ಸೃಜನಶೀಲ ಸಾಹಿತಿಯು ತನ್ನ ಪರಿಸರದ ಶಿಶುವೂ ಹೌದು, ಅದರ ಓರೆಕೋರೆ ಗಳನ್ನು ತಿದ್ದಿ, ಕಲಾತ್ಮಕವಾಗಿ ರೂಪಿಸಿ ರಸಪುಷ್ಟಗೊಳಿಸುವ ವಾಸ್ತುಶಿಲ್ಪಿಯೂ ಹೌದು. ತನ್ನ ಸುತ್ತಲಿನ ಸೌಂದರ್ಯವನ್ನು ಗ್ರಹಿಸುತ್ತಲೇ ಅದಕ್ಕೆ ನಿತ್ಯತ್ವವನ್ನು ನೀಡುವ ಹೊಸ ದೃಷ್ಟಿಯನ್ನು ಕಲ್ಪಿಸುವ ಪ್ರಸಾದ ಗುಣದಲ್ಲಿಯೇ ಸಾಹಿತ್ಯದ ಅನನ್ಯತೆಯಿರುತ್ತದೆ. ಹಾಗಿದ್ದಾಗ ಮಾತ್ರವೇ ಸಾಹಿತ್ಯವು ನಿಜವಾದ ಅರ್ಥದಲ್ಲಿ ಸೃಷ್ಟಿಶೀಲವಾಗುತ್ತದೆ; ಸಾಂಸ್ಕೃತಿಕ ಪರಂಪರೆ ಯೊಂದಕ್ಕೆ ತನ್ನ ಯೋಗದಾನವನ್ನು ನೀಡುತ್ತಾ ಅದನ್ನು ಸಂಪದ್ಭರಿತವನ್ನಾಗಿ ಮಾಡುತ್ತದೆ. ಇದು ಒಂದು ಅವ್ಯಾಹತವಾದ ಪ್ರಕ್ರಿಯೆಯೇ ಆಗಿದೆ. ಎಂದರೆ, ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವ ಜ್ಞಾನವಾಹಿನಿಯಿಂದ ತನ್ನ ಅಳವಿಗೆ ಬರುವಷ್ಟನ್ನು ಮೊಗೆದುಕೊಳ್ಳುವ ಸಾಹಿತಿಯು ಅದಕ್ಕೆ ಪ್ರತಿಯಾಗಿ ತಾನು ಸಂಪಾದಿಸಿದ ಜ್ಞಾನ ಸಂಪತ್ತನ್ನು ಅಲ್ಲಿಗೆ ಸೇರಿಸುತ್ತಲೇ ಹೋಗುವುದರಿಂದ ಆ ಸೆಲೆಯು ಬತ್ತುವುದಿಲ್ಲ. ಈ ಆದಾನ-ಪ್ರದಾನ ವರ್ತುಲದಲ್ಲಿ ಸಂಚರಿಸುತ್ತಾ ಪೋಷಕಾಂಶಗಳನ್ನು ಸ್ವೀಕರಿಸುವ ಸಾಹಿತಿಯು ತಾನೂ ಬೆಳೆಯುತ್ತಾನೆ; ಸಾಹಿತ್ಯವನ್ನೂ ಬೆಳೆಸುತ್ತಾನೆ.

ಸೃಷ್ಟಿಕ್ರಿಯೆಯಲ್ಲಿ ಪರ್ಯಾಪ್ತವಾದ ಮನಸ್ಸು ತನ್ನ ಯುಗದ ಧರ್ಮಕ್ಕೆ ಸ್ಪಂದಿಸುತ್ತಿ ರುತ್ತದೆ; ಅದನ್ನು ಸಂಸ್ಕರಿಸುವ ಹೊಣೆಯನ್ನೂ ನಿರ್ವಹಿಸುತ್ತಿರುತ್ತದೆ; ಈ ಚೈತನ್ಯದ ಸಂವೇದನೆ-ಸಂವಹನ ವಲಯಗಳಿಗೆ ಮಿತಿಗಳಿವೆಯಾದರೂ ಸಾಹಿತ್ಯವು ಪ್ರತಿಪಾದಿಸುವ ಮೌಲ್ಯಗಳಿಗೆ ಕಾಲ-ದೇಶಗಳ ಪರಿವೆಯಿರಬೇಕಾಗಿಲ್ಲ. ಸಾಹಿತಿಯ ಸಮಕಾಲೀನ ಪ್ರಜ್ಞೆ-ಸಾರ್ವಕಾಲಿಕ ಮೌಲ್ಯಗಳು ಸಮಪರ್ಕ ಬಿಂದುವಿನಲ್ಲಿ ಸಂಧಿಸಿದಾಗ ಸೃಷ್ಟಿಯಾಗುವ ಸಾಹಿತ್ಯವು ಶ್ರೇಷ್ಠ ಶ್ರೇಣಿಯದಾಗುತ್ತದೆ. ಎಲ್ಲ ರೀತಿಯ ಭಾಷಿಕ, ಭೌಗೋಳಿಕ, ಸಾಮಾಜಿಕ ಎಲ್ಲೆಕಟ್ಟುಗಳಾಚೆಗೂ ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತದೆ.

ಈ ನೆಲೆಯಲ್ಲಿ ಆಧುನಿಕ ಕನ್ನಡ ಸಾಹಿತಿಗಳನ್ನು ಪರಿಗಣಿಸಿದಾಗ, ಡಿ.ವಿ.ಜಿ; ಕುವೆಂಪು; ಬೇಂದ್ರೆ; ಮಾಸ್ತಿ; ಕಾರಂತ; ಗೋಕಾಕ; ಅಡಿಗರಂಥ ಹಲವು ಹೆಸರುಗಳು ನಮಗೆ ಹೊಳೆಯುತ್ತವೆ. ಮಂಗಳೂರಿನಲ್ಲಿ ಈ ಬಾರಿ ನಡೆಯಲಿರುವ ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಕಯ್ಯಾರ ಕಿಞ್ಞಣ್ಣರೈಯವರು ನಮ್ಮ ಹಿರಿಯ ಸಾಹಿತಿಯಾಗಿ ಮತ್ತು ಗಡಿನಾಡಿನ ಒಬ್ಬರು ಕನ್ನಡಿಗರಾಗಿ ಪ್ರಸ್ತುತರಾಗುತ್ತಾರೆ.

‘ಬೆಂಕಿ ಬಿದ್ದಿದೆ ಮನೆಗೆ’ ಎಂದು ಕನ್ನಡಿಗರನ್ನು ಎಚ್ಚರಿಸುವ ಈ ಕವಿಯನ್ನು ನಾನು ‘ಗಡಿನಾಡಿನ ಗಾರುಡಿಗ’ ಎಂದು ಕರೆಯಬಯಸುತ್ತೇನೆ. ಕವಿ-ವಿದ್ವಾಂಸ ಕಯ್ಯಾರರನ್ನು ನಾಡು ಗುರುತಿಸಿದ್ದು ಸಾಲದು ಎನಿಸುತ್ತದೆ ಎಂದು ನಾನು ೧೯೮೫ರಷ್ಟು ಹಿಂದೆಯೇ ಬರೆದಿದ್ದೆ. ಈ ಅವಗಣನೆಗೆ ಈಗ ಅಲ್ಪ ಪರಿಹಾರವಾದರೂ ಸಿಕ್ಕುತ್ತಿದೆಯೆಂಬ ಸಮಾಧಾನವನ್ನು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯು ಅರ್ಹರೊಬ್ಬರ ಪಾಲಾಗಿದೆಯೆಂಬ ಸಂತೃಪ್ತಿಯನ್ನೂ, ವೈಯಕ್ತಿಕವಾಗಿ ಅವರ ಬಗೆಗೆ ನನಗಿರುವ ಗೌರವವನ್ನು ಸಂವಹಿಸುವ ಅವಕಾಶವಾಗಿ ಲೇಖನವನ್ನು ಬಳಸಿಕೊಳ್ಳುತ್ತಿದ್ದೇನೆ.

ಕವಿ ಕಯ್ಯಾರರ ತಾಯ್ನೆಲ ಕೇರಳ-ಕರ್ನಾಟಕಗಳ ಗಡಿ ಪ್ರದೇಶವಾದ ಕಾಸರಗೋಡು “ಹಸಿರು ಹೊಲ ನೆಲದ, ಗೊನೆ ಹಣ್ಣ ತೋಟದ ಕಲಕಲ ನಿನಾದದಿಂ ನದಿ ಹರಿಯುವ, ಗಿಡ ಬಳ್ಳಿ ಮರ ತುಂಬಿ ಚೆಲುವುಚೆಲ್ಲಿದ ಊರು” ಇದು. ಎರಡು ವಿಭಿನ್ನವಾದ, ಆದರೆ ಸಾಂಸ್ಕೃತಿಕವಾಗಿ ಒಂದಕ್ಕೊಂದು ಪೂರಕವಾದ ಸಂಸ್ಕೃತಿಗಳು ಅವರ ಕಲಾಸಕ್ತಿಯನ್ನು ಉದ್ದೀಪಿಸಿದುವು, ಪ್ರತಿಭೆಯನ್ನು ಜಾಗೃತಗೊಳಿಸಿದುವು.

ಕಯ್ಯಾರರು ಕೃಷಿಕ ಕುಟುಂಬದ ದುಗ್ಗಪ್ಪ ರೈ-ಕಯ್ಯಾರ ದೈಯ್ಯಕ್ಕ ದಂಪತಿಗಳ ಮಗನಾಗಿ ೧೯೧೫, ಜೂನ್ ೬ರಂದು ಜನಿಸಿದರು. ಸೋನೆ ಮಳೆ, ಬೊಬ್ಬುಳಿ ತೆರೆಗಳನ್ನು ದಡಕ್ಕೆ ಹೊಮ್ಮಿಸುವ ಅಬ್ಬರದ ಕಡಲು, ಏರುತಗ್ಗುಗಳ ಭೂಪ್ರಕೃತಿಯ ಮಣ್ಣಿನ ಕಂದನಾಗಿ ಬೆಳೆಯುವ ಭಾಗ್ಯವು ಅವರದಾಯಿತು. “ನಾನು ಜನಿಸಿ ಬಾಳಿದ ಈ ನೆಲದಲ್ಲಿ ಪಯಸ್ವಿನೀ ಎಂಬ ನದಿಯು ಸದಾ ನಿರ್ಮಲ ಜಲಭರಿತೆಯಾಗಿ ಹರಿಯುತ್ತದೆ. ಇದು ಎಲ್ಲರಿಗೂ ಹಾಲನ್ನುಣಿಸಿದಂತೆ ನನಗೂ ಧಾರಾಳವಾಗಿ ಸ್ತನ್ಯವನ್ನು ನೀಡಿದೆ. ಇವಳು ನನ್ನ ಕಾವ್ಯಕಲ್ಪನೆಗೆ ಪ್ರತಿಭಾ ಪಯಸ್ವಿನಿಯಾಗಿ ಹರಸಿದವಳು. ಈ ನೆಲದ, ಈ ನೀರಿನ ಋಣ ನನಗೆ ಹಿರಿದು, ಅದು ತೀರಸಲಾರದ್ದು” ಕೃತಜ್ಞತೆಯ ಗುರುತ್ವದಿಂದ ಬಾಗಿದ ಕವಿಯು ಹೀಗೆ ಬರೆದು ಕೊಂಡಿದ್ದಾರೆ. “ನಾಡಿಗೆ, ನುಡಿಗೆ ಕೀರ್ತಿ ತಂದ ಕವಿ ಪಂಕ್ತಿಯಲ್ಲಿ ನಾನು ತೀರಾ ಕೊನೆಯವನು, ಚಿಕ್ಕವನು” ಎನ್ನುವ ಈ ವಿನಯಸಂಪನ್ನತೆಯೇ ಈ ಕವಿಯ ಅನರ್ಘ್ಯ ಸೊತ್ತಾಗಿ ಬದುಕಿನ ಪಥವನ್ನು ನಿರ್ದೇಶಿಸಿದೆ. ಸಾಫಲ್ಯದತ್ತ ಕೈ ಹಿಡಿದು ನಡೆಸಿದೆ.

ಕಯ್ಯಾರರ ಮಾತೃಭಾಷೆಯು ತುಳು. ಮಲೆಯಾಳಂ, ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತಗಳು ಕಲಿತ ಭಾಷೆಗಳು. ಈ ಅರಳುತ್ತಿದ್ದ ಪ್ರತಿಭೆಗೆ ಎಳವೆಯಲ್ಲಿಯೇ ರಾಷ್ಟ್ರಕವಿ ಗೋವಿಂದ ಪೈಯವರ ಶಿಸ್ತಿನ ಸಂಸ್ಕಾರವೂ ದೊರೆತುದೊಂದು ಯೋಗಾಯೋಗಾವೆನ್ನಬೇಕು. ಇದು ಕಯ್ಯಾರರ ಕಾವ್ಯ-ವಿದ್ವತ್ತುಗಳೆರಡಕ್ಕೂ ನಿರ್ದಿಷ್ಟ ದಿಕ್ಕು ದೊರೆಯಲು ಸಹಕಾರಿ ಯಾಯಿತು.

ಸಫಲ ಅಧ್ಯಾಪಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ ಕಯ್ಯಾರರ ಆಸಕ್ತಿಗಳು ಹಲವು ಮುಖಗಳಾಗಿ ಹರಿದಿರುವುದನ್ನು ಕಾಣುತ್ತೇವೆ. ೧೯೪೫ರಲ್ಲಿ ಕೇರಳದ ಪೆರಡಾಲದಲ್ಲಿರುವ ನವಜೀವನ ಹೈಸ್ಕೂಲಿನ ಅಧ್ಯಾಪಕರಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಯಕ್ಷಗಾನ – ತಾಳಮದ್ದಳೆಗಳ ಕ್ಷೇತ್ರಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಈ ಮೊದಲೇ ಕೆಲಕಾಲ ಮಂಗಳೂರಿನಲ್ಲಿ ನೆಲಸಿದ್ದಾಗ, ಸ್ವದೇಶ ಚಳವಳಿ ಮತ್ತು ಪತ್ರಿಕೋದ್ಯಮಗಳಲ್ಲಿ ದುಡಿದ ಅನುಭವವೂ ಅವರಿಗಿದೆ. ಪತ್ರಿಕೋದ್ಯಮಿಯಾಗಿ ಅವರು, ‘ಪ್ರಭಾತ’, ‘ಸ್ವದೇಶಾಭಿಮಾನ’, ‘ಹಿಂದೂ’ ಹಾಗೂ ‘ಮೇಲ್’ ಪತ್ರಿಕೆಗಳಿಗೆ ಸೇವೆಯನ್ನು ಸಲ್ಲಿಸಿದ್ದಾರೆ. ಇವುಗಳಲ್ಲದೆ, ಸಮಾಜ ಸೇವಾ ಚಟುವಟಿಕೆಗಳಲ್ಲೂ ಅವರು ಪ್ರವೃತ್ತರೇ ಆಗಿದ್ದರು. ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ನೆಲೆಯಿಂದಲೂ ಅವರು ತಮ್ಮ ತಾಯ್ನೆಲದ ಏಳಿಗೆಗಾಗಿ ದುಡಿದಿದ್ದಾರೆ.

ಎಳವೆಯಲ್ಲಿ, ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕಯ್ಯಾರರು ಸಂಪಾದಿಸಿದ ‘ನವೋದಯ ಪಾಠಮಾಲೆ’ ನಮಗೆ ಪಠ್ಯಗಳಾಗಿದ್ದುವು. ೧೯೫೬ರ ಭಾಷಾವಾರು ವಿಂಗಡಣೆಯ ಬಳಿಕ ಕಾಸರಗೋಡು ಕೇರಳಕ್ಕೆ ಸೇರಿತಷ್ಟೆ. ಅಂದಿನಿಂದ ಅವರ ಈ ಪಠ್ಯಗಳು ನಿರ್ಗಮಿಸಿದುವು.

ಏನೇ ಇದ್ದರೂ ಅವರು ಪ್ರಥಮ ಒಲವು ಸಾಹಿತ್ಯ-ಅದರಲ್ಲೂ ಕಾವ್ಯವೇ. ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಗಂಧವತೀ, ಪಂಚಮಿಗಳು ಅವರ ಮುಖ್ಯ ಕವನ ಸಂಕಲನಗಳು. “ನವ್ಯ ಸಾಹಿತ್ಯದಲ್ಲಿ ಮಣ್ಣಿನ ವಾಸನೆಯ ಗಾಳಿ ಬೀಸುವುದಕ್ಕೂ ಮೊದಲೇ ‘ರೈತ ಕವಿ’ ಎನಿಸಿಕೊಂಡವರು ಕಯ್ಯಾರರು” ಅವರ ಸಾಹಿತ್ಯ ಕೃಷಿಯೂ ವೈವಿಧ್ಯ ಪೂರ್ಣವಾದ ಬೆಳೆಗಳನ್ನು ಕೊಟ್ಟಿದೆ. ಹದಿನೈದು ಕವನ ಸಂಕಲನಗಳು, ಎಂಟು ಗದ್ಯ ಲೇಖನಗಳ ಸಂಗ್ರಹಗಳು, ಆರು ವಿಮರ್ಶಾ ಕೃತಿಗಳು, ಒಂದು ನಾಟಕ, ಎಂಟು ಶಿಶು ಸಾಹಿತ್ಯ ಕೃತಿಗಳು, ಮೂರು ಅನುವಾದಿತ ಕೃತಿಗಳು…. ಕನ್ನಡಕ್ಕೆ ಅವರ ಕೊಡುಗೆಗಳಾಗಿವೆ. ಐದು ಉಪನಿಷತ್ಕಾವ್ಯಗಳ ಸರಳ ಕನ್ನಡ ರೂಪಾಂತರವಾದ ‘ಪಂಚಮಿ’ ಅವರ ಪ್ರತಿಭೆ-ಪಾಂಡಿತ್ಯಗಳೆರಡಕ್ಕೂ ನಿಕಟವಾಗಿದೆ.

ಇಂಥ ಬಹುಮುಖ ಸೇವೆಗೆ ತಕ್ಕ ಮಾನ್ಯತೆಯೂ ಅವರನ್ನು ಅರಸಿಕೊಂಡು ಬಂದಿದೆ. ಶ್ರೇಷ್ಠ ಅಧ್ಯಾಪಕರೆಂದು ರಾಷ್ಟ್ರಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಮತ್ತು ಕೇರಳ ಸರಕಾರಗಳ ಪ್ರಶಸ್ತಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ- ಇವುಗಳು. ಅವುಗಳಲ್ಲಿ ಕೆಲವು ಮಾತ್ರ. ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯು ಅವುಗಳ ಹಿರಿಮೆಗೆ ಮಹತ್ವದ ಗುರಿಯೊಂದನ್ನು ಸೇರಿಸುತ್ತಿದೆ.

“ಒಬ್ಬ ಕವಿಯ ಪ್ರೇರಣೆಗಳನ್ನೂ ಅವನ ಮೇಲಾದ ಪ್ರಭಾವಗಳನ್ನೂ ಪರಿಗಣಿಸುವಾಗ ಇವುಗಳಿಂದ ಯಾವುದೇ ಒಬ್ಬ ಮಹತ್ವದ ಕವಿಯ ಸಾಧನೆಯೂ ಮುಕ್ಕಾಗುವುದಿಲ್ಲ ಎನ್ನುವುದು ನೆನಪಿಡ ಬೇಕಾದ ಅಂಶವಾಗಿದೆ. ಈ ಪ್ರೇರಣೆಗಳನ್ನು ಪಡೆದೂ ಅವನು ತನ್ನ ಸ್ವೋಪಜ್ಞತೆಯನ್ನು ಉಳಿಸಿಕೊಳ್ಳಬಹುದು: ಪ್ರಭಾವಗಳನ್ನು ಅರಗಿಸಿಕೊಂಡೂ ತನ್ನ ಸೃಷ್ಟಿಯ ವೈಶಿಷ್ಟ್ಯವನ್ನು ಉಳಿಸಿಕೊಳ್ಳಬಹುದು” ಎನ್ನುವ ಮಾತು ಕಯ್ಯಾರರ ಸಂದರ್ಭದಲ್ಲಂತೂ ನಿಜವೇ ಆಗುತ್ತದೆ.

“ನನ್ನ ಒಂಭತ್ತನೆಯ ವಯಸ್ಸಿನಲ್ಲಿ ನಾನು ಪ್ರಥಮತಃ ಕವನಿಸಿದೆನು. ಆ ಕವನವು ನಂದಳಿಕೆಯವರ ‘ಕುಮಾರ ವಿಜಯ’ ಯಕ್ಷಗಾನ ಪ್ರಸಂಗದ ಒಂದು ಪದ್ಯದ ಧಾಟಿಯಲ್ಲಿತ್ತು. ಮನೆಯಲ್ಲಿ ಆಗಾಗ ಜರಗುತ್ತಿದ್ದ ತಾಳಮದ್ದಳೆ, ಸುತ್ತುಮುತ್ತಲು ಆಗುತ್ತಿದ್ದ ಬಯಲಾಟಗಳು ಇವುಗಳಿಂದಾಗಿಯೇ ನನ್ನ ಆದಿಯ ಆ ಕವಿತಾ ಕಲ್ಪನೆಗೆ ಪ್ರೇರಣೆಯು ಬಂದಿರಬೇಕು” ಎಂದು ಕಯ್ಯಾರರೇ ಬರೆಯುತ್ತಾರೆ.

ಈ ಚಿಗುರೊಡೆಯುತ್ತಿದ್ದ ಕವಿತಾಸಕ್ತಿ-ಶಕ್ತಿಗಳಿಗೆ ಕ್ರಮಾಗತವಾದ ಶಿಕ್ಷಣವೂ ಪೋಷಕವಾಯಿತು. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭಾಸ ಮುಂತಾದವರ ಸಂಸ್ಕೃತ ಕೃತಿಗಳು, ಪಂಪ, ರನ್ನ, ಕುಮಾರವ್ಯಾಸರ ಕನ್ನಡ ಕಾವ್ಯ ವಾಹಿನಿ, ವರ್ಡ್ಸ್‌ವರ್ತ್, ಬೈರನ್, ಶೇಕ್ಸ್‌ಪಿಯರರ ಆಂಗ್ಲ ಅಭಿವ್ಯಕ್ತಿ ಕ್ರಮಗಳು ಕಯ್ಯಾರರ ಪ್ರತಿಭೆಗೆ ಸಾಣೆ ಹಿಡಿದುವು, ಅವರ ಕಾವ್ಯ ಮಾರ್ಗವನ್ನು ನಿಷ್ಕರ್ಷಿಸಿದುವು.

ಸಾಕಷ್ಟು ವಿಸ್ತೃತವಾಗಿರುವ ಕಯ್ಯಾರರ ಕಾವ್ಯ ಪ್ರಪಂಚದ ಪರ್ಯಟನವು ಈ ಲೇಖನದ ಸೀಮಿತ ವ್ಯಾಪ್ತಿಯ ಒಳಗೆ ಸಾಧ್ಯವಾಗುವಂತಿಲ್ಲ. ನನ್ನ ಉದ್ದೇಶವೂ ಅದಲ್ಲ. ಅವರ ಕಾವ್ಯದ ಪ್ರಮುಖ ಒಲವುಗಳನ್ನು ಗುರುತಿಸುವುದರ ಮೂಲಕ ಆಧುನಿಕ ಕಾವ್ಯ ಜಗತ್ತಿನಲ್ಲಿ ಅವರ ಸ್ಥಾನ ನಿರ್ದೇಶನವಷ್ಟೇ ನನ್ನ ಪ್ರಸ್ತುತ ಲಕ್ಷ್ಯವಾಗಿದೆ. ಇದನ್ನು ನಾನು ಕೆಲವು ಮುಖ್ಯ ನೆಲೆಗಳಾಗಿ ಒಡೆದುಕೊಂಡು ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸಲು ಪ್ರಯತ್ನಿಸಿದ್ದೇನೆ. ಕೆಲವೇ ಕೆಲವು ಕವನಗಳನ್ನು – ಪ್ರಾತಿನಿಧಿಕವಾಗಿ ಗಮನಿಸುವುದಷ್ಟೇ ಅಲ್ಲಿ ಸಾಧ್ಯವಾಗಿದೆ.

ಕಯ್ಯಾರರು ಕವಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ನವೋದಯ ಕಾವ್ಯ ಸಂಪ್ರದಾಯವು ಪ್ರಬಲವಾದ ಸಾಹಿತ್ಯಿಕ ಚಳವಳಿಯ ಸ್ವರೂಪವನ್ನು ತಾಳಿತ್ತು. ಅದರ ರಮ್ಯ, ಭಾವಪ್ರಧಾನ, ಗೇಯಗುಣ ಪೂರ್ಣವಾದ ಅಭಿವ್ಯಕ್ತಿ ಕ್ರಮವನ್ನು ಕಯ್ಯಾರರು ಸ್ವೀಕರಿಸಿದರು. ಆದರೆ ವಸ್ತುವಿನ ಆಯ್ಕೆಯಲ್ಲಿ ತಮ್ಮ ಸ್ವೋಪಜ್ಞತೆಯನ್ನು ಮೆರೆದರು.

ಈ ಸಂದರ್ಭದಲ್ಲಿ ಪುರಾಣಗಳ ಸಾಂಪ್ರದಾಯಿಕ ಸಿದ್ಧ ಪಾತ್ರಗಳನ್ನು ಅವರು ಕಂಡ ಹೊಸ ದೃಷ್ಟಿಯನ್ನು ಪ್ರಸ್ತಾಪಿಸುವ ಅಗತ್ಯವು ಕಂಡು ಬರುತ್ತದೆ. ಪೂರ್ವ ಕವಿಗಳು ರಚಿಸಿದ ಪ್ರತಿಮೆಗಳನ್ನು ಒಡೆಯದೆಯೂ ಅವುಗಳನ್ನು ಬೇರೊಂದು ದಿಕ್ಕಿನಿಂದ ನೋಡುವ ಸಾಧ್ಯತೆಗಳನ್ನು ಕವಿಯು ಶೋಧಿಸಲು ಹೊರಟ ರೀತಿಯಿದೆಯಲ್ಲ, ಅದು ನನಗೆ ಅನನ್ಯವೆನಿಸುತ್ತದೆ. ಈ ದೃಷ್ಟಿಯಿಂದ ಅವರ ‘ಊರ್ಮಿಳಾ’ ಕವನವನ್ನು ಪರಿಶೀಲಿಸಬಹುದು. ಆದಿಕವಿ ವಾಲ್ಮೀಕಿಯ ಮೇಲಿನ ತಮ್ಮೆಲ್ಲಾ ಗೌರವವನ್ನೂ ಬದಿಗೆ ಸರಿಸಿಟ್ಟು.

“ಆ ಆದಿಕಾವ್ಯವಹ
ರಮ್ಯ ರಾಮಾಯಣದ ನೀವೆಲ್ಲರೋದಿಹಿರಿ
ಪದದರ್ಥ ಭಾವನೆಯ ಸವಿಯ ಬಲು ಸವಿದಿಹಿರಿ
ಆದರವನಕ್ಷಮ್ಯದಪರಾಧ ತಿಳಿದಿದೆಯೆ?”
(ಊರ್ಮಿಳಾ)

ಎನ್ನುವ ಧೈರ್ಯವನ್ನು ಕವಿಯು ತೋರಿಸುತ್ತಾರೆ. ಇದರ ಹಿಂದೆ ಇರುವ ಅವರ ಮಾನವೀಯ ಕಳಕಳಿಗೆ ಹಲವು ಮಗ್ಗುಲುಗಳೂ ಇವೆ. ಕರುಣೆಯಿಂದಲೇ ಸ್ಫೂರ್ತಿಯನ್ನು ಪಡೆದ ವಾಲ್ಮೀಕಿಯ ಹೃದಯವು ಚಿರತಪಸ್ವಿನಿಯಾಗಿಯೇ ಉಳಿದ ಊರ್ಮಿಳೆಯ ಬಗೆಗೆ ಸಂವೇದನೆಗೊಳಗಾಗಲಿಲ್ಲವೇ ಎನ್ನುವ ಆಶ್ಚರ್ಯ,

“ಕರುಳ ಕೊರೆಯುವ ವಿರಹದುರಿಯ ಬರೆದುಬ್ಬಿಸುವ ಕವಿ
ಆ ಊರ್ಮಿಳಾದೇವಿಯೊಂದುವೊಂದೇ ಮಾತು
ಸಹ್ಯವೇದನೆಗಾಗಿ ಸಾಂತ್ವನದ ಸವಿಮಾತು
ಒಮ್ಮೆ ಕರುಣಾದೃಷ್ಟಿ – ಅಶ್ರುಧಾರಾವೃಷ್ಟಿ ಕರೆಸಲಿಲ್ಲಾ!”
(ಅದೇ)

ಎನ್ನುವುದನ್ನೊಂದು ಗಂಭೀರ ಲೋಪವಾಗಿ ಕವಿಯು ಗುರುತಿಸಿದ್ದಾರೆ. ತಮ್ಮ ಕ್ರಾಂತ ದೃಷ್ಟಿಯನ್ನು ಪರಿಚಯಸಿದ್ದಾರೆ. ಮಹಾಕಾವ್ಯದ ಅಲಕ್ಷಿತ ಪಾತ್ರವೊಂದಕ್ಕೆ ನ್ಯಾಯ ಸಲ್ಲಿಸಬಯಸುವ ಕವಿ ಸಹಜವಾದ ಕರುಣೆಯೇ ಇಲ್ಲಿ ಕ್ರಿಯಾಶೀಲವಾಗಿದೆ. (ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಕಾವ್ಯದಲ್ಲಂತೂ ಈ ಸಂದರ್ಭವು ಅಪೂರ್ವವಾಗಿ ಚಿತ್ರಿತವಾಗಿರುವುದನ್ನು ಗಮನಿಸುತ್ತೇವೆ.)

“ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು” ಎನ್ನುವ ಕುಂತಿಯು ಕರ್ಣನೊಡನೆ ಮಾಡುವ ಪ್ರಾರ್ಥನೆಯನ್ನು ಕವಿಯು ರಾಜಕೀಯ ಕುತಂತ್ರವಾಗಿ ಕಾಣುವುದಿಲ್ಲ. ಬದಲಿಗೆ ನಿಸ್ವಾರ್ಥಿ ಕರ್ಣನ ನಿಜವಾದ ಸತ್ವವನ್ನು ಲೋಕಮುಖಕ್ಕೆ ಪರಿಚಯಿಸಿದ ಸಂದರ್ಭವಾಗಿ ಪರಿಗಣಿಸುತ್ತಾರೆ.

“ಕವಿದಿದ್ದ ಕತ್ತಲೆಯ ಕೊಳೆ ತೊಳೆಯಲೆಂದಲ್ತೆ
ದೀಪವತಿಂ ಪಿಡಿದೆತ್ತಿ ತೋರುವುದು ಸೂರ್ಯನ ಸಮ
ಪ್ರಕಾಶಂಗಿದಿರು ಕೈ ವೆಳಗ ಕಾಣಿಪರೇ”
(ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು)

ಎಂದು ಪ್ರಶ್ನಿಸುತ್ತಾ ಕರ್ಣನಂಥ ವ್ಯಕ್ತಿತ್ವಗಳು ಸ್ವಯಂ ಪ್ರತಿಭೆಯುಳ್ಳವುಗಳೆಂದು ನಿರ್ಧರಿ ಸುತ್ತಾರೆ. ಪಂಪ-ರನ್ನರ ಪ್ರಭಾವಗಳನ್ನು ಒಪ್ಪಿಕೊಂಡು ಕೂಡಾ ಸ್ವತಂತ್ರ ನೆಲೆಯನ್ನು ಇದು ಪಡೆದುಕೊಳ್ಳುತ್ತದೆ.

ಇಂಥ ಪ್ರಯತ್ನಗಳು ಕಯ್ಯಾರರಿಂದಲೇ ಮೊದಲಾದುವೆನ್ನುವುದು ನನ್ನ ಅಭಿಪ್ರಾಯ ವಲ್ಲ. ಸವೆದ ದಾರಿಯನ್ನೇ ತುಳಿಯುತ್ತಿದ್ದರೂ ಕಯ್ಯಾರರ ನಡಿಗೆಯ ರೀತಿಯು ವಿಶಿಷ್ಟವಾಗಿತ್ತು. ಹೆಜ್ಜೆಯ ಲಯವು ಅಪೂರ್ವವಾಗಿತ್ತೆನ್ನುವುದನ್ನು ಮಾತ್ರವೇ ನನಗೆ ಇಲ್ಲಿ ಸೂಚಿಸಬೇಕಾಗಿದೆ.

“ಚಿರಂತನವಾಗಿ ನಿಲ್ಲುವ, ಕಾವ್ಯಗುಣವುಳ್ಳ ಅನೇಕ ಕವನಗಳನ್ನು ಕಯ್ಯಾರರು ನಮಗೆ ನೀಡಿದ್ದಾರೆ. ನಾವು ನೋಡಬೇಕಾದುದು ಈ ಕವಿಯಲ್ಲಿರುವ ಅಭಿವ್ಯಕ್ತಿಯ ಸರಳತೆ. ಜೀವನದ ಕ್ಲಿಷ್ಟತೆ, ಸಂಕೀರ್ಣತೆಗಳಿಂದ ಅವರ ಮನಸ್ಸು ಮುದುಡಿಕೊಳ್ಳಲಿಲ್ಲ. ಸಮಾಜದೊಡನೆ, ಪರಿಸರದೊಡನೆ ಸದಾ ಸ್ಪಂದಿಸುತ್ತಿದ್ದು… ಭಾವನಾತ್ಮಕವಾಗಿ ಸುತ್ತಣ ಸನ್ನಿವೇಶವನ್ನು ಪರಿಗ್ರಹಿಸಿದ ರೀತಿಯು ಅವರ ಕಾವ್ಯದಲ್ಲಿ ಹರಿದು ಬಂದಿದೆ” ಎನ್ನುವ ಮಾತಿಗೆ ಸಮರ್ಥ ಉದಾಹರಣೆಯಾಗುವ ಅರ್ಹತೆಯು ಅವರ ‘ಕೊರಗ’ ಕವನಕ್ಕಿದೆ. ಇದ ಕಯ್ಯಾರರ ಕವನ ಸಂಕಲನವೊಂದರ ಶೀರ್ಷಿಕೆಯೂ ಹೌದು.

ಕಯ್ಯಾರರ ಜೀವಪರವಾದ ನಿಲುವು, ಪ್ರಾಮಾಣಿಕ ದೃಷ್ಟಿ, ಸಹೃದಯ ಸಂವೇದನೆಗಳು ಈ ಕವನದ ಶಕ್ತಿ ಸ್ಥಾನಗಳಾಗಿವೆ. ‘ಕೊರಗ’ ಪದದ ಶ್ಲೇಷಾರ್ಥವನ್ನೂ ಕವಿಯು ಇಲ್ಲಿ ದುಡಿಸಿಕೊಡಿದ್ದಾರೆ. ‘ಕೊರಗ’ ಹೆಸರಿನ ಬಹಳ ಹಿಂದುಳಿದ ಆದಿವಾಸಿ ಜನಾಂಗದ ನಿಸ್ಪೃಹತೆ, ಪ್ರಕೃತಿ ಸಹಜವಾದ ಬದುಕುಗಳು ಕವಿಯ ಆಂತರ್ಯವನ್ನು ತಟ್ಟಿವೆ. ಆ “ಮುಗ್ಧ ಜನಾಂಗದ ಕುರುಹನ್ನು ಉಳಿಸುವ ಸದಾಶಯ – ಅವರ ಬದುಕಿನ ಬಗೆಗಿನ ಸಹಾನುಭೂತಿ”ಗಳು ಈ ಕವನಕ್ಕೆ ಪ್ರೇರಣೆಯನ್ನು ನೀಡಿವೆ.

ನನ್ನ ದೃಷ್ಟಿಯಲ್ಲಿ, ಯಾವುದೇ ಹಣೆಪಟ್ಟಿಯಿಲ್ಲದ ‘ದಲಿತ ಕಾವ್ಯ’ವಾಗಿಯೂ ಈ ಕವನಕ್ಕೆ ಮಹತ್ವವಿದೆ.

“ಇಲ್ಲವೆಂಬುದೆ ಇವನ ಬದುಕು ಭಾಗ್ಯಗಳೆಲ್ಲ
…..ಈ ಹಿಂದುಳಿದ ಬಂಧುವನ್ನುದ್ಧರಿಸೆ
ಬಂದ ಗಾಂಧಿಯು ಸಂದ ಗುಂಡಿಗಾಹುತಿಯಾಗಿ
ಆಹುತಿಗೆ ಸಂದರೂ ಇವ ನಿರಂತರ ಕೊರಗ”
(ಕೊರಗ)

ಎನ್ನುವ ನಿರ್ಲಿಪ್ತಿಯ ಲೇಪದೊಳಗೆ ಇಣಿಕಿ ಹಾಕಿದರೆ, ಅಜ್ಞಾನ, ನೋವು, ದಾರಿದ್ರ್ಯ, ಅಲಕ್ಷ್ಯಗಳ ಶೋಷಿತ ಲೋಕವು ಕಣ್ಣಿಗೆ ಬೀಳುತ್ತದೆ. ಈ ಮಾರ್ಗದರ್ಶಿಯ ಕಾರ್ಯವನ್ನು ಕಯ್ಯಾರರ ಕಾವ್ಯವು ಮಾಡಿದೆ. ‘ಮಹಾಮೌನಿಯಾದ ಮಿದುಳಿ’ನ ಅನುಕ್ತ ಸಂದೇಶವೂ ಪರಿಣಾಮಕಾರಿಯಾಗಿದೆ.

ನವೋದಯ ಕಾವ್ಯ ಸಂಪ್ರದಾಯದ ಮಹತ್ವದ ಲಕ್ಷಣವಾಗಿರುವ ಉತ್ಸಾಹದ ಹೊನಲು ಕಯ್ಯಾರರ ಕಾವ್ಯದಲ್ಲೂ ಸ್ಥಾಯಿಯಾಗಿದೆ. ಅದು ದೇಶಭಕ್ತಿ ಪ್ರೇರಿತವಾಗಿ, ಹೊಸತಿನ ಅನ್ವೇಷಣೆಯ ಪ್ರವರ್ತನೆಯಾಗಿ, ಯುಗಾದಿಯ ಮಂಗಲದ ಒಸಗೆಯಾಗಿ, ತುಳುನಾಡಿತಿಯ ದೇಹದೈಸಿರಿಯ ಪ್ರಶಂಸೆಯಾಗಿ ಅಸಂಖ್ಯ ಪಾತ್ರಗಳಲ್ಲಿ ಹರಿಯುವುದನ್ನು ಕಾಣುತ್ತೇವೆ.

“ಐಕ್ಯವೊಂದೇ ಮಂತ್ರ
ಐಕ್ಯದಿಂದೆ ಸ್ವತಂತ್ರ
ಐಕ್ಯಗಾನದೆ ರಾಷ್ಟ್ರ ತೇಲುತಿರಲಿ….
ಭಾರತದಿ ಮಮಜನ್ಮ
ಸ್ವಾತಂತ್ರ್ಯವೇ ಧರ್ಮ…”
(ಐಕ್ಯಗಾನ)

ಎನ್ನುವ ಒಕ್ಕೊರಲಿನ ಉದ್ಘೋಷಕ್ಕೆ ನೀಡುವ ಕರೆಯಲ್ಲಿ ಎಂಥ ಜಡದಲ್ಲೂ ಚೈತನ್ಯವನ್ನು ತುಂಬಬಲ್ಲ ಶಕ್ತಿಯಿದೆ.

ಆದುದರಿಂದ, “ಭಾವನೆಯ ತೀಕ್ಷಣತೆ, ಕಲ್ಪನೆಯ ವೈಭವ, ಭಾಷೆಯ ಸಿರಿ ಅವರಿಗೆ ದೈವದತ್ತವಾಗಿವೆ. ಓಒಸ್ಸು, ಪ್ರಶಾಂತತೆ, ನಾಡು-ನುಡಿಗಳ ನಿಷ್ಠೆಯು ಅವರ ಕಾವ್ಯದಲ್ಲಿ ಎದ್ದು ಕಾಣುತ್ತದೆ” ಎನ್ನುವ ಪ್ರಶಸ್ತಿಯು ಅವರಿಗೆ ಸಲ್ಲತಕ್ಕದ್ದೇ ಆಗಿದೆ.

ಕಯ್ಯಾರರ ಈ ಚಿರಂತನ ಉತ್ಸಾಹವು “ಎನ್ನ ಹೃದಯದ ಸ್ಫೂರ್ತಿ, ಎನ್ನ ಜನತೆಯ ಶಕ್ತಿ, ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ. ಎಮ್ಮೊಂದಿಗರ ಬದುಕು ಬಾಳಾಗಿ ಬೆಳಗಿಸಲು ಬಲಿತ ಲೇಖನಿಬೇಕು – ರಕ್ತವದಕೆ ಮಸಿ” ಎನ್ನುವ ಆವೇಶದ ಮಟ್ಟಕ್ಕೆ ಹೋಗುವುದನ್ನು ಗುರುತಿಸುತ್ತೆವೆ. ಎಂದರೆ ಇದು ಆಕ್ಷೇಪವಲ್ಲ ಆಜಾನು ಬಾಹುವಾದ, ಎತ್ತರದ ಬಾಹ್ಯ ವ್ಯಕ್ತಿತ್ವದ ಒಳಗಿನ ಧೀಮಂತಿಕೆಗೆ, ಸ್ವಾತಂತ್ರ್ಯ ಪೂರ್ವದ ಸಂಸ್ಕಾರವು ರೂಢಿಸಿದ ಆತ್ಮಶಕ್ತಿಗೆ, ಉದ್ದಕ್ಕೂ ತಮ್ಮ ಬದುಕನ್ನು ‘ನೇಗಿಲಗೆರೆ’ಯಂತೆ ನಡೆಸಿದ ತೃಪ್ತಿಗೆ ಇಂಥ ಉತ್ಸಾಹವು ಸ್ವಭಾವವೇ ಹೌದು ಅದು ಪಡೆದ ಕಾವ್ಯದ ಶರೀರವು ಉತ್ಸಾಹದ ಸೂಚನೆಯಲ್ಲಿಯೇ ಸದಾ ಮಗ್ನವಾಗಿರುವ ಬತ್ತದ ಕಾರಂಜಿಯೂ ಹೌದು.

ಆಧ್ಯಾತ್ಮಿಕ ಚಿಂತನೆಯೂ ಕಯ್ಯಾರರ ಕಾವ್ಯದಲ್ಲಿ ಎಡೆ ಪಡೆದಿದೆ. “ಸಂಸ್ಕೃತ ಭೂಯಿಷ್ಠವಾದ ಅವರ ಕವನಗಳಲ್ಲಿ ವೇದ, ಪುರಾಣ, ಉಪನಿಷತ್ತುಗಳ ಪ್ರಸ್ತಾಪವು ಬಹಳ ಬಾರಿ ಬರುತ್ತದೆ”. ಬರಿಯ ಶಬ್ದ ಶಯ್ಯೆಯಲ್ಲಿ ಮಾತ್ರವಲ್ಲ ಕಾವ್ಯದ ಆಂತರಿಕ ಸತ್ವದಲ್ಲೂ ಅವರ ಈ ಆಧ್ಯಾತ್ಮಿಕ ಒಲವು ಎದ್ದು ಕಾಣುತ್ತದೆ.

“ಅದು ಪೂರ್ಣ, ಇದು ಪೂರ್ಣ, ಉಡು ಪೂರ್ಣ ಹಾಡು” ಎನ್ನುವ ಉಪನಿಷದ್ವಾಕ್ಯದ ಕನ್ನಡ ರೂಪಾಂತರದಲ್ಲಾಗಲಿ,

“ಗುಹೆಯ ಗಹ್ವರದೊಳಗೆ
ಪ್ರಣವ ಸೂರ್ಯಂ ಬೆಳಗೆ
ಧ್ಯಾನಸ್ಥ ಋಷಿಯ ದರ್ಶನವರಳಿತು
ಪಂಚೇಂದ್ರಿಯದ ಗೇಹ
ಪುಲಕಗೊಂಡಿತು ದೇಹ
ಹೃದ್ವೀಣೆಯಲಿ ಶ್ರುತಿ ವಿಪಂಚಿಸಿತ್ತು
…………..
ಜೀವಾತ್ಮನ ವಿಕಾಸ
ಪರಮಾತ್ಮನ ಪ್ರಕಾಶ
ಮುಕ್ತಿಯ ಮಹಾಪಥಕ್ಕೆ ದಾರಿ ದೀಪ್ತಿಗಳು”
(ಪ್ರಣವ)

ಎನ್ನುವ ಪ್ರಣವದ ಓಂಕಾರದ ವಿರಾಟ್ ಸ್ವರೂಪದ ಕಲ್ಪನೆಯಲ್ಲಾಗಲಿ, ಋಗ್ವೇದದಿಂದ ಪ್ರೇರಿತವಾದ “ಮರುದ್ಭಿರಗ್ನೆ ಆಗಹಿ” ಎನ್ನುವ ಆಮಂತ್ರಣದಲ್ಲಾಗಲಿ ಆಧ್ಯಾತ್ಮ ಪ್ರವೃತ್ತಿಯು ಹರಳುಗಟ್ಟಿರುವುದನ್ನು ಕಾಣುತ್ತೇವೆ. ಇದು ಆತ್ಮಪರಮಾತ್ಮ ತತ್ತ್ವಗಳ ಜಿಜ್ಞಾಸೆ, ಸಾವಿನಾಚೆಯ ಬದುಕಿನ ಅನ್ವೇಷಣೆ, ಆತ್ಮಸ್ವರೂಪದ ವಿಶ್ಲೇಷಣೆ ಮುಂತಾದ ಚಿಂತನಪರ ವಾದ ನೆಲೆಗಳನ್ನು ಪಡೆಯುತ್ತದೆ.

ಕಯ್ಯಾರರ ಕಾವ್ಯದ ಇನ್ನೊಂದು ವೈಶಿಷ್ಟ್ಯವು ಅದರ ಜಾನಪದ ಸತ್ವದಲ್ಲಿದೆ. “ಯಕ್ಷಗಾನ, ತಾಳಮದ್ದಳೆ, ಭೂತನರ್ತನ, ಪಾಡ್ದನ, ಓಬೇಲೆ, ಆಟಿಕಳೆಂಜ, ಪರವ, ಪಂಬದ….ಗದ್ದೆ, ಕೆಸರು, ನೇಗಿಲು…..ಇವು ಇವರ ಕಾವ್ಯ ಸ್ಫೂರ್ತಿಯ ಸೆಲೆಗಳು. ‘ನೇಗಿಲಿನ ಸಮಕೆ ಲೇಖನಿ ಹಿಡಿದ ಕೈಯಲ್ಲಿ ಗೆರೆ ತಪ್ಪದಿರೆ ಬರೆವೆ’ ಎನ್ನುತ್ತಾರೆ! ನೇಗಿಲಿನಿಂದ ಭೌತಿಕ ತೃಪ್ತಿ. ಲೇಖನಿಯಿಂದ ಆಧ್ಯಾತ್ಮಿಕ ಸಿದ್ದಿ….ಕಯ್ಯಾರರ ಬಹುಪಾಲು ರಚನೆಗಳು ಅಂತಸ್ಸತ್ವ ದಿಂದ ಸಮೃದ್ಧವಾಗಿ ರಾರಾಜಿಸುತ್ತವೆ” ಎನ್ನುವ ಅಭಿಪ್ರಾಯವು ಅವರ ನೆಲದ, ನೆಲದ ಕಲೆಯ, ನೆಲದ ಜನದ ಪ್ರೀತಿಗೆ, ಆಪ್ತ ಅನಿಸಿಕೆಗಳಿಗೆ ಧ್ವನಿಯನ್ನು ನೀಡುತ್ತದೆ.

“ಭೂತನರ್ತನ ದುಡಿಯ ವಾದನ
ಯಕ್ಷಗಾನವು ಪಾಡ್ದನ
ನದಿ ನಿನಾದವು ಪಕ್ಷಿಕೂಜನ
ನಿನ್ನ ಪ್ರತಿಭೆಗೆ ಸಾಧನ”
(ರಾಷ್ಟ್ರಕವಿ)

ಗೋವಿಂದ ಪೈಯವರ ಬಗೆಗೆ ಬರೆದ ಸಾಲುಗಳು ಕಯ್ಯಾರರ ಕಾವ್ಯಕ್ಕೂ ಹಿನ್ನೆಲೆಗಳಾಗುತ್ತವೆ.

“ಗದ್ದೆ ಕಳಮೆಗಳ ಬಳಸಿ ಕೇಳಿದನು
ನೇಜಿ ಹಾಡು – ಓ ಬೇಲೇ
ನಿದ್ದೆ ಬಿಟ್ಟು ಬಯಲಾಟ ನೋಡಿದನು
ಧಿಮಿತ ಧೀಂಕಿಟದ ಲೀಲೆ
ಪರವ ಪಂಬದರ ನಲಿವ ನಲಿಕೆಯರ
ದುಡಿಯ ಪಾಡ್ಡನಗಳಲ್ಲಿ
ಭೂತಕೋಲ ನೇಮವು ನಡಾವಳಿ
ನಡೆಯುತಿರುವ ನೆಲದಲ್ಲಿ”
(ನವೋದಯದ ಋಷಿ)

ಇಂಥ ವಾತಾವರಣದಲ್ಲಿ ಅರಳಿದ ಕಯ್ಯಾರರ ಕಾವ್ಯಕನ್ನಿಕೆಗೆ ಈ ನೆಲದ ಸೊಗಡು ಸಹಜವಾಗಿಯೇ ಮೈಗೂಡಿದೆ.

ಪ್ರಕೃತಿಯ ಮಡಿಲಿನಲ್ಲಿ ಆಡುತ್ತ, ಸುತ್ತಲಿನ ಜಗತ್ತನ್ನು ವಿಸ್ಮಯಭರಿತ – ವಿಸ್ಫಾರಿತ ಕಣ್ಣುಗಳಿಂದ ನೋಡುತ್ತ ಕಯ್ಯಾರರು ಬಾಲ್ಯದಿಂದ ಯೌವನಕ್ಕೆ, ಯೌವನದಿಂದ ಪ್ರೌಢತ್ವಕ್ಕೆ ದಾಟಿದವರು. ಈ ಸಾಹಚರ್ಯವು ಅವರ ಕಾವ್ಯದಲ್ಲಿ ಹಾಸುಹೊಕ್ಕಾಗಿರುವ ನಿಸರ್ಗ ವರ್ಣನೆಯಲ್ಲಿ ಪ್ರತಿಫಲಿಸಿದೆ.

ಕಯ್ಯಾರರು ನಿಸರ್ಗವನ್ನು ಮಗುವಿನ ಮುಗ್ಧ ಕುತೂಹಲದಿಂದ ಕಂಡಿದ್ದಾರೆ.

‘ಪೊಸಡಿಗುಂಪೆ’ಯ ಶುಭ್ರ ಶಿಖರವು ಅವರಿಗೆ ಬದುಕಿನ ಉದಾತ್ತತೆಯ ಸಂಕೇತವಾಗಿ ಕಾಣುತ್ತದೆ. ‘ಕಾದ ಕೇಡಿಲ್ಲದಿರುವುದರಿಂದಲೇ ದೃಷ್ಟಿಯನ್ನು ಮರಳಿಸಲಾರದಷ್ಟು ಆಕರ್ಷಣೆಯೂ ಅದರಲ್ಲಿದೆ”.

“ಹಸಿರು ಸೀರೆ ಧರಿಸಿರೆ ನೆಲ ನೀರೆ
ತಾವರೆ ಮೊಗದಲಿ ತೇಲ್ನಗೆ ತೋರೆ
ಹರಿಯುವ ಹೊಳೆ ಕೊರಳಿಗೆ ಹಾರ
ತೃಣಸುಂದರ ಗಿರಿ ಸ್ತನಘನಭಾರ
……….
ನಿಸರ್ಗದೇವಿಯ ನಿಜನಾಟ್ಯ
ದಿವ್ಯದರ್ಶನಕೆ ಶುಭಲಾಸ್ಯ”
(ಶರದ್ಗಾನ)

ಎನ್ನುವ ಸೌಂದರ್ಯೈಕ ದೃಷ್ಟಿಯು ಪ್ರಕೃತಿಯ ಮೋಹಕತೆಯನ್ನು ಗ್ರಹಿಸುತ್ತದೆ.

ತಮ್ಮ ತಲೆಮಾರಿನ ಬಹುತೇಕ ಕವಿಗಳಂತೆ, ಕಯ್ಯಾರರೂ ಗಾಂಧೀವಾದದಿಂದ ಪ್ರಭಾವಿತರಾದವರು. ಗಾಂಧೀಜಿಯವರಿಗೆ ತಮ್ಮ ಕಾವ್ಯ ಗೌರವವನ್ನು ಸಲ್ಲಿಸಿದವರು. ಅವರದು ಗಾಂಧೀಜಿಯವರನ್ನು ಕಣ್ಣಾರೆ ಕಾಣುವುದೇ ಪರಮ ಸೌಭಾಗ್ಯವೆಂದು ಪರಿಗಣಿಸಿದ್ದ ತಲೆಮಾರಾಗಿತ್ತು. ನನಸಾದ ಈ ಕನಸು-ಸಹಜವಾಗಿಯೇ-ಕಯ್ಯಾರರ ಕಾವ್ಯದ ವಸ್ತುವಾಗಿದೆ.

‘ತಮದಿಂದ ಜ್ಯೋತಿಗೆ-ಮ್ಯತ್ಯುವಿನಿಂದ ಅಮೃತಕ್ಕೆ’ ವಿಶ್ವವನ್ನೇ ಸಾಗಿಸುವ ಪಣವನ್ನು ತೊಟ್ಟ ಗಾಂಧೀಜಿಯನ್ನು ಅವರು “ಶಾಂತ ಸಾಮ್ರಾಜ್ಯದ ಮಹಾಂತ ಸಾಮ್ರಾಟ”ನಾಗಿ (ಗಾಂಧೀದರ್ಶನ) ಕಂಡಿದ್ದಾರೆ, “ರಾಷ್ಟ್ರ ಸರ್ವಾಂಗದಭ್ಯುದಯದ” (ಗಾಂಧೀಜಿಗೆ) ಹರಿಕಾರ ನಾಗಿ ಗೌರವಿಸಿದ್ದಾರೆ.

ಕಯ್ಯಾರರು ಬದುಕನ್ನು ಪ್ರೀತಿಸಿದವರು, ಸಾಹಿತ್ಯವನ್ನು ಆರಾಧಿಸಿದವರು. “ನಾನು ನಿರಾಶಾವಾದಿಯಲ್ಲ. ಮುಂದೊಂದು ದಿನ ಶಕ್ತಿಯುತವಾದ ಸಾಹಿತ್ಯವನ್ನು ನಾನು ಸೃಷ್ಟಿಸಲಿದ್ದೇನೆ” ಎನ್ನುವ ಅವರ ಆತ್ಮವಿಶ್ವಾಸವು ಹುಸಿ ಹೋಗಲಿಲ್ಲ. ಇದೇ ಮಟ್ಟದ ಆಶಾವಾದವನ್ನು ಅವರು ತಮ್ಮ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾರೆ. ಈ ಆಶಾವಾದವೇ ಅವರ ಜೀವನ ಪ್ರೀತಿಯ ಸಶಕ್ತ ವಲಯವೂ ಆಗಿದೆ.

“ಜಗದ ಜೀವನವಿಂತು
ಮಧುಮಧುರ ಬಂಧುರವು
ಇದೆ ಸತ್ಯ ಇದೆ ಶಿವವು
ಇದುವೆ ಸುಂದರವು….”
(ಯಾರೆನುವರು)

ಎನ್ನುವ, ಧನಾತ್ಮಕ ದೃಷ್ಟಿಯನ್ನು ಅವರು ಕಾವ್ಯದರ್ಶನವಾಗಿ, ಜೀವನದ ಆದರ್ಶವಾಗಿ ಸ್ವೀಕರಿಸಿದ್ದಾರೆ.

ಅವರು ಕಂಡ ಜಗತ್ತಿನಲ್ಲಿ ಕೆಡುಕೆಂಬುದಿಲ್ಲವೆಂದಲ್ಲ. ಆದರೆ ಅದನ್ನು ಮೀರಿಸುವ, ಅವಿನಾಶಿಯಾದ ಋತದ ಸೌಂದರ್ಯವನ್ನು ಕಾಣುವ ಕಣ್ಣುಗಳನ್ನು ಅವರು ಪಡೆದಿದ್ದಾರೆ. ಆದುದರಿಂದಲೆ ಅವರಿಗೆ ನಾಳೆಗಳಲ್ಲಿ ಭರವಸೆಯಿದೆ. ಜನಮಾನಸದ ಒಳ್ಳೆಯತನದಲ್ಲಿ ಬಹುಭದ್ರವಾಗಿ ಬೇರೂರಿದ ವಿಶ್ವಾಸವಿದೆ.

“ಸಂದೇಹ ಸಂಕುಲವು ವಿಷಮತೆಯು ಗೊಂದಲವು
ರಣಪ್ರಮತ್ತರ ಬೊಬ್ಬೆಯಡಗಲಿಹುದು
ಹೊಸ ಜಗದ ನಿರ್ಮಾಣವಾಗಲಿದೆ; ಮೊಳಗುತಿದೆ
ಕಹಳೆಯದೊ ಸಮತೆಯನೆ ಸಾರುತಿಹುದು”
(ವಿಶ್ವಗರ್ಭದ ಗೋಳು)

ಎಲ್ಲ ಸಂಕೀರ್ಣತೆ, ವೇದನೆ, ಸಂಕಟಗಳ ಗರ್ಭದಿಂದ ಹೊಸಹುಟ್ಟು ಪಡೆಯುವ ಆಶಾಶಿಶುವಿಗೆ ಕವಿಯ ದೃಷ್ಟಿಯಲ್ಲಿ ದೀರ್ಘಾಯುಸ್ಸಿದೆ. ಈ ತುಮುಲ ಕೊನೆಯಾಗಿ ಬಡಬಾಗ್ನಿ ತಣಿದು, ಶಾಂತಿಯು ನೆಲಸುವ ಕ್ಷಣಕ್ಕಾಗಿ, ಮಾನವೀಯತೆಯ ನಿರ್ಮಲ ಗಂಧ ಪ್ರಸಾರಕ್ಕಾಗಿ ಕಾಯುವ ಸಹನೆಯನ್ನು ಕವಿಯು ಹೊಂದಿದ್ದಾರೆ. ಕಾವ್ಯ ಮಾಧ್ಯಮದ  ಮೂಲಕ ಸೋತ ಮನಸ್ಸುಗಳನ್ನು ಹುರಿದುಂಬಿಸುವ, ಜೀವನ ಪ್ರೀತಿಯನ್ನು ಪುನರುಜ್ಜೀವಿ ಸುವ ಕಾರ್ಯವನ್ನು ಕಯ್ಯಾರರು ಬಹು ಶ್ರದ್ಧೆಯಿಂದ ಮಾಡಿದ್ದಾರೆ, ಮಾಡುತ್ತಿದ್ದಾರೆ.

ತಮ್ಮ ಕವನ ಸಂಕಲನದಿಂದ ಸಂಕಲನಕ್ಕೆ ಕವಿ ಕಯ್ಯಾರರು ಬೆಳೆಯುತ್ತಾ ಬಂದಿದ್ದಾರೆ. ಅವರ ಅನುಭವವು ಮಾಗಿದಂತೆ, ವಿಶ್ವಶಕ್ತಿಯನ್ನು ಅವರು ಪರಿಚಯಿಸಿಕೊಂಡ ರೀತಿಗೂ  ಅವರ ಕಾವ್ಯವು ಸಾಕ್ಷಿಯಾಗುತ್ತದೆ. ಅದರ ಅಗಾಧತೆಯ ಮುಂದೆ ಅವರ ತಲೆಯು ತಾನಾಗಿ ಬಾಗುತ್ತದೆ. ಶಿವಕಾರುಣ್ಯದ ಅನಂತ ಮುಖಗಳನ್ನು ಕಂಡ ಕಣ್ಣು ತಣಿಯುತ್ತದೆ. ಎದೆ ತುಂಬಿದ ಧನ್ಯತೆಯೇ ಹಾಡಾಗುತ್ತದೆ.

ಇದೇ ಭಾವವು ಬಲಿತು ತಮ್ಮನ್ನು ಹರಸಿದ ಬದುಕಿನ ಬಗೆಗಿನ ಕೃತಜ್ಞತೆಯ ರೂಪವನ್ನು ಪಡೆಯುವುದನ್ನು ಇಲ್ಲಿ ಗುರುತಿಸುತ್ತೇವೆ.

“ಎನ್ನ ಬಾಳಿನ ಬಟ್ಟಲಿನಲಿ ಜೇನನೆರೆದು
ಜೀವ ಸವಿಯಾಗಿಸಿದ ಆ ನಲ್ಮೆಗೆ
……….
ಸಲಿಸುವೆನು ಕೃತಜ್ಞತೆಯ, ಋಣವೆನಗೆ ಹಿರಿದು”
(ಧನ್ಯವಾದ)

ಬದುಕಿನ ಕಟು ಅನುಭವಗಳಿಂದ ಅವರ ಮನಸ್ಸು ಕಹಿಯಾಗಿಲ್ಲ. ಬದಲಿಗೆ ಬದುಕು ದಯಪಾಲಿಸಿದ ಸುಖ-ಸಂತೃಪ್ತಿಗಳನ್ನು ಪ್ರಧಾನವಾಗಿ ಕಂಡಿದೆ. ಗುಣಗ್ರಾಹಿತ್ವವನ್ನು ಮೆರೆದಿದೆ.

ಕಯ್ಯಾರರ ಕಾವ್ಯದಲ್ಲಿ ಶಿವತತ್ತ್ವವೂ ಅಡಕಗೊಂಡಿದೆ. ಇದನ್ನು ಅವರು ಲೋಕ ಸಂಗ್ರಾಹಕ ದೃಷ್ಟಿಯಿಂದ ನೋಡುತ್ತಾರೆ ಎಂದರೆ, ದಿಕ್ಕೆಟ್ಟ ಬದುಕಿನಲ್ಲಿ ದಾರಿ ಕಾಣದೆ ಕಂಗೆಟ್ಟ ಮನುಜ ಕುಲವನ್ನು ನೋಡಿ, ಕೈಕಟ್ಟಿ ಕೂರುವುದು ಕವಿಯ ಜಾಯಮಾನವಲ್ಲ. “ಸಾಹಿತ್ಯವು, ಪಶುಪಂಥವನ್ನು ಮುಂದಿಕ್ಕಿ, ಸತ್ಯಧರ್ಮಕ್ಕೆ ಪಟ್ಟ ಕಟ್ಟಿಸಿ, ಭರತಪುತ್ರರ ಘೋಷವನು ಮುಗಿಲು ಮುಟ್ಟಿಸಿದಾಗಲೇ ಅದಕ್ಕೆ ಸಾಫಲ್ಯ”ವೆನ್ನುವುದನ್ನು ವ್ಯಾಸರ ಸಂಕೇತದ ಮೂಲಕ ‘ವೇದವ್ಯಾಸನಿಗೆ’ ಕವನದಲ್ಲಿ ಕವಿಯು ಮನಗಾಣಿಸುತ್ತಾರೆ.

ಯಾವುದೇ ಸಾಹಿತ್ಯದ ಒಟ್ಟಂದದ ಮೌಲಿಕತೆಯ ನಿರ್ಧಾರವನ್ನು ಅದು ಪ್ರತಿಪಾದಿಸುವ ಮೌಲ್ಯಗಳಿಗೆ ಸಂವಾದಿಯಾಗಿ ಮಾಡಬೇಕಾಗುತ್ತದೆ. ಕಯ್ಯಾರರು ಪ್ರತಿಪಾದಿಸಿದ ಮೌಲ್ಯ ಗಳಾದರೂ ಎಷ್ಟು ತೂಕದವುಗಳಾಗಿವೆ! ಒಂದೆಡೆಯಿಂದ ಸತ್ಯ, ಧರ್ಮ, ನಿಯಮ, ನಿಷ್ಠೆ, ವಿಶ್ವಭ್ರಾತೃತ್ವ, ಸಮಾನತೆ, ಸಹೃದಯ ತತ್ವಗಳ ಹರಿಕಾರತ್ವ. ಇನ್ನೊಂದೆಡೆಯಿಂದ ಕತ್ತಲೆ ಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಅರಿವಿನೆಡೆಗೆ, ಅಂಶದಿಂದ ಪೂರ್ಣದೆಡೆಗೆ ಪದೋನ್ನತಿ ಯನ್ನು ಪಡೆಯುವ, ಆತ್ಮೋದ್ಧಾರಕ್ಕೆ ಹಂಬಲಿಸುವ ತವಕಗಳು ಈ ನೆಲೆಗಳನ್ನು ನಿರ್ಧರಿ ಸುತ್ತವೆ.

ಕವಿಯ ಸ್ಥಿತಪ್ರಜ್ಞೆಗೆ ಒಂದು ಉದಾಹರಣೆಯನ್ನು ಕೊಡಬಹುದು. ಅವರಿಗೆ ಮೃತ್ಯುವೆಂಬುದು ಬದುಕಿನ ಕೊನೆಯಲ್ಲ. ಅದು ಒಂದು ಹಂತ ಮಾತ್ರ. ಬದುಕಿನ ಆವರ್ತನದ ಒಂದು ಸಹಜ ಸ್ಥಿತಿ. ಇದುವೇ ನಿಯತಿ. ಆದುದರಿಂದಲೇ ಮೃತ್ಯುವು ಅವರಿಗೆ ಭಯಾವಹವಲ್ಲ. ಬದಲಿಗೆ ಆದರಿಸಬೇಕಾದ ಅತಿಥಿ!

“ನಿನ್ನ ಕರೆ ಬಂದಾಗ ಓಗೊಟ್ಟು ಓಡಿ ಓಡಿ ಬಂದೆ
ಸವಿದನಿಯ ಕೇಳಿ ಮೈ ಮರೆಯಲುಂಟು….
…………..
ಬಾಗಿಲನು ತಟ್ಟೆ ಬರಲಿರುವೆ, ನಾ ಕಾದಿರುವೆ
ಆ ರಸದ ನಿಮಿಷವನೆ ನೆನೆಯುತಿರುವೆ
……………..
ಇಂದೇ ಬಂದರು ಬಿಡದೆ ಸ್ವಾಗತಿಸುವೆ”
(ಅತಿಥಿ)

‘ಜೀವವನು ಸಾವಿಗಣಿಮಾಡಿ ಬದುಕುವ’ ಕೆಲವೇ ಸಾರ್ಥಕ ಜೀವಿಗಳಲ್ಲಿ ಒಬ್ಬರಾಗಿ ಕಯ್ಯಾರರನ್ನು ನಾನು ಗುರುತಿಸುತ್ತೇನೆ. ಬದುಕನ್ನು ತೀವ್ರವಾಗಿ ಪ್ರೀತಿಸುವ ಕವಿಗೆ ಅದರ ಮೋಹವಿಲ್ಲ. ಮೃತ್ಯುವನ್ನು ಆಮಂತ್ರಿಸುತ್ತಾರಾದರೂ ಬದುಕಿಗೆ ವಿಮುಖರಲ್ಲ! ಈ ಸಮದೃಷ್ಟಿಯು ಚೈತನ್ಯದ ಪಕ್ವಸ್ತಿತಿಯಲ್ಲಿ ಮಾತ್ರವೇ ಲಭ್ಯವಾಗಬಹುದೇನೋ!

ಇದು ಕಯ್ಯಾರರ ಸಾಹಿತ್ಯ ಕೃಷಿಯ ಒಂದು ವಿಹಂಗಮ ನೋಟ ಮಾತ್ರವೇ ಆಗಿದೆ. ಅಲ್ಲಿ ಪರಿಮಳಿಸುವ ಕಾವ್ಯ ಕುಸುಮಗಳನ್ನು, ಫಲ ಭಾರದಿಂದ ಬಾಗಿರುವ ಗದ್ಯ ವೃಕ್ಷಗಳನ್ನು ಹತ್ತಿರದಿಂದ ನೋಡಿ ಪರಿಚಯಿಸಿಕೊಳ್ಳಬೇಕಾದ ಅಗತ್ಯವನ್ನಷ್ಟೇ ಇದು ಸೂಚಿಸುತ್ತದೆ.

ಹೊಸಗನ್ನಡ ಸಾಹಿತ್ಯದ ಸರಿಯಾದ ಮೌಲ್ಯಮಾಪನವು ಇನ್ನಷ್ಟೇ ಆಗಬೇಕಾಗಿದೆ. ಈಗೀಗ ಸಮಚಿತ್ತದ ಕೆಲವು ವಿಮರ್ಶಕರು ಆ ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲವಾದರೆ ನವ್ಯದ ಭರಾಟೆಯ ದಿನಗಳಲ್ಲಿ ನಮ್ಮ ಆಂಗ್ಲ ವಿಮರ್ಶಕರ ಪೂರ್ವಗ್ರಹ ಬದ್ಧ ನಿಲುವುಗಳಿಂದಾಗಿ ಅನೇಕ ನವೋದಯ ಸಾಹಿತಿಗಳಿಗೆ ಅನ್ಯಾಯವೇ ಆಗಿದೆ. ಮಠಾಧಿಪತಿಗಳ ಸೋಗಿನಲ್ಲಿ ಉಪದೇಶಗಳನ್ನು ನೀಡುವ ಇಂತಹವರಿಂದಾಗಿಯೇ ಕೆಲವರ ಸಾಹಿತ್ಯವನ್ನು ನಾವು ನಿರ್ಲಕ್ಷಿಸಿದೆವು. ಈಗ ಮತ್ತೊಮ್ಮೆ ಅವುಗಳತ್ತ ನೋಡುವ ಅವಶ್ಯಕತೆಯಿದೆ ಯೆನಿಸುತ್ತದೆ. ಕಯ್ಯಾರರಂತಹವರ ಕಾವ್ಯದಲ್ಲಿ ಆವೇಶ ಮತ್ತು ವೈಭವೀಕರಣಗಳಿದ್ದರೆ ಅದು ಸಹಜವೇ ಆಗಿದೆ. ಅವರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಾವು ಇದಕ್ಕೆ ಕಾರಣಗಳನ್ನು ಗುರುತಿಸಬೇಕಾಗುತ್ತದೆ.

ಈ ಹಿರಿಯ ಚೇತನಕ್ಕೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯು ಉಚಿತವೇ ಆಗಿದೆ. ಈ ಇಳಿವಯಸ್ಸಿನಲ್ಲಿಯೂ ಅವರ ಆರೋಗ್ಯವು ಚೆನ್ನಾಗಿದೆ. ಕಂಠಶ್ರೀಯಂತೂ ಅನುಪಮವಾಗಿದೆ. ನಮ್ಮ ಶ್ರೇಷ್ಠ ವಾಗ್ಮಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ. ನನ್ನ ಬಾಲ್ಯದಿಂದಲೇ ನಾನು ಪ್ರೀತಿಸುವ, ಗೌರವಿಸುವ ಹಿರಿಯರಾಗಿರುವ ಕಯ್ಯಾರರ ಸಮರ್ಥ ಸಾರಥ್ಯದಲ್ಲಿ ಕನ್ನಡಮ್ಮನ ತೇರು ನಿರ್ವಿಘ್ನವಾಗಿ ಮುಂದೆ ಸಾಗಲಿ, ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ೬೬ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಅರ್ಥಪೂರ್ಣ ಆಯಾಮಗಳನ್ನು ಪಡೆಯಲಿ ಎಂದು ಕನ್ನಡಿಗರೆಲ್ಲರ ಪರವಾಗಿ ಹಾರೈಸುತ್ತೇನೆ.

ಬೆಂಕಿ ಬಿದ್ದಿದೆ ಮನೆಗೆ

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ! ಹಾರೆಗುದ್ದಲಿ ಕೊಡಲಿ ನೊಗನೇಗಿಲೆತ್ತುತಲಿ,
ಎಲ್ಲರೂ ಎದ್ದೆದ್ದು ಓಡಿ ಬನ್ನಿ ! ನೆಲದಿಂದ ಹೊಲದಿಂದ ಹೊರಟು ಬನ್ನಿ!
ಕನ್ನಡದ ಗಡಿ ಕಾಯೆ, ಕನ್ನಡದ ನಾಡಿಂದ
ಗುಡಿ ಕಾಯೆ, ನುಡಿ ಕಾಯೆ ಕಾಡಿಂದ ಗೂಡಿಂದ
ಕಾಯಲಾರೆನೆ ಸಾಯೆ ! ಕಡಲಿಂದ ಸಿಡಿಲಿಂದ
ಓ ಬನ್ನಿ ಬನ್ನಿ! ಗುಡುಗಿ ಬನ್ನಿ!

ಕಯ್ಯಾರ ಕಿಞ್ಞಣ್ಣರೈ