ಮನುಷ್ಯನ ಬೆಳವಣಿಗೆಯ ಇತಿಹಾಸದ ದೃಷ್ಟಿಯಿಂದ ಹಲವು ನಿಲುದಾಣಗಳು. ಕ್ಷಣಕಾಲ ತಳುವಿ ಹೊಸ ಅನುಭವಗಳನ್ನು ಪುಳಕಗಳನ್ನು, ಚೈತನ್ಯದಾಯಿನಿ ಪೇಯಗಳನ್ನು ಸ್ವೀಕರಿಸಿ, ಮೈ ಮನಗಳನ್ನು ಹುರುಪುಗೊಳಿಸುವ ಇವುಗಳಿಗೆ ಅನನ್ಯವಾದ ಸಾಂಸ್ಕೃತಿಕ ಮಹತ್ವವಿದೆ. ಸಮಾಜದ ಭಾವನಾತ್ಮಕ ಸತ್ವಗಳೆಲ್ಲದರ ಪ್ರತಿಸೃಷ್ಟಿಯಾಗಿರುವ ಸಾಹಿತ್ಯಕ್ಕೆ ಈ ಮಾತು ಅನೇಕ ನೆಲೆಗಳಲ್ಲಿ ಅನ್ವಯವಾಗುತ್ತದೆ.

ಈ ಹಿನ್ನೆಲೆಯಲ್ಲಿ, ಕನ್ನಡದ ಆದಿಕವಿ ಪಂಪನಿಂದ ತೊಡಗಿ, ನಮ್ಮ ಹಿರಿಯ ಸಮಕಾಲೀನರಾಗಿದ್ದ ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತ, ಗೋಕಾಕರೆಲ್ಲ ಒಂದೊಂದು ಹೊಸಪಥದ ಅನ್ವೇಷಣೆಯನ್ನು ಅತ್ಯಂತ ತೀವ್ರವಾಗಿ ನಡೆಸಿದವರು. ಆ ದಾರಿಗೆ ಬೇಕಾಗುವ ಸಂಸ್ಕಾರಗಳನ್ನು, ಉಪಕರಣಗಳನ್ನು, ಸೌಂದರ್ಯಾನುಭೂತಿಗಳನ್ನು ಪರಿಚಯಿಸುತ್ತ, ಅದನ್ನು ಪಳಗಿಸಿ ಸಂಚಾರ ಯೋಗ್ಯವನ್ನಾಗಿ ಮಾಡಿದವರು.

ಆಧುನಿಕ ಮಹಾಕಾವ್ಯ ಪರಂಪರೆಯಾಗಲಿ, ಗೀತ ನಾಟಕಗಳ ಮಾಧ್ಯಮವಾಗಲಿ, ಪ್ರಾದೇಶಿಕ ಕಾದಂಬರಿಗಳ ಆಪ್ತ ಗಂಧವಾಗಲಿ, ಕಥನಕಾವ್ಯಗಳ ಸಂವಹನ ಶಕ್ತಿಯಾಗಲಿ ಈ ಪಥ ಪ್ರದರ್ಶಕ ಪ್ರಕಾರಕ್ಕೆ ಸಮರ್ಥ ಉದಾಹರೆಗಳಾಗುವವುಗಳೇ. ಜಾನಪದ ಸತ್ವ, ಅನುಭಾವದ ಗೂಢ-ವ್ಯಕ್ತ ಪ್ರಪಂಚ, ನಾಟಕೀಯತೆ, ವಸ್ತು-ನಿರೂಪಣೆಗಳ ನಾವೀನ್ಯ, ಹೊಸ ಸಾಧ್ಯತೆಗಳ ಹುಡುಕಾಟಗಳಿಗೆಲ್ಲ ಈ ಹಂಬಲವೇ ಮೂಲ ನೆಲೆ.

ಈ ಸಂದರ್ಭದಲ್ಲಿ, ಕನ್ನಡದ ಸಣ್ಣಕಥೆಗಳಿಗೆ ಒಂದು ಸ್ಪಷ್ಟವಾದ ಶರೀರವನ್ನೂ ಶಾರೀರವನ್ನೂ ಕೊಟ್ಟ ಮಾಸ್ತಿಯವರ ಇತರ ಸಾಹಿತ್ಯ ಸೃಷ್ಟಿಯನ್ನು ಗಮನಿಸುವುದು ಪ್ರಾಸಂಗಿಕವೇ ಆಗುತ್ತದೆ.

ಕಾವ್ಯದ ಮಟ್ಟಿಗೆ ಸೀಮಿತವಾಗಿ ಹೇಳುವುದಾದರೆ, ಕುವೆಂಪು, ವಿ.ಸೀ. ಮುಂತಾದವರಂತೆ, ಮಾಸ್ತಿಯವರೂ ‘ಶ್ರೀ’ಯವರ ಶಿಷ್ಟ ಪರಂಪರೆಗೆ ಸೇರಿದವರು. ತಮ್ಮ ಗುರುಗಳು ಹಾಕಿಕೊಟ್ಟ ದಾರಿಯನ್ನೇ ಸವೆಸಲು ಪ್ರಯತ್ನಿಸಿದವರು.

ಮಾಸ್ತಿಯವರು ತಮ್ಮ ಕಾವ್ಯಸೃಷ್ಟಿಯ ಮೊದಲ ವರ್ಷಗಳಲ್ಲಿ ಬರೆದ ಕವನಗಳು ‘ಬಿನ್ನಹ’ (೧೯೨೨) ಸಂಕಲನದಲ್ಲಿ ಸಂಗ್ರಹವಾಗಿವೆ. ಈ ಕವನಗಳು ಮಧ್ಯಕಾಲೀನ ಭಕ್ತಿ ಸಾಹಿತ್ಯದ ಲಕ್ಷಣಗಳನ್ನೂ ಹೊಸತಿನ ಪ್ರಭಾವವನ್ನೂ ಸಮಾನವಾಗಿ ಒಪ್ಪಿಕೊಳ್ಳುತ್ತವೆ.

“ವನವ ವರ್ಣಿಸುವ ಮಾತೆರಡ ಜೋಡಿಸುವವನ
ಕೊನೆದು ಕೊಂಡಾಡಿ ಕವಿಯೆನ್ನುವುದು – ಜಗವು
ವನ ಸಹಸ್ರವ ಪೊತ್ತ ತಿರೆಯ ರಚಿಸಿದೆ ದೇವ
ವನಮಾಲಿ ನಿನ್ನ ಕವಿತೆಯ ಜಾಣ್ಮೆ ಅದ್ಭುತವು”
(ಕವಿಗಳ ಕವಿ)

ಈ ಸಂಕಲನದ ಕವನಗಳು ಮಾಸ್ತಿಯವರ ಕಾವ್ಯದ ಐತಿಹಾಸಿಕ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದವುಗಳಾಗಿವೆ.

“ಮುಂದೆ ಪ್ರಕಟವಾದ ‘ಅರುಣ’ದ ಕವಿತೆಗಳಲ್ಲಿ ಆಗಲೇ ಇಂಗ್ಲಿಷ್ ಕಾವ್ಯದ ಪ್ರಭಾವವೂ ಕಾಣಿಸಿಕೊಂಡಿದೆ. ಹೊಸತನವೂ ಹೆಜ್ಜೆಯಿಕ್ಕಿದೆ. ‘ಬಿನ್ನಹದ ಗೀತೆಗಳು ಹಳೆಯ ರೀತಿಯವು; ಭಕ್ತಿಪಂಥದವು ‘ಅರುಣ’ದ ಕವಿತೆಗಳಾದರೋ ವಸ್ತು, ನಿರೂಪಣೆ, ರೂಪ ಈ ಎಲ್ಲ ದೃಷ್ಟಿಗಳಿಂದಲೂ ಹೊಸ ಬಗೆಯವು” ಎನ್ನುವ ಎಸ್. ಅನಂತನಾರಾಯಣರ ಮಾತುಗಳನ್ನು ಈ ನೆಲೆಯಿಂದ ಪರಿಭಾವಿಸಬೇಕು.

“ಪರಭಾಷೆಯಂ ಕಲಿತಿವಂ
ವಿರಚಿಸೆ ತೊಡಗಿಹನು ಕನ್ನಡದಿ ಕವಿತೆಯನೆಂ
ದೊರೆಯುವರೇ ಪ್ರಾಜ್ಞರ ಸಂ
ಚರಿಸುವುದತ್ತಿ ಕಾವ್ಯಶಕ್ತಿಯೆಲ್ಲ ನುಡಿಯೊಳಂ”

ಈ ಸಂಗ್ರಹದಲ್ಲಿ ಸರಳರಗಳೆಯನ್ನು ಹೊಸಗನ್ನಡದಲ್ಲಿ ಪ್ರಯೋಗಿಸಿದ ಹೊಸತಿಗೂ ಮಾಸ್ತಿಯವರು ಕಾರಣರಾದರು. ಅದರಲ್ಲಿ ಸೇರ್ಪಡೆಯಾಗಿರುವ “ಸ್ಥಳಗಳ ಹೆಸರು” ಎನ್ನುವ ಕವಿತೆಯನ್ನು ಹೊಸಗನ್ನಡ ಕಾವ್ಯದಲ್ಲಿ ಸರಳರಗಳೆಯ ಸಫಲ ಪ್ರಯೋಗ ಎನ್ನ ಲಾಗುತ್ತದೆ. ಈ ಛಂದೋರೂಪವೂ ಹೊಸಗನ್ನಡ ಕಾವ್ಯ ಜಗತ್ತಿಗೆ ಮಾಸ್ತಿಯವರ ಅನನ್ಯ ವಾದ ಕಾಣಿಕೆಯಾಗಿದೆ. ಮಾಸ್ತಿಯವರ ವೈಶಿಷ್ಟ್ಯವಾದ ಕಥನ ಕವನಗಳ ಮುನ್ಸೂಚನೆಯೂ ಈ ‘ಅರುಣ’ ಸಂಗ್ರಹದ ಕವನಗಳಲ್ಲಿ ಕಾಣುತ್ತದೆ.

‘ತಾವರೆ’ ಸಂಗ್ರಹದ ಕವನಗಳಲ್ಲಿ ಹೊಸ ಅಲೆಗಳ ಅಬ್ಬರ ಹೆಚ್ಚಾಗಿದೆ. ಆದರೆ ಭಾವದಟ್ಟಣೆ, ಮಾಸ್ತಿಯವರ ಸಣ್ಣಕಥೆಗಳಲ್ಲಿರುವ ಜೀವನ ದರ್ಶನ, ಕಾವ್ಯಾತ್ಮಕತೆಗಳು ಇಲ್ಲೂ ವಿರಳವಾಗಿಯೇ ಇವೆ.

“ಜೀವನಕ್ಕೂ ಕಾವ್ಯಕ್ಕೂ ಅನನ್ಯವಾದ ಸಾದೃಶ್ಯವಿದೆ. ಜೀವನದ ಭವ್ಯತೆ, ದಿವ್ಯತೆಗಳನ್ನು ಜನತೆಗೆ ತೋರಿಸಿಕೊಡಲು ಕಾವ್ಯವೇ ಕೈಗನ್ನಡಿ. ಹಿಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ಇರುವ ಭೇದವನ್ನು ನೋಡಿ ಇಂದಿನ ಜೀವನ ಧರ್ಮಕ್ಕುಪ್ಪುವ ನೂತನ ಪಥದಲ್ಲಿ ಮುಂದುವರೆಯಲು ಇಂದಿನ ಕವಿಗಳು ಯತ್ನಿಸುತ್ತಿದ್ದಾರೆ. ಛಂದಸ್ಸನ್ನು ಹೊಸ ರೂಪಕ್ಕೆ ಮಾರ್ಪಡಿಸಿಕೊಂಡು ನವಜೀವನದ ಸುಖದುಃಖಗಳನ್ನು ಯಥಾರ್ಥವಾಗಿ ಬಣ್ಣಿಸಲು ಹವಣಿಸುತ್ತಲಿದ್ದಾರೆ. ಹೊಸ ವಿಚಾರವನ್ನು ಹೊಸ ಸಾಹಿತ್ಯದ ಮೂಲಕ ಜನರಿಗೆ ತಿಳಿಸಿ ವಿಚಾರ ಪಲ್ಲಟವನ್ನುಂಟುಮಾಡಲು ಸನ್ನದ್ಧರಾಗಿದ್ದಾರೆ” ಎನ್ನುವ ಪೇಜಾವರ ಸದಾಶಿವರಾಯರ ಅನಿಸಿಕೆಗಳು ಮಾಸ್ತಿಯವರ ಕಾವ್ಯಕೃಷಿಗೂ ಅನ್ವಯವಾಗುತ್ತವೆ.

ಹಾಗೆ ನೋಡಿದರೆ, ಎಲ್ಲ ಮಹತ್ವದ ಪ್ರಯೋಗಗಳ ಹಿಂದೆ, ‘ಅಭ್ಯಾಸ ಕವಿತೆ’ ಮಾದರಿಯ Prelude ಎನ್ನಬಹುದಾದ ರಚನೆಗಳಿರುತ್ತವೆ. ‘ಶ್ರೀರಾಮಾಯಣದರ್ಶನಂ’ಗೆ ‘ಚಿತ್ರಾಂಗದಾ’ ಒದಗಿದ ಹಾಗೆ, ‘ಭಾರತ ಸಿಂಧುರಶ್ಮಿ’ಗೆ ತ್ರಿಶಂಕುವಿನ ಪ್ರಜ್ಞಾಪ್ರಭಾತ ಸಹಕರಿಸಿದ ಹಾಗೆ ‘ಶ್ರೀ ಹರಿಚರಿತೆ’ಗೆ ಗೋಕುಲ ನಿರ್ಗಮನವು ಮೂಲವಾದ ಹಾಗೆ ಮಾಸ್ತಿಯವರ ಆರಂಭಿಕ ಕವನಗಳು ಅವರ ದೀರ್ಘವಾದ ಕಥನ ಕವನಗಳಿಗೆ ಪೂರ್ವ ರಂಗಗಳನ್ನು ಸೃಷ್ಟಿಸಿದುವು. ಹೊಸ ಶತಮಾನದ ಅಂಗಳದ ಒಳಗೆ ನಿಂತಿರುವ ನಮಗೆ ವಸ್ತು, ಛಂದೋರೂಪ, ತಂತ್ರ ಮುಂತಾದುವುಗಳೆಲ್ಲಿ ನಡೆಸಿದ ಪ್ರಯೋಗಗಳು. ಸಿದ್ದಿಯನ್ನು ಕಂಡುಕೊಂಡ ನಾವೀನ್ಯಗಳು ಅಂಥ ಪ್ರಧಾನವೆನಿಸಲಾರವು. ಆದರೆ, ೨೦ನೆಯ ಶತಮಾನದ ಪೂರ್ವಾರ್ಧದ ಸಂಕ್ರಮಣಾವಸ್ಥೆಯಲ್ಲಿ ಈ ಪ್ರಯೋಗಗಳನ್ನಿಟ್ಟು ಪರಿಶೀಲಿಸಿದಾಗ ಅವುಗಳ ಚಾರಿತ್ರಿಕ ಮಹತ್ವದ ನೆಲೆಗಳು ಸ್ಪಷ್ಟವಾಗುತ್ತದೆ. “೧೯೨೦ ರಿಂದ ೨೦ರವರೆಗಿನ ದಶಕವನ್ನು ಇಂದಿನ ಕನ್ನಡ ಕಾವ್ಯದ ಪ್ರಾದುರ್ಭಾವದ ಕಾಲವೆಂದು ಗೋಕಾಕರು ಕರೆದಿರುವುದು ಈ ಅಂಶಗಳನ್ನು ಗಮನಿಸಿಯೇ.

ಎಲಿಯಟ್ ಹೇಳುವ ಮೂರು ಧ್ವನಿ(Voice)ಗಳಲ್ಲಿ ಮೂರನೆಯದಕ್ಕೆ ಉದಾಹರಣೆ ಯಾಗಿ ಮಾಸ್ತಿಯವರ ಕಥನ ಕವನಗಳನ್ನು ಗಮನಿಸಬಹುದು. ಅದರಲ್ಲಿರುವ epi characturisticಗಳನ್ನು ವಿಶ್ಲೇಷಣೆಗೆ ಎತ್ತಿಕೊಂಡಾಗ ಈ ‘address to the society’ ಯನ್ನುವ ಪರಿಕಲ್ಪನೆಯು ಸ್ಫುಟವಾಗುತ್ತದೆ.

ಆಗಲೇ ಪ್ರಸ್ತಾಪಿಸಿದಂತೆ ‘ಅರುಣ’ ಸಂಕಲನದಲ್ಲಿ ‘ಪ್ರಗಾಥ’ ಪ್ರಕಾರವನ್ನು ಮಾಸ್ತಿ ಯವರು ಪ್ರಯೋಗಿಸಿದ್ದಾರೆ. ಇಂಗ್ಲಿಷಿನ the ode ಪರಿಕಲ್ಪನೆಗೆ ಸಮಾನಾರ್ಥಕವಾಗಿ ಬಳಸುವ ‘ಪ್ರಗಾಥ’ವು ಭಾವಗೀತೆಯ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ. ಡಿ.ವಿ.ಜಿ. ಯವರು ಬರೆದ ‘ಬೇಲೂರಿನ ಶಿಲಾಬಾಲಿಕೆಯರು’ ಕನ್ನಡದ ಮೊದಲ ಪ್ರಗಾಥವೆನ್ನುವ ಖ್ಯಾತಿಗೂ ಪಾತ್ರವಾಗಿದೆ.

ಮಾಸ್ತಿಯವರ ‘ಅರುಣ’ ನಿಯತ ಪ್ರಗಾಥದ ವರ್ಗಕ್ಕೆ ಸೇರಿದೆ. ಮೊದಲ ಮತ್ತು ಕೊನೆಯ ನುಡಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಗಳಲ್ಲೂ ಇದರಲ್ಲಿ ಹನ್ನೆರಡು ಸಾಲುಗಳ ನುಡಿಗಳೇ ಬಳಕೆಯಾಗಿವೆ. ಸೂರ್ಯನ ಸಾರಥಿಯಾಗಿರುವ ಅರುಣನನ್ನು ನೇರವಾಗಿ ಸಂಬೋಧಿಸುವ ಈ ಕವಿತೆ, ಅರುಣೋದಯದೊಂದಿಗೆ ಸಮಸ್ತ ಜಗತ್ತಿನಲ್ಲಾಗುವ ಪ್ರಾಣ ಸಂಚಾರದ ವೈವಿಧ್ಯಗಳನ್ನು ಸ್ಪರ್ಶಿಸುತ್ತಾ ಸರ್ವೋದಯಕ್ಕಾಗಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸುವ ಸಂದೇಶದೊಂದಿಗೆ ಸಂಪನ್ನವಾಗುತ್ತದೆ. ಇದರ ಮೂಲಶಕ್ತಿಯೇ ಸಶಕ್ತವಾದ ವರ್ಣನಾತ್ಮಕತೆ. ಉದಾಹರಣೆಗೆ ಈ ಕೆಳಗಿನ ಸಾಲುಗಳನ್ನು ಪರಿಗಣಿಸಬಹುದು.

“ತಿಳಿ ನೀರಲಿ ಮರಿ ಮೀಂಗಳು ಹಿರಿಯರ
ಬಳಿಯಲಿ ಚಲಿಸದೆ ನಿಂದವೊಲುದಯದ
ಕಿರುತಾರಗೆ ಕಣ್ಮಿಸುಕದೆ ನಭದಲಿ
ಹಿರಿತಾರೆಗಳೊಡನಿರುತಿರೆ, ನೀನು
ಹುಡುಗನ ತೆರದಿ
ಬೆರಲ ತೋರಲವು
ಹರಿದೋಡುವವು
ಸಡಗರದಿಂದೆ”

ಇಂಥ ರಸಸ್ಥಾನಗಳು, ರಮ್ಯ ಪರಿಕಲ್ಪನೆಗಳು ಈ ಸಂಕಲನದಲ್ಲಿ ಧಾರಾಳವಾಗಿ ಬಂದಿವೆ.

ಮಾಸ್ತಿಯವರ ಕಥನಕವನಗಳ ಬಗೆಗೆ ಮಾತನಾಡುವಾಗ ಈಗಾಗಲೇ ಹೆಸರಿಸಿದ ಅವುಗಳ ಛಂದೋರೂಪವನ್ನು ಪ್ರಸ್ತಾಪಿಸಬೇಕು. ತಾವು ಬಳಸಿದ ಛಂದಸ್ಸನ್ನು ಮಾಸ್ತಿಯವರು ‘ಬಿಡಿವೃತ್ತ’ವೆಂದು ಕರೆದಿದ್ದಾರೆ. ಇದಕ್ಕೆ ‘ಝಂಪೆರಗಳೆ’ಯೆನ್ನುವ ಹೆಸರು ಸಮಂಜಸವೆಂದು ಗೋವಿಂದ ಪೈಯವರು ಅಭಿಪ್ರಾಯಪಟ್ಟಿದ್ದರು. ಆದರೆ, ‘ಸರಳ ರಗಳೆ’ಯೆನ್ನುವ ಹೆಸರೇ ಪ್ರಶಸ್ತವೆಂದು ಬಹುಮಂದಿ ವಿದ್ವಾಂಸರು ಸಾಧಿಸಿದುದರಿಂದ ಆ ಹೆಸರೇ ಈಗ ಬಳಕೆಯಲ್ಲಿದೆ. ಮಾಸ್ತಿಯವರು ಪರಿಚಯಿಸಿದ ಈ ಛಂದೋರೂಪದ ಬಗೆಗೆ ರಂ.ಶ್ರೀ. ಮುಗಳಿಯವರು, “ಶ್ರೀನಿವಾಸರ ಕೈಯಲ್ಲಿ ಸರಳ ರಗಳೆ ಸರಳವಾಯಿತು. ರಗಳೆಯಾಗಲಿಲ್ಲ, ರಸದೂಟ ವಾಯಿತು” ಎಂದು ಬರೆಯುತ್ತಾರೆ.

ಮಾಸ್ತಿಯವರು ಬಳಸಿದ ರೂಪ ಕನ್ನಡಕ್ಕೆ ತೀರಾ ಹೆಸತಾದುದಾದರೂ ಅದು ಪ್ರಯೋಗಾತ್ಮಕವೆನಿಸಿದೆ “ಆಗಲೆ ಸಿದ್ದಿಯನ್ನು ಪಡೆದ ರೂಪವಾಗಿದೆ. ಅದು ಹಸಿಹಸಿಯಾದ ಪ್ರಯೋಗ ರೂಪದಲ್ಲಿಲ್ಲ. ಪಕ್ವವಾಗಿ ರಸದೂಟವಾಗಿದೆ” ಎನ್ನುವ ಹಲವಾರು ಕಾರಣಗಳಿ ಗಾಗಿ, ಈ ಮಾತು ಹುರುಳಿನಿಂದ ಕೂಡಿದೆಯೆನಿಸುತ್ತದೆ.

ಎಲ್ಲೆಡೆಯು ಬೆಳಕು ಮಧ್ಯಾಹ್ನ ತುಂಬಿಹುದು, ಸಂತಸದ ದಿನ
ಹುಡುಗ ಹುಡುಗಿಯರು ಎಲೆ ಅಡಕೆ ಅಗಿದಿರುವರು
ಹುಡುಗನಿಗೇ ಸರಸದಲಿ ಆಸೆ, ಈ ನಾದಿನಿಯೊ
ಸರಸದಲಿ ಪಂತವನು ಹೂಡಿ ಮಾತಾಡುವಳು
ಪಂತವನು ಹೂಡಿ ಹರೆಯದ ಹುಡುಗಿ ನುಡಿಸುತಿರೆ
ಪಂತವಾಡದ ಜವ್ವನಿಗನುಂಟೆ?

ಎನ್ನುವ “ಮದಲಿಂಗನ ಕಣಿವೆಯ ಕುರಿತಾದ ಸಾಲುಗಳು ಕವಿತೆಯ ಓಘ, ಆಡುಮಾತಿನ ವಿನ್ಯಾಸ, ಹರಿದು, ನಿಂತು ಬಳುಕಿ ಸಾಗುವ ಲಯ ವಿನ್ಯಾಸಗಳು ಮುಂತಾದವುಗಳಿಗೊಂದು ನಿದರ್ಶನ ಮಾತ್ರ.

ಕೃತಕತೆಯ ಸೋಂಕಿಲ್ಲದ, ಆಪ್ತ ವಲಯದ ನಿರ್ಮಾಣ ಕೌಶಲ ಮಾಸ್ತಿಯವರ ಅಭಿವ್ಯಕ್ತಿ ಕ್ರಮದ ಪ್ರಧಾನ ಲಕ್ಷಣಗಳಲ್ಲಿ ಒಂದಾಗಿದೆ. ಈ ಕವನವೂ ಅದಕ್ಕೆ ಹೊರತಾಗಿಲ್ಲ. ಶಬ್ದ ಭಾರದಿಂದ ಬಳಲದೆ ಸೌಂದರ್ಯವನ್ನು ಸಾಕಾರಗೊಳಿಸುವ ಅವರ ಪರಿಗೆ ಇದೊಂದು ಉದಾಹರಣೆಯನ್ನು ಗಮನಿಸಬಹುದು :

ಹುಡುಗಿ ಬಹು ಚೆಲುವೆ
ತುಟಿಯ ರಂಗು, ಮೂಗು ಮೂಗುತಿ ಬಾವಲಿಯ
ಕಿವಿ ಹಣೆಯ ಕುಂಕುಮದ ಬಟ್ಟು ಭಾರದ ಹೆರಳು
ಹೆರಳಿನಲಿ ತೊಟ್ಟ ಮಲ್ಲಿಗೆ ಹೂವು ಕೊಪ್ಪು ಇವ
ಕಂಡು ಮನಸೋತವನು

ಮಾಸ್ತಿಯವರು ಬದುಕಿನಂತೆ ಕಾವ್ಯದಲ್ಲೂ ಸಾವಯವ ಸಮಗ್ರೀಕರಣ – ರುಚಿಶುದ್ದಿ ಗಳನ್ನು ಕಾಯ್ದುಕೊಂಡ ರೀತಿಯೂ ಅನುಪಮವಾದುದೇ ಆಗಿದೆ.

ಮಾಸ್ತಿಯವರ ಕಥನಕವನಗಳ ಬಗೆಗೆ ಕೆಲವು ತೀವ್ರವಾದ ಆಕ್ಷೇಪಗಳೂ ಇವೆ. “ಅ ವರ ಪದ್ಯಗಳ ಅನೇಕ ಸಾಲುಗಳನ್ನು ಒಂದು ಪಕ್ಷದಲ್ಲೊಂದು ಇಟ್ಟಲ್ಲಿ ಸಾಮಾನ್ಯವಾದ ಗದ್ಯವೇ ಆಗುತ್ತದೆ. ಶ್ರೀನಿವಾಸ ನವರಾತ್ರಿ ಮೊದಲಾದ ಕಥನ ಕವನ ಸಂಗ್ರಹಗಳೂ ಈ ಕುಂದುಕೊರತೆಗಳಿಂದ ತಪ್ಪಿಸಿಕೊಂಡಿಲ್ಲ” (ದೇಜಗೌ) ಎನ್ನುವುದು ಅವುಗಳಲ್ಲಿ ಒಂದು.

ಮಾಸ್ತಿಯವರ ಸಶಕ್ತವಾದ ಅಭಿವ್ಯಕ್ತಿ ಮಾಧ್ಯಮ ಗದ್ಯವೆನ್ನುವುದರಲ್ಲಿ ಎರಡು ಅಭಿಪ್ರಾಯಗಳಿರಲಾರವು. ಈ ಗದ್ಯದ ಗಂಧ ಅವರ ಕಾವ್ಯಕ್ಕೆ ಪೂರಕವಾಗಿ ಅಲ್ಲಲ್ಲಿ ಬಂದಿರುವುದೂ ಸತ್ಯವೇ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮಿತಿಯ ಅದನ್ನು ಮಿತಿಯೆನ್ನಬಹುದಾದರೆ ನಡುವೆಯೂ ಮಾಸ್ತಿಯವರು ಜತನದಿಂದ ಕಾಯ್ದುಕೊಂಡ ಕಾವ್ಯದ ಹರಿವು, ಸುಲಲಿತವಾಗಿ ಸಾಗುವ, ಕೊಂಡಿ ಕೊಂಡಿಗಳಾಗಿ ಬೆಳೆಯುವ ಕಥಾನಕದ ಮೇಲಿನ ನಿಯಂತ್ರಣಗಳು ಗಣನೀಯವೆನಿಸುತ್ತವೆ. ಇದು ಮಾಸ್ತಿಯವರಷ್ಟು ಸಹಜವಾಗಿ ಪ್ರಾಯಶಃ ಇತರ ಹಿರಿಯ ಕವಿಗಳಿಗೆ ಸಿದ್ದಿಸಿಲ್ಲ. ವ್ಯಕ್ತಿಪೂಜೆಯತ್ತ ಜರುಗುವ ಎಲ್ಲ ಅಪಾಯಗಳಿದ್ದ ಸಂದರ್ಭಗಳಲ್ಲೂ ಅವರು ತಮ್ಮ ಪಾತ್ರಗಳನ್ನು ಜನಸಾಮಾನ್ಯರಿಂದ ಪ್ರತ್ಯೇಕಿಸಿಲ್ಲ. ಅತಿ ಸಾಮಾನ್ಯತೆಯೇ ಅಸಾಮಾನ್ಯತೆಯಾಗುವ ವಿವಾದ ಇಲ್ಲಿ ತೀರಾ ವಿಶಿಷ್ಟವಾದ ರೀತಿಯಲ್ಲಿ ನಡೆದಿದೆ. ಹೀಗಾಗಿ ಗೋಕಾಕರು ಹೇಳುವ ಈ ಶೈಲಿಯ ಎರಡು ಪ್ರಮುಖ ಗುಣಗಳಾದ ‘ಮನೋಹರವಾದ ನಿರೂಪಣ ಚಾತುರ್ಯ’ ಹಾಗೂ ‘ಅವ್ಯಾಹತವಾಗಿ ಕಥೆಯನ್ನು ನಿರೂಪಿ ಸುವ ರೀತಿ’ಗಳೆರಡೂ ಇಲ್ಲಿ ಎಡೆಪಡೆದಿವೆಯೆನ್ನಲು ಅನುಮಾನಿಸಬೇಕಾಗಿಲ್ಲ.

ಕನ್ನಡ ಕಥನ ಕವನಗಳಿಗೆ ಸಾಕಷ್ಟು ಹಳೆಯ ಇತಿಹಾಸವಿದೆ. ಹರಿಹರನ ರಗಳೆಗಳಾಗಲಿ, ರಾಘವಾಂಕ, ಕುಮಾರವ್ಯಾಸರಂಥವರ ಕೃತಿಗಳಾಗಲಿ, ಈ ಕಲೆಯನ್ನು ಬಳಸಿಕೊಂಡಿವೆ. ಇಲ್ಲೆಲ್ಲ ಧರ್ಮ ಪ್ರಚಾರ, ನೈತಿಕ ಮೌಲ್ಯ ಪ್ರತಿಪಾದನೆ, ಒಳಿತು ಕೆಡುಕುಗಳ ಸಂಘರ್ಷಗಳೇ ಪ್ರಧಾನ ಲಕ್ಷ್ಯಗಳಾಗಿವೆ. ಕನ್ನಡ ಜಾನಪದ ಜಗತ್ತಂತೂ ಸರಿಯೇ ಸರಿ. ಆಧುನಿಕ ಸಂದರ್ಭ ದಲ್ಲಿ ಈ ಸಾಹಿತ್ಯೇತರ ಆಸಕ್ತಿಗಳನ್ನು ಬದಿಗೆ ಸರಿಸಿದ ಕಲಾತ್ಮಕ ನಿರೂಪಣೆಗಳು ಮುನ್ನೆಲೆಗೆ ಬಂದುದನ್ನು ಕಾಣುತ್ತೇವೆ. ಈ ಕಥನ ಕವನವನ್ನು ‘A narrative in Verse’   ‘ಪದ್ಯರೂಪ ದಲ್ಲಿರುವ ಕಥೆ’ ಎಂಬುದಾಗಿ ವ್ಯಾಖ್ಯಾನಿಸುತ್ತಾರೆ.

“ಹೊಸಗನ್ನಡದಲ್ಲಿ ಭಾವಗೀತೆಯ ಬೆಳೆ ಹುಲುಸಾಗಿದ್ದರೂ ಕಥನ ಕವಿತೆ ಮೊದಲಿನಿಂದ ಅಲ್ಲಲ್ಲಿ ಬೆಳೆದಿದೆ. ಕೆಲವು ಕಡೆ ಎತ್ತರವಾಗಿ ಮುಗಿಲು ಮುಟ್ಟಿದೆ” ಎನ್ನುವ ನಿರೀಕ್ಷಣೆಯ ಹಿನ್ನೆಲೆಯಲ್ಲಿ ಮಾಸ್ತಿಯವರ ಕಥನಕವನಗಳು ನಮಗೆ ಪ್ರಸ್ತುತವಾಗುತ್ತವೆ. ವಾಸ್ತವವಾಗಿ, ‘ಎತ್ತರವಾಗಿ ಮುಗಿಲು ಮುಟ್ಟಿದ” ಹಲವು ಕಥನ ಕವನಗಳಲ್ಲಿ ಅವರವೂ ಸೇರುತ್ತವೆ. ಸ್ವಭಾವತಃ ಕತೆಗಾರರಾದ ಮಾಸ್ತಿಯವರ ಪ್ರತಿಭೆಯ ಆ ಮುಖವೇ ಇವುಗಳಲ್ಲೂ ಕ್ರಿಯಾ ಶೀಲವಾಗಿವೆ. ಕನ್ನಡದಲ್ಲಿ ಅತಿ ಹೆಚ್ಚು ಕಥನಕವನಗಳನ್ನು ರಚಿಸಿದ ಖ್ಯಾತಿಯೂ ಮಾಸ್ತಿ ಯವರಿಗಿದೆ.

ಮಾಸ್ತಿಯವರು ಈ ಸಾಹಿತ್ಯ ಪ್ರಕಾರಕ್ಕೆ ಕೊಟ್ಟಿರುವ ಮಹತ್ವದ ಕವನಗಳು ‘ನವರಾತ್ರಿ’ಯಲ್ಲಿ ಸಂಕಲಿತವಾಗಿವೆ. ಮಾಸ್ತಿಯವರ ಕಥನ ಕೌಶಲಕ್ಕೆ ಒಂದು ಒಳ್ಳೆಯ ನಿದರ್ಶನ ‘ಮದಲಿಂಗನ ಕಣಿವೆ’. ಈ ಕಥೆಯಲ್ಲಿ ಅನಗತ್ಯ ವರ್ಣನೆಗಳಿಲ್ಲ. ನಿತ್ಯದ ಬದುಕಿನಲ್ಲಿ ವಿರಳವಾಗಿರದ ಧಾರುಣತೆ ಇಲ್ಲಿ ಒಂದು ಸಂಕೇತವಾಗಿ ಬಂದಿದೆ.

ಹರೆಯದ ಕಟ್ಟಾಳು ಮದಲಿಂಗ, ಅವನ ಹೆಂಡತಿ, ನಾದಿನಿ, ಅತ್ತೆಯರು ಈ ಕವನದ ಪಾತ್ರಗಳು. ಹೊಸತಾಗಿ ಮದುವೆಯಾದ ಮದಲಿಂಗನಿಗೆ ನಾದಿನಿಯನ್ನೂ ವರಿಸುವ ಬಯಕೆ. ಕಾಲದ ನಿಯಮಗಳಿಗನುಸಾರವಾಗಿ, ಈ ಹೊಸ ಸಂಬಂಧಕ್ಕೆ ಯಾರ ವಿರೋಧವೂ ಇಲ್ಲ. ಈ ಹುಡುಗಿಯರ ತಾಯಿ, ಕೇವಲ ವಿನೋದಕ್ಕಾಗಿ.

“ನೀನಿವಳನೂ ಮದುವೆಯಾಗಲೆಳಸುವುದಾಗೆ
ಹಿಂದು ಹಿಂದಕ್ಕೆ ನಡೆದು ಹತ್ತಿ ಗುಡ್ಡವನೇರಿ
ಆ ಕಡೆಗೆ ಇಳಿದು ದಾರಿಯ ಸೇರೆ ಒಪ್ಪುವೆನು
ಏರಿ ಇಳಿಯುವೆಯ?”

ಎನ್ನುವ ಪಂಥಾಹ್ವಾನವನ್ನೊಡ್ಡುವುದೇ ದುರಂತದ ಮೂಲವಾಗುತ್ತದೆ. ಹರೆಯದ ಏರು ಹುಮ್ಮಸ್ಸಿಗೆ ಉರಿಯುತ್ತಿರುವ ಬಿಸಿಲಾಗಲಿ, ಕಡಿದಾದ ಬೆಟ್ಟದ ಮೈಯಾಗಲಿ ತೊಡಕಾಗುವುದಿಲ್ಲ. ಅತ್ತೆಯ ವಿರೋಧವನ್ನೂ ಕಡೆಗಣಿಸಿ, ಆ ಸಾಹಸಕ್ಕೆ ಕೈ ಹಾಕುತ್ತಾನೆ. ಮದಲಿಂಗ, ‘ನೀರನ್ನಿಟ್ಟುಕೊಂಡು ಕಾದಿರುವೆ’ ಎನ್ನುವ ಆ ದೇಶವನ್ನು ನಾದಿನಿಗೆ ಕೊಟ್ಟು ಹಿಂದು ಮುಂದಾಗಿ ಹತ್ತಲು ಮಾಡುವ ಪ್ರಯತ್ನವೇ ಕ್ರಮ ವಿಪರ್ಯಕ್ಕೆ ಪ್ರತೀಕವಾಗುತ್ತದೆ. ಈ ಒಟ್ಟು ಪ್ರಸಂಗದಲ್ಲಿರುವ ಧ್ವನಿಶಕ್ತಿಯನ್ನು ಗಮನಿಸಬೇಕು. ನಿಯತಿಗೆ ವಿರುದ್ಧವಾದ ಬಯಕೆ – ಕ್ರಮವನ್ನು ವಿರೋಧಿಸುವ ಪರಿಕ್ರಮ – ಅಸ್ತಿತ್ವಕ್ಕೆ ಅನಿವಾರ್ಯವಾದ ಜೀವಜಲದ ಜೋಪಾಸನೆಗಳು ವಿಶಿಷ್ಟವಾದ ನೆಯ್ಗೆಯೊಂದರ ಮೂಲಕ ಪರಸ್ಪರ ಜಿಗುಟಾದ ಸಂಬಂಧ ವನ್ನು ಸ್ಥಾಪಿಸಿಕೊಳ್ಳುತ್ತವೆ. ಮದಲಿಂಗನನ್ನು ನಿರೀಕ್ಷಿಸುತ್ತಿದ್ದ ಎಲ್ಲರನ್ನೂ ದಿಙ್ಮೂಢ ಗೊಳಿಸಿದ್ದು, ನಾದಿನಿ ಆತುರ – ಆತಂಕಗಳಲ್ಲಿ ಕೈ ಜಾರಿ ಚೆಲ್ಲಗೊಟ್ಟ ತಂಬಿಗೆಯ ನೀರು, ಒಂದು ಹನಿಯೂ ಉಳಿಯದಂತೆ ಸೋರಿ ಹೋದ ನೀರು ಉಳಿಸಿದ ಖಾಲಿತನಗಳೆಲ್ಲ ಸೃಷ್ಟಿಸುವ ದುರಂತದ ಲೋಕವನ್ನು ಮಾಸ್ತಿಯವರು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ. ಮದಲಿಂಗನು ತೀರಿಕೊಳ್ಳುವುದು, ತೀರಿಸಿಕೊಳ್ಳಲಾರದ ದಾಹದೊಂದಿಗೆ ಎನ್ನುವುದನ್ನು ನಿರೂಪಿಸುವ ಸಾಲುಗಳನ್ನು ನೋಡಿ.

“ಬೆಳೆಯುವ ಪೈರು
ಭಾದ್ರಪದದೊಳೆ ಸುಟ್ಟು ಹೋಯಿತು. ಮದಲಿಂಗ
ಆ ಕಣಿವೆ ಗಂಡು ಹೆಸರನು ಕೊಟ್ಟ. ಆ ದಿನದ
ಖೇದವನು ನೋಡಿ ಸಂಕಟಪಟ್ಟ ಕಲ್ಲುಗಳು
ಈಗಳೂ ಮರುಗುವವೊಲಿದೆ ಇಲ್ಲಿ ಮದಲಿಂಗ
ಈಗಳೂ ದಾಹದಲಿ ಅತಿಯುತಿಹನೆಂದು ಜನ
ಆಡಿಕೊಳ್ಳುವರು”

ನೋವಿನ ಸಾತತ್ಯವನ್ನು  ಈ ಕವನ ಸಾಂಕೇತಿಸುತ್ತದೆ.

‘ನವರಾತ್ರಿ’ಯ ಕಥನಕವನಗಳಿಗೆ ಆಂಗ್ಲ ಕವಿ ಛಾಸರನ ಕ್ಯಾಂಟರ್ಬರಿ ಕತೆಗಳು (Chauser’s Canturbury Tales) “ಸ್ಫೂರ್ತಿ ಮತ್ತು ರೂಪದರ್ಶಿ’ ಎನ್ನುವ ಮಾತಿದೆ. ಈ ಬಗೆಗೆ ಸ್ವತಃ ಮಾಸ್ತಿಯವರೇ ವಾಲ್ಮೀಕಿ, ಕುಮಾರವ್ಯಾಸರ ಸಾಲಿನಲ್ಲಿಯೇ ಛಾಸರನನ್ನೂ ಪರಿಗಣಿಸುತ್ತಾ,

“ಆಂಗ್ಲ ದೇಶದಲಿ
ಹೊಸ ಕಾವ್ಯವನು ನಟ್ಟ ಧೀರ ಕ್ಯಾಂಟರ್ ಬರಿಯ
ಕಥನ ಮಂಜರಿಯ ಜೀವನವಿಜ್ಞ ನಗೆಗಾರ
ಛಾಸರ್ ಕವಿಪ್ರವರ, ಕಥನ ಕಲೆ ಇಂತೆಂದು
ಎನಗೆ ತೋರಿದ ಅಣ್ಣ ಅಕ್ಕದಿರು”

ಎಂದಿದ್ದಾರೆ. ಛಾಸರ್‌ನ ರೀತಿ, ನಿರೂಪಣೆಯ ಹಂದರದ ಮೇಲೆ ಕನ್ನಡದ ಸಂದರ್ಭಕ್ಕೆ ಹೊಂದುವಂಥ ಕಥಾಮಾಲಿಕೆಗಳನ್ನು ಮಾಸ್ತಿಯವರು ಹಬ್ಬಿಸಿದ್ದಾರೆ. ಇವುಗಳು ಪೂರ್ವನಿಶ್ಚಿತ ವಿನ್ಯಾಸ(Paltern)ವನ್ನು ಅನುಸರಿಸುತ್ತವೆ. ಮೊದಲು ಪೀಠಿಕಾ ಕವನ, ಅನಂತರ ಒಬ್ಬೊಬ್ಬರು ಒಂದೊಂದು ಕಥೆಯನ್ನು ಹೇಳುತ್ತಾ ಹೋಗುವುದು ಈ ವಿನ್ಯಾಸದ ವಿಧಾನ. ಇದರ ಮೇಲೂ ಛಾಸರನ ಪ್ರಭಾವವನ್ನು ವಿದ್ವಾಂಸರು ಗುರುತಿಸಿದ್ದಾರೆ.

ಮಾಸ್ತಿಯವರು ದೇಶೀಯ ನೆಲೆಗಳ ಅನ್ವೇಷಣೆಯನ್ನು ಅತ್ಯಂತ ತೀವ್ರವಾಗಿ ನಡೆಸಿದವರಾದುದರಿಂದ, ‘ನವರಾತ್ರಿ’ಯ ಕವನಗಳಿಗೂ ಅದೇ ಆವರಣವನ್ನು ಕಲ್ಪಿಸಿ ಕೊಂಡರು. ತಮಗೆ ತೀರಾ ಪರಿಚಿತವಾದ, ತುಂಬ ಆಪ್ತವಾದ ಮೈಸೂರಿನ  ಪರಿಸರವನ್ನು ಅವರು ಆಯ್ದುಕೊಂಡರು. ನವರಾತ್ರಿಯ ಉತ್ಸವಕ್ಕೆ ಹೆಸರಾದ ಮೈಸೂರಿನಲ್ಲಿ ಸೇರಿದ ಗೆಳೆಯರೆಲ್ಲರೂ ಒಂದೊಂದು ಕಥಾನಕವನ್ನು ನಿರೂಪಿಸುತ್ತಾರೆ. ಒಂದರ್ಥದಲ್ಲಿ ಜೀವಂತ ಮಾದರಿಗಳನ್ನು ಕಲಾತ್ಮಕವಾಗಿ ಬಳಸಿಕೊಳ್ಳುವ ರೀತಿಗೂ ಈ ಕ್ರಮವು ಉದಾಹರಣೆ ಯಾಗುತ್ತದೆ. ಹೀಗೆ,

“ನೆರೆದ ಮಿತ್ರರ ಕಥೆಗಳನು ಅವರ ಮಾತಿನಲೆ
ಬರೆಯುವುದು ನನ್ನ ಹೊಣೆಯೆಂದು ನಿಶ್ಚಯ ಆಗಿ
ಅದೆ ಕೆಲಸ ಈಗ ನಡೆಯುತಿಹುದು”

ಎಂದು ಮಾಸ್ತಿಯವರು ನಿರೂಪಕನ ಪಾತ್ರದ ಹೊಣೆಯನ್ನು ನಿಗದಿಪಡಿಸುತ್ತಾರೆ. “ಯಾರೋ ಒಂದು ಕಥೆ ಹೇಳಿ, ಉಳಿದವರು ಕೇಳುವ “ತಂತ್ರ ಈ ಕವನಗಳಲ್ಲಿ ಯಶಸ್ವಿಯಾಗಿ ಬಳಕೆ ಯಾಗಿದೆ.

ಇಲ್ಲಿ ಒಂದು ಮಾತನ್ನು ಸೂಚಿಸಿ ಮುಂದುವರೆಯುವುದು ಉಚಿತವೆನಿಸುತ್ತದೆ. ಮಾಸ್ತಿಯವರ ಮಾತುಗಳನ್ನೇ ಉದ್ಧರಿಸುವುದಾದರೆ, “ಕಥೆ ಹೇಳಿದವರವು, ಟೀಕೆ ಮಾಡಿದವರವು ಎಂದು ಈ ಪ್ರಸ್ತಾವನಾ ಭಾಗ (Prdogue)ದಲ್ಲಿ ವರ್ಣಿತವಾಗಿರುವ ವ್ಯಕ್ತಿ ಚಿತ್ರಗಳು ಬಹುಪಾಲು ನನ್ನ ಜೊತೆಯ, ನನಗೆ ಹಿರಿಯರಾದವರ, ಕನ್ನಡ ಸೇವಕರನೇಕರ ಶೀಲವನ್ನು ಆಧರಿಸಿ ಬರೆದಿರುವ ಕಲ್ಪಿತ ಚಿತ್ರಗಳು”. ಹಾಗಾಗಿ, ಈ ವ್ಯಕ್ತಿ ವರ್ಣನೆಗಳಲ್ಲಿ ಸೂಕ್ಷ್ಮವಾದ ಏಕತಾನತೆ ಕಂಡು ಬರುತ್ತದೆ. ಆದರೆ ಅವುಗಳನ್ನು ಒಂದರೊಡನೊಂದು ಸೇರಿಸಿ ನೋಡಿದಾಗ, ಮಧ್ಯಮ ವರ್ಗದ ಜನರ ಜೀವನೋದ್ದೇಶ ಹಾಗೂ ಲಕ್ಷ್ಯಗಳಲ್ಲಿ ಸಮಗ್ರತ್ವ ಕಲ್ಪನೆಯಾಗುತ್ತದೆ ಎನ್ನುವುದೂ ಅವು ಸತ್ಯ. ಈ ಹಿನ್ನೆಲೆಯಲ್ಲಿ, ‘ನವರಾತ್ರಿ’ ಸಂಕಲನದ ಕವನಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಒಪ್ಪಿಕೊಳ್ಳುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು.

೧. ಇಲ್ಲಿಯ ವ್ಯಕ್ತಿ ಚಿತ್ರಗಳು ಆಯಾ ವ್ಯಕ್ತಿಯ ವೈಶಿಷ್ಟ್ಯ – ವೈಲಕ್ಷಣ್ಯಗಳಿಗೆ ಸೀಮಿತವಾಗಿವೆಯೇ ಹೊರತಾಗಿ ವಿಸ್ತಾರವಾದ ವರ್ಣನೆಗೆ ಹೊರಡುವುದಿಲ್ಲ. ಹಾಗಾಗಿ, ಇವನ್ನ ‘ವ್ಯಕ್ತಿತ್ವದ ಸೂಚನೆ’ (Index) ಎನ್ನುವುದೇ ಉಚಿತವಾಗಿದೆ (ಎಂದರೆ, ಬಾಹ್ಯ ವ್ಯಕ್ತಿತ್ವ ಇವುಗಳ ವ್ಯಾಪ್ತಿಗೆ ಬರುವುದಿಲ್ಲ).

೨. ವ್ಯಕ್ತಿಗಳಲ್ಲಿ ಹೆಚ್ಚಿನವರು ಸಮಾನವೃತ್ತಿ, ಮನೋವೃತ್ತಿ, ಆಸಕ್ತಿ-ವಿರಕ್ತಿಗಳುಳ್ಳವ ರಾಗಿದ್ದಾರೆ.

೩. ಮಾಸ್ತಿಯವರ ರುಚಿ ಶುದ್ದಿಯ ಪ್ರತೀಕವಾಗಿ ಇಲ್ಲಿಯ ವ್ಯಕ್ತಿ ಚಿತ್ರಗಳಿವೆ. ಸೌಮ್ಯ, ಸಹೃದಯ, ಸುಸಂಸ್ಕೃತ ವ್ಯಕ್ತಿಗಳು ಮಾತ್ರ ಮಾಸ್ತಿಯವರ ಆಯ್ಕೆ ಪಟ್ಟಿಯಲ್ಲಿದ್ದಾರೆ. ಹಾಗಾಗಿ, ಸಮಾಜದ ವಿಕೃತಿ ತೆರೆಮರೆಯಲ್ಲಿಯೇ ಉಳಿದಿದೆ.

೪. ಈ ಕವನಗಳ ಉದ್ದಕ್ಕೂ ‘ಮಾಸ್ತಿಯವರು ಕಥೆಯನ್ನು ಹೇಳುತ್ತಿದ್ದಾರೆ’ ಎನ್ನುವ ಭಾವದಿಂದ ಬಿಡಿಸಿಕೊಳ್ಳುವುದು ಓದುಗರಿಗೆ ಸಾಧ್ಯವಾಗುವುದಿಲ್ಲ. ಈ ಬಗೆಗೆ ಕೆಲವು ಆಕ್ಷೇಪಗಳೂ ಬಂದದ್ದಿದೆ :

* (ಕವಿಯು ಮೂರನೆಯ ಒಬ್ಬ ವ್ಯಕ್ತಿಯನ್ನು ಸೃಷ್ಟಿಸಿ, ಅವನಿಂದ ಕಥೆ ಹೇಳಿಸುವಾಗ ಬಹಳ ಎಚ್ಚರಿಕೆಯಿಂದ, ವಸ್ತುನಿಷ್ಠವಾಗಿ, ತನ್ನ ಮೈಯನ್ನು ಬಿಟ್ಟು ಜಿಗಿದು, ಕಲ್ಪಿತ ವೈಯಕ್ತಿಯ ಮನಸ್ಸನ್ನು ಪ್ರವೇಶಿ ಅವನಿಂದ ಹೇಳಿಸಬೇಕು. ಆಗ ಸಹಜ ಸಂಭಾಷಣೆಗಳು ಬರುತ್ತವೆ.

* ಕತೆಗಾರಿಕೆಯ ಜೊತೆಗೆ ಕವಿಯು ಕತೆಯನ್ನು ಹೇಳುವ ವ್ಯಕ್ತಿಯ ಮನದ ಆಗು ಹೋಗುಗಳನ್ನೂ, ಆ ವ್ಯಕ್ತಿಯ ದೃಷ್ಟಿಯಿಂದ ಕತೆ ಹೇಳುವುದನ್ನೂ ಗಮನಿಸಬೇಕು. ಆಗಲೇ ಕೃತಿ ಪರಿಪೂರ್ಣವಾಗುವುದು.

* ……. ಮಾಸ್ತಿಯವರಲ್ಲಿ ಇದು ಬಹುಪಾಲು ಕಾಣುವುದಿಲ್ಲ. ಕಥೆಗಳನ್ನು ಹೇಳಿದ ವ್ಯಕ್ತಿಗಿಂತಲೂ ಮಾಸ್ತಿಯವರೇ ಕಥೆ ಹೇಳಿದ್ದಾರೆಂಬ ಅರಿವು ಓದುಗನಲ್ಲಿ ಮೊದಲಿನಿಂದ ಕೊನೆಯತನಕ ಇರುತ್ತದೆ. ಇದೊಂದು ಕುಂದು”). ಆದರೆ, ಇದು ತಂತ್ರದ ಮಿತಿಯೇ ಕಥೆಯ ಓಟ, ಓಘ, ಸತ್ವಗಳಿಗೆ ಸಂಬಂಧಿಸಿದುದಲ್ಲ. ಮಾಸ್ತಿಯವರ ಶಕ್ತಿಯಿರುವುದೇ ಅವರ ಕಥೆಗಾರಿಕೆಯಲ್ಲಿ ಪಾತ್ರ ನಿರ್ಮಾಣ ಕೌಶಲಲ್ಲಿ.

೫. ನವಿರು-ಸೂಕ್ಷ್ಮ ಹಾಸ್ಯವಿದ್ದರೂಅದರಲ್ಲಿ ವಿಡಂಬನೆಯ ಮೊನಚು ಕಾಣುವುದಿಲ್ಲ. ವಿ.ಸೀ. ಅವರು ಗುರುತಿಸಿದಂತೆ, “ಕೃತಿಯಲ್ಲಿ ಮೃದುವಾದ ನಗೆಯನ್ನು ತಂದು ಸೇರಿಸುವುದು ಕಷ್ಟ. ಆ ಕಷ್ಟವನ್ನು ಅವರು ಕಾಣರೆಂಬಂತೆ ನಗೆಯ ವಿಲಾಸವನ್ನು ನೀಲಗಾರ ಮಾದ, ಆಕಾಶ ಗಂಗೆಯಲ್ಲಿ ನಡೆದ ಒಂದು ಘಟನೆ. ಮುಂತಾದೆಡೆಗಳಲ್ಲಿ ಬಹು ಚೆನ್ನಾಗಿ ತುಂಬಿದ್ದಾರೆ. …..‘ಸಮಾಧಿಯ ಸತ್ವ’ ನವಿರು ಹಾಸ್ಯಕ್ಕೆ ಉತ್ತಮ ಉದಾಹರಣೆ”.

೬. ‘ಕಥನಕವನಗಳು ಓದುಗರ ಆಸಕ್ತಿಯನ್ನು ಕುದುರಿಸುವಂತಿರಬೇಕು’ ಎನ್ನುವ ಹೇಳಿಕೆಗೆ ಈ ಕವನಗಳು ಉತ್ತಮ ನಿದರ್ಶನಗಳಾಗಿವೆ. ಕಾವ್ಯ, ಭಾವಪ್ರಧಾನವಾದ ಸಾಹಿತ್ಯ ಪ್ರಕಾರವಾದುದರಿಂದ ಏರಿನ ಅತಿ ಭಾವುಕತೆಯಾಗಲಿ, ಬೀಳಿನ ಭಾವರಾಹಿತ್ಯವಾಗಲಿ ಅದರ ಸ್ವಾರಸ್ಯವನ್ನು ಕೆಡಿಸದಂತೆ ಕಾಯ್ದುಕೊಳ್ಳುವುದು ಅತಿ ಅಗತ್ಯ. ಈ ರೀತಿಯ ಸಾಮರಸ್ಯ ಇಲ್ಲಿ ಕಾಣುತ್ತದೆ. “ಕತೆ ಹೇಳುವ ಸಂದರ್ಭ ಬಂದಾಗಲೆಲ್ಲ ಆ ಕತೆಯ ಬಣ್ಣ ಬೆಳಗುವುದು. ಅವರ ಕಥನಕಾವ್ಯದಲ್ಲಿ ಒಂದು ವಿಶೇಷ ಜೀವಕಳೆ ಮೊದಲಿನಿಂದಲೂ ವಿಷಯವನ್ನು ಸುತ್ತಿಕೊಳ್ಳುವುದು. ಕಥೆಯ ಪರಿಣಾಮಕ್ಕೆ ಕ್ರಿಯೆಯನ್ನು ನಡೆಸುವುದು. ‘ಮದಲಿಂಗನ ಕಣಿವೆ’, ‘ರಾಮನವಮಿ’, ‘ಗೌಡರ ಮಲ್ಲಿ’, ‘ನವರಾತ್ರಿಯ ಕಥೆ’, ‘ಸೋಜಿಗದ ಹೊಳಲು’, ‘ಜೀನಿದ ಆರ್ಕ್’, ‘ಪ್ರಮದ್ವರೆ’ ಮುಂತಾದೆಡೆ ಬರುವ ಕವಿತೆಯ ಸೊಗಸೂ, ಕಲ್ಪನೆಯೂ ಅಸಾಧಾರಣವಾದವು”.

೭. ಅತಿ ಪ್ರೌಢವೂ ಗ್ರಾಮ್ಯವೂ ಅಲ್ಲದೆ ಮಧ್ಯಮ ಶೈಲಿ. ವರ್ಣನೆ ಕಥೆಯ ಓಟಕ್ಕೆ ಸಹಾಯಕವೇ ಹೊರತಾಗಿ ಸನ್ನಿವೇಶದ ರಸಗ್ರಹಣಕ್ಕೆ ತೊಡಕಾಗುವುದಿಲ್ಲ. ಲಕ್ಷ್ಯವನ್ನು ವಿಕೇಂದ್ರೀಕರಿಸುವುದೂ ಇಲ್ಲ. ಉದಾಹರಣೆಗೆ ‘ನಾಮಮಹಿಮೆ’ಯಲ್ಲಿ ಶ್ರೀರಾಮನು ಸೇತುವೆಯನ್ನು ನೋಡಲು ಬಂದ ಸಂದರ್ಭದ ವರ್ಣನೆಯನ್ನು ನೋಡಿ :

“ಆರ್ಯಾವರ್ತ
ತನ್ನ ತಾಯನು ಕದ್ದ ಲಂಕೇಶ್ವರನ ಸದೆದು
ದೇವಿಯನು ಬಿಡಿಸಿ ತಹೆನೆಂದು ನೀಡುತಲಿರುವ
ತೋಳು ಎಂಬಂತೆ ನಳಸೇತು ಮುನ್ನೀರಿನಲಿ
ದಿಟ್ಟವಾಗಿಹುದು ಕಂಡನು”

ಇಂಥ ಸಿದ್ದಿ ಸ್ಥಾನಗಳಿಗೆ ಮಾಸ್ತಿಯವರ  ಕಾವ್ಯದಲ್ಲಿ ಹೇರಳವಾದ ನಿದರ್ಶನಗಳು ಸಿಗುತ್ತವೆ.

೮. ಮಾಸ್ತಿಯವರ ಕಥನ ಕವನಗಳು ಸನ್ನಿವೇಶ ನಿರ್ಮಾಣದಲ್ಲಿ ದೃಷ್ಟಿಯಿಂದ ಮೇಲಿನ ಸ್ತರದಲ್ಲಿ ನಿಲ್ಲುತ್ತವೆ. ಸಾದೃಶ್ಯ-ವೈದೃಶ್ಯಗಳ ಮುಖಾಮುಖಿಯ ಸಂದರ್ಭಗಳನ್ನು ಅವರು ಸೃಷ್ಟಿಸುವ, ನಿಭಾಯಿಸುವ ರೀತಿಯೂ ಅನನ್ಯವಾದುದೇ. ಅತೀಂದ್ರಿಯ ಅನುಭವಗಳನ್ನು ಲಕ್ಷಿಸುವ, ಅಲೌಕಿಕ ಲೋಕದ ಕಲ್ಪನೆಯನ್ನು ನೀಡುವ ‘ಸೋಜಿಗದ ಹೊಳಲು’ ಕವನದ ಕೆಲವು ಭಾಗಗಳು ಹೀಗಿವೆ. ಮೃದು ಬೆರಳ ಸೋಕಿನ ಆನಂದಾನುಭೂತಿಯ ಮಧುರ ಕ್ಷಣಗಳೂ ನೆನಪೂ “ಅಭಿರಾಮತರ”ವೆನ್ನುತ್ತಾ ಅವರು

“ಹೇಳಲಾಗದ ಒಂದು ಆನಂದ. ಅತಿ ಬೆಳಕ
ಕಣ್ಣು ತಡೆಯದು. ತುಂಬ ಸೀಯನೀ ನಾಲಗೆ
ತಡೆಯಲಾರದು. ಮೈಯ್ಯ ಬಲಕೆಲ್ಲ ಮಿತಿ ಉಂಟು
ನಮ್ಮೊಡಲು ನಡೆವ ಈ ಲೋಕವನು ಮೀರಿರುವ
ಬೇರೊಂದು ಎತ್ತರದ ಬಾಳ ಸೋಕಿನ ಸುಖವ
ತಡೆಯಲಾರದೆ ಹೋಯಿತೆನ್ನ ಮೆಯ್, ಆ ಸುಖ
ಸುಖವಲ್ಲ ನೋವೆ ಎಂಬಂತೆ ಆಕ್ಷಣದಲ್ಲಿ
ಯಾತನೆಯ ಆಗಿ ಎನ್ನೊಡಲರಿವು ತಪ್ಪಿತು”

ಎನ್ನುತ್ತಾ ಸುಖ-ಯಾತನೆಗಳು ಸೇರುವ ಬಿಂದುವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿ ಸುತ್ತಾರೆ. ಬದುಕಿನ Contratಗಳಿಗೆ ವ್ಯಾಖ್ಯಾ ನೀಡುತ್ತಾರೆ. ಇದನ್ನು ಗಮನಿಸಿ ಟಿ.ಎಸ್. ವೆಂಕಣ್ಣಯ್ಯನವರು ಮನಸ್ಸಿನ ಭಾಷೆಗಳನ್ನು ವ್ಯಕ್ತಗೊಳಿಸುವದರಲ್ಲಿ ಭಾಷೆಗೆ ಒಂದು ಶಕ್ತಿಯಿದೆ; ಛಂದೋಬದ್ಧವಾದ ಭಾಷೆಗೂ ಒಂದು ಶಕ್ತಿಯಿದೆ ಎಂದಿದ್ದಾರೆ. “ಈ ಮಾತಿನ ಭಾಷೆ ಮತ್ತು ಛಂದೋಬದ್ಧವಾದ ಭಾಷೆ”ಗಳ ಹಿತಮಿತವಾದ ಮೇಳೈಸುವಿಕೆಯನ್ನು ಮಾಸ್ತಿಯವರ  ಕಥನಕವನಗಳಲ್ಲಿ ಗುರುತಿಸುತ್ತೇನೆ.

೯. ಮಾಸ್ತಿಯವರ ಕಥನಕವನಗಳಲ್ಲಿ ಗಾಢವಾದ, ಆಪ್ತವಾದ ಗದ್ಯದ ಗಂಧವಿದೆ. ‘ಇದು ಎಷ್ಟೂ ಬೆಳೆಯಬಹುದು’ ಎನ್ನುವ ಆಕ್ಷೇಪದ ಛಾಯೆಯಿರುವ ಅಭಿಪ್ರಾಯವೂ ಅಲ್ಲಲ್ಲಿ ವ್ಯಕ್ತವಾದದ್ದಿದೆ. ಇದನ್ನು ವಿಶ್ಲೇಷಿಸುತ್ತಾ ವಿ.ಸೀಯವರು (ಮಾಸ್ತಿಯವರ ಕಥನ ಕವನಗಳಲ್ಲಿ) ಬನಿ, ಬಿಗುವು ಒಂದೊಂದು ಕಡೆ ಸಾಲದೆನ್ನುವವರುಂಟು. ಮಾತುಗಳ ಶಯ್ದೆಯಲ್ಲಿ ಅಲ್ಲಲ್ಲಿ ಸಡಿಲ ಕಾಣುವುದುಂಟು. ಸಾಲುಗಳಿಗಾಗಿ ಆಯ್ದು ಸೇರಿಸುವ ಪದಗಳಲ್ಲಿ ಅಗತ್ಯಕ್ಕೆ ತಕ್ಕ ಧಡುವತಿ ಇಲ್ಲದೆ ಇರಬಹುದು. ಆದರೆ ಕೃತಿಯ ಕಾರ್ಯಕ್ಕೂ ರಸ ಸಾಧನೆಗೂ ವಿರೋಧವಾಗುವಷ್ಟು ಇದೆಯೆಂದರೆ ನಾನು ಒಪ್ಪಲಾರೆ” ಎನ್ನುತ್ತಾರೆ. ಈ ಆಕ್ಷೇಪದ ಮಟ್ಟಿಗೆ ಈ ಸಮರ್ಥನೆ ಸಮಂಜಸವೆನಿಸುತ್ತದೆ.

೧೦. ಈಗಾಗಲೇ ಪ್ರಸ್ತಾಪಿಸಿದ ಸಾವಯವ ಸಮಗ್ರೀಕರಣ, ಸಂರಚನೆಯ ಚಾಕಚಕ್ಯತೆ ಮಾಸ್ತಿಯವರ ಕಥನಕವನಗಳ ಸಾಮಾನ್ಯ ಲಕ್ಷಣವಾಗಿದೆ. ಘಟನೆ, ಸಂಭಾಷಣೆ, ವರ್ಣನೆಗಳ ಐಕ್ಯ ಇದಕ್ಕೆ ಸೊಗಸಾದ ಉದಾಹರಣೆಯಾಗುತ್ತದೆ.

೧೧. ‘ಅಗಡಿಯ ಸಾಧು’, ‘ಸಿದ್ಧರ ಕಿನ್ನರಿ’, ‘ಗೌಡರ ಮಲ್ಲಿ’ ಇತ್ಯಾದಿ ಕವನಗಳ ಧರ್ಮಾಸಕ್ತಿ, ನೀತಿ ಬೋಧನಾಪೇಕ್ಷೆಗಳು ಉಲ್ಲೇಖಾರ್ಹವಾಗಿವೆ. ಇಂಥ ಪ್ರತಿಪಾದನೆಗಳು ಕಥೆಯಲ್ಲಿ ಅಂತರ್ಗತವಾಗಿರುವ ಅಥವಾ ಬಾಹ್ಯ ಶರೀರವನ್ನೂ ಆಕ್ರಮಿಸಿ ಕಲಾತ್ಮಕತೆಯನ್ನು ಒಡೆಯುವ ಎರಡೂ ಬಗೆಗಳಿಗೂ ‘ನವರಾತ್ರಿ’ ಸಂಕಲನದ ಕವನಗಳಲ್ಲಿ ನಿದರ್ಶನಗಳು ಸಿಗುತ್ತವೆ.

೧೨. ಎಲ್ಲ ದೋಷಗಳನ್ನು ಮರೆಸುವ, ಸಹಜವಾಗಿ ಬೆಳೆಯುತ್ತಾ ಹೋಗುವ ಕಥನಶೈಲಿಯು ಇಲ್ಲಿನ ಹೆಚ್ಚಿನ ಕವನಗಳಲ್ಲಿ ಕಂಡು ಬರುತ್ತದೆ.

ಮಹಾಕಾವ್ಯದ ಭಾಗವೆನಿಸುವ ಖಂಡ ಕಾವ್ಯ ಪ್ರಕಾರಕ್ಕೆ ಸೇರುವ ‘ಶ್ರೀರಾಮ ಪಟ್ಟಾಭಿಷೇಕ’ ಮಾಸ್ತಿಯವರ ಇನ್ನೊಂದು ಮಹತ್ವದ ಕೃತಿ.

“ಶ್ರೀರಾಮ ಪಟ್ಟಾಭಿಷೇಕವು ನಾನು ಹರೆಯದಲ್ಲಿ ಸಂಕಲ್ಪಿಸಿ, ಇಳಿ ವಯಸ್ಸಿನಲ್ಲಿ ಆರಂಭಿಸಿ ಮುಪ್ಪಿನಲ್ಲಿ ಮಂಗಳಕ್ಕೆ ತಂದಿರುವ ಕಾವ್ಯ ಸಂಕಲ್ಪದ ವೇಳೆಯಿಂದ ಈ ವೇಳೆಗೆ ಅದರ ರೂಪ ತಕ್ಕಮಟ್ಟಿಗೆ ಬೇರೆಯಾಗಿದೆ. ದಿನ ಕಳೆದಂತೆ ಈ ರೂಪ ಅಷ್ಟು ಇಷ್ಟು ಮಾರ್ಪಟ್ಟು ಬೇರೆ ಆದಾಗ ನಾನು ಮಾರ್ಪಾಡನ್ನು ಒಪ್ಪಿಕೊಂಡು ಮುಂದುವರಿದೆನು. ನಾನು ನಂಬುವ ಸಂಗತಿಗಳನ್ನು ಇಟ್ಟುಕೊಂಡು ನಂಬದ ಸಂಗತಿಗಳನ್ನು ಬಿಟ್ಟು ರಚಿಸಿರುವ ಈ ಕಾವ್ಯ ನಮ್ಮ ಜನರಿಗೆ ಎಷ್ಟುಮಟ್ಟಿಗೆ ಒಪ್ಪಿಗೆಯಾಗಬಹುದೋ ನಾನು ಕಾಣೆ” ಎಂದು ತಮ್ಮ ಕಾವ್ಯದ ಸ್ವರೂಪ – ಉದ್ದೇಶಗಳನ್ನು ಮಾಸ್ತಿಯವರೇ ಸ್ಪಷ್ಟಪಡಿಸಿದ್ದಾರೆ.

“ರಾಮಾಯಣವನು ಭಕ್ತಿಯಲಿ ಓಡುವ ಮನಕೆ
ಹಿರಿದಾದ ಕವಿತೆಯೊಂದರ ಚೆಲುವೆ ಚೆಲುವಾಗಿ
ಮರಮರಳಿ ಹೊಳೆಯುವುದು. ಮಧ್ಯೆ ಬೇರೆಯ
ಒಂದು ಕಿರಿ ತೆರನ ಚೆಲುವು ಕಾಣುವುದು. ಅದ ನುಡಿದ
ದನಿ ಇದನು ನುಡಿದಿರದೆಂದು ತೋರುವುದು. ಕಿವಿಗೊಟ್ಟು
ಕೇಳಿರಲು ಹಿರಿಕವಿಯ ದನಿಯ ತೆರನನು ಮನಸ
ಅರಿತುಕೊಂಬುದು”

ಎಂದು ಸೂಕ್ಷ್ಮ ನಿರೀಕ್ಷಣಾಸಕ್ತಿ-ಶಕ್ತಿಗಳ ಪ್ರತಿಪಾದನೆಯೊಂದಿಗೆ ಮಾಸ್ತಿಯವರು ಈ ಕಾವ್ಯವನ್ನು ಮೊದಲು ಮಾಡುತ್ತಾರೆ.

ಪುರಾಣಗಳ ಪುನಾರಚನೆ(re-creation)ಯ ಬಗೆಗೆ ಈಗಾಗಲೇ ಸಾಕಷ್ಟು ಜಿಜ್ಞಾಸೆಯು ನಡೆದಿದೆ. ಪುರಾಣ ಪ್ರತಿಮೆಗಳನ್ನು ಒಡೆದು ಕಟ್ಟುವ ಕ್ರಿಯೆ, ಪಾತ್ರಗಳ ಸ್ವರೂಪ ವ್ಯತ್ಯಾಸ, ಘಟನೆಗಳ ಸೇರ್ಪಡೆ – ಬೇರ್ಪಡೆಗಳೆಲ್ಲವೂ ವಿವರವಾದ ವಿಶ್ಲೇಷಣೆಗೆ ಒಳಗಾದ ಅಂಶಗಳೇ ಆಗಿವೆ. ಇದೇ ಮಾದರಿಯಲ್ಲಿ, ಮೂಲ ಕೃತಿಯಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ಬಂದ ಸನ್ನಿವೇಶಗಳನ್ನು ವಿಸ್ತರಿಸುವ ಅಥವಾ ಅತಿ ವಿಸ್ತಾರವಾದ ಪ್ರಸಂಗಗಳನ್ನು ಹ್ರಸ್ವಗೊಳಿಸುವ ಸಂದರ್ಭಗಳನ್ನೂ ಪರಿಗಣಿಸಬಹುದು. ‘ಶ್ರೀರಾಮಪಟ್ಟಾಭಿಷೇಕ’ ಹೀಗೆ ಮೂಲದಲ್ಲಿ ಅರ್ಧ ಲಕ್ಷಿತ ಅಥವಾ ಅಲಕ್ಷಿತ ಸನ್ನಿವೇಶವನ್ನು ಪ್ರಧಾನವಾಗಿ ಗಮನಿಸುವ ಪ್ರಯತ್ನವನ್ನು ಮಾಸ್ತಿಯವರು ಕೈಗೆತ್ತಿಕೊಂಡಿದ್ದಾರೆ.

‘ಶ್ರೀರಾಮಪಟ್ಟಾಭಿಷೇಕ’ ಖಂಡಕಾವ್ಯದ ಮುಖ್ಯ ವೈಶಿಷ್ಟ್ಯಗಳನ್ನು ಹೀಗೆ ಸೂಚಿಸ ಬಹುದು.

೧. ಮಾಸ್ತಿಯವರು ವಾಲ್ಮೀಕಿ ರಾಮಾಯಣದ ಅಲೌಕಿಕ ಅಂಶಗಳನ್ನು ನಿಯಂತ್ರಿಸಿ, ಸಂಭವನೀಯ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದಾರೆ. ಉದಾಹರಣೆಗೆ, ಮಾಯಾಮೃಗದ ಪ್ರಸಂಗವನ್ನು ನೋಡಿ :

“ಬಂಧು ಮಾರೀಚ ಮಾಟದಲಿ ಮಾಯದಲಿ ನಿಪುಣ
ಮೃಗವೇಷದಲಿ ತಾ ಒಂದು ಮೃಗವೆ ಎಂಬಂದ ನಟಿಸುವುದವನ
ದಿನ ಬಳಕೆಯಾಟ…..
ಈ ಬಾರಿ ಅವನು ವಿಚಿತ್ರ
ವರ್ಣಗಳ ತೊಗಲೊಂದ ಹೊಡೆದು ಈ ಸೋದರರ
ಆಶ್ರಮದ ಬಳಿ ಸಾರಿ ದೇವಿಯರು ಕಾಂಬಂದ
ಸುಳಿದು ತನ್ನನು ಅವರು ಬಯಸುವಂತೆಸಗುವುದು”
ಸೀತಾಪಹರಣದ ವ್ಯೂಹವಾಗುತ್ತದೆ.

೨. ವಿಚಾರವಾದ – ಭಾವುಕ ನಿಲುವುಗಳೆರಡರ ಅತಿಗಳನ್ನೂ ನಿರಾಕರಿಸಿದ ಮಧ್ಯಮ ಮಾರ್ಗ. ದೈವ ಬಲ – ಮಾನುಷ ಪ್ರಯತ್ನಗಳ ಸಮ್ಮಿಶ್ರಣವೇ ಯಶಸ್ಸಿಗೆ ಕಾರಣವೆನ್ನುವ ದೃಢ ನಿಲುವು; ಸಂದೇಶದ ವಾಹಕವಾಗಿ ಈ ಕಾವ್ಯವು ದುಡಿಯುತ್ತದೆ.

೩. ರಾಮಾಯಣದ ಪಾತ್ರಗಳನ್ನು ಸಹಜ ಮಾನವೀಯ ಪ್ರವರ್ತನೆಗಳ ಸಂದರ್ಭಗಳಲ್ಲೇ ಇಟ್ಟು ನೋಡುವ ಪ್ರಯತ್ನ. ವಾಲ್ಮೀಕಿ ಸೂಚ್ಯವಾಗಿ ಹೇಳಿದ ಸಂದರ್ಭಗಳನ್ನು ಸ್ಫುಟ ಗೊಳಿಸುವ ಪ್ರಯತ್ನವನ್ನು ಮಾಸ್ತಿಯವರು ಮಾಡಿದ್ದಾರೆ. ನಿದರ್ಶನಕ್ಕಾಗಿ, ವನವಾಸಕ್ಕೆ ನಿರೂಪ ಪಡೆಯಲು ಬಂದ ರಾಮನೊಂದಿಗೆ ಕೌಸಲ್ಯೆಯ ವರ್ತನೆ, ಮಾತೃ ಹೃದಯಕ್ಕೆ ತೀರಾ ಸಹಜವೆನ್ನುವಂತೆ ಚಿತ್ರಿತವಾಗಿದೆ.

“ಒಲ್ಲೆ ನೀ ಕಾಡ ಹೋಗುವುದು ಬೇಡ

ಇಲ್ಲಿಯೇ ನಿಲ್ಲು ಇದು ನನ್ನಾಜ್ಞೆ ತಂದೆಯಾಣತಿ ಎಂತು

ಅಂತೆ ತಾಯಿಯ ಆಣತಿಗು ನಿನ್ನ ಮನ್ನಣೆ

ಸಲ್ಲಬೇಕಲ್ಲ ಸವತಿಯ ಮತ್ಸರದ ನುಡಿಗೆ

ಕಿವಿ ಜೋತು ದೊರೆ ನಿನ್ನ ಕಾಡಿಗಟ್ಟುವೆನೆನಲು

ನೀನಿದನು ಒಪ್ಪಬೇಕೇ? ಒಲ್ಲೆ ಇಲ್ಲೆ

ಇರುವೆನು ನಾ ಎಂದರಾಯಿತು”

ಸಮಸ್ಯೆಗೆ ಸರಳ ಪರಿಹಾರವನ್ನು ಕಾಣುವ ತಾಯಿಯ ನಿಲುವು ಹೆಚ್ಚು ಸ್ವಾಭಾವಿಕ, ಸಹಜತೆಗೆ ಹತ್ತಿರವೆನಿಸುತ್ತದೆ.

೪. ಪಾತ್ರಗಳ ಆತ್ಮ ನಿರೀಕ್ಷಣೆಗೆ ಹೆಚ್ಚಿನ ಅವಕಾಶ ಇಲ್ಲಿ ಪ್ರಾಪ್ತವಾಗಿದೆ. ಊರ್ಮಿಳೆ ಹಾಗೂ ಸೀತೆಯರ ನಡುವಿನ ಸಂವಾದವನ್ನು ಈ ದೃಷ್ಟಿಯಿಂದ ಗಮನಿಸಬಹುದು. ಸೀತೆ ಅತ್ಯಂತ ಪ್ರಾಂಜಲಳಾಗಿ ಊರ್ಮಿಳೆಯ ಮುಂದೆ ತನ್ನ ಒಳಗನ್ನ ಪರಿಚಯಿಸುವ ರೀತಿ ಹೀಗೆ :

“ನಾ  ಕಾನನದಿ ಅರಸ ಮೈದುನರೊಡನೆ
ಒಬ್ಬೊಂಟಿಯಾದರೂ ಸುಖವಾಗಿ ಇದ್ದ ದಿನ
ಹದಿನಾಲ್ಕು ವರ್ಷ, ನೀ ಒಬ್ಬಳು ಅಯೋಧ್ಯೆಯಲಿ
ಸೊರಗಲೊಪ್ಪಿದುದು ಊರ್ಮಿಳೆ. ಎನಿತು ಸಲ ನಾನು
‘ನಾ ಸ್ವಾರ್ಥಿಯಾದೆ. ತಂಗಿಯ ಸುಖವ ಕಡೆಗಣಿಸಿ
ಅವಳರಸ ನಮ್ಮೊಡನೆ ಬರುವುದಕೆ ಒಪ್ಪಿದೆ
ಅಂತು ಒಪ್ಪಿದುದು ತಪ್ಪಾಯಿತು’ ಎಂದೆನೊ ನಿಮ್ಮ
ಭಾವನಿಗೆ”

ಇಂಥ ಮುಕ್ತ ಸಂವಾದಕ್ಕೆ ಮಾತ್ರ ಮನಸ್ಸಿನ ಕಸವನ್ನೆಲ್ಲ ತೊಳೆದು ಶುದ್ಧ ಕಸವರ – ಆರೋಗ್ಯ ಪೂರ್ಣ ಸಂಬಂಧಗಳನ್ನು ಬೆಸೆಯುವ ಶಕ್ತಿಯಿದೆ.

೫. ಸುಲಲಿತವಾದ ವರ್ಣನಾ ವೈಖರಿಗೆ ಈ ಕಾವ್ಯದ ಉದ್ದಕ್ಕೂ ಸಾಕ್ಷಿಗಳು ಸಿಗುತ್ತವೆ; ಮಾಸ್ತಿಯವರ ಕಾವ್ಯದ ಶಕ್ತಿಗೆ, ಸತ್ವಕ್ಕೆ ಉದಾಹರಣೆಗಳಾಗುತ್ತವೆ. ಸುಗ್ರೀವನ ನಗರವನ್ನು ಅಲಂಕರಿಸಿದ ರೀತಿಯ ನಿರೂಪಣೆ ಹೀಗೆ ಬರುತ್ತದೆ.

“… ನರುಗಂಪ
ಹೂಗಳ ಅಲಂಕಾರ ಮಾಡಿದರು. ಚಂದನದ
ಅಗರು ಚೆಕ್ಕೆಯ ಧೂಪ ಹಾಕಿದರು.
ದಾರಿಯಲಿ ಪುನುಗು ಜವ್ವಾಜಿ ಕಸ್ತೂರಿ ಕದಡಿದ ನೀರ
ಚಳೆಯವನು ಮಾಡಿಹರು. ಹೂವ
ಸೌರಭದೊಡನೆ ಹೊಣೆಯ ನರಗಂಪು ಚಳೆಯಗಳ
ಸೌಸವ ಬೆರೆತು ಗಾಳಿ ಬಣ್ಣಿಸ ಬರದ ತಣ್ಣ ನರುಗಂಪಿಂದ
ತುಂಬಿಹುದು”

ಇಂಥ ಭಾಗಗಳು ಶೈಲಿಯ ಸೊಗಸಿನ ದೃಷ್ಟಿಯಿಂದ ಎಷ್ಟು ಮನೋಹರವಾಗಿವೆಯೋ, ಸಾಂಸ್ಕೃತಿಕ ದಾಖಲೆಗಳಾಗಿ ಅಷ್ಟೇ ಮಹತ್ವದವುಗಳಾಗಿವೆ.

ಒಟ್ಟಿನಲ್ಲಿ, ಮಾಸ್ತಿಯವರ ಕಾವ್ಯ ಹಲವಾರು ದೃಷ್ಟಿಗಳಿಂದ ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುವ ಯೋಗ್ಯತೆಯನ್ನು ಹೊಂದಿರುವಂಥದ್ದು. ಸಾಹಿತ್ಯಲೋಕಕ್ಕೆ ಮಾಸ್ತಿಯವರ ಕೊಡುಗೆಯನ್ನು ನಿರ್ಧರಿಸುವಾಗ ಮೊದಲ ಮನ್ನಣೆಯ ಮಣೆ ನಿಸ್ಸಂದೇಹವಾಗಿ ಅವರ ಗದ್ಯಕ್ಕೆ, ಅದರಲ್ಲೂ ಸಣ್ಣ ಕಥೆಗಳಿಗೆ ಮತ್ತು ಐತಿಹಾಸಿಕ ಕಾದಂಬರಿಗಳಿಗೆ ಸಲ್ಲುತ್ತದೆ. ಅನಂತರ ಅವರ ಕಥನಕಾವ್ಯ, ಖಂಡಕಾವ್ಯಗಳು ಉಲ್ಲೇಖಾರ್ಹವಾಗುತ್ತವೆ. ಪಾಶ್ಚಾತ್ಯ ಪ್ರಭಾವವನ್ನು ಚೆನ್ನಾಗಿ ಅರಗಿಸಿಕೊಂಡು, ಆ ಜೀವಸತ್ವಗಳಿಂದ ದೇಶೀಯ ಮೌಲ್ಯಗಳನ್ನು, ಚಿಂತನಕ್ರಮಗಳನ್ನು ರೂಢಿಸಿಕೊಂಡ ವಿರಳ ಸಾಹಿತಿಗಳ ಪಂಕ್ತಿಯಲ್ಲಿ ಮಾಸ್ತಿಯವರೂ ಜಾಗ ಪಡೆಯುತ್ತಾರೆ. ನವೋದಯ ಸಂಪ್ರದಾಯದ ಎಲ್ಲ ಮಿತಿ-ಸಿದ್ಧಗಳಿಗೆ ಅವರ ಕಾವ್ಯ ಉದಾಹರಣೆಯಾಗುತ್ತದೆ. ವಿಮರ್ಶಕರೂ, ವಿದ್ವಾಂಸರೂ ಅವರನ್ನು ಸಾಕಷ್ಟು ಗಮನಿ ಸಿದ್ದಾರೆ. ಇಷ್ಟಾಗಿಯೂ ಅವರ ಒಟ್ಟು ಸಾಹಿತ್ಯ, ಅದರಲ್ಲೂ ಕಾವ್ಯಸೃಷ್ಟಿ ವಿಸ್ತೃತ ಅಧ್ಯಯನದ ಸಾಧ್ಯತೆಗಳನ್ನು ಇನ್ನೂ ಉಳಿಸಿಕೊಂಡಿದೆ.

ರುಚಿಶುದ್ದಿಯನ್ನು ಉದ್ದಕ್ಕೂ ಕಾಯ್ದುಕೊಂಡ, ಆರಾಧಿಸಿದ ಮಾಸ್ತಿಯವರು ಹಿಂದೆ ಉಳಿಸಿ ಹೋದ ಆಸ್ತಿಯನ್ನು ಅದೇ ನಿಸ್ಪೃಹತೆಯಿಂದ, ಸುಸಂಸ್ಕೃತ ಮನಸ್ಸಿನಿಂದ ಮೌಲ್ಯಮಾಪನ ಮಾಡುವುದೇ ಅವರ ಹಿರಿಯ ಚೇತನಕ್ಕೆ ಸಲ್ಲಿಸಬಹುದಾದ ಶ್ರೇಷ್ಠವಾದ, ಉಚಿತವಾದ ಗೌರವ.