕೆ ಇಳಿದಿದೆ. (ಕರ್ನಾಟಕ ಸರ್ಕಾರ : ಆರ್ಥಿಕ ಸಮೀಕ್ಷೆ : ೨೦೦೭ – ೦೮, ಪು. ೮೦)

ದಕ್ಷಿಣ – ಉತ್ತರಗಳ ನಡುವಿನ ಕಂದರವು ಉಲ್ಬಣಗೊಳ್ಳುತ್ತಾ ನಡೆದಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ರಾಜ್ಯದಲ್ಲಿ ತಲಾವರಮಾನವು ೧೯೬೦ – ೬೧ ರಲ್ಲಿ ಕನಿಷ್ಟ ಬೀದರ್ ಜಿಲ್ಲೆಯಲ್ಲಿತ್ತು (ರೂ. ೨೨೩) ಮತ್ತು ಗರಿಷ್ಟ ಕೊಡಗು ಜಿಲ್ಲೆಯಲ್ಲಿತ್ತು. (ರೂ.೫೫೮) ಅಂದು ಗರಿಷ್ಟ ಮತ್ತು ಕನಿಷ್ಟಗಳ ನಡುವಿನ ಅಂತರವು ಶೇ. ೧೧೫.೯೧ ರಷ್ಟಿದ್ದುದು ೧೯೯೯ – ೨೦೦೦ ರಲ್ಲಿ ಅದು ಶೇ. ೧೪೬.೪೮ಕ್ಕೆ ಅಧಿಕಗೊಂಡಿದೆ. ಈ ಅಂತರ ೨೦೦೫ – ೦೬ ರಲ್ಲಿ ಶೇ. ೧೭೬.೫ ರಷ್ಟಾಗಿದೆ.

ಅತ್ಯಂತ ಕನಿಷ್ಟ ತಲಾ ವರಮಾನವನ್ನು ಪಡೆದ ಬೀದರ್‌ ಜಿಲ್ಲೆಯ ತಲಾ ವರಮಾನವು ೧೯೬೦ – ೬೧ ರಲ್ಲಿ ರಾಜ್ಯ ತಲಾ ವರಮಾನದ ಶೇ. ೭೭.೧೬ ರಷ್ಟಿತ್ತು. ಆದರೆ ಅತ್ಯಧಿಕ ತಲಾ ವರಮಾನ ಪಡೆದ ಕೊಡಗಿನ ತಲಾ ವರಮಾನವು ರಾಜ್ಯ ತಲಾ ವರಮಾನದ ಶೇ. ೧೯೩.೦೭ ರಷ್ಟಿತ್ತು.

ಆದರೆ ೧೯೯೯ – ೨೦೦೦ ರಲ್ಲಿ ಕನಿಷ್ಟ ತಲಾ ವರಮಾನ ಪಡೆದ ಬೀದರ್‌ನ ತಲಾ ವರಮಾನವು ರಾಜ್ಯದ ವರಮಾನದ ಶೇ. ೫೯.೪೫ ರಷ್ಟಾದರೆ ಅಧಿಕ ತಲಾ ವರಮಾನದ ಪಡೆದ ದಕ್ಷಿಣ ಕನ್ನಡದ ತಲಾ ವರಮಾನವು ರಾಜ್ಯ ತಲಾ ವರಮಾನದ ಶೇ. ೨೦೫.೯೩ ರಷ್ಟಾಗಿದೆ.

ಆದರೆ ೨೦೦೫ – ೦೬ ರಲ್ಲಿ ಕನಿಷ್ಟ ತಲಾ ವರಮಾನವಿದ್ದ ಬೀದರ್ ಜಿಲ್ಲೆಯ ತಲಾ ವರಮಾನವು (ರೂ.೧೩೩೬೧) ರಾಜ್ಯ ತಲಾ ವರಮಾನದ ಶೇ ೫೧.೩೫ ರಷ್ಟಾದರೆ ಗರಿಷ್ಠ ತಲಾ ವರಮಾನ ಪಡೆದಿದ್ದ ಬೆಂಗಳೂರು ನಗರ ತಲಾ ವರಮಾನವು ರಾಜ್ಯ ತಲಾ ವರಮಾನದ ಶೇ. ೨೨೩.೮೫ ರಷ್ಟಾಗಿದೆ.

ಕಳೆದ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣ ತೀವ್ರವಾಗಿದೆ. ಶ್ರೀಮಂತ ಜಿಲ್ಲೆಗಳು ಶ್ರೀಮಂತವಾಗುತ್ತಾ ನಡೆದಿವೆ ಮತ್ತು ಬಡ ಜಿಲ್ಲೆಗಳು ಬಡವಾಗುತ್ತಾ ನಡೆದಿವೆ.

ಕಳೆದ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ದ.ಕ.ಪ್ರ.ವು ಗುನ್ನಾರ್‌ಮಿರ್ಡಾಲ್‌ಹೇಳಿದ ‘ಸ್ಪ್ರೆಡ್‌ಎಫೆಕ್ಟ್‌’ಗೆ ಒಳಗಾಗಿದ್ದರೆ ಉ.ಕ.ಪ್ರ.ವು ‘ಬ್ಯಾಗ್‌ವಾಷ್‌ಎಫೆಕ್ಟ್‌’ಗೆ ಒಳಗಾಯಿತು. ಅಂದರೆ ಉ.ಕ.ಪ್ರ.ವು ‘ಬರಿದಾಗುವ’ ಪರಿಣಾಮಕ್ಕೆ ಪಕ್ಕಾದರೆ ದ.ಕ.ಪ್ರ.ವು ಕೇಂದ್ರೀಕರಣ ಪ್ರಕ್ರಿಯೆಗೆ ಒಳಗಾಯಿತು.

ಪರಿಶಿಷ್ಟರ ಬದುಕು ಹಾಗೂ ಬವಣೆ

ಬಡತನ, ಹಸಿವು, ಅಸಮಾನತೆ ಮುಂತಾದವುಗಳ ಪರಿಣಾಮಗಳನ್ನು ಸಮಾಜದ ಅಂಚಿನಲ್ಲಿರುವ ವಂಚಿತರು ಅಧಿಕವಾಗಿ ಅನುಭವಿಸಬೇಕಾಗುತ್ತದೆ. ಇದೇ ರೀತಿ ಬಡತನ – ಹಸಿವು ತೀವ್ರ ಸ್ವರೂಪ ತಳೆದಾಗ ಅದರ ಪರಿಣಾಮವನ್ನು ನಿರ್ವಹಿಸುವ ಜವಾಬುದಾರಿ ಮಹಿಳೆಯರ ಮೇಲೆ ಬಿದ್ದು ಬಿಡುತ್ತದೆ. ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ನಿವಾರಣೆಯು ಯಾಕೆ ಬಹಳ ಮುಖ್ಯವಾಗಬೇಕು ಎಂದರೆ ಅದರ ಮೂಲಕ ರಾಜ್ಯದಲ್ಲಿನ ಬಡತನದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಲಿಂಗ ಸಂಬಂಧಿ ಅಸಮಾನತೆಯನ್ನು ನಿವಾರಣೆ ಮಾಡುವುದರ ಮೂಲಕ ಹಿಂದುಳಿದ ಪ್ರದೇಶದಲ್ಲಿ ದುಡಿಮೆಗಾರ ಮಹಿಳೆಯರ ಬದುಕನ್ನು ಉತ್ತಮಗೊಳಿಸಬಹುದಾಗಿದೆ.[5]

ರಾಜ್ಯದ ಒಟ್ಟು ಜನಸಂಖ್ಯೆ ಪರಿಶಿಷ್ಟರ (ಪ.ಜಾ.+ಪ.ಪಂ.) ಪ್ರಮಾಣವು ೨೦೦೧ ರಲ್ಲಿ ಶೇ. ೨೨.೫೬ ರಷ್ಟಿದ್ದರೆ ಅವರ ಪ್ರಮಾಣವು ಉ.ಕ.ಪ್ರ.ದಲ್ಲಿ ಶೇ. ೨೩.೧೬ ಮತ್ತು ಗುಲಬರ್ಗಾ ವಿಭಾಗದಲ್ಲಿ ಶೇ. ೩೧.೫೭ ರಷ್ಟಿತ್ತು. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ರಾಜ್ಯದ ಗುಲಬರ್ಗಾ ವಿಭಾಗದಲ್ಲಿ ಅಧಿಕವಾಗಿದೆ. ಮಹಿಳೆಯರ ಸಾಕ್ಷರತೆಯ ಪ್ರಮಾಣ ಅತ್ಯಂತ ಕನಿಷ್ಟ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿದೆ. ರಾಜ್ಯದಲ್ಲಿ ಮಹಿಳೆಯರ ಸಾಕ್ಷರತೆ ೨೦೦೧ ರಲ್ಲಿ ಶೇ. ೫೭.೪೫. ಆದರೆ ಗುಲಬರ್ಗಾ ವಿಭಾಗದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಕನಿಷ್ಟ ಶೇ. ೩೬.೮೪ ರಷ್ಟಿದ್ದರೆ ಗರಿಷ್ಟ ಶೇ. ೫೦.೦೧ ರಷ್ಟಿದೆ.

ರಾಜ್ಯದಲ್ಲಿ ಒಟ್ಟು ಸಾಕ್ಷರತೆಯು ಶೇ. ೬೭.೦೪ ರಷ್ಟಾದರೆ ಪರಿಶಿಷ್ಟ ಜಾತಿಯಲ್ಲಿ ಸಾಕ್ಷರತೆ ಶೇ. ೫೨.೯ ರಷ್ಟಾಗಿದೆ. ಪರಿಶಿಷ್ಟ ಪಂಗಡದಲ್ಲಿ ಸಾಕ್ಷರತಾ ಪ್ರಮಾಣವು ಶೇ. ೪೮.೩ ರಷ್ಟಿದೆ. ಇದನ್ನು ಸರಿಪಡಿಸಬೇಕಾಗಿದೆ.

[1] ಹೈದರಾಬಾದ್ ನಿಜಾಮನ ಸಂಸ್ಥಾನವು ಬ್ರಿಟಿಷ್‌ವಸಾಹತುಶಾಹಿಯ ನೇರ ಆಡಳಿತಕ್ಕೆ ಒಳಗಾಗಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಪಶ್ಚಿಮ ಕರಾವಳಿ ಪ್ರದೇಶ ಹಾಗೂ ವಿದರ್ಭ ಪ್ರದೇಶವು ವಸಾಹತುಶಾಹಿ ಆಡಳಿತಕ್ಕೆ ಒಳಗಾಯಿತು. ಕರ್ನಾಟಕದಲ್ಲಿ ಮುಂಬೈ ಕರ್ನಾಟಕ ಪ್ರದೇಶ ಮತ್ತು ಮದರಾಸು ಪ್ರಾಂತಕ್ಕೆ ಸೇರಿದ ಜಿಲ್ಲೆಗಳು ವಸಾಹತುಶಾಹಿ ಆಡಳಿತದ ಅನುಕೂಲ ಅನುಭವಿಸಿದವು. ತೆಲಂಗಾಣ ಪ್ರದೇಶವು ವಸಾಹತುಶಾಹಿ ಆಡಳಿತದಿಂದ ವಂಚಿತವಾಗಿದ್ದರೆ ಆಂಧ್ರ ಕರಾವಳಿ ಪ್ರದೇಶವು ವಸಾಹತುಶಾಹಿ ಆಡಳಿತಕ್ಕೆ ಒಳಗಾಯಿತು. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಲ್ಲಿ ಯಾವ ಭಾಗಗಳು ವಸಾಹತುಶಾಹಿ ಆಡಳಿತ ಅಭಿವೃದ್ಧಿಗೆ ಒಳಗಾಗಿದ್ದವೋ ಅವು ಏಕೀಕರಣ (೧೯೫೬)ದ ನಂತರ ತೀವ್ರ ಅಭಿವೃದ್ಧಿ ಸಾಧಿಸಿಕೊಂಡರೆ ವಸಾಹತುಶಾಹಿ ಆಡಳಿತದ ಅನುಕೂಲದಿಂದ ವಂಚಿತವಾದ ಪ್ರದೇಶಗಳು ಆಯಾ ರಾಜ್ಯಗಳಲ್ಲಿ ಇಂದಿಗೂ ಹಿಂದುಳಿದ ಪ್ರದೇಶಗಳಾಗಿ ಉಳಿದಿವೆ (ವಿವರಗಳಿಗೆ ನೋಡಿ : ಮುಧೋಲ್‌ಕರ್ ಮತ್ತು ವೋರಾ ೧೯೮೪, ಸುಬ್ರಮಣ್ಯಮ್, ೧೯೮೯).

[2] ಆಡಳಿತಾತ್ಮಕ ಹಾಗೂ ಚಾರಿತ್ರಿಕ ಕಾರಣಗಳಿಂದಾಗಿ ವಿಜಾಪುರ (ಅವಿಭಜಿತ) ಜಿಲ್ಲೆಯನ್ನು ಬೆಳಗಾವಿ ವಿಭಾಗಕ್ಕೆ ಸೇರಿಸಲಾಯಿತು. ಆದರೆ ಇದು ಗುಲಬರ್ಗಾ ವಿಭಾಗದ ಜಿಲ್ಲೆಗಳ ಸಾಮಾಜಿಕ – ಆರ್ಥಿಕ – ಸಾಂಸ್ಕೃತಿಕ ವೈಲಕ್ಷಣಗಳಿಗೆ ಸಮಾನ ವಾದ ಲಕ್ಷಣಗಳನ್ನು ಹೊಂದಿದೆ. ಬೆಳಗಾವಿ, ಧಾರವಾಡ (ಅವಿಭಜಿತ) ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸಮಾನವಾದ ಅಂಶಗಳು ಬಿಜಾಪುರ ಜಿಲ್ಲೆಯಲ್ಲಿಲ್ಲ. ಈ ಬಗ್ಗೆ ಕನ್ನಡದ ಖ್ಯಾತ ಕಥೆಗಾರ ಕೃಷ್ಣಕುಮಾರ್ ಕಲ್ಲೂರು ಹೀಗೆ ಬರೆಯುತ್ತಾರೆ.

“………. ಕೃಷ್ಣಾ ಮಂಡಲದ ವಿಭಾಗ ಮಲಪ್ರಭಾ ನದಿಯಿಂದ
ಮಂಜೀರಾ ನದಿಯಾಚೆಯವರೆಗೆ ಇದ್ದ ಅಚ್ಚ ಬೆಳವಲ
ನಾಡಿನ ಕೆಚ್ಚಿನಂತಿರುವುದು ಬಿಜಾಪುರ.” (೧೯೯೪:೧೭೪)

[3] ಪ್ರಸಿದ್ಧ ವಿದ್ವಾಂಸ ಪ್ರೊ. ಎ.ಎಸ್. ಹಿಪ್ಪರಗಿ ಅವರು ತಮ್ಮ ಆತ್ಮಕಥನದಲ್ಲಿ ಬಿಜಾಪುರ ಪ್ರದೇಶದಲ್ಲಿದ್ದ ಪಾಳೆಗಾರಿಕೆ – ಜಮೀನುದಾರರ ದಬ್ಬಾಳಿಕೆ ಬಗ್ಗೆ ಬರೆದಿದ್ದಾರೆ (ನೋಡಿ: ಎ.ಎಸ್. ಹಿಪ್ಪರಗಿ ಅಭಿನಂದನ ಗ್ರಂಥ : ದೀಪಸ್ತಂಭ: ಪು. ೪೦೧ – ೪೦೫).

[4] ನಮ್ಮ ರಾಜ್ಯದಲ್ಲಿ ಬೆಂಗಳೂರು ಹೇಗೆ ಭೂತಾಕಾರವಾಗಿ ಬೆಳೆದಿದೆ ಮತ್ತು ಎಲ್ಲವನ್ನೂ ಮನಾಪಲಿ ಮಾಡಿಕೊಳ್ಳುತ್ತಿದೆ ಎಂಬುದನ್ನು ನಾವು ಅವಶ್ಯ ಪರಿಗಣಿಸಬೇಕು. ರಾಜ್ಯದಲ್ಲಿನ ಒಟ್ಟು ವರಮಾನದಲ್ಲಿ ಬೆಂಗಳೂರಿನ ಪಾಲು ೧೯೯೦ – ೯೧ ರಲ್ಲಿ ಶೇ. ೧೭.೫೪ ರಷ್ಟಿತ್ತು. ಆದರೆ ಅದು ೨೦೦೧ – ೦೨ ರಲ್ಲಿ ಅದರ ಪಾಲು ಶೇ. ೨೩.೪೬ಕ್ಕೆ ಏರಿದೆ. ಪ್ರಾದೇಶಿಕ ಅಸಮಾನತೆ ಬಗ್ಗೆ ಮಾತನಾಡುವಾಗ ನಾವು ಬೆಂಗಳೂರಿನ ಮಲಾಪಲಿ ಬೆಳವಣಿಗೆ ಬಗ್ಗೆ ಗಮನ ನೀಡಬೇಕು (ನೋಡಿ : ಕರ್ನಾಟಕದ ಮಾನವ ಅಭಿವೃದ್ಧಿ ವರದಿ ೨೦೦೫).

[5] ರಾಜ್ಯದಲ್ಲಿ ಪರಿಶಿಷ್ಟರ ಬದುಕು ಉಳಿದ ಜನಸಮೂಹದ ಬದುಕಿಗಿಂತ ಹೇಗೆ ಶೋಷಣೆಗೆ ಹಾಗೂ ಅನ್ಯಾಯಕ್ಕೆ ಒಳಗಾಗಿದೆ ಎಂಬ ಅಂಶಕ್ಕೆ ನೋಡಿ : ಚಂದ್ರಶೇಖರ ಟಿ.ಆರ್., ೨೦೦೬.