ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತಪಡಿಸಿದ ದತ್ತಿ ಉಪನ್ಯಾಸಗಳು, ವಿದ್ವತ್ ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳು, ಸಂಭಾವನೆ ಗ್ರಂಥಗಳಲ್ಲಿ ಪ್ರಕಟಗೊಂಡಿರುವ ಲೇಖನಗಳು ಮತ್ತು ಕೆಲವು ಸಾಂದರ್ಭಿಕ ಅಭಿವ್ಯಕ್ತಿಗಳು ಹೀಗೆ ಒಟ್ಟು ೨೪ ಬರೆಹಗಳನ್ನು ಇಲ್ಲಿ ಪೋಣಿಸಿದ್ದೇನೆ. ಸುವರ್ಣ ಕರ್ನಾಟಕ ಹೊನ್ನಾರು ಮಾಲೆಯ ಭಾಗವಾಗಿ ಈ ಕೃತಿಯು ಬೆಳಕು ಕಾಣುತ್ತಿರುವುದು ಅಭಿಮಾನದ ಅಂಶವಾಗಿದೆ.

“ಹಣತೆಗೆ ಹನಿ ಎಣ್ಣೆ” ಈ ಕೃತಿಯ ಒಟ್ಟು ಆಶಯವನ್ನು ಧ್ವನಿಸುತ್ತದೆ (ಇಲ್ಲಿಯ ಒಂದು ಲೇಖನದ ಶೀರ್ಷಿಕೆಯೂ ಹೌದು). ನಿರಂತರದ ನಂದಾದೀಪಕ್ಕೆ ಕಿಂಚಿತ್ ದಾಯಭಾಗವಾಗಿ ಇಲ್ಲಿಯ ಬರೆಹಗಳು ಸ್ವೀಕೃತವಾಗಲೆಂಬುದು ಮನದಾಳದ ಹಾರೈಕೆ.

ಈ ಕೃತಿಯ ಪ್ರಕಟನೆಗೆ ವಿಶೇಷ ಆಸಕ್ತಿ ವಹಿಸಿದವರು ನನ್ನ ಇಬ್ಬರು ಪರಮಾಪ್ತ ಮಿತ್ರರು. ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಇವರಿಬ್ಬರಿಗೂ ಕೃತಜ್ಞತೆಗಳು.

ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಋಣಿಯಾಗಿದ್ದೇನೆ. ಸಹೃದಯರ ಪ್ರತಿಕ್ರಿಯೆಗಳಿಗೆ ಸ್ವಾಗತ.

ಡಾ. ತಾಳ್ತಜೆ ವಸಂತಕುಮಾರ
ಕನ್ನಡ ವಿಭಾಗ    
ಮುಂಬಯಿ ವಿಶ್ವವಿದ್ಯಾಲಯ