ಸೃಷ್ಟಿಶೀಲವಾದ ಚಿತ್ತದ ಧ್ಯಾನಸ್ಥವಾದ, ನಿರ್ವಿಕಲ್ಪವಾದ ಮುಹೂರ್ತಗಳಲ್ಲಿ ಕಲಾಕೃತಿಯೊಂದು ಮೂರ್ತ ಜಗತ್ತಿನೊಳಗೆ ಪದಾರ್ಪಣ ಮಾಡುತ್ತದೆ. ಅಭಿವ್ಯಕ್ತಿ ಕಾತರ ವಾದ ಭಾವಗುಚ್ಛಗಳು ಅಕ್ಷರ ಶರೀರಧಾರಣೆಯ ಸೂಕ್ಷ್ಮಾತಿ ಸೂಕ್ಷ್ಮವಾದ ಸಂಸ್ಕಾರಗಳನ್ನು ಸ್ವೀಕರಿಸುತ್ತ, ಸಾಹಿತ್ಯ ಸ್ವರೂಪವನ್ನು ಪಡೆಯುವ ಪ್ರಕ್ರಿಯೆಯೂ ಇಂಥ ಸಮಾಧಿಸ್ಥಿತಿ ಜನ್ಯವಾದುದೇ ಆಗಿದೆ. ಈ ಸಾಹಿತ್ಯ ನಿರ್ಮಿತಿಯಲ್ಲಿ, ವೈಯಕ್ತಿಕ ಪ್ರತಿಭೆಯಷ್ಟೇ ಸಮುದಾಯವೊಂದರ ಸಾಂಸ್ಕೃತಿಕ ಸಂಪತ್ತಿಗೂ ಮಹತ್ವವಿದೆ. ಇವುಗಳ ಸಾಮರಸ್ಯದ ಸಂಯೋಜನೆಗಳಿಂದ ಅಸ್ತಿತ್ವಕ್ಕೆ ಬರುವ ಸಾಹಿತ್ಯವು, ಎಲ್ಲ ಎಲ್ಲೆಕಟ್ಟುಗಳನ್ನು ಮೀರಿ, ನಿರಂಕುಶತ್ವವನ್ನು ಪ್ರದರ್ಶಿಸುತ್ತದೆ. ವಿಶ್ವಸಾಹಿತ್ಯದ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ಮಹಾಕಾವ್ಯ ಪ್ರಕಾರವಂತೂ ಇದರ ಎಲ್ಲ ಗುಣಲಕ್ಷಣಗಳಿಗೆ ಆಶ್ರಯ ಸ್ಥಾನವಾಗಿದೆ.

ಭಾರತೀಯ ಸಾಹಿತ್ಯದಲ್ಲಿ ಮಹಾಕಾವ್ಯ ಪರಂಪರೆಯು ತೀರಾ ವಿಶಿಷ್ಟವಾದ ಗತಿ-ಗಮನಗಳನ್ನು ಹೊಂದಿದೆ. ಅಶ್ವಘೋಷನ ‘ಬುದ್ಧಚರಿತೆ’ಯಿಂದ ಮೊದಲಾದ ಸಂಸ್ಕೃತ ಮಹಾಕಾವ್ಯ ವಾಹಿನಿಯಲ್ಲಿಯೂ ಅದೇ ಮಾದರಿಯ ವೈವಿಧ್ಯ, ವೈಪುಲ್ಯ  ಹಾಗೂ ವಿಸ್ತೀರ್ಣಗಳಿವೆ. ಇದನ್ನೇ ಸ್ಫೂರ್ತಿ ಮೂಲವಾಗಿ ಪರಿಗ್ರಹಿಸಿದ ಕನ್ನಡ ಮಹಾಕಾವ್ಯಗಳೂ ಸಾಹಿತ್ಯ ನಕ್ಷೆಯಲ್ಲಿ ಅನನ್ಯವಾದ ಸ್ಥಾನವನ್ನು ಗಳಿಸಿಕೊಂಡಿವೆ.

ಆಧುನಿಕ ಕನ್ನಡ ಸಾಹಿತ್ಯಿಕ ಸಂದರ್ಭವಂತೂ ಅವಿರತವಾಗಿ ಅನ್ಯಾನ್ಯ ಒತ್ತಡ, ಪ್ರಭಾವ ಹಾಗೂ ನಿಯಂತ್ರಣಗಳಿಗೆ ಒಳಗಾಗುತ್ತಲೇ ಅಸ್ಮಿತೆಯ ಸ್ಥಾಪನೆಯತ್ತ ಒಲವು ತೋರಿತ್ತು. ಹಾಗಾಗಿಯೇ ಅಲ್ಲಿ ಒಂದು ಬಗೆಯ ಸ್ಫೋಟಕ ಪ್ರವೃತ್ತಿಯು ಎದ್ದು ಕಾಣುವಂತಾಯಿತು. ನಾನಾ ಕಾರಣಗಳಿಂದಾಗಿ ಈ ಸಾಹಿತ್ಯ ಸೃಷ್ಟಿ, ಅಧ್ಯಯನ, ಸಮೀಕ್ಷೆ ಹಾಗೂ ವಿಮರ್ಶೆಗಳು ಹೊಸ ಕಸುವನ್ನು ರೂಢಿಸಿಕೊಳ್ಳತೊಡಗಿದ್ದು, ಈಗ ಇತಿಹಾಸವಾಗಿದೆ. ಇವುಗಳನ್ನು ಅನುಸರಿಸಿದ ಶ್ರೇಷ್ಠತೆಯ ಮಾನದಂಡಗಳೂ ನಿರಂತರವಾದ ರೂಪಾಂತರಗಳನ್ನು ಹೊಂದತೊಡಗಿದುವು.

ಈ ಹಿನ್ನೆಲೆಯಲ್ಲಿ ಆಧುನಿಕ ಕನ್ನಡ ಮಹಾಕಾವ್ಯಗಳ ಪ್ರತಿನಿಧಿಯಾಗಿ ಶ್ರೀ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಸದೃಢ ಪಾರ್ಶ್ವಗಳನ್ನು ಅನ್ವೇಷಿಸುವುದು ಸಾಮಯಿಕವೆನಿಸುತ್ತದೆ. ಇಲ್ಲಿ, ಇಡಿಯ ಕಾವ್ಯ ಶರೀರವನ್ನು ಒಂದು ಸಮಗ್ರಶಿಲ್ಪವಾಗಿ ಕಡೆಯುವ ಬಾಧ್ಯತೆಯನ್ನು ಅವರು ನಿರ್ವಹಿಸಿದ್ದಾರೆ. ಅದರ ಬಾಹ್ಯ ಸಂವಿಧಾನ, ಸಾವಯವ ನಿಷ್ಪತ್ತಿ, ಸಾತತ್ಯ, ಆಶಯಗಳ ಸರಳ-ಸಂಕೀರ್ಣ ಸಂತುಲನಗಳೆಲ್ಲವನ್ನೂ ಅವರು ತಮ್ಮ ಕ್ರಿಯಾ ಕಕ್ಷೆಯೊಳಗೆ ಬರಮಾಡಿಕೊಂಡಿದ್ದಾರೆ.

ಮೊದಲ ನೋಟಕ್ಕೇ ಒಟ್ಟಾರೆಯಾದ ರಾಮಾಯಣದ ಮೂಲ ಸಂದೇಶವನ್ನು ಆಧುನಿಕ ಮನಸ್ಸೊಂದು ಹೊಸತಾಗಿ ಗ್ರಹಿಸಿ, ಸಂರಚಿಸಿದ ಕ್ರಮಗಳನ್ನು ಈ ಕೃತಿಯು ಸಂಪಾದಿಸುತ್ತದೆ. ಇಲ್ಲಿ ಧರ್ಮಾಧರ್ಮಗಳ ಬಗೆಗಿನ ರುಚಿ, ಆಕರ್ಷಣೆ, ಬಲಾಬಲ ನಿರ್ಣಯಗಳ ಸೂತ್ರಗಳೊಂದಿಗೆ ಒಬ್ಬ ‘ದೈತ್ಯನೂ ಚೈತ್ಯ ಮಂಚಕ್ಕೆ’ ಏರಬಲ್ಲನೆಂದು ನಿರೂಪಿಸುವ ಉತ್ಕ್ರಮಣವಾದ ಸಿದ್ಧಾಂತವೂ ಇದೆ. ಮನುಷ್ಯನ ಬಾಹ್ಯ ಜಗತ್ತಿನ ಸಂಬಂಧ ಮೀಮಾಂಸೆ, ಸಾಂಸ್ಕೃತಿಕ ಸ್ರೋತಗಳ ಪರಿವಿಡಿಯ ಸಂಗಡವೇ ಅವನೊಳಗಿನ ರಹಸ್ಯಲೋಕದ ವ್ಯವಹಾರ ಗಳ ಪರಿಶೀಲನೆಯೂ ಸೇರಿದೆ.

ತಮ್ಮ ಭಾವ ಚಿಂತನ – ವಿಚಾರ ಚಿಂತನಗಳ, ರಸಾರ್ದ್ರವಾದ ಕಾವ್ಯ ಪರಿಸರದಲ್ಲಿ ಕುವೆಂಪು ಅವರು ಮನುಷ್ಯ ಸ್ವಭಾವಗಳ ಅಗೋಚರ ವೃತ್ತಾಂತಗಳನ್ನು ಚಿತ್ರವತ್ತಾಗಿ ರೇಖಿಸುತ್ತಾ ಹೋಗುತ್ತಾರೆ. ಮಾನುಷ ಪ್ರಜ್ಞೆಯ ಮೇಲೆ ವ್ಯವಸ್ಥಿತವಾದ ದಾಳಿಗಳನ್ನು ನಡೆಸುತ್ತ ಅದರ ಸ್ಥಿಮಿತವನ್ನು ಕದಡುವ ವಿಲಕ್ಷಣ ಪ್ರವೃತ್ತಿಗಳನ್ನು ಅವರು ಸ್ಪರ್ಶಿಸುವ ವಿಧಾನಗಳೂ ಅನನ್ಯವಾದವುಗಳಾಗಿವೆ. ವ್ಯಕ್ತಿಯಲ್ಲಿ ಮೂಲಭೂತವಾಗಿರುವ ಭೀತಿ, ಅದನ್ನು ಅವನು ಎದುರಿಸುವ ಬಗೆ, ಭಯವನ್ನು ನಿವಾರಿಸಿಕೊಳ್ಳುವ, ಗೆಲ್ಲುವ ಅಥವಾ ಅದರ ವಶವರ್ತಿಯಾಗುವ ಅವನ ಪ್ರತಿಕ್ರಿಯೆಗಳನ್ನೆಲ್ಲ ಅವರು ತಮ್ಮ ಮಾಧ್ಯಮಗಳ ಮೂಲಕ ವಿಶ್ಲೇಷಿಸುತ್ತಾ ಹೋಗುತ್ತಾರೆ. ಈ ನೆಲೆಯ ಕೆಲವು ಮಾದರಿಗಳನ್ನು ಪರಿಚಯ ಮಾಡಿ ಕೊಳ್ಳುವುದು ಪ್ರಸ್ತುತ ಲೇಖನದ ಪ್ರಮುಖ ಲಕ್ಷಣವಾಗಿದೆ.

ಇವುಗಳಲ್ಲಿ ಮೊದಲನೆಯದು, ಜೀವ ಸಂಕುಲಗಳಿಗೆಲ್ಲ ಸಮಾನವಾಗಿರುವ, ಅನ್ಯಾಕ್ರಮಣದ ಹಿಡಿತದಿಂದ ಹುಟ್ಟುವ ಪ್ರಾಣಭೀತಿಯಾಗಿದೆ. ಸೀತಾಪಹರಣವಾದ ಬಳಿಕ, ಪಂಚವಟಿಯನ್ನು ಬಿಟ್ಟು, ನೈಋತ್ಯ ಮುಖವಾಗಿ ರಾಮ-ಲಕ್ಷ್ಮಣರು ನಡೆಯುತ್ತಿದ್ದ ಸಂದರ್ಭ ದಲ್ಲಿ, ಇಂಥ ಒಂದು ಪ್ರಸಂಗವನ್ನು ಕವಿಯು ಸೃಷ್ಟಿಸುತ್ತಾರೆ. ಕಬಂಧನ ಭದ್ರಬಾಹುಗಳ ರಕ್ಕಸಾಲಿಂಗನಕ್ಕೆ ಸಿಕ್ಕುವುದಕ್ಕೆ ಮೊದಲೇ ‘ಭೀತಿಭೂತ’ವು ರಾಮನ ಸಮಸ್ತ ಚೈತನ್ಯನವನ್ನೂ ಆಪೋಶನಗೊಂಡ ರೀತಿಯು ಇಲ್ಲಿ ವಿಸ್ತೃತವಾಗಿ ವರ್ಣಿಸಲ್ಪಟ್ಟಿದೆ.

“…….ರಾಮಂಗಾದುದನುಭವಂ
ಮಾನಸಿಕದೊಂದದ್ಭುತಂ;
…………………….ಭೀತಿ,
ಆಕಾರವಾಧಾರವೊಂದನರಿಯದ ಭೀತಿ ತಾಂ
ಛಾಯೆ ಛಾಯೆಗಳಾಗಿ ರಾಹುವೋಲಲೆದತ್ತು
(ಶ್ರೀ ರಾಮಾಯಣದರ್ಶನಂ, ಪು. ೨೭೮)

ಈ ವಿಕಾರಾಕೃತಿಯ ಕಬಂಧನನ್ನು ಕಂಡೇ ಧೈರ್ಯವನ್ನು ಉಡುಗಿಸಿಕೊಂಡ ರಾಮನ ಸ್ತಬ್ಧಚಿತ್ರಕ್ಕೆ ಶಬ್ದರೂಪವನ್ನು ನೀಡುತ್ತಾ ಕುವೆಂಪು ಅವರು,

“……..ತನ್ನಾ ನಿರಾಶೆಯೆ ತನಗೆ
ಕಾಣಿಸಿತೆನಲ್ಕಾ ಕಬಂಧನಂ ಕಂಡೊಡನೆ
ನಡುಗಿದುದು ತನು ತಪನಕುಲಗೆ, ಹದುಗಿತು ಬಲ್ಮೆ
ಹಿಮ್ಮೆಟ್ಟಿದುದು ಹೆಮ್ಮೆ; ಹೆಡೆಮುಚ್ಚಿ ಸೆಡೆತುದಯ್
ಪೌರುಷದ ಫಣಿ. ಪಲಾಯನದ ತೇಜಿಯನೇರಲ್ಕೆ
ತವಕಿಸಿತು ಜೀವಮಾ ಜಾನಕೀ ಜೀವಿತೇಶ್ವರಗೆ!
ಓಡಲೆಳಸಿದನಾದಡೇಂ? ಕಾಲ್ ಕೀಳಲಾರದೆ
ಕೆಡೆದುರುಳ್ದನು ಬಡಿದು ಭಯಮೂರ್ಛೆ…..”
(ಅದೇ. ಪು. ೨೭೮-೯)

ಎನ್ನುತ್ತಾರೆ.

ಲಕ್ಷ್ಮಣನು ಕಬಂಧನನ್ನು ಸಂಹರಿಸುವುದರ ಮೂಲಕ ರಾಮನನ್ನು ಮರಳಿ ವಾಸ್ತವಕ್ಕೆ ಕರೆತರುತ್ತಾನೆ. ಆಗ ರಾಮನಿಗೆ ಹತಾಶೆಯು ಹತವಾದ ಸಂಭ್ರಮ; ಕಿರಣ ತೋರಿದ ಆಶೆಯನ್ನು ಮುಷ್ಟಿಯಲ್ಲಿ ಹಿಡಿದಿಡುವ ಔತ್ಸುಕ್ಯ. ‘ಮೂಡಿದಾಸೆಗಳವಳಿ ಜೋಡಿ’ಗಳಾದ ರಾಮ-ಲಕ್ಷ್ಮಣರಿಗೆ ಭವಿಷ್ಯವನ್ನು ಬಗೆದು ನೋಡುವ ಉತ್ಸಾಹ. ಈ ಪರಿವರ್ತನೆಯ ಹಿಂದಿನ ಮಾನಸಿಕ ವ್ಯಾಪಾರಗಳು ತುಂಬ ಕುತೂಹಲಕರವೆನಿಸುತ್ತವೆ.

ರಾಮನನ್ನು ಆವರಿಸಿದ ಹೆದರಿಕೆಯ ಮೂಲ ಯಾವುದೆಂಬ ಪ್ರಶ್ನೆಯು ಇಲ್ಲಿ ಪ್ರಸ್ತುತವೆನಿ ಸುತ್ತದೆ. ಅದು, ಜಾನಕಿಯ ವಿರಹದಿಂದ ಶಿಥಿಲವಾದ ಆತ್ಮವಿಶ್ವಾಸವೇ? ಯಾವುದೋ ಅವ್ಯಕ್ತ ಶಕ್ತಿಯು ತನ್ನ ಸ್ಥೈರ್ಯಕ್ಕೆ ಸವಾಲಾದ ಕ್ರಮದಿಂದ ಪ್ರೇರಿತವಾದ ನಿರ್ವೇದವೇ? ಮುಂದುಗಾಣದೆ ಕಂಗಾಲಾದ ಸ್ಥಿತಿಯಲ್ಲಿ, ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸ ಲಾರದ ದೌರ್ಬಲ್ಯವೇ? ಇಲ್ಲಿ ಇನ್ನೊಂದು ಸೂಕ್ಷ್ಮವನ್ನೂ ಗಮನಿಸಬೇಕು. ‘ತನ್ನ ಸಂಕಟ ಸಮಯದಲ್ಲಿ ಆಸರೆಯಾಗಬಲ್ಲವನೊಬ್ಬನಿದ್ದಾನೆ’ ಎಂಬ ಅರಿವು ಕಣ್ತೆರೆದೊಡನೆಯೆ, ರಾಮನ ಮನೋವೃತ್ತಿಯಲ್ಲಿ ನಾಟಕೀಯವಾದ ಬದಲಾವಣೆಯಾಗುವುದಕ್ಕೆ ಇಲ್ಲಿ ಅವಧಾರಣೆಯಿದೆ. ಇದೇ ಭಾವವನ್ನು,

……….ಅದ್ರಿಯಾದೊಡಮೊರ್ಮೆ
ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ
…………..ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್
ಸುಸ್ಥಿರಂ………………………………..
(ಅದೇ. ಪು. ೨೮೦)

ಎನ್ನುವ ರಾಮನ ಮಾತುಗಳು ವ್ಯಕ್ತಪಡಿಸುತ್ತವೆ. ಭೌತಿಕ ಸುಭದ್ರತೆ ಮತ್ತು ಭಾವನಾತ್ಮಕ ಸ್ಥಿರತೆಗಳು ಪರಸ್ಪರ ಪೂರಕವಾಗಬೇಕಾದ ಅಗತ್ಯವು ಇಲ್ಲಿ ಪ್ರತಿಪಾದಿತವಾಗಿದೆ. ಇದು ಎಲ್ಲ ಕಾಲ – ಪ್ರದೇಶಗಳ ಮನುಷ್ಯರಿಗೂ ಅನ್ವಯವಾಗುವ ವಿಚಾರವಾಗಿದೆ.

ಕಲ್ಪನೆಯಲ್ಲಿರುವ ಅಪೇಕ್ಷಿತ ಚಿತ್ರಕ್ಕೂ, ನಿಜವಾದ ವಸ್ತುಸ್ಥಿತಿಗೂ ಹೊಂದಾಣಿಕೆ ಯಿಲ್ಲದಿದ್ದಾಗ ಮನಸ್ಸು ವಿವಶವಾಗುತ್ತದೆ. ಸಾಮಾನ್ಯವಾಗಿರಬೇಕಾದ ಸಂದರ್ಭಗಳಲ್ಲಿ ಕಂಡುಬರುವ ಅಸಾಮಾನ್ಯ ನಡೆವಳಿಕೆಗಳೂ ಭಯಕ್ಕೆ ಕಾರಣಗಳಾಗುತ್ತವೆ. ಪುಟ್ಟ ರಾಮನ ಬಾಲಲೀಲೆಗಳಲ್ಲಿ ವೈಮನಸ್ಸುಗಳನ್ನು ತೋಯಿಸಿಕೊಳ್ಳುವ ಕೌಸಲ್ಯೆಯು ಈ ವೈರುಧ್ಯಕ್ಕೆ ನಿದರ್ಶನವಾಗುತ್ತಾಳೆ.

“ಮಗನ ಕಂಗಳ ನೋಡಿ
ಬಾನನೀಕ್ಷಿಸಿದಂತೆ, ಮಗನ ತೊದಲಂ ಕೇಳಿ
ಕಡಲನಾಲಿಸಿದಂತೆ ಬೆಚ್ಚುವಳ್ ತಾಯ್ ಸುಯ್ದು
ಒರ್ಮೆ ಈ ಹೂಹಗುರ ಶಿಶುವಿದ್ದಕಿದ್ದಂತೆ
ಗಿರಿಭಾರಮಾಗಿ ಬರೆ, ನೆಗಹಲಾರದೆ ತಾಯಿ
ತೇಂಕಿದಳು, ಕಾತರಿಸಿ ಮಗನಭ್ಯುದಯ ಶಂಕೆಯಿಂ
ಮತ್ತೊರ್ಮೆ ಪಚ್ಚೆದೊಟ್ಟಿಲ್ ಬಿಂಬದಲಿ ತನ್ನ
ಮುದ್ದುಕಂದಗೆ ಬದಲ್ ಕಾಣಿಸೆ ಮಹಾಮೂರ್ತಿ
ಕೂಗಿಕೊಂಡಳ್…..”
(ಅದೇ. ಪುಟ ೨೯೩೦)

ಅಸಹಾಯಕವಾಗಿ, ದುರ್ಬಲವಾಗಿ, ಪರಾವಲಂಬಿಯಾಗಿರಬೇಕಾದ ಯಾವುದೇ ಆದರೂ ಮಹತ್ತರವಾಗಿ, ಸಮರ್ಥವಾಗಿ, ಸ್ವತಂತ್ರವಾಗಿ ನಿಲ್ಲುವುದನ್ನು ಮನಸ್ಸು ಸಹಿಸದೆ, ವಿರೋಧಿಸುತ್ತದೆ. ಈ ಮಥನದಿಂದ ಹುಟ್ಟುವ ಭೀತಿಯ ಹಿಂದೆ, ಅಶುಭದ ಶಂಕೆ, ಅಸುರಕ್ಷಿತ ಅನಿಸಿಕೆ, ಕೇಡಿನ ಛಾಯೆಗಳೆಲ್ಲವೂ ಕಾರ್ಯತತ್ಪರವಾಗುತ್ತವೆನ್ನುವ ಸಂಕೇತವು ಇಲ್ಲಿದೆ. ಅಂಥ ನಿರಾಧಾರವಾದ ಹೆದರಿಕೆಯು ಸತ್ಯದ ದರ್ಶನವಾದೊಡನೆಯೇ ನಿರ್ನಾಮ ವಾಗುತ್ತದೆ.

“ಬಿಡು ಮಗಳೆ ಭೀತಿಯಂ – ನಿನ್ನ ಮಗನಪ್ರಾಕೃತಂ” (ಅದೇ. ಪು. ೩೦) ಎನ್ನುವ ವಸಿಷ್ಠರ ಅಭಯವಚನಗಳಿಂದ ಸಾಂತ್ವನವನ್ನು ಪಡೆದ ಕೌಸಲ್ಯೆಯ ಹಾಗೆ. ಮನಸ್ಸು ಸ್ವಸ್ಥವಾಗುತ್ತದೆ.

ಯಾವ ತಾರ್ಕಿಕ ಸರಣಿಗೂ ಸಮ್ಮತಿಸದ, ಇಂದ್ರಿಯಾತೀತವಾದ ಅನುಭವಗಳೂ, ಭವಿಷ್ಯದ ದುರಂತದ ಮುನ್ಸೂಚನೆಗಳನ್ನು ನೀಡುವ ದುಶ್ಶಕುನಗಳೂ ಭಯಾವಹವಾಗುವ ಅನೇಕ ನಿದರ್ಶನಗಳು ‘ಶ್ರೀರಾಮಾಯಣದರ್ಶನಂ’ ಕೃತಿಯಲ್ಲಿ ದೊರೆಯುತ್ತವೆ. ಇವುಗಳು ಭೂತಕಾಲದ, ವ್ಯಕ್ತಿಯ ತಿಳಿವಿಗೆ ಬಂದಿರದ ಘಟನೆಗಳ ಸಂಕೇತಗಳಾಗಿ, ವರ್ತಮಾನದಲ್ಲಿ ಸಮಾನಾಂತರವಾಗಿ ನಡೆಯುತ್ತಿರುವ ಸಂಭವಗಳ ಸಾಕ್ಷಿಗಳಾಗಿ, ಮುಂದಿನ ದಿನಗಳಲ್ಲಿ ಬರಲಿರುವ ಆಘಾತಗಳ ಪೂರ್ವ ಸೂಚನೆಗಳಾಗಿ ಬೇರೆ ಬೇರೆ ಅರ್ಥಗಳನ್ನು ಸಂವಹಿಸುತ್ತವೆ.

ದೂರದ ಕೇಕಯಪುರದಲ್ಲಿ, “ಲಲಿತಸುಖದ ನಿದ್ರಾರತಿಯ ತೋಳ್ತೊಡೆಯ ತಳ್ಕೆಯೊಳ್ ಬೆಚ್ಚನೆಯ ವಕ್ಷದೊಳ ಪಟ್ಟಿರ್ದ” ಭರತನಿಗೆ ದಶರಥನ ಮರಣದ ವಾರ್ತೆಯನ್ನು ತಲುಪಿಸುವ ಕೆಲಸವನ್ನು ಒಂದು ದುಃಸ್ವಪ್ನವೇ ಮಾಡುತ್ತದೆ. ಈ ‘ರಕ್ಕಸಗನಸ’ನ್ನೂ ಅದರ ಪರಿಣಾಮಗಳನ್ನೂ ತೀವ್ರವಾಗಿ, ಸಾಕ್ಷಾತ್ತಾಗಿ ಅನುಭವಿಸಿದ ಭರತನ ಸ್ಥಿತಿಯನ್ನು ಕವಿಯು ಹೀಗೆ ಬಣ್ಣಿಸುತ್ತಾರೆ :

“……ಕಂಪಿಸಿದೆ ತನು,
………ಜಿಹ್ವೆ ತೊದಲುತಿದೆ. ಬೆಮರುಕ್ಕುತಿದೆ. ಕದಡಿದೋಲಂತೆ
ಪೂರ್ಣಿಸಿದೆ ಬುದ್ದಿ, ಕಳವಳಕಾತ್ಮ ಕುದಿಯುತಿದೆ”.
(ಅದೇ. ಪು. ೧೧೫)

ಈ ಸ್ವಪ್ನದ ಕಾರಣವಾಗಿ, ಭರತನಿಗೂ, ಅವನಿಂದ ಆ ವಿವರಗಳನ್ನು ಕೇಳಿ, ತಿಳಿದ ಶತ್ರುಘ್ನರಿಗೂ ಆ ಇರುಳೆಂಬುದು ‘ಸಂಕಟಾಶಂಕೆಗಳ ಸೂಜಿಮೊನೆ”ಯ ಮೇಲೆಯೇ ಕಳೆದಿತ್ತು. ಇದು ಕನಸು ಕಾಣಿಸಿದ ಭೀತಿಯ ಬಗೆಗೊಂದು ಉದಾಹರಣೆಯಾಗಿದೆ.

ನಿದ್ರಾವಸ್ಥೆಯಲ್ಲಿ ಜಾಗೃತವಾಗುವ ಅಂತಸ್ಸಾಕ್ಷಿಯಾಗಿಯೂ ಈ ಕನಸುಗಳು ಪ್ರವರ್ತಿ ಸುತ್ತವೆ. ನೈತಿಕ ಭಯವನ್ನು ಪ್ರೇರೇಪಿಸುವುದರ ಮೂಲಕ ಋತಪ್ರಜ್ಞೆಯನ್ನು ಎಚ್ಚರಿಸುವ ಕೈಂಕರ್ಯವನ್ನು ಇವು ಸಲ್ಲಿಸುವ ಹಲವು ನಿದರ್ಶನಗಳು ಈ ಕೃತಿಯಲ್ಲಿ ದೊರೆಯುತ್ತವೆ. ರಾವಣನಂಥ ವ್ಯಕ್ತಿಗಳ ಸಂದರ್ಭಗಳಲ್ಲಿ ಇವು ಹುಟ್ಟಿಸುವ ಭೀತಿಯು ತಾತ್ಕಾಲಿಕವಾಗು ವುದರಲ್ಲಿ ಅವರ ದುರಂತಗಳ ಕರುಣ ವೃತ್ತಾಂತಗಳಿವೆ.

ಉದಾಹರಣೆಗೆ, ವಾನರ-ದಾನವರ ಮಧ್ಯೆ ಯುದ್ಧವು ನಡೆಯುತ್ತಿದ್ದ ಸಂದರ್ಭದಲ್ಲಿ, ರಾವಣನು ಕಂಡ ಕನಸೊಂದನ್ನು ಇಲ್ಲಿ ಪ್ರಸ್ತಾಪಿಸಬಹುದು. ಆ ಅನುಭವಗಳನ್ನು ಮಂಡೋದರಿಯೊಂದಿಗೆ ಹಂಚಿಕೊಳ್ಳುತ್ತಾ ಅವನು,

“ಕಳೆದಿರುಳ್
ಕನಸಾದುದೊಂದೆನಗೆ ರಾಣಿ, ಕಂಡೆನದರೊಳ್
ಮರಳಿ ಆ ಬೀಕರ ದೃಶ್ಯಮಂ. ನಿರ್ಭಾಗ್ಯೆ
ವೇದವತಿ ಚಿತೆಯೇರ್ದುದಂ. ಕಣ್ಣ ಮುಂದುರಿದು
ಭಸ್ಮಧವಳಿಮರಾಶಿಯಾದುದಾ ಸುಂದರಿಯ
ತನುರೂಪರಾಶಿ…….
………ಗುರುತಿಸಿದೆನಾ ಮೂರ್ತಿಯಲಿ ಈ
ಮಹಾತಪಸ್ವಿನಿ ಸೀತೆಯಂ. ಕಾರಣವನರಿಯೆ.
ನಡುಗಿ ಕಣ್ದೆರೆದೆದ್ದು, ಬೆಮರ್ದ ಮೈಯ್ಯಂ ಕಂಡು
ನನ್ನೊಳಗೆ ನಾಂ ನಕ್ಕೆನಾ ಸ್ವಪ್ನ ಚೇಷ್ಟಿತಕೆ”
(ಅದೇ. ಪು. ೬೫೮-೯)

ಎನ್ನುತ್ತಾನೆ. ಇಲ್ಲಿ ಉದ್ಭವವಾಗುವ ಭಯದ ಮೂಲದಲ್ಲಿ, ಕುಸಿಯುತ್ತಿರುವ ಅವನ ನೈತಿಕ ಧೈರ್ಯವಿದೆ. ತಿಳಿದೂ ತಪ್ಪು ಮಾಡುವ ಅಪರಾಧೀ ಅನಿಸಿಕೆಗಳಿವೆ. ಆದರೆ, ಅವನ ಅಹಂಕಾರ – ಅಜ್ಞಾನಗಳ ಗಾಢ ಪದರಗಳನ್ನು ಛೇದಿಸಿ, ಋತದ ದರ್ಶನ ಮಾಡಿಸುವಷ್ಟು ಆ ಭೀತಿಯು ಪ್ರಬಲವಾಗಿರುವುದಿಲ್ಲ. ಹಾಗಾಗಿಯೇ,

“ಪ್ರಭೂ,
ಮನದಾಳದಿಂದಾತ್ಮಧರ್ಮಮಿತ್ತೆಳ್ಚರಿಕೆ ತಾಂ
ಕನಸಿನಂದದಿ ಬಂದುದಲ್ತೆ? ನಿನ್ನಾತ್ಮಮಂ
ನಿದ್ರೆಯ ಕೃಪೆಯೊಳಹಂಕಾರದಿಂ ಬಿಡುತೆಯಂ
ಪಡೆದ ನಿನ್ನಂತರಾತ್ಮನ ಶುದ್ಧ ಸಂದೇಶಮಂ
ಧಿಕ್ಕರಿಸದಿರ್. ಕಪಿಸೈನ್ಯಕಲ್ತೆಮ್ಮ ಸೈನ್ಯಂ
ಕ್ಷಯಿಸುತಿರ್ಪುದು ಪವಿತ್ರತೆಯ ದೈನ್ಯಕೆ ಕಣಾ”
(ಅದೇ. ಪು. ೬೫೬)

ಎನ್ನುವ ಹಿತವಚನಗಳು ಅವನನ್ನು ತಲುಪುವುದಿಲ್ಲ. ಕ್ಷಣಿಕವಾಗಿ ಎಚ್ಚತ್ತ ಮನಸ್ಸಾಕ್ಷಿಯನ್ನೂ ನಿರ್ಭೀತಿಯ ಮಿಥ್ಯಾ ಕವಚದಡಿಯಲ್ಲಿ ಹುದುಗಿಸಿಟ್ಟು, “ಮತಿ ನಿದ್ದೆಗೆಯ್ದಂದು ಮಿದುಮಿದುಳ ಕಡೆದೆಬ್ಬಿಸುವುದೀ ವಿಕಾರಂಗಳಂ’ ಎನ್ನುವ ತನ್ನ ಪೂರ್ವ ಅಭಿಮತಕ್ಕೇ ಅಂಟಿಕೊಳ್ಳುತ್ತಾನೆ ರಾವಣ. ಇಲ್ಲಿ, ಪಾಪ ಭಯವು ಅವನ ಪತನವನ್ನು ತಪ್ಪಿಸಬಹುದಾಗಿತ್ತು. ಅದನ್ನತ್ತ ಓಸರಿಸುವ ಮೂಲಕ ಅವನು ತನ್ನಾಯ್ಕೆಯ ದಾರಿಯಲ್ಲಿಯೇ ಮುನ್ನಡೆಯುತ್ತಾನೆ.

ಅಧರ್ಮಾಚರಣೆಯ ಪಾಪದ ಸೋಂಕಿಗೆ ಹೆದರಿ ಹಿಂಜರಿಯುವ ಮಾರೀಚನ ಮನೋವೃತ್ತಿಯು ಕುವೆಂಪು ಅವರು ಕಾಣಿಸಿದ ಭಯದ ಇನ್ನೊಂದು ಆಯಾಮವಾಗಿದೆ. ಸೀತೆಯನ್ನು ಅಪಹರಿಸುವ ಸಂಚಿನಲ್ಲಿ ಭಾಗಿಯಾಗಲು ಮಾರೀಚನ ಮನಸ್ಸು ಎಷ್ಟಕ್ಕೂ ಒಡಂಬಡುವುದಿಲ್ಲ. ದಾಶರಥಿಯ ಅದಟನ್ನು ಮುರಿಯಲು ಕಯ್‌ಬಲ್ಮೆ, ಮೆಯ್‌ಬಲ್ಮೆ, ಬಿಲ್‌ಬಲ್ಮೆ, ಮಾಯೆಯೊಂದತಿಬಲ್ಮೆ’ಗಳೆಲ್ಲವನ್ನೂ ವಿನಿಯೋಗಿಸಿಯೂ ಅವನು ವೈಫಲ್ಯ ವನ್ನೇ ಪಡೆದವನು. ಹಾಗಾಗಿಯೇ,

“ಧರ್ಮವರ್ಮಮೆ ರಕ್ಷೆಯಾದಾತನಂ
ಧರ್ಮದಿಂದಲೆ ಜಯಿಸಮೇಳ್ಕುಂ”
(ಅದೇ. ಪು. ೨೩೫)

ಎಂದು ತಪಕ್ಕೆ ನೋಂತವನು. ಅವನ ಈ ನಿಲುವಿಗೆ ಸವಾಲಾಗಿ ನಿಲ್ಲುವಂಥ ರಾವಣನ ಮಾತುಗಳನ್ನು ಕೇಳುತ್ತಿದ್ದ ಹಾಗೆಯೇ ವಿಚಿತ್ರವಾದ ಹೆದರಿಕೆಯೊಂದು ಅವನೊಳಗೆ ಹುಟ್ಟಿ ಕೊಳ್ಳುತ್ತದೆ. ಆಗ ಆತನು,

“….ಕೇಳ್ದು
ಮಾರೀಚನಕ್ಷಿಗಳ್ಗೇನೊ ಭೀತಿಯ ಛಾಯೆ
ಸುಳಿದತ್ತು, ಬೆಳ್ಪೇರಿದುದು ಮೊಗಂ. ಬೆಳ್ಳಾಗಿ
ನೋಡಿದಂ ಲಂಕೇಶನಂ
(ಅದೇ. ಪು. ೨೩೪)

ಎನ್ನುವ ಕವಿಯು ಅವನ ಹಿಂಜರಿಕೆಯ ಬೇರುಗಳನ್ನು ಶೋಧಿಸುತ್ತಾರೆ. ಮೊದಲನೆಯದಾಗಿ, ಹದಿಬದೆಯ ಹರಣಕ್ಕೆ ಅವನ ಮತಿಯು ಸಿದ್ಧವಾಗುವುದಿಲ್ಲ. ಪತಿವ್ರತೆಯ ನಿಷ್ಠೆ ಯೆನ್ನುವುದು, ಕೈಯಿಕ್ಕಿದವರ ಬಾಳಿಗೆ ಉರಿಯಿಕ್ಕುವುದೆಂದವನು ಬಲವಾಗಿ ನಂಬುತ್ತಾನೆ. ಲಂಕೆಯ ಕ್ಷೇಮಚಿಂತನೆಯೂ ಅವನಲ್ಲಿ ಜಾಗೃತವಾಗಿರುತ್ತದೆ. “ಮುಂಗಿಡಿಯನಿಕ್ಕದಿರೊ ಲಂಕೆಯ ವಿನಾಶಕ್ಕೆ” ಎಂದು ಅವನು ಪ್ರಕಾರಾಂತರಗಳಿಂದ ರಾವಣನನ್ನು ಅನುನಯಿಸುವುದು ಈ ಕಳಕಳಿಯಿಂದ ಪ್ರೇರಿತನಾಗಿಯೇ ಎನ್ನುವುದು ಸ್ಪಷ್ಟವೇ ಇದೆ. ಅಲ್ಲದೆ, ‘ದಂಡಧರ ಕಾಲ ಸಮ ಕೋದಂಡಧರ ರಾಮಕೋಪ’ದ ಸ್ಮರಣೆಯೂ ಅವನನ್ನು ವಿಚಲಿತಗೊಳಿಸುತ್ತದೆ. ‘ಪಾಪ ಕೂಪಕ್ಕೆ’ ಇಳಿಯುವ ಭಯ, ‘ರಾಘವನ ಸತಿಯ ಶಾಪ’ ಭೀತಿಗಳೆಲ್ಲವೂ ಅವನ ಮನಸ್ಸಿನ ಭಿತ್ತಿಯೊಳಗೆ ಪ್ರತ್ಯಕ್ಷವಾಗುತ್ತವೆ. ಇಷ್ಟಲ್ಲದೆ, ಜೀವಿಗಳಿಗೆಲ್ಲ ಸಹಜವಾದ ಪ್ರಾಣಭಯವು ಅವನಿಂದ,

“ಮಡಿಯಲೆನಗಾಸೆಯಿಲ್ಲಯ್ ರಾಮಬಾಣಕ್ಕೆ
ಸಿಲ್ಕಿ”
(ಅದೇ. ಪು. ೨೪೦)

ಎಂದು ಹೇಳಿಸುತ್ತದೆ.

ಮಾರೀಚನೊಳಗೆ ಬೀಡುಬಿಟ್ಟಿರುವ ಈ ಬಹುಮುಖಿಯಾದ ಭಯದ ಉಚ್ಛಾಟನೆಯ ದೃಷ್ಟಿಯಿಂದ, ರಾವಣನು ಕೆಲವು ಮಾರ್ಗೋಪಾಯಗಳನ್ನು ಆರಿಸಿಕೊಳ್ಳುತ್ತಾನೆ. ರಾವಣನಲ್ಲಿ ಕ್ಷಣಿಕವಾಗಿ ಎಚ್ಚತ್ತಿದ್ದ ಪಾಪಭೀತಿಯನ್ನು ಶಾಶ್ವತವಾಗಿ ನೆಲೆಯೂರಿಸಲು ಪ್ರಯತ್ನಿಸಿದ ಮಂಡೋದರಿಯ ಮನೋಭಾವದ ವಿಪರ್ಯಯವನ್ನು ಇಲ್ಲಿ ಗುರುತಿಸಬಹುದು. ಇಲ್ಲಿ, ರಾವಣನು ಮಾರೀಚನ ಭಯದ ಆವgಣಗಳ್ನೂ ಹಂತ ಹಂತವಾಗಿ ಛೇದಿಸಲು ಮೊದಲು ಮಾಡುತ್ತಾನೆ.

“ಹೆಂಬೇಡಿಯಾಗದಿರ್… ಧೈರ್ಯದ್ರುಮದ ಬೇರ್ಗೆ ಬೆನ್ನೀರನೊಯ್ಯದಿರ್” ಎನ್ನುವ,ಸಾಮಾನ್ಯವಾದ ಹುರಿದುಂಬಿಸುವ ಮಾತುಗಳಾಗಲಿ, ‘ಕುಲಗೇಡಿಯಾದಿರ್ ಕೊಯ್ಯದಿರೊ ಕರ್ಬರ ಕುಲದ ಬಲದ ಗೌರವದ ಗೋನಾಳಿಯಂ’ ಎನ್ನುವ, ಕುಲಾಭಿಮಾನ ವನ್ನು ತಿವಿಯುವ ಮಾತಿನ ಮೊನೆಗಳಾಗಲಿ, ನಿನ್ನ ತಾಯಿಯ ಕೊಲೆ – ನನ್ನ ತಂಗಿಯ ಅಪಮಾನಗಳೆರಡೂ

“….ಎಮ್ಮೆಯ ಕುಲಕೆ
ನಾಣ್ಗೇಡು; ಬಡಗಲೆಸೆದಿಹ ಮಲೆಪು, ತೆಂಕಣದ
ಗೌರವಕೆ! ಕೆಮ್ಮನಿರೆ ನಾವೆಮ್ಮ ದಕ್ಷಿಣಂ
ಸೂರೆಯಪ್ಪುದೆ ವಲಂ ದಸ್ಯುಶೀಲೋತ್ತರಕೆ”
(ಅದೇ. ಪು. ೨೩೫-೬)

ಎನ್ನುವ ಜನಾಂಗೀಯ ದ್ವೇಷದ ಕಿಚ್ಚನ್ನುರಿಸುವ ವಿಧಾನವಾಗಲಿ, ತಾಯಿಯ ವಧೆಯ ಸೇಡನ್ನು ಪ್ರಜ್ವಲಿಸುವ ಕ್ರಮವಾಗಲಿ, ರಾವಣನ ಲಕ್ಷ್ಯಸಾಧನೆಗಾಗಿ ಪ್ರಯೋಗವಾದವು ಗಳಾಗಿವೆ. ಈ ಪ್ರಕ್ರಿಯೆಯಲ್ಲಿ, ಬಡಗರ ಮರುಳಾಟಿಕೆಗೆ ಮಂಕಾಗಿ, ನೂರಾನೆಗಳ ಬಲದ ಸ್ಮೃತಿಯನ್ನೇ ಕಳೆದುಕೊಂಡವನೆಂದು ಮಾರೀಚನನ್ನು ಮೂದಲಿಸುತ್ತಾನೆ, ರಾವಣ. ಈ ಸಂದರ್ಭದಲ್ಲಿ ಅವನು ಕುಶಲ ಮನಶ್ಶಾಸ್ತ್ರಜ್ಞನ ಕೌಶಲವನ್ನೂ ಪ್ರದರ್ಶಿಸುತ್ತಾನೆ. ರಾಮನ ಬಗೆಗಿನ ಅತಿರಂಜಿತ ಹೇಳಿಕೆಗಳಿಂದಲೇ ಮಾರೀಚನ ಧೈರ್ಯವು ಉಡುಗಿರಬಹುದಾದ ಸಾಧ್ಯತೆಗಳನ್ನೂ ಅವನು ವಿಶ್ಲೇಷಿಸುತ್ತಾನೆ. ಈ ಎಲ್ಲ ಅಸ್ತ್ರಗಳೂ ನಿಷ್ಪ್ರಯೋಜಕವಾದಾಗ, ಮಾರೀಚನ ಭಯದ ಪರಿಮಾರ್ಜನೆಯನ್ನು  ಪ್ರತಿಭಯವನ್ನು ಸೃಷ್ಟಿಸುವುದರ ಮೂಲಕವೇ ರಾವಣನು ಸಾಧಿಸುತ್ತಾನೆ. ಸಾವೇ ನಿಶ್ಚಿತವೆಂದಾದಾಗ , ಅದು ರಾಮನ ಬಾಣದಿಂದಲೆ ಆಗಲೆಂಬ ಆಯ್ಕೆಯು ಮಾರೀಚನಿಗೆ ಅನಿವಾರ್ಯವಾಗುತ್ತದೆ.

“ಮರಣಮೆಂತಾದೊಡಂ ದಿಟಂ
ನನಗೆ ರಾಮನೊ ನೀನೊ ಸಂಹರಿಸಲೆನ್ನಾಯ್ಕೆ
ರಾಮಬಾಣಂ…………………….
………………….ನಿನ್ನಿಂದೆನಗೆ ಮುಕ್ತಿ
ನನ್ನ ಸಾವಕ್ಕೆ ನಿನ್ನಾತ್ಮದುದ್ಧಾರಕ್ಕೆ
ಮೊತ್ತಮೊದಲಣ ಜನ್ನ ಬೇಳ್ವೆ”
(ಅದೇ. ಪು. ೨೪೦)

ಎಂದು, ಮರಣವೇ ಮಹಾನವಮಿಯೆನ್ನುವ ನಿರ್ಧಾರಕ್ಕೆ ಅವನು ಬರುತ್ತಾನೆ. ಇದು, ಭಯದ ತುರೀಯ ಸ್ಥಿತಿಯಲ್ಲೇ ಅದರ ನಿರಸನವಾಗಿ, ಬಂದುದ್ದನ್ನು ಬಂದಂತೆ ಸ್ವೀಕರಿಸಲು ಮನಸ್ಸು ಸನ್ನದ್ಧವಾಗುವ ರೀತಿಯನ್ನು ತೋರಿಸುತ್ತದೆ.

ಮನಸ್ಸು ಭಯಾವೃತವಾಗುವುದರ ಹಿಂದೆ, ನಿಖರವಾದ ಜ್ಞಾನದ ಅಭಾವವನ್ನೂ ಮೂಢನಂಬಿಕೆಗಳ ಪ್ರಭಾವವನ್ನೂ ಕುವೆಂಪು ಅವರ ತೀಕ್ಷ್ಣವಾದ ವೈಚಾರಿಕ ಪ್ರಜ್ಞೆಯು ಗುರುತಿಸುತ್ತದೆ. ಇದಕ್ಕೊಂದು ಉದಾಹರಣೆಯಾಗಿ, ದುಶ್ಶಕುನಗಳಿಂದ ಚಿಂತಾಕುಲೆಯಾಗಿದ್ದ ತನ್ನ ಪತ್ನಿಯನ್ನು ಸಂತೈಸುವ ಇಂದ್ರಜಿತುವಿನ ಮಾತುಗಳನ್ನು ಪರಿಶೀಲಿಸಬಹುದು. ಅವು ಹೀಗಿವೆ :

“….. ಸಾಲ್ಗುಮಾ
ಅಂತೆ ಕಂತೆಯ ಚಿಂತೆ. ಕಲ್ಪನಾ ಭೀತಿಯಂ
ಬಿಡು ಕಾಂತೆ. ಪೆಣ್ ಜಾತಿಗೇಂ ಬೇರೆ ತರ್ಕಮಂ
ವಿಧಿಸಿಹನೊ ಸೃಷ್ಟಿಕರ್ತಂ ಕಾಣೆನಾಂ! ನಿನ್ನ
ಈ ಪೇಳ್ದುದಕ್ಕೇಂ ಸಮನ್ವಯಮೊ….
……..ಸಂಗವಿಲ್ಲದ ನಿನ್ನ
ಕಲ್ಪನೆಗೆ ಭೀತಿ ಸಹಜಂ, ಅಬಲೆ”
(ಅದೇ. ಪು.  ೪೫೮)

ಇಲ್ಲಿ ಭಯವೆನ್ನುವುದು ಮನಸ್ಸಿನ ದೌರ್ಬಲ್ಯಗಳಲ್ಲೊಂದೆಂದು ಪರಿಗಣಿತವಾಗಿದೆ. ಸತ್ಯದ ದರ್ಶನವಾದೊಡನೆಯೆ ಆ ಮಂಜಿನ ತೆರೆ ಕರಗಿ ಎಲ್ಲವೂ ನಿಚ್ಚಳವಾಗುವುದೆಂಬ ವಿಶ್ವಾಸವನ್ನು ಇಂಥ ಸಂದರ್ಭಗಳು ಪೋಷಿಸುತ್ತವೆ.

ಸೀತೆಯ ಬದುಕಿನ ಸಂಕಟ-ದುಗುಡಗಳ ಪ್ರತೀಕವಾಗಿ ಅವಳ ಮನಸ್ಸು ಭೀತಿಗೊಳ್ಳು ವುದನ್ನು ಕುವೆಂಪು ತುಂಬ ಕಲಾತ್ಮಕವಾಗಿ ನಿರೂಪಿಸಿದ್ದಾರೆ. ಇದನ್ನು ಮುಂಗಾಣ್ಕೆಯೆಂದೋ ಸ್ತ್ರೀ ಸ್ವಭಾವ ಸಿದ್ಧವಾದ ಅಸಹಾಯಕತೆಯೆಂದೋ, ಅಕಾರಣವೆಂದೋ ಬದಿಗೆ ಸರಿಸುವುದು ಬಹಳ ಸರಳ ಸಮೀಕರಣವಾಗುತ್ತದೆ.

ಈ ಸೀತೆಯ ಆಂತರಿಕ ಸಂವೇದನೆಗಳನ್ನು ಬಳಸಿಕೊಂಡು ಕುವೆಂಪು ಅವರು ಮಾನಸಿಕ ಅಸ್ಥಿರತೆಯು ಸಾಂದ್ರಗೊಳ್ಳುತ್ತ ಸಾಗುವ ಬಗೆಯನ್ನು ತಿಳಿಯುವ-ತಿಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.

ಉದಾಹರಣೆಗೆ, ರಾವಣನ ಹೆಸರು ಮೊತ್ತಮೊದಲು ಕಿವಿಗೆ ಬಿದ್ದೊಡೆನೆಯೇ ಅವಳಿಗದು ಭಯಾನಕವೆನಿಸುತ್ತದೆ (ಅದೇ. ಪು. ೨೧೮). ಕಾಂಚನ ಮೃಗದ ಬೆನ್ನಟ್ಟಿ ಹೋದ ರಾಮನು ಬಹಳ ಹೊತ್ತಾದರೂ ಹಿಂದಿರುಗದಿದ್ದಾಗ,

“ನಾನಾ ದುರಂತಮಂ ನೆನೆನೆದು
ವಿಹ್ವಲಿಸಿದುದು ಮನಂ ತನ್ನಿಚ್ಛೆಯಂ ಮೀರ್ದು.
…………………………….
ಮರೆಸಲಾರದೆ ತನ್ನೆರ್ದೆಯ ಭೀತಿಯಂ”
(ಅದೇ. ಪು. ೨೫೨)

ಸೀತೆಯು ಪರಿತಪಿಸುತ್ತಾಳೆ. ಆ ಸಂದರ್ಭದಲ್ಲಿ ಕವಿಯು ಭೀರು. ಕೋಮಲೆ, ಅಬಲೆ ಎಂಬ ವಿಶೇಷಣಗಳನ್ನು ಅವಳ ಹೆಸರಿನ ಹಿಂದೆ ಪ್ರಯೋಗಿಸುತ್ತಾರೆ. ಆಮೇಲೆ, ‘ಓ ಲಕ್ಷ್ಮಣಾ’ ಎಂಬ ಮಾರೀಚನ ಕಪಟದ ಕರೆಯನ್ನು ಕೇಳಿ, ಅವಳು ‘ಬೆಚ್ಚಿದಳ್, ಬೆವರಿದಳ್, ಹಲುಬಿದಳ್, ಹಾರಿ ಹಮ್ಮೈಸಿದಳ್’ ಅವಳ ಮುಖವು “ಭೀತಿ ಬೆಳ್ಪಂ ಬಡಿದುಕೊಂಡಿತು. ಅವಳಿಂದ ಆಜ್ಞಪ್ತನಾದ ಲಕ್ಷ್ಮಣನು ದನಿ ಬಂದ ದಿಕ್ಕಿನತ್ತ ಹೋದ ಮೇಲೆ, “ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ ಸೀತೆಯೊಡಲಿನ ನಾಳನಾಳದಲಿ ಹೆದರಿಕೆಯ ಚಳಿ ಹರಿಯುವಂತೆ” ಇವೆಲ್ಲವೂ ಅವಳ ಧೃತಿಯು ಕುಸಿಯುತ್ತ ನಡೆಯುವುದರ ಒಳ-ಹೊರಗುಗಳ ಸೂಚನೆಗಳಾಗಿವೆ. ಮುಂದೆ, ತಾಪಸರೂಪಧಾರಿಯಾದ ರಾವಣನನ್ನು ಕಂಡಾಗ ಮೊದಲಿಗೆ ಅವಳು ‘ಸಂಶಯ ಭೀತೆ’ಯಾಗುತ್ತಾಳೆ. ಅನಂತರ, ಅವನ ಕಣ್ಣುಗಳನ್ನು ದೃಷ್ಟಿಸುತ್ತಾಳೆ. ಒಡನೆಯೆ, “ಆ ಕಣ್ಣೆ ನಡನಡನೆ ನಡುಗಿ, ಮರವಟ್ಟಂತೆ, ನಟ್ಟಂತೆ” ಸ್ಥಾವರ ಸ್ಥಿತಿಯಲ್ಲಿರುತ್ತಾಳೆ. ಎಂದರೆ, ಭಯದ ತೀವ್ರಾವಸ್ಥೆಯಲ್ಲಿ ಮೈಮನಸ್ಸುಗಳೆರಡೂ ನಿಷ್ಕ್ರಿಯವಾಗುತ್ತವೆ, ಸ್ಪಂದನರಹಿತವಾಗುತ್ತವೆ, ಪ್ರತಿಕ್ರಿಯಾ ಶೂನ್ಯವಾಗುತ್ತವೆ. ಈ ಯೋಚನೆಯ ತಂತು ಕಡಿಯುವ ನೆಲೆಗಳನ್ನು ಕುವೆಂಪು ಅವರು ಸನ್ನಿವೇಶವೊಂದರ ಸಹಕಾರದಿಂದ ಹೀಗೆ ಜೋಡಿಸುತ್ತಾ ಹೋಗುತ್ತಾರೆ.

ಈ ವೈಚಿತ್ರ-ವೈರುಧ್ಯಗಳ ನಾನಾ ಒತ್ತಡಗಳನ್ನು ಅನುಭವಿಸಿದ ರಾವಣನಂಥ ಗಟ್ಟಿ ಗುಂಡಿಗೆಯವನನ್ನೂ ಕೂಡಾ, ‘ಭ್ರಾಂತಿ ಸಾಂಕ್ರಾಮಿಕ – ನಮ್ಮ ಬಗೆ ನಮಗೆ ಪಗೆ’ ಎನ್ನುವ ನಿತ್ಯಸತ್ಯದ ಮುಂದೆ ಒಯ್ದು ನಿಲ್ಲಿಸುತ್ತಾರೆ, ಕವಿ. ಅಚಲವಾಗಿರಬೇಕಾದ ಒಂದು ನಂಬಿಕೆಯನ್ನು, ಶ್ರದ್ಧೆಯನ್ನು ಕಳೆದುಕೊಂಡ ಖಾಲಿ ಸ್ಥಿತಿಯಲ್ಲಿ ಮಾತ್ರವೇ ಭಯ, ಉದ್ವೇಗ, ಶಂಕೆ, ಆತಂಕಗಳುತ್ಪನ್ನವಾಗುವುವೆಂದವರು ಪ್ರತಿಪಾದಿಸುತ್ತಾರೆ. ಇದಕ್ಕೆ ಒತ್ತಾಸೆಯಾಗಿ “ಆ ದೇವಿ ರಕ್ಷೆಯಾಗಿರೆ ಭಯಂ ಭಯಮಲ್ತು, ನಾಸ್ತಿಕತೆ’ಯೆಂದು ರಾವಣನ ಬಾಯಿಯಿಂದ ಹೇಳಿಸುತ್ತಾರೆ.

ವ್ಯಕ್ತಿತ್ವದ ಕುಸಿತಕ್ಕೆ ಈ ಭೀತಿಯ ಪ್ರವೇಶವೇ ಮೂಲಕಾರಣವೆನ್ನುವ ನಿಲುವನ್ನು ಈ ಕೃತಿಯು ತಳೆಯುತ್ತದೆ. ಒಂದರ್ಥದಲ್ಲಿ ನಿರ್ಭೀತವೂ, ಅಜೇಯವೂ ಆಗಿದ್ದ ರಾವಣನ ಸುರಕ್ಷಿತ ಪ್ರಪಂಚದ ಮೇಲೆ ಈ ಭಯದ ಬೇರೆ ಬೇರೆ ರೂಪಗಳು ದಾಳಿ ನಡೆಸಿದುದರಿಂದಲೇ ಅಲ್ಲಿ ಬಿರುಕುಗಳುಂಟಾದುವು. ಈ ಆಕ್ರಮಣದ ಮುಂದಾಳ್ತನವನ್ನು ಹನುಮಂತನೇ ವಹಿಸುತ್ತಾನೆ. ಸೀತಾನ್ವೇಷಣೆಗಾಗಿ ಅವನು ಲಂಕೆಗೆ ಕಾಲಿಟ್ಟೊಡನೆಯೇ ‘ರೂಪವಿಲ್ಲದ ಭೀತಿ’ಯೂ ಅಲ್ಲಿ ಅವತರಿಸಿತು. ರಾವಣನ ಎದೆಯೊಳಗೂ ಇದರ ಬೀಜಾವಾಪನೆ ಯಾಯಿತು. ಅಸಹಜ ವಾಂಛೆಗಳೇ ತನ್ನ ವೈರಿಗಳೆಂಬ ಅರಿವಿದ್ದ, ಪ್ರಾಜ್ಞನಾಗಿದ್ದ ರಾವಣನಿಗೆ ಸ್ವಂತದ ಸಂಕಲ್ಪವೂ ದುಷ್ಟವಾಗಿತ್ತೆಂಬುದೂ ತಿಳಿದೇ ಇತ್ತು. ಅವನು ಮಾರೀಚನೊಂದಿಗೆ ಹೇಳುವ,

“….ಕೇಳೊರೆವೆನೆನ್ನಾತ್ಮ ಚರಿತಮಂ,
ಮನ್ಮನೋ ದುರಿತಮಂ. ಪುಟ್ಟುವಾಗಳೆಯೆ ನಾಂ
ನೆತ್ತರೊಳೆ ಪೆಣ್ಣೊಡಲಿನಾಸೆಯೂ ಬೇಟಮಂ
ಪೊತ್ತು ಪುಟ್ಟಿದೆನೈಸೆ! ಜನ್ಮ ದೌರ್ಬಲ್ಯಮಂ
ಜಯಿಸಲೆಂದಾನೆನಿತೆನಿತೊ ನಿಟ್ಟೆಯಂ ಪಟ್ಟು
ಬೇಯಿಸಿದೆನಾತ್ಮಮಂ”
(ಅದೇ. ಪು. ೨೩೭)

ಈ ಮಾತುಗಳು ಅದರ ಸಮರ್ಥನೆಗಳಾಗಿವೆ. ಅಂತರಂಗದೊಳಗೆ ಮನೆ ಮಾಡಿದ್ದ ಈ ತಿಳಿವಳಿಕೆಯನ್ನು, ಹೊರಗಿನ ಶಕ್ತಿಗಳಿಂದುಂಟಾದ ಭಯವು ಮತ್ತಷ್ಟು ವಿಸ್ತರಿಸಿತು. ಅವನ ಆತ್ಮವಿಶ್ವಾಸವು ಜಗುಳಿ ಹೋಗಿ ಆ ಸ್ಥಾನವನ್ನು ಪ್ರಾಣಭೀತಿಯಿಂದ ಉಂಟಾದ ವಿವಿಧ ಭ್ರಮೆಗಳು ಆವರಿಸಿದುವು.

ಯುದ್ಧದ ಕೊನೆಯ ಘಟ್ಟದಲ್ಲಿ,
“ಬೆಮರ್‌ಕುಳ್ತುದಾನನದಿ. ಒಂದೊಂದನೊತ್ತರಿಸಿ
ಮೆಯ್ದೋರಿದವು ಸುಯ್ಲುಗಳ್, ಸುರ್ಕುಗೊಂಡುದು
ಮೊಗಂ. ಬುದ್ದಿಯೆ ವಿಕಾರಗೊಂಡವೋಲ್ ತೋರ್ದನಾ….”
(ಅದೇ. ಪು. ೭೬೨)

ಲಂಕಾಧಿಪನಾದ ರಾವಣನ ಈ ಮೂರ್ತಿಯ ಅವನಿಗೇ ಅಪರಿಚಿತವಾಗಿತ್ತು. ಅವನ ಭ್ರಮೆಯ ಪರಿಣಾಮಗಳಾಗಿ,

“…..ಪರ್ಣಶಾಲೆಯಂ
ಪೊತ್ತಿರ್ದುದೊಂದ್ಭುತ ಚೆತಾಗ್ನಿ. ಕಂಡನಾ
ಕೆಂಡದುರಿ ನಡುವೆ ಕುಣಿದಿರ್ದ ರಣಚಂಡಿಯಂ!
ಮಡಿದ ಲಂಕಾ ವೀರ ಶತ ರುಂಡಮಾಲೆಯಂ
ತೊಟ್ಟಿರ್ದ್ದಳುಟ್ಟಿರ್ದಳಾ! ಮುಂಡಂಗಳಂ ನೆಯ್ದು
ಕೈಗಯ್ದ ಕಟಿವಸ್ತ್ರಮಂ ನೋಡುತಿರೆ ಸೃಪಂ
ಗುರುತಿಸಿದನವುಗಳು : ಕುಂಭಕರ್ಣನ ಶಿರದ
ಪಕ್ಕದೊಳೆ ಕಂಡು ರಕ್ತಾರ್ದ್ರ ಭೀಕರಮಾದ
ತನ್ನ ಪಂದಲೆಯಂ ದಶಾನನಂ ಹಮ್ಮೈಸಿ
ಕಣ್ಮುಚ್ಚಿದನ್”
(ಅದೇ. ಪು. ೭೬೩)

ಎನ್ನುವಂಥ ಭೀಭತ್ಸ ದೃಶ್ಯಕ್ಕೂ ಅವನು ಸಾಕ್ಷಿಯಾಗಬೇಕಾಯಿತು.

ಒಂದು ದೃಷ್ಟಿಯಿಂದ, ಇದು ನೈತಿಕ ನೆಲೆಗಟ್ಟನ್ನು ಕಳೆದುಕೊಂಡಾಗ ಉಡುಗಿ ನಿರ್ನಾಮ ವಾಗುವ ಸ್ವತ್ವ – ಸತ್ವಗಳನ್ನು ಪರಿಚಯ ಮಾಡಿಸುತ್ತದೆ.

ಈ ಉದಾಹರಣೆಗಳ ಮಾಲಿಕೆಯ ಸಹಾಯದಿಂದ, ಮಾನವನ ಸ್ವಭಾವಾಂತರ್ಗತ ವಾಗಿರುವ, ಮೂಲಭೂತ ಪ್ರವೃತ್ತಿಯೊಂದನ್ನು ಕವಿ ಕುವೆಂಪು ಅವರು ವಿಶ್ಲೇಷಿಸಿದ ಕ್ರಮಗಳನ್ನು ಲಕ್ಷಿಸುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. ಇದೇ ಕಲಾತ್ಮಕ-ವೈಚಾರಿಕ ಪ್ರೌಢಿಮೆಗಳಿಂದ ಅವರು ಅಭೀತತ್ವ ಮತ್ತು ಅಭೀತತ್ವಗಳನ್ನೂ ನಿರ್ವಹಿಸಿದ್ದಾರೆ. ಈ ಮಾದರಿಯ ಹಲವು ಪರಿಕಲ್ಪನೆಗಳಿಂದ ಇಡಿ ಕಿರಿದಿರುವ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯವಾಹಿನಿ ಯುದ್ಧಕ್ಕೂ ಅವುಗಳ ಆಶ್ರಯದಲ್ಲಿ ವಿಹರಿಸುವುದು ತುಂಬ ಚೇತೋಹಾರಿಯಾದ, ಸಹೃದಯ ಸಂತೃಪ್ತಿಯನ್ನು ಅನುಭವವನ್ನಿಯುತ್ತದೆ.