ಮಾನವನ ಸಾಂಸ್ಕೃತಿಕ ಇತಿಹಾಸದ ಎಲ್ಲ ಪ್ರಮುಖ ಮಜಲುಗಳು ಸಂಕ್ರಮ ಣಾಸಕ್ತಿಗಳನ್ನು ಪ್ರದರ್ಶಿಸುತ್ತವೆ. ನಿರ್ದಿಷ್ಟವಾದ ಕಾಲಬಿಂದುವೊಂದು ನಿನ್ನೆಯ ಸ್ಮರಣಾನು ಭವಗಳ ಗಾಢವಾದ ಮುದ್ರೆಯ ಮೇಲೆ ಇಂದಿನ ವಾಸ್ತವಗಳ ತೀವ್ರ ಸಂವೇದನೆಯ ಸ್ಪರ್ಶವನ್ನು ಸ್ವೀಕರಿಸುತ್ತ, ನಾಳೆಯ ಕನಸುಗಳ ಆಹ್ವಾನಿಸುವ ಕಲ್ಪನೆಯೇ ರೋಮಾಂಚನ ವನ್ನುಂಟುಮಾಡುತ್ತದೆ. ಈ ಸಂಸ್ಕೃತಿಯ ನಡೆಯಾದರೂ ಎಷ್ಟು ವೈವಿಧ್ಯಮಯ! ಒಮ್ಮೆ ಶಾಂತವಾದ, ನಿಷ್ಪಂದ ನೀರವ ಸರೋವರದಂತೆ, ಮರುಕ್ಷಣ ಎದುರಾದುದನ್ನೆಲ್ಲ ಆವರಿಸುತ್ತಾ, ದಂಡೆಗಳನ್ನು ಕೊರೆದು ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾ ಹರಿದೋಡುವ ರಭಸ. ಒಂದು ದೃಷ್ಟಿಯಿಂದ ಕಲುಷಿತವಾದ ಮೇಲ್ಮೈ, ಇನ್ನೊಂದು ಮಗ್ಗುಲಿನಿಂದ ಶುಭ್ರ ತಿಳಿಯಾದ ಪಾರದರ್ಶಕತ್ವ. ಯಾವುದು ನಿಜವೆಂಬುದನ್ನು ನಿರ್ಧರಿಸಲಾರದೆ ಬಗೆಯು ನಿಬ್ಬೆರಗಾಗುತ್ತದೆ. ಸೃಷ್ಟಿಯೊಡಲಿನ ಎಲ್ಲ ಸಂಕೀರ್ಣತೆಯ ಪೂರ್ಣಪ್ರಮಾಣದ ಕಿರುಶಿಲ್ಪ ವಾಗಿ ನಿಲ್ಲುವ ಎಲ್ಲ ಅರ್ಹತೆಗಳನ್ನೂ ಈ ಸಂಸ್ಕೃತಿಯು ಸ್ವಯಂ ಸಂಪಾದಿಸಿಕೊಂಡು ಬಿಡುತ್ತದೆ. ಭಾವ ಪ್ರಪಂಚ ಮತ್ತು ಚಿಂತನಕ್ರಮಗಳ (=ಭಾವುಕತೆ-ವೈಚಾರಿಕತೆಗಳ) ಸಂಯುಕ್ತ ವಾಗಿರುವ ಮನುಷ್ಯನಿಗೆ ತಾನು ಬದುಕುತ್ತಿರುವ ಸಂಸ್ಕೃತಿಯ ಬಗೆಗೆ ತುಂಬ ಆಸ್ಥೆ-ಕಾಳಜಿ-ಕುತೂಹಲಗಳಿವೆ. ಮನುಷ್ಯತ್ವವನ್ನು ರೂಪಿಸುವ ಹೊಣೆಯನ್ನು ಹೊತ್ತಿರುವ ಸಂಸ್ಕೃತಿ ಗಾದರೂ ಆತನ ಪ್ರತಿಯೊಂದು ಚಟುವಟಿಕೆಯನ್ನೂ ಉತ್ಕರ್ಷದತ್ತ ನಿರ್ದೇಶಿಸುವ ಆಪ್ತವಾದ ಒತ್ತಡಗಳಿರುತ್ತವೆ. ಈ ಪ್ರಕ್ರಿಯೆಯಲ್ಲಿ ಮನುಷ್ಯ-ಸಂಸ್ಕೃತಿಗಳ ಪ್ರತ್ಯೇಕತೆಗಳಳಿದು, ಬಹಳ ಮನೋಜ್ಞವಾದ ಎರಕವೊಂದು ಸ್ಥಾಪಿತವಾಗುತ್ತದೆ.

ಒಂದರ್ಥದಲ್ಲಿ, ಸಂಸ್ಕಾರದ ಎಲ್ಲ ಘಟ್ಟಗಳೂ ಅನ್ಯಾನ್ಯ ದಿವ್ಯಗಳೇ ಆಗಿರುತ್ತವೆ. ಹೊರಗಿನ ಕುಸುರಿಗಾರಿಕೆ – ರೂಪಾಂತರ ಪರಿಣತಿಗಳು. ಒಳಗಿನ ಮಾಗುವಿಕೆ-ಸಾಂದ್ರತೆಗಳಿಗೆ ಸಂವಾದಿಗಳಾಗಿ ಸಹಕರಿಸಿದಾಗ ಮಾತ್ರವೇ ಆಕೃತಿಯೊಂದು ಪರಿಷ್ಕೃತವಾಗುತ್ತದೆ. ಇದು, ಮೂರ್ತ – ಅಮೂರ್ತ ಜಗತ್ತುಗಳೆರಡಕ್ಕೂ ಸಮೀಕೃತವಾಗುತ್ತದೆ. ಈ ಹಿನ್ನೆಲೆಯಲ್ಲಿ, ಕನ್ನಡ ಮನಸ್ಸು ಮುಖಾಮುಖಿಯಾಗಬೇಕಾಗಿ ಬಂದ ಸಾಂಸ್ಕೃತಿಕ, ಸಾಹಿತ್ಯಿಕ ಸವಾಲುಗಳನ್ನು ನಾವು ಪರಿಶೀಲಿಸಬೇಕಾಗುತ್ತದೆ.

ಇಲ್ಲಿ ಕನ್ನಡ ಸಂವೇದನೆ – ಸಂಸ್ಕೃತಿ – ಸಾಹಿತ್ಯಗಳನ್ನು ಒಂದೇ ನೇರದಲ್ಲಿ ವ್ಯವಸ್ಥೆಗೆ ಅಳವಡಿಸಬೇಕಾಗುತ್ತದೆ. ಅಭ್ಯಾಸದ ನಿಖರತೆಯ ದೃಷ್ಟಿಯಿಂದ, ಪ್ರಸ್ತುತ ಸಂದರ್ಭದಲ್ಲಿ ಅವುಗಳ ನಿರ್ವಚನಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು.

. ಕನ್ನಡ ಮನಸ್ಸು

ಇದು ಸಮುದಾಯವಾಚಕವಾಗಿ ಬಳಕೆಯಾಗುವಷ್ಟೇ ವೈಯಕ್ತಿಕ ನೆಲೆಯಲ್ಲೂ ಪ್ರಯೋಗ ವಾಗುತ್ತದೆ. ಇಲ್ಲಿ, ನಿರ್ದಿಷ್ಟ  ಮನೋವೃತ್ತಿಯೊಂದು ಇಡಿಯ ಸಮೂಹದ ಸೊತ್ತಾಗುವ ಪರಿಕ್ರಮವಿರುವಷ್ಟೇ ಸಹಜವಾಗಿ, ವಿಶಿಷ್ಟ ವ್ಯಕ್ತಿಯೊಬ್ಬನ ಸಾಮಾನ್ಯ ಸಂವೇದನೆ(general sentiments)ಯೂ ಸಮಗ್ರ ಸಮಾಜವನ್ನು ಪ್ರತಿನಿಧಿಸಬಲ್ಲುದು. ಹಾಗೆಯೇ, ಸಾಮಾನ್ಯ (common) ಮನುಷ್ಯನೊಬ್ಬನ ಸಶಕ್ತವಾದ ವಿಚಾರಧಾರೆಯೂ ಸಾಧಾರಣೀಕರಣ (generalisation)ಗೊಳ್ಳಬಹುದು. ಇಲ್ಲಿ ವ್ಯಷ್ಟಿ-ಸಮಷ್ಟಿಗಳ ಭಿನ್ನತೆಯು ನಗಣ್ಯ ವಾಗುತ್ತದೆ, ಆಯಾ ಸಂದರ್ಭದ ಲಕ್ಷ್ಯವಷ್ಟೇ ಅಧ್ಯಯನ ವಸ್ತುವಾಗುತ್ತದೆ.

. ಸಂಸ್ಕೃತಿ

ಈ ಪರಿಕಲ್ಪನೆಯ ಅಡಿಯಲ್ಲಿ, ಸಾಂಸ್ಕೃತಿಕಾಂಶಗಳಿಂದ ನಿಬಿಡವಾದ ಜನಜೀವನದ ಎಲ್ಲ ಮುಖಗಳು ಎಡೆಪಡೆಯುತ್ತವೆ. ಇಂಥ ಅಗಾಧ ವ್ಯಾಪ್ತಿಯ ಅವಲೋಕನವು ಒಂದು ಸೀಮಿತ ಅವಕಾಶದಲ್ಲಿ ಕಷ್ಟ ಸಾಧ್ಯವಾದುದರಿಂದ, ಸಂಸ್ಕೃತಿಯೆಂಬುದನ್ನು ಜೀವನದೃಷ್ಟಿ-ಜೀವನ ಮೌಲ್ಯ-ಜೀವನಾದರ್ಶ-ಜೀವನದರ್ಶನಗಳೆಂಬ ನಾಲ್ಕು ಮೇರೆಗಳಿಗೆ ಅಳವಡಿಸ ಲಾಗಿದೆ.

. ಸಾಹಿತ್ಯ

ವಿಶಾಲಾರ್ಥದಲ್ಲಿ, ನಿರ್ದಿಷ್ಟ ಭಾಷೆಯೊಂದರ ಎಲ್ಲ ರೀತಿಯ ಅಭಿವ್ಯಕ್ತಿಗಳು ಸಾಹಿತ್ಯ ವೆನ್ನುವ ಅಭಿದಾನವನ್ನು ಪಡೆಯುತ್ತವೆ. ಜಾನಪದ ಸಾಹಿತ್ಯ-ಮೌಖಿಕ ಮತ್ತು ಶಿಷ್ಟ ಸಾಹಿತ್ಯ, ಸೃಷ್ಟಿಶೀಲ ಸಾಹಿತ್ಯ (ಸೃಜನ-ಸೃಜನೇತರ) (ಶಾಸ್ತ್ರ ಸಾಹಿತ್ಯ) ಇತ್ಯಾದಿಯಾಗಿ, ಕವಲುಗಳಾಗಿ ಅದು ವಿಸ್ತಾರವಾಗುತ್ತ ಹೋಗುತ್ತದೆ. ಈ ಸಂದರ್ಭದಲ್ಲಿ, ಅಕ್ಷರ ಮಾಧ್ಯಮದಲ್ಲಿ ಉಪಲಬ್ಧವಾಗಿರುವ ಸೃಷ್ಟಿಶೀಲ ಸಾಹಿತ್ಯ ಕೃತಿಗಳನ್ನು ಮಾತ್ರವೇ ಗಮನಕ್ಕೆ ತೆಗೆದು ಕೊಳ್ಳಲಾಗಿದೆ.

ಈ ಸ್ಪಷ್ಟೀಕರಣಗಳೊಂದಿಗೆ, ನವೋದಯ ಪೂರ್ವ (ಮುದ್ದಣ ಯುಗ)ದ ಕನ್ನಡ ಮನಸ್ಸು ಎದುರಿಸಿದ ಸಾಂಸ್ಕೃತಿಕ-ಸಾಹಿತ್ಯಿಕ ಸವಾಲುಗಳನ್ನು ವಿವರವಾಗಿ ಚರ್ಚಿಬಹುದು.

ಈ ಕಾಲದ ಕನ್ನಡ ಮನಸ್ಸನ್ನು ಒಂದು ಅಧ್ಯಯನ ಘಟಕವಾಗಿ ಪರಿಗಣಿಸಿದಾಗ ಅದರ ಕೆಲವು ವರ್ಗಗಳು ಗಮನಾರ್ಹವಾಗುತ್ತವೆ. ಉದಾಹರಣೆಗೆ, ಆ ಕಾಲಘಟ್ಟದಲ್ಲಿ ತೀರಾ ಸಂಪ್ರದಾಯ ಶರಣವಾದ, ಹೊಸ ಗಾಳಿಯ ಸುಳಿದಾಟಕ್ಕೆ ಇಷ್ಟೂ ಆಸ್ಪದವನ್ನು ಕೊಡದ ಸಂಪೂರ್ಣವಾಗಿ ಹೊರಜಗತ್ತಿಗೆ ಮುಚ್ಚಿಕೊಂಡ ಮನಸ್ಸುಗಳನ್ನು ಒಂದೆಡೆಗೆ ಕಾಣುತ್ತೇವೆ. ಇನ್ನೊಂದೆಡೆಗೆ, ಪರಂಪರೆಯ ಎಲ್ಲ ಮೌಲ್ಯ ಸಂಪತ್ತನ್ನೂ ತ್ಯಜಿಸಿ, ಆಧುನಿಕ ವಾದ ಪರ್ಯಾಯ ಪದ್ಧತಿಯೊಂದನ್ನು ಪ್ರಜ್ಞಾಪೂರ್ವಕವಾಗಿ ಒಗ್ಗಿಸಿಕೊಂಡ ನೆಲೆಯನ್ನೂ ಗುರುತಿಸುತ್ತೇವೆ. ಮತ್ತೊಂದೆಡೆಯಿಂದ ಅದೂ ಇರಲಿ, ಇದನ್ನು ಬಿಡುವುದು ಬೇಡವೆಂಬ ಸಂಕರವಾದಿ ಸಂವೇದನೆಗಳನ್ನೂ ಗಮನಿಸುತ್ತೇವೆ. ಇವೆಲ್ಲವುಗಳನ್ನು ಬಾಹ್ಯ ಗುರುತು – ಸಂಕೇತಗಳಾಗಿ ಇರಗೊಟ್ಟ ಮನಸ್ಸುಗಳಿಗಾಗಲಿ, ತಾತ್ಕಾಲಿಕವಾದ, ನಿರಂತರ ಬದಲಾವಣೆ ಗಳನ್ನೇ ನಿತ್ಯನೇಮವಾಗಿಟ್ಟುಕೊಂಡ ನಿಲುವುಗಳಿಗಾಗಲಿ ಇಲ್ಲಿ ಕೊರತೆಯಿಲ್ಲ. ಹೊಸ ಆವಿಷ್ಕಾರಗಳನ್ನೆಲ್ಲ ಶಾಂತಿ – ಸಮಾಧಾನಗಳಿಂದ ಅರ್ಥ ಮಾಡಿಕೊಂಡು, ತಮ್ಮ ನೆಲದಾಳದ ಬೇರುಗಳನ್ನು ಯಥಾವತ್ತಾಗಿ ಉಳಿಸಿಕೊಂಡ, ಅಸ್ಮಿತೆಯ ಸೌಷ್ಠವಕ್ಕಾಗಿ ತಾವು ಅರಗಿಸಿಕೊಂಡ ಪೋಷಕಾಂಶಗಳನ್ನು ಯುಕ್ತ ಪ್ರಮಾಣದಲ್ಲಿ ಸಂಯೋಜಿಸಿ-ಪೂರೈಸಿದ ಮನಸ್ಸುಗಳನ್ನು ಮಾತ್ರ ಇಲ್ಲಿ ವಿರಳವಾಗಿ ಕಾಣುತ್ತೇವೆ. (ಇದೇ ಮಾತನ್ನು ಅನಂತರದ ಸವೋದಯ ಸಂದರ್ಭದಲ್ಲಿ ಹೀಗೆ ಹೇಳುವಂತಿಲ್ಲ)

ಈ ಎಲ್ಲ ವಿಭಾಗಗಳು ಸವಾಲುಗಳಿಗೆ ಸಮ್ಮುಖವಾದವುಗಳೇ ಆಗಿವೆ. ಆಯಾ ಮನೋವೃತ್ತಿಯು ಅವುಗಳನ್ನು ನಿರ್ವಹಿಸಿದ ಬಗೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಈ ಸಂದರ್ಭದ ಉದ್ದೇಶಗಳಲ್ಲೊಂದಾಗಿದೆ. ಈ ಸವಾಲುಗಳೊಂದಿಗಿನ ಸಮರದ ಜಯ-ಅಪಜಯಗಳು, ಉತ್ಪನ್ನ-ಪರಿಣಾಮಗಳು, ತರತಮ ಸ್ತರಗಳೆಲ್ಲವನ್ನೂ ಲಕ್ಷಿಸುವ ಆಶಯವೂ ಇಲ್ಲಿದೆ. ವಿಶೇಷವಾಗಿ, ಸಂಸ್ಕೃತಿ-ಸಾಹಿತ್ಯಗಳ ಸಂವಾದ ಕ್ರಮಗಳನ್ನು, ಬೇರೆ ಬೇರೆ ಮನೋಭಾವವು ಅವುಗಳನ್ನು ಪರಿಭಾವಿಸಿದ ವಿಧಾನಗಳನ್ನು ವಿಶ್ಲೇಷಿಸುವತ್ತಲೂ ಇಲ್ಲಿ ಗಮನವನ್ನು ಹರಿಸಲಾಗಿದೆ.

ಈ ವಿಚಾರಕ್ಕೆ ಸೂಕ್ತ ಆವರಣವನ್ನು ನಿರ್ಮಿಸುವ ದೃಷ್ಟಿಯಿಂದ, ಆ ಕಾಲದ ಸಾಂಸ್ಕೃತಿಕ, ಸಾಹಿತ್ಯಿಕ ನಕ್ಷೆಯ ಸ್ಥೂಲ ಮಾದರಿಯೊಂದು ಅಗತ್ಯವಾಗುತ್ತದೆ.

೧. ಶಿಕ್ಷಣಾವಕಾಶಗಳಲ್ಲಿ ನಾಟಕೀಯವಾದ ಹೆಚ್ಚಳ.

೨. ಹೊಸ ವಿಚಾರಗಳ ಪ್ರವೇಶದಿಂದಾದ ಸಂಪ್ರದಾಯ ಪರ-ವಿರೋಧಿ ವಾಗ್ವಾದಗಳು-ಸಂಘರ್ಷಗಳು.

೩. ಸಾಮಾಜಿಕ ವ್ಯವಸ್ಥೆಯ ಪುನಾನಿರ್ಮಾಣಗಳಿಗೆ ನಾಂದಿ.

೪. ಲಿಂಗ-ವರ್ಗ-ವರ್ಣ ನೀತಿಯ ಬಗೆಗೆ ಸಾಮಾಜಿಕ ದೃಷ್ಟಿಕೋನದಲ್ಲಾದ ಬದಲಾವಣೆ ಗಳು.

೫. ರಾಜಕೀಯ ಸ್ಥಿತ್ಯಂತರಗಳು – ಪರಕೀಯ ದಾಸ್ಯದ ಆಂತರಿಕ – ಬಾಹ್ಯ ದಿಗ್ಭಂದಗಳು.

೬. ಆರ್ಥಿಕ ರಂಗದ ಪರಿವರ್ತನೆಗಳು.

೭. ಯಂತ್ರಯುಗದ ಪದಾರ್ಪಣೆ.

೮. ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗತೊಡಗಿದ ಪ್ರಯೋಗ ಪ್ರಿಯತೆ – ಹೊಸ ಅನ್ವೇಷಕ ಪ್ರವೃತ್ತಿಗಳ ಉದಯ.

೯. ಸಾಹಿತ್ಯ ಕ್ಷೇತ್ರಕ್ಕೆ ಬದಲಾವಣೆಗಳ ಬಲವಾದ ಗಾಳಿಯ ಪ್ರವೇಶ – ಹೊಸ ಪ್ರಕಾರಗಳ ಶೋಧ – ಹೊಸ ಭಾಷಾ ಕೃತಿಗಳ ಪರಿಚಯ – ಶಾಸ್ತ್ರ ಗ್ರಂಥಗಳ ಅಭಿವೃದ್ದಿ – ಒಂದು ಪ್ರತ್ಯೇಕ ಶಿಸ್ತಾಗಿ ಬೆಳೆಯ ತೊಡಗಿದ ವಿಮರ್ಶೆಯ ಬೆಳವಣಿಗೆ.

೧೦. ಆಸ್ಮಿತೆಯ ಹುಡುಕಾಟದ ಅನಿವಾರ್ಯತೆಗಳು, ಒತ್ತಡಗಳು.

ಇವೆಲ್ಲ ಅಂಶಗಳ ಪರಿಣಾಮವಾಗಿ, ಪ್ರತ್ಯೇಕವಾದ ಸಾಂಸ್ಕೃತಿಕ – ಸಾಹಿತ್ಯಿಕ ರಂಗವೊಂದು ಸಿದ್ಧವಾಯಿತು. ಅದರ ಪ್ರೇರಣೆ-ಪ್ರಭಾವ-ಸಮಸ್ಯೆ-ಸಂಕೀರ್ಣತೆಗಳೆಲ್ಲವನ್ನೂ ಬರಮಾಡಿ ಕೊಳ್ಳಲು ಕನ್ನಡ ಮನಸ್ಸು ಸನ್ನದ್ಧಗೊಳ್ಳಬೇಕಾಯಿತು. ಈ ಸವಾಲುಗಳಿಗೆ ಕೆಲವೊಂದು ಸೃಷ್ಟಿಶೀಲ ಪ್ರತಿಕ್ರಿಯೆಗಳು ವ್ಯಕ್ತವಾದರೆ, ಹಲವು ಚೈತನ್ಯಗಳು ಸೃಜನೇತರ ಮಾರ್ಗೋಪಾಯ ಗಳಿಂದ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದುವು. ನಿದರ್ಶನಾರ್ಥವಾಗಿ ಇವುಗಳಲ್ಲಿ ಪ್ರಾತಿನಿಧಿಕವಾದ ಕೆಲವನ್ನು ಪರಿಶೀಲಿಸಬಹುದು.

೧. ಅನ್ಯಾನ್ಯ ಕಾರಣಗಳಿಂದಾಗಿ, ಬೆಳೆದು ಬಂದ ಒಂದು ಪರಂಪರೆಯು ಅಳಿದು ಹೋಗುವುದೇನೋ ಎನ್ನುವ ಆತಂಕದ ಅಲೆಗಳು ಈ ಕಾಲದ ಕನ್ನಡ ಮನಸ್ಸುಗಳ ಸ್ಥಿಮಿತವನ್ನು ಕೆಡಿಸಿದುವು. ಈ ಪರಂಪರೆಯನ್ನು ಸುರಕ್ಷಿತವಾಗಿಡುವ ಪ್ರಯತ್ನಗಳಿಗೆ ಈ ಭೀತಿಯೇ ಮೂಲವಾಯಿತು.

“ಅನುಕರಣೆ – ಆತ್ಮಸಮರ್ಥನೆ – ಸಮನ್ವಯ – ಸ್ವೀಕರಣ – ಸಾಂಸ್ಕೃತಿಕಾಂಶಗಳ ಹೊಸ ಮಾದರಿಗಳ ನಿರ್ಮಾಣ”ಗಳೆಲ್ಲವೂ ಸೇರಿಕೊಂಡ ಗೋಜಲುಗಳೆಡೆಯಲ್ಲಿಯೇ ಸ್ವಂತಿಕೆಗಾಗಿ ಹೋರಾಡಬೇಕಾಗಿ ಬಂದುದು ಕನ್ನಡ ಮನಸ್ಸಿನೆದುರಿಗೆ ಮೂಲಭೂತವಾದ ಸವಾಲಾಗಿತ್ತು. ಮೊದಲಿಗೆ, ಸಾಂಸ್ಕೃತಿಕ ನೆಲೆಯಿಂದ ಅದರ ನಿರ್ವಹಣಾ ಸೂತ್ರವನ್ನು ಪರೀಕ್ಷಿಸಬಹುದು.

ಬೇರೆ ಬೇರೆ ದಿಸೆಗಳಿಂದ ಜನಜಾಗೃತಿಯ ಪ್ರಯತ್ನಗಳು ಕಸುವನ್ನು ಗಳಿಸಿಕೊಳ್ಳು ತ್ತಿದ್ದಂತೆಯೆ, ಸುವರ್ಣ ಮಾಧ್ಯಮವೊಂದರ ಅನುಷ್ಠಾನವು ಜನತೆಯ ಆದ್ಯತೆಗಳಲ್ಲಿ ಒಂದಾಯಿತು. ಭಾರತೀಯವಾದವುಗಳನ್ನೆಲ್ಲ ತಿರಸ್ಕರಿಸುವ, ಪ್ರಚೋದನಕಾರಿಯಾದ ‘ಬ್ರಿಟಿಷ್ ಮಾದರಿ’ಯನ್ನು ಜನಮಾನಸದಿಂದ ಉಚ್ಚಾಟಿಸುವುದು, ಅಂದಿನ ಪ್ರಜ್ಞಾವಂತರ ಸದ್ಯಕಾಲೀನ ಆವಶ್ಯಕತೆಯಾಯಿತು. ಇದಕ್ಕಾಗಿ, ನಮ್ಮ ನೆಲದ ಗಂಧ-ಸತ್ವ-ಶೀಲಗಳಿರುವ ದೇಸೀ ಮಾದರಿಯೊಂದರ ಹುಡುಕಾಟಗಳು ತೀವ್ರಗೊಂಡವು. ಅಸ್ತಿತ್ವದ ಪ್ರಶ್ನೆಗಳನ್ನೆದುರಿ ಸುತ್ತಿದ್ದ ಜನಮಾನಸವು, ಸುಧಾರಣಾವಾದಿಗಳಾದ ‘ಆರ್ಯಸಮಾಜ’, ಬ್ರಹ್ಮಸಮಾಜ’ ಮುಂತಾದುವುಗಳ ಸಮನ್ವಯ ಸಿದ್ಧಾಂತಗಳೊಂದಿಗೆ ಸ್ವಲ್ಪಮಟ್ಟಿನ ಹೊಂದಾಣಿಕೆಗಳಿಗೆ ಸಿದ್ಧಗೊಂಡಿತು. ಸಾಮಾಜಿಕವಾಗಿ, ಜಟಿಲವಾಗಿದ್ದ ಕೆಲವು ವಿಧಿ-ನಿಷೇಧ (ವಿಧವೆಯವರ ಕೇಶಮುಂಡನ, ಅಸ್ಪೃಶ್ಯತೆ)ಗಳನ್ನು ಅದು ಸಡಿಲಿಸಬೇಕಾಯಿತು.

ಯಾವುದೇ ಸಮಸ್ಯೆ ಅಥವಾ ಸವಾಲನ್ನು ಆಯಾ ಸಂದರ್ಭದ ಮಿತಿ ಮತ್ತು ಅವಕಾಶ ಗಳೊಂದಿಗೆ ತುಲನೆ ಮಾಡಬೇಕಾಗುತ್ತದೆ. ಸ್ವಂತದ ಸಂಸ್ಕೃತಿಯ ಮೇಲಿನ ದಾಳಿಗಳಿಗೆ ಸೃಷ್ಟಿಶೀಲ ಪ್ರತಿಕ್ರಿಯೆಯಾಗಿ ಆ ಕಾಲದ ಸಾಹಿತ್ಯವು ಪ್ರವರ್ತಿಸತೊಡಗಿದ ರೀತಿಯು ಇಲ್ಲಿ ಗಮನಾರ್ಹವಾಗುತ್ತದೆ. ಸಿದ್ಧ ಮಾದರಿಯ ಮೇಲೆರಗುತ್ತಿದ್ದ ಅಪಾಯಗಳನ್ನು ಮನಗಂಡ ಸೃಜನಶೀಲ ಮನಸ್ಸುಗಳು ಬೇರೆ ಬೇರೆ ರೀತಿಗಳಿಂದ ಅವುಗಳನ್ನು ನಿವಾರಿಸಿಕೊಳ್ಳುವ ಯತ್ನಗಳನ್ನು ಕೈಗೊಂಡವು. “ಸಂಸ್ಕೃತಿಗಳ ಕೊಡುಕೊಳ್ಳುವಿಕೆ ಮತ್ತು ಸಂಘರ್ಷಗಳಲ್ಲಿ ಮೈ ತಾಳಿ, ಬದಲಾಗುತ್ತಿರುವ ಪ್ರಜ್ಞೆ – ಪರಿಸರಗಳನ್ನು ಸೃಷ್ಟ್ಯಾತ್ಮಕವಾಗಿ ಅರ್ಥೈಸುತ್ತ, ಸಾಮಾನ್ಯವಾಗಿ ಸಮನ್ವಯದತ್ತ ತುಡಿಯುವ ಸಂವೇದನೆ”ಗಳು ಅಲ್ಲಿ ವ್ಯಾಪಕವಾಗ ತೊಡಗಿದುವು. ಇದು, ಆ ಕಾಲದ ಸಾಹಿತ್ಯದಲ್ಲಿ ಹೇಗೆ ನಿಷ್ಪನ್ನಗೊಂಡಿದೆಯೆಂಬುದನ್ನೀಗ ನೋಡೋಣ.

ಅ. ಸಾಹಿತ್ಯ ದೃಷ್ಟಿಯಲ್ಲಿ ಸಂವಹನ ಗುಣ – ಸಹೃದಯಾಸಕ್ತಿಗಳ ಪರಿಗಣನೆಯು ಪ್ರಾರಂಭಗೊಂಡುದು ಈ ನೆಲೆಯ ಲಕ್ಷಣಗಳಲ್ಲೊಂದಾಗಿದೆ. ಅದರ ಉಜ್ವಲವಾದ ಉದಾಹರಣೆಯನ್ನು ಮುದ್ದಣನ ‘ಶ್ರೀರಾಮಾಶ್ವಮೇಧಂ’ ಕೃತಿಯಲ್ಲಿ ಕಾಣುತ್ತೇವೆ. ಅವನು ತನ್ನ ಓದುಗರ ಪ್ರತಿನಿಧಿಯಾಗಿ, ತತ್ಕಾಲೀನ ವಿಮರ್ಶೆಯ ಅಭಿವ್ಯಕ್ತಿ ಮಾಧ್ಯಮವಾಗಿ ಅಲ್ಲಿ ಮನೋರಮೆಯ ಪಾತ್ರವನ್ನು ನಿರ್ಮಿಸುತ್ತಾನೆ. ಸಹೃದಯ ಸ್ಪಂದನಗಳನ್ನು ಕಲ್ಪಿಸಿಕೊಳ್ಳುವ ಸೌಲಭ್ಯವು ಈ ಮೂಲಕ ಅವನಿಗೆ ಸಿಗುತ್ತದೆ. ಹೀಗಾಗಿ, ಓದುಗರಿಗೆ ಬೇಕಾಗಬಹುದಾದ ರೂಪದ ಆಯ್ಕೆ (ಗದ್ಯಂ ಹೃದ್ಯಂ) ಕಥೆಯ ಓಟದ ಮೇಲಿನ ನಿಯಂತ್ರಣದ ಸಾಧನೆ, (ಅಶ್ವಮೇಧದ ಕುದುರೆಯ ಪ್ರಯಾಣದ ಸಂದರ್ಭ : ಮುದ್ದಣನು ನಿರೂಪಿಸುವ, ಇಂತು ಹಯಂ ಪಯೋಷ್ಣೀನದಿಯಂ ದಾಂಟಿ, ಬಲ್ದೂರಂ ನಡೆನಡೆದು ಪೋಗೆ ಪೆರ್ವೆಟ್ಟಂ….” ಇತ್ಯಾದಿ ವಿವರಣೆಗಳನ್ನು ಕೇಳುತ್ತಿದ್ದ ಮನೋರಮೆಯು “…ನೀನೋರ್ವನ ಪೂರ್ವಂ ಬಣ್ಣಗಬ್ಬಿಗರ ಬಲ್ಲಹಂ ಗಡ! ಪೋಪೋಪ ಬಟ್ಟೆಯೊಳ್ ಅಡವಿವೆಟ್ಟುಗಳನೆ ಬಣ್ಣಿಪರ್ಯ್! ಅಶ್ವಮೆತ್ತಾನುಂ ನಾಡಂ ಪುಗದೆ!’ ಎನ್ನುತ್ತ, ಕಥಾನಕವನ್ನು ಮರಳಿ ಹಳಿಗೆ ತರುತ್ತಾಳೆ) ಪಾತ್ರ ನಿರ್ಮಿತಿಗಳ ಸಂದರ್ಭಗಳ ಔಚಿತ್ಯ ಗಣನೆಗಳು ಅವನಿಗೆ ಸುಲಭ ಸಾಧ್ಯಗಳಾಗುತ್ತವೆ.

ಒಟ್ಟಾರೆಯಾಗಿ ಸಮಾಜದ ದೃಷ್ಟಿ-ಆಚರಣೆಗಳೆರಡರಲ್ಲೂ ಬದಲಾದ ಸ್ತ್ರೀಯರ ಸ್ಥಾನಮಾನಗಳಿಗೆ ಸೃಷ್ಟಿಶೀಲ ಪ್ರತಿಕ್ರಿಯೆಯಾಗಿ ಅವನ ಈ ನಿಲುವನ್ನು ಗಮನಿಸಬಹುದು. ತನ್ನ ಕೃತಿಯ ಸಂಭಾವ್ಯ ವಿಮರ್ಶೆಗಳಿಗೂ ಅವಕಾಶವನ್ನುಂಟುಮಾಡುತ್ತ, ಅವುಗಳಿಗೆ ಸಮಾಧಾನಕರವಾದ ಉತ್ತರಗಳನ್ನು ನೀಡಿಯೇ ಮುಂದುವರಿಯುವ ಕ್ರಮದ ಹಿಂದೆಯೂ ಅವನ ‘ಸುರಕ್ಷೆಯ ಹಂಬಲ’ವೇ ಕೆಲಸ ಮಾಡುತ್ತದೆ. ಇದು ಒಂದು ರೀತಿಯ ‘Self defence’ ಸ್ವಂತದ ರಕ್ಷಣೆಯ ಸಾಕ್ಷಿ ಎನಿಸುತ್ತದೆ. ಇಷ್ಟೆಲ್ಲ ಇದ್ದರೂ, ಪಾತ್ರಗಳ ಆಶಯ(motif)ಗಳಲ್ಲಿ ಗಂಭೀರವಾದ ಬದಲಾವಣೆಯನ್ನೇನೂ ಆತ ಮಾಡುವುದಿಲ್ಲ ಎಂಬುದನ್ನು ನೆನಪಿಡಬೇಕು.

ಆ. ಸಾಂಸ್ಕೃತಿಕ-ಸಾಮಾಜಿಕ ಸುಧಾರಣೆಗಳಿಗೆ ಆ ಕಾಲದ ಕನ್ನಡ ಕಾದಂಬರಿಕಾರರು ಹೆಚ್ಚು ಮುಕ್ತವಾಗಿ, ಸಕಾರಾತ್ಮಕವಾಗಿ ಸ್ಪಂದಿಸಿದರು. ಶೈಶವಾವಸ್ಥೆಯ ಎಲ್ಲ ಅಸಹಾಯಕತೆ ಗಳನ್ನಿಟ್ಟುಕೊಂಡು ಕೂಡಾ ಗುಲವಾಡಿ ವೆಂಕಟರಾಯರ, ‘ಇಂದಿರಾಬಾಯಿ’ (೧೮೯೯) ಮತ್ತು ಬೋಳಾರ ಬಾಬುರಾಯರ ‘ವಾಗ್ದೇವಿ’ (೧೯೦೫)ಯಂಥ ಕೃತಿಗಳು ಸ್ತ್ರೀ ಶಿಕ್ಷಣ, ಬಾಲ್ಯವಿವಾಹ, ವಿಧವಾ ವಿವಾಹ, ಬಹುಪತ್ನಿತ್ವ – ಮುಂತಾದ ವಿಚಾರಗಳ ಬಗೆಗೆ ಪುರೋಗಾಮಿ ಧೋರಣೆಗಳನ್ನು ವ್ಯಕ್ತಪಡಿಸುತ್ತವೆ. ಸಾಂಸ್ಕೃತಿಕ ಪರಿವರ್ತನೆಗಳ ಸವಾಲು ಗಳನ್ನು ತೀವ್ರವಾದ ತಾತ್ತ್ವಿಕ ಜಿಜ್ಞಾಸೆಗಳ ಮೂಲಕವೇ ಎದುರಿಸುವುದು ಇಲ್ಲಿ ಸಾಧ್ಯವಾಗಿರಲಿಕ್ಕಿಲ್ಲ. ಸರಳೀಕೃತವಾದ ತೀರ್ಮಾನಗಳು, ಪೂರ್ವಗ್ರಹೀತಗಳೂ ಇಲ್ಲಿ ನೆಲೆ ಕಂಡಿವೆ. ಆದರೆ, ಇವು ಕಾಲದ ಚೌಕಟ್ಟಿನಾಚೆಯ ಅನಿಸಿಕೆಗಳಾದುದರಿಂದ, ಸದ್ಯಕ್ಕೆ ಅವನ್ನು ಬದಿಗಿಡಬೇಕಾಗಿದೆ.

೨. ಜನ ಮಾನಸವನ್ನು ಜಾಗೃತಗೊಳಿಸುವ ಒತ್ತಡಗಳು; ಈ ಸಂಕ್ರಮಣಾವಸ್ಥೆಯ ಚಿಂತನ ವಿಧಾನವನ್ನು ಬಹುವಾಗಿ ಕಾಡಿದವು. ಈ ಸವಾಲನ್ನು ಎದುರಿಸುವಲ್ಲಿ, ಕನ್ನಡ ಮನಸ್ಸುಗಳುಅನ್ಯಾನ್ಯ ಮಾಧ್ಯಮಗಳನ್ನು ಬಳಸಿಕೊಂಡುದನ್ನು ಕಾಣಬಹುದು. “ಯಾವುದೇ ಒಂದು ಪ್ರಾಮಾಣಿಕ ಕೃತಿಯು ತನ್ನ ಕಾಲದ ಬದುಕಿಗೆ ಕೀಲಿ ಕೈಯಾಗುತ್ತದೆ” ಎನ್ನುವ ಹೇಳಿಕೆಗೆ ಪ್ರತೀಕಗಳಾಗಬಲ್ಲ ಸೃಷ್ಟಿಪರವಾದ ಸಾಹಿತ್ಯ ರಚನಾಕ್ರಮವು ಅವುಗಳಲ್ಲೊಂದಾಗಿದೆ. ಕನ್ಯಾವಿಕ್ರಯ ಅಥವಾ ‘ತೆರ’ದಂಥ ಅನಿಷ್ಟ ಪದ್ಧತಿಯ ದುಷ್ಪರಿಣಾಮಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವ ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿಯವರ “ಇಗ್ಗಪ್ಪ ಹೆಗ್ಗಡೇ ವಿವಾಹ ಪ್ರಹಸನ (೧೮೮೭) ನಾಟಕವು ಅಂಥದೊಂದು ಪ್ರಯತ್ನವಾಗಿದೆ. ಈ ಪರೋಕ್ಷ ವಿಧಾನವನ್ನು ಬಿಟ್ಟು, ನೇರವಾಗಿ ‘ವಾಸ್ತವ ಪ್ರಜ್ಞೆ’ಯನ್ನು ಮೂಡಿಸುವ ಕೈಂಕರ್ಯಕ್ಕೆ ಅಂದಿನ ಪತ್ರಿಕೋದ್ಯಮವು ಕೈಯಿಕ್ಕಿತ್ತು. ‘ಹವ್ಯಕ ಸುಬೋಧ’, ‘ಕನ್ನಡಾಂಗ್ಲ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ಪ್ರಕಾಶಿಕ’ ಪತ್ರಿಕೆಗಳು ಈ ನಿಟ್ಟಿನಿಂದ ಉಲ್ಲೇಖಾರ್ಹವಾಗಿವೆ. ಬೇರೆ ಬೇರೆ ವೇದಿಕೆಗಳಿಂದ ಮೂಡಿಬಂದ ಬೋಧಪ್ರದವಾದ ಉಪನ್ಯಾಸಗಳೂ ಈ ದೃಷ್ಟಿಯಿಂದ ಉಪಯುಕ್ತವಾದವು.

ಸಮಾಜ ಕೇಂದ್ರಿತವಾದ ನಮ್ಮ ಚಿಂತನೆಗಳು ಇಲ್ಲಿ ಇನ್ನೊಂದು ದಿಕ್ಕಿನತ್ತಲೂ ಮುಖಮಾಡಬೇಕಾಗಿವೆ. ಪ್ರಾಯಶಃ ಕರ್ನಾಟಕದ ಮಟ್ಟಿಗೆ, ಇದು ಆಧುನಿಕ ಕಾಲಕ್ಕೂ ಸಲ್ಲುವ ಮಾತೇನೋ. ಮೊದಲ ಪಂಕ್ತಿಯ ಮನ್ನಣೆಗೆ ಯೋಗ್ಯರಾದ ನೇತಾರರ ಅಭಾವ ದಿಂದಾಗಿ ಆ ಕಾಲದ ಕನ್ನಡ ಮನಸ್ಸುಗಳ ಸಂಘಟನೆಯು ನಿರ್ಲಕ್ಷಿತವಾಯಿತು. ಇದರ ತೀವ್ರವಾದ ಪರಿಣಾಮಗಳು ಆ ಕಾಲದ ಎಲ್ಲ ಕ್ಷೇತ್ರಗಳನ್ನೂ ಬಾಧಿಸಿತು. ಸುವ್ಯವಸ್ಥಿತವಾದ ಸಾಂಘಿಕ ನೆಲೆಗಟ್ಟನ್ನಾಗಲಿ, ಸಾಮೂಹಿಕ ಧ್ವನಿಗಳನ್ನಾಗಲಿ ರೂಪಿಸುವ ಪ್ರಯತ್ನಗಳು ಈ ಮಿತಿಯಿಂದಾಗಿಯೇ ಯಶಸ್ಸು ಕಾಣಲಿಲ್ಲ.

೩. ಆರ್ಥಿಕ ಬೆಂಬಲದ ತೀವ್ರ ಅಭಾವವು ಈ ಕಾಲದ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಘಾತಕರವಾಗಿ ಪರಿಣಮಿಸಿತು. ಪಂಪ ಮುಂತಾದವರ ಕಾಲಗಳಲ್ಲಿದ್ದ ರಾಜಾಶ್ರಯವಾಗಲಿ, ಕೊಡುಗೈ ದಾನಿಗಳಾಗಲಿ, ದಾಸವಾಙ್ಮಯಕ್ಕೆ ದೊರೆತ ಜನಾದರಣೆ ಯಾಗಲಿ, ವಚನ ಚಳುವಳಿಗೆ ಸಿಕ್ಕ ಸ್ವಂತದ ಬಲಿಷ್ಟ ಸಂಸ್ಥೆಯ ಆಶ್ರಯವಾಗಲಿ ಈ ಕಾಲಘಟ್ಟದ, ಸಾಹಿತ್ಯ ನಿರ್ಮಾತೃಗಳಿಗೆ ಸಿಗಲಿಲ್ಲ. ಆಂಗ್ಲ ಆಧಿಪತ್ಯವಿದ್ದುದರಿಂದ, ರಾಜವಂಶಗಳು ಹೆಸರಿಗಷ್ಟೇ ಇದ್ದವು. ಈ ಅತಂತ್ರ ಸ್ಥಿತಿಯಲ್ಲಿ ಸಾಹಿತ್ಯ ನಿರ್ಮಾಣವು ಸಹಜವಾಗಿಯೇ ಹಿನ್ನೆಲೆಗೆ ಸರಿಯಿತೆನ್ನಬೇಕು.

ಈಗಾಗಲೇ ನಮ್ಮ ವಿಮರ್ಶಕರು ಗುರುತಿಸಿರುವಂತೆ, ಆಗಿನ ಕವಿ-ಕಾದಂಬರಿಕಾರರು ಸಾಹಿತ್ಯದ ಜೊತೆ ಜೊತೆಗೇ ತಮಗೇ ಪ್ರತ್ಯೇಕವಾದ ಓದುಗ ವರ್ಗವನ್ನೂ ಸೃಷ್ಟಿಸಿಕೊಳ್ಳ ಬೇಕಾಗಿತ್ತು. ಹೀಗೆ, ತಾವು ತಲುಪಬೇಕಾಗಿರುವ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯಬೇಕಾಗಿದ್ದ ಅನಿವಾರ್ಯತೆಯಿಂದಾಗಿ, ತಮ್ಮ ಕೃತಿಗಳಲ್ಲಿ ಕಲಾತ್ಮಕತೆಯನ್ನು ಉಳಿಸಿಕೊಳ್ಳಲು ಅವರು ಪ್ರಜಾಪೂರ್ವಕವಾಗಿ ಪ್ರಯತ್ನಿಸಬೇಕಾಗಿತ್ತು. ಈ ಸವಾಲನ್ನು ಮೀರುವುದರಲ್ಲಿ ಪಂಜೆ ಮಂಗೇಶರಾಯರಂಥ ಅಂದಿನ ಸಣ್ಣ ಕಥೆಗಾರರು ಸಫಲರಾದರು.

ಈ ಮಾದರಿಯ ಜನಾಕರ್ಷಣೆಯ ತಂತ್ರಗಳು ಆಗ ವ್ಯಾಪಕವಾಗಿ ಬಳಕೆಯಾದವು. ಜನಪ್ರಿಯವಾಗಿದ್ದ ಗಾದೆಗಳನ್ನು ಕೃತಿಗಳ ಶೀರ್ಷಿಕೆಗಳಾಗಿ ಬಳಸಿದ ಎಂ.ಎಸ್. ಪುಟ್ಟಣ್ಣ (ಮಾಡಿದ್ದುಣ್ಣೋ ಮಹಾರಾಯ)ನಂಥವರ ಆಂತರ್ಯದ ಉದ್ದೇಶವಾದರೂ ಇದೇ ಆಗಿತ್ತು ಗುಲವಾಡಿ ವೆಂಕಟರಾಯರು (ಇಂದಿರಾಬಾಯಿ) ಕಾದಂಬರಿಯಲ್ಲಿ ಯಕ್ಷಗಾನದ ಸೊಲ್ಲುಗಳನ್ನು ವಿನಿಯೋಗಿಸಿದುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

೪. ಕನ್ನಡ ಸಾಹಿತ್ಯ ಕ್ಷೇತ್ರವು ಆ ಹಿಂದೆಂದೂ ಅನುಭವಿಸಿರದ ಸ್ಪರ್ಧಾತ್ಮಕ ಪರಿಸರ ವೊಂದು ಈ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಒಂದೆಡೆಯಿಂದ, ಬಂಗಾಲಿ ಮತ್ತು ಮರಾಠಿ ಇಂತಹ ಸೋದರಿ ಭಾಷೆಗಳಲ್ಲಿ ಸೃಜನಮುಖಿಯಾದ ಒತ್ತಡವು ತಲೆದೋರಿತ್ತು. ಇನ್ನೊಂದೆಡೆಯಿಂದ, ಆಂಗ್ಲ ಭಾಷೆಯ ಸ್ವತಂತ್ರ ಮತ್ತು ಅನುವಾದಿತ ಕೃತಿಗಳು ಅಪರಿಚಿತ ಲೋಕವೊಂದನ್ನು ಪ್ರದರ್ಶಿಸತೊಡಗಿದ್ದುವು. ಇವುಗಳ ಪರಿಣಾಮಗಳ ಮೊತ್ತವಾಗಿ ಕನ್ನಡ ಸಾಹಿತ್ಯ ನಿರ್ಮಾತೃಗಳಲ್ಲಿ ಸ್ವಾಭಿಮುಖವಾದ ಚಿಂತನ ಪ್ರವೃತ್ತಿಗಳು ಹೆಚ್ಚಾಗತೊಡಗಿದುವು. ಹೊಸ ಹಾದಿಯ ಹುಡುಕಾಟಗಳು ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸತೊಡಗಿದುವು. ಯಕ್ಷಗಾನ ಪ್ರಸಂಗ ರಚನೆಗಳ ಮೂಲಕ ಜನಪ್ರಿಯ ಮಾಧ್ಯಮಗಳು ವಿನಿಯೋಗಗೊಳ್ಳ ತೊಡಗಿದುವು ಮಾತ್ರವಲ್ಲದೆ, ಸಿದ್ಧ ಮಾದರಿಯೊಂದನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಸಮಾನಾಂತರವಾದ ಸಾಧನೆಗಳನ್ನು ತಮ್ಮ ಭಾಷೆಯಲ್ಲೂ ಮಾಡಬೇಕೆನ್ನುವ ಬಯಕೆಯು ನಮ್ಮ ಸಾಹಿತಿಗಳಲ್ಲಿ ಬಲಿಯತೊಡಗಿತು. ಈ ಸಂದರ್ಭದಲ್ಲಿ, ಸಾಹಿತ್ಯ ಸೃಷ್ಟಿಯು ಬುದ್ದಿಪೂರ್ವಕವಾದ ಪ್ರಯತ್ನವಾಗಬಹುದಾದ ಅಪಾಯದಂಚನ್ನೂ ಮುಟ್ಟಿತ್ತು. ಇದರರ್ಥ ಸ್ವೋಪಜ್ಞರಾದ ಕೃತಿಕಾರರು ಆಗ ಇರಲಿಲ್ಲವೆಂದಲ್ಲ. ಇವರ ರಚನೆಗಳೊಂದಿಗೇ ಅನುಕರಣ ಪ್ರಧಾನವಾದ ಇತರ ಕೃತಿಗಳೂ ಪ್ರಕಟವಾಗತೊಡಗಿದವೆಂದಷ್ಟೇ ಆಗಿದೆ.

ಈ ಹಿನ್ನೆಲೆಯಲ್ಲಿ, ಆ ಸಂದರ್ಭದ ಕನ್ನಡ ಕಾದಂಬರಿಗಳ ಕುರಿತಾಗಿ ವ್ಯಕ್ತವಾದ ಅಭಿಪ್ರಾಯವೊಂದನ್ನು ಪರಿಶೀಲಿಸಬಹುದು. ಅದು ಹೀಗಿದೆ: “ಭಾರತದಲ್ಲಿ ಹೊಸ ಶಿಕ್ಷಣವು ಆಗತಾನೆ ಶುರುವಾಗಿದ್ದು, ಶಿಕ್ಷಕರಾಗಿದ್ದ ಮಿಶನರಿಗಳ ಸಮಕಾಲೀನ ಸಾಹಿತ್ಯ ಪ್ರಜ್ಞೆಯ ಮಿತಿ ಮತ್ತು ಇತರ ಕಾರಣಗಳಿಂದ, ಕನ್ನಡದ ಅಂದಿನ ಕಾದಂಬರಿಕಾರರು ತಾತ್ತ್ವಿಕವಾಗಿ ಆಗ ಲಭ್ಯವಿದ್ದ ಉತ್ಕೃಷ್ಟ ಕಾದಂಬರಿಗಳ ಪ್ರಯೋಜನಗಳನ್ನು ಪಡೆಯಲಿಲ್ಲ. ಯಾವುದೇ ಒಂದು ಪ್ರದೇಶದ ಶಿಕ್ಷಕರ ಸಂವೇದನೆಯ ಮಟ್ಟಕ್ಕೂ ಅಲ್ಲಿನ ಸಮಕಾಲೀನ ಸಾಹಿತಿಗಳ ಸಂವೇದನೆಯ ಮಟ್ಟಕ್ಕೂ ಸಂಬಂಧವಿಲ್ಲದಿಲ್ಲ ಎಂಬ ಮಾತನ್ನು ಕನ್ನಡ ಸಾಹಿತ್ಯ ಸಂದರ್ಭದಲ್ಲೂ ಹೇಳಬಹುದು” (ಬಿ. ದಾಮೋದರರಾವ್) ಈ ಹೇಳಿಕೆಯು ಗ್ರಂಥ ಸಂಸ್ಕೃತಿಯ ಸ್ವರೂಪಕ್ಕೂ, ಸಾಹಿತ್ಯ ಸೃಷ್ಟಿಯ ವಿನ್ಯಾಸಗಳಿಗೂ ನೇರವಾದ ಸಂಬಂಧವನ್ನು ಕಲ್ಪಿಸುತ್ತದೆ. ಆದರೆ, ಕಾದಂಬರಿಯಾಗಲಿ, ಇತರ ಸಾಹಿತ್ಯ ಪ್ರಕಾರಗಳ ರಚನೆಗಳಾಗಲಿ, ಅಭ್ಯಾಸದಿಂದಲೇ ಪೋಷಣೆಯನ್ನು ಪಡೆಯಬೇಕೇ? ಸ್ವಂತದ ಸಂಪನ್ಮೂಲಗಳಿಂದಲೇ ನಿಜವಾದ ಸಾಹಿತಿಯು ಬಲಪಡೆಯಲಾರನೇ? ಈ ಅನಿಸಿಕೆಯು ರೂಪ, ತಂತ್ರ ಮುಂತಾದ ಸಾಹಿತ್ಯದ ಹೊರ ಹೊದಿಕೆಗಳನ್ನಷ್ಟೇ ಲಕ್ಷಿಸುತ್ತದೆಯೇ ಇಲ್ಲ, ಆಶಯ, ಸತ್ವ ಮೊದಲಾದ ಹೆಚ್ಚು ಸಂಕೀರ್ಣ ಸಂಗತಿಗಳನ್ನೂ ಮುಟ್ಟುತ್ತದೆಯೇ ಇತ್ಯಾದಿ ಪ್ರಶ್ನೆಗಳು ಹೆಚ್ಚಿನ ವಿಶ್ಲೇಷಣೆ ಗಳನ್ನು ನಿರೀಕ್ಷಿಸುತ್ತವೆ.

ಈ ಕಾಲದ ಸಾಹಿತ್ಯವು ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳಿಗೂ ಪ್ರೇರಣೆಯನ್ನು ನೀಡಿದೆ. ಉದಾಹರಣೆಗೆ, ಕೆಂಪು ನಾರಾಯಣ ‘ಮುದ್ರಾಮಂಜೂಷ’ದ ಬಗೆಗಿನ, “(ಇದು) ನಿಜವಾಗಿ ಕನ್ನಡದ ಮೊದಲನೆಯ ಕಾದಂಬರಿ. ಇಂಗ್ಲಿಷಿನ ಸಂಪರ್ಕವು ಕನ್ನಡಕ್ಕೆ ಪಟ್ಟದಿದ್ದಾಗಲೇ ಹುಟ್ಟಿದ ಐತಿಹಾಸಿಕ ಕಾದಂಬರಿ” (ತೀ.ನಂ.ಶ್ರೀ.) ಮತ್ತು ‘ಸುದೀರ್ಘ ಕಥೆ ಅಥವಾ ಕಾದಂಬರಿಯಾಗಿ ಕನ್ನಡದಲ್ಲಿ ಇದೇ ಮೊದಲನೆಯದಾಗಿ ಪರಿಣಮಿಸಿತು’ (ರಂ.ಶ್ರೀ. ಮುಗಳಿ) ಎನ್ನುವ ವಿಮರ್ಶೆಗಳನ್ನು ಗಮನಿಸಬಹುದು. ಎಂದರೆ ಹೊಸ ಪ್ರಯೋಗಗಳ ಸ್ವೋಪಜ್ಞತೆಯು ಆಂತರಿಕ ತುರ್ತಿನಿಂದ ಹುಟ್ಟುತ್ತದೆಯೇ ಹೊರತಾಗಿ, ಬಾಹ್ಯ ಅಧ್ಯಯನಗಳಿಂದ ಸ್ಫೂರ್ತಿಯನ್ನು ಪಡೆದು ಅಲ್ಲ ಎಂದಂತಾಯಿತು. ಆದರೂ, ಆಯಾ ಪ್ರಕಾರದ ಶ್ರೇಷ್ಠ ಕೃತಿಗಳ ಒಳನೋಟಗಳಿಂದಾಗಿ ಅದರ ಗುಣಮೌಲ್ಯಗಳು ಹೆಚ್ಚುತ್ತ ವೆಂದು ಒಪ್ಪಿಕೊಳ್ಳಬಹುದು.

ಹೊರಗಿನ ಒತ್ತಡಗಳು, ಹೊಸ ಆವಿಷ್ಕಾರಗಳ ನಿರಂತರ ಪ್ರಸ್ತುತಿಗಳಿಂದ ತುಂಬಿರುವ ಸಾಹಿತ್ಯಿಕ ಪರಿಸರದಲ್ಲಿ, ಸೃಜನಶೀಲ ಮನಸ್ಸು ಗಲಿಬಿಲಿಗೊಳ್ಳುತ್ತದೆ, ಆತಂಕವನ್ನು ಅನುಭವಿಸುತ್ತದೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಗಳಿಸಿಕೊಂಡಾಗ ಮಾತ್ರವೇ ಸ್ವೋಪಜ್ಞವಾದ ಸಾಹಿತ್ಯವು ಸೃಷ್ಟಿಯಾಗುತ್ತದೆಂಬ ನಿರ್ಧಾರವು ಇಲ್ಲಿ ಸಮಂಜಸ ವೆನಿಸುತ್ತದೆ.

೫. ಆ ಕಾಲದಲ್ಲಿ ಅಷ್ಟೇನೂ ಪ್ರೋತ್ಸಾಹದಾಯಕವಲ್ಲದ ಸಾಂಸ್ಕೃತಿಕ ಪರಿಸರ ಮತ್ತು ಅಭಿವ್ಯಕ್ತಿಯ ಮಿತಿಗಳು, ಕನ್ನಡ ಸಾಹಿತ್ಯ ಕ್ಷೇತ್ರವನ್ನೊಂದು ಇಕ್ಕಟ್ಟಿನಲ್ಲಿ ಇರಿಸಿದ್ದುವು. ಈ ಸಂದಿಗ್ಧದಲ್ಲಿ ಅದು, ಅನುವಾದದ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸತೊಡಗಿತು. ಹೀಗಾಗಿಯೇ ಆಗ ಸಂಸ್ಕೃತಿ, ಆಂಗ್ಲ, ಬಂಗಾಲಿ, ಮರಾಠಿ, ನಾಟಕ – ಕಾದಂಬರಿಗಳ ಮಹಾಪೂರವೇ ಅನುವಾದಗಳ ರೂಪದಲ್ಲಿ ಇಲ್ಲಿಗೆ ಹರಿದು ಬರಲು ಅನುವುಂಟಾಯಿತು. ವಿಸ್ತೃತವಾದ ಓದಿಗೆ ವಿಪುಲ ಅವಕಾಶಗಳನ್ನು ನಿರ್ಮಿಸಲು ಈ ಬಾಹುಳ್ಯವೂ ಸಹಕರಿಸಿತು. ಇತರ ಕಾರಣಗಳೊಂದಿಗೆ, ಈ ಅನುವಾದ ಸಾಹಿತ್ಯದಿಂದ ಪಡೆದ ಸ್ಫೂರ್ತಿಯೂ ಸ್ವತಂತ್ರ ರಚನೆಗಳ ಆಸಕ್ತಿ-ಶಕ್ತಿಗಳನ್ನು ಉದ್ದೀಪಿಸಿತು. ಈ ಅಂಶವು, ಕನ್ನಡ ಜಗತ್ತಿನ ಸಾಹಿತ್ಯಿಕ ಸಂವೇದನೆಗಳನ್ನು ತಿದ್ದಿ ಸಂಸ್ಕರಿಸುವುದರ ಜೊತೆಗೆ, ಅದರೊಂದಿಗೆ ಜಾಗತಿಕ ಸಂಸ್ಕೃತಿಗಳ ಸಂವಾದಗಳನ್ನೇರ್ಪಡಿಸುವಲ್ಲಿ ಸಫಲವಾಯಿತು. ಮಾತ್ರವಲ್ಲ, ತನ್ನ ಆಸುಪಾಸಿನ ಪ್ರದೇಶಗಳ, ಅಗೋಚರ ಪ್ರಪಂಚಗಳ ಅವಕುಂಠನವನ್ನು ಅದು ಓಸರಿಸಿತು. ಬೇರೆ ಬೇರೆ ಸಾಂಸ್ಕೃತಿಕಾಂಶ ಗಳ ಬಗೆಗಿನ ಆರೋಗ್ಯಕರವಾದ ಕುತೂಹಲದ ಬೆಳವಣಿಗೆಗೆ ಹೀಗೆ ಬೀಜಾವಾಪನೆಯಾಯಿತು ಅಷ್ಟಲ್ಲದೆ, ಇತರ ಭಾಷಾ ಸಾಹಿತ್ಯಗಳೊಂದಿಗೆ ಸ್ವಂತ ಉತ್ಪನ್ನಗಳ ವಿನಿಮಯ ವಿಧಾನಗಳ ಶುಭಾರಂಭವೂ ಇಲ್ಲಿ ಆಯಿತು.

೬. ಈ ಅನುಕ್ರಮಣಿಕೆಯಲ್ಲಿ, ಆ ಕಾಲದ ಸಾಹಿತಿಯ ಅಂತರಂಗದ ತುಮುಲ-ಸಂಘರ್ಷ ಗಳನ್ನು ಕಡೆಗಣಿಸುವಂತಿಲ್ಲ. ವ್ಯಕ್ತಿಗತವಾದ ಅನುಭವ ದ್ರವ್ಯವೊಂದನ್ನು ಸಾರ್ವತ್ರಿಕ ಗೊಳಿಸುವ ಹಂಬಲಗಳು ಎಷ್ಟೇ ತೀವ್ರವಾಗಿದ್ದರೂ, ಆಂತರಿಕ-ಬಾಹ್ಯ ಮಿತಿಗಳು ಅವುಗಳ ಅಭಿವ್ಯಕ್ತಿಗಳನ್ನು ತಡೆಯುವ ಪ್ರಸಂಗಗಳು ಎಲ್ಲ ಕಾಲಗಳಲ್ಲೂ ಕಾಣಿಸುತ್ತವೆ. ಇದರ ನೇಪಥ್ಯದಲ್ಲಿ ಹಲವು ಕಾರಣಗಳಿರುತ್ತವೆ. ಅದರಲ್ಲೂ ಇಂಥ ಸಂಕ್ರಮಣ ಕಾಲಘಟ್ಟಗಳಲ್ಲಿ ಸಾಹಿತ್ಯ ನಿರ್ಮಾತೃಗಳನ್ನು ಅನೇಕ ರೀತಿಯ ಅಸ್ಥಿರತೆಗಳು ಕಾಡುವುದು ತೀರಾ ಸಹಜವೇ ಆಗಿದೆ. ಮುದ್ದಣನಂಥವರಿಗೆ, ಸಾಂಪ್ರದಾಯಿಕವಾದ ಸಂವೇದನೆಗಳಿಗೆ ಸ್ಪಂದಿಸಬೇಕಾದ ಅಗತ್ಯವೂ ಇತ್ತು; ಆಧುನಿಕ ಚಿಂತನಕ್ರಮಗಳನ್ನು ಸುಸಂಬದ್ಧಗೊಳಿಸಿ, ಪ್ರಚಾರಗೊಳಿಸುವ ತವಕವೂ ಜೀವಂತವಾಗಿತ್ತು. ಇವುಗಳೊಂದಿಗೆ ತಮ್ಮ ಕಾಲದ ವಿದ್ವಾಂಸರಿಂದ ತಮ್ಮ ಕೃತಿಗಳಲ್ಲಿ ತಿರಸ್ಕೃತವಾಗುತ್ತವೋ ಎಂಬ ಆಂತಕವೂ ಇತ್ತು.

ಎಲ್ಲ ಅರ್ಥಗಳಲ್ಲೂ ಅನುತ್ತೇಜಕವಾದ ವಾತಾವರಣವನ್ನು ಸದಾ ನೆನೆಸಿಕೊಂಡೇ ಈ ಸಾಹಿತ್ಯದ ವಿಶ್ಲೇಷಣೆಗಳನ್ನು ಬೆಳೆಸಬೇಕಾಗುತ್ತದೆ. ಆಧುನಿಕ ಸಂದರ್ಭದ ವಿಮರ್ಶೆಯ ನಮ್ಮ ಪರಿಭಾಷೆ – ಮಾನದಂಡ – ಸಿದ್ಧಾಂತಗಳು ಇಲ್ಲಿಗೆ ಹೊಂದಲಾರವು. ಆದರೆ, ಮುದ್ದಣನಂಥ ಒಬ್ಬ ಸಮರ್ಥ ಕವಿಯು, ತನ್ನ ಕೃತಿಗಳಲ್ಲಿ ಸ್ವಂತ ಹೆಸರನ್ನೇ ಉಲ್ಲೇಖಿಸದಿ ರುವುದಕ್ಕೆ ಇಂಥ ಸಾಂಸ್ಕೃತಿಕ ವೈಲಕ್ಷಣ್ಯಗಳು ಮೂಲವಾಗಿದ್ದಿರಬಹುದೇ ಹೇಗೆಂಬುದು ಇಲ್ಲಿ ವಿಚಾರಣೀಯವೆನಿಸುತ್ತದೆ. (ಪ್ರಬಲವಾದ ಆರ್ಥಿಕ ಕಾರಣಗಳಿಗಾಗಿ, ತನ್ನ ಕೃತಿಗಳು ಹೇಗಾದರೂ ಬೆಳಕು ಕಾಣಲೇಬೇಕೆಂಬ, ಅದಮ್ಯ ಇಚ್ಛೆಗೆ ಮಣಿದು, ಆತನು ಹಾಗೆ ಮಾಡಬೇಕಾಗಿ ಬಂತೆನ್ನುವುದು ಈಗಾಗಲೇ ಸಿದ್ಧವಾಗಿದೆ.)

ಈ ನಿಟ್ಟಿನಿಂದ, ಆ ಕಾಲದ ಕೆಲವು ಸಾಹಿತಿಗಳು ಸ್ವಂತದ ಸಮಸ್ಯೆಗಳನ್ನೂ, ವೈಯಕ್ತಿಕ ಬದುಕಿನ ಸವಾಲು – ಸೋಲು – ಅವಮಾನಗಳನ್ನು ತುಂಬ ವಿಶಾಲವಾದ ಭಿತ್ತಿಯಲ್ಲಿ ರೇಖಿಸಲು ಪ್ರಯತ್ನಿಸಿದರು. ತಮ್ಮ ಕಥಾಹಂದರಗಳೊಳಗಿನ ಸೂಕ್ಷ್ಮ-ಸೂಕ್ತ ಸ್ಥಾನಗಳನ್ನು ಸದುಪಯೋಗಿಸಿಕೊಂಡರು. ಸ್ವತಃ ಮುದ್ದಣನೇ ಪ್ರಸ್ತಾಪಿಸಿದ ‘ಭವತಿಭಿಕ್ಷಾಂ ದೇಹಿ’ ಸಪ್ತಾಕ್ಷರೀ ಮಂತ್ರಪಠಣದ ಹಿಂದಿರುವ ವಾಸ್ತವ, ದಾರಿದ್ರದ-ದಾರುಣ ನೋವುಗಳ ಧ್ವನಿಯನ್ನಿಲ್ಲಿ ಪರಿಗಣಿಸಬಹುದು. ಇದರಂತೆಯೇ ‘ಇಂದಿರಾಬಾಯಿ’ ಕಾದಂಬರಿಯಲ್ಲಿ- ಇತರ ಕಾದಂಬರಿಗಳಲ್ಲೂ ಕೂಡಾ ಬರುವ ಪರ-ವಿರೋಧೀ ನೆಲೆಗಳನ್ನಾಶ್ರಯಿಸುವ ಸಂಭಾಷಣೆಗಳು ಹಳೆ-ಹೊಸ ಸಿದ್ಧಾಂತಗಳ ಮುಖಾಮುಖಿಗಳಿಂದ ನಿಷ್ಪನ್ನವಾಗುವ ಸತ್ಯಗಳನ್ನು ಸೂಚಿಸುತ್ತವೆ. ಉದಾಹರಣೆಗೆ, ಇಂದಿರಾಬಾಯಿಯು ಜಲಜಾಕ್ಷಿಯೊಡನೆ ಕೇಳುವ … ಇಂಗ್ಲೀಷ್ ಭಾಷೆ, ಗಣಿತಶಾಸ್ತ್ರ, ಲೋಕಚರಿತ್ರ ಇವೇ ಮುಂತಾದ ವಿಷಯಗಳನ್ನು ಹೆಂಗಸರು ಕಲಿಯಬಾರದಂತೆ…. ಅವೆಲ್ಲವನ್ನು ಕಲಿತವರು ಜಾತಿಗೆಟ್ಟು ದುರ್ನಡತೆಯಲ್ಲಿ ಪ್ರವರ್ತಿಸುತ್ತಾರಂತೆ…. ಹೌದೇ?’ ಎಂಬ ಪ್ರಶ್ನೆ ಮತ್ತು ಅದಕ್ಕೆ ತಾನೇ ಕೊಟ್ಟುಕೊಳ್ಳುವ, “ನನ್ನ ಬುದ್ದಿಗೆ ತೋರುವುದೇನೆಂದರೆ, ವಿದ್ಯೆ ಕಲಿಯುವುದರಿಂದ ಯಾವುದೊಂದು ಕೇಡಿಲ್ಲ. ಮಾತ್ರವಲ್ಲ, ಎಲ್ಲಾ ಕೇಡುಗಳಿಂದಲೂ ತಪ್ಪಿಸಿಕೊಳ್ಳಬಹುದು” ಎನ್ನುವ ಉತ್ತರಗಳನ್ನು ಗಮನಿಸಬಹುದು. ಎಂದರೆ, ಆ ಕಾಲದ ಸಾಂಸ್ಕೃತಿಕ ತಲ್ಲಣಗಳಿಗೆ ಕಾರಣಗಳಲ್ಲೊಂದಾದ ‘ಸ್ತ್ರೀ ವಿದ್ಯಾಭ್ಯಾಸ’ದ ಬಗೆಗೆ ವ್ಯಕ್ತಿಗಳ ಒಳಗೂ, ಹೊರಗಿನ ಸಮಾಜಗಳಲ್ಲೂ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದ್ದುವು. ಆಗ ಅಂದಿನ ಸಾಹಿತಿಗಳು ತಮ್ಮ ವೈಯಕ್ತಿಕ ಸಿದ್ಧಾಂತ ಗಳನ್ನು ಮತ್ತೆ ಮತ್ತೆ ಪರೀಕ್ಷಿಸುವುದರ ಮೂಲಕವೇ ಸ್ವ-ನಿಲುವುಗಳನ್ನು ದೃಢಪಡಿಸಿ ಕೊಳ್ಳುತ್ತಿದ್ದರು. ಈ ಪ್ರಕ್ರಿಯೆಯ ಅನಂತರ ಹೊಸತುಗಳ ಸ್ವೀಕಾರ, ನಿರಾಕೃತಿ, ರೂಪಾಂತರ, ಹೊಂದಾಣಿಕೆಗಳೆಲ್ಲವೂ ನಿರ್ಧಾರಿತವಾಗುತ್ತಿದ್ದವು. ಇಂಥ ಸ್ವಗತಗಳು ಸಾಮೂಹಿಕ ಸಂವೇದನೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರಗಳನ್ನು ವಹಿಸುತ್ತಿದ್ದುವು. ಸಾಂಸ್ಕೃತಿಕವಾದ ಪ್ರತಿರೋಧಗಳ ಮುಂದಿನ ಸಮರ್ಥನೆಗಳಾಗಿಯೂ ಇವುಗಳು ಕ್ರಿಯಾಶೀಲವಾಗುತ್ತಿದ್ದುವು.

ಸಾಹಿತ್ಯದಲ್ಲಿ ನಡೆಯುತ್ತಿದ್ದ ಇಂಥ ವಿಚಾರ ವಿಮರ್ಶೆಗಳು, ಜನತೆಯ ದೃಷ್ಟಿಕೋನದ ಮೇಲೂ ಪ್ರಭಾವ – ಪರಿಣಾಮಗಳನ್ನು ಬೀರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವು. ‘ಓ ಇಂಥಾದ್ದೊಂದು ಸುಧಾರಣೆಯಾದರೆ ಘೋರ ಅನಾಹುತವೇನೂ ಆಗಲಾರದೇನೋ’ ಎನ್ನುವ ನಂಬಿಕೆಯನ್ನು ಕೆಲವರಲ್ಲಾದರೂ ಹುಟ್ಟಿಸಿದುವು. ಎಲ್ಲವನ್ನೂ ಸಂಶಯದಿಂದಲೇ ನೋಡುವ ಮಂದಿಯಲ್ಲೂ ಸ್ವಲ್ಪಮಟ್ಟಿಗೆ ವಿಶ್ವಾಸವನ್ನು ಕುದುರಿಸುವ ಕ್ರಮಕ್ಕೆ ಒಂದು ರೀತಿಯ ಚಾಲನೆಯು ದೊರೆಯಿತು. ಹೊಸನ್ನಡದ ಭಾಷಾ ಪ್ರಯೋಗಗಳು ಈ ಕಾಲದಲ್ಲಿ ಜನಪ್ರಿಯವಾಗತೊಡಗಿದ್ದುವು. ಆಗಿನ ಸೃಜನಶೀಲ ಪ್ರತಿಭೆಗಳಿಗೆ ಶಬ್ದ ರೂಪ, ವ್ಯಾಕರಣ, ನಿಷ್ಪತ್ತಿ ಮುಂತಾದುವುಗಳ ಬಗೆಗೆ ಸಹಜವಾಗಿಯೇ – ಗೊಂದಲಗಳಿದ್ದುವು. ಆ ಸಂದರ್ಭ ದಲ್ಲಿ, ಕ್ರೈಸ್ತ, ಮಿಶನರಿಗಳು ಪ್ರತ್ಯಕ್ಷ – ಪರೋಕ್ಷ ನೆಲೆಗಳಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ದಿಗೆ ಸಹಕರಿಸಿದರು. ಮುದ್ದಣನ ಕಾಲದ ಆಚೀಚೆಗಿನ ವರ್ಷಗಳಲ್ಲಿ ಪ್ರಕಟವಾದ ನಿಘಂಟುಗಳು, ವ್ಯಾಕರಣ ಮುಂತಾದ ಶಾಸ್ತ್ರ ಗ್ರಂಥಗಳು ಕನ್ನಡ ಭಾಷೆ – ಸಾಹಿತ್ಯಗಳ ಅಭ್ಯಾಸಿಗಳಿಗೂ ನಿರ್ಮಾತೃಗಳಿಗೂ ಮಹದುಪಕಾರಗಳನ್ನು ಮಾಡಿದುವು. ಭಾಷೆಯ ಸೂಕ್ಷ್ಮಗಳು ಕರಗತ ವಾಗುತ್ತಿದ್ದಂತೆ, ಅವುಗಳನ್ನು ಬಳಸುವ ಹುಮ್ಮಸ್ಸೂ, ರೂಢಿಯಲ್ಲಿ ಸ್ಥಿರಗೊಳಿಸುವ ಪ್ರಯತ್ನಗಳೂ ಮುತುವರ್ಜಿಯಿಂದ ನಡೆಯತೊಡಗಿದುವು. ಇವೆಲ್ಲವೂ ಶಬ್ದ ಸಂಪತ್ತನ್ನು ಒಂದೆಡೆಯಿಂದ ಹೆಚ್ಚಿಸಿದರೆ ಇನ್ನೊಂದು ಕಡೆಯಿಂದ ಬಳಕೆಯ ದೃಷ್ಟಿಯ ಕಗ್ಗಂಟುಗಳನ್ನು ಬಿಡಿಸಿ, ಜನಮಾನಸವನ್ನು ಹುರಿದುಂಬಿಸಿ, ಆತ್ಮವಿಶ್ವಾಸವನ್ನು ಬೆಳೆಸುವುದರಲ್ಲಿ ನಿರತ ವಾದವು.

೮. ಈ ಕಾಲವು ಎಲ್ಲ ರೀತಿಯ ಸಾಂಸ್ಕೃತಿಕ ವಿಪ್ಲವಗಳಿಗೆ ಸಾಕ್ಷಿಯಾಗಿತ್ತು. ಆ ಉಲ್ಲೋಲಕಲ್ಲೋಲವಾದ ಸ್ಥಿತಿಯಲ್ಲಿ ‘ಲೋಕ ಹೀಗಿದೆ’ ಎನ್ನುವ ಖಂಡಿತವಾದದ ಬದಲಿಗೆ, ‘ಒಂದು ವಿಶಿಷ್ಟ ದೃಷ್ಟಿಗೆ ಲೋಕವು ಹೀಗೆ ಕಾಣುತ್ತದೆ’ ಎಂದು ನಿರೂಪಿಸುವ ಹೆಚ್ಚು ಉದಾರವಾದ ಜೀವನದೃಷ್ಟಿಯು ಆಕಾರಕ್ಕೆ ಬರತೊಡಗಿತು.

೯. ಮುಖ್ಯವಾಗಿ, ಆ ಕಾಲದ ಮುಗ್ಧವಾದ, ಪ್ರಕೃತಿಗೆ ಸಮೀಪವಾದ ಸಾಮೂಹಿಕ ಚೈತನ್ಯವನ್ನು ಉಡುಗಿಸುವಂಥ ಕೆಲಸವು ಮತಪ್ರಸಾರದ ಹೆಸರಿನಲ್ಲಿ ನಡೆದುದನ್ನಿಲ್ಲಿ ವಿಷಾದದಿಂದಲೇ ಉಲ್ಲೇಖಿಸಬೇಕು. ಯಾವುದು ಭದ್ರವಾದ ಆಸರೆಯೆಂದು ಅದು ನಂಬಿತ್ತೋ, ಆ ತಳಹದಿಯೇ ಕುಸಿಯುವಂತಾದುದು ಆ ಕಾಲವು ಕಂಡ ದುರಂತವಾಗಿದೆ. ಅಂದಿನ ಬಹು ಜನ ಸಮುದಾಯವು ತನ್ನ ಧಾರ್ಮಿಕ ಸಂವಿಧಾನದ ಬಗೆಗೆ ಕಟುವಾದ ಟೀಕೆ, ಖಂಡನೆ, ದೌರ್ಬಲ್ಯಗಳ ಪ್ರಸ್ತಾಪವನ್ನೆದುರಿಸಲಾರದೆ ನಲುಗಿ ಹೋಯಿತು. ಈ ಹೊಡೆತವನ್ನು ಅದು ಎದುರಿಸಿದ ಕ್ರಮಗಳೂ ಅಷ್ಟೇ ಗಂಭೀರವಾಗಿವೆ. ತಲೆತಲಾಂತರಗಳಿಂದ ನಡೆದು ಬರುತ್ತಿದ್ದ ತಮ್ಮ ಆಚಾರ-ವಿಚಾರಗಳ ಕುರಿತು ಎತ್ತಲ್ಪಟ್ಟ ಪ್ರಶ್ನೆಗಳು ಅಂದಿನ ಮನಸ್ಸುಗಳನ್ನು ಸ್ವಲ್ಪಮಟ್ಟಿಗೆ ಉದ್ರಿಕ್ತಗೊಳಿಸಿದುವು. ಇದರಿಂದಾಗಿ ತಮ್ಮವೇ ಧಾರ್ಮಿಕ ಪರಿಕಲ್ಪನೆಗಳನ್ನು ಹೊಸ ದೃಷ್ಟಿಯಿಂದ ನೋಡುವ ಪ್ರವೃತ್ತಿಯೂ ಅಲ್ಲಿ ಬೆಳೆಯಿತು. ಇಂಥ ಸೂಕ್ಷ್ಮವಾದ ವಿಚಕ್ಷಣೆಯಿಂದಾಗಿ, ಮಿಶನರಿಗಳ ಹೇಳಿಕೆಗಳನ್ನು ಕುರುಡಾಗಿ ಒಪ್ಪಿಕೊಳ್ಳದೆ, ತಮ್ಮ ಧಾರ್ಮಿಕ ಸಾಹಿತ್ಯ ಕೃತಿಗಳ ಅಧ್ಯಯನಗಳಲ್ಲಿ ಅಂದಿನ ಮಂದಿ ತೊಡಗುವಂತಾಯಿತು. ಇದರಿಂದಾಗಿ, ಆ ಬಗೆಗಿನ ಜ್ಞಾನದ ಪರಿಧಿಯು ವಿಸ್ತಾರವನ್ನು ಪಡೆಯಿತಲ್ಲದೆ, ಹೊಸ ಧಾರ್ಮಿಕ ಗ್ರಂಥಗಳ ರಚನಾಪದ್ಧತಿಗೂ ಪ್ರೇರಣೆಯು ದೊರೆಯು ವಂತಾಯಿತು.

ಪಾಡ್ಡನ, ಭೂತಾರಾಧನೆಯ ಸಾಹಿತ್ಯಗಳ ಸಂಗ್ರಹ (ಮ್ಯಾನರ್, ಬರ್ನೆಲ್) ಪ್ರಕಟಣೆ ಗಳಿಂದಾಗಿ, ಅನೇಕ ಜಾನಪದ ಆರಾಧನಾ ವಿಧಾನಗಳ ಬಗೆಗೆ ಜನರು ಗಮನವನ್ನು ಹರಿಸುವಂತಾಯಿತು. ಶಿಷ್ಟ-ಜಾನಪದ ತುಲನಾ ಕ್ರಮಗಳು ಸಾಂಸ್ಕೃತಿಕ ಸೇರ್ಪಡೆ, ಬೇರ್ಪಡೆ, ವಿನಿಮಯ ಮುಂತಾದ ವ್ಯಾಪಾರಗಳ ಮೇಲೆ ವಿಶೇಷವಾದ ಬೆಳಕನ್ನು ಬೀರಿದುವು. (ಉದಾ: ಪಂಜೆಯವರ ‘ಕೋಟಿ-ಚೆನ್ನಯ್ಯ’ ಕೃತಿ)

ಇದರ ಇನ್ನೊಂದು ನೆಲೆಯಲ್ಲಿ ಧಾರ್ಮಿಕ-ಶಿಷ್ಟ-ಜಾನಪದ ಸೃಜನಶೀಲತೆಗಳ ಸಂತುಲನ ದಿಂದ ಯಕ್ಷಗಾನ ಪ್ರಸಂಗಗಳು ರಚಿತವಾಗತೊಡಗಿದವು. ಮೂಡಲಪಾಯ ಮತ್ತು ಪಡುವಲಪಾಯದ ಎರಡು ಕ್ಷೇತ್ರಗಳಿಗೆ ಈ ಮಾತು ಅನ್ವಯವಾಗುತ್ತದೆ.

ತಮತಮಗೆ ಪವಿತ್ರವೆನಿಸಿದ ಧಾರ್ಮಿಕ ಭಾವನೆಗಳನ್ನು ಅನ್ಯಾಕ್ರಮಣಗಳಿಂದ ರಕ್ಷಿಸುವ ಪ್ರಯತ್ನಗಳಾಗಿ ಇವು ಗಮನಾರ್ಹವಾಗಿವೆ. ವಿದೇಶೀಯರ ಧರ್ಮ ಪ್ರಸಾರ ಪರಿಕ್ರಮಕ್ಕೆ ಇದೊಂದು ಸೃಷ್ಟ್ಯಾತ್ಮಕ ಪ್ರತಿಕ್ರಿಯೆಯೇ ಆಗಿದೆ.

೧೦. ವರ್ತಮಾನದ ಸ್ಥಿತ್ಯಂತರಗಳನ್ನು ಅಂದಿನ ಸೃಷ್ಟಿಶೀಲತೆಯು ಬಹು ಸೂಕ್ಷ್ಮವಾಗಿ, ಗಂಭೀರವಾಗಿ ಪರಿಶೀಲಿಸುತ್ತಿತ್ತು. ಉದಾಹರಣೆಗೆ, ‘ಸಂಗ್ಯಾ-ಬಾಳ್ಯಾ’ದಂತಹ, ನೈತಿಕ ಪ್ರಶ್ನೆಯೊಂದನ್ನು ಎತ್ತಿಕೊಂಡ ನಾಟಕದ ವಸ್ತುವನ್ನು ಗಮನಿಸಬಹುದು. ಹೆಸರಾಂತ ಮನೆತನವೊಂದರಲ್ಲಿ ನಡೆದ ವಾಸ್ತವ ಘಟನೆಯನ್ನು ಇದು ಆಧರಿಸಿದೆ. “ಅಂಥ ಘಟನೆಯನ್ನು ಉಪಯೋಗಿಸಿಕೊಂಡು, ಅಪವಾದ ಬೆಳೆಯದೆ, ಒಂದು ಕಲಾಕೃತಿಯು ಹುಟ್ಟಿ ಬಂದದ್ದು ವಿಶೇಷ ಸಂಗತಿಯೆಂದೇ ಹೇಳಬೇಕು’ ಎನ್ನುವ ಮಾತಿನಲ್ಲಿ, ನೈತಿಕ ತಳಹದಿಯ ಮೇಲಾದ ದಾಳಿ, ಅದರ ಪರಿಣಾಮ, ವಿಷಮ ದೃಷ್ಟಿಕೋನಗಳ ಸರಣಿಯೆಂದು ಕಾಣಿಸುತ್ತದೆ. ಸಮಕಾಲೀನ ನೀತಿಯ ಸ್ವರೂಪದ ಸ್ಪಷ್ಟೀಕರಣದ ನೆಲೆಯಿಂದ ಈ ಮಾದರಿಯನ್ನು ಪರೀಕ್ಷಿಸಬೇಕಾಗುತ್ತದೆ. ಇದೇ ರೀತಿಯಾಗಿ, ‘ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ’ದಂತಹ ನಾಟಕವು ಆ ಕಾಲದ, ಎಚ್ಚತ್ತ ಸ್ತ್ರೀ ಶಕ್ತಿಯನ್ನು ಮನದಟ್ಟು ಮಾಡಿಕೊಡುತ್ತದೆ.

೧೧. ಭಾಷಿಕ ಮತ್ತು ಸಾಹಿತ್ಯಿಕ ಕುಂದುಗಳನ್ನೂ, ಖಾಲಿತನಗಳನ್ನೂ ಲಕ್ಷಿಸುವ ಆತ್ಮಾವಲೋಕನ ಕ್ರಮವೂ ಆ ಕಾಲದ ಹೊಸ ಸೃಷ್ಟಿಗಳನ್ನು ಪ್ರಚೋದಿಸಿತು. ಕನ್ನಡ ಮತ್ತು ಕನ್ನಡತನಗಳ ಅಸ್ತಿತ್ವಗಳ ಪ್ರಶ್ನೆಗಳು ಅಂದಿನ ಸಂವೇದನಾಶೀಲ ಮನದ ಕದವನ್ನು ತಟ್ಟತೊಡಗಿದುವು. “ಎಲ್ಲಿ ನೋಡಲು ಮರಾಠಿಯರ ನಾಟಕಮಯಂ ತಾನಾಯ್ತು ಕರ್ನಾಟಕಂ” ಎನ್ನುವ ಅನಿಸಿಕೆಯೇ ಕಾರಣವಾಗಿ, ನಾಟಕ ರಚನೆಗಳಿಗೆ ಪ್ರಾರಂಭಿಸಿದ ಸಕ್ಕರಿ ಬಾಳಾಚಾರ್ಯರ (ಶಾಂತ ಕವಿ) ಹೆಸರು ಇದಕ್ಕೆ ಉತ್ತಮ ನಿದರ್ಶನವಾಗುತ್ತದೆ. ವರ್ತಮಾನದಲ್ಲಿ ಕಾಣುತ್ತಿದ್ದ ಸಾಂಸ್ಕೃತಿಕ ಶೂನ್ಯತೆ ಮತ್ತು ಭವಿಷ್ಯದಲ್ಲಿ ಅದು ಎದುರಿಸಬಹುದಾದ ಅಪಾಯಗಳನ್ನು ಆ ಪ್ರಜ್ಞೆಯು ಸಮರ್ಪಕವಾಗಿ ಗ್ರಹಿಸಿದೆ. ಅದರ ಫಲಿತಾಂಶವಾಗಿ, “ನಾಟಕಗಳ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಜಾಗೃತಗೊಳಿಸಲು” ಅದು ಸನ್ನದ್ಧವಾಯಿತು;

“ಎಲ್ಲಿ ನೋಡಲು ಕನ್ನಡದ ಭಾಷೆಯ
ಲ್ಲಿಲ್ಲ ಮೃದುಶಬ್ದವಿಲ್ಲ ಭಾಷಾಸರಣಿ
ಯಿಲ್ಲವೈ ಸ್ವಾರಸ್ಯವಿಲ್ಲ ನಾಟಕವಿಲ್ಲ ನಟನಟಿಗಳಿಲ್ಲವಿನ್ನು |
ಇಲ್ಲವವು ಮುಂದಾಗುವಾಶೆ ಕೂಡಾ ಇಲ್ಲ
ವಿಲ್ಲವೆಂದೇ ಧಾರವಾಡ ಸೀಮೆಯ ಜನರು
ಸೊಲ್ಲಿಸುವ ಕಾಲದಲಿ ಕರ್ನಾಟಕ ನಾಟಕಂ ಪುಟ್ಟಿದುದು ಕೃತಪುರದೊಳು”

ಎಂದು ಶೂನ್ಯವನ್ನು ತುಂಬುವ ಕರ್ತವ್ಯದಲ್ಲಿ ಪ್ರವೃತ್ತವಾಯಿತು. ಇದೇ ಬಗೆಯ ಆಶಯವನ್ನು ಶ್ರೀಕಂಠೇಗೌಡರ ರಚನೆಗಳಲ್ಲೂ ಕಾಣುತ್ತೇವೆ.

೧೨. ಏಕರೂಪಿಯೂ, ಏಕಮುಖಿಯೂ ಆಗಿದ್ದ ಸಾಂಸ್ಕೃತಿಕ ಅಸ್ತಿತ್ವವು ಗಳಿಸಿ ಕೊಳ್ಳುತ್ತಿದ್ದ ಅನೇಕತ್ವವನ್ನು ಗ್ರಹಿಸುವುದು, ಆ ಕಾಲದ ಬಹುದೊಡ್ಡ ಸವಾಲಾಗಿತ್ತು. ಅಷ್ಟೇ ಎಚ್ಚರದಿಂದ, ಆ ಮನಸ್ಸುಗಳು ತಮ್ಮ ಸಾಧ್ಯತೆಗಳನ್ನು ಹೊಂದಿಸಿಕೊಂಡೋ, ಪರಿವರ್ತಿಸಿಕೊಂಡೋ, ಅವಶ್ಯಕತೆಗಳಿಗೆ ಅನುಗುಣವಾಗಿ ಬಾಗಿಸಿಕೊಂಡೋ ಅದನ್ನು ನಿಭಾಯಿಸಿದವೆಂಬ ಅಂಶವೂ ಇಲ್ಲಿ ಮಹತ್ವದ್ದಾಗುತ್ತದೆ. ಧೋರಣೆ-ಸರ್ವಧರ್ಮ, ವ್ಯಷ್ಟಿ-ಸಮಷ್ಟಿಗಳ ಸಂಘಟನೆ-ಸಂಘಟನೆಗಳನ್ನೂ ಅಂದಿನ ಸಹೃದಯ-ಸಾಹಿತಿಗಳು ತಮ್ಮ ಆದ್ಯತೆಗಳಲ್ಲಿ ಸೇರಿಸಿಕೊಂಡರು. ಈ ಹೋರಾಟ ಪ್ರಧಾನವಾದ ನಿಲುವನ್ನು ಆಶ್ರಯಿಸಬೇಕಾಗಿ ಬಂದುದರ ನೇರ ಪರಿಣಾಮವು ಆ ಸಾಹಿತ್ಯದ ಗುಣಮಟ್ಟದ ಮೇಲಾಯಿತು. ಈ ಕಕ್ಷೆಯಿಂದ ಹೊರಗಿದ್ದುಕೊಂಡು, ಸಮಕಾಲೀನವಾದ ಸಾಂಸ್ಕೃತಿಕ ತಲ್ಲಣ-ಪಲ್ಲಟಗಳಿಂದ ಅಬಾಧಿತವಾಗಿ ಉಳಿದ ವರ್ಗವೊಂದು – ಎಲ್ಲ ಕಾಲಗಳಿಗೂ ಸಾಮಾನ್ಯವಾಗಿರುವಂತೆಯೇ – ಆಗ, ಬರೆವಣಿಗೆ ಯಲ್ಲಿ ತೊಡಗಿಕೊಂಡಿತ್ತೆಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು. ಆ ವಿವರಗಳು ಇಲ್ಲಿ ಪ್ರಸ್ತುತವೆನಿಸುವುದಿಲ್ಲ.

(ಉದಾಹರಣೆಗೆ, ಸ್ವಾತಂತ್ರ ಸಂಗ್ರಾಮದ ಅನ್ಯಾನ್ಯ ಚಟುವಟಿಕೆಗಳ ಬಗೆಗಿನ ಅಧ್ಯಯನ ವೊಂದು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನಷ್ಟೇ ಲಕ್ಷಿಸುತ್ತದೆ. ಆ ಚಳವಳಿಯಿಂದ ದೂರವಿದ್ದ ಬಹುಸಂಖ್ಯಾತರನ್ನು ಅದು ಗಣಿಸುವುದಿಲ್ಲ.)

* * *

ಮುದ್ದಣ ಯುಗದ ಸಾಹಿತ್ಯದ ಒಟ್ಟಾರೆಯಾದ ಮೌಲ್ಯಮಾನಪನಕ್ಕಾಗಲಿ, ವಿಮರ್ಶೆ ಗಾಗಲಿ, ಕವಿ-ಕೃತಿಗಳ ಸರ್ವೇಕ್ಷಣೆಗಾಗಲಿ ಇದು ಸಂದರ್ಭವಲ್ಲ. ಪ್ರಸ್ತುತ ಲಕ್ಷ್ಯಕ್ಕೆ ಅಧೀನ ವಾಗಿ, ಅಂದಿನ ಸಾಹಿತಿ – ಗ್ರಂಥಗಳ ಹೆಸರು – ಉದ್ಧರಣೆಗಳನ್ನು, ನಿರ್ದಿಷ್ಟ ಪ್ರಮೇಯದ ಪುಷ್ಟಿಗಾಗಿ ಮಾತ್ರವೇ ಇಲ್ಲಿ ಎತ್ತಿಕೊಂಡಿದ್ದೇನೆ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ಅಧ್ಯಯನದ ಫಲಿತಾಂಶಗಳನ್ನು ಈ ಕೆಳಗಿನಂತೆ ಕ್ರೋಡೀಕರಿಸಬಹುದು.

೧. ಮುದ್ದಣ ಯುಗವು ಸಾಹಿತ್ಯಿಕ – ಸಾಂಸ್ಕೃತಿಕ ದೃಷ್ಟಿಗಳಿಂದ ಅತ್ಯಂತ ಸಂಕೀರ್ಣವಾದ ಕಾಲಘಟ್ಟವಾಗಿದೆ.

೨. ಆ ಯುಗದ ಸವಾಲುಗಳು ತೀವ್ರ, ವ್ಯಾಪಕ ಮತ್ತು ವೈವಿಧ್ಯಮಯವಾಗಿವೆ.

೩. ಆ ಕಾಲದ ಕನ್ನಡ ಮನಸ್ಸುಗಳು ಅಂದಿನ ಸಾಂಸ್ಕೃತಿಕ-ಧಾರ್ಮಿಕ-ಸಾಹಿತ್ಯಿಕ-ಸೃಷ್ಟ್ಯಾತ್ಮಕ ಅವಕಾಶಗಳನ್ನು ಗುರುತಿಸುತ್ತಾ, ಅವುಗಳನ್ನು ಯಥಾಶಕ್ತಿಯಾಗಿ ತುಂಬುವುದರ ಮೂಲಕ ಆ ಸವಾಲುಗಳನ್ನು ಎದುರಿಸಿದವು.

೪. ಈ ಪ್ರಕ್ರಿಯೆಯಲ್ಲಿ ಸೃಜನಶೀಲ ಮತ್ತು ಸೃಜನೇತರ ಸಾಧ್ಯತೆಗಳು ಗಂಭೀರವಾದ  ಪರಿಶೀಲನೆಗೆ ಒಳಗಾದವು.

೫. ಸಮಕಾಲೀನ ಸಂಕೀರ್ಣತೆಗಳು ಕನ್ನಡ ಮನಸ್ಸುಗಳನ್ನು ಸಂಸ್ಕರಿಸುವ, ಪಕ್ವಗೊಳಿಸುವ, ವಿಹ್ವಲಗೊಳಿಸುವ ಮಾದರಿಗಳನ್ನು ಈ ಕಾಲದ ಸಾಹಿತ್ಯವು ಹೊಂದಿದೆ.

೬. ಸೃಷ್ಟಿಶೀಲ ಮಾಧ್ಯಮವು ಅನ್ಯಾನ್ಯ ಪ್ರಯೋಗಗಳ ವೇದಿಕೆಯಾಗಿ, ಅದು ಬೇರೆ ಬೇರೆ ಶಾಖೆಗಳಾಗಿ ಬೆಳೆಯುವುದಕ್ಕೆ ಈ ಯುಗವು ಸಾಕ್ಷಿಯಾಯಿತು.

೭. ‘ಪರಿವರ್ತನೆಯ ಆಸ್ಥೆ’, ‘ಸಾಂಸ್ಕೃತಿಕ ಸಂವಾದ’ದ ಸಾಧನಗಳಾಗಿ ಮೊದಲ ಘಟ್ಟದ ಕನ್ನಡ ಕಾದಂಬರಿಗಳು ರಚನೆಗೊಂಡವು.

೮. ಸಾಹಿತ್ಯ ಕೃತಿಗಳಲ್ಲಿ, ಒಟ್ಟು ಸಂಸ್ಕೃತಿಯ ‘ನೈತಿಕ ಕೇಂದ್ರ’ಗಳ ಅನ್ವೇಷಣೆಗಳು ಪ್ರಾರಂಭವಾದವು.

೯. ಹೊಸಗನ್ನಡ ಕಾವ್ಯದ ಪ್ರವೇಶಕ್ಕೆ ಅನುವು ಮಾಡಿಕೊಡುವ ಸನ್ನಾಹಗಳಿಗೆ ಆಗಲೇ ನಾಂದಿಯಾಯಿತು.

೧೦. ಎಲ್ಲ ರೀತಿಗಳ ಸಮ್ಮಿಶ್ರಣ (ಭಾಷೆ, ವಸ್ತು, ಶೈಲಿ, ತಂತ್ರ)ಗಳನ್ನೂ ಆಗಿನ ಕೃತಿಗಳಲ್ಲಿ ಕಾಣಬಹುದು.

೧೧. ಹೊಸ ಹಾದಿಗಳತ್ತ ಪ್ರಬಲವಾಗುತ್ತಿದ್ದ ಆಕರ್ಷಣೆಗಳು, ಸಮಗ್ರ ಬದುಕಿನಲ್ಲಿ ಆತ್ಮಸಖ್ಯ-ಸೌಖ್ಯಗಳ ಶೋಧಕ್ರಮಗಳಲ್ಲಿ ಪರ್ಯವಸಾನವಾದುವು.

೧೨. ಜನಸಮ್ಮುಖವಾದ ಸಾಹಿತ್ಯಿಕ ಚಳವಳಿ – ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ಈ ಯುಗವು ಸಕಾರಾತ್ಮಕವಾಗಿ ಸ್ಪಂದಿಸಿತು; ಅಂತೆಯೇ ಧರ್ಮನಿರಪೇಕ್ಷ (ಸೆಕ್ಯೂಲರ್) ನೆಲೆಯಲ್ಲಿ ರಚನೆಗೊಂಡ ಕೃತಿಗಳನ್ನು ಕಾಣುವುದು ಸಾಧ್ಯವಾಗಿದೆ.

೧೩. ತೀವ್ರವಾದ ಪ್ರಯೋಗಾತ್ಮಕತೆಯು ಆಗಿನ ಸಾಂಸ್ಕೃತಿಕ ಪಲ್ಲಟದ ನೇರ ಪ್ರತಿಕ್ರಿಯೆಯಾಗಿ ಅಸ್ತಿತ್ವಕ್ಕೆ ಬಂದಿತು.

೧೪. ಪ್ರತಿರೋಧ ಪ್ರವೃತ್ತಿಯು ಹೆಚ್ಚಿನ ಕಸುವಿನೊಂದಿಗೆ ಆಗಿನ ಅಭಿವ್ಯಕ್ತಿಯಲ್ಲಿ ಕಾಣಿಸ ತೊಡಗಿತು.

೧೫. ಎಲ್ಲ ಸಂಕ್ರಮಣ ಸ್ಥಿತಿಗಳ ಹಾಗೆಯೇ ಮುದ್ದಣ ಯುಗವೂ ಹಳತಿನ ಮೌಲ್ಯ ಸಾರಗ್ರಾಹಿತ್ವ-ಭವಿಷ್ಯದ ಸಂಭವಗಳ ಮುನ್ಸೂಚನೆಗಳ ಹರಿಕಾರತ್ವಗಳ ಗುರುತರವಾದ ಹೊಣೆಗಳನ್ನು ನಿರ್ವಹಿಸಿತು.

೧೬. ಸಾಂಸ್ಕೃತಿಕ ಒತ್ತಡಗಳು – ಅನ್ಯಾನ್ಯ ಭಾಷೆಗಳೊಂದಿಗಿನ ಕನ್ನಡದ ವ್ಯವಹಾರಗಳ ಸ್ಥಾಪನೆ ಅಭಿವೃದ್ದಿಗಳಿಗೆ ಕಾರಣಗಳಾದವು.

೧೭. ಸಾಂಸ್ಕೃತಿಕ ಸಂಘರ್ಷದ ಪೇಲವ-ಗಾಢ ಛಾಯೆಗಳೆರಡೂ ಈ ಕಾಲದ ಸಾಹಿತ್ಯದಲ್ಲಿ ಒಡಮೂಡಿವೆ.

೧೮. ಈ ಎಲ್ಲ ಅನಿಸಿಕೆಗಳು ಕಾಲಬದ್ಧವಾದರೂ ಸಮಕಾಲೀನ ಆನ್ವಯಿಕತೆಯನ್ನೂ ಹೊಂದಿವೆ.

ಸಮೃದ್ಧವಾದ ಸಂಪನ್ಮೂಲಗಳ ತವನಿಧಿಯಾಗಿರುವ “ಮುದ್ದಣ ಯುಗ”ವು ಸಮಗ್ರ ವಾದ, ವಿಸ್ತೃತವಾದ ಅಧ್ಯಯನಗಳನ್ನು ನಿರೀಕ್ಷಿಸುತ್ತಿದೆ. ವರ್ತಮಾನದ ಕನ್ನಡ ಮನಸ್ಸು ಆ ಕರೆಗೆ ಕರಗಬೇಕಾಗಿದೆ.