ಸ್ವಂತದ ಸೃಷ್ಟಿಯಲ್ಲಿ ತನ್ನ ಅಸ್ತಿತ್ವಕ್ಕೆ ಅರ್ಥವನ್ನು ಕಂಡುಕೊಳ್ಳುವ ಮನುಷ್ಯನ ಚೈತನ್ಯವು ಸದಾ ಹೊಸ ಗತಿ-ವಿಧಿಗಳ ಹುಡುಕಾಟಗಳಲ್ಲಿ ಆಸಕ್ತವಾಗಿರುತ್ತದೆ. ತಾನು ಆಯ್ದುಕೊಂಡ ಮಾಧ್ಯಮದ ಶಿಲ್ಪ-ಸತ್ವಗಳನ್ನೂ, ಅಭಿವ್ಯಕ್ತಿಯ ಚಹರೆಗಳನ್ನೂ ನಿರಂತರವಾಗಿ, ನಿಯಮಿತವಾಗಿ ಬದಲಾಯಿಸುವ ರೋಚಕ ಅನುಭವಗಳಿಗಾಗಿ ಅವನು ಕಾತರದಿಂದ ಕಾಯುತ್ತಿರುತ್ತಾನೆ. ಸ್ಥೂಲ-ಸೂಕ್ಷ್ಮ ಸಂವೇದನೆಗಳನ್ನೇ ಮೂಲದ್ರವ್ಯಗಳಾಗಿ ಸ್ವೀಕರಿಸುವ ಸಾಹಿತ್ಯದ ಸಂದರ್ಭಗಳೂ ಈ ಹೇಳಿಕೆಗೆ ಹೊರತಾಗಲಾರವು. ಎಲ್ಲ ಸಾಹಿತಿಗಳೂ ತಂತಮ್ಮ ವಸ್ತು, ತಂತ್ರ, ಭಾಷೆ, ಶೈಲಿ-ಬಂಧ, ಆಶಯ ಮುಂತಾದುವುಗಳಲ್ಲಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ; ಪರಿವರ್ತನೆಗಳಿಗೆ ಮುಕ್ತವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸಮಕಾಲೀನ ಕನ್ನಡ ಸಾಹಿತ್ಯವು, ಈ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಪ್ರಕ್ರಿಯೆಯಲ್ಲಿ, ಅನೇಕ ಸಾಹಿತಿಗಳ ಶೋಧ ಕ್ರಮಗಳಿಗೆ ಉತ್ತೇಜನವನ್ನು ನೀಡಿದೆ. ಅದರ ಫಲಿತವಾಗಿ ತುಂಬ ಮಹತ್ವದ ಕೃತಿಗಳೂ ನಿರ್ಮಾಣ ಗೊಂಡಿವೆ. ಈ ಮಾದರಿಯ ವಿಶಿಷ್ಟ ರಚನೆಗಳಲ್ಲಿ ಒಂದಾಗಿ ಶ್ರೀ ಕುಸುಮಾಕರ ದೇವರಗೆಣ್ಣೂರ ಅವರ ಇತ್ತೀಚೆಗಿನ ‘ಬಯಲು-ಬಸಿರು’ (೨೦೦೪) ಕಾದಂಬರಿಯು ಪರಿಗಣನೆಗೆ ಅರ್ಹವಾಗುತ್ತದೆ.

ಈ ಕಾದಂಬರಿಯು ತನ್ನ ಪ್ರಪಂಚ ಪ್ರವೇಶ ಸನ್ನದ್ಧನಾಗುವ ಓದುಗನನ್ನು ಸ್ವಾಗತಿಸುತ್ತಾ, “ಈ ಕೃತಿಯು ಒಂದು ಸಾಹಸ ಎನ್ನಬಹುದು. ಇಲ್ಲಿ ಸಹೃದಯನಿಗೆ ವಿಸ್ಮಯವು ಕಾದಿದೆ. ಸಹೃದಯನ ಪಾದಸ್ಪರ್ಶದಿಂದ ಈ ಶಿಲೆಗೆ ಜೀವ ಬರಬೇಕು. ಪ್ರೌಢತೆಯ ಆದ್ಯತೆಯಿಂದ ಇದನ್ನು ನೋಡುವ ಬದಲು, ಹೊಚ್ಚ ಹೊಸ ಮಗುವಿನ ಬೆರಗು ಕಣ್ಣುಗಳಿಂದ ನೋಡಬೇಕು. ಆಗ ಇದರ ಸೌಂದರ್ಯವು ಮೈದಾಳುತ್ತದೆ. ಇದರ ವಾಣಿಯು ಕಿವಿಗೆ ಕೇಳುತ್ತದೆ” ಎನ್ನುವ ಸೂಚನೆಯನ್ನು ನೀಡುತ್ತದೆ. ಎಂದರೆ, ಪೂರ್ವ ಗಳಿಕೆಯ ಭಾವ-ಭಾರ-ಭರಗಳನ್ನು ಕಳಚಿಟ್ಟು, ಹಗುರವಾದ, ವಿಸ್ಮಯವನ್ನು ಸ್ಥಾಯೀಯಾಗಿ  ಹಿಡಿದಿಟ್ಟುಕೊಂಡ ಚಿತ್ರವೃತ್ತಿಗಷ್ಟೇ ಇದರ ಚೆಂದ-ಚಿತ್ತಾರಗಳು ಗೋಚರಿಸಬಲ್ಲುವು. ಪಾರಿಭಾಷಿಕಗಳ ವಾಗ್ದಾಳಿಗಳನ್ನೂ ವಿಮರ್ಶೆಯ ಕಟು ಸ್ಪರ್ಶಗಳನ್ನೂ ನಯವಾಗಿ ನಿಷೇಧಿಸುವ ಅದು, ಬೇರೆಯೇ ನೆಲೆಯ ರಸಾಸ್ಪಾದನೆಗೆ ನಮ್ಮನ್ನು ಸಜ್ಜುಗೊಳಿಸುತ್ತ, ತಾನೂ ಅದಕ್ಕೆ ಅಣಿಯಾಗುತ್ತದೆ. ಹಾಗಾಗಿ, ಈ ಕೃತಿಯೊಳಗಿನ ವ್ಯಾಪಾರಗಳನ್ನು ಗ್ರಹಿಸುವ  ಪ್ರಯತ್ನವೂ ಆ ಸೀಮೆಗಳನ್ನು ಉಲ್ಲಂಘಿಸುವುದಿಲ್ಲ. ಆ ಮಿತಿಗಳ ಅಂಚುಗಳಲ್ಲೇ ನಿಂತು, ‘ಬಯಲು-ಬಸಿರು’ ಕಾದಂಬರಿಯ ಮೊದಲ ಓದಿನಿಂದ ಉದ್ಭವವಾದ ಕೆಲವು ಅನಿಸಿಕೆ ಗಳನ್ನೂ, ಸಂದೇಹಗಳನ್ನೂ, ಸಮಸ್ಯೆಗಳನ್ನೂ ಇಲ್ಲಿ ನಿರೂಪಿಸುತ್ತಿದ್ದೇನೆ.

ಈ ಕೃತಿಯ ಅಂತರಂಗದಲ್ಲಿ ವೈವಿಧ್ಯಮಯವಾಗಿರುವ ದ್ವಂದ್ವಗಳ ಸಮಾವೇಶಗಳು ನಡೆಯುತ್ತಿರುತ್ತವೆ. ಮನುಷ್ಯನ ಜೀವಿತ ಯಾನವು ಬಸಿರಿನ ಭದ್ರತೆಯಿಂದ ಅರಕ್ಷಿತವಾದ ಬಯಲಿಗೋ, ಬಯಲಿನ ಪಾರದರ್ಶಕತೆಯಿಂದ ಒಳಮನೆಯ ಗುಪ್ತವಾಸದೆಡೆಗೋ, ಅಥವಾ ಅದೊಂದು ಚಕ್ರಭ್ರಮಣವೋ ಎನ್ನುವ ಪ್ರಶ್ನೆಯು ನಮ್ಮ ಜಿಜ್ಞಾಸುಗಳನ್ನು ಕಾಡುತ್ತಲೇ ಬಂದಿದೆ. ಈ ಕಾದಂಬರಿಯು, ನಿರ್ದಿಷ್ಟವಾದ ಒಂದು ನಂಬಿಕೆಯ ಆಶ್ರಯ ಮತ್ತು ನೆಲೆಯೇ ಸಿಗದ ಸಂಘರ್ಷಗಳ ಅತಂತ್ರಾವಸ್ಥೆಗಳಲ್ಲಿ ಯಾವುದು ನಿಜವೆನ್ನುವ ಸವಾಲನ್ನೂ ಅದರ ಮಗ್ಗುಲಲ್ಲಿಯೇ ತಂದು ಸ್ಥಾಪಿಸುತ್ತದೆ.

ಭೋಗಪ್ರಧಾನವಾದ ಅಮೆರಿಕ ದೇಶದ ಪ್ರಜೆಯೊಬ್ಬ. ಅಧ್ಯಾತ್ಮಶೀಲ ಸಂಪನ್ನವಾದೀ ಭಾರತದಿಂದ ಆಕರ್ಷಿತನಾಗುವ ಕಥೆಯ ತೆಳುಹಂದರದಡಿಯಲ್ಲಿ, ಈ ಕೃತಿಯು ಗಂಭೀರ ವಾದ ತಾತ್ತ್ವಿಕ ಚಿಂತನಸತ್ರಗಳನ್ನು ಆಯೋಜಿಸುತ್ತದೆ. ಇಲ್ಲಿ ನೆಲದ ನಂಟನ್ನು ನಿರಾಕರಿ ಸುವುದರ ಮೂಲಕ, ಆತ ರಕ್ತಗತವಾಗಿದ್ದ ತನ್ನ ಶ್ರದ್ಧೆಯ ಕೇಂದ್ರವನ್ನೇ ಬದಲಾಯಿಸಿ ಕೊಳ್ಳುತ್ತಾನೆ. ಅಪರಿಚಿತ ನಾಡಿನ, ಸಂಸ್ಕೃತಿ, ಧರ್ಮ, ಮನೋವೃತ್ತಿಗಳನ್ನು ಸಂಧಿಸುತ್ತ ಆತನು ರೂಪಾಂತರ ಹೊಂದಿದ ಅನುಕ್ರಮಣಿಕೆಯು ಇಲ್ಲಿದೆ. ಅದು ನಿಜವಾಗಿಯೂ ಹೊಸ ರೂಪಧಾರಣೆಯೇ ಅಲ್ಲ ಬರಿಯ ಹೊರ ಕವಚಗಳ ಬದಲಾವಣೆಯೇ ಎನ್ನುವುದರ ಪರೀಕ್ಷೆಯೂ ಇಲ್ಲಿ ನಡೆದಿದೆ. ಆ ವ್ಯಕ್ತಿ, ನಾರ್ಮ್ಯಾನ್‌ನು ತನ್ನನ್ನು ಆವರಿಸಿದ್ದ ಗೂಢ-ಗಾಢ ಪದರಗಳನ್ನು ಛೇದಿಸಿಕೊಳ್ಳುತ್ತ ಸಾಗುವುದರಲ್ಲಿ ಈ ಕೃತಿಯ ವಿನೂತನತೆಯಿದೆ. ಹಾಗೆ ಅನಾವೃತಗೊಂಡ ಪ್ರತಿ ರೂಪವೂ ತನ್ನದೇನೋ ಎನ್ನುವ ಭ್ರಮೆಯನ್ನೂ, ಅದರ ಬೆನ್ನಿಗೇ ಅದು ತಾನಲ್ಲವೆಂಬನಿರಸನವನ್ನೂ, ಮತ್ತೆ ಮತ್ತೆ ತನ್ನ ವಾಸ್ತವ ಸ್ವರೂಪದ ಬಗೆಗಿನ ಕುತೂಹಲವನ್ನೂ ಅವನು ಅನುಭವಿಸುತ್ತಲೇ ಇರುತ್ತಾನೆ, ಒಳಲೋಕದ ಅನ್ವೇಷಣೆಗೆ ತೊಡಗುತ್ತಲೇ ಇರುತ್ತಾನೆ. ಬೆಳೆಯಬೇಕೆನ್ನುವ ಅದಮ್ಯ ಒತ್ತಡದಲ್ಲಿ, ಮುರುಟಿ ಹೋಗುತ್ತಿದ್ದೇನೇನೋ ಎನ್ನುವ ಭಯದ ಒಡಲಲ್ಲಿಯೇ, ಈ ಗರ್ಭಾಶಯದಿಂದ ಹೊರಬರಲೇಬೇಕು; ಹೊಕ್ಕುಳ ಬಳ್ಳಿಯ ಮುಖಾಂತರವೇ ಪೋಷಕಾಂಶಗಳನ್ನು ಪೂರೈಸಿಕೊಳ್ಳುವ ಪರಾವಲಂಬನೆಯಿಂದ ನಿವೃತ್ತಿಯನ್ನು ಪಡೆಯಬೇಕೆನ್ನುವ ಅವನ ಬಯಕೆಗಳೂ ಅರಳುತ್ತಿರುತ್ತವೆ.

ನಾರ್ಮ್ಯಾನ್‌ನು ತನ್ನ ಉತ್ತರಾಶ್ರಮದಲ್ಲಿ ಸ್ವಾಮಿ ಅನಿಕೇತಾನಂದನಾಗಿರುತ್ತಾನೆ. ಆತನು, ದೂರದರ್ಶನದಲ್ಲಿ ಸೋವಿಯಟ್ ಒಕ್ಕೂಟವು, ‘ಹತಬಲವಾಗಿ, ಇಸ್ಪೇಟಿನ ಎಲೆಗಳ ಅರಮನೆ ಕುಸಿದು ಬೀಳುವಂತೆ’ ಬಿದ್ದುಬಿಟ್ಟ ವರ್ತಮಾನವನ್ನು ಕೇಳುವುದರೊಂದಿಗೆ ಈ ಕಾದಂಬರಿಯು ಮೊದಲಾಗುತ್ತದೆ. ಅನಂತರ ಅವನು ಸ್ಮೃತಿಪಟಲದ ಮೇಲೆಲ್ಲಾ ಚೆದರಿ ಬಿದ್ದಿದ್ದ ತನ್ನ ಪೂರ್ವೇತಿಹಾಸದ ತುಣುಕುಗಳನ್ನು ಹೆಕ್ಕುತ್ತಾ ಹೋಗುತ್ತಾನೆ. ನಾರ್ಮ್ಯಾನ್ ಎಂಬ ನಾಮಧೇಯವಿದ್ದ ತಾನು, ಸಕಲ ಸಂಪದ್ಭರಿತವಾಗಿದ್ದ ಅಮೆರಿಕಾವನ್ನು ಬಿಟ್ಟು, ‘ನಿರಂಜನ, ನಿರ್ವಿಕಲ್ಪ’ ಸಾಧನೆಗಾಗಿ ಬಂದ ನೆನಪುಗಳು, ಬೆಳಕನ್ನು ಅರಸುತ್ತಾ ಮಠ – ಆಶ್ರಮಗಳನ್ನು ಸುತ್ತಿದ ವ್ಯರ್ಥ ಬಳಲಿಕೆಯ ಸ್ಮರಣೆಗಳು, ‘ಅಸಂಗ್ರಹ ವೃತ್ತಿ’ಯನ್ನು ಸ್ವೇಚ್ಛೆಯಿಂದ ಅನುಸರಿಸಿದುದರಿಂದ ಅನುಭವಿಸಬೇಕಾಗಿ ಬಂದ ಮನೋದೈಹಿಕ ಬಾಧೆಗಳು, ‘ಹಿಂದಿನದನ್ನು ಮರೆತು, ಮುಂದಿನದನ್ನು ಯೋಚಿಸದೆ’ ವರ್ತಮಾನದಲ್ಲಿ ಮಗ್ನನಾಗಲಾರದ ವೈಫಲ್ಯಗಳೆಲ್ಲವೂ ಅಲ್ಲಿ ಪುನಾನಿರ್ಮಾಣಗೊಳ್ಳುತ್ತವೆ. ಒಂದು ಹಂತದಲ್ಲಿ, ಕಾದಂಬರಿಯು ವರ್ತಮಾನ ಕಾಲವನ್ನು ಪ್ರವೇಶಿಸುತ್ತದೆ. ಹೀಗೆ, ನಿನ್ನೆ-ಇಂದುಗಳಲ್ಲಿ ಲಾಳಿಯಾಡಿಸುತ್ತಲೇ ಅದು ಮುಂದುವರೆಯುತ್ತದೆ.

ತನ್ನ ರೂಪಾಂತರದ ಘಟ್ಟಗಳಲ್ಲಿ ತನಗೆ ಎದುರಾಗಿದ್ದ ಅನುಭವಗಳನ್ನು ಹೊಸ ದೃಷ್ಟಿಯಿಂದ ‘ಕಾಣುವ’ ಪ್ರಯತ್ನವನ್ನೂ ಅನಿಕೇತನನು ಮಾಡುತ್ತಾನೆ. ಆ ಕಾಲದಲ್ಲಿ ತನ್ನನ್ನು ತಾನು ಒಡ್ಡಿಕೊಳ್ಳಬೇಕಾಗಿ ಬಂದ ಪರೀಕ್ಷೆಗಳು, ತಾನು ತ್ಯಜಿಸಿದ ಅಮೆರಿಕಾದಲ್ಲಿ ವ್ಯಾಪಕವಾಗಿದ್ದ ಸಾಂಸಾರಿಕ ಬದುಕಿನ ವೈಷಮ್ಯಗಳು, ಅಧ್ಯಾತ್ಮದ ಆಭಾಸವನ್ನು ಹುಟ್ಟಿಸಿ, ಆ ಮೂಲಕ ಹಣ ಮಾಡುವ ಲಾಭದಾಯಕ ಉದ್ಯಮದಲ್ಲಿ ತೊಡಗಿಕೊಂಡಿರುವ ಆಧುನಿಕ ಭಾರತದ ಕೆಲವು ಆಶ್ರಮಗಳು, ಅಧ್ಯಾತ್ಮವನ್ನು ಒಂದು ಚಟವಾಗಿ ಬೆಳೆಸಿಕೊಂಡು, ಅದರ ಬಗೆಗೆ ಅರ್ಥಹೀನ ವಿಚಾರ ವಿನಿಮಯಗಳಲ್ಲಿ ಮುಳುಗುವ ಭಾರತೀಯ ಶ್ರೀಮಂತರ ಒಂದು ವರ್ಗ ಹಾಗೂ ಅದರ ಬೌದ್ದಿಕ ಶೂನ್ಯಗಳೆಲ್ಲವೂ ಅವನ ಜ್ಞಾಪಕಕ್ಕೆ ಬರುತ್ತವೆ. ತುಂಬ ಉದಾರವಾದಿಯಾದ ಜಲೋಟಾನು ತನ್ನನ್ನು ದತ್ತುಪುತ್ರನಾಗಿ ಸ್ವೀಕರಿಸಿದುದು, ತನಗೆ ‘ಅನಿಕೇತ’ನೆಂದು ಹೆಸರನ್ನಿತ್ತುದು, ತನ್ನ ಶಿಷ್ಯನಾಗಿ ಬಂದ ವಿನಿಯಾನಂದನು ತನ್ನನ್ನು ‘ಸ್ವಾಮಿ’ ಪದವಿಗೆರಿಸಿ ‘ಅನಿಕೇತಾನಂದ’ನಾಗಿ ಮಾರ್ಪಡಿಸಿದುದು ಮುಂತಾದ ವಿಚಾರಗಳೆಲ್ಲ ಅವನ ಒಳಗಣ್ಣಿನೆದುರು ಪಥ ಸಂಚಲನವನ್ನು ನಡೆಸುತ್ತವೆ. ಅದೇ ವಿನಯಾನಂದನು ಅತಿರಂಜಿತವೂ, ಅಸಂಬದ್ಧವೂ ಆದತನ್ನ ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿದಾಗ, ಅದನ್ನು ವಿರೋಧಿಸಲಾರದ – ಸ್ವೀಕರಿಸಲೂ ಸಿದ್ದವಾಗದ ಸಂದಿಗ್ಧವು ಅನಿಕೇತನನ ಬದುಕಿನ ರಿಕ್ತತೆಯನ್ನು ದ್ವಿಗುಣಗೊಳಿಸುತ್ತದೆ. ಕೊನೆಗೆ, ಸಂವೇದನಾಶೀಲವಾದ ಮನಸ್ಸಿಗೆ ಭಯಾನಕ ವೆನಿಸಬಹುದಾದ ಒಂದು ಕಾಣ್ಕೆಯನ್ನು ಅನಿಕೇತನನ ಮುಂದಿಡುತ್ತಾ ಕಾದಂಬರಿಯು ಕೊನೆಯನ್ನು ಕಾಣುತ್ತದೆ.

ಸದ್ದುಗದ್ದಲಗಳಿಲ್ಲದೆ, ಜಗತ್ತಿನ ಸಮಸ್ತ ಜೀವರಾಶಿಗಳನ್ನೂ ನಾಶಪಡಿಸಬಲ್ಲ ಒಂದು ಬಾಂಬನ್ನು ವಿಜ್ಞಾನಿಗಳು ಕಂಡು ಹುಡುಕುತ್ತಾರೆ. ನಿರ್ಜೀವವಾದ ಏನನ್ನೂ ಅದು ಮುಟ್ಟಲಾರದೆನ್ನುವ ಆಶ್ವಾಸನೆಯನ್ನು ಅವರು ಕೊಡುತ್ತಲೇ ಇರುತ್ತಾರೆ. ‘ತೊಟ್ಟಿಲು ಸುರಕ್ಷಿತವಾಗಿದೆ’ ಎಂಬ ನಿರ್ಭಾವುಕವಾದ ಸಂದೇಶವನ್ನೂ ಅವರು ಮರುಪ್ರಸಾರ ಮಾಡುತ್ತಿರುತ್ತಾರೆ. ಅನಿಕೇತಾನಂದನು ವ್ಯಾಕುಲನಾಗಿ, ‘ಮಗು’ವಿನ ಕ್ಷೇಮದ ಬಗ್ಗೆ ವಿಚಾರಿಸಿದಾಗಲೂ ಅದೇ ಪ್ರತಿಕ್ರಿಯೆಯು ಸಿಗುತ್ತದೆ. “The Gaddla is safe” ಇಂಥ ವಿಹ್ವಲತೆಯಲ್ಲಿ, ಅನಿಶ್ಚಿತತೆಯಲ್ಲಿ ಕಾದಂಬರಿಯು ಮುಗಿಯುತ್ತದೆ.

ಈ ಹಿನ್ನೆಲೆಯಲ್ಲಿ, ಯಾವುದೇ ಬೀಜ? ಯಾವುದು ಕೋಶ? ಬಸಿರು ಮನುಷ್ಯನ ಒಳಗಿದೆಯೋ ಅಲ್ಲ, ಇಡಿಯ ವಿಶ್ವವೇ ಒಂದು ವಿಶಾಲವಾದ ಕವಾಟವೋ? ಎದೆಯೊಳಗಿನ ಅವಕಾಶವೆಂದಾದರೊಮ್ಮೆ ಬಯಲಾಗಲಾರದೇ? ಈ ಬಯಲು-ಬಸಿರುಗಳ ಮೇಲಾಟದಲ್ಲಿ ವ್ಯಕ್ತಿಯ ಆಯ್ಕೆಯ ಸ್ಥಾನವೇನು? ಅವನ ಸ್ವಾತಂತ್ರ್ಯದ ಪರಿಮಾಣವೆಷ್ಟು ಮುಂತಾದ ಅಸಂಖ್ಯ ಪ್ರಶ್ನೆಗಳನ್ನು ಈ ಕೃತಿಯು ಒಡ್ಡುತ್ತದೆ. ಅವುಗಳಿಗೆ ಪರಿಹಾರಗಳನ್ನು ನಿರ್ಧರಿಸುವುದರ ಬದಲಿಗೆ, ಹೆಚ್ಚು ಸರಳಗೊಳಿಸುವ, ಸ್ಪಷ್ಟೀಕರಣಗಳನ್ನು ನೀಡುವ ಉಪಕ್ರಮಗಳಿಗೆ ಅದು ಉದ್ಯುಕ್ತವಾಗುತ್ತದೆ. ಈ ಬಗೆಗಿನ ಚರ್ಚೆಗಳನ್ನು ಸ್ವಲ್ಪ ವಿಸ್ತೃತಗೊಳಿಸುವುದು ಸಾಂದರ್ಭಿಕ ಅಗತ್ಯವೆನಿಸುತ್ತದೆ.

ಈ ಕೃತಿಯ ಆಳಕ್ಕೆ ಇಳಿದಂತೆಲ್ಲ ಅದರ ಜಗತ್ತು ಸಂಕೀರ್ಣವಾಗುತ್ತಾ ಹೋಗುವುದನ್ನು ಗುರುತಿಸಬಹುದು. ಅದು ಒಂದು ಕರ್ಮಕ್ಷೆತ್ರವಾಗಿ, ಸಾಧನೆಯ ಲಿಂಗಣವಾಗಿ, ಸಂಸ್ಕಾರಗಳ ಸರಣಿಯಿರುವ ಪ್ರಯೋಗಶಾಲೆಯಾಗಿ, ಸ್ಮರಣೆಯೊಳಗಿನ ಭೂತದ ಬೇರುಗಳನ್ನು ಅಗೆದು, ಕಡಿಯುವ ಅಮಾನುಷವಾದ – ಪ್ರಾಯಶಃ ಅನಿವಾರ್ಯವೂ ಆದ – ಆಯುಧವಾಗಿ ಪ್ರವರ್ತಿಸುತ್ತಿರುತ್ತದೆ. ಈ ಬುನಾದಿಯ ಮೇಲೆ ಕೃತಿಯ ತಾತ್ತ್ವಿಕ ಕಟ್ಟಡವಿರುವುದರಿಂದ, ಅಲ್ಲಿ ಸಹಜವಾಗಿಯೇ ತುಮುಲಗಳ ದೀರ್ಘವಾದ ಪರಂಪರೆಯೊಂದು ಕಾಣಿಸುತ್ತದೆ.

ಈ ದ್ವಂದ್ವಗಳ ನಿರ್ವಹಣಾ ಕ್ರಮಗಳಲ್ಲಿ ಒಂದು ವಿಧದ ಶಿಸ್ತನ್ನು ಕಾದಂಬರಿಕಾರರು ಕಾಯ್ದುಕೊಂಡಿದ್ದಾರೆ ಇಲ್ಲಿ, ‘ಇರುವುದೆಲ್ಲವ ಬಿಟ್ಟು ಇರುದರೆಡೆಗೆ’ ಧಾವಿಸುವ ಹವ್ಯಾಸದ ನಾನಾ ಮುಖಗಳ ವಿಶ್ಲೇಷಣೆಗಳಿವೆ. ಕೃತಿಕಾರರು ತಮ್ಮ ಪಾತ್ರವೊಂದರ ಮೂಲಕ ಹೇಳಿಸುವ ಹಾಗೆ,

“ಆಶ್ರಮ ಜೀವನದ ಆಕರ್ಷಣೆಯು (ಭಾರತದ ಕವಿ) ಕಾಳಿದಾಸನಿಗೆ ತುಂಬ ಇದೆ. ಅದರ ಕಾರಣ ಏನು ಗೊತ್ತೇ? ಅವನು ನಗರದಲ್ಲಿ ಆಸ್ಥಾನದಲ್ಲಿ ಇದ್ದವ. ಆದುದರಿಂದ ಅವನು ಆಶ್ರಮದ ಕನಸು ಕಾಣುತ್ತಿದ್ದ. ಆದರೆ, ಆಶ್ರಮದ ಋಷಿ, ಆಸ್ಥಾನದ ಕನಸು ಕಾಣುತ್ತಿದ್ದ (ಪು. ೩೦). ಇಂಥ ವಿಪರ್ಯಾಸದ ಕಾರಣಗಳ ಅನ್ವೇಷಣೆಯು ಕಾದಂಬರಿಯುದ್ಧಕ್ಕೂ ನಡೆಯುತ್ತದೆ. ಆದರೆ, ಆಸ್ಥಾನದ ಕಾಳಿದಾಸನಿಗೆ ಆಶ್ರಮವೊಂದೇ ಆಕರ್ಷಣೆಯ ವಸ್ತುವಾಗಿತ್ತೇ? ಗ್ರಾಮೀಣ ಪರಿಸರವೋ, ಸತತ ಕ್ರಿಯಾಪೇಕ್ಷಿಯಾದ ಯುದ್ಧರಂಗವೋ, ದ್ವೀಪಾಂತರವಾಸವೋ ಅವನಿಗೆ ಬೇಕೆನಿಸಿರಲಿಲ್ಲವೇ? ಮನುಷ್ಯನ ಆಲೋಚನೆಗಳೊಳಗೆ ಪರಸ್ಪರ ವಿರುದ್ಧವಾದ, ಕೇವಲ ಎರಡೇ ಶಕ್ತಿಗಳು ಹೋರಾಡು ತ್ತಿರುತ್ತವೆಂಬ ನಂಬಿಕೆಯ ಮೂಲವು ಯಾವುದಿರಬಹುದು? …ನಮ್ಮಲ್ಲಿ ಹಿಂದಿನಿಂದಲೂ ನಡೆಯುತ್ತ ಬಂದಿರುವ ಅಸ್ತಿತ್ವ-ನಾಸ್ತಿತ್ವಗಳ ಸಂಗ್ರಾಮಕ್ಕೆ ಸಂವಾದಿಗಳಾಗಿ ಈ ಎಲ್ಲ ಪರಿಕಲ್ಪನೆಗಳು ವಿನಿಯೋಗವಾಗುತ್ತದೆ. ಮನಶ್ಶಾಸ್ತ್ರೀಯ ನೆಲೆಯಿಂದಲೂ ಈ ಸಂದರ್ಭ ವನ್ನು ಅರ್ಥಮಾಡಿಕೊಳ್ಳಬಹುದು. ಈ ಸಮರ್ಥನೆಗಳ ಬೆಂಬಲವಿರುವುದರಿಂದಲೇ ಕಾದಂಬರಿಕಾರರು ಇಲ್ಲಿ ‘ಅನೇಕತ್ವ’ಗಳ ಸಾಧ್ಯತೆಗಳನ್ನು ಸ್ಪರ್ಶಿಸಲಿಲ್ಲವೆನಿಸುತ್ತದೆ.

ಇಲ್ಲಿ, ಅಮೆರಿಕಾವು ಐಹಿಕವಾದ ಸಂಪತ್ತನ್ನು ಸಾಕಾರಗೊಳಿಸಿಕೊಂಡರೆ, ಭಾರತವು ಆಮುಷ್ಟಿಕವಾದ ಶಾಂತಿಯ ಪ್ರತೀಕವಾಗುತ್ತದೆ. ಅಲ್ಲಿಯವರಿಗೆ ಧನಸಮೃದ್ದಿಯಿಂದ ನೆಮ್ಮದಿಯಿಲ್ಲ. ಇಲ್ಲಿಯವರಿಗೆ, ಧ್ಯಾನದಲ್ಲಿ ರುಚಿಯಿಲ್ಲ. ಹಾಗಾಗಿ ಅಲ್ಲಿಯವರಿಗೆ ಇಲ್ಲಿಯ ಮೋಹ, ಇಲ್ಲಿಯವರಿಗೆ ಅಲ್ಲಿಯ ಸೆಳೆತಗಳು ಅನಿವಾರ್ಯವಾಗುತ್ತವೆ. ಈ ಸಂದರ್ಭದಲ್ಲಿ, ಕೃತಿಕಾರರು, ಸುಖವೆನ್ನುವುದು ನಿಜವಾಗಿಯೂ ಇದೆಯೇ ಅಲ್ಲ. ಅದು ಮನಸ್ಸಿನ ಒಂದು ಸ್ಥಿತಿ ಮಾತ್ರವೇ ಎನುವ ಪ್ರಮುಖ ಪ್ರಶ್ನೆಯನ್ನು ತಪಾಸಣೆಗೆತ್ತಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಮನುಷ್ಯನ ಅಶಾಂತಿಗೆ, ‘Soiritual hopelessmess’ ಮತ್ತು ‘imotional imcompleteness’ (ಪು. ೧೦೩)  ಎನ್ನುವ ನಿರ್ಧಾರವನ್ನು ಕಾದಂಬರಿಯು ಸಮೀಪಿಸುತ್ತದೆ. ಆದರೆ, ‘ಹತಾಶೆಯನ್ನು ಗೆಲ್ಲುವ’ ಆಂತರಿಕ ಶ್ರದ್ಧೆ ಮತ್ತು ಪೂರ್ಣಭಾವ ಗಳಿಂದಲೇ ಸುಖ-ಶಾಂತಿಗಳು ನಿಷ್ಪನ್ನವಾಗುತ್ತವೆಯೋ? ಎನ್ನುವ ಪ್ರಶ್ನೆಯು ಓದುಗನ ಮುಂದೆ ಉಳಿದುಕೊಳ್ಳುತ್ತದೆ. ಇದಕ್ಕೆ ಅನೇಕ ಉತ್ತರಗಳ ಸಾಧ್ಯತೆಗಳನ್ನು ಸೂಚಿಸುವಷ್ಟಕ್ಕೆ ತೃಪ್ತಿಪಡುವ ಬಗೆಯಲ್ಲಿಯೇ ಈ ನೆಲೆಯ ಸೊಗಸಿದೆ.

ಇನ್ನೊಂದು ಬದಿಯಿಂದ, ಬರಿಯ ತತ್ತ್ವಸಿದ್ಧಾಂತಗಳ ಮೇಲ್ಮೈಯಲ್ಲಷ್ಟೇ ಸಂಚರಿಸುವುದರಿಂದ, ವ್ಯಕ್ತಿಯ ಆಂತರಿಕ ಸಂವಿಧಾನವು ಬದಲಾಗಲಾರದು. ಅದು ಕೇವಲ ತಿಳಿವಿನಿಂದ, ವಿವೇಕದಿಂದ, ಜ್ಞಾನದ ಸಾಕ್ಷಾತ್ಕಾರದಿಂದ ಸಾಧ್ಯವಾಗುವ, ವ್ಯಕ್ತಿ ಸಾಪೇಕ್ಷವಾದ ಸಂಸ್ಕಾರ ವಿಶೇಷವಾಗಿದೆಯೆನ್ನುವ ನಿಲುವನ್ನು ಕಾದಂಬರಿಯು ಪ್ರದರ್ಶಿಸುತ್ತದೆ. ಈ ಎರಡೂ ದಾರಿಗಳನ್ನದು ತೀವ್ರವಾದ ಪರಿಶೀಲನೆಗಳಿಗೆ ಒಳಪಡಿಸುತ್ತದೆ.

ಮನುಷ್ಯನ ಜಗತ್ತನ್ನು – ಆಂತರಿಕ-ಬಾಹ್ಯ ಇರುವಿಕೆಗಳೆರಡೂ ಸೇರಿಕೊಂಡ-ಕೇವಲ ಎರಡೇ ವರ್ಗಗಳಲ್ಲಿ ಗುರುತಿಸುವ ಹಲವು ಸಂದರ್ಭಗಳು ಈ ಕಾದಂಬರಿಯಲ್ಲಿ ಬರುತ್ತವೆ. “ನಾಗರಿಕತೆ ಪ್ರಾರಂಭವಾದಂದಿನಿಂದ ಎರಡು ನಾಗರಿಕತೆಗಳು ಇವೆ. ಒಂದು ಬಡವರದು. ಇನ್ನೊಂದು ಬಲ್ಲಿದರದು” (ಪು. ೬೮) ಎನ್ನುವ, ‘ಫೆಂಗ್‌ಶುವಿ’ ತಜ್ಞನ ನಿಲುವಾಗಲಿ. “ಭೂಮಿಯ ಮೇಲೆ ಇರುವುದು ಎರಡೇ ರಾಜ್ಯಗಳು. ಒಂದು ಬಡವರದು. ಇನ್ನೊಂದು  ಬಲ್ಲಿದರದು (ಪು. ೮೫) ಎಂದು ನಿಷ್ಠೆಯಿಂದ ಪ್ರತಿಪಾದಿಸುವ ಕ್ರಮವಾಗಲಿ ಇದಕ್ಕೆ ಉದಾಹರಣೆಗಳಾಗುತ್ತವೆ. ಇವುಗಳು ವಾಚ್ಯಾರ್ಥಗಳಿಗಿಂತ ರೂಪಕಾತ್ಮಕವಾಗಿ ಹೆಚ್ಚು ಪರಿಣಾಮಕಾರಿಗಳಾಗುತ್ತವೆ. ಆರ್ಥಿಕ-ಸಾಂಸ್ಕೃತಿಕ ವ್ಯಾಪ್ತಿಗಳಿಗಿಂತ, ‘ಬಡವ’ನೆಂದರೆ ಭಾವದರಿದ್ರನೂ ಆಗಬಹುದು. ಬಲ್ಲಿದನು ಅಪೂರ್ವವಾದ ಮಾನಸೋಲ್ಲಾಸವನ್ನು ಪಡೆಯುವವನೂ ಆಗಬಹುದೆಂಬ ನಿಲುವು ಉಪಾದೇಯವೇ ಆಗುತ್ತದೆ.

ಈ ಕಪ್ಪು-ಬಿಳಿ ಮಾದರಿಯ ವೈರುಧ್ಯವನ್ನು ಕಾದಂಬರಿಕಾರರು, ‘ಮಾಲ್ಕಮ್ ಮೇನಿಯ-ಮಾರ್ಟಿನ್ ಮೇನಿಯ’ ಎನ್ನುವ ಲೇಖನದ ನೆವನದಿಂದ ವಿಶೇಷವಾದ ಚರ್ಚೆಗೊಡ್ಡುತ್ತಾರೆ. ಒಂದು ಹಿಂಸೆಯ ದಾರಿಯಾದರೆ ಇನ್ನೊಂದು ಪ್ರೇಮದ ಪಂಥವೆನ್ನುವ ಅವರು, ಆ ಎರಡು ಭಾವಗಳ ಪ್ರಭಾವಗಳನ್ನೂ ಹಿಂಜಿ ನೋಡುತ್ತಾರೆ. ಈ ಮುಖಾಮುಖಿಯನ್ನು ದೂರದರ್ಶನದ ಒಂದು ಕಾರ್ಯಕ್ರಮದ ಮೂಲಕ ನಾರ್ಮ್ಯಾನ್‌ನು ಗ್ರಹಿಸುತ್ತಾನೆ. ಅದರಲ್ಲಿ ಒಬ್ಬ ಕಪ್ಪು ಮನುಷ್ಯನು ಬಿಳಿಯನಿಗೆ ಹೇಳುತ್ತಿದ್ದ, “ನನಗೆ ಒಂದು ಕೆನ್ನೆಗೆ ಏಟುಕೊಟ್ಟರೆ ಇನ್ನೊಂದನ್ನು ಒಡ್ಡುವ ಮಾರ್ಟಿನ್ ಆಗುವ ಆಸೆಯಿಲ್ಲ. ಮಾಲ್ಕಮ್ ಆಗುವ ಆಸೆ. ಆಸೆ ಏನು? ನಾನು ಮಾಲ್ಕಮ್ ಆಗಿದ್ದೇನೆ. ನಮ್ಮಲ್ಲಿ ಒಮ್ಮತ ಬಂದಿದೆ. ನಾವು ಸಂಖ್ಯೆಯಲ್ಲಿ ಬೆಳೆಯುತ್ತಿದ್ದೇವೆ. (ನಮಗೆ) ನಮ್ಮದು ಸರಿಯಾದ ದಾರಿಯೆಂದು ಖಚಿತವಾಗಿದೆ. … ಇತಿಹಾಸ ಮುಂದುವರೆಯುವುದು ರಕ್ತವನ್ನು ಚೆಲ್ಲುತ್ತ. ಹಿಂಸ್ರ ಅನಾಗರಿಕತೆಯ ಉಚ್ಛ್ರಾಯದ ಮೂಲಕ ಮಾನವ ಸಂಸ್ಕೃತಿಯ ದಾರಿ ಸಾಗುತ್ತದೆ. ನಾವು ಈಗ ನಿಜವಾದ ಕ್ರಾಂತಿಕಾರಿಗಳು. ಬಾಂಧವ್ಯ, ಸ್ನೇಹ, ಪ್ರೇಮ, ಕೃತಜ್ಞತೆ ಇವೆಲ್ಲ ಹಳಸಿ ಹೋದ ಅನ್ನ… ನಾವು ನಿರ್ದಯರು, ದೃಢಚಿತ್ತರು. ಯಾರ ಹೃದಯದಲ್ಲಿ ಅನುಕಂಪವು ಹುಟ್ಟುತ್ತದೋ ಅವರು ನಮ್ಮ ಶತ್ರುಗಳು…. ನೀವು ಸೃಷ್ಟಿಸಿದ ನಾಗರಿಕತೆಯ ಯಾವ ಮಾನದಂಡಗಳೂ ನಮಗೆ ಒಪ್ಪಿಗೆಯಿಲ್ಲ (ಪು. ೭೫-೬) ಎನ್ನುವ ಮಾತುಗಳು ಅವನಲ್ಲಿ ಕಳವಳವನ್ನು ಉಂಟುಮಾಡುತ್ತವೆ. ಅವನು ಭೀತನಾಗುತ್ತಾನೆ. ಇಲ್ಲಿ ಮತ್ತೆ ವಾಸ್ತವ ಜಗತ್ತು ಕಣ್ಣು ಮುಂದೆ ಬರುತ್ತದೆ. ಅಲ್ಲಿ ತೀರಾ ಶಾಹಿಯೂ, ಕ್ರಾಂತಿಯ ಪ್ರತಿರೋಧ-ರಭಸಗಳೂ ಇಲ್ಲದ ಮಧ್ಯಮ ಸ್ಥಿತಿಯೊಂದು ಕಾಣುವುದೇ ಇಲ್ಲವೇ? ಅಲ್ಲ. ಈ ಶಾಂತಿ-ಕ್ರಾಂತಿಗಳೂ ಬರಿಯ ಕಲ್ಪನೆಯ ಕೂಸುಗಳೇ? ಈ ಪ್ರಶ್ನೆಗಳನ್ನು ಹಿನ್ನೆಲೆಗಿಟ್ಟುಕೊಂಡು, ಸುತ್ತೆಲ್ಲವನ್ನೂ ‘ಎರಡಾಗಿ’ ಕಾಣುವ ಕಾದಂಬರಿಕಾರರ ದೃಷ್ಟಿಯು ಹಲವು ರೀತಿಗಳಿಂದ ಅಭಿವ್ಯಕ್ತವಾಗಿರುವುದನ್ನು ಗಮನಿಸಬಹುದು. ಉದಾಹರಣೆಗೆ,

‘ಮಿದುಳಿನಲ್ಲಿ ಹತ್ತಿರ-ಹತ್ತಿರವಿರುವ ಎರಡು ಸ್ಥಾನಗಳು ಕ್ರಮವಾಗಿ ದುಃಖದ ಹಾಗೂ ಆನಂದದ ಅನುಭವಗಳನ್ನು ನೀಡುತ್ತವೆ (ಪು. ೩೮).

ಯೂಕ್ಲಿಡ್‌ನ ‘ಸರಳ ಜಗತ್ತು’ ಮತ್ತು ಐನ್‌ಸ್ಟೀನನ ‘ಸಂಕೀರ್ಣ ವಿಶ್ವ’ಗಳಾಗಿ ಇಡಿಯ ಭೂಗೋಳವು ಒಡೆದುಕೊಳ್ಳುತ್ತದೆ (ಪು. ೧೦೭).

ಪೃಥ್ವಿಯಲ್ಲಿರುವ ‘ವಾಯು’ ಮತ್ತು ‘ಅಪ್’ ಶಕ್ತಿಗಳು ಸಮಸ್ತ ವಾಸ್ತುವಿನ್ಯಾಸಗಳ ಗುಣ-ದೋಷಗಳನ್ನು ನಿಷ್ಕರ್ಷಿಸುತ್ತವೆ (ಪು. ೬೩).

ಇಂಥ ಹಲವು ಹೇಳಿಕೆಗಳು, ವ್ಯಾಖ್ಯಾನಗಳು ಕಾದಂಬರಿಯುದ್ದಕ್ಕೂ ಸಿಗುತ್ತವೆ. ಅಲ್ಲದೆ, ನಾರ್ಮ್ಯಾನ್‌ನು ಮಾನಸಿಕವಾಗಿ ಭಾಗಿಯಾಗುವ ಮತ ಪ್ರದರ್ಶನವೊಂದರ ಸಂದರ್ಭವು ಇದೇ ಮಾದರಿಯದಾಗಿದೆ. ಅಲ್ಲಿ ಕಲ್ಪಿತವಾಗಿರುವ ಮಹಾನಗರ ಸಭೆಯೊಂದರಲ್ಲಿ ಎರಡು ಪಕ್ಷಗಳಿರುತ್ತವೆ. ಅವುಗಳಲ್ಲಿ ಆಳುವ ಪಕ್ಷವು ‘Purica Granatum’ ಇದು ಮಹಾನಗರದ ಪುಷ್ಪವಾಗಬೇಕೆಂದೂ, ವಿರೋಧ ಪಕ್ಷವು ‘Bijonia’ ಎಂಬ ಹೂವೇ ಆ ಸ್ಥಾನಕ್ಕೆ ಅರ್ಹವೆಂದೂ ಆಗ್ರಹಿಸಿ, ಮೆರವಣಿಗೆ ಹೊರಡುವ ವಿಲಕ್ಷಣ ಪ್ರಸಂಗವೊಂದು ಚಿತ್ರಿತವಾಗಿದೆ (ಪು. ೮೯­-೯೦).

ಇಂಥ ನಿದರ್ಶನಗಳ ಜಾಡಿನಲ್ಲಿ, ಚಿಂತನೆಗಳನ್ನು ಬೆಳೆಸಿದಾಗ, ನಿರ್ದಿಷ್ಟ ಕ್ರಮ ವೊಂದರಲ್ಲಿ ಈ ಎಲ್ಲ ಅಂಶಗಳು ಕ್ರೋಡೀಭವಿಸುವುದನ್ನು ಕಾಣುತ್ತೇವೆ. ಆ ಸಂದರ್ಭದಲ್ಲಿ, ಕೃತಿಕಾರರು ವ್ಯಕ್ತಿತ್ವದ ಒಳರಚನೆಯಾಗಲಿ, ಹೊರಗಿನ ಸಾಂಸ್ಕೃತಿಕ ಲಕ್ಷಣಗಳಾಗಲಿ, ಇಡಿಯ ಬದುಕಿನ ಆಕೃತಿಯೇ ಆಗಲಿ, ಸಿಡಿದು ಪ್ರತ್ಯೇಕ ಅಸ್ತಿತ್ವವನ್ನು ಪಡೆಯುವ ಕ್ರಿಯೆಯನ್ನೂ, ಅದರಿಂದ ಉಂಟಾಗುವ ವೇದನೆಯನ್ನೂ ಸಂವಹಿಸುತ್ತಾರೆ.

“ಮಿದುಳು ಅಹಂಕಾರದಿಂದ ಒಂದು ಭಾಷೆಯನ್ನು ಮಾತನಾಡುತ್ತದೆ. ನನ್ನ ಹೃದಯವು ಇನ್ನೊಂದು ಭಾಷೆಯನ್ನು ಮಾತನಾಡುತ್ತದೆ. ಆ ಭಾಷೆ ಮೌನ ಭಾಷೆ. ಬುದ್ದಿಯ ಭಾಷೆ, ಖಚಿತವಾದ ಭಾಷೆ. ಅಲ್ಲಿ ಸಾಂಖ್ಯವಿದೆ. ತರ್ಕವಿದೆ. ಕಾರ್ಯಕಾರಣ ಸಂಬಂಧವಿದೆ. ಆ ಭಾಷೆ ಮಂತ್ರದ ಭಾಷೆ. ನನ್ನ ಭಾವನೆಯ ಭಾಷೆ ಯಾವುದೋ ಒಂದು ಲಯಕ್ಕೆ ಅನುಸಾರ ವಾಗಿ ಕುಣಿಯುತ್ತದೆ. ನಾನು ಹರಿದು ಹೋಳಾಗಿದ್ದೇನೆ. ಈಗ ನಾನು ನಿರ್ಣಯವನ್ನು ತೆಗೆದುಕೊಳ್ಳಬೇಕು. ಮಿದುಳಿನ ಮಂತ್ರದ ಭಾಷೆಯನ್ನು ಕೇಳಬೇಕೋ ಹೃದಯದ ಭಾಷೆಯನ್ನೋ? ಹೃದಯದ ಭಾಷೆಯ ಘನದ ಮುಂದೆ ಬುದ್ದಿಯ ಭಾಷೆ ನಿಸ್ಸತ್ವವಾಗುತ್ತದೆ. ಅದು ಮಲೆತ ನೀರಿನಂತೆ ಇದೆ… (ಪು. ೮೩-೪) ಎಂದು ಸಾಗುವ ನಾರ್ಮ್ಯಾನ್‌ನ ಆತ್ಮನಿರೀಕ್ಷಣೆಯಲ್ಲಿ, ಈ ತುಮುಲವು ತುರೀಯಾವಸ್ಥೆಯನ್ನು ತಲುಪುವುದನ್ನು ಕಾಣುತ್ತೇವೆ.

ಜಾಗೃತಿಯೆಂದರೇನೆಂಬ ಬಹು ಸೂಕ್ಷ್ಮವಾದ ಪ್ರಶ್ನೆಯೇ ಇಲ್ಲಿ ಉದ್ದಕ್ಕೂ ಅನ್ಯಾನ್ಯ ಮಗ್ಗುಲುಗಳಿಂದ ಪರಿಶೀಲಿಸಲ್ಪಡುತ್ತದೆ. ಅದಕ್ಕೂ ಎಚ್ಚರ ಅಥವಾ ಅಜ್ಞಾನಗಳೆಂಬ ಚೌಕಟ್ಟುಗಳೊಳಗಿಟ್ಟು ನೋಡುವ ಪ್ರಜ್ಞಾಪೂರ್ವಕವಾದ ನಿರ್ಧಾರವೂ ಇಲ್ಲಿದೆ. ಕೃತಿಕಾರರ ಈ ‘ದ್ವಂದ್ವಾಸಕ್ತಿ’ಯ ಸಂಕ್ಷಿಪ್ತ ವಿವರಣೆಯನ್ನು ಕಾದಂಬರಿಯೇ ನೀಡುತ್ತದೆ. ನಾರ್ಮ್ಯಾನ್‌ನಿಗೆ ಬಿದ್ದ ಒಂದು ಕನಸನ್ನು ನಿರೂಪಿಸುತ್ತಾ ಅದು ಈ ವಿಚಾರವನ್ನು ಸ್ಪಷ್ಟ ಪಡಿಸುತ್ತದೆ.

ಈ ಸಂದರ್ಭದಲ್ಲಿ, ಕಾದಂಬರಿಕಾರರು ಮೊದಲಿಗೆ ಬ್ಯಾಬಲ್ ಗೋಪುರದ ಸಂಕೇತವನ್ನು ಬಳಸಿಕೊಳ್ಳುತ್ತಾರೆ. ಈ ಗೋಪುರವು ನಿರ್ಮಾಣವಾಗುತ್ತಿದ್ದಾಗ, ಇನ್ನೇನು ಅದು ದೇವಲೋಕವನ್ನು ಮುಟ್ಟಿಯೇ ಬಿಟ್ಟಿತೆನ್ನುವ ಸಂಧಿಕಾಲದಲ್ಲಿ, ದೇವರು ಭಾಷೆಗಳನ್ನು ಸೃಷ್ಟಿಸಿದನೆಂಬ ವ್ಯಂಗ್ಯವು ಇಲ್ಲಿ ಪ್ರತಿಪಾದಿತವಾಗಿದೆ ಭಾಷೆಯ ಪರಿಚಯವಿಲ್ಲದಿದ್ದಾಗ, ಮನಸ್ಸು-ಲಕ್ಷ್ಯಗಳ ಐಕ್ಯವಿದ್ದ ಮನುಷ್ಯರು, ಅಭಿವ್ಯಕ್ತಿ ಸಾಮರ್ಥ್ಯವು ದೊರೆತ ಕ್ಷಣವೇ ಗೊಂದಲಗಳನ್ನೂ, ಗುಂಪುಗಳನ್ನೂ, ಶ್ರೇಣಿಗಳನ್ನೂ ಉಂಟು ಮಾಡುತ್ತಾರೆ. “ಒಬ್ಬರ ಮಾತು ಒಬ್ಬರಿಗೆ ತಿಳಿಯದ” ಅಯೋಮಯ ಗತಿಯಲ್ಲಿ ಆ ಗೋಪುರವು ಲೆಕ್ಕವಿಲ್ಲದಷ್ಟು ಚಿಂತನೆಗಳನ್ನು ಸಾರುತ್ತಿರುತ್ತದೆ. ಒಂದಕ್ಕೊಂದು ಸಂಬಂಧವಿಲ್ಲದ ಒಂದಕ್ಕೊಂದು ವಿರುದ್ಧವೂ ಆದ ಅವುಗಳ ಸಂದಣಿಯಲ್ಲಿ, ಮನುಷ್ಯರು ಸ್ಥಿಮಿತವನ್ನು ಕಳೆದುಕೊಳ್ಳುತ್ತಾರೆ. “ಬಹಳ ಜನರಿಗೆ ದಿಗ್ಭ್ರಮೆಯುಂಟಾಗುತ್ತದೆ” ಎಂದು, ‘ಬಹುಭಾಷಿಕತೆ’ಯ ಮಿತಿಗಳನ್ನು- ಎಲ್ಲ ಧ್ವನ್ಯರ್ಥಗಳೊಂದಿಗೆ ಇಲ್ಲಿ ಬಯಲಿಗಿಡಲಾಗಿದೆ.

ಅದೇ ಸಂದರ್ಭದಲ್ಲಿ ಬರುವ ಮಾರ್ಗದರ್ಶಿಯ ಮಾತುಗಳು, ವೈವಿಧ್ಯಗಳನ್ನೆಲ್ಲ ಅಳಿಸಿ ಹಾಕುವುದರ ಮೂಲಕವೇ ವಿಶ್ವಶಾಂತಿಯು ಸ್ಥಾಪಿತವಾಗುತ್ತದೆಂಬ ವಾದವನ್ನು ಮಂಡಿಸುತ್ತವೆ. “ಎಷ್ಟೊಂದು ಭಾಷೆಗಳು; ಎಷ್ಟೊಂದು ಧರ್ಮಗಳು; ಎಷ್ಟೊಂದು ಗುಂಪುಗಳು; ಈ ಎಲ್ಲ ವೈವಿಧ್ಯಗಳೇ ಜಗತ್ತಿನಲ್ಲಿ ಅಶಾಂತಿಯನ್ನುಂಟುಮಾಡಿವೆ. ಇಂದಿನವರೆಗೆ ಮಾನವನ ಇತಿಹಾಸದಲ್ಲಿ ನಡೆದ ಯುದ್ಧಗಳಿಗೆಲ್ಲ ಈ ಲೋಕದಲ್ಲಿರುವ ವೈವಿಧ್ಯವೇ ಕಾರಣ. ನಮ್ಮ ವಿಜ್ಞಾನಿಗಳು… ಹಲವಾರು ಪ್ರಯೋಗಗಳನ್ನು ಮಾಡಿ, ಅನೇಕತೆಯನ್ನು ತೊಡೆದು ಹಾಕಿ ಏಕತೆಯನ್ನುಂಟು ಮಾಡುವವರಿದ್ದಾರೆ. (ಹಾಗೆ ಸೃಷ್ಟಿಯಾಗುವವನು) ಹೊಸ ಮನುಷ್ಯ. ಅವನಿಗೆ ಅನುವಂಶಿಕತೆಯ ಬಂದನಗಳಿಲ್ಲ… ಪೂರ್ವದಲ್ಲಿ ಮನುಷ್ಯ ಉಭಯಲಿಂಗಿ ಇದ್ದನಂತೆ. ಹಾಗೆ ಮತ್ತೆ ಮಾಡಬೇಕೆಂಬ ಯೋಜನೆ… ಗಂಡು ಹೆಣ್ಣನ್ನು ಶೋಷಿಸುವ ಪ್ರಶ್ನೆಯೇ ಇಲ್ಲ. ನೋವಿಲ್ಲ, ವ್ಯಥೆಯಿಲ್ಲ. ಕಲಹವಿಲ್ಲ. ಭಾಷೆಯೂ ಇಲ್ಲವಾಗುತ್ತದೆ (ಪು. ೮೧-೨) ಎಂಬುದಾಗಿ ಆ ಮಾರ್ಗದರ್ಶಿಯ  ನಾರ್ಮ್ಯಾನ್‌ನೊಡನೆ ಹೇಳುತ್ತಾನೆ. ಈ ಮನೋಭಾವವು, ಸಾಂಸ್ಕೃತಿಕ ನೆಲೆಯ ಹಲವು ಪ್ರಶ್ನೆಗಳಿಗೆ ಚಾಲನೆಯನ್ನು ನೀಡುತ್ತದೆ. ವೈವಿಧ್ಯಗಳನ್ನಿಟ್ಟುಕೊಂಡೂ ಅಸ್ಮಿತೆಗಳನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲವೇ? ವ್ಯತ್ಯಾಸಗಳನ್ನು ನಿರ್ದಾಕ್ಷಿಣ್ಯವಾಗಿ ಅಳಿಸಿ ಹಾಕು ವುದೆಂದರೆ, ಜೀವಂತಿಕೆಯನ್ನು ನಷ್ಟಪಡಿಸಿದಂತೆಲ್ಲವೇ) ಏಕೀಕರಣದ ಅರ್ಥವು, ಭಿನ್ನ ಭಾಷೆ, ತತ್ತ್ವ, ಸಿದ್ಧಾಂತ, ಸಂಸ್ಕೃತಿಗಳಿಗೆ ತಿಲಾಂಜಲಿ ಕೊಡಬೇಕೆಂದಾಗುತ್ತದೆಯೇ? ಹೆಣ್ಣು-ಗಂಡುಗಳೆಂಬ ಜೈವಿಕವಾದ ಪ್ರತ್ಯೇಕತೆಯೊಂದೇ ಶೋಷಣೆಗಳಿಗೆ ಕಾರಣವೇ? ‘ಏಕರೂಪ ಧಾರಣ’ದ ಅನಂತರವೂ ವ್ಯಕ್ತಿಯೊಳಗಿನ ನಿರಾಕರಣೆಗಳ, ಅಂತರ್ವಿರೋಧಗಳ ನಿರ್ವಹಣೆಯ ಮಾರ್ಗೋಪಾಯಗಳಾವುವು? …..ಇಂಥ ಹಲವು ಅಂಶಗಳು ವಿಶೇಷವಾದ ಅಧ್ಯಯನಗಳಿಗೆ ಪ್ರೇರಣೆಯನ್ನು ನೀಡುತ್ತವೆನ್ನವುದು ಈ ಕೃತಿಯ ಹೆಚ್ಚಳವೇ ಆಗಿದೆ.

ಈ ಕಾದಂಬರಿಯ ಇನ್ನೊಂದು ವೈಶಿಷ್ಟ್ಯವಾಗಿ, ಅದು ಅನುಸರಿಸುವ ಶೋಧಕ್ರಮಗಳನ್ನು ಗಮನಿಸಬಹುದು. ಅಲ್ಲಿ, ವ್ಯಕ್ತಿಯ ಅಂತರಂಗದ ಸತ್ವ-ಸತ್ಯ ಶೋಧನೆ, ಭಾರತೀಯ ಅಧ್ಯಾತ್ಮದ ಅರ್ಥಶೋಧನೆ ಹಾಗೂ ಹೊರಗಿನ ವ್ಯಕ್ತಿತ್ವಗಳ ಒಳ-ಹೊರಗುಗಳನ್ನು ತಿಳಿಯುವ ಸ್ವರೂಪ ಶೋಧನೆಗಳೆಂಬ ಮೂರು ಮುಖ್ಯ ಅಂಗಗಳನ್ನು ಗುರುತಿಸಬಹುದು.

ಇಲ್ಲಿ ಬರುವ ನಾರ್ಮ್ಯಾನ್‌ನು, ಸಿದ್ಧಾರ್ಥ (ಬುದ್ಧ)ನೇ ತಾನಾಗಬೇಕೆಂಬ ಹಂಬಲವನ್ನು ಹೊತ್ತು ಭಾರತಕ್ಕೆ ಬಂದವನು. “ಅವನದು ಮಹಾಶ್ರತುವಾದರೆ, ನನ್ನದೂ ಒಂದು ಮಹಾಶ್ರತುವೇ” ಎನ್ನುವ ಆತ್ಮಪ್ರತ್ಯಯವನ್ನು ಹೊಂದಿದ್ದವನು. “ನಾನು ಮರುಹುಟ್ಟು ಪಡೆದವ… ನನಗೆ ಸೀಮೆಯಿಲ್ಲ. ಅಸೀಮ. ಅನಂತ. ನನಗೆ ಕಾವಿಲ್ಲ. ದುಃಖದಿಂದ ಬಿಡುಗಡೆ ಹೊಂದಿ ಬೋಧಿಸತ್ವ ಎನಿಸಿಕೊಂಡವ” (ಪು. ೯೬) ಎನ್ನುವ, ವಾಲ್ಮೀಕಿ ವಾಸದ ಭದ್ರತೆಯನ್ನು ಬಾಚಿಟ್ಟುಕೊಂಡವನು. ಈ ಮಾತುಗಳು, ನಾರ್ಮ್ಯಾನ್‌ನ ಪ್ರಜ್ಞೆಯ ಬಾಹ್ಯಸ್ತರಕ್ಕೆ ಹೊಂದಿಕೆಯಾಗುತ್ತವೆ. ಅದರೊಳಗೆ ಇಣುಕುವ ಅವನಿಗೆ, ತುಂಬ ಮರ್ಮ ಭೇದಕವಾದ ನೋಟಗಳು ಎದುರಾಗುತ್ತವೆ; ಸತ್ಯದ ದರ್ಶನವನ್ನು ಮಾಡಿಸುತ್ತವೆ.

ಭೌಗೋಳಿಕ ನೆಲೆಯ ಸ್ಥಿತ್ಯಂತರ, ನಾಮಾಂತರ, ಅಲೆದಾಟ, ಅಸಂಗ್ರಹ ವೃತ್ತಿಗಳಿಂದ ತಾನು ಗಳಿಸಿದುದೇನನ್ನು ಎಂಬ ಮೂಲಭೂತವಾದ ಪ್ರಶ್ನೆಯ ಮುಂದೆ, ನಾರ್ಮ್ಯಾನ್‌ನು ನಿರುತ್ತರನಾಗುತ್ತಾನೆ. ತಾನು ಅನಿಕೇತಾನಂದನಾಗಿ, “ಈ ಆಶ್ರಮವನ್ನು ಬೆಳೆಸುತ್ತಿದ್ದರೂ ನನ್ನ ಬಾಳಿನ ರಿಕ್ತತೆ ತುಂಬಿತೆ? ನಾನು ಭಾರತಕ್ಕೆ ಏನನ್ನು ಬಯಸಿ ಬಂದೆ? ನನಗೆ ಅದು ದೊರೆಯಿತೆ? ಹೆಸರು ಬದಲಿಸಿದೆ. ಬಟ್ಟೆ ಬದಲಿಸಿದೆ. ನಾನು ಬದಲಾದೆನೆ? ನಾನು ಬಯಸಿದುದು ನನಗೆ ಇಲ್ಲಿ ದೊರೆಯಿತೆ? (ಪು. ೬-೨೩) ಎನ್ನುವುದರ ಹುಡುಕಾಟದಲ್ಲಿಯೇ ಅವನ ಏಕಾಂತದ ಕ್ಷಣಗಳು ಕಳೆಯುತ್ತವೆ. ಒಂದರ್ಥದಲ್ಲಿ, ಬಯಕೆ ಬೆನ್ನು ಹತ್ತುವ ಈ ಕ್ರಿಯೆಯೇ ಅರ್ಥಶೂನ್ಯವಲ್ಲವೆ? ನಾರ್ಮ್ಯಾನ್‌ನ ಒಳಗಿನ ‘ಶಂಕೆಯೆಂಬ ಸರ್ಪ’ವು ಈ ನಿಟ್ಟಿನಲ್ಲಿ ಅವನ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ.

“ನಿನ್ನನ್ನು ನೀನು ತಿಳಿದುಕೊಂಡಿದ್ದೀಯಾ?…. ನಿನ್ನನ್ನು ನೀನು ಅರಿತಿಲ್ಲ ಹಾಗೂ ಇರಲಿಕ್ಕಿಲ್ಲ….ನಿನಗೆ ತಿಳಿದಿದೆ. ಆ ತಿಳಿವು ನಿನಗೆ ದುಃಖವನ್ನುಂಟುಮಾಡುತ್ತದೆ. ಅದಕ್ಕಾಗಿ ನೀನು ಅದರಿಂದ ಓಡಿ ಹೋಗುತ್ತಿರುವಿ…. ನೀನು ನಿನ್ನ ತಾಯ್ನಾಡಿನಲ್ಲಿ ಬಾಲ್ಯದಲ್ಲಿ ಅನುಭವಿಸಿದ ಅವಸ್ಥೆಗೂ ಇಂದಿಗೂ ಯಾವ ವ್ಯತ್ಯಾಸವಿಲ್ಲ. ಅಂದೂ ನಿನಗೆ ನಿನ್ನ ಒಳದನಿ ನಿನಗೆ ಬೆಳಕನ್ನು ನೀಡಿಲು ಯತ್ನಿಸುತ್ತಿತ್ತು. ಆಗಲೂ ತಿಳಿಯಲಿಲ್ಲ. ಈಗ ತಿಳಿಯಬಹುದು” (ಪು. ೯೪) ಎನ್ನುವ ಮಾತುಗಳಲ್ಲಿ ಅವನ ಅಂತರಂಗದ ನಿವೇದನೆಯೇ ಇದೆ. ಎಂದರೆ, ಜ್ಞಾನವಿರಲಿ, ಬಿಡುಗಡೆಯಿರಲಿ. ಸ್ವಂತದ ಅರಿವಿರಲಿ. ಹುಟ್ಟಬೇಕಾದುದು ತನ್ನೊಳಗೇ ಎನ್ನುವ ನಿತ್ಯಸತ್ಯದ ಅನುಭವವು ಅವನಿಗಾಗುತ್ತದೆ. ಈ ‘ವಿವೇಕೋದಯ’ವು ಅಷ್ಟು ಸುಲಭವಾಗಿ ಆಗಿರಲಿಲ್ಲ.

“ಈ ಆಶ್ರಮದ ಮೂಲಕವಾಗಿ ತಮ್ಮ ತಪಃಶಕ್ತಿಯು ಅಭಿವ್ಯಕ್ತಗೊಳ್ಳಬೇಕು. ಭಯದಿಂದ ಪಕ್ಷಾಘಾತವಾಗಿ, ಅಜ್ಞಾನದಲ್ಲಿ, ಕತ್ತಲಲ್ಲಿ ಮುಳುಗುತ್ತ ಬಿದ್ದ ಮಾನವ ಜನಾಂಗ, ತಮ್ಮ ತಪಃಶಕ್ತಿಯಿಂದ ಸರಿಯಾದ ದಾರಿ ಕಾಣಬೇಕು. ಸತ್ವಪೂರ್ಣವಾಗಿ ಬೆಳೆಯಬೇಕು. ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು” (ಪು. ೧೦೪) ಎನ್ನುವ ವಿನಯಾನಂದನ ಅನುನಯವು ಅವನ ಅರಳಿದ ಪ್ರಜ್ಞೆಯನ್ನು ಮುದುಡಿಸಿ, ಮತ್ತೆ ವಿಸ್ಮೃತಿಗೊಯ್ಯುತ್ತಿತ್ತು. ಈ ಹೋರಾಟದಲ್ಲಿ, ತನ್ನ ಒಳದನಿಯ ಕೈ ಮೇಲಾದಾಗಲೆಲ್ಲ “ಪ್ರತಿಯೊಬ್ಬನೂ ಒಂದಲ್ಲ ಒಂದು ದಿನ ತನ್ನ ಅಂತರಂಗದಲ್ಲಿಯ ನ್ಯಾಯಾಸನದ ಮುಂದೆ ನಿಲ್ಲಬೇಕಾಗುತ್ತದೆ…. ಅಲ್ಲಿ ಶಿಕ್ಷೆಯಿಲ್ಲ. ನಿಷ್ಪಕ್ಷಪಾತವಾದ ಆತ್ಮಾವಲೋಕನವಿದೆ. ಲಜ್ಜೆ, ಸಂಕೋಚ, ಭಯ, ತಿರಸ್ಕಾರ ಹೀಗೆ ಯಾವ ಭಾವಗಳೂ ಅಲ್ಲಿ ಅಗತ್ಯವಿಲ್ಲ. ಸಾಕ್ಷೀ ಭಾವದಿಂದ ನಿಲ್ಲಬೇಕು. ಆಗ ದಾರಿ ಕಾಣುತ್ತದೆ. ಬದುಕಿಗೆ ಹೊಸ ಆಯಾಮ ಸಿಗುತ್ತದೆ. ನನ್ನ ಸೀಮಿತವಾದ ಬೇಕು ಬೇಡಗಳನ್ನು ಮೀರಿ ನಿಲ್ಲಬೇಕು. ಆಗ ಅಂತರಂಗದಲ್ಲಿ ಚೈತನ್ಯವು ತುಂಬುತ್ತದೆ” (ಅದೇ.) ಎಂದುಕೊಳ್ಳುತ್ತ, ಖಚಿತವಾದ ನಿಲುವನ್ನು ಅವನು ರೂಪಿಸಿಕೊಳ್ಳುತ್ತಾನೆ. ಆಗ, ‘ತಾನು ಸತ್ಯವನ್ನು ಕಂಡವನೂ ಅಲ್ಲ, ಬೋಧಿಸತ್ವನ ಅವತಾರವೂ ಅಲ್ಲ’ ಎನ್ನುವ ನಿಜವು ಅವನೊಳಗೆ ಪ್ರತ್ಯಕ್ಷವಾಗುತ್ತದೆ; ತನ್ನದು ಅರಿವಲ್ಲ, ಪಲಾಯನವಾದವೆನ್ನುವ ವಾಸ್ತವವು ನಿಷ್ಪನ್ನವಾಗುತ್ತದೆ. ಈ ಹಿನ್ನೆಲೆಯಲ್ಲಿ, “ನಾನು ಅಪರಾಧೀ ಮನೋವೃತ್ತಿಯುಳ್ಳ, ಅಣ್ವಸ್ತ್ರ ಭಯದಿಂದ, ಸಾಮ್ಯವಾದದ ಭಯದಿಂದ, ಜನಾಂಗೀಯ ಹಿಂಸೆಯ ಭಯದಿಂದ ತತ್ತರಿಸಿ ಹೋಗಿದ್ದೆ. ಅದರಿಂದ ಪಾರಾಗಬೇಕೆಂದು ನಾನು ಬಯಸಿದೆ…. ಬಯಲಲ್ಲಿ ಭಯ ವಾಗುತ್ತಿತ್ತು. ಬಸಿರನ್ನು ಹುಡುಕುತ್ತಿದ್ದೆ… ನಾನು ಬಯಸಿದ್ದು ಬಸಿರನ್ನು, ಆಶ್ರಯವನ್ನು” (ಪು ೧೦೨) ಎನ್ನುವ ನಿಷ್ಠುರ, ನಿರಾವಣಗೊಂಡ ಸತ್ಯವನ್ನು ಅವನು ಎದುರುಗೊಂಡ ಕ್ರಮವನ್ನು ಪರಿಭಾವಿಸಬೇಕು.

ಇನ್ನೊಂದೆಡೆಯಿಂದ, ಆಶ್ರಮದ ಸುರಕ್ಷಿತ ಪರಿಸರಕ್ಕೆ ನಾರ್ಮ್ಯಾನ್‌ನ ಒಳಹೊರಗುಗಳು ಒಗ್ಗಿಕೊಂಡಿರುತ್ತವೆ. ಒಳಗೊಳಗೇ ಚಿಗುರೊಡೆಸಿಕೊಳ್ಳುತ್ತಿರುವ ತನ್ನ ಅತೃಪ್ತಿಯನ್ನು ದಮನಿಸುವ ದಾರಿಯು ಅವನಿಗೆ ಕಾಣಿಸುವುದಿಲ್ಲ.

“ಸಾವು ಅಂಥ ಭಯಾನಕ ಅಲ್ಲ. ಆದರೆ, ಬದುಕಿರುವಾಗ ಒಳಗಿನ ಒಂದು. ಏನೋ ಅಮೂಲ್ಯವಾದುದು. ಚಿಂತನಕ್ಕೆ ನಿಲುಕಲಾರದೆ, ಕ್ಷಣ ಕ್ಷಣಕ್ಕೆ ಸಾಯುತ್ತಿರುವಂತೆ ಭಾಸವಾಗುತ್ತದೆ…. ನಮ್ಮ ಬದುಕಿನ ಸಫಲತೆಗೆ ಆ ಅಮೂಲ್ಯವಾದುದು, ದಿವ್ಯವಾದುದು, ಅನುಭವಕ್ಕೆ ಬರಬೇಕು. ಅದು ಬರುವ ಬಗೆ ಹೇಗೆ? ಇಲ್ಲಿಯವರೆಗೆ ನಾನು ಬಯಲಿನಲ್ಲಿ ಭಯಪೀಡಿತನಾಗಿ ಬಸಿರಲ್ಲಿ ಬಂದೆ. ಭಯ ಹೋಗಲಿಲ್ಲ. ಇದಕ್ಕಾಗಿ ನಾನು ಮಾಡ ಬೇಕಾದುದು ಏನು?” (ಪು. ೧೧೦-೧೧). ಸತತವಾದ, ಸುದೀರ್ಘವಾದ ‘ಸಾಧನೆ’ಯ ಅನಂತರವೂ ಈ ಪ್ರಶ್ನೆಯನ್ನು ಪರಿಹರಿಸಿಕೊಳ್ಳುವುದು ನಾರ್ಮ್ಯಾನ್‌ನಿಗೆ ಸಾಧ್ಯ ವಾಗುವುದಿಲ್ಲ. ಇದರ ಹಿಂದಿನಿಂದಲೇ ತುಂಬ ಅರ್ಥಪೂರ್ಣವಾದ ನಗೆಯೊಂದು ಅವನ ಅಂತರಂಗದಲ್ಲಿ ತೇಲಿ ಬರುತ್ತದೆ; ಅದನ್ನವನು ನಿರ್ಲಕ್ಷಿಸುತ್ತಾನೆ.

ಬದುಕಿನ ವಿವಿಧ ಹಂತಗಳನ್ನು ಹಾದು ಬರುತ್ತಿರುವಾಗ ಮಾತು, ಕಾಲ, ಸಂಪರ್ಕ, ಸಂಬಂಧಗಳೆಲ್ಲವೂ ತನ್ನನ್ನು ಬಂಧಿಸುವ ಸಂಕಲೆಗಳೆಂದು, ಭಾವಿಸುವ ಸಾರ್ಮ್ಯಾನ್ ಅವುಗಳನ್ನು ತ್ಯಜಿಸುತ್ತಲೇ ಇರುತ್ತಾನೆ. ಆದರೆ, ವೃತ್ತ ಪತ್ರಿಕೆಯ ಪ್ರತಿಯೊಂದನ್ನು ಕೊಳ್ಳುವ, ಅದು ನಲುಗದಂತೆ ಕಾಯ್ದಿಡುವ ಪ್ರಲೋಭನೆಗೆ ಒಳಗಾಗುತ್ತಾನೆ. ಮೂಲ ವಾಸನೆಗಳ ಸೆಳೆತದಿಂದ ಪಾರಾಗುವ ಸ್ಥಿತಿಯನ್ನು ಈ ಪ್ರಸಂಗವು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತದೆ. ‘ಗಡಿಯಾರದ ಗುಲಾಮತ್ವ’ವನ್ನು ಧಿಕ್ಕರಿಸುವ ಕ್ರಮವಾಗಿ, ಅದನ್ನು ಕಳಚಿ ದೂರಕ್ಕೆ ಎಸೆಯುವುದು ತುಂಬ ಸುಲಭ. ಆದರೆ, ಕಾಲದ ಗಣನೆಯಿಲ್ಲದೆ ಬದುಕುವುದು ಆಧುನಿಕ ಮನಸ್ಸಿನ ಅಳವಿನಾಚೆಗಿನ ವಿಚಾರವಾಗಿದೆ. ಗಡಿಯಾರವು ಕೇವಲ ಒಂದು ಸಾಧನ. ಕಾಲವು ಮನುಷ್ಯ ನಿರ್ಮಿತವಾದ ಯಾವ ಮಿತಿಯನ್ನೂ ಮಾನ್ಯ ಮಾಡುವುದಿಲ್ಲವೆನ್ನುವ ಪಾಠವನ್ನು ಅವನು ಈ ಮೂಲಕವಾಗಿ ಕಲಿಯುತ್ತಾನೆ.

ಬೇರೆ ಬೇರೆ ಶಕ್ತಿಗಳು ಮಾನವನ ಜೀವಿತವನ್ನು ನಿರ್ಧರಿಸುವ, ನಿಯಂತ್ರಿಸುವ ರೀತಿಗಳಿಗೆ ಈ ಕೃತಿಯುದ್ಧಕ್ಕೂ ಅವಧಾರಣೆಯಿದೆ. ಅವುಗಳನ್ನು ನಿವಾರಿಸಲು ಅವನು ಅಸಮರ್ಥನಾಗಿದ್ದಾನೆ. ಆದರೆ, ಅವುಗಳಿಂದ ವಿಚಲಿತವಾಗದ ಸ್ವಂತಿಕೆಯನ್ನು ಆತ ಸಾಧನೆಯಿಂದ ರೂಢಿಸಿಕೊಳ್ಳಬಹುದೆಂಬ ಅನುಕ್ತ ಸಂದೇಶವು ಇಲ್ಲಿದೆ. ಈ ಜಿಜ್ಞಾಸೆಗಳ ಆಸರೆಯಲ್ಲಿ, ಸುರಕ್ಷೆಯ ಅನಿಸಿಕೆಯು ಹೊರಗಿನ ಉತ್ಪನ್ನವಲ್ಲ. ಅಂತರಂಗದ ಸ್ಫುರಣವಾಗಿ ಅದು ಜೀವ ತಳೆಯಬೇಕು; ಒಳಗಿನ ಸಂಸ್ಕಾರದಿಂದ ಮಾಗಬೇಕೆನ್ನುವ ತತ್ತ್ವವು ಇಲ್ಲಿ ಪ್ರತಿಪಾದಿತವಾಗಿದೆ, ಕೃತಿಯ ಪ್ರತ್ಯೇಕತೆಯನ್ನು ಸ್ಥಿರ ಪಡಿಸುವ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ.

ಇಂಥ ಆಂತರ್ಯದ ಒಳಸುಳಿಗಳ ಅನ್ವೇಷಣೆಗಳಿಗೆ ಸೂಕ್ತವಾದ ಅವಕಾಶಗಳೂ ನಾರ್ಮ್ಯಾನ್‌ನಿಗೆ ಲಭ್ಯವಾಗುತ್ತವೆ. ಹೆಸರಿಲ್ಲದ ಆಶ್ರಮವೊಂದರ ಗುರು, ಪರೀಕ್ಷಾರ್ಥವಾಗಿ ಅವನಿಗೆ ಒಂದು ವಾರದ ಏಕಾಂತವನ್ನು ವಿಧಿಸಿದ ಪ್ರಸಂಗವನ್ನು ಈ ದೃಷ್ಟಿಯಿಂದ ಗಮನಿಸಬಹುದು.

“ಶಬ್ದಗಳು ನಿರರ್ಥಕ ಶಕ್ತಿ ಒಂದೇ ಸತ್ಯ. ಶಕ್ತಿ ಸಂಚಯನ ಮುಖ್ಯವಾದುದು. ಅದರ ಸಾಧನೆಯೇ ತಪಸ್ಸು” (ಪು. ೨೪) ಎಂದ ಗುರುವಿನ ಹೇಳಿಕೆಯನ್ನು ಒಳಗಿನ ಒರೆಗೆ ಹಚ್ಚಿ ನೋಡುವುದು. ತನ್ನಲ್ಲಿ ಅಂಥ ಶಕ್ತಿ ಉತ್ಪಾದನೆ-ಸಂಗೋಪನೆಯ ಸಾಮರ್ಥ್ಯಗಳಿವೆಯೇ ಎಂದು ಪರೀಕ್ಷಿಸಿಕೊಳ್ಳುವುದು ನಾರ್ಮ್ಯಾನ್‌ನ ಮುಂದಿನ ಸವಾಲುಗಳಾಗುತ್ತವೆ. ಹಾಗೆಯೇ, ಹಿಮಾಲಯದ ಬಳಿಯಿದ್ದ ಆಶ್ರಮವೊಂದು, ಹತ್ತು ದಿನಗಳವರೆಗೆಕಡ್ಡಾಯವಾಗಿ ಮೌನವಾಗಿರಬೇಕೆಂಬ ನಿಯಮವನ್ನು ಪಾಲಿಸಬೇಕೆನ್ನುತ್ತದೆ. ಈ ಸಂದರ್ಭದಲ್ಲಿ “ಬಹಿರಂಗದ ಮೌನವಾಗಿದ್ದರೆ ಸಾಲದು. ಮಾನಸಿಕ ಮೌನವಾಗಿಯೂ ಇರಬೇಕು” (ಪು. ೪೨) ಎನ್ನುವ ಎಚ್ಚರಿಕೆಯನ್ನು, ಅವನಿಗೆ ನೀಡಲಾಗುತ್ತದೆ. ನಾರ್ಮ್ಯಾನ್‌ನಿಗೆ ಈ ‘ಮಾನಸಿಕ ಮೌನ’ದ ಪರಿಕಲ್ಪನೆಯೇ ಹೊಸತಾಗಿರುತ್ತದೆ. ಮನಸ್ಸನ್ನು ಸುಮ್ಮನಿರಿಸುವುದು ಎಷ್ಟು ಶ್ರಮದಾಯಕವೆನ್ನುವ ಅರಿವೂ ಅವನಿಗುಂಟಾಗುತ್ತದೆ.

ಶಬ್ದಗಳು ಒಳಗೆ ಸೃಷ್ಟಿಯಾಗುತ್ತಿರಲಿ, ಇಲ್ಲಿ ಹೊರಗೆ ಅಭಿವ್ಯಕ್ತಿಗಳನ್ನು ಪಡೆಯುತ್ತಿರಲಿ ಅವುಗಳನ್ನು ಅನುಸರಿಸುವ ಚಿಂತನೆಗಳು ಫಲಪ್ರದವಾಗಲಾರವು. ಶಬ್ದಾತೀತವಾದ ‘ಮೌನ ಚಿಂತನ’ವು ಪ್ರತಿಮೆಗಳಲ್ಲಿ ವ್ಯಕ್ತವಾಗುತ್ತ, ಒಳಗಿನ ಬೆಳಕಿನ ಪರಿಪಕ್ವತೆಯಲ್ಲಿ ಪರಿಣಮಿಸುತ್ತದೆನ್ನುವ ಕಾದಂಬರಿಯ ನಿಲುವು, ಭಾರತೀಯ ಅಧ್ಯಾತ್ಮದ ತಿರುಳೇ ಆಗಿರುವ ‘ಧ್ಯಾನಸ್ಥ ಸ್ಥಿತಿ’ಯ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ. ಇದು, ಗರ್ಭಾಶಯ ದೊಳಗೆ ರೂಪುಗೊಳ್ಳಲು ಇಚ್ಚಿಸಿದ ನಾರ್ಮ್ಯಾನ್‌ನ ಉದ್ದೇಶಿತ ಸ್ವರೂಪವಾಗಿದೆ.

ಇವುಗಳೊಂದಿಗೇ ಹೊರಗಿನ ಮೈದಾನದ ಘಟನಾವಳಿಗಳು ನಾರ್ಮ್ಯಾನ್‌ನ ತಿಳಿವಳಿಕೆಯನ್ನು ತಿದ್ದುತ್ತವೆ.

“ಆಶ್ರಮವು ಒಂದು ಗುಬ್ಬಿಯ ಗೂಡೋ, ಒಂದು ಹುತ್ತವೋ ಆಗಬಾರದು” (ಪು. ೯೫) ಎಂದು ಹೇಳುತ್ತ, ಅನಿಕೇತಾನಂದನನ್ನು ಬಯಲಿನ ಮುಕ್ತ ವೈಶಾಲ್ಯದೆಡೆಗೊಯ್ಯುವ ಆಭಾಸವನ್ನು ಹುಟ್ಟಿಸುವ ಅವನ ಅನುಚರನಾಗಲಿ, ತನ್ನದಾಗಿರದ ಜೀವನ ಚರಿತ್ರೆಯನ್ನು ಒಪ್ಪಿಕೊಳ್ಳುವ ಅವನ ಸಂಕೀರ್ಣ ತುರ್ತುಗಳಾಗಲಿ ಇಂಥ ಕೆಲವು ನಿದರ್ಶನಗಳಾಗಿವೆ. ಈ ಪ್ರಕ್ರಿಯೆಯುದ್ಧಕ್ಕೂ ನಾರ್ಮ್ಯಾನ್‌ನು ವ್ಯಕ್ತಾವ್ಯಕ್ತ ನೆಲೆಗಳಲ್ಲಿ ತಾನು ಅರಸಿಬಂದ ಭಾರತೀಯ ಆಧ್ಯಾತ್ಮಿಕತೆಯ ದರ್ಶನಕ್ಕಾಗಿ ಕಾತರಿಸುತ್ತಿರುತ್ತಾನೆ. ಒಂದು ದೃಷ್ಟಿಯಿಂದ, ಅವನ ಈ ಹುಡುಕಾಟಗಳು ಮಠ-ಆಶ್ರಮಗಳಿಂದಾಚೆಗೆ ಹೆಜ್ಜೆಯಿಡುವುದಿಲ್ಲ. ಅಂಥ ಕೆಲವು ಆಶ್ರಮಗಳು ಹಸಿದವನಿಗೆ ಅನ್ನ-ನೀರುಗಳನ್ನೂ ಕೊಡಲಾರದ ಅಮಾನವೀಯತೆಯ ಕೇಂದ್ರಗಳಾಗಿ ಅವನಿಗೆ ಕಾಣಿಸುತ್ತವೆ. ಸ್ಫಟಿಕ ನಿರ್ಮಲವಾದ ನೀರು, ಫಲ ತುಂಬಿ ತೊನೆಯುವ ಮರಗಳು ಮುಂತಾದುವುಗಳನ್ನು ಆವರಣದೊಳಗೆ ಇರಿಸಿಕೊಳ್ಳುವ ಅವುಗಳ ರೀತಿಯೂ ಇಲ್ಲಿ ಸಾಂಕೇತಿಕವೆನಿಸುತ್ತದೆ. ಭಾರತದ ಅಮೂಲ್ಯವಾದ ಸಂಪತ್ತೊಂದು ಅನರ್ಹರ ಕೈಗಳಲ್ಲಿ ಸಿಕ್ಕಿ ವಿನಿಯೋಗವಾಗದೆ ನಷ್ಟವಾಗುತ್ತಿರುವುದರ ಬಗೆಗಿನ ಭೇದವೂ  ಇಲ್ಲಿ ಅಂತರ್ನಿಹಿತವಾಗಿದೆ. ಅಂಥ ಕೇಂದ್ರಗಳಲ್ಲಿ ವಾಸಿಸುತ್ತಿದ್ದ ಜನರಂತೂ, “ಮಾನವ ಜೀವಿಗಳೆಂಬ ಅನುಭವವೇ ಅವನಿಗೆ ಬಂದಿರಲಿಲ್ಲ. ಅವರು ನಡೆಯುತ್ತಿದ್ದರು. ಕೆಲಸವನ್ನು ಮಾಡುತ್ತಿದ್ದರು. ಅವರನ್ನು ಯಂತ್ರಗಳೆಂದು ಹೇಳುವುದೂ ಅವನಿಗೆ ಒಪ್ಪಿಗೆಯಾಗಲಿಲ್ಲ. ಅವರು ಬರೀ ನೆರಳುಗಳು” (ಪು. ೨೩) ಎಂದು ಅವನಿಗೆನಿಸುತ್ತಿತ್ತು. ಸಾಧಕರಿಗೆ ಯಾವ ಸ್ವಾತಂತ್ರ್ಯವನ್ನೂ ನೀಡದ, ಹಣ ಗಳಿಕೆಯತ್ತಲೇ ದೃಷ್ಟಿಯಿಟ್ಟಿರುವ ಇಂಥ ಕೇಂದ್ರಗಳಿಗೂ, ಅಧ್ಯಾತ್ಮಕ್ಕೂ ಸಂಬಂಧವನ್ನು ಕಲ್ಪಿಸಿಕೊಳ್ಳಲು ನಾರ್ಮ್ಯಾನ್‌ನಿಂದಾಗುವುದಿಲ್ಲ. ಈ ಮಾಲಿಕೆಯಲ್ಲಿ ಅವನಿಗೆ ಕೆಲವು ಹಾಸ್ಯಾಸ್ಪದವಾದ ಅನುಭವಗಳೂ ಆಗುತ್ತವೆ. ಶ್ರೀಮಂತ ವೈದ್ಯರೊಬ್ಬರು, ತಮ್ಮ ಶ್ರೀಮತಿಯ ಮುಖಮುದ್ರೆಯು ‘ಮಾತೆ  ಕುಂಡಲಿನಿ’ಯ ಹಾಗಿಲ್ಲವೇ? ಎಂದು ಪ್ರಶ್ನಿಸುವ ಸಂದರ್ಭವು ಈ ಮಾದರಿಯ ಒಳ್ಳೆಯ ಉದಾಹರಣೆ ಯಾಗಿದೆ.

\|ರಾ ಮಹತ್ವಾಕಾಂಕ್ಷಿಗಳಾಗದ ಯೋಜನೆಗಳನ್ನು ಹಾಕಿಕೊಂಡು, “ಅವೆಲ್ಲವೂ ಲೋಕ ಕಲ್ಯಾಣಕ್ಕಾಗಿ, ಅದನ್ನು ತಲುಪಲು ಒಂದು ಸಾಧನ. ಅದು ನಮ್ಮದಾಗಬೇಕು” (ಪು. ೯೮) ಎಂದು ಲೋಕವನ್ನೂ, ಸ್ವಂತವನ್ನೂ ನಂಬಿಸಿಕೊಳ್ಳುವ ಆಶ್ರಮಗಳ ಒಳಗುಟ್ಟುಗಳು ಬಹಿರಂಗವಾಗುತ್ತ ಹೋದಂತೆ, ಈ ನಿಟ್ಟಿನ ನಾರ್ಮ್ಯಾನ್‌ನ ಅರಿವೂ ನಿಚ್ಚಳವಾಗುತ್ತದೆ. ಈ ಬೆಳಕಿನಲ್ಲಿ, “ಸುರಕ್ಷಿತತೆಯನ್ನು ಬಯಸಿ ಭಾರತಕ್ಕೆ ಬಂದೆ. ಇಲ್ಲಿಯ ವಾತಾವರಣವು ಅಷ್ಟೇ ಭಯಾನಕವಾಗಿದೆ. ಇಲ್ಲಿಯ ಜನ ಹೋಳು ಹೋಳಾಗಿದೆ. (ಅವರು) ಅಶಾಂತಿಯಲ್ಲಿ, ಅತೃಪ್ತಿಯಲ್ಲಿ ಹಾವಿನ ಹೆಡೆಯ ನೆರಳಲ್ಲಿ ಕಪ್ಪೆಯ ಹಾಗೆ ಬದುಕುತ್ತಿದ್ದಾರೆ” (ಪು. ೧೦೨) ಎಂಬುದನ್ನು ಆತನು ಕಂಡುಕೊಳ್ಳುತ್ತಾನೆ.

ಭಾರತದಲ್ಲಿ ಹಲವಾರು ವರ್ಷಗಳನ್ನು ಕಳೆಯುವ ನಾರ್ಮ್ಯಾನ್‌ನು ಅಲ್ಲಿ ವ್ಯಾಪಕ ವಾಗಿರುವ ಆಲಸ್ಯ, ಸೋಗಲಾಡಿತನ, ಧನದಾಹ, ವ್ಯಕ್ತಿ ಪೂಜೆಗಳನ್ನು ಗಮನಿಸುತ್ತಾನೆ; ನಿರಾಶೆನಾಗುತ್ತಾನೆ. ನಿಜವಾದ ಆಧ್ಯಾತ್ಮಿಕತೆಯ ಸ್ವರೂಪವನ್ನು ಶೋಧಿಸುವುದು ಅವನಿಂದಾ ಗುವುದಿಲ್ಲ.

ಕೃತಿಕಾರರು, ಈ ಲೋಪವನ್ನು ದೃಷ್ಟಾಂತ ಮತ್ತು ದಾರ್ಶನಿಕ ಕಥೆಗಳ ಮೂಲಕ ತುಂಬಿಕೊಡುವ ಪ್ರಯತ್ನಗಳನ್ನು ಮಾಡುತ್ತಾರೆ. ಇವುಗಳು ಹೊರ ಪ್ರಪಂಚದ ಸೂಕ್ಷ್ಮ ಅನುಭವಗಳನ್ನೂ, ಬೇರೆ ಬೇರೆ ಸಿದ್ಧಾಂತ, ನಂಬಿಕೆ, ನಿಷ್ಠೆಗಳ ಸ್ವರೂಪಗಳನ್ನೂ ನಾರ್ಮ್ಯಾನ್‌ನಿಗೆ ಪರಿಚಯ ಮಾಡಿಸುತ್ತ ಅವನನ್ನು ಬೆಳೆಸುತ್ತವೆ; ಬೆಳಕಿನತ್ತ ನಡೆಸುತ್ತವೆ.

ಇವುಗಳಿಗೆ ಸಮಾನಾಂತರದಲ್ಲಿ, ನಾರ್ಮ್ಯಾನ್‌ನಿಗೆ ಆಗಾಗ ಬೀಳುವ ಕನಸುಗಳ ಜಗತ್ತೂ ವಿಸ್ತಾರವಾಗುತ್ತಿರುತ್ತದೆ. ಅವುಗಳು ಬಾಹ್ಯ ಅನುಭವ-ಪ್ರೇರಣೆಗಳನ್ನು ಅವನ ಸುಪ್ತ ಮನಸ್ಸು ಗ್ರಹಿಸಿದ ರೀತಿಗಳಿU ಸಂವಾದಿಗಳಾಗುತ್ತವೆ. ಜಾಗೃತ ಅವಸ್ಥೆಯಲ್ಲಿ, ಅವನು ಅವುಗಳಿಗೆ ಸೂಚಿಸುವ ಪ್ರತಿಕ್ರಿಯೆಗಳು, ಅವನೊಳಗಿನ ಬದಲಾವಣೆಗಳ ಸೂಚಕಗಳಾಗುತ್ತವೆ.

ಮೂರನೆಯ ನೆಲೆಯಿಂದ, ಕಾದಂಬರಿಯುದ್ದಕ್ಕೂ ಹಾದು ಹೋಗುತ್ತಲೇ ಇರುವ ಪ್ರತಿಮೆ-ರೂಪಕ-ಸಂಕೇತಗಳು ಇದೇ ಉದ್ದೇಶಕ್ಕಾಗಿ ಬಳಕೆಯಾಗುತ್ತವೆ. ತಾನು ನೇರವಾಗಿ ಗಳಿಸಲಾರದವುಗಳನ್ನು ಇಂಥ ಪರೋಕ್ಷ ವಿಧಾನಗಳಿಂದ ಸಂಪಾದಿಸಲು ಯತ್ನಿಸುವ ನಾರ್ಮ್ಯಾನ್‌ನು ಒಳ-ಹೊರಗುಗಳ ನಡುವೆ ಸೇತುವೆಯನ್ನು ಕಟ್ಟುತ್ತಾನೆ.

ಈ ಸಂದರ್ಭದಲ್ಲಿ ಅವನಿಗೆ ತಾನು ಸಂಧಿಸುವ ವ್ಯಕ್ತಿಗಳ ಆಂತರಿಕ ವಿದ್ಯಮಾನಗಳ ಶೋದವು ಮುಖ್ಯವೆನಿಸುತ್ತದೆ. ಅವರ ಬಾಹ್ಯ ನಡೆವಳಿಕೆಗಳು ಸುಲಭವಾಗಿ ಅವನ ಗ್ರಹಿಕೆ ಗಳಿಗೆ ಸಿಗುತ್ತವೆ. ಆದರೆ ಅವುಗಳ ಹಿಂದಿರುವವುಗಳನ್ನು ತಿಳಿಯಲು ಅವನು ಕಷ್ಟಪಡ ಬೇಕಾಗುತ್ತದೆ.

ಉದಾಹಣೆಗೆ, ತಾಯಿಯು ತನ್ನನ್ನು ಬಿಟ್ಟು ಹೋಗುವಾಗ ಹೇಳಿದ,

“ನಿನಗೆ ಒಳ್ಳೆಯದಾಗಲಿ, ನೀನು ದೊಡ್ಡವನಾಗಿರುವೆ” (ಪು. ೫೬) ಮಾತುಗಳಲ್ಲಿ ವಿರಕ್ತಿಯಿತ್ತೋ, ಜುಗುಪ್ಸೆಯಿತ್ತೋ ಅಥವಾ ಸೇಡಿನ ಮನೋಭಾವವೇ ಇತ್ತೋ ಎಂಬುದು ಅವನಿಗೆ ತಿಳಿಯುವುದಿಲ್ಲ. ಆ ಕ್ಷಣವನ್ನು ಜ್ಞಾಪಿಸಿಕೊಂಡಷ್ಟೂ ಅವನ ಗೊಂದಲಗಳು ಹೆಚ್ಚಾಗುತ್ತವೆ.

ಇನ್ನೊಂದು ಪ್ರಸಂಗದಲ್ಲಿ, ಅವನ ಶಿಷ್ಯನಾದ ವಿನಯಾನಂದನು “ಈಗ ಮಾತನಾಡು ವವನು ನಾನಲ್ಲ. ನನ್ನ ಬಾಯಿಯಿಂದ ತಾವೇ ಮಾತನಾಡುತ್ತಿದ್ದೀರಿ. ….ನನ್ನ ದೇಹವು ತಮ್ಮ ವಾಹನ. (ಅದರ ಮೂಲಕ) ಯಾತ್ರೆಗೆ ಹೊರಡುವವರು ತಾವೇ. ಯುಆರ್ ಕ್ರಿಯೇಟಿಂಗ್ ಎ ಬಿಕಾನ್ ಆಫ್ ಲಾಯಿಟ್ ಇನ್ ದ ಸೀ ಆ ಡಾರ್ಕ್‌ನೆಸ್” (ಪು. ೯೮) ಎಂದೆಲ್ಲ ಹೇಳುವುದರಲ್ಲಿ ಏನೂ ಹುರುಳಿಲ್ಲವೆಂದು ಅವನಿಗೆ ಗೊತ್ತಿರುತ್ತದೆ. ಆದರೆ, “ನನ್ನಿಂದ ಅವನಿಗೆ ಏನು ಬೇಕಾಗಿದೆ? ಅವನ ಹಸಿವು ಏನು? ಆ ಹಸಿವನ್ನು ನಾನು ಹಿಂಗಿಸಬಲ್ಲೆನೆ? ಅವನದು ಏನಾದರೂ ಆಟ ಇದೆಯೇ? ನಾನು, ನನಗೇ ಅರಿಯದಂತೆ ಅವನ ಕೈಯಲ್ಲಿ ಸೂತ್ರದ ಬೊಂಬೆಯಾಗುತ್ತಿದ್ದೇನೆಯೇ?” (ಪು. ೯೯) ಇತ್ಯಾದಿ ಪ್ರಶ್ನೆಗಳ ಮುಂದೆ ಅವನು ತದವರಿಸುತ್ತಾನೆ. ನಿಶ್ಚಿತವಾಗಿ, ನಿಖರವಾಗಿ ಮನಸ್ಸಿನ ಒಳ ವ್ಯಾಪಾರಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಲಾರದು. ಅವುಗಳು ಕ್ಷಣದಿಂದ ಕ್ಷಣಕ್ಕೆ ಪರಿವರ್ತಿತ ವಾಗುತ್ತಿರುತ್ತವೆಂಬ ನಿರ್ಧಾರಕ್ಕೆ ಬರುವುದು ಅವನಿಗೆ ಅನಿವಾರ್ಯವೂ ಆಗುತ್ತದೆ.

ಎಂದರೆ, ನಿಜವಾದ ಸ್ವ-ವ್ಯಕ್ತಿತ್ವ, ವಿನಯಾನಂದನು ಲೋಕಕ್ಕೆ ತೋರಿಸುವ ತನ್ನ ಮುಖ, ವಿನಯಾನಂದನ ಮನಸ್ಸಿನೊಳಗೆ ನೆಲೆಸಿರುವ ತನ್ನ ವಾಸ್ತವ ಚಿತ್ರಗಳು ಒಂದಕ್ಕೊಂದು ಹೊಂದಾಣಿಕೆಯಾಗದಿರುವುದರಿಂದ ನಾರ್ಮ್ಯಾನ್‌ನು ವಿವಶನಾಗುತ್ತಾನೆ. ಸುತ್ತಲಿರುವ ವ್ಯಕ್ತಿಗಳೊಳಗೆ ತಾನು ಹುಡುಕಲು ಪ್ರಯತ್ನಿಸಿದ್ದು, ಅಲ್ಲಿ ಪಡಿಮೂಡಿರಬಹುದಾದ ತನ್ನ ಸ್ವರೂಪವನ್ನಾಗಿರಬಹುದೇ ಎನ್ನುವ ಸಂಶಯವೂ ಅವನಿಗೆ ಬರುತ್ತದೆ. ಹಾಗಾಗಿಯೇ ಮೂರು ನೆಲೆಗಳ ಉತ್ಖನನ ಸಾಮಗ್ರಿಗಳು ಅವನಿಗೆ ಅಷ್ಟಾಗಿ ನೆರವೀಯುವುದಿಲ್ಲವೆನ್ನುವುದು ಈ ಸಂದರ್ಭದ ದುರಂತವೇ ಆಗುತ್ತದೆ.

ಇಲ್ಲಿ, ಅವನಿಗೆ ಅಪ್ರತ್ಯಕ್ಷವಾದ ಕೆಲವು ಲಾಭಗಳಾಗುತ್ತವೆ. ಬದುಕಿನ ಅರ್ಥವನ್ನು ವಿಶದಪಡಿಸಿಕೊಳ್ಳಲು ಈ ಪ್ರಸಂಗಗಳೆಲ್ಲವೂ ಅವನಿಗೆ ಸಹಕಾರಿಗಳಾಗುತ್ತವೆ. ಉದಾಹರಣೆಗೆ,

“\|ರಾ ಆಳವಾದ ಒಂದು ದರಿ. ಕತ್ತಲೋ ಕತ್ತಲು. ನಿರರ್ಥಕತೆಯ ಕೊಳ್ಳ ಹುಟ್ಟಿನಲ್ಲಿ ಅರ್ಥವಿಲ್ಲ. ಬಾಳಿನಲ್ಲಿ ಅರ್ಥವಿಲ್ಲ. ಬದುಕೇ ಒಂದು ಭಯಂಕರವಾದ ಉತ್ಪಾತ” (ಪು. ೧೭) ಎಂದು ಒಮ್ಮೆ ನಾರ್ಮ್ಯಾನ್‌ನ ಒಳದನಿಯು ಹೇಳುತ್ತದೆ.

“ಹೊಳೆ ಹರಿಯುತ್ತಿದೆ. ಅದರ ಮೇಲೆ ನಿಯಂತ್ರಣವಿಲ್ಲ. ಅದಕ್ಕೆ ನಿನ್ನ ಬೇಕು-ಬೇಡಗಳ ಗೊಡವೆಯಿಲ್ಲ. ಹಾಗೆ, ನಿನ್ನ ಬದುಕು ಒಂದು ಹೊಳೆ (ಪು. ೨೩) ಎಂಬ ತಿಳಿವನ್ನು ಆಶ್ರಮವೊಂದರ ಗುರುವು ಅವನಿಗೆ ನೀಡುತ್ತಾನೆ. ನಷ್ಟವಾಗುತ್ತಿರುವ ಕ್ಷಣಗಳ ಸಾಮತಿಯೊಂದಿಗೆ ಬದುಕಿನ ನಶ್ವರತ್ವವನ್ನು ಕಲ್ಪಿಸಿಕೊಳ್ಳುವುದು ಅವನಿಗೆ ಸುಲಭವಾಗುತ್ತದೆ. ಒಟ್ಟಾರೆಯಾಗಿ, ಬದುಕೆಂದರೆ ಅನಿಯಂತ್ರಿತವಾದ, ಅನಿರೀಕ್ಷಿತವಾದ, ವೈವಿಧ್ಯಮಯ ಅನುಭವಗಳ ಸಂಕೀರ್ಣವೆಂದೂ, ಆ ವಿನ್ಯಾಸವನ್ನು ಸಮರ್ಪಕವಾಗಿ ಗ್ರಹಿಸುವುದರಲ್ಲಿಯೇ ಬಾಳಿನ ಅರ್ಥವಿದೆಯೆಂದೂ ಅವನು ನಿರ್ಧರಿಸುತ್ತಾನೆ.

ಈ ಹಿನ್ನೆಲೆಯಲ್ಲಿ, ನಾರ್ಮ್ಯಾನ್-ಅನಿಕೇತಾನಂದರ ಸಂಯುಕ್ತ ಶ್ರಮವು ಸಂಪಾದಿಸಿದ ಪ್ರಜ್ಞೆಯೆಂಥದೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಅದರ ವಿವಿಧ ನೆಲೆಗಳ ಕೆಲವು ಮಾದರಿಗಳನ್ನು ಇಲ್ಲಿ ಪರಿಶೀಲಿಸಬಹುದು.

ಒಂದು ಸಂದರ್ಭದಲ್ಲಿ ಇಂದ್ರಿಯಗಳ ಮೂಲಕ ಪ್ರಾಪ್ತವಾಗುವ ತಿಳಿವಳಿಕೆಯು ಜ್ಞಾನವಲ್ಲ. ತಿಳಿವನ್ನು ಯಾರೂ ಭಿಕ್ಷೆಯಾಗಿ ನೀಡಲಾರರು; ಅದನ್ನು ದಾನವಾಗಿ ಸ್ವೀಕರಿಸುವುದು ಯಾರಿಗೂ ಸಾಧ್ಯವಾಗಲಾರದೆನ್ನುವುದು ನಾರ್ಮ್ಯಾನ್‌ನಿಗೆ ಹೊಳೆಯುತ್ತದೆ. ಆ ಸ್ವರೂಪವನ್ನು ಅಳೆಯಲು ಅವನು ಪ್ರಯಾಸಪಡುತ್ತಾನೆ.

“ಕಲಿತುದು ಸ್ಮೃತಿಯಾಗುತ್ತದೆ. ಸ್ಮೃತಿ ಜ್ಞಾನವಲ್ಲ” (ಪು. ೧೬) ಎನ್ನುವ ಬೋಧೆಯನ್ನು ಅವನು ತನ್ನ ಸ್ಮರಣೆಗೆ ಬಂದ ಗುರ್ಜೀಫಾ – ಆಸ್ಪೆನ್‌ಸ್ಕಿಯರ ವೃತ್ತಾಂತದ ಮುಖಾಂತರ ಗಳಿಸುತ್ತಾನೆ.

ಇನ್ನೊಂದು ಪ್ರಸಂಗದಲ್ಲಿ, ಕಡಲದಂಡೆಯಲ್ಲಿ ಏಕಾಕಿಯಾಗಿ ಕುಳಿತಿದ್ದ ಹಿಪ್ಪಿಯೊಬ್ಬ ನಾರ್ಮ್ಯಾನ್‌ನ ಒಳಗಣ್ಣುಗಳನ್ನು ತೆರೆಸುತ್ತಿದೆ.

“ನಿಜವಾಗಿ, ನನಗೆ ಏನು ಬೇಕು ಎಂಬುದನ್ನು ತಿಳಿದುಕೊಂಡರೆ, ಅದು ತಾನಾಗಿ ಸಿಕ್ಕುತ್ತದೆ. ನನಗೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳುವುದೇ ತಪಸ್ಸು. ಅದು ತಿಳಿದ ದಿನ ಸಿದ್ದಿ. ಆಮೇಲೆ ಬದುಕು ಆನಂದಮಯ” (ಪು. ೩೩) ಎನ್ನುತ್ತ ಕಣ್ಣುಮುಚ್ಚಿ ಕೊಳ್ಳುವುದರ ಮೂಲಕ, ಆ ಹಿಪ್ಪಿಯು ನಾರ್ಮ್ಯಾನ್‌ನಿಗೆ “ನಿರಪೇಕ್ಷ ಪ್ರಸನ್ನ ಭಾವ” ತುಂಬಿದ ಆನಂದದ ಸ್ವರೂಪವನ್ನು ಬಿಡಿಸಿ ತೋರಿಸುತ್ತಾನೆ.

ತಾನು ಸ್ವಲ್ಪವೂ ನಂಬದ ‘ಫಂಗಶುವಿ’ ಪರಿಣತನಿಂದಲೂ – ಈ ದೃಷ್ಟಿಯಿಂದ – ನಾರ್ಮ್ಯಾನ್‌ನು ಉಪಕೃತನಾಗುತ್ತಾನೆ.

“ನಿನ್ನ ಅಮೆರಿಕೆಯ ತಾಮಸ ಭಾವವು ಇನ್ನೂ ಜೀವಂತವಾಗಿದೆ. ವೇಷ ಬದಲಾದರೆ ಏನು? ಮೊದಲು ಮನಸ್ಸು ಬದಲಾಗಬೇಕು…. ಅನುಗ್ರಹಕ್ಕೆ ಕಾಲ ಬರಬೇಕು…. ತಾಗದೆ ಬಾಗುವುದಿಲ್ಲ. ತಾಗಿ ಬಾಗಿದಾಗ ಕಾಲ ಬರುತ್ತದೆ” (ಪು. ೭೦) ಎನ್ನುವ ಆ ತಜ್ಞನು. ನಾರ್ಮ್ಯಾನ್‌ನ ಮನದೊಳಗಿನ ಮೂಲ ವಾಸನೆಗಳನ್ನೂ ‘ಕಾಲಲಬ್ಧಿ’ಯ ಪರಿಕಲ್ಪನೆಯನ್ನೂ ಅವನಿಗೇ ಪರಿಚಯ ಮಾಡಿಕೊಡುತ್ತಾನೆ.

ಆಗಾಗ, ಅಂತರಂಗದ ಕೂಲಂಕಷ ಅನ್ವೇಷಣೆಗಳಲ್ಲಿ, ತೊಡಗುವ ನಾರ್ಮ್ಯಾನ್‌ನು ಈ ಎಲ್ಲ ವಾಹಿನಿಗಳ ಮೂಲಕ ತಾನು ಸಂಗ್ರಹಿಸಿದ ಪ್ರಜ್ಞೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ನಿರೂಪಣೆಯಲ್ಲಿ ಈ ಕಾದಂಬರಿಯ ಇನ್ನೊಂದು ವೈಶಿಷ್ಟ್ಯವಿದೆ.

ಸಾಧನಾಪಥದುದ್ದಕ್ಕೂ ನಾರ್ಮ್ಯಾನ್‌ನಿಗೆದುರಾಗುವ ಪ್ರಶ್ನೆಗಳೂ ಅವನನ್ನು ಪಕ್ವಗೊಳಿಸುತ್ತವೆ.

‘ನಾನು ಯಾವುದಕ್ಕಾಗಿ ಬದುಕುತ್ತೇನೆ?’ (ಪು. ೧೫)

‘ನಾನು ಯಾರು? ಎಲ್ಲಿಂದ ಬಂದೆ? ಏಕೆ ಬಂದೆ? (ಪು. ೮೩)

‘ನಾನು ಹಿಡಿದ ದಾರಿ ಸರಿಯೇ? ಇದೆಲ್ಲ ನನ್ನಿಂದ ಆಯಿತೆ?’ (ಪು ೬೩)

ಎನ್ನುವಂಥ, ವ್ಯಕ್ತಿಯ ಅಸ್ತಿತ್ವವನ್ನೇ ಅಲುಗಾಡಿಸುವಂಥ ಹಲವು ಸವಾಲುಗಳು ಅವನನ್ನು ಕಾಡುತ್ತಲೇ ಇರುತ್ತವೆ. ಕೆಲವೊಮ್ಮೆ,

‘ನನ್ನ ಬಾಳೆಲ್ಲ ಒಂದು ಕನಸಾಗಿದೆ. ಅದು ನನ್ನ ಕನಸಲ್ಲ. ಯಾರೋ ನನ್ನ ಮೂಲಕವಾಗಿ ತಮ್ಮ ಕನಸುಗಳನ್ನು ಕಾಣುತ್ತಿದ್ದಾರೆ’ (ಪು. ೧೨೩) ಎನ್ನುವ, ತನಗೆ ತಾನೇ ಪರಕೀಯನಾಗುವ ವಿಹ್ವಲತೆಯನ್ನು ಅವನಲ್ಲಿ ಕಾಣಬಹುದು. ಈ ವಿವಂಚನೆಯಲ್ಲಿ, ವಿವಶತೆಯಲ್ಲಿ, ಶೂನ್ಯದಲ್ಲಿ ಸಂಚರಿಸುತ್ತಲೇ ಅವನು ‘ತನ್ನತನ’ವನ್ನು ಗುರುತಿಸಿಕೊಳ್ಳುವ ರೀತಿಯತ್ತ ಕಾದಂಬರಿಯ ಗಮನವು ಕೇಂದ್ರೀಕೃತವಾಗುತ್ತದೆ.

ಈ ಕೃತಿಯುದ್ದಕ್ಕೂ, ನಾರ್ಮ್ಯಾನ್‌ನ ಮೇಲೆ ಅವ್ಯಾಹತವಾದ ದಾಳಿಗಳನ್ನು ನಡೆಸಿದ ಬೇರೆ ಬೆರೆ ನೋವುಗಳು ಇಲ್ಲಿ ಉಲ್ಲೇಖಾರ್ಹವಾಗುತ್ತವೆ. ‘ಒಮ್ಮೆ ಅವನು ಅನುಭವಿಸ ಬೇಕಾಗಿ ಬಂದ ಶಾರೀರಿಕ ಸಂಕಟವು, ಈ ಬಗೆಯ ಚಿತ್ರಹಿಂಸೆಯು ನನಗೆ ಬೇಡ. ನನಗೆ ಬದುಕುವ ಆಶೆಯಿದೆ. ಬೆಳೆಯುವ, ಅರಳುವ, ನಲಿಯುವ ಆಶೆಯಿದೆ. ಆದರೆ, ನನಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ….. ನನ್ನನ್ನು ಮುಗಿಸಿ ಬಿಡು. ಈ ಯಾತನೆಯು ಕೊನೆಯಾಗಲಿ’ (ಪು. ೮-೯) ಎನ್ನುತ್ತಾ, ಅದರ ವಾಚ್ಯ ಅಭಿವ್ಯಕ್ತಿಯಾಗುತ್ತದೆ.

ಅವನು ಮರೆಯಬೇಕೆಂದುಕೊಂಡ ಭೂತದಿಂದ ಪೂರ್ಣ ಬಿಡುಗಡೆಯು ಅವನಿಗೆ ಸಿಗುವುದೇ ಇಲ್ಲ.

“ನನ್ನ ಅಂತಃಕರಣದಲ್ಲಿ ಕ್ಯಾಲಿಫೋರ್ನಿಯಾ ಗಟ್ಟಿಯಾಗಿ, ತಳವೂರಿ ನಿಂತಿದೆಯಲ್ಲ” (ಪು. ೨೯) ಎನ್ನುವ ಅವನ ವಿಷಾದ, ಆ ಚಿತ್ರವನ್ನು ಕಿತ್ತು ಎಸೆಯಲು ಅವನು ಮಾಡುವ ವ್ಯರ್ಥ ಪ್ರಯತ್ನಗಳೆಲ್ಲ ಇದರ ವ್ಯಕ್ತರೂಪಗಳಾಗುತ್ತವೆ. ಸತ್ಯದ ವಿವಿಧ ಮುಖಗಳನ್ನು ಕಂಡಾಗಲೆಲ್ಲ ಅವನ ನೋವೂ ಆಳವಾಗುತ್ತದೆ. ಸ್ವಂತವೂ ಸೇರಿದಂತೆ, ಮನುಷ್ಯನೊಳಗಿರುವ ಅಮಾನವೀಯ ಕೊಠಡಿಗಳನ್ನು ಗಮನಿಸಿದಷ್ಟೂ ಅದು ತೀವ್ರವಾಗುತ್ತದೆ. ಹಾಗಾಗಿಯೇ,

“ಯಾಕೆ, ನಾರ್ಮ್ಯಾನ್, ನಿನಗೆ ತಾಯ್ನಾಡನ್ನು ಬಿಟ್ಟು ಭಾರತಕ್ಕೆ ಬರುವ ಮನಸ್ಸಾಯಿತು? ಬರುವಾಗ ತಂದೆ-ತಾಯಿ, ನಾಡು-ನುಡಿ ಹೀಗೆ ಪ್ರೇಮದ ಎಲ್ಲ ಬಂಧನಗಳನ್ನು ನಿರ್ದಯವಾಗಿ ಕತ್ತರಿಸಲು ಸಾಧ್ಯವಾಯಿತು?” (ಪು. ೫೫) ಎನ್ನುವ ಜಲೋಟಾರ ಪ್ರಶ್ನೆಯಿಂದ ಅವನು ಭಾವಪರವಶನಾಗುತ್ತಾನೆ. ಅದಕ್ಕೆ ಉತ್ತರಿಸುತ್ತಾ, “ನನಗೇ ಅರ್ಥವಾಗಲಿಲ್ಲ. ನಾನು ಇಲ್ಲಿಗೆ ಏಕೆ ಬಂದೆ? ಬಾಯಿಯಿಂದ ಹೇಳಲಾಗದ ತಪ್ತ ಅನುಭವವನ್ನು ಮರೆಯುವ ಇಚ್ಛೆಯಾಯಿತು. ಮನೆ ಮುರಿದು ಹೋಯಿತು. ನನ್ನ ತಂದೆ…. ನನಗೆ ಹೇಳಲೂ ನಾಚಿಕೆಯಾಗುತ್ತದೆ. ಆದರೂ ಹೇಳುತ್ತೇನೆ. ಅವನು ಕಾಮವನ್ನು ದೇವಕಾಮವನ್ನಾಗಿ ಮಾಡುವ ಕಾಮದಿಂದ ಅನಂತವಾದ ಆನಂದವನ್ನು ಅನುಭವಿಸುವ ತಾಂತ್ರಿಕ ಕಾಮಮಾರ್ಗ ವೊಂದಕ್ಕಾಗಿ….. ನನ್ನ ತಾಯಿಯನ್ನು ಬಿಟ್ಟು, ಒಂದು ಚೆಲ್ಲು ಹೆಣ್ಣನ್ನು ಹುಡುಕಿಕೊಂಡು ಹೋದ. ನನ್ನ ತಾಯಿಯೂ ಜುಗುಪ್ಸೆ ಪಟ್ಟು ಮನೆ ಬಿಟ್ಟು ಹೋದಳು. ಅವಳು ಸಾರಿಕಾ ಧರ್ಮದವರ ಅಂತಾರಾಷ್ಟ್ರೀಯ ‘ಬುದ್ಧ ಧ್ಯಾನಕೇಂದ್ರ’ವನ್ನು ಸೇರಿಕೊಂಡಳು…” (ಪು. ೫೬) ಹೀಗೆ ಸೃಷ್ಟಿಯಾದ ನಿರ್ವಾತವನ್ನು ತುಂಬಿಸುವ ಪ್ರಯತ್ನಗಳಾಗಿ ಅವನ ಅನ್ವೇಷಣೆಗಳು, ಯಾತ್ರೆಗಳು, ಸಾಧನೆಗಳೆಲ್ಲವೂ ನಡೆದಿವೆಯೆನ್ನುವುದನ್ನು ಅವನಿಲ್ಲಿ ಪ್ರಾಮಾಣಿಕವಾಗಿ ಬಯಲು ಮಾಡುತ್ತಾನೆ.

ಹೀಗೆ, ಒಮ್ಮೆ ಬಯಲಿನ ಲೋಕದಲ್ಲಿ ಪ್ರವೃತ್ತನಾಗುತ್ತ, ಒಳಮನೆಯ ರಹಸ್ಯಗಳಿಗೇ, ಮುಕ್ತವಾದ ಹೊರ ಸಂಚಾರದ ಅವಕಾಶಗಳನ್ನವನು ಕಲ್ಪಿಸಿಕೊಡುತ್ತಾನೆ. ಮತ್ತೊಮ್ಮೆ, ಬಯಲಿನುದ್ದದ ಪರ್ಯಟನಗಳಲ್ಲಿ ತಾನು ಸಂಗ್ರಹಿಸಿದ ಅನುಭವಗಳನ್ನೆಲ್ಲ, ಬಸಿರಿನೊಳ ಗೊಯ್ದು ಆ ಏಕಾಂತದಲ್ಲಿ, ಅವುಗಳ ಒಡನಾಟದಿಂದ ಪ್ರಾಪ್ತವಾದ ತಿಳಿವನ್ನು ಗ್ರಹಿಸುತ್ತಾನೆ.

ಒಟ್ಟಿನಲ್ಲಿ, ‘ಬಯಲು-ಬಸಿರು’ ಒಂದು ಪ್ರಬುದ್ಧವಾದ, ವೈಚಾರಿಕ ಸಂಘರ್ಷಗಳಿಗೆ ಚಾಲನೆಯನ್ನು ನೀಡುವ ಕೃತಿಯಾಗಿದೆ. ಕೆಲವೊಮ್ಮೆ, ಕಲಾವಂತಿಕೆಯು ಮಸುಕಾ ಗುತ್ತದೇನೋ ಎನ್ನುವ ಆತಂಕಕ್ಕೆ ಎಡೆ ಕೊಡುವಷ್ಟು ಪ್ರಖರವಾದ ವಿಚಾರಗಳು ಇಲ್ಲಿ ಸಾಂದ್ರಗೊಳ್ಳುತ್ತವೆ.

ಸಂಕೀರ್ಣವಾದ, ‘ಸಂವಾದ-ಕಥನ’ದ ಒಂದು ಒಳ್ಳೆಯ ಮಾದರಿಯಾಗಿ ಈ ಕೃತಿಯು ಪ್ರಸ್ತುತವೆನಿಸುತ್ತದೆ. ‘ಸಾರ್ಥ’ (ಎಸ್.ಎಲ್. ಭೈರಪ್ಪ) ಅಥವಾ ‘ಸಿದ್ಧಾರ್ಥ’ (ಹರ್ಮನ್ ಹೆಸ್) ಮುಂತಾದ ಕಾದಂಬರಿಗಳು ಪ್ರತ್ಯಪ್ರತ್ಯೇಕ ನೆಲೆಗಳಲ್ಲಿ ನಿರ್ವಹಿಸಿದ ಶೋಧಕ್ರಮಗಳ ನಿರೂಪಣೆಯೇ ಇಲ್ಲಿಯೂ ನಡೆಯುತ್ತದೆ. ಇದರಲ್ಲಿ ಅಭಿವ್ಯಕ್ತಿಗಳನ್ನು ಪಡೆಯುವ ವ್ಯಕ್ತಿಯು ತನ್ನೊಳಗೇ ನಡೆಸುವ ಸಂವಾದಗಳಾಗಲಿ, ಭಿನ್ನ ಸಂಸ್ಕೃತಿಗಳೆರಡು ಪರಸ್ಪರ ಸಂಧಿಸುವ ಅವಕಾಶಗಳಾಗಲಿ, ಐಹಿಕ – ಆಧ್ಯಾತ್ಮಿಕ ಆಸಕ್ತಿಗಳೆರಡರ ಸಂಭಾವ್ಯತೆಗಳಾಗಲಿ, ಬೇರೆ ಬೇರೆ ಮನೋವೃತ್ತಿಗಳ ಅನುಸಂಧಾನಗಳಾಗಲಿ ವಿಶೇಷವಾದ ಅಧ್ಯಯನಗಳನ್ನು ನಿರೀಕ್ಷಿಸುತ್ತವೆ. ಆ ನಿಟ್ಟಿನ ಹಲವು ಉಪಕ್ರಮಗಳಿಗೆ ಈ ಕೃತಿರಂಗವು ಸಿದ್ಧಗೊಂಡು ಕಾದಿದೆ.