ಸೃಷ್ಟಿಯ ಎಲ್ಲ ಅಂಗಗಳ ಹಿಂದೆಯೂ ಸಾಪೇಕ್ಷವಾದ, ಸಂಕೀರ್ಣವಾದ ಆಯಾಮ ಗಳಿರುತ್ತವೆ. ಹೀಗಾಗಿ, ಯಾವುದೇ ವಸ್ತು ಅಥವಾ ವ್ಯಕ್ತಿಯ ಸ್ವರೂಪವನ್ನೇ, ಸ್ವಭಾವವನ್ನೋ ಶುದ್ಧಾಂಗವಾಗಿ ‘ಇದು ಹೀಗೇ’ ಎಂದು ಹೇಳುವುದು ಸಾಧ್ಯವಾಗುವುದಿಲ್ಲ. ಒಳಿತಿನೊಂದಿಗೆ ಕೆಡುಕು, ಸೌಖ್ಯದ ನೆರಳಲ್ಲೇ ಸಂಕಟ, ಕ್ಷೇಮಭಾವದ ಬೆನ್ನಿನಲ್ಲೇ ಆತಂಕ, ವಿನಯದ ಹಿಂದೇ ಅಹಂಕಾರಗಳ ಇರುವಿಕೆಯು ಬದುಕಿನ ನಿಯಮಗಳಲ್ಲಿ ಅಂತರ್ಗತವಾಗಿದೆ. ಅದರಲ್ಲೂ ಎಲ್ಲ ದ್ವಂದ್ವಗಳ, ಸ್ವವಿರೋಧಗಳ, ವಿಶಿಷ್ಟ – ವಿರುದ್ಧ ಸಂವೇದನೆಗಳ ಆವಾಸವಾಗಿರುವ ‘ವ್ಯಕ್ತಿತ್ವ’ದ ನೆಲೆಗಳನ್ನು ಗ್ರಹಿಕೆಗೆ ಒಗ್ಗಿಸಿಕೊಳ್ಳುವುದು, ಮಿಥ್ಯೆಯಾಗಿಯೇ ಉಳಿಯುತ್ತದೆ. ಅದರ ವ್ಯಕ್ತಮುಖವೇ ಬೇರೆ, ಅಗೋಚರ ವ್ಯಾಕರಣವೇ ಬೇರೆಯಾಗುವ ಸಂದರ್ಭಗಳು ಸರ್ವೇಸಾಮಾನ್ಯವಾಗಿರುತ್ತವೆ. ಆತ್ಮಸಮ್ಮತವಾದ, ಸಮ್ಮುಖವಾದ ನಿಲುವುಗಳು ಲೋಕಮುಖದಲ್ಲೂ ಪ್ರಸ್ತುತಿಯನ್ನು ಪಡೆಯುತ್ತವೆನ್ನುವುದೂ ಅನೇಕ ಅನುಮಾನಗಳಿಗೆ ಎಡೆಕೊಡುವ ಅಂಶವೇ ಆಗಿದೆ.

ಈ ಹಿನ್ನೆಲೆಯಲ್ಲಿ ಆಧುನಿಕ ಜಗತ್ತಿನ ಪ್ರಮುಖ, ಪ್ರಖರ ವಿಚಾರಶೀಲರಲ್ಲಿ ಒಬ್ಬರಾದ ಗೌರೀಶ ಕಾಯ್ಕಿಣಿಯವರು ‘ಹೆಣ್ಣು-ಗಂಡು’ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡ ರೀತಿಯನ್ನು ಗಮನಿಸುವುದು, ಸಾಮಯಿಕವೆನಿಸುತ್ತದೆ. ಈ ಲೇಖನವು ಅಂಥ ಒಂದು ಪ್ರಯತ್ನವಾಗಿದೆ. ೧೯೪೮ರಲ್ಲಿ ಪ್ರಕಟವಾದ ಕಾಯ್ಕಿಣಿಯವರ ‘ಗಂಡು-ಹೆಣ್ಣು’ (ಪರ್ಣಕುಟಿ ಗ್ರಂಥಮಾಲೆ, ಗೋಕರ್ಣ) ಕೃತಿಯನ್ನು ಆಧರಿಸಿ ಈ ಪರಿಶೀಲನೆಯನ್ನು ನಡೆಸಲಾಗಿದೆ.

ಇಲ್ಲಿ ಒಂದು ಸೂಕ್ಷ್ಮವನ್ನು ಪ್ರಸ್ತಾಪಿಸಬೇಕು. ನಮ್ಮ ಎಲ್ಲ ವಿವೇಚನೆಗಳ ಪಾತ್ರ ವಿಶ್ಲೇಷಣೆಗಳಿರಲಿ, ವ್ಯಕ್ತಿ ದರ್ಶನಗಳಿರಲಿ, ಆಂತರಿಕ ಸಂಘರ್ಷಗಳಿರಲಿ, ಗಂಡು-ಹೆಣ್ಣು ಶರೀರಗಳನ್ನೂ ಗಂಡುತನ-ಹೆಣ್ತನಗಳಿಗೆ ಸಂವಾದಿಗಳಾಗಿಯೇ ಬಳಸಿಕೊಳ್ಳುತ್ತವೆ. ಆಯಾ ಶರೀರದೊಳಗಿನ ಪ್ರಜ್ಞೆಗಳು ಯಾವ ಲಿಂಗವಿವಕ್ಷೆಗೂ ಒಳಪಡುವುದಿಲ್ಲವೆನ್ನುವ ಸತ್ಯವನ್ನು ನಾವು ಬುದ್ದಿಪೂರ್ವಕವಾಗಿ ಸ್ಮೃತಿ ಪಟಲದಿಂದ ಒರೆಸಿಬಿಡುತ್ತೇವೆ. ಕಾಯ್ಕಿಣಿಯವರು ಮಿತಿಯನ್ನು ಲಕ್ಷಿಸಿದುದರ ಪರಿಣಾಮವಾಗಿ, ಈ ಚಿಂತನಲಹರಿಗಳು ಅಸ್ತಿತ್ವವನ್ನು ಪಡೆದಿವೆ. ಎಂದರೆ ಅವರು ಶೋಧಿಸುವ ಹೆಣ್ಣು-ಗಂಡುಗಳ ಅಭಿವ್ಯಕ್ತಿ ಕ್ರಮಗಳನ್ನು ಆ ಭೇದಗಳ ಬೇಲಿಗಳಿಲ್ಲದೆಯೂ, ಸಮಸ್ತ ಮನುಕುಲಕ್ಕೆ ಅನ್ವಯಿಸುವುದು ಸಾಧ್ಯವಾಗುತ್ತದೆನ್ನುವುದು ಇಲ್ಲಿಯ ಪ್ರಮೇಯವಾಗಿದೆ.

ಒಂದು ನಿದರ್ಶನದ ಮೂಲಕ ಈ ಮಾದರಿಯನ್ನು ಸ್ಪಷ್ಟಪಡಿಸಬಹುದು. ಕಾಯ್ಕಿಣಿ ಯವರ ಒಂದು ಅಭಿಪ್ರಾಯವು ಹೀಗಿದೆ :

“ಅಂಜುವ, ಹಿಂಜರಿಯುವ ತಿಳುವಳಿಕೆಯ ಹೊಯ್ದಾಟದ ಗಂಡಸಿಗಿಂತಲೂ ಸಂಶಯಾತ್ಮಕ ಪುರುಷ ಬುದ್ದಿಗಿಂತಲೂ ಹೆಣ್ಣಿನ ಮನಸ್ಸು ಮನುಷ್ಯ ಸ್ವಭಾವದ ವ್ಯಾಪಾರಗಳನ್ನೆಲ್ಲ ಹೆಚ್ಚು ಆಳವಾಗಿ ಅರಿತು ಹೆಚ್ಚು ಅಂದವಾಗಿ ಚಾಲನಗೊಳಿಸಿ, ‘ಅಶಿಕ್ಷಿತ ಪಟುತ್ವ’ದ ಎಷ್ಟೋ ಮಿಗಿಲಾದ ತಿಳುವಳಿಕೆಯ ತಿಳಲನ್ನು ತೋರುತ್ತದೆ. ಆದ್ದರಿಂದ, ಗಂಡು-ಹೆಣ್ಣಿನ ಕುರಿತು ಮಾಡುವ ಅರ್ಧ ಸತ್ಯ, ಅಸತ್ಯಗಳ ಸ್ಥೂಲ ಪ್ರದರ್ಶನಕ್ಕಿಂತ ಹೆಣ್ಣುಗಂಡಿನ ವಿಷಯ ಮಾಡುವ ಸತ್ಯತಥ್ಯಗಳ ಸೂಕ್ಷ್ಮ ನಿದರ್ಶನವು ಮನಸ್ತತ್ವದ ಹಾಗೂ ಮನುಷ್ಯತ್ವದ ವ್ಯಾಪಕದರ್ಶನಕ್ಕೆ ಹೆಚ್ಚಿನ ಪೂರ್ಣತೆಯನ್ನು ತಂದುಕೊಡಬಹುದು” (ಕಾಯ್ಕಿಣಿ, ಗೌರೀಶ ಸಮಗ್ರ ಸಾಹಿತ್ಯ, ಸಂ. ೨., ಪು. ೫).

ಇಲ್ಲಿ ಬರುವ ಪ್ರಜ್ಞೆ, ಬುದ್ದಿ, ಮನಸ್ಸು, ಇತ್ಯಾದಿಗಳನ್ನು ಮನುಷ್ಯತ್ವದ ವಿಶಾಲ ಭಿತ್ತಿ ಯಲ್ಲಿಟ್ಟು ನೋಡಿದಾಗ, ಶರೀರದ ಬಾಹ್ಯ ಆವರಣವನ್ನು ಉಪೇಕ್ಷಿಸುವ, ಅಂತರಂಗದ ವ್ಯಾಪಾರಗಳನ್ನಷ್ಟೇ ಪ್ರಮಾಣವಾಗಿಟ್ಟುಕೊಳ್ಳುವ ಸ್ಥಿತಿಯನ್ನು ನಾವು ಪ್ರವೇಶಿಸುತ್ತೇವೆ. ಇದು ಸಾಧ್ಯವಾದಾಗ, ಎಷ್ಟೋ ಸಾಧಾರಣೀಕೃತ ಅಂಶಗಳೂ ಮರುಪರಿಶೀಲನೆಗಳಿಗೆ ಅನುವಾಗುತ್ತವೆ. ಹೊಸ ಸಿದ್ಧಾಂತಗಳು ಪರಿಚಯವಾಗುತ್ತವೆ. ಈ ಉಪಕ್ರಮಗಳನ್ನು ಕಾಯ್ಕಿಣಿಯವರು ಬದುಕಿಗೆ ಯಾವ ರೀತಿಯಾಗಿ ಅನ್ವಯಿಸಿದ್ದಾರೆನ್ನುವುದು ಇಲ್ಲಿ ಮಹತ್ವ ವನ್ನು ಪಡೆಯುತ್ತದೆ.

ಸಾಮಾನ್ಯವಾಗಿ, ‘ಪ್ರತಿ ವ್ಯಕ್ತಿಯೂ ಪಕ್ಷಪಾತಿ’ಯೆನ್ನುವ ಧೋರಣೆಗೆ ಅಂಟಿಕೊಳ್ಳುವ  ಪ್ರವೃತ್ತಿಯನ್ನು ‘ಕಾಯ್ಕಿಣಿ’ಯವರು ಪ್ರದರ್ಶಿಸುತ್ತಾರೆ. ಹಾಗಾಗಿ, ‘ವ್ಯಕ್ತಿತ್ವದ, ಮನುಷ್ಯತ್ವದ ಒಂದು ಮೈ, ಒಂದು ಮಗ್ಗುಲು, ಒಂದೇ ಮಾರ್ಗ, ಒಂದೇ ಮಟ್ಟವನ್ನೇ ಒಂದು ವ್ಯಕ್ತಿಯು ಅನುಸರಿಸುವುದು ವಾಡಿಕೆ” (ಅದೇ. ಪು. ೬) ಎನ್ನುವ ತೀರ್ಮಾನಕ್ಕೂ ಅವರು ತಲುಪುತ್ತಾರೆ. ಈ ಜಾಡಿನಲ್ಲಿ, ಮಾನವ ಜನಾಂಗದ ಕೊನೆಯ ಜಿಜ್ಞಾಸೆ ಮಾನವನ ಕುರಿತೇ ಆಗಿದೆ; ಅದರ ಕೊನೆಯ ಶಾಸ್ತ್ರ ಮನೋವಿಜ್ಞಾನವಾಗಿದೆ; ಮತ್ತು ಈ ಶಾಸ್ತ್ರ-ಜಿಜ್ಞಾಸೆಗಳ ಕೊನೆಯ ವಿಷಯ ಹೆಣ್ಣಾಗಿದೆ (ಅದೇ) ಎನ್ನುವ ನಿರ್ಧಾರವು ಪ್ರಶ್ನಾರ್ಹವೇ ಅಲ್ಲ; ವಿವಾದಾತೀತವೇ ಎಂದು ನಿರ್ಧರಿಸಬೇಕಾಗುತ್ತದೆ.

ವಾಸ್ತವವಾಗಿ, ಕಾಯ್ಕಿಣಿಯವರು ಅನುಸಂಧಾನಕ್ಕಾಗಿ ಆಯ್ದುಕೊಳ್ಳುವ ಭಾವವಿಶೇಷ ಗಳು ಹೆಣ್ಣಿನವು, ಗಂಡಿನವೂ ಅಲ್ಲದೆ ಅಥವಾ ಇಬ್ಬರವೂ ಆಗಿರಬಹುದಾದ ಕ್ಷಮತೆಗಳನ್ನು ಹೊಂದಿವೆ. ಇವು ಮುಖ್ಯವಾಗಿ, ಸನ್ನಿವೇಶ, ಮನೋವೃತ್ತಿ, ಸ್ವಭಾವ ಮುಂತಾದ ಹಲವು ಪರಿವೇಷ್ಟನಗಳನ್ನು ಒಳಗೊಳ್ಳುತ್ತವೆ. ಅವರೇ ಕರೆಯುವ ಹಿಂದುಗೂಡುವಿಕೆ (ಸಹವಾಸ ಪ್ರಿಯತೆ); ಹೊಗಳಿಕೆ-ತೆಗಳಿಕೆಯ ಪರಿವೆ (ಪ್ರಶಂಸಾ ಪ್ರಿಯತೆ) ಮುಂತಾದ ಲಕ್ಷಣಗಳು ಸಮಾಜದ ಸ್ವಾಸ್ಥ್ಯದ ಸಂರಕ್ಷಕಗಳು, ವಾತ್ಸಲ್ಯಾದಿ ಮೂಲ ಪ್ರವೃತ್ತಿಗಳು, ಮಾನವ ಜನಾಂಗದ ಮುಂದುವರಿಕೆಯ ಅಗತ್ಯಗಳು. ಇವು ಗಂಡು-ಹೆಣ್ಣುಗಳಲ್ಲಿ ಹೆಚ್ಚು ಕಡಿಮೆ ಯಾಗಿ, ಬೇರೆ ಬೇರೆಯಾಗಿ ಬೆಳೆದಿವೆಯೋ ಹೇಗೆ’? (ಅದೇ. ಪು.೨) ಎನ್ನುವ ಪ್ರಶ್ನೆಯನ್ನು ಅವರು ಈ ಸಂದರ್ಭದಲ್ಲಿ ಮುಂದಿಡುತ್ತಾರೆ. ಇದರ ಔಚಿತ್ಯವನ್ನು ಇಲ್ಲಿ ಪರಿಭಾವಿಸ ಬಹುದು. ಎಂದರೆ, ಕಾಯ್ಕಿಣಿಯವರು ಪ್ರತಿಪಾದಿಸುವ, ‘ಗಂಡು-ಹೆಣ್ಣು’, ‘ಭಾವ’ಗಳು ಸಮಸ್ತ ಮಾನವ ಜಾತಿಗೇ ಸಮಾನವಾಗಿವೆಯೆನ್ನುವುದು ಇದರ ಮಥಿತಾರ್ಥವಾಗುತ್ತದೆ. ಈ ನೆಲೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳನ್ನು ಮರುಪರಿಶೀಲನೆಗಳಿಗೆ ಒಳಪಡಿಸಬಹುದು.

ಕಾಯ್ಕಿಣಿಯವರೇ ಹೇಳುವಂತೆ, ‘ವಂಶ ವಿಧಾಯಕ ಪ್ರವೃತ್ತಿ’ಗಳು ಈ ಸಂದರ್ಭದಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತ್ತವೆ.

“ಅವುಗಳ ಭಿನ್ನ ಭಿನ್ನ ವ್ಯಾಪಾರಗಳಿಂದಲೇ ಸ್ತ್ರೀ-ಪುರುಷರ ಎಲ್ಲ ಬಗೆಯ ಶಾರೀರಿಕ, ಮಾನಸಿಕ ಹಾಗೂ ಚಾರಿತ್ರಿಕ ಭೇದಭಾವಗಳ ವಿವಿಧತೆಯು ಹಬ್ಬಿ ಬೆಳೆದಿದೆ” (ಅದೇ.) ಎನ್ನುವುದನ್ನು ಅವರು ತಮ್ಮ ವಾದದ ಬುನಾದಿಯಾಗಿ ಸ್ವೀಕರಿಸುತ್ತಾರೆ. ಶರೀರಶಾಸ್ತ್ರದ ಆಧಾರದಿಂದ ಮುಂದುವರೆಯುವ ಎಲ್ಲ ಅಧ್ಯಯನಗಳ ಗುರಿಯೂ, ಫಲಿತಾಂಶಗಳೂ ಈ ಮಾದರಿಯನ್ನು ಒಪ್ಪಿಕೊಳ್ಳುತ್ತವೆ. ಹಾಗಾಗಿ, “ಗಂಡು, ಸಮಾಜದಲ್ಲಿ ಸರ್ವಾಧಿಕಾರಿ ಯಾದರೂ, ನಿಸರ್ಗದಲ್ಲಿ ಅವನ ಸ್ಥಾನ ಗೌಣ. ವಂಶ ವಿಸ್ತಾರದ ಸೃಷ್ಟಿ ಕ್ರಮದಲ್ಲಿ ಹೆಣ್ಣು ಪ್ರಥಮ, ಪ್ರಮುಖ, ಮೂಲಭೂತ, ಗಂಡು ಪಾರಿಪಾರ್ಶ್ವಕ, ಪೂರಕ… ಪ್ರಜೋತ್ಪಾದನೆಯ ಇತಿಹಾಸದಲ್ಲಿ ಗಂಡಿನ ಪಾತ್ರ ಪ್ರತ್ಯೇಕವಾಗಿ ನಿಶ್ಚಿತವಾದದ್ದು ತರುವಾಯದ ತಿದ್ದುಪಡಿ” (ಅದೇ. ಪು. ೮) ಎನ್ನುವ ಅಭಿಪ್ರಾಯವೇ ದೃಢಗೊಳ್ಳುತ್ತದೆ. ಇದು, ಸ್ತ್ರೀ-ಪುರುಷರನ್ನು ಪ್ರಾಣಿ ಜಗತ್ತಿನ ಪ್ರಜೆಗಳಾಗಿ ಗುರುತಿಸುವ ಕ್ರಮಕ್ಕೆ ಸರಿ ಹೊಂದುತ್ತದೆ. ಅವರಿಬ್ಬರೂ ಇದನ್ನು ಮೀರಿದ ವ್ಯಕ್ತಿತ್ವವೊಂದಿದೆ. ಅದು ಪ್ರಜ್ಞಾ ಜಗತ್ತಿನೊಂದಿಗೆ ವ್ಯವಹರಿಸುತ್ತದೆ. ಈ ಸಂಭಾಷಣೆ, ಸಂವೇದನೆ ಹಾಗೂ ಪ್ರತಿಕ್ರಿಯೆಗಳು ತೀರಾ ವೈಯಕ್ತಿಕವಾಗಿರುತ್ತವೆ; ‘ಹೆಣ್ಣು – ಗಂಡು’ ವರ್ಗೀಕರಣ ವಿಧಾನಗಳನ್ನು ಪ್ರಶ್ನಿಸುತ್ತವೆ; ನಿರಾಕರಿಸುತ್ತವೆ. ಉದಾಹರಣೆಗೆ, ಸ್ತ್ರೀ-ಪುರುಷರ ಪರಸ್ಪರ ಆಕರ್ಷಣೆಯ ಸ್ವರೂಪವನ್ನು ಕಾಯ್ಕಿಣಿಯವರು ಗ್ರಹಿಸುವ ರೀತಿಯನ್ನು ಗಮನಿಸಿಬಹುದು.

“ಪ್ರೇಮದ ಆಧ್ಯಾತ್ಮಿಕ ಅಂಶವು ಗಂಡಿಗಿಂತ ಹೆಣ್ಣಿನಲ್ಲಿಯೇ ಹೆಚ್ಚು ಸ್ವಾಗತವನ್ನು ಪಡೆಯುತ್ತದೆ… ಗಂಡಿನ ಪ್ರೀತಿಗೆ ರಭಸ ಹೆಚ್ಚು. ಆದರೆ ವ್ಯಾಪ್ತಿಯೂ ಅಷ್ಟೇ ಕಡಿಮೆ…. ಗಂಡು ಪ್ರೀತಿ (ಹೆಣ್ಣಿನ ಪ್ರೀತಿ) ಇಲ್ಲದೇ ಬಾಳಬಲ್ಲ. ಆದರೆ ಹೆಣ್ಣು ಹಾಗಲ್ಲ. …. ಗಂಡಿನ ಆಕರ್ಷಣ, ಆಸಕ್ತಿ, ಕಣ್ಣುಗಳನ್ನು ಸೆಳೆಯುವ ಚಟುವಟಿಕೆಯೇ ಹೆಣ್ಣು ನಡತೆಯ ನೆಯ್ಗೆ” (ಅದೇ. ಪು. ೧೦-೧೧) ಎನ್ನುವುದು, ಮೇಲ್ನೋಟಕ್ಕೆ ತುಂಬ ಸರಳವಾದ ಸಮೀಕರಣವಾಗಿ ಕಂಡು ಬರುತ್ತದೆ. ಮನುಷ್ಯರ ಮನಸ್ಸಿನ ಚರ್ಯೆಗಳು ಇಷ್ಟು ನೇರವಾಗಿರ ಲಾರವು. ಇವುಗಳನ್ನು ಪ್ರಾಯಶಃ ವಿಶಿಷ್ಟ ಲಕ್ಷಣಗಳಾಗಿಯೇ, ಪ್ರಧಾನ ಗುಣಗಳಾಗಿಯೇ ಪರಿಗಣಿಸಬಹುದೇ ಹೊರತಾಗಿ ಜೀವಶಾಸ್ತ್ರೀಯ ವಿಂಗಡಣೆಯಷ್ಟೇ ಕರಾರುವಾಕ್ಕಾಗಿ ನಿರ್ಧರಿಸಬಾರದು. ಪ್ರೀತಿಯ ತೈಲ ನೀತಿಗೂ ಶಾರೀರಿಕ ಪ್ರಭೇದಗಳಿಗೂ ಪ್ರಮಾಣೀಕೃತ ಸಂಬಂಧಗಳಿರಲಾರವು. ಆದುದರಿಂದ, ‘(ಹೆಣ್ಣಿನ) ಪಾತಿವ್ರತ್ಯ, ಪತಿಪ್ರೇಮಿಗಳ ಉಗಮ, ಹೆಣ್ಣಿನ ವಿಧೇಯತನದ ಆತ್ಮಸಮರ್ಪಣದ ಮೂಲಪ್ರವೃತ್ತಿಗಳಲ್ಲದೆ ಆಳಾಗಬೇಕು-ಆಳಲ್ಪಡಬೇಕು-ಮುಂದೆ ಆಳಾಗಿಯೂ ಆಳಬೇಕು- ಎಂಬ ಈ ಅಧಿಕಾರ ಪ್ರವೃತ್ತಿಯ ವ್ಯಸ್ತ ಸ್ವರೂಪವೂ, ತೀವ್ರ ಪ್ರಶಂಸಾಪ್ರಿಯತೆಯ ಸಮಸ್ತ ಒತ್ತಾಯವೂ ಹೆಣ್ಣು ಗಂಡನ್ನು ಅಂಟಿ ಉಳಿಯುವಂತೆ ಮಾಡುತ್ತದೆ’ (ಅದೇ. ಪು. ೧೧) ಎನ್ನುವ ಅಭಿಪ್ರಾಯವೂ ಹೆಚ್ಚಿನ ಜಿಜ್ಞಾಸೆಯನ್ನು ನಿರೀಕ್ಷಿಸುತ್ತದೆ. ಇಲ್ಲಿ ಹೆಣ್ಣಿನ ಯಾಜಮಾನ್ಯ ಧೋರಣೆಯು ಎಷ್ಟು ಸೂಕ್ಷ್ಮವಾಗಿ, ಪರೋಕ್ಷವಾಗಿ ಅಷ್ಟೇ ಸಂಕೀರ್ಣವಾಗಿ ಕಾರ್ಯಪರವಾಗುತ್ತದೆನ್ನುವುದರ ಸೂಚನೆಯನ್ನು ಕಾಯ್ಕಿಣಿಯವರು ನೀಡುತ್ತಾರೆ. ಸ್ಥೂಲ ಪರಿಸರದ ‘ಶರಣಾಗತಿ’ಯೇ ಹೆಣ್ಣಿನ ಸಶಕ್ತ ಅಸ್ತ್ರವಾಗುವ ವೈರುಧ್ಯವನ್ನೂ ಅವರು ಇಲ್ಲಿ ಎತ್ತಿ ಹೇಳುತ್ತಾರೆ. ಈ ವಾದವನ್ನೇ ಬೆಳೆಸುತ್ತ, “ತನ್ನ ಅಂತರಂಗದಲ್ಲಿ ಹೆಣ್ಣು ಕೇವಲ ಆತ್ಮನಿಷ್ಠ; ತನ್ನನ್ನು ಮರೆಯದ, ತನ್ನತನವನ್ನು ತೊರೆಯದ ನಿಷ್ಠುರ ವ್ಯಕ್ತಿತ್ವವು ಹೆಣ್ಣಿನದು’ (ಅದೇ. ಪು. ೧೨) ಎನ್ನುವ ತೀರ್ಮಾನಕ್ಕೆ ಅವರು ಬರುತ್ತಾರೆ. ಈ ಅಂಶವನ್ನು ಸ್ವಲ್ಪ ವಿಸ್ತರಿಸಿದರೆ, ಈ ‘ಆತ್ಮನಿಷ್ಠೆ’ಯೆನ್ನುವುದು ಮನುಷ್ಯ ವರ್ಗಕ್ಕೇ – ಇನ್ನೂ ವಿಶಾಲವಾದ ಅರ್ಥದಲ್ಲಿ ಇಡಿಯ ಪ್ರಾಣಿ ಪ್ರಪಂಚಕ್ಕೇ – ಸಮಾನವಾದುದೆಂಬ ಸತ್ಯವು ಸ್ಫುಟವಾಗುತ್ತದೆ. ಇದನ್ನು ‘ನಿಷ್ಠುರ’ ವೆನ್ನುವುದಕ್ಕಿಂತ ‘ಅಸ್ತಿತ್ವದ ಅವಶ್ಯಕತೆಯೆನ್ನುವುದೇ ಸತ್ಯಕ್ಕೆ ಸಮೀಪವಾಗುತ್ತದೆ. ಇಂಥ ಗೃಹೀತಗಳಿರುವುದರಿಂದಲೇ ಕಾಯ್ಕಿಣಿಯವರು, “ಗಂಡಿನ ಪ್ರೀತಿ, ಆತನ ಬಾಳಿನ ಒಂದು ಅಂಶ. ಬಾಳಿನಿಂದಲೂ ಬೇರೆಯಾದ ಒಂದು ಅಂಶ. ಗುಣ; ಪ್ರೀತಿ ಹೆಣ್ಣಿನ ಗುರಿ ಆಗುವುದೇ ದಿಟ’ (ಅದೇ. ಪು. ೧೩) ಎನ್ನುತ್ತಾರೆ. ಇದನ್ನು ಒಪ್ಪಿಕೊಂಡರೆ ಹೆಣ್ಣಿನಲ್ಲಿ ಆಳವಾದ ಮೈತ್ರಿಭಾವದ ಇರುವಿಕೆಯ ಉದಾಹರಣೆಗಳು ಬಹಳ ವಿರಳವಾಗಿ ಸಿಗುತ್ತವೆನ್ನುವ ಅವರ ಅನಿಸಿಕೆಗೆ ಹೆಚ್ಚಿನ ಕಸುವು ದೊರೆಯುತ್ತದೆ. ಮೈತ್ರಿಯು ನಷ್ಟವಾದಲ್ಲಿ ಸ್ವಾರ್ಥವು ಉಚ್ಛ್ರಂಖಲವಾಗುತ್ತದೆನ್ನುವುದು ಸ್ವಯಂಸಿದ್ಧವೇ ತಾನೇ. ಈ ಮೈತ್ರಿ – ಪ್ರೀತಿಗಳ ಬೆಂಬದಿಯಲ್ಲಿಯೇ ಇರುವ ‘ಈರ್ಷೆ-ಅಸೂಯೆಗಳನ್ನೂ ಕಾಯ್ಕಿಣಿಯವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಗಂಡಿನಲ್ಲಿ ಈ ಅಸೂಯೆಯ ತೀವ್ರತೆ, ಆವೇಗ, ಆವೇಶಗಳು ಹೆಚ್ಚು ಎನ್ನುವುದನ್ನು ಒಪ್ಪಿಕೊಳ್ಳುವ ಅವರು, ಅದು ಅಷ್ಟೇ ಅಲ್ಪಾಯಷಿ ಎನ್ನುವ ಸುಳಿವನ್ನೂ ಕೊಡುತ್ತಾರೆ. ಗಂಡಿನ ಈರ್ಷೆಯ ಹಿನ್ನೆಲೆಯಲ್ಲಿ ಅವನ ಅಹಂಕಾರ, ಮಮತ್ವ ಆಕ್ರಮಕ  ಮನೋಭಾವ, ಪ್ರತಿಸ್ಪರ್ಧೆಯ ಬಗೆಗಿನ ಅಸಹನೆಗಳೆಲ್ಲವೂ ಕ್ರಿಯಾಶೀಲವಾಗಿರುತ್ತವೆನ್ನುವ ನಿಲುವನ್ನು ಅವರು ಪ್ರಕಟಿಸುತ್ತಾರೆ. ಇದಕ್ಕೆ ಪ್ರತಿಯಾಗಿ, ಹೆಣ್ಣಿನ ಅಸೂಯೆಯು ದ್ವೇಷದ ರೂಪಧಾರಣೆಯನ್ನು ಮಾಡುವುದರಿಂದ, ಅದು ದೀರ್ಘ ಪರಿಣಾಮಿಯಾಗಿರುತ್ತದೆ; ತಣ್ಣನೆಯ ಕ್ರೌರ್ಯವಾಗುವ ಮಟ್ಟಕ್ಕೂ ಹೋಗುತ್ತದೆನ್ನುವ ವಾದವನ್ನು ಅವರು ಮಂಡಿಸುತ್ತಾರೆ. ಎಂದರೆ, ಶೂರ್ಪನಖಿಯ ಮನೋಭಾವಕ್ಕೂ, ದುರ್ಯೋಧನನ ಛಲಕ್ಕೂ ಸ್ಪಷ್ಟವಾದ ವ್ಯತ್ಯಾಸಗಳನ್ನು ಅವರು ಗುರುತಿಸುತ್ತಾರೆ. ಬಹುಮಟ್ಟಿಗೆ ಇದು ಕ್ರಿಯಾತ್ಮಕತೆ ಮತ್ತು ಪ್ರೇರಣೆಗಳ ಸಂವಾದವಾಗಿ ಕಂಡು ಬರುತ್ತದೆ. ಪ್ರತಿ ವ್ಯಕ್ತಿಯಲ್ಲಿಯೂ ಇಂಥ ಅನಿಸಿಕೆಗಳು – ಅನ್ಯಾನ್ಯ ನಿಷ್ಪತ್ತಿಗಳಲ್ಲಿ ಎಡೆ ಪಡೆಯುತ್ತವೆ.

ಗಂಡಿನ ಸ್ವಭಾವದಲ್ಲೇ ಸುಪ್ತವಾಗಿರುವ ಜೀವವಿರೋಧಿ ನೀತಿಯನ್ನೂ ಕಾಯ್ಕಿಣಿಯವರು ತೀಕ್ಷ್ಣವಾದ ವಿಮರ್ಶೆಗೆ ಗುರಿಪಡಿಸುತ್ತಾರೆ. ಉದಾಹರಣೆಗೆ, “ಸೀತೆಯ ಆದರ್ಶವನ್ನು ಹೆಂಡತಿಯಲ್ಲಿ ಅಪೇಕ್ಷಿಸುವ, ಗಂಡನಾಗುವ ಜಾಣನು ತಾನು ರಾಮನ ಆದರ್ಶಕ್ಕೆ ಹೆಣಗಿದ್ದು ಕಾಣಿಸುವುದಿಲ್ಲ. ಎದೆಯ ಕೆಚ್ಚು, ವ್ಯಕ್ತಿತ್ವದ ಬಲ, ಸಾಮಾನ್ಯವಾಗಿ ಕಡಿಮೆ ಆಗಿದೆ” (ಅದೇ. ಪು. ೨೧) ಎನ್ನುವ ಅವರ ಹೇಳಿಕೆಯನ್ನು ಗಮನಿಸಬಹುದು. ಅವರ ಕ್ಷ – ದೃಷ್ಟಿಯು ವ್ಯಕ್ತಿತ್ವದ ದೌರ್ಬಲ್ಯಗಳನ್ನು ನಿಖರವಾಗಿ ಅಳೆಯುವ ರೀತಿಯನ್ನು ಇದು ಸ್ಪಷ್ಟಪಡಿಸುತ್ತದೆ. ಇದನ್ನೇ ಸ್ವಲ್ಪ ತಿರುವಿ ಹಾಕಿದರೆ, ರಾಮನ ಆದರ್ಶವನ್ನು ತನ್ನ ಗಂಡನಲ್ಲಿ ಅಪೇಕ್ಷಿಸುವ ಮಹಿಳೆಯು ಸ್ವಯಂ ‘ಸೀತಾಸತ್ವ’ವುಳ್ಳವಳಾಗಿರುತ್ತಾಳೆಯೇ ಅಥವಾ ಕಡೇ ಪಕ್ಷ ಆ ಸ್ಥಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಾಳೆಯೋ ಎನ್ನುವ ಸಂದೇಹಗಳು ಹುಟ್ಟುತ್ತವೆ. ಸ್ವಚ್ಛ ಕಣ್ಣುಗಳಿಂದ ನೋಡಿದಾಗ, ಈ ವಿಶ್ಲೇಷಣೆಯ ಉದ್ದಕ್ಕೂ ಕಾಯ್ಕಿಣಿಯವರು ಹೆಣ್ಣನ್ನೋ ಗಂಡನ್ನೋ ಒಂದು ಮಾಧ್ಯಮವಾಗಿಟ್ಟುಕೊಂಡು, ಮಾನವ ಸ್ವಭಾವ ಗಳ ಸೂಕ್ಷ್ಮಾಣು ಪ್ರಪಂಚದ ಅಧ್ಯಯನವನ್ನೇ ಕೈಗೆತ್ತಿಕೊಂಡಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ಈ ಉದಾಹರಣೆಯು, ವ್ಯಕ್ತಿತ್ವತವು ಉದಾತ್ತವಾಗಬೇಕಾದರೆ, ಸ್ವಾರ್ಜಿತವಾದ ಆಂತರಿಕ ಸಂಸ್ಕಾರಗಳ ಗೆಯ್ಮೆ, ನಿರಂತರವಾದ ಆತ್ಮ ನಿರೀಕ್ಷಣೆಗಳ ನಿಕಷ ಮುಂತಾದ ಪರಿಕರಗಳ ಅಗತ್ಯವನ್ನೇ ಸಾರುತ್ತದೆ. ಕಾಲ-ದೇಶಗಳ ಪರಿವೆಯಿಲ್ಲದೆ ನಿತ್ಯತ್ವಕ್ಕೆ ಏರುತ್ತದೆ.

ಕಾಯ್ಕಿಣಿಯವರು ಈ ಸಂದರ್ಭದಲ್ಲಿ ಸ್ತ್ರೀ-ಪುರುಷರ ಬೌದ್ದಿಕ ಪ್ರಕೃತಿಯ ವಿನ್ಯಾಸ ಗಳನ್ನೂ ಸ್ಪರ್ಶಿಸುತ್ತಾರೆ. ಆ ಕುರಿತಾದ ಅವರ ಅಭಿಪ್ರಾಯಗಳನ್ನು ಹೀಗೆ ಸಂಗ್ರಹಿಸಬಹುದು:

“ಇಂದಿನ ಬದುಕು ನೇರವಾಗಿಲ್ಲ. ಎಂದಿಗಿಂತಲೂ ಹೆಚ್ಚಾಗಿ ಗಂಡು, ಎಲ್ಲಿಯೂ ಸಡಿಲು ಬಿಡದೆ, ಬುದ್ದಿಯ ಕೆಲಸಕ್ಕೇ ತನ್ನನ್ನು ಹೂಡಿಕೊಳ್ಳಬೇಕಾಗುತ್ತದೆ. ಒಂದೆಡೆಗೆ, ಉದ್ಯೋಗ, ವ್ಯವಸಾಯಗಳ ಯಾಂತ್ರಿಕ ಪದ್ಧತಿ, ಇನ್ನೊಂದೆಡೆಗೆ ಈ ಒತ್ತಾಯದ ಬೌದ್ದಿಕ ಜೀವನದ ಕೃತ್ರಿಮ ಚಟ ಇವೆರಡರ ನಡುವೆ ಗಂಡಿನ ನರಗಳೆಲ್ಲ ಹುರಿಗುಂದಿ ಹೋಗುತ್ತವೆ; ಮಿದುಳು ಮಂಕಾಗುತ್ತಿದೆ. ಆತ್ಮಾಭಿಮಾನ ತಗ್ಗುತ್ತದೆ. ಪ್ರತೀಕಾರ ಗಂಡಿನ, ಪ್ರಬಲರ ದಾರಿ. ಹೆಣ್ಣು ಸಾಮಾನ್ಯವಾಗಿ ಕರ್ಮೇಂದ್ರಿಯಗಳ ಕೆಲಸದಲ್ಲಿ ಹಿಂದೆ ಬೀಳುವಳು. ಜ್ಞಾನೇಂದ್ರಿಯಗಳೇ ಆಕೆಯ ಪ್ರಪಂಚ…. ಈ ಶಾರೀರಿಕ ಚಟುವಟಿಕೆಗಳಲ್ಲಿ ಹಿಂಜರಿ ಯುವುದರ ಇನ್ನೊಂದು ಪರಿಣಾಮವೆಂದರೆ ಹೆಣ್ಣಿನಲ್ಲಿ ಅಲಸಿಕೆ – ಸೋಮಾರಿತನ ಹೆಚ್ಚು. ಆಕೆ ಸ್ವಭಾವದಿಂದಲ್ಲವಾದರೂ ಶರೀರದ ಒಲವಿನಿಂದ ಮಂಥರೆ, ಮದಾಲಸೆ… ಈ ಅಲಸಿಕೆಯ ಮೂಲಕವೇ ಆಕೆಯು ಹೆಚ್ಚು ಘಾತಕಿ – ಅಲಸಿಕೆಯಲ್ಲಿ ಅಲ್ಲದ ಲಾಲಸೆ ಮೊಳೆತು ಬಲಿಯುವ ಭೀತಿ ಹೆಚ್ಚು… ಹೆಣ್ಣಿನ ಹಿತದಂತೆ, ಗಂಡಿನ ಹೊಣೆಗಾರಿಕೆಯ ದೃಷ್ಟಿಯಿಂದಲೂ ಹೆಣ್ಣನ್ನು ಅಲಸಿಕೆಯಲ್ಲಿ ಇಡುವುದು ಗಂಡಾಂತರದ್ದು” (ಅದೇ. ಪು. ೨೬-೩೬).

ಈ ವಾಕ್ಯ ಪುಂಜವನ್ನು ಬಹಳ ಎಚ್ಚರಿಕೆಯಿಂದ ಪರೀಕ್ಷಿಸಬೇಕಾದ ಸಾಂಸ್ಕೃತಿಕ ಸಂಧಿಯಲ್ಲಿ ನಾವು ಇಂದು ನಿಂತಿದ್ದೇವೆ. ಬೌದ್ದಿಕ ಚಟುವಟಿಕೆಗಳ ಬಾಹುಳ್ಯ ಅಥವಾ ಅಭಾವಕ್ಕೂ ಶಾರೀರಿಕ ಆಲಸ್ಯ – ಚುರುಕುತನಗಳಿಗೂ ಇರುವ ಸಂಬಂಧಗಳು ತೀರಾ ವೈಯಕ್ತಿಕವೆನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಮಾತ್ರವಲ್ಲ, ಬೌದ್ದಿಕ ಕ್ರಿಯಾಶೀಲತೆಯು ಯಾವುದೇ ಒತ್ತಡಕ್ಕೂ ಬಾಗಲಾರದಂಥ ಸ್ವತಂತ್ರಶೀಲವನ್ನು ಹೊಂದಿದೆ. ಶ್ರಮಸಹಿಷ್ಣುತೆ ಯಾಗಲಿ, ವೈಚಾರಿಕ ಪ್ರಬುದ್ಧತೆಯಾಗಲಿ ಸಾಮಾನ್ಯ ಮಾನದಂಡಗಳಿಗನುಗುಣವಾಗಿ ನಿಷ್ಪನ್ನಗೊಳ್ಳಲಾರವು. ಹಾಗಾಗಿ ‘ಹೆಣ್ಣನ್ನು ಅಲಸಿಕೆಯಲ್ಲಿ ಇಡುವುದು’ ಮುಂತಾದ ದಮನವಾದೀ ಹೇಳಿಕೆಗಳು ಅಷ್ಟಾಗಿ ಸೊಗಯಿಸುವುದಿಲ್ಲ. ಬೌದ್ದಿಕ ಜಾಡ್ಯವು ಯಾರ ಲ್ಲಿದ್ದರೂ ಅದು ಆತಂಕಕ್ಕೆ ಕಾರಣವಾಗಬೇಕೇ ಹೊರತಾಗಿ, ಅದರಲ್ಲಿ ಪ್ರತ್ಯೇಕತೆಯನ್ನು ಹುಡುಕುವುದು ಸಮಂಜಸವಲ್ಲ.

ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಿಕೊಂಡು ಮುಂದುವರೆಯುವುದು ಉಚಿತವೆನಿಸುತ್ತದೆ. ಇಲ್ಲಿ ಚರ್ಚೆಗೆ ಎತ್ತಿಕೊಂಡಿರುವ ಎಲ್ಲ ವಿಚಾರಗಳಿಗೆ ಆರು ದಶಕಗಳ ಹಳಮೆಯಿದೆ. ಕಾಯ್ಕಿಣಿಯವರ ಪ್ರಗತಿಪರವಾಗಿ ಧೋರಣೆಗಳನ್ನೂ ನಾವೆಲ್ಲರೂ ಬಲ್ಲವರೇ ಇದ್ದೇವೆ. ಚಿಂತನಶೀಲ ಸಾಹಿಗಳ ಸೈದ್ಧಾಂತಿಕ ನಿಲುವುಗಳೂ ಕಾಲಾನುಕ್ರಮದಲ್ಲಿ ಬದಲಾಗುತ್ತ ಹೋಗುತ್ತದೆನ್ನುವುದೋ ಅಷ್ಟೇ ಸಹಜವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯ ಕೇಂದ್ರಬಿಂದು ಕಾಯ್ಕಿಣಿಯವರ ಒಂದು ನಿರ್ದಿಷ್ಟ ಕೃತಿಯು ಮಾತ್ರವೇ, ಅವರ ಸಮಗ್ರ ವಿಚಾರಧಾರೆಗಳ ವಿವೇಚನೆಯು ಈ ಬರೆಹದ ವ್ಯಾಪ್ತಿಯಿಂದಾಚೆಗಿನದೆನ್ನುವುದನ್ನು ಇಲ್ಲಿ ಗೃಹೀತವಾಗಿಟ್ಟುಕೊಳ್ಳಬೇಕು.

ಈ ನೆಲೆಯನ್ನು ಆಶ್ರಯಿಸುವ ಕಾಯ್ಕಿಣಿಯವರು, ವಿಶಿಷ್ಟವಾದ ಕೆಲವು ‘ಹೆಣ್ಣು-ಗಂಡು ಗುಣಗಳನ್ನು ವಿಶದಪಡಿಸುತ್ತಾರೆ. ನಿದರ್ಶನಾರ್ಥವಾಗಿ, ಅವುಗಳನ್ನು ನಾಲ್ಕಾರು ಲಕ್ಷಣಗಳನ್ನು ಇಲ್ಲಿ ಪರಾಮರ್ಶಿಸಬಹುದು. ಅಭ್ಯಾಸದ ಅನುಕೂಲಕ್ಕಾಗಿ ಅವುಗಳನ್ನು ಅನುಕ್ರಮವಾಗಿ ನಿರೂಪಿಸುವುದು ಯುಕ್ತವೆನಿಸುತ್ತದೆ.

ಕಾಯ್ಕಿಣಿಯವರ ಗ್ರಹಿಕೆಯ ಪ್ರಕಾರ ಹೆಣ್ಣಿನ ವೈಲಕ್ಷಣ್ಯಗಳೂ, ಉಪಾಧಿಗಳೂ ಹೀಗಿವೆ:

ಮೂಲಭೂತವಾಗಿ, ಹೆಣ್ಣು ಬಹಿರ್ಮುಖವಾದ ವ್ಯಕ್ತಿತ್ವವನ್ನು ಹೊಂದಿದ್ದಾಳೆ. ಏಕಾಂತದ ಸುಖವನ್ನಾಗಲಿ, ಧ್ಯಾನಸ್ಥ ಮೌನದ ಲಾಭವನ್ನಾಗಲಿ ಆಕೆ ಅಷ್ಟಾಗಿ ಅನುಭವಿಸ ಲಾರಳು. ಆಕೆ ಸದಾ ಪುರುಷ ಮಾದರಿಯನ್ನು ಗಮನದಲ್ಲಿಟ್ಟುಕೊಂಡೇ ಕಾರ್ಯ ನಿರ್ವಹಿಸುವವಳು. ಆದುದರಿಂದ, ದೇವತಾವರ್ಗಗಳಲ್ಲಿಯೂ ಸ್ತ್ರೀಗೆ ಸ್ತ್ರೀದೈವವು ಆರಾಧ್ಯ ಮೂರ್ತಿಯಾಗಿರುವುದು ತೀರಾ ಅಪೂರ್ವ!

ಸ್ವಭಾವತಃ ಸಮಾಜಜೀವಿಯಾಗಿರುವುದರಿಂದ, ಹೆಣ್ಣಿಗೆ ವಾಚಾಳಿತನವು ಮೈಯುಂಡು ಹೋಗಿರುತ್ತದೆ. ಬಾಹ್ಯ ರಹಸ್ಯಗಳನ್ನು ಪ್ರಚಾರ ಮಾಡುವುದರಲ್ಲಿ ಆಕೆ ತುಂಬ ಉದಾರವಾಗಿ ವರ್ತಿಸುತ್ತಾಳೆ; ಸ್ವಂತದ ಗುಟ್ಟುಗಳ ಪ್ರಸಂಗಗಳಲ್ಲಿ ಮಾತ್ರ ಅತಿ ಜಾಗರೂಕಳಾಗಿರುತ್ತಾಳೆ. ಹಾಗಾಗಿಯೇ ಈ ಬಗೆಗೆ, “ಹೆಣ್ಣಿನ ಹೃದಯ ಒಂದು ಸಮಾಧಿ. ಎಷ್ಟೋ ಸಂತೃಪ್ತ, ಅಸಂತೃಪ್ತ, ಆಸೆ-ಆಕಾಂಕ್ಷೆಗಳು, ವಿಕಾರ-ವೇದನೆಗಳು, ಹಂಬಲ-ಹಳಹಳಿಗಳು ಅಲ್ಲಿ ಹತ್ತಿಕ್ಕಿ ಹತವಾಗಿ ಬಿದ್ದಿವೆ” (ಅದೇ. ಪು. ೩೬) ಎನ್ನುವ ಮಾನವೀಯವಾದ ಸಹಾನುಭೂತಿಯ ನಿಲುವನ್ನು ಕಾಯ್ಕಿಣಿಯವರು ತಳೆಯುತ್ತಾರೆ; ಮನೋದಮನ ಮಾಡಿಕೊಳ್ಳುತ್ತಲೇ ಬದುಕಬೇಕಾದ ಮಹಿಳಾ ಲೋಕದ ಬಗ್ಗೆ ಅನನ್ಯವಾಗಿ ಸ್ಪಂದಿಸುತ್ತಾರೆ. ಈ ಶಕ್ತಿ ವಿಶೇಷವಿರುವುದರಿಂದಲೇ ಸ್ತ್ರೀಯರಲ್ಲಿ ಪರೇಂಗಿತಜ್ಞತೆಯ ಪ್ರಮಾಣವು ಅಧಿಕವಾಗಿರುತ್ತದೆ.

“ಮನೋಗತವನ್ನೂ, ಅಂತರಂಗದ ಇಂಗಿತವನ್ನೂ ಅವರವರ ಮುಖ ಲಕ್ಷಣಗಳಿಂದ ತಟ್ಟನೆ, ತಪ್ಪದೇ ಊಹಿಸುವ ಶಕ್ತಿಯೂ ಹೆಣ್ಣಿನಲ್ಲಿ ಗಂಡಿಗಿಂತಲೂ ವಿಶೇಷವಾಗಿ ಕಂಡು ಬರುತ್ತದೆ” (ಅದೇ. ಪು. ೩೭) ಎಂದು ಹೇಳುವುದೂ ಅನೇಕ ಅನುಮಾನಗಳಿಗೆ ಆಸ್ಪದವೀ ಯುತ್ತದೆ. ತಾಪಸಿಯ ರೂಪದಲ್ಲಿದ್ದ ರಾವಣನ ಕಣ್ಣುಗಳ ಅಭೀಪ್ಸೆಯನ್ನು ಗ್ರಹಿಸುವಲ್ಲಿ ದಯನೀಯವಾಗಿ ಸೋತ ಜಾನಕಿ, ದುಷ್ಯಂತನ ಭೃಂಗನಡೆಯ ಹಜ್ಜೆ ಗುರುತುಗಳನ್ನು ಅವನ ದೃಷ್ಟಿಯಾಳದಲ್ಲಿ ಗುರುತಿಸದ ಶಕುಂತಲೆ, ದೇವೇಂದ್ರನ ಕಪಟವನ್ನೊಡೆಯಲಾರದ (ಪ್ರಸಿದ್ಧ ಕಥಾನಕದಂತೆ) ಅಹಲ್ಯೆ ಮುಂತಾದವರ ನಡೆವಳಿಕೆಗಳನ್ನು ಈ ಅಭಿಪ್ರಾಯವು ಖಂಡಿಸುವುದಿಲ್ಲವೇ? ಅಥವಾ ಅವೆಲ್ಲವೂ ಈ ಸಾಮಾನ್ಯ ನಿಯಮದ ಅಪವಾದಗಳೇ? ಇಲ್ಲವೇ, ಇನ್ನೂ ಸಂಕೀರ್ಣವಾದ, ಐಚ್ಛಿಕವಾದ ಆಯ್ಕೆಯ ಪ್ರಸಂಗಗಳೇ? ಅಲ್ಲ, ಹೆಣ್ಣಿನ ‘ಪರೇಂಗಿತಜ್ಞತೆ’ಯೂ ಅವಳ ವಶವರ್ತಿಯೇ? ಇವೆಲ್ಲವೂ ವಿಸ್ತೃತವಾದ ಅಧ್ಯಯನಗಳನ್ನು ನಿರೀಕ್ಷಿಸುವ ಸವಾಲುಗಳಾಗಿವೆ. ಇಂಥ ಪ್ರಜ್ಞಾಪಾತಳಿಗೆ ನೇರ ದಾಳಿಯಿಡಬಲ್ಲ ಸಮಸ್ಯೆಗಳನ್ನು ಗುರುತಿಸುವಲ್ಲಿಯೇ ಕಾಯ್ಕಿಣಿಯವರ ವೈಚಾರಿಕತೆಯ ಸಾರ್ಥಕ್ಯವಿದೆಯೆನಿಸುತ್ತದೆ.

ಮುಂದೆ, ಹೆಣ್ಣಿನ ಸ್ವಭಾವದ ಭಾಗವಾಗಿರುವ ಹಿಂಜರಿಕೆಯನ್ನು ಕಾಯ್ಕಿಣಿಯವರು ಪ್ರಸ್ತಾಪಿಸುತ್ತಾರೆ. ಇದನ್ನು ಅವರು ‘ಆತ್ಮವಿಶ್ವಾಸದ ಅಭಾವ’ ‘ಮೊಂಡಾದ ಸಾಹಸದ ಮೊನೆ’ ‘ಶಾರೀರಿಕ-ವ್ಯಾವಹಾರಿಕ ಪರಾವಲಂಬನೆ’ ಮುಂತಾದ ವಿಶೇಷಣಗಳ ಬಳಕೆಯ ಮೂಲಕ ಸ್ಪಷ್ಟಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ, “……ಗಂಡಿಗಿಂತ ಹೆಣ್ಣು ಹೆಚ್ಚು ಪರಂಪರಾಪ್ರಿಯಳು; ಸಂಪ್ರದಾಯಶರಣಳು; ರೂಢಿಮೂಢಳು. ಅಂತೆಯೇ ಗತಾನುಗತಿಕಳು” (ಅದೇ. ಪು. ೨೫) ಎನ್ನುವ ಅಭಿಪ್ರಾಯವನ್ನು ಅವರು ಮಂಡಿಸುತ್ತಾರೆ. ಪ್ರಕೃತಿಯ ಮೂಲಕ ಹೆಣ್ಣಿಗೆ ದತ್ತವಾಗಿರುವ ಜೈವಿಕವಾದ ಸಂಗೋಪನೆಯ ಹೊಣೆಯು, ಸಾಂಸ್ಕೃತಿಕ ವಲಯಗಳನ್ನೂ ಆವರಿಸಿ ಬೆಳೆದುದೇ ಇಂಥ ಅನಿಸಿಕೆಗಳಿಗೆ ಕಾರಣವಾಗಿದೆ. ಈ ಚಿಂತನೆಯ ಒಂದು ಘಟ್ಟದಲ್ಲಿ ಅವರು.

‘ತೋರಿಕೆಯ ಭೇದವಿದ್ದರೂ ಮೂಲದಲ್ಲಿ ಹೆಣ್ಣು ಜನವೆಲ್ಲ ಒಂದೇ ಪಡಿಯಚ್ಚಿನಲ್ಲಿ ಮೂಡಿದಂತೆ ಇರುವರು” (ಅದೇ. ೪೦) ಎನ್ನುತ್ತಾರೆ. ವಾಸ್ತವಾಗಿ, ಹೆಣ್ಣಿಗೆ ‘ಅಸ್ಮಿತೆ’ಯ ಅಭಾವವಿಲ್ಲ ಬದಲಿಗೆ ಅದರ ಅಭಿವ್ಯಕ್ತಿಯ ಅವಕಾಶಗಳ ಕೊರತೆಯಿದೆಯೆನ್ನುವುದನ್ನು ಇಚ್ಛಾಪೂರ್ವಕ ಮರೆಯುವ ಕ್ರಮಕ್ಕೆ ಇಲ್ಲಿ ಉದಾಹರಣೆಯು ಸಿಗುತ್ತದೆ. ಹಾಗಾಗಿ, ಹೆಣ್ಣು ಒಂದೋ ಮುಗ್ಧೆಯಾಗಿರುತ್ತಾಳೆ, ಇಲ್ಲವೇ ಪ್ರಗಲ್ಭೆಯಾಗಿರುತ್ತಾಳೆ. ಇವೆರಡನ್ನೂ ಮೀರಿದ ಸ್ಥಿತಿಯಾಗಲಿ. ಇವೆರಡನ್ನೂ ನಿರಾಕರಿಸುವ ವಿಶಿಷ್ಟ ಜಗತ್ತಾಗಲಿ ಅವಳ ಉಪಸ್ಥಿತಿ ಯನ್ನು ಒಪ್ಪಿಕೊಳ್ಳುವುದಿಲ್ಲ. ಇದರ ಇನ್ನೊಂದು ಪರಿಣಾಮವನ್ನು ಅವರು ಹೆಣ್ಣಿನ ‘ಪರಪ್ರತ್ಯಯನೇಯಬುದ್ದಿ’ಯಲ್ಲಿ ಗುರುತಿಸುತ್ತಾರೆ. ಎಂದರೆ, ಹೆಣ್ಣಿನ ಅನುಕರಣಶೀಲತೆಯ ಹಿಂದೆ ಸ್ವಂತಿಕೆಯ ಅರಕೆಯಿರುತ್ತದೆನ್ನುವುದು ಇದರಿಂದ ಸಿದ್ಧವಾದಂತಾಗುತ್ತದೆ.

ಕಾಯ್ಕಿಣಿಯವರು ಕಾಣುವ ಹೆಣ್ಣು ‘ಮಾನಿನಿ’ಯಾಗಿದ್ದಾಳೆ. ಆತ್ಮಾಡಂಬರ, ಅಧಿಕಾರಲಾಲಸೆ, ಮಹತ್ವಾಕಾಂಕ್ಷೆ, ಆಶಾವಾದಗಳೆಲ್ಲವೂ ಅವಳಲ್ಲಿ ಮಡುಕಟ್ಟಿ ಕೊಂಡಿರುತ್ತವೆ. ಈ ಚರ್ಚೆಯ ಹರಿವಿನಲ್ಲಿ ಕಾಯ್ಕಿಣಿಯವರು ನಿಷ್ಕರ್ಷಿಸುವ ಅಂಶಗಳು ಕುತೂಹಲಕರವಾಗಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ :

“ಒಟ್ಟಾರೆ ಹೆಣ್ಣಿನ ವ್ಯಕ್ತಿತ್ವದಲ್ಲಿ ಒಳಿತಿಗೆ ಪೋಷಕವಾಗುವ ಗುಣಗಳು ಬೆಳೆಯಲು ಅನುವು ಹೆಚ್ಚು. ಮೂಲದಲ್ಲಿಯೇ ಆಕೆ ಅಬಲಳಾಗಿದ್ದು, ಪ್ರಕೃತಿಯಿಂದಲೇ ಆಶ್ರಯವನ್ನೂ ಆಧಾರವನ್ನೂ ಬಯಸಿ ಪಡೆದು ಜೀವಿಸಬೇಕಾದ ಪರಿಸ್ಥಿತಿಯು ಹೆಣ್ಣಿನದಾಗಿದ್ದರಿಂದ ಅದಕ್ಕೆ ಅನುಕೂಲವಾಗಿಯೇ ಆಕೆಯ ಮನಃಸ್ಥಿತಿಯು ಮಾರ್ಪಟ್ಟು ಬಂದಿದೆ. ಅಂತೆಯೇ ಸಾಮಾಜಿಕತೆಗೆ ಪೋಷಕವಾಗುವ ಗುಣಗಳಿಗೆಲ್ಲ ಹೆಣ್ಣು ನೆಲೆಯಾಗಿದ್ದಾಳೆ. ಬಿಂಕದೊಡನೆ ಬಿನ್ನಾಣವನ್ನೂ, ಮುನಿಸಿನೊಡನೆ ಮಾರ್ದವವನ್ನೂ ಆಗ್ರಹದೊಡನೆ ಆರ್ಜವವನ್ನೂ ಆಕೆ ಕೂಡಿಸಬಲ್ಲಳು” (ಅದೇ. ಪು. ೪೬) ಅಂದರೆ, ಸ್ತ್ರೀತ್ವವು ಸ್ತೈಣ-ಪುರುಷ ಭಾವಗಳೆರಡಕ್ಕೂ ನೆಲೆಮನೆಯೆಂದಂತಾಯಿತು. ಇದರ ಮಗ್ಗುಲಿಗೆ ಕಾಯ್ಕಿಣಿಯವರು ಕಡೆದ ಪುರುಷ ಪ್ರತಿಮೆಯನ್ನಿಟ್ಟು ನೋಡಿದಾಗ ಹೋಲಿಕೆಯು ಹೆಚ್ಚು ಸುಲಭವಾಗುತ್ತದೆ; ಸಮರ್ಪಕ ವಾಗುತ್ತದೆ.

ಅವರ ಪ್ರಕಾರ ಗಂಡಿಗೆ ಏಕಾಂತ ಪ್ರಿಯತೆಯು ಹೆಚ್ಚು. ಆತ ಜೀವನವಿಡೀ ಒಬ್ಬಂಟಿಯಾಗಿ ಇರಬಲ್ಲವನು. ನಮ್ಮ ಪರಂಪರೆಯು ಗಂಡಿನ ನಾಲ್ಕು ಮಾದರಿಗಳಾಗಿ ಉದಾತ್ತ, ಉದ್ಧತ, ಶಾಂತ ಮತ್ತು ಲಲಿತ, ಪ್ರಭೇದಗಳನ್ನು ಗುರುತಿಸಿದೆ.

“ಇವುಗಳಲ್ಲಿಯೂ ಕಲಬೆರಕೆಯ – ಹಲಬೆರಕೆಯ ರೂಪಗಳೂ ಹೇರಳವಾಗಿ ಗಂಡಿನಲ್ಲಿ ಕಂಡು ಬರುತ್ತವೆ” (ಅದೇ. ಪು. ೪೧) ಎಂದು ಕಾಯ್ಕಿಣಿಯವರು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಹೆಣ್ಣಿಗೆ ಸಹಜವಾಗಿ ಮೈಗೂಡಿಕೊಳ್ಳುವ ವಿನಯ, ಸಾತ್ವಿಕತೆ, ಸೇವಾವೃತ್ತಿ, ಪರೋಪಕಾರ, ಸಹಾನುಭೂತಿ ಮುಂತಾದ ‘ಸಾಮಾಜಿಕ ಸದ್ಗುಣ’ಗಳನ್ನು ಗಂಡು ಪ್ರಯತ್ನ ಪೂರ್ವಕವಾದ ಅಭ್ಯಾಸಗಳಿಂದ ರೂಢಿಸಿಕೊಳ್ಳಬೇಕಾಗುತ್ತದೆ. ಆತ ತನ್ನ ಸಾಮಾಜಿಕ ಸ್ಥಾನಮಾನಗಳ ಸಂಪೂರ್ಣ ಅರಿವಿನೊಂದಿಗೇ ಅದರ ಬಗೆಗಿನ ನಿರ್ಲಿಪ್ತಿಯನ್ನೂ, ಮರವೆಯನ್ನೂ ಗಳಿಸಿಕೊಳ್ಳುತ್ತಾನೆ. ಮಣಿಸಿ ಆಳುವುದು ಆತನ ಸಂವಿಧಾನದಲ್ಲಿಯೇ ಅಡಕವಾಗಿದೆ. ಹಾಗಾಗಿಯೇ ಆತ ‘ಪುರುಷಾರ್ಥವಾದಿ’ಯೆನ್ನುವುದು ಹೆಚ್ಚು ಸರಿಯೆನಿಸುತ್ತದೆ. ಇಲ್ಲಿ ಲೇಖಕರು ಗಂಡು ಸ್ವಭಾವದ ಒಂದು ಮುಖ್ಯ ಮಿತಿಯನ್ನು ಹೀಗೆ ಉಲ್ಲೇಖಿಸುತ್ತಾರೆ: “ಗಂಡಿನ ಆದರ್ಶವಾದವೂ, ಪುರುಷಾರ್ಥವೂ ಅಪಯಶದ ಪರಂಪರೆಯನ್ನು ಬಹುಕಾಲ ತಡೆದು ನಿಲ್ಲದು. ಗೆಲುವಿನ ರಥವನ್ನೇರಿಯೇ ಗಂಡಿನ ಮನೋರಥವು ಮುಂದುವರಿಯುವುದು. ಗಂಡಿನ ಆಶೆಗೆ ಎತ್ತರ ಹೆಚ್ಚಿದಂತೆಯೇ ತಳದ ಆಧಾರ ಅಷ್ಟೊಂದು ಭದ್ರವಿರುವುದಿಲ್ಲ. ಅಂದರೆ, ಎಲ್ಲ ರೀತಿಯಿಂದಲೂ ಹತಾಶನಾದ ಗಂಡು ಬದುಕನ್ನೇ ಭಾರವಾಗಿ ಕಾಣುತ್ತಾನೆ (ಅದೇ. ಪು. ೫೧) ಎಂದರೆ, ಹೆಣ್ಣಿನ ಮನೋಭಾವ, ಸೋಲಿಗೆ ಸದಾ ಸನ್ನದ್ಧವಾಗಿರುತ್ತದೆ. ಅವಳ ಯಶಸ್ಸು ತಾತ್ಕಾಲಿಕವಾಗಿಯಾದರೂ ಆಗಿರಬಹುದು. ಅನ್ಯಾನ್ಯ ಶಕ್ತಿಗಳೊಂದಿಗೆ, ಅಂಶಗಳೊಂದಿಗೆ ಗೊಣಸು ಕೂಡಿಸಿಕೊಂಡಿರುವವುಗಳೂ ಆಗಿರಬಹುದು. ಇದನ್ನೇ ‘ಆತ್ಮವಿಶ್ವಾಸದ ಕೊರತೆ’, ‘ಹಿಂಜರಿಕೆ’ ಎಂದು ಬದಿಗೆ ಸರಿಸುವುದೂ ಸುಲಭಸಾಧ್ಯ, ಅನುಕರಣಾರ್ಹ ಗುಣವಾಗಿ ಮೌಲ್ಯಾಂಕಗಳನ್ನು ನೀಡುವುದೂ ಅಷ್ಟೇ ಸರಳ.

ಅಭಯ ಅಥವಾ ನಿರ್ಭಯದಿಂದಲೇ ‘ಸತ್ವಸಂಸಿದ್ದಿ’ಯೆನ್ನುವುದು ಪುರುಷನಿಗೆ ತಿಳಿಯದ ವಿಚಾರವೇನೂ ಅಲ್ಲ. ಆದರೆ ಆತನ ಬಹುತೇಕ ನಿಲುವುಗಳೂ ನಿರ್ಧಾರಗಳೂ ಸಾಮಾಜಿಕ ಸ್ಥಿತ್ಯಂತರಗಳ ಸಾಧ್ಯತೆಗಳನ್ನು ಗಮನಿಸಿಯೇ ರೂಪತಾಳುತ್ತವೆ. ಅಂಥವರ, “ಬಾಳಿನ ಭಯವೆಲ್ಲ ಸಂಶಯದ ವೃತ್ತಿಯಾಗಿ ಸ್ಫುಟವಾಗುತ್ತದೆಯೆನ್ನುವ ಕಾಯ್ಕಿಣಿಯವರು, ಕಪಟ ವರ್ತನೆ, ಡಾಂಭಿಕತನ, ವಂಚನೆಗಳು ಈ ಪ್ರವೃತ್ತಿಯ ಶಾಖೆಗಳಾಗಿ ಟಿಸಿಲೊಡೆಯುತ್ತ ವೆನ್ನುತ್ತಾರೆ. ಈ ಸನ್ನಿವೇಶದಲ್ಲಿ ಅವರು, ಪ್ರಶಂಸಾಪೇಕ್ಷಿ ವ್ಯಕ್ತಿತ್ವಕ್ಕೂ ಡಂಭಾಚಾರಿಗೂ ಇರುವ ವ್ಯತ್ಯಾಸಗಳನ್ನು ಹೀಗೆ ಬಯಲಿಗಿಡುತ್ತಾರೆ :

“….. ಪ್ರಶಂಸಾಪೇಕ್ಷಿಗಳು ಮಂದಿಯ ಮುಂದೆ ತಮ್ಮ ದೋಷಗಳನ್ನು ಮುಚ್ಚಲೂ ಗುಣಗಳನ್ನು ಹೆಚ್ಚಿಸಿ ತೋರಿಸಲೂ ಯತ್ನಿಸುತ್ತಾರೆ. ಆದರೆ ಡಂಭಾಚಾರಿಯು ತನ್ನ ದೋಷವೇ ಒಂದು ವಿಶೇಷ ಗುಣವೆಂದು ಕಾಣಿಸಲು ಹೆಣಗುತ್ತಾನೆ; ತನ್ನಲ್ಲಿ ಎಂದೂ ಇಲ್ಲದ ಗುಣವನ್ನು ತಾನೇ ಕಂಡುಕೊಂಡು ಅದನ್ನು ಮಂದಿಯ ಮುಂದೆ ಬಿಂಬಿಸಲು ಹವ್ಯಾಸ ಪಡುತ್ತಾನೆ (ಅದೇ. ಪು. ೫೯). ತನಗಿಂತ ವರಿಷ್ಠರ ಎದುರು ನಿಕೃಷ್ಟವಾಗಿ, ದಯನೀಯವಾಗಿ ಬಾಗುವ ಇಂಥ ವ್ಯಕ್ತಿಯು ತನಗಿಂತ ಕನಿಷ್ಟರ ಎದುರು ತೀರಾ ದಾರ್ಷ್ಟ್ಯದಿಂದಲೂ ವ್ಯವಹರಿಸುತ್ತಾನೆ. ಮಾತ್ರ, “ತನ್ನದೇ ಒಂದು ಅಳತೆಯಿಂದ ಸಮಾಜದಲ್ಲಿ ಮನ್ನಣೆಯ ತಾರತಮ್ಯಗಳನ್ನೂ, ಅವನು ಕಟ್ಟಿಕೊಂಡು ಆ ನಡುವೆ ತನ್ನ ಅಂತಸ್ತು ಗೊತ್ತುಪಡಿಸುವುದರಲ್ಲಿಯೇ ನುಗ್ಗಾಗಿ ಹೋಗುತ್ತಾನೆ (ಅದೇ.). ಇದು ಭ್ರಮೆಯ ಹುತ್ತದೊಳಗೆ ಹೊರಳಾಡುವ ಸ್ವಾನುಕಂಪದ ಪರಿಯೇ ಆಗಿದೆ.

ಕಾಯ್ಕಿಣಿಯವರು ಪ್ರತಿಪಾದಿಸುವ ಪುರುಷ ಪ್ರವೃತ್ತಿಗಳಲ್ಲಿ ದಬ್ಬಾಳಿಕೆ, ತಲೆತಿರುಕತನ, ಹರವಾದ, ಖಂಡಿತ ಮತವಾದಗಳೂ ಸೇರುತ್ತವೆ. ಇಂಥವರ ಬಗೆಗೆ, “ಮನಸ್ಸಿನಲ್ಲಿ ಒಂದೇ ವೃತ್ತಿ ಇಲ್ಲವೇ ಅಭಿಪ್ರಾಯ ಸ್ಥಿರವಾಗಿ ನಿಂತು ಇಡೀ ಬಾಳನ್ನೇ ಅದು ಆಳತೊಡಗುವುದು. ಒಂದು ಕಿರಿದಾಗಲಿ, ಹಿರಿದಾಗಲಿ ವಿಕೃತಿಯು ಅಥವಾ ಅಕ್ಷಿಪ್ತ ವೃತ್ತಿಯು ಇವರ ನಡತೆಯಲ್ಲಿ ವ್ಯಕ್ತವಾಗುವುದು (ಅದೇ. ಪು. ೬೩) ಎನ್ನುವ ಅಭಿಪ್ರಾಯವನ್ನು ಅವರು ಮಂಡಿಸುತ್ತಾರೆ. ಇದಕ್ಕಿಂತ ತೀರಾ ಭಿನ್ನವಲ್ಲದ ‘ಪರವಂಚನೆಗಿಂತ ಆತ್ಮವಂಚನೆ’ಯೇ ಹಿರಿದಾಗಿರುವ ಪುರುಷರ ಪ್ರಕಾರವೊಂದನ್ನು ಅವರು ಪರೀಕ್ಷಿಸುತ್ತಾರೆ. ಆ ನೆಲೆಯಿಂದ, ‘ಸತ್ಯವನ್ನು ಇದಿರಾಗದೇ ಅದರಿಂದ ಪಾರಾಗುತ್ತಿರುವಾಗಲೂ ಅದರ ಕುರಿತೂ ಕೂಡಾ ಆಡಂಬರದ ಆಶ್ವಾಸನೆಗಳನ್ನು ಮಾಡಿ ತನ್ನನ್ನೇ ತಾನು ಒಡಂಬಡಿಸಿ ಕೊಳ್ಳುವುದು ಇಂಥ ಪಲಾಯನಪಟುಗಳ ಲಕ್ಷಣ. ಉತ್ತರಕುಮಾರನ ಸರಳವಾದ ಹೇಡಿತನ ಇವರದಲ್ಲ. ಅಶ್ವತ್ಥಾಮನ ವಕ್ರಗತಿಯು ಇವರದು“ (ಅದೇ. ಪು. ೬೨-೩) ಎನ್ನುವಂಥ ಅಭಿಪ್ರಾಯಗಳನ್ನು ಅವರು ಪ್ರಕಟಿಸುತ್ತಾರೆ. ಇಂಥ ದೌರ್ಬಲ್ಯಗಳಿರುವ ವ್ಯಕ್ತಿಗಳಲ್ಲಿ ಅಪೂರ್ವ ಕಲ್ಪನಾಶಕ್ತಿ, ನಿರ್ಮಾಣ ಕೌಶಲಗಳು ಅಡಕವಾಗಿರುವುದನ್ನೂ ಅವರು ಗುರುತಿ ಸುತ್ತಾರೆ. ಇದು, ಅವರು ಗಳಿಸಿಕೊಂಡ ನಿಚ್ಚಳವಾದ ದೃಷ್ಟಿಗೆ ಸಾಕ್ಷಿಯಾಗುತ್ತದೆ. ಪುರುಷ ಸ್ವಭಾವದ ಇನ್ನೊಂದು ಮಾದರಿಯಲ್ಲಿ ಆಶೆ-ನಿರಾಶೆಗಳೆರಡರ ಅತಿಗಳಿವೆಯೆಂದು ಕಾಯ್ಕಿಣಿ ಯವರು ಸಾಧಾರವಾಗಿ ವಾದಿಸುತ್ತಾರೆ. ಎಂದರೆ, ಬರೀ ಬದುಕಿನ ಹೊಳಪಿನ ಬದಿಯನ್ನು ಮಾತ್ರವೇ ಕಾಣುವ ‘ಸಂತುಷ್ಟಿ’ಯ ಭ್ರಮೆ, ಇಲ್ಲವೇ ಅಲ್ಲಿ ಕೇವಲ ಕಗ್ಗತ್ತಲ ಖಂಡಾಂತರ ಗಳನ್ನೋ ಗಂಡಾಂತರಗಳನ್ನೋ ಕಾಣುತ್ತ ಸಂಕಟಕ್ಕೇ ತನ್ನನ್ನು ಸಾಗಿಸಿಕೊಳ್ಳುವ ಪರಿಗಳೆರಡನ್ನೂ ಅವರು ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ; ಯಶಸ್ವಿಯಾದ ಬದುಕು ಬಯಸುವುದು ಇವೆರಡರ ಭಾವಪೂರ್ಣವಾದ ಸಂಗಮವನ್ನು, ಎನ್ನುವ ನಿಲುದಾಣವನ್ನು ಪ್ರವೇಶಿಸುತ್ತಾರೆ.

ಈ ಚರ್ಚೆಯ ನಿರ್ಣಾಯಕ ಹಂತವೊಂದರಲ್ಲಿ ಕಾಯ್ಕಿಣಿಯವರು, “ಪ್ರತಿವ್ಯಕ್ತಿಯೂ ಅರ್ಧನಾರೀನರೇಶ್ವರನೇ ಸರಿ; ಪ್ರತಿ ಗಂಡಿನಲ್ಲಿಯೂ ಹೆಣ್ಣು ಮನೋಧರ್ಮದ ಕೆಲವಂಶವೂ, ಪ್ರತಿ ಹೆಣ್ಣಿನಲ್ಲಿಯೂ ಗಂಡು ಮನೋಧರ್ಮದ ಕೆಲವಂಶವೂ ಇದ್ದೇ ಇರುತ್ತದೆ. ಶರೀರ ಭೇದದಿಂದ ಹೆಣ್ಣು-ಗಂಡು ಸ್ಥೂಲವಾಗಿ ಸ್ಪಷ್ಟವಿದ್ದರೂ ಮನೋಧರ್ಮದಲ್ಲಿ ಅಷ್ಟೊಂದು ಭೇದ ಸೂಕ್ಷ್ಮವಾಗಿ ಬೇರ್ಪಟ್ಟಿರುವುದಿಲ್ಲ” (ಅದೇ. ಪು. ೬೬) ಎಂಬ ಸಾರ್ವಕಾಲಿಕ ವಾಗುವಂಥ ನಿರ್ಣಯವೊಂದನ್ನು ಪ್ರಸ್ತುತಪಡಿಸುತ್ತಾರೆ.

ಇದರೊಂದಿಗೆ, ಅಂಥ ಭೇದಗಳು ಸಂದರ್ಭ ಸಾಪೇಕ್ಷವೆನ್ನುವ ಅಂಶವೂ ಗಮನಾರ್ಹ ವಾಗುತ್ತದೆ. (ಅ.) ಕಾಯ್ಕಿಣಿಯವರು ಹೆಸರಿಸುವ ಸೌಮ್ಯ, ಸಭ್ಯ, ಚತುರ, ಆಕ್ರಮಕ, ಪರಿಶ್ರಮಿ, ಸೌಂದರ್ಯಾಪೇಕ್ಷೆಗಳೆಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ, ಸಂದರ್ಭದಿದ ಸಂದರ್ಭಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತವೆ.

ತಮ್ಮ ವಾದದ ಮುಗಿತಾಯದ ಘಟ್ಟದಲ್ಲಿ ಅವರು ಕೆಲವು ಪ್ರಶ್ನೆಗಳನ್ನು ಎತ್ತುತ್ತಾರೆ. ಉದಾಹರಣೆಗೆ,

“ಹೆಣ್ಣು ಗಂಡಿನ ಈ ಮನೋಧರ್ಮದ ವ್ಯತ್ಯಾಸ ಮೂಲಭೂತವೇ… ಅಪರಿಹಾರ್ಯವೇ… ಈ ವ್ಯತ್ಯಾಸಗಳು ಆನುವಂಶಿಕವೇ ಅಲ್ಲ ಅರ್ಜಿತವಾದವುಗಳೇ…” ಮುಂತಾದುವುಗಳಿಗೆ ತಮ್ಮವೇ ಆದ ಪರಿಹಾರಗಳನ್ನೂ ಅವರು ಹೀಗೆ ನಿರೂಪಿಸುತ್ತಾರೆ. “ಈ ವ್ಯತ್ಯಾಸಗಳೆಲ್ಲ ಹೆಣ್ಣು ಗಂಡಿನ ಮೂಲ ಪ್ರವೃತ್ತಿಗಳ ಶಾರೀರಿಕ ರಚನೆಯ ಹಾಗೂ  ದೇಹ ಧರ್ಮಗಳ ಹುಚ್ಚು ಚಟಗಳೊಡನೆ ಕೂಡಿ ಬಂದಿವೆಯಾದರೂ ಅವು ಬಹುಭಾಗ ಸಾಮಾಜಿಕ ಸಂಸಾರದ ಫಲವಾಗಿ ಬಂದು ವೈಯಕ್ತಿಕವಾಗಿ ಸಂಪಾದಿಸಲ್ಪಟ್ಟಿರುವವು. ಕೆಲವೊಂದು ಕಾಲಖಂಡದಲ್ಲಿ, ಕೆಲವೊಂದು ಭೂಖಂಡದಲ್ಲಿ ಗಂಡು ಸಾವಿರಾರು ಆದರ್ಶಗಳನ್ನು ಹೆಣ್ಣು ಜೀವನದ ಮೇಲೆ ಹೇರಿ ಬಂದುದರ ಪರಿಪಾಕವಾಗಿಯೇ ಹೆಣ್ಣು ಗಂಡಿನ ಮೂಲ ವ್ಯತ್ಯಾಸವು ಜಟಿಲ, ಕುಟಿಲ, ವೈಷಮ್ಯಗಳ ವಿಕೃತ ರೂಪ ತಾಳಿದೆ” (ಅದೇ.  ಪು. ೮೯). ಈ ಸಿದ್ಧಾಂತವನ್ನು ಅನ್ಯಾನ್ಯ ಶಾಸ್ತ್ರಗಳ, ತತ್ತ್ವಗಳ ಸಂದರ್ಭಗಳಲ್ಲಿಯೂ ಇಟ್ಟು ಪುನಃ ಮೌಲ್ಯಮಾಪನ ಮಾಡಬಹುದು.

ಒಟ್ಟಿನಲ್ಲಿ ಈ ಭಾಗಗಳಲ್ಲಿ ಕಾಯ್ಕಿಣಿಯವರು ಮಂಡಿಸುವ ವಿಚಾರಗಳು ಮುಕ್ತ ಸಂವಾದಕ್ಕೆ ಅಪಾರ ಅವಕಾಶಗಳನ್ನು ಕಲ್ಪಿಸುತ್ತವೆ. ಸಮಕಾಲೀನವಾದ, ಆಧುನಿಕ ಚಿಂತನ ಕ್ರಮಗಳಿಗೂ ರುಚಿಸುವಷ್ಟು ಪೋಷಕದ್ರವ್ಯ ಸಂಪನ್ನವಾಗಿವೆ. ಅನಗತ್ಯ ಸ್ಪರ್ಧೆಗೆ ಬಿದ್ದು ಅಪೂರ್ಣ ವ್ಯಕ್ತಿಯಾಗುವ ವೈಕಲ್ಯಕ್ಕಿಂತ, ಸ್ವಂತದ ಮಿತಿಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತ, ಪ್ರಗತಿಯ ಹಾದಿಯುದ್ದಕ್ಕೂ ಹಾಸಿ ಬಿದ್ದಿರುವ ಶ್ರಮಸಂಸ್ಕೃತಿಯ ಚೆಲುವಿನ ತುಣುಕುಗಳನ್ನಾಯುತ್ತ, ಅಲ್ಲಿ ಸಿಗುವ ಸಂತಸದ ಸೀರ್ಪನಿಗಳಿಗೆ ಬೊಗಸೆಯೊಡ್ಡುವ ಸಂಭ್ರಮದ ಸೆಳೆತವೇ ಮಿಗಿಲಾಗಬೇಕಲ್ಲವೆ? ಇಂಥ ನಿಜಕ್ಕೆ ನಿಚ್ಚಣಿಕೆಯಾಗುವ ಗೌರೀಶ ಕಾಯ್ಕಿಣಿಯವರ ಅಕ್ಷರದ ಈ ಸೊತ್ತು ಅಕ್ಷಯವೂ ಆಗಲಿ, ಸತ್ಯದ ಅನ್ವೇಷಣೆಗಳಿಗೆಲ್ಲ ಹಿರಿದ ಹೆಬ್ಬಾಗಿಲಾಗಲಿ!