ಮನುಷ್ಯನ ಸ್ವಭಾವದಲ್ಲಿ, ಆರೋಗ್ಯಕರವಾದ ಅತೃಪ್ತಿಯೊಂದು ಸದಾ ಸಂಚರಿಸು ತ್ತಿರುತ್ತದೆ. ಹಾಗಾಗಿ ಆತ ಹೊಸ ಶೋಧಗಳಲ್ಲಿ ಯಾವಾಗಲೂ ಪ್ರವೃತ್ತನಾಗಿರುತ್ತಾನೆ. ತನ್ನ ಚರಿತ್ರೆಯುದ್ಧಕ್ಕೂ ಅಸಂಖ್ಯ, ಅನಿರೀಕ್ಷಿತ ಸವಾಲುಗಳಿಗೂ, ಸಂಘರ್ಷಗಳಿಗೂ ಉತ್ತರಿಸುತ್ತ, ಆತ ಗಟ್ಟಿಗೊಳ್ಳುತ್ತಿರುವ ಬಗೆಯೂ ರೋಚಕವಾಗಿದೆ. ಪ್ರಾಕೃತಿಕವಾದ ದೈಹಿಕ ಮಿತಿಗಳನ್ನು ತಮ್ಮ ಮನೋಬಲ – ಬುದ್ದಿಶಕ್ತಿಗಳ ಸಹಾಯದಿಂದ ಮೀರಿದ ಆತನು, ಕಾಲಚಕ್ರವು ಮಾರುದ್ದ ಕ್ರಮಿಸುವುದಕ್ಕೂ ಮೊದಲೇ ಅಗಾಧವಾಗಿ ಬೆಳೆದಿದ್ದಾನೆ; ಇನ್ನೂ ಬೆಳೆಯುತ್ತಿದ್ದಾನೆ. ಸೋಲು-ಗೆಲುವುಗಳ ತೂಗುತೊಟ್ಟಿಲಲ್ಲಿ ಉಯ್ಯಾಲೆಯಾಡುತ್ತ ಆಡುತ್ತ ಆತನ ಕ್ರಾಂತದೃಷ್ಟಿಯು ಮತ್ತಷ್ಟು ಚೂಪಾಗುತ್ತಿದೆ; ಆಯಾಮದಿಂದ ಆಯಾಮಕ್ಕೆ ದಾಟುತ್ತಿದೆ.

ವ್ಯಕ್ತಿಯ ಈ ಪ್ರಜ್ಞೆಯು ಸೂಕ್ಷ್ಮ ಕ್ಷಣವೊಂದರಲ್ಲಿ ಆತ್ಮಸಮ್ಮುಖವಾಗುತ್ತದೆ. ತನ್ನ ವ್ಯಕ್ತಿತ್ವ, ನಿಲುವು, ಪರಿಸರ, ಸಂಸ್ಕೃತಿ, ಭಾಷೆ, ಸಾಹಿತ್ಯ, ಮೌಲ್ಯ ಸಂಹಿತೆ, ಜೀವನ ಸಿದ್ಧಾಂತಗಳಲ್ಲಿ ಇರುವ ಕುಂದುಕೊರತೆಗಳನ್ನು ಪರೀಕ್ಷಿಸುತ್ತದೆ. ಆ ಲೋಪದೋಷಗಳನ್ನು ತಿದ್ದುವ, ಬಿರುಕುಗಳನ್ನು ಮುಚ್ಚುವ, ಅಂತರಗಳನ್ನು ಬೆಸೆಯುವ, ಶೂನ್ಯಗಳನ್ನು ತುಂಬುವ  ಕರ್ತವ್ಯಗಳಲ್ಲಿ ಅದು ತನ್ಮಯವಾಗುತ್ತದೆ. ಈ ಹೇಳಿಕೆಯು ನಮ್ಮ ಸಾಹಿತ್ಯದ ಸಂದರ್ಭಕ್ಕೂ ಅನ್ವಯವಾಗುತ್ತದೆ.

ಒಂದರ್ಥದಲ್ಲಿ, ಕಳೆದ ಶತಮಾನದ ಕನ್ನಡ ಸಾಹಿತ್ಯವು ಸೌಭಾಗ್ಯಶಾಲಿಯೆನ್ನಬೇಕು. ತನ್ನ ಇತಿಹಾಸದಲ್ಲಿ ಅಗ್ರಮಾನ್ಯ ಪಂಕ್ತಿಯಲ್ಲಿ ನಿಲ್ಲುವ ಹಲವು ಮಹನೀಯರನ್ನು ಅದು ಪೋಷಿಸಿದೆ. ಅವರಿಂದಾಗಿ ತಾನೂ ಅಭಿವೃದ್ದಿಯನ್ನು ಹೊಂದಿದೆ. ಕನ್ನಡವನ್ನು ತುಂಬ ವಿಚಿಕಿತ್ಸಕ ದೃಷ್ಟಿಯಿಂದ ಕಂಡು, ಅಧಿಕೃತವಾದ ಅದರ ಸಾಹಿತ್ಯ ಚರಿತ್ರೆಯನ್ನು ಸಂಕಲಿಸಿದ ಪ್ರೊ. ರಂಗನಾಥ ಶ್ರೀನಿವಾಸ ಮುಗಳಿಯವರು ಇಂಥ ಆಚಾರ್ಯ ಸಮುದಾಯದ ಸದಸ್ಯರಲ್ಲೊಬ್ಬರಾಗಿದ್ದಾರೆ.

ಮುಗಳಿಯವರು ಎಂಭತ್ತೇಳು ಸಂವತ್ಸರ (೧೯೦೬-೧೯೯೩)ಗಳ ನಿಡುಗಾಲ ಬಾಳಿದವರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ಕಾವ್ಯ, ಕಾದಂಬರಿ, ನಾಟಕ, ಸಣ್ಣಕಥೆ, ವಿಮರ್ಶೆ, ಸಂಶೋಧನೆ, ಸಾಹಿತ್ಯ ಚರಿತ್ರೆ ಮುಂತಾದ ಪ್ರಕಾರಗಳ ಕೃಷಿ ಮಾಡಿ, ಅದನ್ನು ಸಮೃದ್ಧಗೊಳಿಸಿದವರು.

ನಮ್ಮ ಚಿಂತನ ಪದ್ಧತಿ, ಸಿದ್ಧಾಂತಗಳು, ವೈಚಾರಿಕ ದೃಷ್ಟಿಕೋನಗಳೆಲ್ಲವನ್ನೂ ಅಪ್ರಸ್ತುತ ಗಳೆಂದು ಒತ್ತಟ್ಟಿಗೆ ಸರಿಸುವ ಆತಂಕಕಾರಿ ಪ್ರವೃತ್ತಿಯು ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ, ಕನ್ನಡ ಸಾಹಿತ್ಯ ನಿರ್ಮಾತೃಗಳನ್ನು, ಸ್ವಚ್ಛ ದೃಷ್ಟಿಯಿಂದ ಪುನಾ ಸಂದರ್ಶಿಸಬೇಕಾದ ಅಗತ್ಯವಿದೆ. ಅವರ ಮೌಲ್ಯಗಳನ್ನು ಮತ್ತೆ ಜನಮಾನಸಕ್ಕೆ ಪರಿಚಯ ಮಾಡಿಕೊಡಬೇಕಾಗಿದೆ. ಈ ಉದ್ದೇಶದಿಂದ ಮುಗಳಿಯವರ ವಿಮರ್ಶಾ ಬರೆಹಗಳನ್ನು ಮರುಪರಿಶೀಲಿಸುವ ಪ್ರಯತ್ನವಾಗಿ ಪ್ರಸ್ತುತ ಲೇಖನವು ರೂಪುಗೊಂಡಿದೆ.

ಮುಗಳಿಯವರು ಕನ್ನಡ ಸಾಹಿತ್ಯ ವಿಮರ್ಶೆಯ ರಂಗಕ್ಕೆ ಒಟ್ಟು ಒಂಬತ್ತು ಕೃತಿಗಳನ್ನು ಕೊಡುಗೆಯಾಗಿತ್ತಿದ್ದಾರೆ. ‘ರನ್ನನ ಕೃತಿರತ್ನ’, ‘ಸಾಹಿತ್ಯೋಪಾಸನೆ’, ‘ಸಾಹಿತ್ಯ ವಿಮರ್ಶೆಯ ಮಾರ್ಗದರ್ಶನಕ ಸೂತ್ರಗಳು’, ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ’, ‘ಮಹಾಕೃತಿ’, ‘ಪುನರ್ನವೋದಯ’ ಮುಂತಾದ ಕೃತಿಗಳ ಶೀರ್ಷಿಕೆಗಳೇ ಅವರ ಅಧ್ಯಯನಗಳ ವೈವಿಧ್ಯ ಹಾಗೂ ಹರಹುಗಳನ್ನು ಸ್ಪಷ್ಟಪಡಿಸುತ್ತವೆ.

ಮುಗಳಿಯವರ ವಿಮರ್ಶನ ಕಲೆಯ ‘ಪಂಚಶೀಲ’ಗಳಾಗಿ,

“ಪ್ರಾಮಾಣಿಕವಾದ ಸಮತೋಲನ ಬುದ್ದಿ, ಸಹಾನುಭೂತಿಪರ ನಿಲುವಿನ ಗುಣ-ದೋಷ ವಿಮರ್ಶೆ, ಸುಸಂಗತವಾದ ವಿವೇಚನಾ ಪ್ರಜ್ಞೆ, ಸಂಯಮದ ನಿರೂಪಣೆ, ನಿಷ್ಪಕ್ಷಪಾತಿ ಧೋರಣೆ” (ಜೀವನ ರಸಿಕ, ಪು. ೧೯೦)ಗಳನ್ನು ವಿಮರ್ಶಕರು ಗುರುತಿಸುತ್ತಾರೆ. ರಂ.ಶ್ರೀಯವರ ಸಾಹಿತ್ಯ ವಿಮರ್ಶೆಯು ಯಾವುದೇ ಪಂಥಕ್ಕೆ ಬದ್ಧವಾಗಿಲ್ಲ. ಪಾಶ್ಚಾತ್ಯ ಪ್ರಣಾಳಿಗಳಿಂದ ಪ್ರೇರಣೆಯನ್ನು ಅದು ಪಡೆದಿಲ್ಲ. ಈ ನೆಲದ ಸಾಹಿತ್ಯವನ್ನು ಅಭ್ಯಸಿಸುವ ಜಿಜ್ಞಾಸುವಿಗೆ ತೀರಾ ಅವಶ್ಯವಾದ ದೇಶೀಯ ಮನೋಭಾವವನ್ನು ಅವರು ರೂಢಿಸಿ ಕೊಂಡಿದ್ದರು.

ಇದಕ್ಕೆ ನಿದರ್ಶನವಾಗಿ ‘ಕನ್ನಡ ಕಾದಂಬರಿಗಳು’ ಎನ್ನುವ ಅವರ ಕಿರುಪುಸ್ತಿಕೆಯನ್ನು ನೋಡಬಹುದು. ಇದರಲ್ಲಿ ೧೯೨೦ ರಿಂದ ೧೯೪೫ರವರೆಗೆ, ಕನ್ನಡ ಕಾದಂಬರಿಗಳು ಬೆಳೆದು ಬಂದ ಬಗೆಯ ಸ್ಥೂಲವಾದ ಸಮೀಕ್ಷೆಯಿದೆ. ಮುಗಳಿಯವರ ವಿಮರ್ಶಾ ಕ್ರಮಕ್ಕೆ ಉದಾಹರಣೆಯಾಗಿ, ಆ ಕಾಲದ ಕಾದಂಬರಿಗಳ ತಂತ್ರದ ಬಗೆಗಿನ ಅವರ ಅಭಿಪ್ರಾಯಗಳನ್ನು ಪರಿಗಣಿಸಬಹುದು :

“ಹೊಸ ಕಾದಂಬರಿಗಳಲ್ಲಿ ತಂತ್ರದೃಷ್ಟಿ ಹೆಚ್ಚು ಶುದ್ಧವಾಗಿದೆ, ಸಫಲವಾಗಿದೆ. ಪ್ರತಿಭೆಯ ಓಟಕ್ಕೆ ನಿಗ್ರಹದ, ವಿವೇಕದ ಕಡಿವಾಣ ಹಾಕುವುದೇ ಇಂದಿನ ಕಾದಂಬರಿಯ ಗೊತ್ತು ಗುರಿ. ನೂರಾರು ಅಪೂರ್ಣ ವ್ಯಕ್ತಿಗಳ ಸಂತೆ ನೆರೆಸುವುದಕ್ಕಿಂತ, ಕೆಲವು ವ್ಯಕ್ತಿಗಳ ಸಂಪೂರ್ಣ ಪೃಥಕ್ಕರಣಕ್ಕೇ ಹೊಸ ಕಾದಂಬರಿಕಾರರು ಹಾತೊರೆಯುತ್ತಾರೆ. ಸಂವಿಧಾನೈಕ್ಯ ಸಮಬಂದ, ಪಾತ್ರ ಸುಸಂಗತಿ, ಪೃಥಕ್ಕರಣ ಇವುಗಳಿಂದ ಕೂಡಿದ ಬುದ್ದಿಗ್ರಾಹ್ಯವಾದ ಕಲೆಯೇ ಹೊಸ ತಂತ್ರದ ಸಾರ” (ಕನ್ನಡ ಕಾದಂಬರಿಗಳು, ಪು. ೬).

ನಿರ್ದಿಷ್ಟ ಕಾಲಖಂಡದ ಸಾಹಿತ್ಯ ಪ್ರಕಾರವೊಂದರ ಸಾರವನ್ನು ಹಿಡಿದಿಡುವ ಇಂಥ ಗುಣಗ್ರಹಣ ಸಾಮರ್ಥ್ಯವು ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ವಿಮರ್ಶಾ ಕ್ಷೇತ್ರದ ಚಾರಿತ್ರಿಕ ಅಧ್ಯಯನಗಳ ದೃಷ್ಟಿಯಿಂದ ಈ ಮಾದರಿಯ ಬರೆಹಗಳು ಮುಖ್ಯವೆನಿಸುತ್ತವೆ.

೧೯೫೭ರಲ್ಲಿ ಪ್ರಕಟವಾದ ‘ತವನಿಧಿ’ ಲೇಖನ ಸಂಗ್ರಹದಲ್ಲಿ, “ಹಳೆಯ ಕನ್ನಡ ಸಾಹಿತ್ಯವನ್ನು ಕುರಿತು ಕೆಲವು ಸಾಮಾನ್ಯ ಪ್ರಬಂಧಗಳೂ, ಹಳೆಯ ಕೆಲವು ಕವಿಗಳನ್ನು ಕುರಿತು ವಿಮರ್ಶಾತ್ಮಕ ಪ್ರಬಂಧಗಳೂ ಒಂದೆಡೆಗೆ ಸೇರಿರುತ್ತವೆ” (ತವನಿಧಿ, ಮುನ್ನುಡಿ, ಪು. ೨) ಎಂಬುದಾಗಿ ಮುಗಳಿಯವರೇ ತಮ್ಮ ಬರೆಹಗಳ ಸ್ವರೂಪವನ್ನು ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಒಟ್ಟು ಹದಿಮೂರು ಲೇಖನಗಳಿವೆ.

ಮುಗಳಿಯವರ ಸಾಹಿತ್ಯಾಭ್ಯಾಸ ಶೈಲಿಯು ತುಂಬ ವಿಶಿಷ್ಟವಾಗಿದೆ. ಕೃತಿಯೊಂದರ ಮಿತಿ ಹಾಗೂ ದೋಷಗಳಿಗೆ ಅವರು ಕುರುಡಾಗುವುದಿಲ್ಲ. ಆದರೆ, ಛಿದ್ರಗಳ ಹುಟುಕಾಡವೇ ವಿಮರ್ಶಕನ ಪ್ರಧಾನ ಲಕ್ಷ್ಯವಾಗಬಾರದೆಂಬ ಎಚ್ಚರವನ್ನು ಅವರು ಉದ್ದಕ್ಕೂ ಕಾಯ್ದು ಕೊಳ್ಳುತ್ತಾರೆ.

ಭಾರತೀಯ ಸಂಸ್ಕೃತಿಯ ಬಗೆಗೆ ಅಪಾರವಾದ ಗೌರವಾದರಗಳಿದ್ದ ಮುಗಳಿಯವರು, ಕನ್ನಡ ಸಾಹಿತ್ಯ ನಿರ್ಮಾಣದಲ್ಲಿ ಅದು ವಹಿಸುವ ಪಾತ್ರಕ್ಕೆ ಅವಧಾರಣೆಯನ್ನು ಕೊಡುತ್ತಾರೆ. ಈ ದೃಷ್ಟಿಯಿಂದ ಅವರ ಕೆಲವು ಅಭಿಪ್ರಾಯಗಳು ಉಲ್ಲೇಖಾರ್ಹವಾಗಿವೆ. ವಚನ ಚಳುವಳಿಯ ಬಗೆಗೆ, ಬರೆಯುತ್ತಾ, “ಭಾರತೀಯವೆಂದು ಮರ್ಯಾದಿತವಾಗಿ ಕೆಲವರು ತಿಳಿದುಕೊಂಡ ಸಂಸ್ಕೃತಿಗೆ ಬೌದ್ಧರೂ, ಜೈನರೂ ತಂತಮ್ಮ ರೀತಿಯಲ್ಲಿ ಇದಿರುಬಿದ್ದಂತೆ, ವೀರಶೈವರೂ ಸ್ವತಂತ್ರವಾಗಿ ಬಂಡು ಹೂಡಿದರು. ಈ ಪ್ರತಿಭಟನೆಯಲ್ಲಿ ಭಾರತೀಯ ಸಂಸ್ಕೃತಿಯ ಮೂಲಭೂತವಾದ ಮೌಲ್ಯಗಳ ಅರಿವು ಮತ್ತೆ ತಲೆಯೆತ್ತಿದೆ” (ಅದೇ, ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಂಸ್ಕೃತಿ, ಪು. ೧೩) ಎನ್ನುತ್ತಾರೆ. ಈ ಮೂಲಕ ಅವರು ವಚನ ಚಳುವಳಿಯ ಪ್ರತಿಭಟನಾ ವಿಧಾನದಲ್ಲಿ ಸನಾತನವಾದ ಭಾರತೀಯ ಮೌಲ್ಯಗಳ ಪುನಾ ಸ್ಥಾಪನೆಯ ಪ್ರಯತ್ನಗಳನ್ನು ಗುರುತಿಸುತ್ತಾರೆ. ಈ ವಾದವನ್ನು ಬೆಳೆಸುತ್ತ, ಭಾರತೀಯ ಸಂಸ್ಕೃತಿಯ ಸ್ಪಷ್ಟಾಸ್ಪಷ್ಟ ರೂಪಗಳು, ಕನ್ನಡ ಸಾಹಿತ್ಯದಲ್ಲಿ ‘ಕನ್ನಡ ಸಂಸ್ಕೃತಿ’ಯಾಗಿ ರೂಪುಗೊಂಡಿವೆ ಎನ್ನುವ ನಿರ್ಧಾರಕ್ಕೆ ಅವರು ಬರುತ್ತಾರೆ.

ಒಂದು ದೃಷ್ಟಿಯಿಂದ, ಈ ಲೇಖನಗಳು ಅವರು ‘ಸಾಹಿತ್ಯ ಚರಿತ್ರೆ’ ಕೃತಿಯ ರಚನೆಗೆ ಬೇಕಾಗಿದ್ದ ರಂಗಸಿದ್ಧತೆಗಳಾಗಿ ಕಾರ್ಯನಿರ್ವಹಿಸಿದವೆನ್ನಬೇಕು. ‘ಕನ್ನಡ ಸಾಹಿತ್ಯ ಚರಿತ್ರೆ’ ಯಲ್ಲಿ ಬರುವ ಕೆಲವು ಸಮಸ್ಯೆಗಳ ಚರ್ಚೆಗಳಾಗಲಿ, ಪಂಪನ ದೇಸಿಯ ಬಗೆಗಿನ ಲೇಖನವಾಗಲಿ, ರಾಘವಾಂಕನ ನಾಟ್ಯ ಪ್ರತಿಭೆಯ ಸ್ಥಾನ ನಿರ್ದೇಶನವಾಗಲಿ, ಈ ತಾಲೀಮಿನ ಬೇರೆ ಬೇರೆ ಸಂದರ್ಭಗಳೇ ಆಗಿವೆ.

‘ಚಿಕ್ಕದೇವರಾಯನ ವಂಶಾವಳಿಯ ಶೈಲಿ’, ‘ರಾಮಾಶ್ವಮೇಧ’ ಮುಂತಾದ ಲೇಖನಗಳು, ಮುಗಳಿಯವರ ವಿಮರ್ಶನ ಕ್ರಮವು, ಅತಿಗಳಿಗೆ ಹೋಗದ ಮಧ್ಯಮಮಾರ್ಗವೆನ್ನುವುದನ್ನು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ, ಮುದ್ದಣನ “ರಾಮಾಶ್ವಮೇಧ”ದ ಗುಣ-ದೋಷಗಳನ್ನು ತೂಗುವ ಅವರ ಅನಿಸಿಕೆಗಳನ್ನೂ ಪ್ರಸ್ತಾಪಿಸಬಹುದು.

“ಕವಿಶಕ್ತಿಯ ಸಮೃದ್ದಿಯನ್ನು ತೋರಲಿಕ್ಕಾಗಿ ಮೂಲವು ವಿಶಾಲವಾದ ಜೀವನವನ್ನು ಮುಂದಿರಿಸಿದ್ದರೂ, ಅದನ್ನು ತನ್ನ ತೀರ ಹೊಸ ಹೊಸ ಕೈವಾಡದಿಂದ ಮಾರ್ಪಡಿಸಿಕೊಳ್ಳದೆ, ಮುದ್ದಣನು ಉಜ್ವಲ ಕೃತಿಬಂಧಕ್ಕೆ ಹೊರತಾಗಿರುವನು. ಆದರೂ ಈಗಿರುವ ಬಂಧದಲ್ಲಿ ಕಥೆ ರುಚಿಕಟ್ಟಾಗುವಂತೆ ಅಲ್ಲಲ್ಲಿ ಅವನು ವರ್ಣನೆ-ಶೈಲಿಗಳಲ್ಲಿ ತೋರಿದ ಜಾಣ್ಮೆ ಒಳ್ಳೆಯ ಕತೆಗಾರ – ಕವಿಗೆ ಒಪ್ಪುವಂತಿದೆ. ನಡುನಡುವೆ ಹೆಚ್ಚಿನ ಪ್ರತಿಭೆ ಉಕ್ಕಿ ಉಕ್ಕಿ ಇಳಿದಿದೆ’ (ಅದೇ. ರಾಮಾಶ್ವಮೇಧ, ಪು. ೧೮೭).

ಇಂಥ ಪ್ರಸಂಗಗಳನ್ನು ಕೇವಲ ‘ಅಕೆಡಮಿಕ್’ ಮಾದರಿಯೆಂದು ಬದಿಗೆ ಸರಿಸುವುದಕ್ಕಿಂತ, ಕೃತಿಯೊಂದಕ್ಕೆ ಅನ್ಯಾಯ ಮಾಡದೆ, ಅದರ ಮಿತಿಗಳನ್ನು ನವುರಾಗಿ ಹೇಳುವ ಪರಿಪಾಠವೆನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ.

ಈ ಸಂಕಲನದ ‘ಚಂಪುವಿನ ಮೂಲ’ ಮತ್ತು ‘ಒಂದನೆಯ ಗುಣವರ್ಮನ ಶೂದ್ರಕ’ ಲೇಖನಗಳಲ್ಲಿ ಮುಗಳಿಯವರ ಸಂಶೋಧಕ ಪ್ರವೃತ್ತಿಯು ಕೆಲಸ ಮಾಡಿರುವುದನ್ನು ಕಾಣಬಹುದು.

“ಈಗ ದೊರೆಯುವ ಆಧಾರಗಳಿಂದ ಚಂಪೂ ರೂಪವೂ ಸಂಸ್ಕೃತಕ್ಕೆ ಕಾಣಿಕೆಯೆಂದು ತೋರುತ್ತದೆ… ಹೆಚ್ಚಿನ ಸಂಶೋಧನೆಯಿಂದ ಚಂಪೂರೂಪವೂ ಮೂಲತಃ ಸಂಸ್ಕೃತವೆಂದು ತಿಳಿದರೂ, ಅದು ಕನ್ನಡ ಸಾಹಿತ್ಯದ ಮಹಾಕಾವ್ಯಗಳಲ್ಲಿ ತಾಳಿದ ರೂಪವು ಮಾತ್ರ ಸಂಸ್ಕೃತದ ಅನುಕರಣ ಫಲವಲ್ಲವೆಂದೂ, ವೈಶಿಷ್ಟ್ಯಪೂರ್ಣವೆಂದೂ ಧೈರ್ಯವಾಗಿ ಹೇಳಬಹುದು” (ಅದೇ. ಚಂಪುವಿನ ಮೂಲ, ಪು. ೪೪) ಎಂಬಂಥ ಅಭಿಪ್ರಾಯಗಳು – ಅಭಿಪ್ರಾಯಗಳು – ಅನಂತರ ಈ ಬಗೆಗೆ ನಡೆದ ಚರ್ಚೆಗಳನ್ನು ಗಮನದಲ್ಲಿ ಇಟ್ಟುಕೊಂಡರೂ – ಸಂಶೋಧನೆಯ ಅನ್ಯಾನ್ಯ ಸಾಧ್ಯತೆಗಳ ಪರಿಶೀಲನೆಗಳನ್ನು ನಡೆಸುತ್ತವೆ.

ಪ್ರಾಚೀನ ಕವಿ – ಕೃತಿಗಳ ಬಗೆಗಿನ ಮುಗಳಿಯವರ ಬರೆಹಗಳನ್ನು ಓದುವಾಗ, ಆ ಕಾವ್ರೋಮುಕ್ತವಾಗಿ ಓಡಾಡಿದ ಅನುಭವವಾಗುತ್ತದೆಯೇ ಹೊರತಾಗಿ, ಅದರ ಅಂಗ – ಪ್ರತ್ಯಂಗಗಳನ್ನು ವಿಚ್ಛೇದಿಸಿ, ವಿಶ್ಲೇಷಿಸುವ ಶುಷ್ಕ ಪಠ್ಯದ ಪಠಣೆಯಂತಾಗುವುದಿಲ್ಲ. ಉದಾಹರಣೆಗೆ; ರಾಘವಾಂಕನ ನಾಟ್ಯ ಪ್ರತಿಭೆಯನ್ನು ಪರಿಚಯ ಮಾಡಿಕೊಡುವ ಅವರ ಲೇಖನವನ್ನು ಗಮನಿಸಬಹುದು.

“ರಾಘವಾಂಕನು ಹುಟ್ಟು ಗುಣದಿಂದ ನಾಟಕಕಾರನು… ಜಾನಪದ ಕತೆಗಾರನೊಬ್ಬನು ಬೀದಿಯ ಸವಿಗಾರರ ಮುಂದೆ ಕಥೆಯೊಂದನ್ನು ಹೇಳುತ್ತ ಹೇಳುತ್ತ ರಂಗಿಗೆ ಬಂದು, ತಾನೇ ವೇಷಗಾರನಾಗಿ ನಾಟಕವಾಡಿದಂತೆ ಆಯಿತು. ನಾಟ್ಯ ಪ್ರತಿಭೆಯು ರಾಘವಾಂಕನ ಹುಟ್ಟುಗುಣವೆನ್ನುವುದಕ್ಕೆ ಬೇರೆಯೇ ನಿದರ್ಶನವು ಬೇಕೆ? ‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲವೆಂಬ ಗಾದೆಯ ಮಾತಿದೆ. ಒಳ್ಳೆಯ ಅರ್ಥದಲ್ಲಿ ರಾಘವಾಂಕನಿಗೆ ಹಾಗೆಯೇ ಆಯಿತು. ಕನ್ನಡ ಸಾಹಿತ್ಯಕ್ಕೆ ಅದರಿಂದ ಕಾವ್ಯ ನಾಟಕವೊಂದು ದೊರೆಯಿತು. ಕಬ್ಬಿನ ಮೇಲೆ ಜೇನಿಟ್ಟಂತೆ” (ಅದೇ. ರಾಘವಾಂಕನ ನಾಟ್ಯ ಪ್ರತಿಭೆ, ಪು. ೧೦೨) ಎಂದು ತುಂಬ ಆಕರ್ಷಕವಾಗಿ ರಾಘವಾಂಕನ ನಾಟ್ಯಶೈಲಿಯನ್ನು ನಿರೂಪಿಸುತ್ತಾ, ಅದಕ್ಕೆ ಸಮಾನಾಂತರ ದಲ್ಲಿಯೇ ನಾಟ್ಯ ಪ್ರತಿಭೆಯ ಪ್ರಮುಖ ಲಕ್ಷಣಗಳನ್ನೂ ವಿವರಿಸುತ್ತಾ ಈ ಲೇಖನವು ಬೆಳೆಯುತ್ತದೆ; ರಸಗ್ರಾಹಿ ನೆಲೆಯಲ್ಲಿಯೇ ಸಾಗುವ ವಿಶಿಷ್ಟ ಪ್ರಕಾರದ ಮಾದರಿಯಾಗುತ್ತದೆ.

ರನ್ನನ ಬಹಳ ಪ್ರಸಿದ್ಧವಾದ ‘ರನ್ನನ ಕೃತಿರತ್ನಮುಮಂ ಪೇಳ ಪರೀಕ್ಷಿಪಂಗೆಂಟೆರ್ದೆಯೇ?’ ಎನ್ನುವ ಆತ್ಮವಿಶ್ವಾಸದ ಅತಿರೇಕಕ್ಕೆ ಪ್ರತಿಕ್ರಿಯೆಯನ್ನು ಸೂಚಿಸುತ್ತ ಮುಗಳಿಯವರು, “ಎಂಟೆರ್ದೆ ನನಗಿದೆಯೋ ಇಲ್ಲವೋ, ಆದರೆ ಅಳ್ಳೆದೆ ಮಾತ್ರ ಇಲ್ಲ. ‘ಕೃತಿರತ್ನ’ವನ್ನು ಮೆಟ್ಟಿದ್ದೇ ಆದರೆ, ಅದರ ಅದ್ಭುತ ಕಾಂತಿಯನ್ನೂ, ಕುಂದುಕೊರತೆಯನ್ನೂ ಬಣ್ಣಿಸಲು ಹೆದರಿಕೆ ಏಕೆ?’ (‘ಜೀವನ ರಸಿಕ’ದಲ್ಲಿ ಉದ್ಧೃತ, ಪು. ೧೬೯) ಎಂದಿರುವುದು, ಅವರ ವಿಮರ್ಶೆಯ ಮಾನದಂಡವನ್ನು ನಿರ್ಧರಿಸುವ ಸೂತ್ರವೂ ಆಗುತ್ತದೆ. ಗುಣದೋಷಗಳೆರಡೂ ಕೃತಿಯೊಂದರ ಅನಿವಾರ್ಯ ಅಂಶಗಳೇ ಎನ್ನುವ ಸಮದೃಷ್ಟಿಯೊಂದಿಗೇ ಅವರು ವಿಮರ್ಶೆಗೆ ಹೊರಡುತ್ತಾರೆ. ‘ತವನಿಧಿ’ ಸಂಕಲನದ ಹಲವು ಲೇಖನಗಳು ಈ ಹೇಳಿಕೆಯನ್ನು ಸಮರ್ಥಿ ಸುತ್ತವೆ.

ಮುಗಳಿಯವರು ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೂರು ವಿಶೇಷೋಪನ್ಯಾಸಗಳನ್ನು ನೀಡಿದರು. ಇವುಗಳನ್ನು “ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ”ವೆನ್ನುವ ಹೆಸರಿನಲ್ಲಿ ಪ್ರಕಟಿಸಲಾಯಿತು. ಕನ್ನಡ ಕಾವ್ಯವು ಕಂಡ ಸರಸ್ವತಿಯನ್ನು, ಅವರು ಇಲ್ಲಿ ಮೂರು ನೆಲೆಗಳಲ್ಲಿ ಕಂಡಿದ್ದಾರೆ :

೧.       ಮಾರ್ಗಕಾವ್ಯ ಅಥವಾ ಓದುಗಬ್ಬದಲ್ಲಿ ಸರಸ್ವತಿ

೨.       ಇತರ, ಮೌಖಿಕ ಅಥವಾ ಹಾಡುಗಬ್ಬದಲ್ಲಿ ಸರಸ್ವತಿ

೩.       ಹೊಸಗನ್ನಡ ಸಾಹಿತ್ಯದಲಲಿ ಸರಸ್ವತಿ.

“ಸರಸ್ವತಿಯನ್ನು ಕುರಿತು ಮಾಡಿದ ಪ್ರಾರ್ಥನೆ, ಸ್ತುತಿ, ಉಲ್ಲೇಖ ಇವುಗಳಲ್ಲಿ ಪ್ರಮುಖ ಕನ್ನಡ ಕವಿಗಳು ಸರಸ್ವತಿಯ ಯಾವ ದರ್ಶನವನ್ನು ಕಂಡಿದ್ದಾರೆ. ಅದರಲ್ಲಿ ವಿಶೇಷ ವೇನಾದರೂ ಇದೆಯೇ? ಎಂಬುದು ಇಲ್ಲಿಯ ಮುಖ್ಯ ವಿಷಯ ಆನುಷಂಗಿಕವಾಗಿ ಕಾವ್ಯ ಸ್ವರೂಪ, ಕಾವ್ಯದ ಉದ್ದೇಶ, ಕಾವ್ಯದ ವಿಷಯ, ಮಾತಿನ ಮಹತಿ, ಈ ಬಗ್ಗೆ ಕನ್ನಡ ಕವಿಗಳು ತಳೆದ ನಿಲುಮೆಯನ್ನು ನಿವೇದಿಸಬಹುದು, ಚರ್ಚಿಸಬಹುದು” (ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ, ಪು. ೧) ಎಂದು ಈ ಕೃತಿಯ ಉದ್ದೇಶವನ್ನು ಮುಗಳಿಯವರೇ ಸ್ಪಷ್ಟಪಡಿಸಿದ್ದಾರೆ. ಆದಿಕವಿ ಪಂಪನಿಂದ ತೊಡಗಿ, ಆಧುನಿಕ ಕಾಲದ ಬಿ.ಎಂ.ಶ್ರೀ., ಡಿ.ವಿ.ಜಿ., ಕುವೆಂಪು, ವಿನಾಯಕ, ಚೆನ್ನವೀರಕಣವಿಯರವರೆಗೂ ಈ ವಿಶ್ಲೇಷಣೆಯು ವ್ಯಾಪಿಸಿದೆ. ಈ ವಿಚಾರ ಯಾನದಲ್ಲಿ ಅವರು ಸರಸ್ವತೀ ತತ್ತ್ವವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ, ಕನ್ನಡ ಕವಿಗಳು ಕಂಡ ಸರಸ್ವತೀ ತತ್ತ್ವವು ‘ಅಧಿದೇವತಾದರ್ಶನ’ವಾಗಿರದೆ, ರೂಪಕಾತ್ಮಕವಾದ ಅರ್ಥದರ್ಶನ – ಭಾವದರ್ಶನವಾಗಿದೆ.

“ರಸತತ್ತ್ವ, ಸೌಂದರ್ಯತತ್ತ್ವ, ಪ್ರತಿಭಾತತ್ತ್ವ ಇವುಗಳ ಅರ್ಥವಿಸ್ತಾರ, ಅರ್ಥವೈಭವ, ಅರ್ಥ ಸೂಕ್ಷ್ಮತೆ, ಭಾವಸ್ಪಂದನ ಇವು ಕನ್ನಡ ಕವಿಗಳಿಗೆ ಹೇಗೆ ಹೊಳೆದಿದೆ ಎನ್ನುವುದೇ ಮುಗಳಿಯವರ ವಿವೇಚನೆಯಲ್ಲಿ ಪ್ರಧಾನವಾಗಿವೆ. ಈ ಅರ್ಥಭಾವಗಳೇ ಅನುಭಾವದ ನೆಲೆಗೇರಿ ನಿಂತಾಗ, ಎಷ್ಟೊಂದು ಪ್ರಭಾವಯುತವಾಗಿ ಬರುತ್ತವೆಂಬುದನ್ನು ಬಸವಣ್ಣ, ಪ್ರಭುದೇವ….(ಇವರ) ನುಡಿಗಳಲ್ಲಿ ಕಂಡು ಕನ್ನಡಿಗರಿಗೆ ಕಾಣಿಸಿದ್ದಾರೆ” (ರಸಿಕರಂಗದರ್ಶನ, ಪು. ೧೪೪) ಎನ್ನುವ ಆರ್.ಜಿ. ಕುಲಕರ್ಣಿಯವರ ಅಭಿಪ್ರಾಯವು ಈ ಕೃತಿಯ ಸಾರವನ್ನು ಸಂಗ್ರಹಿಸಿದೆ. ಹಾಗೆ ನೋಡಿದರೆ, ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ’ ಕೃತಿಯು ಸರಸ್ವತಿ ತತ್ತ್ವದ ಚಾರಿತ್ರಿಕ ಬೆಳವಣಿಗೆಯ ದಾಖಲೆಯಾಗಿಯೂ ಪ್ರಸ್ತುತವೆನಿಸುತ್ತದೆ.

ಮುಗಳಿಯವರು ಪಂಪನ ಕೃತಿಗಳಲ್ಲಿ ಬರುವ ಸರಸ್ವತಿಯ ಪ್ರಸ್ತಾಪವನ್ನು ನಿದರ್ಶನವಾಗಿ ತೆಗೆದುಕೊಂಡು, ಈ ವಿಕಾಸದ ನೆಲೆಗಳನ್ನು ಸ್ಪಷ್ಟಪಡಿಸುತ್ತಾರೆ. ಆದಿಪುರಾಣದಲ್ಲಿ ಬರುವ ‘ಪರಮ ಜಿನೇಂದ್ರವಾಣಿಯೆ ಸರಸ್ವತಿ, ಬೇರದು ಪೆಣ್ಣರೂಪಮಂ ಧರಿಯಿಸಿ ನಿಂದುದಲ್ತು’ ಎನ್ನುವ ಸರಸ್ವತಿಯ ಸ್ತುತಿಯು, ‘\|ರ’ ಮೊದಲನೆಯದು ಮಾತ್ರವಲ್ಲ. ಸರ್ವಸಾಮಾನ್ಯ ಸಂಪ್ರದಾಯಕ್ಕಿಂತ ಬೇರೆಯದೂ, ಅರ್ಥಪೂರ್ಣವೂ ಆಗಿರುತ್ತದೆ” (ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ, ಪು. ೩) ಎಂದು ಗುರುತಿಸುವ ಅವರು ಕುತೂಹಲಕರವಾದ ಅಂಶವೊಂದರ ಮೇಲೆ ಬೆಳಕು ಹಾಯಿಸುತ್ತಾರೆ.

ಆದಿಪುರಾಣದ ಕೊನೆಯ ಭಾಗದ ಪದ್ಯವೊಂದರಲ್ಲಿ ಪಂಪನೇ,
“…..ಧಾರ್ಮಿಕ ಜನಜನಿತಾನಂದ ಸಂದೋಹ ವಿದ್ಯಾ
ರಸದೊಳ್ ಸಂಸಾರಸಾರೋದಯಾ ವಿರಚಿತದೊಳ್
ಮಾಗ್ವಧೂ ಮುದ್ರೆಯೊಳ್ ಮು
ದ್ರಿಸಿ ನಿಂದತ್ತು ಆದಿತೀರ್ಥೇಶ್ವರನ ಚರಿತದೊಳ್
ವಾಕ್ಯಮಾಣಿಕ್ಯ ಕೋಶಂ

ಎನ್ನುತ್ತಾನೆ. ಈ ಬಗೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಮುಗಳಿಯವರು,

“ಸರಸ್ವತಿಯೆಂದರೆ ಬೇರೆ ಹೆಣ್ಣುರೂಪವನ್ನು ತಾಳಿ ನಿಂದುದಲ್ಲ ಎಂದು ಘಂಟಾಘೋಷ ವಾಗಿ ಸಾರಿ, ಕಾವ್ಯ ಪ್ರಾರಂಭ ಮಾಡಿದ ಕವಿಯು ಕಾವ್ಯ ಮುಕ್ತಾಯದಲ್ಲಿ ‘ವಾಕ್ ವಧು’ವಾಗಿ ಪ್ರಕಟವಾದದ್ದು, ಆಶ್ಚರ್ಯವೆಂದು ತೋರಬಹುದು. ಕವಿ, ಎಷ್ಟು ತತ್ತ್ವದರ್ಶಿಯಾದರೂ ಅವನು ಪ್ರತಿಮಾಪ್ರಿಯನೆನ್ನುವುದಕ್ಕೆ ಇದು ನಿದರ್ಶನವಾಗಿದೆ” (ಅದೇ. ಪು. ೮) ಎನ್ನುತ್ತಾರೆ. ಪಂಪನ ಈ ಭಾವವೇ ಪಕ್ವಗೊಂಡು, ಪಂಪ ಭಾರತದಲ್ಲಿ ‘ಕ್ಷಯಂ ಅಣಂ ಇಲ್ಲದ’, ‘ತದಕ್ಷಯ ನಿಧಿ’ಯಾದ ಸರಸ್ವತಿಯ ಮಾತೃಸ್ವರೂಪದ ದರ್ಶನದಲ್ಲಿ ಪರಿಣಮಿಸುತ್ತದೆ. ಪಂಪನಿಗೆ ಸರಸ್ವತಿಯು ‘ಅಂಬಿಕೆ’ಯೆನಿಸುತ್ತಾಳೆ. ಮುಗಳಿಯವರಿಗೆ ಇದು, ಪಂಪನ ವಾಣಿಯ ಪ್ರಗತಿಯ ಪ್ರತಿನಿಧಿಯಾಗಿ ಕಂಡು ಬರುತ್ತದೆ.

ಇದೇ ಸರಸ್ವತಿಯು, ರನ್ನನಿಗೆ ‘ವಾಕ್ಸುಂದರಿ’ಯಾಗಿ, ‘ರಸಾಲಂಕಾರಪ್ರಿಯ’ಳಾಗಿ, ನಾಗವರ್ಮನಿಗೆ ‘ವಾಕ್‌ಸತಿ’ಯಾಗಿ, ಕೇಶಿರಾಜ-ಹರಿಹರರಿಗೆ ‘ವಾಗ್ದೇವಿ’ಯಾಗಿ ನಾನಾ ರೂಪಗಳಲ್ಲಿ ಗೋಚರಿಸುತ್ತಾಳೆ.

ಒಟ್ಟಿನಲ್ಲಿ ಕವಿಗಳ ಮೂಲಶಕ್ತಿಯಾದ ವಾಕ್‌ಸಿದ್ದಿಗೆ ಈ ದೇವತೆಯ ಉಪಾಸನೆಯೊಂದೇ ಮಾರ್ಗವೆನ್ನುವುದು ಇಲ್ಲಿ ಮುಗಳಿಯವರ ನಿಲುವಾಗಿದೆ. ಈ ಸಂದರ್ಭದಲ್ಲಿ ಅವರು, “ಸರಸ್ವತಿಯು ಕೊಡುವುದು ಬರೀ ಪ್ರತಿಭೆ ಅಥವಾ ಸ್ಫೂರ್ತಿಯನ್ನಲ್ಲ. ಅವಳು ಕೊಡುವುದು ವಿಶ್ವದೃಷ್ಟಿ ಮತ್ತು ವಿಶ್ವತೇಜಸ್ಸುಗಳನ್ನು, ಅದಿಲ್ಲದೆ ಶ್ರೇಷ್ಠ ಕಾವ್ಯ ಹುಟ್ಟಲಾರದು” (ಅದೇ, ಪು. ೨೮) ಎಂಬುದಾಗಿ, ಸಾಹಿತ್ಯದ ಸಂದರ್ಭದಲ್ಲಿ ಸರಸ್ವತೀ ತತ್ತ್ವದ ಸ್ವರೂಪ ವನ್ನೂ ಮಹತ್ವವನ್ನೂ ಶ್ರುತಪಡಿಸುತ್ತಾರೆ.

ಸಮಯ ಶರಣವಲ್ಲದ ದೇಸೀ ಸಾಹಿತ್ಯದಲ್ಲಿ, ಈ ಸರಸ್ವತೀ ತತ್ತ್ವವು ಹೆಚ್ಚು ನಿಖರವಾಗಿ, ವಾಚ್ಯವಾಗಿ ವ್ಯಕ್ತವಾಗುವುದನ್ನೂ ಮುಗಳಿಯವರು ಗುರುತಿಸಿದ್ದಾರೆ. ಅಲ್ಲಿ ಸರಸ್ವತಿಯ ‘ಭಾರತಿ’ ರೂಪವು ಹೆಚ್ಚು ಮುಖ್ಯವಾಗುತ್ತದೆ. ಸರಸ್ವತಿಯೇ ಮಾತಾಗಿ, ಮಾತು ಜ್ಯೋತಿರ್ಲಿಂಗವಾಗಿ, ನುಡಿ ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಶಲಾಕೆಗಳಾಗಿ ಅಸ್ತಿತ್ವವನ್ನು ಪಡೆಯುತ್ತದೆ, ಆರಾಧಿಸಲ್ಪಡುತ್ತದೆ.

ಆಧುನಿಕ ಕಾವ್ಯದ ಕಾಲಕ್ಕಾಗುವಾಗ, ಇದೇ ಸರಸ್ವತೀ ತತ್ತ್ವವು ಸೌಂದರ್ಯ ತತ್ತ್ವದೊಂದಿಗೆ ಸಮೀಕೃತವಾಗುತ್ತದೆ. ಹಾಗಾಗಿ, “ಸ್ವಾಭಾವಿಕವಾಗಿಯೇ ಸರಸ್ವತಿಯ ದರ್ಶನದಲ್ಲೂ ವ್ಯಕ್ತಿತ್ವವು ಮೂಡಿದೆ”. ಆ ವ್ಯಕ್ತಿತ್ವವು ಮೂರ್ತರೂಪದಷ್ಟೇ ಭಾವಶರೀರಿ ಯಾಗಿಯೂ ಪ್ರಭಾವವನ್ನು ಬೀರುತ್ತದೆ. ಇದು, ಭೃಂಗದ ಬೆನ್ನೇರುವ ಕಲ್ಪನೆಯ ವಿಲಾಸವಾಗಿ, “ಮುಗಿಲಲ್ಲಿ ಮುತ್ತುಗಳ ಮೂಡಿಸುವ ಮಂತ್ರ”ವಾಗಿ, ಜಗದ ಒಲವಿನ ಸಾರವಾಗಿ, “ಗಾನಮಯ ಸಿಂಧು”ವಾಗಿ, ಪ್ರತೀಮಾತ್ಮಕ ಅಭಿವ್ಯಕ್ತಿಗಳಲ್ಲಿ ಪರಿಣಮಿಸುತ್ತದೆನ್ನುವುದನ್ನೂ ಮುಗಳಿಯವರು ಗಮನಿಸುತ್ತಾರೆ. ಗೋಪಾಲಕೃಷ್ಣ ಅಡಿಗರಂಥ ಹೊಸ ಹಾದಿಯ ಹರಿಕಾರರು ಈ ರೂಪವನ್ನು ಕಾವ್ಯತತ್ತ್ವವಾಗಿ ಸ್ವೀಕರಿಸಿದವರು. ಹೊಸತಿನ ಹುಡುಕಾಟದ ಅಂತಃಪ್ರೇರಣೆಯಾಗಿ ನೆಲೆಗೊಳಿಸಿದವರು ಎಂದೂ ಅವರು ನಿರೂಪಿಸುತ್ತಾರೆ.

ಹೀಗೆ, ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿ’ಯೆನ್ನುವ ಸಗುಣ, ಸಾಕಾರ ಪರಿಕಲ್ಪನೆಯೊಂದು ಪ್ರತಿಮೆಯಾಗಿ ಪರಿವರ್ತಿತಗೊಂಡ ರೀತಿಯ ದರ್ಶನವನ್ನು ಈ ಕೃತಿಯು ನೀಡುತ್ತದೆ. ಇಲ್ಲಿ ಪರಿಶಿಷ್ಟವಾಗಿ ಬಂದಿರುವ “ವೇದ – ಪುರಾಣಗಳಲ್ಲಿ ಸರಸ್ವತಿಯ ವರ್ಣನೆ”ಯು ಈ  ಅಭ್ಯಾಸಕ್ಕೆ ಸಮರ್ಪಕವಾದ ಹಿನ್ನೆಲೆಯನ್ನು ಕಲ್ಪಿಸುತ್ತದೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯವು ಕಂಡ ಸರಸ್ವತಿಯ ವಿವಿಧ ರೂಪಗಳನ್ನು ಒಂದು ಸೂತ್ರದಲ್ಲಿ ಪೋಣಿಸುವ ಪ್ರಯತ್ನವಾಗಿ ಈ ಕೃತಿಯು ಉಲ್ಲೇಖಾರ್ಹವೆನಿಸುತ್ತದೆ.

‘ರಸಿಕಮಾನಸ’ವು ಮುಗಳಿಯವರ ಹನ್ನೊಂದು ಲೇಖನಗಳ ಸಂಕಲನವಾಗಿದೆ. ಇದರಲ್ಲಿರುವ ಕೆಲವು ಲೇಖನಗಳು ‘ತವನಿಧಿ’ ಸಂಕಲನದಲ್ಲೂ ಸೇರಿವೆ. ಈ ಲೇಖನಗಳಲ್ಲಿ,

“….ಮೊದಲಿನ ಆರು ಲೇಖನಗಳು ಸಾಹಿತ್ಯ ಮತ್ತು ವಿಮರ್ಶೆಯ ಸ್ವರೂಪ, ಅದಕ್ಕಾಗಿ ಮಾಡಬೇಕಾದ ಸಾಧನೆಯನ್ನು ಕುರಿತು ತನ್ನ ಆಲೋಚನೆಯನ್ನು ತಿಳಿಸುತ್ತವೆ. ‘ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಂಸ್ಕೃತಿ’ ಲೇಖನವು ಕನ್ನಡ ಸಾಹಿತ್ಯದಲ್ಲಿ ಭಾರತೀಯ ಅಂಶಗಳನ್ನು ಗುರುತಿಸಲು ಹಣಿಸಿರುತ್ತದೆ. ತರುವಾಯದ ನಾಲ್ಕು ಲೇಖನಗಳು ಪಂಪ, ರನ್ನ, ರಾಘವಾಂಕ, ಮುದ್ದಣ ಇವರ ನಾಲ್ಕು ಹಿರಿಯ ಕೃತಿಗಳಲ್ಲಿಯ ಒಂದೊಂದು ಸಾಹಿತ್ಯಿಕ ಗುಣವನ್ನು ವಿಂಗಡಿಸಿ ತೂಗಿ ತೋರಿರುತ್ತವೆ” (ರಸಿಕಮಾನಸ, ಮುನ್ನುಡಿ, ಪು.೧) ಎಂಬುದಾಗಿ ಅವರೇ ಸೂಚಿಸಿದ್ದಾರೆ.

ಇದರಲ್ಲಿ, ‘ಪಂಪನ ದೇಸಿ’ಯು ಸಾಕಷ್ಟು ದೀರ್ಘವಾದ, ಅಧ್ಯಯನ ಮೌಲ್ಯವಿರುವ, ಪಂಪನ ಪದಪ್ರಯೋಗಗಳ ಬಗೆಗೆ ವಿಶಿಷ್ಟ ಒಳನೋಟಗಳನ್ನು ಹೊಂದಿರುವ ಲೇಖನವಾಗಿದೆ. ‘ಗದಾಯುದ್ಧದ ವಸ್ತುರಚನೆ’ ಎಂಬ ಲೇಖನದಲ್ಲಿಯೂ ಮುಗಳಿಯವರು ಅನುಸರಿಸಿದ್ದಾರೆ.

‘ಕಲೆಗಾಗಿ ಕಲೆ’ ಲೇಖನದಲ್ಲಿ ಮುಗಳಿಯವರ ಜೀವನಾದರ್ಶಗಳಲ್ಲಿ ಒಂದಾಗಿದ್ದ ಸಮನ್ವಯ ದೃಷ್ಟಿಯು ಪ್ರಕಟವಾಗಿದೆ.

“ಕಲಾ ಪ್ರಪಂಚದಲ್ಲಿಯ ಅನೇಕ ಸಮಸ್ಯೆಗಳು ಕಲಾವಿದ ಮತ್ತು ವಿಮರ್ಶಕರ ವ್ಯಕ್ತಿತ್ವದಲ್ಲಿ. ಪರಿಣತಿಯ ಅಭಾವದಿಂದ ಮತ್ತು ಏಕಾಂಗಿಯಾದ ವಾದಬುದ್ದಿಯಿಂದ, ಹಟದಿಂದ ಹುಟ್ಟಿರುತ್ತವೆ. ಯಾವುದೊಂದು ವಾದದಿಂದ ಬೋಧ ಆಗುವುದೆಂಬುದು ನಿಜವಿದ್ದರೆ, ‘ಕಲೆಗಾಗಿ ಕಲೆ’, ‘ಜೀವನಕ್ಕಾಗಿ ಕಲೆ’ ಇವುಗಳ ಸಮರಸಭಾವವು ತಲೆದೋರು ವುದೆಂದು ಹಾರೈಸೋಣ” (ಅದೇ. ಪು. ೫೮) ಎನ್ನುವ ಅವರ ಆಶಯವು ಇದನ್ನು ಸ್ಥಿರಪಡಿಸುತ್ತದೆ.

‘ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು’ ಎನ್ನುವುದು, ಹೆಸರೇ ಸೂಚಿಸುವ ಹಾಗೆ, ಪಥ ಪ್ರದರ್ಶಕ ನಿಲುವಿನ ಕೃತಿಯಾಗಿದೆ. ಸಾಹಿತ್ಯಕ್ಕಾಗಲಿ, ಬದುಕಿಗಾಗಲಿ ಮಾರ್ಗದರ್ಶಕ ಸೂತ್ರಗಳ ಬೆಂಬಲವಿದ್ದಾಗ, ರೂಪುಗೊಳ್ಳುವ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ಕಸುವು ದೊರೆಯುತ್ತದೆ. ಇವುಗಳು ಯಾರ ತಲೆಯ ಮೇಲೂ ಹೇರಲ್ಪಟ್ಟ ಭಾರವಾಗಬಾರದು; ಬದಲಿಗೆ ಸಹೃದಯರ ಹಾಗೂ ಸಮೀಕ್ಷಕರ ರಸಾನುಭವಗಳ ವಿಶ್ಲೇಷಣೆ ಗಳಿಂದಲೇ ನಿಷ್ಪನ್ನವಾಗಬೇಕೆಂದು ಮುಗಳಿಯವರು ಈ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.

“ಕೃತಿಯ ದೃಷ್ಟಿಯಿಂದ, ವಸ್ತು-ವರ್ಣನೆ, ಪಾತ್ರ, ಶೈಲಿ, ನಾದ, ಲಯ ಇವು ಘಟಕಗಳಾಗುತ್ತವೆ. ಇವುಗಳ ಸಹಜವಾದ ಮತ್ತು ಅರ್ಥಪೂರ್ಣವಾದ ಸಂಯೋಜನೆಯಿಂದ ಉಂಟಾದ ಒಂದು ಸೌಮ್ಯ ಸೌಂದರ್ಯ ಹಾಗೂ ಕಲಾವಿಷಯಕವಾದ ಏಕತೆಯು ಸತ್ಕೃತಿಯ ಪರಿಣಾಮವನ್ನು ಬೀರುತ್ತದೆ” (ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು, ಪು. ೭೯-೮೦).

೧೯೮೬ರಲ್ಲಿ ಪ್ರಕಟವಾದ ಮುಗಳಿಯವರ ‘ಮಹಾಕೃತಿ’ಯೆಂಬ ಪುಸ್ತಕವು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಅವರು ನೀಡಿದ ಉಪನ್ಯಾಸಗಳ ವಿಸ್ತೃತ ರೂಪವಾಗಿದೆ.

‘ಮಹಾಕೃತಿ’ಯ ನಿರ್ವಚನದಿಂದ ತೊಡಗಿ, ಅದರ ಪರಿಕರಗಳು, ಮಾನದಂಡಗಳು (ಭಾರತೀಯ ಹಾಗೂ ಪಾಶ್ಚಾತ್ಯ ವಿದ್ವಾಂಸರ ದೃಷ್ಟಿಗಳಲ್ಲಿ ಮತ್ತು ಪ್ರಾಚೀನ – ಅರ್ವಾಚೀನ ಎರಡೂ ನೆಲೆಗಳಲ್ಲಿ) ಮೌಲ್ಯಮಾಪನ ಕ್ರಮಗಳು, ಸತ್ಕೃತಿ – ಮಹಾಕೃತಿ – ಮೇರುಕೃತಿಗಳೆಂಬ ಶ್ರೇಣೀಕರಣ ವಿಧಾನಗಳು ಇಲ್ಲಿ ವಿವರವಾಗಿ ಚರ್ಚಿತವಾಗಿವೆ. ಈ ಮೂಲಕ ಮುಗಳಿ ಯವರು ಮಹಾಕಾವ್ಯಗಳ ಅಧ್ಯಯನಗಳಿಗೆ ಒಂದು ಶಾಸ್ತ್ರೀಯವಾದ, ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿದ್ದಾರೆ.

ಈ ಕೃತಿಯಲ್ಲಿ ಮುಗಳಿಯವರು ವಿಶ್ಲೇಷಿಸಿರುವ ಹಲವಾರು ವಿಚಾರಗಳು ವಿಶೇಷವಾದ ಅಧ್ಯಯನಗಳನ್ನು ನಿರೀಕ್ಷಿಸುತ್ತವೆ.

“ಕವಿ ಅಥವಾ ಸೃಜನಾತ್ಮಕ ಸಾಹಿತಿ ಕೂಡಾ ಒಬ್ಬ ವ್ಯಕ್ತಿತ್ವದ ಶೋಧಕ, ಸಾಧಕ” (ಮಹಾಕೃತಿ, ಪು. ೨೧) ಎನ್ನುವುದನ್ನು ಗೃಹೀತವಾಗಿಟ್ಟುಕೊಂಡು, ಮುಗಳಿಯವರು ಈ ಮಗ್ಗಲುಗಳ ವಿಶ್ಲೇಷಣೆಗಳಿಗೆ ತೊಡಗುತ್ತಾರೆ. ಇವುಗಳೊಂದಿಗೆ ‘ಸಾಹಿತಿಯು ಪರಿಸರದ ಸೃಷ್ಟಿ’ ಮತ್ತು ‘ಸಾಹಿತಿಯು ಸಮಾಜದ ನಿರ್ಮಾತೃ’ ಎಂಬ ಎರಡು ಲಕ್ಷಣಗಳನ್ನು ಪೋಣಿಸಿಕೊಂಡಾಗ ಅವರ ಅಭಿಪ್ರಾಯಗಳು ಸ್ಫುಟವೂ, ನಿಖರವೂ ಆಗುತ್ತವೆ.

“ಕವಿ ವ್ಯಕ್ತಿ, ಒಂದು ಯುಗದ ಸಮಷ್ಟಿ ಪ್ರಜ್ಞೆಯನ್ನು ತನ್ನದಾಗಿ ಮಾಡಿಕೊಂಡು ತಾನದರ ಪ್ರತಿನಿಧಿಯಾಗಿ ಕೃತಿರಚನೆಯನ್ನು ಮಾಡುತ್ತಾನೆ. ಆಗ ಅವನ ವ್ಯಕ್ತಿತ್ವವು ಸಮಷ್ಟಿ ಯಲ್ಲಿ ವಿಲೀನವಾಗಿರುತ್ತದೆ” (ಅದೇ, ಪು. ೨೩) ಎನ್ನುವುದು ಇಂಥ ಉದಾಹರಣೆಗಳಲ್ಲಿ ಒಂದಾಗಿದೆ.

ಮಹಾಕೃತಿಯನ್ನು ಒಂದು ಮಾಧ್ಯಮವಾಗಿಟ್ಟುಕೊಂಡು, ಮುಗಳಿಯವರು ಸಮಗ್ರ ಸಾಹಿತ್ಯ ಬಗೆಗಿನ ತಮ್ಮ ಅನಿಸಿಕೆಗಳಿಗೂ ಇಲ್ಲಿ ಅಭಿವ್ಯಕ್ತಿಯನ್ನು ನೀಡುತ್ತಾರೆ. ಸಾಹಿತ್ಯ ನಿರ್ಮಿತಿಯಲ್ಲಿ ಸಮಾಜ ಪಾತ್ರ ಹಾಗೂ ಸ್ವಸ್ಥ ಸಮಾಜವನ್ನು ಸೃಷ್ಟಿಸುವ ಸಾಹಿತಿಯ ಹೊಣೆಗಾರಿಕೆಗಳ ಸ್ಪಷ್ಟ ಅರಿವಿನೊಂದಿಗೆ ಅವರು ಇದನ್ನು ಮಾಡುತ್ತಾರೆ. ಇಲ್ಲಿ ಸಾಹಿತಿ ಹಾಗೂ ಸಾಹಿತ್ಯಗಳು ಸಮಾಜದ ಸಾಂಸ್ಕೃತಿಕ ಘಟಕಗಳೇ ಆಗಿವೆಯೆನ್ನುವುದನ್ನು ಅವರೆಂದೂ ಅವಗಣಿಸುವುದಿಲ್ಲವೆನ್ನುವುದು ಗಮನಾರ್ಹವಾಗಿದೆ.

ಈ ಬಗೆಗಿನ ಚಿಂತನಲಹರಿಗಳಗುಂಟ ಸಾಗುತ್ತ ಅವರು, ಸಾಹಿತ್ಯದ ಮೌಲ್ಯಮಾಪನದ ಸಂದರ್ಭದಲ್ಲಿ ಮಹತ್ವದವುಗಳೆನಿಸುವ ಹಲವು ಪ್ರಶ್ನೆಗಳನ್ನು ಮುಂದಿಡುತ್ತಾರೆ :

“… ಲೇಖನ, ವ್ಯಕ್ತಿ ಮತ್ತು ಸಾಹಿತ್ಯ ಸೃಷ್ಟಿ ಇವುಗಳಲ್ಲಿ ಅನ್ಯೋನ್ಯತೆ ಎಷ್ಟು? ವ್ಯಕ್ತಿತ್ವದ ಇತಿಮಿತಿಗಳನ್ನು ಮೀರಿದ ಗುಣಾಂಶ, ಗುಣಾತಿಶಯವಿರಬಹುದೇ? ಆಗ, ಅದರ ಮೌಲ್ಯಮಾಪನ ಹೇಗೆ? ವ್ಯಕ್ತಿಯ ಸ್ವಾನುಭವ ಎಂಬುದು ಎಲ್ಲ ಕೃತಿರಚನೆಯಲ್ಲಿ ಸಾಧ್ಯವೇ? ಅವನ ಅನುಭವದಾಚೆಯಿರುವ, ವಿಶೇಷವಾಗಿ ಅನುಭಾವ ಪ್ರಪಂಚಕ್ಕೆ ಸೇರಿದ, ಅಭಿವ್ಯಕ್ತಿ ಕೃತಿಯಲ್ಲಿ ಮೂಡಿಬಂದರೆ ಅದನ್ನು ಅರಿತುಕೊಳ್ಳುವುದು, ಬೆಲೆ ಕಟ್ಟುವುದು ಹೇಗೆ”? (ಅದೇ. ಪು. ೩೧) ಇತ್ಯಾದಿ ಪ್ರಶ್ನೆಗಳಿಗೆ ತಮ್ಮ ನಿಟ್ಟಿನಿಂದ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ಅವೆಲ್ಲವೂ ಅಂಗೀಕಾರಾರ್ಹವಾದವುಗಳೆಂದಲ್ಲ, ಆದರೆ ಅಧ್ಯಯನದ ಅನೇಕ ಕಿಂಡಿಗಳನ್ನು ತೆರೆಯುತ್ತವೆನ್ನುವ ದೃಷ್ಟಿಯಿಂದ ಅವುಗಳು ಪ್ರಸ್ತುತ ವೆನಿಸುತ್ತವೆ. ಈ ಎಲ್ಲ ಅಂಶಗಳು ‘ಮಹಾಕೃತಿ’ಯ ಉಪ ಉತ್ಪನ್ನಗಳಾಗಿವೆ.

ಮಹಾಕೃತಿಗಳ ಸಂದರ್ಭದಲ್ಲಿ ಬದ್ಧತೆಗಿರುವ ಸ್ಥಾನ ಹಾಗೂ ಮಹತ್ವಗಳು ಮುಗಳಿ ಯವರ ಗಮನವನ್ನು ಸೆಳೆದಿವೆ. ಇಲ್ಲಿ ತನ್ನ ಜೀವನ ದೃಷ್ಟಿಗೆ ಬದ್ಧನಾಗಿಯೇ ಬರೆಯುವ ಸಾಹಿತಿಯ ಜೀವನ ಪದ್ಧತಿಗೆ ವಿಧೇಯವಾದ ವಿಚಾರ ಪ್ರಣಾಳಿ, ಬಾಹ್ಯವಾದ, ಸೈದ್ಧಾಂತಿಕ ವಾದ ರಾಜಕೀಯ, ತಾತ್ತ್ವಿಕ, ಧಾರ್ಮಿಕ, ಸಾಮಾಜಿಕ ಬದ್ಧತೆಗಳೆಲ್ಲವನ್ನೂ ಸಾಕಷ್ಟು ಜಿಜ್ಞಾಸೆಗೊಳಪಡಿಸುತ್ತಾರೆ. ಇದಕ್ಕೆ ಪರ-ವಿರುದ್ಧವಾದ ವಿಮರ್ಶಕರ ಅಭಿಪ್ರಾಯಗಳನ್ನು ಮರುವಿಮರ್ಶೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಸೂಕ್ಷ್ಮವಾಗಿ ಕಂಡು ಬರುವ ಗೊಂದಲಗಳನ್ನು ತಾರ್ಕಿಕ ವ್ಯವಸ್ಥೆಗೆ ಒಗ್ಗಿಸಿ, “ವಿಶೇಷ ಬದ್ಧತೆ ಎಲ್ಲ ಲೇಖಕರಿಗೆ ಅವಶ್ಯ, ಅನಿವಾರ್ಯ ಎಂಬುದನ್ನು ನಾವು ಒಪ್ಪುವುದಿಲ್ಲ. ಇದರಲ್ಲಿ ಸಾಮಾಜಿಕ ಹೊಣೆ ಹೆಚ್ಚು-ಕಡಿಮೆ ಎಂಬ ಪ್ರಶ್ನೆಯಿಲ್ಲ. ಸಾಮಾಜಿಕ ಹೊಣೆಗಾರಿಕೆಯು ಸಮಾನವಾಗಿದ್ದರೂ ಅದನ್ನು ಸೃಜನಶೀಲರು ತಂತಮ್ಮ ರೀತಿಯಲ್ಲಿ ನಿರ್ವಹಿಸಲು ಸ್ವತಂತ್ರರು. ಬದ್ಧತೆಯು ಕಲಾತ್ಮಕತೆಗೆ ಅಡ್ಡಿಯಲ್ಲ ಎಂಬ ಮಾತು ಒಪ್ಪತಕ್ಕದ್ದೇ ಆದರೂ ವಿಶೇಷ ಬದ್ಧತೆ ಕೆಲವು ಲೇಖಕರನ್ನು ಸುಲಭ ಪ್ರಚಾರದ ಅಭಿನಿವೇಶಕ್ಕೆ ಒಳಗು ಮಾಡಿ ಕಲಾತ್ಮಕತೆಯನ್ನು ಕುಂದಿಸುವ ಸಂಭವವನ್ನು ಅಲ್ಲಗಳೆಯುವಂತಿಲ್ಲ” (ಅದೇ. ಪು. ೨೫) ಎನ್ನುವ ನಿರ್ಧಾರಕ್ಕೆ ತಲುಪುತ್ತಾರೆ. ಸಾಹಿತಿಯಲ್ಲಿ ಇರಬೇಕಾದ ಅನ್ಯಾನ್ಯ ಬದ್ಧತೆಗಳ ಸ್ವರೂಪ-ಪ್ರಮಾಣ ನಿರ್ಣಯದ ನೆಲೆಯಿಂದ, ಮುಗಳಿಯವರ ಅಭಿಪ್ರಾಯಗಳನ್ನು ಪರಿಗಣಿಸಬಹುದು. ಹೆಚ್ಚಿನ ಚರ್ಚೆಗೆ ಗ್ರಾಸವನ್ನು ಒದಗಿಸುತ್ತವೆನ್ನುವ ಕಾರಣಕ್ಕಾಗಿಯೂ ಇವು ಮಹತ್ವವನ್ನು ಪಡೆಯುತ್ತವೆ. ನವ್ರೋಸಾಹಿತ್ಯ ಚಳವಳಿಗಳ ಸಂದರ್ಭಗಳಲ್ಲೂ ಈ ‘ಬದ್ಧತೆ’ಯನ್ನು ಅತಿಯಾಗಿ ಜಗ್ಗುವುದರಿಂದುಂಟಾಗಿರುವ ಅಪಾಯಗಳನ್ನು ಗ್ರಹಿಸಲು ಇವು ಸಹಾಯವನ್ನು ನೀಡುತ್ತವೆ.

ಈ ಕೃತಿಯ, ‘ಮಹಾಕೃತಿ-ಮೌಲ್ಯಮಾಪನ – ಮೂಲತತ್ತ್ವಗಳು’ ಪ್ರಕರಣದಲ್ಲಿ ಮುಗಳಿಯವರ ಸ್ವೋಪಜ್ಞ ನಿಲುವಿಗೆ ಹೇರಳವಾದ ಸಾಕ್ಷಿಗಳು ಸಿಗುತ್ತವೆ. ಈ ನಿಟ್ಟಿನ ವಿಶ್ಲೇಷಣೆಗಳಿಗೆ ಎದುರಾಗುವ ಸಮಸ್ಯೆಗಳು ಹಾಗೂ ಬಾಧಿಸುವ ಪರಿಕರಗಳ ಕೊರತೆಗಳನ್ನು ಅವರು ಎಳೆಯೆಳೆಯಾಗಿ ಹಿಂಜಿ ನೋಡಿದ್ದಾರೆ. ಸೌಂದರ್ಯ ತತ್ತ್ವ, ಭವ್ಯತೆ ಮುಂತಾದ ಪ್ರಸಿದ್ಧವಾದ ಮಹಾಕೃತಿಯ ಲಕ್ಷಣಗಳನ್ನು ಮತ್ತೆ ವಿಮರ್ಶೆಗೆ ಒಳಪಡಿಸುತ್ತ, “ಆಶಯ ಮೌಲ್ಯಗಳಿಗೆ ಮೂಲಭೂತವಾದ ಜೀವನಾನುಭವ, ದರ್ಶನ ಇವುಗಳನ್ನು ತಳಸೋಸಿ ನೋಡುವ” (ಅದೇ. ಪು. ೧೦೧) ಕಾರ್ಯದಲ್ಲಿ ಅವರು ನಿರತರಾಗುತ್ತಾರೆ; ಇದರೊಳಗಿನ ಹಲವು ಸೂಕ್ಷ್ಮಗಳ ಮೇಲೆ ಬೆಳಕನ್ನು ಹಾಯಿಸುತ್ತಾರೆ. ‘ಜೀವನದರ್ಶನ’ವೆನ್ನುವುದು ಹೊಸ ಗಾಳಿಯ ಹೊಡೆತಕ್ಕೆ ಅಲುಗಾಡುವಂಥ, ಕೆಸರಿನಲ್ಲಿ ನೆಟ್ಟ ಕಂಬವಾಗದೆ, ಅನುಭವದ ಪ್ರಾಮಾಣ್ಯದ, ವಾಸ್ತವದ ಗಟ್ಟಿ ನೆಲವನ್ನು ಆಧರಿಸಿರಬೇಕೆಂಬ ಸೂಚನೆಯನ್ನೂ ಅವರಲ್ಲಿ ಕೊಡುತ್ತಾರೆ. ಒಟ್ಟಿನಲ್ಲಿ, “ಮಹಾಕವಿಯಾದವನು ಯಾವುದೇ ಭಾಷೆಯಲ್ಲಿ, ಯಾವುದೇ ನೆಲದ ನೆಲೆಯಿಂದ ಬರೆಯಲಿ, ಅವನ ಕೃತಿಯಲ್ಲಿ ವಿಶ್ವಪ್ರಜ್ಞೆ, ವಿಶ್ವಹಿತ ಇವು ಪ್ರಧಾನವಾಗಿ ರುವುದರಿಂದ, ಅವನು ವಿಶ್ವಕವಿಯಾಗಿ ಅಜರಾಮರನಾಗುತ್ತಾನೆ; ಅವನಿಂದ ವಿಶ್ವಸಾಹಿತ್ಯಕ್ಕೆ ಕಾಣಿಕೆಯು ಸಲ್ಲುತ್ತದೆ… ಇಂಥ ಮಹಾಕೃತಿಯು ವಿಸ್ತಾರವಾದ ಮಹಾಕಾವ್ಯವಾಗಿರಬಹುದು, ಅಡಕವಾದ ಭಾವಗೀತೆಯಾಗಿರಬಹುದು, ಭಾವಗೀತೆಗಳ ಒಂದು ಪುಂಜವಾಗಿರಬಹುದು. ಎರಡು ಮೂರು ಸಾಲಿನ ಕವನವಾಗಿರಬಹುದು. ವಿಶ್ವಸಾಹಿತ್ಯಕ್ಕೆ ಅದರ ಕಾಣಿಕೆ ಚಿರಂತನ ವಾಗಿರುತ್ತದೆ” (ಅದೇ. ಪು. ೧೧೪-೫) ಎನ್ನುವುದು ಈ ಕೃತಿಯ ನಿರ್ಣಯವಾಗುತ್ತದೆ. ಕಾವ್ಯದ ಸತ್ವವು ಮುಖ್ಯವೇ ಹೊರತು ಅದರ ಗಾತ್ರವಲ್ಲ; ಕವಿ-ಕಾವ್ಯಗಳೆರಡೂ ಮಹಾಕಾವ್ಯ ನಿರ್ಮಿತಿಯ ಶಕ್ತಿಕೇಂದ್ರಗಳು ಎನ್ನುವ ಮುಗಳಿಯವರ ನಿಲುವನ್ನು ಸ್ಪಷ್ಟಪಡಿಸುತ್ತದೆ.

“(ಮಹಾಕೃತಿಯ ಬಗೆಗೆ) ಪ್ರಕಟವಾದ ವಿದ್ವಾಂಸರ ಕೆಲವು ಗ್ರಂಥ ಸಹಾಯದಿಂದ ಅದರ (ಆ ಕುರಿತಾದ ಚಿಂತನೆಯ) ಕೆಲಭಾಗವನ್ನಾದರೂ ಕನ್ನಡಕ್ಕೆ ತಂದು, ನನ್ನ ಪರಾಮರ್ಶೆಯೊಂದಿಗೆ ಸಾಹಿತ್ಯ ಸಮೀಕ್ಷಕರಿಗೆ ಮತ್ತು ಸಾಮಾನ್ಯ ರಸಿಕರಿಗೆ ಒದಗಿಸಬೇಕು” (ಅದೇ. ಮುನ್ನುಡಿ, ಪು. iii) ಎಂಬ ಮುಗಳಿಯವರ ‘ಮನೀಷೆ’ಯು ಈ ಕೃತಿಯಲ್ಲಿ ಸಾರ್ಥಕವಾಗಿದೆ.

ಹೊಸಗನ್ನಡ ಕಾವ್ಯದ, ಕವಿಗಳ ಬಗೆಗೆ ಮುಗಳಿಯವರ ಒಲವು-ನಿಲುವುಗಳನ್ನು ನಿರೂಪಿಸುವ “ಬೇಂದ್ರೆ ಕಾವ್ಯ” ಕೃತಿಯು ೧೯೮೬ರಲ್ಲಿ ಪ್ರಕಟವಾಯಿತು. ಮುಗಳಿಯವರಿಗೆ ಬೇಂದ್ರೆಯವರು ತುಂಬ ಪ್ರಿಯರಾಗಿದ್ದವರು; ಗುರು ಸಮಾನರಾಗಿದ್ದವರು. ಅವರ ಕೃತಿಗಳನ್ನು ಸಮೀಕ್ಷಿಸುವ ತಮ್ಮ ದೃಷ್ಟಿಯ ಬಗೆಗೆ ಮುಗಳಿಯವರು, “ನಾನು ಬೆಳೆಸಿಕೊಂಡು ಬಂದ ಸಹೃದಯ ಮನೋಧರ್ಮದಿಂದ ಬೇಂದ್ರೆ ಕಾವ್ಯದಲ್ಲಿ ಎದ್ದು ಕಾಣುವ ಕೆಲವು ಪ್ರಮುಖ ವಿಷಯಗಳನ್ನು ಸಮೀಕ್ಷೆ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಾನು ಅರಿತುಕೊಂಡ ಬಗೆಯಲ್ಲಿ ಕೆಲವು ಪ್ರಮುಖ ಕವನಗಳ ವಿಶ್ಲೇಣೆ – ವಿಮರ್ಶೆಗಳನ್ನು ಮಾಡಿದ್ದೇನೆ…. ಒಟ್ಟಿನಲ್ಲಿ ಬೇಂದ್ರೆ ಕಾವ್ಯವು ಕನ್ನಡ ಕಾವ್ಯ ಪ್ರಪಂಚದಲ್ಲಿ ಮಾತ್ರವಲ್ಲ. ಭಾರತೀಯ – ಜಾಗತಿಕ ಕಾವ್ಯಲೋಕದಲ್ಲಿ ಪಡೆದಿರುವ ವೈಶಿಷ್ಟ್ಯಪೂರ್ಣ ಸ್ಥಾನವನ್ನೂ ಗುರುತಿಸಿದ್ದೇನೆ” (ಬೇಂದ್ರೆ ಕಾವ್ಯ, ಪೀಠಿಕೆ, ಪು. ೫) ಎಂದು ಬರೆಯುತ್ತಾರೆ. ಅವರೇ ಕರೆಯುವಂತೆ, ಇದು ಒಂದು ಸಹೃದಯ ಸಮೀಕ್ಷೆಯೇ ಹೊರತಾಗಿ ನಿಷ್ಠುರವಾದ ವಿಮರ್ಶೆಯಲ್ಲ. ಮುಗಳಿಯವರ ವಿಮರ್ಶೆಯ ಮಾನದಂಡಗಳನ್ನು ಗುರುತಿಸುವ ದೃಷ್ಟಿಯಿಂದ ಈ ಕೃತಿಗೆ ಮಹತ್ವವಿದೆ.

ಇದರಲ್ಲಿ, ಬೇಂದ್ರೆಯವರ ಕಾವ್ಯಲೋಕವನ್ನು ನಿರ್ದಿಷ್ಟ ವಲಯಗಳಾಗಿ ವಿಭಜಿಸಿ ಕೊಳ್ಳಲಾಗಿದೆ. ಪ್ರಕೃತಿ, ಪ್ರೀತಿ, ಮಾನವೀಯ ಪರಿಸ್ಪಂದ, ವಿರಾಟದರ್ಶನ, ಅಧ್ಯಾತ್ಮ ಮುಂತಾದ ವರ್ಗಗಳೊಳಗೆ ಅವರ ಕಾವ್ಯಧಾರೆಯ ಸ್ವರೂಪವನ್ನು ಗ್ರಹಿಸುವ ಪ್ರಯತ್ನವು ಇಲ್ಲಿದೆ. ವಾಸ್ತವವಾಗಿ, ಇದು ಶಾಸ್ತ್ರೀಯವಾದ ಮಾರ್ಗವೇ ಆಗಿದೆ. ಏಕೆಂದರೆ, ಸೃಜನಶೀಲ ಸಾಹಿತಿಯ ಸೃಷ್ಟಿಗಳೆಲ್ಲವೂ ಏಕರೂಪವಾಗಿರಲಾರವು. ನಿರ್ದಿಷ್ಟ ಸಂವೇದನೆಗೆ ದನಿ ನೀಡುವ ಪ್ರಕ್ರಿಯೆಯಲ್ಲಿ, ಆಯಾ ಮನೋವೃತ್ತಿಗೆ ಅನುಗುಣವಾಗಿ ಭಾಷೆ, ಶೈಲಿ, ತಂತ್ರ, ಆಶಯಗಳು ಬದಲಾಗುತ್ತ ಹೋಗುತ್ತವೆ. ಸಮರ್ಥನಾದ ಸಾಹಿತಿಯು ಈ ಎಲ್ಲ ಮಾನಗಳಲ್ಲೂ ಅನನ್ಯತೆಯನ್ನು ಕಾಯ್ದುಕೊಳ್ಳುತ್ತಾನೆನ್ನುವುದು ಬೇರೆಯೇ ಮಾತಾಗಿದೆ.

ಮುಗಳಿಯವರ ವಿಮರ್ಶನ ಕ್ರಮವು ಒಂದರ್ಥದಲ್ಲಿ, ರಸಗ್ರಹಣ ಆಸಕ್ತಿಯಿರು ವಂಥದ್ದಾದರೆ, ಇನ್ನೊಂದರ್ಥದಲ್ಲಿ ಕೃತಿಯೊಂದರ ಓದಿಗೆ ಹೊಸ ಆಯಾಮಗಳನ್ನು ಕಲ್ಪಿಸುವಂಥದ್ದಾಗಿದೆ. ಅಲ್ಲದೆ, ಬಹಳ ಸರಳ ಭೂಮಿಕೆಯಲ್ಲಿ ಕೃತಿಯ ತಿರುಳನ್ನು ಸಂವಹಿಸುವ ವಿಧಾನವನ್ನು ಅದು ಅನುಸರಿಸುತ್ತದೆ. ಈ ಹೇಳಿಕೆಗೆ “ಬೇಂದ್ರೆ ಕಾವ್ಯ” ಗ್ರಂಥದುದ್ದಕ್ಕೂ ಧಾರಾಳವಾದ ನಿದರ್ಶನಗಳು ಸಿಗುತ್ತವೆ. ಉದಾಹರಣೆಗೆ, ಬೇಂದ್ರೆಯವರ ‘ಶ್ರಾವಣ ವೈಭವ’ದ ಬಗೆಗೆ ಇದರಲ್ಲಿ ಬರುವ ಮಾತುಗಳನ್ನು ಗಮನಿಸಬಹುದು :

“ನಮ್ಮ ದೃಷ್ಟಿಯಲ್ಲಿ, ಕೆಲವೊಂದು ಭಾಗ ಶಿಥಿಲವಾಗಿವೆಯೆನ್ನುವುದಕ್ಕಿಂತ, ಉತ್ಪ್ರೇಕ್ಷೆಯ ಉಲ್ಲಾಸದ ಮೂಲಕ ಇಡೀ ಕವಿತೆಯು ಗುಪ್ತತನವನ್ನು ಕಳೆದುಕೊಂಡಿದೆಯೆನ್ನಬಹುದು. ನವೋದಯ ಕಾವ್ಯದ ಶಕ್ತಿ-ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಪ್ರತೀಕವಾಗಿ ಈ ಕವಿತೆಯಿದೆ ಎಂಬ ಹೇಳಿಕೆಯು ನಮಗೆ ಸಮರ್ಪಕವೆನಿಸುವುದಿಲ್ಲ. …‘ನವೋದಯ’ ಕಾವ್ಯವೆಂದರೆ, ಸ್ಥೂಲವಾಗಿ ಪುನರುಜ್ಜೀವನಗೊಂಡ ಮೊದಲನೆಯ ಹಂತವೆಂದು ತಿಳಿದರೆ ಅದರಲ್ಲಿ ಶಕ್ತಿ-ಸಾಮರ್ಥ್ಯಗಳಿರುವಂತೆಯೇ ದೌರ್ಬಲ್ಯಗಳೂ ಇವೆ ಎಂದು ಸಮತೂಕದ ಸಮೀಕ್ಷೆ ಕಂಡು ಹಿಡಿದರೆ ತಪ್ಪಿಲ್ಲ. ಆದರೆ ಅದರ ಮೂಲ ಪ್ರೇರಣೆಗಳು ಯಾವುವು? ಯಾವ ಪರಿಸರದಲ್ಲಿ ಅದು ತನ್ನ ಆಶಯ – ಅಭಿವ್ಯಕ್ತಿಗಳ ಪ್ರಯೋಗ ನಡೆಸಿತು? ಅದರೆಲ್ಲ ವೈವಿಧ್ಯದಲ್ಲಿ ‘ನವೋದಯತ್ವ’ ಎನ್ನಬಹುದಾದ ಏಕತೆ ಯಾವುದರಲ್ಲಿತ್ತು? ಈ ವಿಷಯದ ಗಾಢವಾದ ಅಧ್ಯಯನವು ಪೂರ್ವಗ್ರಹ ಮುಕ್ತ ಮನದಿಂದ ಇನ್ನೂ ನಡೆಯಬೇಕಾಗಿದೆ” (ಅದೇ. ಪು. ೧೧-೧೨).

ಇಲ್ಲಿ ಬೇಂದ್ರೆಯವರ ಅಥವಾ ಇನ್ನಿತರರ ಸಾಹಿತ್ಯ ಕೃತಿಗಳ ವಿಮರ್ಶೆಯು ಶಬ್ದ ಜಾಲ, ತಾಂತ್ರಿಕ ಪದಪ್ರಯೋಗ ಇಲ್ಲವೆ ಅವಸರದ ತೀರ್ಮಾನಗಳಿಂದಾಗಿ ತಪ್ಪು ದಾರಿ ಹಿಡಿಯಬಾರದೆಂಬ ಎಚ್ಚರವಿದೆ. ಮಾತ್ರವಲ್ಲದೆ, ವಿಮರ್ಶಕರಲ್ಲಿ ಇರಲೇಬೇಕಾದ ವಿಶ್ಲೇಷಣಾತ್ಮಕ ಪ್ರವೃತ್ತಿ, ಸಮತೋಲನ, ವಸ್ತುನಿಷ್ಠ ಪ್ರಜ್ಞೆಗಳ ಮೇಲೆ ಅವಧಾರಣೆಯಿದೆ. ಈ ಅರ್ಥದಲ್ಲಿ, ಮುಗಳಿಯವರ ಅಭಿಪ್ರಾಯಗಳು ವಿಮರ್ಶೆಗೆ ಮಾರ್ಗದರ್ಶನ ನೀಡಲು ಹೊರಡುತ್ತವೆ; ವಿಮರ್ಶೆಯ ತಾತ್ವಿಕ ಸ್ತರಗಳನ್ನು ಸ್ಪರ್ಶಿಸುತ್ತವೆ.

ಇದೇ ನೆಲೆಯಲ್ಲಿ ಅವರು ಬೇಂದ್ರೆಯವರು ಅಭಿವ್ಯಕ್ತಿಸಿರುವ ಪ್ರೀತಿಯ ಸ್ವರೂಪವನ್ನು ಗ್ರಹಿಸುತ್ತಾರೆ. ಸುಕುಮಾರವಾದ, ರಮ್ಯವಾದ ಈ ಪ್ರಪಂಚವೂ ಕೆಲವೊಮ್ಮೆ “ಅತಿರಿಕ್ತ ಪ್ರತಿಮೆಯ ಆಕಾರವನ್ನು ತಾಳುವ” ಅನಿವಾರ್ಯತೆಗಳಿಗೆ ಬೇಂದ್ರೆಯವರು ಸ್ಪಂದಿಸುವ ಕ್ರಮ, ಈ ಅನುರಾಗದ ಶಕ್ತಿ, ಮೂಲ – ಚೂಲಗಳು, ಒಳಸುಳಿಗಳನ್ನೆಲ್ಲ ಅನ್ವೇಷಿಸುತ್ತಾ ಸಂಕೀರ್ಣ ಲೋಕವೊಂದಕ್ಕೆ ಕರೆದೊಯ್ಯುವ ಅವರ ಕಾವ್ಯದ ಶಕ್ತಿ, ಪ್ರೀತಿಯನ್ನು ಒಂದು  ದರ್ಶನವಾಗಿ, ಆಧ್ಯಾತ್ಮಿಕ ಅನುಭವವಾಗಿ ಕಾಣಬಲ್ಲ ಅವರ ಅಂತಃಸ್ಫುರಣಗಳು, ‘ಹುಬ್ಬಳ್ಳಿಯಾಂವಾ’ದಂಥ ಕವಿತೆಗಳ ಧ್ವನಿಪೂರ್ಣತೆಗಳನ್ನೆಲ್ಲ ಮುಗಳಿಯವರು ವಿವರವಾಗಿ ಚರ್ಚಿಸುತ್ತಾರೆ. ಬೇಂದ್ರೆಯವರ ಕಾವ್ಯವನ್ನು ಬೇರೆ ಬೇರೆ ಮಗ್ಗುಲುಗಳಿಂದ ನೋಡಬೇಕಾದ ಅಗತ್ಯವನ್ನು ವಿಶದಪಡಿಸುತ್ತಾರೆ.

ಬೇಂದ್ರೆಯವರ ಜನಪರವಾದ ನಿಲುವುಗಳನ್ನು ಮುಗಳಿಯವರು ಬೇರೆಯೇ ಭಿತ್ತಿ ಯಲ್ಲಿಟ್ಟು ನೋಡುತ್ತಾರೆ. ಇದು ‘ಕುರುಡು ಕಾಂಚಾಣ’ದ ರೂಪಕಶಕ್ತಿಯಾಗಿ, ಸಾಮಾಜಿಕ ವಿಡಂಬನೆಯಾಗಿ, ಜನಮಾನಸವನ್ನು ತಿದ್ದುವ ಶಿಕ್ಷಣ ಕೇಂದ್ರವಾಗಿ ನಾನಾ ರೂಪಧಾರಣೆ ಮಾಡುವ ಕ್ರಮವನ್ನು ಅವರು ಬಿಡಿ ಬಿಡಿಯಾಗಿ ನಿರೂಪಿಸಿದ್ದಾರೆ. ಬೇಂದ್ರೆಯವರ ಮಾನವೀಯ ಭಾವಗಳ ಸಂವಿಧಾನವನ್ನು ಅರ್ಥ ಮಾಡಿಸುತ್ತಾ, “ಈ ಮಾನವೀಯತೆ ಕೇವಲ ಭಾವನಾತ್ಮಕವಾದುದಲ್ಲ. ಭಾವನೆ-ಬುದ್ದಿಗಳೆರಡೂ ಬೆರೆತ ಒಂದು ಪರಿಣತ ಪ್ರಜ್ಞೆ, ಕವಿ ಪ್ರತಿಭೆಯ ಸಹಜ ಸ್ಫೂರ್ತಿ ಅಭಿವ್ಯಕ್ತಿಗೆ ಯಾವಾಗಲೂ ಹಿನ್ನೆಲೆಯಾಗಿರುತ್ತದೆ. ಹೀಗಾಗಿ, ಭಾವನೆಗಳು ಉತ್ಕಟವಾದರೂ ಸಾಮಾನ್ಯವಾಗಿ ಅತಿರೇಕಕ್ಕೆ  ಹೋಗುವುದಿಲ್ಲ. ಬುದ್ದಿ ಪ್ರಖರವಾದರೂ ಒಣ ತರ್ಕಕ್ಕೆ ಇಳಿಯುವುದಿಲ್ಲ. ಸೃಜನಶೀಲತೆಯ ಎಲ್ಲ ಪಥ್ಯಗಳನ್ನೂ ಕವಿ ಪಾಲಿಸುತ್ತಾನೆ. ಇಷ್ಟಾದರೂ ಉತ್ತಮವಲ್ಲದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಏರುಪೇರುಗಳನ್ನೂ ಗುರುತಿಸುವುದು ಸಾಧ್ಯ” (ಅದೇ. ಪು. ೪೯) ಎನ್ನುತ್ತಾರೆ. ಬೇಂದ್ರೆಯವರ ಮೇಲಿನ ಅಪಾರವಾದ ಗೌರವವು ಮುಗಳಿಯವರ ಲೇಖನಿಯನ್ನು ನಿಯಂತ್ರಿಸುತ್ತದೆನ್ನು ವುದಕ್ಕೂ ಇಂಥ ಸಂದರ್ಭಗಳಲ್ಲಿ ನಿದರ್ಶನಗಳು ಸಿಗುತ್ತವೆ. ಇದು, ಕುರುಡು ಆರಾಧನೆ ಯಾಗಿ, ವಿಮರ್ಶೆಯನ್ನು ಮೊಂಡುಗೊಳಿಸಲಿಲ್ಲವೆನ್ನುವುದೂ ಅಷ್ಟೇ ಸಮಾಧಾನಕರವಾದ ಅಂಶವಾಗಿದೆ.

ಈ ಕೃತಿಯಲ್ಲಿರುವ ‘ಬೇಂದ್ರೆಯವರ ಕಾವ್ಯದಲ್ಲಿ ‘ವಿರಾಟ್ ದರ್ಶನ’ (ಪು. ೫೧-೭೦) ಎನ್ನುವ ಲೇಖನವು ತೀರಾ ವಿಶಿಷ್ಟವಾಗಿದೆ. ಈ ಪದವನ್ನು ಮುಗಳಿಯವರು ಆಂಗ್ಲ ‘Cosmic Consciousness’ ಪರಿಕಲ್ಪನೆಗೆ ಸಂವಾದಿಯಾಗಿ ಬಳಸುತ್ತಾರೆ. ಇದನ್ನು ಅವರು, “ಭೂಮಿಯ ಮೇಲಿನ ಬದುಕನ್ನಲ್ಲದೆ, ಇಡೀ ವಿಶ್ವವನ್ನೇ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಚಿಂತನೆ ಮಾಡುವ ಮತ್ತು ತನ್ನ ಕಾವ್ಯ ನಿರ್ಮಿತಿಯಲ್ಲಿ ಹುದುವಾಗಿಸಿ ಅಭಿವ್ಯಕ್ತಿಯಲ್ಲಿ ಹೊರಪಡಿಸುವ ವಿಶ್ವಪ್ರಜ್ಞೆ” (ಅದೇ. ಪು. ೫೧) ಎಂದು ವ್ಯಾಖ್ಯಾನಿಸುತ್ತಾರೆ.

ಈ ಪ್ರಜ್ಞೆಯನ್ನು ವಿರಾಟ್ ದರ್ಶನವೆಂದಾದರೂ ಕರೆಯೋಣ, ವಿಶ್ವಪ್ರಜ್ಞೆಯೆನ್ನೋಣ, ಲೋಕದೃಷ್ಟಿಯೆನ್ನೋಣ ಏನೇ ಹೆಸರಿಟ್ಟರೂ ಅದು ಲಕ್ಷಿಸುವ ದಿಕ್ಕುದಿಸೆಗಳು ಅನನ್ಯ ವಾಗುತ್ತವೆ. ಮುಗಳಿಯವರ ವಿಶ್ಲೇಷಣೆಯು ಬೇಂದ್ರೆಯವರ ಕಾವ್ಯದ – ಅಷ್ಟಾಗಿ ಚರ್ಚಿತ ವಲ್ಲದ ಹೊಸ ಮುಖವೊಂದರ ಪರಿಚಯವನ್ನು ಮಾಡಿಸುತ್ತದೆ. ಈ ವಿಶ್ವದರ್ಶನವೆನ್ನುವುದು ಅಭಿವ್ಯಕ್ತಿಯ ನಿರ್ದಿಷ್ಟ ಬಿಂದುವೊಂದರಲ್ಲಿ ಆಧ್ಯಾತ್ಮಿಕತೆಯೊಂದಿಗೆ ಲೀನವಾಗುತ್ತ ದೆಂಬುದನ್ನೂ ಅವರು ಸೂಚಿಸುತ್ತಾರೆ. ಇಲ್ಲಿ, ಬುದ್ದಿ – ಭಾವಗಳ ಸಾಂಗತ್ಯ, ಬೇಂದ್ರೆಯವರ ‘ಜಾಯಮಾನ ಮತ್ತು ಮನೋಧರ್ಮ’ಗಳಲ್ಲಿ ಸ್ಥಾಯಿಯಾಗಿರುವ ಭೂಮಿ ಕಲ್ಪನೆ, ವಿಶ್ವಪ್ರಜ್ಞೆಯ ಆಳ – ಅಗಳಗಳೆಲ್ಲವನ್ನೂ ಮುಗಳಿಯವರು ಪದರ ಪದರವಾಗಿ ಬಿಡಿಸಿ ನೋಡುತ್ತಾರೆ.

ಅವರ ಹೇಳಿಕೆಗಳಲ್ಲಿರುವ ಕೆಲವೊಂದು ವಿಶೇಷಣಗಳನ್ನು ಹೊರತುಪಡಿಸಿದರೂ, ಕವಿ ಪ್ರತಿಭೆಯ ತೀರಾ ವಿಭಿನ್ನವಾದ, ವಿಶಿಷ್ಟವಾದ, ಕಾಲ-ದೇಶ ನಿರಪೇಕ್ಷವೂ ಆದ ಅಭಿವ್ಯಕ್ತಿ ಕ್ರಮವೊಂದನ್ನು ಇಲ್ಲಿ ಅಲಕ್ಷಿಸುವಂತಿಲ್ಲ. ಲೌಕಿಕ-ಪಾರಲೌಕಿಕಗಳ ಸಮ್ಮಿಶ್ರಣದ ಸಾಧಕ ರಾಗಿ ಬೇಂದ್ರೆಯವರನ್ನು ಗುರುತಿಸುವ ಈ ದೃಷ್ಟಿಯು ವಿನೂತನವಾಗಿದೆ.

“ಕನ್ನಡ ಸಾಹಿತ್ಯವನ್ನು ಆಧುನಿಕ ದೃಷ್ಟಿಯಿಂದ ವ್ಯಾಸಂಗ ಮಾಡಬೇಕೆನ್ನುವವರಿಗೆ ಅವಶ್ಯವೆಂದು ತೋರುವ ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವಿವೇಚನೆ ಒಂದು ಸಮಗ್ರವಾದ ಗ್ರಂಥ ರೂಪದಲ್ಲಿ ದೊರೆಯಬೇಕಿತ್ತು… ಅದನ್ನು ಪೂರೈಸುವ ಮನೀಷೆಯಿಂದ, “ಕನ್ನಡ ಸಾಹಿತ್ಯ ಚರಿತ್ರೆ” ಎಂಬ ಗ್ರಂಥವನ್ನು ಬರೆದು ಕನ್ನಡಗರಿಗೆ ಇಲ್ಲಿ ಅರ್ಪಿಸುತ್ತಿದ್ದೇನೆ” (ಕನ್ನಡ ಸಾಹಿತ್ಯ ಚರಿತ್ರೆ, ಮುನ್ನುಡಿ, ಪು. ೫) ಎಂದು ಮುಗಳಿಯವರೇ ಹೇಳಿರುವ ‘ಕನ್ನಡ ಸಾಹಿತ್ಯ ಚರಿತ್ರೆ’ಯು ಈ ಮಾದರಿಯ ಮೊದಲ ಆಕರಗ್ರಂಥವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೫೩ರಲ್ಲಿ ಮೊದಲು ಪ್ರಕಟವಾದ ಈ ಕೃತಿಯು ಅನಂತರ ಹಲವಾರು ಮರುಮುದ್ರಣಗಳನ್ನು ಕಂಡಿದೆ. ೧೯೯೮ರಲ್ಲಿ ಇದರ, ಹತ್ತನೆಯ ಪರಿಷ್ಕೃತ ಆವೃತ್ತಿಯು ಪ್ರಕಟವಾಗಿದೆ.

ಕನ್ನಡ ಭಾಷೆ – ಸಾಹಿತ್ಯಗಳ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಗಂಭೀರವಾದ ಕೊರತೆ ಯೊಂದನ್ನು ತುಂಬಿಕೊಡುವ ಪ್ರಯತ್ನವನ್ನು ಈ ಕೃತಿಯು ಮಾಡಿದೆ. ಇದರಲ್ಲಿ, ಕನ್ನಡ ಸಾಹಿತ್ಯದ ಉದಯ ಕಾಲದಿಂದ ಆರಂಭಿಸಿ, ಮುದ್ದಣನವರೆಗಿನ ಕವಿ – ಕಾವ್ಯ ಚರಿತ್ರೆಯನ್ನು ಮುಗಳಿಯವರು ಸಂಗ್ರಹಿಸಿದ್ದಾರೆ.

ಸಾಹಿತ್ಯ ಚರಿತ್ರೆಯೊಂದಿಗೆ ವಿಮರ್ಶೆಯೂ ಈ ಕೃತಿಯ ಆಸಕ್ತಿಗಳಲ್ಲಿ ಒಂದಾಗಿದೆ. ಈ  ಅಂಶವು ಕಾವ್ಯಾಭ್ಯಾಸಗಳ ದೃಷ್ಟಿಯಿಂದ ಮಹತ್ವದ್ದೆನಿಸುತ್ತದೆ. ಉದಾಹರಣೆಗೆ, ಪೊನ್ನನ ‘ಶಾಂತಿ ಪುರಾಣ’ ಬಗೆಗೆ ಬರೆಯುತ್ತ ಮುಗಳಿಯವರು,

“ಶಾಂತಿ ಪುರಾಣದಲ್ಲಿ ವಸ್ತುರಚನೆಯು ಸರ್ವಸಾಮಾನ್ಯವಾಗಿದ್ದರೂ ಅದರ ವರ್ಣನೆ ಗಳಲ್ಲಿ ಸಾಮಯಿಕತೆಯ ಮೋಡದೊಡಲಿನಲ್ಲಿ ಆಗಾಗ ಮಿಂಚುವ ಕಲ್ಪಕತೆಯಿದೆ. ಪ್ರಸನ್ನತೆಯಿದೆ. ಮೃದು ಬಂಧವಿದೆ. … ಈ ಪುರಾಣದಲ್ಲಿಯ ಶಾಸ್ತ್ರ-ಸಂಪ್ರದಾಯ ಜಡವಾದ ಭಾಗಗಳನ್ನು ಓದುವಾಗ ಬರುವ ಬೇಸರವನ್ನು ಅವು ಕಳೆಯುತ್ತವೆ (ಅದೇ. ಪು. ೧೦೨) ಹತ್ತನೆಯ ಆವೃತ್ತಿ) ಎಂಬುದಾಗಿ ಅವನ ಕಾವ್ಯದ ಗುಣ-ಮಿತಿಗಳೆರಡನ್ನೂ ಸೂಚಿಸುತ್ತಾರೆ. ಸ್ವತಂದ ವಿವೇಚನೆಗಳೊಂದಿಗೆ ಅವರು ಇತರ ವಿಮರ್ಶಕರ ಅಭಿಪ್ರಾಯಗಳನ್ನೂ ಇಲ್ಲಿ ಸಂಗ್ರಹಿಸಿದ್ದಾರೆ.

“….. ಆ ಯುಗದಲ್ಲಿ ಬರುವ ಗ್ರಂಥಕಾರರ ಮತ್ತು ಗ್ರಂಥಗಳ ಸಂಗ್ರಹ ವಿಮರ್ಶೆಯನ್ನು ಬರೆಯುವ ಪ್ರಯತ್ನ ಮಾಡಿದೆ. ಪ್ರಮುಖ ಗ್ರಂಥಕಾರರಲ್ಲಿಯೂ ಒಂದು ಎತ್ತರಕ್ಕೆ ಮುಟ್ಟಿ, ಕನ್ನಡದ ಎತ್ತರವನ್ನು ಹೆಚ್ಚಿಸಿರುವ ಎಂಟು ಹತ್ತು ಶ್ರೇಷ್ಠ ಪ್ರತಿಭಾಶಾಲಿಗಳನ್ನು ಕುರಿತು ಸಾಧ್ಯವಾದಷ್ಟು ವಿಮರ್ಶನ ಸಾಮಗ್ರಿಯನ್ನು ಒದಗಿಸುವ ಪ್ರಯತ್ನ ಮಾಡಿದ್ದೇನೆ” ಎಂದೂ, “ವಿಮರ್ಶಕರ ಅಭಿಪ್ರಾಯಗಳನ್ನು ಅವತರಿಸಿ, ಚರ್ಚಿಸಿ ಪ್ರಾಮಾಣಿಕವಾದ ನಿರ್ಣಯಗಳನ್ನು ನಿರೂಪಿಸಿದ್ದೇನೆ” ಎಂದೂ ಅವರು ಮೊದಲನೆಯ ಆವೃತ್ತಿಯ ಮುನ್ನುಡಿಯಲ್ಲಿಯೇ (ಪು. ೫) ಸ್ಪಷ್ಟಪಡಿಸಿದ್ದಾರೆ.

ಏನೇ ಇದ್ದರೂ, ‘ಸಾಹಿತ್ಯ ಚರಿತ್ರೆ’ಯ ಪ್ರಧಾನ ಲಕ್ಷ್ಯವು ಕನ್ನಡ ಸಾಹಿತ್ಯ ಹಾಗೂ ಅದರ ನಿರ್ಮಾತೃಗಳ ಇತಿಹಾಸ ಚಿತ್ರಣವೇ ಆಗಿದೆ. ಮಾತ್ರವಲ್ಲದೆ, ಆ ಕೃತಿಯು ವಿಶೇಷವಾದ, ಪ್ರತ್ಯೇಕ ಅಧ್ಯಯನವನ್ನು ಅಪೇಕ್ಷಿಸುತ್ತದೆ. ಈ ಕಾರಣಗಳಿಂದಾಗಿ, ಪ್ರಸ್ತುತ ಲೇಖನದಲ್ಲಿ ಅದನ್ನು ವಿವರವಾಗಿ ಚರ್ಚಿಸಲಾಗಿಲ್ಲ.

ಒಟ್ಟಿನಲ್ಲಿ, ಮುಗಳಿಯವರ ವಿಮರ್ಶನ ಪ್ರಜ್ಞೆಯಲ್ಲಿ ಅವರ ರಸಿಕ ದೃಷ್ಟಿ, ಕಲಾನ್ವೇಷಕ ವೃತ್ತಿ, ಸೌಂದರ್ಯಾನುಭೂತಿ, ಸಹೃದಯ ಸಂವೇದನೆ, ಗುಣಗೌರವಗಳ ಹಿತವಾದ ಸಂಯೋಜನೆಯಿದೆ ಎನ್ನಬಹುದು. ಈ ಪ್ರಕಾರದ ಬರೆಹಗಳಲ್ಲಿ ತೀಕ್ಷ್ಣವಾದ ಟೀಕೆಗಳಿಗಿಂತ, ಸಾಹಿತ್ಯಾನುಭವಗಳಿಗೆ, ಸದಭಿರುಚಿಯ ಮೌಲ್ಯಗ್ರಹಣ ವಿಧಾನಗಳಿಗೆ ಹೆಚ್ಚಿನ ಅನುವು ದೊರೆತಿದೆಯೆಂದೂ ಇಲ್ಲಿ ಉಲ್ಲೇಖಿಸಬಹುದು.

ಸಿದ್ಧಾಂತಗಳನ್ನು ದೇಶೀಯಗೊಳಿಸುವ, ಇಲ್ಲವೆ ದೇಶೀಯ ಚಿಂತನೆಯ ನೆಲೆಗಳಿಗೆ ಸಿದ್ಧಾಂತದ ತಳಹದಿಯನ್ನು ಕಟ್ಟಿಕೊಡಲು ಪ್ರಯತ್ನಿಸುವ ನಮಗೆ, ಮುಗಳಿಯವರ ನಿಲುವು-ಮನೋವೃತ್ತಿ ಹಾಗೂ ವಿಧಾನಗಳ ಮಹತ್ವವು ಮನವರಿಕೆಯಾಗಬೇಕು. ಅವರು ತಮ್ಮ ‘ಸಾಹಿತ್ಯ ಚರಿತ್ರೆ’ಯಲ್ಲಿ ಬಳಸುವ ಕೆಲವು ತೇಲು ಮಾತುಗಳು – “ಸತ್ಕೃತಿಯಾಗುವ ಹಾದಿಯಲ್ಲಿರುವ, ಮಹಾಕವಿ; ಸತ್ವದ ಸತ್ಕವಿ; ಮುಂತಾದ ಪ್ರಯೋಗಗಳೂ ಸೇರಿದಂತೆ – ಅನಂತರದ ಕಾಲಾವಧಿಯಲ್ಲಿ ಕೆಲವು ವಿಮರ್ಶಕರ ಗೇಲಿಗೆ ವಸ್ತುಗಳಾದುದನ್ನು ಗಮನಿಸಿ ಹೀಗೆ ಹೇಳಬೇಕಾಗಿದೆ. ಮೌಲ್ಯಮಾಪನವೆನ್ನುವುದು ಯಾವಾಗಲೂ ವ್ಯಕ್ತಿ ಸಾಪೇಕ್ಷ ವಾಗಿರುತ್ತದೆ; ಅದರಲ್ಲೂ ಅನ್ಯಾನ್ಯ ಬದ್ಧತೆಗಳಿರುವ ವ್ಯಕ್ತಿಗಳಿಗೆ ಅವುಗಳಿಂದಾಚೆಯ ಪ್ರಪಂಚದ ಬಗೆಗೆ ಅನಾಸಕ್ತಿಯಿರುತ್ತದೆ. ಮೌಲ್ಯಮಾಪನ ವ್ಯವಸ್ಥೆಯ ಶೈಥಿಲ್ಯಕ್ಕೆ ಇದು- ಆಂಶಿಕವಾಗಿ-ಕಾರಣವಾಗುತ್ತದೆ. ಆದರೆ ಮುಗಳಿಯವರು ಎಚ್ಚರದಿಂದಲೇ ಪದಗಳನ್ನೂ, ವಿಶೇಷಣಗಳನ್ನೂ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ, ಗೌಣವೆನಿಸುವ ಕೃತಿಯ ಹೊರ ಆವರಣದ ಬಗೆಗೆ ಟೀಕಿಸುವ ಕುಹಕತನವನ್ನು ಬದಿಗಿಟ್ಟು, ಅದರ ಹೂರಣವನ್ನು ಆಸ್ವಾದಿಸುವ ಆರೋಗ್ಯಕರವಾದ, ಜಾಗರೂಕತೆಯ ಮರುಪರಿಶೀಲನೆಯೊಂದು ನಡೆಯ ಬೇಕಾಗಿದೆ.

ಈ ಅಭ್ಯಾಸದ ಫಲಿತವಾಗಿ, ಮುಗಳಿಯವರು, ಇಪ್ಪತ್ತನೆಯ ಶತಮಾನವು ಕಂಡ, ಮಹತ್ವದ ಚೈತನ್ಯಗಳಲ್ಲಿ ಒಬ್ಬರೆಂದು ನಿರ್ವಿವಾದವಾಗಿ ಹೇಳಬಹುದು. ಅವರು ಅಲ್ಲಲ್ಲಿ ಸೂಚಿಸಿರುವ ಅಧ್ಯಯನಗಳ ಬೇರೆ ಬೇರೆ ಸಾಧ್ಯತೆಗಳನ್ನು ಬಳಸಿಕೊಳ್ಳುವುದು, ಕನ್ನಡ ಭಾಷೆ – ಸಾಹಿತ್ಯಗಳ ದುರ್ಬಲ ಅಂಗಗಳನ್ನು ಗುರುತಿಸಿ, ಯುಕ್ತ ಪೋಷಕ ದ್ರವ್ಯಗಳನ್ನು ಪೂರೈಸಿ ಅವುಗಳನ್ನು ಗಟ್ಟಿಗೊಳಿಸುವುದು ಅವರ ಸ್ಮೃತಿಗೆ ಸಲ್ಲಿಸಬಹುದಾದ ಗೌರವ; ತಮ್ಮ ಬದುಕಿನುದ್ದಕ್ಕೂ ಅವರು ಸ್ಪಂದಿಸುತ್ತಿದ್ದ ಕನ್ನಡ ಪರ ಕಾಳಜಿಗಳಿಗೆ ಯೋಗ್ಯವಾದ ಸತ್ಕಾರ – ಪುರಸ್ಕಾರ.