ಸಂವಹನವು ವಿವಿಧ ವಾಹಿನಿಗಳುಳ್ಳ ಒಂದು ಪ್ರಕ್ರಿಯೆ. ಈ ಪರಿಕಲ್ಪನೆಗೆ ಬೇರೆ ಬೇರೆ ಶಾಸ್ತ್ರಗಳಲ್ಲಿ ವಿಭಿನ್ನ ಅರ್ಥಗಳಿವೆ. ತಂತ್ರವಿಜ್ಞಾನ (Technology) ಮನೋವಿಜ್ಞಾನ (Psychology), ಸಮಾಜಶಾಸ್ತ್ರ (Sociology), ಕಲೆ (Art) ಮುಂತಾದ ಪ್ರಕಾರಗಳಲ್ಲಿ ಅದು ಹೊಂದುವ ಅರ್ಥಾಂತರವನ್ನೇ ವಿಶೇಷವಾಗಿ ಅಭ್ಯಾಸ ಮಾಡುವ ವಿಶಿಷ್ಟ ಶಾಸ್ತ್ರವನ್ನು ಸಂವಹನಶಾಸ್ತ್ರ (Communicology) ಎಂದು ಕರೆಯುತ್ತಾರೆ. ಈ ‘ಸಂವಹನ’ ಪದವನ್ನು ಅದರ ವ್ಯಾಪಕಾರ್ಥದಲ್ಲಿ “ಇತರರ ಆಲೋಚನಾ ವಿಧಾನಗಳನ್ನೂ, ಅನಿಸಿಕೆಗಳನ್ನೂ ತಿಳಿಯುವ, ನಮ್ಮ ಭಾವನೆಗಳನ್ನೂ ಪ್ರತಿಕ್ರಿಯೆ”ಯನ್ನೂ ಇತರರಿಗೆ ದಾಟಿಸುವ ಒಂದು ಸಂಯುಕ್ತ ಕ್ರಿಯೆಯನ್ನು ಸೂಚಿಸಲು ಬಳಸುತ್ತೇವೆ.

ವಸ್ತುಪ್ರಪಂಚದಲ್ಲಿ, ಕೆಲವು ಮೂಲಭೂತವಾದ ಸಂವಹನಾಂಗಗಳ ಉಪಸ್ಥಿತಿಯಲ್ಲಷ್ಟೇ ‘ಸಂವಹನ’ ಕ್ರಿಯೆ ಸಾಧ್ಯವಾಗುತ್ತದೆ. ಪ್ರೇಷಕ (Sender), ಸಂದೇಶ (Message), ಮಾಧ್ಯಮ (Medium) ಮತ್ತು ಗ್ರಾಹಕ(Reciever)ಗಳನ್ನು ಒಟ್ಟಾಗಿ ‘ಸಂವಹನಾಂಗಗಳು’ ಎಂದು ಕರೆಯಬಹುದು. ಈ ಸಂವಹನ ಕ್ರಿಯೆ ಸಂಕೀರ್ಣವಾಗುತ್ತ ಹೋದಂತೆ, ಸಂವಹನಾಂಗ ಗಳಿಗೆ ಉಪ ಅಂಗಗಳೂ ಸಹಾಯಕ ಅಂಗಗಳೂ ಸೇರಬಹುದು.

ಪ್ರೇಷಕನ ಮನಸ್ಸಿನಲ್ಲಿ ಹುಟ್ಟಿದ ಸಂದೇಶವು ಭಾಷೆ (Language), ಸಂಜ್ಞೆ (Gesture), ಸಂಕೇತ (Symbols), ಸೂಚನಾ ಫಲಕ (Signals) ಮುಂತಾದ ಮಾಧ್ಯಮಗಳ ಮೂಲಕ ಗ್ರಾಹಕನನ್ನು ಮುಟ್ಟುತ್ತದೆ. ಅಲ್ಲಿ ಪೂರ್ವಯೋಜಿತ ಅಥವಾ ಅನಿರೀಕ್ಷಿತ ಪರಿಣಾಮಗಳನ್ನು, ಪ್ರತಿಕ್ರಿಯೆಯಗಳನ್ನು ಹುಟ್ಟಿಸುವುದರೊಂದಿಗೆ ಅದರ ಮೊದಲ ಸುತ್ತಿನ ಕಾಯಕ ಸಂಪೂರ್ಣವಾಗುತ್ತದೆ.

ಈ ಸಂವಹನವು ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ.

೧. ಸಂವಹನ ಸಂಬಂಧಸ್ಯಂದಿಯಾದುದು. ಅದು ಪ್ರೇಷಕ ಮತ್ತು ಗ್ರಾಹಕರ ಮಧ್ಯೆ ಘನಿಷ್ಠವಾದ ಸಂಬಂಧವನ್ನು ಸ್ಥಾಪಿಸುತ್ತದೆ. ಪರಸ್ಪರರನ್ನು ತಿಳಿಯುವ ಮಾಧ್ಯಮವಾಗಿ ಬಳಕೆಯಾಗುತ್ತದೆ.

೨. ಸಂವಹನ ವಿವಿಧ ಆಯಾಮಗಳನ್ನು ಹೊಂದಿರುತ್ತದೆ.

೩. ಸಂವಹನಕ್ಕೆ ಪ್ರತಿಕ್ರಿಯಾಕ್ಷಮತೆಯಿರುತ್ತದೆ.

೪. ಸಂವಹನದ ಕಾರ್ಯವಿಧಾನ ವೃದ್ದಿಕ್ಷಯ ಚಕ್ರಕ್ಕೆ ಬದ್ಧವಾಗಿರುತ್ತದೆ.

೫. ಸಂವಹನಕ್ಕೆ ತರತಮ ಸ್ತರಗಳಿರುತ್ತವೆ.

ಸಂವಹನ ಕಾರ್ಯಕ್ಕೆ ಮೂರು ಮುಖ್ಯ ಆಯಾಮಗಳಿವೆ.

೧. ಬಾಹ್ಯ ರಚನಾ ಸಂಬಂಧಿ(Syntactics)ಯಾದ ಆಯಾಮವು ಭಾಷೆಯೇ ಮುಂತಾದ ಮಾಧ್ಯಮಗಳ ಜೋಡಣೆ-ಕ್ರಮನಿರ್ಧಾರ (Fixation of Order) ಮತ್ತು ವರ್ಗೀಕರಣಗಳತ್ತ ಲಕ್ಷ್ಯವಹಿಸುತ್ತದೆ.

೨. ಅರ್ಥಸಂಬಂಧಿ(Semantics)ಯಾದ ಆಯಾಮವು ಸಂಜ್ಞೆ ಮತ್ತು ಅದರ ಅರ್ಥಗಳ ನಡುವಿನ ಸಂಬಂಧವನ್ನು ಸ್ಥಾಪಿಸುತ್ತದೆ. (ಉದಾ:- ಕೆಂಬಣ್ಣ ಮತ್ತು ಅಪಾಯ ಸೂಚನೆ).

೩. ವಿಧಾನ ಸಂಬಂಧಿ(Pragratic)ಯಾದ ಆಯಾಮವು ವ್ಯಕ್ತಿ ಮತ್ತು ಸಂದರ್ಭಗಳಿಗೆ ಸಂವಾದಿಯಾಗಿ ಸಂಜ್ಞೆ ಮತ್ತು ಅವುಗಳ ವ್ಯಾಪ್ತಿ ಬದಲಾಗುವುದರ ಕಡೆಗೆ ಗಮನ ಹರಿಸುತ್ತದೆ.

ಈ ಸಂವಹನ ವಿಧಾನ ನಡೆದುಬಂದ ದಾರಿಯ ಪರಿವೀಕ್ಷಣೆ ತುಂಬ ಕುತೂಹಲ ಕಾರಿಯಾದ ಅಂಶಗಳನ್ನು ಹೊರಗೆಡಹುತ್ತದೆ. ಇದನ್ನು ಈ ಕೆಳಗಿನ ಪಟ್ಟಿಕೆಗಳು ಸ್ಪಷ್ಟಪಡಿಸುತ್ತವೆ.

01_104_HHE_KUH

ಭಾಷಿಕ-ಅಭಾಷಿಕ ಸಂಜ್ಞೆಗಳ ಆವಿಷ್ಕಾರ ಪರಿಷ್ಕಾರಗಳು, ಆವೆಮಣ್ಣಿನ ಗುಳಿಗೆ (Day Tablet)ಗಳಿಂದ ತೊಡಗಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಮಾಧ್ಯಮಗಳವರೆಗಿನ ಸಂದೇಶವಾಹಕಗಳ ಚಾರಿತ್ರಿಕ ಬೆಳವಣಿಗೆ – ಇವೆಲ್ಲವೂ ತುಂಬ ರೋಚಕವಾದವುಗಳೇ ಆಗಿವೆ.

ನಿರ್ದಿಷ್ಟ ಸಂದೇಶವಂದು ಪ್ರೇಷಕ-ಗ್ರಾಹಕರಿಬ್ಬರ ಸೊತ್ತಾಗಿ ಉಳಿದುಕೊಳ್ಳುವುದೇ ಸಂವಹನದ ಆತ್ಯಂತಿಕ ಉದ್ದೇಶವಾಗಿದೆ. ಸುಸಂಬದ್ಧತೆಯ ದೃಷ್ಟಿಯಿಂದ, ಅದು ಮೂಲಕ್ಕೆ ನಿಷ್ಠವಾಗಿರಬೇಕು. ಅಂದರೆ ಪ್ರೇಷಕ ಕಳುಹಿಸುವ ಸಂದೇಶವೂ ಗ್ರಾಹಕ ಸ್ವೀಕರಿಸುವ ಸಂದೇಶವೂ ಒಂದೇ ಆಗಿರಬೇಕು. ಸಂದೇಶದ ಅರ್ಥವೂ ನಿರ್ದುಷ್ಟವಾಗಿರಬೇಕು ಸ್ಪಷ್ಟವಾಗಿರಬೇಕು. ಮಾತ್ರವಲ್ಲ, ಸಂದೇಶವಂದಕ್ಕೆ ಪ್ರೇಷಕನಿಂದ ಗ್ರಾಹಕನ ವರೆಗೆ ಪ್ರಯಾಣಿಸಲು ತಗಲುವ ಕಾಲವೂ ಅತ್ಯಲ್ಪವಾಗಿರಬೇಕು. ಸಂದೇಶದ ಕಾಯ (Body) ಸಂಪೂರ್ಣವಾಗಿರಬೇಕು. ಅಂದರೆ, ಇನ್ನೂ ರೂಪು ತಳೆಯುವ ಹಂತದಲ್ಲೇ ಸಂದೇಶ ಸಂವಹನ ನಡೆಯಬಾರದು. ಸಂದೇಶವು ಪ್ರತಿಕ್ರಿಯೆ, ಎಚ್ಚರ, ಗ್ರಹಣ ಮತ್ತು ಮನನಗಳನ್ನು ಉದ್ದೀಪಿಸಬೇಕು. ಈ ಪ್ರಕ್ರಿಯೆಯಲ್ಲಿ ಸಂದೇಶವು ಆಕಾರ (Shape) ತಾಳುತ್ತದೆ. ಸಂವಹನದ ಸರಣಿಯು ಅಬಾಧಿತವಾಗಿರಬೇಕು. ಸಂವಹನಾಂಗಗಳು ಒಂದಕ್ಕೊಂದು ಪೂರಕವಾಗಿ ಅತ್ಯಂತಿಕ ಉದ್ದೇಶದ ಸಾಧನೆಗೆ ದುಡಿಯಬೇಕು.

ಈ ಸಂವಹನ ಚಕ್ರವು ಮುಖ್ಯವಾಗಿ ಐದು ಘಟ್ಟಗಳಲ್ಲಿ ನಡೆಯುತ್ತದೆ.

02_104_HHE_KUH

ಈ ಪ್ರೇಷಕ-ಗ್ರಾಹಕ ಸ್ಥಾನಗಳು ಅತಿವೇಗವಾಗಿ ಸ್ಥಾನಪಲ್ಲಟ ಮಾಡಿಕೊಳ್ಲುತ್ತಲೇ ಜ್ಞಾನವೃದ್ದಿ ಕ್ರಿಯೆಯಲ್ಲಿ ಪಾಲುಗೊಳ್ಳುತ್ತವೆ. ಉದಾಹರಣೆಗೆ, ಗ್ರಾಹಕನ ಹೆಸರಿನ ಬಗೆಗೆ ಪ್ರೇಷಕನಲ್ಲಿ ಕುತೂಹಲ ಹುಟ್ಟುತ್ತದೆ. ಅಂದರೆ ಸಂದೇಶವೊಂದು ಹುಟ್ಟಿಕೊಳ್ಳುತ್ತದೆ. ಎರಡನೆಯ ಹಂತದಲ್ಲಿ ಅವನು ಅದನ್ನು “ನಿಮ್ಮ ಹೆಸರು ಏನು?” ಎಂಬುದಾಗಿ ಭಾಷಿಕವಾದ ಸಂಜ್ಞೆಗೆ ಪರಿವರ್ತಿಸುತ್ತಾನೆ. ಮೌಖಿಕವಾಗಿ ಸಂವಹನಗೊಳ್ಳುವ ಈ ಸಂದೇಶವನ್ನು ಗ್ರಾಹಕನ ಶ್ರವಣೇಂದ್ರಿಯ ಗ್ರಹಿಸುತ್ತದೆ. ಅವನಲ್ಲಿ “ಪ್ರೇಷಕನಿಗೆ ತನ್ನ ಹೆಸರಿನ ಬಗೆಗೆ ಕುತೂಹಲ ಉಂಟಾಗಿದೆ” ಎಂಬ ಅರಿವು ಹುಟ್ಟುತ್ತದೆ. ಅವನು ಅದೇ ಭಾಷೆಯ ಮೂಲಕ ತನ್ನ ಹೆಸರನ್ನು ಸಂವಹಿಸುತ್ತಾನೆ. ಪ್ರೇಷಕನಲ್ಲಿ ಅಪೇಕ್ಷಿತ ಜ್ಞಾನ ಹುಟ್ಟುತ್ತದೆ.

ಈ ಸಂವಹನ ವಿಧಾನವು ಅನುಸರಿಸುವ ಬೇರೆ ಬೇರೆ ಕ್ರಮಗಳ ಬಗೆಗೆ ಸ್ವಲ್ಪ ವಿವರವಾಗಿ ನೋಡಬಹುದೆನಿಸುತ್ತದೆ.

03_104_HHE_KUH

ಈ ಸಂದರ್ಭದಲ್ಲಿ ಸಂವಹನ ಸರಣಿ ನಿರ್ಬಾಧಿತವಾಗಿ ಮುಂದುವರೆಯುತ್ತದೆ. ಸಂವಹನ ಭಂಗ ತೀರಾ ಅಲ್ಪಪ್ರಮಾಣದಲ್ಲಿ ನಡೆಯುತ್ತದೆ. ಅಪೇಕ್ಷಿತ ಮಟ್ಟದ, ಪ್ರಮಾಣದ, ಸ್ವರೂಪದ ಜ್ಞಾನಾಭಿವೃದ್ದಿ ಪ್ರೇಷಕ ಗ್ರಾಹಕರಿಬ್ಬರ ಹೊಣೆಯಾಗಿರುವುದರಿಂದ ಎಲ್ಲಾ ತೊಡಕುಗಳನ್ನೂ ಅಲ್ಲಲ್ಲೇ ಪರಿಹರಿಸಿಕೊಳ್ಳಬಹುದಾದ ಸೌಲಭ್ಯವೂ ಅವರಿಗೆ ದೊರೆ ಯುತ್ತದೆ. ಉದಾಹರಣೆಗೆ, ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆ. ಇಲ್ಲಿ ಶ್ರೋತೃವಿಗೆ ತನಗೆ ಸ್ಪಷ್ಟವಾಗಿ ತಿಳಿಯದ ವಿಚಾರವನ್ನು ಮತ್ತೆ ಪ್ರಶ್ನಿಸಿ ತಿಳಿಯುವ ಅವಕಾಶವಿರುವಂತೆಯೇ, ವಕ್ತಾರನಿಗೆ ತನ್ನ ವಿಚಾರಗಳು ಗ್ರಾಹಕನಿಗೆ ಸರಿಯಾದ ಸಂದರ್ಭ ದಲ್ಲಿ ಸಂವಹನವಾಗುತ್ತಿವೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವ ಅವಕಾಶಗಳೂ ಇರುತ್ತವೆ.

04_104_HHE_KUH

ಇಲ್ಲಿ ಸಂವಹನ ಕ್ರಿಯೆ ಬಹುಶೀಘ್ರವಾಗಿ, ಅನೇಕ ಗ್ರಾಹಕರನ್ನು ಏಕಕಾಲಕ್ಕೆ ತಲುಪುತ್ತದೆ. ಉದಾಹರಣೆಗೆ, ತರಗತಿಯಲ್ಲಿ ಕಲಿಸುವ ಪಾಠ, ಭಾಷಣಕಾರರ ಉಪನ್ಯಾಸಗಳು ಇತ್ಯಾದಿ ಸಂದೇಶಗಳು ಬಹುಜನರಿಗೆ ಒಮ್ಮೆಲೇ ಸಂವಹನವಾಗುತ್ತವೆ. ಅವುಗಳ ಪರಿಣಾಮವನ್ನು ಅಳೆಯುವುದು ತುಂಬ ಕಷ್ಟದ ಕೆಲಸ. ಪ್ರತಿಕ್ರಿಯೆಗಳೂ ಕೂಡಾ ಬಹು ನಿಧಾನವಾಗಿ, ಅಸ್ಪಷ್ಟವಾಗಿ, ಬೇರೆ ಬೇರೆಯಾಗಿ ಗ್ರಾಹಕರನ್ನು ತಲುಪುತ್ತವೆ. ಇದರಲ್ಲಿಯ ಒಂದು ಸ್ವಾರಸ್ಯಕರ ಅಂಶವೆಂದರೆ, ಗ್ರಾಹಕನು ಸ್ವೀಕರಿಸುವ ಪ್ರತಿಕ್ರಿಯೆಗೆ ನಿರ್ದಿಷ್ಟ ಸ್ವರೂಪ ನಿರ್ಧಾರ ಕಷ್ಟ ಸಾಧ್ಯವಾದರೂ, ಆ ಪ್ರತಿಕ್ರಿಯೆ ಏಕಪಕ್ಷೀಯವಾಗಿರುವುದಿಲ್ಲ. ತನ್ನ ಸಂದೇಶ ಹುಟ್ಟಿಸುವ ಪ್ರತಿಭಾವಗಳನ್ನು ಬೇರೆ ಬೇರೆ ಮಗ್ಗಲುಗಳಿಂದ ಅಳೆಯುವ, ಪರಿಷ್ಕರಿಸುವ ಕಾರ್ಯ, ಗ್ರಾಹಕನಿಗೆ ಸಾಧ್ಯವಾಗುತ್ತದೆ. ಇದುವೇ ಗ್ರಾಹಕನ ಮೇಲಿನ ಮಿತಿಯೂ ಆಗುತ್ತದೆ. ಎಂದರೆ ಆತ ಸಂವಹನ ತಂತ್ರ (Strategy)ವನ್ನು ಬಹುಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಗುರುತಿಸಿಕೊಳ್ಳಬೇಕಾಗುತ್ತದೆ.

05_104_HHE_KUH ನಿಯೋಜಿತ ಸಂದರ್ಶನಗಳು, ಪ್ರದರ್ಶನ ಕಲೆಗಳು ಮೂಲತಃ ಸಮೂಹವೊಂದರ ಸಮಷ್ಟಿ ಪ್ರಯತ್ನವಾಗಿ ಸಂವಹನಗೊಳ್ಳುತ್ತವೆ. ಇದನ್ನು ಇನ್ನಷ್ಟು ಹಿಂಜಿದರೆ, ಸಂವಹನವು ತನ್ನ ಅತಿ ಮೂಲ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ವ್ಯಕ್ತಿಗತ ನೆಲೆಯಲ್ಲಿಯೇ? ಇಲ್ಲ, ಒಟ್ಟು ಸಮೂಹವನ್ನು ಒಂದು ಘಟಕವಾಗಿ ಸ್ವೀಕರಿಸಿ ಗ್ರಾಹಕನು ಸಂದೇಶವೊಂದನ್ನು ಅರ್ಥೈಸಿಕೊಳ್ಳುತ್ತಾನೆಯೇ? ಎಂಬುದು ಸ್ವಲ್ಪ ಮಟ್ಟಿಗೆ ಸಂದಿಗ್ಧವಾಗಿಯೇ ಉಳಿದುಬಿಡುತ್ತದೆ. ನಾಟಕವೊಂದರ ಪ್ರೇಕ್ಷಕನು, ಪ್ರತಿ ಪಾತ್ರವನ್ನೂ ಪ್ರತ್ಯೇಕವಾಗಿ ನೋಡಿ, ಅದರ ಮೂಲಕ ಒಟ್ಟಂದದ ಪರಿಣಾಮವನ್ನು ಗ್ರಹಿಸುತ್ತಾನೆಯೋ? ಅಥವಾ ಇಡಿಯ ನಾಟಕದ ಪರಿಣಾಮಕಾರಿತ್ವವನ್ನು ಮಾತ್ರವೇ ನೋಡುತ್ತಾನೆಯೇ? ಈ ಸಂದರ್ಭದಲ್ಲಿ ಸಂವಹನಾಂಗಗಳ ಪರಸ್ಪರ ಸಂಬಂಧ ನಷ್ಟವಾಗುವುದಿಲ್ಲವಾದರೂ ಅದರ ರೇಖೆ ಬಹು ತೆಳುವಾಗಿರುತ್ತದೆ. ಅದು ಹುಟ್ಟಿಸುವ ಪ್ರತಿಕ್ರಿಯೆಯೂ ಅಸ್ಪಷ್ಟ ಸ್ವರೂಪದ್ದಾಗಿರುತ್ತದೆ.

ಇದೇ ವಿಧಾನದ ಒಂದು ಒಳ ವಿಭಾಗವಾಗಿ ಸಮೂಹದಿಂದ ಸಮೂಹಕ್ಕೆ ಸಂವಹನಗೊಳ್ಳುವ ಸಮೂಹ ಮಾಧ್ಯಮವನ್ನು ಪರಿಶೀಲಿಸಬಹುದು.

06_104_HHE_KUH

ಈ ಸಂವಹನ ಪ್ರಕಾರದಲ್ಲಿ, ವ್ಯಕ್ತಿ ವ್ಯಕ್ತಿ ಅಥವಾ ವ್ಯಕ್ತಿ ಸಮೂಹಗಳ ಯಾಂತ್ರಿಕ ಸಲಕರಣೆಗಳು ಮಧ್ಯವರ್ತಿಯ ಪಾತ್ರವಹಿಸುತ್ತವೆ. (ಉದಾ: ದೂರವಾಣಿ) ಇಲ್ಲಿಯೂ ಸಂವಹನದ ಚಕ್ರ ಸುಲಭವಾಗಿ ಸ್ಥಾಪನೆಗೊಳ್ಳುತ್ತದೆ. ಆದರೆ ಸಂವಹನದ ಗುಣಮಟ್ಟ ಯಂತ್ರದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಇಲ್ಲಿ ಸಂವಹನ ಭಂಗವಾಗುವ ಸಾಧ್ಯತೆಗಳೂ ಹೆಚ್ಚಾಗಿಯೇ ಇರುತ್ತವೆ. ಅತ್ಯಾಧುನಿಕ ಯಾಂತ್ರಿಕ ಪರಿಸರದಲ್ಲಿ ಯಂತ್ರ- ಯಂತ್ರಗಳ ಮಧ್ಯದ ಸಂವಹನವೂ ಸಾಧ್ಯವಾಗುತ್ತದೆ; ಮೂಲಕ್ಕೆ ಅತ್ಯಂತ ನಿಷ್ಠವಾದ ಸಂವಹನ ನಡೆಯುತ್ತದೆ. ಆದರೆ ಇದು ಕೇವಲ ‘ಸಂದೇಶದ ರವಾನೆ’ ಮಡುವ ಮಟ್ಟಿಗೆ ಸೀಮಿತವಾಗಿ ನಡೆಯುತ್ತದೆಂಬುದೂ ಅಷ್ಟೇ ಸತ್ಯವಾಗಿದೆ.

ಈ ಸಂವಹನವು ಯಾರ ಯಾವುದರ ಮಧ್ಯೆಯೇ ಸ್ಥಾಪಿತವಾಗಿರಲಿ, ಅದರ ಬೆಳವಣಿಗೆ ಕೆಲವೊಂದು ನಿರ್ದಿಷ್ಟ ಕ್ರಮ(Pattern)ಗಳನ್ನು ಅನುಸರಿಸಿ ನಡೆಯುತ್ತದೆ. ಇವುಗಳಲ್ಲಿ ಪ್ರಾತಿನಿಧಿಕ ಲಕ್ಷಣಗಳುಳ್ಳ ಕೆಲವನ್ನು ಉದಾಹರಣೆಗಳಾಗಿ ಪರಿಶೀಲಿಸಬಹುದು.

ಉದಾ. ಸಮಾಜದ ಐದು ಘಟಕಗಳಿಗೆ/ವ್ಯಕ್ತಿಗಳಿಗೆ ಸಂವಹಿಸಬೇಕಾದ ಸಂದೇಶವೊಂದಿದೆ ಎಂದು ಭಾವಿಸೋಣ. ಅದು “ಭೂಮಿಯು ಗುಂಡಗಿದೆ” ಎಂದಿರಲಿ. ಈ ಸಂದೇಶವನ್ನು ವೃತ್ತಾತ್ಮಕ ಪಥದಲ್ಲಿ ಸಂವಹಿಸಬಹುದು.

07_104_HHE_KUH

‘ಭೂಮಿಯ ಗುಂಡಗಿದೆ’ ಎಂಬ ಸಂದೇಶ Xನಿಂದ ಹೊರಟು Xನ್ನೇ ಮರಳಿ ತಲುಪುತ್ತದೆ. ಅಂದರೆ, ತನ್ನ ಸಂದೇಶ ಸಂವಹನ ಕ್ರಿಯೆಯಲ್ಲಿ ಉಂಟಾಗಿರಬಹುದಾದ ವ್ಯತ್ಯಾಸವನ್ನು ಪ್ರೇಷಕ ಗುರುತಿಸಿಕೊಳ್ಳಬಹುದು.

ಉದಾಹರಣೆಗೆ, ಆತನಿಗೆ ಮರಳಿ ಸಿಗುವ ಸಂದೇಶ “ಗುಂಡಾದ ವಸ್ತು ಭೂಮಿಯಾಗಿದೆ” ಎಂದಾಗಿರುತ್ತದೆನ್ನೋಣ. ಅಂದರೆ ಮೂಲದ ಸಂದೇಶ ಸಂಪೂರ್ಣ ತಿರುಚಿ ಹೋಗಿರುತ್ತ ದೆಂದಾಯಿತು. ಈ ವ್ಯತ್ಯಾಸ X-೧, ೧-೨, ೨-೩, ೩-೪, ೪-೫, ೫-X ಹೀಗೆ ೬ ನೆಲೆಗಳಲ್ಲಿ ಉಂಟಾಗಬಹುದು. ಈ ವೃತ್ತದ ಸುರುಳಿಗಳು ಹೆಚ್ಚಾದಷ್ಟೂ ಸಂವಹನಕ್ಕೆ ಒದಗುವ ಧಕ್ಕೆಯ ಪ್ರಮಾಣ ಹೆಚ್ಚಾಗುತ್ತದೆ.

ಈ ಸಂದೇಶವನ್ನು ರೇಖಾತ್ಮಕವಾಗಿಯೂ ಸಂವಹಿಸಬಹುದು.

X ಪ್ರೇಷಕನಿಂದ ಹೊರಟ ಸಂದೇಶದ ಅಂತಿಮಲಕ್ಷ್ಯ ೫. ಅಂದರೆ, ತನ್ನ ಸಂದೇಶವು ಯಾವ ಸ್ವರೂಪದಲ್ಲಿ ಗ್ರಾಹಕನಿಂದ ಸ್ವೀಕರಿಸಲ್ಪಟ್ಟಿದೆ ಎಂಬುದು ಪ್ರೇಷಕನ ಅರಿವಿಗೆ ಬರುವಂತಿಲ್ಲ. ಆದರೆ, ವೃತ್ತಾತ್ಮಕ ಪದಕ್ಕಿಂತ ಇಲ್ಲಿ ಸಂವಹನದ ವೇಗ ಹೆಚ್ಚಾಗಿರುತ್ತದೆ; ಸಂವಹನದ ಸಾಫಲ್ಯವು ಸ್ವಲ್ಪ ಕಡಿಮೆಯಾಗಿರುತ್ತದೆ.

09_104_HHE_KUH

ಈ ವಿಧಾನದಲ್ಲಿ ಸಂವಹನದ ಪಥ ಯಾವುದೋ ಬಿಂದುವಿನಲ್ಲಿ ಭಿನ್ನ ದಿಸೆಯಲ್ಲಿ ಸಾಗಿ, ವಿಭಜನಾತ್ಮಕ ಗತಿಯನ್ನು ಪಡೆಯುತ್ತದೆ. ೧ ೨ ೩ ೪ ಮತ್ತು ೧ ೨ ೩ ೫ ಹೀಗೆ ಎರಡು ಮಾರ್ಗಗಳಾಗಿ ಸಂವಹನವು ನಡೆಯಬಹುದು. ಸಂವಹನದ ಮಟ್ಟವು ಕೂಡಾ ವೃತ್ತಾತ್ಮಕ ವಿಧಾನಕ್ಕೆ ಸಂವಾದಿಯಾಗಿರುತ್ತದೆ.

10_104_HHE_KUH

ಸಂವಹನವು ಚಕ್ರಾತ್ಮಕ ನೆಲೆಯಲ್ಲೂ ನಡೆಯಬಹುದು. ಸಮಯದ ಮಾನದಿಂದ ಇದರ ಗತಿ ನಿಧಾನವಾದರೂ, ಸಂವಹನದ ಮಟ್ಟದ ದೃಷ್ಟಿಯಿಂದ ಇದು ಶ್ರೇಷ್ಠವೆನಿಸುತ್ತದೆ. “ಭೂಮಿ ಗುಂಡಗಿದೆ” ಎಂಬ ಸಂದೇಶದ ಪ್ರೇಷಕನೇ ಅದನ್ನು ೧-೨-೩-೪-೫ ಗಮ್ಯಸ್ಥಾನ ಗಳಿಗೂ ತಲುಪಿಸುವುದರಿಂದ ಸಂದೇಶದ ಸ್ವರೂಪಕ್ಕೆ ತೀರಾ ಕ್ವಚಿತ್ತಾಗಿ ಪಲ್ಲಟವೂ ನಡೆಯಬಹುದು.

ಈ ಎಲ್ಲ ಮಾದರಿಗಳೂ ಸಂದೇಶದ ಏಕಮುಖ ಚಲನೆಯನ್ನೇ ಸೂಚಿಸುತ್ತವೆ. ಸಂವಹನ ಸಶಕ್ತವಾಗಬೇಕಾದರೆ, ಪ್ರತಿಮಟ್ಟದಲ್ಲೂ ಹಿಮ್ಮುಖ ಸಂವಹನೆ(feed back)ಯೂ ಸಾಧ್ಯವಾಗಬೇಕು. ಆಗ ಆಕೃತಿ ೪ನ್ನು ಈ ಕೆಳಗಿನಂತೆ ಪುನಾರೂಪಿಸಬಹುದು.

11_104_HHE_KUH

ಒಟ್ಟಾರೆಯಾಗಿ ಇಲ್ಲಿಯ ಚರ್ಚೆಯ ಮುಖ್ಯ ಉದ್ದೇಶವೆಂದರೆ ಸಾಹಿತ್ಯಿಕ ಸಂವಹನದ ವಿವಿಧ ಸಾಧ್ಯತೆಗಳು ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿ, ಈ ನಿಟ್ಟಿನಲ್ಲಿ ಮುಂದಿನ ಅನುಸಂಧಾನಗಳಿಗೆ ಅನುವು ಮಾಡಿಕೊಡುವುದು ಆಗಿದೆ. ನಮ್ಮ ಪರಂಪರಾಗತ ಯೋಚನೆಯ ಮೂರ್ತ ಸ್ವರೂಪಗಳಿಗೆ ಅದ್ಯತನದ ಆನ್ವಯಿಕ ನೆಲೆಗಟ್ಟು ಪ್ರಾಪ್ತವಾಗುವ ಅವಶ್ಯಕತೆಯಿದೆ. ಪ್ರತಿಯೊಂದು ತಾತ್ವಿಕ ಚಿಂತನೆಯ ಹಿನ್ನೆಲೆಯಲ್ಲಿ ವಿಶಿಷ್ಟ ಪ್ರಾಯೋಗಿಕತೆಯೊಂದು ಕೆಲಸ ಮಾಡಿರುತ್ತದೆ. ಅದನ್ನು ಕಂಡುಕೊಳ್ಳುವ ಮತ್ತು ಅದು ಪ್ರಸ್ತುತವೆಂದಾದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಭಾರತೀಯ ಸೈದ್ಧಾಂತಿಕತೆಗೆ ಈ ಬಗೆಯಲ್ಲಿ ಸಾಮಯಿಕವಾದ ಆನ್ವಯಿಕ ಆಯಾಮವನ್ನು ಒದಗಿಸುವಲ್ಲಿ ಚಿಂತನಶೀಲರು ತೊಡಗಬೇಕಾಗಿದೆ. ಇನ್ನೂ ಹೊಸದಾಗಿರುವ ಈ ಕ್ಷೇತ್ರದ ಮುನ್ನಡೆಗೆ ಈ ಬರೆಹವೊಂದು ದಿಕ್ಸೂಚಿ.

 

* ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಚಾರವಾದ ವ್ಯಾಪಕ ಚರ್ಚೆಯು ನಡೆದಿದೆ. ರಸಪ್ರಸ್ತಾನದ ವಿಭಿನ್ನ ವ್ಯಾಖ್ಯೆಗಳನ್ನೂ ಅವುಗಳ ಮಿತಿ ಮತ್ತು ಸಾಧ್ಯತೆಗಳನ್ನೂ ದೃಷ್ಟಿಯಿಂದ ಪರಿಶೀಲಿಸಬಹುದು.