ಅನನ್ಯವಾದ ಸಂಸ್ಕೃತಿಯೊಂದರ ಮೇಲೆ ಪರಕೀಯ ಆಕ್ರಮಣವಾದಾಗ, ಅಪೇಕ್ಷಿತ-ಅನಪೇಕ್ಷಿತ ಪರಿಣಾಮಗಳೆರಡೂ ಉಂಟಾಗುತ್ತವೆ. ಒಂದೆಡೆಯಿಂದ, ಮೂಲ ಸಂಸ್ಕೃತಿಯು ಬಾಹ್ಯ ವ್ಯಂಜನಗಳನ್ನು, ಅರಿವಿನ ಹೊಸ ಆಯಾಮಗಳನ್ನು, ಅಭಿವ್ಯಕ್ತಿ ವೈವಿಧ್ಯಗಳನ್ನು ಮೈಗೂಡಿಸಿಕೊಂಡು ಪುಷ್ಟವಾಗುತ್ತದೆ. ಇನ್ನೊಂದೆಡೆಯಿಂದ, ಸದೃಢವಾಗಿರುವ ತನ್ನ ಸಾಂಸ್ಕೃತಿಕ ಬೇರುಗಳನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಇದನ್ನು ಭಾರತೀಯ ಸಂದರ್ಭಕ್ಕೆ ಅನ್ವಯಿಸಿಕೊಂಡಾಗ ರವೀಂದ್ರನಾಥ ಠಾಕೂರರ ಆಲೋಚನೆಯ ಗತಿಯು ಪ್ರಸ್ತುತವಾಗುತ್ತದೆ. ಅವರು ಹೇಳುವ, “ಒಂದಾನೊಂದು ಕಾಲದಲ್ಲಿ, ನಮ್ಮಲ್ಲಿ ನಮ್ಮದೇ ಆದ ಮನಸ್ಸಿತ್ತು. ಅದು ಜೀವಂತವಾಗಿತ್ತು. ಆಲೋಚಿಸುತ್ತಿತ್ತು. ಅನುಭವಿಸುತ್ತಿತ್ತು. ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತಿತ್ತು. ಅದು ಗ್ರಹಣಶೀಲವೂ, ತೀವ್ರ ಕ್ರಿಯಾಶೀಲವೂ ಆಗಿತ್ತು” (Kripalani, K.R : Ravindranath Tagore : A Biography, New York : Grove Press, 1962, P. 193)

ಎನ್ನುವ ಮಾತುಗಳು ಇಲ್ಲಿ ಗಮನಾರ್ಹವಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ವಸಾಹತು ಶಾಹಿಯ ಬಳಿಕದ ನಮ್ಮ ಚಿಂತನೆಯ ಕ್ರಮದಲ್ಲಿಯೇ ಕುರುಡು ಅನುಕರಣೆಯ ಪ್ರವೃತ್ತಿಯು ತಲೆಹಾಕಿತ್ತು. ಈ ಮಾನಸಿಕ ಜಾಡ್ಯದ ಹಿನ್ನೆಲೆಯಲ್ಲಿರುವ ಪಶ್ಚಿಮದ ಪ್ರಭಾವವು ಗುರುತರವಾದುದು.

ಇಲ್ಲಿ ಪ್ರತಿಯೊಂದಕ್ಕೂ ಪಶ್ಚಿಮದ ಕಡೆ ಮುಖ ಮಾಡುವುದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡಿರುವುದು ನಮ್ಮ ಇತಿಹಾಸದಲ್ಲಿ, ಪರಂಪರೆಯಲ್ಲಿ, ಸಾಧ್ಯತೆಗಳಲ್ಲಿ ನಾವು  ನಂಬಿಕೆ ಕಳೆದುಕೊಂಡುದಾಗಿದೆ. ಈ ದುರಂತದ ಗಂಭೀರತೆಯನ್ನು ಹೆಚ್ಚಿಸುವ ಇನ್ನೊಂದು ಅಂಶವೆಂದರೆ, ಭಾರತೀಯ ಪ್ರಜ್ಞೆಯ ಮುಂದೆ ವಿದೇಶೀಯರು ಕಡೆದಿಟ್ಟ ಸಿದ್ಧ ಮಾದರಿಗಳು ಅಲ್ಲಿಗೆ ಅನಿವಾರ್ಯವೆನಿಸಿದ ರೀತಿಯಾಗಿದೆ. ಆ ‘ಹಿರಿ ಸಂಸ್ಕೃತಿ’ಯಿಂದ ಬಂದುದೆಲ್ಲವೂ ಶ್ರೇಷ್ಠವೆಂಬ ಭ್ರಮೆಯಲ್ಲಿರುವ ನಮ್ಮ ಬೌದ್ದಿಕ ವರ್ಗವು, ಈ ನೆಲಕ್ಕೆ, ಸಂಸ್ಕೃತಿಗೆ, ಪರಿಸರಕ್ಕೆ ಸಹಜವಾದ ಮಾದರಿಗಳನ್ನು ಗುರುತಿಸುವ ಪ್ರಯತ್ನಕ್ಕೂ ಹೋಗದೆ, ಅನ್ಯದೇಸೀಯ ವಾದುದನ್ನು ತನ್ನದನ್ನಾಗಿ ಸ್ವೀಕರಿಸಿದೆ, ಸ್ವೀಕರಿಸುತ್ತಾ ಇದೆ. ಈ ಹೇಳಿಕೆಯು ಭಾರತೀಯ ಸಾಹಿತ್ಯ, ವಿದ್ಯಾಭ್ಯಾಸ ಪದ್ಧತಿ, ಚಿಂತನ ಪ್ರಕ್ರಿಯೆ, ಅಭಿವ್ಯಕ್ತಿ ವಿಧಾನಗಳನ್ನು ಒಳಗೊಂಡ ಸಮಗ್ರ ಸಾಂಸ್ಕೃತಿಕ ಪರಿಸರಕ್ಕೂ ಸಲ್ಲುತ್ತದೆ. ಈ ಸ್ವಂತದ ನೆಲೆಯನ್ನು ನಿರಾಕರಿಸುವ ಪ್ರವೃತ್ತಿಯು ಅಪಾಯಕಾರಿಯಾದ ಮಟ್ಟಕ್ಕೆ ಬೆಳೆದುದರಿಂದಲೇ ಪಶ್ಚಿಮದ ಸಾಂಸ್ಕೃತಿಕ ಅಂಶಗಳನ್ನಾಗಲಿ, ಪಾಶ್ಚಿಮಾತ್ಯ ವಿದ್ವಾಂಸರ ಕೊಡುಗೆಗಳನ್ನಾಗಲಿ ಭಾರತೀಯ ಸಂದರ್ಭ ದಲ್ಲಿಟ್ಟು ನೋಡುವ ನಿಷ್ಪಕ್ಷಪಾತವಾದ, ತುಲನಾತ್ಮಕವಾದ ದೃಷ್ಟಿಕೋನವು ಇಲ್ಲಿ ಬೆಳೆಯಲಿಲ್ಲ. ಈ ಆರಾಧಕ ಮನೋವೃತ್ತಿಯನ್ನು, ಬೌದ್ದಿಕ ವಸಾಹತುತನವನ್ನು ಮೀರಿದ ವಸ್ತುನಿಷ್ಠವಾದ ಅಧ್ಯಯನಗಳು ನಮ್ಮ ಅಸ್ಮಿತೆಯ ನಿರ್ಧಾರದ ದೃಷ್ಟಿಯಿಂದ ಅನಿವಾರ್ಯ ವಾಗಿವೆ.

“ಕನ್ನಡ ನಿಘಂಟು” ಇಂಥ ಅಧ್ಯಯನವನ್ನು ನಿರೀಕ್ಷಿಸುವ ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿದೆ.

ಆಧುನಿಕ ಕನ್ನಡ ನಿಘಂಟುಗಳಿಗೆ ಒಂದು ಶಾಸ್ತ್ರೀಯ ನೆಲೆಯನ್ನು ಕಲ್ಪಿಸುವ, ಅವುಗಳನ್ನು ಹೆಚ್ಚು ಉಪಯುಕ್ತಗೊಳಿಸುವ ಕಾರ್ಯದಲ್ಲಿ ವಿದೇಶೀಯರ ಕೊಡುಗೆ ವೈಶಿಷ್ಟ್ಯಪೂರ್ಣ ವಾದುದೇ ಆಗಿದೆ. ಇದರ ಸ್ವರೂಪದ ವಸ್ತುನಿಷ್ಠವಾದ ಮೌಲ್ಯಮಾಪನಕ್ಕೆ ಹೊರಡುವ ಅಭ್ಯಾಸಿಯು – ಮುಖ್ಯವಾಗಿ – ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ.

ಮೊದಲನೆಯದು, ಆ ಕಾಲದಲ್ಲಿ ಸಂವಹನದ ಸಮಸ್ಯೆಯನ್ನು ತೀವ್ರವಾಗಿ ಎದುರಿ ಸುತ್ತಿದ್ದ ವಿದೇಶೀಯರನ್ನು ನಿಘಂಟಿನಂಥ ಪರಾಮರ್ಶನ ಸಾಮಗ್ರಿಯ ಕೊರತೆಯು ಕಾಡಿದ ರೀತಿ. ಧರ್ಮ ಪ್ರಚಾರವನ್ನು ಮೂಲ ಉದ್ದೆಶವಾಗಿಟ್ಟುಕೊಂಡಿದ್ದ ಹೆಚ್ಚಿನ ವಿದೇಶೀಯರಿಗೆ ಪ್ರಾದೇಶಿಕ ಭಾಷೆಯನ್ನು ಶುದ್ಧವಾಗಿ, ಶೀಘ್ರವಾಗಿ ಕಲಿಯುವುದು ತೀರಾ ಅಗತ್ಯವೆನಿಸಿತ್ತು. ಅವರ ಪ್ರವಚನಗಳ ಶ್ರೋತೃಗಳಾಗಲಿ, ಮತಾಂತರಕ್ಕೆ ಲಕ್ಷ್ಯವಾಗಿದ್ದ ಜನಸಾಮಾನ್ಯರಾಗಲಿ ಸಮಾಜದ ಅಶಿಕ್ಷಿತ ವರ್ಗಕ್ಕೆ ಸೇರಿದವರಾಗಿದ್ದರು. ಅವರೊಡನೆ ಸಂಪರ್ಕವನ್ನು ಸಾಧಿಸುವ ಪ್ರಾದೇಶಿಕ ಭಾಷಾ ಮಾಧ್ಯಮದ ಬಳಕೆಯು ವಿದೇಶೀ ಮತ-ಪ್ರಚಾರಕರಿಗೆ ಅನಿವಾರ್ಯ ವಾಯಿತು. ವಾಣಿಜ್ಯ ಪರವಾದ ಆಸಕ್ತಿಗಳೂ ಇದನ್ನು ಪ್ರೋತ್ಸಾಹಿಸುತ್ತಿದ್ದುವು. ವಿದೇಶೀಯರು ಕನ್ನಡ ನಿಘಂಟು ನಿರ್ಮಾಣ ಕಾರ್ಯದಲ್ಲಿ ತೀವ್ರವಾಗಿ ತೊಡಗಿಕೊಳ್ಳಲು ಇದು ಮುಖ್ಯವಾದ ಕಾರಣವಾಯಿತು.

ಎರಡನೆಯದಾಗಿ, ಕನ್ನಡ ನಿಘಂಟು ಕ್ಷೇತ್ರಕ್ಕೆ ವಿದೇಶೀಯರ ಕೊಡುಗೆಯನ್ನು ಪ್ರಸ್ತಾಪಿ ಸುವಾಗ, ಕನ್ನಡದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ ಶಬ್ದಕೋಶಗಳ ವಿವಿಧ ಪ್ರಕಾರಗಳನ್ನೂ, ಅವುಗಳ ವ್ಯಾಪ್ತಿಗಳನ್ನೂ ಪರಿಗಣಿಸಬೇಕಾಗುತ್ತದೆ. ಸಿದ್ಧವಾಗಿದ್ದ ಆಕರ ಸಾಮಗ್ರಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಪ್ರಕಟಿಸುವ ಕೆಲಸವನ್ನಷ್ಟೇ ಅವರು ಮಾಡಿದರೇ? ಇಲ್ಲ, ಶಬ್ದ ಸಂಗ್ರಹ, ವರ್ಗೀಕರಣ, ಆಯ್ಕೆ, ವ್ಯುತ್ಪತ್ತಿ ನಿರ್ಧಾರ, ಚಾರಿತ್ರಿಕತೆ, ಶಬ್ದರೂಪ ನಿಷ್ಕರ್ಷೆ ಮುಂತಾದ ನಿಘಂಟು ನಿರ್ಮಾಣದ ಎಲ್ಲಾ ಹಂತಗಳನ್ನೂ ಹೊಸತಾಗಿ ನಿರ್ವಹಿಸಿದರೇ? ಅಂದರೆ, ವಿದೇಶೀಯರು ಕನ್ನಡ ನಿಘಂಟು ನಿರ್ಮಾಣದ ಪ್ರಯತ್ನಗಳಿಗೆ ಕೈ ಹಾಕಿದ ಸಂದರ್ಭದಲ್ಲಿ ಇಲ್ಲಿ ಯಾವ ಪರಿಸ್ಥಿತಿಯಿತ್ತು? ಪಾಶ್ಚಾತ್ಯ – ಪ್ರಾದೇಶಿಕ ಸಂಪ್ರದಾಯಗಳ ಮುಖಾಮುಖಿಯು ಯಾವ ಸಂದರ್ಭದಲ್ಲಿ ಆಯಿತು?…. ಈ ಮೊದಲಾದ ಅಂಶಗಳ ವಿವೇಚನೆಯು ಇಲ್ಲಿ ಅವಶ್ಯವಾಗಿದೆ.

ಪ್ರಾಚೀನ ಕಾಲದಿಂದಲೇ ಭಾರತೀಯರ ಭಾವಕೋಶದಲ್ಲಿ ನಿಘಂಟಿಗೆ ಮಹತ್ವದ ಸ್ಥಾನವಿತ್ತು. ಶಬ್ದಕೋಶಗಳನ್ನು ಅವರು ಭಾಷಾಜ್ಞಾನಕ್ಕೆ ಅತ್ಯಗತ್ಯವಾದ ಪರಿಕರಗಳಲ್ಲಿ ಒಂದಾಗಿ ಪರಿಗಣಿಸಿದ್ದರು. ಕನ್ನಡದ ಪರಿಸ್ಥಿತಿಯೂ ಇದರಿಂದ ಭಿನ್ನವಾಗಿರಲಿಲ್ಲ. ಕ್ರಿ.ಶ. ೧೪ನೆಯ ಶತಮಾನದ ಅಭಿನವ ಮಂಗರಾಜನು ತನ್ನ ‘ಅಭಿನವಾಭಿದಾನ’ದಲ್ಲಿ ನಿಘಂಟಿನ ವ್ಯಾಪ್ತಿಯನ್ನು ಕಾವ್ಯಾತ್ಮಕವಾಗಿ ಹೇಳಿದ್ದಾನೆ –

“ಪಡೆದ ತಾಯಿಯಂತೆ ಅಲಂಕಾರದ ಅಂದಮನೀವುದು,
ಅಡರ್ದ ಪಿತನಂತೆ ಲಕ್ಷಣ ಸುಶಬ್ದಮನೀವುದು
ಒಡೆಯನಂತೆ ಪದಾರ್ಥಮನೀವುದು , ಅಂಗನೆಯಂತೆ
ಭಾವರಸಗಳನೀವುದು
ಕಡುಗುರುವಿನಂತೆ ವಿಭಕ್ತಿ ಲಿಂಗಮನೀವುದು
ಒಡನಾಡಿಯಂತೆ ತಾತ್ಪರ್ಯ ಅರ್ಥಮನೀವುದು ಎಂದು
ಒಡರಿಸಿದನು ಅಭಿನವ ನಿಘಂಟನು ಅಭಿನವ ಮಂಗನು
ಅಭಿನವ ವಿಲಾಸದಿಂದೆ”

ಇದು ನಿಘಂಟು ಒಳಗೊಳ್ಳುವ ವಿವರಗಳನ್ನೂ ದಾಖಲಿಸಿದೆ.

ಕನ್ನಡ ನಿಘಂಟಿನ ಚಾರಿತ್ರಿಕ ದೃಷ್ಟಿಯ ಅಧ್ಯಯನಕ್ಕೆ ಸಂಸ್ಕೃತ-ಕನ್ನಡ ಕೋಶಗಳು, ಕನ್ನಡ-ಕನ್ನಡ ಕೋಶಗಳು, ಇಂಗ್ಲಿಷ್-ಕನ್ನಡ ನಿಘಂಟುಗಳು, ಕನ್ನಡ-ಇಂಗ್ಲಿಷ್ ನಿಘಂಟು ಗಳು ಹಾಗೂ ಕನ್ನಡ-ಅನ್ಯಭಾಷಾ ನಿಘಂಟುಗಳು ಮುಖ್ಯವೆನಿಸುತ್ತವೆ.

ಕನ್ನಡದಲ್ಲಿ ನಿಘಂಟು ನಿರ್ಮಾಣ ಕಾರ್ಯವು ಕ್ರಿ.ಶ. ೧೦ನೆಯ ಶತಮಾನದಷ್ಟು ಹಿಂದೆಯೇ ಪ್ರಾರಂಭವಾಗಿತ್ತು. ಕವಿ ರನ್ನನ ‘ರನ್ನಕಂದ’ (ಕ್ರಿ.ಶ. ೯೯೩)ವನ್ನು ಈ ಪ್ರಕಾರದ ಮೊದಲ ಉಪಲಬ್ಧ ಕೃತಿಯಾಗಿ ಪರಿಗಣಿಸಬಹುದಾಗಿದೆ. “ಈ ಬಗೆಯ ಪ್ರಾಚೀನ ನಿಘಂಟುಗಳ ಸಂಖ್ಯೆ ೪೦ಕ್ಕೂ ಮಿಗಿಲಾಗಿದೆ. ….ವಿದೇಶೀಯ ಮತ್ತು ದೇಶೀಯ ವಿದ್ವಾಂಸರು ರಚಿಸಿರುವ ಸುಮಾರು ೨೦ ನಿಘಂಟುಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಸುಮಾರು ೬೦ ನಿಘಂಟುಗಳು ರಚಿತವಾಗಿವೆ” (ಸೀತಾರಾಮಯ್ಯ, ಎಂ.ವಿ., ಶಾಸ್ತ್ರ ಸಾಹಿತ್ಯ, ೧೯೭೫, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ಪು. ೧೮೩).

ಈ ನಿಘಂಟುಗಳಲ್ಲಿ – ಮುಖ್ಯವಾಗಿ – ಹಳಗನ್ನಡ – ಕನ್ನಡ ನಿಘಂಟುಗಳು, ಕನ್ನಡ-ಸಂಸ್ಕೃತ ನಿಘಂಟುಗಳು, ಸಂಸ್ಕೃತ-ಕನ್ನಡ ನಿಘಂಟುಗಳು, ವೈದ್ಯಕೋಶಗಳೇ ಮುಂತಾದ ಪಾರಿಭಾಷಿಕ ನಿಘಂಟುಗಳು ಸೇರಿವೆ. ಆ ಕಾಲದಲ್ಲಿ, ಕನ್ನಡ ನಿಘಂಟು ಕ್ಷೇತ್ರವು ಸಾಕಷ್ಟು ಸಮೃದ್ಧವಾಗಿತ್ತೆಂದು ಸೂಚಿಸುವ ದೃಷ್ಟಿಯಿಂದ ಮಾತ್ರ ಇವುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇವುಗಳ ವಿವರವಾದ ಜಿಜ್ಞಾಸೆಯು ಪ್ರಸ್ತುತ ಲೇಖನದ ವ್ಯಾಪ್ತಿಗೆ ಹೊರತಾಗಿದೆ.

ಈ ಲೇಖನದ ಸಂದರ್ಭದಲ್ಲಿ, ಇಂಗ್ಲಿಷ್-ಕನ್ನಡ ಮತ್ತು ಕನ್ನಡ-ಇಂಗ್ಲಿಷ್ ನಿಘಂಟು ಗಳಿಗೆ ಹೆಚ್ಚಿನ ಮಹತ್ವವಿದೆ. ಈ ವರ್ಗದಲ್ಲಿ ಕೆಳಗಿನ ನಿಘಂಟುಗಳು ಬರುತ್ತವೆ.

  1. English-Kannada Dictionary, William Reeves, 1824.
  2. Kannada-English Dictionary, Reeves and Sanderson, 1857.
  3. An English-Kanarese School Dictionary, F. Ziegler, 1876.
  4. Anglo-Kanarese Crown Disctionary, Christanuja Wasta, 1888.
  5. Kannada-English Dictionary, F. Kittel, 1894.
  6. Kannada-English Dictionary, J. Bucher, 1899.

ಉಪಲಬ್ಧ ಮಾಹಿತಿಗಳ ಆಧಾರದಿಂದ, ಕನ್ನಡ ನಿಘಂಟು ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ವಿದೇಶೀಯರಲ್ಲಿ ಈ ಕೆಳಗಿನವರು ಗಮನಾರ್ಹರಾಗುತ್ತಾರೆ. ವಿಲಿಯಂ ರೀವ್ಸ್, ಸ್ಯಾಂಡರ್‌ಸನ್, ಝಿಗ್ಲರ್, ಕಿಟ್ಟೆಲ್ ಮತ್ತು ಬುಚರ್, ಇವರಲ್ಲೂ ಅತ್ಯಂತ ಗಂಭೀರವಾದ ಪರಿಶೀಲನೆಗೆ ಒಳಗಾಗುವವರೆಂದರೆ, ಎಫ್. ಕಿಟ್ಟೆಲ್ ಮತ್ತು ಅವರ ಶಬ್ದಕೋಶದ ವೈಶಿಷ್ಟ್ಯಗಳು.

ಕಿಟ್ಟೆಲ್ಲರ ಕೋಶಕ್ಕಿಂತ ಹಿಂದೆ ಬಂದ ನಿಘಂಟುಗಳಲ್ಲಿ “A Dictionary & Canarese and English” ಮತ್ತು “A Manual Kanarese and English Dictionary”ಗಳು ಪ್ರಮುಖವಾಗಿವೆ. ಇವುಗಳಲ್ಲಿ ಮೊದಲನೆಯದನ್ನು ರೀವ್ಸ್ ಅವರು ಸಂಪಾದಿಸಿದ್ದರು. ಇದು ೧೮೩೨ರಲ್ಲಿ ಪ್ರಕಟವಾಯಿತು. ಇದನ್ನು ಆಧುನಿಕ ಕನ್ನಡ-ಇಂಗ್ಲಿಷ್ ನಿಘಂಟುಗಳಲ್ಲಿ ಪ್ರಪ್ರಥಮವಾದುದೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕನ್ನಡ ಮತ್ತು ಸಂಸ್ಕೃತ ಪದರೂಪಗಳಿಗೆ ಇಂಗ್ಲಿಷ್ ಅರ್ಥಗಳನ್ನು ಕೊಡಲಾಗಿದೆ. ಪದಗಳನ್ನು ಅಕಾರಾದಿಯಾಗಿ ಜೋಡಿಸಲಾಗಿದೆ. ಇದರ ಪರಿಷ್ಕೃತ ಆವೃತ್ತಿಯನ್ನು ಡ್ಯಾನಿಯಲ್ ಸ್ಯಾಂಡರ್‌ಸನ್ ಅವರು ೧೮೫೮ರಲ್ಲಿ ಹೊರತಂದರು. ಎರಡನೆಯ ನಿಘಂಟಿನ ಸಂಪಾದಕರು ಜಾನ್ ಗ್ಯಾರೆಟ್ ಅವರು. ಇದು ರೀವ್ಸ್‌ರ ನಿಘಂಟನ್ನು ಆಧರಿಸಿ ರಚಿತವಾಗಿದೆ. ಇದರ ನಿಶ್ಚಿತವಾದ ಕಾಲವು ತಿಳಿದಿಲ್ಲ.

ಮೇಲೆ ಉಲ್ಲೇಖಿಸಿದ ನಿಘಂಟುಗಳು ಬಗೆಗಿನ ಮಾಹಿತಿಗಳಲ್ಲಿ ಏಕರೂಪತೆಯಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಬೇಕಾಗಿದೆ. ನಿಘಂಟಿನ ಹೆಸರು, ಸಂಪಾದಕರ ಹೆಸರು, ಪ್ರಕಟವಾದ ವರ್ಷಗಳ ಸಂದರ್ಭಗಳಲ್ಲಿ ಬೇರೆ ಬೇರೆ ಮಾಹಿತಿಗಳು ಸಿಗುತ್ತವೆ. ಅವುಗಳನ್ನು ಯಥಾವತ್ತಾಗಿ ದಾಖಲಿಸುವ ಕೆಲಸವನ್ನಷ್ಟೇ ಇಲ್ಲಿ ಮಾಡಲಾಗಿದೆ. ಆಂತರಿಕ-ಬಾಹ್ಯ ಸಾಕ್ಷ್ಯಗಳ ಸೂಕ್ಷ್ಮವಾದ ಪರಿಶೀಲನೆಯಿಂದ ಇವುಗಳ ಅಧಿಕೃತತೆಯನ್ನು ನಿರ್ಧರಿಸುವುದು ಈ ದೃಷ್ಟಿಯಿಂದ ಅಗತ್ಯವಾಗಿದೆ.

ಈ ನಿಘಂಟುಗಳು ಚಾರಿತ್ರಿಕ ದೃಷ್ಟಿಯಿಂದ ಗಮನಾರ್ಹವಾಗಿವೆಯಾದರೂ, ಇವು ನಿಘಂಟು ರಚನಾ ವಿಧಾನ, ಮಾಹಿತಿ ಸಂಗ್ರಹ, ವರ್ಗೀಕರಣ ಮುಂತಾದುವುಗಳ ತಾತ್ವಿಕ ಹಿನ್ನೆಲೆಯನ್ನು ಕೊಡುವುದಿಲ್ಲ. ಆದುದರಿಂದ ಕಿಟ್ಟೆಲ್ಲರ ಕೋಶವೇ ‘ಆಧುನಿಕ ಕನ್ನಡದ ಮೊದಲ ಶಾಸ್ತ್ರೀಯ ನಿಘಂಟು’ ಎಂಬ ಮನ್ನಣೆಗೆ ಪಾತ್ರವಾಗುತ್ತದೆ.

ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ (೧೮೩೨-೧೯೦೩)ರು ಜರ್ಮನಿಯ ಕ್ರೈಸ್ತ ಮಿಷನರಿ ಗಳಾಗಿದ್ದರು. ಕ್ರಿ.ಶ. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಅವರು ಬಾಸೆಲ್ ಮಿಶನ್‌ನ ಆಶ್ರಯದಲ್ಲಿ, ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ನಿಯುಕ್ತರಾಗಿದ್ದರು. ಇವರು ಸಂಪಾದಿಸಿದ “A Kannada – English Dictionary”ಯು Basel Mission Book and Depository, Mangaloreನಿಂದ ೧೮೯೪ರಲ್ಲಿ ಪ್ರಕಟವಾಯಿತು.

ಇದರ ಸಂವಿಧಾನದ ಸ್ಥೂಲವಾದ ನಕ್ಷೆಯ ಇಲ್ಲಿ ಅಗತ್ಯವಾಗಿದೆ. ಇದು,

“A Lexicon is an invintory of the free forms of a Language arranged Systematically and against each from, is shown its functional load of meaning in each meaningful situation” (Katre, S.M. : Lexicography, Annamalainagar: Annamalai University, 1965, p.3) ಎನ್ನುವ ನಿರ್ವಚನಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತದೆ. ಕಿಟ್ಟೆಲ್ ಕೋಶದಲ್ಲಿ ಒಟ್ಟು ೧೭೫೨ ಪುಟಗಳಿವೆ. ೫೦ ಪುಟಗಳ ವ್ಯಾಪ್ತಿಯಿರುವ ಮೊದಲ ಭಾಗವು, “Corrections Conurning Preface” “Preface” ಮತ್ತು “List of Abbreviation”ಗಳನ್ನು ಒಳಗೊಂಡಿದೆ.

ಇಲ್ಲಿ ಇದರ ಮುನ್ನುಡಿಯನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಸಾಹಿತ್ಯದ, ನಿಘಂಟು ರಚನಾಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತವಾದ ಕೈಪಿಡಿಯಾಗಿದೆ. ತಮ್ಮ ನಿಘಂಟಿನ ತಾತ್ವಿಕ-ಶಾಸ್ತ್ರೀಯ ಹಿನ್ನೆಲೆಯನ್ನು, ಕ್ಷೇತ್ರಕಾರ್ಯದ ಸಮಗ್ರ ವಿಚಾರಗಳನ್ನು, ಶಬ್ದ ಸಂಪತ್ತಿನ ವೈವಿಧ್ಯವನ್ನು ಕಿಟ್ಟೆಲ್ಲರು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ. ಈ ಮುನ್ನುಡಿಯ ಮುಖ್ಯವಾದ ವೈಶಿಷ್ಟ್ಯಗಳನ್ನೂ, ಅದು ಒಳಗೊಂಡಿರುವ ಗಮನಾರ್ಹ ಮಾದರಿ ಗಳನ್ನೂ ಈ ಕೆಳಗಿನ ತಃಖ್ತೆಯಲ್ಲಿ ಸೂಚಿಸಲಾಗಿದೆ.

16_104_HHE_KUH

17_104_HHE_KUH

ನಿಘಂಟಿನ ಮುಖ್ಯ ಶರೀರದ ಪ್ರತಿ ಪುಟವನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿದೆ. ಇಲ್ಲಿಯ ನಮೂದುಗಳಲ್ಲಿ ಪದದ ಲಿಪ್ಯಂತರ, ಅರ್ಥ, ಪ್ರಯೋಗ, ಮೊದಲ ಉಲ್ಲೇಖ, ವ್ಯುತ್ಪತ್ತಿ, ರೂಪ, ಅಲಂಕಾರಗಳನ್ನು ಸಂದರ್ಭಗಳಿಗೆ ಅನುಗುಣವಾಗಿ ಕೊಡಲಾಗಿದೆ.

ಯಾವುದೇ ನಿಘಂಟಿನ ಮೌಲ್ಯಮಾನಪಕ್ಕೆ ಹೊರಡು ಅಭ್ಯಾಸಿಗೆ ಜಾನ್ಸನ್ ಅವರು ವರ್ಷಗಳ ಹಿಂದೆ ಹೇಳಿರುವ, “Dictionarics are like Watches, worst is better than none, the best cannot be exfected to go quite true” ಮಾತುಗಳು ಪ್ರಸ್ತುತವೆನಿಸುತ್ತವೆ. ನಿಘಂಟುಗಳ ಸಂದರ್ಭದಲ್ಲಿ ಪರಿಪೂರ್ಣತೆ, ಸಮಗ್ರತೆ, ಸರ್ವಕಾಲಿಕತೆ ಗಳು ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತವೆ. ಭಾಷೆ ಎನ್ನುವುದು ನಿಂತ ನೀರಲ್ಲ. ಅದು ಆದಾನ-ಪ್ರದಾನ ಚಟುವಟಿಕೆಗಳಿಂದ ಸತತ ಕ್ರಿಯಾಶೀಲವಾಗಿರುವ ಸಂವಹನ ಮಾಧ್ಯಮವಾಗಿದೆ. ಈ ದೃಷ್ಟಿಯಿಂದ ಬೆಳವಣಿಗೆಗಳು, ಬದಲಾವಣೆಗಳು, ಅರ್ಥಾಂತರಗಳು, ಹೊಸ ಶಬ್ದಗಳ-ಅರ್ಥಗಳ ಸೇರ್ಪಡೆಗಳು ನಡೆಯುತ್ತಲೇ ಇರುವ ಈ ಕ್ಷೇತ್ರದ ಮೌಲ್ಯ ನಿಷ್ಕರ್ಷೆ ಯನ್ನು ಕೃತಿಯ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲೇ ಮಾಡಬೇಕಾ ಗುತ್ತದೆ. ಇದು ನಿಘಂಟುಗಳ ಮೌಲ್ಯಮಾಪನದ ವ್ಯಾಪ್ತಿ-ಮಿತಿಗಳೆರಡನ್ನೂ ನಿರ್ಧರಿಸುತ್ತದೆ.

ಕೃತಿಯ ಅಧಿಕೃತತೆ, ವ್ಯಾಪ್ತಿ, ಚೌಕಟ್ಟು, ಒಳವ್ಯವಸ್ಥೆ, ಮಾಹಿತಿ, ವಿಶೇಷ ಲಕ್ಷಣಗಳು, ರೂಪವಿನ್ಯಾಸ ಇತ್ಯಾದಿ ಅಂಶಗಳನ್ನು ಆಧರಿಸಿ, ನಿಘಂಟುಗಳ ಮೌಲ್ಯಮಾಪನ ಕಾರ್ಯವು ನಡೆಯಬೇಕಾಗುತ್ತದೆ. ಇಲ್ಲಿಯ ಲಕ್ಷ್ಯವು ಕನ್ನಡ ನಿಘಂಟು ಕ್ಷೇತ್ರಕ್ಕೆ ವಿದೇಶೀಯರ ಕೊಡುಗೆಯ ಸ್ಥಾನ ನಿರ್ಧಾರವಾಗಿರುವುದರಿಂದ, ಒಂದು ಮಾದರಿಯೆಂಬ ನೆಲೆಯಲ್ಲಿ – ಕಿಟ್ಟೆಲ್ ಕೋಶದ ಆಶಯವನ್ನು ಇಲ್ಲಿ ಗಮನಿಸಲಾಗಿದೆ. ಅಭ್ಯಾಸದ ನಿಖರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಈ ಕೋಶದ ವೈಶಿಷ್ಟ್ಯಗಳನ್ನು ಆರು ಮುಖ್ಯ ನೆಲೆಗಳಿಂದ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಅವೆಂದರೆ :

೧. ಪರಾಮರ್ಶನ ಮೌಲ್ಯ (Reference Value)

೨. ಚಾರಿತ್ರಿಕ ಮೌಲ್ಯ (Historical Value)

೩. ಶಾಸ್ತ್ರೀಯ ಮೌಲ್ಯ (Methodological Value)

೪. ಭಾಷಿಕ ಮೌಲ್ಯ (Linguistic Value)

೫. ಸಾಹಿತ್ಯಿಕ ಮೌಲ್ಯ (Literary Value)

೬. ಸಾಂಸ್ಕೃತಿಕ ಮೌಲ್ಯ (Cultural Value)

ಇವುಗಳನ್ನು ಸ್ವಲ್ಪ ವಿವರವಾಗಿ ನೋಡಬಹುದಾಗಿದೆ.

. ಪರಾಮರ್ಶನ ಮೌಲ್ಯ

ನಿಘಂಟಿನ ನಿರ್ವಚನದಲ್ಲಿಯೇ ಅದರ ಪರಾಮರ್ಶನ ಮೌಲ್ಯವು ಗ್ರಹೀತವಾಗಿರುತ್ತದೆ. ಈಗಾಗಲೇ ಹೇಳಿರುವಂತೆ, ಕನ್ನಡದ ಮೊದಲ – ಆಧುನಿಕ ಅರ್ಥದಲ್ಲಿ – ಕೋಶವಾಗಿರುವ ಕಿಟ್ಟಲ್ ನಿಘಂಟು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿದೆ. ಆ ಕಾಲದ ಮಾನದಿಂದ ಸಮಗ್ರವೂ ಆಗಿದೆ. ಕನ್ನಡಕ್ಕೆ ತೀರಾ ಅವಶ್ಯವಾಗಿದ್ದ ಮೂಲ ಮಾದರಿಯೊಂದನ್ನು ಸೃಷ್ಟಿಸಿದೆ. ಇದರ ದ್ವಿಭಾಷಿಕ ವ್ಯಾಪ್ತಿಯು ಭಾಷೆ, ಸಾಹಿತ್ಯ, ಭಾಷಾಂತರ ಮುಂತಾದ ಜ್ಞಾನಶಾಖೆಗಳ ವಿದ್ಯಾರ್ಥಿ ಗಳ ದೃಷ್ಟಿಯಿಂದ ಬಹಳ ಉಪಯುಕ್ತವಾಗಿದೆ. ಪ್ರತಿ ನಮೂದಿನ ವಿವರಗಳು ಈ ಪರಾಮರ್ಶನ ಮೌಲ್ಯವನ್ನು ಹೆಚ್ಚಿಸುತ್ತವೆ.

. ಚಾರಿತ್ರಿಕ ಮೌಲ್ಯ

ಕಿಟ್ಟೆಲ್ ಕೋಶದ ಮೂಲ ರೂಪಾತ್ಮಕ ಮಾದರಿ (Seminal Model) ಮತ್ತು ಸತ್ವದ ಅನನ್ಯತೆಗಳು ಅದರ ಚಾರಿತ್ರಿಕ ಮೌಲ್ಯವನ್ನು ನಿರ್ಧರಿಸಲು ಸಹಕಾರಿಗಳಾಗುತ್ತವೆ. ಈ ಕೋಶವನ್ನು ಸಂಪಾದಿಸುವ ಕಾಲಕ್ಕೆ ಕಿಟ್ಟೆಲ್ಲರ ಮುಂದೆ ಯಾವುದೇ ನಿರ್ದಿಷ್ಟ ಅವಲೋಕನ ಸಾಮಗ್ರಿ(Reference)ಯಾಗಲಿ, ಸಹಾಯಕ ಸಿಬ್ಬಂದಿಯಾಗಲಿ, ಸಿದ್ಧ ಮಾದರಿಯಾಗಲಿ ಇರಲಿಲ್ಲ. ತಮ್ಮ ಕೋಶದ ಸಂವಿಧಾನ ನಿಷ್ಕರ್ಷೆ ಮತ್ತು ನಮೂದುಗಳ ಸ್ವರೂಪ ನಿರ್ಧಾರವನ್ನು ಅವರು ಸ್ವತಂತ್ರವಾಗಿ ಮಾಡಿಕೊಳ್ಳಬೇಕಾಯಿತು. ಶಬ್ದ ಸಂಗ್ರಹ ಕಾರ್ಯಕ್ಕಾಗಿ ಅವರು ಕನ್ನಡದಲ್ಲಿ ಉಪಲಬ್ಧವಾಗಿದ್ದ, ಅತ್ಯಂತ ಅವ್ಯವಸ್ಥಿತವೂ ಆಗಿದ್ದ ಕೋಶಗಳನ್ನು ಸಾಹಿತ್ಯ ಕೃತಿಗಳನ್ನು ಮಾತ್ರವಲ್ಲದೆ ಮೌಖಿಕ ಸಂಪ್ರದಾಯವನ್ನೂ ಬಳಸಿಕೊಂಡಿದ್ದರು. ಈ ದೃಷ್ಟಿಯಿಂದ, ಕಿಟ್ಟೆಲ್ ಕೋಶವು ಈ ಮಾದರಿಯ ನಿಘಂಟುಗಳಿಗೆ ಭದ್ರವಾದ ತಾತ್ವಿಕ ತಳಹದಿಯನ್ನು ಹಾಕಿಕೊಟ್ಟತೆನ್ನುವುದೇ ಅದರ ಚಾರಿತ್ರಿಕ ಮೌಲ್ಯದ ಮಾನದಂಡವಾಗುತ್ತದೆ.

. ಶಾಸ್ತ್ರೀಯ ಮೌಲ್ಯ

ಕಿಟ್ಟೆಲ್ಲರಿಗೆ ನಿಘಂಟು ರಚನಾಶಾಸ್ತ್ರ(Lexicography)ದ ಯಾವುದೇ ರೀತಿಯ ತರಬೇತಿಯ ಹಿನ್ನೆಲೆಯಿರಲಿಲ್ಲ. ಆದರೂ ಅವರು ತಮ್ಮ ಕೋಶದ ನಿರ್ಮಾಣದ ಸಂದರ್ಭ ದಲ್ಲಿ ವಹಿಸಿದ ತಾರ್ಕಿಕ ಎಚ್ಚರ, ತಾತ್ತ್ವಿಕ ನಿಖರತೆ ಮತ್ತು ಅನುಸರಿಸಿದ ಶಾಸ್ತ್ರೀಯ ವಿಧಾನಗಳು ಅಚ್ಚರಿ ಹುಟ್ಟಿಸುತ್ತವೆ. ದೃಢವಾದ ನಿಷ್ಠೆ ಮತ್ತು ಇಚ್ಛಾಶಕ್ತಿಗಳನ್ನಷ್ಟೇ ಬೆಂಬಲಕ್ಕಿಟ್ಟುಕೊಂಡು ಈ ಕಷ್ಟ ಸಾಧ್ಯವಾದ ಕಾರ್ಯವನ್ನು ಅವರು ಮಾಡಿ ತೋರಿಸಿದ್ದಾರೆ, ದೇಶೀಯ ಪ್ರತಿಭೆಗಳಿಗೂ ಮಾರ್ಗದರ್ಶಕರಾಗಿದ್ದಾರೆ.

ಈ ಕೆಳಗಿನ ತಃಖ್ತೆಯು ಯಾವುದೇ ನಿಘಂಟಿನ ಶಾಸ್ತ್ರೀಯ ತಳಹದಿಯ ನಿರ್ಧಾರಕ್ಕೆ ಅನ್ವಯಿಸಿಕೊಳ್ಳಬಹುದಾದ ಮುಖ್ಯ ಅಂಶಗಳನ್ನು ತೋರಿಸುತ್ತದೆ : (ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವ ದೃಷ್ಟಿಯಿಂದ ಅವುಗಳ ಇಂಗ್ಲಿಷ್ ರೂಪಗಳನ್ನು ಕನ್ನಡದಲ್ಲಿ ಸ್ಥೂಲವಾದ   ಭಾಷಾಂತರವನ್ನೂ ಕೊಡಲಾಗಿದೆ.)

ಶಬ್ದ ಸಂಗ್ರಹ : ಸಾಧನಗಳು (Means) ಮತ್ತು ಪ್ರಮಾಣಗಳು (Frames of Reference)

. ಸಾಧನಗಳು
ಕ್ರ.ಸಂ ಸಾಧನ ವಿವರಣೆ ಸ್ಥೂಲ ಭಾಷಾಂತರ
೧. ಸಂಪರ್ಕ (Contact) Field Work and Desk Work ಕ್ಷೇತ್ರಕಾರ್ಯ ಮತ್ತು ಪದ ಸಂಸ್ಕರಣೆ
೨. ಭಾಷಿಕ Inter pretations of (Philological) Written Records like Texts ಗ್ರಂಥಗಳ ಪರಿಶೀಲನೆ-ವಿಶ್ಲೇಷಣೆ
೩. ಪುನಾರಚನಾತ್ಮಕ (Reconstructive) Establishing internal, Comparative and glographical Links ಶಬ್ದಗಳ ಆಂತರಿಕ, ತೌಲನಿಕ ಮತ್ತು ಪ್ರಾದೇಶಿಕ ನೆಲೆಗಳ ಸಂಬಂಧಗಳ ಸ್ಥಾಪನೆ
೪. ತಾತ್ತ್ವಿಕ (Theoretical) Data postulated by a general theory of Linguistics ಸಂಗ್ರಹವಾದ ಮಾಹಿತಿಗಳಿಗೆ ಭಾಷಾ ವಿಜ್ಞಾನದ ತತ್ತ್ವಗಳ ಅನ್ವಯ
. ಪ್ರಮಾಣಗಳು
೧. ಸಿಂಕ್ರಾನಿಕ್ (Synchronic) Data treated with respect to Time and Space ಕಾಲ –  ದೇಶ ಪ್ರಮಾಣಿತ
೨. ಡಯಾಕ್ರಾನಿಕ್ (Diachronic) Data treated with respect to Time ಕಾಲ ಪ್ರಮಾಣಿತ
೩. ಡಯಾಟೋಪಿಕ್ (Diatopic) Data treated with respect to Span (Dialect) ವಲ ಪ್ರಮಾಣಿತ / ಉಪಭಾಷಿಕ ಪ್ರಮಾಣಿತ
೪. ಸಿಂಕ್ರಿಟಿಕ್ (Syneritic) Data treated with respect to typological, contrastive and generie ಸಾಂಕೇತಿಕ, ವಿರೋಧಾರ್ಥಕ ಮತ್ತು ಸಮೂಹ ವಾಚಕಗಳಿಂದ ಪ್ರಮಾಣಿತ

ಕಿಟ್ಟೆಲ್ಲರು ಮೇಲೆ ಉಲ್ಲೇಖಿಸಿದ ನಾಲ್ಕು ಸಾಧನಗಳನ್ನು ತಮ್ಮ ಶಬ್ದ ಸಂಗ್ರಹ ಕಾರ್ಯದಲ್ಲಿ ಬಳಸಿಕೊಂಡಿದ್ದಾರೆ. ಅವರು ಕನ್ನಡ ಪದಗಳ ಅರ್ಥವ್ಯಾಪ್ತಿ (Semantic) ಮತ್ತು ವಾಕ್ಯ ರಚನಾತ್ಮಕ (Synatactic) ನೆಲೆಗಳೆರಡನ್ನೂ ಆಯಾ ಸಂದರ್ಭಗಳಿಗೆ ಸಂವಾದಿಯಾಗಿ ಗ್ರಹಿಸಿದ್ದಾರೆ. ಸಂಗ್ರಹಿಸಿದ ಶಬ್ದಗಳನ್ನು – ವಿಶೇಷತಃ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿದವು – ಇತರ ದ್ರಾವಿಡ ಮತ್ತು ಇಂಡೋ-ಯುರೋಪಿಯನ್ ಭಾಷಾ ಶಬ್ದಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಆಂತರಿಕ ಮೌಲ್ಯ ಪರೀಕ್ಷೆ (Internal Validity Tests) ಬಾಹ್ಯ ಬಾಧ್ಯತೆಯ ತುಲನೆ (External Liability Verification) ತೌಲನಿಕ ಸ್ಥಾನ ನಿರ್ಧಾರ ಮತ್ತು ಪಾಟೀ ಪರಾಮರ್ಶೆ(Cross Reference)ಗಳ ಮೂಲಕ ಪರಿಷ್ಕರಿಸಿದ ಬಳಿಕವೇ ಕಿಟ್ಟೆಲ್ಲರು ತಮ್ಮ ಶಬ್ದ ಸಂಗ್ರಹಕ್ಕೆ ಅಂತಿಮ ರೂಪವನ್ನು ಕೊಟ್ಟರು. ಈ ಪರಿಶ್ರಮದ ಹಿನ್ನೆಲೆಯೇ ಈ ಕೋಶದ ಶಾಸ್ತ್ರೀಯ ತಳಹದಿಯನ್ನು ಸ್ಪಷ್ಟಪಡಿಸುತ್ತದೆ.

. ಭಾಷಿಕ ಮೌಲ್ಯ

ಯಾವುದೇ ಭಾಷೆಯ ಪದಸಂಪತ್ತು ಈ ಕೆಳಗಿನ ಮುಖ್ಯವಾದ ಒಳವಿಭಾಗಗಳನ್ನು ಹೊಂದಿರುತ್ತದೆ.

18_104_HHE_KUH

ಕಿಟ್ಟೆಲ್ಲರ ಕೋಶವು ಈ ಎಲ್ಲಾ ವರ್ಗಗಳ ಪದಗಳನ್ನು ಒಳಗೊಂಡಿದೆ. ಇಲ್ಲಿ ಗ್ರಾಂಥಿಕ, ಅಶ್ಲೀಲ, ಗ್ರಾಮ್ಯ ಮುಂತಾದ ಮಾನದಂಡಗಳನ್ನು ಅನುಸರಿಸಿ ಪದಗಳ ಆಯ್ಕೆಯು ನಡೆದಿಲ್ಲ. ಬದಲಿಗೆ ಕನ್ನಡದ ಸಮಗ್ರ ಪದಸಂಪತ್ತನ್ನು ಸಂಗ್ರಹಿಸುವತ್ತ ಲಕ್ಷ್ಯವನ್ನು ವಹಿಸಲಾಗಿದೆ. ಪ್ರತಿ ನಮೂದು ಸಂಪೂರ್ಣವಾಗುವಂತೆ ಎಚ್ಚರವನ್ನು ವಹಿಸಲಾಗಿದೆ. (ಅಂದರೆ, ಸಮಾನಾರ್ಥಕ, ಅರ್ಥ ವಿವರಣೆ, ರೂಪ, ವ್ಯುತ್ಪತ್ತಿ, ನಿದರ್ಶನ, ಉಲ್ಲೇಖ ಇತ್ಯಾದಿ ಪೋಷಕಾಂಗಗಳು ಎಲ್ಲಾ ನಮೂದುಗಳಲ್ಲೂ ಇರುವಂತೆ ನೋಡಿಕೊಳ್ಳಲಾಗಿದೆ.) ಈ ಎಲ್ಲಾ ಅಂಶಗಳು ಕಿಟ್ಟೆಲ್ ಕೋಶದ ಭಾಷಿಕ ಮೌಲ್ಯವನ್ನು ನಿರ್ಧರಿಸುತ್ತವೆ.

. ಸಾಹಿತ್ಯಿಕ ಮೌಲ್ಯ

ಕಿಟ್ಟೆಲ್ ಕೋಶವು ಸಾಹಿತ್ಯಿಕ ದೃಷ್ಟಿಯಿಂದಲೂ ವೈಶಿಷ್ಟ್ಯಪೂರ್ಣವಾಗಿದೆ. ಅಲ್ಲಿ ಕನ್ನಡ ಮತ್ತು ಇತರ ದ್ರಾವಿಡ ಭಾಷಾ ಕೃತಿಗಳಿಂದ ಉದ್ಧೃತವಾದ ಅನೇಕ ವಾಕ್ಯಗಳನ್ನು ಕಾಣಬಹುದಾಗಿದೆ. ಹೀಗೆ ಆಯ್ಕೆಯಾದ ಕೃತಿಗಳು – ಕಾಲದ ದೃಷ್ಟಿಯಿಂದ – ಒಂಭತ್ತು ಶತಮಾನಗಳಿಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿವೆ. ಅಂದರೆ, ಇಲ್ಲಿ ಪಂಪನ ಆದಿಪುರಾಣದ ಉಲ್ಲೇಖ – ಉದಾಹರಣೆಗಳೊಂದಿಗೆ ಎ. ಮ್ಯಾನರ್ ಅವರ ತುಳು-ಇಂಗ್ಲಿಷ್ ಕೋಶ (ಕ್ರಿ.ಶ. ೧೮೮೬)ದ ಉಲ್ಲೇಖಗಳನ್ನು ಕಾಣುತ್ತೇವೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳು ಇಲ್ಲಿ ಲಭ್ಯವಾಗಿವೆ. ಈ ಕೋಶವು, ಉಪಲಬ್ಧವಿರುವಲ್ಲೆಲ್ಲ ನಮೂದುಗಳ ಪ್ರಪ್ರಥಮ ಉಲ್ಲೇಖಗಳನ್ನು ಕೊಡುವುದರಿಂದ ಶಬ್ದವೊಂದು ಹಳಮೆ, ಅರ್ಥಾಂತರ, ಅರ್ಥ ವಿಸ್ತಾರಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ. ಅಂದರೆ, ‘ಶಬ್ದವೊಂದರ ಚರಿತ್ರೆ’ಯ ಪುನಾರಚನೆಗೆ ಬೇಕಾದ ಮಾಹಿತಿಯನ್ನು – ಆಂಶಿಕವಾಗಿಯೇ ಆದರೂ – ಇದು ಒದಗಿಸುತ್ತದೆ.

ಕಿಟ್ಟೆಲ್ ಕೋಶವು ಮೌಖಿಕ ಸಂಪ್ರದಾಯದ ಸಂರಕ್ಷಣೆಯ, ಸಂಪಾದನೆಯ ದೃಷ್ಟಿಗಳಿಂದಲೂ ಮಹತ್ವದ್ದಾಗಿದೆ. ಇಲ್ಲಿರುವ ಅಸಂಖ್ಯಾತ ಕನ್ನಡ ಗಾದೆಗಳ ಅಕಾರಾದಿ ಯಾದ ಉಲ್ಲೇಖಕ್ಕೆ ಪರಾಮರ್ಶನ ಮೌಲ್ಯವೂ ಇರುವುದರಿಂದ, ಈ ಕೋಶದ ಸಾಹಿತ್ಯಿಕ ಮೌಲಿಕತೆಯು ಹೆಚ್ಚುತ್ತದೆ.

. ಸಾಂಸ್ಕೃತಿಕ ಮೌಲ್ಯ

ಕರ್ನಾಟಕದ ಸಂಸ್ಕೃತಿಯನ್ನು ವಿದೇಶೀ ಕಣ್ಣುಗಳು ಗ್ರಹಿಸಿದ, ಅರ್ಥೈಸಿಕೊಂಡ, ಸ್ವೀಕರಿಸಿದ – ನಿರಾಕರಿಸಿದ ನೀತಿಗೆ ಸಾಕ್ಷ್ಯವಾಗಿ ಕಿಟ್ಟೆಲ್ ಕೋಶವು ನಮಗೆ ಪ್ರಸ್ತುತವಾಗುತ್ತದೆ.

ಇದರ ‘ಪ್ರಸ್ತಾವನೆ’ಯಲ್ಲಿ ಕಿಟ್ಟೆಲ್ಲರು ದ್ರಾವಿಡ ಭಾಷೆಯ ಪ್ರಭಾವವು ಸಂಸ್ಕೃತದ ಮೇಲೆ ಬಹಳ ಆಳವಾಗಿ ಆಗಿತ್ತೆನ್ನವುದನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಈ ವಾದದ ಪರಂಪರೆಯು ಕಿಟ್ಟೆಲ್ಲರ ಕಾಲಕ್ಕೆ ಮೊದಲೇ ಪ್ರಾರಂಭವಾಗಿತ್ತು. ಕ್ರಿ.ಶ. ೧೮೬೯ರಲ್ಲಿ ಹರ್ಮನ್ ಗುಂಡರ್ಟ್ ಅವರು ಈ ಬಗೆಗೆ “Journal of the German Oriental Society” (Vol. 23, 1869)ಯಲ್ಲಿ ವಿವರವಾದ ಲೇಖನವೊಂದನ್ನು ಪ್ರಕಟಿಸಿದರು. ಮುಂದೆ, ಕ್ರಿ.ಶ. ೧೮೭೫ರಲ್ಲಿ ಆರ್. ಕಾಲ್ಡ್‌ವೆಲ್ ಅವರು ನಿರ್ದಿಷ್ಟ ಪದವೊಂದು ದ್ರಾವಿಡ ಮೂಲದ್ದೇ ಎನ್ನುವುದನ್ನು ನಿರ್ಧರಿಸುವ ಶಾಸ್ತ್ರೀಯ ವಿಧಾನಗಳನ್ನು ಚರ್ಚಿಸಿದರು (Caldwell R : Comparative grammar of the Dravidian Languages, 2nd ed. 1875).

ಈ ಪರಂಪರೆಗೆ ಕಿಟ್ಟೆಲ್ ಕೋಶವೂ ತನ್ನ ಕಾಣಿಕೆಯನ್ನು ಸಲ್ಲಿಸಿದೆ. ಕಿಟ್ಟೆಲ್ಲರು ಗುಂಡರ್ಟ್, ಕಾಲ್ಡೆವೆಲ್‌ರ ಮಾದರಿಯನ್ನು ಅನುಸರಿಸಿ, ಪದಗಳ ದ್ರಾವಿಡ ಮೂಲ ಮತ್ತು ಸಂಸ್ಕೃತಕ್ಕೆ ಅವುಗಳ ವಲಸೆಯ ಪ್ರಕ್ರಿಯೆಯ ಬಗೆಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದರು. ಕಾಲ್ಡ್‌ವೆಲ್ ಅವರು ಸೂಚಿಸಿದ ವಿಧಾನಗಳನ್ನು ಕಿಟ್ಟೆಲ್ಲರು ಹೆಚ್ಚು ಸೈದ್ಧಾಂತಿಕವಾಗಿ ಬೆಳೆಸಿದರು. ಮಾತ್ರವಲ್ಲದೆ, ಸಂಸ್ಕೃತದಲ್ಲಿ ಉಪಲಬ್ಧವಿರುವ ದ್ರಾವಿಡ ಭಾಷಾ ಪದಗಳ ಯಾದಿಯೊಂದನ್ನೂ ತಯಾರಿಸಿದರು. ದ್ರಾವಿಡ ಭಾಷೆಗಳ ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುವ ಇಂಥ ದೃಷ್ಟಿಕೋನಗಳು ಸಮಕಾಲೀನ ಅಗತ್ಯಗಳು ಆಗಿವೆ.

ಹೀಗೆ, ವಿದೇಶೀಯರಲ್ಲಿ ರೀವ್ಸ್ ಅವರಿಂದ ಮೊದಲಾಗಿ ಸ್ಯಾಂಡರ್‌ಸನ್‌ರಿಂದ ಪುಷ್ಟಿಗೊಂಡ ಕನ್ನಡ ನಿಘಂಟು ರಚನೆಯ ಕಾಯಕವು ಕಿಟ್ಟೆಲ್ಲರಿಂದ ತನ್ನ ಶಾಸ್ತ್ರೀಯತೆಯನ್ನು ಪಡೆದುಕೊಂಡಿತು. ಕಿಟ್ಟೆಲ್ ಕೋಶವೇ ಆ ಮುಂದಿನ ಬುಚರ್ ಮುಂತಾದವರ ಕೋಶಗಳಿಗೂ ಮೂಲಮಾತೃಕೆಯಾಗಿ ಪರಿಣಮಿಸಿದ್ದು ಈಗ ಇತಿಹಾಸವಾಗಿದೆ.

ಮುಂದೆ, ಈ ಶತಮಾನದ ಏಳನೆಯ ದಶಕದಲ್ಲಿ, ಎಂ. ಮರಿಯಪ್ಪ ಭಟ್ಟ ಅವರಿಂದ ಪರಿಷ್ಕರಿಸಲ್ಪಟ್ಟ ಕಿಟ್ಟೆಲ್ ಕೋಶದ ನವೀನ ಆವೃತ್ತಿಯೂ (ನಾಲ್ಕು ಸಂಪುಟಗಳಲ್ಲಿ) ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆ, “ಕನ್ನಡ-ಕನ್ನಡ ನಿಘಂಟು’ (ಎಂಟು ಸಂಪುಟಗಳು) ಹಾಗೂ ಅನೇಕ ವಿದ್ವಾಂಸರ ವೈಯುಕ್ತಿಕ ಪ್ರಯತ್ನಗಳ ಫಲಗಳಾಗಿ ಪ್ರಕಟಗೊಂಡಿರುವ ಇತರೇ ನಿಘಂಟುಗಳಿಗೆಲ್ಲ ಕಿಟ್ಟೆಲ್ ಕೋಶವು ಒಂದು ಆಕರವೂ ವೈಜ್ಞಾನಿಕವಾದ ಮಾದರಿಯೂ ಆಗಿ ಪರಿಣಮಿಸಿದೆ.

ಮತ್ತೆ ಈ ಬರೆಹದ ಮೊದಲಲ್ಲಿ ಚರ್ಚಿಸಿದ ಅಂಶಗಳನ್ನು ನೆನಪಿಸಿಕೊಂಡು ಈ ಸಮೀಕ್ಷೆಯನ್ನು ಪೂರೈಸಬಹುದು ಎನಿಸುತ್ತದೆ.

ವಿದೇಶೀಯರು ನಮ್ಮಲ್ಲಿ ಶಾಸ್ತ್ರ ಸಾಹಿತ್ಯ ರಚನೆಗಳಿಗೆ ಕೈಹಾಕಿದುದರ ಹಿಂದಿನ ಉದ್ದೇಶವು ಒಂದೆಡೆಯಿಂದ ಮತೀಯ ಇನ್ನೊಂದೆಡೆಯಿಂದ ರಾಜಕೀಯವಾಗಿದ್ದರೂ, ಕೈಗೊಂಡ ಕಾರ್ಯದ ಬಗೆಗಿನ ಅವರ ಶ್ರದ್ಧೆ, ಪ್ರಾಮಾಣಿಕತೆಗಳಿಂದಾಗಿ ಕನ್ನಡ ಅಧ್ಯಯನಕ್ಕೆ ಒಂದು ಶಾಸ್ತ್ರೀಯವಾದ ಚೌಕಟ್ಟು ಪ್ರಾಪ್ತವಾದುದು ನಿಜವಾಗಿದೆ. ಸಾರವಾದುದನ್ನು ಸ್ವೀಕರಿಸುವ, ತ್ಯಾಜ್ಯವಾದುದನ್ನು ಬಿಡುವ ವಿವೇಕವನ್ನು ನಾವು ರೂಢಿಸಿಕೊಂಡಾಗ, ನಮ್ಮ ಲಾಭವೇ ಅಧಿಕವೆನಿಸೀತು.