ಹೈದರಾಬಾದ ಕರ್ನಾಟಕ ಪ್ರದೇಶವು ಇಡಿಯ ರಾಜ್ಯದಲ್ಲಿಯೇ ಅತ್ಯಂತ ಪ್ರಾಚೀನ ಮತ್ತು ಭವ್ಯ ಇತಿಹಾಸವುಳ್ಳ ಪ್ರದೇಶವಾಗಿದೆ. ಇಲ್ಲಿಯ ಕನ್ನಡವೇ ತಿರುಳ್ಗನ್ನಡದ ನೆಲೆಮನೆ ಯಾಗಿದ್ದ ಅಂಶವನ್ನು ಕವಿರಾಜಮಾರ್ಗವೂ ಹೇಳುತ್ತದೆ. ಇತಿಹಾಸಪೂರ್ವ ಯುಗದ ಅವಶೇಷಗಳೂ ಇಲ್ಲಿ ದೊರೆಯುತ್ತವೆ. ಇತಿಹಾಸದ ಆರಂಭ ಕಾಲದಿಂದಲೂ, ಎಂದರೆ ಸರಿಸುಮಾರು ಕ್ರಿ.ಪೂ. ೬ನೆಯ ಶತಮಾನದಿಂದಲೂ ಅವಿಚ್ಛಿನ್ನವಾಗಿ ಸಾಗಿ ಬಂದ  ಸಂಸ್ಕೃತಿ ವಾಹಿನಿಯು ಈ ನೆಲದ ನೆಗಳ್ತೆಯನ್ನು ಹೆಚ್ಚಿಸಿದೆ. ಇಂತಹ ಪ್ರದೇಶದಲ್ಲಿ, ನಮ್ಮ ದೇಶದ, ಅಷ್ಟೇ ಏಕೆ, ವಿಶ್ವದ ಪ್ರಮುಖ ಧರ್ಮವಾದ ಬೌದ್ಧ ಇದರ ನೆಲೆ-ಬೆಲೆಗಳನ್ನು ಸಮೀಕ್ಷಿಸುತ್ತ, ಆ ಕುರಿತಾದ ಚಿಂತನೆಯನ್ನು ವಿಶ್ಲೇಷಿಸುವುದು ಇಲ್ಲಿಯ ಉದ್ದೇಶವಾಗಿದೆ.

ಕಲ್ಯಾಣ (ಹೈದರಾಬಾದ) ಕರ್ನಾಟಕದ ವ್ಯಾಪ್ತಿಗೆ ಬರುವ ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳ ಮಟ್ಟಿಗೆ ಮತ್ತು ಇತಿಹಾಸದ ಪ್ರಾಚೀನ ಕಾಲಕ್ಕೆ (ಎಂದರೆ, ಕ್ರಿ.ಪೂ. ೬ ರಿಂದ ಕ್ರಿ.ಶ. ೬ನೆಯ ಶತಮಾನದವರೆಗೆ) ಸೀಮಿತಗೊಳಿಸಿ ಇಲ್ಲಿಯ ಚರ್ಚೆಯನ್ನು ಬೆಳೆಸಲಾಗಿದೆ.

ಮೊತ್ತಮೊದಲಾಗಿ ಬೌದ್ಧ ಧರ್ಮದ ಕುರಿತಾದ ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸಬಹುದು.

ಬೌದ್ಧಧರ್ಮವು ಗೌತಮಬುದ್ಧನ ಉಪದೇಶಗಳ ಮೂಲಕವಾಗಿ ಅವತರಿಸಿದ್ದು ಆತನ ಜೀವಿತ ಕಾಲವಾದ ಕ್ರಿ.ಪೂ. ೬ನೆಯ ಶತಮಾನದಲ್ಲಿ ಎನ್ನಬಹುದು. ಶಾಕ್ಯಕುಲದ ರಾಜಕುಮಾರ ಸಿದ್ಧಾರ್ಥನಿದ್ದವನು ಸಂಸಾರ ತ್ಯಾಗಿಯಾಗಿ, ಸಂಬೋಧಿಯ ಬಳಿಕ ಬುದ್ಧನಾದ ಕಥೆಯು ಜಗತ್ಪ್ರಸಿದ್ಧವಿದೆ. ಬುದ್ಧನಿಗೆ ನಿಕಟ ಪೂರ್ವದಲ್ಲಿ ಎರಡು ಅತಿಗಳು (Extremes) ಆಚರಣೆಯಲ್ಲಿದ್ದಂತೆ ಕಂಡು ಬರುತ್ತದೆ. ಒಂದು, ಅತಿಯಾದ ದೇಹದಂಡನೆಯ ಮಾರ್ಗ, ಇನ್ನೊಂದು ಅತಿಯಾದ ದೇಹ ಪೋಷಣೆಯ ದಾರಿ. ಲೋಕಾಯತ ಮತವು ತನ್ನ ವೈಭವದ ದಿನಗಳಲ್ಲಿ ರಾಚಿದ ವೈಚಾರಿಕ ಗಾಳಿಯು ಆ ಬಳಿಕದ ದಿನಗಳಲ್ಲಿ ಹಿಂದೆ ಸರಿದು, ಬರಿಯ  ಅದರ ಹೊರ ಆಚರಣೆಗಳಿಗೆ ಜೋತುಬಿದ್ದು, ಪ್ರಾಚೀನ ಗ್ರೀಕರ ಸೋಫಿಸ್ಟ್ (Sophist)ರಂತೆ ಋಣಂ ಕೃತ್ವಾ ಘೃತಂ ಪಿಬ (ಸಾಲ ಮಾಡಿಯಾದರೂ ತುಪ್ಪ ತಿನ್ನು) ತತ್ತ್ವವು ಸ್ವೀಕೃತವಾದ ಒಂದು ಜನವರ್ಗವು ದೇಹ ಪೋಷಣೆಯ, ಸ್ವರತಿಯ ದಾರಿಯನ್ನು ಹಿಡಿದಿತ್ತು. ಇನ್ನೊಂದು ವರ್ಗದವರು, ತಲೆಕೂದಲನ್ನು ಕಿತ್ತುಕೊಳ್ಳುವ, ನಗ್ನರಾಗಿ ಸಂಚರಿಸುವ, ಶರೀರವನ್ನು ದಂಡಿಸುವ, ಆ ಕಾಲದ ತೀರ್ಥಕರು.

ಗೌತಮಬುದ್ಧನು ತನ್ನ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಸಂಸಾರವನ್ನು ತ್ಯಜಿಸಿದ ಬಳಿಕದ ಸಾಧನೆಯ ಐದಾರು ವರ್ಷಗಳಲ್ಲಿ ಆ ಕಾಲದ ಶ್ರಮಣ ಸಂಸ್ಕೃತಿಯ ಎಲ್ಲ ಆಚರಣಾ ವಿಧಾನಗಳನ್ನೂ ಅನುಸರಿಸಿ ನೋಡಿ, ಅವುಗಳ ಅಸಾರತೆಯಿಂದಾಗಿ ಅವುಗಳನ್ನು ತ್ಯಜಿಸಿ, ತನ್ನದೇ ಆದ, ದಾರ್ಶನಿಕ ಹಿನ್ನೆಲೆಯುಳ್ಳ ನೈತಿಕ ಅಧಿಷ್ಠಾನವೊಂದನ್ನು ಕಂಡುಕೊಂಡು ಅದಕ್ಕೆ ‘ಮಧ್ಯಮ ಮಾರ್ಗ’ ಎಂದು ಹೆಸರಿತ್ತನು.

ಬುದ್ಧನ ಉಪದೇಶವು ಅತ್ಯಂತ ಸರಳವಾದುದು. ಆತ ತನ್ನ ಉಪದೇಶಕ್ಕೆ ವೈದ್ಯಶಾಸ್ತ್ರದ ಉಪಮೆಗಳನ್ನು ಆಶ್ರಯಿಸಿ ಹೇಳುತ್ತಾನೆ. ಶಾರೀರಿಕ ಮತ್ತು ಮಾನಸಿಕ ನೋವುಗಳು ದೇಹದ ಪ್ರಕೃತಿಗೆ ಸಾಮಾನ್ಯವಾಗಿದೆ. ಅಂತೆಯೇ ಬದುಕನ್ನು ವಿಶ್ಲೇಷಿಸಿ, ಇಲ್ಲಿ ನಿರಂತರವಾಗಿರುವುದು ದುಃಖವೊಂದೇ ಎಂದು ಬುದ್ಧನು ಹೇಳಿದನು. ಮುಂದುವರೆದು, ಈ ದುಃಖಕ್ಕೆ ಕಾರಣವೆಂದರೆ ಜೀವಿಯಲ್ಲಿರುವ ತೃಷ್ಣೆ ಎಂದೂ; ಈ ತೃಷ್ಣೆಯೇ ಸಮುದಯ (= ಕಾರಣ) ಎಂದೂ ಸೇರಿಸಿದ. ಈ ನಿರಂತರವಾದ ದುಃಖವು ನಿವಾರಕವೇ ಅಲ್ಲವೇ ಎಂದು ವಿವೇಚಿಸಿ, ಇದು ನಿವಾರ್ಯವೆಂದೂ, ಅದಕ್ಕಿರುವ ಮಾರ್ಗವೇ ಆರ್ಯ ಅಷ್ಟಾಂಗ ಮಾರ್ಗವೆಂದೂ ನಿಗದಿಸಿದ. ಬೌದ್ಧ ಸಂಘದ ಚೌಕಟ್ಟು ಕೂಡಾ ಇಷ್ಟೇ ಸರಳವಾಗಿದೆ.

ಪ್ರಾಚೀನ ಬೌದ್ಧ ಧರ್ಮದ ಆರಾಧನಾಂಶಗಳೆಂದರೆ ತ್ರಿರತ್ನಗಳು ಅಥವಾ ರತ್ನತ್ರಯ. ಬುದ್ಧ, ಧರ್ಮ ಮತ್ತು ಸಂಘಗಳಲ್ಲದೆ ಧಾತುಗಳನ್ನೂ ಪೂಜಿಸುವ ಪದ್ಧತಿಯೂ ಅದರಲ್ಲಿದೆ. ಹಿಂದಿನ ಬುದ್ಧರ ಧಾತು ಗರ್ಭಗಳನ್ನು – ಅವನ್ನು ಶಾರೀಕ. ಉದ್ದೇಶಿಕ ಮತ್ತು ಪಾರಿಭೋಜಿಕ ಗಳೆಂದು ವಿಭಾಗಿಸಿದೆ – ಬುದ್ಧಪಾದವನ್ನು, ಪವಿತ್ರ ವೃಕ್ಷಗಳನ್ನು ಪೂಜಿಸುವ ಕ್ರಮವಿದ್ದ ಬಗೆಗೆ ತಿಳಿಯುತ್ತದೆ.

ಬುದ್ಧನ ಪರಿನಿರ್ವಾಣದ ಬಳಿಕ ಕಾಲಕಾಲಕ್ಕೆ ಸೇರುತ್ತಿದ್ದ ಬೌದ್ಧ ಸಮ್ಮೇಳನಗಳನ್ನು “ಬೌದ್ಧ ಸಂಗೀತಿ”ಗಳೆಂದು ಕರೆಯಲಾಗಿದೆ. ಅವುಗಳಲ್ಲಿ ಗೀತಕ್ಕೆ ಎಂದರೆ ರಾಗವಾಗಿ ಹಾಡುವ ಕ್ರಮಕ್ಕೆ ಪ್ರಾಶಸ್ತ್ಯವಿದ್ದುದು ಹೆಸರಿನಿಂದಲೇ ಸ್ಪಷ್ಟವಿದೆ. ಆ ಸಂಗೀತಿಗಳಲ್ಲಿ, ಬುದ್ಧ ವಚನಗಳನ್ನು, ಧರ್ಮದ ನಿಯಮಗಳನ್ನು, ಸಂಗ್ರಹಿಸುವ, ಸಂಕಲಿಸುವ ಹಾಗೂ ಕೆಲವೊಮ್ಮೆ ಪುನಾರೂಪಿಸುವ ಕೆಲಸಗಳು ನಡೆದುವು. ಅಂತೆಯೇ ಈ ಸಂಗ್ರಹ ಕಾರ್ಯದಲ್ಲಿ ಹಾಗೂ ಬುದ್ಧನ ಸೂತ್ರಗಳ ವ್ಯಾಖ್ಯಾನದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದಾಗ, ಈ ಮತಭೇದವೇ ಕಾರಣವಾಗಿ ಶಾಖೆ – ಉಪ ಶಾಖೆಗಳೂ ಹುಟ್ಟಿಕೊಂಡವು. ಪಾಲಿ ಸಾಹಿತ್ಯವು ಹೇಳುವ ಪ್ರಕಾರ, ಮೂರು ಸಂಗೀತಿಗಳು – ಮೊದಲನೆಯದು ರಾಜಗೃಹದಲ್ಲಿ, ಬುದ್ಧನ ಪರಿನಿರ್ವಾಣದ ನಿಕಟ ಭವಿಷ್ಯದಲ್ಲಿ, ಎರಡನೆಯದು ನೂರು ವರ್ಷಗಳ ಬಳಿಕ ವೈಶಾಲಿ ಯಲ್ಲಿ ಹಾಗೂ ಮೂರನೆಯದು ಅಶೋಕನ ಕಾಲದಲ್ಲಿ ಪಾಟಲೀಪುತ್ರದಲ್ಲಿ ಸೇರಿದುವು. ಮಹಾಸಾಂಘಿಕರ ಪ್ರಕಾರ ನಾಲ್ಕನೆಯ ಸಂಗೀತಿಯು ಕನಿಷ್ಕನ ಕಾಲದಲ್ಲಿ ಸೇರಿತೆಂದು ಬೌದ್ಧ ಸಾಹಿತ್ಯದ ಔತ್ತರೇಯ ಪಾಠವು ಹೇಳುತ್ತದೆ.

ಪ್ರಾರಂಭದ ಘಟ್ಟದಲ್ಲಿ, ಎಂದರೆ ಕ್ರಿ.ಪೂ. ೫೦೦ ರಿಂದ ಕ್ರಿ.ಪೂ. ೩೫೦ರವರೆಗಣ ಅವಧಿಯಲ್ಲಿ ಬೌದ್ಧ ಧರ್ಮವು ಪೂರ್ವದಲ್ಲಿ ಚಂಪಾದಿಂದ ಪಶ್ಚಿಮದಲ್ಲಿ ಶ್ರಾವಸ್ತಿಯ ತನಕ, ಉತ್ತರದಲ್ಲಿ ಕುರು ಪಾಂಚಾಲಗಳಿಂದ ದಕ್ಷಿಣದಲ್ಲಿ ಪ್ರತಿಷ್ಠಾನದ ತನಕ ವ್ಯಾಪಿಸಿತ್ತು. ಆಗಿನ ಬೌದ್ಧ ಧರ್ಮವಾದರೂ ಸಂಸಾರ ವಿಮುಖರಾದ ವಿರಕ್ತರಿಗಾಗಿಯೇ ಇತ್ತು. ಆ ಪ್ರಕಾರದ ಭಿಕ್ಷುಗಳು ಪಾತಿಮೊಕ್ಖ (ಸಂ. ಪ್ರಾತಿಮೋಕ್ಷ)ದ ನಿಯಮಗಳಿಗನುಸಾರವಾಗಿ ಬದುಕಬೇಕಿತ್ತು. ಬುದ್ಧನಾದರೋ ಒಬ್ಬ ಮಾನವನಾಗಿಯೇ ಪರಿಗಣಿತನಾಗಿದ್ದ. ಜೀವನದ ಧ್ಯೇಯವೇ ಅರ್ಹತನಾಗುವುದು ಎಂದೂ, ನಿರ್ವಾಣವೆಂದರೆ ಕೈವಲ್ಯ ಅಥವಾ ಕ್ಲೇಶಾಂತ ಸ್ಥಿತಿಯೆಂದೂ ಪರಿಗಣಿತವಾಗಿತ್ತು.

ಮುಂದಿನ ಹಂತದಲ್ಲಿ (ಸು. ಕ್ರಿ.ಪೂ. ೩೫೦ ರಿಂದ ಕ್ರಿ.ಪೂ. ೧೦೦) ಬೌದ್ಧ ಧರ್ಮವು ಭೌಗೋಳಿಕವಾಗಿ ಮತ್ತು ಶಾಖೋಪಶಾಖೆಗಳಾಗಿ ವ್ಯಾಪಕವಾಯಿತು; ದಕ್ಷಿಣದಲ್ಲಿ ಭಾರತದ ಎಲ್ಲೆಡೆಗಳಿಗೆ ಮತ್ತು ಸಿಂಹಳಕ್ಕೆ, ಪಶ್ಚಿಮದಲ್ಲಿ ಗಾಂಧಾರದ ತನಕ ಮತ್ತು ಹೊರ ದೇಶಗಳೆಡೆಗೂ ದಾಂಗುಡಿಯಿಟಿತು. ಆ ಕಾಲದ ಬೌದ್ಧ ಧರ್ಮದ ಹದಿನೆಂಟು ಶಾಖೆಗಳು ದಾಖಲಿತವಾಗಿವೆ.

ಅಶೋಕನ ಪ್ರೋತ್ಸಾಹದಿಂದಾಗಿ, ಕ್ರಿ.ಪೂ. ೩ನೆಯ ಶತಮಾನದಲ್ಲಿ ಬೌದ್ಧಧರ್ಮವು ವ್ಯಾಪಕವಾಯಿತು. ಕ್ರಿ.ಪೂ. ೨೪೧ರಲ್ಲಿ ಮೂರನೆಯ ಬೌದ್ಧ ಸಂಗೀತಿಯು ಪಾಟಲೀಪುತ್ರದಲ್ಲಿ ಸೇರಿತು. ಆ ಕಾಲಕ್ಕಾಗಲೇ ಶಾಖೋಪಶಾಖೆಗಳಾಗಿದ್ದ ಬೌದ್ಧಧರ್ಮದ ಸಾಂಘಿಕ ರೂಪವನ್ನು ಬಲಪಡಿಸುವುದು ಆಗಿನ ತುರ್ತು ಅಗತ್ಯವಾಗಿತ್ತು. ಅದಕ್ಕಾಗಿ ತಿಸ್ಸ-ಮೊಗ್ಗಲಿಪುತ್ತನ ನೇತೃತ್ವದ ಆ ಸಂಗೀತಿಯಲ್ಲಿ ಆಯ್ದ ಒಂದು ಸಾವಿರ ಭಿಕ್ಷುಗಳಿಗೆ ಪಾಲಿ ತಿಪಿಟಕದ ಸಂಕಲನ ಕಾರ್ಯವನ್ನು ವಹಿಸಲಾಯಿತು. ತಿಸ್ಸನ ಮಾರ್ಗದರ್ಶನದಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಈ ಗೋಷ್ಠಿಯು ನಿಜವಾದ ತಿಪಿಟಕದ ರೂಪಣೆಯನ್ನು ಪೂರೈಸಿತು. ಎಂದರೆ ಪೂರ್ತಿಯಾಗಿ ತಿಪಿಟಕಗಳು ಬರೆಹದ ರೂಪಕ್ಕೆ ಇಳಿದುವು. ಈ ಸಂಗೀತಿಯ ಕೊನೆಯಲ್ಲಿ ಸಧರ್ಮ (ಸಂ. ಸದ್ಧರ್ಮ)ದ ಪ್ರಸಾರಕ್ಕಾಗಿ ಬೇರೆ ಬೇರೆಡೆಗೆ ಭಿಕ್ಷುಗಳನ್ನು ಕಳುಹಿಸಲಾಯಿತು. ಅಶೋಕನ ಮಗ ಮಹೇಂದ್ರನ ನೇತೃತ್ವದ ಒಂದು ಗುಂಪು ಸಿಂಹಳಕ್ಕೆ ಹೋಯಿತು ಮತ್ತು ಕರ್ನಾಟಕದ ಭಾಗಗಳಿಗೆ ಮಹಾದೇವ ಹಾಗೂ ರಕ್ಖಿತರು ಬಂದ ಬಗ್ಗೆ ತಿಳಿಯುತ್ತದೆ.

ಬೌದ್ಧ ಧರ್ಮದಲ್ಲಿ, ಭಿಕ್ಷುಗಳಲ್ಲದ ಆದರೆ ಧರ್ಮದ ಬಗ್ಗೆ ಒಲವುಳ್ಳವರನ್ನು ‘ಉಪಾಸಕ’ ಎಂದು ಕರೆಯಲಾಗಿದೆ. ಇಂಥ ಉಪಾಸಕರು ಬೌದ್ಧ ಧರ್ಮಕ್ಕೆ, ಅದರ ಅನುಷ್ಠಾನಕ್ಕೆ ಅನಿವಾರ್ಯವಲ್ಲದಿದ್ದರೂ, ಒಟ್ಟು ಸಂಘದ ಅರ್ಥ ವ್ಯವಸ್ಥೆಗೆ ಇವರ ಬೆಂಬಲವು ಬೇಕಾಗಿತ್ತು.

ಪ್ರಾಚೀನ ಬೌದ್ಧ ಧರ್ಮದ ಈ ‘ಉಪಾಸಕ’ ಪರಿಕಲ್ಪನೆಯು ವಿಶಿಷ್ಟವಾದುದು. ಉಪಾಸಕರು ತಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ – ಕೃಷಿ, ವಾಣಿಜ್ಯ, ಆಡಳಿತೆ ಅಥವಾ ಇತರ ಧಾರ್ಮಿಕ ನಡಾವಳಿಗಳಲ್ಲಿ ತೊಡಗಿರಲು ಅವಕಾಶವಿತ್ತು. ಅವರಿಗೆ ವಿಧಿಸಲಾಗಿದ್ದ ಒಂದೇ ಒಂದು ಶರ್ತವೆಂದರೆ, ಅವರು ಬುದ್ಧನಲ್ಲಿ ಶ್ರದ್ಧೆ, ನಂಬಿಕೆಗಳನ್ನು ಇಟ್ಟುಕೊಂಡಿರ ಬೇಕಾಗಿತ್ತು. ಬುದ್ಧನ ಸಮಕಾಲೀನ ಹಾಗೂ ಅನಂತರದ ನಿಕಟ ಭವಿಷ್ಯದಲ್ಲಿ ಅನೇಕ ಬ್ರಾಹ್ಮಣರು ಬುದ್ಧ ‘ಉಪಾಸಕ’ರಾಗಿದ್ದೂ ತಮ್ಮ ಸಾಮಾಜಿಕ ನೆಲೆಗಳನ್ನು ಕಳೆದುಕೊಳ್ಳದೆ ಇರುತ್ತಿದ್ದರು. ಬುದ್ಧನ ಪರಿನಿರ್ವಾಣದ ಒಂದು ಶತಮಾನದ ಬಳಿಕ ‘ಉಪಾಸಕ’ರ ಬಗೆಗೂ ಕೆಲವು ನಿಯಮಗಳು ರೂಪಿತವಾದುವು. ಅವರು ತ್ರಿರತ್ನಗಳಿಗೆ (ಬುದ್ಧ-ಧರ್ಮ-ಸಂಘ) ಶರಣಾಗಬೇಕು. ಅಹಿಂಸೆ, ಅಸ್ತೇಯ, ಅಪರಿಗ್ರಹವೇ ಮುಂತಾದ ನೀತಿಸಂಹಿತೆಯನ್ನು ಆಚರಿಸಬೇಕು, ಇವೇ ಮೊದಲಾದ ನಿಯಮಗಳನ್ನು ಅವರಿಗೆ ವಿಧಿಸಲಾಯಿತು. ಅಶೋಕನೂ ತನ್ನ ಶಾಸನಗಳಲ್ಲಿ ತಾನು ಬೌದ್ಧ ಉಪಾಸಕನಾಗಿದ್ದ ಬಗೆಗೆ ಹೇಳಿಕೊಳ್ಳುತ್ತಾನೆ.

ಕಲೆ – ಸಾಹಿತ್ಯಗಳ ಬೆಳವಣಿಗೆಗೆ ಈ ಬಗೆಯ ‘ಉಪಾಸಕ’ರ ಕೊಡುಗೆಯು ವಿಶಿಷ್ಟ ವಾಗಿದೆ. ಸನ್ನತಿಯಲ್ಲಿ ದೊರೆತಿರುವ ಅನೇಕ ಪ್ರಾಕೃತ ಶಾಸನಗಳು, ಅಲ್ಲಿಯ ಉಪಾಸಕರ ದಾನಶೀಲತೆಯನ್ನು ಹೇಳುತ್ತವೆ. ಬನವಾಸಿಯ ಭೂತಪಾಲನೆಂಬ ಶ್ರೇಷ್ಠಿಯು ಒಬ್ಬ ಉಪಾಸಕನಾಗಿದ್ದುದು, ಆತನು ಕಾರ್ಲೆಯ ಅತ್ಯಪೂರ್ವವಾದ ಚೈತ್ಯಾಲಯವನ್ನು ನಿರ್ಮಿ ಸಿದುದು – ಇವೆಲ್ಲ ಇದಕ್ಕೆ ನಿದರ್ಶನಗಳು.

ಪ್ರಾಚೀನ ಕರ್ನಾಟಕಕ್ಕೆ ಕ್ರಿಸ್ತಶಕ ಪೂರ್ವದಲ್ಲಿಯೇ ಬೌದ್ಧ ಧರ್ಮವೂ ಕಾಲಿರಿಸಿತು. ಪ್ರಾಯಶಃ ಮೊದಲನೆಯ ಬೌದ್ಧ ಸಂಗೀತಿಯ ಸನಿಹದಲ್ಲಿಯೇ ಈ ಪ್ರಕ್ರಿಯೆಯು ಆರಂಭಗೊಂಡುದು ಮುಂದೆ ಅಶೋಕನ ಕಾಲದಲ್ಲಿ ವಿಶೇಷವಾಗಿ ನಡೆಯಿತು.

ಅಶೋಕನ ಶಿಲಾಶಾಸನಗಳು ದಕ್ಷಿಣ ಭಾರತದಲ್ಲಿ ವಿಪುಲ ಸಂಖ್ಯೆಯಲ್ಲೇನೂ ಸಿಗುವುದಿಲ್ಲ. ಸಿಗುವವುಗಳಲ್ಲಿ ಸಿಂಹಪಾಲು ಕರ್ನಾಟಕದ್ದಾಗಿದೆ. ನಮ್ಮಲ್ಲಿನ ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಸನ್ನತಿ, ಮಸ್ಕಿ-ಕೊಪ್ಪಳ, ನಿಟ್ಟೂರು ಮತ್ತು ಬ್ರಹ್ಮಗಿರಿಗಳಲ್ಲಿ ಒಟ್ಟು ಹದಿನಾಲ್ಕು ಶಾಸನಗಳು ಈವರೆಗೆ ದೊರೆತಿದ್ದು, ಇವುಗಳಲ್ಲಿ ಸನ್ನತಿಯ ಶಾಸನಗಳು ‘ಧರ್ಮ ಶಾಸನ’ಗಳ ಪ್ರಕಾರಕ್ಕೂ ಉಳಿದವು ‘ಲಘು ಶಿಲಾಲೇಖ’ಗಳ ಪ್ರಕಾರಕ್ಕೂ ಸೇರುತ್ತವೆ. ಅಶೋಕನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ತನ್ನ ಶಾಸನಗಳನ್ನು ನಿಗದಿಗೊಳಿಸಿದ್ದರೂ, ಇಷ್ಟೊಂದು ಸಂಖ್ಯೆಯ ಶಾಸನಗಳು, ವಿಶೇಷವಾಗಿ ಈ ಭಾಗಗಳಲ್ಲಿ ಸಿಗುತ್ತಿರುವುದು ಕುತೂಹಲಕರವಾಗಿದೆ.

ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನಿತಿಯು ಒಂದು ಸಾಂಸ್ಕೃತಿಕ ಕ್ಷೇತ್ರವಾಗಿದ್ದು, ಇದು ಪ್ರಾಚೀನ ಭಾರತದ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದುದು ನಿಶ್ಚಿತವಿದೆ. ಈಚೆಗೆ ಇಲ್ಲಿ ನಡೆಸಿದ ಶೋಧದಿಂದಾಗಿ ಪತ್ತೆಯಾದ ಅಶೋಕನ ಶಾಸನಗಳು (೧೯೮೯-೯೦) ನಮ್ಮ ಕಣ್ಣು ತೆರೆಸಬಲ್ಲವಾಗಿವೆ. ಧರ್ಮದ ವ್ಯಾಪಕತೆ ಮತ್ತು ಸಂಕೀರ್ಣತೆಗಳನ್ನು ಬಹುಜನರ ಹಿತಕ್ಕಾಗಿ ಬಳಸುವ ಕಾಯಕವನ್ನು ಒಬ್ಬ ದೊರೆಯು ಹೇಗೆ ನೆರವೇರಿಸಿದ ಎಂಬುದಕ್ಕೆ ಇವು ಸಾಕ್ಷ್ಯವನ್ನು ನುಡಿಯುತ್ತವೆ.

ಇದೇ ಪರಂಪರೆಯನ್ನು ಅನಂತರದ ಶಾತವಾಹನರು, ಚಾಲುಕ್ಯರು ಮತ್ತು ರಾಷ್ಟ್ರ ಕೂಟರೂ ಮುಂದುವರೆಸಿಕೊಂಡು ಬಂದರೆನ್ನಬಹುದು.

“ಮಹಾಗೋವಿಂದ ಸುತ್ತ’ ಎಂಬ ಬೌದ್ಧ ಕೃತಿಯು ಪ್ರಾಚೀನ ಭಾರತದ ಮಹಾಜನಪದ ಗಳಲ್ಲಿ ಅಸ್ಸಕ (>ಸಂ. ಅಶ್ಮಕ) ರಾಜ್ಯವನ್ನು ಹೆಸರಿಸಿ, ಅದರ ರಾಜಧಾನಿಯು ‘ಪೋತನ’ ಎಂದು ಹೇಳುತ್ತದೆ. ಈ ಅಸ್ಸಕ ಅಥವಾ ಅಶ್ಮಕವು ‘ಪೋತನ’ ಇಲ್ಲವೆ ‘ಬೋದನ’ (ಆಂಧ್ರ)ವನ್ನು ಕೇಂದ್ರವಾಗಿ ಹೊಂದಿ, ಅಶ್ಮಕ ಸಪಾದ ಭೂಮಿಯಾಗಿತ್ತು. ಇದನ್ನೇ ಪಂಪನು ‘ಸಪಾದ ಲಕ್ಷ ಭೂಮಿ’ ಎನ್ನುತ್ತಾನೆ. ಏಕೆಂದರೆ (ಪೋತನ>) ಬೋದನವು ಆತನು ಪರಿಗಣಿಸಿದ ರಾಜಧಾನಿ! ಸಬ್ಬಿನಾಡನ್ನೂ ಒಳಗೊಂಡ ಈ ರಾಜ್ಯದ ಉಲ್ಲೇಖವು ಆದಿಪುರಾಣ ದಲ್ಲಿ ಬರುತ್ತದೆ. ಬಾಹುಬಲಿಯ ರಾಜಧಾನಿಯು ಬೋದನ ಪುರವೇ!

ಸನ್ನತಿಯಲ್ಲಿ ದೊರೆತಿರುವ ಪ್ರಾಕೃತ ಶಾಸನಗಳು ಇನ್ನೊಂದು ಪ್ರಮುಖ ಸಾಂಸ್ಕೃತಿಕ ಅಂಶವನ್ನು ವಿಶದಪಡಿಸುತ್ತವೆ.

ಬೌದ್ಧ ಧರ್ಮದ ಉತ್ಕರ್ಷಕ್ಕೆ ವ್ಯಾಪಾರವೇ ಕಾರಣವಾಗಿದ್ದಿತು ಎಂಬುದರಲ್ಲಿ ಸಂಶಯವಿಲ್ಲ. ಬೌದ್ಧ ಧರ್ಮದ ಅನುಯಾಯಿಗಳು ಹೆಚ್ಚಾಗಿ ವ್ಯಾಪಾರಿಗಳಾಗಿದ್ದರು. ಅವರ ಸಹಾಯದಿಂದ ಮಾತ್ರ ಅಮರಾವತೀ, ನಾಗಾರ್ಜುನಕೊಂಡ ಮತ್ತು ಜಗ್ಗಯ್ಯಪೇಟ (ಆಂಧ್ರ)ಗಳ ವಿಶಾಲವಾದ ಸ್ತೂಪಗಳು ನೆಲೆಸಲ್ಪಟ್ಟುವು ಎನ್ನುವ ಅಭಿಪ್ರಾಯವು ಸಾಧುವಾದುದು. ಅಂತೆಯೇ ಸನ್ನತಿಯಲ್ಲಿಯೂ ಈ ಬಗೆಯ ವ್ಯಾಪಾರಿಗಳೂ ಮತ್ತಿತರ ಬೌದ್ಧ ಉಪಾಸಕ – ಉಪಾಸಕಿಯರೂ ದಾನಶೀಲತೆಯನ್ನು ಮೆರೆದಿರುವುದು ಕಾಣಿಸುತ್ತದೆ.

ಗಣಪತಿ ಸುಸಲ, ಅಮಾತ್ಯ ಪತ್ನಿ ಯಕ್ಷಣಿಕಾ, ಅಮಾತ್ಯೆ ಸಂಘನಿಕಾ, ನಾಗನಿಕಾ, ಸೆಲಾಣಕ ಇತ್ಯಾದಿ ಹೆಸರುಗಳನ್ನು ವಿದ್ವಾಂಸರು (ಪಿ.ಬಿ. ದೇಸಾಯಿ. ಕ.ಭಾ. ಸಂ. ೧-೨) ಸಮಾಲೋಚಿಸಿದ್ದು ಇವರೆಲ್ಲ ಇಲ್ಲಿಯ ಸಂಘಾರಾಮಗಳಿಗೆ, ಸ್ತೂಪ – ವಿಹಾರಗಳಿಗೆ ದಾನವಿತ್ತ ವಿವರಗಳು ಸಿಗುತ್ತವೆ.

ಈಗಿನ ಚಂದ್ರಲಾ ಪರಮೇಶ್ವರಿಯ ಗುಡಿಯೂ ಕೂಡಾ ಪ್ರಾಚೀನ ಕಾಲದ ಒಂದು ಬೌದ್ಧ ಆರಾಧನಾ ಕೇಂದ್ರವಾಗಿತ್ತು. ಬೌದ್ಧ ಧರ್ಮದ ಅವನತಿಯ ಬಳಿಕ, ಚಂಡಾಲ> ಚಂದ್ರಲಾ>ಚಂದಲಾ ಪರಿವರ್ತನೆಯೊಂದಿಗೆ ಇಲ್ಲಿಯ ಆರಾಧ್ಯ ದೈವತವನ್ನು ವೈದಿಕ ಪರಿಧಿಯೊಳಕ್ಕೆ ಸೇರಿಸಿದ ಯತ್ನವು ಸುಸ್ಪಷ್ಟವಾಗಿದೆ.

ಹೀಗೆ ಸನ್ನತಿಯು ಒಂದು ಪ್ರಾಚೀನ ಬೌದ್ಧ ಕೇಂದ್ರವಾಗಿದ್ದುದು ಮತ್ತು ಇತಿಹಾಸದ ಕಾಲಚಕ್ರ ದುರುಳಲ್ಲಿ ತನ್ನ ಇರಸರಿಕೆಯನ್ನೇ ಬದಲಿಸಿಕೊಂಡುದು – ಇವನ್ನು ಗಮನಿಸಿದಾಗ ಬೆರಗು ಮೂಡುತ್ತದೆ.

ರಾಷ್ಟ್ರಕೂಟ ಸೃಪತುಂಗನು ತನ್ನ ರಾಜ್ಯಕ್ಕೆ ಬರ ಬಂದಾಗ ತನ್ನ ಆರಾಧ್ಯ ದೇವತೆಯಾದ ಮಹಾಲಕ್ಷ್ಮಿಗೆ ತನ್ನ ಬೆರಳನ್ನೇ ಬಲಿಯಾಗಿತ್ತುದು ಪ್ರಸಿದ್ಧವಾಗಿರುವ ಸಂಗತಿಯಾಗಿದೆ. ಅದಕ್ಕೂ ಒಂದು ಸಾವಿರ ವರ್ಷಗಳಷ್ಟು ಮೊದಲೇ ಚಕ್ರವರ್ತಿ ಅಶೋಕನು ಸನ್ನತಿಯ ಶಾಸನದಲ್ಲಿ ಹೇಳುತ್ತಾನೆ :

“ನಾನು ನನ್ನ ಮೇಲಿರುವ ಋಣಭಾರವನ್ನು ಈ ಮೂಲಕ ತೀರಿಸುವ ಯತ್ನದಲ್ಲಿದ್ದೇನೆ. ನನ್ನ ದೃಢವಾದ ನಿಲುವೆಂದರೆ, ನೀವೆಲ್ಲರೂ ಕಠಿಣವಾದ ಕಾಯಕದಲ್ಲಿ ತೊಡಗಬೇಕು ಮತ್ತು ಆತ್ಮವಿಶ್ವಾಸದೊಂದಿಗೆ ಕಾರ್ಯತತ್ಪರರಾಗಬೇಕು… ನಾನು ನೇಮಿಸಿದ ಮಹಾ ಮಾತ್ರರು ನಿಮಗೆ ಸ್ಫೂರ್ತಿಯನ್ನು ಕೊಡಲಿ ಮತ್ತು ನೀವು ಅವರಿಗೆ ಸ್ಫೂರ್ತಿಯನ್ನು ಉಂಟುಮಾಡಿರಿ. ಯಾವುದೇ ಕಾರಣಕ್ಕೂ ಅನ್ಯರ ಮತವನ್ನು ಹೀಗಳೆಯ ಬೇಡಿರಿ. ನಿಮ್ಮ ಮತವನ್ನು ಪ್ರೀತಿಸುವುದೆಂದರೆ, ಅನ್ಯರ ಮತವನ್ನು ಹೀಗಳೆಯುವುದಲ್ಲ”.

ಈಗಾಗಲೇ ಗಮನಿಸಿದಂತೆ, ಈ ಸಾಲುಗಳು ಅಶೋಕನ ಧರ್ಮಸಹಿಷ್ಣುತೆಗೆ, ಎಂದರೆ ಬೌದ್ಧ ಧರ್ಮದ ಚಿಂತನೆಯ ನೆಲೆಗಟ್ಟಿಗೆ ಸಾಕ್ಷಿ ನುಡಿಯುತ್ತವೆ. ಬೌದ್ಧ ಧರ್ಮವು ಇತರ ಮತಾಂಧರ ಆಕ್ರೋಶಕ್ಕೆ ಬಲಿಯಾಯಿತೇ ಹೊರತಾಗಿ, ಅದೆಂದೂ ಆಕ್ರಮಣಶೀಲ ಪ್ರವೃತ್ತಿಯನ್ನು ತೋರಿದ್ದಿಲ್ಲ.

ಇದೀಗ ಗಮನಿಸಲೇಬೇಕಾದ ಅಂಶವೆಂದರೆ, ರಾಜಾಶ್ರಯ ಮತ್ತು ಜನಾಶ್ರಯಗಳೆರಡೂ ನೆಲೆಗಳಲ್ಲಿ ಬೌದ್ಧ ಧರ್ಮವು ಪ್ರಾಚೀನ ಕಾಲದಲ್ಲಿ ಭಾಗ್ಯಶಾಲಿಯಾಗಿತ್ತು. ರಾಜಾಶ್ರಯವು ಕೇವಲ ರಾಜರಿಂದ ಮಾತ್ರವಲ್ಲದೆ, ವಣಿಜ ಸಂಘಗಳಿಂದಲೂ ದೊರಕಿದುದು ವೇದ್ಯವೇ ಇದೆ.

ಇಷ್ಟಿದ್ದೂ ಕೂಡಾ, ಬೌದ್ಧ ಧರ್ಮವು ಇಲ್ಲಿ ನಾಮಾವಶೇಷವಾಯಿತು ಏಕೆ ಎನ್ನುವ ಪ್ರಶ್ನೆಯು ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಅನೇಕ ಕಾರಣಗಳನ್ನು ಹೇಳಬಹುದು. ಬೌದ್ಧ ಧರ್ಮದ ಆಂತರಿಕ ದೌರ್ಬಲ್ಯಗಳು (ವಿಶೇಷವಾಗಿ ಮಂತ್ರಯಾನ, ವಜ್ರಯಾನ ಮುಂತಾದ ತಾಂತ್ರಿಕ ಆಚರಣೆಗಳಿಂದ ಕೂಡಿದ ಮಧ್ಯಯುಗೀನ ಬೌದ್ಧಧರ್ಮ) ಒಂದೆಡೆ ಯಾದರೆ, ತಪ್ಪಿದ ರಾಜಾಶ್ರಯ, ಶಿಥಿಲಗೊಂಡ ಸಾರ್ಥವಾಹರ ಪ್ರೋತ್ಸಾಹ ಮತ್ತು ವಿಶೇಷವಾದ ಅನ್ಯಮತೀಯರ ದಾಳಿಗಳನ್ನು ಇಲ್ಲಿ ಗುರುತಿಸಬಹುದು. ಈ ಕಾರಣಗಳು ಬೌದ್ಧ ಧರ್ಮದ ಅವನತಿಗೆಯಲ್ಲಿ ಪರಿಣಮಿಸಿದುದು ಕೇವಲ ಕಲ್ಯಾಣ ಕರ್ನಾಟಕದಲ್ಲಷ್ಟೇ ಅಲ್ಲ, ಇಡಿಯ ದೇಶದಲ್ಲೇ ಈ ಕರುಣ ಕಥೆಯು ಕೇಳಿ ಬರುತ್ತದೆ.

ಹೈದರಾಬಾದ್ ಕರ್ನಾಟಕದಲ್ಲಿ ಕೃಷ್ಣಾ ನದಿಯ ನೀರನ್ನು ಬಳಸಿಕೊಳ್ಳಲು ಜೊತೆಗೇ ಭೀಮಾ ಮುಂತಾದ ಇತರ ನದಿಗಳಿಗೂ ಲಗ್ಗೆ ಹಾಕಲು ವಿಶೇಷ ಪ್ರಯತ್ನಗಳು ಈಗ ನಡೆಯುತ್ತಿವೆ. ಆರ್ಥಿಕವಾದ ಕಾರಣಗಳು ಇಲ್ಲಿ ವಿಶೇಷವಾಗಿ ಕೆಲಸ ಮಾಡುತ್ತವೆ. ಆದರೆ ಇಂತಹ ಅಣೆಕಟ್ಟುಗಳ ದೆಸೆಯಿಂದ, ಒಂದೆಡೆಯಿಂದ ಫಲವತ್ತಾದ ಭೂಮಿಯ ಮುಳುಗಡೆಯಾದರೆ, ಇನ್ನೊಂದೆಡೆಯಿಂದ ಸನ್ನತಿ, ಕಣಗನಹಳ್ಳಿಗಳಂಥ ಸಾಂಸ್ಕೃತಿಕ ಪರಿಸರ ಗಳು ಮುಂದೆಂದೂ ಬೆಳಕನ್ನು ಕಾಣದೆ ಹೋಗುತ್ತವೆ. ಆಂಧ್ರದ ನಾಗಾರ್ಜುನಕೊಂಡದಲ್ಲಿ ಅಣೆಕಟ್ಟು ನಿರ್ಮಾಣವಾದಾಗ, ಅಲ್ಲಿಯ ಅಪೂರ್ವ ಅವಶೇಷಗಳನ್ನು ಸಂರಕ್ಷಿಸಿಡಲಾಯಿತು. ಆದರೆ ಸನ್ನತಿಯಂತಹ ಕರ್ನಾಟಕದ ನೆಲೆಗಳಿಗೆ ಈ ಯೋಗವು ಪ್ರಾಪ್ತವಾದೀತೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ; ನಮ್ಮ ಸಾಂಸ್ಕೃತಿಕ ಬಡತನಕ್ಕೆ ಹಿಡಿದ ಕಂದೀಲು ಆಗುತ್ತದೆ.