ಲಿಂಗ ಸಂಬಂಧಿ ಸ್ವರೂಪ

ಅತ್ಯಂತ ಕುತೂಹಲದ ಸಂಗತಿಯೆಂದರೆ ಶಾಲೆ ಬಿಟ್ಟ ಮಕ್ಕಳ ಲಿಂಗ ಸ್ವರೂಪವನ್ನು ಪರಿಶೀಲಿಸಿದಾಗ ಹೆಣ್ಣು ಮಕ್ಕಳ ಪ್ರಮಾಣವು ಗಂಡುಮಕ್ಕಳ ಪ್ರಮಾಣಕ್ಕೆ ಸರಿಸುಮಾರು ಸಮನಾಗಿರುವುದು ಕಂಡುಬರುತ್ತದೆ. ರಾಜ್ಯಮಟ್ಟದಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಗಂಡುಮಕ್ಕಳ ಪ್ರಮಾಣ ಶೇ. ೧೪.೫೯ ಮತ್ತು ಹೆಣ್ಣುಮಕ್ಕಳ ಪ್ರಮಾಣ ಶೇ. ೧೪.೩೪. ಇದೇ ಸ್ಥಿತಿ ಸರಿಸುಮಾರು ಎಲ್ಲ ಜಿಲ್ಲೆಗಳಲ್ಲೂ ಕಂಡುಬರುತ್ತದೆ.

ಪ್ರಚಲಿತದಲ್ಲಿರುವ ಸಂಗತಿಯೆಂದರೆ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಅಧಿಕ ಎಂಬುದಾಗಿದೆ. ಈ ನಂಬಿಕೆ ವ್ಯಾಪಕವಾಗಿ ಹರಡಿದೆ. ಇದು ಎಲ್ಲ ಸಂದರ್ಭದಲ್ಲೂ ನಿಜವಾಗಿರಲು ಸಾಧ್ಯವಿಲ್ಲ. ಇಂದು ಪರಿಸ್ಥಿತಿ ಬದಲಾಗುತ್ತಿದೆ. ಕೋಷ್ಟಕ – ೭ ರಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣವನ್ನು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ನೀಡಲಾಗಿದೆ. ಇಲ್ಲಿ ಹೆಣ್ಣು – ಗಂಡುಗಳ ನಡುವೆ ತೀವ್ರ ಅಂತರಗಳೇನಿಲ್ಲ. ಇದೇ ಮಾತನ್ನು ಪ್ರೌಢ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಮಗೆ ಮಾಹಿತಿ ಇಲ್ಲದಿರುವುದರಿಂದ ಅದನ್ನು ಕುರಿತಂತೆ ಇಲ್ಲಿ ಚರ್ಚಿಸಿಲ್ಲ. ಆದರೆ ಉನ್ನತ ಹಂತಕ್ಕೆ ಸಾಗಿದಂತೆ ಹೆಣ್ಣುಮಕ್ಕಳ ಪ್ರಮಾಣವು ಕಡಿಮೆಯಾಗುವುದನ್ನು ಇನ್ನೊಂದು ರೂಪದಲ್ಲಿ ತೋರಿಸಬಹುದು. ಕೋಷ್ಟಕ – ೯ ರಲ್ಲಿ ೧ನೆಯ ತರಗತಿ, ೭ನೆಯ ತರಗತಿ ಹಾಗೂ ೧೦ನೆಯ ತರಗತಿಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣವನ್ನು ವಿಭಾಗವಾರು ತೋರಿಸಿದೆ.ಲಿಂಗ ಸಂಬಂಧಿ ತಾರತಮ್ಯದ ಸೂಕ್ಷ್ಮ ಎಳೆಗಳನ್ನು ಇಲ್ಲಿ ಗುರುತಿಸಬಹುದಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂರು ಹಂತಗಳಲ್ಲಿನ ದಾಖಲಾತಿಯಲ್ಲಿ ಲಿಂಗ ಸಮಾನತಾ ಸೂಚಿ

ಕೋಷ್ಟಕ೧೩

ವಿಭಾಗಗಳು
ಪ್ರದೇಶ
ಒಂದನೆಯ
ತರಗತಿ
ಏಳನೆಯ
ತರಗತಿ
ಹತ್ತನೆಯ
ತರಗತಿ
ಒಟ್ಟು
(೧೦)
ಬೆಂಗಳೂರು ವಿಭಾಗ ೯೪.೦೭ ೯೫.೦೫ ೯೫.೮೭ ೫೩.೭೫
ಮೈಸೂರು ವಿಭಾಗ ೯೪.೪೮ ೯೩.೭೪ ೧೦೧.೮೯ ೯೪.೬೦
ದ.ಕ. ಪ್ರದೇಶ ೯೪.೨೨ ೯೪.೫೩ ೯೮.೨೪ ೯೪.೦೮
ಬೆಳಗಾವಿ ವಿಭಾಗ ೯೨.೯೨ ೯೦.೪೨ ೭೭.೫೫ ೮೯.೮೭
ಗುಲಬರ್ಗಾ ವಿಭಾಗ ೮೯.೭೬ ೮೨.೪೩ ೭೪.೭೧ ೮೭.೬೮
ಉ.ಕ. ಪ್ರದೇಶ ೯೧.೪೧ ೮೭.೨೮ ೭೬.೫೬ ೮೮.೯೩
ಕರ್ನಾಟಕ ರಾಜ್ಯ ೯೨.೭೯ ೯೧.೩೨ ೮೯.೧೭ ೯೧.೬೫

ಮೂಲ : ಕರ್ನಾಟಕ ಸರ್ಕಾರ, ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿಅಂಶ, ೨೦೦೫
ಕೋಷ್ಟಕ೧೩ಕ್ಕೆ ಸಂಬಂಧಿಸಿದಂತೆ ಕೆಳಕಂಡ ಸಂಗತಿಗಳನ್ನು ಗುರುತಿಸಬಹುದಾಗಿದೆ.

ಅ. ಲಿಂಗ ಸಮಾನತಾ ಸೂಚಿಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಉತ್ತಮವಾಗಿದೆ. ಅಲ್ಲಿ ಸೂಚಿಯು ರಾಜ್ಯ ಸರಾಸರಿಗಿಂತ ಅಧಿಕ ಮಟ್ಟದಲ್ಲಿದೆ.

ಆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಸೂಚಿಯ ಪ್ರಮಾಣವು ಸಾಪೇಕ್ಷವಾಗಿ ಕೆಳಮಟ್ಟದಲ್ಲಿದೆ.

ಇ. ಅತ್ಯಂತ ಕನಿಷ್ಟತಮ ಸೂಚಿಯು (೭೪.೭೧) ಗುಲಬರ್ಗಾ ವಿಭಾಗದಲ್ಲಿದೆ.

ಈ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸೂಚಿಯ ಪ್ರಮಾಣ ಮೂರು ಹಂತಗಳಲ್ಲೂ ಸರಿಸುಮಾರು ಒಂದೇ ಮಟ್ಟದಲ್ಲಿದೆ. ತೀವ್ರ ಏರುಪೇರುಗಳು ಅಲ್ಲಿ ಕಂಡುಬರುವುದಿಲ್ಲ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಒಂದನೆಯ ತರಗತಿ ಮಟ್ಟದಲ್ಲಿ ಸೂಚಿಯು ಅಧಿಕವಾಗಿದ್ದು ೧೦ನೆಯ ತರಗತಿಯಲ್ಲಿ ಅದು ಕಡಿಮೆಯಾಗಿದೆ.

ಪ್ರಾದೇಶಿಕ ಅಸಮಾನತೆಯ ತೀವ್ರತೆಯು ಉತ್ತರ ಕರ್ನಾಟಕ ಭಾಗದಲ್ಲಿ, ಅದರಲ್ಲೂ ಗುಲಬರ್ಗಾ ವಿಭಾಗದಲ್ಲಿ ಮಡುಗಟ್ಟಿಕೊಂಡಿರುವುದನ್ನು ಕೋಷ್ಟಕ – ೧೩ ಸ್ಪಷ್ಟವಾಗಿ ತೋರಿಸುತ್ತದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಲಿಂಗ ಸಮಾನತಾ ಸೂಚಿಯು ಸರಿಸುಮಾರು ಮೂರು ಹಂತದಲ್ಲಿ ಸಮನಾಗಿದೆ. ವಾಸ್ತವವಾಗಿ ಹತ್ತನೆಯ ತರಗತಿಯಲ್ಲಿ ಸೂಚಿಯ ಪ್ರಮಾಣವು ಒಂದನೆಯ ಮತ್ತು ಏಳನೆಯ ತರಗತಿಯಲ್ಲಿರುವುದಕ್ಕಿಂತ ಅಧಿಕವಾಗಿದೆ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಒಂದನೆಯ ತರಗತಿ ಮಟ್ಟದಿಂದ ಹತ್ತನೆಯ ತರಗತಿಗೆ ಸಾಗುವ ಪ್ರಕ್ರಿಯೆಯಲ್ಲಿ ಬಾಲಕಿಯರು ಶಾಲಾ ವಾಹಿನಿಯಿಂದ ದೂರ ಸರಿಯುವ ಪ್ರಮಾಣ ಅಧಿಕವಾಗಿದೆ. ಗುಲಬರ್ಗಾ ವಿಭಾಗದಲ್ಲಿ ಲಿಂಗ ಸಮಾನತಾ ಸೂಚಿ ಒಂದನೆಯ ತರಗತಿಯಲ್ಲಿ ೮೯.೭೬ ರಷ್ಟಿದ್ದರೆ ಏಳನೆಯ ತರಗತಿಯಲ್ಲಿ ಅದು ೮೨.೪೩ ರಷ್ಟಾಗಿದೆ. ಹತ್ತನೆಯ ತರಗತಿಯಲ್ಲಿ ಅದು ೭೪.೭೧ ರಷ್ಟಾಗಿದೆ. ಇದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಈ ಸಂಗತಿಯ ಕಡೆಗೆ ನೀತಿ – ನಿರೂಪಕರು ಹೆಚ್ಚು ಗಮನ ನೀಡುವ ಅಗತ್ಯವಿದೆ.

ಲಿಂಗ ಸಮಾನತೆಯು ಪ್ರಾಥಮಿಕ ಶಾಲೆಯ ಪ್ರವೇಶದ ಹಂತದಲ್ಲಿ ಉತ್ತಮಗೊಂಡಿದೆ. ಅದು ಉನ್ನತ ಹಂತದಲ್ಲೂ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬುದಾರಿಯಾಗಿದೆ.

ಅಧ್ಯಯನದ ತಥ್ಯಗಳು

ಪ್ರಸ್ತುತ ಅಧ್ಯಯನದ ಮೂಲಕ ಕರ್ನಾಟಕದಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕುರಿತಂತೆ ಕೆಲವು ಸೂಕ್ತ ಸಂಗತಿಗಳನ್ನು ಗುರುತಿಸಲಾಗಿದೆ. ಶಿಕ್ಷಣ ನೀತಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ದೃಷ್ಟಿಯಿಂದ ಇವು ಮಹತ್ವದ ತಥ್ಯಗಳಾಗಿವೆ. ಇಲ್ಲಿ ರೂಪಿಸಿರುವ ತಥ್ಯಗಳ ಆಧಾರದ ಮೇಲೆ ಶಿಕ್ಷಣ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗುತ್ತದೆ. ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಮೂಲ ಉದ್ದೇಶವೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಸಾಮಾಜಿಕ ಹಾಗೂ ಲಿಂಗಸಂಬಂಧಿ ಕಂದರಗಳನ್ನು ೨೦೧೦ರೊಳಗೆ ನಿವಾರಿಸುವುದಾಗಿದೆ.

[1] ಈ ಗುರಿಯನ್ನು ಸಂಪೂರ್ಣವಾಗಿ ಸಾಧಿಸುವುದು ಸಾಧ್ಯವಿಲ್ಲವೆಂಬುದು ಸ್ಪಷ್ಟವಾಗಿದೆ. ಆದರೆ ಕಂದರಗಳನ್ನು ನಿವಾರಿಸುವ ದಿಶೆಯಲ್ಲಿ ಕರ್ನಾಟಕವು ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದೆ ಸಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಈ ಗುರಿಯನ್ನು ಈಡೇರಿಸಿ ಕೊಳ್ಳಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಾರ್ಯಕ್ರಮದಲ್ಲಿ ಯಾವ ರೀತಿಯ ಬದಲಾವಣೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಪ್ರಸ್ತುತ ಅಧ್ಯಯನದಲ್ಲಿ ಅಂಕಿ – ಅಂಶಗಳ ಆಧಾರದ ಮೇಲೆ ಮಂಡಿಸಿದೆ. ಪ್ರಸ್ತತ ಅಧ್ಯಯನದಿಂದ ಕಂಡುಕೊಂಡ ಮುಖ್ಯ ತಥ್ಯಗಳನ್ನು ಸಂಗ್ರಹ ರೂಪದಲ್ಲಿ ಇಲ್ಲಿ ನೀಡಲಾಗಿದೆ.

೧. ಸಾಕ್ಷರತೆಗೆ ಸಂಬಂಧಿಸಿದಂತೆ ದಲಿತರು ಮತ್ತು ದಲಿತೇತರರ ನಡುವೆ ಕಂದರವಿದೆ. ಈ ಕಂದರವು ತೀವ್ರಗತಿಯಲ್ಲಿ ಕಡಿಮೆಯಾಗುತ್ತಾ ನಡೆದಿದೆ. ಸಾಕ್ಷರತಾ ಪ್ರಮಾಣವು ಉನ್ನತ ಮಟ್ಟವನ್ನು ತಲುಪಿದಂತೆ ಅದರ ಬೆಳವಣಿಗೆ ಗತಿಯು ಮಂದವಾಗಿ ಬಿಡುತ್ತದೆ. ಈ ದೃಷ್ಟಿಯಿಂದ ಸರ್ಕಾರವು ದಲಿತರ ಸಾಕ್ಷರತಾ ಪ್ರಮಾಣವನ್ನು ಉತ್ತಮಪಡಿಸಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

೨. ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಅಸಮಾನತೆಗಳು ತೀವ್ರವಾಗಿವೆ. ಇದನ್ನು ಎರಡು ಬಗೆಗಳಲ್ಲಿ ಗುರುತಿಸಬೇಕಾಗುತ್ತದೆ.

ಅ. ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ದಲಿತೇತರರೊಳಗೆ ಮತ್ತು ದಲಿತರೊಳಗೆ ಲಿಂಗ ಸಂಬಂಧಿ ಅಂತರಗಳಿವೆ. ದಲಿತರಲ್ಲಿನ ಲಿಂಗ ಸಮಾನತಾ ಸೂಚಿಯ ಪ್ರಮಾಣವು ದಲಿತೇತರದಲ್ಲಿನ ಲಿಂಗ ಸಮಾನತಾ ಸೂಚಿಗಿಂತ ಕೆಳಮಟ್ಟದಲ್ಲಿದೆ.

ಆ. ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡುವೆಯೂ ಸಾಕ್ಷರತೆಗೆ ಸಂಬಂಧಿಸಿದಂತೆ ಅಂತರಗಳಿವೆ. ದಲಿತ ಮಹಿಳೆಯರ ಸಾಕ್ಷರತೆಯು ೨೦೦೧ ರಲ್ಲಿ ಶೇ. ೪೦.೨೩ ರಷ್ಟಿದ್ದರೆ ದಲಿತೇತರ ಮಹಿಳೆಯರ ಸಾಕ್ಷರತೆಯು ಶೇ. ೬೩.೩೯ ರಷ್ಟಿದೆ. ಅಲ್ಲಿ ಅಂತರ ಶೇ. ೨೩.೧೬ ಅಂಶಗಳಷ್ಟಿದೆ. ಮಹಿಳೆ ಮತ್ತು ಪುರುಷರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡವಿನ ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯನ್ನು ನಿವಾರಿಸುವ ಕಡೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ.

೩. ಈ ಅಧ್ಯಯನದಿಂದ ಒಡಮೂಡಿದ ಒಂದು ಮಹತ್ವದ ಒಳನೋಟವೆಂದರೆ ಶಾಲಾ (೧ – ೧೦) ದಾಖಲಾತಿಗೆ ಸಂಬಂಧಿಸಿದ ಪ್ರಾದೇಶಿಕ ಹಂಚಿಕೆಯಲ್ಲಿನ ವಿಶಿಷ್ಟತೆ. ರಾಜ್ಯದ ಜನಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕ ಪ್ರದೇಶವು ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲನ್ನು ೧ – ೧೦ ನೆಯ ತರಗತಿವರೆಗಿನ ದಾಖಲಾತಿಯಲ್ಲಿ ಪಡೆದಿದೆ. ಇದಕ್ಕೆ ಪ್ರತಿಯಾಗಿ ರಾಜ್ಯದ ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಪ್ರದೇಶವು ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಅಧಿಕ ಪಾಲನ್ನು ಮಕ್ಕಳ ದಾಖಲಾತಿಯಲ್ಲಿ ಪಡೆದಿದೆ. ಈ ತಥ್ಯದ ಇಂಗಿತಾರ್ಥವೇನು? ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಒತ್ತಡವನ್ನು ಗುರುತಿಸಬಹುದಾಗಿದೆ. ಏಕೆಂದರೆ ೦ – ೬ ವಯೋಮಾನದ ಮಕ್ಕಳ ಪ್ರಮಾಣವು ದಕ್ಷಿಣ ಕರ್ನಾಟಕ ಪ್ರದೇಶಕ್ಕಿಂತ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಧಿಕವಿದೆ. ಇದು ಇನ್ನೊಂದು ಬಗೆಯಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದ ಒತ್ತಡವನ್ನು ಸೂಚಿಸುತ್ತದೆ.[2] ಆದ್ದರಿಂದ ಸರ್ಕಾರವು ಜನಸಂಖ್ಯೆಯ ಬೆಳವಣಿಗೆಯ ಪ್ರಾದೇಶಿಕ ವಿಶಿಷ್ಟತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಬೇಕಾಗುತ್ತದೆ.

೪. ಶಾಲಾ (೧ – ೧೦) ದಾಖಲಾತಿಯು ಕರ್ನಾಟಕದಲ್ಲಿ ದಲಿತೀಕರಣ ಪ್ರಕ್ರಿಯೆಗೆ ಒಳಗಾಗಿರುವುದನ್ನು ಅಧ್ಯಯನವು ಗುರುತಿಸಿದೆ. ರಾಜ್ಯಮಟ್ಟದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ದಲಿತರ (ಪ.ಜಾ.+ಪ.ಪಂ.) ಪ್ರಮಾಣವು ೨೦೦೧ರಲ್ಲಿ ಶೇ. ೨೨.೯೬ ರಷ್ಟಿದೆ. ಆದರೆ ೧ – ೭ನೆಯ ತರಗತಿವರೆಗಿನ ಒಟ್ಟು ಶಾಲಾ ದಾಖಲಾತಿಯಲ್ಲಿ ದಲಿತ ಮಕ್ಕಳ ಪ್ರಮಾಣವು ಶೇ. ೨೭.೩೯ರಷ್ಟಿದ್ದರೆ, ೮ ರಿಂದ ೧೦ನೆಯ ತರಗತಿಗಳಿಗೆ ಸಂಬಂಧಿಸಿದ ಒಟ್ಟು ದಾಖಲಾತಿಯಲ್ಲಿ ದಲಿತರ ಪ್ರಮಾಣವು ಶೇ. ೨೨.೧೦ ರಷ್ಟಿದೆ. ಒಟ್ಟು ೧ – ೧೦ನೆಯ ತರಗತಿಗಳನ್ನು ಗಣನೆಗೆ ತೆಗೆದುಕೊಂಡರೆ ದಲಿತರ ಪ್ರಮಾಣ ಶೇ. ೨೬.೨೯ ರಷ್ಟಾಗುತ್ತದೆ. ಇದೊಂದು ಕುತೂಹಲದ ಹಾಗೂ ಸ್ವಾಗತಾರ್ಹವಾದ ಸಂಗತಿಯಾಗಿದೆ. ಆದರೆ ಶಾಲಾ ರಚನೆಯಲ್ಲಿ ಉನ್ನತ ಹಂತಕ್ಕೆ ಸಾಗಿದಂತೆ ದಲಿತ ಮಕ್ಕಳ ಪ್ರಮಾಣವು ಕಡಿಮೆಯಾಗುತ್ತಾ ನಡೆಯುವುದನ್ನು ಅಧ್ಯಯನವು ಗುರುತಿಸಿದೆ. ದಲಿತೀಕರಣ ಹಾಗೂ ದಲಿತೀಕರಣದ ಅವರೋಹಣ ಗತಿ ಎರಡನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಪ್ರಾಥಮಿಕ ಶಿಕ್ಷಣ – ಪ್ರೌಢ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಬೇಕಾಗುತ್ತದೆ.

೫. ಲಿಂಗ ಸಮಾನತಾ ಸೂಚಿಯು ರಾಜ್ಯಮಟ್ಟದಲ್ಲಿ ಉತ್ತಮವಾಗಿದೆ. ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲೂ ಇದು ತೃಪ್ತಿಕರವಾಗಿದೆ. ಆದರೆ ರಾಜ್ಯದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮತ್ತು ಮುಖ್ಯವಾಗಿ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಇದರ ಮಟ್ಟವು ತುಂಬಾ ಕಡಿಮೆಯಿದೆ. ಲಿಂಗ ಸಂಬಂಧಿ ಕಂದರವನ್ನು ನಿವಾರಿಸುವ ದಿಶೆಯಲ್ಲಿ ಮೇಲಿನ ಅಂಶವನ್ನು ಗಮನಿಸಬೇಕಾಗುತ್ತದೆ.

೬. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಸಮಸ್ಯೆ ತುಂಬಾ ಮುಖ್ಯವಾದುದು. ಇದಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಅಧ್ಯಯನದಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮುಂಚೂಣಿಗೆ ತರಲಾಗಿದೆ. ರಾಜ್ಯಮಟ್ಟದಲ್ಲಿ ಅದು ಕೇವಲ ಶೇ. ೧೪.೪೭ ರಷ್ಟಿದೆ. ಆದರೆ ಬಹಳ ಮುಖ್ಯವಾದ ಸಂಗತಿಯೆಂದರೆ ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಇದು ಕೆಳಮಟ್ಟದಲ್ಲಿದೆ. ಆದರೆ ಸಮಸ್ಯೆ ಉತ್ತರ ಕರ್ನಾಟಕ ಪ್ರದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ವ್ಯಾಪಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಯು ರಾಜ್ಯದ ಕೆಲವು ತಾಲ್ಲೂಕುಗಳಲ್ಲಿ ತುಂಬಾ ಗಂಭೀರ ಸ್ವರೂಪದಲ್ಲಿದೆ. ಸರ್ಕಾರವು ಸಮಸ್ಯೆ ತೀವ್ರವಾಗಿರುವ ತಾಲ್ಲೂಕುಗಳ ಬಗ್ಗೆ ವಿಶೇಷ ಗಮನಹರಿಸಬೇಕದ ಅಗತ್ಯವಿದೆ.

ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಅಧಿಕವಾಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿ ಹರಡಿದೆ. ಆದರೆ ೧ – ೭ನೆಯ ತರಗತಿಗಳಲ್ಲಿ ಶಾಲೆ ಬಿಟ್ಟ ಮಕ್ಕಳಲ್ಲಿ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳ ನಡುವೆ ತೀವ್ರ ಅಂತರಗಳೇನಿಲ್ಲ. ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಲಿಂಗಸಂಬಂಧಿ ಅಸಮಾನತೆ ತೀವ್ರವಾಗಿರುವುದು ಮಾತ್ರ ಕಂಡುಬರುತ್ತದೆ.

ಒಟ್ಟಂದದಲ್ಲಿ ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಅನೇಕ ಸ್ವಾಗತಾರ್ಹ ಸಂಗತಿಗಳು ಕಂಡುಬರುತ್ತವೆ. ಆದರೆ ಸಾಮಾಜಿಕ ಮತ್ತು ಲಿಂಗ ಸಂಬಂಧಿ ಅಂತರ – ಕಂದರಗಳನ್ನು ನಿವಾರಿಸುವ ದಿಶೆಯಲ್ಲಿ ರಾಜ್ಯವು ಸಾಗಬೇಕಾದ ದಾರಿ ತುಂಬಾ ದೂರವಿದೆ. ಅತ್ಯಂತ ಗಂಭೀರವಾದ ಸಮಸ್ಯೆಯೆಂದರೆ ಅದರ ಪ್ರಾದೇಶಿಕ ಅಸಮಾನತೆಯ ಸ್ವರೂಪ. ರಾಜ್ಯದ ಹಿಂದುಳಿದ ಜಿಲ್ಲೆಗಳಿಂದ ಕೂಡಿರುವ ಹೈದರಾಬಾದ್ – ಕರ್ನಾಟಕ (ಗುಲಬರ್ಗಾ ವಿಭಾಗ) ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಕಾರ್ಯ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇದು ಕೇವಲ ವಿಶೇಷ ನಿರ್ದೇಶನಾಲಯವನ್ನು ತೆರೆದುಬಿಟ್ಟರೆ ಸಾಕಾಗುವುದಿಲ್ಲ ಅಥವಾ ಡಿ.ಎಂ. ನಂಜುಂಡಪ್ಪ ವರದಿ ಕುರಿತಂತೆ ಜಪ ಮಾಡಿದರೆ ಸಾಕಾಗುವುದಿಲ್ಲ. ನಿರ್ದಿಷ್ಟವಾಗಿ ಕಾರ್ಯರೂಪಕ್ಕೆ ಇಳಿಸುವಂತಹ ಕ್ರಮಗಳನ್ನು ಯೋಜಿಸಬೇಕಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಒಟ್ಟಾರೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

ಈ ಅಧ್ಯಯನದಲ್ಲಿ ವಿಶೇಷವಾಗಿ ಗುರುತಿಸಿರುವ ಸಂಗತಿಯೆಂದರೆ ಪ್ರಾಥಮಿಕ ಹಂತದಿಂದ ಪ್ರೌಢಹಂತಕ್ಕೆ ನಡೆಯುವ ಪರಿವರ್ತನೆಯ ಸಂದಿಕಾಲದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ತೀವ್ರ ಕಡಿತ. ಇದನ್ನು ವಿಭಾಗವಾರು ಹಾಗೂ ತರಗತಿವಾರು ಗುರುತಿಸಲಾಗಿದೆ. ವಿಭಾಗವಾರು ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ಗುರುತಿಸಲಾಗಿದೆ. ವಿಭಾಗವಾರು ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ (ಕೋಷ್ಟಕ – ೮) ತೋರಿಸುವಂತೆ ರಾಜ್ಯ ಮಟ್ಟದಲ್ಲಿ ಪರಿವರ್ತನಾ ಸೂಚ್ಯಂಕ ೦.೮೯೯. ಆದರೆ ದ.ಕ. ಪ್ರದೇಶದಲ್ಲಿ ಇದರ ಪ್ರಮಾಣ ಅಧಿಕವಾಗಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅತ್ಯಂತ ಕಡಿಮೆಯಿದೆ. ಎಂಟನೆಯ ಮತ್ತು ಒಂಬತ್ತನೆಯ ತರಗತಿಗಳಲ್ಲಿ ಮಕ್ಕಳು ಶಾಲಾ ಪ್ರಕ್ರಿಯೆಯಿಂದ ಹೊರ ಹೋಗುವುದು ಅಧಿಕವೆಂಬುದನ್ನು ಇಲ್ಲಿ ತೋರಿಸಲಾಗಿದೆ (ಕೋಷ್ಟಕ – ೧೧). ಈ ಸಂಗತಿಯ ಕಡೆಗೆ ಸರ್ವ ಶಿಕ್ಷಣ ಅಭಿಯಾನದ ಪ್ರಭೃತಿಗಳು ಗಮನ ನೀಡಬೇಕು. ರಾಜ್ಯದಲ್ಲಿ ೨೦೦೫ – ೦೬ ರಿಂದ ೨೦೦೬ – ೦೭ರ ಪರಿವರ್ತನಾ ಪ್ರಕ್ರಿಯೆಯಲ್ಲಿ ಒಟ್ಟು ಕಡಿತವಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಉ.ಕ. ಪ್ರದೇಶದ ಪಾಲು ಶೇ. ೮೫.೫೯. ಸಮಸ್ಯೆಯ ಮೂಲ ಎಲ್ಲಿದೆಯೆಂಬುದು ಇದರಿಂದ ಅರ್ಥವಾಗುತ್ತದೆ (ಕೋಷ್ಟಕ – ೧೦). ಇಂತಹ ಸೂಕ್ಷ್ಮ ಸಂಗತಿಗಳ ಕಡೆ ಗಮನ ನೀಡಬೇಕಾದ ಅಗತ್ಯವಿದೆ.

೭. ಈ ಅಧ್ಯಯನದಲ್ಲಿ ಪ್ರಧಾನವಾಗಿ ಕರ್ನಾಟಕದಲ್ಲಿನ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಯನ್ನು ಪ್ರಾದೇಶಿಕ ನೆಲೆಯಿಂದ ಪೃಥಕ್ಕರಿಸಲು ಪ್ರಯತ್ನಿಸಲಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ನೆಲೆಗಳನ್ನು ಪರಿಗಣಿಸದೆ ಶಿಕ್ಷಣದ ಸಾರ್ವತ್ರೀಕರಣವು ಸಾಧ್ಯವಿಲ್ಲ. ಈ ಅಧ್ಯಯನದಲ್ಲಿ ತೋರಿಸಿರುವಂತೆ ದಕ್ಷಿಣ ಕರ್ನಾಟಕ ಪ್ರದೇಶವು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾರ್ವತ್ರೀಕರಣದ ಸನಿಹಕ್ಕೆ ಸಾಗಿಬಿಟ್ಟಿದೆ. ಈಗ ಸಮಸ್ಯೆಯೆಂದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಶಿಕ್ಷಣದ ಸಾರ್ವತ್ರಿಕರಣವನ್ನು ಹೇಗೆ ಸಾಧಿಸಿಕೊಳ್ಳುವುದು ಎಂಬುದಾಗಿದೆ. ರಾಜ್ಯ ಸರ್ಕಾರವು ತನ್ನ ನೀತಿ ನಿರೂಪಣೆಗಳಲ್ಲಿ, ಯೋಜನೆ – ಕಾರ್ಯಕ್ರಮಗಳಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಾದೇಶಿಕತೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವತ್ರೀಕರಣವು ಕೇವಲ ದಕ್ಷಿಣ ಕರ್ನಾಟಕ ಸಂಗತಿಯಾಗಿ ಬಿಡುತ್ತದೆ. ಇದನ್ನು ಸರಿಪಡಿಸುವ ದಿಶೆಯಲ್ಲಿ ಮೂಲಭೂತವಾದ ಬದಲಾವಣೆಯನ್ನು ಸರ್ಕಾರವು ತನ್ನ ಅಭಿವೃದ್ಧಿ ನೀತಿಯಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಸಂಗತಿಯತ್ತ ಗಮನ ಸೆಳೆಯಲು ಪ್ರಸ್ತುತ ಅಧ್ಯಯನ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ

೮. ಈ ಅಧ್ಯಯನದಲ್ಲಿ ಕಂಡುಕೊಂಡ ಮತ್ತೊಂದು ಮಹತ್ವವಾದ ತಥ್ಯವೆಂದರೆ ಲಿಂಗ ಸಮಾನತಾ ಸೂಚಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆ. ಶಾಲಾ ದಾಖಲಾತಿಯ ಕೆಳಹಂತದಲ್ಲಿ ಲಿಂಗ ಸಮಾನತಾ ಸೂಚಿಯು ಉತ್ತಮವಾಗಿರುತ್ತದೆ. ಅದು ಉನ್ನತ ಹಂತಕ್ಕೆ ಸಾಗಿದಂತೆ ಕಡಿಮೆಯಾಗುತ್ತಿರುತ್ತದೆ. ತುಂಬಾ ಕುತೂಹಲಕಾರಿಯಾಗಿದೆ. ಈ ಸಂಗತಿಯು ಪ್ರಾದೇಶಿಕಸಮಾನತೆಯನ್ನು ಸರಿಪಡಿಸುವ ದೃಷ್ಟಿಯಿಂದ ತುಂಬಾ ಮುಖ್ಯವಾದುದಾಗಿದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ದಾಖಲಾತಿಗೆ ಸಂಬಂಧಿಸಿದ ಲಿಂಗ ಸಮಾನತಾ ಸೂಚಿಯು ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಒಂದು ನೆಲೆಯಲ್ಲಿ ಉತ್ತಮವಾಗಿರುವುದು ಕಂಡುಬರುತ್ತದೆ. ಆದರೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ದಾಖಲಾತಿಗೆ ಸಂಬಂಧಿಸಿದ ಲಿಂಗ ಸಮಾನತಾ ಸೂಚಿಯು ಕೆಳಹಂತದಲ್ಲಿ ಉತ್ತಮವಾಗಿದ್ದು ಉನ್ನತ ಹಂತದಲ್ಲಿ ತೀವ್ರ ಕಡಿಮೆಯಾಗಿರುವುದನ್ನು ಕೋಷ್ಟಕ – ೧೩ ರಲ್ಲಿ ತೋರಿಸಲಾಗಿದೆ. ಕೋಷ್ಟಕ – ೮ ಮತ್ತು ಕೋಷ್ಟಕ – ೧೩ ಎರಡೂ ಒಂದೇ ವಿಷಯಕ್ಕೆ ಸಂಬಂಧಿಸಿದ್ದರೂ ಅವುಗಳ ನಡುವಣ ಭಿನ್ನತೆಯನ್ನು ನಾವು ಅಗತ್ಯ ಗುರುತಿಸಿಕೊಳ್ಳಬೇಕು. ಪ್ರಸ್ತುತ ಅಧ್ಯಯನದ ಪ್ರಮುಖ ತಥ್ಯ ಇದಾಗಿದೆ.

ಆಕರಸೂಚಿ

ಅಮರ್ತ್ಯಸೆನ್, ೧೯೯೯, ಕಮಾಡಿಟೀಸ್ ಅಂಡ್ ಕೇಪಬಲಿಟೀಸ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು.೪

ಅರುಣ್‌ಸಿ. ಮೆಹತಾ, ೨೦೦೬, ಎಲಿಮೆಂಟರಿ ಎಜುಕೇಶನ್ ಇನ್ ಇಂಡಿಯಾವೇರ್ ಡು ವಿ ಸ್ಟ್ಯಾಂಡ್?, ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ, ನವದೆಹಲಿ.

ಕರ್ನಾಟಕ ಸರ್ಕಾರ, ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿಅಂಶ ೨೦೦೫, ರಾಜ್ಯ ಯೋಜನಾ ನಿರ್ದೇಶಕ, ಸರ್ವ ಶಿಕ್ಷಣ ಅಭಿಯಾನ, ಬೆಂಗಳೂರು

ಕರ್ನಾಟಕ ಸರ್ಕಾರ, ೨೦೦೬, ಆಯವ್ಯಯ, ೨೦೦೬ – ೦೭ ಮಂಡಿಸಿದವರು ಶ್ರೀ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು

ಕರ್ನಾಟಕ ಸರ್ಕಾರ, ೨೦೦೨, ಸ್ಟೇಟ್ಡೊಮೆಸ್ಟಿಕ್ಪ್ರಾಡಕ್ಟ್ಕರ್ನಾಟಕ; ೧೯೯೩೯೪ ರಿಂದ ೨೦೦೦೨೦೦೧, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು

ಕರ್ನಾಟಕ ಸರ್ಕಾರ, ೨೦೦೨, ಪ್ರಾದೇಶಿಕ ಅಸಮತೋಲನ ನಿವಾರಣಾ ಅಧ್ಯಯನದ ಉನ್ನತಾಧಿಕಾರ ಸಮಿತಿ, ಅಂತಿಮ ವರದಿ, ಪು. ೨೦೧ – ೨೯೬

ಗೇಲ್ ಒಮ್‌ವೆಡ್ಟ್‌, ೧೯೯೯, ‘ವೈ ಎಲಿಮೆಂಟರಿ ಎಜುಕೇಶನ್ಇಸ್ ನಾಟ್ ಪ್ರಯಾರಿಟಿ?’, ಇಲ್ಲಿ ಪ್ರೋಬ್ ತಂಡ, ಪ್ರೋಬ್, ನವದೆಹಲಿ, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ಪು. ೧೩೪

ಗೋಪಾಲ ಗುರು, ೨೦೦೩, ‘ದಲಿತ್ವುಮೆನ್ ಟಾಕ್ ಡಿಫರೆಂಟ್ಲಿಇಲ್ಲಿ ಅನುಪಮಾರಾವ್ (ಸಂ.) ಜೆಂಡರ್ ಆಂಡ್ ಕಾಸ್ಟ್‌, ಕಾಳಿಫಾರ್ ವುಮೆನ್, ನವದೆಹಲಿ, ಪು. ೮೦ – ೮೫

ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್, ೨೦೦೨, ಇಂಡಿಯಾ : ಡೆವಲಪ್ಮೆಂಟ್ ಅಂಡ್ ಪಾರ್ಟಿಸಿಪೇಶನ್‌, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು. ೧೪೩ – ೧೮೬

ಚಂದ್ರಶೇಖರ ಟಿ.ಆರ್., ೨೦೦೩, ಕರ್ನಾಟಕ : ಅಭಿವೃದ್ಧಿಯ ಸಾಮಾಜಿಕ ನೆಲೆಗಳು, ಸಿವಿಜಿ ಪಬ್ಲಿಕೇಶನ್ಸ್, ಬೆಂಗಳೂರು, ಪು. ೨೭ – ೩೪ ಮ್ತು ೪೩ – ೫೬.

ಪ್ರೋಬ್ ತಂಡ ೨೦೦೨, ಪಬ್ಲಿಕ್ರಿಪೋರ್ಟ್ಆನ್ ಬೇಸಿಕ್ ಎಜುಕೇಶನ್ಇನ್ ಇಂಡಿಯಾ, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ

ವಿಮಲಾ ರಾಮಚಂದ್ರನ್ (ಸಂ.), ೨೦೦೪, ಜೆಂಡರ್ ಆಂಡ್ ಸೋಶಿಯಲ್ ಈಕ್ವಿಟಿ ಇನ್ ಪ್ರೈಮರಿ ಎಜುಕೇಶನ್: ಹೈರಾರ್ಕಿಸ್ ಇನ್ ಆಕ್ಸೆಸ್, ಸೇಜ್ ಪಬ್ಲಿಕೆಶನ್‌, ನವದೆಹಲಿ.

ವಿಮಲಾ ರಾಮಚಂದ್ರನ್, ೨೦೦೨, ಎಜುಕೇಶನ್ಅಂಡ್ ಸ್ಟೇಟ್ ಆಫ್ ವುಮನ್, ಇಲ್ಲಿ ಗೋವಿಂದ ಆರ್ (ಸಂ.), ೨೦೦೨, ಇಂಡಿಯಾ ಎಜುಕೇಶನ್ರಿಪೋರ್ಟ್‌, ಪು. ೨೫೧ – ೨೬೪, ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ನವದೆಹಲಿ.

ಸೆನ್ಸಸ್‌ಆಫ್ ಇಂಡಿಯಾ, ೧೯೯೧, ಸಿರೀಸ್ – ೧೧, ಕರ್ನಾಟಕ. ಪಾರ್ಟ್ ಬಿ. ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್ : ಜನರಲ್ ಪಾಪ್ಯುಲೇಶನ್, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್, ಬೆಂಗಳೂರು

ಸೆನ್ಸಸ್ ಆಫ್ ಇಂಡಿಯಾ, ೧೯೯೧, ಸಿರೀಸ್ – ೧೧, ಕರ್ನಾಟಕ. ಪಾರ್ಟ್‌ಬಿ. ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್‌: ಶೆಡೂಲ್ಡ್ ಕಾಸ್ಟ್ ಅಂಡ್ ಶೆಡೂಲ್ಡ್ ಟ್ರೈಬ್ಸ್‌, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್, ಕರ್ನಾಟಕ

ಸೆನ್ಸಸ್ ಆಫ್ ಇಂಡಿಯಾ, ೨೦೦೧, ಸಿರೀಸ್ ೩೦ ಕರ್ನಾಟಕ ಪೇಪರ್ ೨ ಆಫ್‌೨೦೦೧, ಪ್ರಾವಿಶನಲ್ ಪಾಪ್ಯುಲೇಶನ್ ಟೋಟಲ್ಸ್, ರೂರಲ್ಅರ್ಬನ್ ಪಾಪ್ಯುಲೇಶನ್, ಡೈರೆಕ್ಟರೇಟ್ ಆಫ್ ಸೆನ್ಸೆಸ್ ಆಪರೇಶನ್, ಕರ್ನಾಟಕ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಸರ್ವಶಿಕ್ಷಣ ಅಭಿಯಾನ ಮಿಷನ್‌ನ ಉದ್ದೇಶಗಳು ಹೀಗಿವೆ.

ಅ. ಎಲ್ಲ ಮಕ್ಕಳು ೨೦೦೫ರೊಳಗೆ ಶಾಲೆಯಲ್ಲಿ ದಾಖಲಾಗಿರಬೇಕು.

ಆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿನ ಎಲ್ಲ ಲಿಂಗ ಸಂಬಂಧಿ ಹಾಗೂ ಸಾಮಾಜಿಕ ಅಂತರವನ್ನು ೨೦೦೭ರೊಳಗೆ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ ೨೦೧೦ರೊಳಗೆ ಕಡಿಮೆ ಮಾಡುವುದು.

ಇ. ೨೦೧೦ರೊಳಗೆ ಶಾಲೆಯಲ್ಲಿ ಉಳಿಯುವಿಕೆಯನ್ನು ಸಾರ್ವತ್ರಿಕಗೊಳಿಸುವುದು.

ಈ. ತೃಪ್ತಿಕರ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸುವುದು.

(ವಿವರಗಳಿಗೆ ನೋಡಿ: ಕರ್ನಾಟಕ ಸರ್ಕಾರ ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ – ಅಂಶ ೨೦೦೫)

[2] ೨೦೦೧ರ ಜನಗಣತಿ ಪ್ರಕಾರ ೧೯೯೧ – ೨೦೦೧ರ ದಶಕದಲ್ಲಿ ಕರ್ನಾಟಕದಲ್ಲಿ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೧.೭೩. ಆದರೆ ರಾಜ್ಯದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅದರ ಪ್ರಮಾಣ ಶೇ. ೨ ಕ್ಕಿಂತ ಅಧಿಕವಿದೆ. ರಾಜ್ಯದ ೧೮ ಜಿಲ್ಲೆಗಳಲ್ಲಿ ಅದು ರಾಜ್ಯ ಸರಾಸರಿಗಿಂತ ಕಡಿಮೆಯಿದೆ. ಅಂದಮೇಲೆ ಜನಸಂಖ್ಯೆಯ ಬೆಳವಣಿಗೆ ಒತ್ತಡವು ರಾಜ್ಯದ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಅಧಿಕವಿದೆ.