ಇಂದ್ರಿಯಗಮ್ಯವಾದ ಅನುಭವಗಳನ್ನು ಮೂಲದ್ರವ್ಯಗಳಾಗಿ ಸ್ವೀಕರಿಸಿ, ಪ್ರತಿಭೆಯ ಸಂಸ್ಪರ್ಶದಿಂದ ಅವುಗಳಿಗೆ ಸಹೃದಯಗ್ರಾಹ್ಯ ಆಯಾಮವನ್ನು ನೀಡುವ ಸೃಷ್ಟಿ ಕಾರ್ಯದಲ್ಲಿ ತನ್ಮಯವಾಗಿ ಸಾಹಿತಿಯೊಬ್ಬ ಭಿನ್ನಭಿನ್ನ ಸಾಹಿತ್ಯ ಪ್ರಕಾರಗಳನ್ನು ಅಭಿವ್ಯಕ್ತಿ ಗಾಗಿ ಬಳಸಿಕೊಳ್ಳುತ್ತಾನೆ. ತನ್ನ ಪರಿಸರಕ್ಕೆ ಬದ್ಧನಾಗಿರುತ್ತಾ ಆತ ಆ ಅನುಭವಗಳನ್ನು ಪುನಾ ಸೃಷ್ಟಿಸುತ್ತಾನೆ; ಸಹೃದಯರ ದೃಷ್ಟಿಯನ್ನೂ ವಿಸ್ತಾರಗೊಳಿಸುತ್ತಾನೆ. ಈ ಎರಡೂ ಅಂಶಗಳ- ಅಂದರೆ ಸಾಹಿತಿಯ ವೈಯಕ್ತಿಕ ಅನುಭವಗಳು ಮತ್ತು ಅವುಗಳನ್ನು ಸ್ವೀಕರಿಸುವ ಸಾಹಿತ್ಯಕ ಪರಿಸರಗಳು – ನಡುವೆ ಸಾಮರಸ್ಯವಿದ್ದಾಗಷ್ಟೇ ಸಾಹಿತ್ಯ ಪ್ರಬುದ್ಧವೂ ಸಮರ್ಥವೂ ಆಗುವುದರೊಂದಿಗೆ ಸಂವಹನಶೀಲತೆಯನ್ನೂ ಸಾಧಿಸಿಕೊಳ್ಳುತ್ತದೆ. ಈ ಮಾತಿಗೆ ಸಮರ್ಥನೆ ಯನ್ನು ನಾವು ಪ್ರೊ. ವಿ.ಕೆ. ಗೋಕಾಕರ ಕಾವ್ಯದಲ್ಲಿ ಕಾಣುತ್ತೇವೆ. ಈ ಕಿರುಲೇಖನದಲ್ಲಿ ಇದರ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.

ತಮ್ಮ ಸಮಗ್ರ ಬದುಕಿನ ವ್ಯಾಖ್ಯೆಯನ್ನು “ನಿರಂತರ ಪರಿವರ್ತನಶೀಲ ಪ್ರಕ್ರಿಯೆ”ಯ ಒಳಗೆ ಅಳವಡಿಸುವ ಗೋಕಾಕರಿಗೆ ಕಾಣದ ಕೈಯ ಕರುಣೆಯ ಮೇಲೆ ಅಪಾರ ವಿಶ್ವಾಸ. ಆ ದೈವೀಶಕ್ತಿಯ ಮುಂದೆ ನಮ್ರರಾಗಿ ಅವರು.

“ಬದುಕಿನೆದೆ ನೀನೆನ್ನ…
ನಿನ್ನಾಣತಿಯೆ ನನ್ನ ಜೀವಿತದ ಗುರಿಯು”

ಎಂದು ಸರ್ವಾರ್ಪಣ ಭಾವದಿಂದ ತಮ್ಮ ಭವಿಷ್ಯವನ್ನೇ ಅದರ ಅಂಕಿತಕ್ಕೆ ಒಳಪಡಿಸುತ್ತಾರೆ.

ಗೋಕಾಕರ ಸವ್ಯಸಾಚಿ ಪ್ರತಿಭೆ ಕನ್ನಡ – ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದೆ. ಕನ್ನಡದಲ್ಲಿ ಕಾವ್ಯ ಕಾದಂಬರಿ, ಸಾಹಿತ್ಯ ವಿಮರ್ಶೆ ಹಾಗೂ ಪ್ರವಾಸ ಕಥನಗಳಾಗಿ ಅಭಿವ್ಯಕ್ತಿ ಕಂಡ ೬೦ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಅವರ ಸುಮಾರು ೨೫ ಕೃತಿಗಳು ಬೆಳಕು ಕಂಡಿವೆ. ಅವರಿಗೆ ತುಂಬ ಪ್ರಿಯವಾದ ‘ಸಮುದ್ರ’ದ ಪ್ರತಿಮೆಗೆ ಸಂವಾದಿಯಾಗಿಯೇ ಅವರ ಬರೆಹಗಳೂ ತಮ್ಮ ಭೌಮಗುಣವನ್ನು ಕಾಯ್ದು ಕೊಳ್ಳುತ್ತವೆ. ಗೋಕಾಕ ಸಾಹಿತ್ಯದ ಅಭ್ಯಾಸಿಗೆ ಎದ್ದು ಕಾಣುವ ಅಂಶಗಳೆಂದರೆ ಅವರ ಕೃತಿಗಳಲ್ಲಿರುವ ಪರಂಪರೆ – ಆಧುನಿಕತೆಗಳ ಹಿತವರಿತ ಪರಿಪಾಕ, ಭಾಷೆ – ಭಾವಗಳ ಸಮತೂಕದ ಎರಕ, ಮೇಲುಮೇಲಿನ ಓದಿಗೆ ತನ್ನನ್ನು ತೆರೆದುಕೊಳ್ಳದ ಪ್ರತಿಮೆ, ಪ್ರತೀಕ, ಸಂಕೇತಗಳಿಂದ ಇಡಿಕಿರಿದ ಸಂಕೀರ್ಣ ಅಭಿವ್ಯಕ್ತಿ – ಎಲ್ಲ ಕೃತಿಗಳ ಮೂಲಸ್ರೋತವಾಗಿರುವ ವಿಶ್ವಮಾನವ ಪರಿಕಲ್ಪನೆ – ಜಾಗತಿಕ ದೃಷ್ಟಿ.

ಸೃಜನಶೀಲ ಬರೆಹಗಳ ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ಸಾಹಿತಿಯ ನಿರೂಪಣಾತಂತ್ರ-ಅನುಭವ ಪ್ರಾಮಾಣ್ಯಗಳು ಪರಸ್ಪರ ಪೂರಕವಾಗಿ ಅವುಗಳ ಮೌಲ್ಯಮಾಪನಕ್ಕೆ ನೆರ ವಾಗುತ್ತವೆ. ಈ ದೃಷ್ಟಿಯಿಂದ, ಗೋಕಾಕರ ಬರೆಹಗಳ ಸಾಮಾನ್ಯ ಲಕ್ಷಣಗಳು – ವೈಲಕ್ಷಣ್ಯ ಗಳು ಅಧ್ಯಯನ ಯೋಗ್ಯವಾಗುತ್ತವೆ.

. ನವ್ಯ ಪರಿಕಲ್ಪನೆ

ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಗೋಕಾಕರ ಕೊಡುಗೆಗಳಲ್ಲೇ ಮಹತ್ವಪೂರ್ಣವಾದುದು ‘ನವ್ಯ’ ಪರಿಕಲ್ಪನೆ. ೧೯೫೦ನೆಯ ಇಸವಿಯಲ್ಲಿ ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ‘ಸಾಹಿತಿಗಳ ಸಭೆ’ (Writers meet)ಯಲ್ಲಿ ಗೋಕಾಕರು ‘ನವ್ಯ’ ಪರಿಕಲ್ಪನೆಯ ಸ್ಥೂಲ ಪರಿಚಯವನ್ನು ಮಾಡಿಕೊಟ್ಟರು. “ಸಾಹಿತ್ಯದಲ್ಲಿ ನವ್ಯತೆಯೆನ್ನುವುದು ಅದರ ವಿಸ್ತೃತ ದೃಷ್ಟಿಯಲ್ಲಿ ವ್ಯಕ್ತವಾಗಬೇಕೇ ಹೊರತಾಗಿ ವೈಯಕ್ತಿಕ ಅನುಭವಗಳನ್ನು ಹಸಿಹಸಿಯಾಗಿ ತೆರೆದಿಡುವುದರಲ್ಲಿ ಅಲ್ಲ” ಅನ್ನುತ್ತಾ ‘ನವ್ಯ’ದ ಸಾಧ್ಯತೆ ಗಳನ್ನು ಮುಕ್ತ ಚಿಂತನೆಗೆ ತೆರೆದಿಟ್ಟರು.

‘ಸಾಹಿತ್ಯಿಕ ಅಭಿವ್ಯಕ್ತಿ ಎಲ್ಲಾ ಉಪಾಧಿಗಳನ್ನು ಮೀರಿ ಸ್ವತಂತ್ರವಾಗಬೇಕು’ ಎನ್ನುವ ವಿನಾಯಕ – ನಿಲುವು “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಈ ಕರೆಯಲ್ಲಿ ಮೂರ್ತವಾಗಿರುವುದನ್ನು ಕಾಣುತ್ತೇವೆ.

ಈ ನವ್ಯ ಸಂವೇದನೆ ಅವರ ‘ದ್ಯಾವಾ – ಪೃಥಿವೀ’ ವಸ್ತುವಿನ ದೃಷ್ಟಿಯಿಂದ ಕೂಡಾ ವಿಶಿಷ್ಟವೆನಿಸುತ್ತದೆ. ಭೂಮಿ – ಅಂತರಿಕ್ಷಗಳಲ್ಲಿ ಕೇಂದ್ರೀಕೃತವಾಗಿರುವ ಕಾವ್ಯ-ಲಕ್ಷ್ಯ ಸಹೃದಯರ ಭಾವಕೋಶವನ್ನು ಕವಿಯ ವಿಶ್ವದೃಷ್ಟಿ (Cosmic Precption)ಯ ಸಂಪರ್ಕಕ್ಕೆ ತರುವುದೇ ಆಗಿದೆ.

ಕಾವ್ಯ ಮಾಧ್ಯಮದ ಮೂಲಕ ಗೋಕಾಕರು ಹೊಸ ಸೃಷ್ಟಿಗಾಗಿ ತಮಗಿರುವ ತಹತಹವನ್ನು ತೋಡಿಕೊಂಡಿದ್ದಾರೆ. ಒಂದು ಪಾತಳಿಯಲ್ಲಿ ಹೊಸ ಹುಟ್ಟಿನ ನಿರೀಕ್ಷೆಯಿಂದ ವಿನಾಶವನ್ನು ಕೂಡಾ ಅವರು ಸ್ವಾಗತಿಸುತ್ತಾರೆ.

“ಉಕ್ಕಲಿ ಚಿಮ್ಮಲಿ ಸಮುದ್ರ ಸ್ವಾತಂತ್ರ್ಯ
………………………………
ಜರ್ಜರವಾದುದೆಲ್ಲ ಮುಳುಗಿ ಹೋಗಲಿ ಜಲ ಸಮಾಧಿಯಲ್ಲಿ
ಹೊಸದೆಲ್ಲ ಹುಟ್ಟಿಬರಲಿ ಹೃದಯದಾಳದಲ್ಲಿ”

ಇಲ್ಲೆಲ್ಲ ಅವರು ನವ್ಯದ ಅಸ್ಪಷ್ಟ ಪಥದ ಪ್ರದರ್ಶಕರಾಗಿ ಮಾತ್ರವಲ್ಲ. ಸಾಹಿತ್ಯಿಕ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ಕಡೆದಿರಿಸಲ್ಪಟ್ಟ ನವ್ಯ ಪ್ರಜ್ಞೆಯ ಕವಿಯಾಗಿ ಕೂಡಾ ಪ್ರಸ್ತುತರಾಗುತ್ತಾರೆ.

. ಅನುಭಾವ ಪ್ರಾಚುರ್ಯ

ನವ್ಯಕ್ಕೆ ಸಮಾನಾಂತರವಾಗಿಯೇ ಆರ್ಷೇಯವಾದ ಆನುಭಾವಿಕ ಅಂಶಗಳೂ ಗೋಕಾಕರ ಬರೆಹಗಳಲ್ಲಿ ಎಡೆ ಪಡೆಯುವುದನ್ನು ನಾವು ಕಾಣುತ್ತೇವೆ. ಈ ‘ಅನುಭಾವ’ ಪರಿಕಲ್ಪನೆಯೇ ಸ್ವಲ್ಪಮಟ್ಟಿಗೆ ಗೊಂದಲಕ್ಕೆ ಕಾರಣವಾಗುತ್ತದೆ. ಕಾವ್ಯಾತ್ಮಕತೆಯನ್ನು ಕಾಯ್ದುಕೊಳ್ಳುತ್ತಾ ಸಾಹಿತ್ಯ ಎಷ್ಟರಮಟ್ಟಿಗೆ ತಾತ್ವಿಕ ಅಂಶಗಳನ್ನು ತಡೆದುಕೊಳ್ಳಬಹುದೆಂಬುದೂ ಚರ್ಚಾಸ್ಪದವೇ.

ಗೋಕಾಕರ ಬಹಳಷ್ಟು ಪ್ರತಿಮೆಗಳೂ ಪ್ರತೀಕಗಳೂ ಮೂಲತಃ ವೇದ, ಉಪನಿಷತ್ತು ಗಳು, ಗ್ರೀಸ್ ಮತ್ತು ಭಾರತೀಯ ಪುರಾಣಗಳು ಮುಂತಾದ ಆಕರಗಳಿಂದ ಬಂದವುಗಳಾಗಿವೆ.

‘ಓ ಪರಾಪ್ರಕೃತಿ
ಸಚ್ಚಿದಾನಂದದ ವಧುವೇ
ಅಕ್ಷವಯ್ಯ ಋತಪ್ರಜ್ಞೆಯೇ
…………….ಉನ್ಮನವೇ
ಸಚ್ಚಿದಾನಂದದ ಮೇರುಕೃತಿಯಿಂದ
ಲೀಲಾವತಾರದಲಿ ಧುಮ್ಮಿಕ್ಕಿದೆ’

‘ಉನ್ಮನ’ದ ಪಾತಳಿಯಲ್ಲಿ ಅವತರಿಸುವ ‘ತಾಯಿ’ಯ ಪ್ರತಿಮೆ ಅಂತಃಸ್ಫುರಣದ ಕಡೆಗೆ ಎಂದರೆ ಆಧ್ಯಾತ್ಮಿಕ ಶಿಖರ(Spiritual Peak)ದೆಡೆಗೆ ಊರ್ಧ್ವಮುಖಿಯಾಗಿ ಸಾಗುತ್ತದೆ” ಎನ್ನುವಾಗ ಅವರ ಆನುಭಾವಿಕ ಸಂವೇದನೆಗಳ ತೀವ್ರತೆ ನಮ್ಮನ್ನು ತಟ್ಟುತ್ತದೆ.

“ಬಾಳುವೆನು ನಾ ಸತ್ಯದಾಳು ಹೋಳಾಗಿ
ಸತ್ಯಕ್ಕೆ ಗೆಲುವಿರಲಿ ಇಲ್ಲದಿರಲಿ
ದೇವಕೈಯಲ್ಲಿ ಕೊಟ್ಟ ಬಿದಿರನಿದನು
ಹಜ್ಜ ಹಾಕುತ  ಮಾಡುತೊಂದು ಮುರಲಿ”

ಎನ್ನುವಾಗ ಸಾಂಪ್ರದಾಯಿಕವಾದ ಅನುಭಾವದಿಂದ ಭಿನ್ನವಾಗಿ, ಎತ್ತರವಾಗಿ ನಿಲ್ಲುವ  ಅನುಭೂತಿಯೊಂದನ್ನು ನಾವು ಗಮನಿಸುತ್ತೇವೆ. ಕಾವ್ಯ ತನ್ನ ನೈತಿಕ ನೆಲೆಗಟ್ಟಿನ ಮೇಲೆ ಭದ್ರವಾಗಿ ನೆಲೆಯೂರುವುದನ್ನೂ ಕಾಣುತ್ತೇವೆ.

. ತೀವ್ರವಾದ ಸ್ಮರಣಾನುಭವ

ಅಸ್ಮಿತೆಯ ಅನ್ವೇಷಣೆಯಲ್ಲಿ ಮಗ್ನರಾಗಿರುವಾಗ ಕವಿಯ ಮನಸ್ಸು ಭೂತಕಾಲಕ್ಕೆ ಜಾರುತ್ತದೆ. ಆ ಅನುಭವಗಳನ್ನು ಇಂದಿನವುಗಳೊಂದಿಗೆ ತುಲನೆ ಮಾಡುತ್ತದೆ. ಈ ಪ್ರಕ್ರಿಯೆಯ ಪ್ರತಿಫಲನವನ್ನು

“ಇಲ್ಲಿ ಸಾಮ್ರಾಜ್ಯವಿತ್ತು, ಸಕಲ ಸಂಪತ್ತಿತ್ತು
ಕುಬೇರನ ಖಜಾನೆಯಿತ್ತು
ಇಂದಿಗೆ ಭಾರತೀಯನಿಗೆ ತಿನ್ನಲು ಕೂಳಿಲ್ಲ
ಕುಡಿಯಲು ನೀರಿಲ್ಲ”

ಎನ್ನುವ ಸಾಮಾನ್ಯೀಕರಣದಲ್ಲಿ ಕಾಣುತ್ತೇವೆ. ಇದರ ಮಗ್ಗುಲಿಗೇ ಕವಿಯ ವಿಚಿಕಿತ್ಸಕ ದೃಷ್ಟಿ ವರ್ತಮಾನವನ್ನೂ ಅಭ್ಯಸಿಸುತ್ತದೆ.

“ಆದರೀ ಮನ್ವಂತರದ ರೋಗ ಬೇರೆಯಿದೆ
ಯಾವ ಧನ್ವಂತರಿಯು ಬರುವ ಕಾಣೆ
ಹಳತೆಲ್ಲ ಹಳಸಿಹುದು, ಹೊಸತೆಲ್ಲ ಕಸಕಿಹುದು
ಯುಗಾಂತರವು ಬರುವನಕ ತಪ್ಪದಿದು ಬವಣೆ”

ಹೊಸ ಮನ್ವಂತರದ ಮುಂಗೋಳಿಯ ಕೂಗಿಗಾಗಿ ಕಾಯುವ ಸೈರಣೆ, ಆಶಾವಾದ ಅವರ ಕಾವ್ಯವನ್ನು ಮತ್ತಷ್ಟು ಹೃದ್ಯವಾಗಿಸುವ ಅಂಶಗಳಾಗಿವೆ.

. ಆತ್ಮವೃತ್ತಾತ್ಮಕ ನಿರೂಪಣೆ

ತಮ್ಮ ಬಹಳಷ್ಟು ಕವನಗಳಲ್ಲಿ ಗೋಕಾಕರು ಆತ್ಮಮುಖಿಯಾಗಿ ಬಿಡುತ್ತಾರೆ. ಆದರೆ ಇಲ್ಲಿ ನಾವು ನೇರವಾದ ಆತ್ಮವೃತ್ತದ ಬದಲಿಗೆ ತನ್ನ ನಿಜದ ಅರಿವಿಗಾಗಿ ಹಂಬಲಿಸುವ ಜಿಜ್ಞಾಸುವಿನ ಒಳತೋಟಿಯನ್ನು ಕಾಣುತ್ತೇವೆ.

ಅರಸುಗುರಿಯನರಸಲೆಂದು ಪಯಣವನ್ನು ಬೆಳೆಸಿದೆ
ಲೋಕದಲ್ಲಿ ನಾಕದೊಂದು ಕುರುಹಕಾಣಲೆಳಸಿದೆ
……………………………………….
ದಾರಿ ದೊರೆಯಲಿಲ್ಲವೆಂದು ಮಿಡುಕಲಿಲ್ಲ ಮನವದು
ಸುಖವ ತೊರೆಯಲಾರನೆಂದು ದಣಿಯಲಿಲ್ಲ ತನುವದು.

ನಿರಾಶೆಯ ಸ್ವೀಕಾರದಲ್ಲೂ ಎದ್ದುಕಾಣುವ ಸ್ವವಿಮರ್ಶೆ ಕಾವ್ಯದ ಅಭ್ಯಾಸಕ್ಕೆ ಹೊಸದಿಕ್ಕು ಗಳನ್ನು ತೆರೆಯುತ್ತದೆ.

“ಇಲ್ಲೆ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು
ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು”

ಗಾಢವಾದ, ಗೂಢವಾದ ಮಾನವೀಯ ಸಂಬಂಧಗಳನ್ನು ಕೂಡಾ ಸರಳ ಸಂಕೇತದ ಮೂಲಕ ಧ್ವನಿಸುವ ಕವಿ ತಮ್ಮ ಸಂವಹನ ಸಾಮರ್ಥ್ಯವನ್ನೂ ಸಾಬೀತುಪಡಿಸುತ್ತಾರೆ.

. ಮಾನವೀ ಸ್ಪಂದನ

ಸ್ವಾತಂತ್ರ್ಯದ ಬೆಳ್ಳಿ ಬೆಳಕು ಎಲ್ಲೆಡೆ ಹರಡಲೆಂದೇ ಸದಾ ಹಾರೈಸುವ ಗೋಕಾಕರ ವಿಶ್ವದೃಷ್ಟಿಯೂ ತುಂಬ ವಿಶಿಷ್ಟವಾದುದು. ಪ್ರತಿ ಮನುಷ್ಯನಲ್ಲಿಯೂ ಅವರು ಭವ್ಯ ಮಾನವನ ಒಂದಂಶವನ್ನು ಪೂರ್ಣತೆಯೆಡೆಗೆ ತುಯ್ಯುವ ಭಾವದ ಎಸಳನ್ನು ಕಾಣುತ್ತಾರೆ.

“ಬಾಳ್ವೆಯಿರಲಿ ಬೃಹತ್‌ಪೂರ್ಣ
ರಶ್ಮಿಪೂತ ನಿರ್ಮಲ”

ಎನ್ನುವ ಅವರ ಮಾನವೀಯ ದೃಷ್ಟಿಗೆ “ವಿಮೋಚನೆಯನ್ನು ತರುವ” ವಾಯುದೇವನ ಹಾರೈಕೆ ಕೂಡಾ “ಬಾಳು ಬೆಳೆಯಲೆಂದು”! ಅವರು ತಮ್ಮ ಕಾವ್ಯದ ಮೂಲಕ ವ್ಯಕ್ತಪಡಿಸುವ ಆಶಯ ಕೂಡಾ ಇದಕ್ಕೆ ಒತ್ತು ಕೊಡುತ್ತದೆ :

“ಮನುಕುಲದ ಕವಿಯಾಗು ಕುಲಕೋಟಿಗಳನು ತಿಳಿ
……………………………………..
ವಿವಿಧ ಕುಲಗಳ ಭಿನ್ನ ಜನದ ಹೃದಯವನರಿತು
ಅಂತಃಕರಣ ಬೆರೆಯಲದುವೆ ಪೂರ್ತಿ”

ಪೂರ್ಣತ್ವದ ಹಾದಿಯಲ್ಲಿ ‘ಅಂತಃಕರಣ’ಗಳ ಅರ್ಥೈಸುವಿಕೆಗೆ ಬಹಳ ಮಹತ್ವದ ಸ್ಥಾನವನ್ನು ಗೋಕಾಕರು ಕೊಟ್ಟಿದ್ದಾರೆಂಬುದರ ದ್ಯೋತಕಗಳಾಗಿ ಇಂಥ ಅಭಿವ್ಯಕ್ತಿಗಳನ್ನು ಕಾಣುತ್ತೆವೆ.

. ತೀವ್ರ ಆಶಾವಾದ

ಗೋಕಾಕರ – ಪ್ರಾಯಶಃ ಸೃಜನಶೀಲ ಪ್ರತಿಭೆಗೆ ಅನಿವಾರ್ಯವೇ ಆದ – ಕಾವ್ಯದಲ್ಲಿ ಒಂದು ರೀತಿಯ ಅಂತರ್ ವೈರುಧ್ಯ ನಮ್ಮ ಗಮನಕ್ಕೆ ಬರುತ್ತದೆ. ಒಂದೆಡೆಯಿಂದ ವರ್ತಮಾನದ ಮೇಲೆ ಜುಗುಪ್ಸೆ – ನಿರಾಕರಣೆಗಳು ಇನ್ನೊಂದೆಡೆಯಿಂದ ಉಜ್ವಲವಾದ ಆಶಾವಾದಿತ್ವ. ಇದು ಒಂದು ರೀತಿಯಿಂದ ಮಹಾನ್‌ಚೇತನವೊಂದು ಬದುಕಿನಲ್ಲಿ ಕಂಡು ಕೊಂಡ ಜೀವನ ದರ್ಶನವನ್ನೇ ಧ್ವನಿಸುತ್ತದೆನ್ನಬಹುದು.

“ಯುಗಯುಗದಲನ್ಯಾಯ ಕೋಟಿಯಲಿ ಮುಳುಗಿರುವ
ಧಾರುಣಿಗೆ ಬರಬಹುದು ಧನ್ಯತೆಯ ಬೆಳೆಯು
ಹಗೆತನದ ಹಾವು ಕಾಲ್ತೊಡಕಿರುವ ಮನುಕುಲಕೆ
ಇಂದಿಲ್ಲ ನಾಳಿರುವುದೊಗೆತನದ ಕೆಳೆಯು
……………………………..
ಆ ಸ್ವರ್ಣಯುಗಕಾಗಿ ತಾಳೋಣವಿಂದು!”

ನಾಳಿನ ಅಭ್ಯುದಯಕ್ಕಾಗಿ ಎದುರು ನೋಡುತ್ತಾ ಈ ಕತ್ತಲ ಖಂಡವನ್ನು ಉತ್ತರಿಸೋಣ ಎನ್ನುವ ತಾಳ್ಮೆ, ಆಶಾವಾದಗಳು ನಮ್ಮಲ್ಲೂ ಪ್ರತಿಫಲನಗೊಳ್ಳುತ್ತವೆ.

. ಪ್ರಾಚೀನ ಅರ್ವಾಚೀನ ಸಾಮರಸ್ಯ

ಸೈದ್ಧಾಂತಿಕ ಮುಖವುಳ್ಳ ನಿಖರವಾದ ಶಾಸ್ತ್ರಪ್ರಜ್ಞೆ – ಆಧ್ಯಾತ್ಮಿಕ ಮನೋಭೂಮಿಕೆಯುಳ್ಳ ಪಾರಲೌಕಿಕ ಆಸಕ್ತಿಗಳ ಸಮತೋಲನವನ್ನು ಗೋಕಾಕರು ಎತ್ತಿ ಹಿಡಿಯುತ್ತಾರೆ.

“ಓ ಸನಾತನಿ ಹೋಗು ಪಡುವಣದಿ ಹುಟ್ಟು
ಆಗ ತಿಳಿವುದು ನಿನಗೆ ತಿಳಿವಿನಾ ಗುಟ್ಟು
ಓ ವಿನೂತನಿ ಮತ್ತೆ ಮೂಡಣಕೆ ತೆರಳು
ಆಗ ಹೊಳೆವುದು ಕರ್ಮಕಾಂಡದಾ ತಿರುಳು”

ಮೂಡಣ – ಪಡುವಣ ವಿಚಾರಧಾರೆಗಳ ಆದಾನ – ಪ್ರದಾನದ ಮೂಲಕವೇ ಪರಿಪೂರ್ಣತ್ವ ಸಾಧ್ಯ ಎನ್ನುವ ನಿಷ್ಪಕ್ಷಪಾತಿ ನಿಲುವು ಶಾಬ್ದಿಕ – ಸಾಂಕೇತಿಕ ಎರಡೂ ನೆಲೆಗಳಲ್ಲೂ ಸಲ್ಲುವ ರೀತಿ ತುಂಬ ಅಪೂರ್ವವೆನಿಸುತ್ತದೆ.

ತರುಣ ಸ್ವಪ್ನಗಳೆಲ್ಲ ಕ್ರಾಂತಿ ಪಥ ಕೆಳೆಯುವವು
ಬಾಳ ಹೊಂಬಸಿರ ಸಾರುವವು ಹೊಂಗನಸುಗಳು

ಎಂದು ಬಹುದೂರದ ಕನಸೊಂದನ್ನು ಬಗೆಯಲ್ಲಿ ಬಿತ್ತಿ ಬೆಳೆಸಿ ಅದರ ಸಾಕ್ಷಾತ್ಕಾರ ಕ್ಕಾಗಿಯೇ ಬದುಕಿದ ವಿಶ್ವಾಮಿತ್ರನ ಬಾಳಗಾಥೆಯೇ ವಸ್ತುವಾಗಿರುವ ‘ಭಾರತ ಸಿಂಧುರಶ್ಮಿ’ಯಂತೂ ತುಂಬ ವಿಶಿಷ್ಟವಾದ, ಮಹತ್ವಪೂರ್ಣವಾದ ಕೃತಿ. ಅದರ ವಸ್ತು, ಸಂವಿಧಾನ ಕೌಶಲ, ಪಾತ್ರಸೃಷ್ಟಿ, ಸನ್ನಿವೇಶ ಚಿತ್ರಣ – ಒಂದೊಂದೂ ಪ್ರತ್ಯೇಕವಾದ ಆಳವಾದ ಅಭ್ಯಾಸವನ್ನು ನಿರೀಕ್ಷಿಸುತ್ತದೆ.

ಗೋಕಾಕರಿಗೆ ಆಪ್ತವಾದ ‘ಹೊಸತ’ನ್ನು ಸ್ವಾಗತಿಸುವ ಅವರ ಸಾಲುಗಳೊಂದಿಗೆ ಈ ಬರೆಹಕ್ಕೆ ಮಂಗಳ ಹಾಡಬಹುದೆನಿಸುತ್ತದೆ.

“ಗುರಿಯೊಳೆಲ್ಲಿದೆ ಭೇದ?
ಎಂದಿಗೂ ಋತವೊಂದು
ನಾವು ಸ್ವಾಗತಿಸೋಣ ನವೀನವೆಂಬುದನು
ಆ ದಾರಿಯಲಿ ಮುಕ್ತಿಯೆಂದಿಹುದು ಅಂತರ್ವಾಣಿ”