ಜನಾಂಗವೊಂದರ ಸಾಂಸ್ಕೃತಿಕ ಸಂಪತ್ತಾಗಿ ಸಾಹಿತ್ಯಕ್ಕೆ ಮಹತ್ವವಿದೆ. ಸಮುದಾಯಗಳ ಸ್ಮೃತಿಯ ಸ್ಮರಣಾನುಭವಗಳ ಆಯ್ದ ಭಾಗಗಳನ್ನು ತಲೆಮಾರಿನಿಂದ ಮನುಷ್ಯನ ಸ್ವಭಾವದಲ್ಲಿಯೇ ಅಂತರ್ಗತವಾಗಿರುವ ಆರೋಗ್ಯಕರವಾದ ಅತೃಪ್ತಿಯಿಂದಾಗಿ, ಆತ ಹೊಸ ಶೋಧಗಳಲ್ಲಿ ಸದಾ ಆಸಕ್ತನಾಗಿರುತ್ತಾನೆ. ಆತ ಸಾಧಿಸಿರುವ ಪ್ರಗತಿಯ ಒಂದೊಂದು ಮಜಲೂ ಈ ಪ್ರವೃತ್ತಿಗೆ ಅನ್ವೇಷಣ ಶಕ್ತಿಗೆ ಸಾಕ್ಷಿಯಾಗುತ್ತದೆ. ನಾಗರಿಕತೆಯ ದೀರ್ಘ ಯಾನದ ಉದ್ದಕ್ಕೂ ಅಸಂಖ್ಯ, ಅನಿರೀಕ್ಷಿತ ಸವಾಲುಗಳಿಗೆ, ಅಪರಿಮಿತ ಸಂಘರ್ಷಗಳಿಗೆ ಉತ್ತರಿಸುತ್ತ ಆತ ಗಟ್ಟಿಯಾದ ರೀತಿಯಾ ವಿಶಿಷ್ಟವಾದ, ರೋಚಕವಾದ ವೃತ್ತಾಂತವೇ ಆಗಿದೆ. ಸಾಗರದ ದಂಡೆಯಲ್ಲಿ ನಿಂತಾಗಲೆಲ್ಲಾ ಎತ್ತರೆತ್ತರಕ್ಕೆದ್ದು ಬೀಳುವ ಅಲೆಗಳ ನೋಟ ಅವನನ್ನು ಕಂಗೆಡಿಸಲಿಲ್ಲ. ಆತನ ಸೃಜನಶೀಲವಾದ ಮನಸ್ಸು ಕಂಡ ಕಿರುದೋಣಿಯ ಕನಸೇ ಬೆಳೆದು, ಬೃಹತ್ ನಾವೆಯಾಗಿ ಅಸ್ತಿತ್ವವನ್ನು ಪಡೆದ ರೀತಿಯೂ ಈಗ ಇತಿಹಾಸಕ್ಕೆ ಸೇರಿದೆ. ಭೂಮಿಯ ಗುರುತ್ವಾಕರ್ಷಣೆಯನ್ನು ಮೀರುವ ಉಡ್ಡಯನಕ್ಕಾಗಲಿ, ಭೂಗರ್ಭದ ಪರಿಚಯಕ್ಕಾಗಲಿ, ಜಲಾಂತರ್ಗಾಮಿ ಬದುಕಿನ ವೀಕ್ಷಣೆಗಾಗಲಿ ಅವನು ತನ್ನ ಚೇತನವನ್ನು ನಿತ್ಯ ಸಿದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುತ್ತಾನೆ. ಪ್ರಾಕೃತಿಕವಾದ, ದೈಹಿಕವಾದ ಮಿತಿಗಳನ್ನು, ದೌರ್ಬಲ್ಯಗಳನ್ನು ಲೆಕ್ಕಕ್ಕೇ ತಾರದೆ ಕೇವಲ ಬುದ್ದಿಶಕ್ತಿಯಿಂದ ಸೃಷ್ಟಿಯನ್ನು ನಿಯಂತ್ರಿಸುವ ಆತನು ಕಾಲವು ಎವೆ ಮಿಟುಕಿಸುವಷ್ಟರಲ್ಲಿ ಬೆಳೆದ ಬಗೆಯು ಅಗಾಧವಾದುದೇ ಆಗಿದೆ. ಸೋಲು-ಗೆಲುವುಗಳ ತೂಗುತೊಟ್ಟಿಲಿನಲ್ಲಿ ಉಯ್ಯಾಲೆಯಾಡುತ್ತ ಆಡುತ್ತ ಆತನ ಕ್ರಾಂತದೃಷ್ಟಿ ಮತ್ತಷ್ಟು ಹೊಳಪು ಪಡೆಯುತ್ತಿದೆ, ಹರಿತವಾಗುತ್ತಿದೆ, ಆಯಾಮಗಳನ್ನು ವಿಸ್ತರಿಸಿಕೊಳ್ಳುತ್ತಿದೆ.

ವ್ಯಕ್ತಿಯ ಈ ಪ್ರಜ್ಞೆಯು ತನ್ನ ಸೂಕ್ಷ್ಮಸ್ತರವೊಂದರಲ್ಲಿ ಸ್ವಾಭಿಮುಖವಾಗುತ್ತದೆ. ತನ್ನ ವ್ಯಕ್ತಿತ್ವದಲ್ಲಿ, ನಿಲುವಿನಲ್ಲಿ, ಪರಿಸರದಲ್ಲಿ, ಸಂಸ್ಕೃತಿಯಲ್ಲಿ, ಭಾಷೆಯಲ್ಲಿ, ಅಭಿವ್ಯಕ್ತಿಯಲ್ಲಿ, ಮೌಲ್ಯ ಹಾಗೂ ನೀತಿ ಸಂಹಿತೆಗಳಲ್ಲಿ, ಜೀವನ ಸಿದ್ಧಾಂತಗಳಲ್ಲಿ ಇರುವ ಕುಂದುಕೊರತೆಗಳನ್ನು ಗಮನಿಸುತ್ತದೆ. ಅಲ್ಲಿಗೆ ಅಗತ್ಯವಾದ ಜೀವಸತ್ವಗಳ, ಶಕ್ತಿಮೂಲಗಳ ಶೋಧನೆಗೆ ಹೊg ಡುತ್ತದೆ. ಈ ಲೋಪದೋಷಗಳನ್ನು ಸೇರ್ಪಡೆಗೊಳಿಸುವ, ಬಿರುಕುಗಳನ್ನು ತುಂಬುವ, ಅಂತರಗಳನ್ನು ಬೆಸೆಯುವ, ಶೂನ್ಯಗಳನ್ನು ನಿವಾರಿಸುವ ಕರ್ತವ್ಯಗಳಲ್ಲಿ ಮಗ್ನವಾಗುತ್ತದೆ. ಇಂಥ ಕ್ರಿಯಾಶೀಲ ಮನಸ್ಸಿನ ಉತ್ಪಾದನೆಗಳಲ್ಲಿ ಸಾಹಿತ್ಯವೂ ಒಂದಾಗಿದೆ.

ಪ್ರಜ್ಞೆಯು ಸೃಷ್ಟಿಕಾರ್ಯದಲ್ಲಿ ತತ್ಪರವಾದಾಗ ಸಾಹಿತ್ಯರಚನೆಯಾಗುತ್ತದೆ ಎನ್ನುವುದು ತಿಳಿದ ವಿಚಾರವೇ ಆಗಿದೆ. ಸಾಹಿತ್ಯದ ಉಗಮದ ಕಾಲದಿಂದಲೂ ಅದರ ಸ್ವರೂಪವೆಂಥದ್ದು? ಅದರ ಸ್ಥೂಲ-ಸೂಕ್ಷ್ಮ ಆವರಣಗಳು, ಆಶ್ರಯ ಸ್ಥಾನಗಳು ಯಾವುವು ಪ್ರಜ್ಞೆಯ ಹೊರ ಕವಚದಲ್ಲಿರುವ ಮನಸ್ಸು ಹಾಗೂ ಅದರ ಸಹಾಯಕ ಪರಿಕರಗಳು ಅಂತರಂಗದ ಯಾವ ಯಾವ ಸ್ತರಗಳೊಡನೆ ಸಂವಾದ ಹೂಡಿದಾಗ ಸಾಹಿತ್ಯ ನಿರ್ಮಿತಿಯು ನಡೆಯುತ್ತದೆ? ಮುಂತಾದ ಅನೇಕ ಸಮಸ್ಯೆಗಳು, ಪ್ರಶ್ನೆಗಳು ನಮ್ಮ ವಿದ್ವಾಂಸರನ್ನು ಕಾಡುತ್ತಲೇ ಬಂದಿದೆ. ಆಧುನಿಕ ಸಾಹಿತ್ಯ ಪರಿಸರವಂತೂ ಕೃತಿಗಳ ಸಂಖ್ಯೆ, ಪ್ರಕಾರ, ಪ್ರಭಾವ, ಆದಾನ, ಪ್ರಧಾನ ಪ್ರಕ್ರಿಯೆ ಸಾಂಸ್ಕೃತಿಕ ಏರುಪೇರುಗಳು, ಅಂತರ ಬಾಹ್ಯ ತಳ್ಳಂಕಗಳು ಇತ್ಯಾದಿಗಳಿಂದಾಗಿ ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿದೆ. ಇಂದಿನ ಸಾಹಿತ್ಯವನ್ನು ನಿಶ್ಚಿತ ಪ್ರಮಾಣ (Standard) ಮಾನದಂಡ (Parameter) ಹಾಗೂ ಒರೆಗಲ್ಲು(Criterea)ಗಳಿಗೆ ಅಳವಡಿಸಿ, ಮೌಲ್ಯ ಮಾಪನಕ್ಕೆ ಸಿದ್ಧಪಡಿಸುವುದಕ್ಕೆ ಹಿನ್ನೆಲೆಯಾಗಿ, ಅನ್ಯೋನ್ಯ ವಿದ್ವಾಂಸರು ಸಾಹಿತ್ಯವನ್ನು ಅರ್ಥೈಸಿಕೊಂಡ ಬಗೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ಪ್ರಸ್ತುತವೆನಿಸುವ ಕೆಲವು ಅನುಮಾನಗಳನ್ನು ಪ್ರಸ್ತಾಪಿಸಬೇಕು. ಉದಾಹರಣೆಗೆ, ಸಾಹಿತ್ಯಕ್ಕಿರುವ ಅಪೂರ್ವವಾದ ಸಂವಹನ ಶಕ್ತಿಯ Negative ನೆಲೆಯ ಪಾರ್ಶ್ವ ಪರಿಣಾಮಗಳು. ಅದು ಒಂದೆಡೆಯಿಂದ ಭ್ರಮೆಗಳನ್ನು ನಿವಾರಿಸುವ ಕೆಲಸವನ್ನು ಮಾಡುತ್ತದೆ. ಇನ್ನೊಂದೆಡೆಯಿಂದ, ಸತ್ಯವನ್ನು ಬಹು ಸೂಕ್ಷ್ಮವಾಗಿ ಅವಿಸಿಟ್ಟು, ಇನ್ನೇನೋ ಅದರ ಸ್ಥಾನದಲ್ಲಿ ಇರಿಸಿಬಿಡುತ್ತದೆ. ಇದರ ಪರಿಣಾಮವು ಒಟ್ಟಾರೆಯಾದ ಸಾಹಿತ್ಯದ ಮೌಲ್ಯಮಾಪನ ವ್ಯವಸ್ಥೆ(Evaluation System)ಯ ಮೇಲೂ ಆಗುತ್ತದೆ, ನೈತಿಕ ಚೌಕಟ್ಟಿನ ಮೇಲೂ ಆಗುತ್ತದೆ. ಉದಾಹರಣೆಗೆ, ರಾಮಾಯಣದ ವಿಭೀಷಣನ ನಿಲುವನ್ನೇ ಗಮನಿಸಿ. ಭ್ರಾತೃಪ್ರೇಮದಂಥ ಒಂದು ಮೌಲ್ಯವನ್ನು ನಿಯೋರಚನೆಯಿಂದ ನಿರ್ಲಕ್ಷಿಸುವ ಘಟನೆಯನ್ನು ಕೂಡಾ ನಾವು ಬೇರೆಯೇ ನೆಲೆಯಿಂದ ನೋಡುವಂಥ ಸಮ್ಮೋಹಕ್ಕೆ ಒಳಗಾಗಿಬಿಡುತ್ತೇವೆ. ಇಂಥ ವ್ಯವಸ್ಥಿತ ಸಂಯೋಜನೆಗೆ ಇರುವ ಶಕ್ತಿ ವಿಶಿಷ್ಟಗಳನ್ನು ಸರಿಯಾದ ಪದಚಿಹ್ನೆ ಗಳೊಂದಿಗೆ ಗ್ರಹಿಸಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ, ವಸ್ತುನಿಷ್ಠ ದೃಷ್ಟಿಗೂ ಮಂಜು ಕವಿದುಬಿಡುವ ಎಲ್ಲ ಅಪಾಯಗಳೂ ಎದುರಾಗುತ್ತವೆ.

ಇಷ್ಟೇ ಜಾಗರೂಕತೆಯಿಂದ ಸ್ಪರ್ಶಿಸಬೇಕಾದುದು ಸಾಹಿತ್ಯಕ್ಕಿರುವ ಅನನ್ಯವಾದ ಏಕೀಭಾವ ನಿರ್ಮಾಣ ಸಾಮರ್ಥ್ಯವನ್ನು. ಒಂದು ನಿರ್ದಿಷ್ಟ ಹಂತದವರೆಗೆ ಸಾಹಿತ್ಯದ ಪರಿಣಾಮಕ್ಕಾಗಿ ದುಡಿಯುವ ಅದರಿಂದಾಚೆಗೂ ಬೆಳೆದಾಗ ಭಾವಭಾಧೆ, ಆತ್ಮಾನುಕಂಪೆ, ಬೇರೆ ಬೇರೆ Complex (ಕೀಳರಿಮೆ ಇತ್ಯಾದಿ)ಗಳನ್ನು ಹುಟ್ಟುಹಾಕುತ್ತದೆ. ಇಂಥ ಹಲವು ಬೇಲಿಗಳಾಚೆಗಿನ ಬಯಲಿಗೆ ಸಾಹಿತ್ಯವನ್ನೋಯ್ದು ನಿಲ್ಲಿಸಿ, ವಿವಿಧ ಮಗ್ಗಲುಗಳಿಂದ ಅದರ ಮೇಲೆ ಬೆಳಕನ್ನು ಹರಿಯಿಸಿ, ಅದರ ಸಂವಿಧಾನ, ಆಕೃತಿ ಹಾಗೂ ನಿಲುವುಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನಗಳನ್ನು ನಮ್ಮ ವಿದ್ವಾಂಸರು ಕೈಗೊಂಡಿದ್ದಾರೆ. ಪ್ರಾತಿನಿಧಿಕ ಲಕ್ಷಣಗಳಿರುವ ಅಂಥ ಕೆಲವನ್ನು ಇಲ್ಲಿ ವಿಶ್ಲೇಷಿಸಬಹುದು.

ತಮ್ಮ ಗದ್ಯದ ಕಾವ್ಯಾತ್ಮಕತೆಗೆ, ಕಾವ್ಯದ ಪ್ರತಿಮಾತ್ಮಕತೆಗೆ, ಕಾದಂಬರಿಗಳ ಸೃಷ್ಟಿ ಸಮ್ಮುಖವಾದ ಪ್ರಾದೇಶಿಕತೆಗೆ ಹೆಸರಾದ, ಕುವೆಂಪು ಅವರಿಗೆ ಸಾಹಿತ್ಯವೆಂದರೆ, “ಜೀವನ ವೃಕ್ಷದ ಕುಸುಮ”ವೇ ಆಗಿದೆ. ಆಧುನಿಕ ಕನ್ನಡದ ಪ್ರಥಮ ಪಂಕ್ತಿಯ ಕವಿಗಳಲ್ಲೊಬ್ಬ ರಾಗಿರುವ ಅವರಿಗೆ, ಕಾವ್ಯ ಪ್ರಕಾರದ ಬಗೆಗೆ ವಿಶೇಷವಾದ ಮಮತೆಯಿದೆ, ತಮಗೆ ಸಿದ್ದಿಸಿದ ಶಬ್ದಗಳ ಗಾರುಡಿಗತನವನ್ನು ಪ್ರದರ್ಶಿಸುತ್ತಾ ಅವರು,

“ನಿಘಂಟುಗಳಲ್ಲಿ ನಿರ್ಜೀವವಾಗಿ ಕಲ್ಲಿನ ಗೊಂಬೆಗಳಂತೆ ಅಕಾರಾದಿಯ ಅನುಕೂಲ ಸೂತ್ರದ ಆಜ್ಞೆಗೆ ಅಧೀನವಾಗಿ ಕವಾಯಿತಿಗೆ ಒಳಗೊಂಡಂತಿರುವ ಶಬ್ದಶ್ರೇಣಿ ಕವಿಪ್ರತಿಭೆಯ ಭಾವವಿದ್ಯುತ್ತಿನ ಐಂದ್ರಜಾಲಕ್ಕೆ ಸಿಕ್ಕಿ ಜಾಗೃತವಾಗಿ ಚಿನ್ಮಯವಾಗುತ್ತವೆ. ಕಾವ್ರೋಸ್ಥಾನದಲ್ಲಿ ನಿಂತಾಗಲಂತೂ ಆಯಃಕಶ್ಚಿತವಾದಂತಿದ್ದ ಪದವಿಗ್ರಹಗಳಲ್ಲಿ ದೇವತಾಚೈತನ್ಯ ಸಂಚಾರವಾಗುತ್ತದೆ. ಆಗ ಅವು ಸರಸ್ವತಿಯ ಸಾಕ್ಷಾತ್ ಚರಣ ಚಿಹ್ನೆಗಳಾಗಿ ಪ್ರಜ್ವಲಿಸುತ್ತವೆ” (ಸಾಹಿತ್ಯದಲ್ಲಿ ಪ್ರತಿಮಾ, ಪು.೩೬) ಎನ್ನುತ್ತಾರೆ. ಅವರ ಪ್ರಕಾರ ಸಾಹಿತಿ ಎಲ್ಲ ನಿರ್ಬಂಧಗಳಾಚೆಗೆ ನಿಂತು, ವಿಮುಕ್ತ ಸ್ಥಿತಿಯನ್ನು ತಲುಪಿದಾಗ ಪಡೆಯುವ ಅಭಿವ್ಯಕ್ತಿಯೇ ನಿಜವಾದ ಸಾಹಿತ್ಯ. ಈ ಸಂದರ್ಭದಲ್ಲಿ ಅವರು ಎರಡು ಪರಿಕಲ್ಪನೆಗಳನ್ನು ಪರಿಚಯಿಸುತ್ತಾರೆ. ಅವೆಂದರೆ, ‘ದರ್ಶನ’ ಮತ್ತು ‘ಪೂರ್ಣದೃಷ್ಟಿ’.

“ಅಂಶದೃಷ್ಟಿಯಿಂದ ಮಾಡಿದ ಎಲ್ಲ ವ್ಯಾಖ್ಯಾನಗಳಿಗೂ ಪೂರ್ಣದೃಷ್ಟಿಂಗಲ್ಲಿ ಅಲ್ಪಸ್ವಲ್ಪ ವಾದರೂ ಸತ್ಯವಿರುತ್ತದೆ… ಈ ಪೂರ್ಣದೃಷ್ಟಿ ಕಾವ್ಯಕ್ಕೆ ಮಾತ್ರವಲ್ಲದೆ ವಾಸ್ತವವೆನಿಸಿ ಕೊಳ್ಳುತ್ತಿರುವ ಲೋಕಕ್ಕೂ ಆ ಲೋಕದ ಜೀವನಕ್ಕೂ ಅನ್ವಯಿಸುತ್ತದೆ…. ಆ ಪೂರ್ಣ ದೃಷ್ಟಿಯ ಒಂದು ಛಾಯಾಪ್ರತಿಮೆಯಾಗಿ ಸಾಹಿತ್ಯ ಲೋಕದಲ್ಲಿ ಕವಿಯ ಪೂರ್ಣದೃಷ್ಟಿಯನ್ನು ಅರಿಯುವುದು ಮಾತ್ರ ನಮಗೆ ಸಾಧ್ಯ.” (ದಾರ್ಶನಿಕ ಕಾವ್ಯಮೀಮಾಂಸೆ, ಪು.೨೧೦) ಎನ್ನುವ ಅವರು, ಅನೇಕ ಪೂರ್ಣಗಳ ವ್ಯವಸ್ಥಿತ ಜೋಡಣೆಯೇ ಪರಿಪೂರ್ಣತ್ವ ಎನ್ನುವ ತತ್ತ್ವಶಾಸ್ತ್ರದ ನಿಲುವಿಗೆ ಹತ್ತಿರವಾಗುತ್ತಾರೆ. ಅವರು ಲಕ್ಷಿಸುವ ‘ದರ್ಶನ’ವು ಎಲ್ಲ ಉಪಾಧಿಗಳನ್ನು ಮೀರಿದ, ಶುದ್ಧ ಜ್ಞಾನೇಚ್ಛುವಾದ ಮನಸ್ಸಿನಲ್ಲಿ ಹುಟ್ಟುತ್ತದೆ.

“ಅಂತಹ ದರ್ಶನದಿಂದ ಹೊರಹೊಮ್ಮುವ ಸಾಹಿತ್ಯ ಜೀವನಪಥದಲ್ಲಿ ಮಾರ್ಗದರ್ಶಕ ಜ್ಯೋತಿಯಾಗುತ್ತದೆ… ಸಾಹಿತ್ಯ ದರ್ಶನಾತ್ಮಕವಾಗಿರಬೇಕು. ಇದು ನಿಯಮ ಬದ್ಧವಾದ ಅಥವಾ ತರ್ಕಬದ್ಧವಾದ ಆಲೋಚನೆಗಳ ಸಮುದಾಯವಲ್ಲ… ಭಾವ, ಕಲ್ಪನೆ ಮತ್ತು ಆಲೋಚನೆಗಳ ವಿದ್ಯುದಾಲಿಂಗನದಿಂದ ಸಂಭವಿಸುವ ಪ್ರತಿಭಾಜ್ಯೋತಿ. ಅದರ ಲಕ್ಷಣ… ಬುದ್ದಿ, ಚಿಂತನ ತರ್ಕ ಅಥವಾ ಅವರಿವರ ಹೇಳಿಕೆ ಇವು ಯಾವ ಉಪಾಧಿಗಳೂ ಇಲ್ಲದೆ ನೇರವಾಗಿ ಗ್ರಹಿಸುವ ಶಕ್ತಿ ದರ್ಶನ… ಕವಿ ತಾನು ಏರಿದ ದರ್ಶನವನ್ನು ಇಳಿದು ಕಟ್ಟುತ್ತಾನೆ…” ಕವಿ ಕೃತಿಯಾದ ಕಾವ್ಯವೂ ಒಂದು ಪ್ರತಿಮೆ. ಆ ಪ್ರತಿಮೆಗೆ ಕಾರಣವಾಗಿ ಅದನ್ನು ನಿರ್ಣಯಿಸಿ ನಡೆಸುವ ಮೂಲ ಸತ್ಯವು ಕವಿಯ ದರ್ಶನದಲ್ಲಿದೆ (ಅದೇ. ಪು. ೧೯೧-೭)”

ಎಂದು ಸಾಹಿತ್ಯದ ಉಗಮ ಕ್ರಿಯೆಯನ್ನು ಅವರು ಸ್ಪಷ್ಟಪಡಿಸುತ್ತಾರೆ. ಕುವೆಂಪು ಅವರ ಹೇಳಿಕೆಗಳು ವಾದದ ವಿಪುಲ ಅವಕಾಶಗಳನ್ನು ತೆರೆಯುತ್ತವೆ. ಇಲ್ಲಿ ಬುದ್ದಿ ಅಥವಾ ವಿವೇಕದ ಸ್ಥಾನವೇನು? ಕಲ್ಪನೆಯ ನಿಷ್ಪತ್ತಿಯೆಷ್ಟು? ವಾಸ್ತವವು ಕಲೆಯಾಗಿ ಪರಿವರ್ತಿತವಾಗುವಾಗ ಸಂಭವಿಸುವ ಬದಲಾವಣೆಗಳಾವುವು ಮುಂತಾದ ಪ್ರಶ್ನೆಗಳ ಪರಂಪರೆಯನ್ನೇ ಇದು ಸೃಷ್ಟಿ ಸುತ್ತದೆ.

ಸಾಹಿತ್ಯ ನಿರ್ಮಾಣ ಕ್ರಿಯೆಯಲ್ಲಿ ಸತ್ಯವು ವಹಿಸುವ ಪಾತ್ರದ ಬಗೆಗೆ ಎ.ಎನ್. ಮೂರ್ತಿರಾಯರು ಜಿಜ್ಞಾಸೆಯನ್ನು ನಡೆಸಿದ್ದಾರೆ. ಈ ಸತ್ಯವನ್ನು ಸಾಹಿತ್ಯವು ದುಡಿಸಿಕೊಳ್ಳುವ ಬಗೆಯೇ ವಿಶಿಷ್ಟವಾದುದು. ‘ಸಾಹಿತ್ಯ ಸತ್ಯವಲ್ಲ’ ಎನ್ನುವ, ವಾಚ್ಯ ನೆಲೆಯ ಗ್ರಹಿಕೆಯ ಕ್ರಮವನ್ನು ಅನುಲಕ್ಷಿಸಿಯೇ ಇಂಥ ವೈಚಾರಿಕ ಪ್ರತಿಕ್ರಿಯೆಗಳು ಹುಟ್ಟುತ್ತವೆ. ಹಾಗೆ ನೋಡಿದರೆ, ‘ಸತ್ಯವೇ ತಳಹದಿ’ಯೆನ್ನುವ ಇತಿಹಾಸದಲ್ಲಿಯೇ ಸತ್ಯದ ಭಾಗವೆಷ್ಟು? ಅದು ಕೂಡಾ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಗ್ರಹಿಸುವ ಸತ್ಯದ ಏಕಪಕ್ಷೀಯವಾದ ಪ್ರಸ್ತುತಿ ಮಾತ್ರವೇ ಅಲ್ಲವೇ? ಹಾಗೆ ಪ್ರಜ್ಞೆಯೊಂದು ಸ್ವೀಕರಿಸುವ ಸತ್ಯವೂ ನಿರ್ದಿಷ್ಟ ಸಾಂಸ್ಕೃತಿಕ, ಸಾಮಾಜಿಕ, ನೈತಿಕ, ಮಾನಸಿಕ ಕಾಲುವೆಗಳಲ್ಲಿ ಹರಿಯುತ್ತ, ವ್ಯತ್ಯಾಸ ಹೊಂದುವುದಿಲ್ಲವೇ ಹೋಗಲಿ. ಕಾರ್ಯಕಾರಣ ಸಂಬಂಧದ ಗಟ್ಟಿತನವನ್ನು ಆಶ್ರಯಿಸಿರುವ ವಿಜ್ಞಾನವಾದರೂ ಕಾಲ ದೇಶ ಅಬಾಧಿತವೇ? ಅಲ್ಲವೆಂದು ಹೇಳಬೇಕಾಗುತ್ತದೆ. ವೈಜ್ಞಾನಿಕ ಸತ್ಯಗಳೂ ಕಾಲಕ್ರಮದಲ್ಲಿ ಜ್ಞಾನ ಪ್ರಪಂಚದ ವಿಸ್ತರಣೆಗಳಿಂದ, ಅನ್ಯೋನ್ಯ ಶಿಸ್ತುಗಳ ಸಂಪರ್ಕದಿಂದ, ಹೊಸ ಅವಿಷ್ಕಾರಗಳಿಂದ ತಿದ್ದಿಸಿಕೊಳ್ಳುತ್ತಲೇ ಹೋಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಅಮೂರ್ತವಾದ ಅನುಭವ ಪ್ರಪಂಚದ ಸೊತ್ತಾಗಿರುವ ಸಾಹಿತ್ಯ ಮತ್ತು ಸತ್ಯದ ಸಂಬಂಧವು ಎಷ್ಟು ಸೂಕ್ಷ್ಮವೂ ಪರಿವರ್ತನಶೀಲವೂ ಆಗಿರಬೇಡ?

ಮೂರ್ತಿರಾಯರ ಜಿಜ್ಞಾಸೆಯ ‘ಸತ್ಯ’ದ ಪರಿಕಲ್ಪನೆಗೆ ಅವರು ನೀಡುವ ಸ್ಪಷ್ಟೀಕರಣ ದೊಂದಿಗೆ ಮೊದಲಾಗುತ್ತದೆ.

“ಯಾವುದು ಇದೆಯೇ, ಯಾವುದಕ್ಕೆ ಅಸ್ತಿತ್ವವಿದೆಯೇ ಅದು ಸತ್ಯ” “ನಾನು ಇದ್ದೇನೆ, ಆದ್ದರಿಂದ ನಾನು ಸತ್ಯ. ನನ್ನ ಯೋಚನೆ (ಕಲ್ಪನೆ, ಕನಸು ಸೇರಿ) ಇದೆ. ಅದೂ ಸತ್ವ ಎನ್ನುತ್ತ ಅವರು, ಸತ್ಯಕ್ಕಿಂತ ಭಿನ್ನವಾದ ತಥ್ಯವೆನ್ನುವ ಪರಿಕಲ್ಪನೆಯನ್ನು ಪರಿಚಯಿಸುತ್ತಾರೆ. ಎಂದರೆ, ವಾಚ್ಯಾರ್ಥದ ನೆಲೆಯಲ್ಲಿಯೇ ನಿಲ್ಲುವ, ಬರಿಯ ‘ಇರುವಿಕೆ’ಯಿಂದ ತೃಪ್ತವಾಗುವ ‘ಅಸ್ತಿತ್ವ’ವು ತಥ್ಯವೆನ್ನುವ ಸಂಜ್ಞೆಯನ್ನು ಪಡೆಯುತ್ತದೆ. ಇದಕ್ಕಿಂತ ಭಿನ್ನವಾದ ಸತ್ಯಕ್ಕೆ ಎರಡು ಮುಖಗಳಿವೆ ಎಲ್ಲರಿಗೂ ಒಪ್ಪಿಗೆಯಾಗುವ ಸಾಮಾನ್ಯ ಸತ್ಯ. ೨. ಸಾರ್ವತ್ರಿಕ, ಸಾರ್ವಕಾಲಿಕ ವಿಶ್ವಸತ್ಯ. ಹೊರಪ್ರಪಂಚದ ಕೆಲವು ಬಿಡಿತಥ್ಯಗಳಿಗೆ ಪರಸ್ಪರ ಸಂಬಂಧಿ ಮತ್ತು ಹೊರಪ್ರಪಂಚದ ಕೆಲವು ಬಿಡಿತಥ್ಯಗಳಿಗೆ ಪರಸ್ಪರ ಸಂಬಂಧಿ ಮತ್ತು ನಮ್ಮ ಜೀವಕ್ಕೂ ಅದಕ್ಕೂ ಒಂದು ಸಂಬಂಧ ಏರ್ಪಟ್ಟಾಗ, ಒಂದು ಭಾವ ಅಥವಾ ಅರ್ಥವು ಸ್ಫುರಿಸುತ್ತದೆ. ಅದೇ ಆ ತಥ್ಯ, ಗ್ರಾಮ…ದ ಸತ್ಯ. ಈ ಸತ್ಯ-ತಥ್ಯಗಳ ಸಾಮರಸ್ಯವನ್ನು ವಿಶ್ಲೇಷಿಸುತ್ತ ಅವರು ಸಾಹಿತ್ಯವೆಂದರೆ, ಆಂತರಿಕ ಸಂಭಾವ್ಯತೆ, ಆಂತರಿಕ ಸತ್ಯದ ಅಭಿವ್ಯಕ್ತಿ ಎನ್ನುವ ನಿರ್ಧಾರಕ್ಕೆ ತಲುಪುತ್ತಾರೆ.

ಸಾಮಾನ್ಯ ಪರಿಭಾಷೆಯಲ್ಲಿ ಇದನ್ನು ‘ಪರಿಸರ ನಿರ್ಮಾಣ ಕ್ಷಮತೆ’ಯೆನ್ನಬಹುದೇನೋ, ಎಂದರೆ, ಕೇವಲ ಜಡ ಸಾಮಗ್ರಿಯಾಗಿರುವ ‘ಕಾಂಚಾಣವು ಕುರುಡಾಗುವುದು’ ಸಾಧ್ಯವಾದರೆ, ಆ ಕುರುಡು ಸ್ಥಿತಿಯಲ್ಲಿ ಅದು ಕುಣಿಯಬಲ್ಲುದಾದರೆ ಆ ಕುಣಿತವು ಬೇಂದ್ರೆಯವರು ನಿರೂಪಿಸಿದಂತೆಯೇ ಇದ್ದೀತು ಎನ್ನುವ ವಿನ್ಯಾಸ ನಿರ್ಮಿತಿಯ ಕೌಶಲ. ಇದುವೇ ಸಾಹಿತ್ಯದ ಸಂವೇದನಾತ್ಮಕತೆಯ, ಸಂವಹನಶೀಲತೆಯ ಸೂಚ್ಯಂಕವೂ ಆಗುತ್ತದೆನ್ನುವುದು ಮೂರ್ತಿರಾಯರ ನಿಲುವಿಗೆ ಪರೋಕ್ಷವಾದ ಸಮರ್ಥನೆಯೇ ಆಗುತ್ತದೆ.

ಸೇಡಿಯಾಪು ಅವರು ಸಾಹಿತ್ಯ ಪುರುಷನನ್ನು ಬೇರೊಂದು ಮಗ್ಗುಲಿನಿಂದ ನೋಡುತ್ತಾರೆ. ಅವರು ಸುಸಂಸ್ಕೃತವಾದ, ಸುಸಜ್ಜಿತವಾದ ಮನಸ್ಸನ್ನು ಸಾಹಿತ್ಯದ ನಿರ್ಮಾಣಕ್ಷೇತ್ರವಾಗಿ ಪರಿಗಣಿಸುತ್ತಾರೆ. ಅವರ ಪ್ರಕಾರ, “ಸುಸಂಸ್ಕೃತಿಯುಳ್ಳ ವ್ಯಕ್ತಿಗೆ, ತನ್ನಲ್ಲಿ ನೆಲೆಗೊಂಡ ಮನಃ ಪರಿಪಾಕದ ಗಾಢತ್ವಕ್ಕೆ ಅನುಗುಣವಾಗಿ, ಮನಃಸಮಾಧಾನವೆಂಬ ಮಹಾಸುಖವು ಆಗಾಗ ಅಥವಾ ಯಾವಾಗ ಬೇಕೋ ಆಗ ಅಥವಾ ಅವಿರತವಾಗಿ ಲಭಿಸುತ್ತಿರುತ್ತದೆ. ಈ ಸುಖಾನುಭವಕ್ಕೆ ಸಾಧನಭೂತವಾದ ಸಂಸ್ಕೃತಿಯನ್ನು, ಎಂದರೆ ಮನಃಪರಿಪಾಕವನ್ನು, ನಾವು ಪಡಬೇಕಾದ ಪ್ರಯಾಸವೇನೂ ಇಲ್ಲದೆ ನಮಗೆ ಒದಗಿಸುವ, ಉದಾತ್ತ ಬುದ್ದಿಯಿಂದ ಮತ್ತು ಸಮಾಜಕ್ಷೇಮವನ್ನು ಹಾರೈಸುವ ರಚನೆಯೆಲ್ಲವೂ ಸಾಹಿತ್ಯ. ಅದು ಸಮಾಜವನ್ನೂ ಭಾಷೆಯನ್ನೂ ಏಕಕಾಲದಲ್ಲಿ ಮೇಲಕ್ಕೆತ್ತುವ ಸಾಹಿತ್ಯ… ಸುಸಂಸ್ಕೃತಿಯನ್ನು ಸಮಾಜದಲ್ಲಿ ಬೆಳೆಯಿಸಬಲ್ಲ ಅಥವಾ ಬೆಳೆಯಿಸುವ ಉದ್ದೇಶದಿಂದ ರಚಿತವಾದ ವಾಙ್ಮಯವೇ ನಿಜವಾದ ಸಾಹಿತ್ಯ” (ವಿಚಾರ ಪ್ರಪಂಚ, ಪು. ೧೧ ಮತ್ತು ೯)

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರು ಈ ಮಾದರಿಯ ಜಿಜ್ಞಾಸೆಯನ್ನು ಸ್ವಲ್ಪ ಸಂಶಯದಿಂದಲೇ ನೋಡುತ್ತಾರೆ. ಅವರು ತಮ್ಮ ಮಾತಿಗೆ ಸಮರ್ಥನೆಯಾಗಿ,

‘ಮಥಿತ್ವಾ ಚತುರೋ ವೇದಾನ್ ಸರ್ವಶಾಸ್ತ್ರಾಣಿ ಚೈವ ಹಿ|
ಸಾರಸ್ತು ಯೋಗಿಭಿಃ ಪೀತಃ ತಕ್ರಂ ಪಿಬತಿ ಪಂಡಿತಃ

ಯೋಗಿಗಳಿಗೆ ಎಂದರೆ ತತ್ತ್ವಾರ್ಥಗಳಿಂದ ದೂರ ನಿಂತವರಿಗೆ ಬೆಣ್ಣೆ. ಪಂಡಿತರಿಗೆ, ತತ್ತ್ವಾರ್ಥ ತತ್ತ್ವಾರ್ಥಗಳಲ್ಲಿ ತೊಡಗಿಕೊಂಡವರಿಗೆ ಬರಿ  ಮಜ್ಜಿಗೆ!

ಎನ್ನುವ ಸ್ವಲ್ಪ ಹಗುರ ದಾಟಿಯಲ್ಲಿ ಸಾಮತಿಯನ್ನು ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ, ಅವರು ಸಾಹಿತ್ಯವನ್ನು ಪುನಾಸೃಷ್ಟಿಯೆನ್ನದೆ ‘ಹೊಸಸೃಷ್ಟಿ’ ಎಂದು ಕರೆಯುತ್ತಾರೆ.

‘ಶಾಸ್ತ್ರವು ಕಲೆಯ ಸಾಧನೆಗೆ ಸಾಧನ, ಶಾಸ್ತ್ರಜ್ಞಾನದ ಫಲ ಕಲೆ, ಇವೆರಡೂ ಅನ್ಯೋನ್ಯಾಶ್ರಯಿಗಳು’ ಎನ್ನುತ್ತಾ ಅವರು, ನಾವು ಮಾಡುವ ಕೆಲಸವು ಕಲೆಯಾಗಬೇಕಾದರೆ ಅದರಲ್ಲಿ ಒಂದು ಮುಖ್ಯವಾದ ವಿಶಿಷ್ಟ ಧರ್ಮವಿರಬೇಕು. ಅದನ್ನು ನಾವು ‘ಲಯ’ವೆಂದು ಕರೆಯಬಹುದು. ಲಯವೆಂದರೆ ಸಮತೆ, ಯಾವ ಪದಾರ್ಥವಾಗಲಿ ಮತ್ತೊಂದೇ ಹಲವೇ ಪದಾರ್ಥಗಳೊಡನೆ ಸಮವಾಗಿರುವಿಕೆ. (ಸಂಗೀತದ-ತಾಳ-ಶ್ರುತಿ-ಲಯಗಳನ್ನು ಪರಿಭಾವಿಸಿ)…. ಸಣ್ಣ ಕಲ್ಲನ್ನು ಪುಡಿ ಮಾಡುವುದು ಹೊಸ ಸೃಷ್ಟಿಯೇ. ಆದರೆ ಅದು ಕಲೆಯಲ್ಲ. ರಂಗವಲ್ಲಿ ಕಲೆ. ತಲೆಹರಟೆಯೂ ಸೃಷ್ಟಿಯೇ. ಆದರೆ ಅದು ಕಲೆಯಲ್ಲ. ಕಲೆಯೆನ್ನುವುದು, ಕವಿತೆಯನ್ನು ಮಾತ್ರ… ಸೃಷ್ಟಿ ಮಾಡಿದ ವಸ್ತುವಿನಲ್ಲಿ ವೈಷಮ್ಯವು ಎಷ್ಟು ಕಡಿಮೆಯಾಗಿದ್ದರೆ, ಸಾಮ್ಯವು ಎಷ್ಟು ಹೆಚ್ಚಾಗಿದ್ದರೆ ಅಷ್ಟು ಕಲೆಯ ಹೊಳಪು ಹೆಚ್ಚಾಗಿ ತೋರುವುದು.. ಸಾಮಾನ್ಯ ಜೀವಿತದಲ್ಲಿ ಈ ಲಯಾನುಭವದಿಂದ ಸ್ನೇಹ, ದಯೆ, ನೀತಿ ಮುಂತಾದ ಮಹಾಗುಣಗಳನ್ನು ಬೆಳೆದರೆ, ಕಲೆಯಲ್ಲಿ ಇದರಿಂದ ಏಕಾಗ್ರತೆ, ಶಾಂತಿ, ಆನಂದ ಲಭಿಸುವುವು” (ಸಾಹಿತ್ಯ ಮತ್ತು ಜೀವನ ಕಲೆ ಪು. ೨).

ಈ ‘ಲಯ’ವನ್ನು ಕಾರಂತರು ಸುತ್ತಲಿನ ನಿಸರ್ಗದೊಂದಿಗೆ ತಾದಾತ್ಮ್ಯ ಎಂದು ಗುರುತಿಸಿದರೆ, ಮೂರ್ತಿರಾಯರು ಸತ್ಯದೊಂದಿಗೆ ಸಮರಸಗೊಳ್ಳುವಿಕೆ ಎನ್ನುತ್ತಾರೆ. ಈ ಲಯಾನುನುಭವದ ಪ್ರಯೋಜನ ಜೀವನದ ಸಂಸ್ಕಾರದಲ್ಲಿ ಪರಿಣಮಿಸುವ ರೀತಿಯನ್ನೂ, ಕಲಾಸೃಷ್ಟಿಯಲ್ಲಿ ಅದು ಸಾಧಿಸುವ ಪರಿಣಾಮ ರಮಣೀಯತೆಯನ್ನೂ ಅಕ್ಕಪಕ್ಕದಲ್ಲಿಟ್ಟಾಗ, ಇದರ ವೈಶಿಷ್ಟ್ಯ ಸ್ಪಷ್ಟವಾಗುತ್ತದೆ. ಇಲ್ಲಿ, ಒಂದರ್ಥದ ದ್ವಿಮುಖ ಸಂಬಂಧವಿದೆ ಎಂದರೆ, ಲಯವಿನ್ಯಾಸ ಬದ್ಧವಾದ ಬದುಕು, ಸುಪುಷ್ಟವಾದ ಸಾಹಿತ್ಯವನ್ನು ನಿರ್ಮಿಸುತ್ತದೆ. ಇದಕ್ಕೆ ಪರ್ಯಾಯ ಪರಿಸ್ಥಿತಿಯಲ್ಲಿ ಲಯನಿಷ್ಠವಾದ ಸಾಹಿತ್ಯ ಸುಸಂಸ್ಕೃತವಾದ ಬದುಕಿನ ನಿರ್ಮಾಣ ವನ್ನು ಮಾಡುತ್ತದೆ. ಇದು ರಾಳಪಳ್ಳಿಯವರು ಉಲ್ಲೇಖಿಸುವ ‘ಅನ್ಯೋನ್ಯಾಶ್ರಯ ಕ್ರಮ’ಕ್ಕೆ ಸೊಗಸಾದ ಉದಾಹರಣೆಯೂ ಆಗುತ್ತದೆ.

ಡಿ.ವಿ.ಜಿ.ಯವರಿಗೆ ಸಾಹಿತ್ಯದ ಓಜಸ್ಸಿನಲ್ಲಿ, ಅವರೇ ವಿವರಿಸುವಂತೆ, ‘ಮನಸ್ಸಿನ ಮೇಲೆ ಒಂದು ಬಲವಾದ ಪರಿಣಾಮವನ್ನುಂಟು ಮಾಡಿ ಕಾವು ಹುಟ್ಟಿಸುವ ಶಕ್ತಿ’ಯಲ್ಲಿ – ಒಂದು ಕಾಲಕ್ಕೆ ಆಗಲೊಲ್ಲದೇಕೆ – ಬಲವಾದ ನಂಬಿಕೆಯಿದೆ. ಸಾಹಿತ್ಯವು ಬೌದ್ದಿಕ ಶ್ರಮವೂ ಹೌದು. ಸಂವೇದನೆಗಳ ಆಡಂಬೊಲವೂ ಹೌದೆನ್ನುವ ಅವರೂ ಅದರಲ್ಲಿ ಲಯವನ್ನು ಶೋಧಿಸುತ್ತಾರೆ. ಅವರ ಪ್ರಕಾರ, ಸಾಹಿತ್ಯವೆಂದರೆ ವಿಶ್ವಸತ್ಯಗಳ ನಿರಂತರ, ನವೋನವ, ಸಂಕೀರ್ಣ ಅನ್ವೇಷಣೆಯೇ ಆಗಿದೆ. ಡಿ.ವಿ.ಜಿ. ಅವರೇ ಹೇಳುವಂತೆ, ಸಾಹಿತ್ಯ ಸೃಷ್ಟಿ ಆತ್ಯಂತಿಕವಾದ, ಆಳವಾದ ಪ್ರಭಾವಿಯಾದ ಸೌಂದರ್ಯದ ಅನುಭವದಲ್ಲಿದೆ. ಈ ನಿಟ್ಟಿನಲ್ಲಿ ಅವರ ಚಿಂತನೆ ಹರಿಯುವ ಕ್ರಮ ಹೀಗಿದೆ :

“ಸೌಂದರ್ಯವು ಬಹಿರಿಂದ್ರಿಯಗಳಿಗೆ ಗೋಚರಿಸುವ ರೂಪಶಬ್ದಗಳಲ್ಲಿ ಮಾತ್ರವಲ್ಲದೆ, ಅಂತರಂಗಕ್ಕೆ ತಟ್ಟುವ ಜೀವವರ್ತನೆ ವಿಲಾಸಗಳಲ್ಲೂ ಇರುವ ಶಕ್ತಿ ವಿಶೇಷ. ಹೊಂಬಿಸಿಲು, ತಂಗಾಳಿ, ಮಾಂದಳಿರು… ಇಂಥವು ಮಾತ್ರವೇ ಅಲ್ಲ ಸೌಂದರ್ಯದ ನೆಲೆಮನೆಗಳು. ಹೃದಯ ಸಂಕ್ಷೋಭೆ ಸಂಯಮನ, ವ್ಯಾಮೋಹ, ವಿವೇಕ, ಆವೇಶ, ಸಮಾಧಿ, ಮನೋರಾಜ್ಯದಲ್ಲಿ ರಾಗಭಾವ, ಸಂಶಯ, ಭಯ, ಹಟ, ತಾಳ್ಮೆ ಈ ನಾನಾ ಪ್ರಜೆಗಳು ಹೇಗೆ ಹೇಗೆ ಚಳವಳಿ ನಡೆಸಬಹುದೋ, ಆತ್ಮರಾಜನು ಆಳಬಹುದೋ ಅದನ್ನು ಕವಿಯು ಚಿತ್ರಿಸುತ್ತಾನೆ. ಕಾವ್ಯಭೂಮಿಯಲ್ಲಿ ಜೀವನು ಹೃದಯಲೀಲೆ ಆತ್ಮಶಿಕ್ಷೆ ಇವೆರಡರ ಮಧ್ಯೆ ಬಿದ್ದು ಹೊರಳಾಡುತ್ತಿರುತ್ತಾನೆ. ಜೀವನೋಪಯುಕ್ತವಾದ ಸತ್ಯ, ಜೀವನೋತ್ತೇಜಕವಾದ ಸೌಂದರ್ಯ ಇವುಗಳನ್ನು ಹಿಡಿದು ಕೆಲಸ ಮಾಡುವವನು ಕವಿ.”

ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಿ. ನಮ್ಮ ವಿದ್ವಾಂಸರು ದೇವರ ಸ್ವರೂಪ, ಸಂಸ್ಕೃತಿಯ ವ್ಯಾಖ್ಯಾನ ಹಾಗೂ ಸಾಹಿತ್ಯದ ವಿವೇಚನೆಗಳನ್ನು ಅನನ್ಯವಾದ ರೀತಿಯಲ್ಲಿ ಒಂದೇ ಪಾತಳಿಯಲ್ಲಿಟ್ಟು ನೋಡುವ ಪ್ರಯತ್ನಗಳನ್ನು ಮಾಡಿದ್ದಾರೆ. ವೈಯಕ್ತಿಕವಾಗಿ, ಪ್ರತಿ ವಿದ್ವಾಂಸರೂ ಸ್ವೋಪಜ್ಞತೆಗೆ ಭಂಗ ಬಾರದ ಹಾಗೆ, ಒಂದೋ ಸಹ ವಿದ್ವಾಂಸರ ವಾದಕ್ಕೆ ಸಮಾನಾಂತರದಲ್ಲಿ ಸಾಗಿರುವುದನ್ನು ಗುರುತಿಸುತ್ತೇವೆ. ಇಲ್ಲವೆ ಜ್ಞಾತಿ ವರಸೆ ಸಂಬಂಧವನ್ನೋ, ಒಂದೇ ಕಾಂಡದ ಬೇರೆ ಬೇರೆ ಟಿಸಿಲುಗಳ ಸಂಬಂಧವನ್ನೋ ಸ್ಥಾಪಿಸಿಕೊಂಡಿ ರುವುದನ್ನು ಕಾಣುತ್ತೇವೆ. ಈ ದೃಷ್ಟಿಯಿಂದ, ಇವೆರಲ್ಲರೂ ಜ್ಞಾನಶರೀರದ ಪೋಷಣೆಗಾಗಿ ಏಕಮನಸ್ಸಿನಿಂದ ದುಡಿದಿರುವುದೂ ಸ್ಪಷ್ಟವೇ ಆಗುತ್ತದೆ.

ಇವರೆಲ್ಲರೂ ಸಾಹಿತ್ಯದ ಸ್ವರೂಪವನ್ನು ಸ್ಪಷ್ಟಪಡಿಸಿಕೊಂಡುದು ಸ್ವಅನುಭವದ ನೆರಳಿನಲ್ಲಿಯೇ ಎನ್ನುವುದು ಈ ಸಂದರ್ಭದಲ್ಲಿ ಸ್ಥಿರಪಡುತ್ತದೆ. ತಮ್ಮ ಕಾವ್ಯದ ಮೂಲಸ್ರೋತ ತಮಗಾದ ಆಧ್ಯಾತ್ಮಿಕ ಅನುಭವಗಳೇ ಎನ್ನುವ ಮಾಸ್ತಿಯವರಾಗಲಿ, ‘ಬದುಕನ್ನು ಬಿಟ್ಟರೆ ಯಾವುದಕ್ಕೂ ಅರ್ಥವಿಲ್ಲ; ಮನುಷ್ಯನ ಬದುಕೇ ಪರಮಮೌಲ್ಯ. ಎಲ್ಲದಕ್ಕೂ ಅದೇ ಆಧಾರ. ನಿಸರ್ಗದಿಂದ ಮನುಷ್ಯ ಪಡೆದ ದೊಡ್ಡ ವರ ಅದು. ಅನನ್ಯವಾದ ಅವಕಾಶವೂ ಹೌದು… ಸಾಧ್ಯವಿದ್ದಮಟ್ಟಿಗೆ ಪೂರ್ಣತೆಯನ್ನು ತನ್ನದಾಗಿಸಿಕೊಳ್ಳಬೇಕು ಮನುಷ್ಯನಿಗೆ ಎಲ್ಲವೂ ಅಧೀನವಾಗಬೇಕು, ಸಾಧನವಾಗಬೇಕು, ಬಾಳ್ವೆಯೇ ಎಲ್ಲಕ್ಕೂ, ಸಾಹಿತ್ಯಕ್ಕೂ ಬೆಳಕಾಗಬೇಕು’ ಎನ್ನುವ ಕಾರಂತರಾಗಲಿ ಈ ಹೇಳಿಕೆಯಿಂದ ಹೊರಗುಳಿ ಯುವುದಿಲ್ಲ.

ಇಲ್ಲಿವರೆಗೆ ಚರ್ಚಿಸಲಾದ ವಿಷಯಗಳ ಬೆನ್ನೆಲುಬು, ನಮ್ಮ ಸಾಹಿತ್ಯವನ್ನು ಮರುಓದಿಗೆ ಒಳಪಡಿಸುವ ಪ್ರಕ್ರಿಯೆಯೇ ಆಗಿದೆ. ನಮ್ಮ ವಿಚಾರಶೀಲರನ್ನೂ ವಿದ್ವಾಂಸರನ್ನೂ ಅವರ ವಿಚಾರಗಳನ್ನೂ ಪ್ರತ್ಯೇಕವಾಗಿ ವಿಶ್ಲೇಷಿಸುವ ರೀತಿಯು ನಮಗೆಲ್ಲ ಪರಿಚಿತವಾದುದೇ ಆಗಿದೆ. ಇಲ್ಲಿ ಅವರನ್ನು ನಿರ್ದಿಷ್ಟ ಗುಚ್ಛದೊಳಗಿರಿಸಿ ನೋಡುವುದು ಸಾಧ್ಯವೇ, ಅಥವಾ ವಿಶಿಷ್ಟ ವಿಚಾರ ಪ್ರಣಾಲಿಗಳ ಮಧ್ಯೆ ನಿಶ್ಚಿತವಾದ ಸಂಬಂಧ ಕಲ್ಪನೆ ಸಾಧ್ಯವೇ ಎನ್ನುವ ಪ್ರಮೇಯವನ್ನು ಆಧರಿಸಿ ಈ ವಿವೇಚನೆಯನ್ನು ನಡೆಸಲಾಗಿದೆ. ಈ ಪೂರ್ವರಂಗವು ಇದೇ ಮಾದರಿಯ ಹಲವು ಅಧ್ಯಯನಗಳ ದಾರಿಯನ್ನು ಹಸನುಗೊಳಿಸಬೇಕಾಗಿದೆ.

ಈ ದೃಷ್ಟಿಯಿಂದ, ಇದಕ್ಕೆ ಅನುಬಂಧವಾಗಿ ಇತ್ತೀಚೆಗೆ ಪ್ರಕಟವಾದ ಕೆ.ವಿ. ಸುಬ್ಬಣ್ಣ ನವರ, “ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು” ಕೃತಿಯನ್ನು ಉಲ್ಲೇಖಿಸಲು ಇಷ್ಟಪಡುತ್ತೇನೆ. ಇದು, ಲಕ್ಷಣಗ್ರಂಥವೆಂದೇ ಕರೆಸಿಕೊಳ್ಳುತ್ತಿದ್ದ ‘ಕವಿರಾಜಮಾರ್ಗ’ವನ್ನು ಒಂದು ಸಾಂಸ್ಕೃತಿಕ ಪಠ್ಯವಾಗಿ ಕಾಣುವ ಹೊಸದೃಷ್ಟಿಯಿಂದ ಪ್ರೇರಣೆಯನ್ನು ಪಡೆದಿದೆ. ಅದರಲ್ಲಿರುವ, ವಿಶಿಷ್ಟ ಹೊಳಹನ್ನು ನೀಡುವ ಎರಡು ಪ್ರಸ್ತಾಪಗಳು ಹೀಗಿವೆ :

೧. ಲೋಕಚರಿತದ ಮೂಲಕ ಬದುಕನ್ನು ಶೋಧಿಸಿಕೊಳ್ಳಬೇಕೆನ್ನುವ ಕಾವ್ಯವು, ಬದುಕಿನಲ್ಲಿ ಬೆರೆತುಕೊಂಡಿರುವ ಕೇಡಿನ ಬಗೆಗೆ ಚಿಂತಿಸಬೇಕಾದುದು ಅನಿವಾರ್ಯ. ಹಾಗಾಗಿ, ತತ್ತ್ವಧರ್ಮ, ಆಧ್ಯಾತ್ಮಗಳಷ್ಟೇ ಅಲ್ಲ ಉತ್ತಮ ಕಾವ್ಯಗಳೂ ಕೇಡು ಪಾಪ ಹಿಂಸೆಗಳ ಬಗ್ಗೆ ಗಾಢವಾಗಿ ಚಿಂತಿಸಿವೆ. ನಮ್ಮ ಪರಂಪರೆಯು ದೀರ್ಘವಾಗಿದ್ದು, ಸಾತತ್ಯವಿರುವಂಥದ್ದು. ಹಾಗಾಗಿ, ಭಾರತೀಯ ಕಾವ್ಯಗಳು, ಕೇಡಿನ ಚಿಂತನೆ ಹಾಗೂ ಅದನ್ನು ಉತ್ತರಿಸುವ ಮಾರ್ಗತಂತ್ರಗಳ ಶೋಧನೆಯಲ್ಲಿ ತೊಡಗಿವೆ.

೨. ಗ್ರಾಮೀಣ ಪರಿಸರದಲ್ಲಿ ವ್ಯವಸಾಯ, ಪಶುಪಾಲನೆಗಳನ್ನವಲಂಬಿಸಿ ಬದುಕಿಕೊಂಡಿರುವವರಿಗೆ ಹುಲಿಯು ಒಂದು ವಾಸ್ತವಿಕವಾದ ಸಮಸ್ಯೆ. ಆ ಸಮುದಾಯದ ಸಂವೇದನಶೀಲ, ಸೃಜನಶೀಲ ಚೇತನಕ್ಕೆ ಅದು ವಾಸ್ತವಿಕ ಮಾತ್ರವಲ್ಲದೆ ಆಧ್ಯಾತ್ಮಿಕ ಸಮಸ್ಯೆಯೂ ಆಗಿ ಕಾಣಿಸುತ್ತದೆ. ‘ಗೋವಿನ ಹಾಡು’ವಿನಲ್ಲಿಯ ವ್ಯಾಘ್ರವು ಒಂದು ಪ್ರಾಣಿಯಷ್ಟೇ ಅಲ್ಲ, ಉದಾಹರಣೆಯೋ ಸಂಕೇತವೋ ಮಾತ್ರವಲ್ಲ, ಹುತ್ತಗಟ್ಟಿರುವ ಚಿತ್ತವು ಒಡಮೂಡಿಸಿಕೊಂಡ ಪ್ರತಿಮೆಯಾಗಿದೆ (ಕ.ರಾ. ಮಾರ್ಗ ಮತ್ತು ಕನ್ನಡ ಜಗತ್ತು, ಪು. ೧೧೪-೫).

ಈ ಹೊಸ ವಿಚಾರಗಳನ್ನು ಬೆಳಕಿಗೆ ತಂದುದು ಸೃಜನಶೀಲ ಸಾಹಿತ್ಯಕೃತಿಯಾಗಿರದೆ, ಲಕ್ಷಣ ಗ್ರಂಥವೊಂದಾಗಿದೆ ಎಂಬುದು ನಾವು ನೆನಪಿಡಬೇಕಾದ ಅಂಶವೇ ಆಗಿದೆ. ನಾವು ಎಂದೂ ಆ ದೃಷ್ಟಿಯಿಂದ ನೋಡದ ಕೃತಿಯೊಂದು ಇಷ್ಟರಮಟ್ಟಿಗಿನ ಅಸ್ಮಿತೆಯನ್ನು ಸಿದ್ಧಪಡಿಸಿಕೊಳ್ಳಬಹುದೆಂಬ ಅಂಶವು, ಸಾಹಿತ್ಯವನ್ನು ನೋಡುವ ಕಣ್ಣುಗಳನ್ನು ತಿಳಿಗೊಳಿಸಬೇಕಾಗಿದೆ, ವಿಶಾಲಗೊಳಿಸಬೇಕಾಗಿದೆ. ಹಾಗಾದಾಗ, ನಾವು ಉಪೇಕ್ಷಿಸಿದ ಅನೇಕ ಕೃತಿಗಳು ತಮ್ಮೊಳಗಿನ ಸಾರವನ್ನು ಮುಕ್ತವಾಗಿ ಬಿಟ್ಟುಕೊಡಲು ಸನ್ನದ್ಧವಾದಾವು.