ಸೃಷ್ಟಿಯಲ್ಲಿ ಮನುಷ್ಯನಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಟ್ಟ ಅನೇಕ ಅಂಶಗಳಲ್ಲಿ ಆತನ ಸಂವೇದನಾಶೀಲತೆಯೂ ಒಂದಾಗಿದೆ. ವ್ಯಕ್ತಿಯ ಪ್ರಜ್ಞೆಯು ಒಂದು ಪ್ರವಾಹದಂತೆ, ಪರಂಪರೆಯಂತೆ, ಸರಣಿಯಂತೆ ಹರಿ ಕಡಿಯದ ಹಾಗೆ ಶತಮಾನಗಳಿಂದ ಸಾಗುತ್ತ ಬಂದಿದೆ. ಒಂದು ದೃಷ್ಟಿಯಿಂದ, ಅದರ ಏರುಇಳಿತಗಳನ್ನು, ಆಳ-ಅಗಲಗಳನ್ನು, ಧುಮುಕುವ, ಧಾವಿಸುವ, ತೆವಳುವ ಗತಿಗಳನ್ನು, ತಿರುಗಣಿಗಳನ್ನು ಸಂಗಮ ಬಿಂದುಗಳನ್ನು ಕೇವಲ ಕಾಲ ಸಾಪೇಕ್ಷವೆಂದಾಗಲಿ, ದೇಶ ಸಂವಾದಿಯೆಂದಾಗಲಿ ಗುರುತಿಸುವುದು ಕಷ್ಟ ಸಾಧ್ಯ. ಈ ಪ್ರಜ್ಞೆಯಲ್ಲಿ ಶತಮಾನಗಳ ಹಿಂದಿನ ಆದಿಮ ಅಂಶಗಳೊಂದಿಗೆ ಆಧುನಿಕ ವಿಚಾರ ಪ್ರಣಾಳಿ ಗಳೂ ಕ್ರಿಯಾತ್ಮಕವಾಗುತ್ತವೆ. ಅವುಗಳ ಜ್ಞಾನದ ಜಗತ್ತಿನೊಂದಿಗೆ ಮಾತುಕತೆಯಲ್ಲಿ ತೊಡಗಿದಂತೆಲ್ಲ ಮನುಷ್ಯನ ಸಾಧ್ಯತೆಗಳೂ ವಿಸ್ತಾರಗೊಳ್ಳುತ್ತ ಬಂದಿರುವುದು ಇತಿಹಾಸವು ದಾಖಲಿಸಿದ ಸತ್ಯವಾಗಿದೆ. ಪ್ರಜ್ಞಾಪ್ರಪಂಚಕ್ಕೆ ಹತ್ತಿರದ ಸಂಬಂಧಿಯಾದ ಮತ್ತು ಸಂವೇದನಾತ್ಮಕತೆಯೇ ಮೂಲದ್ರವ್ಯವಾಗಿರುವ ಸಾಹಿತ್ಯವೂ ಇದಕ್ಕೆ ಹೊರತಾಗಲಾರದು.

ಸಾಹಿತಿಯು ಯಾವ ಕಾಲಕ್ಕೇ ಸೇರಿರಲಿ, ಆತನು ತನ್ನ ಯುಗದ ಸಾಮೂಹಿಕ ಸಂವೇದನೆ ಗಳಿಂದ ತನ್ನ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತಾನೆ. ಅದೇ ಕಾಲಕ್ಕೆ ಆ ಸಂವೇದನೆಗಳ ಸ್ವರೂಪ ವನ್ನು ಸ್ಪಷ್ಟಪಡಿಸುವ, ಅವುಗಳನ್ನು ಸಂಸ್ಕರಿಸುವ ಹಾಗೂ ಅವುಗಳಿಗೆ ಸಾತತ್ಯವನ್ನು ಕಲ್ಪಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಾನೆ.

ಈ ಹೇಳಿಕೆಯನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ಆದಿಕವಿ ಪಂಪನು ನೀಡುವ ‘ಮನುಷ್ಯ’ನ ನಿರ್ವಚನವನ್ನು ಗಮನಿಸಿ; ಎಂದರೆ, ಕ್ರಿಸ್ತಶಕ ಹತ್ತನೆಯ ಶತಮಾನದಲ್ಲಿದ್ದ ಸಾಮಾಜಿಕ ಮೌಲ್ಯಗಳು, ವೈಯಕ್ತಿಕ ಬಾಧ್ಯತೆಗಳು ಪಂಪನ ಮೇಲೆ ಪ್ರಭಾವವನ್ನು ಬೀರಿವೆ. ಆ ತಿಳಿವಳಿಕೆಯನ್ನು ದೃಢಪಡಿಸುವ, ಸೂಕ್ಷ್ಮವಾದ, ಹರಿತವಾದ ವಿಶ್ಲೇಷಣೆಗೆ ಅದನ್ನು ಒಳಪಡಿಸುವುದರ ಮೂಲಕ ಅದರ ಸಾಂಸ್ಕೃತಿಕ ಮಹತ್ವವನ್ನು ಖಚಿತಪಡಿಸುವ ಕಾರ್ಯವನ್ನು ಮಾಡಲು ಆತನ ಕಾವ್ಯವೂ ಪ್ರಯತ್ನಿಸಿದೆ. ಈ ಎರಡು ವಲಯಗಳ ಸಂವಾದದ ಪ್ರಮಾಣ, ಗುಣಮಟ್ಟಗಳು ಸಾಹಿತ್ಯದ ಮೌಲ್ಯವನ್ನು ನಿರ್ಧರಿಸಲು ಸಹಾಯಕವಾಗುತ್ತವೆ. ಬಾಹ್ಯಾನುಭವಗಳನ್ನು ಸ್ವೀಕರಿಸುತ್ತಾ, ಅವುಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಯಲ್ಲಿ ತನ್ನದೇನನ್ನಾದರೂ ಅವುಗಳಿಗೆ ಸೇರಿಸುತ್ತ ಸಾಹಿತಿಯು ಅಭಿವ್ಯಕ್ತಿ ಪ್ರಕಾರದ ಮೂಲಕ ಅವುಗಳನ್ನು ಲೋಕಮುಖಕ್ಕೆ ಪ್ರಸ್ತುತ ಪಡಿಸುತ್ತಾನೆ. ಹೀಗಿರುವುದರಿಂದಲೇ ಸಾಹಿತ್ಯವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ, ಅನನ್ಯ ಗುಣವನ್ನು ಪಡೆದುಕೊಳ್ಳುತ್ತದೆ.

ಸಾಹಿತ್ಯದ ಮೌಲಿಕತೆಯನ್ನು ನಿರ್ಧರಿಸುವ ವಿಮರ್ಶೆಯ ಹಲವು ಮಾನದಂಡಗಳಲ್ಲಿ, ‘ಸಾಹಿತ್ಯಿಕ ಸಂವೇದನೆ’ಯು ಹಲವಾರು ಕಾರಣಗಳಿಗಾಗಿ, ವಿಶಿಷ್ಟವೆನಿಸುತ್ತದೆ. ನನಗೆನಿಸುವ ಮಟ್ಟಿಗೆ, ಈ ಸಂವೇದನೆಗಳು ಸಾಹಿತಿಯಲ್ಲಿ ಪ್ರಬಲವಾಗಿರುವ, ವ್ಯಕ್ತಿ ಸಾಪೇಕ್ಷವೂ ಆಗಿರುವ ಪ್ರಜ್ಞೆಗಳ ಮುಖಾಂತರವೇ ಗ್ರಹಿಸಲ್ಪಡುತ್ತವೆ. ಇಲ್ಲಿ, ನಾನು ಈ ಎರಡೂ ಪರಿಕಲ್ಪನೆಗಳನ್ನು ಪಾರಿಭಾಷಿಕ ಸಂದರ್ಭಗಳಲ್ಲಿ ಬಳಸುತ್ತಿದ್ದೇನೆನ್ನುವುದನ್ನು ಮೊದಲಿಗೇ ಸ್ಪಷ್ಟಪಡಿಸುತ್ತಿದ್ದೇನೆ. ಇವುಗಳ ನಡುವಿನ ಜನಕ ಜನ್ಯ ಸಂಬಂಧವನ್ನು ಲಕ್ಷ್ಯದಲ್ಲಿಟ್ಟುಕೊಂಡು. ಈ ಚರ್ಚೆಯನ್ನು ಬೆಳೆಸುತ್ತೇನೆನ್ನುವುದನ್ನೂ ಸೂಚಿಸುತ್ತಿದ್ದೇನೆ.

ಸಾಹಿತಿಯು ವಿಶಿಷ್ಟ ಪ್ರಜ್ಞೆಯೊಂದರ ಮೂಲಕ ಅನುಭವಗಳನ್ನು ಗ್ರಹಿಸುತ್ತಾನೆ, ಪ್ರತಿಕ್ರಿಯಿಸುತ್ತಾನೆ ಎಂದೆನಲ್ಲ. ಇಂತಹ ಪ್ರಕ್ರಿಯೆಯು ಅವನಲ್ಲಿ ವಿಭಿನ್ನ ನೆಲೆಗಳ ಅನಿರ್ದಿಷ್ಟ ಒಳಸೆಲೆ ಹಾಗೂ ಹೊರಚಾಚುಗಳುಳ್ಳ ಅನಿಯಂತ್ರಿತ ತರಂಗಾತರಗಳ ಸಂವೇದನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆ ಸಂವೇದನೆಗಳಿಗೆ ನಿಖರವಾದ ಅಭಿವ್ಯಕ್ತಿಯನ್ನು ನೀಡುವ ವಿಮರ್ಶೆಯ ಕ್ಷೇತ್ರದಲ್ಲಿ ಧಾರಾಳವಾಗಿ ಬಳಕೆಯಾಗುತ್ತಿರುವ ನಗರಪ್ರಜ್ಞೆಯನ್ನು ಪರಿಶೀಲನೆಗೆ ಎತ್ತಿಕೊಳ್ಳುವುದು ಸೂಕ್ತವೇ ಆಗಿದೆ.

ಮೂಲತಃ ವಿವಿಧ ಪ್ರಜ್ಞೆಗಳನ್ನು ನವ್ಯಸಾಹಿತಿಗಳು ವಿಮರ್ಶಕರು ಕನ್ನಡಕ್ಕೆ ಪರಿಚಯಿಸಿ ದ್ದಾರೆನ್ನಬೇಕು. ಆದರೆ ಅವುಗಳ ಆನ್ವಯಿಕ ನೆಲೆಯನ್ನು ಪರಿಗಣಿಸಿದಾಗ, ಕನ್ನಡ ಸಾಹಿತ್ಯ ಕ್ಷೇತ್ರದ ಎಲ್ಲಾ ಘಟ್ಟಗಳಲ್ಲೂ ಅವುಗಳಿಗೆ ನಿದರ್ಶನಗಳೂ ಸಿಗುತ್ತವೆ.

‘ನಗರಪ್ರಜ್ಞೆ’ಯೆನ್ನುವ ಪರಿಕಲ್ಪನೆಯು ಅನೇಕ ದೃಷ್ಟಿಗಳಿಂದ ಚಿಂತನೆಗೆ ಗ್ರಾಸವನ್ನು ಒದಗಿಸುತ್ತದೆ. ಮುಂದಿನ ವಿಶ್ಲೇಷಣೆಗೆ ಹಿನ್ನೆಲೆಯಾಗಿ, ಹೊಸ ನಿರ್ವಚನದ ಅಗತ್ಯವನ್ನು ಸೂಚಿಸುವುದಕ್ಕಾಗಿ, ಈ ಗೊಂದಲವನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಬಯಸುತ್ತೇನೆ.

ಮೊದಲನೆಯದಾಗಿ, ‘ಸೃಷ್ಟಿಶೀಲ ಸಾಹಿತ್ಯದಲ್ಲಿ ನಗರ ಪ್ರಜ್ಞೆ’ಯೆನ್ನುವ ಶೀರ್ಷಿಕೆಯೇ ಅರ್ಥ ಸಂದಿಗ್ಧಕ್ಕೆ ಕಾರಣವಾಗುತ್ತದೆ. ಸಾಹಿತ್ಯ ಕೃತಿಯೆಂದು ನಿಂತ ನೆಲದ ಸ್ಪಷ್ಟವಾದ ಕಲ್ಪನೆಯೊಂದಿಗೆ ಈ ನೆಲೆಯ ಅಭ್ಯಾಸ ಪ್ರಾರಂಭವಾಗಬೇಕಾಗುತ್ತದೆ. ಎಂದರೆ, ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಬರುವ ಕೆಳಬೈಲಿನ ಗೋಪಾಲಯ್ಯನವರಿಗೆ ಪುತ್ತೂರಿನ ಶಿವರಾಮನು ಪೇಟೆಯವನಾಗಿ ಕಾಣುತ್ತಾನೆ. ಶಿವರಾಮನೂ ಅದನ್ನು ಒಪ್ಪಿ ಕೊಳ್ಳುತ್ತಾನೆ. ಆದರೆ, ಕೃತಿಯ ಪರಿಸರ ಮುಂಬಯಿಯೆಂದಾದಾಗ, ಮಂಗಳೂರು ಕೂಡಾ ಕುಗ್ರಾಮವೇ ಎನಿಸುತ್ತದೆ!

ಕೃತಿಯು ನಿರೂಪಿಸುವ ಹೊರ ವಿವರಗಳೊಂದಿಗೆ ಅದರ ಆಂತರಿಕ ಸಂವಿಧಾನವನ್ನೂ ಗಣನೆಗೆ ತಂದುಕೊಂಡಾಗ ಈ ಸಮಸ್ಯೆಯು ಮತ್ತಷ್ಟು ಜಟಿಲವಾಗುತ್ತದೆ. ನಾವು ಸಾಮಾನ್ಯವಾಗಿ ಮಾಡುವಂತೆ, ಬದುಕಿನ ಸಂಕೀರ್ಣತೆ, ದ್ವಂದ್ವ, ಸೋಗಲಾಡಿತನ, ಯಾಂತ್ರಿಕತೆ, ಜೀವನ ವಿಮುಖವಾದ ಧೋರಣೆಗಳನ್ನು ನಗರಕ್ಕೇ ಸೀಮಿತಗೊಳಿಸುವುದು ಎಷ್ಟುರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯು ಇಲ್ಲಿ ಎದುರಾಗುತ್ತದೆ.

ಸಾಹಿತ್ಯದ ಕಾಲವು ಇಷ್ಟೇ ಮುಖ್ಯವಾದ ಇನ್ನೊಂದು ಅಂಶವಾಗಿದೆ. ಕಾಲಗತಿಯಲ್ಲಿಹಿಂದೆ ಸರಿಯದ ಹೊರತು, ನಿರ್ದಿಷ್ಟ ಕೃತಿಯೊಂದು ಪ್ರಸ್ತಾಪಿಸುವ ‘ನಗರ’ವನ್ನು ಪೂರ್ಣ ಪ್ರಮಾಣದಲ್ಲಿ ಗ್ರಹಿಸುವುದು ಸಾಧ್ಯವಾಗಲಾರದು. ಪಂಜೆ ಮಂಗೇಶರಾಯರ, ‘ಕಮಲಾಪುರ ಹೊಟ್ಲಿ’ಗೂ ವ್ಯಾಸರಾವ್ ನಿಂಜೂರರ ‘ಚಾಮುಂಡೇಶ್ವರಿ ಭವನ’ಕ್ಕೂ ನಡುವೆ ಅರ್ಧ ಶತಮಾನಕ್ಕೂ ಮೀರಿದ ಅಂತರವಿದೆ. ಹೀಗಾಗಿ ‘ಇದೇ ನಗರ’ ಎನ್ನುವ ನಿರ್ಧಾರವಾಗಲಿ, ಈ ನಿರ್ದಿಷ್ಟ ಭೌಗೋಳಿಕ ಪರಿಧಿಯ ಒಳಗೇ ‘ನಗರ ಪ್ರಜ್ಞೆ’ಯನ್ನು ಗುರುತಿಸಬೇಕೆಂದಾಗಲೀ ಹೇಗೆ ಗೆರೆಯನ್ನು ಕೊರೆಯೋಣ?

ಈ ಸಂದರ್ಭದಲ್ಲಿ, ‘ನಗರ ಪ್ರಜ್ಞೆ’ಗೆ ಇರುವ ಒಂದು ರೀತಿಯ ಮೇಲರಿಮೆಯನ್ನು ಪ್ರಸ್ತಾಪಿಸಬೇಕು. ಇದನ್ನು ಪ್ರಗತಿಯ ಹಂಬಲ, ‘ಹೊಸತಿನ ಆಕರ್ಷಣೆ’ಯೆಂದು ಅರ್ಥೈಸಿ ಕೊಳ್ಳುವ ಅಪಾಯಗಳೂ ಇಲ್ಲದಿಲ್ಲ. ನಗರದ ಆಡಂಬರ, ನಾಗರಿಕತೆಯ ಹುಸಿ ಮಾದರಿಗಳು ಪ್ರತಿ ವ್ಯಕ್ತಿಯನ್ನೂ ಕೈ ಮಾಡಿ ಕರೆಯುವ ವೈಚಿತ್ರ್ಯಕ್ಕೆ ಇಲ್ಲಿ ಕಾರಣಗಳು ಸಿಗುತ್ತವೆ. ಆತನ ಸೌಂರ್ದಪ್ರಜ್ಞೆ, ಪರಿಸರ ಪ್ರೀತಿಗಳು ಹಳ್ಳಿಯ ಬದುಕನ್ನು ಆಸ್ವಾದಿಸುತ್ತವೆ. ಆ ತಾತ್ಕಾಲಿಕ ಅನುಭವವೇ ಸ್ಥಿರವಾಗುವ ಸ್ಥಿತಿಯನ್ನು ಮಾತ್ರ ಆತ ಸ್ವೀಕರಿಸಲಾರ. ಈ ಹಿಂಜರಿಕೆಯನ್ನು ಸರಳಗೊಳಿಸಿಕೊಂಡಾಗ ಬಾಹ್ಯ ಸೌಲಭ್ಯಗಳು, ಪರಿಕರಗಳು, ನಯನಾಜೂಕುತನಗಳು, ಶಿಸ್ತು, ಕ್ರಮಬದ್ಧತೆಗಳು ಆತನನ್ನೂ ಆಕರ್ಷಿಸುತ್ತವೆ. ಆತ ಅನುಕರಣೆಯತ್ತ ವಾಲುತ್ತಾನೆ. ತನಗೆ ಸಹಜವಾಗಿ ಮೈಗೂಡಿರುವ, ಕುಡಿ ಬಾಳೆಯೆಲೆಯಲ್ಲಿ ಪ್ರಮಾಣಬದ್ಧವಾಗಿ, ವಿವಿಧ ವ್ಯಂಜನಗಳೊಂದಿಗೆ ಪರಿಷ್ಕಾರವಾಗಿ ಉಣ್ಣುವ ಕಲೆಯಲ್ಲಿ ನುರಿತಿರುವ ಗ್ರಾಮೀಣ ಯುವಕ, ಮುಳ್ಳುಚಮಚಚೂರಿಯನ್ನು ಬಳಸಲು ತನಗೆ ಬರದಲ್ಲಾ ಎನ್ನುವ ಕೀಳರಿಮೆಯಿಂದ ಮುದುಡಿಕೊಳ್ಳುತ್ತಾನೆ!

ಆದುದರಿಂದ ‘ನಗರ ಪ್ರಜ್ಞೆ’ಯೆಂದರೆ, ಆಧುನಿಕ ಜೀವನ ವಿಧಾನದತ್ತ ದಾಪುಗಾಲಿಡುವ ತವಕವೇ ನಗರೀಕರಣ ಪ್ರಕ್ರಿಯೆಗೆ ಕುರುಡಾಗಿ ಒಳಪಡುತ್ತ ಸಾಂಸ್ಕೃತಿಕ ಅಸ್ಮಿತೆಗೆ ವಿದಾಯ ಹೇಳುವ ಪ್ರವೃತ್ತಿಯೇ? ಚಲನಶೀಲವಾದ ಸಾಂಸ್ಕೃತಿಕ ಸ್ಥಿತ್ಯಂತರದ ಅನಿವಾರ್ಯವೂ, ಅಪರಿಹಾರ್ಯವೂ ಆದ ಘಟ್ಟವೇ? ಎನ್ನುವ ಗೊಂದಲಗಳು ಹಾಗೇ ಉಳಿದುಬಿಡುತ್ತವೆ.

ಎಷ್ಟೋ ವಿಮರ್ಶಕರೂ ಬರೆಹಗಾರರೂ ಕೈಗಾರಿಕೀಕರಣ, ಯಾಂತ್ರೀಕರಣ ಮೊದಲಾದ ಬಾಹ್ಯ ವಿವರಗಳೇ ಮುನ್ನೆಲೆಗೆ ಬರುವ ‘ನಗರೀಕರಣ ಪ್ರಕ್ರಿಯೆ’ಯನ್ನು ನಗರಪ್ರಜ್ಞೆಯೊಂದಿಗೆ ಸಮೀಕರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ‘ನಗರ ಪ್ರಜ್ಞೆ’ಗೆ ವಿಶಿಷ್ಟ ವಾದ, ಪಾರಿಭಾಷಿಕ ನೆಲೆಯನ್ನು ಕಂಡುಕೊಳ್ಳುವ ಯತ್ನವನ್ನು ಇಲ್ಲಿ ಮಾಡಿದ್ದೇನೆ.

ನಗರಕ್ಕೂ ನಗರಪ್ರಜ್ಞೆಗೂ ಸಂಬಂಧ ಇರಲೇಬೇಕೆಂದಿಲ್ಲ. ಆಕಸ್ಮಿಕವಾಗಿ ಆ ಪ್ರಜ್ಞೆ ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡುಬರಬಹುದೋ ಏನೋ. ಆದರೆ ಅದು ನಗರಕ್ಕೇ ಸೀಮಿತವೆನ್ನುವಂತಿಲ್ಲ. ಅದು ಬಾಹ್ಯ ವಿವರಗಳಿಗಾಗಲಿ, ಬಹಿರ್ಮುಖಿ ವ್ಯಾಪಾರಗಳಿಗಾಗಲಿ ಸಂಬಂಧಿಸಿದುದಲ್ಲ. ಹೆಸರೇ ಸೂಚಿಸುವ ಹಾಗೆ, ಅದು ಒಂದು ಮನೋವೃತ್ತಿ. ಕನ್ನಡದ ಸಂದರ್ಭದಲ್ಲಿ ಅದನ್ನು ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿರುವುದರಿಂದ, ಅದರ ಕೆಲವು ಲಕ್ಷಣಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ವ್ಯಕ್ತಿಯು ತನ್ನ ಅಕ್ಷಾಂಶ-ರೇಖಾಂಶಗಳನ್ನು ಗುರುತಿಸಿಕೊಂಡು ಅದರೊಳಗೇ ಸುತ್ತು ವುದನ್ನು ರೂಢಿ ಮಾಡಿಕೊಂಡಿರುವ ಸ್ವ-ಕೇಂದ್ರಿತ ಮನೋವೃತ್ತಿಯನ್ನು ನಗರಪ್ರಜ್ಞೆಯ  ಪ್ರಮುಖ ಲಕ್ಷಣಗಳಲ್ಲಿ ಒಂದಾಗಿ ಗುರುತಿಸಬಹುದು. ಇದನ್ನು ಹಿಗ್ಗಿಸಿದಾಗ, ಲಾಭಾಕಾಂಕ್ಷೆ, ಸ್ವಾರ್ಥಪರ ನಿಲುವು, ಸಮಾಜದಿಂದ ಸಿಡಿದುನಿಲ್ಲುವ ಪ್ರವೃತ್ತಿಗಳೂ ವ್ಯಕ್ತವಾಗುತ್ತವೆ.

ಈ ನಗರಪ್ರಜ್ಞೆಯು ಮನಸ್ಸಿನ ಸಂಕೀರ್ಣ ಗುಣವನ್ನು ಸೂಚಿಸುತ್ತದೆ. ಇದು ಹಲವು ನೆಲೆಗಳಲ್ಲಿ ಅಭಿವ್ಯಕ್ತವಾಗುತ್ತದೆ. ಗೊರೂರು ರಾಮಸ್ವಾಮಿ ಅಯ್ಯಂಗಾರರ ಬಿಚ್ಚು ಮನಸ್ಸಿನ ಪಾತ್ರಗಳನ್ನೂ, ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ನಾಗಪ್ಪನ ನಾಲಿಗೆ ನುಡಿಯುವುದೇ ಬೇರೆ, ಮನಸ್ಸು ಅಂದುಕೊಳ್ಳುವುದೇ ಬೇರೆಯಾಗುವ ವಿಧಾನವನ್ನೂ ಹೋಲಿಸಿದಾಗ ಇದರ ಒಂದು ನೆಲೆಯು ಸ್ಪಷ್ಟವಾಗುತ್ತದೆ. ಹೀಗೆಯೇ, ಮಾನವೀಯ ಸಂಬಂಧಗಳ ಮಧ್ಯೆಯೂ ಸಂಕೀರ್ಣತೆಯು ತಲೆ ಹಾಕುತ್ತದೆ. ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಕಾದಂಬರಿಯ ಯಾಮಿನಿಯ ವ್ಯವಹಾರಗಳನ್ನು, ನಡೆವಳಿಕೆಗಳನ್ನು ಈ ದೃಷ್ಟಿ ಯಿಂದ ಗಮನಿಸಬಹುದು.

ಈ ಭಾವಗಳು ಬಲಿತಂತೆ ವ್ಯಕ್ತಿಯಲ್ಲಿ ಇವು ಅನಾಥ ಅನಿಸಿಕೆಗಳಲ್ಲಿ ಪರಿಣಮಿಸುತ್ತವೆ. ಇಲ್ಲಿ ಯಾರನ್ನೂ ತನ್ನವರೆಂದುಕೊಳ್ಳಲಾರದ, ಯಾರೊಂದಿಗೂ ಭಾವನಾತ್ಮಕವಾದ ಜೀವಂತ ವಾದ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲಾರದ ಅಸಹಾಯಕತೆಯನ್ನು ನಾನು ಗುರುತಿಸುತ್ತೇನೆ. ಎಂದರೆ, ಯಾರಿಗೂ ಬೇಡವಾದ – ಏಕಾಂಗಿತನದಲ್ಲಿ ಮನಸ್ಸು ಚಡಪಡಿಸುತ್ತದೆ. ಈ ‘ದ್ವೀಪಾಂತರ ವಾಸ’ದಿಂದಾಗಿ ತಂದೆ ಮಕ್ಕಳ ನಡುವೆ, ಗಂಡ ಹೆಂಡತಿ ನಡುವೆ, ಆಪ್ತ ಸ್ನೇಹಿತರ ನಡುವೆ ಇರಬಹುದಾದ ಸಂಬಂಧ ಸೇತುಗಳು ಕುಸಿದು ಕಂದಕಗಳಾಗುತ್ತವೆ. ಗೋಡೆಗಳು ಎದ್ದು ನಿಲ್ಲುತ್ತವೆ. ಅಪರಿಚಿತತನ (Alienation)ವು ವ್ಯಕ್ತಿಯ ಒಳಗನ್ನು ಮುತ್ತಿಬಿಡುತ್ತದೆ. ಪರಸ್ಪರ ವಿಶ್ವಾಸ, ನಂಬಿಕೆ, ಅವಲಂಬನೆ, ಆದರಗಳ ಸ್ಥಾನವನ್ನು ಸಂಶಯ, ನಿರಾಕರಣೆ, ಬೇಡಿಕೆಗಳು ಆಕ್ರಮಿಸುತ್ತವೆ.

ಮನೋವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ವ್ಯಕ್ತಿಯ ಮನೋಭಾವದಲ್ಲಿ ಒಂದು ರೀತಿಯ ಸವಾಲುಗಳನ್ನು ಎದುರಿಸುವ ಪ್ರವೃತ್ತಿ ನಿರ್ಮಾಣಗೊಳ್ಳುತ್ತದೆ. ಇದು ಆತ್ಮವಿಶ್ವಾಸ ವೆನ್ನುವುದಕ್ಕಿಂತ ಹೆಚ್ಚಾಗಿ ಅನಿವಾರ್ಯತೆಯ ಪರಿಣಾಮವೆನ್ನಬಹುದು. ಈ ಸ್ಥಿತಿಯಲ್ಲಿ ಒತ್ತಡಗಳನ್ನು ನಿಭಾಯಿಸುವ ಆತಂಕವಿರುತ್ತದೆಯೇ ಹೊರತಾಗಿ ಯಶಸ್ಸನ್ನು ಆಸ್ವಾದಿಸಬಲ್ಲ ಸಮಚಿತ್ತವೂ ಅಲ್ಲ, ಸೋಲಿನಿಂದ ಗಟ್ಟಿಗೊಳ್ಳಬಹುದಾದ ಚೈತನ್ಯವೂ ಅಲ್ಲ, ಸ್ವಂತಿಕೆಯ ಅಭಾವ, ಸ್ವಸಾಮರ್ಥ್ಯ ಹಾಗೂ ಮಿತಿಗಳ ಬಗೆಗಿನ ಅಸ್ಪಷ್ಟತೆಗಳೂ ಇಲ್ಲಿ ಪರಿಗಣಿಸಬೇಕಾದ ಅಂಶಗಳೇ ಆಗಿವೆ.

ಇದೇ ಮಾದರಿಯಲ್ಲಿ ಹತಾಶೆ, ನಿರಾಶೆ, ಉದ್ವಿಗ್ನತೆ, ಕೃತಕ ಆವರಣಗಳನ್ನೂ ಪರಿಶೀಲಿಸ ಬಹುದು. ಇಂಥ ಋಣಾತ್ಮಕ ಮನೋಭಾವವು ಬೆಳೆಯುವುದರ ಹಿಂದಿನ ಅನೇಕ ಕಾರಣಗಳಲ್ಲಿ ನಗರವಾಸವೂ ಒಂದಾಗಿರಬಹುದು. ಆದರೆ ಈ ಪ್ರಜ್ಞೆಯು ಬೆಳೆಯುವುದಕ್ಕೂ ವ್ಯಕ್ತಿಯು ವಾಸಿಸುವ ಪರಿಸರಕ್ಕೂ ನೇರವಾದ ಸಂಬಂಧ ಇರಲೇಬೇಕಾಗಿಲ್ಲವೆನ್ನುವುದು ಇಲ್ಲಿಯ ಪ್ರಮೇಯ. ಮುಂಬಯಿಯಂಥ ಮಹಾನಗರವಾಸಿಯಲ್ಲೂ ಮುಗ್ಧವಾದ, ನಿರ್ಮಲವಾದ ಗ್ರಾಮೀಣ ಪ್ರಜ್ಞೆಯು ಇರಬಹುದು. ದಿಡುಪೆಯಂಥ ಕುಗ್ರಾಮದಲ್ಲೂ ದಟ್ಟವಾದ ನಗರಪ್ರಜ್ಞೆ ಯಿರುವ ವ್ಯಕ್ತಿಗಳು ಕಾಣಸಿಗಬಹುದು. ಈ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಯನ್ನು ಹೊಸ ವ್ಯಾಖ್ಯಾನಕ್ಕೆ ಒಡ್ಡಬೇಕಾದ ಅಗತ್ಯವು ಮನವರಿಕೆಯಾಗುತ್ತದೆ.