ಜನಾಂಗವೊಂದರ ಸಾಂಸ್ಕೃತಿಕ ಸೊತ್ತಾಗಿ ಸಾಹಿತ್ಯಕ್ಕೆ ಅನನ್ಯವಾದ ಮಹತ್ವವಿದೆ. ಸಮುದಾಯದ ಸದಸ್ಯನಾಗಿರುತ್ತ ವ್ಯಕ್ತಿಯು ಗಳಿಸಿದ ಸ್ಮೃತಿಯು ಅತೀತದೊಂದಿಗಿನ ಸಂವಾದಗಳ ಸ್ಮರಣಾನುಭವಗಳ, ಆಚರಣ ಸಂಹಿತೆಗಳೊಂದಿಗಿನ ವ್ಯವಹಾರಗಳ ಆಯ್ದ ಭಾಗಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಸಂಪರ್ಕಾಧಿಕಾರವೂ ಅದಕ್ಕಿದೆ. ಹಾಗೆ ನೋಡಿದರೆ, ಸ್ವಸ್ಥ ಮನುಷ್ಯನ ಮನಸ್ಸಿನಾಳದಲ್ಲಿ ಆರೋಗ್ಯಕರವಾದ ಅತೃಪ್ತಿಯು ಸದಾ ಒಸರುತ್ತಲೇ ಇರುತ್ತದೆ. ಹೀಗಾಗಿಯೇ ಆತ ಹೊಸ ಶೋಧಗಳಲ್ಲಿ ಆಸಕ್ತನಾಗಿಯೇ ಇರುತ್ತಾನೆ. ನಾಗರಿಕತೆಯ ದೀರ್ಘಯಾನದ ಉದ್ದಕ್ಕೂ ಅಸಂಖ್ಯ, ಅನಿರೀಕ್ಷಿತ ಸವಾಲು ಗಳಿಗೆ, ಅಪರಿಮಿತವಾದ ವೈಚಾರಿಕ ಒರಸುಗಳಿಗೆ ಉತ್ತರಿಸುತ್ತ ಆತ ಶಕ್ತಿ ಸಂಚಯನ ನಡೆಸಿದ ರೀತಿಯೂ ರೋಚಕವಾದುದೇ ಆಗಿದೆ. ಭೂಮಿಯ ಗುರುತ್ವಾಕರ್ಷಣೆಯನ್ನು ಮೀರುವ ಬಾಹ್ಯಾಕಾಶ ಪರ್ಯಟನಕ್ಕಾಗಲಿ, ಭೂಗರ್ಭದಾಳದ ಅನ್ವೇಷಣೆಗಾಗಲಿ ಸಾಗರ ದೊಡಲಿನ ಜೀವ ಜಗತ್ತಿನೊಡನಾಟಕ್ಕಾಗಲಿ ಅವನು ತನ್ನ ಚೇತನವನ್ನು ಸನ್ನಾಹಗೊಳಿಸಿ ಕೊಂಡಿರುತ್ತಾನೆ. ಪ್ರಾಕೃತಿಕವಾದ, ದೈಹಿಕ ಮಿತಿ-ದೌರ್ಬಲ್ಯಗಳನ್ನು ಲೆಕ್ಕಕ್ಕೇ ತಾರದೆ ಕೇವಲ ಬುದ್ದಿ ಬಲದಿಂದ ಸೃಷ್ಟಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ ಆತ, ಕಾಲವು ಎವೆ ಮಿಟುಕಿಸುವಷ್ಟರಲ್ಲಿ ಬಳೆದ ಬಗೆಯೂ ಅಗಾಧವಾಗಿದೆ.

ಈ ಬೆಳವಣಿಗೆಯ ಆವೃತ್ತಿಗಳಲ್ಲಿ, ಸೋಲು-ಗೆಲವುಗಳ ತೂಗುಮಂಚದಲ್ಲಿ ಉಯ್ಯಲೆ ಯಾಡುತ್ತ ವ್ಯಕ್ತಿಯ ದೃಷ್ಟಿಯು ಹರಿತವಾಗುವ, ಎಲ್ಲ ಮೇರೆಗಳನ್ನು ಉಲ್ಲಂಘಿಸುವ ವಿಸ್ತರಣೆಯ ಕ್ರಮವನ್ನು ಕಾಣುತ್ತೇವೆ. ಈ ಪ್ರಜ್ಞೆಯು ತನ್ನ ಸೂಕ್ಷ್ಮಕ್ಷಮತೆಯ ಕ್ಷಣವೊಂದರಲ್ಲಿ ಸ್ವಾಭಿಮುಖವಾಗುತ್ತದೆ. ಸ್ವಂತದ ಪರಿಸರದಲ್ಲಿ ಸಂಸ್ಕೃತಿಯಲ್ಲಿ, ಭಾಷೆಯಲ್ಲಿ, ಕಾಲವನ್ನು ಮೀರುವ ವಿಧಾನದಲ್ಲಿ, ಕಲೆಯ ಕಟ್ಟುವಿಕೆಯಲ್ಲಿ, ಮೌಲ್ಯ ಹಾಗೂ ನೈತಿಕ ಸಂವಿಧಾನಗಳಲ್ಲಿ ಇರುವ ಕುಂದುಕೊರತೆಗಳನ್ನು ಆಸ್ಥೆಯಿಂದ ಗಮನಿಸುತ್ತದೆ. ಈ ‘ನಿದಾನ’ದ ಪರಿಣಾಮವಾದ ತಿಳಿವನ್ನು ಆಧರಿಸಿ, ಪೋಷಕಾಂಶಗಳನ್ನು ಪೂರೈಸುವ, ಶೂನ್ಯಗಳಿಂದ ನಿವೃತ್ತಿ ಪಡೆಯುವ ಪ್ರಯತ್ನಗಳಲ್ಲಿ ಒಂದಾಗಿ ವ್ಯಕ್ತಿಯ ಸಾಹಿತ್ಯಿಕ ಅಭಿವ್ಯಕ್ತಿಯು ಅಸ್ತಿತ್ವವನ್ನು ಪಡೆಯುತ್ತದೆ.

ಈ ವಿನ್ಯಾಸದ ಒಂದು ವಿಶಿಷ್ಟ ಮಾದರಿಯಾಗಿ ಶ್ರೀ ಯಶವಂತ ಚಿತ್ತಾಲರ ಕಥನ ಸಾಹಿತ್ಯವನ್ನು ಪರಿಗಣಿಸಬಹುದಾಗಿದೆ.

ಚಿತ್ತಾಲರ ಸಾಹಿತ್ಯದ ಮೂಲ ದ್ರವ್ಯವೇ ಪ್ರೀತಿಯಾಗಿದೆ. ಆ ಕಚ್ಚಾ ವಸ್ತುವಿನ ಮೇಲೆ ತಮ್ಮೆಲ್ಲ ಸಾಹಿತ್ಯಿಕ ಸಂವೇದನೆಗಳ ಹಬೆಯನ್ನು ಹಾಯಿಸುತ್ತ, ಬದುಕಿನ ಕಾಳಜಿಗಳಿಗೆ, ಆಕರ್ಷಣೆಗಳಿಗೆ ಸವೆತವಿರದ ಸ್ವಭಾವಗಳಿಗೆ ಒಡ್ಡು ಕಟ್ಟುವವರು, ಅವರು. ಈ ಕೃಷಿಯಲ್ಲಿ ತನ್ಮಯರೂ, ತತ್ಪರರೂ ಆಗಿ, ಅದರ ಉತ್ಪಾದಕತ್ವವನ್ನೆಲ್ಲ ಒಳಮನೆಯ ಭದ್ರ ಬೊಕ್ಕಸದೊಳಗೆ ಬರಮಾಡಿಕೊಂಡವರು. ತಮ್ಮ ಸೃಷ್ಟಿಕಾತರ ಕ್ಷಣಗಳಲ್ಲಿ, ಆ ನಿಧಿಯನ್ನು ವಿಧ್ಯುಕ್ತ್ಯವಾಗಿ, ಚಾಕಚಕ್ಯತೆಯಿಂದ ಬಳಸಿಕೊಳ್ಳುತ್ತ, ಬರಿಯ ಗೆರೆಗಳ ಸ್ಥೂಲ ನಕ್ಷೆಯ ಮೇಲೆ ಕಂಠವನ್ನೋ, ಕುಂಚವನ್ನೋ, ಚಾಣವನ್ನೋ, ಪ್ರತಿಭೆಯು ನಿರ್ದೇಶಿಸಿದಂತೆ ವಿನಿಯೋಗಿಸುವ ಕಲಾವಿದನಂತೆ, ಪೂರ್ಣಕೃತಿಯ ಶಿಲ್ಪ ಸೌಂದರ್ಯಕ್ಕೆ ಪ್ರಕಟಣ ಸೌಲಭ್ಯವನ್ನಿತ್ತವರು.

ಈ ಪ್ರಸರಣ ಗತಿಯಲ್ಲಿ ಪ್ರಯಾಣ – ಪ್ರವಾಸಗಳ ಪರಿಕಲ್ಪನೆಯನ್ನು ಅವರು ತುಂಬ ಸಾಂಕೇತಿಕವಾಗಿ, ಸಮರ್ಪಕವಾಗಿ ದುಡಿತಕ್ಕೆ ಹಚ್ಚುತ್ತಾರೆ. ಹಾಗೆ ನೋಡಿದರೆ, ಈ ಪಯಣವೆನ್ನುವುದು ಭಾರತೀಯ ಸಾಹಿತ್ಯದ ಆದಿಮ ಪ್ರತಿಮೆಗಳಲ್ಲಿ ಒಂದಾಗಿದೆಯೆನ್ನಬೇಕು. ಅರ್ಜುನನ ತೀರ್ಥಯಾತ್ರೆಯಾಗಲಿ, ರಾಮಲಕ್ಷ್ಮಣರ ವನ ಗಮನವಾಗಲಿ, ಪಾಂಡವರ ಮಹಾಪ್ರಸ್ಥಾನವಾಗಲಿ ಈ ಸಂಕೇತದ ಅನ್ಯಾನ್ಯ ಅರ್ಥಾಂತರಗಳನ್ನು ಪರಿಶೀಲಿಸುವವುಗಳೇ ಆಗಿವೆ. ಇದು ಇಡಿಯ ಬದುಕಿನ ಸ್ಥಿತ್ಯಂತರಗಳ ಸೂಚೀಪಟವಾಗಿರಬಹುದು. ಪ್ರತಿ ಕ್ಷಣವೂ ಹೊಸ ನಿರ್ಮಿತಿಗಳನ್ನು ಕಾಣುತ್ತಲೇ ಇರುವ ಮನಸ್ಸಿನ ಚರ್ಯೆಗಳಿರಬಹುದು. ಸ್ವಸ್ಥವಾದ, ಆತಂಕರಹಿತವಾದ ರಕ್ಷಿತಾವರಣದ ತಡೆಗೋಡೆಗಳೆಲ್ಲವೂ ನಿಮಿಷಾರ್ಧದಲ್ಲಿ ಜರಿದು ಬಿದ್ದು ಭೀತಿ, ಉದ್ವೇಗಗಳ ಕಮರಿಗೆ ಮಗುಚಿಕೊಳ್ಳುವ ಪಲ್ಲಟವೂ ಇರಬಹುದು. ಒಂದು ಪರಿಸರದಿಂದ ಇನ್ನೊಂದಕ್ಕೆ ಸಾಗುವ ಸಾರಿಗೆ ವ್ಯವಸ್ಥೆಯೂ ಆಗಿರಬಹುದು. ಇವೆಲ್ಲವೂ ಒಟ್ಟಾಗಿ ಬದಲಾಯಿಸುವುದು ವ್ಯಕ್ತಿತ್ವದೊಳಗಿನ ಪರ್ಯಾವರಣವನ್ನೇ ಎನ್ನುವ ಅಂಶವನ್ನು ಅನುಲಕ್ಷಿಸಿ, ಇವುಗಳನ್ನು ‘ಭಾವಯಾನ’ವೆಂದು ಕರೆಯಬಹುದು.

ಇದಕ್ಕೆ ಚಿತ್ತಾಲರ ಕಥೆಯಿಂದಲೇ ಹೆಕ್ಕಿದ, ವಾಚ್ಯವಾದ ಒಂದು ನಿದರ್ಶನವನ್ನು ಕೊಡಬಹುದು. ‘ಸೆರೆ’ ಕಥೆಯ ನಾಯಕ, ಬಯಲಿನ ಸ್ವಚ್ಛ ಗಾಳಿಯಲ್ಲಿ ವಿಹಾರ ಹೊರಟವನು; ಜೀವನದೊಳಗಿನ ಬೆರಗುಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳುವ ತಂದ್ರಿ ಯಲ್ಲಿದ್ದವನು. ವಾಸ ಬಿಟ್ಟ ಮನೆಯ ಹೊಸಲು ದಾಟಿ ಒಳಗೆ ಅಡಿಯಿಟ್ಟದ್ದೇ ಅವನ ಭಾವ ಪ್ರಪಂಚವು ಹಠಾತ್ತಾಗಿ ಬದಲಾಗಿ ಬಿಡುತ್ತದೆ. ಹೊಕ್ಕಳ ಸುತ್ತಿನ ನಡುಕ, ಧೈರ್ಯದ  ತಳಪಾಯವೇ ಕುಸಿದ ಭಯ, ಅಹಂಕಾರದ ಮೇಲಾಗಬಹುದಾದ ಪ್ರಹಾರಗಳ ಬಗೆಗಿನ ಹೆದರಿಕೆ, ನೈಸರ್ಗಿಕವಾದ ಸೆಳೆತದೆದುರು ಸೋಲಬಹುದೆನ್ನುವ ಅಳುಕು, ಆ ಶರಣಗತಿಯಲ್ಲೂ ಸೌಖ್ಯವಿರಬಹುದೇ ಹೇಗೆನ್ನುವ ಸುಪ್ತವಾದ ಹಂಬಲ. ಎಷ್ಟೆಲ್ಲ ಸಂಕೀರ್ಣವಾದ ಜಾಲ! ಈ ಜೇಡನಿಗೆ ಬಲೆ ಹೆಣೆಯಲು ಹೊರಗಿನ ಕತ್ತಲಿನಷ್ಟೇ ಒಳಗಿನ ಅವಕಾಶವೂ ಕಾರಣವೆನಿಸುವುದಿಲ್ಲವೇ?

ಅಲ್ಪ ಸ್ವಲ್ಪ ಅರ್ಥ ವ್ಯತ್ಯಾಸಗಳಿರುವ ಪ್ರವಾಸ, ಪ್ರಯಾಣ, ಯಾತ್ರೆಗಳೆಲ್ಲವೂ ಪರಿಣಾಮತಃ ಒಳ ಹೊರಗಿನ ಪರಿಸರಗಳ ಮಾರ್ಪಾಡುಗಳನ್ನು ಒಪ್ಪಿಕೊಳ್ಳುವಂಥವೇ ಆಗಿವೆ. ಭೂಗುಣ, ಹವಾಮಾನ, ಪ್ರಾಕೃತಿಕ ಸಂರಚನೆಗಳಿಗೆಲ್ಲ ಇಲ್ಲಿ ನಿರ್ಣಾಯಕವೆನಿಸುವ ಚಲನಶೀಲವೂ ತಾನಾಗಿ ದೊರೆಯುತ್ತದೆ. ಅವುಗಳ ಲಕ್ಷ್ಯ, ಉದ್ದೇಶ, ಪರಿಕ್ರಮಗಳೆಲ್ಲವುಗಳ ಸಂದರ್ಭಗಳಲ್ಲೂ ಸ್ಥೂಲ – ಸೂಕ್ಷ್ಮ ವ್ಯಾಪಾರಾಂತರಗಳು ನಡೆಯುತ್ತಲೇ ಇರುತ್ತವೆ. ಈ ಎಲ್ಲ ನೆಲೆಗಳನ್ನೂ ಬಹು ತಾಳ್ಮೆಯಿಂದ, ನಿಖರವಾದ ಸೂಚಕಗಳ ನೆರವಿನೊಂದಿಗೆ ಪರಿಶೀಲಿಸಿದವರು, ನಮ್ಮ ಚಿತ್ತಾಲರು.

ಈ ‘ಯಾನ’ಕ್ಕೆ ಅವರು ಆಶ್ರಯಿಸುವ ವ್ಯವಸ್ಥೆಯೂ ತುಂಬ ವೈವಿಧ್ಯವುಳ್ಳದ್ದಾಗಿದೆ, ಸಂದರ್ಭ ಸಂವಾದಿಯಾದುದಾಗಿದೆ. ತೀರಾ ನಿಧಾನಗತಿಯ ಕಾಲ್ನಡೆಯಿಂದ ತೊಡಗಿ. ಅಂತರ ಗ್ರಹ ಯಾತ್ರೆಗೆ ಸಿದ್ಧವಾಗುವ ಕ್ಷಿಪಣೆಯವರೆಗೂ ಅದರ ಹರಹಿದೆ. ಈ ಅನಿಸಿಕೆಯನ್ನು ಸ್ವಲ್ಪ ಸಾವಧಾನವಾಗಿ ಗ್ರಹಿಸಬೇಕಾದ ಅಗತ್ಯವಿದೆ. ನಡಿಗೆಯು, ವೇಗದ ದೃಷ್ಟಿಯಿಂದ ಅತ್ಯಂತ ಮಂದವಾದುದು ಆದರೆ, ಪರ್ಯಾವರಣದಲ್ಲಿ ಆಗುವ ಪ್ರತಿ ಪರಿವರ್ತನೆಯನ್ನೂ ಅಧಿಕ ಪ್ರಮಾಣದಲ್ಲಿ ಹಿಡಿದಿಡಬಲ್ಲ ಸೌಲಭ್ಯಗಳು ಅದಕ್ಕಿವೆ. ಇದು ಬದಲಾವಣೆಯ ಪ್ರತಿ ಹಂತದಲ್ಲೂ ಸ್ವಲ್ಪ ನಿಧಾನಿಸಿ, ಸಹೃದಯರನ್ನು ಸನ್ನದ್ಧಗೊಳಿಸಿ, ಹೊಸ ಪರಿಸರದ ಶೈತ್ಯ – ಉಷ್ಣಗಳು, ವೈಪರೀತ್ಯಗಳು, ವೈಲಕ್ಷಣ್ಯಗಳನ್ನೆಲ್ಲ ಒಂದೊಂದಾಗಿ ಗುರುತು ಮಾಡಿಕೊಡುತ್ತ, ಆ ಭಾವದ ಆವಾಸಸ್ಥಾನಕ್ಕೆ ತಲುಪಿಸುವ ಸರಳವಾದ, ನಿರಾಗ್ರಹವಾದ ಕ್ರಮವಾಗಿದೆ. ಈ ವರ್ಣಪಟಲ (Speetrum)ದ ಇನ್ನೊಂದು ತುದಿಯಲ್ಲಿ, ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಒಂದು ಭೂಖಂಡದಿಂದ ಇನ್ನೊಂದಕ್ಕೆ ಅನಾಮತ್ತಾಗಿ ಎತ್ತಿ ಕೊಂಡೊಯ್ಯಬಲ್ಲ, ಸೃಜನಶೀಲತೆಯ ಎದುರಿಲ್ಲದ ಶಕ್ತಿ – ಸಾಮರ್ಥ್ಯ – ಸಾಧ್ಯತೆಗಳಿವೆ. ಇಲ್ಲಿ ಓದುಗ, ಅನಿರೀಕ್ಷಿತವಾದ ತಿರುವನ್ನು ಹಾಯುವ, ವೇಗ, ರಭಸ, ರೋಮಾಂಚನ ಗಳೆಲ್ಲವನ್ನೂ ಅನುಭವಿಸುತ್ತಾನೆ. ಊಹೆಗೂ ಎಟುಕಲಾರದಂತೆ ರೂಪಾಂತರಿಸಿಕೊಂಡ ಭಾವಲೋಕದ ಹೊರಮೈ – ಒಳಮನಸ್ಸುಗಳ ಬೇಧದ, ಸಂಕೀರ್ಣತೆಯ, ಕೌತುಕದ ಸಮೀಕ್ಷೆಯಲ್ಲಿ ಮುಳುಗಿ ಬಿಡುತ್ತಾನೆ. ಈ ಎಲ್ಲ ಬದಿಗಳನ್ನೂ ಚಿತ್ತಾಲರು ತಮಗೆ ಸಹಜ ವಾದ, ಲೀಲಾಜಾಲವಾದ ಅಭಿವ್ಯಕ್ತಿ ಕ್ರಮದ ಹಿನ್ನೆಲೆಯಲ್ಲಿ ಪರಿಗಣಿಸುತ್ತಾ ಹೋಗುತ್ತಾರೆ.

ಹೀಗೆ ಹಸಿರು ನಿಶಾನೆ ಪಡೆದ ಯಾನವೆಂದೂ ನಿಲುಗಡೆಗೆ ಬಾರದಂತೆ ನೋಡಿಕೊಳ್ಳುವುದು ಅವರ ಬರೆಹಗಳ ಪ್ರಮುಖ ಗುಣಗಳಲ್ಲಿ ಒಂದಾಗಿ ಕಂಡು ಬರುತ್ತದೆ. ಇನ್ನೇನು, ಮುಗಿತಾಯದಂಚು ಸಿಕ್ಕಿಯೇ ಬಿಟ್ಟಿತೆನ್ನುವಾಗಲೇ ವಿಚಿತ್ರವಾದ ದಾರಿಯ ಒಂದು ಹೊರಳು. ಏರುವ ಕ್ರಿಯೆಗೇ ಸವಾಲೆಸೆಯುವ ಹಾವು ಹಾದಿ, ನಿಭಾಯಿಸುವುದು ಸಾಧ್ಯವೇ ಆಗ ಲಾರದೇನೋ ಎನ್ನುವ ಸಂಶಯ ಹುಟ್ಟಿಸುವ ಪ್ರಪಾತಗಳೆಲ್ಲ ಪ್ರವಾಸದ ಸಿದ್ಧ ನಕಾಶೆಯನ್ನು ಚದುರಿಸಿ, ಬೇರೆಯೇ ಚೌಕಟ್ಟಿನೊಳಗೆ ಸ್ಥಾನಾಂತರಿಸಿ ಇಟ್ಟಿರುತ್ತವೆ. ಹೀಗೆ ಪೂರ್ಣ ಪ್ರಮಾಣದ ದರ್ಶನ ನೀಡಿದ ಆಭಾಸವನ್ನು ಸೃಷ್ಟಿಸುತ್ತ, ಹುಡುಕಾಟವನ್ನೂ ಮುಗಿದಿರದ ಚೋದ್ಯಕ್ಕೆ ಸಮ್ಮುಖಗೊಳಿಸುವ ‘ಚಿತ್ತಾಲತನ’ವಂತೂ ಆಪ್ಯಾಯಮಾನವಾದುದೇ ಆಗಿದೆ. ಈ ಕಣ್ಣುಮುಚ್ಚಾಲೆಯಾಟದಲ್ಲಿ ತೊಡಗಿಕೊಂಡ ಚಿತ್ತಕ್ಕಂತೂ ಬದುಕಿನ ವೈರುಧ್ಯಗಳ, ಸೂಕ್ಷ್ಮಾತಿಸೂಕ್ಷ್ಮವಾದ ಬಂಡುಕೋರ ನೆಲೆಗಳ, ದಾಳಿ-ಪ್ರತಿದಾಳಿಗಳ ಕವಾಯತನ್ನು ಸುಮ್ಮನೆ ನೋಡುತ್ತ, ಆಗಾಗ ಕಣ್ಣುಗಳಿಗೆ ಕೈಗಳ ಮುಚ್ಚಳ ಹಾಕಿ ಹೇಳದಿರುವವುಗಳನ್ನು ಕಲ್ಪಿಸಿ ಕೊಳ್ಳುತ್ತ, ಸೃಷ್ಟಿಶೀಲ ಮನಸ್ಸಿನೊಡನಾಟದಿಂದ ಸಿಗುವ ಅನುಭವದ ಸೊಗಸು, ವಾಕ್ಯಾತೀತವೂ ಹೌದು.

ಇದರ ಇನ್ನೊಂದು ಹೊಡೆಯಲ್ಲಿ, ಚಿತ್ತಾಲರು ವಿಘಟಿಸುತ್ತಲೇ ಹೋಗುವ ಸಂಬಂಧಗಳ ಪಾರದರ್ಶಕ ಭಾಂಡವಿದೆ. ಇದರ ಅರ್ಥಗರ್ಭದಲ್ಲಿ, ದಿಗಿಲು ಹುಟ್ಟಿಸುವಷ್ಟು ಸಿಕ್ಕುಗಟ್ಟಿದ ನರಕೋಶಗಳಿವೆ. ಸ್ಥಿರವೆಂದು, ಸತ್ಯವೆಂದು ಬದುಕಿನ ಉದ್ದಕ್ಕೂ ನಂಬುತ್ತ ಬಂದ ಸಂಬಂಧವೊಂದು, ಅಡಿಪಾಯವನ್ನು ಕಳೆದುಕೊಂಡ ವಿವಶ ಸ್ಥಿತಿಯಲ್ಲಿ ಅವರು ಜೀವನದ ವಾಸ್ತವಗಳಿಗೆ ವ್ಯಾಖ್ಯಾನಗಳನ್ನು ಹುಡುಕುತ್ತಾರೆ. ಇದು, ಕಳೆದು ಹೋದ ಅಣ್ಣನ ನೆನಪಿನ ಬೆನ್ನಟ್ಟುವಿಕೆಯಲ್ಲಿ, ತಂದೆಯೆಂದುಕೊಂಡಿದ್ದ ವ್ಯಕ್ತಿ, ಯಾವ ಮುನ್ಸೂಚನೆಯೂ ಇಲ್ಲದೆ ‘ಯಾರೋ’ ಆಗಿ ಬಿಡುವುದರಲ್ಲಿ, ಮುಗ್ಧ ಮನಸ್ಸಿನ ಅಪಕಲ್ಪನೆಗಳು ನಿವಾರಣೆಯಾಗದೆ ಬಾಲಗ್ರಹಕ್ಕೆ ಬದ್ಧವಾಗುವ ದುರಂತದಲ್ಲಿ ಅರ್ಥ ಸಾಮೀಪ್ಯಕ್ಕಾಗಿ ತಡಕಾಡುತ್ತಲೇ ಇರುತ್ತದೆ. ಈ ತಲೆಬುಡವಿಲ್ಲದ ತಡಕಾಟದ ಮುಖಾಂತರ ಬದುಕಿನ ಎಷ್ಟೆಷ್ಟೋ ಅಸ್ಪಷ್ಟತೆಗಳಿಗೊಂದು ಖಚಿತ ಸ್ವರೂಪವನ್ನು ಕಲ್ಪಿಸುವ ಪ್ರಯತ್ನ ಚಿತ್ತಾಲರದು. ಈ ವಿನ್ಯಾಸಗಳ ಹೊದ್ದಿನಲ್ಲಿಯೇ ಅವರು ಬದುಕಿನಲ್ಲಿ ಸ್ಥಾಪಿತಗೊಳ್ಳುವ ಸಂಬಂಧಗಳ ಟೊಳ್ಳು-ಗಟ್ಟಿತನಗಳನ್ನೂ, ಸತ್ಯ-ಮಿಥ್ಯೆಗಳನ್ನೂ, ಅವುಗಳು ಇದ್ದಕ್ಕಿದ್ದಂತೆ ಇಲ್ಲವಾಗುವ ಪರಿಯನ್ನೂ ವಿಚಾರದ ಒರೆಗೆ ಹಚ್ಚುತ್ತಾರೆ. ಸಂಬಂಧವೊಂದರ ಕೊಂಡಿ ಕಡಿಯುವ ಕ್ಷಣವೇ ಹೊಸತೊಂದು ಕುಂಡಲ ಸೃಷ್ಟಿಗೊಳ್ಳುವ ಪ್ರಕ್ರಿಯೆಗೆ ಬೆನ್ನುಡಿಯನ್ನು ಬರೆಯುತ್ತಾರೆ.

ತಮ್ಮ ಕಥನ ಸಾಹಿತ್ಯದಲ್ಲಿ ಚಿತ್ತಾಲರು ಪ್ರಯೋಗಿಸುವ ‘ಕಾಲಯಾನ’ ತಂತ್ರವೂ ಅವರ ಸ್ವಂತಿಕೆಗೆ ಸಾಕ್ಷಿಯಾಗಿದೆ. ಸ್ವಸ್ಥ ಬದುಕಿನ ಸುಭಗ ನಡೆಯೂ, ವ್ಯಕ್ತಿಯಲ್ಲಿ ಅಸ್ವಾಸ್ಥ್ಯವನ್ನುಂಟು ಮಾಡಬಲ್ಲುದೆನ್ನುವ ಒಳನೋಟವನ್ನು ಆಶ್ರಯಿಸಿ, ಅವರು ಈ ಮಾದರಿಯನ್ನು ಶೋಧಿಸುತ್ತಾರೆ. ಯಾವ ಸವಾಲೂ ಇರದ ಸಮಸ್ಥಿತಿಯಲ್ಲಿ, ವ್ಯಕ್ತಿಯೊಳಗೆ ತನ್ನ ಭೂತಕಾಲಕ್ಕೆ ಪ್ರಯಾಣಿಸಬೇಕು. ಅಲ್ಲಿಯ ಪ್ರೇಕ್ಷಣೀಯ ಸ್ಥಾನಗಳನ್ನು ಸಂದರ್ಶಿಸ ಬೇಕು. ಕೆಲವೊಮ್ಮೆ ನಿಗೂಢ – ದಾರುಣವಾಗಿರಲೂಬಹುದಾದ ಆ ಅನುಭವ ಪ್ರಪಂಚವನ್ನು ಪ್ರವೇಶಿಸಬೇಕೆಂಬ ಹಂಬಲವು ಚಿಗುರೊಡೆಯುವ ಬಗೆಯನ್ನು ಅನ್ವೇಷಿಸಲು ಅವರು ಹೊರಡುತ್ತಾರೆ. ಈ ಕಾಲದ ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿಯುತ್ತ ಹೋಗುವ ಮನಸ್ಸು ಸಿಕ್ಕಿ ಹಾಕಿಕೊಳ್ಳುವ ಗೊಂದಲ, ಆ ನಿಬಿಡತೆಯಲ್ಲಿ ದಾರಿಯನ್ನೂ ಕಳೆದುಕೊಳ್ಳುವ ಅತಂತ್ರಾವಸ್ಥೆಗಳನ್ನು ಅವರು ಪರಿಣಾಮಕಾರಿಯಾಗಿ ವ್ಯಕ್ತಗೊಳಿಸುತ್ತ ಹೋಗುತ್ತಾರೆ. ಈ ಭೂತದ ಬಗಲಿನಲ್ಲಿರುವ ಅಪರಿಚಿತ ಜಗತ್ತನ್ನು ಕಾಣುವ ಸುಖ, ವಿಷಾದ, ವ್ಯಂಗ್ಯ, ತಳಮಳಗಳಿಗೆಲ್ಲ ಅವರ ಲೇಖನಿ ಹೊರ ಹರಿವನ್ನು ಕಲ್ಪಿಸುತ್ತದೆ. ನಮ್ಮ ನಿನ್ನೆಗಳೆಲ್ಲ ನಮಗೆ ಪರಿಚಿತವೆನ್ನುವ ಅಹಂಕಾರದ ಮೊಟ್ಟಯೊಡೆಯುವ ನಿರಾಶೆ-ಹತಾಶೆಗಳಿಗೆಲ್ಲ ಧ್ವನಿದಾನ ನೀಡುವ ರೀತಿಯಲ್ಲಿ, ವ್ಯಕ್ತಿ ವಿಶಿಷ್ಟವಾದ, ವಿಭಿನ್ನವಾದ ಅಭಿವ್ಯಕ್ತಿಯನ್ನು ನಾವು ಗುರುತಿಸಬಹುದು.

“ನಿನ್ನ ಬದುಕಿನ ಹಕ್ಕಿಗೊಂದೆ ಗೇಣಿನ ಪಯಣ, ಅವಸರಿಸು ಅದೊ ಹಕ್ಕಿ ಗರಿಕೆದರಿತು” ಎನ್ನುವ ಉಮರ್ ಖಯ್ಯಾಮನ ಸೂತ್ರ ವಾಕ್ಯದ ಪ್ರತಿಫಲನವನ್ನು – ಅದರೆಲ್ಲ ಪರ್ಯಾಯ ಗಳೊಡನೆ – ಚಿತ್ತಾಲರ ಬರೆಹಗಳಲ್ಲಿ ಕಾಣುತ್ತೇವೆ. ಸಮಗ್ರ ಬದುಕನ್ನೇ ಅನಿಯಂತ್ರಿತ, ಅವ್ಯವಸ್ಥಿತ, ಅಯೋಜಿತ ಪ್ರಯಾಣವಾಗಿ ಕಂಡವರಲ್ಲಿ ಇವರು ಮೊದಲಿಗರೂ ಅಲ್ಲ, ಕೊನೆಯವರೂ ಆಗಲಾರರು. ಸಾವಿನ ಬಗೆಗಿನ ಭಯ, ಕುತೂಹಲ, ಹಿಂಜರಿಕೆಗಳು ಒಂದಲ್ಲ ಒಂದು ಹಂತದಲ್ಲಿ ಎಲ್ಲರನ್ನೂ ಕಾಡುತ್ತವೆ. ಆದರೆ ‘ಪಯಣ’ದಂಥ ವಿಶಿಷ್ಟ ಕಥೆಯೊಂದನ್ನು ಮಾಧ್ಯಮವಾಗಿಟ್ಟುಕೊಳ್ಳುವ ಚಿತ್ತಾಲರು ಸಾವನ್ನು ಸ್ವೀಕರಿಸುವ ಮಾನಸಿಕ ಸನ್ನದ್ಧತೆಗಳನ್ನು ಒಂದೊಂದಾಗಿ ಗುರುತಿಸುತ್ತ ಹೋಗುವ ಬಗೆಯಲ್ಲಿ ಮಾತ್ರ ಅನನ್ಯತೆಯಿದೆ. ಒಂದು ರೀತಿಯಿಂದ, ಒಟ್ಟಾರೆಯಾದ ಬದುಕಿನ ಕ್ರಮದಲ್ಲಿಯೇ ಈ ಕೊನೆಯ ಸಂಪರ್ಕಕ್ಕಾಗಿ ನಮ್ಮನ್ನು ಸಿದ್ಧಪಡಿಸುವ ಉದ್ದೇಶವು ಕಂಡು ಬರುತ್ತದೆ. ಹಾಗಾಗಿಯೇ ನಾವು ಇಂದಿಗಿಂತ ಹೆಚ್ಚಾಗಿ ನಾಳೆಗಳಲ್ಲಿ ಬದುಕುವುದನ್ನು, ಕನಸುಗಳನ್ನು ಕಟ್ಟುವುದನ್ನು ಇಷ್ಟಪಡುತ್ತೇವೆ. ಅವುಗಳೆಲ್ಲವೂ ಶಮನಗೊಳ್ಳುವ, ಪೂರ್ವಸಿದ್ಧತೆಗಳ ಹಂಗು ತೊರೆದು ಸ್ವೇಚ್ಛೆಯಿಂದ ಬದುಕಿನಿಂದಾಚೆಗೆ ಪ್ರಯಾಣ ಹೊರಡುವ ಅಪೂರ್ವ ಮನಸ್ಥಿತಿಯನ್ನು ಈ ಕಥೆಯು ಎತ್ತಿ ಹಿಡಿಯುತ್ತದೆ. ‘ಜೀವವನು ಸಾವಿಗಣಿ ಮಾಡಿ ಬದುಕುವ ಚಿತ್ತವೃತ್ತಿಯನ್ನು ಪ್ರೋತ್ಸಾಹಿ ಸುತ್ತದೆ. ಇಂಥದೇ ಆಶಯವುಳ್ಳ ‘ಆಟ’ದಂತಹ ಕೃತಿಗಳನ್ನೂ ಚಿತ್ತಾಲರು ರಚಿಸಿದ್ದಾರೆ.

ಚಿತ್ತಾಲರು ಚಿತ್ರಿಸುವ ಈ ಬಗೆಯ ‘ಪ್ರವಾಸ ಕಥನ’ಗಳಿಗೆ ಇನ್ನೊಂದು ಮಹತ್ವದ ಮಗ್ಗುಲಿದೆ. ಭದ್ರ, ಸುರಕ್ಷಿತ, ಸೌಲಭ್ಯಯುಕ್ತ ನೆಲೆಯೊಂದನ್ನು ಅನಿವಾರ್ಯವಾಗಿ ಬಿಟ್ಟು, ಮುಂದೆ ಸರಿಯಲೇಬೇಕಾದ ಒತ್ತಡವನ್ನು ಇದು ಸೂಚಿಸುತ್ತದೆ. ಪ್ರಾಣಿ ಜಗತ್ತಿನ ಸಾದೃಶ್ಯವನ್ನು ಕೊಡುವುದಾದರೆ, ಕ್ರೂರ ಪ್ರಾಣಿಗಳ ಪಂಜ – ಹಲ್ಲುಗಳಾಗಲಿ, ಬೇಟೆಗಾರನ ಕತ್ತಿ-ಭಲ್ಲೆ-ಬಾಣಗಳಾಗಲಿ, ಪ್ರಕೃತಿಯ ವಿಕೋಪಗಳಾಗಲಿ ತಟ್ಟಲಾರವೆನ್ನುವ ಆಪ್ತ ಆಶ್ರಯ ತಾಣವು ಹಠಾತ್ತನೆ ಅಸ್ತಿತ್ವವನ್ನು ಕಳೆದುಕೊಳ್ಳುವ, ಆಶ್ರಿತನನ್ನು ಬಯಲಿನ ನಿರಾಶ್ರಯಕ್ಕೆ ದೂಡುವ ವಿಪರ್ಯಾಸವು ಇಲ್ಲಿ ಕಂಡು ಬರುತ್ತದೆ. ಚಿತ್ತಾಲರ “ಶಿಕಾರಿ” ಕಾದಂಬರಿಯಲ್ಲಿ ಈ ಪರಿಕ್ರಮವು ಸ್ಪಷ್ಟ ಸ್ವರೂಪವನ್ನು ಪಡೆಯುವುದನ್ನು ಕಾಣುತ್ತೇವೆ. ನಾಗಪ್ಪನ ಮನಸ್ಸು ಒಂದು ಭಾವಬಂಧವನ್ನು, ಅದರ ತಳ-ತಾಳಗಳನ್ನು ಕಂಡುಕೊಂಡು ಸ್ಥಿಮಿತಕ್ಕೆ ಬರು ತ್ತಿದ್ದಂತೆಯೇ, ಅಂತರ – ಬಾಹ್ಯ ಶಕ್ತಿಗಳಿಗೆ ಮಣಿಯುವ, ಗಂಟು ಗದಡಿಗಳನ್ನು ಎತ್ತಿಕೊಂಡು ಮುಂದಿನ ನಿಲ್ದಾಣಕ್ಕೆ ಪ್ರಯಾಣಿಸಲೇ ಬೇಕಾದ ಒತ್ತಡವೂ ಇಲ್ಲಿ ವ್ಯಕ್ತವಾಗುತ್ತದೆ.

ಇಷ್ಟೇ ದೃಢವಾಗಿ, ಶಕ್ತಿಪೂರ್ಣವಾಗಿ ಒಂದು ಭೂಭಾಗದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸುವುದರ ಸಂಕೇತವನ್ನೂ ಚಿತ್ತಾಲರು ಉಪಯೋಗಿಸಿಕೊಳ್ಳುತ್ತಾರೆ. ಉದಾಹರಣೆಗೆ ಅವರ ‘ಪುರುಷೋತ್ತಮ’ ಕಾದಂಬರಿಯ ಕೇಂದ್ರವನ್ನು ಗಮನಿಸಬಹುದು. ಇದು ಪುರುಷೋತ್ತಮನು ತನ್ನ ವರ್ತಮಾನದ ನೆಲೆಯಾದ ಮುಂಬಯಿಯಿಂದ, ಭೂತದ ಬೇರುಗಳಿರಬಹುದಾದ ಹನೇಹಳ್ಳಿಗೆ ಹೋಗುವ ದಾರಿಯುದ್ದಕ್ಕೂ ಅವನ ಚಿಂತನಕ್ರಮ ದಲ್ಲಾಗುವ ವ್ಯತ್ಯಾಸಗಳನ್ನು ಲಕ್ಷಿಸುತ್ತದೆ. ಈ ದಾರಿಯ ಇಕ್ಕೆಲಗಳನ್ನು ಗ್ರಹಿಕೆಗೆ  ಒಗ್ಗಿಸಿಕೊಳ್ಳುತ್ತ ಹೋಗುವ ಅವನ ಮುಂದೆ ಕುಣಿಯುವ “ನಮ್ಮ ಇರವನ್ನು, ಆ ಇರುವಿಕೆಯ ಕಾರಣಗಳ ಆಸರೆಯನ್ನು ಪಡೆಯದೆಯೇ ಅರ್ಥ ಮಾಡಿಕೊಳ್ಳಲಾರೆವೇ?” ಪ್ರಶ್ನೆಯ ಆಂತರ್ಯವೂ ಇಲ್ಲಿ ನಮಗೆ ಮುಖ್ಯವಾಗುತ್ತದೆ.

ಇದರ ಅರ್ಥ ಇಷ್ಟೆ. ಮುಂಬಯಿಯ ವರ್ತಮಾನವು ಹನೆಹಳ್ಳಿಯ ಭೂತವನ್ನು ಸಂಧಿಸಲು ಹೊರಡುವುದು. ಮೇಲುನೋಟಕ್ಕೆ ಕಾಣಿಸುವ ಕ್ರಿಯೆ. ಆ ಪ್ರವಾಸದ ದಿಕ್ಕುಗಳನ್ನೂ, ಕ್ರಮಗಳನ್ನೂ, ವೇಗಮಿತಿಗಳನ್ನೂ ನಿರ್ಧರಿಸುವುದು ಈ ಗೂಢವಾದ ಪ್ರಶ್ನೆಯ ಹೊಣೆಯೇ ಆಗಿದೆ. ಎಂದರೆ, ವಾಸ್ತವದಲ್ಲಿ, ಇಲ್ಲಿ ಆಗುವ ಪರಿವರ್ತನೆಗಳೆಲ್ಲ ವಿಚಾರಗಳ ಬೇರೆ ಬೇರೆ ತಂಗುದಾಣಗಳಲ್ಲಿ ಆರೈಕೆ ಪಡೆಯುತ್ತ ಸಾಗುವ ‘ವಿಚಾರಯಾನ’ ವನ್ನೇ ಸೂಚಿಸುತ್ತವೆ. ನಮ್ಮ ಅಸ್ತಿತ್ವಗಳಿಗೆ ಅರ್ಥ ತುಂಬುವ ಭಾವುಕ ನೆಲೆಗಳಾಗಲಿ, “ಅಖಂಡವಾಗಿರುವ ಯಾವುದೇ ಖಚಿತ ರೂಪವಿಲ್ಲದ ಬದುಕನ್ನು ವೈಚಾರಿಕ ಒರೆಗಿಟ್ಟು ತೀಡುವ” “ಗಡಿಗಳೇ ಕಾಣದ ಅಪಾರ ಜಲರಾಶಿಯಂತಿರುವ ಕಾಲ-ಅವಕಾಶಗಳನ್ನು” ಸೀಮೆಗಳೊಳಗೆ ನಿರ್ಬಂಧಿಸುವ ಮಿಥ್ಯೆಗಳ ಆಶ್ರಯವಾಗಲಿ ಈ ಯಾನದ ಎರಡು ಬಿಂದುಗಳೇ ಆಗಿವೆ.

ಹೀಗೆ, ಚಿತ್ತಾಲರು ನಡೆಸುವ ಭಾವ, ಕಾಲ, ವಿಚಾರ ಯಾನಗಳು ವಿರಮಿಸುವ ವಿಲಕ್ಷಣ ಸ್ಥಾನಗಳೂ, ಕಂಡುಕೊಳ್ಳುವ ಸತ್ಯಗಳೂ, ತಳೆಯುವ ನಿರ್ಧಾರಗಳೂ ಅವರ ಸಾಹಿತ್ಯ ಸಾಫಲ್ಯದ ಸೂಚ್ಯಂಕಗಳೇ ಆಗುತ್ತವೆ. ಒಂದು ಹಂತದಲ್ಲಿ, ಈ ಯಾನವು ಬದುಕಿನ ಕ್ರೌರ್ಯ, ಒಂಟಿತನ, ಜುಗುಪ್ಸೆ, ನಯವಂಚನೆಗಳನ್ನೂ ಜೀವನದ ಅತ್ಯಂತ ಹೇಯವೂ ಕುರೂಪಿಯೂ ಆದ ಮುಖಗಳನ್ನೂ ತೋರಿಸುತ್ತದೆ. ಬದುಕೆಂದರೆ ಇಷ್ಟೇಯೋ ಎಂದು ನಾವು, ಇನ್ನೇನು, ಅದಕ್ಕೆ ವಿಮುಖರಾಗಬೇಕು. ಅಷ್ಟರಲ್ಲಿ ಚಿಮ್ಮಿ ಕಾರಂಜಿಯಾಗುವ ಜೀವನೋಲ್ಲಾಸದ ಚಿಲುಮೆ, ಬದುಕಿನ ವಿಸ್ಮಯಗಳಿಂದ ಶುಶ್ರೂಷೆಯನ್ನು ಪಡೆಯುವ ಜೀವ ವೈವಿಧ್ಯ, ಕಡಿದಂತೆ ಒಡಲೊಳಗಿನ ಹಸಿರಿಗೆ ಬೆಳಕುಣಿಸಿ ಪೋಷಿಸುವ ತವಕಗಳ ನಿಸರ್ಗ ವೈಭವಗಳೆಡೆಗೆ ಆ ಯಾನವು ಮುಂದೊತ್ತುತ್ತದೆ. ವೈಯಕ್ತಿಕ – ಸಾಮುದಾಯಿಕ ಸಂವೇದನೆಗಳೆಲ್ಲವೂ ಏಕರೂಪವಾಗಿ, ವ್ಯಕ್ತಿ ವಿಕಸನಕ್ಕಾಗಿ ವೃತ್ತಿಪರವಾಗುವ ಔದ್ಯಮಿಕ ಘಟಕದ ತುಂಬು ತೃಪ್ತಿಗೆ, ಹೊಸ ಆವಿಷ್ಕಾರಗಳನ್ನು ಹೊರ ಜಗತ್ತಿಗೆ ದಾಟಿಸುತ್ತಲೇ ಇರುವ ಪ್ರಯೋಗಾಲಯಗಳಿಗೆ ಬೆಳಕಿಂಡಿಗಳಾಗುವ ಈ ಪುಳಕದ ಕ್ಷಣಗಳಿಗೆ ಸಾಟಿಯಿದೆ ಯೆನಿಸುತ್ತದೆಯೇ?

ಚಿತ್ತಾಲರು, ಒಂದರ್ಥದಲ್ಲಿ, ತೀವ್ರವಾದ ವಾಸ್ತವವಾದಿ ತತ್ವದವರು. ಬದುಕಿನೊಳಗಣ ಸರಳ-ಸಂಕೀರ್ಣ ನೆಲೆಗಳ ಹುಡುಕಾಟದಲ್ಲಿ ತುಂಬ ಆತ್ಮೀಯತೆಯಿಂದ ತೊಡಗಿಕೊಂಡವರು.  ಅವರು ನಿಷ್ಠುರವಾದ ಪರಿಶೋಧನೆಗಳಿಗೆ ಒಳಪಡಿಸುವ ಜೀವನದ ಅನ್ಯಾನ್ಯ ಮಗ್ಗುಲುಗಳು ವಿಶಿಷ್ಟವಾದ ಪ್ರತೀಕಗಳಾಗಿ, ಪರಿಕಲ್ಪನೆಗಳಾಗಿ, ಐಕ್ಯಸ್ಥಾನಗಳಾಗಿ, ವಿಲಕ್ಷಣ, ವೃತ್ತಾಂತ ಗಳಾಗಿ ಅರಳಿಕೊಳ್ಳುವ ಬಗೆಗಳೂ ಹೃದ್ಯವಾದವುಗಳೇ ಆಗಿವೆ.

ಎಂದರೆ, ಇಡಿಯ ಬದುಕೇ ಒಂದು ಅವಿಚ್ಛಿನ್ನವಾದ ಪ್ರಯಾಣವೆನ್ನುವುದು ಚಿತ್ತಾಲರ ಗೃಹೀತವಾಗಿದೆ. ಈ ಪ್ರವಾಸ ಪಥದಲ್ಲಿ ಎದುರಾಗುವ, ಅನುಭವಗಳ ಕಕ್ಷೆಯೊಳಗೆ ಪ್ರವೇಶ ಪಡೆಯುವ ವ್ಯಕ್ತಿ, ವಿಚಾರ, ಘಟನೆಗಳಿಗೆಲ್ಲ ಕಲಾತ್ಮಕ ಅಭಿವ್ಯಕ್ತಿಯನ್ನು ನೀಡುವುದು ಅವರು ನೆಚ್ಚಿದ ವಿಧಾನವಾಗಿದೆ. ಈ ಪ್ರವಾಸ ನಕ್ಷೆಯಲ್ಲಿರುವ ಎಲ್ಲ ಸ್ಥಳಗಳನ್ನು ಸಂದರ್ಶಿಸುತ್ತ ಯಾತ್ರಿಯ ಚೈತನ್ಯವು ಅದರಿಂದ ಗಳಿಸುವ ಅಥವಾ ಕಳೆದುಕೊಳ್ಳುವ ಸತ್ಯ-ಸಂಸ್ಕಾರಗಳ ಮಟ್ಟವನ್ನು ಅಳೆಯುತ್ತ, ಕೊನೆಯಲ್ಲಿ ಸಿದ್ದಿಸುವ ವ್ಯಕ್ತಿತ್ವದ ಸ್ವರೂಪವನ್ನು ಅರ್ಥೈಸಿಕೊಳ್ಳುವುದು ಅವರ ಸಾಹಿತ್ಯದ ಸ್ವಭಾವವೇ ಆಗಿದೆ.

ಚಿತ್ತಾಲರ ಸಾಹಿತ್ಯದ ಅಭ್ಯಾಸದ ಬಗೆಗೆ ನಮ್ಮ ವಿಮರ್ಶಕರು ಎಂದೂ ಜಿಪುಣತನವನ್ನು ತೋರಿಸಲಿಲ್ಲ. ಅದರ ಬೇರೆ ಬೇರೆ ಬದಿಗಳನ್ನು ಬಗೆದು ನೋಡುವ ಕೆಲಸವನ್ನು ಅವರೆಲ್ಲ ಸಾಕಷ್ಟು ಶ್ರದ್ಧೆಯಿಂದಲೇ ಮಾಡಿದ್ದಾರೆ. ಆದರೆ, ಕೆಲವು ಪರಿಕಲ್ಪನೆಗಳನ್ನು ಅವರು ದುಡಿಮೆಗೆ ಹಚ್ಚಿದ ಕ್ರಮಗಳ ಕುರಿತು ಹೇಳಿಕೊಳ್ಳುವಂಥ ಅಧ್ಯಯನಗಳಿನ್ನೂ ಗಣನೀಯವಾಗಿ ನಡೆದ ಹಾಗಿಲ್ಲ. ಉದಾಹರಣೆಗೆ, ‘ವಿಚಾರಣೆ’ಯಂಥ ವಿಧಾನವೊಂದು ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತ, ಮನುಷ್ಯನ ಬದುಕಿನ ಅಗ್ನಿ ಪರೀಕ್ಷೆಗಳಿಗೆ ಸಂವಾದಿಯಾಗಿ ನಿಲ್ಲುವ ರೀತಿಯನ್ನು ಪರಿಗಣಿಸಬಹುದು. ಇದು ನಿಶ್ಚಲವಾಗಿ ಕಂಡುಬರುವ ನೀರಿನಾಳದ ಅಷ್ಟಪಾದಿಯಂಥ ಕುಟಿಲತನವನ್ನೋ, ಬಲಿ ಕಂಬಕ್ಕೇರಿಸುವ ಸ್ವಾರ್ಥದ ಕುಲುಮೆಯನ್ನೋ, ಸ್ಪಂದನವಿರದ ಮನಸ್ಸಿನೊಳಗಿನ ಮರುಭೂಮಿಯನ್ನೋ ಪ್ರತಿನಿಧಿಸುವ ರೀತಿಗಳು ಅದೆಷ್ಟು ಅಧ್ಯಯನಗಳಿಗೆ ಒಡ್ಡಿಕೊಳ್ಳಸಲು ಸಮರ್ತವಾಗಿವೆ! ಹೀಗೆಯೇ ಅವರು ಬಳಸುವ ಸಾವಿನ ಸಂಕೇತಗಳಾಗಲಿ ಬೇಟೆಯೆ ಪ್ರತಿಮೆಗಳಾಗಲಿ ಹೊಸ ವಿಶ್ಲೇಷಣೆಗಳ ನಿರೀಕ್ಷೆಯಲ್ಲಿ ರುವವುಗಳೇ ಆಗಿವೆ. ಈ ಮಾದರಿಯ ಅಧ್ಯಯನಗಳು ವಿಶೇಷವಾಗಿ ನಡೆಯಲೆಂಬುದು ಸಹೃದಯರೆಲ್ಲರ ಹಾರೈಕೆಯಾಗಿದೆ.

—-
(ಪುತ್ತೂರಿನಲ್ಲಿ, ಶ್ರೀ ಚಿತ್ತಾಲರಿಗೆ, ವರ್ಷದ, ನಿರಂಜನ ಪ್ರಶಸ್ತಿ ಪ್ರದಾನ ನಡೆದಾಗ ನೀಡಿದ ಅಭಿನಂದನ ಭಾಷಣದ ಆಯ್ದ ಭಾಗ) ದಿನಾಂಕ ೧೨.೦೬.೨೦೦೨.