ಹಕ್ಕ-ಬುಕ್ಕರು ವಿಜಯನಗರದ ಮೊಟ್ಟಮೊದಲ ಅರಸರು. ಧರ್ಮ, ಸಂಸ್ಕೃತಿ, ಸಾಹಿತ್ಯ ಲಲಿತಕಲೆಗಳು ಕಷ್ಟಕ್ಕೆ ಸಿಕ್ಕಿದಾಗ ಅವನ್ನು ರಕ್ಷಿಸಿದ, ಧರ್ಮಪ್ರತಿಷ್ಠಾಪನೆ ಮಾಡಿದ ಕೀರ್ತಿ ಹಕ್ಕ-ಬುಕ್ಕರಿಗೆ ಸಲ್ಲುತ್ತದೆ. ಅವರ ನಿಜವಾದ ಹೆಸರು ಹರಿಹರ ಮತ್ತು ಬುಕ್ಕರಾಯ ಎಂದು. ಜನರ ಬಾಯಲ್ಲಿ ಹರಿಹರ ಎಂಬ ಹೆಸರು ಹಕ್ಕ (ಅಥವಾ ಹುಕ್ಕ) ಎಂದಾಗಿ ಹೋಯಿತು. ಒಂದು ಕಡೆ ಶಾಸನದಲ್ಲಿಯೂ ಅದೇ ಹೆಸರು ಉಳಿದುಬಿಟ್ಟಿದೆ.

ವಿಜಯನಗರವನ್ನು ಆಳಿದ ಮೂರು ರಾಜವಂಶಗಳಲ್ಲಿ ಸಂಗಮ ವಂಶವು ಮೊದಲನೆಯದು. ಹರಿಹರ, ಬುಕ್ಕರಾಯರು ಆ ವಂಶದ ಮೊದಲ ಇಬ್ಬರು ಅರಸರು. ವಿಜಯನಗರವನ್ನು ಸ್ಥಾಪಿಸಿದವನು ಹರಿಹರ, ಅದನ್ನು ಸಾಮ್ರಾಜ್ಯವಾಗಿ ವಿಸ್ತರಿಸಿದಾತ ಬುಕ್ಕರಾಯ.

ಹಕ್ಕ-ಬುಕ್ಕರು ಮಾಡಿದ ಕೆಲಸ ಎಷ್ಟು ದೊಡ್ಡದು, ಎಷ್ಟು ಕಷ್ಟವಾದದ್ದು ಎಂದು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ದೇಶದ ಸ್ಥಿತಿ ಆಗ ಹೇಗಿತ್ತು ಎಂಬುದನ್ನು ನೋಡಬೇಕು.

ಪರಕೀಯರ ಆಕ್ರಮಣ

ಈಗ ಸುಮಾರು ಒಂಬೈನೂರು ವರ್ಷಗಳ ಹಿಂದೆ ಹನ್ನೊಂದನೆಯ ಶತಮಾನದಲ್ಲಿ ಭಾರತಕ್ಕೆ ಒಂದು ದೊಡ್ಡ ವಿಪತ್ತು ಬಂದಿತ್ತು. ಹೊರದೇಶದಿಂದ ಬಂದವರ ಮುತ್ತಿಗೆಯನ್ನು ಎದುರಿಸಬೇಕಾಯಿತು.

ಅದಕ್ಕೆ ಮುನ್ನೂರು ವರ್ಷಗಳ ಹಿಂದೆ ಇಸ್ಲಾಂ ಮತ ಅರೇಬಿಯದಲ್ಲಿ ಹುಟ್ಟಿತು. ಬಹು ಬೇಗ ಬೆಳೆಯಿತು. ಈ ಮತಕ್ಕೆ ಸೇರಿದವರು ವಾಯುವ್ಯದ ಕಣಿವೆಯ ಮಾರ್ಗದಿಂದ ಭಾರತವನ್ನು ಪ್ರವೇಶಿಸಿದರು. ಇವರ ಗುರಿ ಇಸ್ಲಾಂ ಮತದ ಪ್ರಸಾರ, ಭಾರತದ ಸಿರಿಸಂಪತ್ತುಗಳ ಅಪಹಾರ ಮತ್ತು ಇಲ್ಲಿಯ ರಾಜ್ಯಗಳನ್ನು ನಾಶಮಾಡಿ ಅವುಗಳ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸುವುದು.

ಈ ಉದ್ದೇಶಗಳನ್ನು ಸಾಧಿಸಲು ಮೊದಲ ಸಾರಿ ಆಕ್ರಮಣ ಮಾಡಿದವನು ಘಜನಿ ಮಹಮದ್, ಅನಂತರ ಆ ಕಾರ್ಯವನ್ನು ಮುಂದುವರಿಸಿದವರು ಮಹಮದ್ ಘೋರಿ ಮತ್ತು ಇತರರು.

ಈ ಆಕ್ರಮಣಕ್ಕೆ ಹನ್ನೊಂದನೆಯ ಶತಮಾನದಲ್ಲಿ ಉತ್ತರ ಭಾರತ ಸಿಕ್ಕಿಕೊಂಡಿತು. ಅದರ ಬಹುಭಾಗ ಮುಸ್ಲಿಮರ ವಶವಾಯಿತು. ಗೆದ್ದ ಮುಸ್ಲಿಮರು ತಮ್ಮ ಮತವನ್ನು ಹರಡತೊಡಗಿದರು. ಹದಿಮೂರನೆಯ ಶತಮಾನದ ಹೊತ್ತಿಗೆ ಅವರ ಕಣ್ಣುಗಳು ದಕ್ಷಿಣಭಾರತದ ಕಡೆ ಹೊರಳಿದವು. ಪಂಡಿತ ಜವಾಹರಲಾಲ್ ನೆಹರೂ ತಮ್ಮ “ದಿ ಡಿಸ್ಕವರಿ ಆಫ್ ಇಂಡಿಯ” (ಭಾರತ ದರ್ಶನ) ದಲ್ಲಿ ಹೇಳುವಂತೆ, “ಈ ದಾಳಿಗಳು ನಿರ್ದಯ ಸೈನ್ಯವಿಜಯಗಳಿಂದ ಇಸ್ಲಾಂ ಮತವನ್ನು ತಂದವು… ಈ ಹೊಸ ರೀತಿ ಜನರ ಮನಸ್ಸಿನಲ್ಲಿ ಬಲವಾದ ಪರಿಣಾಮವನ್ನುಂಟು ಮಾಡಿತು, ಮನಸ್ಸನ್ನು ಕಹಿಯಿಂದ ತುಂಬಿತು.”

ದೆಹಲಿಯ ಸುಲ್ತಾನರು ದಕ್ಷಿಣ ಭಾರತದ ರಾಜ್ಯಗಳಿಗೂ ಮುತ್ತಿಗೆ ಹಾಕಿದರು. ಇವುಗಳಲ್ಲಿ ಹಲವು ಅವರ ಕೈಸೇರಿದುವು. ಇಂತಹ ವಿಪತ್ತಿನ ಕಾಲದಲ್ಲಿಯೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡ ಒಂದು ಧೀರರ ರಾಜ್ಯ ದೋರ ಸಮುದ್ರದ ಹೊಯ್ಸಳ ರಾಜ್ಯ. ತುಂಗಭದ್ರೆಯ ಪ್ರದೇಶದಲ್ಲಿ ಈ ರಾಜ್ಯಕ್ಕೆ ಸಾಮಂತನಾಗಿದ್ದ ಕಮ್ಮಿಟದುರ್ಗದ ಅಧಿಪತಿ ಕಂಪಲರಾಯ. ಈತ ದೆಹಲಿಯ ಸುಲ್ತಾನನನ್ನು ಮತ್ತೆ ಮತ್ತೆ ಎದುರಿಸಿ, ಕಡೆಗೆ ಪ್ರಾಣವನ್ನೆ ತೆತ್ತ ಶೂರ, ಅಭಿಮಾನಿ.

ದಕ್ಷಿಣ ಭಾರತ ಬಹು ಕಠಿಣ ಪರಿಸ್ಥಿತಿಯಲ್ಲಿದ್ದಾಗ ಒಬ್ಬ ಶ್ರೇಷ್ಠ ರಾಜ, ಆದರ್ಶ ರಾಜ ಕಾಣಿಸಿಕೊಂಡ. ಇವನೇ ಹೊಯ್ಸಳ ವಂಶದ ಕಡೆಯ ಅರಸು ವೀರ ಬಲ್ಲಾಳ. ದೇಶ ಧರ್ಮಗಳ ರಕ್ಷಣೆಗಾಗಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿ, ಅದಕ್ಕಾಗಿ ತನ್ನ ರಾಜ್ಯವನ್ನೇ ಇವನು ತ್ಯಜಿಸಿದ. ಆಗ ಹೊಯ್ಸಳರ ಸಾಮಂತನಾಗಿದ್ದ ಸಂಗಮ ಎನ್ನುವವನು ಆಳುತ್ತಿದ್ದ. ಅವನೂ ಅವನ ಮಕ್ಕಳಾದ ಹಕ್ಕ-ಬುಕ್ಕರೂ, ವೀರಬಲ್ಲಾಳನು ಪ್ರಾರಂಭಿಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಭಾಗಿಗಳಾದರು.

ವೀರಬಲ್ಲಾಳನು ಕೈಗೊಂಡ ಕೆಲಸ ತುಂಬ ಕಷ್ಟದಿಂದ ಕೂಡಿತ್ತು. ಶತ್ರುಗಳು ನಾಲ್ಕು ದಿಕ್ಕುಗಳಲ್ಲಿ ಹರಡಿ, ಪ್ರಬಲರಾಗಿದ್ದರು. ರಾಜ್ಯದ ಮುಖ್ಯ ನಗರಗಳಲ್ಲಿ ಅವರ ಸೈನ್ಯದ ಠಾಣ್ಯಗಳಿದ್ದುವು. ಸುಲ್ತಾನನ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರು. ಅವರನ್ನು ದೇಶದಿಂದ ಹೊಡೆದೋಡಿಸಲು ಜನತೆಯಲ್ಲಿ, ಜನನಾಯಕರಲ್ಲಿ ಒಗ್ಗಟ್ಟು ಅಗತ್ಯವಾಗಿತ್ತು. ಜನರು ಒಂದಾಗಿರುವ ಕಾಲದಲ್ಲಿ, ಅನೇಕ ಕಡೆಗಳಲ್ಲಿ ಶತ್ರು ಠಾಣ್ಯಗಳ ಮೇಲೆ ಬಿದ್ದು, ಅವು ಒಂದಕ್ಕೆ ಮತ್ತೊಂದು ಸಹಾಯಕವಾಗದಂತೆ ದುರ್ಬಲಗೊಳಿಸಿ ನಾಶಪಡಿಸಿಬೇಕಾಗಿದ್ದಿತು. ಹಿಂದು ರಾಜರಲ್ಲಿಯ ಒಗ್ಗಟ್ಟಿರಲಿಲ್ಲ. ವೀರಬಲ್ಲಾಳನು ಅವರಲ್ಲಿ ತಮ್ಮ ಧರ್ಮ, ತಮ್ಮ ದೇಶ ಇವುಗಳ ಬಗ್ಗೆ ಅಭಿಮಾನವನ್ನು ಎಚ್ಚರಿಸಿದ. ತಮ್ಮ ಒಳಜಗಳಗಳನ್ನೂ ತಮ್ಮ ಸಣ್ಣಪುಟ್ಟ ಆಸೆಗಳನ್ನೂ ಮರೆತು ಶತ್ರುಗಳನ್ನು ಎದುರಿಸುವಂತೆ ಅವನು ಮಾಡಬೇಕಾಗಿತ್ತು. ವೀರಬಲ್ಲಾಳನು ಬಹಳ ಚಾತುರ್ಯದಿಂದ ನಡೆದುಕೊಂಡನು. ತನ್ನ ಕೈಕೆಳಗಿನ ರಾಜರು ಮತ್ತು ಅಧಿಕಾರಿಗಳನ್ನು ಬಹು ವಿಶ್ವಾಸದಿಂದ ಕಂಡನು. ಇದರಿಂದ ಅವರು ಹೆಚ್ಚು ಕೆಲಸ ಮಾಡಲು, ಹೆಚ್ಚು ಹೊಣೆ ಹೊರಲು ಸಿದ್ಧರಾದರು. ಬೇರೆ ಬೇರೆ ಪ್ರಾಂತಗಳ ನಾಯಕರನ್ನು ಕಂಡು ಮಾತುಕತೆ ನಡೆಸಬೇಕಾಗಿತ್ತು. ಆದರೆ ಹೇಗೆ ಅವರನ್ನು ಕಂಡರೆ ಶತ್ರುಗಳಿಗೆ, ಏನೋ ಪಿತೂರಿ ನಡೆಯುತ್ತಿದೆ ಎಂಬ ಅನುಮಾನ ಬರಬಹುದು. ಆದುದರಿಂದ ತೀರ್ಥಯಾತ್ರೆ ಹೋಗುವೆನೆಂದು ಹೇಳಿ ಸಂಚಾರ ಮಾಡಿದ, ನಾಯಕರನ್ನು ಕಂಡ. ಅವರ ಸ್ವಾತಂತ್ರ್ಯಕ್ಕೆ, ಧರ್ಮಕ್ಕೆ ಬಂದ ವಿಪತ್ತನ್ನು ಅವರಿಗೆ ತಿಳಿಸಿಕೊಟ್ಟ. ಇವನ ಶ್ರಮದ ಫಲವಾಗಿ ಒಗ್ಗಟ್ಟು ಬಂದಿತು, ಅವರೆಲ್ಲ ಶತ್ರುಗಳನ್ನು ಎದುರಿಸಲು ಸಿದ್ಧರಾದರು.

ವೀರ ತಂದೆ-ಮಕ್ಕಳು

ಈ ಹೋರಾಟದಲ್ಲಿ ವೀರಬಲ್ಲಾಳನ ಸಹಾಯಕರಾಗಿ ಹೆಗಲಿಗೆ ಹೆಗಲು ಕೊಟ್ಟು ಸೆಣಸಿದ ಪ್ರಾಂತೀಯ ಅಧಿಕಾರಿಗಳಲ್ಲಿ ವೀರ ಸಂಗಮನೂ, ಆತನ ಮಕ್ಕಳೂ ಪ್ರಸಿದ್ಧರು.

ಹಂಪೆಯ ಸುತ್ತುಮುತ್ತಿನ ತುಂಗಭದ್ರಾ ನದಿ ಪ್ರದೇಶದ ಕೆಲವು ಭಾಗಗಳು ಸಂಗಮನ ಆಡಳಿತದಲ್ಲಿದ್ದುವು. ಸಂಗಮನಿಗೆ ಐದು ಜನ ಮಕ್ಕಳು – ಹರಿಹರ, ಕಂಪಣ, ಬುಕ್ಕರಾಯ, ಮಾರಪ್ಪ ಮತ್ತು ಮುದ್ದಪ್ಪ. ಇವರೆಲ್ಲರೂ ತಂದೆಯಂತೆ ವೀರ ಯೋಧರು, ರಾಷ್ಟ್ರಭಕ್ತರು, ಕರ್ತವ್ಯನಿಷ್ಠರು. ಮೊದಲ ಮೂವರು ಅರ್ಹತೆ, ಸಾಹಸ, ಜನಸೇವಾ ದೃಷ್ಟಿಯಿಂದ ಪ್ರಮುಖರಾಗಿ ವೀರ ಬಲ್ಲಾಳನ ಸಾಮಂತರಲ್ಲಿ ಮುಖ್ಯರಾದರು.

ಈ ಮೂವರಲ್ಲಿ ಹಿರಿಯನಾದ ಹರಿಹರನು ವೀರ ಬಲ್ಲಾಳನ ವಿಶ್ವಾಸಪಾತ್ರನಾಗಿ, ಹೊಯ್ಸಳ ರಾಜ್ಯದ ಉತ್ತರ ಭಾಗದ ಪ್ರಾಂತೀಯ ಮುಖ್ಯಾಧಿಕಾರಿಯಾಗಿ ಮಹಾಮಂಡಲೇಶ್ವರ (ಹಲವರು ಸಾಮಂತರ ಮೇಲಿನ ಮುಖ್ಯಾಧಿಕಾರಿ) ಪದವಿಗೇರಿದನು.

ಸುಲ್ತಾನನಿಗೆ ಸೋಲಿನ ರುಚಿ

ಸುಲ್ತಾನನ ಅಧಿಕಾರಿಗಳು ಕಮ್ಮಿಟದುರ್ಗವನ್ನು ವಶಪಡಿಸಿಕೊಂಡು ಗಡಿಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿ, ಸುತ್ತಮುತ್ತಿನ ಪ್ರದೇಶದ ಜನರಿಗೆ ತೊಂದರೆ ಕೊಡುತ್ತಿದ್ದರು.

ಇದರಿಂದ ರೊಚ್ಚಿಗೆದ್ದ ಜನರು ಸುಲ್ತಾನನ ವಿರುದ್ಧ ದಂಗೆಯೇಳಲು ಸಿದ್ಧರಾಗಿದ್ದರೂ ಪಾಪ, ಅವರಿಗೆ ಸಮರ್ಥರಾದ ನಾಯಕರಿರಲಿಲ್ಲ. ವೀರಬಲ್ಲಾಳನ ಸಲಹೆಯಂತೆ ಹರಿಹರ ಮತ್ತು ಬುಕ್ಕರಾಯರು ಜನತೆಯ ನಾಯಕರಾಗಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಮಹಾತಪಸ್ವಿಗಳಾದ ಶ್ರೀ ವಿದ್ಯಾರಣ್ಯರು ಅವರಿಗೆ ಆಶೀರ್ವಾದ ಮಾಡಿ ಪ್ರೋತ್ಸಾಹ ನೀಡಿದರು. ಹರಿಹರ ಮತ್ತು ಬುಕ್ಕರಾಯರು ಉತ್ಸಾಹೀ ತರುಣ ವೀರರನ್ನು ಒಂದುಗೂಡಿಸಿ ಯುದ್ಧಶಿಕ್ಷಣ ಕೊಟ್ಟರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು. ಬಹು ಸ್ವಲ್ಪ ಕಾಲದಲ್ಲಿ ಶತ್ರುಗಳನ್ನು ಎದುರಿಸಲು ಸಮರ್ಥವಾದ ದೊಡ್ಡ ಸೈನ್ಯವನ್ನೆ ಸಿದ್ಧಮಾಡಿದರು. ಈ ಸೈನ್ಯವು ಸುಲ್ತಾನನ ಶಿಬಿರಗಳ ಮೇಲೆ ದಾಳಿ ನಡೆಸಿತು. ಹಿಂದುಗಳು ಯಾವಾಗಲೂ ಜಗಳವಾಡುತ್ತಿರುತ್ತಾರೆ. ಒಂದಾಗುವುದಿಲ್ಲ ಎಂಬ ವಿಶ್ವಾಸದಿಂದ ಮೈಮರೆತಿದ್ದ ಸುಲ್ತಾನನ ಸೈನ್ಯ ಸೋತು ಓಡಬೇಕಾಯಿತು.

ಈ ಸಮಯದಲ್ಲಿ ವೀರಬಲ್ಲಾಳನು, ಸುಲ್ತಾನನ ಕಡೆಯವರು ಆಕ್ರಮಿಸಿಕೊಂಡಿದ್ದ ಮಧುರೆಯ ರಾಜ್ಯವನ್ನು ಬಿಡಿಸಲು ಹೋಗಿದ್ದನು. ಉತ್ತರದಲ್ಲಿ ತನ್ನ ಕಡೆಯವರಿಗೆ ದೊರೆತ ವಿಜಯದ ಸುದ್ಧಿಯನ್ನು ಕೇಳಿ ಅವನಿಗೆ ಸಂತೋಷವೇ ಸಂತೋಷ. ಆತನ ತುಂಗಭದ್ರಾ ಪ್ರದೇಶಕ್ಕೆ ಹಿಂದಿರುಗಿದ. ಜನನಾಯಕರ ಅಪೇಕ್ಷೆಯಂತೆ ಹರಿಹರನನ್ನು ಮಹಾಮಂಡಲೇಶ್ವರನನ್ನಾಗಿ ಘೋಷಿಸಿದ. ಬುಕ್ಕರಾಯನಿಗೆ ಯುವರಾಜ ಪಟ್ಟ ಕಟ್ಟಿದ. ತುಂಗಭದ್ರಾ ನದಿಯ ದಕ್ಷಿಣ ತೀರದ ಹಂಪೆಯು ಈ ಹೊಸ ರಾಜ್ಯದ ರಾಜಧಾನಿಯಾಯಿತು. ಇದು ಆದದ್ದು ೧೩೩೬ ರಲ್ಲಿ.

ಭವ್ಯ ವಿಜಯನಗರ

ಈ ರಾಜಧಾನಿಗೆ ‘ವಿಜಯನಗರ’ ಎಂದು ಹೆಸರಿಟ್ಟರು, ಸುಲ್ತಾನನ ವಿರುದ್ಧ ಹರಿಹರ ಸಹೋದರರು ಸಾಧಿಸಿದ ವಿಜಯದ ನೆನಪಿಗಾಗಿ, ಮುಂದೆ ಹರಿಹರ ಸಹೋದರರು ಕಟ್ಟಿದ ಸಾಮ್ರಾಜ್ಯಕ್ಕೂ ವಿಜಯನಗರವೆಂದೇ ಹೆಸರಾಯಿತು.

ದೆಹಲಿಯ ಸುಲ್ತಾನನ ವಿರುದ್ಧ, ದಕ್ಷಿಣದ ಸಂಘಟಿತ ನಾಯಕರಿಗೆ ದೊರಕಿದ ಮೊದಲ ವಿಜಯ ಇದು. ಸುಲ್ತಾನನ ಸೈನ್ಯವನ್ನು ದಕ್ಷಿಣ ಭಾರತದಿಂದ ನಿಶ್ಶೇಷವಾಗಿ ಓಡಿಸಲು ಅನಂತರ ಕೆಲವು ವರ್ಷಗಳು ಹಿಡಿಯಿತು. ಆದರೆ ವೀರಬಲ್ಲಾಳನ ಸಹಾಯದಿಂದ ಹರಿಹರ ಸಹೋದರರು ಸ್ಥಾಪಿಸಿದ ವಿಜಯನಗರ ರಾಜ್ಯವು ಹಿಂದು ಧರ್ಮ ಸಂಸ್ಕೃತಿಗಳ ಪುನರುದ್ಧಾರಕ್ಕೆ ನಾಂದಿಯಾಯಿತು. ದೆಹಲಿ ಸುಲ್ತಾನರ ದುರಾಕ್ರಮಣ ಕೊನೆಗೊಂಡು ದಕ್ಷಿಣ ಭಾರತ ಸ್ವತಂತ್ರವಾಯಿತು.

ಧರ್ಮ ಸಂಸ್ಕೃತಿಗಳ ಈ ಮಹಾವಿಜಯಕ್ಕೆ ಕಾರಣರಾದವರು ಹರಿಹರ ಮತ್ತು ಬುಕ್ಕರಾಯ. ಜನತೆಯ ಬಾಯಲ್ಲಿ ಇವರು ಹಕ್ಕ-ಬುಕ್ಕರಾದರು. ಅವರ ತಂದೆ ಸಂಗಮರಸನ ಹೆಸರಿನಿಂದ ಈ ರಾಜವಂಶ ‘ಸಂಗಮ ವಂಶ’ ಎಂದು ಪ್ರಸಿದ್ಧವಾಗಿದೆ.

ಮುಂದೆ ವಿಜಯನಗರವು ಭಾರತದ ಮಹಾ ಸಾಮ್ರಾಜ್ಯವಾಯಿತು. ಪ್ರೌಢದೇವರಾಯ, ಕೃಷ್ಣದೇವರಾಯ, ಸಾಳ್ವನರಸಿಂಹ, ಅಳಿಯ ರಾಮರಾಜ ಇವರಂತಹ ವಿಖ್ಯಾತ ಅರಸರು ವಿಜಯನಗರದ ಸಿಂಹಾಸನಕ್ಕೆ ಹೊಸ ಪ್ರಭೆಯನ್ನು ತಂದರು. ಆದರೂ ಜನತೆ ಹಕ್ಕ-ಬುಕ್ಕರನ್ನು ಮರೆಯಲಿಲ್ಲ. ಇವರು ಕನ್ನಡಿಗರು ಎಂಬುದನ್ನು ಇವರ ಹೆಸರುಗಳೇ ಸಾರುತ್ತವೆ. ಹಿಂದು ಧರ್ಮವನ್ನು ರಕ್ಷಿಸಲು ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬದ್ಧಕಂಕಣರಾದ ವೀರರತ್ನಗಳು ಇವರು.

ತಪಸ್ಸಿನ ರಕ್ಷೆ

ಹರಿಹರ ಮತ್ತು ಬುಕ್ಕರಾಯರ ಭಾಗ್ಯ-ಮಹಾಮಹಿಮರಾಗಿದ್ದ ವಿದ್ಯಾರಣ್ಯರ ಮಾರ್ಗದರ್ಶನ, ರಕ್ಷೆ ಅವರಿಗೆ ದೊರೆತವು. ಸನ್ಯಾಸಿಗಳಾಗುವ ಮೊದಲು ಇವರ ಹೆಸರು ಮಾಧವ. ವೇದಗಳನ್ನೂ ಶಾಸ್ತ್ರಗಳನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದ ಬಹು ದೊಡ್ಡ ವಿದ್ವಾಂಸರು. ಹಕ್ಕ-ಬುಕ್ಕರು ವಿಜಯನಗರವನ್ನು ಸ್ಥಾಪಿಸುವುದಕ್ಕೆ, ಸಾಮ್ರಾಜ್ಯವನ್ನು ಬೆಳೆಸುವುದಕ್ಕೆ ಸ್ಫೂರ್ತಿಯಾಗಿ, ಅವರಿಗೆ ಅಗತ್ಯವಾದ ಧೈರ್ಯ ಹೇಳಿ ಮಾರ್ಗದರ್ಶನ ಮಾಡಿದವರು ವಿದ್ಯಾರಣ್ಯರು. ಮುಂದೆ ಅವರು ಶೃಂಗೇರಿ ಪೀಠದಲ್ಲಿ ಸ್ವಾಮಿಗಳಾದರು.

ಪಾವನ ಹಂಪೆ

ನಮ್ಮ ದೇಶದ ಧಾರ್ಮಿಕ ಸಾಂಸ್ಕೃತಿಕ ಇತಿಹಾಸದಲ್ಲಿ ಕಾಶಿ. ಎಷ್ಟು ಮುಖ್ಯವೋ ಹಂಪೆಯೂ ಅಷ್ಟೇ ಮುಖ್ಯ. ತುಂಗಭದ್ರೆಯ ಉತ್ತರಕ್ಕೆ ಆನೆಗೊಂದಿ, ದಕ್ಷಿಣಕ್ಕೆ ಹಂಪೆ. ಈ ಅವಳಿ ಗ್ರಾಮಗಳು, ಅವುಗಳ ಪರಿಸರ ಪ್ರದೇಶ – ಈ ಪಂಪಾಕ್ಷೇತ್ರವನ್ನು ಕುರಿತು ಹಲವು ಪುರಾಣ ಕಥೆಗಳನ್ನು ಹೇಳುತ್ತಾರೆ.

ಬ್ರಹ್ಮದೇವನ ಪುತ್ರಿ ಪಂಪಾ. ಆಕೆ ತಪಸ್ಸಿನಿಂದ ಶಿವನನ್ನು ಪತಿಯಾಗಿ ಪಡೆದಳು. ಶಿವನು ಪಂಪಾಪತಿಯಾಗಿ, ವಿರೂಪಾಕ್ಷನಾಗಿ ಇಲ್ಲಿ ನೆಲಸಿದ್ದಾನೆ. ಕಾಶಿಯ ವಿಶ್ವೇಶ್ವರನೇ ಹಂಪೆಯ ವಿರೂಪಾಕ್ಷ ಎಂಬುದು ಈ ಪುಣ್ಯ ಕಥೆಗಳಲ್ಲೊಂದು.

ರಾಮಾಯಣ ಕಾಲದಲ್ಲಿ ವಾಲಿ-ಸುಗ್ರೀವರ ರಾಜಧಾನಿ ಕಿಷ್ಕಿಂದಾ ನಗರವು ಆನೆಗೊಂದಿ ಪ್ರದೇಶದಲ್ಲಿ ಇದ್ದಿತಂತೆ. ಆ ನೆನಪನ್ನು ತರುವ ಸೀತಾಸರೋವರ, ರಾಮಪಾದ, ವಾಲಿಭಾಂಡಾರ, ಸುಗ್ರೀವನ ಗುಹೆ ಮತ್ತು ಶಬರಿಯ ಆಶ್ರಮ, ಈ ಹೆಸರಿನ ಸ್ಥಳಗಳು ಈಗಲೂ ಇಲ್ಲಿವೆ. ಈ ಪ್ರದೇಶದ ಬೆಟ್ಟಗುಡ್ಡಗಳನ್ನು ಜನರು ರಾಮಾಯಣದಲ್ಲಿ ಉಲ್ಲೇಖಿಸಿರುವ ಋಷ್ಯಮೂಕ, ಮಾಲ್ಯವಂತ, ಮಾತುಂಗ ಮುಂತಾದ ಹೆಸರುಗಳಿಂದ ಈಗಲೂ ಕರೆಯುತ್ತಾರೆ.

ಇವೆಲ್ಲಕ್ಕೆ ಶಿಖರಪ್ರಾಯವಾದ ಪಂಪಾ ವಿರೂಪಾಕ್ಷ ದೇವಾಲಯವು ಈ ಪ್ರದೇಶದ ಪ್ರಾಚೀನ ಸ್ಮಾರಕಗಳಲ್ಲಿ ಮುಖ್ಯವಾದದ್ದು. ವಿಜಯನಗರವು ಸ್ಥಾಪನೆಯಾಗುವುದಕ್ಕೆ ಎಂಟು ನೂರು ವರ್ಷಗಳ ಮೊದಲು ಅಂದರೆ ನಾಲ್ಕನೆಯ ಶತಮಾನದಲ್ಲಿ ಈ ದೇವಾಲಯದ ಪ್ರತಿಷ್ಠೆ ನಡೆದಿರಬೇಕು.

ಹರಿಹರನು ವಿಜಯನಗರದ ಅರಸನಾಗಿ ಪಟ್ಟಾಭಿಷಿಕ್ತನಾದ

ವೀರ ಹರಿಹರ (ಆಳ್ವಿಕೆ ೧೩೩೬-೧೩೫೬)

ಹೊಸ ರಾಜ್ಯ ವಿಜಯನಗರದ ಸ್ಥಾಪನೆಯಾಯಿತು. ಸಂಗಮನ ಮಕ್ಕಳಲ್ಲಿ ದೊಡ್ಡವನು, ಪರಾಕ್ರಮಿ, ಸಮರ್ಥ ಹರಿಹರನು ರಾಜ್ಯದ ಅರಸನಾದ. ಅವನ ತಮ್ಮ ಬುಕ್ಕರಾಯ ಯುವರಾಜನಾದ.

ಆದರೆ ವೀರಬಲ್ಲಾಳನ ಉದ್ದೇಶ ಸಾಧನೆಗಾಗಿ ಹಕ್ಕ-ಬುಕ್ಕರು ಶೌರ್ಯ ಸಾಹಸಗಳಿಂದ ಮಾಡಬೇಕಾದ ಕಾರ್ಯ ಹಾಗೆಯೇ ಉಳಿದಿತ್ತು. ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ದೆಹಲಿಯ ಸುಲ್ತಾನನ ಸೈನ್ಯ ಇನ್ನೂ ಪ್ರಬಲವಾಗಿತ್ತು.

ಪಟ್ಟಾಭಿಷೇಕ ಮುಗಿದ ಕೆಲವೇ ದಿನಗಳಲ್ಲಿ ವೀರಬಲ್ಲಾಳನು ಮಧುರೆಗೆ ಹಿಂದಿರುಗಿದನು. ಆ ಪ್ರಾಂತದಲ್ಲಿ ಸುಲ್ತಾನನ ಪ್ರಾಂತೀಯ ಅಧಿಕಾರಿಗಳನ್ನು ಹತೋಟಿಯಲ್ಲಿ ಇಡುವವರೇ ಇರಲಿಲ್ಲ. ಇವರು ಸ್ವತಂತ್ರ ರಾಜರಂತೆ ಅಧಿಕಾರ ನಡೆಸುತ್ತಿದ್ದರು. ದಿನ ಬೆಳಗಾದರೆ ಸುಲಿಗೆ, ಲೂಟಿ, ಜನರಿಗೆ ಅನೇಕ ರೀತಿಗಳಲ್ಲಿ ತೊಂದರೆ. ಇಂತಹ ಕೆಟ್ಟ ಕ್ರೂರ ಆಡಳಿತವನ್ನು ಕೊನೆಗಾಣಿಸಲು ಪಣ ತೊಟ್ಟಿದ್ದ ವೀರಬಲ್ಲಾಳು, ಅದಕ್ಕೆ ಅಗತ್ಯವಾದ ಸೈನ್ಯ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದನು.

ರಾಜ್ಯದ ಉತ್ತರ ಭಾಗದಲ್ಲಿ ಇದೇ ರೀತಿಯ ಕಾರ್ಯವನ್ನು ಧೈರ್ಯ ಸಾಹಸಗಳಿಂದ ಹಕ್ಕ-ಬುಕ್ಕರು ಸಾಧಿಸಬೇಕಾಗಿತ್ತು. ತುಂಗಭದ್ರೆಗೆ ಉತ್ತರದ ಕೆಲವು ಕಡೆಗಳಲ್ಲಿ ಮತ್ತು ಆಂಧ್ರಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ಸುಲ್ತಾನನ ಸೈನ್ಯಠಾಣ್ಯಗಳು ಇನ್ನೂ ಬಲಿಷ್ಠವಾಗಿದ್ದವು. ಆ ಠಾಣ್ಯಗಳನ್ನು ನಾಶಗೊಳಿಸಿ ಸುಲ್ತಾನನ ಅಧಿಕಾರಿಗಳನ್ನು ದಕ್ಷಿಣ ಭಾರತದಿಂದ ಓಡಿಸುವುದು ರಾಷ್ಟ್ರವಿಮೋಚನೆಗಾಗಿ ನಡೆಯಬೇಕಾದ ಅತ್ಯಗತ್ಯ ಕಾರ್ಯವೆಂದು ಹಕ್ಕ-ಬುಕ್ಕರು ತಿಳಿದಿದ್ದರು. ಇದಕ್ಕಾಗಿ ದೊಡ್ಡ ಸೈನ್ಯ ಬೇಕಾಗಿತ್ತು. ಜನರ ಸಹಾಯ ಬೇಕಾಗಿತ್ತು. ತುಂಬ ಹಣ ಬೇಕಾಗಿತ್ತು, ಶಸ್ತ್ರಾಸ್ತ್ರಗಳು ಬೇಕಾಗಿದ್ದವು. ಹಕ್ಕ-ಬುಕ್ಕರು ಇವೆಲ್ಲವನ್ನು ಸಂಪಾದಿಸಲು ತೊಡಗಿದರು. ಅಳಿದುಳಿದಿದ್ದ ಹೊಯ್ಸಳ ರಾಜಭಂಡಾರ ಇದಕ್ಕಾಗಿ ಅವರಿಗೆ ಸಾಧ್ಯವಿದ್ದಷ್ಟು ನೆರವು ನೀಡಿತ್ತು.

ಇಂತಹ ನಾಯಕರಿರಬೇಕು

ಜನರ ನಾಯಕನಾಗಿ ರಾಜನಾಗುವವನಿಗೆ ಕೆಲವು ಗುಣಗಳಿರಬೇಕು. ಗಟ್ಟಿಯಾದ ಮನಸ್ಸಿರಬೇಕು. ಎಷ್ಟೇ ಕಷ್ಟಗಳು ಬರಲಿ, ಹಿಡಿದ ಕೆಲಸವನ್ನು ಸಾಧಿಸದೆ ಬಿಡುವುದಿಲ್ಲ ಎಂಬ ಸಂಕಲ್ಪ ಬೇಕು, ಒಂದು ಕೆಲಸ ಮಾಡಿದರೆ ಮುಂದೆ ಅದರಿಂದ ಏನಾಗುತ್ತದೆ ಎಂದು ತಿಳಿಯುವ ಶಕ್ತಿ ಬೇಕು. ಹಿಡಿದ ಕೆಲಸವನ್ನು ಸರಿಯಾಗಿ ಯೋಚಿಸಿ ಮಾಡಬೇಕು. ಏನೇ ಕಷ್ಟ ಬರಲಿ ಗೆಲ್ಲುತ್ತೇನೆ ಎಂಬ ಧೈರ್ಯ ಬೇಕು. ಶತ್ರುಗಳೊಡನೆ ಹೇಗೆ ನಡೆದುಕೊಳ್ಳಬೇಕು, ಇತರ ರಾಜರ ಸ್ನೇಹ ಹೇಗೆ ಸಂಪಾದಿಸಬೇಕು ಎಂಬುದು ತಿಳಿದಿರಬೇಕು. ಈ ಗುಣಗಳು ಹಕ್ಕ-ಬುಕ್ಕರಿಬ್ಬರಲ್ಲಿಯೂ ಇದ್ದುವು. ಕಂಪಣ, ಮಾರಪ್ಪ ಮತ್ತು ಮುದಪ್ಪ, ಈ ಮೂವರು ತಮ್ಮಂದಿರು ಹಕ್ಕ-ಬುಕ್ಕರಲ್ಲಿ ಪೂರ್ಣ ವಿಶ್ವಾಸದಿಂದ ಸಹಕಾರ ನೀಡಲು ಸರ್ವದಾ ಸಿದ್ಧರಾಗಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ಒಂದುಗೂಡಿ ಪರ್ಯಾಲೋಚನೆಯಿಂದ ನಿರ್ಧರಿಸಿಕೊಂಡು ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸುವ ಕರ್ತೃತ್ವ ಶಕ್ತಿಯು ಐವರು ಸಹೋದರರಲ್ಲಿಯೂ ಪೂರ್ಣರೂಪದಿಂದ ಅರಳಿತ್ತು. ಶತ್ರುಗಳನ್ನು ಎದುರಿಸಲು ಶಕ್ತವಾದ ಸುಸಜ್ಜಿತ ಸೈನ್ಯವು ಹಕ್ಕ-ಬುಕ್ಕರ ನೇತೃತ್ವದಲ್ಲಿ ಅತ್ಯಲ್ಪ ಕಾಲದಲ್ಲಿ ಕಾರ್ಯ ತತ್ಪರವಾಯಿತು.

ವೀರ, ಸಮರ್ಥ ಆಡಳಿತಗಾರ

ದೆಹಲಿಯ ಸುಲ್ತಾನರ ಅಧಿಕಾರಿಗಳಿಗೆ ಬುದ್ಧಿ ಕಲಿಸುವ ಪ್ರಯತ್ನ ಸುಲಭವಾಗಿಯೂ ಇರಲಿಲ್ಲ, ಬೇಗನೆ ಮುಗಿಯುವಂತಹದೂ ಆಗಿರಲಿಲ್ಲ. ಹಕ್ಕ-ಬುಕ್ಕರು ಸುಮಾರು ಐದು ವರ್ಷಗಳ ಕಾಲ ಶ್ರಮಿಸಿ ಕೊನೆಗೆ ವಿಜಯಪಡೆದರು. ಶತ್ರುಗಳು ಪರಾಜಿತರಾಗಿ ದಿಕ್ಕು ಕಾಣದೆ ಉತ್ತರಕ್ಕೆ ಓಡಿದರು. ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೆ ವಿಸ್ತೀರ್ಣವಾದ ಪ್ರದೇಶ ಹಕ್ಕ-ಬುಕ್ಕರ ವಶವಾಯಿತು.

ಹರಿಹರನು ಅಧಿರಾಜನಾಗಿ ‘ಪೂರ್ವಪಶ್ಚಿಮ ಸಮುದ್ರಾಧೀಶ್ವರ’ ಎಂಬ ಬಿರುದನ್ನು ಧರಿಸಿದನು. ಹರಿಹರನಿಗೆ ಪ್ರಜೆಗಳ ಹಿತವೇ ಮುಖ್ಯವಾಗಿತ್ತು. ಈ ವಿಸ್ತಾರವಾದ ರಾಜ್ಯವನ್ನು ಮಂಡಲಗಳಾಗಿ ವಿಭಾಗ ಮಾಡಿದ, ದಕ್ಷರಾದ ಮಂಡಲಾಧಿಕಾರಿಗಳನ್ನು ನೇಮಿಸಿದ. ಆಡಳಿತವನ್ನು ವ್ಯವಸ್ಥಿತಗೊಳಿಸುವ ಕಾರ್ಯದಲ್ಲಿ ಕೆಲವು ವರ್ಷಗಳು ಕಳೆದವು. ಈ ಕಾರ್ಯದಲ್ಲಿ ತಮ್ಮಂದಿರು ಹರಿಹರನಿಗೆ ಸಹಾಯಕರಾದರು.

ಹರಿಹರ ಮತ್ತು ಬುಕ್ಕರಾಯರ ಭಾಗ್ಯ-ಮಹಾಮಹಿಮರಾದ ವಿದ್ಯರಣ್ಯರ ಮಾರ್ಗದರ್ಶನ, ರಕ್ಷೆ ಅವರಿಗೆ ದೊರೆತವು

ವೀರಬಲ್ಲಾಳ ಇನ್ನಿಲ್ಲ

ಹೊಯ್ಸಳ ರಾಜ್ಯದ ಉತ್ತರ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ವಿಜಯ ಸಾಧಿಸುತ್ತಿದ್ದಂತೆ ದಕ್ಷಿಣದಿಂದ ದುಃಖದ ವಾರ್ತೆಯೊಂದು ವಿಜಯನಗರವನ್ನು ತಲುಪಿತು. ಮಧುರೆಯನ್ನು ಆಕ್ರಮಿಸಿಕೊಂಡು, ಆ ಪ್ರದೇಶದಲ್ಲಿ ಕ್ರೂರವಾದ ದಬ್ಬಾಳಿಕೆ ನಡೆಸುತ್ತಿದ್ದ ಸುಲ್ತಾನನ ಪ್ರಾಂತೀಯ ಅಧಿಕಾರಿಗಳ ವಿರುದ್ಧ ವೀರಬಲ್ಲಾಳನು ಪ್ರಾರಂಭಿಸಿದ ಹೋರಾಟ ಮುಗಿದಿರಲಿಲ್ಲ. ಅವರ ಆಡಳಿತ ಕೇಂದ್ರವಾದ ಮದುರೆಯು ಇನ್ನೂ ಶತ್ರುಗಳ ವಶದಲ್ಲಿತ್ತು. ಆ ಭದ್ರವಾದ ಕೋಟೆಗೆ ವೀರಬಲ್ಲಾಳನು ಮುತ್ತಿಗೆ ಹಾಕಿದ. ಆದರೆ ಸ್ಥಳೀಯ ಪಾಳೆಯಗಾರರು, ಜನನಾಯಕರು ಸುಲ್ತಾನನ ಅಧಿಕಾರಿಗಳಿಗೆ ಹೆದರಿ ತಟಸ್ಥರಾಗಿದ್ದರು. ಅವರಿಂದ ನಿರೀಕ್ಷಿಸಿದ್ದ ನೆರವು ವೀರಬಲ್ಲಳನಿಗೆ ದೊರಕಲಿಲ್ಲ. ಹಕ್ಕ-ಬುಕ್ಕರು ಉತ್ತರದ ಗಡಿದುರ್ಗಗಳನ್ನು ಬಲಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು; ವೀರಬಲ್ಲಾಳನ ಸಹಾಯಕ್ಕೆ ಹೋಗುವುದಾಗಲಿ, ಸೈನ್ಯವನ್ನು ಕಳುಹಿಸುವುದಾಗಲಿ ಸಾಧ್ಯವಿರಲಿಲ್ಲ.

ಹೋರಾಟ ಈ ಘಟ್ಟದಲ್ಲಿದ್ದಾಗ ಸುಲ್ತಾನನ ಅಧಿಕಾರಿಗಳು ಸಂಧಿಯ ನೆಪದಿಂದ ತಂತ್ರ ಹೂಡಿದರು. ತಮ್ಮ ವಸ್ತುವಾಹನ ಸಿರಿಸಂಪತ್ತುಗಳೊಡನೆ ಸ್ವದೇಶಕ್ಕೆ ಹಿಂದಿರುಗಲು ಅವಕಾಶ ಮಾಡಿಕೊಟ್ಟರೆ ಹೋರಾಟವಿಲ್ಲದೆ ಮಧುರೆಯ ಕೋಟೆಯನ್ನು ಕೊಡುವುದಾಗಿ ಮಾತು ಕೊಟ್ಟರು. ದೂತನನ್ನು ಸಂಧಾನಕ್ಕೆ ಕಳುಹಿಸಿದರು. ಇದನ್ನು ನಂಬಿದ ವೀರಬಲ್ಲಾಳನು ಮುತ್ತಿಗೆಯನ್ನು ತೆಗೆದು ಹಿಂದಿರುಗುತ್ತಿದ್ದಂತೆ, ಸುಲ್ತಾನರ ಸೈನ್ಯ ಹಠತ್ತಾಗಿ ಕೋಟೆಯಿಂದ ಹೊರಬಿದ್ದು ಮೇಲೆರಗಿತು. ಆಗ ನಡೆದ ಅಸಮ ಯುದ್ಧದಲ್ಲಿ ವೀರಬಲ್ಲಾಳನು ಹತನಾದನು. ಆಗ ಆತನ ವಯಸ್ಸು ಎಂಬತ್ತು ವರ್ಷಗಳು.

ವೀರಬಲ್ಲಾಳನು ದುರದೃಷ್ಟಶಾಲಿ. ದೇಶ ಧರ್ಮಗಳ ರಕ್ಷಣೆಗಾಗಿ ಸುಮಾರು ಇಪ್ಪತ್ತು ವರ್ಷಗಳ ದೀರ್ಘಕಾಲ ಆತನು ಹೋರಾಡಿದ, ವಿಜಯನಗರದ ಸ್ಥಾಪನೆಯ ಕಾರ್ಯದಲ್ಲಿ ಆತನು ವಿಶೇಷ ರಾಜಕೀಯ ದೂರ ದೃಷ್ಟಿಯನ್ನು ತೋರಿಸಿದ. ಅವನ ಹಿರಿಮೆಯನ್ನು ಬಹು ಜನ ಮರೆತೇಬಿಟ್ಟಿದ್ದಾರೆ.

ವೀರಬಲ್ಲಾಳನ ಮಗ ವೀರ ವಿರೂಪಾಕ್ಷ. ಇವನಿಗೆ ರಾಜ್ಯದ ಆಡಳಿತವನ್ನು ನಿರ್ವಹಿಸುವ ಶಕ್ತಿ ಸಾಮರ್ಥ್ಯಗಳಿರಲಿಲ್ಲ. ಹೊಯ್ಸಳ ನಾಡಿನ ಸುಖದುಃಖಗಳನ್ನು ನೋಡಿಕೊಳ್ಳುವ ಹೊಣೆ ಹಕ್ಕ-ಬುಕ್ಕರ ಮೇಲೆಯೇ ಬಿದ್ದಿತು. ಕಾಲಕ್ರಮದಲ್ಲಿ ಹೊಯ್ಸಳ ನಾಡು ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನವಾಯಿತು.

ಹೋರಾಟ ನಿಲ್ಲಲಿಲ್ಲ

ವೀರಬಲ್ಲಾಳ ಸತ್ತಮೇಲೆ ಸುಲ್ತಾನನ ಅಧಿಕಾರಿಗಳು ಪುನಃ ಬಲಿಷ್ಠರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರಬಲ್ಲಾಳನ ವಶವಾಗಿದ್ದ ಪ್ರದೇಶಗಳನ್ನು ತಮ್ಮ ವಶಪಡಿಸಿಕೊಂಡರು. ವಿಸ್ತಾರವಾದ ಮಧುರೆಯ ರಾಜ್ಯಕ್ಕೆ ಪುನಃ ಒಡೆಯರಾದರ.

ಈ ರೀತಿ ದಕ್ಷಿಣದಲ್ಲಿ ಅರ್ಧಕ್ಕೆ ನಿಂತ ಸ್ವಾತಂತ್ರ್ಯ ಹೋರಾಟವನ್ನು ವಿಜಯನಗರದ ಅರಸರು ಪುನಃ ಮುಂದುವರಿಸಿದರು. ಆದರೆ ಅವರು ಚಾತುರ್ಯದಿಂದ ಯುದ್ಧನೀತಿಯನ್ನು ಬದಲಾಯಿಸಿದರು. ಮಧುರೆಯನ್ನು ಸುತ್ತುಗಟ್ಟಬೇಕು. ಆಗ ಶತ್ರುಗಳು ಆ ಸ್ಥಳವನ್ನು ಬಿಟ್ಟು ಹೋಗುತ್ತಾರೆ ಎಂದು ತೀರ್ಮಾನಿಸಿದರು. ಪೂರ್ವ ಸಮುದ್ರ ತೀರದಲ್ಲಿ ಕಾಂಚೀಪುರದಿಂದ ರಾಮೇಶ್ವರದವರೆಗೆ ಆಯಕಟ್ಟಿನ ಪ್ರದೇಶಗಳನ್ನು ಹಿಡಿದರು. ಕೆಲವು ವರ್ಷಗಳಲ್ಲಿಯೆ ರಾಮೇಶ್ವರದವರೆಗಿನ ತೀರಪ್ರದೇಶವು ವಿಜಯನಗರದ ವಶವಾಯಿತು. ಸುಲ್ತಾನನ ಹಿಂಸೆಗಳಿಗೆ ಆ ಪ್ರದೇಶಗಳ ಸಾಮಂತರಿಗೂ ಜನನಾಯಕರಿಗೂ ಬೇಸರವಾಗಿತ್ತು. ಈಗ ಅವರೂ ವಿಜಯನಗರದ ಒಡೆತನವನ್ನು ಸಂತೋಷದಿಂದ ಒಪ್ಪಿಕೊಂಡರು. ಹಕ್ಕ-ಬುಕ್ಕರು ದಕ್ಷಿಣದ ದಂಡಯಾತ್ರೆಗೆ ಅಗತ್ಯವಾದ ಸೈನ್ಯ ರಚನೆಯ ಕಾರ್ಯದಲ್ಲಿ ತೊಡಗಿದರು.

ನಾಡು, ಧರ್ಮಗಳ ವೀರ ಯೋಧ, ದಕ್ಷ ಪ್ರಭು

೧೩೩೬ ರಲ್ಲಿ ನವರಾಜ್ಯದ ಸ್ಥಾಪನೆಯೊಡನೆ ಪ್ರಾರಂಭವಾದ ಹರಿಹರನ ಆಳ್ವಿಕೆಯ ೧೩೫೬ ರವರೆಗೆ ನಡೆಯಿತು. ಈ ಅವಧಿಯಲ್ಲಿ ಹೆಚ್ಚು ಕಾಲವನ್ನು ಆತನು ರಾಜ್ಯದ ಆಡಳಿತವನ್ನು ವ್ಯವಸ್ಥಿತಗೊಳಿಸಿ, ಗಡಿದುರ್ಗಗಳನ್ನು ಭದ್ರಪಡಿಸುವುದರಲ್ಲಿ ಕಳೆದನು.

ವಿಜಯನಗರವನ್ನು ಆಳಿದ ರಾಜವಂಶಗಳಲ್ಲಿ ಸಂಗಮವಂಶವು ಮೊದಲನೆಯದು. ಈ ವಂಶದಲ್ಲಿ ಮೊದಲನೆಯ ಪಟ್ಟಾಭಿಷಿಕ್ತ ದೊರೆ ಹರಿಹರ. ಕಾಳಾಮುಖ ಕೃತಿ ಪಂಥದ ಕ್ರಿಯಾಶಕ್ತಿ ಪೀಠದ ಕ್ರಿಯಾಶಕ್ತಿ ಪಂಡಿತನು ಆಡಳಿತ ವ್ಯವಸ್ಥೆಯಲ್ಲಿ ಇವನಿಗೆ ಮಾರ್ಗದರ್ಶನ ಮಾಡಿದ. ವೀರಬಲ್ಲಾಳನು ತೀರಿಹೋದನಂತರ, ಮಠ ಮಂದಿರಗಳಿಗೆ ಸರಿಯಾದ ಸ್ಥಾನ ತಂದುಕೊಡುವುದು ಹರಿಹರನ ಹೊಣೆಯಾಯಿತು. ಹರಿಹರನು ಶ್ರದ್ಧಾಭಕ್ತಿಗಳಿಂದ ಈ ಮಹತ್ಕಾರ್ಯದಲ್ಲಿ ತೊಡಗಿದ. ವೀರಬಲ್ಲಾಳನು ಮಡಿದ ನಾಲ್ಕು ವರ್ಷಗಳ ಅನಂತರ, ತಮ್ಮ ಮುಖ್ಯ ಬಂಧುಗಳು ಮತ್ತು ಅಧಿಕಾರಿಗಳನ್ನು ಕರೆದುಕೊಂಡು ಆ ಪ್ರಾಂತದ ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದ ಶೃಂಗೇರಿಗೆ ಭೇಟಿ ಕೊಟ್ಟನು. ಹಿಂದು ಧರ್ಮವನ್ನು ಪುನರುದ್ಧರಿಸಿ ವ್ಯವಸ್ಥೆಗೊಳಿಸಿದ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಜಗದ್ಗುರು ಪೀಠದಲ್ಲಿ ಆಗ ಭಾರತೀತೀರ್ಥರು ಗುರುಗಳಾಗಿದ್ದರು. ಹರಿಹರನೂ ಅವನ ಸಹೋದರರೂ ಭಕ್ತಿಯಿಂದ ಅವರನ್ನು ಪೂಜಿಸಿದರು. ಜಗದ್ಗುರು ಪೀಠದ ಘನತೆ ಗೌರವಗಳಿಗೆ ತಕ್ಕಂತೆ ಹೊಸ ದಾನದತ್ತಿಗಳನ್ನು ಹಾಕಿಕೊಟ್ಟರು.

ಹರಿಹರ ಸಹೋದರರು ಮಹಾ ಪರಾಕ್ರಮಿಗಳು, ಅಸಮಾನ ಸಾಹಸಿಗಳು. ವೀರಬಲ್ಲಾಳನು ಪ್ರಾರಂಭ ಮಾಡಿದ ಸ್ವಾತಂತ್ರ್ಯ ಹೋರಾಟವನ್ನು ದೇಶಾಭಿಮಾನಿಗಳಾದ ಅವರು ಮುಂದುವರಿಸಿದರು. ಹಿಂದು ಧರ್ಮ ಮತ್ತು ಸಂಸ್ಕೃತಿಗಳು ತೀರ ಸಂಕಟದ ಸ್ಥಿತಿಯಲ್ಲಿದ್ದಾಗ ಅವನ್ನು ಉದ್ಧರಿಸಿದ ಕೀರ್ತಿ ಹಕ್ಕ-ಬುಕ್ಕರು.

೧೩೫೬ ರಲ್ಲಿ ಹರಿಹರನು ಮರಣಹೊಂದಿದ. ಯುವರಾಜ ಬುಕ್ಕರಾಯನು ರಾಜನಾದ.

ಬುಕ್ಕರಾಯ (ಆಳ್ವಿಕೆ ೧೩೫೬-೧೩೭೭)

ಹರಿಹರನು ದೆಹಲಿ ಸುಲ್ತಾನರ ವಿರುದ್ಧ ಹೋರಾಡುವಾಗ ಅವನಿಗೊಂದು ಭುಜವಾಗಿದ್ದ ಬುಕ್ಕರಾಯ, ಹರಿಹರನು ಸಿಂಹಾಸನವನ್ನು ಏರಿದ ಮೇಲೆ, ರಾಜ್ಯದ ಆಡಳಿತದಲ್ಲಿ ಅವನಿಗೊಂದು ಕೈಯಾಗಿದ್ದ. ಈಗ ದೇಶದ ರಕ್ಷಣೆ, ಆಡಳಿತ ಎಲ್ಲ ಹೊಣೆಯನ್ನೂ ಬುಕ್ಕರಾಯನೇ ಹೊರಬೇಕಾಯಿತು. ಎದುರಾದ ಆತಂಕಗಳನ್ನು ನಿವಾರಿಸಿ ಸಾಮ್ರಾಜ್ಯರಥವನ್ನು ಪ್ರಗತಿಪಥದಲ್ಲಿ ನಡೆಸುವ ಹೊಣೆ ಈಗ ಆತನ ಮೇಲೆ ಬಿದ್ದಿತ್ತು. ಈ ಕೆಲಸವನ್ನು ಆತನು ಹೇಗೆ ನಿರ್ವಹಿಸಿದವನೆಂಬುದು, ವಿಜಯನಗರದ ಸ್ಥಾಪನೆಯ ಇತಿಹಾಸದಷ್ಟೇ, ರೋಮಾಂಚನಕಾರಿಯಾದ ವೃತ್ತಾಂತವಾಗುತ್ತದೆ.

ವಿಜಯನಗರದ ಸಾಮ್ರಾಜ್ಯವೇನೋ ಭದ್ರವಾದ ತಳಹದಿಯ ಮೇಲೆ ನಿಂತಿತ್ತು. ಆದರೂ ಶತ್ರುಗಳು ಕೊರೆಯುವ ಹುಳದಂತೆ ತಳಹದಿಯನ್ನು ನಾಶಮಾಡಲು ಸಿದ್ಧವಾಗಿದ್ದರು. ಗಡಿಗಳನ್ನು ಭದ್ರಪಡಿಸಿ ಸಾಮ್ರಾಜ್ಯವನ್ನು ರಕ್ಷಿಸುವುದು ತನ್ನ ಮೊದಲನೆಯ ಕೆಲಸ ಎಂದು ಬುಕ್ಕರಾಯನಿಗೆ ತಿಳಿದಿತ್ತು.

ಬಹುಮನಿಯಿಂದ ಅಪಾಯ

ದೆಹರಿ ಸುಲ್ತಾನನ ಪ್ರಾಂತೀಯ ಅಧಿಕಾರಿಗಳಲ್ಲಿ ಅನೇಕರು ಪರಾಜಿತರಾಗಿ ಉತ್ತರಕ್ಕೆ ಹಿಂದಿರುಗಿದರೂ ಕೆಲವರು ದಕ್ಷಿಣದಲ್ಲಿಯೇ ಉಳಿದುಕೊಂಡು, ಸುಲ್ತಾನನಿಂದ ಬೇರೆಯಾಗಿ ಸ್ವತಂತ್ರ ರಾಜ್ಯಗಳನ್ನು ಕಟ್ಟಲು ಪ್ರಯತ್ನಿಸಿದರು. ಇಂತಹ ಸಾಹಸಿಗಳಲ್ಲಿ ಒಬ್ಬನಾದ ಅಲ್ಲಾಉದೀನ್ ಹಸನ್ ಬಹುಮನಿ ಎಂಬ ಸ್ಥಳದಲ್ಲಿ (ಈಗ ಅದು ಗುಲ್ಬರ್ಗ ಆಗಿದೆ) ೧೩೪೬ ರಲ್ಲಿ ಹೊಸ ರಾಜ್ಯವೊಂದನ್ನು ಸ್ಥಾಪಿಸಿದನು. ಇದು ‘ಬಹುಮನಿ ರಾಜ್ಯ’ ಎಂದೇ ಪ್ರಸಿದ್ಧವಾಯಿತು.

ಬಹುಮನಿ ಅರಸರು ಸಾಹಸಿಗಳು. ಇಡೀ ದಕ್ಷಿಣ ಭಾರತವನ್ನು ಮುಷ್ಟಿಯಲ್ಲಿ ಇಟ್ಟುಕೊಳ್ಳುವ ಆಸೆ ಅವರ ಮನಸ್ಸಿನಲ್ಲಿ ಬೇರೂರಿತ್ತು. ಮಹಮದ್ ಷಹ ಎಂಬುವನು ಬಹುಮನಿಯ ರಾಜನಾದ. ಅವನಿಗಂತೂ ಈ ಆಸೆ ಬಹುಪ್ರಬಲವಾಗಿತ್ತು. ಬುಕ್ಕರಾಯ ಬುದ್ಧಿವಂತ. ಅಪಾಯವನ್ನು ಅರ್ಥಮಾಡಿಕೊಂಡ. ಓರಂಗಲ್ ಎಂಬ ರಾಜ್ಯದ ಜೊತೆಗೆ ಸ್ನೇಹ ಬೆಳೆಸಿದ. ಮಹಮದ್ ಷಹ ಮೂರು ಬಾರಿ ಯುದ್ಧಕ್ಕೆ ಬಂದು, ಮೂರು ಬಾರಿ ಸೋತು ಓಡಿದ. ಕೃಷ್ಣಾ ನದಿಯ ದಕ್ಷಿಣಕ್ಕೆ ಕೃಷ್ಣಾ ತುಂಗಭದ್ರಾ ನದಿಗಳ ಮಧ್ಯಪ್ರದೇಶದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಲು ಬಹುಮನಿ ಅರಸರು ಬಿಡುವಿಲ್ಲದೆ ಹೆಣಗಿದರು.

ಈ ಯುದ್ಧದಿಂದ ಬುಕ್ಕರಾಯನು ಸದಾ ಎಚ್ಚೆತ್ತಿರಬೇಕು ಎಂಬ ಪಾಠ ಕಲಿತ. ತನ್ನ ಸೇನಾಬಲವನ್ನು ಬಹುಮಟ್ಟಿಗೆ ವಿಸ್ತರಿಸಿ, ಸುಸಜ್ಜಿತಗೊಳಿಸಬೇಕು ಎಂದು ಅರಿತುಕೊಂಡನು. ಕೆಲವರು ರಾಜರು ಅವನಿಗೆ ಅಧೀನರಾಗಿದ್ದರು, ಅವ ಕಡಿಮೆ ನಿಷ್ಠರಾಗಿರಲಿಲ್ಲ. ಅವರನ್ನು ಹತೋಟಿಗೆ ತಂದುಕೊಳ್ಳಬೇಕಾಗಿತ್ತು. ದಕ್ಷಿಣದಲ್ಲಿ ವೀರಬಲ್ಲಾಳನ ಮರಣಾನಂತರ ಸುಲ್ತಾನನ ಅಧಿಕಾರಿಗಳು ಮತ್ತೆ ತಲೆ ಎತ್ತುತ್ತಿದ್ದರು, ಅವರನ್ನು ಅಡಗಿಸಬೇಕಾಗಿತ್ತು, ಮಧುರೆಯನ್ನು ಕಾಪಾಡಬೇಕಾಗಿತ್ತು. ಈ ಎಲ್ಲ ಕಾರ್ಯಗಳನ್ನೂ ಏಕಕಾಲದಲ್ಲಿ ಸಾಧಿಸಲು ಬುಕ್ಕರಾಯನು ಯೋಚಿಸಿದು. ದಕ್ಷಿಣ ಭಾರತದಲ್ಲಿ ಹಿಂದೆ ಯಾವಾಗಲೂ ಯಾರೂ ಕಾಣದಿದ್ದ ದೊಡ್ಡ ಸೈನ್ಯವನ್ನು ಕಟ್ಟಲು ಆತನು ನಿಶ್ಚಯಿಸಿದನು.

ಮಧುರಾ ವಿಜಯ

ಸೈನ್ಯ ಸಿದ್ಧತೆ ಮುಗಿದ ಮೇಲೆ ಬುಕ್ಕರಾಯನು ತನ್ನ ಎರಡನೆಯ ಮಗನಾದ ಕಂಪಣವನ್ನು ಮಧುರಾ ವಿಜಯದ ಮಹತ್ಕಾರ್ಯಕ್ಕೆ ನಿಯಮಿಸಿದನು. ಕಂಪಣ ವಯಸ್ಸಿನಲ್ಲಿ ಚಿಕ್ಕವನು, ಆದರೆ ಸಾಹಸಿ, ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವವನು. ಬಾಲ್ಯದಿಂದ ಸೈನ್ಯದೊಡನೆಯೇ ಬೆಳೆದಿದ್ದ ಆತನಿಗೆ ಆಗಿನ ಕಾಲಕ್ಕೆ ಪ್ರಚಾರದಲ್ಲಿದ್ದ ಯುದ್ಧತಂತ್ರ ಚೆನ್ನಾಗಿ ತಿಳಿದಿದ್ದಿತು. ಉತ್ತರದ ಶತ್ರುಗಳನ್ನು ಓಡಿಸುವುದರಲ್ಲಿ ತಂದೆ ಬುಕ್ಕರಾಯನೊಡನೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ. ತಂದೆಯ ಪಕ್ಕದಲ್ಲಿ ಕುಳಿತು ಚಾಕಚಕ್ಯತೆಯಿಂದ ರಾಜಕಾರ್ಯಗಳನ್ನು ನಿರ್ವಹಿಸಿದ್ದ. ಈತ ಶೂರ ಮಾತ್ರವಲ್ಲ, ಬುದ್ಧಿವಂತ. ಯುದ್ಧದಲ್ಲಿ ಸೋತ ಶತ್ರುಗಳನ್ನು ತನ್ನವರಾಗಿ ಮಾಡಿಕೊಂಡು ಅವರನ್ನು ವಿಜಯನಗರದ ಆಡಳಿತಕ್ಕೆ ಅಧೀನರನ್ನಾಗಿ ಮಾಡಿಕೊಳ್ಳುವ ರಾಜಕೀಯ ಚಾತುರ್ಯ, ಔದಾರ್ಯ ಕಂಪಣನಲ್ಲಿದ್ದವು.

ವಿಜಯನಗರದ ಪೂರ್ವಕ್ಕೆ ‘ತೊಂಡೈಮಂಡಲ’ ಎಂಬ ರಾಜ್ಯವಿತ್ತು. ಬಹುಮನಿಯ ಸುಲ್ತಾನರಿಗೂ ಇದರ ಮೇಲೆ ಕಣ್ಣಿತ್ತು. ಕಂಪಣನು ಈ ರಾಜ್ಯವನ್ನು ಗೆದ್ದನು. ಈ ಹೊತ್ತಿಗೆ ಅವನಿಗೆ ತುಂಬ ದುಃಖವನ್ನುಂಟು ಮಾಡುವ ಸುದ್ದಿಬಂದಿತು. ಚಿದಂಬರಂ, ಶ್ರೀರಂಗಂ, ಮಧುರೆ ಮೊದಲಾದವು ಬಹು ಪವಿತ್ರ ಕ್ಷೇತ್ರಗಳು. ಪ್ರತಿದಿನ ಸಾವಿರಾರು ಮಂದಿ ಹಿಂದುಗಳು ಯಾತ್ರೆಗಾಗಿ ಅಲ್ಲಿಗೆ ಬರುತ್ತಿದ್ದರು. ಆದರೆ – ! ಈ ಪುಣ್ಯಕ್ಷೇತ್ರಗಳ ದೇವಸ್ಥಾನಗಳಲ್ಲಿ ಪೂಜೆ ನಿಂತು ಹೋಗಿತ್ತು; ಅಲ್ಲಿ ಮೂಲ ವಿಗ್ರಹಗಳೇ ಇರಲಿಲ್ಲ. ಅವನ್ನು ಕಾಪಾಡಲು ಭಕ್ತರು ಬೇರೆ ಕಡೆಗೆ ಸಾಗಿಸಿದ್ದರು. ಇದಕ್ಕೆಲ್ಲ ಕಾರಣ ಸುಲ್ತಾನನ ಅಧಿಕಾರಿಗಳು. ಕಂಪಣನು ಮಧುರೆಗೆ ಮುತ್ತಿಗೆ ಹಾಕಿದನು. ಸುಲ್ತಾನನ ಕಡೆಯ ಮುಖ್ಯ ಅಧಿಕಾರಿ ಯುದ್ಧದಲ್ಲಿ ಸತ್ತ. ಸುಲ್ತಾನನ ಅಧಿಕಾರಿಗಳ ಕ್ರೂರ ಮುಷ್ಠಿಯಿಂದ ಮಧುರೆಯನ್ನು ಬಿಡಿಸಿದ ಹಾಗಾಯಿತು. ಹೀಗೆಯೇ ಶೂರನಾದ ಕಂಪಣನು ಶ್ರೀರಂಗವನ್ನೂ ಬಿಡುಗಡೆ ಮಾಡಿದ.

ಬಿಡುಗಡೆ ತಂದ ಕಲಿ

ಮಧುರೆಯ ವಿಜಯಾನಂತರ ಕಂಪಣನು ವಿಜಯ ನಗರದ ದಕ್ಷಿಣ ಪ್ರಾಂತಗಳ ರಾಜ್ಯಪಾಲನಾದ. ರಾಮೇಶ್ವರದವರೆಗಿನ ದಕ್ಷಿಣ ಭಾರತದ ವಿಸ್ತಾರವಾದ ಪ್ರದೇಶ ಕಂಪಣನ ಆಳ್ವಿಕೆಗೆ ಒಳಪಟ್ಟಿತ್ತು. ಕಾವೇರೀ ತೀರದ ವಿರಂಚಿಪುರವು ಮರಕತನಗರ ಎಂಬ ಹೆಸರಿನಿಂದ ಕಂಪಣನ ರಾಜಧಾನಿಯಾಗಿತ್ತು. ಈಗಿನ ನಮ್ಮ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳೂ ಕಂಪಣನ ರಾಜ್ಯಕ್ಕೇ ಸೇರಿದ್ದುವು.

 

‘ಒಬ್ಬರ ಧರ್ಮವನ್ನು ಇನ್ನೊಬ್ಬರು ಗೌರವಿಸಬೇಕು’

ಮತ್ತೆ ದೇವಸ್ಥಾನಗಳಲ್ಲಿ ಪೂಜೆ ಪ್ರಾರಂಭವಾಯಿತು. ಜನರು ತಮ್ಮ ನಂಬಿಕೆಯಂತೆ ದೇವರನ್ನು ಪೂಜಿಸುವುದಕ್ಕೆ, ಯಾತ್ರೆ ಹೋಗುವುದಕ್ಕೆ, ಓಡಾಡುವುದಕ್ಕೆ ಸಾಧ್ಯವಾಯಿತು. ಸುಲ್ತಾನರ ಆಳ್ವಿಕೆಯಲ್ಲಿ ಹಿಂದುಗಳಿಗೆ ಗಟ್ಟಿಯಾಗಿ ಉಸಿರಾಡುವ ಧೈರ್ಯವಿರಲಿಲ್ಲ. ಈಗ ಮತ್ತೆ ಅವರೂ ಮನುಷ್ಯರು ಎನ್ನಿಸಿಕೊಂಡು ಸ್ವತಂತ್ರವಾಗಿ ಸಂತೋಷವಾಗಿ ಬದುಕುವಂತೆ ಆಯಿತು. ಯಾವ ಗಳಿಗೆಯಲ್ಲಿ ಏನು ವಿಪತ್ತೋ ಎಂದು ಭಯದಲ್ಲಿ ಬಾಳುತ್ತಿದ್ದವರಿಗೆ ಧೈರ್ಯ ಬಂದಿತು, ರಾಜ್ಯಕ್ಕೆ ಶಾಂತಿ ಬಂದಿತು. ತುಂಗಭದ್ರೆಯ ಉತ್ತರದಲ್ಲಿ ಹರಿಹರ ಮತ್ತು ಬುಕ್ಕರಾಯರು ಮಾಡಿದ ಮಹಾಕಾರ್ಯವನ್ನು ದಕ್ಷಿಣದಲ್ಲಿ ಬುಕ್ಕರಾಯನ ಮಗ ಕಂಪಣ ಮಾಡಿದ.

ಇದ್ದಕ್ಕಿದ್ದಂತೆ ದೀಪ ಆರಿತು

೧೩೭೫ ರಲ್ಲಿ ಬುಕ್ಕರಾಯನಿಗೂ ಅವನ ರಾಜ್ಯಕ್ಕೂ ಸಿಡಿಲೆರಗಿದಂತೆ ಒಂದು ಸಂಕಟ ಎರಗಿತು.

ಶೂರ ಕಂಪಣ ತೀರಿಕೊಂಡ.

ಬುಕ್ಕರಾಯನ ಅನಂತರ ವಿಜಯನಗರದ ಸಿಂಹಾಸನವನ್ನು  ವೀರ ಕಂಪಣ ಅಲಂಕರಿಸಬೇಕಾಗಿತ್ತು. ರಾಜ್ಯವನ್ನು ರಕ್ಷಿಸಬಲ್ಲ ಶೂರ, ಪ್ರಜೆಗಳಿಗೆ ಸಂತೋಷ ಕೊಡಬಲ್ಲ ಹಿತೈಷಿ ಅವನು. ಅಂತಹ ರತ್ನವನ್ನು ಕಳೆದುಕೊಂಡದ್ದು ಬುಕ್ಕರಾಯನ ಮತ್ತು ವಿಜಯನಗರದ ದುರದೃಷ್ಟ.

ಕಂಪಣನ ಹೆಂಡತು ಗಂಗಾದೇವಿ ಎನ್ನುವವಳು, ‘ಮಧುರಾ ವಿಜಯಂ’ ಅಥವಾ ‘ವೀರ ಕಂಪಣರಾಯ ಚರಿತಂ’ ಎಂಬ ಕಾವ್ಯವನ್ನು ಸಂಸ್ಕೃತದಲ್ಲಿ ಬರೆದಿದ್ದಾಳೆ. ಇದರಲ್ಲಿ ಕಂಪಣನ ಶೌರ್ಯ ಬೆಳಗುತ್ತದೆ. ವಿಧರ್ಮೀಯರ ಹಿಂಸೆ ಅತ್ಯಾಚಾರಗಳಿಂದ ದೇಶ ಧರ್ಮ ಸಂಸ್ಕೃತಿಗಳು ಎಂತಹ ದುಸ್ಥಿತಿಯಲ್ಲಿದ್ದುವು ಎನ್ನುವುದನ್ನು ಮನಸ್ಸು ಕರಗುವ ಹಾಗೆ ವರ್ಣಿಸಿದೆ. ಕಾವ್ಯದುದ್ದಕ್ಕೂ ದೇಶಭಕ್ತಿ ಜೀವನಾಡಿಯಂತೆ ಮಿಡುಕುತ್ತದೆ.

ಶಾಂತಿ ಸಾಧನೆಗಳು-ಮತ ಧರ್ಮಗಳ ಸಮಾನತೆ

ಯುದ್ಧರಂಗದಂತೆ ಶಾಂತಿರಂಗದಲ್ಲಿಯೂ ಬುಕ್ಕ ರಾಯನು ಚಿರಕಾಲ ಉಳಿಯುವ ಮಹತ್ವದ ವಿಜಯಗಳನ್ನು ಸಾಧಿಸಿದ್ದಾನೆ. ಆತನ ಆಳ್ವಿಕೆಯಲ್ಲಿ ತುಂಗಭದ್ರೆಯಿಂದ ದಕ್ಷಿಣದಲ್ಲಿ ರಾಮೇಶ್ವರದವರೆಗೆ ಶಾಂತಿ ಸುಭಿಕ್ಷಗಳು ನೆಲಸಿದವು. ವಿಜಯನಗರ ಸಾಮ್ರಾಜ್ಯ ವಿಸ್ತಾರವಾಗಿ ಬೆಳೆಯಿತು.

ಒಂದು ಬಾರಿ ಬುಕ್ಕರಾಯನ ರಾಜ್ಯದಲ್ಲಿಯೇ ಎರಡು ಪಂಗಡಗಳವರಿಗೆ ಜಗಳವಾಯಿತು.

ಜೈನರ ಸಂಖ್ಯೆ ಕಡಿಮೆ. ಶ್ರೀವೈಷ್ಣವರ ಸಂಖ್ಯೆ ಹೆಚ್ಚು. ಈ ಎರಡು ಪಂಗಡಗಳವರ ನಡುವೆ ಜಗಳ ಪ್ರಾರಂಭವಾಯಿತು. ಜಗಳ ಬೆಳೆಯುತ್ತ ಹೋಯಿತು. ವಿಷಯ ಬುಕ್ಕರಾಯನಿಗೆ ತಿಳಿಯಿತು.

ಆತ ಎರಡು ಪಂಗಡಗಳ ಮುಖಂಡರಿಗು ಹೇಳಿಕಳುಹಿಸಿದ. ಅವರಿಗೆ ಬುದ್ಧಿ ಹೇಳಿದ:

ಜೈನ ಧರ್ಮವೂ ಶ್ರೇಷ್ಠ, ಶ್ರೀವೈಷ್ಣವ ಧರ್ಮವೂ ಶ್ರೇಷ್ಠ. ಒಬ್ಬರ ಧರ್ಮವನ್ನು ಇನ್ನೊಬ್ಬರು ಗೌರವಿಸಬೇಕು. ಒಬ್ಬರ ಧರ್ಮಕ್ಕೆ ಇನ್ನೊಬ್ಬರು ನೆರವಾಗಬೇಕು. ಎರಡು ಧರ್ಮಗಳೂ ಮನುಷ್ಯರಿಗೆ ಒಳ್ಳೆಯ ದಾರಿ ತೋರಿಸುತ್ತವೆ. ಜೈನ – ಶ್ರೀವೈಷ್ಣವ ಎರಡು ಧರ್ಮಗಳೂ ಹಿಂಸೆ ದ್ವೇಷಗಳನ್ನು ಬಿಡಿ, ಪ್ರೀತಿಯಿಂದ ಇತರರಿತೆ ಸಹಾಯ ಮಾಡಿ ಎಂದು ಹೇಳುತ್ತವೆ, ಅಲ್ಲವೆ? ನಮ್ಮೆಲ್ಲರನ್ನೂ ನುಂಗಲು ಸಿದ್ಧರಾಗಿ ಬಾಯಿ ತೆರೆದು ಕುಳಿತಿದ್ದಾರೆ ದೆಹಲಿ ಮತ್ತು ಬಹುಮನಿಯ ಸುಲ್ತಾನರು. ಹೀಗೆ ನೀವು ಜಗಳವಾಡಬಹುದೆ? ನಿಮ್ಮ ಜಗಳದಿಂದ ದೇಶಕ್ಕೆ ಅಪಾಯ, ಜನಕ್ಕೆ ಅಶಾಂತಿ ಅಲ್ಲವೇ?”

ಎರಡು ಪಂಗಡಗಳ ಮುಖಂಡರೂ ತಮ್ಮ ತಪ್ಪಿಗೆ ನಾಚಿದರು.

“ನಾವು ಸ್ನೇಹವಾಗಿರುತ್ತೇವೆ” ಎಂದು ಮಾತು ಕೊಟ್ಟರು.

ರಾಜ ಒಂದು ಸಾರ್ವಜನಿಕ ಸಭೆಯನ್ನೆ ಏರ್ಪಡಿಸಿದ. ಜೈನರು, ವೈಷ್ಣವರು ಇಬ್ಬರ ಮುಖಂಡರನ್ನೂ ಕರೆಸಿದ. ಜೈನರ ಕೈಗಳನ್ನು ವೈಷ್ಣವರ ಕೈಗಳಲ್ಲಿಟ್ಟು “ಒಬ್ಬರು ಮೇಲು, ಒಬ್ಬರು ಕೀಳು ಎಂಬುದು ತಪ್ಪು. ಒಬ್ಬರಿಗೆ ಕೆಡುಕಾದರೆ ಇನ್ನೊಬ್ಬರಿಗೆ ಲಾಭ ಎನ್ನುವುದು ತಪ್ಪು. ಜೈನರ ಕಷ್ಟ ವೈಷ್ಣವರ ಕಷ್ಟ, ವೈಷ್ಣವರ ಕಷ್ಟ ಜೈನರ ಕಷ್ಟ” ಎಂದು ಬುದ್ಧಿ ಹೇಳಿದ. ಇದುವರೆಗೆ ಜೈನರಿಗೆ ಆದ ನಷ್ಟವನ್ನು ವೈಷ್ಣವರು ಕಟ್ಟಿಕೊಡಬೇಕು ಎಂದು ಅಪ್ಪಣೆ ಮಾಡಿದ.

ಈ ವಿಷಯವನ್ನು ಶ್ರವಣಬೆಳಗೊಳದ ಒಂದು ಕಲ್ಲಿನ ಶಾಸನ ವಿವರಿಸಿದೆ.

ಒಂದು ಮತ ಮೇಲು, ಇನ್ನೊಂದು ಮತ ಕೀಳು ಎಂಬ ಭಾವನೆ ಹೋಯಿತು. ರಾಜ್ಯದಲ್ಲಿ ಎಲ್ಲ ಮತಗಳವರೂ ಎಲ್ಲ ಮತಗಳಿಗೂ ಗೌರವ ಕೊಟ್ಟು, ಶಾಂತಿ-ಸ್ನೇಹಗಳಿಂದ ಬಾಳುವಂತಾಯಿತು. ಒಂದೇ ರಾಜ್ಯದಲ್ಲಿ, ಒಂದು ಪಂಗಡದವರು ಇನ್ನೊಂದು ಪಂಗಡದವರೊಡನೆ ಕಾದಾಡುತ್ತ ಇದ್ದರೆ ರಾಜ್ಯದ ಗತಿ ಏನು? ಶತ್ರುಗಳಿಂದ ರಾಜ್ಯವನ್ನು ಕಾಪಾಡುವುದು ಹೇಗೆ? ಜನ ಶಾಂತಿಯಿಂದ ಬದುಕುವುದು ಹೇಗೆ? ಜಾತಿ-ಜಾತಿಗಳ ಜಗಳವು ಬೆಳೆಯಲು ಅವಕಾಶ ಕೊಟ್ಟಿದ್ದರೆ ಬುಕ್ಕನ ರಾಜ್ಯಕ್ಕೇ ಅನಾಹುತವಾಗುತ್ತಿತ್ತು. ಬುಕ್ಕರಾಯ ಈ ಜಗಳವನ್ನು ಮೊಳಕೆಯಲ್ಲಿಯೇ ಕಿತ್ತುಹಾಕಿದ. ಅವನ ಈ ನೀತಿ ಎಲ್ಲ ದೇಶಗಳಿಗೆ ಎಲ್ಲ ಕಾಲಗಳ ಜನರಿಗೆ ಮೇಲ್ಪಂಕ್ತಿ.

ಧರ್ಮಗ್ರಂಥಗಳು ವಿದ್ವಾಂಸರಿಗೆ ಮಾತ್ರವಲ್ಲ

ದೆಹಲಿಯ ಸುಲ್ತಾನರು, ಬಹುಮನಿ ಸುಲ್ತಾನರು ಇವರ ದಬ್ಬಾಳಿಕೆಯಿಂದ ಜನರು ತಮ್ಮ ದೇವಸ್ಥಾನಗಳಲ್ಲಿ ಪೂಜೆ ನಡೆಸುವುದೇ ಕಷ್ಟವಾಗಿತ್ತು ಎಂಬುದನ್ನು ಕಂಡೆವಲ್ಲ? ಅವರು ಅನೇಕ ರೀತಿಗಳಲ್ಲಿ ಕಷ್ಟಪಡಬೇಕಾಗಿತ್ತು. ಹರಿಹರನೂ ಬುಕ್ಕರಾಯನೂ ಅವರಿಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಇಷ್ಟೇ ಅಲ್ಲ, ತಿಳಿದವರು ಧರ್ಮವನ್ನು ಜನರಿಗೆ ವಿವರಿಸಿ ಹೇಳಲು ಅವಕಾಶವಾಯಿತು. ನಾವು ಇಂತಹ ಧರ್ಮಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಂಡರೆ ಸಾಲದು, ಅದು ಏನು ಹೇಳುತ್ತದೆ ಎಂಬುದನ್ನು ತಿಳಿಯಬೇಕು, ಅಲ್ಲವೆ? ಧರ್ಮಗ್ರಂಥಗಳನ್ನು ಓದಲಾರದವರಿಗೆ, ವಿದ್ವಾಂಸರು ಅವುಗಳ ಉಪದೇಶವನ್ನು ತಿಳಿಸಿ ಹೇಳಬೇಕು. ವೇದಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ವಿದ್ಯಾರಣ್ಯರು ‘ವೇದಾರ್ಥಪ್ರಕಾಶಿಕಾ’ ಬರೆದರು. ವೀರಶೈವ ಸಾಹಿತ್ಯ ಮತ್ತು ವಚನಗಳನ್ನು ಒಟ್ಟಿಗೆ ಸೇರಿಸುವ ಕೆಲಸ ನಡೆಯಿತು. ಹಕ್ಕ-ಬುಕ್ಕರು ಎಲ್ಲ ಧರ್ಮಗಳಿಗೂ ಸಮಾನ ಗೌರವ ಕೊಡುತ್ತಿದ್ದರು. ಆದುದರಿಂದ ಜೈನ ಧರ್ಮದ ಹಿರಿಯರು ತಮ್ಮ ಧರ್ಮವನ್ನು ವಿವರಿಸುವ ಪುಸ್ತಕಗಳನ್ನು ಬರೆಯುವುದೂ ಇವರ ಕಾಲದಲ್ಲಿ ಸಾಧ್ಯವಾಯಿತು.

ಇಪ್ಪತ್ತೊಂದು ವರ್ಷಗಳ ಕಾಲ ರಾಜ್ಯವಾಳಿ ೧೩೭೭ರಲ್ಲಿ ಬುಕ್ಕರಾಯ ತೀರಿಕೊಂಡ. ಅವನ ನಂತರ ಅವನ ಮಗ ಎರಡನೆಯ ಹರಿಹರನು ರಾಜನಾದ.

ಹೊಸ ಯುಗವನ್ನು ನಿರ್ಮಿಸಿದವರು

ಹಕ್ಕ-ಬುಕ್ಕರ ರಾಜ್ಯಭಾರ ಕಾಲವು (೧೩೩೬-೧೩೭೭) ದಕ್ಷಿಣ ಭಾರತದ ಇತಿಹಾಸದಲ್ಲಿ ಬಹು ಮುಖ್ಯವಾದ ಕಾಲ. ಹಿಂದುಗಳು ತುಂಬ ಕಷ್ಟದಲ್ಲಿದ್ದರು, ಹಿರಿಯ ರಾಜರುಗಳಲ್ಲೆ ಒಗ್ಗಟ್ಟಿರಲಿಲ್ಲ. ದೆಹಲಿಯ ಸುಲ್ತಾನರು, ಬಹುಮನಿಯ ಸುಲ್ತಾನರು ಹಿಂದುಗಳ ರಾಜ್ಯಗಳನ್ನು ನುಂಗಿಹಾಕಲು ಪ್ರಯತ್ನಿಸುತ್ತಿದ್ದರು. ಇಂತಹ ಸಮಯದಲ್ಲಿ ಈ ಅಣ್ಣತಮ್ಮಂದಿರು ಹಿಂದುಗಳನ್ನು ಒಟ್ಟುಗೂಡಿಸಿದರು. ಎಲ್ಲ ಪಂಥಗಳಿಗೂ ಮರ್ಯಾದೆ ಕೊಟ್ಟರು. ಎಲ್ಲರೂ ಸಹಕಾರದಿಂದ ಬಾಳುವಂತೆ ಕಲಿಸಿಕೊಟ್ಟರು. ಧರ್ಮಗಳನ್ನು  ವಿವರಿಸುವ ಪುಸ್ತಕಗಳನ್ನು ವಿದ್ವಾಂಸರು ಬರೆಯಲು ಸಾಧ್ಯವಾಗುವ ಹಾಗೆ ಮಾಡಿದರು.

ಹೊಯ್ಸಳ ವೀರಬಲ್ಲಾಳನ ವೀರ ವಿರೂಪಾಕ್ಷ ನೆಲವೀಡು ಹರಿಹರನ ಹೊಸ ರಾಜಧಾನಿಯಾಗ ಬುಕ್ಕರಾಯನ ಕಾಲಕ್ಕೆ ಬಹುವಾಗಿ ಬೆಳೆದು, ಸಂಪತ್ತು ಸಮೃದ್ಧಿಗಳಿಂದ ತುಂಬಿ, ಮುಂದೆ ವಿಶ್ವಪ್ರವಾಸಿಗಳನ್ನು ಬೆರಗುಗೊಳಿಸುವ ಮಹಾನಗರವಾಯಿತು.

ಆ ಯುಗದ ಕವಯಿತ್ರಿಯೂ, ಬುಕ್ಕರಾಯನ ಸೊಸೆಯೂ ಆಗಿದ್ದ ಗಂಗಾದೇವಿಯು ತಾನು ರಚಿಸಿದ ‘ಮಧುರಾವಿಜಯಂ’ ಕಾವ್ಯದಲ್ಲಿ ಹಕ್ಕ-ಬುಕ್ಕರನ್ನು ಹೊಸ ರಾಷ್ಟ್ರಧರ್ಮ ಸಮಾಜಗಳನ್ನು ನಿರ್ಮಿಸಿದ ಇಬ್ಬರು ವೀರಶ್ರೇಷ್ಠರು, ವಿವೇಕಿಗಳು ಎಂದು ವರ್ಣಿಸಿದ್ದಾರೆ. ಇದು ಅನ್ವರ್ಥವೂ ಉಚಿತವೂ ಆಗಿದೆ.

ಶಾಂತಿಯನ್ನು ಗೆಲ್ಲುವುದು

ಯುದ್ಧವನ್ನು ಗೆಲ್ಲುವಷ್ಟೇ ಕಷ್ಟ ಶಾಂತಿಯನ್ನು ಗೆಲ್ಲುವುದು ಎಂದು ಹೇಳುವುದುಂಟು.

ಯುದ್ಧದಲ್ಲಿ ಗೆಲ್ಲುವುದು ಕಷ್ಟ, ನಿಜ. ಇದಕ್ಕೆ ಸೈನ್ಯ ಬಲ ಬೇಕು. ಸೈನ್ಯಕ್ಕೆ ಸರಿಯಾಗಿ ಆಹಾರ ಒದಗಬೇಕು, ಶಸ್ತ್ರಾಸ್ತ್ರಗಳು ಬೇಕು, ಸೈನಿಕರು ನಿಷ್ಠೆಯಿಂದ ಹೋರಾಡಬೇಕು. ಸೈನ್ಯದ ಮುಖ್ಯ ನಾಯಕನಿಗೆ ಬುದ್ಧಿವಂತಿಕೆ ಬೇಕು, ಕ್ಷಣದಲ್ಲಿ ತೀರ್ಮಾನ ಮಾಡಿ ಸೈನ್ಯಕ್ಕೆ ಅಪ್ಪಣೆ ಕೊಡುವ ಶಕ್ತಿ ಬೇಕು, ಯುದ್ಧನೀತಿ ತಿಳಿದಿರಬೇಕು. ಆಧರೆ ಯುದ್ಧದಲ್ಲಿ ಗೆದ್ದು, ಶಾಂತಿ ನೆಲಸಿದ ಮೇಲೆ, ಜನ ಸುಖವಾಗಿ ಸಂತೋಷವಾಗಿ ಬಾಳುವಂತೆ ಆಡಳಿತ ನಡೆಸುವುದೂ ಸುಲಭವಲ್ಲ. ಶತ್ರುಗಳಿಂದ ರಾಜ್ಯಕ್ಕೆ ತೊಂದರೆಯಾಗದಂತೆ ಬಲವಾದ ಸೈನ್ಯವನ್ನು ಇಟ್ಟುಕೊಂಡಿರಬೇಕು. ಆಡಳಿತಕ್ಕೆ ಸರಿಯಾದ ಅಧಿಕಾರಿಗಳನ್ನು ಆರಿಸಬೇಕು. ಅವರೂ ತುಂಬ ಪ್ರಬಲರಾಗಿ ಜನರಿಗೆ ತೊಂದರೆ ಕೊಡದ ಹಾಗೆ ಹತೋಟಿಯಲ್ಲಿಟ್ಟು ಕೊಳ್ಳಬೇಕು. ಪ್ರಜೆಗಳಲ್ಲಿ ಹೆಚ್ಚು ಸಂಖ್ಯೆ ಇರುವವರಿಂದ ಕಡಮೆ ಸಂಖ್ಯೆ ಇರುವವರಿಗೆ, ಹೆಚ್ಚು ಹಣ ಇರುವವರಿಂದ ಕಡಮೆ ಹಣ ಇರುವವರಿಗೆ, ಹೆಚ್ಚು ಶಕ್ತಿ ಇರುವವರಿಂದ ಕಡಮೆ ಶಕ್ತಿ ಇರುವವರಿಗೆ ಕಿರುಕುಳ, ಅನ್ಯಾಯ ಆಗದ ಹಾಗೆ ನೋಡಿಕೊಳ್ಳಬೇಕು.

ಯುದ್ಧವನ್ನೂ ಶಾಂತಿಯನ್ನೂ ಗೆದ್ದ ದೇಶ ಸೇವಕರು ಹಕ್ಕ-ಬುಕ್ಕರು.

ತೋಳಿನ ಬಲ, ಮೆದುಳಿನ ಶಕ್ತಿ ಇವಕ್ಕೆ ಧರ್ಮದ ಆಶೀರ್ವಾದವನ್ನು ಸಂಪಾದಿಸಿಕೊಂಡ ಹಕ್ಕ-ಬುಕ್ಕರು ದಕ್ಷಿಣ ಭಾರತದಲ್ಲಿ ಹೊಸ ಯುಗವನ್ನೇ ನಿರ್ಮಿಸಿದರು.