ಸಾರಲೇಖ

ಈ ಪ್ರಬಂಧದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಸ್ವರೂಪದ ಚಾರಿತ್ರಿಕ ಹಾಗೂ ಸಾಮಾಜಿಕ ನೆಲೆಗಳನ್ನು ಗುರುತಿಸಲು ಹಾಗೂ ಚರ್ಚಿಸಲು ಪ್ರಯತ್ನಿಸಲಾಗಿದೆ. ಈ ಪ್ರಬಂಧದಲ್ಲಿ ಮೂರು ಸಂಗತಿಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಯನ್ನು ಕಟ್ಟಲಾಗಿದೆ.

೧. ಕರ್ನಾಟಕದಲ್ಲಿ ಯಾವ ಯಾವ ಭಾಗಗಳು ಸ್ವಾತಂತ್ರ್ಯ ಪೂರ್ವದಲ್ಲಿ ವಸಾಹತು ಶಾಹಿ ಆಡಳಿತದ ಮತ್ತು ಅಭಿವೃದ್ಧಿಯ ಅನುಕೂಲಗಳನ್ನು ಪಡೆದಿದ್ದವೋ ಅವು ಸ್ವಾತಂತ್ರ್ಯಾ ನಂತರ ತೀವ್ರ ಸ್ವರೂಪದ ಆಧುನಿಕತೆಗೆ ಹಾಗೂ ಸಾಮಾಜಿಕ ಪರಿವರ್ತನೆಗೆ ಒಳಗಾದವು. ಈ ಕಾರಣದಿಂದಾಗಿ ಅವುಗಳಿಗೆ ಬಂಡವಾಳಶಾಹಿ ವ್ಯವಸ್ಥೆಯನ್ನು ಕಟ್ಟಿಕೊಳ್ಳುವುದು ಸಾಧ್ಯವಾಯಿತು.

ಆದರೆ ಯಾವ ಯಾವ ಪ್ರದೇಶಗಳು ಸ್ವಾತಂತ್ರ್ಯ ಪೂರ್ವದಲ್ಲಿ ವಸಾಹತುಶಾಹಿ ಆಡಳಿತದ ಮತ್ತು ಅಭಿವೃದ್ಧಿಯ ಅನುಕೂಲಗಳಿಂದ ವಂಚಿತವಾಗಿದ್ದವೋ ಅವು ಜಮೀನುದಾರಿ ಪಾಳೆಗಾರಿಕೆಯ ದಬ್ಬಾಳಿಕೆಗೆ ಸಿಕ್ಕು ಜರ್ಜರಿತವಾದವು. ಸ್ವಾತಂತ್ರ್ಯಾನಂತರ ಅವುಗಳಿಗೆ ತೀವ್ರ ದುಸ್ಥಿತಿಯ ಬದುಕನ್ನು ಬದುಕುವುದು ಅನಿವಾರ್ಯವಾಗಿ ಬಿಟ್ಟಿತು. ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳನ್ನು ಸದರಿ ಪ್ರದೇಶಗಳಲ್ಲಿ ಇಂದು ಗುರುತಿಸಬಹುದಾಗಿದೆ.

ಬಂಡವಾಳಶಾಹಿಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ (ದ.ಕ.ಪ್ರ.) ಬೇರು ಬಿಡಲು ತೊಡಗಿದ್ದರಿಂದ ಅದು ಉತ್ತರ ಕರ್ನಾಟಕ ಪ್ರದೇಶದಿಂದ (ಉ.ಕ.ಪ್ರ.) ಭೌತಿಕ, ಮಾನವ ಹಾಗೂ ಹಣಕಾಸು ಸಂಪನ್ಮೂಲವನ್ನು ಆಕರ್ಷಿಸತೊಡಗಿತು. ಬಂಡವಾಳಶಾಹಿ ವ್ಯವಸ್ಥೆಗೆ ಸಹಜವಾದ ಕೇಂದ್ರೀಕರಣ ಪ್ರಕ್ರಿಯೆಗೆ ದ.ಕ.ಪ್ರ. ಒಳಗಾದರೆ ಉ.ಕ.ಪ್ರ.ವು ಬರನಾಡಾಗುವ ಪ್ರಕ್ರಿಯೆಗೆ ಒಳಗಾಯಿತು.

ಹೈದರಾಬಾದ್ ನಿಜಾಮ್‌ ಪ್ರಾಂತದಿಂದ ಬೇರೆ ರಾಜ್ಯಗಳಿಗೆ ವರ್ಗಾಯಿಸಿದ ಪ್ರದೇಶಗಳು ಆಯಾರಾಜ್ಯಗಳಲ್ಲಿ ಅವು ಇಂದಿಗೂ ಹಿಂದುಳಿದ ಸ್ಥಿತಿಯಲ್ಲಿವೆ. ನಿಜಾಮ ಪ್ರಾಂತದಿಂದ ೧೯೫೬ ರಲ್ಲಿ ಮರಾಠಿ ಮಾತನಾಡುವ ಭಾಗವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಕನ್ನಡ ಮಾತನಾಡುವ ಭಾಗವನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು. ತೆಲುಗು ಮಾತನಾಡುವ ತೆಲಂಗಾಣ ಪ್ರದೇಶವನ್ನು ಮದರಾಸು ಪ್ರಾಂತದ ಆಡಳಿತ ವ್ಯಾಪ್ತಿಯಲ್ಲಿದ್ದ ಆಂಧ್ರ ಪ್ರದೇಶದ ಜೊತೆ ವಿಲೀನಗೊಳಿಸಿ ವಿಶಾಲಾಂಧ್ರವನ್ನು ರೂಪಿಸಲಾಯಿತು. ಹೀಗೆ ನಿಜಾಮ ಪ್ರಾಂತದಿಂದ ಬಂದ ಮರಾಠವಾಡ ಪ್ರದೇಶ ಮಹಾರಾಷ್ಟ್ರದಲ್ಲಿ, ಹೈದರಾಬಾದ್ – ಕರ್ನಾಟಕ ಪ್ರದೇಶ ಕರ್ನಾಟಕದಲ್ಲಿ ಹಾಗೂ ತೆಲಂಗಾಣ ಪ್ರದೇಶ ಆಂಧ್ರದಲ್ಲಿ ಹಿಂದುಳಿದಿರುವ ಸ್ಥಿತಿಯಲ್ಲಿವೆ. ಅವು ೧೯೫೦ ಕ್ಕೆ ಪೂರ್ವದಲ್ಲಿ ಅವುಗಳಿಗೆ ವಸಾಹತುಶಾಹಿ ಆಡಳಿತದ ಅನುಕೂಲ ದೊರೆಯಲಿಲ್ಲ.

ದ.ಕ.ಪ್ರ.ದಲ್ಲಿ ಬಂಡವಾಳಶಾಹಿ ಬೆಳೆದಿರುವುದನ್ನು ಮತ್ತು ಉ.ಕ.ಪ್ರ.ದಲ್ಲಿ ಅದರಲ್ಲೂ ಮುಖ್ಯವಾಗಿ ಗುಲಬರ್ಗಾ ವಿಭಾಗದಲ್ಲಿ ಊಳಿಗಮಾನ್ಯ ವ್ಯವಸ್ಥೆ ಗಟ್ಟಿಯಾಗುಳಿದಿರುವು ದನ್ನು ಭೂ – ಸಂಬಂಧಗಳ ಹಾಗೂ ದುಡಿಮೆಗಾರರ ಸ್ವರೂಪವನ್ನು ಆಧರಿಸಿ ಇಲ್ಲಿ ಚರ್ಚಿಸಲಾಗಿದೆ.

೨. ಹಿಂದುಳಿದಿರುವಿಕೆ ಅಥವಾ ಮುಂದುವರಿದಿರುವಿಕೆಗಳು ಯಾವುದೇ ಪ್ರದೇಶದ ವಿಶಿಷ್ಟತೆಯೇನಲ್ಲವೆಂಬ ಪ್ರಮೇಯವೊಂದು ಇಂದು ಪ್ರಚಲಿತದಲ್ಲಿದೆ, ದ.ಕ.ಪ್ರ.ದಲ್ಲಿ ಹಿಂದುಳಿದ ತಾಲ್ಲೂಕುಗಳಿವೆಯೆಂದೂ ಉ.ಕ.ಪ್ರ.ದಲ್ಲಿ ಮುಂದುವರಿದ ತಾಲ್ಲೂಕುಗಳಿವೆ ಯೆಂದೂ ವಾದ ಮಾಡಲಾಗುತ್ತಿದೆ. ಅದು ಸರಿಯಲ್ಲವೆಂಬುದನ್ನು ಸಾಧಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ರಾಜ್ಯದಲ್ಲಿ ದ.ಕ.ಪ್ರ. ಮತ್ತು ಉ.ಕ.ಪ್ರ.ಗಳ ನಡುವೆ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯು ತೀವ್ರವಾಗುತ್ತಾ ನಡೆದಿರುವುದನ್ನು ಇಲ್ಲಿ ತೋರಿಸಲಾಗಿದೆ.

೩. ಪ್ರಾದೇಶಿಕ ಅಸಮಾನತೆಯೆಂಬುದು ಕೇವಲ ಭೌತಿಕವಾದ, ಭೂಗೋಳಿಕವಾದ, ಬಂಡವಾಳಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೆ ಪರಿಶಿಷ್ಟವಾದಿ ಹಾಗೂ ಲಿಂಗ ಸಂಬಂಧಿ ಮುಖಗಳಿವೆ. ಆದ್ದರಿಂದ ಮೇಲ್ವರ್ಗವಾದಿ ನೆಲೆಯಿಂದ ಇದನ್ನು ಪರಿಭಾವಿಸಿ ಕೊಳ್ಳುವುದಕ್ಕೆ ಪ್ರತಿಯಾಗಿ ಜನಸಮೂಹದ ನೆಲೆಯಿಂದ ಪರಿಭಾವಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಪ್ರಾದೇಶಿಕ ಅಸಮಾನತೆಯನ್ನು ನಿವಾರಣೆ ಮಾಡುವುದರಿಂದ ಹಿಂದುಳಿದ ಜಿಲ್ಲೆ ಹಾಗೂ ತಾಲ್ಲೂಕುಗಳು ತೀವ್ರ ಅಭಿವೃದ್ಧಿ ಸಾಧಿಸಿಕೊಂಡು ಬಿಡುತ್ತವೆಯೆಂದು ಹೇಳಲಾಗಿದೆ. ಆದರೆಇಡೀ ರಾಜ್ಯದಲ್ಲಿನ ಬಡತನ, ಹಸಿವು, ಅಸಮಾನತೆಗಳ ನಿವಾರಣೆಯ ದೃಷ್ಟಿಯಿಂದ, ಇಡೀ ಜನಸಮೂಹದ ಬದುಕು ಉತ್ತಮಗೊಳ್ಳುವ ನೆಲೆಯಿಂದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಅಗತ್ಯವಿದೆ.

ಪ್ರಸ್ತುತ ಪ್ರಬಂಧದಲ್ಲಿ ಜನಸಮೂಹವನ್ನು ಕೇಂದ್ರವಾಗಿಟ್ಟುಕೊಂಡ ಅಭಿವೃದ್ಧಿ ರಾಜಕಾರಣದ ಪ್ರಸ್ತುತತೆಯನ್ನು ಪ್ರತಿಪಾದಿಸಲಾಗಿದೆ.

ಕರ್ನಾಟಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಸಾಮಾಜಿಕ ನೆಲೆಗಳು

ಪ್ರಸ್ತಾವನೆ

ಈ ಪ್ರಬಂಧದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯನ್ನು ವರಮಾನ/ಬಂಡವಾಳ – ಆರ್ಥಿಕ ಸಂಗತಿಗಳ ನೆಲೆಯಿಂದ ಪರಿಭಾವಿಸಿ ಕೊಳ್ಳುವುದಕ್ಕೆ ಪ್ರತಿಯಾಗಿ ಇಲ್ಲಿ ಅದನ್ನು ಕುರಿತಂತೆ ಚಾರಿತ್ರಿಕ – ಸಾಮಾಜಿಕ – ರಾಜಕೀಯ ನೆಲೆಯಲ್ಲಿ ಅನುಸಂಧಾನ ಮಾಡಲು ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಅಸಮಾನತೆಯ ಸೂಚಿಗಳ ಬೆನ್ನು ಹತ್ತುವುದಕ್ಕೆ ಪ್ರತಿಯಾಗಿ ಇಲ್ಲಿ ಅದರ ಮೂಲದಲ್ಲಿನ ಸೈದ್ಧಾಂತಿಕ ಸ್ವರೂಪವನ್ನು ಹಿಡಿದಿಡಲಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮತೋಲನವನ್ನು ಉಂಟು ಮಾಡುತ್ತಿರುವ ಸಾಮಾಜಿಕ ಪ್ರಕ್ರಿಯೆಯನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಒಟ್ಟಾರೆ ಪ್ರಸ್ತುತ ಪ್ರಬಂಧದ ಉದ್ದೇಶವೇನೆಂದರೆ ಪ್ರಾದೇಶಿಕ ಅಸಮಾನತೆಯನ್ನು ಹುಟ್ಟು ಹಾಕುತ್ತಿರುವ ಚಾರಿತ್ರಿಕ – ಸಾಮಾಜಿಕ – ರಾಜಕೀಯ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಈ ಬಗೆಯ ಅನುಸಂಧಾನದ ಮೂಲಕವೇ ಅದರ ಪರಿಹಾರದ ನೆಲೆಗಳನ್ನು ಗುರುತಿಸಿಕೊಳ್ಳಬಹುದಾಗಿದೆ.

ಇಲ್ಲಿ ಚರ್ಚಿಸಲಾಗಿರುವ ಸಂಗತಿಗಳು ಹೀಗಿವೆ :

೧. ಪ್ರಾದೇಶಿಕ ಅಸಮಾನತೆಯ ದಕ್ಷಿಣ – ಉತ್ತರ ವರ್ಗೀಕರಣವನ್ನು ಇಲ್ಲಿ ಪ್ರಶ್ನಿಸಲಾಗಿದೆ. ಈ ಬಗೆಯ ಅಸಮಾನತೆಯ ಪ್ರಾದೇಶಿಕ ಸ್ವರೂಪವನ್ನು ಇಲ್ಲಿ ಭಿನ್ನ ನೆಲೆಯಲ್ಲಿ ಹಿಡಿದಿಡಲು ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಅಸಮಾನತೆಯ ಅಧ್ಯಯನದ ಉನ್ನತಾಧಿಕಾರ ಸಮಿತಿಯ ಅಂತಿಮ ವರದಿ ಹಾಗೂ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಸಿದ್ಧಪಡಿಸಿರುವ ‘ಮಾನವ ಅಭಿವೃದ್ಧಿ ವರದಿ’ಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲಿ ಸಮಸ್ಯೆಯನ್ನು ನಾಲ್ಕು ವಿಭಾಗಗಳ ನೆಲೆಯಲ್ಲಿ ಚರ್ಚಿಸಲಾಗಿದೆ.

ಈ ವರದಿಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ‘ಮುಂದುವರಿದಿರುವಿಕೆ’ ಹಾಗೂ ‘ಹಿಂದುಳಿದಿರುವಿಕೆ’ಗಳು ಎಲ್ಲ ಪ್ರದೇಶಗಳಿಗೂ ಸಮಾನ – ಸಾಮಾನ್ಯವೆಂಬ ಪ್ರಮೇಯವನ್ನು ಇಲ್ಲಿ ತಿರಸ್ಕರಿಸಿ ಕರ್ನಾಟಕದ ಸಂದರ್ಭದಲ್ಲಿ ಅಭಿವೃದ್ಧಿಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಮಡುಗಟ್ಟಿಕೊಂಡಿದ್ದರೆ ದುಸ್ಥಿತಿಯು ರಾಜ್ಯದ ಏಳು ಜಿಲ್ಲೆಗಳಲ್ಲಿ (ಬಾಂಬೆ ಕರ್ನಾಟಕ – ೨ ಮತ್ತು ಗುಲಬರ್ಗಾ ವಿಭಾಗ – ೫) ದಟ್ಟೈಸಿರುವುದನ್ನು ತೋರಿಸಲು ಪ್ರಯತ್ನಿಸಲಾಗಿದೆ.

[1]

೨. ಈ ಸಮಸ್ಯೆಯ ಮೂಲವನ್ನು ಚರಿತ್ರೆಯಲ್ಲಿ ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಚರಿತ್ರೆಯ ಒಂದು ಪರಿಣಾಮವಾಗಿ ಹುಟ್ಟಿಕೊಂಡ ಸಮಸ್ಯೆ ಇದು. ಸ್ವಾತಂತ್ರ್ಯಾ ನಂತರ – ಏಕೀಕರಣದ ನಂತರ ರಾಜ್ಯದ ಉ.ಕ.ಪ್ರದೇಶದಲ್ಲಿ ಚರಿತ್ರೆಯ ವಿಕಲತೆಯು ಹೇಗೆ ಮುಂದುವರಿದುಕೊಂಡು ಹೋಗುತ್ತಿದೆ ಎಂಬುದನ್ನು ತೋರಿಸಲಾಗಿದೆ.[2] ಅಭಿವೃದ್ಧಿಯ – ಅದರಲ್ಲೂ ಬಂಡವಾಳಶಾಹಿ – ಜಾಗತೀಕರಣವಾದಿ – ಉದಾರವಾದಿ ಸ್ವರೂಪದ ಮೂಲ ಗುಣವೆಂದರೆ ಒಂದು ಪ್ರಶಸ್ತ ಪ್ರದೇಶದಲ್ಲಿ ಮಡುಗಟ್ಟಿಕೊಳ್ಳುವುದಾಗಿದೆ. ಬಂಡವಾಳಶಾಹಿ ವಿಚಾರ ಪ್ರಣಾಳಿಕೆಯು ಕೇಂದ್ರೀಕರಣವನ್ನು – ‘ಕೇಂದ್ರಾಭಿಮುಖಿ’ ಸಂಚಲನೆಯನ್ನು ಪೋಷಿಸುತ್ತದೆ. ಹಿಂದುಳಿದ ಪ್ರದೇಶಗಳಿಂದ ಸಂಪನ್ಮೂಲಗಳನ್ನು – ಭೌತಕ – ಮಾನವ, ಹಣಕಾಸು – ಸಂಪನ್ಮೂಲಗಳನ್ನು ತನ್ನತ್ತ ಆಕರ್ಷಿಸುವುದರ ಮೂಲಕ ಅದನ್ನು ಬರನಾಡನ್ನಾಗಿ ಮಾಡಿಬಿಡುತ್ತದೆ. ಹಿಂದುಳಿದ ಪ್ರದೇಶವು ಬರನಾಡಾಗಿ ಪರಿವರ್ತಿತವಾಗುತ್ತಿದ್ದರೆ ಮುಂದುವರಿದ ಪ್ರದೇಶವು ಸಮೃದ್ಧಿಯ ಬೀಡಾಗಿ ಬಿಡುತ್ತದೆ. (ವಿವರಗಳಿಗೆ ನೋಡಿ: ಗುನ್ನಾರ್ ಮಿರ್ಡಾಲ್, ೧೯೫೬) ಈ ಪ್ರಕ್ರಿಯೆಯ ಸ್ವರೂಪವನ್ನು ಪ್ರಸ್ತುತ ಪ್ರಬಂಧದಲ್ಲಿ ಹಿಡಿದಿಡಲಾಗಿದೆ.

ಕಳೆದ ೫೦ ವರ್ಷಗಳ ಅವಧಿಯಲ್ಲಿ (೧೯೫೬ – ೨೦೦೬) ದ.ಕ.ಪ್ರ. ಮತ್ತು ಉ.ಕ. ಪ್ರ.ಗಳು ನಡುವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆಯು ಹೇಗೆ ಉಲ್ಬಣಗೊಳ್ಳುತ್ತಾ ನಡೆದಿದೆ ಎಂಬುದನ್ನು ತೋರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

೩. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಗೆ ಪರಿಶಿಷ್ಟವಾದಿ ಹಾಗೂ ಲಿಂಗ ಸಂಬಂಧಿ ಮುಖವಿರುವುದನ್ನು ಇಲ್ಲಿ ಚರ್ಚಿಸಲಾಗಿದೆ. ಪ್ರಾದೇಶಿಕ ಅಸಮಾನತೆ ಯನ್ನು ಜನಸಮೂಹದ ನೆಲೆಯಿಂದ ಗ್ರಹಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಅಸಮಾನತೆಯು ಪರಿಶಿಷ್ಟ ಜನಸಮೂಹದ ಮೇಲೆ ಹಾಗೂ ದುಡಿಯುವ ಮಹಿಳೆಯರ ಮೇಲೆ ಉಂಟು ಮಾಡುತ್ತಿರುವ ಪರಿಣಾಮಗಳನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಯಾಕೆ ಇದರ ಪರಿಣಾಮವು ಪರಿಶಿಷ್ಟರ ಮೇಲೆ ಪ್ರಧಾನವಾಗಿರುತ್ತದೆ? ಯಾಕೆ ಬಡತನದ ತೀವ್ರತೆಯನ್ನು ಎದುರಿಸುವ ಜವಾಬುದಾರಿ ಮಹಿಳೆಯರ ಮೇಲೆ ಬೀಳುತ್ತದೆ? ಈ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಉತ್ತರದಕ್ಷಿಣ ಕಂದರ

ಜಾಗತಿಕ ಮಟ್ಟದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ‘ಉತ್ತರ – ದಕ್ಷಿಣ’ ಎಂಬ ವರ್ಗೀಕರಣದಲ್ಲಿ ಹಿಡಿದಿಡುವುದು ವಾಡಿಕೆಯಲ್ಲಿದೆ. ಈ ಬಗೆಯ ಪ್ರಾದೇಶಿಕ ಅಸಮಾನತೆಯೆಂಬುದು ಭಾರತಕ್ಕೆ ಅಥವಾ ಕರ್ನಾಟಕಕ್ಕೆ ಮಾತ್ರವೇ ವಿಶಿಷ್ಟವಾದ ಸಂಗತಿಯೇನಲ್ಲ. ಇದೊಂದು ಜಾಗತಿಕವಾದ ಸಂಗತಿಯಾಗಿದೆ. ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಗಳಲ್ಲಿ ‘ದಕ್ಷಿಣ’ವು ಹಿಂದುಳಿದಿರುವಿಕೆಯನ್ನು ಪ್ರತಿನಿಧಿಸಿದರೆ ‘ಉತ್ತರ’ವು ಮುಂದುವರಿದಿರುವಿಕೆಯನ್ನು ಪ್ರತಿನಿಧಿಸುತ್ತದೆ. ಅಮೆರಿಕೆಯಲ್ಲಿ ೧೮೬೦ ರಲ್ಲಿ ಭುಗಿಲೆದ್ದಿದ್ದ ಅಂರ್ತಕಲಹ – ಸಿವಿಲ್ ವಾರ್‌ನ ಮೂಲದಲ್ಲಿದ್ದುದು ಕೈಗಾರಿಕೀಕರಣದ ಮೂಲಕ ಮುಂದುವರಿದಿದ್ದ ಉತ್ತರ ಹಾಗೂ ಕೃಷಿ ಪ್ರಧಾನ ಆರ್ಥಿಕತೆ ಹೊಂದಿದ್ದ ದಕ್ಷಿಣಗಳ ನಡುವಣ ಘರ್ಷಣೆಯಾಗಿತ್ತು. ಇಡೀ ಜಗತ್ತನ್ನೇ ತೆಗೆದುಕೊಂಡರೂ ನಮಗೆ ಇದೇ ಬಗೆಯ ಉತ್ತರ – ದಕ್ಷಿಣ ಚಿತ್ರ ಕಣ್ಣ ಮುಂದೆ ನಿಲ್ಲುತ್ತದೆ.

ಕರ್ನಾಟಕದ ಸಂದರ್ಭದಲ್ಲಿ ಮಾತ್ರ ಇದು ತಲೆಕೆಳಗಾಗಿದೆ. ಇಲ್ಲಿ ದಕ್ಷಿಣವು ಮುಂದುವರಿದ ಪ್ರದೇಶವಾಗಿದ್ದರೆ ಉತ್ತರವು ಹಿಂದುಳಿದ ಪ್ರದೇಶವಾಗಿದೆ. ಚರಿತ್ರೆಯ ಅಣಕ ವ್ಯಂಗ್ಯವೆಂದರೆ ಒಂದು ಕಾಲಕ್ಕೆ ಕರ್ನಾಟಕದಲ್ಲಿ ಇಂದು ಯಾವ ಭಾಗವನ್ನು ‘ದುಸ್ಥಿತಿಯ ಕೂಪ’ವೆಂದು ಕರೆಯಲಾಗುತ್ತಿದೆಯೋ ಆ ಪ್ರದೇಶದಲ್ಲಿ ಅಂದರೆ ಚಾಲುಕ್ಯರ ಬಾದಾಮಿ – ಕಲ್ಯಾಣ, ರಾಷ್ಟ್ರಕೂಟರ ಮಾನ್ಯಕೇಟ, ಬಹುಮನಿ ಸುಲ್ತಾನರ ಬಿಜಾಪುರ ಮುಂತಾದವು ವಿಶ್ವದಲ್ಲೇ ಅದ್ಭುತವಾದ ಅಭಿವೃದ್ಧಿಯನ್ನು ಮೆರೆದಿದ್ದವು. ಇಂದು ಆ ಪ್ರದೇಶಗಳು ಬರಗಾಲದಿಂದ, ಹಸಿವಿನಿಂದ, ವಲಸೆಯಿಂದ, ಅನಕ್ಷರತೆ, ಅನಾರೋಗ್ಯ ಗಳಿಂದ ನರಳುತ್ತಿವೆ. ಅವು ಜರ್ಜರಿತವಾಗಿವೆ. ಇದು ಚರಿತ್ರೆಯ ಅಣಕ. ಅಂದು ದಕ್ಷಿಣವು ಹಿಂದುಳಿದಿದ್ದ ಸ್ಥಿತಿಯಲ್ಲಿತ್ತು.

ಪ್ರಸ್ತುತ ಪ್ರಬಂಧದಲ್ಲಿ ಚರ್ಚೆಯನ್ನು ಕೇವಲ ಉತ್ತರ – ದಕ್ಷಿಣವೆಂಬ ಅಖಂಡವಾದಿ ವರ್ಗೀಕರಣಕ್ಕೆ ಪ್ರತಿಯಾಗಿ ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು ಮತ್ತು ಮೈಸೂರು (ದ.ಕ.ಪ್ರ.) ಹಾಗೂ ಬೆಳಗಾವಿ ಮತ್ತು ಗುಲಬರ್ಗಾ ವಿಭಾಗಗಳ (ಉ.ಕ.ಪ್ರ.) ನೆಲೆಯಲ್ಲಿ ಸಮಸ್ಯೆಯನ್ನು ಹಿಡಿದಿಡಲಾಗಿದೆ.

ಉ.ಕ.ಪ್ರ.ವನ್ನು ಇಡಿಯಾಗಿ ಪರಿಭಾವಿಸಿಕೊಳ್ಳುವುದರಿಂದ ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಪಡೆದಿರುವ ‘ಹೈದರಾಬಾದ್ – ಕರ್ನಾಟಕ’ ಪ್ರದೇಶಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ೬೧ ತಾಲ್ಲೂಕುಗಳನ್ನು ಮುಂದುವರಿದ ತಾಲ್ಲೂಕುಗಳೆಂದು ವರ್ಗೀಕರಿಸಲಾಗಿದೆ. ಈ ೬೧ ಮುಂದುವರಿದ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ತಾಲ್ಲೂಕುಗಳು ಸಂಖ್ಯೆ ಕೇವಲ ಮೂರು (ಬಳ್ಳಾರಿ, ಹೊಸಪೇಟೆ ಮತ್ತು ಬೀದರ್). ಬಳ್ಳಾರಿ ಜಿಲ್ಲೆಯನ್ನು ಗುಲಬರ್ಗಾ ವಿಭಾಗದಲ್ಲಿ ಸೇರಿಸಿರುವುದರಿಂದ ಹೈ.ಕ.ಪ್ರದೇಶಕ್ಕೆ ಅನ್ಯಾಯವಾಗಿದೆ. ಮುಂದುವರಿದ ೬೧ ತಾಲ್ಲೂಕುಗಳಲ್ಲಿ ಹೈ.ಕ. ಪ್ರದೇಶ ಮೂರು ತಾಲೂಕುಗಳಲ್ಲಿ ಎರಡು ಬಳ್ಳಾರಿ ಜಿಲ್ಲಿಗೆ ಸೇರಿದ್ದರೆ ಒಂದು ಮಾತ್ರ ಬೀದರ್ ಜಿಲ್ಲೆಗೆ ಸೇರಿದೆ.

ಡಿ.ಎಂ. ನಂಜುಂಡಪ್ಪ ವರದಿ (೨೦೦೨) ಹಾಗೂ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ (೧೭೯೯ ಮತ್ತು ೨೦೦೬) ವರದಿಗಳು ಪ್ರಕಟವಾದಾಗ ಹುಟ್ಟಿಕೊಂಡ ಒಂದು ಪ್ರಮೇಯವು ನಮ್ಮನ್ನು ದಾರಿ ತಪ್ಪಿಸುವಂತಿದೆ. ಉದಾಹರಣೆಗೆ ನಂಜುಂಡಪ್ಪ ವರದಿಯ ಪ್ರಕಾರ ಅಭಿವೃದ್ಧಿ ಹೊಂದದ ತಾಲ್ಲೂಕುಗಳ ೧೧೪. ಇವುಗಳಲ್ಲಿ ದ.ಕ.ಪ್ರ.ದ ಪಾಲು ೫೫ ಮತ್ತು ಉ.ಕ.ಪ್ರ.ದ. ಪಾಲು ೫೯. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉ.ಕ.ಪ್ರ.ದ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸ್ಥಾನವು ಅನೇಕ ದ.ಕ.ಪ್ರ.ದ ಜಿಲ್ಲೆಗಳ ಸ್ಥಾನಕ್ಕಿಂತ ಉತ್ತಮವಾಗಿದೆ. ಈ ಆಧಾರದ ಮೇಲೆ ಹಿಂದುಳಿದಿರುವಿಕೆ ಅಥವಾ ಮುಂದುವರಿದಿರುವಿಕೆಗಳು ಎರಡೂ ಪ್ರದೇಶಕ್ಕೂ ಸಾಮಾನ್ಯವೆಂಬ ತೀರ್ಮಾನಗಳನ್ನು ಮಾಡಲಾಗುತ್ತಿದೆ. ಆದರೆ ಇದು ಸರಿಯಲ್ಲ. ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿನ ಅತ್ಯಂತ ಹಿಂದುಳಿದ ೩೯ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ೨೧ (ಶೇ. ೫೩.೮೫). ಇಡೀ ಉ.ಕ.ಪ್ರ.ವನ್ನು ತೆಗೆದುಕೊಂಡಿದೆ. ೩೯ ರಲ್ಲಿ ಅದರ ಪಾಲು ೨೬ (ಶೇ. ೬೬.೬೬).

ಸಂಚಯಿತ ದುಸ್ಥಿತಿ ಸೂಚ್ಯಂಕವೆಂಬ ಮಾಪನವೊಂದನ್ನು ನಂಜುಂಡಪ್ಪ ವರದಿಯಲ್ಲಿ ರೂಪಿಸಲಾಗಿದೆ. ಅದರ ಪ್ರಕಾರ ಸಂಚಯಿತ ದುಸ್ಥಿತಿಯಲ್ಲಿ ಗುಲಬರ್ಗಾ ವಿಭಾಗದ ಪಾಲು ಶೇ. ೪೦ ಮತ್ತು ಬೆಳಗಾವಿ ವಿಭಾಗದ ಪಾಲು ಶೇ.೨೦. ಒಟ್ಟಾರೆ ಉ.ಕ.ಪ್ರ.ದ ಪಾಲು ಶೇ. ೬೦. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಉ.ಕ.ಪ್ರ.ದ ಪಾಲು ಕೇವಲ ಶೇ. ೪೩ (ಡಿ.ಎಂ. ನಂಜುಮಡಪ್ಪ ಸಮಿತಿಯ ಅಂತಿಮ ವರದಿ, ೨೦೦೨).

ಪ್ರಸ್ತುತ ಪ್ರಬಂಧದಲ್ಲಿ ರಾಜ್ಯದ ಏಳು ಜಿಲ್ಲೆಗಳು ಅತ್ಯಂತ ಹಿಂದುಳಿದಿರುವ ಸ್ಥಿತಿಯಲ್ಲಿರುವುದನ್ನು ಗುರುತಿಸಿದೆ. ಅವುಗಳಾವುವೆಂದರೆ ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳಾದ ಬೀದರ್, ಬಳ್ಳಾರಿ, ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು ಹಾಗೂ ಬೆಳಗಾವಿ ವಿಭಾಗದ ಎರಡು ಜಿಲ್ಲೆಗಳಾದ ಬಾಗಲಕೋಟೆ ಮತ್ತು ಬಿಜಾಪುರ. ಪ್ರಾದೇಶಿಕ ಅಸಮಾನತೆಯೆಂಬುದು ಸದರಿ ಏಳು ಜಿಲ್ಲೆಗಳು ಹಾಗೂ ಉಳಿದ ಕರ್ನಾಟಕಗಳ ನಡುವೆ ಎಂಬುದನ್ನು ಇಲ್ಲಿ ಪ್ರತಿಪಾದಿಸಲು ಪ್ರಯತ್ನಿಸಲಾಗಿದೆ.

ಅಭಿವೃದ್ಧಿ ಅಧ್ಯಯನಕ್ಕೆ ಸಂಬಂಧಿಸಿದ ಸಮಸ್ಯೆಯೊಂದನ್ನು ಇಲ್ಲಿ ಚರ್ಚಿಸುವುದು ಸೂಕ್ತವಾಗಿದೆ. ಅಲ್ಲಿ ಅಭಿವೃದ್ಧಿಯನ್ನು ‘ಸಮಗ್ರ’ – ’ಅಖಂಡ’ ನೆಲೆಯಲ್ಲಿ ಪರಿಭಾವಿಸಿ ಕೊಳ್ಳುವುದು ಕಂಡುಬರುತ್ತದೆ. ಅಲ್ಲಿ ಪ್ರಾದೇಶಿಕ ವಿಭಿನ್ನತೆಗಳಿಗೆ ಸ್ಥಾನ ನೀಡಿಲ್ಲ. ರಾಜಕೀಯ ಭೂಪ್ರದೇಶವನ್ನು ಒಂದು ಘಟಕವಾಗಿ ಪರಿಭಾವಿಸಿಕೊಂಡು ಅಭಿವೃದ್ಧಿಯನ್ನು ಕುರಿತ ಸಂಗತಿಗಳನ್ನು ಚರ್ಚಿಸಲಾಗುತ್ತದೆ. ಆದರೆ ಭಾರತದ ಸಂದರ್ಭದಲ್ಲಿ ಇದ ಉಪಯುಕ್ತವಾದ ಕ್ರಮವಲ್ಲ. ಪ್ರತಿಯೊಂದು ರಾಜ್ಯದೊಳಗಿನ ವಿವಿಧ ಪ್ರಾದೇಶಿಕ ಘಟಕಗಳ ಅಭಿವೃದ್ಧಿ ಸ್ವರೂಪವನ್ನು ಗಮನಿಸಬೇಕಾಗುತ್ತದೆ. ಕರ್ನಾಟಕವನ್ನೇ ತೆಗೆದುಕೊಂಡರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಭಿವೃದ್ಧಿ ಸ್ವರೂಪವು ಬಿಜಾಪುರ ಹಾಗೂ ಗುಲಬರ್ಗಾ ಜಿಲ್ಲೆಗಳ ಅಭಿವೃದ್ಧಿ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ ಮೊದಲ ಗುಂಪಿನ ಎರಡು ಜಿಲ್ಲೆಗಳು ೧೯೫೬ರ ನಂತರ ತೀವ್ರ ಅಭಿವೃದ್ಧಿ – ಪರಿವರ್ತನೆ ಸಾಧಿಸಿಕೊಂಡಿದ್ದರೆ ಎರಡನೆಯ ಗುಂಪಿನ ಜಿಲ್ಲೆಗಳು ಹಿಂದುಳಿದ ಸ್ಥಿತಿಯಲ್ಲಿವೆ. ಈ ಪ್ರಾದೇಶಿಕ ಭಿನ್ನತೆಯ ಅಧ್ಯಯನವು ತುಂಬಾ ಮುಖ್ಯವಾಗಿದೆ. ಏಕೆಂದರೆ ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿಯಿಂದ ಬಿಜಾಪುರ – ಗುಲಬರ್ಗಾ ಜಿಲ್ಲೆಗಳು ಪಾಠ ಕಲಿಯಬಹುದಾಗಿದೆ. ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ಅಭಿವೃದ್ಧಿಯನ್ನು ನಿರ್ವಹಿಸುವ ಸ್ವರೂಪಕ್ಕೂ ಮತ್ತು ಬಿಜಾಪುರ – ಗುಲಬರ್ಗ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ಅಭಿವೃದ್ಧಿಯನ್ನು ನಿರ್ವಹಿಸುತ್ತಿರುವ ಕ್ರಮಕ್ಕೂ ವ್ಯತ್ಯಾಸಗಳಿವೆ. ಅವುಗಳನ್ನು ಗುರುತಿಸಬೇಕು. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಅಧ್ಯಯನಗಳು ಮಹತ್ವವು ಇದರಿಂದ ತಿಳಿಯುತ್ತದೆ.

ಚಾರಿತ್ರಿಕ ನೆಲೆಗಳು

ಡಾ. ಬಿ. ಶೇಷಾದ್ರಿ ಸರಿಯಾಗಿ ಗುರುತಿಸಿರುವಂತೆ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯೆಂಬುದು ಕರ್ನಾಟಕದ ಹುಟ್ಟಿನೊಂದಿಗೆ ೧೯೫೬ ರಿಂದಲೇ ಅಂಟಿಕೊಂಡು ಬಂದ ‘ಬಾಲಗ್ರಹ’ ಪೀಡೆಯಾಗಿದೆ.[3] ವಿವಿಧ ಆಡಳಿತದ ವ್ಯಾಪ್ತಿಯಲ್ಲಿದ್ದ ಪ್ರದೇಶಗಳೆಲ್ಲವನ್ನು ಸೇರಿಸಿ ೧೯೫೬ ರಲ್ಲಿ ಕರ್ನಾಟಕವನ್ನು ರಚಿಸಲಾಯಿತು. ಬಾಂಬೆ ಪ್ರಾಂತದಿಂದ ನಾಲ್ಕು, ಮದರಾಸು ಪ್ರಾಂತದಿಂದ ಎರಡು, ಹೈದರಾಬಾದ್ ನಿಜಾಮ್‌ಪ್ರಾಂತದಿಂದ ಮೂರು, ಮೈಸೂರು ಸಂಸ್ಥಾನದ ಒಂಬತ್ತು ಹಾಗೂ ಕೊಡಗು – ಹೀಗೆ ಹತ್ತೊಂಬತ್ತು ಜಿಲ್ಲೆಗಳನ್ನು ಒಳಗೊಂಡ ಏಕೀಕೃತ ಕರ್ನಾಟಕ ೧೯೫೬ ರಲ್ಲಿ ಹುಟ್ಟಿಕೊಂಡಿತು. ಹೀಗೆ ವಿಲೀನಗೊಂಡ ವಿವಿಧ ಆಡಳಿತ ವ್ಯಾಪ್ತಿಯಲ್ಲಿದ್ದ ಪ್ರದೇಶಗಳ ಅಭಿವೃದ್ಧಿಯ ಮಟ್ಟವು ಬೇರೆ ಬೇರೆಯಾಗಿತ್ತು. ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಮಟ್ಟಗಳಲ್ಲಿದ್ದ ಪ್ರದೇಶಗಳೆಲ್ಲವೂ ಸೇರಿ ಕರ್ನಾಟಕವನ್ನು ರಚಿಸಲಾಯಿತು. ಈ ಬಗೆಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಮಟ್ಟವು ಇಂದಿಗೂ ವಿವಿಧ ನೆಲೆಗಳಲ್ಲಿ ಮುಂದುವರಿದಿದೆ. ಇದನ್ನೇ ನಾವು ಪ್ರಾದೇಶಿಕ ಅಸಮಾನತೆಯೆಂದು ಕರೆದಿದ್ದೇವೆ.

ವಸಾಹತುಶಾಹಿಯ ಅನುಕೂಲಗಳು

ಬಾಂಬೆ ಪ್ರಾಂತದಿಂದ ಬಂದು ಕರ್ನಾಟಕದಲ್ಲಿ ವಿಲೀನಗೊಂಡ ನಾಲ್ಕುಜಿಲ್ಲೆಗಳು ಹಾಗೂ ಮದರಾಸು ಪ್ರಾಂತದಿಂದ ಬಂದು ಕರ್ನಾಟಕ ಸೇರಿದ ಎರಡು ಜಿಲ್ಲೆಗಳು ನೂರಾರು ವರ್ಷಗಳ ವಸಾಹತುಶಾಹಿ ಆಡಳಿತದ ಹಾಗೂ ಅಭಿವೃದ್ಧಿಯ ಅನುಕೂಲಗಳನ್ನು ಅನುಭವಿಸಿದ್ದವು. ವಸಾಹತುಶಾಹಿಯು ಎರಡು ಪ್ರಧಾನ ಪರಿಣಾಮಳನ್ನು ಉಂಟು ಮಾಡಿತು. ಮೊದಲನೆಯದು ಆಡಳಿತ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಅನುಕೂಲಗಳನ್ನು ಅದು ಒದಗಿಸಿತು. ಇದಕ್ಕೆ ಸಮಾನಾಂತರವಾಗಿ ಅದು ಅನೇಕ ವಿನಾಶಕಾರಿ ಪರಿಣಾಮಗಳನ್ನು ಉಂಟು ಮಾಡಿತು. ಎರಡೂ ಕಾರ್ಯಗಳನ್ನು ಅದು ನಡೆಸಿತು.[4] ನಮ್ಮ ಸಂದರ್ಭದಲ್ಲಿ ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಬಿಜಾಪುರ ಹಾಗೂ ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ೧೯ನೆಯ ಶತಮಾನದಲ್ಲಿ ಹಾಗೂ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆ, ರೆವಿನ್ಯೂ ವ್ಯವಸ್ಥೆ, ಸಂಪರ್ಕ, ಪತ್ರಿಕೆಗಳು ಮುಂತಾದವುಗಳಿಗೆ ಸಂಬಂಧಿಸಿದ ಅನುಕೂಲಗಳು ವಸಾಹತುಶಾಹಿಯಿಂದಾಗಿ ಪ್ರಾಪ್ತವಾದವು. ಈ ಪ್ರದೇಶದಲ್ಲಿ ರಾಜಕೀಯ ಶಾಂತಿ ನೆಲೆಸಿತ್ತು. ಜನ ಸಂಘಟನೆ ಅಲ್ಲಿ ಸಾಧ್ಯವಾಯಿತು. ಜನಪರ ಚಳವಳಿಗಳು ಅಲ್ಲಿ ಹುಟ್ಟಿಕೊಂಡವು.

ಮೈಸೂರು ರಾಜಸಂಸ್ಥಾನದಲ್ಲಿ ಪ್ರಗತಿಪರವಾದ ಪ್ರಭುತ್ವ ಆಡಳಿತದಲ್ಲಿತ್ತು. ದೂರದೃಷ್ಟಿಯುಳ್ಳ ದಿವಾನರುಗಳು ಅಲ್ಲಿದ್ದರು. ಈ ಕಾರಣದಿಂದಾಗಿ ಅಲ್ಲಿ ಅಭಿವೃದ್ಧಿಯು ತೀವ್ರವಾಗಿ ಸಂಭವಿಸಿತು. ಕೈಗಾರಿಕೆಗಳನ್ನು ಕಟ್ಟಲಾಯಿತು. ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಬ್ಯಾಂಕುಗಳನ್ನು ಆರಂಭಿಸಲಾಯಿತು. ಜನರ ಭಾಷೆಗೆ ಅಲ್ಲಿ ಮನ್ನಣೆಯಿತ್ತು. ಸರ್ ಎಂ. ವಿಶ್ವೇಶ್ವರಯ್ಯ ಅವರ ದಿವಾನಗಿರಿ ಆಡಳಿತದಲ್ಲಿ ಮೈಸೂರು ಸಂಸ್ಥಾನವು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿಕೊಂಡಿತು. ಸರ್ ಮಿರ್ಜಾ ಇಸ್ಮಾಯಿಲ್‌ಅವರು ಇಂತಹ ಅಭಿವೃದ್ಧಿಪರ ನೀತಿಗಳನ್ನು ತಮ್ಮ ದಿವಾನ್‌ಗಿರಿ ಅವಧಿಯಲ್ಲಿ ಮುಂದುವರಿಸಿದರು. ಇದರಿಂದಾಗಿ ಅದರ ಅಭಿವೃದ್ಧಿ ಮಟ್ಟವು ಸಾಪೇಕ್ಷವಾಗಿ ೧೯೫೬ ರಲ್ಲಿ ಉಳಿದ ಪ್ರದೇಶಗಳಿಗಿಂತ ಉನ್ನತ ಮಟ್ಟದಲ್ಲಿತ್ತು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಮುಂಬೈ ಕರ್ನಾಟಕದ ಬಿಜಾಪುರ – ಬಾಗಲಕೋಟೆ ಪ್ರದೇಶದಲ್ಲಿ ಮರಾಠಿ ಭಾಷೆಯು ಆಡಳಿತದ ಹಾಗೂ ಶಿಕಷಣದ ಭಾಷೆಯಾಗಿ ಬಿಟ್ಟಿತು. ಕನ್ನಡ ಶಾಲೆಗಳು ತೀವ್ರ ಕಡೆಗಣಿಸಲ್ಪಟ್ಟವು. ಈ ಭಾಗದಲ್ಲಿದ್ದ ಜಮಖಂಡಿ ಸಂಸ್ಥಾನ, ಮುಧೋಳ ಸಂಸ್ಥಾನ, ರಾಮದುರ್ಗ ಸಂಸ್ಥಾನ ಮುಂತಾದವು ಮರಾಠಿ ಭಾಷೆಗೆ ಮನ್ನಣೆ ನೀಡಿದವು. ಕನ್ನಡ ಮಾತನಾಡುವ ಜನರ ಬವಣೆಗಳನ್ನು ಅಲ್ಲಿ ಕೇಳುವವರಿರಲಿಲ್ಲ.

ಅದೇ ರೀತಿ ಬೀದರ್, ಗುಲಬರ್ಗ ಹಾಗೂ ರಾಯಚೂರು – ಕೊಪ್ಪಳ ಪ್ರದೇಶದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಿಂದಾಗಿ ಉರ್ದು ಭಾಷೆಯು ಆಡಳಿತದ ಹಾಗೂ ಶಿಕಷಣದ ಭಾಷೆಯಾಗಿತ್ತು. ಅನ್ಯಭಾಷೆಗಳ ದಬ್ಬಾಳಿಕೆಯಿಂದಾಗಿ ಕನ್ನಡಿಗರ ಬದುಕು ಇಲ್ಲಿ ಅನಾಥವಾಗಿ ಬಿಟ್ಟಿತು. ಪ್ರಾದೇಶಿಕ ಅಸಮಾನತೆ ಬಗ್ಗೆ ನಾವು ಮಾತನಾಡುವಾಗ ಇದನ್ನು ಅಗತ್ಯ ಗಮನಿಸಬೇಕಾಗುತ್ತದೆ. (ವಿವರಗಳಿಗೆ ನೋಡಿ: ಬಿಜಾಪುರ ಜಿಲ್ಲಾ ಗ್ಯಾಸೆಟಿಯರ್, ೧೯೯೯).

ಕೊಡಗು ಜಿಲ್ಲೆಯು ನೈಸರ್ಗಿಕವಾಗಿ ಶ್ರೀಮಂತವಾಗಿತ್ತು. ಅದು ಪ್ರತ್ಯೇಕ ರಾಜಕೀಯ ಸ್ಥಾನಮಾನ ಪಡೆದಿತ್ತು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಜಿಲ್ಲೆ ಅದಾಗಿತ್ತು. ಇದರಿಂದಾಗಿ ಅದರ ಅಭಿವೃದ್ಧಿ ಸ್ಥಾನ ಉನ್ನತವಾಗಿತ್ತು.

[1] ವಿಶ್ವಸಂಸ್ಥೆಯ ಪರಿಭಾಷೆಯಲ್ಲಿ ಪ್ರಾದೇಶಿಕ ಅಸಮಾನತೆ, ಮುಂದುವರಿದ ಪ್ರದೇಶ – ಹಿಂದುಳಿದ ಪ್ರದೇಶಗಳ ರಚನೆಯನ್ನು ‘ಉತ್ತರ – ದಕ್ಷಿಣ’ ಕಂದರವೆಂದು ಗುರುತಿಸುವುದು ರೂಢಿಯಲ್ಲಿದೆ. ರಾಜ್‌ಕೃಷ್ಣ ಅವರ ಪ್ರಕಾರ ಇದನ್ನು ಉತ್ತರ – ದಕ್ಷಿಣ ಕಂದರದ ಸಮಸ್ಯೆಯೆಂದು ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ‘ಕೇಂದ್ರ – ಪರಿಧಿ’ಯೆಂದು ಪರಿಭಾವಿಸಿಕೊಳ್ಳುವುದು ಸರಿಯಾದ ಕ್ರಮವಾಗಿದೆ. ಏಕೆಂದರೆ ಅಭಿವೃದ್ಧಿ ಹೊಂದಿದ ಪ್ರದೇಶಗಳೆಲ್ಲವೂ ‘ಕೇಂದ್ರ’ದಲ್ಲಿದ್ದರೆ ಹಿಂದುಳಿದ ಪ್ರದೇಶಗಳು ಪರಿಧಿಯಲ್ಲಿ ನೆಲೆಗೊಂಡಿದ್ದಾವೆ. (ವಿವರಗಳಿಗೆ ನೋಡಿ: ರಾಜ್‌ಕೃಷ್ಣ, ೧೯೦೦, ಪು.೪೩ – ೮೫).

[2] ಪ್ರಾದೇಶಿಕ ವಿಶಿಷ್ಟತೆಯ ಚಳುವಳಿಗಳು ಆರಂಭವಾದುದು ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ಒರಿಯಾ ಭಾಷೆಗಳನ್ನಾಡುವ ಪ್ರದೇಶಗಳನ್ನು ಒಳಗೊಂಡಿದ್ದ ಮದರಾಸು ಪ್ರಾಂತದಲ್ಲಿ ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಮದರಾಸು ಪರಾಂತದಂತೆ ನಿಜಾಮನ ಹೈದರಾಬಾದ್ ಸಂಸ್ಥಾನವೂ ಕೂಡ ಮರಾಠಿ, ಕನ್ನಡ ಮತ್ತು ತೆಲುಗು ಭಾಷೆಗಳನ್ನಾಡುವ ಪ್ರದೇಶಗಳನ್ನು ಒಳಗೊಂಡ ಪ್ರಾಂತವಾಗಿತ್ತು. ಮದರಾಸು ಪ್ರಾಂತದಿಂದ ಆಂಧ್ರ ಪ್ರದೇಶವನ್ನು ೧೯೫೩ ರಲ್ಲಿ ಪ್ರತ್ಯೇಕಗೊಳಿಸಲಾಯಿತು. ರಾಜ್ಯ ಪುನರ್ವಿಂಗಡಣೆಯ ಸಂದರ್ಭದಲ್ಲಿ ಹೈದರಾಬಾದ್ ನಿಜಾಮ ಪ್ರಾಂತದಿಂದ ಮರಾಠಿ ಭಾಷಾ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಕನ್ನಡ ಮಾತನಾಡುವ ಪ್ರದೇಶವನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು. ತೆಲುಗು ಮಾತನಾಡುವ ತೆಲಂಗಾಣ ಪ್ರದೇಶವನ್ನು ಆಂಧ್ರ ರಾಜ್ಯದಲ್ಲಿ ಸೇರಿಸಿ ವಿಶಾಲಾಂಧ್ರ ರಾಜ್ಯವನ್ನು ೧೯೫೬ ರಲ್ಲಿ ರೂಪಿಸಲಾಯಿತು.

ನಿಜಾಮ ಸಂಸ್ಥಾನದಿಂದ ಮಹಾರಾಷ್ಟ್ರ ರಾಜ್ಯಕ್ಕೆ ವರ್ಗಾವಣೆಯಾದ ಮರಾಠವಾಡ ಪ್ರದೇಶವು ಮಹಾರಾಷ್ಟ್ರದಲ್ಲಿ ಇಂದಿಗೂ ಹಿಂದುಳಿದ ಪ್ರದೇಶವಾಗಿದೆ. ನಿಜಾಮ ಪ್ರಾಂತದಿಂದ ಕರ್ನಾಟಕಕ್ಕೆ ವರ್ಗಾವಣೆಯಾದ ಪ್ರದೇಶವು ಆ ರಾಜ್ಯದಲ್ಲಿ ಅದು ಅಲ್ಲಿನ ಉಳಿದೆಲ್ಲ ಪ್ರದೇಶಗಳಿಗಿಂತ ಹಿಂದುಳಿದ ಸ್ಥಿತಿಯಲ್ಲಿದೆ. ಅದೇ ರೀತಿ ವಿಶಾಲಾಂಧ್ರ ಪ್ರದೇಶದಲ್ಲಿ ವಿಲೀನವಾದ ತೆಲಂಗಾಣ ಪ್ರದೇಶವು ಅಲ್ಲಿ ಹಿಂದುಳಿದ ಪ್ರದೇಶವಾಗಿದೆ. ಈ ಮೂರು ರಾಜ್ಯಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯು ಮೂಲತಃ ಚಾರಿತ್ರಿಕವಾದ ಒಂದು ಪರಿಣಾಮವಾಗಿದೆ (ವಿವರಗಳಿಗೆ ನೋಡಿ : ಮುಧೋಳ್‌ಕರ್ ಮತ್ತು ವೋರ ೧೯೮೪ ಮತ್ತು ಸುಬ್ರಮಣ್ಯಮ್‌ ೧೯೮೪, ಕೋದಂಡರಾವ್ ಎಂ., ೨೦೦೭).

[3] ಕರ್ನಾಟಕದ ಹುಟ್ಟಿನಿಂದಲೇ ಅದಕ್ಕೆ ಅಂಟಿಕೊಂಡು ಬಂದ ವಿಕೃತಿ ಪ್ರಾದೇಶಿಕ ಅಸಮಾನತೆ (ನೋಡಿ : ಶೇಷಾದ್ರಿ ಬಿ., ೧೯೯೧, ಮುಧೋಳ್‌ಕರ್ ಮತ್ತು ವೋರ್‌೧೯೮೪, ಸುಬ್ರಮಣ್ಯಮ್‌ ೧೯೮೪).

ಕರ್ನಾಟಕವು ಏಕೀಕರಣಗೊಂಡಾಗ ಅದರ ವಿವಿಧ ಪ್ರದೇಶಗಳ ಅಭಿವೃದ್ಧಿಯ ಸಾಪೇಕ್ಷ ಸ್ಥಿತಿ ಹೀಗಿತ್ತು ಎಂಬುದನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ಕೋಷ್ಟಕ

ಕ್ರ. ಸಂ. ಪ್ರದೇಶಗಳು ತಲಾ ವರಮಾನ ೧೯೬೦೬೧
(ಚಾಲ್ತಿ ಬೆಲೆಗಳು)
ಸ್ಥಾನ

ಸಾಕ್ಷರತೆ ೧೯೫೫೫೬ ಸ್ಥಾನ

೧. ಹಿಂದಿನ ಮೈಸೂರು ಸಂಸ್ಥಾನ (೯ ಜಿಲ್ಲೆಗಳು) ರೂ.೩೦೬ ಶೇ. ೨೦.೬
೨. ಬಾಂಬೆ ಕರ್ನಾಟಕ (೪ ಜಿಲ್ಲೆಗಳು) ರೂ. ೨೯೩ ಶೇ. ೨೨.೩
೩. ಮದರಾಸು ಕರ್ನಾಟಕ (೨ ಜಿಲ್ಲೆಗಳು) ರೂ. ೩೪೧ ಶೇ. ೨೩.೩
೪. ಹೈದರಾಬಾದ್ ಕರ್ನಾಟಕ ಪ್ರದೇಶ (೩ ಜಿಲ್ಲೆಗಳು) ರೂ. ೨೪೯ ಶೇ. ೮.೫
೫. ಕೊಡಗು ಪ್ರಾಂತ ರೂ. ೫೫೮ ಶೇ. ೨೭.೨
೬. ರಾಜ್ಯ ರೂ. ೨೮೯  –  –  –

ಮೂಲ : ಗೌವರ್ನಮೆಂಟ್ ಆಫ್‌ಮೈಸೂರು, ೧೯೭೦, ಪು. ೨೩೯ ಮತ್ತು ೨೬೮

[4] ಕಾರ್ಲ್‌‌ಮಾರ್ಕ್ಸ್ ಪ್ರಕಾರ ಬ್ರಿಟನ್ ದೇಶವು ಭಾರತದಲ್ಲಿ ಎರಡು ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ೧. ವಿನಾಶಾತ್ಮಕವಾದ ಕಾರ್ಯ, ೨. ವಿಧಾಯಕವಾದ ಕಾರ್ಯ. ಪ್ರಾಚೀನ ಏಷ್ಯಾ ಸಮಾಜವನ್ನು ನಾಶ ಮಾಡುವುದು ಮೊದಲ ಕಾರ್ಯವಾದರೆ ಎರಡನೆಯ ಕರ್ತವ್ಯ ಏಷ್ಯಾದಲ್ಲಿ ಪಾಶ್ಚಿಮಾತ್ಯ ಸಮಾಜದ ಲೌಕಿಕ ವ್ಯವಸ್ಥೆಯನ್ನು ಪ್ರತಿಷಾವಿಸುವುದು ಎರಡನೆಯ ಕಾರ್ಯವಾಗಿತ್ತು. (ನೋಡಿ : ಕಾರ್ಲ್‌‌ಮಾರ್ಕ್ಸ್ ಮತ್ತು ಫೆಡ್ರಿಕ್ ಏಂಜೆನ್ಸ್‌, ೧೯೫೯ ಪು. ೮೨).