ಸೃಷ್ಟಿಯ ಪ್ರತಿ ತುಣುಕಿಗೂ ಸ್ವಂತದ ಗುಣಶೀಲ ಸ್ವಭಾವಗಳಿವೆ. ತನ್ನ ಸುಡುವ ಕ್ರಮದಿಂದಾಗಿಯೇ ಬೆಂಕಿಗೆ ಅಸ್ತಿತ್ವ, ಅದುವೇ ಅದರ ಇರುವಿಕೆಯ ಅರ್ಥ. ಇದರಲ್ಲಿ ವಿಪರ್ಯಾಸವೆನ್ನುವುದು ಪ್ರಾಕೃತಿಕ ನಿಯಮದ ಉಲ್ಲಂಘನೆಯಾಗುತ್ತದೆ. ವೈಪರೀತ್ಯಗಳಲ್ಲಿ ಪರಿಣಮಿಸುತ್ತದೆ. ಈ ಸಂವಿಧಾನಾತರ್ಗತ ಲಕ್ಷಣಗಳು ಅನ್ಯೋನ್ಯ ಸಂಸ್ಕಾರಗಳಿಂದ ಪರಿಷ್ಕೃತಗೊಳ್ಳಬಹುದೇ ಹೊರತಾಗಿ ಅವುಗಳಿಗೆ ಸಂಪೂರ್ಣ ವಿದಾಯ ಹೇಳಿ ಹೊಸ ಪಾತ್ರವನ್ನು ಧರಿಸಲಾರವು. ಹೀಗಾಗಿಯೇ ದುರ್ಯೋಧನನು “ಜಾನಾಮಿ ಅಧರ್ಮಂ ನಚಮೇ ನಿವೃತ್ತಿಃ” ಎನ್ನುವಂತಾಯಿತು. ಒಂದರ್ಥದಲ್ಲಿ, ನಿಜದ ನೆಲೆಯನ್ನು ತಿಳಿದ ಪ್ರಜ್ಞೆಯದು. ಎಂದರೆ, ಸ್ವಭಾವದ ವಿರುದ್ಧ ಹೋರಾಟವೆನ್ನುವುದು ದಿಗಂತವನ್ನು ಮುಷ್ಟಿ ಯಲ್ಲಿ ಹಿಡಿದಂತೆ, ಇನ್ನೇನು, ಗೆಲುವು ಸಾಧಿಸಿದೆನೆನ್ನುವ ಹಂತದಲ್ಲಿ ಶೂನ್ಯ ಸಂಪಾದನೆಯಾದ ವೈಫಲ್ಯವೇ ಇದರ ಪೂರ್ಣವಿರಾಮ ಸ್ಥಿತಿಯಾಗುತ್ತದೆ. ಈ ಅರಿವಿನಿಂದಲೇ, ಈ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ “ನಾವು ಸ್ವಭಾವೋ ದುರತಿಃಕ್ರಮ” ಸೂತ್ರವನ್ನು ಸ್ವೀಕರಿಸಿದೆವು. ಈ ಮನೋಭಾವವು ಪ್ರಜ್ಞಾಪಾತಳಿಯ ಅನೇಕಾನೇಕ ಬಿಂದುಗಳು, ಸಂಕೇತಗಳು, ಅರ್ಧ ವಿರಾಮಗಳು ಹಾಗೂ ಆವರಣ ಪದಚಿಹ್ನೆಗಳಿಂದ ಆರೈಕೆಯನ್ನು ಪಡೆಯುವಂಥದ್ದು. ಆದ್ದರಿಂದಲೇ ಎದುರಿಲ್ಲದಷ್ಟು ಬಲಾಢ್ಯವೂ ನಿರ್ಣಾಯಕವೂ ಆದುದು.

ಈ ಹಿನ್ನೆಲೆಯಲ್ಲಿ ಮನುಷ್ಯನ ಮನಸ್ಸನ್ನೇ ಅಧ್ಯಯನ ಘಟಕವಾಗಿಟ್ಟುಕೊಂಡಾಗ, ನಿರಂತರ ವಿಚಾರಮಗ್ನವಾಗಿರುವುದೇ ಅದರ ಜೈವಿಕಚರ್ಯೆ (Biological Routine)ಯಾಗಿ ಕಾಣುತ್ತದೆ. ಅಲ್ಲಿ ನಿರ್ವಾತವೆನ್ನುವುದು ಸಾಧ್ಯವೇ ಇಲ್ಲ. ಎಂಥ ಸಂಯಮಶೀಲ ವ್ಯಕ್ತಿ ಯೊಳಗೂ ಈಗ ನಾನೇನೂ ಯೋಚನೆ ಮಾಡುತ್ತಿಲ್ಲ ಎನ್ನುವ ತಿಳಿವು ಸುಳಿದಾಡುತ್ತಲೇ ಇರುತ್ತದೆ. ಆ ಖಾಲಿತನವನ್ನು ತುಂಬುವ ಚಿಂತನತರಂಗಗಳು ವಿಶಿಷ್ಟ ಒತ್ತಡಗಳೊಂದಿಗೆ ಕ್ರಿಯಾಶೀಲವಾಗಿರುತ್ತವೆ. ಈ ಹಂತದಲ್ಲಿ ಆಂತರಿಕ ಶಿಸ್ತನ್ನು ಕಾಯ್ದುಕೊಳ್ಳಬಲ್ಲವರ ಆಲೋಚನೆಗಳ ಗತಿಗಳು ನಿರ್ದಿಷ್ಟ ಕೇಂದ್ರ, ಲಯ, ಗತಿ, ವಿನ್ಯಾಸ, ದಿಕ್ಕು ಹಾಗೂ ಲಕ್ಷ್ಯಗಳನ್ನು ಹೊಂದಿದ್ದು “ಪೂರ್ಣಾವರ್ತನ ಮಾದರಿ”ಯಾಗುತ್ತವೆ. ಇಲ್ಲವಾದಲ್ಲಿ ಕೊಂಡಿ ಕಳಚಿಕೊಂಡ, ಎಲ್ಲೆಲ್ಲೊ ಅಲೆಯುವ ನೆಲೆಯಿಲ್ಲದ ತಿರುಗಾಡಿಗಳಾಗುತ್ತವೆ.

ವಾಸ್ತವ ಬದುಕಿನ, ತೀರಾ ವಾಚ್ಯವಾದ ಒಂದು ಉದಾಹರಣೆಯನ್ನು ಗಮನಿಸಿ, ವ್ಯಕ್ತಿಯೊಬ್ಬ, ನಿರ್ದಿಷ್ಟ ಉಪಾಧಿಗಳನ್ನು ಇಟ್ಟುಕೊಂಡು ತನ್ನ ವಾಸಸ್ಥಾನ, ಆಹಾರ ವಿಹಾರ, ಸಾಮಾಜಿಕಸಾಂಸ್ಕೃತಿಕ ಎಲ್ಲೆ ಕಟ್ಟುಗಳು ಮಿತಿಸಾಧ್ಯತೆಗಳ ಜೀಕಾಟಗಳೆಲ್ಲವನ್ನೂ ನಿಖರ ನಿರ್ವಚನಗಳಿಗೆ ಒಪ್ಪಿಸುತ್ತಾನೆನ್ನೋಣ. ಆಗ ಅವನನ್ನು ಶಾಸ್ತ್ರೀಯವಾದ, ಎಲ್ಲ ಆಯಾಮ ಗಳನ್ನೂ ಸ್ಪರ್ಶಿಸುವ ಅಧ್ಯಯನಕ್ಕೆ ಒಳಪಡಿಸುವುದು ತುಂಬ ಸುಲಭ. ಹಾಗಿಲ್ಲದೆ, ಆತ ಕ್ಷಣಕ್ಷಣಕ್ಕೂ ಇವೆಲ್ಲವುಗಳನ್ನೂ ಬದಲಾಯಿಸುತ್ತ ನಡೆಯುವವನಾದರೆ, ಅದುವೇ ಬಹಳ ಕಷ್ಟವಾಗಿ ಪರಿಣಮಿಸುತ್ತದೆ. ಮನಸ್ಸಿನ ವಿಚಾರಗಳಿಗೂ ಇದೇ ಮಾತು ಅನ್ವಯವಾಗುತ್ತದೆ.

ಇದು ಸಾಮಾನ್ಯ ಜಗತ್ತನ್ನು ಮುಟ್ಟುವ ಮಾತಾಯಿತು. ಅದನ್ನು ಸ್ವಲ್ಪ ವಿಶಿಷ್ಟ, ವಿಭಿನ್ನ ವಲಯಗಳೊಳಗೆ ನಿಲ್ಲಿಸಿ, ನಿಶ್ಚಿತವಾದ ಧೋರಣೆ, ಸಂಯೋಜನೆ, ಅಭಿವ್ಯಕ್ತಿಗಳನ್ನು ಒಂದೇ ಸಾಲಿನಲ್ಲಿಟ್ಟು ನೋಡಿದ, ಹಲವು ಚಿಂತನಶೀಲ ಚೈತನ್ಯಗಳನ್ನು ಪ್ರಪಂಚದ ಇತಿಹಾಸವು ಗಮನಿಸುತ್ತಲೇ ಬಂದಿದೆ. ಕನ್ನಡದ ವಿಚಾರ ಜಗತ್ತು ಕೂಡಾ ಈ ರೀತಿಯ ಬೆಳೆಗಳನ್ನು ಸಾಕಷ್ಟು ಹುಲುಸಾಗಿಯೇ ಬೆಳೆಸಿದೆ. ಅದರೊಳಗಿನ ಶಿಖರ ಸ್ಥಾನಗಳನ್ನು ಗುರುತಿಸುವುದು, ಆ ಸ್ಥಾನಗಳಲ್ಲಿ ಸುಪ್ತವಾಗಿ, ವ್ಯಕ್ತವಾಗಿ ಹರಿಯುವ ಚಿಂತನಲಹರಿಗಳ ಸ್ಪಂದನವನ್ನು ಗಮನಿಸುವುದು ಈ ಬರೆಹದ ಉದ್ದೇಶವಾಗಿದೆ.

ಮೊದಲಿಗೆ ಇಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. “ವಿಚಾರ” ಎನ್ನುವ ಪ್ರಸ್ತಾಪ ಬಂದೊಡನೆಯೇ ನಾವು ಅದು ಸಂಭವನೀಯತೆ ಅಥವಾ ವೈಚಾರಿಕತೆ (Rationality)ಗೆ ಸಂಬಂಧಿದುದಾಗಿರಬೇಕೆಂಬ ತೀರ್ಮಾನಕ್ಕೆ ತಲುಪಿಬಿಡುತ್ತೇವೆ. ಲೌಕಿಕ ಪರ್ಯಾವರಣದಾಚೆಗಿನ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ ಜಿಜ್ಞಾಸೆಗಳನ್ನು ನಿರ್ದಾಕ್ಷಿಣ್ಯವಾಗಿ ಅದರ ಪರಿಧಿಯಿಂದಾಚೆಗೆ ತಳ್ಳಿಬಿಡುತ್ತೇವೆ. ಒಂದು ಕ್ಷಣ ಯೋಚಿಸಿ ನೋಡಿ. ತೀವ್ರವಾದ ವೈಚಾರಿಕ ನಿಲುವೊಂದು ಸಿದ್ಧಪಡುವುದು, ಅದಕ್ಕೆ ತೀರಾ ವಿರುದ್ಧವಾದ ಅತಿಭಾವುಕ (Sentimental) ತಂಗುದಾಣವೊಂದರೊಂದಿಗೆ ಸೆಣಸಾಡಿ ತನ್ನ ಗಟ್ಟಿತನವನ್ನು ಸಾಬೀತು ಪಡಿಸಿದಾಗಲೇ. ಯಾವುದೇ ಸ್ಪರ್ಧೆಯಿರಲಿ, ಪಂದ್ಯವಿರಲಿ ಸಮಬಲದ ಎದುರಾಳಿಯಿಲ್ಲದೆ ಸಂಪೂರ್ಣವೆನಿಸಲಾರದು. ಹೀಗಾಗಿ, ನಾವು ಅತ್ಯಂತ ಗಂಭೀರವಾದ ತಾತ್ವಿಕ ಅಪಾಯ ವೊಂದಕ್ಕೆ ಆಶ್ರಯ ನೀಡುತ್ತಲೇ ಇರುತ್ತೇವೆ.

ಈ ಹೇಳಿಕೆಯನ್ನು ಸರಳಗೊಳಿಸುವುದಾದರೆ, ನಮ್ಮ ವಿಭಾಗಕ್ರಮವು ತೀರಾ ಪ್ರಾಥಮಿಕ ಮಟ್ಟದಲ್ಲಿಯೇ ಉಳಿದುಬಿಡುತ್ತದೆ. ಎಂದರೆ, ಮೇಲ್ನೋಟಕ್ಕೆ ಅನಾಸ್ತಿಕವಾದವನ್ನು ಎತ್ತಿ ಹಿಡಿಯುವ ಎಲ್ಲ ವಾದಗಳನ್ನೂ ಒಂದೆಡೆಗೆ ಇಟ್ಟು, ಇನ್ನೊಂದೆಡೆಗೆ ಆ ಲಕ್ಷಣ ಗಳಿಲ್ಲದವುಗಳೆಲ್ಲವನ್ನೂ ಸೇರಿಸಿಬಿಡುತ್ತೇವೆ. ಅಲ್ಲಿರುವ ಸ್ಥೂಲಸೂಕ್ಷ್ಮ ವ್ಯತ್ಯಾಸಗಳಿಗಾಲಿ, ದೈವಪಾರಮ್ಯದ ಪ್ರತಿಪಾದನೆಯ ನೆರಳಿನಲ್ಲಿಯೇ ಬೆಳೆಯುವ ವಸ್ತುಸತ್ಯದ ನಿರೂಪಣೆ ಗಳಾಗಲಿ ನಮಗೆ ಮಹತ್ವದವುಗಳೆನಿಸುವುದಿಲ್ಲ. ಆ ಅಗಳನ್ನು ಮುಚ್ಚಿದಾಗಷ್ಟೇ ನಮ್ಮ ವಿಚಾರದ ಬೈಲಿನ ವಿಸ್ತಾರ, ಭೂಗುಣ, ಫಲವತ್ತತೆಗಳು ತಮ್ಮ ಪೂರ್ಣಪರಿಚಯವನ್ನು ನೀಡುತ್ತವೆ.

ಇವಿಷ್ಟೂ ಅಂಶಗಳನ್ನು ನೇಪಥ್ಯದಲ್ಲಿರಿಸಿಕೊಂಡಾಗ, ನಮ್ಮ ಗುರುತ್ವ ಕೇಂದ್ರಗಳಲ್ಲಿ ವಿಶಿಷ್ಟ ಚಿಂತನಶೀಲರಿರುತ್ತಾರೆ. ಅವುಗಳ ಕಕ್ಷೆಯೊಳಗೆ ಅನ್ಯೋನ್ಯ ವಿಚಾರಗಳ ಪ್ರಸ್ತುತ ಪರ್ಯಟನೆಗಳಿರುತ್ತವೆ. ಇಲ್ಲಿ ಕಸುವು ಪಡೆಯುವುದು, ಸತತವಾಗಿ ವಿಚಾರಮಗ್ನವಾಗಿದ್ದ ಚೈತನ್ಯವೊಂದು, ತಾನು ಕಂಡುಕೊಂಡ ಸತ್ಯಗಳನ್ನು ಲೋಕಮುಖದಲ್ಲಿ ಮಂಡಿಸಿದ ರೀತಿಯಷ್ಟೇ ಆಗಿರುತ್ತದೆ. ಹೊರತಾಗಿ ವಾಸ್ತವವಾಗಿ ಮಂಡಿಸಲ್ಪಟ್ಟ ವಿಚಾರಗಳಲ್ಲ. ಹಾಗೆ ನೋಡಿದರೆ, ಚಿಂತನೆಯೆನ್ನುವುದೇ ಚಲನಶೀಲವಾದುದು ಒಬ್ಬನೇ ವ್ಯಕ್ತಿಯ ಎರಡು ವಿಚಾರಗಳಲ್ಲಿ ಸಾಮ್ಯವಿರಬಹುದೆನ್ನುವಷ್ಟು ಧೈರ್ಯದಿಂದ ಅವುಗಳು ಸಮಾನವಾಗಿರುತ್ತ ವೆನ್ನುವಂತಿಲ್ಲ. ಏಕೆಂದರೆ, ನಾವು ಎಚ್ಚರಿಸುತ್ತಿರುವ ಪ್ರತಿ ಕ್ಷಣವೂ ನಮ್ಮ ಅನುಭವ ಪ್ರಪಂಚವು ಬದಲಾಯಿಸುತ್ತಲೇ ಹೋಗುತ್ತದೆ. ದೃಷ್ಟಿಸೃಷ್ಟಿಗಳೆರಡೂ ಚಲನಶೀಲ ವಾಗಿರುವುದರಿಂದ, ಚಿಂತನೆಯ ನಿರ್ದಿಷ್ಟ ಸ್ಥಾನ ಗತಿ ಲಕ್ಷ್ಯಗಳನ್ನು ಗೊತ್ತುಪಡಿಸಿಕೊಳ್ಳುವುದು ಸೂಕ್ಷ್ಮವಾದ ನಿರೀಕ್ಷಣಾಕ್ಷಮತೆ ಮತ್ತು ವಿಚಕ್ಷಣೆಗಳನ್ನು ಅಪೇಕ್ಷಿಸುವ ಕ್ರಿಯೆಯಾಗಿದೆ.

ನಮ್ಮ ಚಿಂತನಪರ ಬರೆಹಗಾರರ ಚಿಂತನೆಗಳ ವಸ್ತುಗಳು ತುಂಬ ವ್ಯಾಪಕ ಮತ್ತು ವೈವಿಧ್ಯಪೂರ್ಣವಾಗಿವೆ. ಒಂದು ಅರ್ಥದಲ್ಲಿ ಎಂದರೆ ಅವುಗಳನ್ನು ಒಂದು ಘಟಕವಾಗಿ ಸ್ವೀಕರಿಸಿದಾಗ ಅವು “ವೃಕ್ಷ ಮಾದರಿ”ಗೆ ಒಳಪಡುತ್ತವೆ. ಕೆಲವು ಸಂದರ್ಭಗಳಲ್ಲಿ ಅವುಗಳು “ವರ್ತುಲ ಮಾದರಿ”ಯವಾಗಿ ಕಾಣುತ್ತವೆ. ಇನ್ನೂ ಕೆಲವೆಡೆ ಅವು “ಸರಪಳಿಯ ಮಾದರಿ” ಯನ್ನು ಒಪ್ಪಿಕೊಳ್ಳುತ್ತವೆ. ಇಲ್ಲಿ ಸ್ಪಲ್ಪ ಸೃಷ್ಟೀಕರಣ ಬೇಕಾಗಬಹುದು.

“ವೃಕ್ಷ ಮಾದರಿ”ಯ ಚಿಂತನಕ್ರಮದಲ್ಲಿ, ಭಿನ್ನ ಭಿನ್ನ ವಿಚಾರಗಳು ಒಂದೇ ತಾಯಿಬೇರಿನಿಂದ ಸತ್ವವನ್ನು ಪಡೆದು, ಒಂದೇ ಕಾಂಡದಿಂದ ಟಿಸಿಲೊಡೆಯುವುದನ್ನು ಗುರುತಿಸುತ್ತೇವೆ. ಆ ಮೂಲಾಧಾರಕ್ಕೆ ಬದ್ಧವಾಗಿ ಆನಂತರದ ವಿಚಾರಗಳು, ಮುನ್ನಡೆ, ಬೆಳವಣಿಗೆಗಳನ್ನು ಸಾಧಿಸಿದಾಗ ಮಾತ್ರ ಅವಕ್ಕೆ ಸಾತತ್ಯ ಮತ್ತು ಅರ್ಥವಂತಿಕೆಗಳು ದೊರೆ ಯುತ್ತವೆ. ಈ ಸಂಬಂಧ ರೆಂಬೆಯ ಕೊನೆಯ ಎಲೆಯವರೆಗೂ ಚಾಚಿಕೊಳ್ಳಬಹುದೆನ್ನುವುದು ಈ ಸಂದರ್ಭದ ವೈಶಿಷ್ಟ್ಯವಾಗುತ್ತದೆ.

“ವೃತ್ತ ಮಾದರಿ”ಯಲ್ಲಿ ಒಂದು ಬಿಂದುವಿನಿಂದ ಪ್ರಾರಂಭವಾಗುವ ಚಿತ್ತವೃತ್ತಿಗಳು ಅದೇ ಪಾತ್ರದಲ್ಲಿ ಮುಂದೆ ಮುಂದೆ ಹರಿಯುತ್ತಾ ಬಹಳ ಸೂಕ್ಷ್ಮವೂ ಅಗೋಚರವೂ ಆದ ವಿಸ್ತರಣೆಯಲ್ಲಿ ಪರಿಣಮಿಸುತ್ತವೆ. ‘ವೃಕ್ಷ ಮಾದರಿ’ಗಿಂತ ಭಿನ್ನವಾಗಿ, ಇದು ನಿಂತಲ್ಲಿಯೇ ಮುಗಿತಾಯವೇನೋ ಎನ್ನುವ ಅಭಾಸವನ್ನು ಸೃಷ್ಟಿಸುತ್ತದೆ. ವೃಕ್ಷ ಮಾದರಿ ಯಲ್ಲಿ ಶಾಖೆಗಳು ಸಂಪೂರ್ಣ ಬೆಳವಣಿಗೆಯನ್ನು ಪಡೆಯುವವರೆಗೂ ಅರ್ಧಾಂತಕವೆನ್ನುವ ಎಚ್ಚರವನ್ನು ಮೂಡಿಸುತ್ತವೆ. ವೃತ್ತದ ವಿಸ್ತರಣೆಯು ಮಾತ್ರ ಒಬ್ಬನೇ ವ್ಯಕ್ತಿಯಲ್ಲಿ ನಡೆಯುವ ಕಾಲಸಂವಾದಿಯಾದ ಪ್ರಕ್ರಿಯೆಯಾಗಿರಲೂಬಹುದು. ಅದೇ ನೇರಕ್ಕೆ ಒಗ್ಗಿಕೊಂಡ ಬೇರೆ ಬೇರೆ ವಿಚಾರವಂತರ ದೇಣಿಗೆಯಾಗಿ ಅಭಿವೃದ್ದಿ ಹೊಂದಿರಲೂಬಹುದು.

‘ಸರಪಳಿ ಮಾದರಿ’ಯು ಸ್ವಯಂಪೂರ್ಣವಾದ, ಭಿನ್ನ ಭಿನ್ನ ಕೊಂಡಿಗಳನ್ನು ಅವುಗಳ ಗಾತ್ರ, ಆಕಾರ, ಸ್ವರೂಪಗಳಿಗೆ ಭಂಗ ಬಾರದಂತೆ ಪರಸ್ಪರ ಜೋಡಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಸ್ವತಂತ್ರವಾಗಿ ಅರ್ಥವತ್ತತೆಯೊಂದಿಗೆ, ಸಮೂಹದ ಸದಸ್ಯನಾಗಿಯೇ ಆ ಕೊಂಡಿಯು ವಿಚಾರಗಳ ಮಧ್ಯದ ಬೆಸುಗೆಯಾಗಿ, ಅದರ ಸಂಚಾರವನ್ನು ಸುಗಮ ಗೊಳಿಸುತ್ತದೆ.

ಅಭ್ಯಾಸದ ಸೌಲಭ್ಯಗಳನ್ನು ಲಕ್ಷಿಸಿ, ಈ ಮಾದರಿಗಳನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಸಂದರ್ಭದ ಸ್ವೋಪಜ್ಞ ಚಿಂತಕರಲ್ಲಿ ಕೆಲವರ ವಿಚಾರಗಳ ಓಘ, ಹರಹು, ಹಿನ್ನೆಲೆ ಹಾಗೂ ತಾತ್ವಿಕ ತಳಹದಿಗಳನ್ನು ಗುರುತು ಮಾಡಿಕೊಳ್ಳುವ ಪ್ರಯತ್ನಗಳಿಗೆ ತೊಡಗಬಹುದು. ಇದು ದೇವರು, ಸಂಸ್ಕೃತಿ, ಸಾಹಿತ್ಯಗಳಿಗೆ ಸೀಮಿತ.

ಪ್ರಜ್ಞಾವಿಕಾಸದ ಎಲ್ಲ ಸ್ತರಗಳಲ್ಲೂ ಮನುಷ್ಯನ ಚಿಂತನೆಯನ್ನು ಬಹುವಾಗಿ ಕಾಡಿದ ಪರಿಕಲ್ಪನೆಗಳಲ್ಲಿ ದೇವರೂ ಒಂದಾಗಿದೆ. ಅಂಥದೊಂದು ಶಕ್ತಿ ಇದೆಯೇ ಇಲ್ಲವೆ ಎನ್ನುವ ಮೂಲಭೂತವಾದ ಪ್ರಶ್ನೆಯಿಂದ ತೊಡಗಿ ತೀರಾ ತಾತ್ವಿಕವಾದ ಭಗವಂತ ತತ್ವದ ಜಿಜ್ಞಾಸೆಯವರೆಗೂ ಈ ವಿಚಾರ ಹರಡಿಕೊಂಡಿದೆ. ಅಂಥ ಯಾವೊಂದರ ಅಸ್ತಿತ್ವವನ್ನೂ ಒಪ್ಪದ ತೀರಾ ನಿರೀಶ್ವರವಾದವನ್ನು ಓಲೈಸಿದವರ ಒಂದು ವರ್ಗವಿದ್ದರೆ, ಆ ಬಗ್ಗೆ ತಮಗೇನೂ ಗೊತ್ತಿಲ್ಲ, ಅದರ ಕುರಿತಾದ ಆಸಕ್ತಿಯೂ ಇಲ್ಲ. ಜೀವಮಾನದ ಪ್ರತಿಕ್ಷಣವನ್ನೂ ಅಧ್ಯಯನಕ್ಕಾಗಿ ವ್ಯಯಿಸಿದರೂ ಕಡೆಯೆತ್ತಿಸಲಾರದ ಹಲವು ವಿಷಯಗಳು ಜಗತ್ತಿನಲ್ಲಿವೆಯೆಂದು ನಿವಾರಿಸಿಕೊಂಡವರ ಗುಂಪೇ ಮತ್ತೊಂದು. ಹೇಗೆ ನಾವು ದೇವರಿದ್ದಾನೆಂದು ಸಾಧಿಸಲಾರೆವೋ ಹಾಗೆಯೇ ಇಲ್ಲವೆಂದೂ ಸಾಧಿಸಲಾರೆವೆಂದು ಆ ಪ್ರಶ್ನೆಯ ಅಂತರ್ವಿರೋಧವನ್ನು ಮನಗಂಡವರು ಹಲವರು. ಇದೆಲ್ಲವೂ ‘ನಿಯತಿ’ಯೆಂದು ವಿಧಿವಾದಕ್ಕೆ ಶರಣಾದವರೂ ಇದ್ದಾರೆ, ನೈಸರ್ಗಿಕವಾದ Cosmic Power ಎನ್ನುವ ವಿಶ್ವಚೈತನ್ಯವನ್ನು ಒಡಂಬಟ್ಟವರೂ ಇದ್ದಾರೆ. ಇಂಥ ಸಂಕೀರ್ಣವಾದ, ಸಿಕ್ಕು ಗೋಜಲು ಗಳಿಂದ ತುಂಬಿದ ವಿಚಾರದ ಬಗ್ಗೆ ನಮ್ಮವರು ಸಾಕಷ್ಟು ವಿವೇಚನೆ ನಡೆಸಿದ್ದಾರೆನ್ನುವುದು ಮಾತ್ರ ನಿರ್ವಿವಾದ.

ಈ ಚರ್ಚೆಯನ್ನು ಬೆಳೆಸುವುದಕ್ಕೆ ಮೊದಲು, ಗೌರೀಶ ಕಾಯ್ಕಿಣಿ ಅವರ ಎರಡು ಹೇಳಿಕೆಗಳನ್ನು ಪ್ರಸ್ತಾಪಿಸುವುದು ಉಚಿತವೆನಿಸುತ್ತದೆ.

೧. ತರ್ಕಬದ್ಧ ಅನುಮಾನ, ಪ್ರತಿಷ್ಟಿತ ಪ್ರಮಾಣಭೂತ ವಿಚಾರ ಪ್ರಣಾಲಿ, ಮತಸಂಸ್ಥೆಯ ಮೂಲವನ್ನೇ ಕೆದಕುವ ಶಂಕೆ, ಅದಕ್ಕೆ ಸಮಾಧಾನ ಇವುಗಳನ್ನು ಒಳಗೊಂಡ ಸ್ವತಂತ್ರ, ಅನಿರ್ಬಂಧ ಊಹೆ, ಅನುಮಾನಗಳಿಗೆ, ಪ್ರಮೇಯ ಪರಿಶೀಲನೆಗಳಿಗೆ ಅವಕಾಶ ಕೊಡುವ ಎಲ್ಲ ಬೌದ್ದಿಕ ವಾಙ್ಮಯವೂ ವಿಚಾರ ಸಾಹಿತ್ಯವೆಂದೇ ಭಾವಿಸುವುದೇ ಹೆಚ್ಚು ವಿಹಿತ.

೨. ಸೂತ್ರಕ್ಕಿಂತ ಭಾಷ್ಯ, ಭಾಷ್ಯಕ್ಕಿಂತ ವಾರ್ತಿಕ, ಕಾರಿಕೆಗಿಂತ ಟೀಕೆ, ಅದಕ್ಕೆ ಬೇರೆ ದೀಪಿಕೆ. ಇವೆಲ್ಲವುಗಳಿಗಿಂತ ಇವೆಲ್ಲವುಗಳ ಬಗೆಗೆ ಪ್ರವಚನ, ವ್ಯಾಖ್ಯಾನ ಇದಕ್ಕೆಲ್ಲ ನಮ್ಮ ಪ್ರಾಜ್ಞ ಪೂರ್ವಿಕರೂ ಪರಂಪರೆಯೂ ತುಂಬ ಮಹತ್ವಕೊಟ್ಟು ಬಂದುದರ ಮರ್ಮವೂ ಈ ವೈಚಾರಿಕತೆಯ ಸಾಂತ್ವನೆಯೇ ಸರಿ.

(ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ. ಪು. ೩೧-೨)

ಈ ಹೇಳಿಕೆಗಳು ಈ ವಾದಗಳ ಎರಡು ತೀರಗಳನ್ನು ಸೂಚಿಸುತ್ತವೆ. ದೃಢಪಡಿಸುವ ವಾದಗುಚ್ಛಗಳು ಇವುಗಳಲ್ಲಿ ಒಂದನ್ನು ಆಶ್ರಯಿಸಿದರೆ ಅಲ್ಲಗಳೆಯುವ ಚಿಂತನೆಗಳು ವಿರುದ್ಧ ದಡದಲ್ಲಿ ನೆಲೆಸುತ್ತವೆ. ಆದರೆ ವಿಚಾರ ಪ್ರಣಾಳಿಗಳು ಮಾತ್ರ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಹಾಯುತ್ತಲೇ ಇರುತ್ತವೆ ಹೊಸಗಾಳಿಯನ್ನು ಆಚೆಯಿಂದೀಚೆಗೂ ಈಚೆಯಿಂದಾಚೆಗೂ ಒಯ್ಯುತ್ತ ಈ ಪ್ರವಾಹಗಳು ದಡ ಮೀರಿ ಹರಿಯದಂತೆ ಎಚ್ಚರವನ್ನು ವಹಿಸುತ್ತವೆ.

ಈ ಹಂತದಲ್ಲಿ ಕೆಲವು ಚಿಂತನಪರ ಬರೆಹಗಾರರು ದೇವರ ಬಗೆಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪರಿಶೀಲಿಸಬಹುದು. ನಮ್ಮ ಅಗ್ರಮಾನ್ಯ ಪಂಕ್ತಿಯ ಚಿಂತನಶೀಲರಲ್ಲೊಬ್ಬರಾದ ಡಿ.ವಿ. ಗುಂಡಪ್ಪನವರು ನಂಬಿಕೆಯ ಆರಾಧಕರು, ‘ಬಾಳಿ ಗೊಂದು ನಂಬಿಕೆ’ಯೆನ್ನುವ ಕೃತಿಯನ್ನೇ ಬರೆದ ಅವರು ಶ್ರದ್ಧೆ, ನಂಬಿಕೆ, ಸೌಂದರ್ಯಾಪೇಕ್ಷೆ ಗಳ ಮೂಲಕವೇ ದೇವರನ್ನು ಅರ್ಥೈಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದವರು. ‘ದೇವರು’ ಎನ್ನುವ ಕಿರುಪುಸ್ತಕದಲ್ಲಿ ಅವರು ಆ ಬಗೆಗಿನ, ಅನಿಸಿಕೆಗಳನ್ನು ಕ್ರೋಡೀಕರಿಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನು ವಿಶದಪಡಿಸಬೇಕು. ಯಾರ ವಾದವನ್ನೇ ಆದರೂ ಕಣ್ಣಮುಚ್ಚಿ ಸ್ವೀಕರಿಸಬೇಕೆನ್ನುವುದು ಮೌಢ್ಯವಾಗುತ್ತದೆ. ಆದರೆ, ನಿರ್ದಿಷ್ಟ ವ್ಯಕ್ತಿಯೊಬ್ಬರು ಒಂದು ವಿಷಯದ ಬಗೆಗೆ ಏನು ಹೇಳಿದ್ದಾರೆ ಎನ್ನುವುದಷ್ಟೇ ಪೂರ್ಣಪ್ರಮಾಣದಲ್ಲಿ ಗ್ರಹಿಸದೆ, ಅಪ್ರಸ್ತುತವೆಂದು ಪಕ್ಕಕ್ಕೆ ತಳ್ಳುವುದು ಇನ್ನೂ ಹೆಚ್ಚಿನ ಮೌಢ್ಯವೂ ಆಗುತ್ತದೆ. ಮೊದಲು ಶುದ್ಧ ಅಂತಃಕರಣದಿಂದ, ವಾದವೊಂದರ ಹುರುಳು ತಿರುಳುಗಳನ್ನು ಗ್ರಹಿಸುವ ಸನ್ನದ್ಧತೆ ಯೊಂದಿಗೇ ಈ ಎಲ್ಲ ವಿಚಾರಗಳನ್ನು ತಿಳಿಯುವ ಪ್ರಯತ್ನಗಳನ್ನು ಮಾಡೋಣ. ಜಿಜ್ಞಾಸೆ ಯನ್ನು ಅದರ ಸರತಿಯಲ್ಲಿ ಕಾಯಲು ಹೇಳೋಣ. ಅದೂ ಕಾಲ ಬಂದಾಗ ಸೂಳ್ ಪಡೆಯಲಿ!

“ದೇವರಲ್ಲಿ ನಂಬಿಕೆಯಿಲ್ಲದಿರುವವರನ್ನು ಪರಿವರ್ತಿಸುವಂಥದ್ದಲ್ಲ. ದೇವರು ಎಂಬ ಗ್ರಂಥ, ಅನೀಶ್ವರವಾದಕ್ಕೆ ಪ್ರತ್ಯುತ್ತರವುಂಟು. ಆ ನಂಬಿಕೆಯಿಂದ ಜೀವನಕ್ಕೆ ನೆಮ್ಮದಿ ಉಂಟು. ಸಾರ್ಥಕತೆಯುಂಟು ಎಂದು ತೋರಿಸುವುದು ಈ ಪುಟ್ಟ ಪುಸ್ತಕದ ಉದ್ದೇಶ. ದೇವರಲ್ಲಿ ನಂಬಿಕೆಯಿರುವವರು ದೇವರನ್ನು ಕುರಿತು ಏನು ತಿಳಿಯಬೇಕು ಎನ್ನುವುದನ್ನು ಈ ಗ್ರಂಥವು ವಿವರಿಸುತ್ತದೆ.”

ಇಲ್ಲಿ ವ್ಯಕ್ತವಾಗುವ ಡಿ.ವಿ.ಜಿ.ಯವರ ಪರಂಗಿತ ಜ್ಞಾನವನ್ನೂ ಉಚಿತಾನುಚಿತ ವಿವೇಕ ವನ್ನೂ ಗಮನಿಸಬೇಕು. ಇಲ್ಲಿ ಯಾರ ನಂಬಿಕೆಯ ಮೇಲೂ ದಾಳಿ ಇಡದ ಸುಮನಸ ಪ್ರಜ್ಞೆಯಿದೆ. ಅದರೊಂದಿಗೆ ಸೂಕ್ಷ್ಮಾತಿಸೂಕ್ಷ್ಮರೀತಿಯಲ್ಲಿ, ನಂಬುವ ಮನಸ್ಸುಗಳಿಗೆ ಬಲ ಮುದ ನೀಡುವ ಸಂಗತಿಗಳೂ ಇವೆ.

ಮೂರ್ತಿಪೂಜೆಯಂಥ ಸಾಮಾನ್ಯ ಸ್ತರದ ಆರಾಧನೆಯೂ ಅವರ  ದೃಷ್ಟಿಯಲ್ಲಿ ಪ್ರಯೋಜನಕಾರಿಯೇ. ಇಲ್ಲಿ ಸದಾ ನೆನಪಿಡಬೇಕಾದ ಅಂಶವೆಂದರೆ ‘ಭಗವಂತ’ ತತ್ವವನ್ನು ಅವರು ಬಾಳಿನ, ಋತದ, ನಂಬಿಕೆಯ ಬುನಾದಿಯನ್ನಾಗಿ ಗುರುತಿಸಿದ್ದವರು. ಹಾಗಾಗಿ ಲೌಕಿಕ ಬದುಕನ್ನು ಸಹ್ಯವಾಗಿ, ಸುಂದರವಾಗಿ, ಉದಾತ್ತವಾಗಿ ರೂಪಿಸುವ ಶಕ್ತಿಯಾಗಿ ಭಗವಂತನನ್ನು ಕಲ್ಪಿಸಿಕೊಳ್ಳುವುದು ಅವರಿಗೆ ಸುಲಭವಾಯಿತು. ಆದುದರಿಂದಲೇ ಅವರಿಗೆ ಭಗವಂತ ಅಥವಾ ಪರಮಾತ್ಮವೆನ್ನುವುದು ಅಸ್ತಿತ್ವದ ಅಂಗವಾಗದೆ, ಒಂದು ಸ್ಥಿತಿಯ ದ್ಯೋತಕವಾಯಿತು. ಈ ಅಭಿಪ್ರಾಯವನ್ನು ನೋಡಿ :

“ಮನುಷ್ಯನ ತಿಳಿವಳಿಕೆ ಮಿತವಾದದ್ದು. ಈ ಶೂನ್ಯಜ್ಞಾನದೊಳಗಿನ ತಕ್ಕಮಟ್ಟಿನ ಪೂರ್ಣಜ್ಞಾನವೆಂದರೆ ಅವನಿಗೆ ಅವನ ಸ್ವಂತ ಅನುಭವಗಳಿಂದ ದೊರೆತ ಜ್ಞಾನ. ಆ ಅನುಭವಗಳು ಅವನಿಗೆ ವಾಸ್ತವ. ಅದೂ ಅಪೂರ್ಣ ವಾಸ್ತವ. ಅದರ ಆಧಾರದ ಮೇಲೆ ಒಂದು ಪರಿಪೂರ್ಣ ಕಲ್ಪನೆಯನ್ನು ಕಟ್ಟಿಕೊಳ್ಳುತ್ತಾನೆ. (ಹಾಗಾಗಿ) ಭಗವಂತನೆಂದರೆ, ಪರಿಪೂರ್ಣ ದೇಶಿ, ಪರಿಪೂರ್ಣ ಘನ. ನಮಗೆ ಯಾವುದು ಪ್ರಿಯವೋ, ಯಾವುದು ಇಷ್ಟವೊ, ಯಾವುದು ಸುಖಕರವೊ ಅದೆಲ್ಲ ಭಗವಂತ. ಹಾಗೆಯೇ ನಮಗಿರುವ ಜ್ಞಾನಶಕ್ತಿ, ಕಾರ್ಯಶಕ್ತಿ, ಇಚ್ಛಾಶಕ್ತಿಗಳು ಬಹು ಪರಿಮಿತವಾದವುಗಳು. ಆ ನಾನಾ ಶಕ್ತಿಗಳ ಪರಿಪೂರ್ಣ ದೆಶೆ ಭಗವಂತ.

ನೋಡಿ, ಜೀವನವನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸಿ, ಅದರ ಸ್ವರೂಪವನ್ನು ಒಟ್ಟಂದರಲ್ಲಿ ಕಾಣಬಲ್ಲ ಚಿಂತನಕ್ರಮಕ್ಕೆ ಮಾತ್ರವೇ ಸಿದ್ದಿಸಬಲ್ಲ ನಿಲುವು, ಇದು. ಗಿರಿಯ ನೆತ್ತಿಗೆ ಚಾರಣ ಹೊರಟವರು, ಮಧ್ಯದ ಯಾವುದೋ ಬಿಂದುವಿನ ಆಕರ್ಷಣೆಗೆ ಬಲಿ ಬೀಳುವುದು ತುಂಬ ಸಹಜ. ಆ ಪ್ರಲೋಭನೆಗೆ ಬಾಗದೆ ಮುಂದೆ ಸಾಗಿದರೆ ಮಾತ್ರ ಪೂರ್ಣಸೌಖ್ಯದ ನೆಲೆಯು ಸಿಗುತ್ತದೆ. ಅಂಥ ಮನಸ್ಸು, ದ್ವಂದ್ವಾತೀತವಾದ, ವಿಕಾರರಹಿತ ವಾದ, ಸ್ವಸ್ಥವಾದ ಸ್ಥಿತಿಯಲ್ಲಿ ಸದಾ ಇರುವ ಮನಸ್ಸು ಭಗವಂತನ ಪ್ರತೀಕವೆನ್ನುವ ಡಿ.ವಿ.ಜಿ.ಯವರು ಯಾವ ನಿಟ್ಟಿನಿಂದ ನೋಡಿದರೂ ಆಧುನಿಕರಲ್ಲದ ಸಂಪ್ರದಾಯ ಜಡರೆನಿಸುವುದಿಲ್ಲ. ಆ ಭಗವಂತತ್ವ ಮತ್ತು ಭಗವಂತ ತತ್ವಗಳ ಲಯ ವಿನ್ಯಾಸಗಳಿಗೆ ನಮ್ಮ ಸಂವೇದನೆಗಳನ್ನು ಶ್ರುತಿಗೊಳಿಸಿಕೊಂಡಾಗ, ಅವರು ಕಂಡ, ನಮಗೆ ಕಾಣಿಸಲೆತ್ನಿಸಿದ ದೇವರ ಪರಿಕಲ್ಪನೆಯು ಸ್ಪಷ್ಟವಾಗುತ್ತದೆ.

ನಮ್ಮ ಹಿರಿಯ ಸಮಕಾಲೀನರಲ್ಲಿ ಒಬ್ಬರಾದ ಶಂ.ಬಾ. ಜೋಶಿಯವರು ತಮ್ಮ ವಿಚಾರಗಳ ಪ್ರಖರತೆಗೆ ಪ್ರಖ್ಯಾತಿ ಹೊಂದಿದವರೂ ಅಷ್ಟೇ ನಿಷ್ಠುರವಾಗಿ ಸತ್ಯದ ಅನ್ವೇಷಣೆ ಯಲ್ಲಿ ಪ್ರವೃತ್ತರಾದವರು. ‘ಧೀ’ ಶಕ್ತಿಯ ಜಾಗೃತಾವಸ್ಥೆಗೆ ಒತ್ತು ನೀಡುತ್ತ ಅವರು, ಮೊದಲು ಪ್ರಜ್ಞೆ ಬಂದು, ಸತ್ಯದಿಂದ ದೂರ ಹೋಗಿ ಪೆಟ್ಟು ತಿಂದು ಸತ್ಯದ ಅಡಿಯಲ್ಲಿ ನಿರ್ಗತಿಕನಾಗಿ ಬೀಳುವುದಕ್ಕಿಂತ ತಾನಾಗಿಯೇ ಅದನ್ನು ಮುಂಗಾಣಿಸುವುದೇ ಬುದ್ದಿವಂತಿಕೆ ಯಲ್ಲವೆ? ಇಂಥವರೇ ಮನುಷ್ಯರು, ಮನೀಷಗಳು ಯಾರಲ್ಲಿ ಮನನ ಶಕ್ತಿ ಮೂಡಿಲ್ಲವೋ ಅವರಿಗೆ ಮನುಷ್ಯರೆಂಬ ಹೆಸರು ಸಲ್ಲದು… ಪ್ರಜ್ಞಾಲೋಕದಲ್ಲಿ ವಿಹರಿಸಿ ಹಿಗ್ಗಬಲ್ಲವನೇ ಮನುಷ್ಯನು”. ಮನುಷ್ಯತ್ವ (ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ ಚಿಂತನೆಗಳು ಪು. ೨೪)ದ ಅಸ್ತಿತ್ವದ ಸಂಕೇತವಾಗಿ ಪ್ರಜ್ಞಾಪಾತಳಿಯನ್ನು ಹೆಸರಿಸುತ್ತಾರೆ, ಮನುಷ್ಯನ ನಿರ್ವಚನವನ್ನೇ ಮಾರ್ಪಡಿಸುತ್ತಾರೆ. ಅವರ ಪ್ರಕಾರ,

“ನಿಜವಾದ ದೇವರು ಯಾರು” ಇದನ್ನು ನಿರ್ದಿಷ್ಟಪಡಿಸಿ ಅರಿಯುವಾಗ ಐತಿಹಾಸಿಕ ಸ್ವರೂಪದ ಹಾಗೂ ವಿಚಾರವಂತರ ಪ್ರಾಮಾಣಿಕ ಜೀವನಾನುಭಾವಗಳ ಬೆಳಕು ಲಭಿಸಿದಲ್ಲಿ ಇದನ್ನು ಸಂದೇಹಿಸಲು ಅವಕಾಶವೇ ಉಳಿಯಲಾರದು. ಆದರೆ, ಈ ವ್ಯಕ್ತಿಗಳು ಭಾರತೀಯ ಪಡಿಯಚ್ಚಿನ ವ್ಯಾಸ, ಯಾಜ್ಞವಲ್ಕ್ಯ ಪ್ರಭೃತಿಗಳಂಥ ಮಿಥ್ಯಾ (Mythical) ಮಹಾಪುರುಷರಿರ ಕೂಡದು.” (ಬುಧನ ಜಾತಕ, ಪು.೧೮) ಎಂದು ಘಂಟಾಘೋಷವಾಗಿ ಹೇಳಿರುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗುತ್ತದೆ. ಬುದ್ದಿವಾದಿ ಭೂಮಿಕೆಯ (Reason is God) ಪ್ಲೇಟೋ ಹಾಗೂ ಪ್ರಜ್ಞಾವಾದೀ ಅರಿಸ್ಟಾಟಲ್ ಇಬ್ಬರ ವಾದಗಳನ್ನೂ ಅವರು ಬೇರೆ ಬೇರೆ ಕಾರಣಗಳಿಗಾಗಿ ಎತ್ತಿ ಹಿಡಿಯುತ್ತಾರೆ. ಏಕದಂತ ಗಣಪತಿ ಬುದ್ದಿ ಪ್ರಧಾನ ಆರಾಧನಾ ಪದ್ಧತಿ ನಮ್ಮಲ್ಲಿತ್ತು ಎನ್ನುವ ಮರುಪಂಕ್ತಿಯಲ್ಲಿಯೇ ಗ್ರೀಕ್ ಸಂಸ್ಕೃತಿಯಲ್ಲಿ Reason (ಬುದ್ದಿ)ಗೆ ಇರುವಷ್ಟು ಅಗ್ರಪಟ್ಟ ಭಾರತೀಯ ಪೂರ್ವ ಪರಂಪರೆಯಲ್ಲಿ ಅಷ್ಟು ಎದ್ದು ಕಾಣುವಂತೆ ಇಲ್ಲ (ಅದೇ. ಪು.೧೨) ಎಂದೂ ಹೇಳುತ್ತಾರೆ.

ಆ ಬಗೆಗಿನ ವಿವರಗಳನ್ನು ಬದಿಗೆ ಸರಿಸಿದರೆ, ಜೋಶಿಯವರು ಕಂಡ ಭಗವಂತನಿಗೆ ಆಶ್ರಯ ಮನುಷ್ಯ ದೇಹವೇ. ಅದು ಪ್ರಜ್ಞಾ ಪಾತಳಿಯದೇ ಆಗಿರಲಿ, ಮನಸ್ಸಿನ ಭೂಮಿಕೆಯದೇ ಇರಲಿ ಆ ತತ್ವಕ್ಕೆ ತಳಹದಿ ಮತ್ತು ಆರೈಕೆ ದೊರೆಯುವುದು ಮನುಷ್ಯನ ಚಿಂತನಕ್ರಮದ ಒಳಗೆಯೇ. ಪೂರ್ವಾನುಮಾನಗಳನ್ನು ಒತ್ತಟ್ಟಿಗೆ ಇಟ್ಟು ನೋಡಿದಾಗ, ಡಿ.ವಿ.ಜಿ.ಯವರು ಹೇಳುವ “ಪರಿಪೂರ್ಣತ್ವ”ದ ಸಂಕೇತವಾದ ದೇವರಿಗೂ, ಜೋಶಿ ಯವರು ಮಂಡಿಸುವ,

“ಆದಿಕಾರಣ ಎಂಬ ಏನೆಲ್ಲವನ್ನೂ ಮಾಡಿ ಮಾಡಿಸುವ ಈ ಬುದ್ದಿ ಯೋಗದ ದೇವರು ಭಗವಂತನು ಇರುವಂತೆ, ಪ್ರಜ್ಞೆ ಮತ್ತು ಬುದ್ದಿ ಇವರು ಇಬ್ಬರು ದೇವರು ಆಗುತ್ತಾರೆ. ಈ ಇಬ್ಬರಲ್ಲಿ ನಿಜವಾದ ದೇವರು ಯಾರು ಎಂಬ ಪ್ರಶ್ನೆಯು ಏಳುತ್ತದೆ” ಎನ್ನುವ ಸಂದೇಹಕ್ಕೂ ನಿಚ್ಚಳವಾದ ಸಂಬಂಧವಿದ್ದೇ ಇದೆ. “ಎಲ್ಲವನ್ನೂ ಮಾಡಿಸುವವ ಭಗವಂತ ಎನ್ನುವ ನಂಬಿಕೆಯ ಮಗ್ಗುಲಲ್ಲಿ ಎಲ್ಲವನ್ನೂ ಆಗುಮಾಡಿಸುವುದು ಸ್ವಂತದ ಕ್ರತುಶಕ್ತಿ, ಇಚ್ಛಾಶಕ್ತಿ” ಎನ್ನುವ ವಿಶ್ವಾಸವನ್ನು ನಿಲ್ಲಿಸಿದಾಗ ಈ ಜ್ಞಾತಿ ಸಂಬಂಧದ ಸ್ವರೂಪವು ನಿರ್ದಿಷ್ಟ ಆಕೃತಿಯನ್ನು ಪಡೆಯುತ್ತದೆ.

ಪು.ತಿ. ನರಸಿಂಹಾಚಾರ್ ಅವರ ವ್ಯಕ್ತಿತ್ವದಲ್ಲಿ ಸಾಂಪ್ರದಾಯಿಕತೆ ಆಧುನಿಕತೆಗಳ ಹಾಳತ ವಾದ ಪಾಕವನ್ನು ಕಾಣುತ್ತೇವೆ. ಅವರ ಬಾಹ್ಯ ಇರಸರಿಕೆಗೆ ಪರಂಪರೆಯ ವರ್ಚಸ್ಸಿದ್ದರೆ, ಒಳಗಿನ ಮನಸ್ಸು ಪ್ರಯೋಗಶಾಲೆಯೊಳಗಿನ ವಿಜ್ಞಾನಿಯದಾಗಿದೆ. ಈ ಒಳಮನೆಯಲ್ಲಿ ಅವರು ನೂತನತೆಯ ಅನ್ವೇಷಣೆಯಲ್ಲಿ ನಿರತರಾಗುತ್ತಾರೆ. ದೇವರ ಬಗೆಗೆ ಅವರು ಹೇಳುವುದು ಹೀಗೆ :

“ದೇವರ ವಿಷಯದಲ್ಲಿ ನಿತ್ಯಸೃಷ್ಟ ಎನ್ನುವ ವಿಶೇಷಣವು ನನ್ನ ಕಿವಿಗೆ ಎಲ್ಲೋ ಬಿತ್ತು. ಈ ಮಾತು ನನಗೆ ಹಿಡಿಸಿತು. ಅದು ಉಂಟು ಇಲ್ಲ ಎಂಬ ಲಕ್ಷಣದ್ದು. ದೇವರು ಎನ್ನುವ ಭಾವವಾದರೂ ಅಷ್ಟೇ. ಮನಸ್ಸಿಗೆ ತಂದುಕೊಂಡರೆ ಉಂಟು. ಇಲ್ಲದಿದ್ದರೆ ಇಲ್ಲ. ಇವೆಲ್ಲವೂ ನಿತ್ಯವೂ ಸ್ಪಷ್ಟವಾಗಬೇಕಾದಂಥ, ಮೂರ್ತವಾಗಬೇಕಾದಂಥ ಅಮೂರ್ತ ಹೃದಯ ಸ್ಪಂದನಗಳು ಸ್ವಾಂತಸ್ಪೂರ್ಜನಗಳು, ಆತ್ಮಾವಿಷ್ಕರಣಗಳು.” (ದೀಪರೇಖೆ ಪು.೫)

ದೇವರು ಮನುಷ್ಯನ ಮನಸ್ಸಿನ ಸೃಷ್ಟಿಯೆನ್ನುವುದನ್ನು ಇವರೂ ಒಪ್ಪುತ್ತಾರೆ. ಆದರೆ, ಡಿ.ವಿ.ಜಿ. ಮತ್ತು ಜೋಶಿಯವರ ಚಿಂತನಕ್ರಮದಿಂದ ಸ್ವಲ್ಪ ಬೇರೆಯಾಗಿ, ಸ್ವತಂತ್ರ ಕೊಂಡಿ ಯಾಗಿ ನಿಲ್ಲುವ ಗುಣವನ್ನೂ ಕಾಯ್ದುಕೊಳ್ಳುತ್ತಾರೆ. ಪು.ತಿ.ನ. ಅವರಿಗೆ ಪ್ರಾಕೃತಿಕವಾದ ಗಾಳಿ, ನೀರು ಇತ್ಯಾದಿ ಚೈತನ್ಯದಾಯಿಗಳಾದ ಶಕ್ತಿಗಳೆಲ್ಲವೂ ಭಗವಂತ ಸ್ವರೂಪದವುಗಳಾಗಿ ಕಾಣುತ್ತವೆ. ಇವುಗಳೊಂದಿಗೆ “ಮಹಾಮೌಲ್ಯಾನುಯಾಯಿಗಳಾಗಿ ಮಹತ್ಕಾರ್ಯದಲ್ಲಿ ತೊಡಗಿದ್ದ ಮಹಾತ್ಮ”ರನ್ನೂ ಅವರು ಪರಿಗಣಿಸುತ್ತಾರೆನ್ನುವುದು ತುಂಬ ಮಹತ್ವದ ಮಾತಾ ಗುತ್ತದೆ. ಈ ದೃಷ್ಟಿಯಿಂದ ಅವರು ಈವರೆಗೆ ಪ್ರಸ್ತಾಪಿಸಿದ ದೇವರ ಬಗೆಗಿನ ವಿಚಾರಗಳ ಗೊಣಸಾಗಿ ನಿಲ್ಲುತ್ತಾರೆ. ಡಿ.ವಿ.ಜಿ.ಯವರಲ್ಲಿ ‘ಪರಿಪೂರ್ಣ ತತ್ವ’ವೇ ಪರಮಾತ್ಮನಾದರೆ, ಇಲ್ಲಿ ಮೌಲ್ಯಸಾಂಗತ್ಯದಿಂದ ಸಿದ್ದಿಸಿದ ಮಹಾತ್ಮತ್ವದಲ್ಲಿ ಭಗವಂತ ಕಾಣಿಸುತ್ತಾನೆ.

ಹಾಗೆ ನೋಡಿದರೆ, ಪ್ರತಿ ಪ್ರಜ್ಞಾವಂತನೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ, ತನ್ನ ಸೃಷ್ಟಿಯ ಉದ್ದೇಶ, ಈ ‘ವ್ಯಕ್ತಿಮಧ್ಯ’ವಾಗಿರುವ ಜೀವನದ ಲಕ್ಷಣ ಸ್ವರೂಪಗಳು, ಜೀವಯಾನದುದ್ದಕ್ಕೂ ಗಳಿಸಿದ ಸ್ಮರಣಾನುಭವಗಳೆಲ್ಲ ಎವೆಮಿಟುಕಿಸುವಷ್ಟರಲ್ಲಿ ಮಾಯ ವಾಗುವ ವೈಚಿತ್ರ್ಯಗಳಿಂದಾಗಿ ಸಂವೇದನೆಗಳಿಗೆ ಒಳಗಾದವನೇ ಹಾಗೆ ಅಂತಮುರ್ಖಿಯಾಗುವ ಚಿತ್ತ ವ್ಯಾಕುಲಗೊಳ್ಳುವ ಸಹಜ ಪ್ರತಿಕ್ರಿಯೆಯನ್ನು ಅನುಭವಿಸಿದವನೇ ಆಗಿರುತ್ತಾನೆ. ಈ ಅಂಶವನ್ನು ಪು.ತಿ.ನ. ಅವರು ಗುರುತಿಸುವ ಕ್ರಮ ಹೀಗಿದೆ :

“ಈ ಜಗತ್ತಿನ ವಿಷಯದಲ್ಲಿ ಯಾವುದು ಹೃದಯಕ್ಕೆ ಮುಟ್ಟಿ, ಅರಿವಿಗೆ ಎಟಕದೋ ಆ ವಿಸ್ಮಯಭಾವ. ಬುದ್ದಿಯ ಬೆಳಕಿನ ಅಂಚಿನಲ್ಲಿರುವ ಮೋಹಕವೂ, ಅಜೇಯವೂ ಆದ ಕತ್ತಲು, ದಿವ್ಯ ವ್ಯಾಕುಲತೆ ಅದೇ ದೇವರು” (ಅದೇ. ಪು.೬)

ಎಂದರೆ, ಜೀವನದ ಕೊನೆಗೆ ಕಾದಿರುವ ಮೃತ್ಯುರೂಪವಾದ ಕತ್ತಲೆಯೇ ಸರ್ವಶಕ್ತ ವಾದುದು, ನಿರ್ಣಾಯಕವಾದುದು ಎನ್ನುವ ಸೂಕ್ಷ್ಮಧ್ವನಿ ಇಲ್ಲಿ ಕಾಣುತ್ತದೆ. “ಪ್ರಾಣವು (ಅರ್ಥಾತ್ ಬುದ್ದಿಯು ಆಶ್ರಯಿಸುವ ನೆಲೆಯು ಕತ್ತಲಲ್ಲೇ ಇರಬೇಕಾದ ವಿಶ್ವನಿಯಮವನ್ನು ಯಾರೂ ಮೀರಲಾರರು. ಆದಕಾರಣ ಕತ್ತಲೆಯ ಅಂಗವಾದ ‘ಬುದ್ದಿಗುಣ’ ಕತ್ತಲನ್ನೆ ನಿರ್ಮಿಸಬಲ್ಲುದು. (ಬುದ್ಧನ ಜಾತಕ, ಪು. ೨೫) ಎನ್ನುವ ಶಂಬಾ ಅವರ ನಿಲುವಿಗೂ ಸಾಮೀಪ್ಯ ಕಾಣಿಸುವುದಿಲ್ಲವೇ?

ಡಿ.ವಿ.ಜಿ.ಯವರಾದರೂ ಈ ಮೂಲವಸ್ತುವನ್ನೇ ಪ್ರತ್ಯೇಕ ಸಂಸ್ಕಾರಕ್ಕೆ ಒಳಪಡಿಸಿದ್ದಾರೆ. ಅವರ ಪ್ರಕಾರ, “ಮನುಷ್ಯನಿಗೆ ಪೂರ್ಣತ್ವದ ಅರಿವಿದೆ, ಅದನ್ನು ಸಾಧಿಸಬೇಕೆನ್ನುವ ಹಂಬಲವೂ ಇದೆ. ಆದರೆ ಅದರ ಪೂರ್ಣ ಪ್ರಮಾಣದ ಶಿಲ್ಪವನ್ನು ಕಣ್ಣಮುಂದೆ ತಂದು ಕೊಳ್ಳುವುದು ಅವನಿಂದಾಗುತ್ತಿಲ್ಲ. ಹೀಗೆ, ಅಜ್ಞಾತವಾಗಿ ಉಳಿದುದನ್ನು ಆತ ಭಗವಂತನಲ್ಲಿ ಕಲ್ಪಿಸಿಕೊಂಡ ಈ ವಿದ್ವಾಂಸರ ಚಿಂತನಗತಿಯನ್ನು ಅನುಸರಿಸಿಕೊಂಡು ಹೋದಂತೆಲ್ಲ, ಅವರು ಆಗಾಗ ಬೇರೆ ಬೇರೆ ಕವಲುಗಳನ್ನು ಹಿಡಿದರೂ, ಮತ್ತೆ ಒಂದಾಗಿ ಪರಸ್ಪರ ವಿನಿಮಯಗಳಲ್ಲಿ ತೊಡಗಿಕೊಳ್ಳುತ್ತಾರೆನ್ನುವುದು ಸ್ಥಿರಪಡುತ್ತದೆ.”

‘ಭಗವದ್ಗೀತೆ’ಯನ್ನು ಅದರ ಧಾರ್ಮಿಕ ಪರ್ಯಾವರಣದಿಂದಾಚೆಗೆ ಸರಿಸಿ, ಸ್ವಸ್ಥ ಜೀವನದ ಮಾರ್ಗದರ್ಶಿಯಾಗಿ ಅದನ್ನು ಪರಿಗ್ರಹಿಸಿದವರು, ಎ.ಎನ್. ಮೂರ್ತಿರಾಯರು ಅವರ ವ್ಯಕ್ತಿತ್ವದ ಸೊಬಗೆಲ್ಲ ಅಡಗಿರುವುದು ಮನುಕುಲದ ಬಗೆಗಿನ ನಿರ್ಮಲವಾದ ಅವರ ಪ್ರೀತಿಯಲ್ಲಿ, ಜೀವನಾಸಕ್ತಿಯಲ್ಲಿ, ತಿಳಿಯಾದ ಅಂತಃಕರಣದಲ್ಲಿ, ಒಂಭತ್ತು ದಶಕಗಳಷ್ಟು ದೀರ್ಘವಾದ, ಮಾಗಿದ ಸ್ಥಿತಿಯಲ್ಲಿ ದೇವರ ಬಗೆಗಿನ ಅನಿಸಿಕೆಗಳನ್ನು ಅವರು ತಮ್ಮ ‘ದೇವರು’ ಕೃತಿಯಲ್ಲಿ ಪ್ರಕಟಿಸಿದರು. (೧೯೯೦) ಇದು ಡಿ.ವಿ.ಜಿ.ಯವರ ‘ದೇವರು’ ಪುಸ್ತಿಕೆಗೆ ವೈಚಾರಿಕ ಪ್ರತಿಕ್ರಿಯೆ ಎನ್ನುವುದನ್ನೂ ಅವರೇ ಸೂಚಿಸಿದ್ದಾರೆ.

ಮೂರ್ತಿರಾಯರು ದೇವರು, ಮತ, ಧರ್ಮ, ಆಸ್ತಿಕತೆ ಮುಂತಾದವುಗಳನ್ನು ವಸ್ತುಸತ್ಯದ ನೆಲೆಯಲ್ಲಿಯೇ ಗ್ರಹಿಸುತ್ತ ಹೋಗುತ್ತಾರೆ. ಅವರ ಪ್ರಕಾರ, ಅಂತರಂಗದ ಶುದ್ದೀಕರಣಕ್ಕಾಗಿ ಬಳಕೆಯಾಗುವ ಜೀವದ ಉತ್ಕರ್ಷದಲ್ಲಿ ಪರ್ಯವಸಾನಗೊಳ್ಳುವ ಸಮಸ್ತವೂ ದೇವರೇ ಆಗಿವೆ. ಅವುಗಳೆಲ್ಲವೂ ಅಮೂರ್ತವಾದವುಗಳೆನ್ನುತ್ತಾ ಅವರು,

“ಮತಧರ್ಮದ ತತ್ವಗಳಲ್ಲಿ ಮತ್ತು ದೇವರು ಎಂಬ ಕಲ್ಪನೆಯಲ್ಲಿ ಅಡಕವಾಗಿರುವ ನೀತಿ (Ethics) ಮುಖ್ಯ. ಲೋಕಹಿತದ ದೃಷ್ಟಿಯಿಂದ ನಮ್ಮ ಬದುಕು ಹೇಗೆ ಸಾಗಬೇಕು ಎಂಬುದನ್ನು ಸ್ಪಷ್ಟಪಡಿಸುವ ನೀತಿಯನ್ನು ರೂಪಿಸಿಕೊಂಡು ಅದರಂತೆ ನಡೆದುಕೊಂಡರೆ ಸಾಕು.” (ದೇವರು ಪು.೧೭೪) ಎನ್ನುವ ಅಭಿಪ್ರಾಯವನ್ನು ಮುಂದಿಡುತ್ತಾರೆ.

‘ದೇವರು’ ಮನುಷ್ಯನ ಕಲ್ಪನೆಯ ಕೂಸು ಎನ್ನುವುದು ಅವರ ದೃಢವಾದ ನಂಬಿಕೆ ಡಿ.ವಿ.ಜಿ.ಯವರೊಂದಿಗೆ ತಮಗಾದ ಮುಖಾಮುಖಿಯ ಬಗೆಗೂ ಅವರು ‘ದೇವರು’ ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಆ ಭಾಗ ಹೀಗಿದೆ :

“ನೀವು ವಿಶ್ವದಲ್ಲಿ ಸೌಂದರ್ಯವಿದೆ ಎಂದು ಒಪ್ಪುತ್ತೀರೋ ಮೌಲ್ಯಗಳನ್ನು ಒಪ್ಪುತ್ತೀರೋ… ಒಪ್ಪುತ್ತೀರಾದ್ದರಿಂದ ನೀವು ನಿರೀಶ್ವರವಾದಿಯಲ್ಲ ಈ ಮಾತು ಚರ್ಚೆಗೆ ಗ್ರಾಸವಾಯಿತು. ಡಿ.ವಿ.ಜಿ.ಯವರ ಮಾತಿನಲ್ಲಿ ಮೌಲ್ಯಗಳು, ದೇವರು ಸೌಂದರ್ಯವೇ ಪರಮಸೌಂದರ್ಯದ ಕಲ್ಪನೆಯಲ್ಲಿ ಮೌಲ್ಯಗಳು ಸೇರಲೇಬೇಕು. ದೇವರು ಎಂಬ ಕಲ್ಪನೆಯೂ ಆಗಾಗ ಸುಳಿಯುತ್ತಿತ್ತು. ನಾನು ಈಶ್ವರ ಎಂಬ ವ್ಯಕ್ತಿಯಲ್ಲಿ ನಂಬಿಕೆಯಿಲ್ಲ ದವನಾದರೂ ಉಳಿದಂತೆ ಅವರ ಮಾತುಗಳಲ್ಲಿ ಬಹುಭಾಗವನ್ನು ಒಪ್ಪಿದೆ” (ಅದೇ. ಮುನ್ನುಡಿ).

ಮೂರ್ತಿಪೂಜೆಯ ಬಗೆಗಿನ ಡಿ.ವಿ.ಜಿ.ಯವರ ನಿಲುವನ್ನು ಈಗಾಗಲೇ ಪ್ರಸ್ತಾಪಿ ಸಲಾಗಿದೆ. ಧಾರ್ಮಿಕ ಆಚರಣೆಗಳಿರಲಿ, ದೇವರ ಮೇಲಿನ ಶ್ರದ್ಧಾಭಕ್ತಿಗಳಿರಲಿ, ಆತ್ಯಂತಿಕವಾಗಿ ಬದುಕನ್ನು ಚೆಲುವಾಗಿಸುವುದಕ್ಕೆ ವಿನಿಯೋಗವಾಗುವುದಾದರೆ, ಅವುಗಳಲ್ಲಿ ಕೇಡೇನಿಲ್ಲ ಎನ್ನುವುದು ಅವರ ವಿಶ್ವಾಸ. ಈ ಮಟ್ಟಿಗೆ, ನಿರೀಶ್ವರವಾದವನ್ನು ಮುಂದಿಡುವ ಮೂರ್ತಿ ರಾಯನೂ ಈಶ್ವರ ತತ್ವವನ್ನು ನಂಬುವ ಡಿ.ವಿ.ಜಿ.ಯವರೂ ಹೊರ ಹೊದಿಕೆಗಳ ಸಂದರ್ಭದಲ್ಲಿ ಭಿನ್ನರಾಗುತ್ತಾರೆಯೇ ಹೊರತಾಗಿ ಒಳಗಿನ ಹೂರಣಗಳಲ್ಲಲ್ಲ.

ಇನ್ನೊಂದು ಮಗ್ಗುಲಿನಿಂದ ಮನಃಶಕ್ತಿಯ ಪಾರಮ್ಯವನ್ನು ನಂಬುವ ಶಂಬಾ ಜೋಶಿ ಯವರ ನಿಲುವಿಗೂ ಮೂರ್ತಿರಾಯರು ಸಮೀಪಸ್ಥರಾಗುತ್ತಾರೆ. ‘ಬ್ರಹ್ಮ’ ಪರಿಕಲ್ಪನೆಯನ್ನು ವಿಶದಪಡಿಸಲು ಪ್ರಯತ್ನಿಸುವ ಮೂರ್ತಿರಾಯರ ಮಾತುಗಳಲ್ಲಿ ಈ ಸಮಾನಾಂತರ ಪರಿಚಲನೆಯು ಸ್ಪಷ್ಟವಾಗಿ ಕಾಣಿಸುತ್ತದೆ.

“ನಮ್ಮ ಬ್ರಹ್ಮ ವಾಸ್ತವಿಕ, ಅಧ್ಯಯನದಿಂದ, ಆಲೋಚನೆಯಿಂದ ಅನುಮಾನ (Inference)ದಿಂದ ಅದನ್ನು ತಿಳಿಯುವುದು ಸಾಧ್ಯ. ಬ್ರಹ್ಮದ ಮಾನವಭಾಗದಲ್ಲಿ ಮನಶ್ಶಕ್ತಿ ಬೆಳೆದಿದೆ. ಅದನ್ನು ಬಳಸಿಕೊಂಡು ನಾವು ತಯಾರಿಸಿರುವ ಟೆಲಿಸ್ಕೋಪು, ಮೈಕ್ರೋಸ್ಕೋಪು ಅಳತೆಗೆ ಬೇಕಾದ ಸಾಮಗ್ರಿ ರಾಕೆಟ್‌ನಂಥ ಸಂಚಾರಕ್ಕೆ ಬೇಕಾದ ಸಾಧನಗಳು -ಇವುಗಳ ಮೂಲಕ ಈಗಾಗಲೆ ಎಷ್ಟೇ ಬ್ರಹ್ಮಜ್ಞಾನ ಪಡೆದಿದ್ದೇವೆ.”

(ದೇವರು ಪು. ೧೧೪-೫) ಶಂಬಾ ಜೋಶಿಯವರು ಮನ್ನಿಸುವ ಮಾಡುವ, ಮಾಡಿಸುವ ಇಚ್ಛಾಶಕ್ತಿಯನ್ನೇ ಇವರೂ ಬ್ರಹ್ಮಸ್ವರೂಪವಾಗಿ ಗುರುತಿಸುತ್ತಾರೆನ್ನುವುದು ಗಮನಾರ್ಹ ವಾಗಿದೆ.

ತಮ್ಮನ್ನು ತಾವೇ ‘ಅನಾಸ್ತಿಕ’ರೆಂದು ಕರೆದುಕೊಳ್ಳುತ್ತಿದ್ದ ಶಿವರಾಮ ಕಾರಂತರು ದೇವರ ಅಸ್ತಿತ್ವದ ಪ್ರಶ್ನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದವರಲ್ಲ. ಅದು ಉಪೇಕ್ಷೆ ಅಥವಾ ಅವಜ್ಞೆಯಲ್ಲ. ಆಸಕ್ತಿಯ ಇತರ ಅನೇಕ ಕ್ಷೇತ್ರಗಳಿವೆಯಲ್ಲ ಎನ್ನುವ ನಿರಾಸಕ್ತಿ ಆದರೂ ತರ್ಕಕ್ಕೆ ನಿಲುಕದ ಶಕ್ತಿಯೊಂದರ ಅಸ್ತಿತ್ವವನ್ನು ಅವರು ನಿಸ್ಸಂದಿಗ್ಧವಾಗಿ ಒಪ್ಪಿಕೊಂಡಿದ್ದರು.

“(ಈ ಪ್ರಪಂಚದಲ್ಲಿ) ಜೀವಿಸುವ ಹಕ್ಕು ಕ್ರಿಮಿಕೀಟಗಳಿಂದ ಹಿಡಿದು ಮನುಷ್ಯ ಪ್ರಾಣಿಯ ತನಕ ಎಲ್ಲರಿಗೂ ಇದೆ. ನಮ್ಮೆಲ್ಲರನ್ನೂ ಸೃಷ್ಟಿಸಿದ್ದು ಅದಾವುದೋ ಒಂದು ಶಕ್ತಿ. ನಮ್ಮ ಇಚ್ಛೆಗಳು ನಮಗೆ ತಿಳಿದಿದ್ದರೂ ಅದರ ಇಚ್ಛೆಯೇನೆಂದು ತಿಳಿದಿದ್ದೇವೆಂಬುದು ಜಂಭದ ಮಾತು. ಆ ಜಂಭವನ್ನು ಬಿಟ್ಟು ಬಾಳಬೇಕು. ಮನುಷ್ಯ ಕುಲದ ಹಿತಕ್ಕಾಗಿ ಮಾತ್ರವಲ್ಲ, ಎಲ್ಲ ಜೀವಿಗಳ ಹಿತಕ್ಕಾಗಿಯೂ ಬಾಳುವ ರೀತಿಯನ್ನು ಕಲಿತರೆ, ಆಗ ನಾವು ನಾಗರಿಕತೆಯ ಹೊಸ್ತಿಲನ್ನು ದಾಟಿದ ಮನುಷ್ಯರೆನಿಸುತ್ತೇವೆ.”

ಇದು ಆ ಅಗೋಚರ ಶಕ್ತಿ ವಿಶೇಷಕ್ಕೆ ನಮನಗಳನ್ನು ಸಲ್ಲಿಸುತ್ತ, ಪರಿಸರ ಸ್ನೇಹಿಯಾಗಿ ಬದುಕುವುದೇ, ತನ್ನ ಸುತ್ತಿಗೆ ಸುಖ ಕೊಡುವಂತೆ ನಡೆದುಕೊಳ್ಳುವುದನ್ನೇ ಆ ಗೌರವದ ಪ್ರತೀಕವೆಂದುಕೊಳ್ಳುವ ಕಾರಂತರ ಕ್ರಮ ಅವರ ದೃಷ್ಟಿಯಲ್ಲಿ ದೈವಭಕ್ತಿಯೆನ್ನುವುದು ವ್ಯಕ್ತಿಗತವಾದ ಶ್ರದ್ಧಾಸಕ್ತಿಗಳಿಗೆ ಸಂಬಂಧಿಸಿದ ಮಾತಾಗಿದೆ. ಅವರ ತಕರಾರುಗಳಿರುವುದು, ಭಾವುಕವಲಯದಲ್ಲಿ ಉಳಿಯಬೇಕಾದ ಈ ನಂಬಿಕೆಗಳು ವೈಚಾರಿಕ ಸೀಮೆಯೊಳಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿಯ ಶಾಂತಿಗೆ, ವೈಚಾರಿಕ ಸಿದ್ಧಾಂತಗಳೊಳಗಿನ ಸಾಹಚರ್ಯ ಸಂಘರ್ಷಗಳಿಗೆ ತಡೆಗೋಡೆಗಳಾಗುತ್ತಿರುವುದಕ್ಕೆ ಮಾತ್ರವೇ.

ಈ ಮಿತಿಯ ಗಂಭೀರ ಪರಿಣಾಮಗಳನ್ನೂ ಕಾರಂತರು ಲಕ್ಷಿಸುತ್ತಾರೆ. ಭಾರತದ ಸಂದರ್ಭದಲ್ಲಿ ವಿಚಾರ ಸಾಹಿತ್ಯವಾಗಲಿ, ದರ್ಶನ ಸಾಹಿತ್ಯವಾಗಲಿ ತಮ್ಮ ಬೆಳವಣಿಗೆಗಳನ್ನು ನಿಲ್ಲಿಸಿಬಿಟ್ಟಿದ್ದನ್ನೂ ಈ ಹಿನ್ನೆಲೆಯಲ್ಲಿಟ್ಟು ನೋಡುತ್ತಾರೆ.

“ನಮ್ಮ ಪಾಲಿನ ಕಷ್ಟವೆಂದರೆ, ಯಾವ ಶಾಸ್ತ್ರವೇ ಇರಲಿ, ಆ ವಿಷಯದಲ್ಲಿ ಕಟ್ಟ ಕೊನೆಯ ತೀರ್ಮಾನವನ್ನು ನಮ್ಮ ಹಿಂದಣ ಅಚಾರ್ಯರೂ ಹೇಳಿಬಿಟ್ಟಿದ್ದಾರೆ ಎಂಬ ಗಾಢನಂಬಿಕೆ ಅವರು ಹೇಳಿದ್ದನ್ನು ಪ್ರಶ್ನಿಸುವ, ಇಲ್ಲವೆ ಅದೇ ವಿಚಾರ ಸರಣಿಯನ್ನು ಬೆಳೆಯಿಸಿಕೊಳ್ಳುವ ಅವಶ್ಯಕತೆಯೆ ನಮಗಿಲ್ಲವೆನ್ನುವ ದೃಷ್ಟಿ. ನಾವು ಒಪ್ಪಿ ಬಂದುದಕ್ಕಿಂತಲೂ ಭಿನ್ನವಾಗಿರುವ, ಅನ್ಯ ವಿಚಾರ ಪ್ರಣಾಲಿಗಳನ್ನು ಕೇವಲ ಕುತೂಹಲಕ್ಕಾಗಿ ಸಂಶಯ ದೃಷ್ಟಿಯಿಂದಲೇ ಓದುತ್ತಾರೆಯೇ (ಈಗ ಓದುವುದೂ ಇಲ್ಲ) ಹೊರತು, ತಮ್ಮ ಮನಸ್ಸಿನ ಕೋಣೆಯೊಳಕ್ಕೆ ಅನ್ಯರ ವಿಚಾರ ಗಾಳಿ ಬೀಸದಂತೆ ಕದವಿಕ್ಕಿಕೊಂಡು ಕುಳಿತಿರುತ್ತಾರೆ. ಈ ರೀತಿ ಅಂಧಶ್ರದ್ಧೆಯಿರುವ ಯಾವ ಕ್ಷೇತ್ರದಲ್ಲೂ ವಿಚಾರ ಸಾಹಿತ್ಯ ಬೆಳೆಯಬೇಕಾದರೂ ಹೇಗೆ? (ಬಿಡಿ ಬರೆಹಗಳು. ಪು.೮೧)

ಎನ್ನುವ ಅವರ ಪ್ರಶ್ನೆಯು ಅವಗಾಹನೆಗೆ ಯೋಗ್ಯವಾಗಿದೆ. ಅವರು ಕಂಡಂತೆ, ಧಾರ್ಮಿಕ ನಂಬಿಕೆಯ ವರ್ತುಲವೇ ಬೇರೆ, ಬೌದ್ದಿಕ ಕುತೂಹಲದ ವ್ಯಾಪ್ತಿಯೇ ಬೇರೆ ಎನ್ನುವುದು ಸ್ವೀಕಾರಾರ್ಹವಾದಾಗ, ಅನೇಕ ಅನಗತ್ಯ ಗೊಂದಲಗಳು ತಮಗೆ ತಾವೇ ಪರಿಹಾರದೆಡೆಗೆ ತಲುಪಬಲ್ಲವು.

ಹೊಸ ಕನ್ನಡದ ಕರ್ಪೂರದಾರತಿಗಳಾಗಿ, ಒಂದಿಷ್ಟೂ ಕರಕನ್ನು ಉಳಿಸದೆ, ಪರಿಸರಕ್ಕೆ ಕಂಪು ತುಂಬಿ, ಅಕ್ಷರ ಲೋಕಕ್ಕೆ ಸೇರಿದ ಹಿರಿಯರ ಸಾಲಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರದು ತುಂಬ ಮೇಲಿನ ಸ್ಥಾನವಾಗಿದೆ. ಒಳಹೊರಗುಗಳೆರಡನ್ನೂ ಶುದ್ಧವಾಗಿಟ್ಟು ಕೊಂಡ ತಮ್ಮ ಅಪೂರ್ವ ವ್ಯಕ್ತಿತ್ವದ ಎಲ್ಲ ಉಳಿಕೆ ಗಳಿಕೆಗಳನ್ನು ದೇವರಿಗೆ ಅರ್ಪಿಸಿದವರು ಅವರು. ದೈವ ಕೃಪೆ ಅವಕೃಪೆಗಳೆರಡಕ್ಕೂ ಬಲವಾದ ಕಾರಣಗಳಿರಬೇಕೆಂದು ನಂಬುವ ಅವರು ಅಲ್ಲಿ ತಾರ್ಕಿಕ ಸುಸಂಬದ್ಧತೆಯನ್ನು ಹುಡುಕುವುದಿಲ್ಲ. ಬದಲಿಗೆ ಇದು ಮನುಷ್ಯನ ಬುದ್ದಿಯ ಪರಿಧಿ. ಈ ಮಿತದ ಕಾರಣದಿಂದ ಕೆಲವು ಸಂಗತಿ ನಮಗೆ ನಿಲುಕದೆ ನಿಲ್ಲುತ್ತವೆ ಎಂದು ವಿನಯವನ್ನೇ ಅವಲಂಬಿಸುತ್ತಾರೆ.

ಒಂದು ದೃಷ್ಟಿಯಿಂದ, ಉಳಿದ ವಿಚಾರವಂತರಿಂದ ಮಾಸ್ತಿಯವರು ಭಿನ್ನರೆನಿಸುತ್ತಾರೆ. ಅವರೆಲ್ಲರಿಗೆ ‘ದೇವರು’ ಅಧ್ಯಯನ ವಸ್ತುವಾದಂತೆ, ಮಾಸ್ತಿಯವರಿಗೆ ಆಗುವುದಿಲ್ಲ. ಮಾಸ್ತಿಯವರಲ್ಲಿರುವುದು ಅಸೀಮವಾದ, ಸೋಲು ಸವಾಲುಗಳಿಂದ ಅದುರದ ನಿಶ್ಚಲವಾದ ದೇವರ ಮೇಲಿನ ನಂಬಿಕೆ ಮತ್ತು ನಂಬಿಕೆ ಮಾತ್ರವೇ. ಆ ಕಾಣದ ಕೈಯ ಕೈವಾಡವನ್ನು ಅವರ ಬುದ್ದಿ ಭಾವಗಳೆರಡೂ ಒಪ್ಪಿಕೊಂಡಿವೆ. ಹಾಗೆ ನೋಡಿದರೆ, ಇಷ್ಟು ಆಳವಾಗಿ ಬೇರುಬಿಟ್ಟ ಯಾವುದೇ ವಿಶ್ವಾಸ, ಭರವಸೆ, ನಂಬುಗೆಗಳ ಬುಡ ಯಾವುದೇ ಕಾರಣಕ್ಕೂ ಸಡಿಲಾಗುವುದಿಲ್ಲ. ಇದರ ಇನ್ನೊಂದು ಬದಿಯಲ್ಲಿ, ಅಂಥ ನಂಬಿಕೆಯ ವಸ್ತು ಯಾವತ್ತೂ ವಿಚಾರಗಳಿಗೆ ಒಡ್ಡಿಕೊಳ್ಳದೆ ಸುರಕ್ಷಿತವಾಗಿರುತ್ತದೆ. ಇದರ ಒಳಿತು ಕೆಡಕುಗಳ ಜಿಜ್ಞಾಸೆ ಪ್ರಸ್ತುತ ಲಕ್ಷ್ಯವಲ್ಲ. ದೇವರ ಬಗೆಗಿನ ಅವರ ನಿಲುವು ಹೀಗಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳುವುದಷ್ಟೇ ಅಭ್ಯಾಸದ ಕೆಲಸ.

ಮಾಸ್ತಿಯವರು ಕಂಡ ‘ದೇವರು’ ಅನುಭಾವದಂಚಿಗೆ ಅವರನ್ನು ಒಯ್ದ ಶಕ್ತಿಯೇ ಆಗಿದೆ. ಜೀವನದ ಸಂಧ್ಯಾಕಾಲದಲ್ಲಿ ಅವರು ತಮ್ಮ ಅನುಭವಗಳನ್ನು ಹೀಗೆ ನಿರೂಪಿ ಸುತ್ತಾರೆ.

“ಒಮ್ಮೆ ಮೈಯಲ್ಲಿ ಅಸ್ವಸ್ಥವಾಗಿ ಮಲಗಿದ ದಿನ, ದೇವರು ಎಲ್ಲೆಲ್ಲೂ ಇದ್ದಾನೆ ಎಂಬ ಭಾವ ಒಂದು ಕ್ಷಣ ಜೀವವನ್ನು ಮುಟ್ಟಿ, ಎದುರಿದ್ದ ಗೋಡೆ, ಬಾಗಿಲು ಅದರಲ್ಲಿ ದೇವರು ಇದ್ದಾನೆ ಕಾಣುತ್ತಿಲ್ಲ. ಅಷ್ಟೆ, ಎಂದು ಅರಿವಾಯಿತು. ಅನುಭವ ಮತ್ತೆ ಮರೆಯಿತು. ಮತ್ತೆ ಒಮ್ಮೆ ದೇವರು ಸುತ್ತ ನನ್ನನ್ನು ಸುತ್ತಿಕೊಂಡಿದ್ದಾರೆ. ನಾನು ಅವರೊಳಗೆ ಇದ್ದೇನೆ, ತಾಯಿ ಗರ್ಭದಲ್ಲಿ ಮಗು ಇರುವಂತೆ ಎಂದು ಅನುಭವ ಆಯಿತು. ಜೀವ ಸುಖಪಟ್ಟಿತು. ಇದೂ ಅಷ್ಟೆ ಒಂದು ಕ್ಷಣದ ಅನುಭವ…. (ಈ ವೇಳೆಗೆ) ದೈವ ಒಂದು ಕ್ಷಣ ಬಿಡದೆ ನನ್ನ ಬಾಳನ್ನು ಕೈಯಲ್ಲಿ ಹಿಡಿದು ನಡೆಸುತ್ತಿದೆ ಎಂಬ ಭಾವ ಬಹುಪಾಲು ನಿಜವಾಗಿತ್ತು.” (ಭಾವ-೩, ಪು.೪೯೬-೭)

ಇಲ್ಲಿ ಒಂದಂಶವು ಗಮನಾರ್ಹವಾಗಿದೆ. ಮಾಸ್ತಿಯವರಿಗೆ ದೇವರು ಅನುಭವಕ್ಕೆ ಮಾತ್ರ ಸಿಕ್ಕುವ ಪರಿಕಲ್ಪನೆ, ವ್ಯಕ್ತಿನಿಷ್ಠವಾದ ಭಾವ ತೀವ್ರತೆ. ಹಾಗಾಗಿ ಉಳಿದವರಂತೆ ಅವರು ಅದರಿಂದ ಪ್ರತ್ಯೇಕವಾಗಿ ನಿಂತು”, ದೇವರೆಂದರೆ ಇದು ಅದು ಅಥವಾ ಹಾಗೆ-ಹೀಗೆ ಎಂದು ವಿಶ್ಲೇಷಿಸಲಾರರು. ಈ ವಿಚಾರವು ಅವರು ಆಗಾಗ ಬಳಸುವ, “ನಾನು ನಂಬಿದ ದೈವ” ಅರ್ಥದ ಮಾತುಗಳಲ್ಲಿ ಸುಸ್ಪಷ್ಟವಾಗುತ್ತದೆ. ಆ ನೆಲೆಯಿಂದ ಇವರ ಮಾರ್ಗ ಪ್ರತ್ಯೇಕ ವೆನಿಸುತ್ತದೆ.

ಹೀಗೆ, ‘ದೇವರು’ ಎನ್ನುವ ತೀರಾ ಅಮೂರ್ತವಾದ, ಅಸ್ಪಷ್ಟವಾದ ಆದರೆ ಇಡಿಯ ಜಗತ್ತಿನ ಎಲ್ಲ ಜನಾಂಗಗಳಿಗೂ ಸಮಾನವಾಗಿರುವ ಪರಿಕಲ್ಪನೆಯೊಂದನ್ನು ನಮ್ಮ ಬರೆಹಗಾರರು ನಾನಾ ದಿಕ್ಕುಗಳಿಂದ ನೋಡುವ ಪ್ರಯತ್ನಗಳನ್ನು ಮಾಡಿದ್ದಾರೆ. ಈ ವಿವೇಚನೆಯನ್ನು ನಡೆಸಿದ ಕನ್ನಡ ಜಿಜ್ಞಾಸುಗಳು, ಭಾರತೀಯ ಸಂದರ್ಭದಲ್ಲಿ ದೇವರು ಕಲ್ಪನೆಯ ಉಗಮ, ವಿಕಾಸ, ಸ್ಥಿತ್ಯಂತರಗಳಂಥ ಚಾರಿತ್ರಿಕ ಅಂಶಗಳಿಂದ ತೊಡಗಿ, ದೇವರೆಂಬುದು ಇದೆಯೇ ಇಲ್ಲವೋ ಎನ್ನುವ ಸೈದ್ಧಾಂತಿಕ ನಿಲ್ದಾಣಗಳನ್ನು ಹಾದು ಹೋಗುತ್ತ, ಈ ದೇವರ ಸ್ವರೂಪ, ಸ್ಥಾನ, ವಿನ್ಯಾಸಗಳ ಬಗೆಗಿನ ವೈಚಾರಿಕ ಆಧ್ಯಾತ್ಮಿಕ ಚೌಕಟ್ಟುಗಳನ್ನು ಹುಡುಕುವ ದೀರ್ಘಕಾಲೀನ ಅನ್ವೇಷಣೆಗಳಿಗೆ ಹೊರಟಿದ್ದಾರೆ. ಈ ಜಟಿಲ ನೆಯ್ಗೆಯ ಸಿಕ್ಕುಗಳನ್ನು ಬಿಡಿಸಲೆತ್ನಿಸಿದಷ್ಟು ಅವು ಕಗ್ಗಂಟುಗಳಾಗುತ್ತವೆನ್ನುವುದು ನಮ್ಮೆಲ್ಲರ ಸಾಮಾನ್ಯ ಅನುಭವವಾಗಿದೆ.

ಸದ್ಯಕಾಲೀನ ಬದುಕನ್ನು ಹತ್ತಿರದಿಂದ ಗಮನಿಸಿದರೆ ಸಾಹಿತ್ಯದ ಸಂದರ್ಭಗಳನ್ನು ಅವಲೋಕಿಸಿದಾಗ ಬೆಳೆಯುತ್ತಿರುವ ಅಸ್ವಾಸ್ಥ್ಯ, ಅಶಾಂತಿ, ಚಡಪಡಿಕೆ, ಗೊಂದಲಗಳು ಆತಂಕವನ್ನು ಹುಟ್ಟಿಸುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಮನಸ್ಸಿಗೆ ಅದರ ಸಹಜ ಸ್ವಭಾವವಾದ ಶಾಂತಿಯನ್ನು ಪ್ರಸಾದಿಸುವ ಎಲ್ಲ ಪರಿಕರಗಳೂ ಪರಮಾಪ್ತವೇ ಆಗುತ್ತವೆ. ಪಶ್ಚಿಮದ ಬಲವಾದ ಗಾಳಿಯು ನಮ್ಮ ನೆಲ, ನೆಲೆಗಳ ಅನನ್ಯತೆಗಳನ್ನು ಗುಡಿಸಿ ಹಾಕುತ್ತಿರುವುದನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ಈ ಪರಕೀಯ ನಿರ್ದೇಶನಗಳಿಗೆ ಒಳಪಟ್ಟುದರಿಂದಲೇ ನಮ್ಮ ಮನಸ್ಸು ಧರ್ಮ, ದೇವರು, ಪಾರಲೌಕಿಕತೆ, ಆಧ್ಯಾತ್ಮದಂಥ ವಿಚಾರಗಳೂ ಚಿಂತನ ಸಾಹಿತ್ಯದ ಭಾಗಗಳೆನ್ನುವುದು ಪ್ರಜ್ಞಾಪೂರ್ವಕ ನಿರಾಕರಿಸುತ್ತ ಬಂದಿದೆ. ವಾಸ್ತವವಾಗಿ, ನಮ್ಮ ಚಿಂತನಶಕ್ತಿಗೆ ಚಾಲನೆ ನೀಡುವ ಎಲ್ಲ ಅಂಶಗಳೂ ವಿಚಾರಸಾಹಿತ್ಯವೇ ಎನ್ನುವ ಮರು ನಿರ್ವಚನ, ದೇಸೀಯ ಸ್ಪರ್ಶ, ಸೌಲಭ್ಯಗಳನ್ನು ಕಲ್ಪಿಸುವುದು ಎಲ್ಲರ ಹೊಣೆಗಾರಿಕೆಯೇ ಆಗಿದೆ.