ಎಲ್ಲ ಸಾಹಿತ್ಯ ಪ್ರಕಾರಗಳ, ಸಂವಾದಗಳ ಅಂತಿಮ ಲಕ್ಷ ಸಂವಹನವನ್ನು ಸಾಧಿಸುವುದೇ ಆಗಿದೆ. ಸಾಹಿತಿಯಲ್ಲಿ ಹುಟ್ಟಿಕೊಂಡ ಸಂವೇದನೆಯು ಭಾಷೆಯ ಮೂಲಕ ವಿಶಿಷ್ಟ ಪ್ರಕಾರವೊಂದರಲ್ಲಿ ಸಂವಹಿಸಲ್ಪಟ್ಟು ತನ್ನ ಗಮ್ಯವಾದ ಓದುಗನನ್ನು ತಲುಪುತ್ತದೆ. ಅಲ್ಲಿ ಹುಟ್ಟಿಕೊಳ್ಳುವ ಪ್ರತಿಭಾವಗಳು (Reactions) ವಿಮರ್ಶನ ಮಾಧ್ಯಮದ ಮೂಲಕ ಮರಳಿ ಸಾಹಿತಿಯನ್ನು ತಲುಪುತ್ತವೆ. ಈ ಮೂಲಕ ಸಾಹಿತಿಯ ಪ್ರತಿಭೆಯ ಮಟ್ಟ, ಮಾಧ್ಯಮದ ಸ್ವೀಕಾರ-ಬಳಕೆ, ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಅವಲಂಬಿಸಿಕೊಂಡು ಅಲ್ಲಿ ಸ್ಥೂಲ – ಸೂಕ್ಷ್ಮ ಸ್ಪಂದನಗಳು ಉಂಟಾಗುತ್ತವೆ. ಇದನ್ನು ಸಂವಹನದ ಆವರ್ತನ (Communication Cycle) ಎಂದು ಕರೆಯಬಹುದು.

ಈ ಆರ್ವತನ ವಿಧಾನವನ್ನು ಕೆಳಗೆ ಕೊಟ್ಟಿರುವ ಮಾದರಿಯು (model) ಸ್ಪಷ್ಟ ಪಡಿಸುತ್ತದೆ.

12_104_HHE_KUH

ಹೀಗೆ ಅನುಭವವೊಂದು ವಿವಿಧ ಹಂತಗಳಲ್ಲಿ ಹಾದುಹೋಗುವ ಪ್ರಕ್ರಿಯೆಗೆ ಒಳಗಾ ಗುತ್ತಲೇ, ಎಷ್ಟರಮಟ್ಟಿಗೆ ತನ್ನ ಮೂಲಕ್ಕೂ ವಿಧೇಯವಾಗಿರುತ್ತದೆ ಎಂಬುದರ ಮೇಲಿನಿಂದ ಕೃತಿಯೊಂದರ ಸಂವಹನಶೀಲತೆಯನ್ನು ಅಳೆಯಬಹುದು. ಈ ಸಂದರ್ಭದಲ್ಲಿ ಸಾಹಿತಿಯ ಮೂಲ ಅನುಭವವು ಅದರ ಸ್ವರೂಪವನ್ನು ಕ್ವಚಿತ್ತಾಗಿ ಉಳಿಸಿಕೊಳ್ಳುತ್ತದೆ. ಎಂದರೆ ಒಂದು ರೀತಿಯ ಸ್ವರೂಪಭಂಗ ಕ್ರಿಯೆ ಸಂವಹನದುದ್ದಕ್ಕೂ ನಡೆಯುತ್ತಲೇ ಇರುತ್ತದೆ.

ಸಾಹಿತಿಯು – ಇತರ ಎಲ್ಲಾ ವ್ಯಕ್ತಿಗಳಂತೆಯೇ – ತನ್ನ ಭೌತಿಕ ರಚನೆ, ಮಾನಸಿಕ ಸಿದ್ಧತೆ, ದೃಷ್ಟಿಕೋನಗಳಿಗೆ ಬದ್ಧನಾಗಿ ತನ್ನ ಸುತ್ತಲಿನ ಜಗತ್ತಿನಿಂದ ಅನುಭವಗಳನ್ನು ಸ್ವೀಕರಿಸುತ್ತಾ ಹೋಗುತ್ತಾನೆ. ಇವೆಲ್ಲವೂ ಸಾಹಿತ್ಯಿಕ ಅನುಭವಗಳಲ್ಲ. ಈ ಗ್ರಹಿಕೆಯ ನಿರ್ದಿಷ್ಟ ಹಂತವೊಂದರಲ್ಲಿ, ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ ಅನುಭವವೊಂದು ಆತನಲ್ಲಿ ಸಾಹಿತ್ಯಿಕ ಸಂವೇದನೆಗಳನ್ನು ಉದ್ದೀಪಿಸುತ್ತದೆ. ಅಮೂರ್ತವಾದುದನ್ನು ಹೀಗೆ ಹಿಡಿತಕ್ಕೆ ಒಗ್ಗಿಸಿಕೊಳ್ಳುವಲ್ಲಿ ಸಾಹಿತಿಯು ತನ್ನ ಪ್ರತಿಭಾಸಂಪನ್ನತೆಯನ್ನು ಒರೆಗೆ ಹಚ್ಚಬೇಕಾಗುತ್ತದೆ. ಈ ಕ್ರಿಯೆಯಲ್ಲಿ, ಅಪಾರವಾದ ಸಾಹಿತ್ಯಿಕ ಅನುಭವದ ಒಂದಂಶವನ್ನು ಆತ ಮೂರ್ತರೂಪದಲ್ಲಿ ಪುನಃ ಸೃಷ್ಟಿ ಮಾಡಿಕೊಳ್ಳುತ್ತಾನೆ. ಈ ಹಂತದಲ್ಲಿ ಮೂಲ ಅನುಭವದ ಬಹುಭಾಗ ನಷ್ಟವಾಗಿ, ಅದರ ಒಂದಂಶವಷ್ಟೇ ಸಾಹಿತಿಯ ಪ್ರಜ್ಞೆಯಲ್ಲಿ ಘನಿಷ್ಠವಾಗತೊಡಗುತ್ತದೆ. ಈ ಗ್ರಹೀತ ಅನುಭವವು ಯೋಗ್ಯವಾದ ಸಾಹಿತ್ಯ ಶರೀರಧಾರಣೆ ಗಾಗಿ ಅನ್ವೇಷಣೆಯಲ್ಲಿ ತೊಡಗುತ್ತದೆ.

ಇಲ್ಲಿ ಸಾಹಿತಿಯ ಅಭಿವೃದ್ದಿ ಸಾಮರ್ಥ್ಯ ಅವನ ಕೃತಿಯ ಸಂವಹನಶೀಲತೆಯನ್ನು ನಿಯಂತ್ರಿಸುತ್ತದೆ. ತಾನು ಗ್ರಹಿಸಿದ ಅನುಭವವನ್ನು ಮಾಧ್ಯಮವೊಂದರ ಮೂಲಕ ಯಥಾ ವತ್ತಾಗಿ ಸಹೃದಯನಿಗೆ ದಾಟಿಸುವುದು ಅವನಿಗೂ ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ, ಅನುಭವದ ಪ್ರಮಾಣ ಲಕ್ಷಣಗಳೆರಡೂ ರೂಪಾಂತರವನ್ನು ಹೊಂದಲೇಬೇಕಾಗುತ್ತದೆ. ಅನಂತರ ಸೃಷ್ಟಿಕ್ರಿಯೆಯ ಮುಂದಿನ ಹಂತದಲ್ಲಿ ಮೂರ್ತಗೊಂಡಾಗ, ಅಸ್ಥಿರವೂ, ತಾತ್ಕಾಲಿಕವೂ ಆಗಿದ್ದ ಅನುಭವವು ಒಂದು ಸ್ಥಗಿತವಾದ, ಸ್ಥಿರವಾದ ಮತ್ತು ಶಾಶ್ವತವಾದ ವಲಯವನ್ನು ಪ್ರವೇಶಿಸುತ್ತದೆ. ಸಾಹಿತಿಯ ನಿಯಂತ್ರಣವನ್ನು ಮೀರಿ ಸ್ವತಂತ್ರವಾಗುತ್ತದೆ. ಒಂದರ್ಥದಲ್ಲಿ ಇಲ್ಲಿಗೆ ಸಾಹಿತ್ಯ ಸಂವಹನದ ಮೊದಲ ಹಂತವು ಮುಗಿಯುತ್ತದೆ.

ಸಹೃದಯನ ವರ್ತುಲಕ್ಕೆ ಬಂದಾಗ, ಆತನು ತನ್ನ ಹಿನ್ನೆಲೆಗೆ ಬದ್ಧನಾಗಿ ಸಾಹಿತ್ಯವೊಂದನ್ನು ಗ್ರಹಿಸುತ್ತಾನೆ. ಈ ಹಂತವು ಬಹಳ ಸೂಕ್ಷ್ಮವಾದುದು. ಮೂಲಾನುಭವದ ಶಕ್ತಿ, ಮೌಲ್ಯಗಳು ಕುಂಠಿತವಾಗುವ, ವಿಕೃತವಾಗುವ ಅಪೂರ್ವಕ್ಕೊಮ್ಮೆ ವಿಸ್ತೃತವಾಗುವ ಎಲ್ಲ ಸಾಧ್ಯತೆಗಳೂ ಈ ಹಂತದಲ್ಲೇ ಎದುರಾಗುತ್ತವೆ. ಅನಂತರವೂ ಲೇಖಕ ಅಭಿವ್ಯಕ್ತಗೊಳಿಸುವ ಸಾಹಿತ್ಯಿಕ ಅನುಭವ, ಸಹೃದಯ ಗ್ರಹಿಸುವ ಅನುಭವಗಳ ಮಧ್ಯೆ ಬಹಳಷ್ಟು ಅಂತರ ಉಳಿದುಬಿಡುತ್ತದೆ. ಕೃತಿಯೊಂದನ್ನು ಗ್ರಹಿಸಿದಾಗ ತನ್ನಲ್ಲಿ ಹುಟ್ಟುವ ಪ್ರತಿಕ್ರಿಯೆಗಳನ್ನು ಸಾಹಿತಿಗೆ ದಾಟಿಸುವುದರ ಮೂಲಕ ಸಹೃದಯನು ಒಂದು ಸಂವಹನ ಆವರ್ತನವನ್ನು ಪೂರ್ಣಗೊಳಿಸುತ್ತಾನೆ. ಸಾಹಿತಿಯೊಂದಿಗೆ ತನ್ನ ಸ್ಥಾನವನ್ನು ಬದಲಾಯಿಸಿಕೊಳ್ಳುತ್ತಾನೆ.

ಈ ಕೆಳಗಿನ ಮಾದರಿಯನ್ನು ನೋಡಿ…..

13_104_HHE_KUH

ಹೀಗೆ ಸಾಹಿತಿಯ ಮೂಲ ಅನುಭವವು ಕೃತಿಯೊಂದರ ಮೂಲಕ ಸಹೃದಯನ ಅನುಭವ ವಲಯವನ್ನು ಪ್ರವೇಶಿಸುವಾಗ ಉಂಟಾಗುವ ಸ್ಥಿತ್ಯಂತರಗಳು ಸಾಹಿತಿಯ ಗಮನಕ್ಕೆ ಬರುತ್ತವೆ. ಆದರೆ ಆಗ ಆತ ಗ್ರಾಹಕನ ಸ್ಥಾನದಲ್ಲಿರುವುದರಿಂದ, ಸಹೃದಯನ ನಿಜವಾದ ಪ್ರತಿಕ್ರಿಯೆಯು ಅಭಿವ್ಯಕ್ತಿಗೂ, ಸಾಹಿತಿಯು ಗ್ರಹಿಸುವ ಪ್ರತಿಕ್ರಿಯೆಗೂ ಇದೇ ಮಟ್ಟದ ವ್ಯತ್ಯಾಸಗಳಿರ ಬಹುದು. ಅಂದರೆ, ಸಾಹಿತ್ಯಿಕ ಚೌಕಟ್ಟಿನಲ್ಲಿ, ಸಂವಹನಾತ್ಮಕವಾದ ಅದರ ಪರಿಚಲನೆಯಲ್ಲಿ. ಸಂಕೀರ್ಣವಾದ ಅದರ ರಚನೆ(structure)ಯಲ್ಲಿ ಸಂವಹನ ಭಂಗಕ್ಕೆ ಕಾರಣವಾದ ಅಂಶಗಳೂ ಇರುವ ಸಾಧ್ಯತೆಗಳಿವೆ.

‘ಅ’ ಮೂಲ ಅನುಭವವೆಂದಾದರೆ,

ಅ-೧    ಸಾಹಿತಿಯು ಗ್ರಹಿಸುವ ಅನುಭವ

ಅ-೨    ಸಾಹಿತಿಯು ಅಭಿವ್ಯಕ್ತಿಸುವ ಅನುಭವ

ಅ-೩    ಸಹೃದಯನು ಗ್ರಹಿಸುವ ಅನುಭವ

ಅ-೪    ಸಹೃದಯನು ಪ್ರತಿಕ್ರಿಯಿಸುವ ಅನುಭವ

ಅ-೫    ಸಾಹಿತಿಯು ಗ್ರಹಿಸುವ ಪ್ರತಿಕ್ರಿಯೆ

ಇಲ್ಲಿ ‘ಅ’ ಮತ್ತು ‘ಅ-೫’ ಇವುಗಳ ನಿಷ್ಪತ್ತಿ, ಕೃತಿಯ ಸಂವಹನಶೀಲತೆಯನ್ನು ಆಂಶಿಕವಾಗಿ ನಿರ್ಧರಿಸಬಹುದು.

ಇವಿಷ್ಟನ್ನು ಸಂವಹನದ ಸಂವಿಧಾನಾತ್ಮಕ ಹಿನ್ನೆಲೆಯಲ್ಲಿಟ್ಟುಕೊಂಡು, ಸಂವಹನಕ್ಕೆ ಭಂಗ ತರುವ ಇತರ ಅಂಶಗಳನ್ನು ಗಮನಿಸಬಹುದು. ಇವುಗಳು ಭಾಷೆಯ ಮೂಲಕ ಮೈ ತಳೆಯುವ ಕೃತಿಯ ಬಾಹ್ಯ ಶರೀರಕ್ಕೆ ಸಂಬಂಧಿಸಿದವುಗಳೆನ್ನಬಹುದು.

ಈ ಪ್ರಕ್ರಿಯೆ ಮುಖ್ಯವಾಗಿ ಮೂರು ನೆಲೆಗಳಲ್ಲಿ ನಡೆಯಬಹುದು. ಶ್ರವ್ಯ, ದೃಶ್ಯ ಮತ್ತು ಪಠ್ಯಗಳ ಮೂಲಕ ನಮ್ಮಲ್ಲಿ ಸಾಹಿತ್ಯಿಕ ಸಂವೇದನೆಗಳು ಸಂವಹನಗೊಳ್ಳುತ್ತವೆ. ಸಾಹಿತ್ಯದ ಮೌಖಿಕ ಪಾತಳಿಯಲ್ಲಿ ಸಂವಹನ ಕಾರ್ಯ ಶ್ರವ್ಯ ನೆಲೆಯಲ್ಲಿ ನಡೆಯುತ್ತದೆ. ಇಲ್ಲಿ ಶ್ರೋತೃವು ಗಮ್ಯವಾಗಿರುತ್ತಾನೆ. ದೃಶ್ಯ ಮಾಧ್ಯಮದ ಮೂಲಕ ಸಂವಹನವಾಗುವ ಸಾಹಿತ್ಯವು ಪರಿವೀಕ್ಷಣೆ(observation)ಯ ಮೂಲಕ ವೀಕ್ಷಕರನ್ನು ತಲುಪುತ್ತದೆ. ಪಠ್ಯಭಾಗವನ್ನು ಓದುವ, ಮನನ ಮಾಡುವ ಮೂಲಕ ಓದುಗ ಅದನ್ನು ಸ್ವೀಕರಿಸುತ್ತಾನೆ. ಈ ಮೂರು ವಿಧಾನಗಳಲ್ಲಿ ಸಂವಹನ ಭಂಗವೂ ವಿವಿಧ ಆಯಾಮಗಳಲ್ಲಿ ನಡೆಯುತ್ತದೆ.

ಈ ಪ್ರಮೇಯವನ್ನು ಸ್ವಲ್ಪ ವಿವರವಾಗಿ ವಿಶ್ಲೇಷಿಸಬಹುದು.

೧. ಶ್ರವ್ಯ, ದೃಶ್ಯ ಹಾಗೂ ಪಠ್ಯಗಳ ಸಂವಹನದ ಸ್ವರೂಪದಲ್ಲಿಯೇ ಅಂತರ್ನಿಹಿತವಾಗಿರುವ ಆತಂಕಗಳು (barriers).

೨. ವ್ಯಕ್ತಿಗತವಾಗಿರುವ, ನಿರ್ದಿಷ್ಟ ವ್ಯಾಖ್ಯೆಗೆ ಒಳಪಡಲಾರದ ಆತಂಕಗಳು.

೩. ಸಾಹಿತ್ಯ ಪ್ರಕಾರದಲ್ಲಿ ಪರಂಪರಾನುಗತವಾಗಿರುವ ಆತಂಕಗಳು.

೪. ಪರಿಸರವೇ ಒಡ್ಡುವ ಆತಂಕಗಳು.

೫. ಇತರ ಆತಂಕಗಳು.

  1. ಶ್ರವ್ಯ ಸಂವಹನವೆಂದರೆ ಈ ಮೊದಲೇ ಹೇಳಿದಂತೆ – ಬಹುಮಟ್ಟಿಗೆ ಮೌಖಿಕ ಸಂವಹನ. ಇದು ಮುಖ್ಯವಾಗಿ ಈ ಕೆಳಗಿನ ನೆಲೆಗಳಲ್ಲಿ ನಡೆಯಬಹುದು.

೧. ವ್ಯಕ್ತಿಯಿಂದ ವ್ಯಕ್ತಿಗೆ ಸಂವಹನವಾಗುವ ಸಾಹಿತ್ಯ (Inter personal).

೨. ವ್ಯಕ್ತಿಯಿಂದ ಸಮೂಹಕ್ಕೆ ಸಂವಹನವಾಗುವ ಸಾಹಿತ್ಯ (Person to group communication).

೩. ಸಮೂಹದಿಂದ ವ್ಯಕ್ತಿಗೆ ಸಂವಹನವಾಗುವ ಸಾಹಿತ್ಯ (Group to person communication).

೪. ಸಮೂಹದಿಂದ ಸಮೂಹಕ್ಕೆ ಸಂವಹನವಾಗುವ ಸಾಹಿತ್ಯ (Group to group Communication).

ಈ ನೆಲೆಯಲ್ಲಿ ಸಂವಹನ ಪ್ರಕ್ರಿಯೆಗೆ ತೀರಾ ಸಂಕೀರ್ಣವಾದ ಸವಾಲುಗಳು ಎದುರಾಗುತ್ತವೆ. ಇವುಗಳಲ್ಲಿ ಕೆಲವು ದೃಶ್ಯ-ಪಠ್ಯ ಸಂವಹನ ಕ್ರಮದಲ್ಲೂ ತಲೆಹಾಕಿ ಸಂವಹನ ಭಂಗಕ್ಕ ಕಾರಣಗಳಾಗಬಹುದು. ಇವುಗಳನ್ನು ಒಂದೊಂದಾಗಿ ನೋಡಬಹುದು.

೧. ಭಾಷೆ – ಅದರ ಉಚ್ಚಾರ ಕ್ರಮ (pronunciation, ವಾಕ್ಯರಚನೆ (syntax), ಅರ್ಥವಂತಿಕೆ (semantics), ಪ್ರಾದೇಶಿಕ ವ್ಯತ್ಯಾಸಗಳು, ಮಿತಿಗಳು.

೨. ಆಂಗಿಕ ವಿನ್ಯಾಸಗಳು

೩. ಭೌತಿಕ ದೂರ

೪. ಕ್ಲಿಷ್ಟತೆ

೫. ಮನೋವೈಜ್ಞಾನಿಕ, ಸಾಮಾಜಿಕ ಸಾಂಸ್ಕೃತಿಕ ಪೂರ್ವಾಗ್ರಹಗಳು, ಬದ್ಧತೆಗಳು

೬. ಶಾರೀರಿಕ ಮಿತಿಗಳು   – ಉಗಮ ಗಮ್ಯ ಎರಡೂ ಸ್ಥಾನಗಳಲ್ಲಿರಬಹುದಾದ ಶಾಶ್ವತ (ಕಿವುಡುತನ ಇತ್ಯಾದಿ) ತಾತ್ಕಾಲಿಕ (ತಲೆನೋವು ಇತ್ಯಾದಿ) ಮಿತಿಗಳು.

೭. ಪರಿಸರದ ಮಿತಿಗಳು.

೮. ಯಾಂತ್ರಿಕ ತೊಂದರೆಗಳು (ಧ್ವನಿವರ್ಧಕ, ವಿದ್ಯುಚ್ಛಕ್ತಿ ಇತ್ಯಾದಿ).

೯. ಕಾವ್ಯದಂಥ ಸಾಹಿತ್ಯ ಪ್ರಕಾರಗಳು ನಿರೀಕ್ಷಿಸುವ ಮಟ್ಟದ ಗ್ರಹಣ ಸಾಮರ್ಥ್ಯದ ಕೊರತೆ.

೧೦. ಔದ್ಯೋಗಿಕವಾದ, ‘ತಿಳಿಯಲೇಬೇಕು’ ಎನ್ನುವ ಒತ್ತಡ (compulsion)ದಿಂದ ಹುಟ್ಟುವ ಹಿಂಜರಿಕೆ, ಅವಜ್ಞೆ.

ಈ ಸಂವಹನ ಪ್ರಕಾರಕ್ಕೆ ಅದರದೇ ಆದ ವಿಶಿಷ್ಟ ಗುಣಲಕ್ಷಣಗಳೂ ಪ್ರಯೋಜನಗಳೂ ಇವೆ. ಉದಾಹರಣೆಗೆ, ಮೌಖಿಕವಾಗಿ ಸಾಹಿತ್ಯವೊಂದು ಪ್ರಸಾರವಾದಾಗ ಸಂವಹನ ಚಕ್ರ ಬಹು ಸುಲಭವಾಗಿ ಪೂರ್ಣವಾಗುತ್ತದೆ. ಅಂದರೆ, ಮೇಲೆ ಹೇಳಿದ ಆತಂಕಗಳಲ್ಲಿ ಬಹುಪಾಲು ಮೊಳಕೆಯಲ್ಲಿಯೇ ನಿವಾರಣೆಯನ್ನು ಕಂಡುಕೊಳ್ಳುತ್ತವೆ. ಈ ಆವರ್ತನ ಕಾಲ ಉಳಿದ ಮೂರು ಮಜಲುಗಳಲ್ಲಿ (ವ್ಯಕ್ತಿ-ಸಮೂಹ; ಸಮೂಹ-ವ್ಯಕ್ತಿ; ಸಮೂಹ-ಸಮೂಹ) ಹೆಚ್ಚುತ್ತಾ ಹೋಗುತ್ತದೆ. ಇದೇ ನಿಷ್ಪತ್ತಿಯಲ್ಲಿ ಸಂವಹನಭಂಗವೂ ಹೆಚ್ಚುತ್ತದೆ.

  1. ದೃಶ್ಯ ಮಾಧ್ಯಮದಲ್ಲಿ ಸಂವಹನ ಬಹಳ ಸೂಕ್ಷ್ಮ ಸ್ತರವನ್ನು ಪ್ರವೇಶಿಸುತ್ತದೆ. ಇದನ್ನು ಒಂದು ಸಂಯುಕ್ತ ಮಾಧ್ಯಮ (composite medium) ಎಂದು ಕರೆಯಬಹುದು. ಇಲ್ಲಿ ಭಾವವು ಭಾಷೆಯ ಮೇಲೆ ಸಂಪೂರ್ಣ ಅವಲಂಬಿತವಾಗಿರುವುದಿಲ್ಲ. ಈ ಅಂಶ ಸಂವಹನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಎಂದರೆ, ಭಾವ-ಭಾಷೆಗಳ ಮಧ್ಯೆ ಸೌಹಾರ್ದ(harmony)ವಿದ್ದಾಗ, ಸಂವಹನ ಅತ್ಯುಚ್ಚ ಮಟ್ಟವನ್ನು ತಲುಪುತ್ತದೆ. ಇವು ಒಂದಕ್ಕೊಂದು ಪೂರಕವಾಗಿ, ಸಂವಹನದ ವೇಗೋತ್ಕರ್ಷಗಳಾಗಿ ಸಹಕರಿಸುತ್ತವೆ. ಈ ಸೌಹಾರ್ದದ ಮಟ್ಟ ಕೆಳಗಿಳಿದಂತೆ, ಇವುಗಳು ಪರಸ್ಪರ ವಿರುದ್ಧ ದಿಕ್ಕಿಗೆ ಚಲಿಸುವುದರಿಂದ ಸಂವಹನ ಕಾಯಕದ ಪ್ರಮುಖ ಆತಂಕಗಳಾಗಿ ಪರಿಣಮಿಸುತ್ತವೆ. ದೃಶ್ಯ ಮಾಧ್ಯಮದ ಮೂಲಕ ವಸ್ತುವನ್ನು ಗ್ರಹಿಸುವಾಗ ಗ್ರಾಹಕ ಮೈಯೆಲ್ಲಾ ಎಚ್ಚರವಾಗಿರಬೇಕಾಗುತ್ತದೆ. ಈ ಸರಪಳಿಯ ಪ್ರತಿಯೊಂದು ಕೊಂಡಿಯೂ ತನ್ನದೇ ರೀತಿಯಲ್ಲಿ ನಿರ್ಣಾಯಕವಾಗುತ್ತದೆ. ಅಂದರೆ, ನಿರ್ದಿಷ್ಟ ಕೊಂಡಿಯೊಂದು ಕಳಚಿಕೊಂಡಾಗ ಸಂವಹನದ ಸಾತತ್ಯ ನಷ್ಟವಾಗುತ್ತದೆ.

ಈ ರೀತಿಯ ಸಂವಹನಕ್ಕೆ ಸಾಹಿತ್ಯದ ಉಗಮ (source) ಮತ್ತು ಗಮ್ಯ (destination) ಎರಡೂ ಸ್ಥಾನಗಳಲ್ಲೂ ಕೆಲವೊಂದು ಪೂರ್ವಸಿದ್ಧತೆಗಳು ಅವಶ್ಯವಾಗುತ್ತವೆ. ಈ ಪ್ರಕಾರದ ಸಾಹಿತ್ಯದ ಸೃಷ್ಟಿಕರ್ತನಿಗೆ ತನ್ನ ಮಾಧ್ಯಮದ ಮೇಲೆ ಸಂಪೂರ್ಣ ಹಿಡಿತ ಬೇಕಾಗುತ್ತದೆ, ಪರಿಸರವೂ ಸ್ಪಂದಿಸಬೇಕಾಗುತ್ತದೆ. ಅದರ ಗಮ್ಯಸ್ಥಾನದಲ್ಲೂ ಇದಕ್ಕೆ ಸಂವಾದಿಯಾದ ಪರಿಕರಗಳ ಸಂಯೋಜನೆ ನಡೆಯಬೇಕಾಗುತ್ತದೆ. ಇಲ್ಲಿ ಉಗಮ-ಗಮ್ಯ ಸ್ಥಾನಗಳಲ್ಲಿ ಹೊಂದಾಣಿಕೆ(symmetry)ಯಿದ್ದಾಗ ಅತ್ಯಂತ ಶ್ರೇಷ್ಠಮಟ್ಟದ ಸಂವಹನ ಸಿದ್ದಿಸುತ್ತದೆ.

ಈ ಸಂದರ್ಭದಲ್ಲಿ ರಂಗಕಲೆಗಳನ್ನು ಉದಾಹರಿಸಬಹುದು. ನಾಟಕ ನೃತ್ಯಗಳ ಸಂವಹನದಲ್ಲಿ ಭಾಷೆ ಭಾವಗಳ ನಿಷ್ಪತ್ತಿ ಏರುಪೇರಾಗುವುದನ್ನು ಗಮನಿಸಿದಾಗ ಈ ಅಂಶ ಹೆಚ್ಚು ಸ್ಫುಟವಾಗುತ್ತದೆ. ನಾಟಕದಲ್ಲಿ ಭಾಷೆಗೆ ಸ್ವಲ್ಪ ಹೆಚ್ಚು ಒತ್ತು ಸಿಕ್ಕಿದರೆ, ನೃತ್ಯ ಪ್ರಕಾರದಲ್ಲಿ ಭಾವ ಪ್ರದರ್ಶನವು ಪ್ರಮುಖವಾಗುತ್ತದೆ.

ಅನ್ಯಭಾವ (alienation), ಪೂರ್ವಸಿದ್ಧತೆಗಳ ಅನುಪಸ್ಥಿತಿ, ಮಾಧ್ಯಮದ ಬಗೆಗಿನ ಅಜ್ಞಾನ (ignorance) ಅಪರಿಚಿತಭಾವ (unfamiliarity) ಉಗಮ ಗಮ್ಯ ಸ್ಥಾನಗಳ ವೈಯಕ್ತಿಕ ಮಿತಿಗಳು, ದೃಶ್ಯ ಮಾಧ್ಯಮಕ್ಕೆ ಇರಲೇಬೇಕಾದ ಇತರ ಪರಿಕರಗಳ ಅಸಮರ್ಪಕ ಸಂಯೋಜನೆ ಅಥವಾ ವೈಫಲ್ಯಗಳು, ನಿರ್ದಿಷ್ಟ ಭಾವ (ಉದಾ:- ಶಾಂತ)ವೊಂದರ ಸ್ವಭಾವ ದಲ್ಲೇ ಇರುವ ಕ್ಲಿಷ್ಟವಾದ ನಿರ್ವಹಣಾಂಗಗಳು ಈ ಪ್ರಕಾರದ ಸಂವಹನದ ಚಲನಶೀಲತೆ (flow)ಯನ್ನು ನಿರ್ಬಂಧಿಸುತ್ತವೆ.

ಈ ಸಂವಹನ ಮುಖ್ಯವಾಗಿ ವ್ಯಕ್ತಿ-ಸಮೂಹ ಅಥವಾ ಸಮೂಹ-ಸಮೂಹಗಳ ಮಧ್ಯೆ ನಡೆಯುತ್ತದೆ. ಆದುದರಿಂದಲೇ ಸಂವಹನ ಚಕ್ರ ಬಹುಪಾಲು ಅರ್ಥಪೂರ್ಣವಾಗಿಯೇ, ಅಪೂರ್ಣವಾಗಿಯೇ ಉಳಿಯುತ್ತದೆ ಇಲ್ಲವೇ ಬಹಳಷ್ಟು ಕಾಲವನ್ನು ತೆಗೆದುಕೊಳ್ಳುತ್ತದೆ. ಈ ಪ್ರತಿಕ್ರಿಯಾತ್ಮಕ ಸಾಹಿತ್ಯವೂ ಕೂಡಾ ನಿರ್ದಿಷ್ಟ ಕ್ರಮ(patturn)ಕ್ಕೆ ಒಳಪಡುವುದಿಲ್ಲ.

III. ಶ್ರವ್ಯ-ದೃಶ್ಯ ಸಂವಹನಗಳು ತುಂಬ ತೀವ್ರವಾದ, ಶೀಘ್ರವಾದ ವಿಧಾನಗಳಾದರೆ ಪಠ್ಯ ಮಾಧ್ಯಮದ ಸಂವಹನ ಕಾರ್ಯವು ನೇರವಾದ ಅಥವಾ ವಿವಿಧ ಹಂತಗಳಲ್ಲಿ ನಡೆಯಬಹುದಾದ ವಿಶಿಷ್ಟ ಪ್ರಕ್ರಿಯೆಯಾಗಿದೆ. ಅಂದರೆ, ಸಾಹಿತ್ಯವು ಉಗಮ-ಗಮ್ಯ ಎರಡೂ ಸ್ಥಾನಗಳಲ್ಲೂ ಬಹುಕಾಲ ತಂಗಬಹುದಾದ ಸೌಲಭ್ಯವನ್ನು ಎಚ್ಚರದಿಂದ ನಡೆಯ ಬೇಕಾಗುತ್ತದೆ. ಉಗಮ-ಗಮ್ಯ ಸ್ಥಾನಗಳ ಸಂಬಂಧ ಸ್ಥಾಪನೆ ಕೂಡಾ ಬಹು ನಿಧಾನಗತಿಯಿಂದ ನಡೆಯುತ್ತದೆ. ಆದರೆ ಇತರ ಪ್ರಕಾರಗಳಲ್ಲಿಲ್ಲದ, ಪುನರಾವರ್ತನೆಯ ಅವಕಾಶವನ್ನು ಪಠ್ಯಪ್ರಕಾರ ಕೊಡುತ್ತದೆ. ಇದು ಸಂವಹನದ ಮೇಲೆ ದ್ವಿಮುಖ ಪರಿಣಾಮವನ್ನು ಬೀರುತ್ತದೆ. ಅಂದರೆ, ಗಮ್ಯದ ಗ್ರಹಣ ಸಾಮರ್ಥ್ಯ. ಇದರಿಂದ ಹೆಚ್ಚುತ್ತದೆ ಮಾತ್ರವಲ್ಲ, ಸಾಹಿತ್ಯದ ಉಗಮ ಸ್ಥಾನದಲ್ಲೂ ಬಹಳಷ್ಟು ಕುಸುರಿ ಕಾರ್ಯಕ್ಕೆ ಅವಕಾಶ ಸಿಗುತ್ತದೆ. ಆದರೆ ಪ್ರತಿಕ್ರಿಯೆ ಮಾತ್ರ ಬಹುಪಾಲು ಉಗಮಸ್ಥಾನವನ್ನು ತಲುಪದೆ ಮಧ್ಯದಲ್ಲೆಲ್ಲೋ ನಿಂತುಬಿಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಇಲ್ಲಿ ಸಂವಹನ ಕಾರ್ಯ ನಡೆಯುವ ಪರಿಸರ ಗಮ್ಯ ಉಗಮಗಳೆರಡರ ನಿಯಂತ್ರಣದಲ್ಲಿರುತ್ತದೆ, ಮುಕ್ತವಾಗಿರುತ್ತದೆ.

ಈವರೆಗಣ ಚರ್ಚೆಯನ್ನು ಪರಿಶೀಲಿಸಿದರೆಒಂದು ಅಂಶ ಸ್ಪಷ್ಟವಾಗಬಹುದು. ಸಾಹಿತ್ಯದ ಮೂಲ ಉದ್ದೇಶವೇ ಸಂವಹನದ ಮೂಲಕ ಸಾರ್ಥಕ್ಯವನ್ನು ಪಡೆಯುವುದು. ಸಂವಹನರಹಿತ ಸ್ಥಿತಿಯಲ್ಲಿ ಸಾಹಿತ್ಯಿಕ ಉದ್ದೇಶವು ಪ್ರವೃತ್ತವಾಗುವುದು ಅಸಾಧ್ಯವಷ್ಟೆ? ಹಾಗಾಗಿ ಸಂವಹನ ಸಿದ್ಧಾಂತ ಮತ್ತು ಅನ್ವಯ ಕ್ರಮಗಳು ಸಾಮಯಿಕವಾಗುತ್ತವೆ.

ಭಾರತೀಯ ಕಾವ್ಯಮೀಮಾಂಸೆಯ ತಾತ್ವಿಕ ಚರ್ಚೆಯನ್ನು ನಾವು ಬಹಳಷ್ಟು ಬೆಳೆಸಿದ್ದೇವೆ. ಇದೀಗ ಅದರ ಆನ್ವಯಿಕ ನೆಲೆ-ಬೆಲೆಗಳನ್ನು ನಿಷ್ಕರ್ಷಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ನಮ್ಮ ಯೋಚನೆಗೆ ನಿರ್ದಿಷ್ಟ ಚಾಲನೆಯೊಂದು ದೊರೆಯುವಂತಾದರೆ ಈ ಬರೆಹದ ಉದ್ದೇಶ ಸಾರ್ಥಕವಾಗುತ್ತದೆ.