ಬೇಸರದ ಬಿಸಿಯಿರುಳು ಕಳೆದು ಬೆಳಗಾಯಿತು. ಮಾಸ್ಕೋಗೆ ಹೊರಡ ಬೇಕಾಗಿದ್ದವನು, ವಾಸ್ತವವಾಗಿ ಈ ವೇಳೆಗಾಗಲೇ ಅಲ್ಲಿ ಇರಬೇಕಾಗಿದ್ದವನು, ಅನಿಶ್ಚಯತೆಯ ಗೊಂದಲದಲ್ಲಿ ಇನ್ನೂ ದಿಲ್ಲಿಯಲ್ಲೇ ಇರುವಂತಾದದ್ದು ಮನಸ್ಸಿಗೆ ಮುಜುಗರವನ್ನುಂಟುಮಾಡಿತ್ತು. ಅನಿರೀಕ್ಷಿತಗಳು ಸುಖವನ್ನು ತರುವಂತೆಯೇ, ಬೇಸರವನ್ನೂ ತರುವ ರೀತಿ ವಿಸ್ಮಯಕರವಾದದ್ದು.

ಹತ್ತು ಘಂಟೆಯ ವೇಳೆಗೆ ಯು. ಜಿ. ಸಿ. ಕಚೇರಿಯ ಬಾಗಿಲಲ್ಲಿ ಕಾದೆ. ನಿಜವಾಗಿ ಎಲ್ಲ ಅರ್ಥದಲ್ಲೂ ಸಹಪ್ರಯಾಣಿಕರಾದ ಡಾ. ಮ್ಯಾಥ್ಯೂ ಅವರು ನನಗಾಗಿ ಕಾದಿದ್ದರು. ಇಬ್ಬರೂ ಹೋಗಿ ನಮ್ಮ ರಷ್ಯಾ ಪ್ರವಾಸದ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಮಾಡಿ ಕೊಂಚ ಬಿಸಿಯಾಗಿಯೇ ಮಾತನಾಡಿದೆವು. ಆತ ಹಲ್ಲು ಕಿರಿದು, “ಏನೋ ಆಯಿತು ಬಿಡಿ; ನಾನೇನೋ ಎಲ್ಲ ಏರ್ಪಾಡು ಮಾಡಿದ್ದೆ; ಕಾಗದ ಪತ್ರಗಳನ್ನು ಬೇಕಾದರೆ ನೀವೇ ನೋಡಿ” ಎಂದ. ನಮಗೆ ಆ ಕಾಗದ ಪತ್ರಗಳನ್ನು ನೋಡಿ ತಾನೇ ಆಗಬೇಕಾದದ್ದೇನು ? “ಮುಂದೇನು ಹೇಳಿ. ಇನ್ನು ಮುಂದಿನ ವಿಮಾನ ಹಿಡಿಯಬೇಕಾದರೆ ಇನ್ನೊಂದು ವಾರ ಕಾಯಬೇಕು. ಅಲ್ಲಿನ ತನಕ ಇಲ್ಲೇನು ಮಾಡೋಣ? ನಮ್ಮ ಕಾರ್ಯಕ್ರಮವೆಲ್ಲ ಹೀಗೆ ತಲೆಕೆಳಗಾಗಬಾರದಿತ್ತು” ಎಂದೆವು. ಆತ ಆ ವೇಳೆಗಾಗಲೆ ಈ ಬಗ್ಗೆ ರಷ್ಯನ್ ರಾಯಭಾರ ಕಛೇರಿಗೆ ಮಾತನಾಡಿ ಮಾಸ್ಕೋಗೆ ಸುದ್ದಿ ಕಳುಹಿಸಿರುವುದಾಗಿಯೂ, ಈ ದಿನ ರಾತ್ರಿಯೇ ಮಾಸ್ಕೋಗೆ ಹೊರಡಲಿರುವ ಅಂತರ್‌ರಾಷ್ಟ್ರೀಯ ವಿಮಾನ ಏರೋಪ್ಲಾಟ್‌ನಲ್ಲಿ ನಮ್ಮನ್ನು ಕಳುಹಿಸುವುದಾಗಿಯೂ ಆಶ್ವಾಸನೆ ನೀಡಿದ. ಕೂಡಲೇ ನಮ್ಮನ್ನು ಕಾರು ಮಾಡಿ ತನ್ನ ಆಪ್ತ ಸಹಾಯಕನೊಂದಿಗೆ ಏರ್ ಇಂಡಿಯಾ ಆಫೀಸಿಗೆ ಕಳುಹಿಸಿಕೊಟ್ಟು ನಮ್ಮ ಟಿಕೆಟ್ಟುಗಳನ್ನು, ಆ ದಿನ ರಾತ್ರಿ, ಮೂರೂವರೆಗೆ ಹೊರಡುವ ಏರೋಪ್ಲಾಟ್ ವಿಮಾನಕ್ಕೆ ಬದಲಾಯಿಸುವ ವ್ಯವಸ್ಥೆ ಮಾಡಿದ. ಸದ್ಯ. ಇಷ್ಟಾದರೂ ಆಯಿತಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟೆವು. ರಾತ್ರಿಯ ವಿಮಾನ ಮೂರೂವರೆಗೆ, ಆದ್ದರಿಂದ ನಾವು ಹನ್ನೊಂದರ ವೇಳೆಗೆ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲೇ ಜಾಗರಣೆ ಮಾಡತಕ್ಕದೆಂದು ನಿಶ್ಚಯಿಸಿ, ಮತ್ತೆ ರಾತ್ರಿ  ನೋಡೋಣವೆಂದು ಹೇಳಿ ಮ್ಯಾಥ್ಯೂ ಅವರನ್ನು ಬೀಳ್ಕೊಟ್ಟೆ.

ಮತ್ತೆ ಒಂದು ಉರಿಯುವ ದಿನ ಸಂಜೆಯಾಯಿತು. ರಾತ್ರಿ ಊಟ ಮುಗಿಸಿ  ಹತ್ತು ಘಂಟೆಗೆ ಹೊರಡಲು ಸಿದ್ಧನಾದೆ. ದಿಲ್ಲಿಯಲ್ಲಿ ಎಂಥ ಹೊತ್ತಿನಲ್ಲಾದರೂ ಟ್ಯಾಕ್ಸಿ ಸಿಗುತ್ತದೆ. ಹಾಗೆಂದು ನಾನು ರಾತ್ರಿ ತುಂಬ ತಡಮಾಡಿ ನಮ್ಮ ಗೆಳೆಯರ ನಿದ್ದೆ ಕೆಡಿಸಲು ಸಿದ್ಧನಿರಲಿಲ್ಲ. ನಮಗಂತೂ ಈ ದಿನ ಜಾಗರಣೆ ಅನಿವಾರ್ಯ.  “ಮತ್ತೆ ನಡುರಾತ್ರಿ ಮೂರೂವರೆಯ ನಂತರ, ಹಿಂದಕ್ಕೆ ಬಂದು ಬಾಗಿಲು ಬಡಿದರೆ ಆಶ್ಚರ್ಯಪಡಬೇಡಿ” ಎಂದು ಗೆಳೆಯರಿಗೆ ಹೇಳಿ, ಟ್ಯಾಕ್ಸಿಯಲ್ಲಿ ಹೊರಟು ಹನ್ನೊಂದರ ವೇಳೆಗೆ ಪಾಲಂ ನಿಲ್ದಾಣದ ಧಗಧಗಿಸುವ ದೀಪದ ಬೆಳಕಿನ ಕೆಳಗೆ ವಿಸ್ತಾರವಾದ ನಿಲ್ಮನೆಯ ಮೆತ್ತೆಯ ಮೇಲೆ ಕೂತದ್ದಾಯಿತು. ಮ್ಯಾಥ್ಯೂ ಅವರೂ ಬಂದರು. ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣ. ಅಸಾಧ್ಯ ಜನ,  ನೂರು ದೇಶದ, ನೂರು ವೇಷದ, ನೂರು ಭಾಷೆಯ ಜನ. ಒಂದೊಂದೇ ವಿಮಾನ ಬರುವ ಹೋಗುವ ಘೋಷಣೆಗಳು ಧ್ವನಿವರ್ಧಕದಲ್ಲಿ. ಇಡೀ ರಾತ್ರಿಯನ್ನು ಹೇಗಪ್ಪ ಕಳೆಯಬೇಕು ಎಂಬ ಆತಂಕವಿದ್ದ ನನಗೆ, ಆಗಲೆ ರಾತ್ರಿ ಎರಡು ಗಂಟೆಯಾದದ್ದು ತಿಳಿಯಲೇ ಇಲ್ಲ. ಅಷ್ಟರಮಟ್ಟಿಗೆ ಗಿಜಿಗುಟ್ಟುವ ಜನದ ಜೇನುಗೂಡು ಸುತ್ತಲೂ. ಮತ್ತೆ ಕ್ಯೂನಲ್ಲಿ ನಿಂತು ವಿಮಾನ ವಿಧಿಗಳಿಗೆ ಸಿದ್ಧರಾದೆವು. ಯಾವ ಆತಂಕವೂ ಇಲ್ಲದೆ ಎಲ್ಲ ಮುಗಿದು, ಮಧ್ಯರಾತ್ರಿ ಮೂರುಗಂಟೆ ಹತ್ತು ನಿಮಿಷಕ್ಕೆ ಏರೋಪ್ಲಾಟ್ ವಿಮಾನದ ಹೊಟ್ಟೆಯನ್ನು ಹೊಕ್ಕದ್ದಾಯಿತು. ಇದು ಬ್ಯಾಂಕಾಕ್, ಸಿಂಗಪುರ, ಕಲ್ಕತ್ತಗಳ ಮೇಲೆ ದಿಲ್ಲಿಗೆ ಬಂದು, ಮಾಸ್ಕೋ ಮೂಲಕ ಲಂಡನ್ನಿಗೆ ಹೋಗುವ ಅಂತರ್ ರಾಷ್ಟ್ರೀಯ ವಿಮಾನ. ‘ಭವ್ಯ’ ಎಂಬ ಮಾತನ್ನು ಬಳಸಿದರೆ, ಇದರ ಗಾತ್ರ-ವೇಗ-ಅನುಕೂಲಗಳನ್ನು ಸರಿಯಾಗಿ ಸೂಚಿಸಿದಂತಾಗಬಹುದು. ಕಿಕ್ಕಿರಿದು ಮಂಡಿಸಿದ ಪ್ರಯಾಣಿಕರ ನಡುವೆ ಹೊರಡುವ ಗಳಿಗೆಯನ್ನೇ ಕಾಯುತ್ತಾ ಕೂತೆ. ಆಗಲೇ ಸೋಮವಾರ ಜಾರಿ, ಮಂಗಳವಾರಕ್ಕೆ ಬಿದ್ದಿತ್ತು. ಇರುಳಿನ ಮೂರುಗಂಟೆ ನಲವತ್ತು ನಿಮಿಷಕ್ಕೆ ಬೃಹತ್ ವಿಮಾನದ ಗಾಲಿಗಳು ಉರುಳತೊಡಗಿದಾಗಲೆ ನನಗೆ ಖಾತ್ರಿಯಾಯಿತು ಮತ್ತೆ ಹಿಂದಿನ ಬೆಳಗಿನಂಥ ಯಾವ ಘಟನೆಗಳೂ ಇನ್ನು ಪ್ರಾಪ್ತವಾಗುವುದಿಲ್ಲ ಎಂದು. ಅದರ ಬದಲು ನಾವು ಕಾಣದ ಆ ದೂರದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇನ್ನೇನು ಕಾದಿದೆಯೋ ಎಂಬ ಕಾತರವೂ ಗೂಡುಗಟ್ಟಿತ್ತು. ಗಂಟೆಗೆ ಏಳುನೂರು ಮೈಲಿ ವೇಗದಲ್ಲಿ ಧಾವಿಸುವ ವಿಮಾನ, ನಿದ್ದೆಯ ಹೊದ್ದಿಕೆಯಲ್ಲಿದ್ದ ದೆಹಲಿಯ ಆಕಾಶದಲ್ಲಿ ಏರಿ, ವಾಯುಮಂಡಲವನ್ನು ಸೀಳುತ್ತಾ ಧಾವಿಸಿತು. ಹಿಂದಿನ ದಿನ ಅವ್ಯವಸ್ಥೆಯಿಂದಾದ ಆತಂಕ ; ನಿದ್ದೆಯಿಲ್ಲದ ಇರುಳು. ಸದ್ಯ ಈಗಲಾದರೂ ಕೊಂಚ ನಿದ್ದೆ ಮಾಡೋಣವೆಂದು ಸೀಟುಗಳಿಗೆ ಒರಗಿ ಕಣ್ಣು ಮುಚ್ಚಿದರೆ ಶುರುವಾಯಿತು ದುಂಡುದುಂಡನೆಯ ರಷ್ಯನ್ ಗಗನಸಖಿಯರಿಂದ ಉಪಹಾರದ ವ್ಯವಸ್ಥೆ. ಇದೇನವಸರ ಇವರಿಗೆ, ರಾತ್ರಿಯ ನಾಲ್ಕು ಗಂಟೆಯಲ್ಲಿ ಎಂಥ ಉಪಹಾರ ಎಂದುಕೊಂಡೆ. ಆದರೆ ಈಗ ಇವರು ಕೊಡುವ ಈ ಉಪಹಾರವನ್ನು ಬೇಡ ಎಂದರೆ, ಮತ್ತೆ ಬೆಳಗಾಗ ಕೊಡುತ್ತಾರೋ ಇಲ್ಲವೋ; ಹೇಗೂ ನಿದ್ದೆಯಿಲ್ಲದ ಕಾಯುವಿಕೆಯಿಂದ ಚುರುಗುಟ್ಟುವ ಹೊಟ್ಟೆಗೊಂದಿಷ್ಟು ಮುಟ್ಟಿಸಿದರಾಯಿತು ಅಂದುಕೊಂಡು ನನ್ನ ಪಾಲಿಗೆ ಬಂದ ಶಾಖಾಹಾರಿ ಉಪಹಾರವನ್ನು ತಿಂದು ಮುಗಿಸಿದೆ. ಯಾವ ಎತ್ತರದಲ್ಲಿ ಯಾವ ದೇಶದ ಮೇಲೆ ಹಾರುತಿದ್ದೇವೋ, ಏನೊಂದೂ ತಿಳಿಯದ ಕತ್ತಲ ಶೂನ್ಯ. ಉಪಹಾರದ ನಂತರ ದೀಪವಾರಿದ ಮಬ್ಬಿನಲ್ಲಿ ಪ್ರಯಾಣಿಕರು ಸೀಟಸ್ಥರಾಗಿಯೇ ನಿದ್ರಿಸುತ್ತಿದ್ದರು. ಸುಮಾರು ಐದು ಗಂಟೆಯ ವೇಳೆಗೆ, ಬಲಗಡೆಯ ದೂರದ ದಿಗಂತದಲ್ಲಿ ಅರುಣೋದಯದ ಆಕಾಶದಲ್ಲಿ ರೇಖಿಸಿದ ಬೆಟ್ಟದ ಸಾಲೊಂದು ಗೋಚರಿಸತೊಡಗಿತು. ಹಾಗೂ ಹೀಗೂ, ತೂಕಡಿಸುತ್ತ ಒಂದೆರಡು ಗಂಟೆಗಳನ್ನು ಕಳೆದು ಎಚ್ಚರವಾದಾಗ, ಗಡಿಯಾರ ನೋಡಿಕೊಂಡಾಗ ಎಂಟೂವರೆ ಗಂಟೆ. ಎರಡು ಮೂರು ಗಂಟೆಗಳ ಹಿಂದೆ ಕಂಡ ಅರುಣೋದಯದ ಸೂಚನೆಯೇ ಮಾಯವಾಗಿತ್ತು ; ಮತ್ತೆ ಹೊರಗೆ ಮಬ್ಬು ಕವಿದಿತ್ತು. ಗಗನಸಖಿಯರನ್ನು ವಿಚಾರಿಸಿದಾಗ, “ಈಗ ಮಾಸ್ಕೋಟೈಂ ಬೆಳಗಿನ ಆರೂವರೆ. ನಿಮ್ಮ ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ” ಎಂದರು. ಎಂಟೂವರೆಯಿಂದ ಆರೂವರೆಗೆ ಕಾಲವನ್ನು ಹಿಂದಕ್ಕೆ ತಳ್ಳಿ, ಮತ್ತೆ ಕಾದದ್ದಾಯಿತು. ಮತ್ತೆ ಒಂದೂವರೆ ಎರಡು ಗಂಟೆಗಳ ನಂತರ ಕೆಳಗಿನ ನೆಲ – ಜಲಗಳ ಚಿತ್ರ ಕಾಣತೊಡಗಿತು. ರಷ್ಯಾ ದೇಶದ ವಿಸ್ತಾರವಾದ ಹೊಲಗಳು; ಹೊಳೆಗಳು; ಅನೇಕ ದಾರಿಗಳು ಹತ್ತೂ ಕಡೆಯಿಂದ ಬಂದು ಸೇರಿಕೊಂಡು ಜೇಡರ ಬಲೆಯಂತೆ ಕಾಣುವ ಊರುಗಳು; ಕನವರಿಸುತ್ತ ಮಲಗಿದ ಬೆಟ್ಟದ ಗೀಚು ಗೆರೆಗಳು. ಆಗಲೇ ನಾವು ಎಂಟು ಗಂಟೆಗಳ ಕಾಲ ನಿಲ್ಲದ ಪಯಣದಲ್ಲಿದ್ದೆವು. ಒಂದೇ ಸಮನೆ ಅಷ್ಟು ಗಂಟೆಗಳು ಆಕಾಶದಲ್ಲಿ ಮಾಡಿದ ಪಯಣ ಆಶ್ಚರ್ಯಕರವಾಗಿ ತೋರಿತು. ಆಗಲೇ ಬೆಳ್ಳಂಬೆಳಗಾಗಿತ್ತು, ಒಂಬತ್ತನ್ನು ಗಡಿಯಾರ ತೋರಿಸುತ್ತಿದ್ದರೂ ಸೂರ‍್ಯನ ಪತ್ತೆಯೇ ಇಲ್ಲ. ಆಗಲೇ ವಿಮಾನ ಮಾಸ್ಕೋ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಾದ ‘ಷರಿಮತ್ಯಾವೋ’ದ ತಾಯ್ನೆಲವನ್ನು ಅರಸುತ್ತಿತ್ತು. ವಿಮಾನ ಕೆಳಗಿಳಿದಂತೆ, ಮಾಸ್ಕೋ ನಗರವನ್ನು ಬಳಸಿದ, ದಟ್ಟವಾದ ಹಸಿರು ಕಾಡುಗಳು, ಪುಟ್ಟ ದೋಣಿಗಳು ತೇಲುವ ಹೊಳೆಗಳು, ಚೌಕೋನವಾದ ಹಸಿರು ಬಯಲುಗಳು ಕಾಣತೊಡಗಿದವು. ಅಂತೂ ಐದನೆ ತಾರೀಖು ಮಂಗಳವಾರ ಬೆಳಿಗ್ಗೆ ಮಾಸ್ಕೋ ತಲುಪಿದೆವು. ವಿಮಾನ ನಿಂತ ಕೂಡಲೇ, ಹೊರಗಿನ ಹವಾಮಾನ ಏಳು ಡಿಗ್ರಿ ಸೆಂಟಿಗ್ರೇಡ್ ಎಂದು ತಿಳಿಸಲಾಯಿತು. ಉದ್ದವಾದ ಮೇಲ್ಕೋಟನ್ನು ತಗುಲಿಸಿ, ವಿಮಾನದಿಂದ ಹೊರಗೆ ಕಾಲಿರಿಸಿದ ಕೂಡಲೇ ಗಡಗಡ ನಡುಗಿಸುವ ಚಳಿಯ ಕೊರೆತ ಪ್ರಾರಂಭವಾಯಿತು. ನಡುರಾತ್ರಿಯ ಉಪಹಾರದ ನಂತರ ನಮಗೆ ಒಂದು ಕಪ್ಪು ಕಾಫಿಯನ್ನೂ ಕೂಡ ಕೊಡುವ ವ್ಯವಸ್ಥೆಯಾಗಿರಲಿಲ್ಲವಾದ ಕಾರಣ, ಹೊಟ್ಟೆ ಬೇರೆ ಚುರುಗುಟ್ಟುತ್ತಿತ್ತು. ಒಂದು ರೀತಿ ನಿಶ್ಯಬ್ದವಾದ, ಬಹುಮಟ್ಟಿಗೆ ನಿರ್ಜನವಾದ ನಿಲ್ದಾಣದೊಳಗೆ ಬಂದ ಕೂಡಲೇ ಮತ್ತೆ ನಮ್ಮ ತನಿಖೆ ಆರಂಭವಾಯಿತು. ಹಿಂದಿನ ಇರುಳು ದೆಹಲಿಯಲ್ಲಿ ಕಂಡ ವರ್ಣಮಯವಾದ ಆ  ಗಜಿಬಿಜಿಗೂ, ಈ ನಿರ್ಭಾವವಾದ ನಿಶ್ಯಬ್ದಕ್ಕೂ ಇರುವ ಅಂತರ ಎದ್ದು ಕಾಣುತ್ತಿತ್ತು. ನಮ್ಮ ನಮ್ಮ ಸರದಿ ಬಂದಾಗ, ಕಟಕಟೆಯಲ್ಲಿ ಕೂತ ಗಂಟುಮುಖದ ಮಹಿಳಾ ಅಧಿಕಾರಿಣಿಯರು, ನಮ್ಮ ಪಾಸ್‌ಪೋರ್ಟ್  ಇತ್ಯಾದಿಗಳನ್ನು ಚಕಚಕನೆ ಪರಿಶೀಲಿಸಿದರು. ಅಲ್ಲಿಂದ ಮುಂದೆ ಬಂದು ನಮ್ಮ ಬಳಿ ಇದ್ದ ವಿದೇಶೀ ವಿನಿಮಯದ ಬಗ್ಗೆ ಹೇಳಿಕೆಗಳನ್ನು ಕೊಡುವ ‘ಫಾರಂ’ ಅನ್ನು ಭರ್ತಿ ಮಾಡಿ, ಸಾಮಾನುಗಳನ್ನು ವಶಕ್ಕೆ ತೆಗೆದುಕೊಂಡ ಮೇಲೆ ನಮ್ಮನ್ನು ಕರೆದೊಯ್ಯಲು ಯಾರಾದರೂ ಬಂದಿದ್ದಾರೆಯೇ ಎಂದು ಕಣ್ಣಾಡಿಸಿದೆವು. ಸದ್ಯ ಒಬ್ಬ ರಷ್ಯನ್ ಯುವಕ ಬಂದು ವಿಚಿತ್ರವಾದ ರೀತಿಯಲ್ಲಿ ನನ್ನ ಹಾಗೂ ಮ್ಯಾಥ್ಯೂ ಅವರ ಹೆಸರನ್ನು ಉಚ್ಚರಿಸಿದ. ಹೌದೆಂದು ಹೇಳಿ, ಇಂಗ್ಲಿಷಿನಲ್ಲಿ ಈಗ ನಾವು ಹೋಗುವುದೆಲ್ಲಿಗೆ, ಏನು ಏರ್ಪಾಡು ಎಂದೆಲ್ಲ ಕೇಳಿದೆವು, ಆತನಿಗೇನೂ ಅರ್ಥವಾದಂತೆ ತೋರಲಿಲ್ಲ. ಆತನಿಗೆ ಇಂಗ್ಲಿಷ್ ಭಾಷೆ ತಿಳಿಯುವುದಿಲ್ಲ ಎಂಬುದು ಮಾತ್ರ ನಮಗರ್ಥವಾಯಿತು. ಆತನ ಸನ್ನೆಯ ಮೇಲೆ ನಾವು ಪೆಟ್ಟಿಗೆ ಇತ್ಯಾದಿಗಳನ್ನು ಹಿಡಿದುಕೊಂಡು ಹೊರಕ್ಕೆ ಬಂದೆವು. ಸಿದ್ಧವಾಗಿ ನಿಂತ ಕಾರೊಂದರ ಬಾಗಿಲನ್ನು ಆತ ತೆರೆದ, ನಾವು ಕೂತೆವು. ಕಾರು ಸುತ್ತಲೂ ಹಬ್ಬಿದ ಮಬ್ಬಿನಲ್ಲಿ ಹೊರಟಿತು.