ಯುಗಗಳ ಮೌನ, ಭಾವ ಬೀಜಗಳಿಗೆ ಕಾವು ಕೊಡುತ್ತ, ಕೊಡುತ್ತ, ಶೈತ್ಯ, ಶಾಖಗಳ ಸ್ಪರ್ಶ ನೀಡುತ್ತ, ಆವರಣಗಳನ್ನು ಒಂದೊಂದಾಗಿ, ಸೂಕ್ಷ್ಮವಾಗಿ ಬಿಡಿಸುತ್ತ ಕಾವ್ಯದ ಜೀವೋತ್ಪತ್ತಿಗೆ ಅನುವು ಮಾಡಿಕೊಡುವ ವಿಸ್ಮಯದ ಮುಂದೆ ಮನಸ್ಸು ಮೂಗುವಟ್ಟ ಶಿಶುವೇ ಆಗಿ ಬಿಡುತ್ತದೆ. ಆ ಶೈಶವದ ಉಲ್ಲಾಸ, ಬೆರಗು, ಉತ್ಸಾಹ, ಸಂತುಲನಗಳ ಸಂಮ್ಮರ್ದುದೊಂದಿಗೆ ಕಾವ್ಯಕೃತಿಯೊಂದನ್ನು ಮುಟ್ಟಿದಾಗ ಉಂಟಾಗುವ ಅನುಭವವೂ ರೋಚಕವಾಗಿರುತ್ತದೆ. ಇಂಥಲ್ಲೆಲ್ಲ ನಮ್ಮ ವಿಮರ್ಶೆಯ ಪರಿಭಾಷೆ, ಸಾಹಿತ್ಯದ ಪೂರ್ವ ನಿಯೋಜಿತ ವ್ಯಾಕರಣಗಳ ಪರಿಜ್ಞಾನ, ಕಾವ್ಯ ಮೀಮಾಂಸಕ ಪ್ರಜ್ಞೆ ಮುಂತಾದ ಉಷಾಧಿಗಳೆಲ್ಲವೂ ಕಳಚಿಕೊಂಡು ಕೇವಲ ರಸಗ್ರಹಣದ ಸೌಖ್ಯವನ್ನಷ್ಟೇ ನಮಗೆ ಉಳಿ ಸುತ್ತವೆ.

ಹೊಸಗನ್ನಡ ಕಾವ್ಯಕ್ಷೇತ್ರದಲ್ಲಿ ಬಹಳ ಪ್ರಿಯವಾಗುವ ಹೆಸರುಗಳಲ್ಲಿ ಒಂದಾದ ಸೇಡಿಯಾಪು ಕೃಷ್ಣಭಟ್ಟರ ಕಾವ್ಯಜಗತ್ತನ್ನು ಪ್ರವೇಶಿಸಬೇಕಾದ ಪರಿ ಇದು. ಇಲ್ಲಿ ಕಾವ್ಯವು ತನ್ನ ವೈಚಾರಿಕ-ಬೌದ್ದಿಕ ಆಯಾಮಗಳಿಗೆ ವಿದಾಯ ಹೇಳಿ, ಭಾವದಂಗಳದಲ್ಲಿಯೆ ಸುಳಿಯುತ್ತ, ಆ ಸುಳಿದಾಟದಲ್ಲಿಯೆ ಸುಖ ಕಾಣುತ್ತ, ದಿಗಂತದಂಚಿನಲ್ಲೆಲ್ಲೋ ಕಾಣಿಸುವ ಎತ್ತರೆತ್ತರದ ಗಿರಿಶಿಖರಗಳ ದೂರದರ್ಶನದಿಂದಲೇ ತೃಪ್ತವಾಗುತ್ತ, ತನ್ನೊಳಗಿಗೆ ಬೆಳಕನ್ನು ಹರಿಸಿಕೊಳ್ಳುವ ಮರಿಚಿಗರೆಯಾಗುತ್ತದೆ. ದೃಷ್ಟಿಯ ನೇರದಲ್ಲಿಯೇ ಉಳಿಯುವ ಈ ಬಗೆಯಿಂದಾಗಿಯೇ ಸೇಡಿಯಾಪು ಕಾವ್ಯವು ಬುದ್ದಿಗೆ ಬಾಧೆ ನೀಡುವ ಬದಲಿಗೆ ಕಣ್ಣಂಚಿನ ಹನಿಗಷ್ಟೇ ಕಾರಣವಾಗುತ್ತದೆ. ಎದೆಯ ಒತ್ತಡವನ್ನು ಹೊರಹರಿಸುವ ನಿಟ್ಟುಸಿರಾಗುತ್ತದೆ. ಕೆಲವೊಮ್ಮೆ ಜೀವವನ್ನು ತುಡಿಯಿಸುವ ವೇದನೆಯ ಭರ-ಭಾರವೂ ಆಗುತ್ತದೆ.

ಸೇಡಿಯಾಪು ಕಾವ್ಯ ಪ್ರಪಂಚದಲ್ಲಿ ೫ ಪ್ರಮುಖ ಖಂಡಗಳಿವೆ. ೧೯೧೯ರಿಂದ ೭೫ರ ಅವಧಿಯಲ್ಲಿ ಅಭಿವ್ಯಕ್ತಿ ಪಡೆದ ಅವುಗಳ ವಿವರ ಹೀಗಿದೆ :

೧. ಚಂದ್ರಖಂಡ   – ೨೩ ಕವನಗಳು

೨. ವೃದ್ಧ ಉವಾಚ – ೩೨ ಕವನಗಳು

೩. ಮಿಡಿ-ಕಡಿ     – ೩೬ ಕವನಗಳು

೪. ಬಾಲಭಾಷಿತ – ೦೩ ಕವನಗಳು

೫. ಸಣ್ಣಕಾವ್ಯ     – ೦೪ ಕವನಗಳು

ಹೀಗೆ ರಚನೆಯಾದ ಕವನಗಳ ಒಟ್ಟು ಸಂಖ್ಯೆ ೯೮

ಸೇಡಿಯಾಪು ಅವರ ಕಾವ್ಯದ ಅಧ್ಯಯನಕ್ಕೆ ತೊಡಗುವ ಮುನ್ನ, ಅವರು ಕಾವ್ಯ ಕೃಷಿಯಲ್ಲಿ ತೊಡಗಿದ್ದ ಸಂದರ್ಭವನ್ನು ಖಚಿತವಾಗಿ ಗುರುತಿಸಿಕೊಳ್ಳುವುದು ಅಗತ್ಯ ವೆನಿಸುತ್ತದೆ. ನವೋದಯ ಕಾವ್ಯ ಸಂಪ್ರದಾಯದ ಎಲ್ಲ ಸ್ಥೂಲ ಲಕ್ಷಣಗಳು ಇಲ್ಲಿಯೂ ಕಾಣಿಸುತ್ತವೆ. ಆದರೆ ಕೆಲವು, ವ್ಯಕ್ತಿ ವಿಶಿಷ್ಟವಾದ, ಸಂದರ್ಭಗರ್ಭಿತವಾದ ವಿಚಾರಗಳು ಸೇಡಿಯಾಪು ಅವರ ಕಾವ್ಯವನ್ನು ನಿರ್ದಿಷ್ಟವಾದ ಪದಚಿಹ್ನೆಗಳೊಂದಿಗೆ ನೋಡಲು ಒತ್ತಾಯಿಸುತ್ತವೆ.

ಸಾಮಾನ್ಯವಾಗಿ, ಕವಿಕರ್ಮದಲ್ಲಿ ಕಂಡು ಬರುವ ಅಂತಃಸ್ರೋತ-ಬಾಹ್ಯಪ್ರೇರಣೆಗಳ ಘರ್ಷಣೆಯು ಸೇಡಿಯಾಪು ಅವರಲ್ಲಿ ಎಲ್ಲೋ ಒಮ್ಮೊಮ್ಮೆ ಕಾಣಿಸುತ್ತದಷ್ಟೆ. ಅವರ ಹೆಚ್ಚಿನ ಕಾವ್ಯಕೃತಿಗಳ ಹಿಂದೆ ಅಪೂರ್ವವಾದ ಧ್ಯಾನಸ್ಥ ಮನಸ್ಸೊಂದು ಸದ್ದಿಲ್ಲದೆ ಕಾರ್ಯನಿರತವಾಗಿರುತ್ತದೆ. ಎಂದರೆ, ಅವರ ಕಾಲದ ಇತರ ಕೆಲವು ಪ್ರಥಮ ಶ್ರೇಣಿಯ ಸಾಹಿತಿಗಳಂತೆ. ಪಾಶ್ಚಾತ್ಯ ಕಾವ್ಯಮೀಮಾಂಸೆಯಿಂದಾಗಲಿ, ಪಶ್ಚಿಮದ ಸೃಷ್ಟಿಶೀಲ ಸಾಹಿತ್ಯ ದಿಂದಾಗಲಿ ಅವರು ಪ್ರಭಾವಿತರಾಗಲಿಲ್ಲ. ಹಾಗಾಗಿ, ತಾವು ಆಯ್ದುಕೊಂಡ ವಸ್ತು, ಆಶಯ, ಬಂಧಗಳಲ್ಲಿ ಸಂಪೂರ್ಣವಾದ, ಅನ್ಯಾದೇಶ-ದೂರವಾದ ದೇಸಿತನವನ್ನು ಕಾಯ್ದು ಕೊಳ್ಳುವುದು ಅವರಿಗೆ ಸಾಧ್ಯವಾಯಿತು.

ಈ ಪ್ರಮೇಯಕ್ಕೆ ಪುಷ್ಟಿ ನೀಡುವ ಒಂದೆರಡು ಮೂಲ ನೆಲೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಸೇಡಿಯಾಪು ಅವರ ಕಥನ ಕವನಗಳ ಅಥವಾ ಪಳಮೆಗಳು ಸಂಗ್ರಹದ ಕಥೆಗಳ ವಸ್ತುಗಳನ್ನು ಗಮನಿಸಿರಿ. ಅವು ತೀರಾ ಪುರಾಣ ಪರಂಪರೆಯವೂ ಅಲ್ಲ. ಚರಿತ್ರೆಯ ಅಧಿಕೃತ ಮೊಹರುಳ್ಳವುಗಳೂ ಅಲ್ಲ. ಮೌಖಿಕ ಪರಂಪರೆಯಲ್ಲಿ ಜೀವಂತವಾಗಿರುವ ಸತ್ಯಗಳ ಸೂಕ್ಷ್ಮ ಎಳೆಗಳ ಹೆಣೆದುಕೊಂಡಿರುವ ಐತಿಹ್ಯಗಳಿಂದ ಇವೆಲ್ಲ ತಮ್ಮ ವಸ್ತುಗಳನ್ನು ಸ್ವೀಕರಿಸಿವೆ. ಇದು, ಸೇಡಿಯಾಪು ಕಾವ್ಯಕ್ರಮದ ವೈಶಿಷ್ಟ್ಯವಾಗಿದೆ. ಇಲ್ಲಿ ಹೊಸ ವಿಧಾನ ವೊಂದನ್ನು ಬೆಳಕಿಗೊಡ್ಡಿದ ‘ಅಹಂ’ ಕಾಣಿಸುವುದಿಲ್ಲ. ಪ್ರತಿಯಾಗಿ, ‘ಹೀಗೆ ಹೋದರೂ ಉದ್ದೇಶಿತ ಲಕ್ಷ್ಯವನ್ನು ಮುಟ್ಟಬಹುದೋ ಹೇಗೆ?’ ಎನ್ನುವ ಪ್ರವಾಸಿಯೋರ್ವನ ಮುಗ್ಧ ಕುತೂಹಲ ಇಲ್ಲಿದೆ. ಅದು ಸಾಧ್ಯವೆನಿಸಿದಾಗ ಹುಟ್ಟುವ ನಿರ್ಮಲವಾದ ಆನಂದವಿದೆ. ಈ ಹಂತದಲ್ಲಿ ಅವರು ತೌಲನಿಕ ಜಿಜ್ಞಾಸೆಗಾಗಲಿ, ಪೂರ್ವ-ಪ್ರಯೋಗಗಳ ಯಶಸ್ಸು-ವೈಫಲ್ಯಗಳ ಬಗೆಗಾಗಲಿ ಚಿಂತಿತರಾಗಲಿಲ್ಲವೆನ್ನುವುದು ಮಹತ್ವದ ಮಾತೇ ಆಗುತ್ತದೆ.

‘ಪಿರಿಯಕ್ಕರ’ದಂಥ ಸಾಂಪ್ರದಾಯಿಕವಾದ, ಅಷ್ಟಾಗಿ ಬಳಕೆಯಲ್ಲಿ ಇರದಿದ್ದ ಛಂದೋಬಂಧವೊಂದನ್ನು ಅವರು ವಿನಿಯೋಗಿಸಿಕೊಂಡ ರೀತಿಯು ಇದಕ್ಕೆ ಮಗ್ಗುಲಿನ ಸಮರ್ಥನೆಯನ್ನು ಒದಗಿಸುತ್ತದೆ. ಸೇಡಿಯಾಪು ಅವರ ಸಮಕಾಲೀನ ಸಾಹಿತಿಗಳು ಪ್ರಾಚೀನ ಕಾವ್ಯಬಂಧಗಳನ್ನು ಮುರಿದು ಹೊಸ ಕಟ್ಟಡಗಳನ್ನು ಕಟ್ಟುವ ಕೆಲಸಗಳನ್ನು ಧಾರಾಳವಾಗಿ ಮಾಡಿದರು. ಆದರೆ, ಮೂಲ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡು, ಅದರಲ್ಲಿಯೇ ಸ್ವೋಪಜ್ಞತೆಯನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದುದು ಸೇಡಿಯಾಪು ಅವರ ಹೆಚ್ಚಳವಾಗಿದೆ.

‘ಖಂಡಕಾವ್ಯ’ದ ಸಾಧ್ಯತೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಸ್ಪಷ್ಟಪಡಿಸಿದ ಮೇಲ್ಮೆಯೂ ಅವರದಾಗಿದೆ. ಇದನ್ನು ಪರ್ಯಾಯವಾಗಿ, ‘ಕಾವ್ಯಖಂಡ’ವೆಂದೂ ಅವರು ಕರೆಯುತ್ತಾರೆ. ಇಂಥಲ್ಲೆಲ್ಲ “ಪ್ರಯೋಗಕ್ಕಾಗಿ ಪ್ರಯೋಗ” ಎನ್ನುವ ಮನೋವೃತ್ತಿಯ ಬದಲಿಗೆ, ಕಾವ್ಯಾಭಿವ್ಯಕ್ತಿಯ ಬೇರೆ ಬೇರೆ ಆಯಾಮಗಳನ್ನೂ, ಸ್ವರೂಪಗಳನ್ನು ತಳಮಟ್ಟ ಶೋಧಿಸುವ ಆಸಕ್ತಿಯೇ ಪ್ರಧಾನವಾಗಿ ಕಂಡು ಬರುತ್ತದೆ.

ಒಂದು ದೃಷ್ಟಿಯಿಂದ, ಕಾವ್ಯದ ಸಂವಿಧಾನದಲ್ಲಿರುವ ‘ಅಪರಿಚಿತನ’ದ ಆಧಿಪತ್ಯವನ್ನು ಒರೆಸುವುದರತ್ತಲೂ ಸೇಡಿಯಾಪು ಅವರು ಗಮನವನ್ನು ಹರಿಸಿದ್ದಾರೆ. ಜನಮಾನಸದಲ್ಲಿ ಮುಕ್ತವಾಗಿ ಸಂಚರಿಸುವ ಅನುಭವಗಳಿಗೇ ಆದ್ಯತೆ ನೀಡುವ ಕ್ರಮವನ್ನು ಅವರು ಆಯ್ದುಕೊಳ್ಳುತ್ತಾರೆ. ಇದರಿಂದಾಗಿ, ಪರಿಚಿತ ಜಗತ್ತನ್ನು, ಅದರ ಅಪಾರವಾದ ಅರ್ಥದ ಪದರಗಳೊಂದಿಗೆ ಕಣ್ಣ ಮುಂದೆ ನಿಲ್ಲಿಸುವುದು ಅವರಿಗೆ ಸಾಧ್ಯವಾಗುತ್ತದೆ. ಹೀಗಾಗಿಯೇ, “ಕೆಂಡದೊಳಗಿನ ಮಸಿಯ ಖಂಡ”ದಂಥ ಪ್ರತಿಮೆಗಳನ್ನೊಡ್ಡುತ್ತ ತೀವ್ರವಾದ ಸಂವೇದನೆ ಗಳನ್ನು ಎಚ್ಚರಿಸುವುದು ಅವರಿಗೆ ಲೀಲಾಜಾಲವೆನಿಸುತ್ತದೆ.

ಸೇಡಿಯಾಪು ಅವರ ಪ್ರತಿಭೆ, ದಿಗ್ದೇಶಗಳನ್ನೆಲ್ಲ ಕ್ಷಣಾರ್ಧದಲ್ಲಿ ಸುತ್ತಿ, ಅಲ್ಲಲ್ಲಿಯ ಸುಗಂಧ, ಮಾರ್ದವ, ಘಾಟು, ವಿಕೃತಿಗಳನ್ನೆಲ್ಲ ಗುರುತು ಹಾಕಿಕೊಳ್ಳುತ್ತ, ಮೂಲನೆಲೆಗೆ ಮರಳುವ, ಹಾಗೆ ಮರಳಿದ ಮೇಲೆ ತಾನು ಗ್ರಹಿಸಿದ ಪೋಷಕ ದ್ರವ್ಯಗಳನ್ನು ಸತ್ವವಾಗಿ ಪರಿವರ್ತಿಸಿ, ಅದನ್ನು ಲೋಕಮುಖದಲ್ಲಿ ಪ್ರಸ್ತುತ ಪಡಿಸುವ, ಸಂಚಾರವೇಶೀಲವಾಗಿರುವ ಗಾಳಿಯ ಮಾದರಿಯದಲ್ಲ. ನಿಂತ ನೆಲದಾಳಕ್ಕೆ ಬೇರುಗಳನ್ನು ಹರಿಯಗೊಟ್ಟು, ಮೇಲ್ಪದರ ದಲ್ಲಿ ಕಾಣಲಾರದ ಚೈತನ್ಯಾಂಶಗಳನ್ನೆಲ್ಲ ಹೀರಿಕೊಂಡು, ನೆಲದೊಡಲಿನಲ್ಲಿ ಹುದುಗಿ ಕೊಂಡಿರುವ ಸೌಂದರ್ಯ, ಸುಭಗತೆ, ನಾವೀನ್ಯ, ಅರೆಕೊರೆ, ಹುಳುಕುಗಳೆಲ್ಲವುಗಳ ಮುಖಾಂತರ ಹಾದು ಹೋಗುತ್ತ, ಅವುಗಳಲ್ಲಿ ಗ್ರಾಹ್ಯವಾದವುಗಳನ್ನು ಸ್ವೀಕರಿಸುವ ಸ್ಥಾಯಿಯಾದ ಮರದ ಪ್ರಕಾರದ್ದು. ಹೀಗೆ ಹೇಳುವುದರ ಮೂಲಕ ನಾನು ತರತಮ ಶ್ರೇಣೀಕರಣಕ್ಕೆ ಹೊರಟಿಲ್ಲ. ಪ್ರತ್ಯೇಕತೆಯನ್ನು ಪ್ರಸ್ತಾಪಿಸುವುದರೊಂದಿಗೆ ಸೇಡಿಯಾಪು ಅವರು ಮಾನ್ಯ ಮಾಡಿದ್ದ ಗ್ರಾಮೀಣ ಬದ್ಧತೆಯನ್ನಷ್ಟೇ ಸೂಚಿಸುತ್ತಿದ್ದೇನೆ.

ವಸ್ತುವಿನ ಆಯ್ಕೆಯಲ್ಲಿಯೂ ಸೇಡಿಯಾಪು ಅವರ ಕಾವ್ಯವು ಬೇರೆಯೇ ಕವಲಿನತ್ತ ಒಲವನ್ನು ತೋರಿಸುತ್ತದೆ. ಪ್ರಾಣಿ ಪ್ರತೀಕಗಳ ಮೂಲಕ ಅವರು ನಡೆಸುವ ಜೀವನ ಮೌಲ್ಯಗಳ ಅನುಸಂಧಾನವಾಗಲಿ, ಶಬರಿಯಂಥ ಅರ್ಧಲಕ್ಷಿತ ಪಾತ್ರಗಳ ಅನುಕ್ತಾ ಚರಿತ್ರೆಯ ಸೃಷ್ಟಿಕ್ರಮ, ಕಲ್ಪನಾಕ್ಷಮತೆಗಳಾಗಲಿ, ‘ಕೃಷ್ಣಕುಮಾರಿ’ಯಂಥ ವಿಭಿನ್ನ ವಸ್ತುವಿನ ಕಲಾತ್ಮಕ ಪರಿಶೋಧವಾಗಲಿ ಈ ಹೊಸಪಂಥದ ದಿಕ್ಸೂಚನೆ ನೀಡುವವುಗಳೇ ಆಗಿವೆ.

ತಮ್ಮ ಕಾಲದ ಹೆಚ್ಚಿನ ಸೃಜನಶೀಲ ಸಾಹಿತಿಗಳಂತೆ, ಸೇಡಿಯಾಪು ಅವರೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಪ್ರವೃತ್ತರಾದವರು. ತಮ್ಮ ಮಾಧ್ಯಮಗಳ ಅನ್ವೇಷಣೆಯಲ್ಲಿ ತೊಡಗಿದವರು. ಆ ಕಾಲದ ಪ್ರಮುಖ ಲಕ್ಷಣವಾಗಿದ್ದ ವಿಮರ್ಶೆಯ ಮಿತಿಗಳು ಮತ್ತು ತೀರಾ ಸೀಮಿತವಾಗಿ ನಡೆಯುತ್ತಿದ್ದ ಸಾಹಿತ್ಯ ವಿಮರ್ಶೆಗಳು ಅವರ ಬೆಳವಣಿಗೆಗೆ – ಒಂದರ್ಥದಲ್ಲಿ – ತೊಡಕೇ ಆಯಿತೆನ್ನಬೇಕು. ಸುಮಾರು ನವ್ಯ ಸಾಹಿತ್ಯ ಚಳವಳಿಯ ಪ್ರಾರಂಭದ ದಿನಗಳವರೆಗೂ ನಿರ್ದಿಷ್ಟ ಕೃತಿಯೊಂದರಲ್ಲಿ ಏನಿದೆ ಎಂದು ಸಮೀಕ್ಷೆ ಮಾಡುವ ಹಂತಕ್ಕೆ ಅದರ ವಿಮರ್ಶೆಯು ನಿಂತು ಬಿಡುತ್ತಿತ್ತು. ಹಾಗಾಗಿ ಸ್ವ-ವಿಮರ್ಶೆಯೊಂದನ್ನು ಆಶ್ರಯಿಸಿ, ತನ್ನ ಬಗೆಗೆ ಸ್ವಂತದ ಅನಿಸಿಕೆಗಳೇ ಅಂತಿಮವೆಂದು ನಂಬಿ ಬರೆಯುವುದು ಅಂದಿನ ಸಾಹಿತಿಗಳಿಗೆ ಅನಿವಾರ್ಯವಾಯಿತು. ಇದು, ಒಟ್ಟಾರೆಯಾದ ಸಾಹಿತ್ಯ ಕ್ಷೇತ್ರಕ್ಕೆ ಲಾಭದಾಯಿಕವಾದಂತೆಯೇ ಅಲ್ಲಿ ಕಡಿದಾದ ಕೊರಕಲುಗಳೂ ಸವಕಳಿಗಳೂ ಉಳಿದುದಕ್ಕೆ ಹೊಣೆಯಾಯಿತು.

ವಿಚಾರ ಸಂಕಿರಣಗಳು, ಸಾಹಿತ್ಯ ಗೋಷ್ಠಿಗಳು, ಚರ್ಚೆಗಳು ಮುಂತಾದ ಮೌಖಿಕ ಸಂವಹನದ ವೇದಿಕೆಗಳೂ ವಿರಳವಾಗಿದ್ದುದು ಆ ಕಾಲದ ಸಾಹಿತ್ಯಿಕ ಪರಿಸರದ ಇನ್ನೊಂದು ಲಕ್ಷಣವಾಗಿದೆ. ಆಗ ಸಾಹಿತ್ಯದ ಗಂಭೀರ ಅಭ್ಯಾಸಗಳೂ ಕ್ವಚಿತ್ತಾಗಿಯೇ ನಡೆಯುತ್ತಿದ್ದುವು. ಒಂದು ಕವನ, ಸಣ್ಣಕಥೆ ಅಥವಾ ಲೇಖನಕ್ಕೆ ಸಂಕಲನದ ಸದಸ್ಯತ್ವಕ್ಕೆ ಅರ್ಹತೆಯಿದೆಯೇ ಇಲ್ಲವೇ ಎನ್ನುವ ನಿರ್ಧಾರಗಳೂ ವ್ಯಕ್ತಿ ವಿಶಿಷ್ಟವಾಗಿದ್ದುವು. ಒಂದೇ ಮಾತಿನಲ್ಲಿ ಹೇಳ ಬೇಕಾದರೆ, ಸಾಹಿತ್ಯವನ್ನು ಜರಡಿಯಾಡುವ ಎಲ್ಲ ಕ್ರಮಗಳೂ ಆಗ ಸ್ವಲ್ಪಮಟ್ಟಿಗೆ ಅಲಕ್ಷಿತವಾಗಿದ್ದುವು.

ಮಾತ್ರವಲ್ಲದೆ, ಆ ಕಾಲದ ವರ್ಣ, ವರ್ಗ ಮುಂತಾದ ಸಾಮಾಜಿಕ-ಆರ್ಥಿಕ ಸಂಘರ್ಷ ಗಳಾಗಲಿ, ರಾಜಕೀಯ-ಸಾಂಸ್ಕೃತಿಕ ಸಂವೇದನೆಗಳಾಗಲಿ ಸಾಹಿತ್ಯದ ಭಾಗಗಳಾಗಿ ಅದರೊಳಗೆ ಅವಕಾಶಗಳನ್ನು ಪಡೆದುದೇ ಹೊರತಾಗಿ ಅವು ಸಾಹಿತ್ಯವನ್ನೊಂದು ವಾಹಕವಾಗಿ ಬಳಸಿ ಕೊಳ್ಳಲಿಲ್ಲ. ಹೀಗಿದ್ದುದರಿಂದ, ಕಥನ ಕವನಗಳ ಲಕ್ಷ್ಯ – ಉದಾಹರಣೆಗೆ – ಕೇವಲ ‘ಮನಂಬುಗುವಂತೆ’ ಕಥೆ ಹೇಳುವುದೇ ಆಗಿತ್ತು. ದೇಶಭಕ್ತಿಯುತವಾದ, ಘೋಷಣಾತ್ಮಕ ವಾದ ಕವನಗಳ ಗುರಿ ವಾಚ್ಯವಾಗಿಯೋ, ಧ್ವನಿಪೂರ್ಣವಾಗಿಯೇ ಆ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿತ್ತು. ಹಾಗಾಗಿ ಸೈದ್ಧಾಂತಿಕವಾದ ತಾಕಲಾಟಗಳನ್ನಾಗಲಿ, ತಾತ್ವಿಕ ಘರ್ಷಣೆಯ ಪ್ರಕಾರಗಳನ್ನಾಗಲಿ ನಾವು ಅಲ್ಲಿ ಕಾಣುವುದು ಕಷ್ಟ ಸಾಧ್ಯ. ಬಹಳವೆಂದರೆ, ಒಳಿತು-ಕೆಡುಕುಗಳ ಧರ್ಮಾಧರ್ಮಗಳ ಮುಖಾಮುಖಿಗಳಿಗೆ ಈ ತಿಕ್ಕಾಟಗಳು ಮುಗಿತಾಯ ಗೊಳ್ಳುತ್ತಿದ್ದುವು.

ಈ ಹಿನ್ನೆಲೆಯನ್ನು ಸ್ಪಷ್ಟಪಡಿಸಿಕೊಂಡ ಅನಂತರ ನಾವು ಸೇಡಿಯಾಪು ಕಾವ್ಯ ಲೋಕವನ್ನು  ಹೊಗಲು ಸನ್ನದ್ಧರಾಗಬಹುದು.

ಸೇಡಿಯಾಪು ಅವರ ಕಾವ್ಯವನ್ನೊಂದು ಘಟಕವಾಗಿ ಸ್ವೀಕರಿಸಿದಾಗ, ವಿಶ್ಲೇಷಣೆಯ ಹಲವು ವಿಧಾನಗಳು ಸ್ಪಷ್ಟವಾಗುತ್ತ ಹೋಗುತ್ತವೆ. ಈ ವಿಧಾನಗಳು ಕೇವಲ ಅಧ್ಯಯನ ಸೌಕರ್ಯಗಳನ್ನು ಹೆಚ್ಚಿಸುವುದಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿವೆ. ಮೊದಲನೆ ಯದಾಗಿ, ಅವು ಕವಿ ಕಂಡ, ಬಾಹ್ಯ ಜಗತ್ತಿನೊಳಗೆ ನಡೆಯುತ್ತಿರುವ ಬಹು ಸೂಕ್ಷ್ಮವಾದ ಅಂತರ ವ್ಯಾಪಾರಗಳನ್ನು ಅದಕ್ಕಿಂತ ಸೂಕ್ಷ್ಮವಾದ ವಿಚಕ್ಷಣ ಪ್ರಜ್ಞೆಯೊಂದಿಗೆ ಪರಿಶೀಲಿ ಸುತ್ತವೆ. ಎರಡನೆಯದಾಗಿ, ಸ್ಥೂಲವಾದ, ಸಾಂಪ್ರದಾಯಿಕವಾದ ಮುದ್ರೆಯ ಒಳಗೆ ಅವರು ನಡೆಸುವ ಹೊಸತಿನ ಅನ್ವೇಷಣೆಯ ಗಡಿಗೆರೆಗಳನ್ನು ಅವು ವಿಸ್ತರಿಸುತ್ತ ಹೋಗುತ್ತವೆ. ಮೂರನೆಯದಾಗಿ, ಸೇಡಿಯಾಪು ಅವರ ಕಾವ್ಯತತ್ತ್ವಗಳನ್ನು ಅವು ಸೊಗಸಾಗಿ, ಎಳೆಎಳೆಯಾಗಿ ವ್ಯಾಖ್ಯಾನಿಸುತ್ತ ಹೋಗುತ್ತವೆ. ಹಾಗಾಗಿ, ಈ ಅಂಗಾಂಗಗಳ ರೂಪುರೇಷೆಗಳನ್ನು ಗುರುತಿಸಿ ಕೊಳ್ಳುತ್ತ, ಪೂರ್ಣಾಕೃತಿಯನ್ನು ಕಲ್ಪಿಸಿಕೊಳ್ಳುವ ಸೌಲಭ್ಯವು ಅಯಾಚಿತವಾಗಿ ದೊರೆತು ಬಿಡುತ್ತದೆ.

ಈ ಮಾದರಿಯ ದೃಷ್ಟಿಕೋನಕ್ಕೆ ಮೊದಲು ಗೋಚರಿಸುವುದು ಸೇಡಿಯಾಪು ಅವರ ಕಾವ್ಯದ ವಸ್ತುವೈವಿಧ್ಯ, ಈ ವಸ್ತುಗಳ ವಾಚ್ಯನೆಲೆಯ ವರ್ಗೀಕರಣ ಕ್ರಮದಲ್ಲಿ, ಜಡ-ಚೇತನಗಳೆರಡರಲ್ಲೂ ದೊರೆಯುವ ಸೌಂದರ್ಯಾನುಭೂತಿ, ಆಧ್ಯಾತ್ಮ ಚಿಂತನೆ-ಪಾರಲೌಕಿಕ, ಜಿಜ್ಞಾಸೆಗಳು, ಸೃಷ್ಟಿರಹಸ್ಯಗಳು, ಮನುಷ್ಯನೊಳಗಿನ ‘ಒಳಮನೆ’ಯ ವಾಸ್ತು ವಿವರಗಳು, ಮೌಲ್ಯಸಿದ್ದಿಗಳು-ಸಂದೇಶಗಳು, ವಿಭೂತಿ ಪೂಜೆ, ವೀರ ಮನ್ನಣೆ, ಜೀವ ಸಂಮುಖವಾದಗಳು ಮುಖ್ಯವಾಗುತ್ತವೆ. ಅವರ ‘ಎಣ್ಣೆ ಹೊಯ್ಯಮ್ಮ ದೀಪಕ್ಕೆ’ ತನ್ನ ಧ್ವನಿಶಕ್ತಿಯಿಂದ, ಸಾಂಕೇತಿಕವಾದ ಅರ್ಥವಲಯಗಳಿಂದ, ಸಂದೇಶವಾಹಕ ಕ್ಷಮತೆಯಿಂದ ತುಂಬ ಪ್ರಸಿದ್ಧವಾದ ಕವನವಾಗಿದೆ.

‘ಪಡುಬಾನ ಕರ್ಮುಗಿಲ್ ಅರಿಲೊಂದೊಂದನೆ ಮೆಟ್ಟಿ’ದ ಕ್ರಮ ಹಾಗೂ ‘ಗೋಡೆಯ ಬಳಿಯ ಹಸಿರುಗಣ್ಣಿನ ಭೂತ’ದ ಪ್ರತಿಮೆಗಳು ಒಂದಾಗಿ, ಅನನ್ಯವಾದ ಪ್ರತಿಭಟನಾತ್ಮ ಕತೆಯಲ್ಲಿ ಪರಿಣಮಿಸಿವೆ.

ಸೌಂದರ್ಯಾನ್ವೇಷಿಯಾದ ಕವಿಯ ಕಣ್ಣು ತನ್ನ ಸುತ್ತಲಿನ ಪ್ರಕೃತಿಯಲ್ಲೂ, ಅಕೃತ್ರಿಮವಾದ ಮಾನುಷ ರೂಪಗಳಲ್ಲೂ, ತಾಯ್ತನದಂಥ ಮಧುರ ಬಾಂಧವ್ಯದ ಕಟ್ಟು ಗಳಲ್ಲೂ, ಏಕಾಂತ ಸುಖದಂಥ ಭಾವದ ಸೊಗಸಿನಲ್ಲೂ ವಿಹರಿಸುತ್ತ ಅಲ್ಲಿ ಮಡುಕಟ್ಟಿರುವ ರಮ್ಯತೆಯನ್ನೆಲ್ಲ ಮೂರ್ತಗೊಳಿಸುತ್ತ ಹೋಗುತ್ತದೆ. ಈ ದೃಷ್ಟಿಯು ಮುಂಜಾವಿನ ಸೂರ್ಯನನ್ನು “ಇಳೆಮುತ್ತೈದೆಗೆ ಹಳದಿ ಕುಂಕುಮದ ಬಳಿಯುವೆಳೆಯ ಪೋರ”ನನ್ನಾಗಿ ಕಾಣುತ್ತದೆ. ಎಳೆ ಹರೆಯದ ಸಿರಿ ಮೈಗೆ ಹೊತ್ತ ಮನಸ್ಸಿಗೆ ತನ್ನ “ಕಂಕಣದ ಕಿರುದನಿಗೆ ಕಂದೆರೆಯುವ, ಬೊಗಸೆಗಂಗಳ ನೋಟದಿ ಉಯ್ಯಾಲೆಯಾಡುವ, ಮುಂಗುರುಳುಗಳ ಮಡಿಲಲ್ಲಿ ಪವಡಿಸುವ” ಸ್ನೇಹ ದೀಪಕ್ಕೆ ಕುಡಿಯಿಡುವ ದಾರಿಯನ್ನು ತೋರಿಸುತ್ತದೆ. ಏಕಾಂತದ ಶಾಂತಿಯಲ್ಲಿ ರಮಿಸುತ್ತ ತತ್ಪರತೆಯನ್ನು ಅನುಭವಿಸುತ್ತದೆ. ಲೋಕದ ತುಂಬ ಇರುವ ದೃಶ್ಯ ಸಂಪತ್ತನ್ನು ಮುಕ್ತವಾಗಿ ಪರಿಚಯಿಸುತ್ತದೆ.

“ನರುಗದ್ಯದ ಕಪ್ಪುರದಂಬುಲವನು ನೀ ಮೆಲ್ಲಿಸಿ ಚೆನ್
ನಗೆಯಾಗೆಯಿಸಿ ಮಕ್ಕಳ ಕೆನ್ನೆಗೆ ಕೆಂಪೊದವಿಸಿದೆಯ್”

ಹೊಸಗನ್ನಡದ ಮುಂಗೋಳಿ ಮುದ್ದಣನಿಗೆ ಸೇಡಿಯಾಪು ನುಡಿಯೆಸಗೆ ಸಲ್ಲಿಸುವಾಗಿನ ಆಪ್ತ ಸಿಂಚನದಿಂದ ಭಾವ-ಬಗೆಗಳೆರಡೂ ಆರ್ದ್ರವಾಗುತ್ತವೆ.

ಚಾರಿತ್ರಿಕ ವಸ್ತುಗಳ ಬಗೆಗೆ ಸೇಡಿಯಾಪು ಅವರಿಗೆ ವಿಶೇಷವಾದ ಮಮತೆಯಿದೆ.

“ಸಿರಿಯ ಮಣಿಯ ದೇಗುಲದಲಿ
ತುದಿಯ ಮಾಡದಲ್ಲಿ ತೂಗಿ

ತೊನೆದ ಘಂಟೆ ಕಡಿದು ನೆಲಕುರುಳ್ದು ಬಿರಿದು ಹೋಯ್ತು”

ಎಂದು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಾಣುವ ಅವರ ಅಭಿವ್ಯಕ್ತಿಯು ವಿಷಾದಭಾವವನ್ನು ದಟ್ಟಗೊಳಿಸುತ್ತದೆ.

ಇದೇ ಅರಸೊತ್ತಿಗೆಯ ಕೊನೆಯ ದೊರೆ ರಾಮರಾಜನ ಚರಿತ್ರೆಯೊಳಗೆ ಅನೇಕಾನೇಕ ಐತಿಹ್ಯಗಳೂ ನುಸುಳಿಕೊಂಡಿವೆ. ತಮ್ಮ ‘ತರುಣ ಧಮನಿ’ ಕಾವ್ಯಖಂಡಕ್ಕೆ ಅವು ಗಳಲ್ಲೊಂದನ್ನು ವಸ್ತುವಾಗಿ ಆಯ್ದುಕೊಂಡಿದ್ದಾರೆ. ಸೇಡಿಯಾಪು ಅವರು ಯಮನಕುಮಾರಿ ಯಾದ ಮಿಹಿರೆ ಮತ್ತು ರಾಮರಾಜರ ನಡುವಿನ ಪ್ರೇಮಾಂಕುರ, ಅದಕ್ಕೆ ಪ್ರೇರಣೆ ನೀಡಿದ ಹುಲಿಯ ಸಂಹಾರ ಕಾರ್ಯಗಳ ಮೇಲೆ ಈ ಕಾವ್ಯವಲ್ಲರಿ ಹಬ್ಬಿದೆ. ಇದರ ಚಾರಿತ್ರಿಕಾಂಸದ ಸಂದಿಗ್ಧಗಳನ್ನು,

“ಚರಿತೆಯ ನಿಜವರಿಯದಿನಿತು ಬರೆದೆ ನಮ್ಮ, ನುಡಿಯೊಡತಿಯೆ ಮನ್ನಿಸು” ಎಂಬು ದಾಗಿ ಕವಿಯೇ ಸ್ಪಷ್ಟಪಡಿಸಿದ್ದಾರೆ. ಈ ಕಾವ್ಯಖಂಡದಲ್ಲಿ ಕಾವ್ಯಾಂಶಗಳು ಅಲ್ಲಲ್ಲಿ ಹೊಳೆ ಯುವುದನ್ನು ಕಾಣುತ್ತವೆ.

‘ಮುಳ್ಳೆಲೆಗಳನೊತ್ತರಿಸುವ ಕೇದಗೆ
ಮೆಲ್ಲನೆ ಬಿರಿವಂತೆ
ಕನ್ನೆಯ ಕರಕರೆಗಳ ತೊಲಗಿಸುತೆದೆ
ಕಮ್ಮನರಳಿತಾಗ’

ಎನ್ನುವ ಸ್ವೋಪಜ್ಞವಾದ ಉಪಮೆಗಳಿಂದ, ‘ವಾಣಿಯ ಜೆಡೆ ಹೆಣೆಯುವ ಸೈರಂಧ್ರಿತನ’ ಎನ್ನುವಂಥ ಲೇವಡಿಯ ಧ್ವನಿಗಳಿಂದ; ‘ಕನ್ನಡಿಗರ ಭಾಗ್ಯ ಸುರಭಿಯ ಹಿಡಿಯಿತಂತದೊಂದು ಹಾಳುಬೇಟ’ ಎನ್ನುವ ನಿರ್ಧಾರಾತ್ಮಕ ಹೇಳಿಕೆಗಳಿಂದ ಈ ನೀಳ್ಗವನದೊಡಲು ಇದಿಕಿರಿದಿದೆ.

ಸೇಡಿಯಾಪು ಕಾವ್ಯದ ವಸ್ತುವಿನ್ಯಾಸಗಳು ಪ್ರತ್ಯೇಕ ಪ್ರಬಂಧಕ್ಕೆ ಅರ್ಹವೆನಿಸುವಷ್ಟು ವ್ಯಾಪಕವಾಗಿವೆ. ‘ಹೆಚ್ಚು ಬರೆದವನಲ್ಲ’ ಎಂದು ತಮ್ಮನ್ನೇ ಕರೆದುಕೊಂಡವರವರು. ಆದರೆ ಬರೆದ ಸ್ವಲ್ಪದರಲ್ಲೇ ‘ಪಿರಿದರ್ಥ’ವನ್ನು ಕಂಡ, ಕಾಣಿಸಿದ ಅವರ ಬಗೆಯನ್ನು ನಿರೂಪಿಸುವುದು ಈ ಸಂದರ್ಭದಲ್ಲಿ ಸಾಮಯಿಕವೇ ಆಗುತ್ತದೆ.

ಕನ್ನಡ ಕಾವ್ಯ ಸೃಷ್ಟಿಯ ಆದ್ಯಪ್ರವರ್ತಕನಾದ ಪಂಪನೇ ಮಾರ್ಗ-ದೇಸಿ ಸಮನ್ವಯವನ್ನು ಒಪ್ಪಿಕೊಂಡು, ತನ್ನ ಕಾವ್ಯಗಳಲ್ಲಿ ಅದನ್ನು ಅಳವಡಿಸಿಕೊಂಡಿದ್ದಾನೆ. ಸೇಡಿಯಾಪು ಅವರ ಕಾವ್ಯನಿರ್ಮಿತಿಯೂ ಇದೇ ಪ್ರವೃತ್ತಿಯತ್ತ ಒಲವಿರಿಸಿಕೊಂಡಿದೆ. ಈ ಹೇಳಿಕೆಯನ್ನು ಬರಿಯ ಭಾಷಿಕ ನೆಲೆಗೆ ನಿಲ್ಲಿಸಬೇಕಾಗಿಲ್ಲ. ಜನಪದ ಬದುಕಿನ ವಿಧಾನವೇ ಒಂದಾದರೆ, ಶಿಷ್ಟಲೋಕದ ನೀತಿ ನಡಾವಳಿಗಳೇ ಬೇರಾಗುತ್ತವೆ. ಒಂದೆಡೆಗಿನ ಸ್ವಕೀಯವಾದ ಸರಳವಾದ ಸಂಸ್ಕೃತಿ, ಇನ್ನೊಂದೆಡೆಗೆ ಬೇರೆಯೇ ಸಂಸ್ಕಾರಗಳಿಗೆ ಒಳಪಟ್ಟು ಪ್ರತ್ಯೇಕವಾದ ರೂಪಧಾರಣೆಯನ್ನು ಮಾಡುತ್ತದೆ. ಸೇಡಿಯಾಪು ಅವರ ಕಾವ್ಯ ಈ ಎರಡು ಕೊನೆಗಳುದ್ದಕ್ಕೂ ಸರಾಗವಾಗಿ ಸಂಚರಿಸುತ್ತದೆ. ಆ ಲಲಿತ ನಡೆಯಲ್ಲಿಯೇ ಕಾವ್ಯ ಶರೀರವನ್ನೂ, ಸತ್ವವನ್ನೂ ದೃಢಗೊಳಿಸಿ ಕೊಳ್ಳುತ್ತದೆ.

‘ನಗರಾಗ್ರ ಸೌಧಗಳು, ಗಗನಾಗ್ರಚುಂಬಿಗಳು
ಘನಸೇತು ಬಂಧಗಳು, ಜಲ ಮಹಾಬಂಧಗಳು
ಕವಿ ಮನೋಮುಕುರಗಳು, ವಾಸ್ತುಕೃತಿ ರತ್ನಗಳು
……………………………
ಜನಪದಾರಾಮಗಳು ಧಗಧಗಿಸಿ ಹೊತ್ತುತಿರೆ…….’
(ಯುಗಪುರುಷ ಬರುವನು)

ಎನ್ನುವಾಗ, ಭಾರವಾದ ಶಬ್ದಗಳನೊಡನಾಡುತ್ತ ಆಡುತ್ತ ಭಾಷೆಯ ಎಲ್ಲ ಸೂಕ್ಷ್ಮತೆಗಳನ್ನು ಬಳಸಿಕೊಳ್ಳುವ ಸೇಡಿಯಾಪು ಅವರೇ,

‘ರಾಮನ ಮಾತಿಗೆ ಮಿರುಗೇರಿತು ಮೊಗ
ನಿಮಿಷ ನಿಮಿಷಕವಳ
ನೇಸರ ಕಿರಣಕೆ ಬೆಟ್ಟದಾವರೆಗೆ
ಬಣ್ಣವೇರುವಂತೆ’
(ತರುಣಧಮನಿ)

ಎಂದು ಸಹಜವಾಗಿ ಪ್ರಾದೇಶಿಕ ಚೌಕಟ್ಟಿನೊಳಗೆ ಬಂದು ಬಿಡುತ್ತಾರೆ. ಈ ನೆಲೆಗೆ ಅವರ ಕಾವ್ಯದುದ್ದಕ್ಕೂ ಧಾರಾಳವಾದ ನಿದರ್ಶನಗಳು ಸಿಗುತ್ತವೆ. ಇದು ಎರಡು ಅತಿಗಳತ್ತ ವಾಲದ ಮಧ್ಯಮಾರ್ಗವೆನ್ನುವಂತಿಲ್ಲ ಬದಲಿಗೆ, ಒಮ್ಮೆ ನಗರ ಪರ್ಯಟನ, ಇನ್ನೊಮ್ಮೆ ಗ್ರಾಮೀಣ ನೆಲದಲ್ಲಿ ವಿಹಾರ ಹೊರಡುವ, ಕವಿಯ ಚಿತ್ತವೃತ್ತಿಯ ಪರಿಣಾಮ. ಇಲ್ಲಿ ಇವೆರಡರ ಸಮ್ಮಿಶ್ರಣವಿಲ್ಲ. ಪ್ರತಿಯಾಗಿ ನಿರ್ದಿಷ್ಟ ಸಂದರ್ಭದಲ್ಲಿ, ನಿಖರವಾಗಿ ಬಳಕೆ ಯಾಗುವ ಪ್ರತ್ಯೇಕವಾದ ಅಭಿವ್ಯಕ್ತಿ ಕ್ರಮದ ಬಗೆಗಿನ ನಿಷ್ಠೆಯಿದೆ. ಸೇಡಿಯಾಪು ಅವರ ‘ಶಾಸ್ತ್ರ ಮರ್ಯಾದೆ’ಯೇ ಇಂಥಲ್ಲೆಲ್ಲ ಕ್ರಿಯಾಶೀಲವಾಗಿದೆ; ಸಾಂಕರ್ಯಕ್ಕೆ ತಡೆಯಾಗಿದೆ.

ಸೇಡಿಯಾಪು ಅವರ ಪರಿಸರ ನಿರ್ಮಾಣ ಕೌಶಲಕ್ಕೂ ಸಾಕ್ಷ್ಯಗಳನ್ನಿಲ್ಲಿ ಗುರುತಿಸುತ್ತೇವೆ. ಈ ಸಾಮರ್ಥ್ಯಕ್ಕೆ ವಸ್ತುಶಃ ಎರಡು ನೆಲೆಗಳಿವೆ. ಒಂದು, ಕಾವ್ಯದ ಚಿತ್ರಕ ಶಕ್ತಿ. ಪರಿಸರ ವೊಂದರ ಎಲ್ಲ ಸೂಕ್ಷ್ಮ ವಿವರಗಳನ್ನು ಬಿಡಿಬಿಡಿಯಾಗಿ ನೀಡುತ್ತ ಪ್ರತಿ ನಿರ್ಮಿತಿಯನ್ನು ಸಾಧಿಸುವ ವಿಧಾನ; ಇನ್ನೊಂದು, ಕಾವ್ಯವು ಕಟ್ಟಿಕೊಡುವ ಪರಿಸರಕ್ಕೆ ಸಂವಾದಿಯಾಗಿ, ನಮ್ಮೊಳಗೇ ಆ ಪರಿಸರವನ್ನು ಸೃಷ್ಟಿ ಮಾಡಿಕೊಡುತ್ತ ಕಾವ್ಯಸತ್ವದ ಗ್ರಹಿಕೆಗಳಿಗೆ ನಮ್ಮನ್ನು ಸನ್ನದ್ಧಗೊಳಿಸುವ ಕ್ರಮ. ಈ ಎರಡೂ ನೆಲೆಗಳನ್ನು ಸೇಡಿಯಾಪು ಅವರು ವ್ಯವಸ್ಥಿತವಾಗಿ, ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಇಲ್ಲಿ, ಅಂಥ ಎಲ್ಲ ಪ್ರಯತ್ನಗಳೂ ಯಶಸ್ವಿ ಯಾಗಿವೆಯೆನ್ನುವುದು ನನ್ನ ಅಭಿಪ್ರಾಯವಲ್ಲ. ಬದಲಿಗೆ ಯಶಸ್ವಿಯಾದ ಕೆಲವು ಸಂದರ್ಭಗಳನ್ನು ಉಲ್ಲೇಖಿಸುವುದಷ್ಟೇ ಉದ್ದೇಶ. ವಿವಾಹಕ್ಕೆ ಸಿದ್ಧಳಾಗುತ್ತಿದ್ದ ಯುವ ಶಬರಿಯನ್ನು ಅವರು ಹೀಗೆ ವರ್ಣಿಸುತ್ತಾರೆ.

“ಹೊನ್ನಬೊಟ್ಟಿನ ಚೆಂಬುಲ್ಲೆ ತೊಗಲಿನ
ಚಿಗುರಿನ ಹವಣಿನ ನಿರಿಯನುಟ್ಟು
ಸಣ್ಣ ಬೆರಳಿನ ಕರಿಯ ಸುಂಡಿಲ ಕೈಗೆ
ಬಿಳಿಯಾನೆದಂತದ ಬಳೆಯ ತೊಟ್ಟು
ಜೋಲ್ವ ಮುತ್ತಿನ ಸರವುಬ್ಬಿದೆದೆಯಿಂದ
ಭಾಗೀರಥಿಯವೋಲು ಧುಮುಕುತಿರೆ
ಬಾಲೆ ಹೊಳೆದಳು. ಮುಡಿಯ ನವಿಲಗರಿ
ನೀಲಚಂದ್ರಾಸ್ಯದ ಕದಿರಂತಿರೆ”

ಭಾವುಕ ಮನಸ್ಸುಗಳು ಬಹುಸುಲಭವಾಗಿ ಈ ಶಬ್ದಚಿತ್ರವನ್ನು ತಮ್ಮೊಳಗೆ ಜೀವಂತ ಗೊಳಿಸಿಕೊಳ್ಳಬಹುದು. ಕಾವ್ಯವಿಮರ್ಶೆಯ ಘನ, ಜಟಿಲ ತತ್ತ್ವಗಳನ್ನು ಒತ್ತಟ್ಟಿಗಿಟ್ಟು ಸಂವಹನ ಯೋಗ್ಯತೆಯನ್ನೇ ಮಾನಕವಾಗಿಟ್ಟುಕೊಂಡಾಗ, ಸ್ವತಂತ್ರ ಸತ್ತ್ವವಿರುವ ಇಂಥ ಕಾವ್ಯಾಭಿವ್ಯಕ್ತಿಯ ರಸಪುಷ್ಟಿ ಗಮನಕ್ಕೆ ಬರುತ್ತದೆ. ಹಾಗೆ ನೋಡಿದರೆ, ಇಡಿಯ ‘ಪುಣ್ಯಲಹರಿ’ ಖಂಡಕಾವ್ಯವೇ ಇಂಥ ಬಿಡಿಯಾದ, ಸ್ವಯಂಪೂರ್ಣವಾದ ಚಿತ್ರಗಳ  ಕ್ರಮಬದ್ಧವಾದ ಜೋಡಣೆಯೇ ಆಗಿದೆಯೆನ್ನಬೇಕು.

ಈ ಬಾಹ್ಯ ವಿವರಗಳ ಸಾಂದ್ರತೆಯನ್ನು ನಿಯಂತ್ರಿಸುತ್ತಾ ಕವಿ, ಭಿಲ್ಲರ ಕನ್ಯೆ, ಹಿಂಸೆಯೇ ಜೀವಶೈಲಿಯಾಗಿರುವ ಪರಿಸರವೊಂದರ ಶಿಶುವಾಗಿದ್ದ ಶಬರಿಯ ವ್ಯಕ್ತಿತ್ವವು ಹಣ್ಣಾಗುವ ಕ್ರಿಯೆಯನ್ನು ಪರಿಚಯಿಸುತ್ತಾರೆ. ವ್ಯಕ್ತಿತ್ವ ನಿರ್ಮಾಣದಲ್ಲಿ ಪರಂಪರೆ-ಪರಿಸರಗಳೆರಡೂ ನಿರ್ದಿಷ್ಟ ನಿಷ್ಪತ್ತಿಯಲ್ಲಿ ಪ್ರಭಾವ ಬೀರುತ್ತವೆನ್ನುವುದನ್ನು ಆಧುನಿಕ ವಿಜ್ಞಾನವೂ ಒಪ್ಪುತ್ತದೆ.  ವಂಶವಾಹಿಯಾಗಿ ಬಂದ ಗುಣಲಕ್ಷಣಗಳು ಮತ್ತು ಪರ್ಯಾವರಣದ ಸಂಭವಗಳೆರಡನ್ನೂ ನಿವಾರಿಸಿಕೊಂಡ ಶಬರಿಯ ಮನಸ್ಸತ್ವ ಯಾವ ನೆಲೆಯದಾಗಿರಬಹುದೆನ್ನುವ ಕುತೂಹಲ ಕವಿಯನ್ನು ಕಾಡುತ್ತದೆ. ಅವರು ‘ಶಬರಿಯ ಮಾನಸಹಂಸವು ಮಿಡಿಯುತ್ತಿದ್ದ’ ಲಯವನ್ನು ಅನನ್ಯವಾದ ರೀತಿಯಲ್ಲಿ ಗ್ರಹಿಸಿದ್ದಾರೆ.

‘ಬಣ್ಣ ಬಣ್ಣದ ಬಡವು ಜೀವಿಗಳನು
ಕೊಂದ ಮದುವೆ ಹೆಣ್ಣ ಮನಸಿನಲಿ
ಹುಣ್ಣ ತೋಡಿತು, ಸಂಸಾರದಾಶೆಯ ಕಣ್ಣನು ಕಿತ್ತು ಗಂಟಲನೊತ್ತಿತು’
(ಪುಣ್ಯ ಲಹರಿ)

ಎಂದು, ಜೀವಸಂಕುಲದ ಕಗ್ಗೋಲೆ ಶಬರಿಯ ಮೃದುಮನಸ್ಸಿನ ಮೇಲೆ ಬೀರಿದ ಪರಿಣಾಮ ವನ್ನು ಅವರು ಹಿಡಿದಿಡುತ್ತಾರೆ.

‘ಕಲ್ಲಸೆರೆಯಿಂದ ಧುಮುಕುವ ತಿಳಿನೀರು ಬಲ್ಲುದೆ ತನ್ನ ಗುರಿಯ ದಾರಿಯ? ಪುಣ್ಯಪರಿಪಾಕದಂತೆ ಹರಿವುದಲ್ತೆ?’ (ಅದೇ) ಎನ್ನುವ ಹೇಳಿಕೆಯ ಧ್ವನಿಶಕ್ತಿಯನ್ನೂ ಇಲ್ಲಿ ಉಲ್ಲೇಖಿಸಬೇಕು. ‘ಕಲ್ಲಸೆರೆ’ ಮನಸ್ಸಿನ ಅಜ್ಞಾನದ ಆವರಣವನ್ನೂ, ಅದನ್ನು ಛೇದಿಸುವ ಚೈತನ್ಯದ ಸತ್ವವನ್ನೂ, ಈ ಸೆರೆಯುಳಿದ ಸ್ವತಂತ್ರ ಅಸ್ತಿತ್ವವನ್ನೂ, ‘ಪುಣ್ಯಪರಿಪಾಕ’ ಹರಿದಲ್ಲೇ ಅದರ ಪಾತ್ರ ನಿರ್ಮಾಣವಾಗುವ ವೈಚಿತ್ರ್ಯವನ್ನೂ ಎಷ್ಟು ಸೂಕ್ಷ್ಮವಾಗಿ ಇದು ಲಕ್ಷಿಸುತ್ತದೆ!

ಶಬರಿಯ ಪರಿವರ್ತನೆಯ ಬಗೆಯನ್ನು ಹತ್ತಿರದಿಂದ ಗಮನಿಸಿದಾಗ, ಅವಳ ಶರೀರದ ಪಕ್ವತೆಗೆ ಸಮಾನಾಂತರವಾಗಿಯೇ ಅವಳ ಅಂತರಂಗದ ಮಾಗುವಿಕೆಯನ್ನೂ ಕವಿ ಕಾಣಿಸುತ್ತಾರೆನ್ನುವುದು ಸ್ಪಷ್ಟವಾಗುತ್ತದೆ. ‘ನೈಸರ್ಗಿಕವಾದ ಮಾಗುವ ಕ್ರಿಯೆ, ಸ್ಥೂಲ ದೃಷ್ಟಿಗೆ ಅಗೋಚರವಾಗಿ, ಕಾಯಿಯೊಳಗೆ ಸುಪ್ತವಾಗಿರುವ ಜೀವಸತ್ವಗಳಿಗೆ ಜೀವ ನೀಡುತ್ತ ಅದರ ಫಲವತ್ತತೆಯಲ್ಲಿ ಪರ್ಯಾಪ್ತವಾಗುವಷ್ಟೇ ಸಹಜ ಈ ಮನಸ್ಸಿನ ಹಣ್ಣಾಗುವಿಕೆ’ ಎನ್ನುವ ಅವರ ನಿಲುವು ತುಂಬ ಪ್ರಿಯವೆನಿಸುತ್ತದೆ. ಇಲ್ಲಿ, ರೂಕ್ಷವಾಗಿದ್ದ ಶಬರಿಯ ವ್ಯಕ್ತಿತ್ವದ ಬೆಳವಣಿಗೆ, ಬದಲಾವಣೆಗಳನ್ನು ನಮ್ಮ ಮನಸ್ಸೂ ಹಂತ ಹಂತವಾಗಿಯೇ ಸ್ವೀಕರಿಸುತ್ತದೆ. ಈ ಹಿನ್ನೆಲೆಯಲ್ಲಿ ಅವಳು “ಕೇವಲ ಬ್ರಹ್ಮರಸವಾಗಿ ಪರಿಪೂರ್ಣ ವಾದಳಾದಳು ಸತ್ಯ-ಶಿವ-ಸುಂದರ” ಎನ್ನುವ ಭಾರತವಾಕ್ಯವನ್ನು ನಾವು ಅಂಗೀಕರಿಸುತ್ತೇವೆ.

ಇಲ್ಲಿ ಕೇವಲ ಕಥನಕ್ಕೆ ಪ್ರಾಧಾನ್ಯವೆನ್ನುವಂತಿಲ್ಲ. ಆತ್ಮೋನ್ನತಿಯ ಪ್ರತಿ ಮೆಟ್ಟಿಲಿ ನಲ್ಲಿಯೂ ಸಾವಧಾನದಿಂದ ಕ್ಷಣಕಾಲ ತಡೆದು, ಆ ಸ್ಥಿತಿಯನ್ನು ನಮ್ಮ ಪ್ರಜ್ಞಾವಲಯ ದಲ್ಲೂ ಪಡಿಮೂಡಿಸಿದ ಅನಂತರವೇ ಮುಂದಿನ ಮೆಟ್ಟಲಿಗೇರಬೇಕೆನ್ನುವ ಸಂಯಮವಿದೆ. ಇದನ್ನು ಸೇಡಿಯಾಪು ಅವರ ‘ಕಾವ್ಯ ಪರಿಸರದ ನಿರ್ಮಾಣ ಯೋಗ್ಯತೆ’ಯ ಪ್ರತೀಕವೆಂದು ಕರೆಯಬಹುದು.

ಸೇಡಿಯಾಪು ಕಾವ್ಯದ ಬಗೆಗೆ ಪ್ರಸ್ತಾಪಿಸರಲೇಬೇಕಾದ ಇನ್ನೊಂದು ಅಂಶ. ಅವರ ಲೋಕಗ್ರಹಿಕೆಯ ಸ್ವರೂಪ. ಅವರು ಕಂಡಲೋಕ ಪುಣ್ಯಾಕೃತಿಯದಾಗಿದೆ. ಅಲ್ಲಿ ಕರುಣೆಯಿರು ವಂತೆಯೇ ಕ್ರೌರ್ಯವೂ ಇದೆ. ಸೃಷ್ಟಿಕ್ರಿಯೆಯ ಮಗ್ಗುಲಿನಲ್ಲಿಯೇ ನಿರಂತರ ವಿನಾಶವು ನಡೆಯುತ್ತಲೆ ಇದೆ. ನಂಬಿಕೆ, ವಿಶ್ವಾಸಗಳಿರುವಂತೆಯೇ ಜನಸಮುದಾಯದಲ್ಲಿ ವಿದ್ರೋಹ-ವಂಚನೆಗಳೂ ಇವೆ. ಈ ದ್ವಂದ್ವಗಳಿಲ್ಲದ ಬದುಕಿಗೆ ವಸ್ತು ಪ್ರಪಂಚನ್ನು – ಅವರ ಪ್ರಕಾರ- ಸ್ಥಾನವೇ ಇಲ್ಲ. ಇವೆಲ್ಲವುಗಳಿಗೆ ಸೃಜನಾತ್ಮಕ ಪ್ರತಿಕ್ರಿಯೆಗಳಾಗಿ ಅವರ ಕವನಗಳು ಅಸ್ತಿತ್ವಕ್ಕ ಬರುತ್ತವೆ. ಹಾಗೆ ವಿವಿಧ ರೂಪಗಳನ್ನು ಧರಿಸುವ ಅವರ ಸಾಹಿತ್ಯಿಕ ಅನುಭವಗಳು ಮಾತ್ರ ‘ವಿಶ್ವಾತ್ಮಪ್ರಜ್ಞೆ’ಯ ಮೂಲಕ ಹಿಂದೇ, ಅದರ ಮುದ್ರಾಂಕಿತವನ್ನು ಪಡೆದೇ ಹೊರ ಬರುತ್ತವೆ. ಎಂದರೆ, ಮನುಷ್ಯನ ಸಾಮರ್ಥ್ಯ ಮತ್ತು ಮತಿಗಳನ್ನು ಅವರು ಪರಸ್ಪರ ಪೂರಕವಾದ ನೆಲೆಗಳಲ್ಲಿಟ್ಟು, ಸಮತೂಕವನ್ನು ಕಾಯ್ದುಕೊಳ್ಳುತ್ತಾರೆ. ಅವೆರಡೂ ಸಂಧಿಸುವ ಐಕ್ಯಬಿಂದುವಿನ ಹುಡುಕಾಟದಲ್ಲಿ ಅವರ ಕಾವ್ಯ ತಲ್ಲೀನವಾಗುತ್ತದೆ. ಈ ಧ್ವನಿ  ಗಾಢವಾಗುವ ಹಲವು ಸಂದರ್ಭಗಳಲ್ಲೊಂದನ್ನು ಇಲ್ಲಿ ಉಲ್ಲೇಖಿಸಬಹುದು.

“ಆದಿಯ ಮಾನವರೀ ಧಾತ್ರಿಯಲ್ಲಿ ಮಾನವ ಧಾತ್ರಿಯ ಕಂದಿರೆ
ಆರ್ಯದಾರೊ ಅಲ್ಲದವರಾರೊ ಒಡಗೂಡಿ ಒಂದೆ ಹಾಲುಂದಿರೆ?
ತಾಮ್ರ ತವರಗಳು ಕರಗಿ ಕೊಡಿ ಘನಘಂಟೆಯಾಗಿ ಧಾಣಿಸುತಿರೆ
ತಾಮ್ರವೆಲ್ಲಿ ತಾಂ ತವರವೆಲ್ಲಿ? ಬರಿಗನಸುಗಾವರವ ಮಾಣು
ರೇ ಭರತಭೂಮಿವರಪುತ್ರ ನೀ ಮಾನುಷ್ಯ ಕುಲಸುಪುತ್ರ
ನೀನಖಿಲ ಜಗನ್ಮಿತ್ರ”
(ಜಯ ಭಾರತಪುತ್ರ)

ಇದು, ಪಕ್ಕದವನ ದೌರ್ಬಲ್ಯವನ್ನು ತನ್ನ ಶಕ್ತಿಯನ್ನಾಗಿ ಕಾಣುವ ಸ್ವಾರ್ಥವಲ್ಲ, ಬದಲಿಗೆ ಆ ದೌರ್ಬಲ್ಯವನ್ನು ತನ್ನ ಶಕ್ತಿಯ ಬಲದಿಂದ ತುಂಬುವ, ಹಾಗೆ ತುಂಬುತ್ತ ಸಮಷ್ಟಿಯ ತೋಳ್ಬಲವನ್ನು ಹೆಚ್ಚಿಸುವ ಲೋಕಹಿತಾಸಕ್ತಿ, ಪ್ರತ್ಯೇಕತೆಯ ಮಿತಿಗಳನ್ನು ವಿಲೀನದ ಸೌಖ್ಯ, ರಕ್ಷಣೆಗಳ ಛತ್ರಛಾಯೆಯಡಿಗೆ ತರುವ ಪ್ರಾಮಾಣಿಕತೆ.

ಅವರ ಮುಂದೆ ಕಾಣುವ ಜಗತ್ತಿನಲ್ಲಿ,
“ನರಗೆ ಬಾಗದ ಹಣೆಯ ಬೆಳಗಿದ
ಘನಕಿರೀಟವನಡಿಮಗುಚಿ ‘ಕುಂ –
ಪನಿ’ಯ ಬಾಗಿಲ ಭಿಕ್ಷೆಯೋಡನು ಮಾಡಿ ಮುದುವಡೆದು
ಉಂಬಳಿಯಂಬಲಿಯ ಸವಿದ
(ಕೃಷ್ಣಕುಮಾರಿ)

ಜೀವಗಳ್ಳತನ, ಅವಕಾಶವಾದಗಳಿಗೂ ಆಸ್ಪದವಿದೆ. ಇಲ್ಲೆಲ್ಲ ಅಂಥ ಮೌಲ್ಯರಾಹಿತ್ಯ ಸ್ಥಿತಿ ತಮ್ಮಲ್ಲಿ ಮೂಡಿಸಿದ ತಿರಸ್ಕಾರ, ಜಿಗುಪ್ಸೆಗಳನ್ನು ಸೇಡಿಯಾಪು ವ್ಯಕ್ತಪಡಿಸಿದ್ದಾರೆ. ನಮ್ಮ ಇತಿಹಾಸದ ಕರಿಕಲೆಗಳಿಗೂ ತಮ್ಮ ಸಾಹಿತ್ಯದಲ್ಲಿ ಜಾಗ ನೀಡಿದ್ದಾರೆ. ಈ ಲಕ್ಷಣ ಗಳಿಂದಾಗಿ, ಸೇಡಿಯಾಪು ಕಾಣುವ ಲೋಕ ಯಾವುದೇ ಆದರ್ಶದ ಅವಕುಂಠನ ಹೊದೆಯು ವುದಿಲ್ಲ. ವಾಸ್ತವದ, ನಿಜದ ಪ್ರತಿಕೃತಿಯಾಗಿ ಅರ್ಥವನ್ನು ಗಳಿಸಿಕೊಳ್ಳುತ್ತದೆ.

ಈ ನೆಲೆಯೇ ಅವರಿಗೆ ನೆಲದ ನೆಂಟನ್ನು ಕಡಿದುಕೊಳ್ಳುವ ಎಲ್ಲ ಮಹತ್ವಾಕಾಂಕ್ಷೆಗಳ ಅರ್ಥರಾಹಿತ್ಯವನ್ನು, ನೆಲದ ಆಶ್ರಯವನ್ನು ಧಿಕ್ಕರಿಸುವ ಬದುಕು-ಭಾವಗಳೆರಡೂ ಅತಂತ್ರವೆನ್ನುವ ಅರಿವನ್ನು ಸೂಚಿಸುತ್ತದೆ. ಆ ಸ್ಪಂದನಗಳಿಗೆ ಅವರು,

“ಸಿರಿಯೊಡೆಯರ ವಿಬುಧರ ಕೆಳೆ ಸಾಕು
ಕರೆಯಾಗಲಿ, ಮುರಿಯಾಗಲಿ ಬೇಕು
ಬಸಿರ ಬೆಳಕೆ ಬಾ ಕಂದಾ ಎನುತ
ಕರೆದು ಕಡಲು ಕೆಡೆವುದು ನೆಲಕಳುವ”
(ಖಂಡಚಂದ್ರ)

ಎನ್ನುತ್ತ ಶಬ್ದ ಮಾಧ್ಯಮಕ್ಕೆ ಅಳವಡಿಸುತ್ತಾರೆ.

ಇಂಥ ಹಲವು ನಿದರ್ಶನಗಳನ್ನು ಅವರ ಕಾವ್ಯವಲ್ಲರಿ ಅರಳಿಸುತ್ತ ಹೋಗುತ್ತದೆ. ಎಲ್ಲ ಕಾಲದ, ಎಲ್ಲ ಕಾವ್ಯಗಳ, ಹಾಗೆ ನೋಡಿದರೆ ಸಮಗ್ರ ಸಾಹಿತ್ಯದ – ಪ್ರಮುಖ ಲಕ್ಷಣಗಳಲ್ಲಿ ಒಂದಾಗಿರುವ ಮೌಲ್ಯ ಪ್ರತಿಪಾದನೆಯನ್ನು ಸೇಡಿಯಾಪು ಅವರ ಕಾವ್ಯವೂ ಅತ್ಯಂತ ನಿಷ್ಠೆಯಿಂದ ಮಾಡಿದೆ. ಅವರ ಎರಡು ಖಂಡಕಾವ್ಯಗಳು – ವಿಶೇಷತಃ – ಸಾರ್ವಕಾಲಿಕ ಮೌಲ್ಯಗಳನ್ನು ಲೌಕಿಕ – ಪಾರಮಾರ್ಧಿಕ ನೆಲೆಗಳಲ್ಲಿ ವಿಶ್ಲೇಷಿಸುವ, ವಿಶದಪಡಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ. ವಾಸ್ತವವಾಗಿ ಈ ಎರಡು ನೆಲೆಗಳು ಪ್ರತ್ಯೇಕ ಖಂಡಗಳಾಗಿರದೆ, ಒಂದೇ ಕಾಂಡದ ಬೇರೆ ಬೇರೆ ಸ್ತರಗಳಷ್ಟೇ ಎನ್ನುವುದು ಈ ಪರಿಶೀಲನೆ ಯಿಂದ ದೃಢಪಡುತ್ತದೆ.

ಉದಾಹರಣೆಗೆ, ‘ನಾಯನಡತೆ’ ಅಥವಾ ‘ಶ್ವಮೇಧ’ದಲ್ಲಿ ಪ್ರಾಣಿ ಪ್ರತೀಕವನ್ನು ತುಂಬ ಯಶಸ್ವಿಯಾಗಿ ಬಳಸಿರುವ ಸೇಡಿಯಾಪು ಅವರು ಸ್ವಾಮಿಭಕ್ತಿಯನ್ನೂ, ಅವಿಚಲ ನಂಬಿಕೆ, ಶ್ರದ್ಧೆಗಳನ್ನೂ, ಪ್ರತಿಕೂಲ ಪರಿಸ್ಥಿತಿಯಿಂದಾಗಿ ಕೆಡದ ಧೃತಿಯನ್ನೂ ಎತ್ತಿ ಹಿಡಿದಿದ್ದಾರೆ. ನಾಯಿಯಂಥ ಕ್ಷುಲ್ಲಕ ಜೀವಿಯೂ ಸ್ವಂತದ ಮೌಲ್ಯವ್ಯವಸ್ಥೆಯೊಂದನ್ನು ಸೃಷ್ಟಿಸಿಕೊಂಡು,  ಎಂಥ ಸನ್ನಿವೇಶದಲ್ಲೂ ಅದರ ಚೌಕಟ್ಟಿಗೆ ಭಂಗ ಬಾರದಂತೆ ಕಾಯ್ದುಕೊಳ್ಳಬಲ್ಲುದೆಂಬ ವಿಸ್ವಾಸಕ್ಕೆ ಅವರು ಬದ್ಧರಾಗಿದ್ದಾರೆ.

“ನಾಯೊಳಿಂಥ ಮಹಿಮೆ ಕಂಡುದುಂಟೆ?
ಮೂರೆ ದಿವಸದಲ್ಲಿ ಗುಮ್ಮಣಾಳ್ವನೆಂಬ ರಕ್ಕಸನನು
ದೇವನಾಗಿ ಮಾಡಿ ಬಂದೆ”
(ಶ್ವಮೇಧ)

ಎನ್ನುವ ಉದ್ಗಾರದ ಹಿಂದೆ ಸಶಕ್ತವಾದ ಸಂಕೇತವೊಂದಿದೆ. ಮೇಲ್ನೋಟಕ್ಕೆ ಸಾಮಾನ್ಯ. ಕುಬ್ಜವೆನಿಸಬಹುದಾದ ವ್ಯಕ್ತಿತ್ವದೊಳಗೂ ಸಾಮರ್ಥ್ಯದ ಸೆಲೆಯೊಂದು ಇದ್ದೇ ಇರುತ್ತದೆನ್ನುವುದನ್ನು ಅವರು ಗುರುತಿಸುತ್ತಾರೆ. ಅಂಥ ನೈತಿಕ ಶಕ್ತಿಯ ಸಂಪರ್ಕದಿಂದ ಅಮಾನವೀಯ ವರ್ತನೆಗಳೂ, ತಾಮಸ ಮನೋಭಾವಗಳೂ ಪರಿವರ್ತಿತವಾಗುತ್ತ ವೆನ್ನುವುದನ್ನು ಸೇಡಿಯಾಪು ಅವರು ಅತಿ ಆದರ್ಶದತ್ತ ವಾಲದ ಸಂಭವನೀಯ ಆಯಾಮದಲ್ಲೇ ತೋರಿಸಿಕೊಡುತ್ತಾರೆ.

‘ಪುಣ್ಯಲಹರಿ’ ಅಥವಾ ‘ಶಬರಿ’ಯಲ್ಲಿ ದೈವಭಕ್ತಿಯ ಭಾವವೇ ಬಲಿತು. ಸರ್ವಾ ರ್ಪಣಿಯ ಸ್ವರೂಪವನ್ನು ತಾಳುವುದನ್ನು ಕಾಣುತ್ತೇವೆ. ಇದು ಒಂದೆಡೆಯಿಂದ ಅಹಂಕಾರದ ಸಂಪೂರ್ಣ ನಿರಸನ. ಇನ್ನೊಂದೆಡೆಯಿಂದ, ಭಗವಂತ ತತ್ತ್ವದ ಗೂಢ, ಗಾಢ ಬಂಧಗಳ ಪರಿಪೂರ್ಣ ಸಾಕ್ಷಾತ್ಕಾರ. ಈ ದಿವ್ಯಾನುಭೂತಿಯೊಂದಿಗೆ ಶಬರಿಯ,

“ಜೀವಿತಕೆ ಹೊಸ ಹೊಗರಾಯ್ತು ಹೃದಯದ ರಿಕ್ತತೆ ಹರಿದೋಡಿತು
ರಾಮಮೂರುತಿ ಬಿಲ್ಲತಿಯೊಲವಿನೊಳ್ ಭಿಲ್ಲ ಸುಂದರವಾಗಿ ನೆಲೆಗೊಂಡಿತು;
ಶ್ಯಾಮಲಾಂಗದ ಬಿಲ್ಲುಬತ್ತಳಿಕೆಯ, ದೀನಕೃಪಾರಸ ದೃಷ್ಟಿಗಳ
ಶ್ರೀಲಲಾಮದ, ವೀರವಕ್ಷದ ದಿವ್ಯಧಾಮ ಮನೋರಾಜ್ಯದೊಳಗಾಳಿತು

ಎನ್ನುವಾಗ ಕವಿಯೂ ಸಾರ್ಥಕ ಭಾವಕ್ಕೆ ವಶವರಾಗುತಾರೆ; ಆ ಸದ್ಭೋಧೆಯನ್ನು ಎದೆಯಾಳಕ್ಕೆ ಇಳಿಸಿಕೊಂಡ ಶಬರಿಯ ತಾದಾತ್ಮ್ಯವನ್ನು ಪರಿಚಯಿಸುತ್ತಾರೆ.

ವಿಹಂಗಮ ನೋಟಕ್ಕೆ ಸೇಡಿಯಾಪು ಅವರ ಕಾವ್ಯ, ಸಂಘರ್ಷಗಳ ಗೋಜಿಗೆ ಹೋಗದ, ಸಂಕೀರ್ಣತೆಯನ್ನು ತಡವದ ಸರಳ ಸಮೀಕರಣಗಳನ್ನು ಆತುಕೊಳ್ಳುವ ಪ್ರಕಾರದ್ದಾಗಿ ಕಾಣುತ್ತದೆ. ಈ ಪೂರ್ವಗ್ರಹೀತಗಳನ್ನು ಬದಿಗಿಟ್ಟು, ದೃಷ್ಟಿಯನ್ನು ಹರಿತಗೊಳಿಸಿ ಕೊಂಡಾಗಷ್ಟೇ ಅವರ ಕಾವ್ಯದೊಳಗೆ ಹುದುಗಿರುವ ಸುಪ್ತವಲಯಗಳು ಪ್ರಕಾಶಕ್ಕೆ ಬರುತ್ತವೆ. ‘ಕೃಷ್ಣಕುಮಾರಿ’ಯ ಕಥಾ ಹಂದರವನ್ನು ಗಮನಿಸಿ. ಕೃಷ್ಣಕುಮಾರಿಯನ್ನು ಕೈ ಹಿಡಿಯಲು ಬಯಸಿದ ಅನೇಕ ಬಲಾಢ್ಯ ರಾಜಪುತ್ರರನ್ನು “ಮದಮುದಿತ ನೃಪಕಲಭ”ಗಳನ್ನು ಎದುರಿಸ ಲಾರದ ದುರ್ಬಲನಾದ ಆಕೆಯ ತಂದೆಯ ಚಿತ್ರವನ್ನು ಕಲ್ಪಿಸಿಕೊಳ್ಳಿ ತನ್ನ ನಿಶ್ಯಕ್ತಿಯನ್ನೂ, ಸ್ವಾರ್ಥವನ್ನೂ ಮುಚ್ಚುವಂತೆ ಆತ ಹೇಳುವ,

“ಹೆಣವ ಹುಗಿಯದೆ ಹದ್ದುಗಳ ಹಾ –
ರಿಕೆಯ ತಡೆಯಲಿಕಹುದೆ ವಿಷವನು
ಕುಡಿದು ಮಡಿ! ಮರುನುಡಿಯದಿರು ಮಗಳಾದೊಡೆನಗೆ”
(ಕೃಷ್ಣಕುಮಾರಿ)

ಮಾತುಗಳನ್ನು ಪರಿಭಾವಿಸಿ. ಇದು, ಮೌನಧ್ವನಿಯನ್ನು ಚಾಕಚಕ್ಯತೆಯಿಂದ ಬಳಸಿ ಕೊಳ್ಳುವ, ಸೇಡಿಯಾಪು ಅವರು ಸ್ಪರ್ಶಿಸುವ ಆಂತರಿಕ ಸಂಘರ್ಷದ ಪರಿ. ಮಗಳ ಮೇಲಿನ ಪ್ರೀತಿ, ಅಸ್ತಿತ್ವವೇ ಅಲುಗಾಡುವ ಪ್ರಸಂಗದ ಭೀತಿ, ಅಪ್ರಿಯ ನಿರ್ಧಾರಕ್ಕೆಳೆಯುವ ನಿಷ್ಠುರ ಸ್ವಾರ್ಥಗಳ ಒಳತೋಟಿಗಳನ್ನು ಗಮನಿಸಿದಷ್ಟೂ ಮನುಷ್ಯನ ಅಂತರಂಗದ ವ್ಯಾಪಾರಗಳ ಗೋಜಲು ಕಣ್ಣು ಕಟ್ಟುತ್ತದೆ.

‘ಶ್ವಮೇಧ’ದಲ್ಲಿ ಬರುವ, ಪ್ರೀತಿಯ ನಾಯಿಯನ್ನು ಗುಮ್ಮಣಾಳ್ವನಲ್ಲಿ ಒತ್ತೆಯಿಡ ಬೇಕಾಗಿ ಬಂದ ಅನಿವಾರ್ಯತೆಯನ್ನು ಧರ್ಮರಾಯಸೆಟ್ಟಿ ಸಂಧಿಸುವ ಕ್ರಮದಲ್ಲೂ ಒಳಗುದಿಯೇ ಇದೆ.

“ಅದನು (ನಾಯಿಯನ್ನು) ನಮಗೆ ಒತ್ತೆಯಿಟ್ಟು ಮಾತ ಸಲಿಸು !
ಮೂಲದವನ ಬಿಟ್ಟೆ ಎಂದು ಕಡ್ಡಿ ಮುರಿದು ನೆಲಕೆ
ಬಿಸುಡೆ, ಕಾಲ್ಗೆ ನಾಟಿದೊಂದು ಮುಳ್ಳ ಕಿತ್ತ ತೆರದಿ
ವೇದನಾನುಭೂತಿ – ನಿರ್ವೃತಿಗಳು ಸೆಟ್ಟಿಗಾಯ್ತು ಚಂದುವಗಲಿಕೆಯು
– ಕುಡಿಯಗಾದ ಬಿಡುಗೆಯಲಿ”

ಹೀಗೆ ಸೇಡಿಯಾಪು ಅವರು ಪರಿಚಯಿಸುವ ಹೋರಾಟದ ಕ್ರಮ ಹೆಚ್ಚಿನ ಸಂದರ್ಭಗಳಲ್ಲಿ ವಾಚ್ಯದ ಬಯಲಿಗೆ ಬಾರದೆ, ಧ್ವನಿತರಂಗಗಳೊಳಗೆ ಉಳಿಯುವುದರಲ್ಲೇ ತೃಪ್ತವಾಗುತ್ತವೆ.

ಸಾಹಿತ್ಯದಲ್ಲಿ ಅನ್ಯಾನ್ಯ ಸಂವೇದನೆಗಳ ಪರಿಕಲ್ಪನೆಗಳು ನವ್ಯ ಹಾಗೂ ನವ್ರೋವಿಮರ್ಶೆಯ ಪರಿಭಾಷೆಯಲ್ಲಿ ಸೇರ್ಪಡೆಗೊಂಡುದಾಗಿದೆ. ಹೀಗೆಂದ ಮಾತ್ರಕ್ಕೆ ಆ ಮೊದಲಿನ ಸಾಹಿತ್ಯದಲ್ಲಿ ವಿಭಿನ್ನ ಸಂವೇದನೆಗಳಿರಲಿಲ್ಲವೆಂದಂತಾಗಲಿಲ್ಲ. ಬಹಳವೆಂದರೆ, ಅವುಗಳಿಗೆ  ಪ್ರತ್ಯೇಕವಾದ ಸಂಜ್ಞೆಗಳು ಇರಲಿಲ್ಲವೇನೋ, ಈ ದೃಷ್ಟಿಯಿಂದ ಸೇಡಿಯಾಪು ಅವರ ಕಾವ್ಯವು ಅನೇಕ ಮಹತ್ವದ ಸುಳುಹುಗಳನ್ನು ಬಿಟ್ಟುಕೊಡುತ್ತವೆ. ಅಲ್ಲಿ ಅನೇಕ ಬಗೆಯ ಸಂವೇದನಾಂಶಗಳು, ದ್ವಂದ್ವಗಳು, ವೈರುಧ್ಯಗಳು, ಪ್ರಜ್ಞೆಗಳು ಆಶ್ರಯ ಪಡೆದಿರುವುದನ್ನು ಕಾಣುತ್ತೇವೆ. ಸ್ನೇಹ, ಕರುಣೆ, ಆವೇಶ, ಕ್ರೌರ್ಯ, ಶೋಷಣೆ, ಕ್ರೋಧ, ದುಃಖ, ಉದ್ವೇಗ, ಪಶ್ಚಾತ್ತಾಪ ಮುಂತಾದ ಭಾವ ತೀವ್ರತೆಗಳೂ ಇಲ್ಲಿ ವ್ಯಾಪಕವಾಗಿ ಅವಕಾಶಗಳನ್ನು ಗಳಿಸಿಕೊಂಡಿವೆ. ಇವುಗಳಲ್ಲಿ ಹೆಚ್ಚಿನವುಗಳ ಪ್ರದರ್ಶನಕ್ಕೆ ‘ಶ್ವಮೇಧ’ವು ಯೋಗ್ಯವಾದ ವೇದಿಕೆಯನ್ನು ಒದಗಿಸುತ್ತದೆ.

ತನ್ನ ಸ್ವಾಮಿಭಕ್ತಿಯನ್ನು ಸಾರ್ಥಕಗೊಳಿಸಿಕೊಂಡ, ನಂಬುಗೆಯ ಮೂರ್ತರೂಪವಾದ  ನಾಯಿ ಚಂದುವನ್ನು ದುಡುಕಿನಿಂದ ಕೊಂದ ಧರ್ಮರಾಯ ಸೆಟ್ಟಿಯ ಎದೆಯ ಉರಿಯನ್ನು ಹೊರಗಿಕ್ಕುವ,

“ಬಾರೊ ಬಂಟ, ತೆಗಲೆಯೇರಿ ಹೀರೊ ನಿನ್ನ ಕೊಂದ ಕೊಬ್ಬ” ಎನ್ನುವ ಆಹ್ವಾನವಾಗಲಿ, ಶರೀರದ ಸಂಬಂಧವನ್ನು ಬಿಡಲಾರದ ಸಂಕಟವೇ ಮಾತಾಗುವ ಕೃಷ್ಣಕುಮಾರಿಯ ಕೊನೆ ಯಾಗಲಿ ನಮ್ಮ ಸಂವೇದನೆಗಳನ್ನು ತಿವಿದೆಬ್ಬಿಸುತ್ತವೆ. ವ್ಯವಸ್ಥೆಯ ಎಲ್ಲ ಬಂಧನಗಳನ್ನು ಸ್ವೇಚ್ಛೆಯಿಂದ ಕಳಚಿಕೊಂಡ ಶಬರಿಯ ನಿಲುವಂತೂ ಪ್ರತಿಭಟನೆಯ ಅನೇಕ ಸೂಕ್ಷ್ಮಾಂಶ ಗಳನ್ನು ಸ್ಪರ್ಶಿಸುತ್ತದೆ.

ಸೇಡಿಯಾಪು ಅವರ ಕಾವ್ಯವು, ಸೃಜನಾತ್ಮಕತೆ – ಪ್ರಯೋಗಶೀಲತೆಗಳೆರಡರ ಸಂಧಿಬಿಂದುವೆನ್ನಬೇಕು. ಕೆಲವು ಸ್ಥಾನಗಳಲ್ಲಿ ಇವು ಹೊಸ ಸೃಷ್ಟಿಗಳಾಗಿ, ಕೆಲವೆಡೆ ಹಳೆಯ ಆಕೃತಿಗಳನ್ನು ಕಾಣುವ ‘ಉಪನಯನ’ಗಳಾಗಿ ಅರ್ಥವಂತಿಕೆಯನ್ನು ಪಡೆಯುತ್ತವೆ. ಅಲ್ಲಿ ಚಾರಿತ್ರಿಕವಾದ ಹೊರರೇಖೆಗಳ ಆಧಾರದಿಂದ ಪೂರ್ಣ ಪ್ರಮಾಣವನ್ನು ಕಲ್ಪನೆಗೆಟುಕಿಸಿ ಕೊಂಡ ಶಿಲ್ಪಾಕೃತಿಗಳಿವೆ. ಹಳೆಯ ಪ್ರತಿಮೆಗಳನ್ನು ಕರಗಿಸಿ, ಹೊಸ ಎರಕದಲ್ಲಿ ಹೊಯ್ದ ಪ್ರಸಂಗಗಳೂ ಇವೆ.

ಹೀಗೆ ಸಿದ್ಧವಾದ ಕಾವ್ಯಶರೀರಕ್ಕೆ ನಿಲುವಾಭರಣಗಳ ಅಲಂಕಾರವಿದೆ. ಕಾವ್ಯಪ್ರತೀಕಗಳ ತೊಡುಗೆಗಳಿವೆ. ನಮನಶೀಲವಾದ ಭಾಷೆಯ ಮುಖವರ್ಣಿಕೆಯೂ ಇದೆ.

ಬೆಳಗಿನ ತಂಗಾಳಿಯನ್ನು ‘ಗಿರಿಮುನಿಯ ವನಶ್ಮಶ್ರುಗಳೆಡೆಯಿಂದೊಗೆವೋಂ ಕಾರಾಳಿ’ ಯೆನ್ನುವ ಕವಿಚಿತ್ತ, ಕಾವ್ಯಾನುಭೂತಿಗಿತ್ತ ಎತ್ತರವಾಗಲಿ, ‘ಬ್ರಹ್ಮಾನಂದ ಸೋದರ’ನೆನಿಸಿದ್ಧ ಕಾವ್ಯಾನುಭವಕ್ಕೆ ದೊರಕಿಸಿಕೊಟ್ಟ ಅದರೊಂದಿನ ಐಕ್ಯವಾಗಲಿ ವಿಶಿಷ್ಟ- ಮಾದರಿಯವುಗಳೇ ಆಗುತ್ತದೆ.

ಸೇಡಿಯಾಪು ಅವರು ರೂಪಕ ಮಾಲೆಯೊಂದರ ಬಳಕೆಯ ಮೂಲಕ ಕಾರ್ಯದ ಅನೌಚಿತ್ಯವನ್ನು ಖಂಡಿಸುವ ಕ್ರಮವು ವಿಭಿನ್ನವಾಗುತ್ತದೆ.

‘ಅಮರನಂದನದಲಿ ಪಲಾಂಡುವೆ
ಸುರಪತಿಯ ಮೀಸೆಗೆ ನರೆಯೆ? ದಿಗ್ಗಜಕೆ ಕುರಿಗೂಸೆ?’
(ಕೃಷ್ಣಕುಮಾರಿ)

ಸಾಮಾನ್ಯರೂಢಿಗೆ ಹೊರತಾಗಿ, ಪಾರಮಾರ್ಥಿಕ ಸುಖವನ್ನೇ ಪಡೆಯೆಂದು ಹಾರೈಸುತ್ತ  ಮಗುವನ್ನು ತೂಗುತ್ತ ಹಾಡುವ ‘ಮದಾಲಸೆಯ ಜೋಗುಳ’ ಕವನದಲ್ಲಿ ವ್ಯಕ್ತವಾಗುವ ‘ಗಗನವನಳೆವ ಸುಪರ್ಣ’ ‘ಶಿವನಕ್ಷಮಾಲೆಯ ಮಣಿ’ ಮುಂತಾದ ಉಲ್ಲೇಖಗಳನ್ನು ಈ ದೃಷ್ಟಿಯಿಂದ ಗಮನಿಸಬಹುದು.

ಕಾವ್ಯದ ಪ್ರತಿಮಾತ್ಮಕತೆಯು ಭಾಷೆಯ ವಾಚ್ಯ ಮಟ್ಟವನ್ನು ಮೀರಿದ ಭಾವಪ್ರಪಂಚದ ಸೊತ್ತುಗಳಾಗುವ ರೀತಿಗೂ ಅವರ ಕಾವ್ಯವು ಸಾಕಷ್ಟು ನಿದರ್ಶನಗಳನ್ನು ನೀಡುತ್ತದೆ.

ಇಂಥ ಸಂದರ್ಭಗಳು ಅವರ ಅಭಿವ್ಯಕ್ತಿಯ ಅನನ್ಯತೆಗೆ ಸಾಕ್ಷಿಗಳಾಗುವುದರ ಜೊತೆಗೆ, ಭಾಷೆಯನ್ನು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬಾಗಿಸಿಕೊಳ್ಳುವ ಅವರ ಸಾಮರ್ಥ್ಯಕ್ಕೂ ಪರಿಚಯ ಪತ್ರಗಳಾಗುತ್ತವೆ.

ಉದಾಹರಣೆಗೆ ‘ಕೃಷ್ಟಕುಮಾರಿ’ ಖಂಡಕಾವ್ಯದ ಸಾಲುಗಳನ್ನು ಗಮನಿಸಬಹುದು.

“ಮಗಳ ಕರಕಮಲಕ್ಕೆ ಹಾರುವ
ಅಳಿಯೆದೆಯ ದುರುದುಂಬಿಗೊಬ್ಬಿನಂ
ನೊರಜುಗಳ ನುಗ್ಗೊರಸಲಾರದೆ, ನೆಲಕೆ ಹೊರೆಯಾದ”

ಇಲ್ಲಿ ದೈಹಿಕ ಮಾನಸಿಕ ದೌರ್ಬಲ್ಯಗಳೆರಡನ್ನೂ  ಸೂಚಿಸುವ ಪದಪುಂಜಗಳಿವೆ. ಪಿತೃತ್ವದ ‘ಹೊಣೆಗೇಡಿತನ’ವನ್ನು ಹಳಿಯುವ ಭಾವದಷ್ಟೇ ಪರಿಣಾಮಕಾರಿಯಾಗಿ ‘ಅಳಿ’, ‘ದುರುದುಂಬಿ’ ಪದಗಳ ಶ್ಲೇಷಾರ್ಥಗಳನ್ನೂ ಕವಿ ಬಳಸಿಕೊಂಡಿದ್ದಾರೆ. ಕೃಷ್ಣಕುಮಾರಿಯ ಬದುಕಿನ ದುರಂತಕ್ಕೆ ‘ಬೀತು ಹೋಯಿತು ರಾಜಪುತ್ರರ ಕ್ಷಾತ್ರತೇಜದ ಕೆಂಡಸಂಪಿಗೆ’ಯೆಂದು ಭಾಷ್ಯ ಬರೆಯುತ್ತ ಅವರು ಸಂವಹಿಸುವ ವಿಷಾದವೂ ಭಾಷೆಯ ಸಶಕ್ತ ವಿನಿಯೋಗ ಕ್ರಮವನ್ನು ಸಮರ್ಥಿಸುತ್ತದೆ.

‘ಶ್ವಮೇಧ’ದ ನಾಯಕ ನಾಯಿಯ ಬಗೆಗೂ ಸೇಡಿಯಾಪು ಅವರು ವಿಶಿಷ್ಟ ವಿಶೇಷ ಗಳನ್ನು ಪ್ರಯೋಗಿಸುತ್ತಾರೆ. ಅದು ‘ಮಕ್ಕಳಿರದ ಶೂನ್ಯಶಯ್ಯೆಗಿಂಬು’, ‘ಒಡತಿಯಡಿಯ ನಿಧಿಗೆ ಕೃಷ್ಣಸರ್ಪ’ವೆನ್ನುತ್ತ ಅವರು ವಿಸ್ತರಿಸುವ ಅರ್ಥವರ್ತುಲಗಳು ಆಪ್ಯಾಯ ಮಾನವೆನಿಸುತ್ತದೆ. ನಿಷ್ಠಾವಂತ ಪ್ರಾಣಿಯೊಂದರ ಸ್ಥೂಲ ಆಕಾರವನ್ನು ಆಧಾರವಾಗಿಟ್ಟು ಕೊಂಡು, ಅವರು ಬದುಕಿಗೆ ನಮ್ಮನ್ನು ಜೋಡಿಸುವ ನಂಬುಗೆಯ ಊರೆಗೋಲಿನ ಸ್ವಭಾವ-ಸ್ವರೂಪಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಾರೆ. ದೃಷ್ಟಿಗೆ ಅನುಗುಣವಾಗಿ ಸೃಷ್ಟಿಯೂ ರೂಪಾಂತರ, ಸ್ಥಾನಾಂತರ, ಅರ್ಥಾಂತರದ ಅವಸ್ಥೆಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರೀತಿಯನ್ನು ಸೂಕ್ಷ್ಮದರ್ಶಕದಡಿಯಲ್ಲಿಟ್ಟು ನೋಡುತ್ತಾರೆ. ಈ ಪ್ರಯೋಗಾಲಯದೊಳಗಿನ ಪರ್ಯಟನದಲ್ಲಿ ತಾವು ಗಳಿಸಿದ ಅನುಭವಗಳನ್ನು ನಮಗೂ ನಿರ್ವಂಚನೆಯಿಂದ ಹಂಚುತ್ತಾರೆ.

ತಮ್ಮ ಕಾವ್ಯದ ಮೂಲಕ ಸೇಡಿಯಾಪು ಅವರು ಪ್ರಸಾರ ಮಾಡುವ ಸಂದೇಶಗಳು ಆಧುನಿಕ ಸಂದರ್ಭದಲ್ಲಿ ತುಂಬ ಪ್ರಸ್ತುತವೆನಿಸುತ್ತವೆ. ಶಬರಿಯ ಇಡಿಯ ಬದುಕನ್ನೇ ಅವರು ಶಾಂತಿ ಸಂದೇಶದ ವಾಹಕವಾಗಿ ಪರಿಗಣಿಸುತ್ತಾರೆ. ಜೀವಕಾರುಣ್ಯದ ಸೆಲೆಯೊಡೆ ಯುವ ಕ್ಷಣದಲ್ಲಿಯೇ ಭಗವಂತನ ಕರುಣಿಯ ಕಣ್ಣು ತೆರೆಯುತ್ತದೆನ್ನುವ ವಿಶ್ವಾಸ, ಸದ್ಯಕಾಲೀನ ಪರಿಸ್ಥಿತಿಯಲ್ಲಿ ಚೇತೋಹಾರಿಯೆನಿಸುತ್ತದೆ. ಶಬರಿ ಹೃದಯದೊಳಗಿನ,

‘ದೇವನದಿಯ ನಿರ್ಝರದಂತೆ ಮೊರೆಯುವ
ಧಾರಾಲ ಕರುಣಿಯ’

ಪ್ರಸ್ತಾಪವೇ ರೋಮಾಂಚಗೊಳಿಸುತ್ತದೆ. ನಿಸರ್ಗ ಸಹಜವಾಗಿ ನಮಗೆ ‘ದತ್ತ’ವಾಗಿರುವ ಈ ಕರುಣಾಜಲದ ಒರತೆಯನ್ನು ಕೈಯಾರೆ ಬತ್ತಿಸಿಕೊಂಡು, ಮನಸ್ಸುಗಳನ್ನು ಕಾದ ಮರುಭೂಮಿಗಳನ್ನಾಗಿ ಮಾಡಿಕೊಂಡಿರುವ ಮೂರ್ಖತನ ಈ ದೊಂದಿ ಬೆಳಕಿನಲ್ಲಿ ನಿಚ್ಚಳವಾಗುತ್ತದೆ. ಬೇಯಿಸಿದ ಬಿತ್ತನ್ನು ಹುಗಿದು ಒಡೆಯಲಾರದ ಮೊಳಕೆಗಾಗಿ ಕಾಯುವ ಅಸ್ವಸ್ಥ ಮನೋವೃತ್ತಿಗಳ ಚಿಕಿತ್ಸಾಕೇಂದ್ರಗಳಾಗಿ ಇಂಥ ಸಂದೇಶಗಳು ಕಾರ್ಯನಿರ್ವಹಣೆ ಮಾಡುತ್ತವೆ.

ಇಷ್ಟೇ ಸಾಮಯಿಕವಾದ, ನೆಲದ ಮೈತ್ರಿಯ ರಕ್ಷಣೆಯ ಹರಿಕಾರರಾಗಿಯೂ ಅವರು ಪ್ರಸ್ತುತಿ ಪಡೆಯುತ್ತಾರೆ. ‘ಅಹಂ’ ಅನ್ನು ಕರಗಿಸಿಕೊಳ್ಳುತ್ತ, ನೆಲದ ಮಡಿಲಿನಲ್ಲಿ ಮಗುವಾಗುವ ಸೌಖ್ಯ ಮತ್ತು ಸರಿಸಂಪತ್ತುಗಳ ಮೃಗ ಜಲದ ಹಿಂದೆ ಓಡುವ ಹಾಗೂ ಆಸರನ್ನು ತಣಿಸುವ ತಾತ್ಕಾಲಿಕ ತೃಪ್ತಿಯ ಸಾಧನಗಳಿಗೆ ಎಲ್ಲಿಗೆಲ್ಲಿಯ ಹೋಲಿಕೆ? ಶಾಂತಿಯ ನೆಲೆಯ ಹುಡುಕಾಟಕ್ಕೆ ಸಹಕರಿಸುವ ಪಂಕ್ತಿಗಳೆಲ್ಲ ಆದರಣೀಯವೆನಿಸುವುದು ಈ ಸಾರ್ವಕಾಲಿಕ ಸತ್ಯದ ಪರಿಚಾರಿಕೆಯ ಕ್ರಮದಲ್ಲಿಯೇ ಅಲ್ಲವೇ?

ಮೊದಲಿಗೇ ನಾನು ಸ್ಪಷ್ಟಪಡಿಸಿದಂತೆ, ಇದು ಸೇಡಿಯಾಪು ಕಾವ್ಯದ ವಿಮರ್ಶೆಯಲ್ಲ, ಅಭ್ಯಾಸ, ಏನೇನು ಇಲ್ಲವೆಂದು ಗುರುತು ಹಾಕಿಕೊಳ್ಳುತ್ತ ಇಲ್ಲಿರುವ ಸೊಬಗಿಗೆ, ಲಾಲಿತ್ಯಕ್ಕೆ ಕುರುಡಾಗುವ ಬದಲಿಗೆ, ಇರುವ ಸೌಂದರ್ಯವನ್ನು ಕಣ್ಣು-ಮನಸ್ಸುಗಳೊಳಗೆ ತುಂಬಿ ಕೊಳ್ಳುವ ಪ್ರಯತ್ನ. ಸೇಡಿಯಾಪು ಕಾವ್ಯಶಿಲ್ಪವು ಈ ದಿಕ್ಕಿನಿಂದ ನೋಡಿದರೆ ಹೀಗೆ ಕಾಣುತ್ತದೆನ್ನುವ ಮಾರ್ಗದರ್ಶಿ ಕೈಪಿಡಿ. ಇದು ಚಾಕ್ಷುಷ ಮಾಧ್ಯಮದ ಮೂಲಕ ಪ್ರಾಪ್ತ ವಾಗುವ ಯಥಾವತ್ತಾದ ಛಾಯಾಚಿತ್ರವಲ್ಲ; ಶಬ್ಧಗಳ ಸಹಾಯದಿಂದ ಬಿಡಿಸಿಟ್ಟ ಅಮೂರ್ತ ಪ್ರತಿಬಿಂಬ. ಇದರಿಂದ, ಸೇಡಿಯಾಪು ಕಾವ್ಯವನ್ನು ಕಾಣಬಲ್ಲ ಮತ್ತಷ್ಟು ಕಣ್ಣುಗಳು ರೆಪ್ಪೆ ಬಿಡಿಸಿಕೊಂಡರೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗೀಗ ಸಾಂಕ್ರಾಮಿಕವಾಗಿ ವ್ಯಾಪಿಸುತ್ತಿರುವ ಅವಜ್ಞೆಯ ಜಾಡ್ಯ ನಿವೃತ್ತಿಯತ್ತ ಮನಸ್ಸುಗಳು ಹೊರಳಿದರೆ, ಅವರ ಚೈತನ್ಯವು ಹಚ್ಚಿದ ದೀಪಕ್ಕೆ ಒಂದಿಷ್ಟು ಎಣ್ಣೆ ಹೊಯ್ದಂತೆ; ಹಾಗೆ ಮುಂದಾಗುವ ಕೈಗಳ ಸಂಖ್ಯೆ ವರ್ಧಿಷ್ಣುವಾಗಲಿ ಎಂಬುದಷ್ಟೇ ನನ್ನ ಹಾರೈಕೆ.