ನೈಸರ್ಗಿಕವಾದ, ಪ್ರಾಕೃತಿಕವಾದ, ರೂಕ್ಷವಾದ ಆಕೃತಿಯೊಂದು ಅನ್ಯೋನ್ಯ ಸಂಸ್ಕಾರಗಳ ಕುಲುಮೆಯೊಳಗಿಂದ ಹಾದುಹೋಗುತ್ತ ಸುಧಾರಣೆಗಳನ್ನು ಅಂಗೀಕರಿಸುತ್ತ, ಹೊಸ ಪದಾರ್ಥದ ರೂಪಧಾರಣ ಮಾಡುತ್ತ, ‘ಸಂಸ್ಕೃತಿ’ಯಾಗಿ ಪರಿವರ್ತಿತವಾಗುತ್ತದೆ. ಪ್ರಕೃತಿಸಿದ್ಧವಾದ ಹಾಲು, ಹದವಾಗಿ ಕಾದು, ಸಕ್ಕರೆ ಕೇಸರಿ ಯಾಲಕ್ಕಿಗಳನ್ನು ಹದವಾಗಿ ಬೆರೆಸಿಕೊಂಡು, ರಸಪುಷ್ಪವಾಗುವ ಕ್ರಿಯೆಗೆ ‘ಸಂಸ್ಕೃತಿ’ ಪರಿಕಲ್ಪನೆಯನ್ನು ಹೋಲಿಸ ಬಹುದಾಗಿದೆ. ಜೈವಿಕ ಘಟಕಕ್ಕೆ ಸಂವಾದಿಯಾಗಿಯೇ, ಕ್ಷಣದಿಂದ ಕ್ಷಣಕ್ಕೆ ಬೆಳೆಯುತ್ತ ಕೆಲವು ಅಂಶಗಳನ್ನು ಸ್ವೀಕರಿಸುತ್ತ, ಕೆಲವನ್ನು ಕಳೆದುಕೊಳ್ಳುತ್ತ, ಹಲವನ್ನು ನವೀಕರಿಸಿ ಕೊಳ್ಳುತ್ತ ನಮನಶೀಲವಾಗುವುದು ಸಂಸ್ಕೃತಿಯ ಮೂಲ, ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ.

ಈ ಹಿನ್ನೆಲೆಯಲ್ಲಿ, ಸಂಸ್ಕೃತಿಯ ನಿರ್ದಿಷ್ಟ ನಿರ್ವಚನಕ್ಕೆ ಅರ್ಥಪ್ರಾಪ್ತಿಯಾಗುತ್ತದೆ. ಪ್ರಗತಿಪರವಾದ ಎಲ್ಲ ಸಂಸ್ಕೃತಿಗಳಿಗೂ ಸೈದ್ಧಾಂತಿಕ (Ideational) ಭಾವನಾತ್ಮಕ (Sensational) ಮತ್ತು ಆದರ್ಶಾತ್ಮಕ (Idealistic) ಎನ್ನುವ ಮೂರು ನೆಲೆಗಳಿರುತ್ತವೆ. ಸ್ಥೂಲವಾಗಿ ಇವುಗಳನ್ನು ಸಂಸ್ಕೃತಿಯೊಂದರ ಬಾಹ್ಯ ಮತ್ತು ಆಂತರಿಕ ಸಂವಿಧಾನಗಳೆಂದು ಕರೆಯಬಹುದು. ಈ ದೃಷ್ಟಿಯಿಂದ ಸಂಸ್ಕೃತಿಯ ಸಾಮಾನ್ಯ ಲಕ್ಷಣಗಳನ್ನು ಕ್ರೋಡೀಕರಿ ಸುವುದು ಇಲ್ಲಿ ಅಗತ್ಯವೆನಿಸುತ್ತದೆ. ಸಂಗ್ರಹವಾಗಿ ಅವುಗಳನ್ನು ಹೀಗೆ ಸೂಚಿಸಬಹುದು :

೧. ಸಂಸ್ಕೃತಿಯು ಜನಾಂಗವೊಂದರ ಬಾಹ್ಯ ಆಂತರಿಕ ಜೀವನ ವಿಧಾನವನ್ನು ಪ್ರತಿ ಫಲಿಸುತ್ತದೆ.

೨. ಸಂಸ್ಕೃತಿಯು ಮಾನವಕೃತವಾಗಿರುವುದರಿಂದ ಅದು ಅವನ ಪರಿಸರದ ಭಾಗವೇ ಆಗಿರುತ್ತದೆ.

೩. ಸಂಸ್ಕೃತಿಯು ಸಮುದಾಯದ ಜ್ಞಾನಸಂಪತ್ತು, ನಂಬಿಕೆಗಳು, ಕಲಾಪ್ರಕಾರಗಳು, ನೈತಿಕ ನೆಲೆ, ರೀತಿ ರಿವಾಜುಗಳು, ಆಚರಣೆಗಳು ಮುಂತಾದ ಸಂಕೀರ್ಣ ಒಳವಿಭಾಗಗಳನ್ನು ಹೊಂದಿರುತ್ತದೆ.

೪. ಪ್ರತಿವ್ಯಕ್ತಿಯೂ ಒಂದಲ್ಲ ಒಂದು ಸಂಸ್ಕೃತಿಯ ಸದಸ್ಯನಾಗಿ, ಆ ಸಾಂಸ್ಕೃತಿಕ ಅಂಶಗಳು ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳನ್ನು ಸ್ಥಿರಪಡಿಸುತ್ತಾನೆ.

೫. ನೈರಂತರ್ಯವು ಸಂಸ್ಕೃತಿಯ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.

೬. ಅದು ಸಾಮೂಹಿಕ ಸಂದರ್ಭಗಳಲ್ಲಿ ಹೆಚ್ಚು ಪ್ರಭಾವಿಯಾಗಿ ಕಾಣಿಸುತ್ತದೆ.

೭. ಸಂಸ್ಕೃತಿಯು ಪರಿವರ್ತನಶೀಲವಾಗಿದೆ.

ಈ ಸಂಸ್ಕೃತಿಯನ್ನು ಮುಖ್ಯವಾಗಿ ಮೂರು ಮೂಲೆಗಳಿಂದ ಮುಟ್ಟಬಹುದು. ಒಂದು, ಕಾಲ ದೇಶಗಳ ಸೀಮೆಗಳನ್ನು ನಿವಾರಿಸಿಕೊಂಡ ವಿಶ್ವಮಾನ್ಯವಾದ ಮಾನವ ಸಂಸ್ಕೃತಿ, ಇನ್ನೊಂದು, ಕಾಲ ದೇಶಗಳಿಗೆ ಬದ್ಧವಾಗಿ, ನಿರ್ದಿಷ್ಟ ಸಮುದಾಯದ ಸೊತ್ತಾಗಿ ಅರಳುವ ಪ್ರಾದೇಶಿಕ ಸಂಸ್ಕೃತಿ. ಮೂರನೆಯದು, ಗಾಢವಾದ ಮೌಲ್ಯಗಳಿಂದ ಮರ್ಯಾದಿತವಾದ, ವ್ಯಕ್ತಿನಿಷ್ಠವಾದ ವೈಯಕ್ತಿಕ ಸಂಸ್ಕೃತಿ. ಹಾಗೆ ನೋಡಿದರೆ, ಈ ವೈಯಕ್ತಿಕ ಸಂಸ್ಕೃತಿಯೇ ವಿಕಸನದ ಮೆಟ್ಟಲುಗಳನ್ನೊಂದಾಗಿ ಏರಿ ವಿಶ್ವಸಂಸ್ಕೃತಿಯನ್ನು ರೂಪಿಸುತ್ತದೆ, ಸದಾ ಅದರ ಬೆಂಬಲಕ್ಕೆ ನಿಲ್ಲುತ್ತದೆ.

ಇಷ್ಟು ಅಂಶಗಳನ್ನು ಪೂರ್ವಭಾವಿಯಾಗಿ ಗಮನಿಸಿ, ನಮ್ಮ ವಿಚಾರ ಪ್ರಪಂಚದ ಪ್ರವಾಸಿಗಳು ಸಂಸ್ಕೃತಿಯ ಮೂಲ ಚೂಲಗಳನ್ನು ಯಾವ ಯಾವ ನಿಟ್ಟುಗಳಿಂದ ಶೋಧನೆ ಗಳಿಗೆ ಒಳಪಡಿಸಿದ್ದಾರೆನ್ನುವುದರ ನಿಷ್ಕರ್ಷೆಗೆ ಹೊರಡಬಹುದು.

ನಮ್ಮಲ್ಲಿ ಅಗಾಧವಾಗಿರುವ ಸಂಸ್ಕೃತಿ ಮಾದರಿ (Cultural Stereotype)ಗಳನ್ನು ನೆನಪಿಗೆ ತಂದುಕೊಂಡಾಗ, ಇಲ್ಲಿ ಒಂದಂಶವನ್ನು ಸ್ಪಷ್ಟಪಡಿಸಿಕೊಳ್ಳುವುದು ಅಗತ್ಯ ವೆನಿಸುತ್ತದೆ. ಸಂಸ್ಕೃತಿಯೆಂದೊಡನೆ, ನಮ್ಮ ಸ್ಮೃತಿಗೆ ಸಂಸ್ಕೃತಿಯ ಒಳಗೆ ನಿಂತೇ, ಅದರಿಂದ ಬೇರ್ಪಡಿಸಿಕೊಂಡು ನಡೆಸುವ ಅದರ ಅಧ್ಯಯನ ಅಥವಾ ಪರಕೀಯ ಸಂಸ್ಕೃತಿಯೊಂದನ್ನು ಲಕ್ಷ್ಯವಾಗಿರಿಸಿಕೊಂಡು, ಆ ಪರಕೀಯತೆಯನ್ನೇ ಸಾಕ್ಷೀಪ್ರಜ್ಞೆಯಾಗಿ ಬಳಸಿಕೊಂಡು ನಡೆಸುವ ಅಭ್ಯಾಸ ಮುಂತಾದವುಗಳೆಲ್ಲ ದಾಳಿಯಿಡತೊಡಗುತ್ತವೆ. ಪ್ರಸ್ತುತ ನಮ್ಮ ಉದ್ದೇಶ ಅದಲ್ಲ, ಇಲ್ಲಿ, ಸಾಂಸ್ಕೃತಿಕ ಅಧ್ಯಯನಗಳಿಗೆ ನಮ್ಮ ವಿದ್ವಾಂಸರ ಕೊಡುಗೆಗಳ ಗುಣಮಟ್ಟ ಪ್ರಮಾಣ ಗಳನ್ನು ಅಳೆಯುವ ಕ್ರಮವನ್ನು ಅನುಸರಿಸಲಾಗಿಲ್ಲ. ಬದಲಿಗೆ, ಸಂಸ್ಕೃತಿಯನ್ನೊಂದು ಪರಿಕಲ್ಪನೆಯನ್ನಾಗಿ ಗಣಿಸಿದ ನಮ್ಮ ಚಿಂತನಶೀಲರು ಅದರ ಸ್ವರೂಪದ ಬಗೆಗೆ ನಡೆಸಿದ ವಿಚಾರ ವಿಮರ್ಶೆಯ ಗತಿಯನ್ನಷ್ಟೇ ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ.

ಆಧುನಿಕ ಕನ್ನಡದ ಸಾಹಿತ್ಯ ರಚನೆಗೆ ಹೊಸ ಹುರುಪನ್ನು ನೀಡಿ, ಸ್ವತಂತ್ರ ಕಕ್ಷೆಯ ಉಡ್ಡಯನ ದೀಕ್ಷೆಯನ್ನು ನೀಡಿದವರು, ಬಿ.ಎಂ. ಶ್ರೀಕಂಠಯ್ಯನವರು ಸಂಸ್ಕೃತಿಯೊಂದ ರೊಂದಿಗೆ ಸಂವಾದಿಸುವ ಕ್ರಮ ಹಾಗೂ ಅದರ ಬೇರ್ಪಡೆ ಸೇರ್ಪಡೆಗಳ ವ್ಯಾಪ್ತಿಯನ್ನು ಪರಿಶೀಲಿಸುತ್ತ ಅವರು,

“…ನಮ್ಮ ಜನರ ಬದುಕು ನಿಜವಾಗಿ ರಸಭರಿತವಾಗಿ, ಭಾವಪುಷ್ಪವಾಗಿ ಹಿಗ್ಗಬೇಕಾದರೆ, ಹಿಂದಿನಿಂದ ಬಂದದ್ದರಲ್ಲಿ ಸಂಗ್ರಹಿಸಬೇಕಾದದ್ದು ಎಷ್ಟು ಎಂಬುದನ್ನೂ ಬುದ್ದಿ ಸ್ವಾತಂತ್ರ್ಯದಿಂದ, ವಿಮರ್ಶಕ ಬುದ್ದಿಗೆ ಕಡಿವಾಣ ಹಾಕದೆ ಚೆನ್ನಾಗಿ ವಿಚಾರ ಮಾಡಿ ಕೊಳ್ಳಬೇಕು. ಒಳ್ಳೆಯ ತೋಟಗಾರನಂತೆ, ಗಿಡವನ್ನು ಸಾಯಿಸದೆ, ಗಿಡವನ್ನು ನಾಶಮಾಡುವ ಒಣರೆಂಚಿಗಳನ್ನು ಕತ್ತರಿಸಿ, ಅದಕ್ಕೆ ಜೀವರಸ ಬರುವಂತೆ ಕಸಿ ಮಾಡಿ, ಸೊಗಸಾದ ಹೂವು, ಹಣ್ಣು ಬಿಡುವಂತೆ ದುಡಿಯಬೇಕು. ಅಪ್ಪ ನೆಟ್ಟ ಮರವೆಂದು ನೇತು ಹಾಕಿಕೊಳ್ಳ ಬೇಕಾದದ್ದಿಲ್ಲ. ‘ವಾಸಾಂಸಿ ಜೀರ್ಣಿಸಿ ಯಧಾ ವಿಹಾಯ’ ಎಂದಂತೆ, ಉಳಿಯಲಾರದ್ದನ್ನು, ಉಳಿಯಬಾರದ್ದನ್ನು ತ್ಯಜಿಸುವ ಧೈರ್ಯ ನಮ್ಮಲ್ಲಿ ಬೆಳೆಯಬೇಕು” (ಶ್ರೀ ಸಾಹಿತ್ಯ, ಪು. ೩೩೧).

ಇದು ಸಂಸ್ಕೃತಿಯನ್ನು ರೋಗಮುಕ್ತವಾಗಿ, ಸದೃಢಕಾಯದೊಂದಿಗೆ ಚೈತನ್ಯಪೂರ್ಣವಾಗಿ ಇರಿಸಿಕೊಳ್ಳುವ ವಿಧಾನ. ಪರಂಪರೆ, ಆಧುನಿಕತೆಗಳ ಪರಂಪರೆ, ಪರಿಸರಗಳ ಅಪೇಕ್ಷಿತ ನಿಷ್ಪತ್ತಿಯ ಸೂಚನೆ.

ಸಂಸ್ಕೃತಿಯ ಬಗೆಗೆ ಆಳವಾಗಿ ಚಿಂತಿಸಿ, ನಮ್ಮ ಚಿಂತನೆಗಳ ಸಾರಸತ್ವಗಳಿಗೆಲ್ಲ ಅಭಿವ್ಯಕ್ತಿ ನೀಡಿದ ಹಲವು ಹಿರಿಯರಲ್ಲಿ ಡಿ.ವಿ.ಜಿ.ಯವರೂ ಒಬ್ಬರಾಗಿದ್ದಾರೆ. ಅವರು ಸಂಸ್ಕೃತಿ ಯೆನ್ನುವ ಪುಸ್ತಕವೊಂದನ್ನು ಬರೆದಿದ್ದಾರೆ. ಅದರಲ್ಲಿ ಅವರು ಸಂಸ್ಕೃತಿ ಎಂದರೇನು ಅದರ ಮೂಲಸ್ಥಾನಗಳಾವುವು ಸುಸಂಸ್ಕೃತನ ಲಕ್ಷಣಗಳೇನು ಮುಂತಾದ ಅನೇಕ ಪ್ರಶ್ನೆಗಳನ್ನು ಕೂಲಂಕಷವಾಗಿ ವಿವೇಚಿಸಿದ್ದಾರೆ. ಅವರು ಸಂಸ್ಕೃತನ ಬಗೆಗೆ ಹೇಳುವ

“ಕಲಿತಂ ಕಲ್ತರೊಳ್ ಅಜ್ಞರೊಳ್ ತಿಳಿಯದಂ ವಾಕ್ಯಜ್ಞರೊಳ್ ತಾತ್ತ್ವಿಕಂ!
ಎಳೆಯಂ ತಾನೆಳೆಯರ‍್ಕರೊಳ್ ಬಡವರೊಳ್ ದೀನಂ ಸಖಂ ಸಖ್ಯರೊಳ್
ನಲಿವಂ ಭೋಗದಿ ಭೋಗಿವೃಂದದಿ ವಿರಾಗಂ ರಾಗನಿರ್ಮುಕ್ತರೊಳ್
ಸುಲಭಂ ಸಂಸ್ಕೃತನೆಲ್ಲರೊಳ್ ಸಮರಸಂ ವಿಶ್ವಾತ್ಮಜ್ಞಾಪನಂ”

ವಿವರಣೆಯನ್ನು (ಸಂಸ್ಕೃತಿ) ಪರಿಭಾವಿಸಿ ಪ್ರಾಣಿಜಗತ್ತಿನ ಹೊಂದಾಣಿಕೆ, ಮನುಷ್ಯ ಲೋಕದ ಸ್ವೀಕಾರಾರ್ಹತೆ, ಅವಕಾಶ ನಿರ್ಮಾಣ, ಮನಸ್ಸಿನ ಒಡಂಬಡಿಕೆ, ನಮನಶೀಲ ಗಳೆಲ್ಲವನ್ನೂ ಒಂದೇ ತಳದಲ್ಲಿಟ್ಟು ನೋಡುವ ಕ್ರಮವೇ ವಿಶಿಷ್ಟವೆನಿಸುತ್ತದೆ. ಅರ್ಥದ ಅನೇಕ ಶಾಖೆಗಳನ್ನು ಹೊಳೆಯಿಸುವ, ಸೂತ್ರಾತ್ಮಕ ಮಾತುಗಳು ಸ್ವಂತದ ಸುಸಂಸ್ಕೃತಿಯಿಂದ ಮೊಳಕೆಯೊಡೆದವುಗಳೇ ಆಗಿವೆ.

ಡಿ.ವಿ.ಜಿ.ಯವರು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ವಿಧಾನ ಇದಲ್ಲ, ಇದಲ್ಲ ಎನ್ನುತ್ತಾ, ‘ಇದೇ’ ಎಂದು ನಿಲುಗಡೆಯನ್ನು ತಾಳುವ ಮಾದರಿಯನ್ನು ಅನುಸರಿಸುತ್ತದೆ.

“ಸಂಸ್ಕೃತಿಯೆಂಬುದು ಬರಿಯ ವಿದ್ಯೆಯಲ್ಲ…. ಸಂಸ್ಕೃತಿಯೆಂಬುದು ಬರಿಯ ಪಾಂಡಿತ್ಯ ವಲ್ಲ…. ತಿಳಿವಳಿಕೆಯಾಗಲಿ, ವಸ್ತುವಿಜ್ಞಾನವಾಗಲಿ ಸಂಸ್ಕೃತಿಯಲ್ಲ… ಜಾಣತನವೂ ಯುಕ್ತಿಯೂ ಸಂಸ್ಕೃತಿಯಲ್ಲ…. ಸಂಗೀತ ಮೊದಲಾದ ಲಲಿತ ಕಲಾಭಿರುಚಿಯೂ ಸಂಸ್ಕೃತಿಯಲ್ಲ… ಯಾವುದೇ ಚಾತುರ್ಯವೂ ಸಂಸ್ಕೃತಿಯಲ್ಲ…. ಎನ್ನುತ್ತಾ ಅವರು, ಹಾಗಾದರೆ ಸಂಸ್ಕೃತಿ” ಎಂದರೆ ಏನೆಂಬುದನ್ನು ನಿಸ್ಸಂದಿಗ್ಧವಾಗಿ ಪ್ರಸ್ತುತಪಡಿಸುತ್ತಾರೆ.

“ಸಂಸ್ಕಾರದಿಂದ ಸಂಸ್ಕೃತಿ, ಸಂಸ್ಕಾರ ಅಥವಾ ಸಂಸ್ಕರಣ ಎಂದರೆ ಸಮ್ಯಕ್‌ಕರಣ ಸಮ್ಯಕ್ ಕೃತಿ. ಹಾಗೆಂದರೆ ಚೆನ್ನಾಗುವಂತೆ ಮಾಡುವುದು, ಒಳ್ಳೆಯದನ್ನಾಗಿಸುವುದು, ಶುದ್ದಿ ಮಾಡಿ ಉತ್ತಮಪಡಿಸುವುದು ಎಂದರ್ಥ. ನಡೆನುಡಿಗಳ ಚೊಕ್ಕಾಟವೇ ಸಂಸ್ಕೃತಿ… ಆದ್ದರಿಂದ ಸಂಸ್ಕೃತಿಯು ಮನಸ್ಸನ್ನು ತಿಕ್ಕು, ತೊಳೆದು ಶುಚಿ ಮಾಡುವ ಕೆಲಸ…. ಸಂಸ್ಕೃತಿಯಲ್ಲಿ ಜೀವನ ಸಂದರ್ಭಗಳ ಯುಕ್ತಾಯುಕ್ತ ವಿವೇಚನೆ ಒಂದು ಅಂಶ… ವಸ್ತುಗಳ ಮೂಲ್ಯ ತಾರತಮ್ಯ ಗಣನೆ ಇನ್ನೊಂದಂಶ ಪರೇಂಗಿತ ಪರಿಜ್ಞಾನ ಮತ್ತೊಂದು ಅಂಶ, ಸರಸರಾಭಿರುಚಿ, ಧರ್ಮಚಿಂತನೆಯ ಜಾಗರೂಕತೆ, ಆತ್ಮಶೋಧನೆ, ಆತ್ಮಸಂಯಮ… ಹೀಗೆ ನಾನಾ ವಿಜ್ಞಾನ, ನಾನಾ ವಿವೇಕಗಳ ಸಮಾವೇಶದ ಫಲಿತಾಂಶ ಸಂಸ್ಕೃತಿ.” (ಸಂಸ್ಕೃತಿ, ಪು. ೧೩-೧೫)

ಈ ನಿರ್ವಚನದೊಳಗಿನ ಅನೇಕ ಸೂಕ್ಷ್ಮಾಂಶಗಳು ಪರಿಶೀಲನೆಗೆ ಯೋಗ್ಯವಾಗಿವೆ. ಇಲ್ಲಿ ಸಂಸ್ಕೃತಿ, ಮನುಷ್ಯನೊಳಗಿನ ಸಂಸ್ಕಾರಗಳೊಂದಿಗೆ ನೇರ ಸಂಬಂಧಗಳನ್ನು ಇರಿಸಿ ಕೊಂಡಿದೆ. ಮಾತ್ರವಲ್ಲ, ಪ್ರತಿಭೆ, ಕಾರ್ಯಕ್ಷಮತೆ, ಪರಿಣಿತ ಇತ್ಯಾದಿ ಹತ್ತುಹಲವು ಉಪಾಧಿಗಳನ್ನು ಅದು ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತದೆ. ಸಂಸ್ಕೃತಿಯೆಂದರೆ ಹೃದಯ ವಂತಿಕೆ, ಬದುಕಿನ ಕಸರನ್ನು ಕಳೆದುಕಸವರವಾಗಿಸುವ ಕಾರ್ಯಾಗಾರವೆನ್ನುವ ಸೂಚನೆ ಯಲ್ಲಿದೆ. ಇಷ್ಟು ಮಾತ್ರವಲ್ಲ, ಈ ‘ಶುಚಿ’ಯೆನ್ನುವುದು ಕಾಲಕ್ರಮದಲ್ಲಿ ಕೊಳೆಯಾಗುತ್ತ ದೆನ್ನುವುದು ನೈಸರ್ಗಿಕ ನಿಯಮ. ಇದು ಶುದ್ದೀಕರಣ ಕ್ರಿಯೆಯೂ ಸತತವಾಗಿ ನಡೆಯುತ್ತಲೇ ಇರಬೇಕೆನ್ನುವುದನ್ನೇ ಧ್ವನಿಸುತ್ತದೆ. ಸಂಸ್ಕೃತಿಯಾಗಲಿ, ಸುಸಂಸ್ಕೃತ ಮನಸ್ಸಾಗಲಿ ಒಮ್ಮೆ ಏರಿದರಾಯಿತೆಂದು ಮರೆತು ಬಿಡಬಹುದು ಪದೋನ್ನತಿಯಲ್ಲ. ಅದು ದೈನಂದಿನ ಸಾಧನೆ, ಸತ್ ಸಾಹಿತ್ಯದ ಸಂಸರ್ಗ, ಸಜ್ಜನ ಸಂಪರ್ಕ, ಆತ್ಮಾವಲೋಕನ ಮುಂತಾದ ಪರಿಕರಗಳ ನಿರಂತರ ಬಳಕೆಯಿಂದ ರಕ್ಷಿಸಿಡಬೇಕಾದ ಸಂಪತ್ತೆನ್ನುವ ವ್ಯಾಖ್ಯಾನ ಇಲ್ಲಿಗೆ ಹೊಂದುತ್ತದೆ.

‘ಪದವಿಟ್ಟಳುಪದ’ ಹೆಗ್ಗಳಿಕೆಗೆ ಮಾರು ಹೋಗದೆ, ಬರೆದುದನ್ನು ಮತ್ತೆ ಮತ್ತೆ ತಿದ್ದಿ ಎಲ್ಲಿ ಕೊರತೆಯುಳಿಯಿತೋ, ಮುಖಾಲಂಕಾರ ಕೇಶಶೃಂಗಾರಗಳ ಸಂತುಲನವೆಲ್ಲಿ ತಪ್ಪಿತೋ ಎಂದು ನಾನಾ ಭಂಗಿಗಳಿಂದಷ್ಟೆ ಅವಲೋಕನ ಮಾಡಿಕೊಳ್ಳುವ ಪ್ರಮದೆಯ ಮಾದರಿಯಲ್ಲಿ ಗೆರೆಗೆರೆಯಲ್ಲೂ ಪರಿಪೂರ್ಣತ್ವವನ್ನು ಸಾಧಿಸುವ ಹಂಬಲ ಹೆತ್ತವರು, ನಮ್ಮ ಪಂಡಿತ ಪರಂಪರೆಗೆ ಸೇರಿದ ಸೇಡಿಯಾಪು ಕೃಷ್ಣಭಟ್ಟರು, ಹಳತನ್ನಾಗಲಿ ಹೊಸತನ್ನಾಗಲಿ ವಿಮರ್ಶಿಸದೆ ಅವರು ಸ್ವೀಕರಿಸಿದವರೂ ಅಲ್ಲ, ತಿರಸ್ಕರಿಸಿದವರೂ ಅಲ್ಲ. ಆಧುನಿಕತೆಯೆಂಬುದು ಪರಂಪರೆ ಗೊಂಡು ಹೊಸ ಆಯಾಮವೆಂದು ನಂಬಿ ಬದುಕಿದವರವರು. ಅವರ ಅಭಿಪ್ರಾಯದಲ್ಲಿ ಸಂಸ್ಕೃತಿಯೆಂದರೆ,

“ಒಳ್ಳೆಯ ನಡೆನುಡಿ, ಸಭ್ಯಾಚಾರಶಿಲತೆ, ಸನ್ಮಾರ್ಗದಲ್ಲಿ ವಿಶ್ವಾಸ, ಸತ್ಯಪರತೆ, ಕರ್ತವ್ಯ ನಿಷ್ಠೆ, ಜೀವಕಾರುಣ್ಯ, ಸ್ಥಿರಚಿತ್ತತೆ, ಆತ್ಮಸಂತುಷ್ಟಿ… ಸಂಕ್ಷಿಪ್ತವಾಗಿ ಹೇಳುವುದಾದರೆ ಮಾನವ ಸಹಾನುಭೂತಿ, ಉದಾರಭಾವ ಹಾಗೂ ಆತ್ಮಸಂಯಮ ಇವು ಸುಸಂಸ್ಕೃತರಲ್ಲಿ ಅಷ್ಟಿಷ್ಟಾಗಿ ಕಂಡುಬರುವ ಲಕ್ಷಣಗಳು. ಈ ಸದ್ಗುಣಗಳ ಪೂರ್ಣತೆ ಅಥವಾ ಸಮಷ್ಟಿಯೇ” ಆಗಿದೆ (ವಿಚಾರ ಪ್ರಪಂಚ, ಪು. ೯).

ಇಲ್ಲಿ ನೋಡಿ. ಮಾನವೀಯ ಮೌಲ್ಯಗಳ ನಿಷ್ಠಾವಂತ ಸಂಯೋಜನೆಯನ್ನು ಸಂಸ್ಕೃತಿ ಯೆಂದವರು ಕರೆಯುತ್ತಾರೆ. ಡಿ.ವಿ.ಜಿ. ಮತ್ತು ಸೇಡಿಯಾಪು ಇಬ್ಬರೂ ಸಂಸ್ಕೃತಿ ಪದದ ವ್ಯಾಪ್ತಿಯನ್ನೇ ಅನಾಯಾಸವಾಗಿ ಹಿಗ್ಗಿಸಿಬಿಟ್ಟಿದ್ದಾರೆ.

“ಯಾವುದೊಂದು ದೊಡ್ಡ ಅಥವಾ ಸಣ್ಣ ಜನಸಮುದಾಯದಲ್ಲಿ ಕಂಡುಬರುವ ಪರಂಪರಾಗತವಾದ ಪದ್ಧತಿಗಳ, ಆಚಾರವಿಚಾರಗಳ ನಡೆನುಡಿಗಳ, ಕಲೆಗಳ, ನಂಬಿಕೆ ಇತ್ಯಾದಿಗಳ ಸಮಷ್ಟಿ ಎಂಬರ್ಥದಲ್ಲಿ ಸಂಸ್ಕೃತಿ ಎಂಬ ಪದವನ್ನು ನಾವಿಂದು ಬಳಸುತ್ತಿದ್ದೇವೆ” ಎಂದು ಸ್ವಲ್ಪ ಆಕ್ಷೇಪದ ದಾಟಿಯಲ್ಲಿಯೇ ಸೇಡಿಯಾಪು ಅವರು ಹೇಳುತ್ತಾರೆ. ಇದರ ಹಿಂದಿನ ಪಾಶ್ಚಾತ್ಯ, ಪ್ರಭಾವ, Cultureಗೆ ಸಂವಾದಿಯಾಗಿ ‘ಸಂಸ್ಕೃತಿ’ ಪದಪ್ರಯೋಗ ವಾಗುತ್ತಿರುವ ರೀತಿಗಳನ್ನವರು ಗುರುತಿಸುತ್ತಾರೆ. ವಾಸ್ತವಾಂಶವೇನೆಂದರೆ, ಯಾವುದೇ ಸಮುದಾಯದ ಜೀವನ ವಿಧಾನಗಳಲ್ಲಿ ಸಂಸ್ಕೃತಿ ವಿಕೃತಿಗಳೆರಡೂ ಇರುವುದಿಲ್ಲವೇ ನಿರ್ದಿಷ್ಟ ಸಂಸ್ಕೃತಿಯೊಂದರೊಳಗಿನ ಅನಪೇಕ್ಷತ, ಅನಗತ್ಯ, ಆಚಾರ ಅಥವಾ ಆಚರಣೆಗಳಿಗೂ ‘ಸಂಸ್ಕೃತಿ’ಯೆನ್ನುವ ಸಂಜ್ಞೆಯನ್ನು ನೀಡುವುದು ಸಮಂಜಸವೇ? ಈ ಪ್ರಶ್ನೆಗಳನ್ನು ಸರಿಯಾದ ಸಂದರ್ಭದೊಳಗಿರಿಸಿ ವಿವೇಚಿಸುವ ಅಗತ್ಯವೂ ಸೇಡಿಯಾಪು ಅವರ ಬರೆಹಗಳಲ್ಲಿ ಪ್ರಸ್ತಾಪಿತ ವಾಗಿದೆ.

ಮಾನವ ಸಂಸ್ಕೃತಿಯ ಬಗೆಗೆ, ಅಂತರಂಗ ಸಂಸ್ಕಾರಗಳ ಮಹತ್ವದ ಬಗೆಗೆ ಚಿಂತನೆ ನಡೆಸಿದವರಲ್ಲಿ ಮುಳಿಯ ತಿಮ್ಮಪ್ಪಯ್ಯನವರೂ ಒಬ್ಬರಾಗಿದ್ದಾರೆ. “ವಿದ್ಯಾಭ್ಯಾಸ ಲೋಕ ವ್ಯವಹಾರ ಜ್ಞಾನಗಳಿಂದ ಪಳಗಿ ಹದ ಪಡೆದ ಬುದ್ದಿಗೆ ಸಂಸ್ಕಾರವೆಂದು ಹೆಸರು ಸಮ್ಯಕ್ ಕಾರಯತಿ (ಸರಿಯಾಗಿ ಮಾಡಿಸುತ್ತದೆ) ಎಂಬುದೇ ಆ ಪದದ ಅರ್ಥ.” (ಸಂಸ್ಕೃತಿ, ಮುಳಿಯ ತಿಮ್ಮಪ್ಪಯ್ಯ, ಪು.೭) ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಮಾತ್ರವಲ್ಲ, ಬಾಹ್ಯ ಸಂಸ್ಕೃತಿಯ ನೆಲೆಯೇ ಬೇರೆ, ಆಂತರಿಕ ಸಂಸ್ಕೃತಿಯ ಲಕ್ಷಣಗಳೇ ಬೇರೆ ಎಂದೂ ನಂಬುತ್ತಾರೆ. ಬಾಹ್ಯ ಸಂಸ್ಕೃತಿಯ ಸಂದರ್ಭದಲ್ಲಿ ಭಿನ್ನತೆಗಳು, ಭೇದಗಳು, ವ್ಯತ್ಯಾಸಗಳು ಸಹಜವೆನ್ನುತ್ತಾ ಅವರು,

“(ಅವು) ಜನಾಂಗಗಳ ಜೀವದವಸ್ಥೆಯ ಲಕ್ಷಣವು. ಆದರೂ, ಬಾಹ್ಯಾಂಗದೊಳಗಿನ ಸಂಸ್ಕೃತಿಯ ನಾನಾ ರೂಪಗಳಂತೆ ಅಂತರಂಗದಲ್ಲಿ ನಾನಾತ್ವವಿಲ್ಲ” (ಅದೇ. ಪು.೧೩).

ಇಲ್ಲಿ, ವಿಶ್ವಸಂಸ್ಕೃತಿಯ ತಳಹದಿ ಶುದ್ಧ ಮಾನವೀಯ ಮೌಲ್ಯಗಳ ಐಕ್ಯವೆನ್ನುವ ಜಾಗೃತಿಯು ಎದ್ದು ಕಾಣುತ್ತದೆ. ಎಂದರೆ ‘ಸಂಸ್ಕೃತಿಯೆಂದರೆ, ಅಂತರ ಬಾಹ್ಯ ಲಕ್ಷಣಗಳ ಸಾಮಾನ್ಯೀಕರಣವೇ’ ಎನ್ನುವ ಅವರ ನಿಲುವು ಸ್ವಲ್ಪ ಭಿನ್ನಾಭಿಪ್ರಾಯಗಳಿರಬಹುದಾದರೂ ಸಂಸ್ಕೃತಿ ಪದದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

‘ತಮ್ಮ ಸುತ್ತಲಿನ ಎಲ್ಲವೂ ಸಂವೇದನೆಗಳಿಗೆ ವಸ್ತುಗಳೇ’ ಎಂದು ನಂಬಿದವರು, ನಂಬಿ ಬರೆದವರು, ಬರೆದು ಬದುಕಿದವರು ಶಿವರಾಮ ಕಾರಂತರು. ಅವರು ಸಂಸ್ಕೃತಿಯನ್ನು ನೋಡುವ ದೃಷ್ಟಿಯೂ ಸ್ವೋಪಜ್ಞವೇ, ಅವರ ಪ್ರಕಾರ, ಸಂಸ್ಕೃತಿಯೊಂದರ ಬೆಳವಣಿಗೆ, ಪುನರುಜ್ಜೀವನವೆಂದರೆ ಸ್ವಂತದ ವ್ಯಕ್ತಿತ್ವದ ವಿಕಸನ ಕ್ರಿಯೆಯೇ ಆಗುತ್ತದೆ.

“ಪ್ರಪಂಚದ ನಾಗರಿಕತೆ, ಸಂಸ್ಕೃತಿಗಳಲ್ಲಿ ಮಿಲನ, ಆಂದೋಲನ, ಸಂಪರ್ಕ, ಸಂಘರ್ಷಣೆ ಗಳು ಆಗಾಗ ನಡೆದಿದ್ದರೂ, ಆಗಾಗ ನಡೆಯುವಂತಹದಿದ್ದರೂ, ಒಂದು ತಾವಿನಲ್ಲಿ ನೆಲೆನಿಂತ ಬಹುಸಂಖ್ಯಾತರು ಕೆಲವೇ ಶತಮಾನಗಳೊಳಗಾಗಿ ತಾವು ತಂದ ನೂರಾರು ಸಂಸ್ಕಾರಗಳಲ್ಲಿ ಕೆಲವನ್ನು ಬಿಡುತ್ತಾರೆ, ಕೆಲವನ್ನು ಹೊಸತಾಗಿ ಗಳಿಸುತ್ತಾರೆ. … ಹೀಗೆ ಸಾಕಷ್ಟು ದೀರ್ಘ ಕಾಲದಲ್ಲಿ ಆ ಸಂಸ್ಕಾರವು ಸ್ಥಿಮಿತಕ್ಕೆ ಬಂದು, ಅದರಿಂದ ಎದ್ದು ಕಾಣುವ ಜೀವನದ ಬಗೆಯನ್ನು ನಾವು ‘ನಮ್ಮ ಸಂಸ್ಕೃತಿ’ಯೆನ್ನಬಹುದು. ನಮ್ಮ ನಿತ್ಯಜೀವನಕ್ಕೆ, ದೈಹಿಕವೇ ಇರಲಿ, ಮಾನಸಿಕವೇ ಇರಲಿ. ಅದು ಸೊಗಸನ್ನು, ತಿಳಿವನ್ನು ಸೌಹಾರ್ದವನ್ನು ಕಲ್ಪಿಸಿ ಕೊಡುವಲ್ಲಿ ‘ಸಂಸ್ಕಾರ’ ಎನ್ನುವ ಮಾತಿಗೆ ಅದು ತಕ್ಕುದಾಗುತ್ತದೆ… ಪರಂಪರೆಯಿಂದ ಬರುವ ಸಂಸ್ಕೃತ ಜೀವನಕ್ಕೆ ಒಂದು ಸ್ಥಿಮಿತ, ಮೆರಗು ಬರುತ್ತದೆ. ಮನದ ಅನುಮಾನ ನಿವಾರಣೆಯಾಗಿ ಭರವಸೆ ಬರುತ್ತದೆ.” (ಬಿಡಿ ಬರೆಹಗಳು, ಪು. ೨೫೭)

ಎನ್ನುತ್ತ ತಮ್ಮ ಸಹಜವಾದ ಖಾರ, ಕ್ಷಾರ ಶೈಲಿಯಲ್ಲಿ,

“ಕಾಳಿದಾಸನ ಹೆಸರಿನ ಜಪ ಮಾಡಿದಾಕ್ಷಣ ಅವನ ಕಾವ್ಯದ ಸೊಗ ಹೇಗೆ ಕಾಣಿಸದೋ ಹಾಗೆ ‘ಸಂಸ್ಕೃತಿ, ಸಂಸ್ಕೃತಿ’ ಎಂದು ಒದರಿದುದರಿಂದ ನಾವು ಸಂಸ್ಕತಿರಾಗಲಾರೆವು. ಅದನ್ನರಿತು, ಅದಕ್ಕೆ ತಕ್ಕದಾಗಿ ನಡೆದು, ನಮ್ಮ ಜೀವನದ ದಾರಿಗಳಲ್ಲಿ ಅದನ್ನು ನಡೆದು ತೋರಿಸಿದರೆ ಮಾತ್ರ”(ಅದೇ, ಪು.೨೭೪)ವೇ ಸಂಸ್ಕೃತಿಯ ಸೊಬಗು, ಸಿದ್ದಿ, ಸಾಫಲ್ಯ ಎನ್ನುತ್ತಾರೆ.

ಕಾರಂತರ ಈ ನಿಲುವನ್ನು ಹತ್ತಿರದಿಂದ ನೋಡಿದಾಗ ಕೆಲವು ವಿಶಿಷ್ಟ ಅಂಶಗಳು ಸ್ಫುರಿಸುತ್ತವೆ. ಅವರೂ ಮುಳಿಯದವರಂತೆ, ಸಂಸ್ಕೃತಿಯ ಹೊರ ಮೈ ಒಳಸತ್ವಗಳೆರಡನ್ನೂ ಮನ್ನಿಸಿದವರೇ, ಸಂಸ್ಕೃತಿಯು ಅವಿಚ್ಛಿನ್ನವಾದ, ಸಂಕೀರ್ಣವಾದ ಸಂಸ್ಕಾರಗಳ ಸರಣಿಯ ಉತ್ಪನ್ನವೆನ್ನುವ ವಿದ್ವಾಂಸರ ಮತವನ್ನು ಅವರೂ ಸಮ್ಮತಿಸುತ್ತಾರೆ. ಇನ್ನೊಂದು ಕೋ ದಿಂದ, ಒಟ್ಟಾರೆಯಾದ ಜೀವನ ಸೌಂದರ್ಯವನ್ನು ಸೃಷ್ಟಿಸುವ ಶಕ್ತಿಯೇ ಸಂಸ್ಕೃತಿಯೆಂದೂ ವಾದಿಸುತ್ತಾರೆ.

ಕಾರಂತರ ಚಿಂತನೆಗಳೆಂದೂ ನೆಲದ ನೆಂಟನ್ನು ಕಡಿದುಕೊಳ್ಳುವುದಿಲ್ಲ. ಹಾಗಾಗಿಯೇ ಅವರ ತೀಕ್ಷ್ಣ ದೃಷ್ಟಿ, ಅರಿವು ಬೇರೆ ಆಚರಣೆ ಬೇರೆ ಎನ್ನುವುದನ್ನು ಬೊಟ್ಟಿಟ್ಟು ತೋರಿಸುತ್ತದೆ. ಸತ್ಯವಾಕ್ಯ ಹೃದಯವಂತಿಕೆಯ ಲಕ್ಷಣ, ಸಂಸ್ಕೃತಿಯ ಪ್ರತೀಕವೆನ್ನುವುದನ್ನು ಪ್ರಾಯಶಃ ಯಾರೂ ಅಲ್ಲಗಳೆಯಲಾರರು. ಇದು ಅರಿವಿನ ಸಂಗತಿ. ಆದರೆ ಆಚರಣೆಯ ಸಂದರ್ಭದಲ್ಲಿ ಎಲ್ಲರೂ ಚೌಕಾಸಿ ಮಾಡುವವರೇ ಅಲ್ಲವೇ? ಉಳಿದವರಿಗಿಂತ ಭಿನ್ನವಾಗುವ ಇನ್ನೊಂದು ಮುಖ್ಯ ಅಂಶವೆಂದರೆ, ಸುಸಂಸ್ಕೃತ ಮನಸ್ಸು ಗಟ್ಟಿಗೊಳಿಸುವ ಬದುಕಿನ ಬಗೆಗಿನ ನಂಬಿಕೆ, ಭರವಸೆಗಳು. ಇದು ಕ್ಷಣಿಕ ನಷ್ಟದ, ನೋವಿನ, ನಿರಾಶೆಯಾಚೆಗೆ ನಮ್ಮ ಪ್ರಜ್ಞೆಯನ್ನೊಯ್ದು ಕ್ಷೇಮವಲಯದಲ್ಲಿ ನಿಲ್ಲಿಸುವ ಸಾಧನವೂ ಹೌದು. ಸ್ವ-ಸಂಸ್ಕೃತಿಯ ‘ನಂಬಿಕೆಯನ್ನು ಬಾಳಿನ ಊರೆಗೋಲು’ ಎನ್ನುವ ನಿಷ್ಠೆ ಬಲಿತಾಗ, ಹೊರಗಿನ ಆಧಾರ, ಅವಲಂಬನೆಗಳು ನಗಣ್ಯವೆನಿಸುತ್ತವೆ.

ಇಲ್ಲಿ ಪ್ರಸ್ತುತವಾಗುವ ಇನ್ನೊಂದು ಅಂಶವೆಂದರೆ, ‘ಸಂಸ್ಕೃತಿ’ ಒಳಗಿನ ಸಂಸ್ಕಾರದ ಫಲವೆನ್ನುವಷ್ಟೆ ಸತ್ಯ ಬಾಹ್ಯ ಸನ್ನಿವೇಶ, ಸವಾಲು, ಅವಕಾಶಗಳ ಶಿಶುವೆನ್ನುವ ತಿಳಿವಳಿಕೆ. ಸತ್ಯಅಸತ್ಯಗಳ ಕಡೆಹಕ್ಕೆ ಒಡ್ಡಿಕೊಂಡಾಗಲೂ ಸತ್ಯದ ಕಡೆಗೇ ಒಲವು. ಬದ್ಧತೆಗಳನ್ನು ಸ್ಥಿರಪಡಿಸಿಕೊಳ್ಳುವ ಮನಸ್ಸಷ್ಟೇ ಸತ್ಯಸ್ಥಿತವಾಗಬಲ್ಲದು. ಅದು ಮೌಲ್ಯವ್ಯವಸ್ಥೆಯ ಭಾಗವಾದಾಗ, ದ್ವಂದ್ವಗಳು ಇಲ್ಲವಾಗಿ, ಸಂಸ್ಕೃತಿಯು ಸ್ವಂತದ ನೆಲೆಯನ್ನು ಕಂಡು ಕೊಳ್ಳುತ್ತದೆ. ಹೀಗೆ, ಚಿಂತನ ಸಾಹಿತ್ಯದ ಪ್ರಮುಖ ಲಕ್ಷಣವೇ ಆಗಿರುವ ವಿಚಾರ ಪ್ರಚೋದನೆಯೂ ಇಲ್ಲಿ ನಾನಾ ಮಗ್ಗುಲುಗಳಿಂದ ನಡೆಯುತ್ತದೆ.

ತಮ್ಮ ರುಚಿಶುದ್ದಿ, ಸೌಂದರ್ಯಸಕ್ತಿ, ನಯವಂತಿಕೆ, ಕಲಾತ್ಮಕ ಅಭಿವ್ಯಕ್ತಿಗಳಿಗೆ ಹೆಸರಾದವರು ವಿ. ಸೀತಾರಾಮಯ್ಯನವರು ಅವರು ವಿವಿಧ ಸಂಸ್ಕಾರಗಳಿಂದ ದತ್ತವಾಗುವ ಸಂಸ್ಕೃತಿಯ ಬಗೆಗೆ ಹೇಗೆ ಹೇಳುತ್ತಾರೆ:

“ಸಂಸ್ಕಾರವೆಂದರೆ ಮೇಲ್ಪಾಡು, ತಿದ್ದುಪಾಡು, ಯೋಗ್ಯತೆ ಅಥವಾ ಅಧಿಕಾರ ಸಂಪಾದನೆ. ದೋಷ ಕಳೆದು ಗುಣ ಸಂಪಾದನೆ ಮಾಡಿಕೊಂಡು ಶುದ್ಧವಾಗುವುದು ಎಂಬುದು ಆ ಮಾತಿನ ಇನ್ನೊಂದು ಅರ್ಥ. ಪ್ರತಿ ದಿನವೂ, ಪ್ರತಿ ಸಂಬಂಧದಲ್ಲಿಯೂ ಮನುಷ್ಯನ ಮನಸ್ಸು ಶುದ್ಧವಾಗಿ, ಮೃದುವಾಗಿ ಲೋಕಹಿತಕ್ಕೆ ಸಜ್ಜಾಗಬೇಕೆನ್ನುವುದು ತತ್ವ… ಶಿಲ್ಪಿಯ ಉಳಿಯ ಪೆಟ್ಟು ಬಿದ್ದಂತೆಲ್ಲ ಕಲ್ಲಿನಲ್ಲಿ ಮೂರ್ತಿ ಹೇಗೆ ಕಡೆದು ರೂಪುಗೊಂಡು ಚೆಲುವಾಗು ವುದೋ ಹಾಗೆ ಈ ಸಂಸ್ಕಾರಗಳು ಮನುಷ್ಯನ ಜೀವವನ್ನು ರೂಪಿಸುವುವು. ಸಮಾಜದಲ್ಲಿ ಅವನಿಗೆ ಸ್ಥಾನ, ಗೌರವ ಉಂಟಾಗುವುವು” (ವ್ಯವಹಾರ ಧರ್ಮ. ಪು. ೧೩).

ವಿ.ಸೀ.ಯವರು ಸಂಸ್ಕೃತಿಯ ದ್ವಿಮುಖ ಪ್ರವರ್ತನೆಯನ್ನು ಗುರುತಿಸುತ್ತಾರೆ. ಒಂದೆಡೆಯಿಂದ ಅದು ಅನಗತ್ಯ ಅಂಶಗಳನ್ನು ಕಳೆಯುವ ಕ್ರಿಯೆಯಾದರೆ, ಇನ್ನೊಂದೆಡೆ ಯಿಂದ ಪೋಷಕಾಂಶಗಳನ್ನು ಗಳಿಸುವ ಸನ್ನದ್ಧತೆಯಾಗುತ್ತದೆ. ಕಲ್ಮಶಗಳನ್ನು ತೊಳೆ ಯುವುದು, ಶುದ್ಧ ಕೃತಿಯನ್ನು ಪಡೆಯುವುದು ಈ ಒಟ್ಟು ಸಂಯೋಜನೆಯ ಉದ್ದೇಶ. ಈ ಪರಿಷ್ಕರಣೆಯ ಲಕ್ಷ್ಯವೂ ಆತ್ಯಂತಿಕವಾದ ಲೋಕಹಿತವೇ. ಇದು ವ್ಯಕ್ತಿಹಿತದ ಸಾಧನೆಯ ಮೂಲಕ ಸಮಷ್ಠಿ ಹಿತಸಿದ್ದಿಯ ದಾರಿ. ವಿ.ಸೀಯವರು ಈ ವೃತ್ತಕ್ಕೆ ಎರಡು ಮಹತ್ವದ ಅಂಶಗಳನ್ನು ಸೇರಿಸುತ್ತಾರೆ. ಸಂಸ್ಕಾರವು ಹೇಗೆ ಮಾನವನ ಜೀವವನ್ನು ರೂಪಿಸುತ್ತದೋ ಹಾಗೆಯೇ, ಸಿದ್ಧ ಸಂಸ್ಕಾರವನ್ನು ಮತ್ತಷ್ಟು ಶೋಧನೆಗೆ ಒಳಪಡಿಸುವುದರಲ್ಲಿ ಮನುಷ್ಯನು ಆಸಕ್ತಿ ವಹಿಸುತ್ತಾನೆ ಎನ್ನುವ ಸೂಚನೆಯು ನಮಗಿಲ್ಲಿ ದೊರೆಯುತ್ತದೆ. ಸಂಸ್ಕೃತಿಯೊಂದನ್ನು ಅದರ ಪೂರ್ಣರೂಪದಲ್ಲಿ ಗ್ರಹಿಸುವುದೆಂದರೆ, ಪರಂಪರೆಯೊಂದರ ನಿರ್ವಿಘ್ನವಾದ ಉತ್ತರಾಧಿಕಾರತ್ವಕ್ಕೆ ದಾಟುತ್ತವಾದರೆ, ಹಲವು ವಿಚಾರಗಳು ವ್ಯಕ್ತಿಯ ಪರಿಸರದ ಕೊಡುಗೆ, ಇವೆರಡರಲ್ಲಿ ಪರಸ್ಪರ ಸಹಮತವಿದ್ದಾಗ, ಸಂಸ್ಕೃತಿಯ ಬಾಹ್ಯ ಶರೀರ, ಒಳಗಿನ ಸತ್ವ ಗಳೆರಡೂ ದೃಢವಾಗುತ್ತವೆ. ಈ ನಿಟ್ಟಿನಿಂದ ಅವರು ಹೇಳುವ ‘ಅಧಿಕಾರ ಸಂಪಾದನೆ’ಯ ಗುರುತ್ವವನ್ನು ಪರಿಭಾವಿಸಬೇಕು. ಯಾವುದೇ ಅಧಿಕಾರ ಪ್ರಾಪ್ತಿಯ ಹಿಂದಿರುವ Qualities ಮತ್ತು Qualificationಗಳ ವ್ಯಾಪ್ತಿಯಲ್ಲಿ ಸಂಸ್ಕೃತಿಯ ಬೀಜ, ಮೊಳಕೆ, ಉತ್ಪತ್ತಿಗಳನ್ನಿಟ್ಟು ನೋಡಿದಾಗ ಈ ವಿಚಾರವು ತಿಳಿಯೆನಿಸುತ್ತದೆ. ತಿಳಿವಿನೊಳಗಿಳಿಯುತ್ತದೆ.

ಶಂ.ಬಾ.ಜೋಶಿಯವರು ಸಂಸ್ಕೃತಿಯನ್ನು ವ್ಯಾಖ್ಯಾನಿಸಲು ಕೆಲವು ಪರೋಕ್ಷ ವಿಧಾನಗಳನ್ನು ಅನುಸರಿಸುತ್ತಾರೆ.

“ಇಂದಿನ ನಮ್ಮ ಜೀವನ ವಿಧಾನದ ಸ್ವರೂಪಕ್ಕೆ ಬೇರುಗಳನ್ನು ನಿನ್ನೆಯಲ್ಲಿರುತ್ತವೆ. ಆಗಿಹೋದದ್ದು ಆಗುತ್ತಿರುವುದನ್ನು ನಿರ್ಧರಿಸಲು ಸಮರ್ಥವಿರುತ್ತದೆ. …ಸೂರ್ಯನೇ ಚಲಿಸುವನೆಂಬ ತೋರಿಕೆ, ನಾವಿರುವ ಭೂಮಿಯಿಂದ ನಮ್ಮ ಇಂದ್ರಿಯಗಳನ್ನು ಬೇರ್ಪಡಿಸಿಕೊಂಡ ಹೊರತು ಭ್ರಮೆಯೆಂದು ಸಾಬೀತಾಗುವುದಿಲ್ಲ. ಹೀಗೆ ಬೇರ್ಪಡಿಸಿ ಕೊಳ್ಳಲಾಗದ ಮನಸ್ಸು ತೋರಿಕೆಯನ್ನೇ ವಾಸ್ತವವೆಂದು ಭ್ರಮಿಸುತ್ತದೆ.”

ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ, ಈ ‘ಸಂಸ್ಕೃತಿ’ಯ ಮತ್ತು ಸ್ವರೂಪವನ್ನು ಯಥವತ್ತಾಗಿ ಗ್ರಹಿಸುವುದಕ್ಕಿಂತ ತೊಡಕುಗಳನ್ನು ಗಮನಿಸಬೇಕಾಗುತ್ತದೆ. ಜೋಶಿಯವರ ಪ್ರಕಾರ, ಬದುಕು ಅತೃಪ್ತಿಯಿಂದ ಆರಂಭವಾಗಿ ತೃಪ್ತಿಯಲ್ಲಿ ಕೊನೆಗೊಳ್ಳಬೇಕು. ‘ಬೇಕು’ ಎಂಬವನೇ ಬದುಕುವವನು. ಈ ಬೇಕುಗಳನ್ನು ವಿವೇಕದ ಜರಡಿಯಲ್ಲಿ ಶೋಧಿಸಿ, ಅವುಗಳ ನಿಜದ ಧರ್ಮವನ್ನು, ಕೇಂದ್ರಗಳನ್ನು ಸರಿಯಾಗಿ ಗುರುತಿಸಿಕೊಳ್ಳುವುದೇ ಸಂಸ್ಕೃತಿಯ ಅಸ್ತಿತ್ವದ ಲಕ್ಷಣ. ಆ ಬಗೆಗೆ ಅವರ ಅನಿಸಿಕೆ ಹೀಗೆ:

‘ಬೇಕು ಎಂಬುದೇ ಮನುಷ್ಯನೊಳಗಿನ ಕಾವು, ಕಿಡಿ ಮನುಷ್ಯನು ಬೇಡುವುದು ಯಾವಾಗ? ಒಳಗಣ ತಾಪದಿಂದಲೇ ಅಲ್ಲವೆ? ಒಳಗಣ ಕುದಿಯ ಬೇಗುದಿಯ ದಾಹ ಕಡಿಮೆ ಮಾಡಲು ಕೇಳಿಕೊಂಬುದೇ ಬೇಕು ಎಂಬುದು…. ಈ ಒಳಗಣ ಬೆಂಕಿಯನ್ನು ಸಂದಿಸುವುದು ಜಾಣತನವಲ್ಲ. ಮನುಷ್ಯನ ಉನ್ನತಿಗೆ ಸಹಾಯವಾಗುವಂತೆ, ಹಿತಕರವಾಗುವಂತೆ ಅದನ್ನು ಸಂವಿರ್ಧಿಸಿಕೊಂಬುವಲ್ಲಿಯೇ ಜಾಣ್ಮೆಯಿದೆ ಚಾತುರ್ಯವಿದೆ…. ಇದು ಎಂದೆಂದಿಗೂ ಊಧ್ವಮುಖ, ಸುಖದಾಯಕ, ವೃದ್ದಿಕಾರ… ಆದುದರಿಂದ ಪ್ರತಿಯೊಬ್ಬರೂ ಸರಿಯಾದ ಬಗೆಯಿಂದ ಬೇಕು ಎನ್ನಲು ಕಲಿಯಬೇಕು… ಒಳ ಬೇಕುಗಳನ್ನು ಹೆಚ್ಚಿಸಬೇಕು (ಸಾಂಸ್ಕೃತಿಕ ಮೂಲದಲ್ಲಿನ ತಾತ್ತ್ವಿಕ ಚಿಂತನೆಗಳು, ಪು. ೧೬-೧೭).

ಈ ಮಾತುಗಳ ಅರ್ಥವಿಸ್ತಾರವನ್ನು ಪರಿಭಾವಿಸಬೇಕು. ಅವರೆನ್ನುವ ಒಳಬೇಕುಗಳನ್ನು ಹೆಚ್ಚಿಸಿಕೊಳ್ಳುವುದರಲ್ಲಿಯೇ ಸಂಸ್ಕೃತಿಯ ಬೆಳವಣಿಗೆಯಿದೆ. ವ್ಯಕ್ತಿಯೊಬ್ಬನೊಳಗೆ ಹುಟ್ಟುವ, ತಾನು ಸಮಾಜಮುಖಿಯಾಗಬೇಕು, ಸತ್‌ಚಿಂತನೆಗಳಲ್ಲಿ ತೊಡಗಬೇಕು, ಸತ್ಕಾರ್ಯಗಳಲ್ಲಿ ಪ್ರವೃತ್ತನಾಗಬೇಕು ಎನ್ನುವಾಗ ಅವನ ಮನಸ್ಸು, ನೈತಿಕ ಶೈಥಿಲ್ಯಗಳನ್ನು ಬಿಡಬೇಕು, ಅಪಮೌಲ್ಯದ ದುರಂತಗಳನ್ನು ತಪ್ಪಿಸಬೇಕು, ನಮ್ಮೊಳಗಿನ ವಿಕೃತಿಗಳನ್ನು ತ್ಯಜಿಸಬೇಕು ಎನ್ನುತ್ತಿರುತ್ತದೆ. ಹೀಗಾಗಿ ಒಂದು ದಿಕ್ಕಿನಿಂದ ನಿರ್ಮಲವಾದ, ಜೀವಪರವಾದ ಚಿಂತನೆಗಳು ಒಳಹರಿಯುತ್ತ, ಪ್ರವಾಹದ ಕಸುವನ್ನು ಹೆಚ್ಚಿಸಿಕೊಳ್ಳುತ್ತ ನಡೆಯುತ್ತಿದ್ದಂತೆ, ಇನ್ನೊಂದು ದಿಕ್ಕಿನಿಂದ ಕಸಕಡ್ಡಿ ಕೊಳಚೆಗಳೆಲ್ಲ ಹೊರದಟ್ಟಲ್ಪಡುತ್ತವೆ. ಒಳವಿನ ಮೊತ್ತ ವೃದ್ದಿಗೊಳ್ಳುತ್ತ ಹೋಗುತ್ತದೆ.

ಈ ಅನಿಸಿಕೆಯ ಹಿಂದೆ, ತನ್ನ ಬೇಕುಗಳೆಲ್ಲವನ್ನೂ ನಿರ್ದಿಷ್ಟ ಅಂತರದಾಚೆಯಿಂದ ಗಮನಿಸುವ, ಅಧಿಕೃತ ಬೇಕುಗಳನ್ನು ಮನ್ನಿಸುತ್ತ, ಬೇಡದ ಬೇಕುಗಳನ್ನು ಬಹಿಷ್ಕರಿಸುವ ಆಂತರಿಕ ಸಂಸ್ಕರಣ ಕ್ರಿಯೆಯಲ್ಲಿ ಮನಸ್ಸು ತೊಡಗುವುದರ ಸೂಚನೆಯೂ ದೊರೆಯುತ್ತದೆ. ಇಚ್ಛೆಗಳನ್ನು ಸೂಕ್ತವಾಗಿ ರೂಪಿಸುವುದೇ ಸಂಸ್ಕೃತಿಯ ಹೆಗ್ಗುರುತೆಂಬ ಧ್ವನಿ ವಿಶಿಷ್ಟ ವೆನಿಸುತ್ತದೆ.

ಮಾಸ್ತಿಯವರು ಪ್ರೀತಿಸುವ, ಪ್ರತಿಪಾದಿಸುವ ಸಂಸ್ಕೃತಿಯು ಮಾನವಸ್ನೇಹಿ ನೇಮದ್ದಾಗಿದೆ. ಹಾಗೆ ನೋಡಿದರೆ, ಸಂಸ್ಕೃತಿಯ ಬಗೆಗಿನ ಅವರ ತಾತ್ತ್ವಿಕ ನಿಲುವುಗಳಷ್ಟೇ ಪ್ರಸ್ತುತವಾದುದು ಅದಕ್ಕೊಂದು ಮಾದರಿಯಾಗಿ ಮನಸ್ಸಿನ ರುಚಿಶುದ್ದಿ, ಶುದ್ಧರುಚಿಗಳೆರಡರ ರಕ್ಷಣೆಯನ್ನೊಂದು ವ್ರತದಂತೆ ನಡೆಸಿದ ಅವರ ಬದುಕು ಅಭಿವ್ಯಕ್ತಿಯ ಪ್ರಾಮಾಣಿಕತೆಗೆ ಹೆಸರಾದ ಅವರ ‘ಭಾವ’ ಆತ್ಮವೃತ್ತಾಂತದ ಮೂರು ಸಂಪುಟಗಳಲ್ಲಿ ಈ ನಿಟ್ಟಿನ ಹಲವು ನಿದರ್ಶನಗಳನ್ನು ಕಾಣಬಹುದು.

ಹೀಗೆ ಅವರು ಗೌರವಿಸುವ ಸಂಸ್ಕೃತಿಯ ಸೂಕ್ಷ್ಮಲಕ್ಷಣವೇ ಸದಸದ್ವಿವೇಕ. ಇದನ್ನು ಮನಸ್ಸಿಗೆ ಸಂಸ್ಕಾರ ನೀಡುವ ಅನೇಕ ಉರುವಲು ಉಪಕರಣಗಳಲ್ಲಿ ಒಂದಾಗಿ ಅವರು ಗುರುತಿಸುತ್ತಾರೆ. ಅವರ ದೀರ್ಘಕಾಲೀನ ಬದುಕಿನ ಒಂದು ಘಟನೆ ನೋಡಿ.

ತಮ್ಮ ತಾಯಿಯ ಬಗೆಗೆ ನೆನಪಿಡಬೇಕು. ಕೆಟ್ಟ ಮಾತಲ್ಲದ ತಪ್ಪು ಮಾತೊಂದನ್ನು ಅನಿವಾರ್ಯವಾಗಿ ಆಡುವ ಸಂದರ್ಭ ಅವರಿಗೆ ಬಂದಿತ್ತು.  ಅದರಿಂದಾಗಿ ಅವರು ಕುದಿದ ರೀತಿ, ಸಂಸ್ಕೃತಿಯು ಮನುಷ್ಯನೊಳಗಿನದೇನನ್ನೋ ಕರಗಿಸುತ್ತ, ಕುಲುಮೆಯಲ್ಲಿ ಕಾಯಿಸುತ್ತ ರಸಘಟ್ಟಿಯಾಗಿ ಆಸ್ವಾದಯೋಗ್ಯವಾಗಿಪರಿವರ್ತಿತವಾಗುವ ರೀತಿಯನ್ನು ಸೂಚಿಸುತ್ತದೆ.

“ಈ ಎಲ್ಲ ಅಂಶಗಳು ಮನಸ್ಸಿನಲ್ಲಿ ತುಮುಲ ನಡೆಸಿದುವು. ಅಂಥ ತುಮುಲ ನನಗೆ ವಾಡಿಕೆ. ಇದು ನನ್ನ ಜೀವಕ್ಕೆ ತುಂಬ ದಣಿವನ್ನು ಉಂಟುಮಾಡುತ್ತವೆ. ಆದರೆ ತುಮುಲ ಮುಗಿಯುವ ವೇಳೆಗೆ ಬುದ್ದಿ ಒಂದು ನಿರ್ಧಾರಕ್ಕೆ ಬಂದು ಜೀವ ಒಂದು ನಿಟ್ಟನ್ನು ಮುಟ್ಟಿರುತ್ತದೆ. ತಾಯಿ ವಿಷಯಕ್ಕೆ ಒಂದು ಸಣ್ಣ ಸಂಗತಿಗಾಗಿ ನೀನು ವಿನಯ ಮರೆತು ನಡೆದೆ ಎಂದು ನನ್ನ ಚೇತನದ ಉನ್ನತ ಭಾಗವು ನುಡಿಯುತ್ತಿತ್ತು. ಈ ನಡತೆಯಿಂದ ಜೀವ ಕೊಳಕಾಗಿತ್ತು. ದೇವರ ಪೂಜೆಗೆ ಮೈ ಶುದ್ದಿ ಮಾಡಿಕೊಳ್ಳುತ್ತೇವೆ. ಮನಸ್ಸು ಶುದ್ದಿಯಾಗಿರ ಬೇಡವೇ?” (ಭಾವ ೨, ಪು. ೩೫೮-೯)

ಎಂದು ಕೇಳಿಕೊಳ್ಳುವುದೇ ಸಂಸ್ಕೃತಿಯ ನಿರ್ಮಾಣದ ಮೊದಲ ಹೆಜ್ಜೆ, ಅನಂತರದ ಬೆಳವಣಿಗೆಗಳೆಲ್ಲ ನೈಸರ್ಗಿಕ, ಪರಾವರ್ತಿತ ಪ್ರತಿಕ್ರಿಯೆಗಳಿಗೆ ಅಧೀನ. ಅವರು ಮೇಲ್ನೋಟಕ್ಕೆ ಕಾಣುವಂತೆ, ಆದರ್ಶದ ಅವ್ಯಕ್ತ ಪ್ರಪಂಚದ ವಾಸಿಗಳೆಲ್ಲ ಸೃಷ್ಟಿಯ ಸೌಂದರ್ಯ ವಿಕೃತಿ ಗಳೆರಡನ್ನೂ ಒಪ್ಪುವ ವಿನಯವಾದ ಅವರದು. ಈ ಎರಡರ ಅರಿವಿರುವ ಮನಸ್ಸು ಅಥವಾ ಪ್ರಜ್ಞೆಯು, ಒಳತಿನ ಸಹಾಯಕ್ಕೆ, ಪೋಷಣೆಗೆ, ರಕ್ಷಣೆಗೆ ಸದಾ ಧಾವಿಸುತ್ತಿರುತ್ತದೆ. ಅವೆರಡಕ್ಕೂ ತಾನು ಆಶ್ರಯ ನೀಡಿದ್ದೇನೆ ಎನ್ನುವ ಜ್ಞಾನವನ್ನು ಜಾಗೃತವಾಗಿರಿಸಿಕೊಂಡು, ಅವುಗಳ ವ್ಯಾಪಾರಗಳನ್ನು ಸಾಕ್ಷೀಭಾವದಿಂದ ಕಾಣುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದೇ ಸಂಸ್ಕೃತಿಯಪಾಯ. ಈ ಬುನಾದಿಯ ಮೇಲೆ ತಾವಾಗಿ ಸೇರಿಕೊಳ್ಳುವ, ಅಹಂಕಾರ ನಿವೃತ್ತಿ, ಸ್ವ ಪರಿಜ್ಞಾನ, ಮನೋವಾಕ್ಯಗಳ ಸಂಯಮಗಳೆಲ್ಲವೂ ಸೇರಿ ಸುಭದ್ರ ಸಂಸ್ಕೃತಿಯ ಕಟ್ಟಡವು ಮೇಲೇಳುತ್ತದೆ.

ಸಂಸ್ಕೃತಿಯ ಸ್ವೀಕೃತಿಯೊಂದು ಅವಿನಾಶಿಯಾದ, ಅಬಾಧಿತವಾದ ಸ್ಥಿತಿಯಲ್ಲ. ಸದಾ ಬಾಹ್ಯ ದಾಳಿಗಳಿಗೆ ತುತ್ತಾಗುತ್ತ ಗಟ್ಟಿಕೊಳ್ಳುವ, ಆಗಾಗ ಶುದ್ದೀಕರಣಕ್ಕೆ ಒಡ್ಡಿಕೊಳ್ಳುತ್ತ ಶುಚಿತ್ವವನ್ನು ಕಾಯ್ದುಕೊಳ್ಳಬೇಕಾಗಿರುವ ಸೂಕ್ಷ್ಮಾಂಶವೆನ್ನುವುದನ್ನು ಮಾಸ್ತಿಯವರೂ ಒಪ್ಪುತ್ತಾರೆ. ನಮ್ಮೆಲ್ಲ ಮೇಲುಪಂಕ್ತಿಯ ಚಿಂತಕರಂತೆ, ಮಾಸ್ತಿಯವರೂ ಸಂಸ್ಕೃತಿಯ ಸುಭಗವಾದ ಶಿಲ್ಪವನ್ನು ಪೂರ್ಣ ಮಾನವ ಪರಿಕಲ್ಪನೆಯ ಮೂಲಕವೇ ನಿರ್ಮಿಸುವ ಪ್ರಯತ್ನಗಳನ್ನು ಮಾಡಿದವರು.

ಲೋಕಮಾತೆ ಒಬ್ಬಳೇ. ಅವಳೆ ಭೂಮಿ. ಅವಳೆ ಭಾರತ. ಅವಳೆ ಕರ್ಣಾಟಕ. (ಬೇಂದ್ರೆಯವರನ್ನು ನೆನೆದುಕೊಂಡು) ಅವಳು ನಮ್ಮ ಒಬ್ಬೊಬ್ಬರನ್ನೂ ಹೆರುವಾಕೆ. ಇದು ಸದಾಕಾಲ ಪೂರ್ಣವಾಗಿ ಅನುಭವ ಆದವನು ಪೂರ್ಣ ಮಾನವ. ಸದಾಕಾಲ ಪೂರ್ಣ ಅನುಭವ ಆಗದಿದ್ದರೂ ವರ್ಷದಲ್ಲಿ ಒಂದು ಕ್ಷಣ ಇದರ ಅನುಭವ ಆದ ಮನುಷ್ಯ ಆದರೆ ಸುಖಕ್ಕೆ ಮಾರು ಹೋಗುತ್ತಾನೆ. (ಅದೇ, ಪು.೪೦೪)

ಇದು ವಾಸ್ತವದ ಅರಿವಿನೊಂದಿಗೆ, ಸಂಸ್ಕೃತಿಯ ಒಳ ಹೊರ ಲಕ್ಷಣಗಳು ಪ್ರತಿ ವ್ಯಕ್ತಿಯಲ್ಲೂ ಸಾಂದ್ರ, ತೆಳುವಾಗಿರುವುದೇ ಸಹಜವೆನ್ನುವ ಅಂಗೀಕಾರ ಕ್ರಮವಾಗಿದೆ. ವ್ಯಕ್ತಿತ್ವದೊಳಗಿನ ನಿಮ್ನೋನ್ನತ ಸ್ಥರಗಳಲ್ಲಿ ಸಂಚರಿಸುತ್ತಿರುವುದೇ ಇಂಥ ಸಾರ್ವಕಾಲಿಕ ಮೌಲ್ಯಗಳ ಸ್ವಭಾವವೆನ್ನುವ ಕಾಣ್ಕೆಯೂ ಇಲ್ಲಿ ಪುನಃ ನಿರ್ಮಾಣಗೊಂಡಿದೆ.