ಹಜಾರಿಪ್ರಸಾದ ದ್ವಿವೇದಿ —ಹಿರಿಯ ಹಿಂದಿ ಸಾಹಿತಿ. ದೊಡ್ಡ ವಿದ್ವಾಂಸರು, ಸರಳಜೀವಿ. ಸಾಹಿತ್ಯ ಮತ್ತು ಇತರ ಕಲೆಗಳು ಮನುಷ್ಯನ ಸ್ವಭಾವವನ್ನು ತಿದ್ದಿ, ಸಮಾಜದ ಬದುಕನ್ನು ಉತ್ತಮಗೊಳಿಸಬೇಕು ಎಂಬುದು ಅವರ ನಿಶ್ಚಲ ನಿಲವು.

 

ಹಜಾರಿಪ್ರಸಾದ ದ್ವಿವೇದಿ

ಇಪ್ಪತ್ತನೆಯ ಶತಮಾನದಲ್ಲಿ ಹಿಂದಿ ಸಾಹಿತ್ಯದ ಅತಿ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು ಹಜಾರಿಪ್ರಸಾದ ದ್ವಿವೇದಿಯವರು. ವಿದ್ವಾಂಸರು ಹಾಗೂ ಜನಸಾಮಾನ್ಯರೂ ಮೆಚ್ಚಿಕೊಂಡ ಸಾಹಿತಿ ಅವರು.

ಸಾವಿರ ತಂದುಕೊಟ್ಟವನು

ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಓಝು ಬಲಿಯಾ ಒಂದು ಹಳ್ಳಿ. ದ್ವಿವೇದಿಯರ ಮುತ್ತಜ್ಜನ ಕಾಲದಿಂದಲೂ ಅವರ ಕುಟುಂಬ ಅಲ್ಲಿಯೆ ನೆಲೆಸಿತ್ತು. ಈ ಕುಟುಂಬದಲ್ಲಿ ಪಂಡಿತ ಅನಮೋಲ ದ್ವಿವೇದಿಯವರ ಮಗನಾಗಿ ಹಜಾರಿಪ್ರಸಾದರು ೧೯೦೭ನೇ ಇಸವಿಯ ಆಗಸ್ಟ್ ಹತ್ತೊಂಬತ್ತರಂದು ಜನಿಸಿದರು.

ಅನಮೋಲ ದ್ವಿವೇದಿ ತುಂಬಾ ಸಾತ್ವಿಕ ಸ್ವಭಾವದವರು. ಆಂಜನೇಯನ ಪರಮಭಕ್ತರು. ಅವರ ಮಡದಿ ಪರಮಜ್ಯೋತಿದೇವಿ ಪತಿಪರಾಯಣರು. ವಿದ್ಯಾವಂತ ಕುಲಕ್ಕೆ ಸೇರಿದವರು. ಸುಸಂಸ್ಕೃತರು. ಹುಟ್ಟಿದ ಮಗುವಿಗೆ ಹಿರಿಯರು ಬೈಜನಾಥ ದ್ವಿವೇದಿ ಎಂದು ನಾಮಕರಣ ಮಾಡಿದರು.

ಒಮ್ಮೆ ಅನಮೋಲ ದ್ವಿವೇದಿಯವರಿಗೆ ಸಂಬಂಧ ಪಟ್ಟ ಯಾವುದೋ ಒಂದು ಮೊಕದ್ದಮೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ನ್ಯಾಯಾಲಯದ ವ್ಯವಹಾರಗಳಿಗಾಗಿ ಹಣ ತುಂಬಾ ಖರ್ಚಾಗುತ್ತಿತ್ತು. ಒಂದು ಬಾರಿ ತುಂಬಾ ತುರ್ತಾಗಿ ಹಣ ಬೇಕಾಗಿತ್ತು. ಅನಮೋಲರಿಗೆ ಮರ್ಯಾದೆಯ ಪ್ರಶ್ನೆಯಾಗಿತ್ತು. ಮಗ ಹುಟ್ಟಿದ ಘಳಿಗೆ. ಎಲ್ಲಿಂದಲೋ ಸಾವಿರ ರೂಪಾಯಿ ಅಕಸ್ಮಾತ್ತಾಗಿ ಒದಗಿಬಂದಿತು. ಎಲ್ಲರಿಗೂ ಆನಂದವೂ ಆಶ್ಚರ್ಯವೂ ಒಟ್ಟಿಗೆ ಆಯಿತು. ಸಾವಿರ ರೂಪಾಯಿ ಗಳೆಂದರೆ ಆ ಕಾಲದಲ್ಲಿ ತುಂಬಾ ಬೆಲೆ. ಮಗುವಿನ ಅದೃಷ್ಟದಿಂದಲೇ ಹಣ ಒದಗಿತೆಂದು ಎಲ್ಲರೂ ಸಂತೋಷಪಟ್ಟರು. ಅಂದಿನಿಂದ ಬೈಜನಾಥನ ಹೆಸರು ಹಜಾರಿಪ್ರಸಾದ (ಸಾವಿರ ತಂದುಕೊಟ್ಟವನು) ಎಂದೇ ಆಯಿತು.

ಶಿಕ್ಷಣ

ಬಾಲಕ ಹಜಾರಿಪ್ರಸಾದನ ಪ್ರಾಥಮಿಕ ಶಿಕ್ಷಣ ಅಲ್ಲಿಯ ರೇಪುರಾ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ೧೯೨೦ರ ವೇಳೆಗೆ ಚಿಕ್ಕಪ್ಪನ ಮೇಲ್ವಿಚಾರಣೆಯಲ್ಲಿ ದ್ವಿವೇದಿ ಬಸರಿಕಾಪುರದ ಮಾಧ್ಯಮಿಕ ಶಾಲೆಯಲ್ಲಿ ಓದಿ ಮೊದಲದರ್ಜೆಯಲ್ಲಿ ತೇರ್ಗಡೆಯಾದರು.

ದ್ವಿವೇದಿ ಅವರ ಚಿಕ್ಕಪ್ಪ ಬಾಂಕೆಬಿಹಾರಿ ದುಬೆಯವರಿಗೆ ಮೈಥಿಲೀಶರಣಗುಪ್ತರೆಂದರೆ ತುಂಬ ಅಚ್ಚುಮೆಚ್ಚು. ಮೈಥಿಲೀಶರಣಗುಪ್ತರು ಹಿಂದಿಯಲ್ಲಿ ‘ಸಾಕೇತ’ ಎಂಬ ರಾಮಕಾವ್ಯವನ್ನೂ ಇನ್ನೂ ಅನೇಕ ಕಾವ್ಯಕೃತಿಗಳನ್ನೂ ರಚಿಸಿದ ಹಿರಿಯ ಕವಿ. ಹುಡುಗ ನಾಗಿದ್ದಾಗಲೇ ದ್ವಿವೇದಿಯವರಿಗೆ ದುಬೆಯವರು ಮೈಥಲೀಶರಣರ ಭಾರತ ಭಾರತಿ, ಜಯದ್ರಥ ವಧ ಕಾವ್ಯಗಳನ್ನು ಉರುಹೊಡೆಸಿದ್ದರು. ದ್ವಿವೇದಿಯವರ ಮುಖ್ಯೋಪಾಧ್ಯಾಯರಾಗಿದ್ದ ಪಂಡಿತ ಮಹೇಂದ್ರ ಪಾಂಡೆಯವರು ಹುಡುಗರಿಗೆ ಭಜನೆ ಹೇಳಿಕೊಡುತ್ತಿದ್ದರು. ಈಶ್ವರನ ದೇವಸ್ಥಾನಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ‘ರಾಮಚರಿತ ಮಾನಸ’ ಸಹ ದ್ವಿವೇದಿಯವರ ಮೇಲೆ ಸಾಕಷ್ಷು ಪ್ರಭಾವ ಬೀರಿತು. ನಿಯಮಿತವಾಗಿ ಅವರು ಅದನ್ನು ಪಾಠ ಮಾಡುತ್ತಿದ್ದರು. ಆ ಕಾಲದಲ್ಲಿ ಅಚ್ಚಾದ ಪುಸ್ತಕಗಳು ಹೆಚ್ಚಾಗಿ ದೊರೆಯುತ್ತಿರಲಿಲ್ಲ. ಆದರೂ ಹಳ್ಳಿಯಲ್ಲಿ ಆರ್ಯ ಸಮಾಜದ ವಾತಾವರಣವಿದ್ದುದರಿಂದ ಶಾಸ್ತ್ರಾಭ್ಯಾಸ ಮತ್ತು ವಿದ್ಯಾರ್ಜನೆಗಳಿಗೆ ಪ್ರೋತ್ಸಾಹವಿತ್ತು. ಸ್ವಲ್ಪ ದೊಡ್ಡವರಾಗುವ ವೇಳೆಗೆ ಅವರು ಉಪನಿಷತ್ತಿನ ಮೇಲಿದ್ದ ಭಾಷ್ಯಗಳನ್ನೂ ಮಹಾಭಾರತವನ್ನೂ ಓದಿ ಮುಗಿಸಿದ್ದರು. ಯಾವುದನ್ನೇ ಕೈಗೆತ್ತಿಕೊಳ್ಳಲಿ ತುಂಬಾ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದರು.

ಕಾಶಿಯತ್ತ ಪ್ರಯಾಣ

ಮಾಧ್ಯಮಿಕ ಶಾಲೆಯಲ್ಲಿ ಓದು ಮುಗಿಸಿದ ಮೇಲೆ ದ್ವಿವೇದಿಯವರು ಸಂಸ್ಕೃತವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಸಂಸ್ಕೃತದ ಬಗ್ಗೆ ಅವರಿಗೆ ಪರಂಪರಾಗತವಾದ ಒಲವಿತ್ತು. ಸುಮಾರು ೧೫-೧೬ ವರ್ಷ ವಯಸ್ಸಾಗುವ ವೇಳೆಗೆ ಅವರು ಅಂದು ಖ್ಯಾತ ವಿದ್ಯಾಕೇಂದ್ರವೆನಿಸಿದ್ದ ಕಾಶಿಯ ಕಡೆಗೆ ಪ್ರಯಾಣ ಬೆಳೆಸಿದರು. ೧೯೨೩ ರಲ್ಲಿ ಕಾಶಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು. ದ್ವಿವೇದಿಯವರ ಸಂಸ್ಕೃತ ಉಚ್ಚಾರಣೆ ಶುದ್ಧವಾಗಿತ್ತು. ಸಂಸ್ಕೃತಶ್ಲೋಕಗಳು ಅವರ ಬಾಯಿಂದ ನಿರರ್ಗಳವಾಗಿ ಹೊರಡುತ್ತಿದ್ದವು.

ಕಾರಣಾಂತರಗಳಿಂದ ದ್ವಿವೇದಿಯವರ ಪ್ರಾರಂಭಿಕ ಅಧ್ಯಯನ ಇಂಗ್ಲಿಷ್ ಶಾಲೆಗಳಲ್ಲಿ ಕ್ರಮ ಬದ್ಧವಾಗಿ ನಡೆಯಲಿಲ್ಲ. ಮನೆಯ ಕಡೆ ಹಣಕಾಸಿನ ಮುಗ್ಗಟ್ಟು ಸಾಕಷ್ಟಿತ್ತು. ಮುಂದೆ ಅವರ ವ್ಯಕ್ತಿತ್ವ ಚೆನ್ನಾಗಿ ಬೆಳೆಯಲು ಅವರು ಬೆಳೆದುಬಂದ ಪರಿಸ್ಥಿತಿಗಳೂ ಕಾರಣವಾಗಿದ್ದವು. ಬದುಕಿನ ಹಾದಿಯಲ್ಲಿ ಹಲವಾರು ಕಷ್ಟ ಕೋಟಲೆಗಳಿಗೆ ಸಿಕ್ಕಿ ಅವರ ವ್ಯಕ್ತಿತ್ವ ಚಿನ್ನಕ್ಕೆ ಪುಟ ವಿಕ್ಕಿದಂತಾಯಿತು. ಅವರು ಜೀವನದಲ್ಲಿ ಬೆಳೆಸಿ ಕೊಂಡಿದ್ದಂತಹ ಸರಳತೆ, ದೃಢಮನಸ್ಕತೆ, ಸಹಾನುಭೂತಿ ಇವುಗಳಿಗೆಲ್ಲ ಬಹುಶಃ ಅವರ ಬಾಲ್ಯದ ಅನುಭವಗಳು ಕಾರಣವಾಗಿದ್ದವು. ಕಾಶಿನಗರ ಒಂದೆಡೆ ಜ್ಞಾನದ ಹಿರಿಮೆ, ಸಂಸ್ಕೃತಿಯ ಮೆರುಗು ಮತ್ತು ನಿರಂತರ ಸಾಧನೆಯ ಕ್ಷೇತ್ರವಾಗಿ ಕಂಡುಬರುತ್ತಿತ್ತು. ಹಾಗೆಯೇ  ಇನ್ನೊಂದೆಡೆ ಅದು ಪಂಡಿತರ ಒಣಜಂಭ, ಪಾಂಡಿತ್ಯಪ್ರದರ್ಶನ ಮತ್ತು ದ್ವೇಷಾಸೂಯೆಗಳ ತಾಣವಾಗಿತ್ತು. ಆದರೆ ದ್ವಿವೇದಿಯವರು ಇವೆರಡರಲ್ಲಿ ಒಳ್ಳೆಯದನ್ನು ಆಯ್ಕೆಮಾಡಿಕೊಂಡು ಶ್ರದ್ಧಾಸಕ್ತಿಗಳೊಡನೆ ತಮ್ಮ ಅಧ್ಯಯನವನ್ನು ನಡೆಸಿದರು.

೧೯೨೭ರಲ್ಲಿ ಅಂದರೆ ದ್ವಿವೇದಿಯವರ ಇಪ್ಪತ್ತನೆಯ ವಯಸ್ಸಿನಲ್ಲಿ ಭಗವತೀದೇವಿ ಎಂಬಾಕೆ ಯೊಡನೆ ಅವರ ಮದುವೆ ನಡೆಯಿತು.

೧೯೨೯ರಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದರು. ೧೯೩೦ರಲ್ಲಿ ಕಾಶೀ ವಿಶ್ವವಿದ್ಯಾನಿಲಯದ ಶಾಸ್ತ್ರಾಚಾರ್ಯ ಪರೀಕ್ಷೆಯನ್ನು ಮಾಡಿದರು.

ಕಾಶಿಯಲ್ಲಿ ಅಧ್ಯಯನ ನಡೆಸುತ್ತಿರುವಾಗಲೇ ದ್ವಿವೇದಿಯವರಿಗೆ ಪಂಡಿತ ಮದನಮೋಹನ ಮಾಲವೀಯರಂತಹ ಹಿರಿಯ ವ್ಯಕ್ತಿಗಳ ಪರಿಚಯ ವಾಯಿತು. ಮಾಲವೀಯರಲ್ಲಿ ಅವರು ಗುರುವಿನ ಗೌರವ, ಶಿಕ್ಷಕನ ದೃಢತೆ ಮತ್ತು ಮನುಷ್ಯನ ಸಹೃದಯತೆಯನ್ನು ಕಂಡುಕೊಂಡರು. ತಮ್ಮ ಬದುಕಿನಲ್ಲೂ ಈ ಸದ್ಗುಣಗಳನ್ನು ಅಳವಡಿಸಲು ಪ್ರಯತ್ನಿಸಿದರು.

ಸಾಹಿತ್ಯದಲ್ಲಿ ಒಲವು

ಸ್ವಲ್ಪಕಾಲ ದ್ವಿವೇದಿಯವರು ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಸಾಧಾರಣ ಅಧ್ಯಾಪಕರಾಗಿ ಕೆಲಸ ಮಾಡಿದರು. ೧೯೨೭ರ ವೇಳೆಗೆ ಅವರಿಗೆ ಸಾಹಿತ್ಯದಲ್ಲಿ ಅಸ್ಥೆ, ಒಲವು ಮೂಡಿದ್ದವು. ಬಿಡುವಿನಲ್ಲಿ ಏನಾದರೂ ಬರವಣಿಗೆ ಕೆಲಸವನ್ನು ನಡೆಸುತ್ತಿದ್ದರು. ಕವಿತೆಗಳನ್ನು ಬರೆಯತ್ತಿದ್ದರು. ಅವರನ್ನು ಸಾಹಿತ್ಯರಚನೆಗೆ ಪ್ರೇರಿಸುವಲ್ಲಿ ಹರಿಔಧರ ಪ್ರಭಾವ ಸಹ ಇತ್ತು. ಅಯೋಧ್ಯಾಸಿಂಹ ಉಪಾಧ್ಯಾಯ ಹರಿಔಧರು ಸ್ವತಃ ಆ ಕಾಲದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದರು.

ಹರಿಔಧರು ತಮ್ಮ ಕವಿತೆಗಳನ್ನು ಓದುತ್ತಿದ್ದಾಗ ದ್ವಿವೇದಿಯವರು ಆಸಕ್ತಿಯಿಂದ ಕುಳಿತು ಆಲಿಸುತ್ತಿದ್ದರು. ಅವರಿಂದ ಸ್ಫೂರ್ತಿಗೊಂಡು ದ್ವಿವೇದಿಯವರೂ ವ್ರಜ ಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ದ್ವಿವೇದಿಯವರ ಕವಿತೆಗಳು ವೀರಾವೇಶದಿಂದ ಕೂಡಿರುತ್ತಿದ್ದವು. ಹರಿಔಧರು ಅವರ ಬೆನ್ನು ತಟ್ಟಿ ‘ಆಧುನಿಕ ಭೂಷಣ ನೀನು’ ಎಂದು ಹುರಿದುಂಬಿಸುತ್ತಿದ್ದರು. ಭೂಷಣ ಹಿಂದಿ ಸಾಹಿತ್ಯದಲ್ಲಿ ವೀರರಸ ಪ್ರತಿಪಾದನೆ ಮಾಡಿದ ಪ್ರಮುಖ ಕವಿಗಳಲ್ಲಿ ಒಬ್ಬ.

ಶಾಂತಿನಿಕೇತನ

ಸ್ವಲ್ಪ ಕಾಲಾನಂತರ ದ್ವಿವೇದಿಯವರಿಗೆ ಶಾಂತಿನಿಕೇತನಕ್ಕೆ ಬರಲು ಆಹ್ವಾನ ಬಂದಿತು. ವಿಶ್ವಭಾರತಿ ಅವರನ್ನು ಕೈಬೀಸಿ ಕರೆದಿತ್ತು. (‘ಶಾಂತಿನಿಕೇತನ’, ‘ವಿಶ್ವಭಾರತಿ’ ಎರಡೂ ಮಹಾಕವಿ ರವೀಂದ್ರನಾಥ ಠಾಕೂರರು ಪ್ರಾರಂಭಿಸಿದ ವಿದ್ಯಾಸಂಸ್ಥೆಗಳು. ಭಾರತದ ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣ ದೊರೆಯ ಬೇಕೆಂದು ಅವರು ಈ ಸಂಸ್ಥೆಗಳನ್ನು ಪ್ರಾರಂಭಿಸಿದರು). ದ್ವಿವೇದಿ ತಮ್ಮ ಪಾಂಡಿತ್ಯ ಮತ್ತು ಸಾಹಿತ್ಯಾಭಿರುಚಿಗಳಿಂದ ಹಲವಾರು ಮಂದಿ ವಿದ್ವಾಂಸರ ಗಮನ ಸೆಳೆದಿದ್ದರು. ಶಾಂತಿನಿಕೇತನದಲ್ಲಿ ಒಬ್ಬ ಹಿಂದಿ ಅಧ್ಯಾಪಕರ ಹುದ್ದೆ ಖಾಲಿಯಿತ್ತು. ೧೯೩೦ರ ನವೆಂಬರ್ ಆರರಂದು ದ್ವಿವೇದಿಯವರು ಆ ಹುದ್ದೆಯನ್ನು ಸ್ವೀಕರಿಸಲು ಶಾಂತಿನಿಕೇತನಕ್ಕೆ ಕಾಲಿಟ್ಟರು.

ದ್ವಿವೇದಿಯವರ ವ್ಯಕ್ತಿತ್ವ ಪೂರ್ಣವಾಗಿ ವಿಕಾಸ ಗೊಳ್ಳಲು ಶಾಂತಿನಿಕೇತನದ ವಾತಾವರಣ ಬಹಳ ಮಟ್ಟಿಗೆ ಕಾರಣವಾಯಿತು. ಅಲ್ಲಿಗೆ ಬಂದ ಮೇಲೆ ಅವರ ಮೇಲೆ ಬೇರೆಯದೆ ಆದ ರೀತಿಯ ಸಂಸ್ಕಾರ ಆಗತೊಡಗಿತು. ಅವರ ದೃಷ್ಟಿ ವಿಶಾಲವಾಯಿತು. ಅನೇಕ ಮಂದಿ ಹಿರಿಯ ವ್ಯಕ್ತಿಗಳ ಪರಿಚಯವಾಯಿತು. ಮಹಾ ಮಹೋಪಾಧ್ಯಾಯ ವಿಧುಶೇಖರ ಭಟ್ಟಾಚಾರ್ಯ, ಆಚಾರ್ಯ ಕ್ಷಿತಿಮೋಹನ ಸೇನ್, ಆಚಾರ್ಯ ನಂದಲಾಲ ಬಸು, ದೀನಬಂಧು ಸಿ.ಎಫ್.ಆಂಡ್ರೂಸ್ ಮೊದಲಾದ ದೇಶ ವಿದೇಶಗಳ ಹೆಸರಾಂತ ವಿದ್ವಾಂಸರ ಸಂಪರ್ಕ ಸಾಹಚರ್ಯ ದೊರೆಯಿತು. ಇವೆಲ್ಲಕ್ಕೂ ಮಿಗಿಲಾಗಿ ಗುರುದೇವ ರವೀಂದ್ರ ನಾಥರ ಸನ್ನಿಧಿ ಅವರ ಸಾಧನೆಗೆ ಕಲಶಪ್ರಾಯವಾಗಿತ್ತು. ಶಾಂತಿನಿಕೇತನದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಹನ್ನೊಂದು ವರ್ಷಗಳ ಕಾಲ ದ್ವಿವೇದಿಯವರಿಗೆ ರವೀಂದ್ರರ ನಿಕಟ ಸಂಪರ್ಕ ದೊರೆತಿತ್ತು.

ರವೀಂದ್ರರಂತಹ ಗುರುಗಳು ಸಿಕ್ಕುವುದು ಎಷ್ಟು ಕಷ್ಟವೋ ದ್ವಿವೇದಿಯವರಂತಹ ಶಿಷ್ಯರು ಸಿಕ್ಕುವುದೂ ಅಷ್ಟೇ ಕಷ್ಟ. ‘ಒಬ್ಬಂಟಿಗನಾಗಿ ಜಗ್ಗದೆ ನಡೆ ಮುಂದೆ ನಡೆ ಮುಂದೆ’ ಎಂಬುದು ಗುರುದೇವರ ಮಂತ್ರೋಪದೇಶವಾಗಿತ್ತು. ಸಾಧನೆಯ ಮಾರ್ಗದಲ್ಲಿ ಎಡೆಬಿಡದೆ ಮುನ್ನುಗ್ಗುತ್ತಿರ ಬೇಕೆಂಬುದೇ ಗುರುದೇವರ ಆಣತಿಯಾಗಿತ್ತು. ದ್ವಿವೇದಿಯವರು ಹಾಗೆಯೇ ಮುನ್ನಡೆದರು.

ದ್ವಿವೇದಿಯವರು ಆ ದಿನಗಳನ್ನು ಕುರಿತು-“ಆಹಾ, ಶಾಂತಿನಿಕೇತನವನ್ನು ನೆನೆಸಿಕೊಂಡರೆ ನನ್ನ ಮನಸ್ಸು ತುಂಬಿಬರುತ್ತದೆ. ನಾನು ಅಲ್ಲಿ ಸಜ್ಜನರ ಒಡನಾಟದಲ್ಲಿ ನಿಜವಾಗಿಯೂ ದ್ವಿಜತ್ವವನ್ನು ಪಡೆದೆ” ಎನ್ನುತ್ತಿದ್ದರು. ತಮ್ಮ ಹೊಸ ದೃಷ್ಟಿಯ ಬದುಕನ್ನು ಒಂದು ಹೊಸ ಜನ್ಮವೆಂದೇ ಅವರು ಪರಿಗಣಿಸಿದ್ದರು. ವಾಸ್ತವವಾಗಿ ಅವರು ಸಂಪ್ರದಾಯಬದ್ಧರಾಗಿ ವೇದಗಳನ್ನು ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು. ಆದರೆ ಸಂಕುಚಿತವಾದಿಗಳಲ್ಲ. ಅವರ ಜ್ಞಾನ ವಿಶ್ವ ಕುತೂಹಲಿಯಾಗಿ ಬೆಳೆಯಿತು. ಒಳ್ಳೆಯದು ಯಾವ ಮೂಲೆಯಲ್ಲಿಯೇ ಇರಲಿ, ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ತನ್ನದಾಗಿಸಿಕೊಳ್ಳಲು ಸಜ್ಜಾಯಿತು.

ಸಾಹಿತ್ಯಲೋಕಕ್ಕೆ ಪ್ರವೇಶ

ದ್ವಿವೇದಿಯವರ ಸಾಹಿತ್ಯ ರಚನೆಗೆ ವಾಸ್ತವವಾಗಿ ನಾಂದಿಯಾದದ್ದು ಶಾಂತಿನಿಕೇತನದಲ್ಲೇ. ಹಿರಿಯ ವಿದ್ವಾಂಸರ ಸಂಪರ್ಕ ಅವರಿಗೆ ಬಂಗಾಳೀ ಮತ್ತು ಇತರ ಅನೇಕ ಭಾಷೆಗಳನ್ನು ಕಲಿಸಿತು. ದ್ವಿವೇದಿಯವರು ‘ವಿಶಾಲ ಭಾರತ’ ಪತ್ರಿಕೆಯಲ್ಲಿ ಬರೆಯತೊಡಗಿದರು. ವ್ರಜ ಭಾಷೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಸಾಹಿತ್ಯಿಕ, ಸಾಂಸ್ಕೃತಿಕ ಲೇಖನಗಳನ್ನು ಪ್ರಕಟಿಸತೊಡಗಿದರು.

ವಿಶ್ವಭಾರತಿಯಲ್ಲಿ ೧೯೩೦ರಿಂದ ೧೯೫೦ರ ವರೆಗೂ ದ್ವಿವೇದಿಯವರು ಸೇವೆ ಸಲ್ಲಿಸಿದರು. ಈ ಇಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಅವರು ಸುಮಾರು ಆರೇಳು ಪ್ರಮುಖ ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಲೇಖನ ಕೃಷಿ ನಡೆಯುತ್ತಿದ್ದಂತೆಯೇ ಅಧ್ಯಯನ ಸಹ ನಿರಂತರವಾಗಿ ಸಾಗಿತ್ತು. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಎರಡು ಮೂರು ಗಂಟೆಗಳ ಕಾಲ ಸತತವಾಗಿ ಅಧ್ಯಯನ ನಡೆಸುವುದು ಅವರ ಬದುಕಿನ ಅನಿವಾರ್ಯ ಅಂಗ ವಾಗಿತ್ತು. ತಮ್ಮ ವಿನಯ, ಸಜ್ಜನಿಕೆ ಮೊದಲಾದ ಸದ್ಗುಣ ಗಳಿಂದ ಶಾಂತಿನಿಕೇತನದಲ್ಲಿ ನೆಲೆಯಾಗಿ ಅವರು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.

೧೯೪೦-೫೦ ರ ಅವಧಿಯಲ್ಲಿ ದ್ವಿವೇದಿಯವರು ವಿಶ್ವ ಭಾರತಿಯಲ್ಲಿ ಹಿಂದಿಭವನದ ನಿರ್ದೇಶಕರಾಗಿ ಕೆಲಸ ಮಾಡಿದರು. ರವೀಂದ್ರರ ಹೊಸ ಮಾನವತಾವಾದದ ಬಗ್ಗೆ ಅವರಿಗೆ ಅಪಾರ ಒಲವು ಮೂಡಿತು. (ಎರಡು ಮಹಾಯುದ್ಧಗಳನ್ನು ಕಂಡು ಠಾಕೂರರು ಮನುಷ್ಯನ ಭವಿಷ್ಯವನ್ನು ಕುರಿತು ತಾವು ಹೋದಲ್ಲೆಲ್ಲ ಹೊಸ ಚಿಂತನರೀತಿಯನ್ನು ಸಾರುತ್ತಿದ್ದರು. ಮನುಷ್ಯ ಕುಲವೆಲ್ಲ ಒಂದೆ, ತಾವು ಈ ದೇಶದವರು, ಆ ದೇಶದವರು ಎಂಬ ಸಂಕುಚಿತ ದೃಷ್ಟಿಯನ್ನು ಬಿಡಬೇಕು. ಎಲ್ಲ ದೇಶದವರೂ ಸಹಕಾರದಿಂದ ಬಾಳಬೇಕು, ವಿಜ್ಞಾನ, ಕಲೆ ಎಲ್ಲ ಇಡೀ ಮಾನವತೆಯ ಕಲ್ಯಾಣವನ್ನೇ ಗುರಿಯಾಗಿಟ್ಟು ಕೊಂಡಿರಬೇಕು ಎಂದು ಗುರುದೇವ ಠಾಕೂರರು ಸಾರಿದರು)

ಒಟ್ಟಿನಲ್ಲಿ ದ್ವಿವೇದಿಯವರ ಬದುಕಿನಲ್ಲಿ ಶಾಂತಿನಿಕೇತನ ವಹಿಸಿದ ಪಾತ್ರ ಗಮನಾರ್ಹ. ಅವರೇ ಒಂದೆಡೆ ಹೇಳಿರುವಂತೆ, ‘ಯಾರೋ ಒಬ್ಬ ಗುರುವಿನ ಪ್ರೇರಣೆಯಿಂದ ಚಿಕ್ಕ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ರಚನಾತ್ಮಕ ಕಲೆ ತಾನೇ ಉದ್ಭವವಾಗುತ್ತಿದೆಯೇನೋ ಎನಿಸುತ್ತಿತ್ತು. ಸೌಂದರ್ಯ ಸೃಷ್ಟಿಯ ಬಗ್ಗೆ ಆದರ ಆಸ್ಥೆ ಹುಟ್ಟಿ ಕೊಳ್ಳುತ್ತಿದ್ದವು.’ ದೊಡ್ಡ ದೊಡ್ಡ ವಿದ್ವಾಂಸರು ಅಲ್ಲಿ ಅತ್ಯಂತ ಸಾಧಾರಣ ಋಜು ಬಾಳುವೆಯನ್ನು ನಡೆಸುತ್ತಿದ್ದರು. ಅವರನ್ನು ನೋಡಲು ಜನರು ದೂರ ದೂರ ಪ್ರದೇಶಗಳಿಂದ ಬರುತ್ತಿದ್ದರು. ಸಹಜವಾದ ಬದುಕು ಶಾಂತಿನಿಕೇತನದ ಮೂಲಮಂತ್ರವಾಗಿತ್ತು.

ಕಾಶೀ ಹಿಂದೂ ವಿಶ್ವವಿದ್ಯಾನಿಲಯಕ್ಕೆ

ಕಾಶೀ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗಾಧ್ಯಕ್ಷರಾಗಿದ್ದ ಕೇಶವಪ್ರಸಾದ ಮಿಶ್ರರು ೧೯೫೦ರಲ್ಲಿ ನಿಧನಹೊಂದಿದರು. ಆಗ ಉಪಕುಲಪತಿಗಳಾಗಿದ್ದ ಆಚಾರ್ಯ ನರೇಂದ್ರದೇವರಿಗೆ ತೆರವಾದ ಸ್ಥಾನಕ್ಕೆ ಅರ್ಹರೆಂದು ಕಂಡುಬಂದವರೆಂದರೆ ದ್ವಿವೇದಿಯವರೇ. ವಿಶ್ವವಿದ್ಯಾನಿಲಯದ ಕರೆಯಮೇರೆಗೆ ಅವರು ಕಾಶೀ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಬಂದು ವಿಭಾಗಾಧ್ಯಕ್ಷರ ಹೊಣೆ ಹೊತ್ತರು.

ಪ್ರಾಚೀನ ಸಾಹಿತ್ಯವೆಂದರೆ ಅವರಿಗೆ ತುಂಬಾ ಪ್ರಿಯವಾದ ವಿಷಯ. ಹಾಗಾಗಿ ಅನೇಕ ಮಂದಿ ಸಂಶೋಧನಾ ವಿದ್ಯಾರ್ಥಿಗಳು ಈ ವಿಷಯದ ಹಲವು ಮುಖಗಳನ್ನು ಕುರಿತಂತೆ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸತೊಡಗಿದರು. ಈ ಸಂಶೋಧನಾ ಪ್ರಬಂಧಗಳಲ್ಲೆಲ್ಲ ದ್ವಿವೇದಿಯವರ ದೃಷ್ಟಿಕೋನ, ವಿದ್ವತ್ತು ಎದ್ದು ಕಾಣುತ್ತಿತ್ತು.

ಅಧ್ಯಯನ ವೈಶಿಷ್ಟ್ಯಗಳು

ದ್ವಿವೇದಿಯವರು ಮೊದಲಿಗೆ ಹಿರಿಯರ ಮಾತಿಗೆ ಕಟ್ಟುಬಿದ್ದು ಜ್ಯೋತಿಷನ್ನು ಕುರಿತು ಅಧ್ಯಯನ ಪ್ರಾರಂಭಿಸಿದರು. ಆದರೆ ಅವರ ಪ್ರವೃತ್ತಿಗೆ ಅದು ಅಷ್ಟಾಗಿ ಒಗ್ಗಲಿಲ್ಲ. ಅವರ ಒಲವು ಮೊದಲಿನಿಂದಲೂ ಇದ್ದದ್ದು ಸಾಹಿತ್ಯದ ಕಡೆಗೇ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಕಾಳಿದಾಸ, ಭಾರವಿ, ಬಾಣ ಮೊದಲಾದ ಸಂಸ್ಕೃತ ಕವಿಗಳನ್ನು ಕುರಿತು ಆಳವಾಗಿ ಅಧ್ಯಯನ ನಡೆಸಿದ್ದರು. ಕಬೀರ, ಸೂರದಾಸ, ತುಳಸೀದಾಸ, ಚಂಡಿದಾಸ ಮತ್ತು ರವೀಂದ್ರರು ಅವರಿಗೆ ಪ್ರಿಯರಾದ ಕವಿಗಳಾಗಿದ್ದರು. ಜೈನ ಸಾಹಿತ್ಯ, ಬೌದ್ಧ ಸಾಹಿತ್ಯ ಇವೆಲ್ಲವನ್ನೂ ಭಾರತೀಯ ಸಾಹಿತ್ಯದ ವ್ಯಾಪಕ ಹಿನ್ನೆಲೆಯಲ್ಲಿ ಅವರು ಅಭ್ಯಾಸ ಮಾಡಿದ್ದರು.

ಭಾರತೀಯ ಸಾಹಿತ್ಯವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದು ಅವರ ವೈಶಿಷ್ಟ್ಯ. ಸಾಹಿತ್ಯವನ್ನು ಕೇವಲ ಕಲೆಯ ದೃಷ್ಟಿಯಿಂದ ನೋಡಿದರೆ ಸಾಲದು, ಮಾನವನ ಬೆಳವಣಿಗೆಯ ದೃಷ್ಟಿಯಿಂದ ಅದು ಎಷ್ಟರಮಟ್ಟಿಗೆ ಸಹಕಾರಿ ಎಂಬ ಹಿನ್ನೆಲೆ ಯಲ್ಲಿ ನೋಡಬೇಕು ಎಂದು ಅವರು ಹೇಳುತ್ತಿದ್ದರು.

ಗಾಂಧೀಜಿಯವರ ಪ್ರಭಾವ

ದ್ವಿವೇದಿಯವರ ವ್ಯಕ್ತಿತ್ವ ಮತ್ತು ಜೀವನದರ್ಶನ ವಿಕಾಸಗೊಂಡ ಕಾಲವನ್ನು ರಾಷ್ಟ್ರೀಯ ದೃಷ್ಟಿಯಿಂದ ‘ಗಾಂಧಿಯುಗ’ ಎಂದು ಕರೆಯಬಹುದು. ಈ ಕಾಲದ ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿಯೆಂದರೆ ಗುರುದೇವ ರವೀಂದ್ರನಾಥ ಠಾಕೂರ್. ರಾಜಕೀಯಕ್ಷೇತ್ರದಲ್ಲಿ ಗಾಂಧೀಜಿಯವರ ಪ್ರಭಾವ ಅಸದೃಶವೆನಿಸಿತ್ತು. ದ್ವಿವೇದಿಯವರ ಸಾಹಿತ್ಯಾದರ್ಶಗಳ ಹಿನ್ನೆಲೆಯಲ್ಲಿ ರವೀಂದ್ರರ ಕೈ ಕಂಡುಬರುವುದಾದರೆ, ಅವರ ಬದುಕೆಲ್ಲ ಗಾಂಧೀಜಿಯವರ ವಿಚಾರಧಾರೆಯಿಂದ ಪ್ರಭಾವಗೊಂಡಿತು.

ಗಾಂಧೀಜಿಯವರೆಂದರೆ ದ್ವಿವೇದಿಯವರಿಗೆ ಅಪಾರ ಶ್ರದ್ಧೆ. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ನಿಜ. ಆದರೆ ಅವರ ದೃಷ್ಟಿಯಲ್ಲಿ ಮನುಷ್ಯಕುಲವೆಲ್ಲ ಒಂದೇ ಸಂಸಾರ. ಇಂಗ್ಲಿಷರು ಈ ದೇಶವನ್ನು ಗುಲಾಮಗಿರಿಗೆ ಇಳಿಸಿದ್ದರೂ, “ನಾನು ಇಂಗ್ಲಿಷರ ಸ್ನೇಹಿತ’ ಎನ್ನುತ್ತಿದ್ದರು. ಹಾಗೆಯೇ ನಡೆಯುತ್ತಿದ್ದರು. ಈ ವಿಶಾಲ, ಸ್ನೇಹದೃಷ್ಟಿ ದ್ವಿವೇದಿ ಯವರಿಗೆ ಹಿಡಿಸಿತು. ಎಲ್ಲರ ಹಿತರಕ್ಷಣೆಯ ತತ್ವಕ್ಕೆ ಅವರು ತಮ್ಮನ್ನೇ ಮುಡಿಪಾಗಿಟ್ಟರು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ  ಈ ಭಾವನೆಗಳನ್ನು ಅಳವಡಿಸಲು ಗಾಂಧೀಜಿಯವರು ಪ್ರಯತ್ನಿಸಿದರೆ ದ್ವಿವೇದಿಯವರು ಇದೇ ತತ್ವಗಳನ್ನು ಸಾಹಿತ್ಯಕ್ಷೇತ್ರಕ್ಕೆ ಅನ್ವಯಿಸಿದರು.

ವ್ಯಕ್ತಿತ್ವ

ದ್ವಿವೇದಿಯವರದು ತುಂಬಾ ಸರಳವಾದ ಬದುಕು. ಅವರು ಒಳ್ಳೆಯ ಮಾತುಗಾರರೂ ಹಾಸ್ಯ ಪ್ರವೃತ್ತಿಯವರೂ ಆಗಿದ್ದರು. ನಗುವಿನ ಲಹರಿಯಲ್ಲಿ ಮನಸ್ಸಿನ ಎಲ್ಲ ದುಗುಡಗಳನ್ನೂ ಮರೆತುಬಿಡುವ ಸ್ವಭಾವ ಅವರದು. ಹಾಸ್ಯದ ಚಟಾಕಿಗಳನ್ನು ಹಾರಿಸಿ ತಮ್ಮೊಡನೆ ಚರ್ಚೆ ನಡೆಸುತ್ತಿರುವವರನ್ನು ನಗಿಸುತ್ತಿದ್ದರು. ಆದರೆ ಗಂಭೀರವಾದ ವಿಷಯಗಳನ್ನು ಕುರಿತು ವಿಚಾರ ವಿನಿಮಯ ನಡೆಸಬೇಕಾಗಿ ಬಂದಾಗ ಅಷ್ಟೇ ಆಳವಾಗಿ ಚರ್ಚೆ ನಡೆಸುತ್ತಿದ್ದರು.

ದ್ವಿವೇದಿಯವರ ತುಂಬಾ ಸರಳವಾದ ಜೀವನ ನಡೆಸಿದರು. ಅವರು ಹೇಗೆ ಯೋಚನೆ ಮಾಡುತ್ತಿದ್ದರೋ ಹಾಗೆಯೇ ಮಾತನಾಡುತ್ತಿದ್ದರು. ಹೇಗೆ ಮಾತನಾಡುತ್ತಿದ್ದರೋ ಹಾಗೆಯೇ ಕೆಲಸಮಾಡಿ ತೋರಿಸುತ್ತಿದ್ದರು. ಹೇಳುವುದೊಂದು ಮಾಡುವುದೊಂದು ಇದನ್ನು ಕಂಡರೆ ಅವರ ಮೈ ಉರಿಯುತ್ತಿತ್ತು.

ದ್ವಿವೇದಿಯವರದು ವಿಶಾಲವಾದ ದೃಷ್ಟಿಕೋನ. ತಮ್ಮ ಅಭಿಪ್ರಾಯಗಳನ್ನು ಅವರು ಯಾರ ಮೇಲೂ ಹೇರಲು ಬಯಸುತ್ತಿರಲಿಲ್ಲ. ಎಲ್ಲರೂ ತಮ್ಮ ತಮ್ಮ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸ್ವತಂತ್ರರು. ಭಾರತೀಯ ಸಂಸ್ಕೃತಿ ದೊಡ್ಡದೇ, ಪಾಶ್ಚಾತ್ಯ ಸಂಸ್ಕೃತಿ ದೊಡ್ಡದೇ ಎಂದು ಚರ್ಚೆಮಾಡಿ ಫಲವಿಲ್ಲ. ಎರಡರಲ್ಲಿಯೂ ಉತ್ತಮ ಅಂಶಗಳಿವೆ. ಹಾಗಾಗಿ ಯಾವುದೇ ವಿಚಾರದಲ್ಲಿ ಒಂದು ಸಮನ್ವಯ ದೃಷ್ಟಿ ಅಗತ್ಯ ಎಂದು ಅವರು ಭಾವಿಸಿದ್ದರು.

ಉನ್ನತ ಆದರ್ಶಗಳಿಗೆ ಬದುಕಿನಲ್ಲಿ ಅವರು ತುಂಬಾ ಮಹತ್ವ ಕೊಡುತ್ತಿದ್ದರು. ಹಾಗಾಗಿಯೇ ರವೀಂದ್ರರು ಮತ್ತು ಮಹಾತ್ಮ ಗಾಂಧಿಯವರನ್ನು ಕಂಡರೆ ಅವರಿಗೆ ಅಪಾರ ಶ್ರದ್ಧೆ. ಉನ್ನತವಾದುದನ್ನು ಸಾಧಿಸಲು ನಿರಂತರ ಅಧ್ಯಯನಶೀಲತೆ ಮನುಷ್ಯನಿಗೆ ತುಂಬಾ ಅವಶ್ಯಕ ಎನ್ನುತ್ತಿದ್ದರು. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ತಮ್ಮ ಅಧ್ಯಯನವನ್ನು ಅವರು ಪ್ರಾರಂಭಿಸುತ್ತಿದ್ದರು. ವಿದ್ಯಾರ್ಥಿಗಳು ಮತ್ತು ತರುಣ ವಿದ್ವಾಂಸರೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ಬೆನ್ನುತಟ್ಟಿ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದರು.

ದ್ವಿವೇದಿಯವರು ಬುದ್ಧಿವಾದಿಗಳು. ಏನೋ ಹಣೆಯ ಬರೆಹ ಅನುಭವಿಸೋಣ ಎನ್ನುವ ಜನರನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ.

ಪಂಜಾಬ್ ವಿಶ್ವವಿದ್ಯಾನಿಲಯ

ಕಾಶಿ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ವಾತಾವರಣ ಚೆನ್ನಾಗಿತ್ತು. ಸಂಶೋಧನಾ ಚಟುವಟಿಕೆಗಳು ಸಹ ಭರದಿಂದ ನಡೆಯುತ್ತಿದ್ದವು. ದ್ವಿವೇದಿಯವರು ಹತ್ತು ವರ್ಷಗಳ ಕಾಲ ಅಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಈ ವೇಳೆಗಾಗಲೇ ಹಿಂದಿ ಸಾಹಿತ್ಯಕ್ಷೇತ್ರದಲ್ಲಿ ಅವರ ಹೆಸರು ಮನೆಮಾತಾಗಿತ್ತು. ಅವರ ಅನೇಕ ಕೃತಿಗಳು ಪ್ರಕಟಗೊಂಡಿದ್ದು ಸಾಹಿತ್ಯದಲ್ಲಿ ಅವರಿಗೆ ಶಾಶ್ವತವಾದ ಹೆಸರು ಗಳಿಸಿಕೊಟ್ಟಿದ್ದವು.

ಕೇಂದ್ರಸರ್ಕಾರ ಜಾರಿಗೆ ಕೊಟ್ಟ ಕೆಲವು ನಿಯಮಗಳಿಂದಾಗಿ ಕಾಶೀ ವಿಶ್ವವಿದ್ಯಾನಿಲಯದ ಕೆಲವು ಮಂದಿ ಅಧ್ಯಾಪಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಒದಗಿತು. ದ್ವಿವೇದಿಯವರು ಈ ನಿಯಮಾವಳಿಯ ದಾಳಿಗೆ ಸಿಲುಕಿದವರಲ್ಲಿ ಒಬ್ಬರು. ಅವರ ಕೆಲಸ ಹೋಯಿತು. ಆ ಕಷ್ಟವನ್ನು ಸಹನೆಯಿಂದ ಅನುಭವಿಸಿದರು.

ಸ್ವಲ್ಪಕಾಲದಲ್ಲೇ ಪಂಜಾಬ್ ವಿಶ್ವವಿದ್ಯಾನಿಲಯ ದಿಂದ ಅವರಿಗೆ ಕರೆ ಬಂತು. ಆ ವಿಶ್ವವಿದ್ಯಾನಿಲಯದ ಹಿಂದಿ ಪ್ರಾಧ್ಯಾಪಕ ಹುದ್ದೆಯನ್ನು ವಹಿಸಿಕೊಳ್ಳಲು ಅವರಿಗೆ ಆಹ್ವಾನ ನೀಡಲಾಗಿತ್ತು. ಹುದ್ದೆಯನ್ನು ನಿಯಮಗಳಿಗನು ಗುಣವಾಗಿ ಜಾಹೀರುಪಡಿಸಿರಲಿಲ್ಲ. ತನ್ನ ಪ್ರಾಂತ್ಯಕ್ಕೆ ಸೇರದ ಒಬ್ಬ ವಿದ್ವಾಂಸನನ್ನು ಜಾಹೀರು ಪಡಿಸದಿರುವ ಹುದ್ದೆಯೊಂದಕ್ಕೆ ಪ್ರಾಧ್ಯಾಪಕರಾಗಿ ನೇಮಿಸಿಕೊಳ್ಳಲು ಆ ವಿಶ್ವವಿದ್ಯಾನಿಲಯ ನಿರ್ಧರಿಸಿತ್ತು! ದ್ವಿವೇದಿಯವರು ಚಂಡೀಗಢಕ್ಕೆ ಪ್ರಯಾಣ ಬೆಳೆಸಿದರು.

ಸಾಹಿತ್ಯ ಸೇವೆ

ದ್ವಿವೇದಿಯವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ  ಕೆಲಸ ಮಾಡಿದ್ದಾರೆ. ವಿಮರ್ಶೆ, ಸಂಶೋಧನೆ, ಪ್ರಬಂಧ ಸಂಕಲನಗಳು, ಛಾಯಾನುವಾದಗಳು, ಸಂಪಾದಿಸಿದ ಗ್ರಂಥಗಳು, ಕಾದಂಬರಿಗಳು ಇವೆಲ್ಲ ಅವರ ಸಾಹಿತ್ಯ ರಾಶಿಯಲ್ಲಿ ಸೇರಿವೆ. ಅವರ ಕೆಲವು ಪ್ರಮುಖ ಸಾಹಿತ್ಯಕೃತಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು.

‘ಸೂರ ಸಾಹಿತ್ಯ’ ೧೯೩೪ರಲ್ಲಿ ಹೊರಬಂದ ದ್ವಿವೇದಿಯವರ ಮೊದಲ ಕೃತಿ. ಸೂರದಾಸರು (೧೫ನೆಯ ಶತಮಾನ) ಬಹು ದೊಡ್ಡ ಸಂತರು. ಅವರು ಹಿಂದಿ ಭಾಷೆಯಲ್ಲಿ ಸೊಗಸಾದ ನೂರಾರು ಪದ್ಯಗಳನ್ನು ಬರೆದರು. ಶ್ರೀ ಕೃಷ್ಣನ ಬಾಲಲೀಲೆಗಳ ಬಣ್ಣನೆ, ಮಾತೃವಾತ್ಸಲ್ಯದ ಚಿತ್ರಣ, ಅಲೌಕಿಕ ಪ್ರೇಮದ ಕಲ್ಪನೆ ಇವೆಲ್ಲ ಸೂರದಾಸರ ಸಾಹಿತ್ಯದ ವೈಶಿಷ್ಟ್ಯಗಳೆಂದು ದ್ವಿವೇದಿಯವರು ಇಲ್ಲಿ ಪ್ರತಿಪಾದಿಸಿದ್ದಾರೆ.

‘ಸಾಹಿತ್ಯ ಕಾ ಸಾಥೀ’ ಮತ್ತು ‘ಆಧುನಿಕ ಹಿಂದಿ ಸಾಹಿತ್ಯ ಪರ್ ವಿಚಾರ್’ ಇವೆರಡರಲ್ಲೂ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ದ್ವಿವೇದಿಯವರ ಕೆಲವಾರು ಪ್ರಬಂಧಗಳಿವೆ. ಇವುಗಳಲ್ಲಿ ಕೆಲವು ಭಾಷಣಗಳು, ಸಾಹಿತ್ಯ ಕೃತಿಗಳನ್ನು – ಕವನಗಳು, ಕಾದಂಬರಿಗಳು, ನಾಟಕಗಳು ಹೀಗೆ ನಾವು ಓದಿ ಸಂತೋಷಪಡುತ್ತೇವೆ. ಆದರೆ ಒಂದೊಂದು ಕಾಲದಲ್ಲಿ ಒಂದೊಂದು ಪ್ರಕಾರ-ಕಾವ್ಯ, ಕಾದಂಬರಿ, ನಾಟಕ ಚೆನ್ನಾಗಿ ಬೆಳೆಯುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ಬಗೆಯ ಕವನಗಳೇ ಕಾದಂಬರಿಗಳೇ ಮುಖ್ಯವಾಗುತ್ತವೆ. ಏಕೆ? ಕಾರಣ-ಆ ಕಾಲದ ಸಮಾಜದ ರೀತಿ, ವ್ಯವಸ್ಥೆ, ಸಮಸ್ಯೆಗಳು. ದ್ವಿವೇದಿಯವರು ಸಾಹಿತ್ಯದ ಬೆಳವಣಿಗೆಗೂ ಸಮಾಜದ ಸ್ವರೂಪಕ್ಕೂ ಇರುವ ಸಂಬಂಧವನ್ನು ವಿವರಿಸಿದರು.

೧೯೪೨ರಲ್ಲಿ ಹೊರಬಂದ ಕೃತಿ ‘ಕಬೀರ್’. ಇದು ದ್ವಿವೇದಿಯವರ ಅತ್ಯಂತ ಹೆಸರುವಾಸಿಯಾದ ಕೃತಿಗಳಲ್ಲಿ ಒಂದು. ಇದರಲ್ಲಿ ಹಿಂದಿ ಸಾಹಿತ್ಯದ ಪ್ರಾಚೀನ ಕವಿಗಳಲ್ಲಿ ಒಬ್ಬನಾದ ಕಬೀರದಾಸನ ವ್ಯಕ್ತಿತ್ವ, ಸಾಹಿತ್ಯಿಕ, ದಾರ್ಶನಿಕ ವಿಚಾರಗಳು, ಸಾಹಿತ್ಯದಲ್ಲಿ ಸ್ಥಾನಮಾನಗಳು ಈ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

‘ಮಧ್ಯಕಾಲೀನ ಧರ್ಮಸಾಧನಾ’ ಗ್ರಂಥದಲ್ಲಿ ಮೂವತ್ತೊಂಬತ್ತು ಪ್ರಬಂಧಗಳಿವೆ. ಈ ಕಾಲದಲ್ಲಿ ಧರ್ಮ ಯಾವ ಯಾವ ದಾರಿಯಲ್ಲಿ ನಡೆದುಬಂತು, ಅದರ ಹಿನ್ನೆಲೆ ದಾರ್ಶನಿಕ ವಿವೇಚನೆ, ವಿವಿಧ ಧರ್ಮಗಳ ಸ್ವರೂಪ, ಕೃಷ್ಣಭಕ್ತಿ ಇವುಗಳ ಬಗ್ಗೆ ವಿಚಾರ ಮಾಡಲಾಗಿದೆ.

ಹಿಂದಿ ಸಾಹಿತ್ಯವನ್ನು ಕುರಿತಂತೆ ‘ಹಿಂದಿ ಸಾಹಿತ್ಯ ಕಾ ಆದಿಕಾಲ್’ ‘ಹಿಂದಿ ಸಾಹಿತ್ಯ ಕೀ ಭೂಮಿಕಾ’ ಮತ್ತು “ಹಿಂದಿ ಸಾಹಿತ್ಯ’ ಎಂಬ ಅವರ ಗ್ರಂಥಗಳು ಉಲ್ಲೇಖಾರ್ಹ.

ಸಮಕಾಲೀನ ಸಾಹಿತ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಕುರಿತು ದ್ವಿವೇದಿಯವರು ಅನೇಕ ಪ್ರಬಂಧಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ‘ಅಶೋಕ್ ಕೆ ಫೂಲ್’, ‘ವಿಚಾರ್ ಔರ್ ವಿತರ್ಕ್’, ‘ವಿಚಾರ ಪ್ರವಾಹ್’,‘ಹಮಾರೀ ಸಾಹಿತ್ಯಿಕ ಸಮಸ್ಯಾಯೇಂ’ ‘ಕಲ್ಪಲತಾ’, ‘ವಿಚಾರ ವಿಮರ್ಶ’, ‘ಸಾಹಿತ್ಯ, ಕಾ ಮರ್ಮ್’ ಎಂಬ ಸಂಗ್ರಹಗಳನ್ನು ಇಲ್ಲಿ ಹೆಸರಿಸಬಹುದು.

ದ್ವಿವೇದಿಯವರು ಭಾಷಾಂತರ ಕ್ಷೇತ್ರದಲ್ಲೂ ಕೆಲಸ ಮಾಡಿರುವುದುಂಟು, ‘ಪ್ರಬಂಧ ಚಿಂತಾಮಣಿ’, ‘ಪ್ರಬಂಧ ಕೋಶ’ ‘ಪುರಾತನ ಪ್ರಬಂಧ ಸಂಗ್ರಹ’ ಅವರು ಅನುವಾದಿಸಿರುವ ಕೃತಿಗಳು.

ಸಿಕ್ಖರ ಗುರುಗಳನ್ನು ಕುರಿತ ‘ಸಿಖ್ ಗುರುವೋಂಕಾ ಪುಣ್ಯಸ್ಮರಣ್’ ಎಂಬ ಅವರ ಕೃತಿ ಸಹ ಹೊರಬಂದಿದೆ.

ದ್ವಿವೇದಿಯವರು ಕೆಲವು ವಿಶಿಷ್ಟವಾದ ಕಾದಂಬರಿಗಳನ್ನು ಭಾರತೀಯ ಸಾಹಿತ್ಯಕ್ಕೆ ಕೊಡುಗೆ ಯಾಗಿ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಒಲವು. ಅವರ ಕಾದಂಬರಿಗಳೂ ಹೆಚ್ಚು ಕಡಿಮೆ ಇದೇ ಹಿನ್ನೆಲೆಯಲ್ಲಿವೆ. ‘ಬಾಣಭಟ್ಟ ಕೀ ಆತ್ಮ ಕಥಾ’, ‘ಮೇಘದೂತ್’, ‘ಏಕ್‌ಪುರಾನೀ ಕಹಾನೀ’, ‘ಚಾರುಚಂದ್ರಲೇಖಾ’ ‘ಪುನರ್ನವಾ’, ‘ಅನಾಮ್‌ದಾಸ್ ಕಾ ಪೋಥಾ’ ಇವು ದ್ವಿವೇದಿಯವರ ಹೆಸರಾಂತ ಕಾದಂಬರಿಗಳು. ಇವೆಲ್ಲವೂ ಈಗಾಗಲೇ ಕನ್ನಡದಲ್ಲೂ ಅನುವಾದಗೊಂಡಿವೆ.

ಅನಾಮ್‌ದಾಸ್ ಕಾ ಪೋಥಾ

‘ಅನಾಮ್‌ದಾಸ್ ಕಾ ಪೋಥಾ’ ಎಂದರೆ “ಅನಾಮಧೇಯನ ಪುಸ್ತಕ’ಎಂದರ್ಥ. ಈ ಪುಸ್ತಕಕ್ಕೆ ‘ರೈಕ್ವ ಆಖ್ಯಾನಂ’ (ರೈಕ್ವನ ಕಥೆ) ಎಂಬ ಹೆಸರೂ ಉಂಟು. ರಿಕ್ವ ಋಷಿಯ ಪುತ್ರ ರೈಕ್ವ. ಈತನ ಬಗೆಗೆ ಛಾಂದೋಗ್ಯ ಉಪನಿಷತ್ತಿನಲ್ಲಿ ಪ್ರಸ್ತಾಪವಿದೆ. ಆದರೆ ಅತ್ಯಲ್ಪವಾಗಿ ದೊರೆಯುವ ಆತನ ವೃತ್ತಾಂತವನ್ನು ಕೇವಲ ಕಲ್ಪನೆ ಯಿಂದಲೇ ದ್ವಿವೇದಿಯವರು ಸುಂದರ ಕಾದಂಬರಿಯಾಗಿ ರೂಪಿಸಿದ್ದಾರೆ.

ರೈಕ್ವ ತಪೋಧನ, ಹುಟ್ಟಿದೊಡನೆಯೇ ತಾಯಿಯನ್ನು ಕಳೆದುಕೊಂಡದ್ದರಿಂದ ಹೆಣ್ಣನ್ನು ಕಂಡರಿ ಯದವನು. ಚಂಡಮಾರುತಕ್ಕೆ ಸಿಲುಕಿದ ಜಾಬಾಲಿ ಎಂಬ ರಾಜಕುಮಾರಿಯನ್ನು ರಕ್ಷಿಸುತ್ತಾನೆ. ಆಕೆಯೇ ಆತ ಕಂಡ ಮೊದಲ ಹೆಂಗಸು. ಆಕೆಯಿಂದಲೇ ಹೆಣ್ಣೆಂದರೆ ಗಂಡಿಗೆ ಭಿನ್ನವಾದ ಮತ್ತೊಂದು ವ್ಯಕ್ತಿರೂಪ ಎಂಬುದನ್ನು ಕಲಿಯುತ್ತಾನೆ. ಕಾಡಿನಲ್ಲಿ ಅಲೆಯುವ ಆತನಿಗೆ ಮತ್ತೊಬ್ಬ ವೃದ್ಧಸ್ತ್ರೀಯ ಪರಿಚಯವಾಗುತ್ತದೆ, ಆಕೆಯಲ್ಲಿ ಆತನಿಗೆ ಮಾತೃಪ್ರೇಮ ಲಭಿಸುತ್ತದೆ. ದಾಹಗೊಂಡ ಹುಡುಗನಿಗೆ ನೀರಿತ್ತು, ಅವನನ್ನು ಅವನ ತಾಯಿಯನ್ನು ತನ್ನ ‘ತಾಯಿ’ ಬಳಿಗೆ ಸೇರಿಸುತ್ತಾನೆ. ತಾಯಿಯ ಅಪೇಕ್ಷೆಯಂತೆ ಆಕೆಯನ್ನು ಸೋದರಿಯಾಗಿ ಭಾವಿಸುತ್ತಾನೆ. ತಾಯಿಯ ಹಿಂದೆ ಊರೂರು ಅಲೆದು ಜೀವನವೆಂದರೆ ಏನು, ಮಾನವರೆಂದರೆ, ಮಾನವೀಯತೆ ಎಂದರೆ ಏನೆಂಬುದನ್ನು ತಿಳಿದುಕೊಳ್ಳುತ್ತಾನೆ.

ಮನುಷ್ಯ ಸಾಯುತ್ತಾನೆ. ನಮ್ಮ ಜಗತ್ತಿನಲ್ಲಿ ನಾವು ಕಾಣುವುದೆಲ್ಲ ನಾಶವಾಗುತ್ತದೆ. ಹಾಗಾದರೆ ನಾಶವಾಗದ ತತ್ವ, ಶಕ್ತಿ ಉಂಟೆ? ಇರಬಹುದು. ಅದನ್ನು ತಿಳಿದು ಕೊಳ್ಳಬೇಕೆಂಬ ಆಸೆ ಮನುಷ್ಯನಿಗೆ ಉಂಟಾಗಬಹುದು. ಅದನ್ನು ತಿಳಿದುಕೊಳ್ಳುವುದಕ್ಕಿಂತ ಜೀವನದಲ್ಲಿ ಮುಖ್ಯ ವಾದದ್ದೂ ಇದೆ. ನಾಲ್ಕು ಜನರ ನಡುವೆ ಬದುಕುವಾಗ ಮಾನವನು ಹೇಗೆ ಜೀವಿಸುತ್ತಾನೆ, ಅವರ ಕಷ್ಟಗಳನ್ನು ತೊಲಗಿಸಲು ತಾನು ಹೇಗೆ ಸುಖತ್ಯಾಗಮಾಡುತ್ತಾನೆ ಎಂಬುದೇ ಮುಖ್ಯ. ಇತರರ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗಮಾಡುವುದೇ ಮಹೋನ್ನತವಾದ ಧರ್ಮ- ಇದು ತಾಯಿಯ ಮೂಲಕ ರೈಕ್ವನಿಗೆ ಕ್ರಿಯಾರೂಪವಾಗಿ ದೊರೆತ ಸಂದೇಶ.

‘ಸೃಷ್ಟಿಕಾರ್ಯ ನಿರಂತರವಾಗಿ ಮುಂದುವರಿ ಯುತ್ತಲೇ ಇರುತ್ತದೆ. ಅದನ್ನು ತಡೆಗಟ್ಟಬೇಕೆಂದು ಯತ್ನಿಸುವವನು ಮುಗ್ಧ. ಬದುಕನ್ನು ಸಕ್ರಮವಾಗಿ, ನಿಯಮ ಬದ್ಧವಾಗಿ, ಇತರರಿಗೆ ನೋವಾಗದಂತೆ ಕಳೆಯುವುದೇ ಸಂಸ್ಕೃತಿ’- ತಾಯಿ ರೈಕ್ವನಿಗೆ ಹೇಳಿದ ಮತ್ತೊಂದು ಸತ್ಯ.

ರಾತ್ರಿ ಹಗಲು ಕಣ್ಣುಮುಚ್ಚಿ ಅಡವಿಯಲ್ಲಿ ತಪಸ್ಸು ಮಾಡುವ ಏಕಾಂತಸಾಧಕನಾದ ರೈಕ್ವ ನಿಧಾನವಾಗಿ ಸಮಾಜ ಮಧ್ಯಕ್ಕೆ ಬಂದು, ಸಮಾಜವೆಂದರೆ ಏನೆಂಬುದನ್ನು ಅರ್ಥಮಾಡಿಕೊಂಡು ಸಂಸ್ಕೃತಿಪರಳಾದ ಜಾಬಾಲಿಯನ್ನು ಮದುವೆಯಾಗಿ ಸಂಸಾರಿಯಾಗು ವುದರೊಂದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ. ಹೀಗೆ ರೈಕ್ವ ಒಂದು ದೊಡ್ಡ ಸತ್ಯವನ್ನು ಕಂಡುಕೊಳ್ಳುತ್ತಾನೆ. ಮನುಷ್ಯ ಇತರರೊಂದಿಗೆ ಬದುಕಿ, ಅವರ ಕಷ್ಟಸುಖಗಳಲ್ಲಿ ಭಾಗಿ ಯಾಗಬೇಕು. ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು. ಆಗ ಅವನ ಬದುಕು ಸಾರ್ಥಕ.

‘ಬಾಣಭಟ್ಟ ಕೀ ಆತ್ಮಕಥಾ’ ಕೃತಿಯಲ್ಲಿ ದ್ವಿವೇದಿಯವರು ಹರ್ಷನ ಕಾಲದ ಸಾಮಾಜಿಕ ವ್ಯವಸ್ಥೆಯ ಒಂದು ಸುಂದರ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.

ಸಾಹಿತ್ಯಕ್ಕೆ ದ್ವಿವೇದಿಯವರ ಕೊಡುಗೆ

ದ್ವಿವೇದಿಯವರಿಗಿಂತ ಮುಂಚೆಯೇ ಹಿಂದಿ ಸಾಹಿತ್ಯದಲ್ಲಿ ಸಾಹಿತಿಗಳ ಮತ್ತು ವಿಮರ್ಶಕರ ಒಂದು ದೀರ್ಘ ಪರಂಪರೆಯೆ ನಡೆದುಬಂದಿತ್ತು. ಅದರಲ್ಲಿ ಅನೇಕ ಮಂದಿ ಸಾಹಿತ್ಯಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು. ಇನ್ನು ಕೆಲವರು ಸಾಹಿತ್ಯದೊಡನೆ ಚರಿತ್ರೆ ಮತ್ತು ಭಾಷೆಗಳನ್ನು ಅಳವಡಿಸಿಕೊಂಡು ಕೃತಿ ರಚನೆ ಮಾಡುತ್ತಿದ್ದರು. ಆದರೆ ಬಹಳ ಮಂದಿ ಅದುವರೆಗೆ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರಗಳನ್ನು ಜನಜೀವನದ ಹಲವಾರು ಮುಖಗಳನ್ನು ಕುರಿತು ಅಭ್ಯಾಸ ಮಾಡಿರಲಿಲ್ಲ. ಅವುಗಳ ದಾರ್ಶನಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಸಾಹಿತ್ಯಕ್ಕೆ ಅಳವಡಿಸುವ ಗೋಜಿಗೆ ಹೋಗಿರಲಿಲ್ಲ. ಈ ನಿಟ್ಟಿನಲ್ಲಿ ದ್ವಿವೇದಿಯವರ ಕೆಲಸ ಗಮನಾರ್ಹ.

ಸಂಸ್ಕೃತಿಯನ್ನು ಕುರಿತಂತೆ ಅವರ ವಿಚಾರಧಾರೆ ಬಹಳ ವ್ಯಾಪಕವಾಗಿದೆ. ಸಮಾಜದ ಸಮಸ್ತ ಮುಖಗಳು, ಸಾಮಾಜಿಕ ಮತ್ತು ರಾಜಕೀಯ ಚರಿತ್ರೆ, ಧಾರ್ಮಿಕ ಮತ್ತು ದಾರ್ಶನಿಕ ಭಾವನೆಗಳು, ಜನಪದ ಜೀವನದ ರೀತಿನೀತಿಗಳು, ನಂಬಿಕೆಗಳು ಇವೆಲ್ಲವನ್ನು ಅದು ಒಳಗೊಂಡಿರುತ್ತದೆ. ದ್ವಿವೇದಿಯವರು ವಾಸ್ತವವಾದಿ. ಸಾಹಿತ್ಯವನ್ನು ಕುರಿತು ಚಿಂತನೆ ನಡೆಸಿದ್ದು ಈ ತಳಹದಿಯ ಮೇಲೆಯೆ.

ಮಾನವತಾವಾದ ದ್ವಿವೇದಿಯವರ ಇನ್ನೊಂದು ವೈಶಿಷ್ಟ್ಯ. ಭಾರತದ ಚರಿತ್ರೆಯೆಂದರೆ ಕೇವಲ ರಾಜರುಗಳ ಮತ್ತು ವಿದ್ವಾಂಸರ ಚರಿತ್ರೆಯಲ್ಲ. ಚರಿತ್ರೆಯಲ್ಲಿ ದಾಖಲಾಗದೆ ಹೋಗಿರುವ ಲೆಕ್ಕವಿಲ್ಲದಷ್ಟು ಹೆಸರು ಪರಿಚಯ ಕಾಣದ ವರ್ಗಗಳ ಕೊಡುಗೆ ಸಹ ಇದರಲ್ಲಿ ಸೇರಿಹೋಗಿದೆ. ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋದರೆ ಚರಿತ್ರೆ ಬರಡಾಗುತ್ತದೆ. ಕೊರಕಲಾಗುತ್ತದೆ. ಚರಿತ್ರೆಗೆ ವ್ಯಾಪಕವಾದ ಜನಜೀವನ ನೀಡಿರುವ ಕೊಡುಗೆಯ ವಿವೇಚನೆಯೇ ದ್ವಿವೇದಿಯವರ ಮಾನವತಾವಾದದ ಸಾರ.

ಅನೇಕ ಭಾಷೆಗಳನ್ನು ಮಾತನಾಡುವಂತಹ ನಮ್ಮ ಭಾರತದಲ್ಲಿ ವೈವಿಧ್ಯ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ವಿದ್ವಾಂಸರು ಬೇರೆ ಬೇರೆ ಭಾಷೆಗಳನ್ನು ಮತ್ತು ಅವುಗಳ ಸಾಹಿತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ನಡೆಸಿರುವುದುಂಟು. ಒಂದು ಭಾಷೆ, ಅದರ ಸಾಹಿತ್ಯ ಇವನ್ನು ಇನ್ನೊಂದು ಭಾಷೆ, ಅದರ ಸಾಹಿತ್ಯಗಳೊಂದಿಗೆ ಹೋಲಿಸಿದ ಅಧ್ಯಯನಗಳೂ ಸಾಕಷ್ಟು ನಡೆದಿವೆ. ಆದರೆ ಈ ವೈವಿಧ್ಯದಲ್ಲಿ ಏಕತೆಯನ್ನು ಕಂಡುಕೊಂಡು ಇಡೀ ಭಾರತೀಯ ಸಾಹಿತ್ಯದ ಮೇಲೆ ಒಟ್ಟಾರೆ ದೃಷ್ಟಿ ಹರಿಸಲು ಪ್ರಯತ್ನಿಸಿದವರು ಕೆಲವೇ ಮಂದಿ. ದ್ವಿವೇದಿಯವರ ದೃಷ್ಟಿ ವಾಸ್ತವವಾಗಿ ಇದ್ದುದು ಈ ರೀತಿಯ ಸಮಗ್ರ ಭಾರತೀಯ ಸಾಹಿತ್ಯದ ಮೇಲೆ. ಪ್ರಾಚೀನ ಸಾಹಿತ್ಯದ ತಿರುಳನ್ನು ಸಮಗ್ರ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ನಮ್ಮ ಮುಂದಿಟ್ಟಿದ್ದಾರೆ. ತಮ್ಮ ಕಲ್ಪನೆ ಮತ್ತು ಪ್ರತಿಭೆಗಳಿಂದ ಅದಕ್ಕೊಂದು ಹೊಸ ಮೆರುಗನ್ನು ಕೊಟ್ಟಿದ್ದಾರೆ.

ಕಲೆಗಾರ ಸುತ್ತಮುತ್ತಲಿನ ಜನರ ಜೀವನವನ್ನು ಕಣ್ಣು ತೆರೆದು ನೋಡಬೇಕು. ಅವರ ಕಷ್ಟ ಸುಖ ಸೊಗಸು ಕುರೂಪಗಳನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಕಲೆಯಿಂದ ಜನರ ಬಾಳು ಇನ್ನೂ ಚೆನ್ನಾಗುವಂತೆ ಕಲೆಯನ್ನು ಸೃಷ್ಟಿಸಬೇಕು. ಇದನ್ನು ದ್ವಿವೇದಿಯವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.

ಸಾರ್ವಜನಿಕ ಕ್ಷೇತ್ರದಲ್ಲಿ

ದ್ವಿವೇದಿಯವರು ಉದಾರ ಸ್ವಭಾವದವ ರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸಮಾಡುತ್ತಿದ್ದಂತೆಯೇ ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲು ಗೊಳ್ಳುತ್ತಿದ್ದರು. ಅನೇಕ ಸಂಘ-ಸಂಸ್ಥೆಗಳೊಡನೆ ನಿಕಟವಾದ ಸಂಪರ್ಕವನ್ನು ಬೆಳೆಸಿಕೊಂಡಿದ್ದರು. ಬೇರೆ ಬೇರೆ ರೀತಿ ಯೋಚನೆ ಮಾಡುವವರ ಅಭಿಪ್ರಾಯಗಳನ್ನು ಅವರು ಆಸಕ್ತಿಯಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದೊಂದೇ ಸರಿಯಾದ ಅಭಿಪ್ರಾಯ. ಉಳಿದುವೆಲ್ಲ ತಪ್ಪು ಎಂದು ಅವರು ಯಾವ ವಿಚಾರವನ್ನೂ ಎತ್ತಿ ಹಿಡಿಯಲಿಲ್ಲ.

ಕಾಶಿಯಲ್ಲಿರುವಾಗಲೇ ಅವರು ನಾಗರೀ ಪ್ರಚಾರಿಣೀ ಸಭಾ ಎಂಬ ಸಂಸ್ಥೆಯ ಉಪಾಧ್ಯಕ್ಷರೂ ಮತ್ತು ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಕೇಂದ್ರ ಸರ್ಕಾರದ ನೆರವಿನಿಂದ ನಾಗರೀಪ್ರಚಾರಿಣೀ ಸಭಾ ಹಿಂದಿ ಶಬ್ದಸಾಗರ, ಹಿಂದಿ ವಿಶ್ವಕೋಶ, ಹಿಂದಿ ಸಾಹಿತ್ಯದ ಬೃಹತ್ ಇತಿಹಾಸ ಮುಂತಾದ ಯೋಜನೆಗಳನ್ನು ಪ್ರಾರಂಭಿಸಿದ್ದು ಈ ಕಾಲದಲ್ಲೇ. ನಾಗರೀಪ್ರಚಾರಿಣೀ ಪತ್ರಿಕೆಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದರು.

ಲಖ್ನೋ ವಿಶ್ವವಿದ್ಯಾನಿಲಯ ೧೯೪೦ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ಕರಾಚಿಯಲ್ಲಿ ನಡೆದ ಹಿಂದಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠವನ್ನು ಅವರು ಅಲಂಕರಿಸಿದ್ದರು. ಸಮ್ಮೇಳನ  ಅವರಿಗೆ ಸಾಹಿತ್ಯ ವಾಚಸ್ಪತಿ ಎಂಬ ಬಿರುದನ್ನು ನೀಡಿ ಸಮ್ಮಾನಿಸಿತ್ತು. ಹಾಗೆಯೇ ದರ್ಭಾಂಗಾದಲ್ಲಿ ನಡೆದ ಪ್ರಾಚ್ಯ ವಿದ್ಯಾಸಮ್ಮೇಳನದ ಹಿಂದಿ ಸಮಿತಿಯ ಅಧ್ಯಕ್ಷರಾಗಿಯೂ ದ್ವಿವೇದಿಯವರು ಕೆಲಸ ಮಾಡಿದರು. ೧೯೬೭ ರಲ್ಲಿ ಟಾಗೂರ್ ಪ್ರೊಫೆಸರರಾಗಿ (ಎಂದರೆ ರವೀಂದ್ರನಾಥ ಟಾಗೂರ್‌ರ ಜ್ಞಾಪಕಾರ್ಥವಾಗಿ ಸ್ಥಾಪಿಸಿದ ಪ್ರಾಧ್ಯಾಪಕ ಪೀಠಕ್ಕೆ) ನೇಮಕಗೊಂಡರು. ಅನಂತರ ಮತ್ತೆ ಕಾಶೀ ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿದರು. ೧೯೬೮ರಲ್ಲಿ ಆ ವಿಶ್ವವಿದ್ಯಾನಿಲಯದ ರೆಕ್ಟರ್ ಆಗಿ ಕೆಲಸ ಮಾಡಿದರು. ೧೯೭೦-೭೨ ರಲ್ಲಿ ಹಿಂದಿ ಭಾಷೆಯ ಐತಿಹಾಸಿಕ ವ್ಯಾಕರಣ ಯೋಜನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಕಾಶೀ ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಮೇಲೆ ೧೯೭೨ರಲ್ಲಿ ಉತ್ತರಪ್ರದೇಶ ಹಿಂದಿ ಗ್ರಂಥ ಅಕಾಡೆಮಿಯ ಆಹ್ವಾನದ ಮೇರೆಗೆ ಅದರ ಸಂಚಾಲನ ಮಂಡಳಿಯ ಅಧ್ಯಕ್ಷರಾದರು. ಅನಂತರ ಉತ್ತರಪ್ರದೇಶ ಹಿಂದಿ ಸಂಸ್ಥಾನದ ಕಾರ್ಯಕಾರಿಣಿ ಸಮಿತಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

೧೯೪೭ರಲ್ಲೇ ಅವರಿಗೆ ಮಂಗಲಾ ಪ್ರಸಾದ್ ಪುರಸ್ಕಾರ ದೊರೆತಿತ್ತು. ೧೯೫೭ರಲ್ಲಿ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ಪದವಿ ನೀಡಿ ಗೌರವಿಸಿತು. ೧೯೬೨ರಲ್ಲಿ ಸಾಹಿತ್ಯ ಅಕಾಡೆಮಿಯ ಟಾಗೂರ್ ಪುರಸ್ಕಾರ ಅವರ ಪಾಲಿನದಾಯಿತು. ೧೯೭೩ರಲ್ಲಿ ರವೀಂದ್ರ ಭಾರತಿಯ ಟಾಗೂರ್ ಪುರಸ್ಕಾರ ಮತ್ತು ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಅವರಿಗೆ ಲಭಿಸಿತು. ಇವು ಅವರಿಗೆ ಸಾಮಾಜಿಕವಾಗಿ ಸಂದ ಕೆಲವು ಗೌರವಗಳಷ್ಟೆ.

ದ್ವಿವೇದಿಯವರ ಬದುಕಿನಲ್ಲಿ ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಅವರ ವಿಚಾರಧಾರೆಗಳಲ್ಲಿ ಕೆಲವನ್ನು ಮಾತ್ರ ನಾವು ಇಲ್ಲಿ ಪರಿಶೀಲಿಸಬಹುದು.

ಮೂಢನಂಬಿಕೆ ಬೇಡ

ಆಚಾರ್ಯ ಹಜಾರಿಪ್ರಸಾದ ದ್ವಿವೇದಿಯವರ ಜೀವನದರ್ಶನ ಪರಂಪರಾಗತ ರೂಢಿಗಳನ್ನು ಮತ್ತು ಪೊಳ್ಳು ನಂಬಿಕೆಗಳನ್ನು ಅವಲಂಬಿಸಿರಲಿಲ್ಲ. ಅದು ಇತ್ತೀಚಿನ ವೈಜ್ಞಾನಿಕ ವಿಚಾರಗಳನ್ನು ಆಧರಿಸಿತ್ತು. ನಮ್ಮ ಪ್ರಾಚೀನ ದಾರ್ಶನಿಕರು ಪೌರಾಣಿಕ ಕಲ್ಪನೆಗಳನ್ನು ಮತ್ತು ಪರಲೋಕದ ಕಥೆಗಳನ್ನು ಆಧರಿಸಿ ಮನುಷ್ಯನ ಇತಿವೃತ್ತದ ಬಗ್ಗೆ ವ್ಯಾಖ್ಯಾನ ಮಾಡಿದರು. ಆದರೆ ದ್ವಿವೇದಿಯವರು ಡಾರ್ವಿನ್‌ನ ವಿಕಾಸವಾದ ಮತ್ತು ಮಾನವಕುಲ ಶಾಸ್ತ್ರಗಳನ್ನು ಆಧರಿಸಿ ಮನುಷ್ಯ ನಡೆದು ಬಂದ ದಾರಿಯನ್ನು ವಿವರಿಸಿದ್ದಾರೆ.

(ಇಂಗ್ಲೆಂಡಿನ ಪ್ರಖ್ಯಾತ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಪ್ರಪಂಚದ ಸೃಷ್ಟಿಯನ್ನು ಕುರಿತು ಹೊಸ ವಿವರಣೆ ನೀಡಿದ. ಸ್ವಲ್ಪಕಾಲದಲ್ಲಿ ಪರಮಾತ್ಮ ಜಗತ್ತಿನ ಸೃಷ್ಟಿಯನ್ನು ಮಾಡಿ ಮುಗಿಸಿದ ಎಂದು ಹಲವು ಮತಗಳನ್ನು ಅನುಸರಿಸುವ ಬಹುಮಂದಿಯ ನಂಬಿಕೆ. ಡಾರ್ವಿನ್ ಸೃಷ್ಟಿ ಕೋಟ್ಯಂತರ ವರ್ಷಗಳಿಂದ ನಡೆದು ಬಂದಿದೆ. ಬಹು ಸರಳವಾದ ಜೀವಿಗಳಿಂದ ಪ್ರಾರಂಭವಾಗಿ ಹೊಸ ಹೊಸ ಬಗೆಯ ಜೀವಿಗಳು ಉದ್ಭವಿಸಿದವು ಇತ್ಯಾದಿ ವಿವರಣೆ ನೀಡಿದ.)

ಮನುಷ್ಯತ್ವ

ಮನುಷ್ಯತ್ವ ಎಂಬುದು ನಮಗೆ ಕೇವಲ ಒಂದೇ ದಿನದಲ್ಲಿ ಸಿಕ್ಕಿದ್ದಲ್ಲ. ಅದೆಷ್ಟು ಸಹಸ್ರಾರು ವರ್ಷಗಳ ಕಾಲ ಸಾಧನೆಮಾಡಿ ನಾವು ಪಶುವಿನ ಸ್ಥಿತಿಯಿಂದ ಮನುಷ್ಯನ ಸ್ಥಿತಿಗೆ ಬಂದು ತಲುಪಿದ್ದೇವೆ. ಒಂದು ಪಕ್ಷ ಈಗ ನಾವು ಮನುಷ್ಯತ್ವವನ್ನು ಬಿಟ್ಟು ಪಶುತ್ವವನ್ನು ಒಪ್ಪಿಕೊಂಡರೆ ಲಕ್ಷಾಂತರ ವರ್ಷಗಳ ಕಾಲ ನಡೆಸಿದ ಸಾಧನೆಯ ಗತಿಯೇನು? ಒಬ್ಬ ವ್ಯಕ್ತಿ ನೂರುದಿನಗಳ  ಕಾಲ ಕಷ್ಟಪಟ್ಟು ಪರ್ವತದ ತುದಿಯನ್ನು ತಲುಪಿ ಅನಂತರ ಒಮ್ಮೆಗೆ ಹಾರಿ ಮತ್ತೆ ಬುಡದಲ್ಲಿ ಬಂದು ಬಿದ್ದರೆ ಹೇಗಿರುತ್ತದೆ ಎಂಬುದು ದ್ವಿವೇದಿಯವರ ಪ್ರಶ್ನೆ.

ಶಾಶ್ವತ ಮೌಲ್ಯಗಳು

ಯಾವುದು ಹೇಗೆ ಕಂಡುಬರುತ್ತದೋ ಅದನ್ನು ಹಾಗೆಯೆ ಒಪ್ಪಿಕೊಳ್ಳುವುದು ಮನುಷ್ಯನಿಗಿಂತ ಹಿಂದಿದ್ದ ಜೀವಿಗಳ ಲಕ್ಷಣವಾಗಿತ್ತು. ಆದರೆ ಯಾವುದು ಹೇಗಿದೆಯೋ ಅದಕ್ಕಿಂತ ಮಿಗಿಲಾಗಿ ಯಾವುದು ಹೇಗಿರಬೇಕೋ ಹಾಗೆ ಅದನ್ನು ಮಾಡುವತ್ತ ಪ್ರಯತ್ನ ನಡೆಸುವುದು ಮನುಷ್ಯನ ವೈಶಿಷ್ಟ್ಯ ಎನ್ನುತ್ತಿದ್ದರು ದ್ವಿವೇದಿಯವರು. ಹೀಗೆಂದರೆ, ಪ್ರಪಂಚವನ್ನು ಉತ್ತಮಗೊಳಿಸಬೇಕು ಎಂಬ ಹಂಬಲ ಮನುಷ್ಯನಿಗೆ ಮಾತ್ರ ಇರುತ್ತದೆ, ಪ್ರಾಣಿಗಳಿಗೆ ಇರುವುದಿಲ್ಲ.

ಸತ್ಯ, ಅಹಿಂಸೆ, ಪ್ರೇಮ, ಭಕ್ತಿ ಮೊದಲಾದ ಮನುಷ್ಯರ ಗುಣಗಳ ಬಗ್ಗೆ ಅವರಿಗೆ ಅಪಾರ ಶ್ರದ್ಧೆ. ಆದರೆ ಈ ಗುಣಗಳಿಗೆ ಇಂದು ಲೌಕಿಕವಾಗಿ ಯಾವ ಕಿಮ್ಮತ್ತೂ ಇಲ್ಲವಲ್ಲ ಎಂದು ಅವರ ವ್ಯಥೆ. ಆದರೆ ಈಗಲೂ ಪ್ರಪಂಚದಲ್ಲಿ ಸದ್ಗುಣಗಳನ್ನು ಅರ್ಥಮಾಡಿಕೊಳ್ಳುವವರು ಇದ್ದಾರೆ. ಜನ ಸತ್ಯ ಮತ್ತು ಅಹಿಂಸೆಗಳಿಗೆ ಇಂದೂ ಬೆಲೆ ಕೊಡುತ್ತಾರೆ. ಪ್ರೇಮ ಮತ್ತು ಭಕ್ತಿಗಳನ್ನು ಇಂದೂ ಆದರದಿಂದ ಕಾಣುತ್ತಾರೆ. ಅನ್ಯಾಯದ ವಿರುದ್ಧ ಸಿಡಿದೇಳುವವರನ್ನು ಶ್ರದ್ಧೆಯಿಂದ ನೋಡುತ್ತಾರೆ. ವಿವೇಕ, ನಿಷ್ಠೆ, ಇಂಥ ಮೌಲ್ಯಗಳಿಗೆ ಬುದ್ಧ ಅಥವಾ ವಿಕ್ರಮಾದಿತ್ಯನ ಕಾಲದಲ್ಲಿ ನೀಡುತ್ತಿದ್ದ ಮರ್ಯಾದೆಯನ್ನು ಇಂದು ಸಹ ಜನ ನೀಡುತ್ತಾರೆ ಎಂಬುದು ದ್ವಿವೇದಿಯವರ ದೃಢನಂಬಿಕೆ.

ಮನುಷ್ಯೋಪಯೋಗಿ ಸಾಹಿತ್ಯ

ಮನುಷ್ಯ ಭಗವಂತನ ಸರ್ವೋತ್ತಮ ಕೃತಿ, ಅವನ ಉಳಿದೆಲ್ಲ ಸೃಷ್ಟಿಯೂ ಮನುಷ್ಯನ ಹಿತಸಾಧನೆಗೆಂದೇ  ಇರುವುದು. ತಾನು ಬೆಳೆಯುತ್ತಾ ಹೋದಂತೆಲ್ಲ ಮನುಷ್ಯ ಸಾಧನೆಯ ಮೂಲಕ ತನ್ನ ಹಿತವನ್ನು ಸಾಧಿಸಿಕೊಳ್ಳುತ್ತಾ ಮುನ್ನಡೆಯುತ್ತಾನೆ. ಮಾನವ ಸಂಸ್ಕೃತಿಯ ವಿಕಾಸದಲ್ಲಿ ಸಾಹಿತ್ಯದ ಕೊಡುಗೆ ತುಂಬಾ ಮಹತ್ವಪೂರ್ಣವಾದುದು. ಹಾಗಾಗಿ ಒಂದು ಸಾಹಿತ್ಯದ ಕೃತಿ ಶ್ರೇಷ್ಠವಾದದ್ದೆ ಎಂದು ತೀರ್ಮಾನ ಮಾಡಬೇಕಾದರೆ ಅದು ಎಷ್ಟರಮಟ್ಟಿಗೆ ಲೋಕಹಿತವನ್ನು ಮಾಡುತ್ತದೆ ಎಂಬುದನ್ನು ಅಗತ್ಯವಾಗಿ ಗಮನಿಸಬೇಕು.

ದ್ವಿವೇದಿಯವರ ಅಭಿಪ್ರಾಯದ ಪ್ರಕಾರ ಜನರಲ್ಲಿ ಶ್ರೇಷ್ಠಗುಣಗಳನ್ನು ಬೆಳೆಸುವ ಸಾಧನವೆಂದರೆ ಸಾಹಿತ್ಯವೇ. ಅದು ಸಮಾಜ ನಿರ್ಮಾಣದಲ್ಲಿ ಹೆಗಲುಕೊಟ್ಟು ನಿಲ್ಲಬೇಕು. ಈ ಜವಾಬ್ದಾರಿಯನ್ನು ಅದು ಎಷ್ಟರಮಟ್ಟಿಗೆ ನಿರ್ವಹಿಸುತ್ತದೆ ಎಂಬುದೇ ಅದರ ಒರೆಗಲ್ಲು. ದುರ್ಗತಿ, ಹೀನಸ್ಥಿತಿ ಮತ್ತು ಸಣ್ಣತನಗಳಿಂದ ಮನುಷ್ಯನನ್ನು ಉಳಿಸಿ ಅವನ ಒಳಸ್ವರೂಪವನ್ನು ಬೆಳೆಸದೆ ಹೋದಲ್ಲಿ ಎಂಥ ಮಾತಿನ ಜಾಲವೂ ಸಾಹಿತ್ಯವಾಗಲಾರದು. ಇನ್ನೊಬ್ಬರಲ್ಲಿ ವೇದನೆಯನ್ನು ಕಂಡಾಗ ಪರದುಃಖಕಾರತೆ ಮತ್ತು ಸಂವೇದನಾಶೀಲತೆ ಉಕ್ಕಿಬರದೆ ಹೋದಲ್ಲಿ ಅಂಥ ಬರವಣಿಗೆ ಸಾಹಿತ್ಯವೆನಿಸಿಕೊಳ್ಳಲಾರದು.

ಮಾನವತಾವಾದ

ದ್ವಿವೇದಿಯವರ ದೃಷ್ಟಿಯಲ್ಲಿ ಮಾನವತಾವಾದ ಆಧುನಿಕ ಸಾಹಿತ್ಯದ ಪ್ರಾಣ. ಅವರ ಮಾನವತಾವಾದದ ಸ್ಥೂಲ ಸ್ವರೂಪ ಹೀಗಿದೆ. ಮನುಷ್ಯ ಪರಿಪೂರ್ಣನಲ್ಲ, ನಿಜ. ನಾವು ಸುತ್ತಮುತ್ತ ಕಾಣುವಂತೆ ಮನುಷ್ಯನಲ್ಲಿ  ಸ್ವಾರ್ಥ ಇದೆ, ಸಣ್ಣತನ ಇದೆ, ಕ್ರೌರ್ಯ ಇದೆ. ಮನುಷ್ಯನಲ್ಲಿ ಅನೇಕ ಕೆಟ್ಟ ಗುಣಗಳು ಇವೆ. ಇದಕ್ಕಾಗಿ ಆಕ್ಷೇಪಿಸಿ ಟೀಕಿಸಿ ಮನುಷ್ಯನನ್ನು ಹಳಿದು ಪ್ರಯೋಜನವಿಲ್ಲ. ಮನುಷ್ಯರಲ್ಲಿ ದುರ್ಗುಣಗಳಿವೆ ಎಂದು ಗುರುತಿಸಿ ಅವನನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ದೇವತೆ ಯಾಗುವುದು ಸುಲಭ, ಆದರೆ ಮನುಷ್ಯನಾಗುವುದು ಕಷ್ಟ. ಎಲ್ಲ ದೃಷ್ಟಿಯಿಂದಲೂ ಆದರ್ಶನಾದ ಪರಿಪಕ್ವನಾದ ಮನುಷ್ಯನನ್ನು ಸೃಷ್ಟಿಮಾಡುವುದೇ ಸಾಹಿತ್ಯದ ಗುರಿಯಾಗಬೇಕು. ಮನುಷ್ಯ ಸಾಹಿತ್ಯವನ್ನು ಮನುಷ್ಯನ ಒಳಿತಿಗಾಗಿಯೇ ಮಾಡಬೇಕು. ಮಾನವ ಸಂಸ್ಕೃತಿಯನ್ನು ಚಿತ್ರಿಸುವುದೇ ಒಳ್ಳೆಯ ಚಿರಂತನ ಸಾಹಿತ್ಯದ ವಿಷಯವಾಗಬೇಕು. ಎಲ್ಲ ಮನುಷ್ಯರಿಗೆ ಸಹಜವಾಗಿ ಆಹಾರ ಬೇಕು, ನಿದ್ರೆ ಬೇಕು. ಇಂತಹ ಕೆಲವು ಅಗತ್ಯಗಳಿವೆ. ಪ್ರಾಣಿಗಳಿಗೂ ಈ ಅಗತ್ಯಗಳಿವೆ. ಇವನ್ನು ಪೂರೈಸು ವುದರಲ್ಲಿಯೇ ಇಡೀ ಜೀವನವನ್ನು ಕಳೆಯದೆ ಬೇರೆ ಗುರಿಗಳನ್ನು ಮುಂದೆ ಇರಿಸಿಕೊಳ್ಳುವಂತೆ ಅವನನ್ನು ಪ್ರಚೋದಿಸುವುದು ಒಳ್ಳೆಯ ಸಾಹಿತ್ಯದ ಲಕ್ಷಣ.

ಆಚಾರ್ಯ ದ್ವಿವೇದಿಯವರು ಭಾರತೀಯ ಸಂಸ್ಕೃತಿಯ ಪ್ರತಿನಿಧಿ. ದೈವಭಕ್ತಿ ಎಂದರೆ ಮಾನವಮಾತ್ರರ ಸೇವೆ ಎಂದು ಭಾವಿಸಿದ್ದರು. ಸ್ಪೃಶ್ಯ-ಅಸ್ಪೃಶ್ಯ, ಈ ಜಾತಿ, ಆ ಜಾತಿ, ಮತ ಸಂಪ್ರದಾಯಗಳು- ಅವರ ಮನಸ್ಸಿನಲ್ಲಿ ಇಂಥ ಯಾವ ಭೇದಗಳೂ ಇರಲಿಲ್ಲ. ಎಲ್ಲರೂ ಅವರಿಗೆ ಬೇಕಾದವರು.

ಭಾರತೀಯ ಸಾಧನಾಮಾರ್ಗದಲ್ಲಿ ಒಬ್ಬ ವ್ಯಕ್ತಿ ಹೇಗೆ ಸಂಪೂರ್ಣವಾಗಿ ವಿಕಾಸಹೊಂದಬಲ್ಲ ಎಂಬುದಕ್ಕೆ ದ್ವಿವೇದಿಯವರ ಬದುಕು ಮತ್ತು ಜೀವನದರ್ಶನ ಒಂದು ಜ್ವಲಂತ ನಿದರ್ಶನ. ಬಹುಮುಖ ಪ್ರತಿಭಾ ಸಂಪನ್ನರಾಗಿದ್ದ ಅವರು ಭಾರತೀಯ ಸಂಸ್ಕೃತಿಯ ಜೀವಂತ ಪ್ರತಿಮೆ.

ಹಜಾರಿಪ್ರಸಾದ ದ್ವಿವೇದಿಯವರ ಸಾವಿನೊಂದಿಗೆ ಹಿಂದಿ ಸಾಹಿತ್ಯದಲ್ಲಿ ಒಂದು ಯುಗ ಮುಕ್ತಾಯವಾಯಿತು. ಪ್ರಾಚೀನ ಮತ್ತು ನವೀನ, ದರ್ಶನ ಮತ್ತು ವಿಜ್ಞಾನ, ಸಾಹಿತ್ಯ ಮತ್ತು ಜೀವನ ಇವುಗಳ ಸುಂದರ ಸಮನ್ವಯಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದ್ದ ಅವರ ಚೇತನ ಮತ್ತು ಆದರ್ಶಗಳು ಇಂದು ನಮ್ಮ ಮುಂದಿವೆ.