ಶರೀರದ ಜೀವಕೋಶಗಳು ಕ್ಷಣ ಕ್ಷಣವೂ ಹೊಸ ಹುಟ್ಟು ಪಡೆಯುತ್ತಲೇ ಇರುವಂತೆ, ಸಾಹಿತಿಯ ಸೃಜನಶೀಲ ಸಂವೇದನೆಗಳು ಪರಿವರ್ತನಾವರ್ತಗಳೊಂದಿಗೆ ಸಂವಾದದಲ್ಲಿ ಸಂಧಿಸುತ್ತಿರುತ್ತವೆ. ಈ ಭಾವಯಾನದಲ್ಲಿ ತೊಡಗಿಕೊಂಡ ಸೃಜನೋತ್ಸುಕ ಮನಸ್ಸು, ಸ್ವೋಪಜ್ಞತೆಗಾಗಿ, ನಡೆದ ದಾರಿಯನ್ನು ಸವೆಸಬಾರದೆನ್ನುವ ಸಂಕಲ್ಪಕ್ಕಾಗಿ ಹೊಸ ತಂಗುದಾಣಗಳನ್ನು ಕಂಡು ಹಿಡಿಯುವ ಉಮೇದಿಗಾಗಿ ಕಾಯುತ್ತಿರುತ್ತದೆ. ಇಂಥ ಅನ್ವೇಷಣೆಯು ಸಾಮೂಹಿಕ ವ್ಯಾಪ್ತಿಯನ್ನು ಹೊಂದಿದಾಗ ಅನ್ಯಾನ್ಯ ಸಾಹಿತ್ಯಿಕ ಚಳವಳಿಗಳ ರೂಪಧಾರಣೆ ಮಾಡುತ್ತದೆ. ಅದೇ ವೈಯಕ್ತಿಕವಾಗಿ ನಡೆದಾಗ, ಸಾಹಿತ್ಯದ ಭಿನ್ನ ಭಿನ್ನ ಸಾಧ್ಯತೆಗಳ ಶೋಧನೆಯಾಗುತ್ತದೆ. ಈ ಎರಡೂ ಆಯಾಮಗಳಿಗೆ ಸಮರ್ಥ ನಿದರ್ಶನವಾಗ ಬಲ್ಲವರು, ನಮ್ಮ ಹಿರಿಯ ಕವಿಗಳಲ್ಲಿ ಒಬ್ಬರಾಗಿರುವ ಜಿ.ಎಸ್. ಶಿವರುದ್ರಪ್ಪನವರು.

ಸುಗಮ ಸಂಗೀತ ಕ್ಷೇತ್ರದಲ್ಲಿ ಬಹುವಾಗಿ ಜನಪ್ರಿಯವಾಗಿರುವ “ಅಲ್ಲಿ-ಇಲ್ಲಿ” (ಉಡುಗಣವೇಷ್ಟಿತ…) ಕವನವನ್ನು ಬರೆದಾಗಲೂ ಅವರ ಕಣ್ಣುಗಳು ತಮ್ಮ ಸುತ್ತ ಇರುವ ಎರಡು ಅತಿಗಳನ್ನು ನಿಚ್ಚಳವಾಗಿ ಗುರುತಿಸಿದ್ದುವು. ‘ದಿವ್ಯಾಂಬರ ಸಂಚಾರ’ ಮತ್ತು ‘ಮಣ್ಣಿನ ರೇಖಾಪಥ ಗಮನ’ಗಳನ್ನು ಒಂದೇ ಸೂತ್ರದಲ್ಲಿ ಕಲ್ಪಿಸಿಕೊಳ್ಳುವ ಈ ಸಾಮರ್ಥ್ಯ, ಅವರ ಅನುಭವಗಳೊಂದಿಗೆ ಮಾಗಿ, ಪಕ್ವ ಸ್ಥಿತಿಯನ್ನು ತಲುಪಿದೆ. ಜೀವನಾನುಭವ – ಕಾವ್ಯಾನುಭವಗಳ ಸಂಧಿಬಿಂದುವಾಗಿ ಅವರ ಕಾವ್ಯವನ್ನು ಹಂತದಿಂದ ಹಂತಕ್ಕೆ ಬೆಳೆಸಿದ ಮುಖ್ಯವಾದ ಪೋಷಕಾಂಶಗಳಲ್ಲಿ ಇದೂ ಒಂದಾಗಿದೆ.

ಇತ್ತೀಚೆಗೆ ಪ್ರಕಟವಾದ ಬಹಳ ಆಕರ್ಷಕ ಮತ್ತು ಅರ್ಥಪೂರ್ಣ ಹೆಸರು ಹೊತ್ತ ‘ವ್ಯಕ್ತ ಮಧ್ಯ’ ಅವರ ಕಾವ್ಯ ಸ್ವರೂಪ ತನ್ನ ದಾರಿಯನ್ನು ಹೊರಳಿಸಿಕೊಂಡಿದೆಯೆನ್ನುವುದನ್ನು ಸ್ಪಷ್ಟಪಡಿಸುವ ಕೃತಿಯಾಗಿದೆ. ಅರ್ಥದ ತರಂಗಾಂತರಗಳನ್ನು ಹುಟ್ಟಿಸುವ ಈ ಶೀರ್ಷಿಕೆಯ ಮೂಲ “ನಾವು ಕಾಣುವ, ನಾವು ಪ್ರೀತಿಸುವ ಹಾಗೂ ನಮಗೆ ದತ್ತವಾದ ಈ ಬದುಕಿನ ಸ್ವರೂಪವನ್ನು ‘ವ್ಯಕ್ತ ಮಧ್ಯ’ ಎಂದು ವರ್ಣಿಸಿರುವ ಭಗವದ್ಗೀತೆ’ಯ ಉಲ್ಲೇಖವಾಗಿದೆ.

“ಚರಿತ್ರೆ, ಪುರಾಣ ಮತ್ತು ವಾಸ್ತವಗಳ ಮೂಲಕ
ನಾನು ನನಗೆ ದತ್ತವಾದ ಈ ‘ವ್ಯಕ್ತ ಮಧ್ಯ’ದ
ಬದುಕನ್ನು ಗ್ರಹಿಸಿದ ಹಾಗೂ ಅರ್ಥಮಾಡಿಕೊಂಡ
ಕ್ರಮವನ್ನು ಈ ಕವಿತೆಗಳು ಅಭಿವ್ಯಕ್ತಪಡಿಸುತ್ತವೆ.
(ವ್ಯಕ್ತ ಮಧ್ಯ : ಎರಡು ಮಾತು, ಪು. iv)

ಎನ್ನುವ ಜಿ.ಎಸ್.ಎಸ್. ಅವರ ಮಾತುಗಳನ್ನು ಮಗ್ಗುಲಿಗಿಟ್ಟುಕೊಂಡು, ಈ ಸಂಕಲನದ ಕವನಗಳ ಸಾಲುಗಳ ಮೂಲಕ ಸಾಗುವುದು ಒಂದು ಸೊಗಸಾದ ಅನುಭವವೇ ಸರಿ.

ಇಡಿಯ ಬದುಕನ್ನೇ ಒಂದು ಸಶಕ್ತ ರೂಪಕದ ಛಾಯೆಗೆ ಒಳಪಡಿಸುವ ಕವಿಯ ಕಲ್ಪನಾ ನಾವೀನ್ಯ ಕಾವ್ಯದ ಸಾಧ್ಯತೆಗಳನ್ನು ಎತ್ತರಿಸುತ್ತದೆ. ಹಿಂದೆ ತಿಳಿದಿಲ್ಲದ ಮುಂದೆ ಗೊತ್ತಿಲ್ಲದ ಭೂಮಿಯ ಮೇಲಿನ ಬದುಕನ್ನು ‘ಮಧ್ಯಭಾಗ’ವೆಂದುಕೊಳ್ಳುವುದಕ್ಕೆ ವಿಶ್ವವ್ಯಾಪಿ ಯಾದ ನಂಬಿಕೆಗಳ ತತ್ತ್ವದರ್ಶನಗಳ, ಧರ್ಮ ಪರಂಪರೆಗಳೆಲ್ಲವುಗಳ ಬೆಂಬಲವೂ ಸ್ಪಷ್ಟಾಸ್ಪಷ್ಟವಾಗಿ ಕಂಡು ಬರುತ್ತದೆ.

ಈ ಸಂಕಲನದ ಹೆಚ್ಚಿನ ಕವನಗಳಲ್ಲಿ ಕಂಡು ಬರುವ ಬಂಧ ವೈಶಿಷ್ಟ್ಯದ ಬಗೆಗೆ ಇಲ್ಲಿ ವಿಶೇಷವಾಗಿ ಹೇಳಬೇಕಾಗಿದೆ. ಶಿವರುದ್ರಪ್ಪನವರು ಇದನ್ನು ‘ಮುಕ್ತಬಂಧ’ವೆಂದು ಕರೆಯುತ್ತಾರೆ. ಅವರ ಮಾತುಗಳನ್ನೇ ಉದ್ಧರಿಸುವುದಾದರೆ,

“ಏಳು ವರ್ಷಗಳ ಹಿಂದೆ (೧೯೯೨) ಪ್ರಕಟವಾದ ನನ್ನ
‘ಚಕ್ರಗತಿ’ ಎಂಬ ಹೆಸರಿನ ಕವನ ಸಂಗ್ರಹದ ಕವಿತೆಗಳ
ಮೂಲಮಾನದಲ್ಲಿ ನಾನು ನಡೆಯಿಸಿದ ‘ಪದ್ಯಬಂಧ’ದ
ಪ್ರಯೋಗಗಳು, ಈ ಸಂಗ್ರಹದ ಅರ್ಧದಷ್ಟು ಕವಿತೆಗಳಲ್ಲಿ
ಇನ್ನಷ್ಟು ವೈವಿಧ್ಯತೆಯಿಂದ ಮುಂದುವರಿದಿವೆ. ಈ
ಪ್ರಯೋಗಗಳ ಲಕ್ಷಣವೆಂದರೆ, ಇಡೀ ಆಧುನಿಕ ಕನ್ನಡದ
ಕಾವ್ಯದ ಉದ್ದಕ್ಕೂ ಪರಿಚಿತವಾದ ಹಾಗೂ ಸಮೃದ್ಧವಾದ
‘ಚತುಷ್ಪದಿ’ ಪದ್ಯಬಂಧವನ್ನು ಅದರ ಚೌಕಟ್ಟನ್ನು ದಾಟಿಸಿ
ಪದ್ಯದಿಂದ ಪದ್ಯಕ್ಕೆ ಮುಂದುವರಿಸುವ ಪ್ರಯತ್ನವನ್ನು
ಇಲ್ಲಿ ಕಾಣಬಹುದು”. (ಅದೇ. ಪು. v)

ನಮ್ಮ ಸಂದರ್ಭದಲ್ಲಿ ‘ಕವಿಗಳೇನೋ ಧಾರಾಳವಾಗಿದ್ದಾರೆ, ಆದರೆ ಕಾವ್ಯ ಮಾತ್ರ ಕಾಣಲು ಸಿಗುವುದಿಲ್ಲ’ ಎನ್ನಿಸುವ ವಿಲಕ್ಷಣ ಸನ್ನಿವೇಶದಲ್ಲಿ, ಪ್ರಯೋಗಶೀಲತೆಗೇನೂ ಕೊರತೆಯಿಲ್ಲ. ಒಂದು ಕಾಲಕ್ಕೆ ವಿಭಿನ್ನವಾದ ಪದಚ್ಛೇದ, ಪದ್ಯ ಶರೀರದ ಬಾಗು ಬಳುಕು (ಕಮಾನು)ಗಳೆಲ್ಲ ‘ಪ್ರಯೋಗ’ಗಳೆನ್ನುವ ಗೌರವಕ್ಕೆ ಪಾತ್ರವಾದವುಗಳೇ. ಆದರೆ, ಸಾಹಿತ್ಯದ ಅಭ್ಯಾಸದ ದೃಷ್ಟಿಯಿಂದ, ರಸಸಿದ್ದಿಯ ಮಾನದಿಂದ ಇವುಗಳ ಯಶಸ್ಸಿನ ನೆಲೆಯನ್ನು ಅಳೆಯ ಹೊರಟಾಗ, ಹೆಚ್ಚಿನ ಸಂದರ್ಭಗಳಲ್ಲಿ ನಿರಾಸೆಯೇ ಎದುರಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ‘ವಕ್ತಮಧ್ಯ’ದ ಕವನಗಳು ಈ ಹೇಳಿಕೆಗೆ ಹೊರತಾಗಿವೆಯೆನ್ನಲು ನನಗೆ ಖುಷಿಯೆನಿಸುತ್ತದೆ.

ಅದರಲ್ಲಿ ಬರುವ ‘ಆರೋಹಣ’ ಕವನದ ಈ ಗತಿಯನ್ನು ಗಮನಿಸಿ :

“….. ಸ್ವಚ್ಛ ಬಿಳಿ ಹಿಮದ
ಮಹಾಸಾಮ್ರಾಜ್ಯದೊಳಗಲ್ಲಲ್ಲಿ ಬಂಡಾಯ
ವೆದ್ದಿರುವ ವಕ್ರ ಶಿಲಾ ಸಮುಚ್ಚಯದ
ಮಧ್ಯೆ ಟಿಟ್ಲಸ್ ಶಿಖರ, ಪರ್ವತ ಪ್ರಾ-
ಣವೇ ಶೀತೋಜ್ವಲ ಶ್ವೇತ ಕುಟ್ಮಲ
ದಂತೆ ಮೇಲೆದ್ದು, ನಭದ ನೀಲಿಮೆಗೆ
ನೈವೇದ್ಯವಾಗುತಿದೆ”.

(ಅದೇ. ಪು. ೪೭)

ಶಿವರುದ್ರಪ್ಪನವರು ಪ್ರತಿಮಾಶಿಲ್ಪಿ. ಅವರ ಕಾವ್ಯಾನುಭವಗಳಿಗೆ ಕೆಲವೊಮ್ಮೆ ನೆಲದ ನೆಂಟನ್ನು ಕಡಿದುಕೊಂಡಿತೇನೋ ಎನ್ನುವ ಆತಂಕದ ನೆರಳಾಡುವಷ್ಟೂ – ಸದಾ ಊರ್ಧ್ವ ಗಮನ, ವೈನತೇಯನ ವ್ಯೋಮಯಾನದಂತೆ ಆದರೆ ನೆಲದ ಒಡಲಲ್ಲಿ ಎಲ್ಲಿಯಾದರೂ ಹಸುರು ಸೆಲೆಯೊಡೆಯಲು ಹಾಕುತ್ತಿರುವ ಹೊಂಚು ಗೋಚರಿಸಿತೋ, ಅದು ತಟಕ್ಕನೆ ಭೂಮಿಯನ್ನು ತಕ್ಕೈಸಿತೆಂದೇ ಲೆಕ್ಕ. ಇದುವೇ ‘ವ್ಯಕ್ತಮಧ್ಯ’ವನ್ನಾಳುವ ಅವ್ಯಕ್ತ ಸೂತ್ರ ಕೂಡಾ. ಈ ಉಡ್ಡಾಣದ ಕ್ರಮಕ್ಕೆ ನಮ್ಮನ್ನು ಹೊಂದಿಸಿಕೊಂಡಾಗಷ್ಟೇ ಕವಿಯ ಕಾವ್ಯಲೋಕ ವಿಹಾರಕ್ಕೆ ಅನುವು ಆಸ್ಪದ.

ಇಲ್ಲಿ ಪ್ರಯೋಗದ ಮೋಹಕ್ಕೆ ಸಿಕ್ಕಿದ ಕಾವ್ಯದ ಕೊಂಡಿ ಕಳಚಿಲ್ಲ. ಭಾವಗಳು ನೆಲೆ ಸಿಗದೆ ತಡಕಾಡುತ್ತಿಲ್ಲ. ನದಿಯ ಹರಿವು, ಪಾತ್ರದ ಆಕಾರಕ್ಕೆ ತಕ್ಕಂತೆ ತನ್ನ ಮೈಯನ್ನು ಅಳವಡಿಸಿಕೊಳ್ಳುತ್ತಲೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳುವ ಕೌಶಲ್ಯದ ಬಗೆಯಿದು. ಮಳೆ ನಿಂತ ಮೇಲೂ ತೊಟ್ಟಿಕ್ಕುತ್ತಲೇ ಇರುವ ಸೋಗೆಯ ಮಾಡಿನಂತೆ ಭಾವವನ್ನು ಜಿನುಗಿಸುತ್ತ, ಅಭಿವ್ಯಕ್ತಿಯನ್ನು ಮಜಲಿನಿಂದ ಮಜಲಿಗೆ ದಾಟಿಸುವ ಈ ಕ್ರಮ ಚೇತೋಹಾರಿಯೆನಿಸುತ್ತದೆ.

ಸ್ವಲ್ಪ ವೈಯುಕ್ತಿಕ ನೆಲೆಗೆ ತಿರುಗಿ, ನನ್ನನ್ನು ಗಾಢವಾಗಿ ತಟ್ಟಿದ ಕೆಲವು ಕವನಗಳ ಬಗೆಗೆ ನಾನಿಲ್ಲಿ ಬರೆಯಬೇಕು. ಅವುಗಳು ಪರಿಚಯಿಸಿದ ಜಿ.ಎಸ್.ಎಸ್. ಅವರ ಕಾವ್ಯಶಕ್ತಿಯ ಲಕ್ಷಣಗಳನ್ನು ನೆನಪಿಸಿಕೊಳ್ಳಬೇಕು. ಅವರ ಕಾವ್ಯದ ಹಿರಿಮೆಯ ಹಿಂದು ಮುಂದುಗಳನ್ನು ಗುರುತಿಸಿಕೊಳ್ಳಬೇಕು.

ಕುವೆಂಪು ಅವರಂತೆ, ಜಿ.ಎಸ್.ಎಸ್. ಕೂಡ ಭಾವಲೋಕ ಸಂಚಾರಿಯೇ. ಇವರ ದಾರಿ ಮಾತ್ರ ಅವರಿಗಿಂತ ಭಿನ್ನ. ಗಿಡಗಂಟಿಗಳನ್ನು ಸವರುತ್ತ, ಬಳ್ಳಿ ಬೀಳಲುಗಳನ್ನು ಸರಿಸುತ್ತ, ಹಳ್ಳದಿಣ್ಣೆಗಳನ್ನು ದಾಟುತ್ತ, ಸೌಂದರ್ಯದ ಸನ್ನಿಧಿಯನ್ನು ಸಾರುವುದು ಜಿ.ಎಸ್.ಎಸ್. ಅವರಿಗೆ ಇಷ್ಟವಾದ ಕ್ರಮ. ಹೀಗಾಗಿ, ಕಣ್ಣ ಮುಂದೆ ಪ್ರತ್ಯಕ್ಷವಾಗುವ ಕಾವ್ಯಕೇಂದ್ರ, ಬಹುಮಟ್ಟಿಗೆ ಅನಿರೀಕ್ಷಿತ. ಹಾಗಿರುವುದರಿಂದಲೇ ಪೂರ್ಣ ಸುಖಾವಹ. ‘ಒಂದು ಹಳೆಯ ಕತೆ’ಯನ್ನು ತೀರಾ ಹೊಸದು ಮಾಡಿ ಬಿಡುವ, ಬದುಕಿನೆಲ್ಲ ವಿಕೃತಿಗಳನ್ನು ಹೊಡೆದಟ್ಟುವಂತೆ ‘ವಾಗರ್ಧ ಚಂದ್ರನ ಪ್ರಣತಿ’ಯನ್ನೆತ್ತುವ ಅವರ ವಿಶಿಷ್ಟಾಭಿವ್ಯಕ್ತಿಯ ನಿದರ್ಶನಗಳು ಹತ್ತು ಹಲವು.

ಆದಂ – ಈವರ ಪತನವನ್ನು ವಸ್ತುವಾಗಿಟ್ಟುಕೊಂಡು ಅವರು ಬರೆಯುವ ರೀತಿ ನೋಡಿ.

“….. ನಿಷಿದ್ಧ ಫಲವನು
ಅವರಿಬ್ಬರು ತಿಂದು ಅಲ್ಲಿಂದುಚ್ಛಾಟನೆಗೊಂಡರು
‘ಮೊಟ್ಟಮೊದಲ ಅವಿಧೇಯತೆ’ಯಿಂದ ಮನುಷ್ಯತ್ವಕೆ
ಕ್ರಿಯಾಶೀಲ ಧೈರ್ಯ ಮೂಡಿ ಸ್ಫೂರ್ತಿಯಾಯ್ತು ಪ್ರಗತಿಗೆ
(ಅದೇ. ಪು. ೨೩)

ಗಂಗೆ ಧರೆಗೆ ಧುಮುಕಿದುದನ್ನು “ಅವತಾರವೆಂದೆ ಎಂದಾರೆ ತಾಯಿ ಈ ಅಧಃಪಾತವನ್ನೇ” ಎಂದು ಅಂಬಿಕಾತನಯದತ್ತರು ಗಂಗಾವತರಣವನ್ನು ಸಹಾನುಭೂತಿಯಿಂದ ನೋಡಿದರೆ, ವಾಸ್ತವ ಪತನವನ್ನೂ ಪ್ರಗತಿಯ ಮೆಟ್ಟಲಾಗಿ ಕಂಡರು. ಶಿವರುದ್ರಪ್ಪನವರು, ಸೋಲುತ್ತ ಹೊರಟಂತೆಲ್ಲ, ಕುಸಿಯುತ್ತಿದ್ದಂತೆಲ್ಲ ಮನುಷ್ಯನ ಆತ್ಮಬಲ ವೃದ್ದಿಸುತ್ತದೆನ್ನುವ ಸಿದ್ಧಾಂತ ವನ್ನು ನೆಚ್ಚಿದವರು.

ಜಿ.ಎಸ್.ಎಸ್. ಅವರ ಕಾವ್ಯಾಭಿವ್ಯಕ್ತಿ ಆಶ್ರಯಿಸುವ ಪ್ರಮುಖ ಸ್ಥಾಯೀ ಭಾವಗಳಲ್ಲಿ ತೆಳುವಾಗದಂತೆ ಅವರು ಉದ್ದಕ್ಕೂ ಕಾಯ್ದುಕೊಂಡಿರುವ ವಿಸ್ಮಯವೂ ಒಂದಾಗಿದೆ.

“……ನಿರಂತರ ಚಲನೆ –
ಯೊಳಗೊಂದು ನೀಲಿ, ಅಚಂಚಲ ಸ್ಥಿ
ರತೆಯೊಳಗೊಂದು ನೀಲಿ. ಈ ನಾನು
ಎರಡು ನೀಲಿಯ ನಡುವೆ ಕರಗಿ ಹೋಗದೆ
ನಿಂತ ರಹಸ್ಯವಾದರು ಏನು”
(ಅದೇ. ಪು. ೪೬)

ನಿಶ್ಚಲ ಆಗಸ, ನಿರ್ದಿಗಂತ ಸಾಗರಗಳ ಮಧ್ಯೆದ ಈ ವ್ಯಕ್ತರೂಪಕ್ಕೆ ಚಾಂಚಲ್ಯ-ಸ್ಥಿರತೆಗಳೆರಡೂ ಸ್ವಭಾವಗಳೇ. ಆದರೆ ಈ ದ್ವಂದ್ವಗಳನ್ನು ದಾಟಿಯೂ ನಿಜದ ನೆಲೆಯೊಂದು ಉಳಿಯುತ್ತದಲ್ಲವೆಂದು ಉದ್ಗರಿಸುವ ಕವಿಯವಿಸ್ಮಯ ಸದ್ದಿಲ್ಲದಂತೆ ನಮ್ಮೊಳಗನ್ನೂ ಆವರಿಸಿ ಬಿಡುತ್ತದೆ.

ಆತ್ಮಚರಿತ್ರೆಯ ತುಣುಕುಗಳೂ ಕಾವ್ಯ ಶರೀರಿಗಳಾಗುವ ಕೌತುಕವೂ ಇಲ್ಲಿ ನಡೆದಿದೆ.

“ದತ್ತವಾಗಿದೆ ಮತ್ತೆ ವ್ಯಕ್ತ ಮಧ್ಯದ ಬದುಕು
ಮೊದಲಿಗಿಂತಲೂ ಹೊಸತಾಗಿ ಕಂಡಿದೆ ಲೋಕ
ಈವರೆಗೂ ಮಹಾವಿಸ್ಮೃತಿಯಲ್ಲಿ ಕರಗಿ ಹೊರಬಂದ
ಅಸ್ತಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ
(ಪು. ೫೧)

ಈ ಮಹಾವಿಸ್ಮೃತಿಯು ಮೇರೆ ತಿಳಿಯದ ಹುಟ್ಟಿನ ಮೊದಲಿನ ಅವಸ್ಥೆಯಾಗಿರಲೂ ಬಹುದು. ಅರಿವಳಿಕೆಯ ಸೂಜಿಮೊನೆಯ ಸ್ಪರ್ಶದ ಅನಂತರದ ನಿಶ್ಚಿತ ಮಾನದ ಕಾಲಘಟಕವೂ ಆಗಿರಬಹುದು. ಎರಡೂ ಅಗೋಚರಗಳ ಅನಂತರ ಎಳೆ ಎಳೆಯಾಗಿ ರೂಪು ಪಡೆಯುವ ಜಗದ ಚೆಲುವಿಗೆ ಅದೇ ಸಾಟಿ ಎನ್ನುವುದು ಮಾತ್ರ ನಿಜ!

ಚರಿತ್ರೆಯನ್ನು “ಮಾನವತೆಯ ಹೃದಯದ ಮೇಲಿನ ಗಾಯದ ಗುರುತು” (ಪು. ೫೪)ಗಳಾಗಿ ಕಾಣುವ, “ಯಾವತ್ತಿನಿಂದಲೋ ಮೆತ್ತಿಕೊಂಡಿದೆ. ನಮ್ಮ ಸುತ್ತ ಈ ಹುತ್ತ” (ಪು. ೨೬) ಎನ್ನುವ ಜಾಗೃತಿಯನ್ನು ವ್ಯಕ್ತಪಡಿಸುವ ಈ ಸಂಕಲನ ಎಲ್ಲ ವೈವಿಧ್ಯಗಳ ರಸಪಾಕ. ಇದು ‘ಪಂಪೋತ್ಸವ’ (ಪು. ೧೪-೫)ದ ಸೂಕ್ಷ್ಮ ವ್ಯಂಗ್ಯವಾಗಿ, ಚರಿತ್ರೆಯ ಕಾಲಜ್ಞಾನ (ಪು. ೫೫-೮)ದ ಅಹಂಕಾರದ ಮೊಟ್ಟೆಗೆ ಹಾಕಿದ ಡೊಗರಾಗಿ, ‘ಸಿಂಡರೆಲಾ’ (ಪು. ೩೦-೧)ಳ ಪಾದರಕ್ಷೆಯನ್ನು ಕಳೆದುಕೊಂಡ ಪಾದವನ್ನು “ಸುಂದರವಾದ ಶ್ಲೋಕದಿಂದುರಿ ನಿರರ್ಥಕವಾದ ಪಾದ”ವಾಗಿ ಕಾಣುವ ಶ್ಲೇಷೆಯಾಗಿ, ಬೇರೆ ಬೇರೆ ಬಣ್ಣಗಳ ಪಾರದರ್ಶಿಕೆಯಾಗುವ ರೀತಿಯಂತೂ ತೀರಾ ಆಪ್ಯಾಯಮಾನ.

ಎಲ್ಲೋ ಆಗೊಮ್ಮೆ ಈಗೊಮ್ಮೆ ವಾಚ್ಯದ ದೃಷ್ಟಿಬೊಟ್ಟುಗಳನ್ನು ಇಡಿಸಿಕೊಳ್ಳುವ ಈ ಕವನಗಳನ್ನು ಸ್ವಾಗತಿಸುವ ಸಂಭ್ರಮದುತ್ಸಾಹಕ್ಕೆ ಕವಿಯ ಸಾಲುಗಳೇ ಸೊಗಸಾದ ತೋರಣವನ್ನು ಕಟ್ಟುತ್ತವೆ.

“ಬೆಳೆಯುತ್ತವೆ ನಿಜವಾದ ಕವಿತೆಗಳು
ಸದಾ ಪ್ರಬುದ್ಧರ  ಮನಸ್ಸಿನಲ್ಲಿ
ಅನೇಕಾರ್ಥಗಳ ಹೊಳೆಯಿಸುತ್ತ
ಅಪ್ಸರೆಯರ ಸೊಬಗಲ್ಲಿ
ಒಂದೇ ಸಮನೆ ರೆಕ್ಕೆ ಬಿಚ್ಚಿ ಹಾರುತ್ತವೆ
ಮುಗಿಯದ ಬಯಲಲ್ಲಿ”
(ಪು. ೩)

ಹೀಗೆ ಕಾವ್ಯದ ವಿಹಂಗಮ ಪ್ರವಾಸದ ಕಕ್ಷೆ ವಿಸ್ತಾರಗೊಳ್ಳುತ್ತಾ ಹೋಗುವುದು ಅದರ ಸಾಫಲ್ಯಕ್ಕೆ ಸಾಕ್ಷಿಯಾಗುತ್ತದೆ. ಅದರ ಚಂಚು ಮತ್ತಷ್ಟು ಬೆಲೆಯಿರದ ಭಂಡಾರವನ್ನೆತ್ತಿ ತರಲಿ. ಕನ್ನಡದ ಸಾರಸ್ವತ ಸಂಪತ್ತಿನ ಪೇಲೆಯನ್ನು ತುಂಬುತ್ತಲಿರಲೆನ್ನುವುದು ಕಾವ್ಯಾಸಕ್ತಿಯ ಪ್ರಾಮಾಣಿಕ ಅಪೇಕ್ಷೆ; ಕನ್ನಡ ಸಾಹಿತ್ಯ-ಸಂಸ್ಕೃತಿಗಳ ನಿರೀಕ್ಷೆ.