ಭಾಗ

ಸಂಶೋಧನಾ ಪ್ರವೃತ್ತಿಯೆನ್ನುವುದು ಮನುಷ್ಯನ ಸ್ವಭಾವದಲ್ಲಿಯೆ ಅಂತರ್ಗತ ವಾಗಿದೆ. ಅಲೆಮಾರಿ ಬದುಕಿನಿಂದ ತೊಡಗಿದ ಅವನ ಬದುಕು ಬೆಳೆದ ಬಗೆಯೇ ಇದಕ್ಕೆ ಸಾಕ್ಷಿಯಾಗಿದೆ. ನಿಲ್ಲಲು ನಿರ್ದಿಷ್ಟ ನೆಲೆಯಿಲ್ಲದೆ ಸುತ್ತಾಡುತ್ತಿದ್ದ ಅವನು, ಅನ್ಯಗ್ರಹಗಳ ವಾಸ ಯೋಗ್ಯತೆಗಳನ್ನು ನಿರ್ಧರಿಸುವ ಹಂತವನ್ನು ಇಂದು ತಲುಪಿದ್ದಾನೆ. ತುಂಬಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ಕಟ್ಟುವ ಸೇತುವೆ, ಯಾತಾಯಾತ ಸೌಲಭ್ಯಗಳ ಹುಡುಕಾಟ, ಆರಾಮದಾಯಕವಾದ ಜೀವನ ಸೌಕರ್ಯಗಳ ಶೋಧನೆಗಳೆಲ್ಲ ಅವನ ಈ ಮನೋವೃತ್ತಿಯ ಫಲಿತಾಂಶಗಳಾಗಿವೆ. ಹಾಗೆಯೇ ಅವನು ತನ್ನ ಆಹಾರ ಪದ್ಧತಿ, ಸಂವಹನ ವಿಧಾನ, ಉಡುಗೆ ತೊಡುಗೆಗಳಲ್ಲಿ ಕಾಲಕಾಲಕ್ಕೆ ಮಾಡಿಕೊಂಡ ಮಾರ್ಪಾಡುಗಳ ಹಿಂದೆಯೂ ಇದೇ ಮನೋಭಾವವಿದೆ.

ಇಲ್ಲಿ, ಮೂಲತಃ ಕೆಲವು ಅಂಶಗಳಿಂದ ಮನುಷ್ಯನ ಮನಸ್ಸು ಪ್ರೇರಣೆಗಳನ್ನು ಪಡೆಯುತ್ತದೆ. ಉದಾಹರಣೆಗೆ, ಪ್ರಸ್ತುತ ಪರಿಸ್ಥಿತಿಯ ಬಗೆಗೆ ಅವನಲ್ಲಿ ಬೆಳೆಯುವ ಅತೃಪ್ತಿ ಯನ್ನು ಪರಿಶೀಲಿಸಬಹುದು. ಮನುಷ್ಯನು ಆಧುನಿಕನಾಗುತ್ತ ಬಂದಂತೆ, ತನ್ನ ಒಟ್ಟಾರೆಯಾದ ಜೀವನ ವಿಧಾನವು ಸರಿಯಿಲ್ಲ ಎನ್ನುವ ಭಾವವು ಅವನಲ್ಲಿ ಮೊಳೆಯತೊಡಗಿತು. ಅದಕ್ಕೆ ಅನುಗುಣವಾಗಿ, ಅವನ ನಿರೀಕ್ಷೆಗಳೂ ಬೆಳೆಯತೊಡಗಿದವು, ಬೇಕುಗಳು ಹೆಚ್ಚಾಗ ತೊಡಗಿದವು. ಅನಿವಾರ್ಯ ಅವಶ್ಯಕತೆಗಳಾದ ಆಶನ, ವಸನ, ವಸತಿಗಳ ಪ್ರಶ್ನೆಗಳು ಬಗೆಹರಿದೊಡನೆಯೇ, ಹೆಚ್ಚಿನ ಸುಖಸಾಧನಗಳತ್ತ ಅವನ ಆಸಕ್ತಿಯೂ ಬೆಳೆಯತೊಡಗಿತು. ಇದು, ಬದುಕಿನ ಬೇರೆ ಬೇರೆ ಮಗ್ಗಲುಗಳ ಮೇಲೆ ಪ್ರಭಾವ ಬೀರತೊಡಗಿತು ಅವುಗಳನ್ನು ನಿರ್ದಿಷ್ಟ ಸ್ವರೂಪಗಳಲ್ಲಿ ರೂಪಿಸತೊಡಗಿತು.

ಈ ಪ್ರಮೇಯವನ್ನು ಅನೇಕ ರೀತಿಗಳಿಂದ ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಮನುಷ್ಯ ಪ್ರಪಂಚದ ಅರ್ಥವ್ಯವಸ್ಥೆಯನ್ನು ಗಮನಿಸಬಹುದು. ಮೊದಲಿಗೆ, ದಿನದಿನಗಳ ಆದಾಯ ವೆಚ್ಚಗಳನ್ನು ಸರಿತೂಗಿಸುವಷ್ಟಕ್ಕೆ ಮನುಷ್ಯ ತೃಪ್ತನಾಗುತ್ತಿದ್ದ. ಅನಂತರ, ಸಂಪತ್ತನ್ನು ಕ್ರೋಡೀಕರಿಸುತ್ತ ಅವನ ಲಕ್ಷವು ಹರಿಯತೊಡಗಿತು. ಆಮೇಲೆ, ಆ ರಕ್ಷಿತ ಸೊತ್ತನ್ನು ಬೆಳೆಸುವ ನಾನಾ ವಿಧಾನಗಳನ್ನು ಆತ ಹುಡುಕತೊಡಗಿದ. ಆರ್ಥಿಕ ಸುಭದ್ರತೆ ಯೊಂದಿಗೆ ಅವನ ಸಾಮಾಜಿಕ ಸಂರಚನೆಯೂ ಬೆಸೆದುಕೊಂಡಿತು. ಕೂಡಿಟ್ಟ ಸಂಪತ್ತಿನ ನೈತಿಕ ಕಾನೂನುಬದ್ಧ ಉತ್ತರಾಧಿಕಾರಿಯ ಅಸ್ತಿತ್ವವು ಅವನಿಗೆ ಅಗತ್ಯವೆನಿಸಿತು. ಮದುವೆ ಯಂಥ ಸಾಮಾಜಿಕ ವ್ಯವಸ್ಥೆಯೊಂದು ರೂಪಿತಕ್ಕೆ ಬರಲು ಈ ಅನಿಸಿಕೆಯೂ ಒಂದು ಕಾರಣವಾಯಿತು. ಹೀಗೆ, ಮನುಷ್ಯನ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ, ಆರೋಗ್ಯಕರವಾದ ಅತೃಪ್ತಿಯು ಮಹತ್ವದ ಪಾತ್ರವನ್ನು ವಹಿಸಿತು; ವಹಿಸುತ್ತಾ ಇದೆ.

ವ್ಯಕ್ತಿಯೊಬ್ಬನನ್ನು ಹೊಸ ಅನ್ವೇಷಣೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುವ ಇನ್ನೊಂದು ಅಂಶ ವಿಭಿನ್ನ ಸಾಧ್ಯತೆಗಳ ಬಗೆಗೆ ಅವನಲ್ಲಿ ಹುಟ್ಟುವ, ಕುತೂಹಲವಾಗಿದೆ. ಪ್ರತಿಯೊಬ್ಬನೂ ತನ್ನ ಅಂತರಂಗದಲ್ಲಿ, ಬದುಕಿನ ಸವಾಲುಗಳನ್ನು ಸ್ವೀಕರಿಸುವ ಇಚ್ಛೆಯನ್ನು ಹೊಂದಿರುತ್ತಾನೆ. ಅವುಗಳು ತನ್ನ ಪ್ರತಿಭೆ, ಸಾಮರ್ಥ್ಯಗಳನ್ನು ನಿರೂಪಿಸಲು ಸಹಕರಿಸುವ ಸಾಧನಗಳೆಂದು ತಿಳಿಯುತ್ತಾನೆ. ಹಾಗಾಗಿಯೇ, ನೈಸರ್ಗಿಕವಾಗಿ ದೊರೆಯುವ ನೀರನ್ನು ಬಳಸಿ, ತನಗೆ ಬೇಕಾದ ಇಂಧನ ಶಕ್ತಿಯನ್ನು ಪಡೆಯಬಹುದೇ ಹೇಗೆ ಎಂದು ಅವನು ಪರೀಕ್ಷಿಸುತ್ತಾನೆ. ಭೂಗರ್ಭದಲ್ಲಿ, ಅನ್ಯೋನ್ಯ ನೆಲೆಗಳಿಂದ ಉಪಯುಕ್ತವಾಗಬಲ್ಲ ಖನಿಜಗಳಿರಬಹುದೇ ಎಂದು ತಿಳಿಯಲು ಹೊರಡುತ್ತಾನೆ. ಸಸ್ಯಾದಿಗಳನ್ನು ಆಹಾರ, ಔಷಧಗಳಾಗಿಯಲ್ಲದೆ ಬೇರೆ ರೀತಿಯಿಂದಲೂ ಉಪಯೋಗಿಸಬಹುದೇ ಎಂದು ನಿರ್ಧರಿಸಲು ಬಯಸುತ್ತಾನೆ. ಹೀಗಾಗಿ, ಹೊಸಹೊಸ ಆವಿಷ್ಕಾರಗಳು ಜ್ಞಾನ ಜಗತ್ತನ್ನು ಸೇರುತ್ತಲೇ ಇರುತ್ತವೆ.

ಈ ಸಂದರ್ಭದಲ್ಲಿ, ಮನುಷ್ಯನ ಪ್ರಜ್ಞೆಯೊಳಗೆ ಮೊಳೆಯವ ಅನುಮಾನ, ಸಂಶಯಗಳೂ ಪ್ರಸ್ತುತವೆನಿಸುತ್ತವೆ. ಸೌರವ್ಯೂಹದ ಕೇಂದ್ರವು ಭೂಮಿಯಾಗಿರಲಾರದೇನೋ ಎನ್ನುವ ಅನಿಸಿಕೆಯು ಹುಟ್ಟಿದ ಕಾರಣವೇ ಅಲ್ಲಿ ಸೂರ್ಯ ಕೇಂದ್ರ ವಾದವು ಪ್ರವೇಶಿಸುವಂತಾಯಿತು. ಹೀಗೇ, ಪ್ರಾಕೃತಿಕ ಸಂಭವಗಳ ಕಾರ್ಯ-ಕಾರಣ ಸಂಬಂಧಗಳ ಅನ್ವೇಷಣೆಯ ಹಂಬಲವೂ ಮಹತ್ವದ ಶೋಧಗಳನ್ನು ಬೆಳಕಿಗೆ ತಂದಿತು. ಇದೇ ಮಾದರಿಯಲ್ಲಿ, ಸ್ವಪ್ರದರ್ಶನಾಸಕ್ತಿ, ಅಸ್ಮಿತೆಯನ್ನು ಗುರುತಿಸುವ ಬಯಕೆ, ಭೂಮಿಯ ಮೇಲಿನ ಮನುಷ್ಯನ ಜೀವಿತಾವಧಿಯನ್ನು ಸಹ್ಯವೂ, ಸುಖಮಯವೂ ಮಾಡಬೇಕೆಂಬ ಮಾನವೀಯ ದೃಷ್ಟಿಗಳೆಲ್ಲವೂ ನಮ್ಮ ಸಂಶೋಧನಾಸಕ್ತಿಯ ಹಿಂದೆ ಕೆಲಸ ಮಾಡುತ್ತದೆ.

ಏನೇ ಇದ್ದರೂ, ಸಂಶೋಧನೆಯ ಒಟ್ಟೂ ಉದ್ದೇಶವೇ ಸತ್ಯದ ಶೋಧನೆಯಾಗಿದೆ. ಸಂಪೂರ್ಣ ಶೋಧನೆಯ ಆಕರ್ಷಣೆಯಾಗಿದೆ. ಸಂಶೋಧನೆಯೆನ್ನುವ ಸಂಜ್ಞೆಯನ್ನು ಪಡೆಯದ ದೈನಂದಿನ ಜೀವನದಲ್ಲಿ ಸರ್ವೇಸಾಮಾನ್ಯವಾಗಿರುವ ವಿಚಾರಗಳು ಇದರ ಪ್ರಾಥಮಿಕ ತಳಹದಿಗಳಾಗಿವೆ. ಅಲ್ಲಿಂದ ತೊಡಗಿ, ಶಾಸ್ತ್ರಸಿದ್ಧವಾದ, ಸಮರ್ಪಕವಾದ ಮೌಲ್ಯಮಾಪನ ವಿಧಾನಗಳ ಮೂಲಕ ಸ್ವೀಕೃತವಾಗುವ ಸಿದ್ಧಾತಗಳವರೆಗೂ ಅದು ವ್ಯಾಪಿ ಸುತ್ತದೆ.

ಈ ಸಂದರ್ಭದಲ್ಲಿ ‘ಸತ್ಯ’ ಎನ್ನುವ ಪರಿಕಲ್ಪನೆಯನ್ನು ಅದರ ವ್ಯಾಪಕಾರ್ಥದಲ್ಲಿ ಗ್ರಹಿಸಬೇಕು. ಮಾತ್ರವಲ್ಲ, ಯಾವುದೇ ಸತ್ಯವೂ ಆತ್ಯಂತಿಕವೂ ಅಲ್ಲ, ಸಾರ್ವಕಾಲಿಕವೂ ಆಗಲಾರದು ಎನ್ನುವ ಅಂಶವನ್ನೂ ಮರೆಯಬಾರದು. ಒಂದು ಸಾಮಾನ್ಯ, ಅಂಗೀಕೃತವಾದ ನಿಯಮವು ಕೂಡಾ ಈ ಮಾತಿಗೆ ಉದಾಹರಣೆಯಾಗಬಹುದು. ಭಾರತದಲ್ಲಿ ವಾಹನವನ್ನು ರಸ್ತೆಯ ಎಡಬದಿಯಲ್ಲಿಯೇ ಚಲಾಯಿಸಬೇಕು. ಅದು ಇಲ್ಲಿಯ ನಿಯಮವಾಗಿದೆ. ಹಾಗಾಗಿಯೇ ಇಲ್ಲಿ ಅದು ಸತ್ಯವಾಗಿದೆ. ಅದೇ ಜರ್ಮನಿಯಲ್ಲಿ ದಂಡನಾರ್ಹ ಅಪರಾಧ ವಾಗುತ್ತದೆ. ಏಕೆಂದರೆ, ವಾಹನಗಳು ರಸ್ತೆಯ ಬಲಬದಿಯಲ್ಲಿಯೇ ಚಲಿಸಬೇಕೆನ್ನುವುದು ಅಲ್ಲಿಯ ಸಾರಿಗೆ ನಿಯಮವಾಗಿದೆ. ಅಲ್ಲಿ ಅದುವೇ ಸತ್ಯವಾಗುತ್ತದೆ. ನಮ್ಮ ಕೆಲವು ಸಮಾಜಗಳಲ್ಲಿ, ಅಕ್ಕನ ಮಗಳನ್ನು ತಮ್ಮ ಮದುವೆಯಾಗಬಹುದು. ಉಳಿದೆಡೆ ಅಂಥ ಸಂಬಂಧಗಳು ಅನೈತಿಕವೆನಿಸುತ್ತವೆ. ಹಾಗಾದರೆ, ಸದಾ ಬದಲಾಗುತ್ತಿರುವುದೇ ಈ ಸತ್ಯದ ಸ್ವರೂಪವೇ ಎನ್ನುವ ಪ್ರಶ್ನೆಯು ಇಲ್ಲಿ ಎದುರಾಗುತ್ತದೆ.

ಇಲ್ಲಿ ಉಲ್ಲೇಖಗೊಂಡಿರುವ ಸತ್ಯವು ಯಾವಾಗಲೂ ಸಂದರ್ಭ ಸಂವಾದಿಯಾದುದು, ಕಾಲ-ದೇಶಗಳ ಮಿತಿಗೆ ಒಳಪಡುವಂಥದ್ದು, ಅದರ ಅನ್ವೇಷಣೆಗೆ ಕೊನೆ ಎನ್ನುವುದಿಲ್ಲ. ಇವತ್ತು ಸ್ಥಾಪಿತವಾದ ಸತ್ಯವು ನಾಳೆಯೂ ಉಳಿಯಬಹುದು ಎನ್ನುವುದೇ ಅಸತ್ಯವಾಗಿದೆ. ಹಾಗಾಗಿ, ಇಂದಿನ ಸತ್ಯಗಳನ್ನು ಸ್ಥಾಪಿಸುವುದೂ, ನಾಳಿನ ಸತ್ಯಗಳನ್ನು ನಿರಂತರವಾಗಿ ಹುಡುಕುತ್ತಿರುವುದೂ ಸಂಶೋಧಕನ ಪ್ರಧಾನ ಧ್ಯೇಯಗಳಾಗಿವೆ.

ಈ ಪ್ರಕ್ರಿಯೆಯು ಶೈಕ್ಷಣಿಕ ಶಿಸ್ತಿಗೆ ಒಳಪಟ್ಟಾಗ, ಅದಕ್ಕೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕಲ್ಪಿಸಬೇಕಾಗುತ್ತದೆ. ಆಗ ‘ಸಂಶೋಧನೆ’ಯನ್ನು ನಿಖರವಾದ ಆಕರ ಸಾಮಗ್ರಿಗಳ ಬಳಕೆ, ಮಾಹಿತಿ ಸಂಗ್ರಹ, ಮಾಹಿತಿ ಜೋಡಣೆ ವರ್ಗೀಕರಣ-ವಿಶ್ಲೇಷಣೆ, ನಿರ್ಧಾರ, ಫಲಿತಗಳ ಕ್ರೋqsಕರಣ ಮುಂತಾದ ಹಂತಗಳಿಗೆ ಅಳವಡಿಸಬೇಕಾಗುತ್ತದೆ.

ಸಂಶೋಧನೆಯ ಒಟ್ಟು ಉದ್ದೇಶ ಸತ್ಯಾನ್ವೇಷಣೆಯೇ ಆದರೂ, ಅಭ್ಯಾಸದ ಅನುಕೂಲಗಳಿಗಾಗಿ ಸೂಕ್ತ ವಿಭಜನಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆ ವಿಭಜನಾ ಕ್ರಮಗಳು ಬೇರೆ ಬೇರೆ ಮಾನಕ(Parameter)ಗಳನ್ನು ಆಧರಿಸಿರುತ್ತವೆ. ಅಂದ ಮಾತ್ರಕ್ಕೆ ಇವು ಪ್ರತ್ಯೇಕ ಖಂಡಗಳಾಗುತ್ತವೆಂದು ತಪ್ಪಾಗಿ ಗ್ರಹಿಸಬಾರದು. ಬರೆಹವೊಂದರಲ್ಲಿ ಯಾವ್ಯಾವ ಗುಣಲಕ್ಷಣಗಳು ಪ್ರಧಾನವೆನ್ನುವುದಷ್ಟೆ ಇಲ್ಲಿ ಪ್ರಸ್ತುತವಾಗುತ್ತದೆ. ಎಂದರೆ, ಹೋಳಿಗೆಯು ಒಂದು ಸಿಹಿ ಪದಾರ್ಥ ಎಂದಾಗ, ಅದರಲ್ಲಿ ಬಳಕೆಯಾದ ಸಿಹಿಯಿಲ್ಲದ ವಸ್ತುಗಳನ್ನಾಗಲಿ, ಎಣ್ಣೆಯಂಥ ವ್ಯಂಜನಗಳನ್ನಾಗಲಿ ಅವಗಣಿಸಿದಂತಾಗುವುದಿಲ್ಲ. ಅವಕ್ಕೆ ಅವುಗಳ ನಿಗದಿತ ಸ್ಥಾನ, ಪ್ರಾತಿನಿಧ್ಯಗಳು ಇದ್ದೇ ಇವೆ.

ನಿದರ್ಶನಕ್ಕಾಗಿ, ಆ ವಿಭಜನ ಕ್ರಮಗಳನ್ನು ಅನುಸರಿಸಿದಾಗ ಸಿದ್ದಿಸುವ ಕೆಲವು ಪ್ರಕಾರ ಗಳನ್ನು ಇಲ್ಲಿ ಪರೀಕ್ಷಿಸಬಹುದು. ಇವನ್ನು ಇಲ್ಲಿ ಉಲ್ಲೇಖಿಸುವ ಉದ್ದೇಶವು ಪರಿಕಲ್ಪನೆಯ ಸ್ಪಷ್ಟ ಚಿತ್ರವನ್ನು ನೀಡುವುದೇ ಹೊರತಾಗಿ, ಸಮಗ್ರವಾದ ಯಾದಿಯನ್ನು ತಯಾರಿಸುವುದಿಲ್ಲ.

. ಸ್ವರೂಪ ಆಧಾರಿತ : ಸಂಶೋಧನೆಯ ಫಲಿತಾಂಶಗಳ ಸ್ವರೂಪವನ್ನು ಆಧರಿಸಿ, ಅದನ್ನು ತಾತ್ತ್ವಿಕ ಸಂಶೋಧನೆ, ಆನ್ವಯಿಕ ಸಂಶೋಧನೆ ಎಂಬುದಾಗಿ ಸ್ಥೂಲವಾಗಿ ವಿಭಾಗಿಸಬಹುದು. ತಾತ್ವಿಕ ಸಂಶೋಧನೆಯು ಒಂದು ಸಮಸ್ಯೆಯನ್ನು ಪರಿಹರಿಸುವಲ್ಲಿಗೆ ಅಥವಾ ಒಂದು ಸಿದ್ಧಾಂತವನ್ನು ಸ್ಥಾಪಿಸುವಲ್ಲಿಗೆ ತನ್ನನ್ನು ಮಿತಿಗೊಳಿಸಿಕೊಳ್ಳುತ್ತದೆ. ಉದಾಹರಣೆಗೆ ವಸ್ತುಪ್ರಪಂಚದಲ್ಲಿ ಗುರುತ್ವಾಕರ್ಷಣಾ ಶಕ್ತಿಯು ಇದೆ ಎನ್ನುವ ಪ್ರಕಟಣೆಯು ಅದುವರೆಗೆ ತಿಳಿದಿರದಿದ್ದ ಸತ್ಯದ ತುಣಕೊಂದನ್ನು ಲೋಕ ಮುಖದಲ್ಲಿ ಪ್ರಸ್ತುತ ಪಡಿಸುತ್ತದೆ. ಆ ತತ್ತ್ವವನ್ನು ಆಶ್ರಯಿಸಿ ನಡೆಸುವ ಸಂಶೋಧನೆಗಳು ಆನ್ವಯಿಕ ಮಾದರಿಯವಾಗುತ್ತವೆ. ಬರಿಯ ತತ್ತ್ವದ ಅನ್ವೇಷಣೆಯಷ್ಟೇ ನಡೆದರೆ ಅದರಿಂದ ಪ್ರಯೋಜನವಿಲ್ಲ. ತತ್ತ್ವದ ತಳಹದಿಯಿಲ್ಲದೆ ಆನ್ವಯಿಕ ಸಂಶೋಧನೆ ನಡೆಯುವಂತಿಲ್ಲ. ಹಾಗಾಗಿ ಇವೆರಡೂ ವರ್ಗಗಳು ಪರಸ್ಪರ ಪೂರಕವೇ ಆಗಿವೆ.

. ವಿಧಾನ ಆಧಾರಿತ : ಜ್ಞಾನ ಜಗತ್ತನ್ನು ಅನ್ವೇಷಿಸುವ ದೃಷ್ಟಿಯಿಂದ ಸಂಶೋಧಕರು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ, “ಕಾವ್ಯಮೀಮಾಂಸೆಯ ಪರಿಜ್ಞಾನವು, ಸಾಹಿತ್ಯದ ರಸಾಸ್ವಾದನೆಗೆ ಸಹಕಾರಿ” ಎನ್ನುವ ಪ್ರಮೇಯವನ್ನು ಪರೀಕ್ಷಿಸಬೇಕಾಗಿದೆಯೆನ್ನೋಣ. ಆಗ ಸಂಶೋಧಕನು, ಪ್ರಯೋಗಾತ್ಮಕ ಪದ್ಧತಿಯನ್ನು ಅನುಸರಿಸುತ್ತಾನೆ. ಇದರಿಂದ, ಅವನ ನಿರ್ಧಾರವು ಹೆಚ್ಚು ಅಧಿಕೃತವೂ, ಕಾರ್ಯಕಾರಣ ಸುಸಂಬದ್ಧವಾದುದೂ ಆಗುತ್ತದೆ. ಇಂಥ ವಿಧಾನ ಆಧಾರಿತ ವಿಭಜನ ಕ್ರಮವು, ಚಾರಿತ್ರಿಕ ಸಂಶೋಧನೆ, ಪ್ರಯೋಗಾತ್ಮಕ ಸಂಶೋಧನೆ, ತೌಲನಿಕ ಸಂಶೋಧನೆ, ‘ಎಂಪಿರಿಕಲ್’ ಮುಂತಾದ ಪ್ರಕಾರಗಳನ್ನು ಸೂಚಿಸುತ್ತದೆ.

. ಪ್ರಸ್ತಾವ ಆಧಾರಿತ : ಈ ವಿಧಾನವು, ಸಂಗ್ರಹವಾದ ಮಾಹಿತಿಗಳನ್ನು ಸಂಶೋಧಕರು ಯಾವ ದೃಷ್ಟಿ, ನಿಲುವು, ನೆಲೆಗಳಿಂದ ಪರಿಶೀಲಿಸುತ್ತಾರೆ ಎನ್ನುವುದನ್ನು ಲಕ್ಷಿಸುತ್ತದೆ. ವರ್ಣನಾತ್ಮಕ ಸಂಶೋಧನೆ, ವಿಶ್ಲೇಷಣಾತ್ಮಕ ಸಂಶೋಧನೆ, ನಿರೀಕ್ಷಣಾತ್ಮಕ (Observational) ಸಂಶೋಧನೆ ಇತ್ಯಾದಿಗಳು ಈ ಶೀರ್ಷಿಕೆಯಡಿಯಲ್ಲಿ ಬರುತ್ತವೆ. ಈಗ, ಒಂದು ಸಾಧ್ಯತೆಯನ್ನು ಗಮನಿಸಿ, ವಿಧಾನ ಆಧಾರಿತ ವಿಭಜನ ಕ್ರಮದ ಪ್ರಕಾರ, “ಪ್ರಯೋಗಾತ್ಮಕ ಸಂಶೋಧನೆ”ಯಾಗುವ ಒಂದು ಬರೆಹವನ್ನು ವಿಶ್ಲೇಷಿಸಿ, ಅದು ಕೇವಲ ಫಲಿತಾಂಶಗಳ ವಿವರಣೆಗಳನ್ನಷ್ಟೆ ನೀಡಿದರೆ, “ವರ್ಣನಾತ್ಮಕ”ವಾಗುತ್ತದೆ. ಆ ಫಲಿತಾಂಶಗಳ ನೆರವಿನಿಂದ, ವಸ್ತುಸ್ಥಿತಿಯನ್ನು ಕೂಲಂಕಷವಾಗಿ ಪರೀಕ್ಷಿಸಿ, ನಿರ್ದಿಷ್ಟ ಒಳನೋಟಗಳನ್ನು ಪ್ರಸ್ತುತಪಡಿಸಿದರೆ, ವಿಶ್ಲೇಷಣಾತ್ಮಕವಾಗುತ್ತದೆ. ನಿರ್ದಿಷ್ಟ ಪರಿಕರಗಳ ಸೇರ್ಪಡೆ ಬೇರ್ಪಡೆಗಳ ಪರಿಣಾಮಗಳನ್ನು ದಾಖಲಿಸುತ್ತಾ ನಡೆದರೆ, “ನಿರೀಕ್ಷಣಾತ್ಮಕ”ವಾಗುತ್ತದೆ. ಹಾಗಾಗಿ, ಈ ವರ್ಗೀಕರಣ ಕ್ರಮಗಳೆಲ್ಲವೂ ಸಾಪೇಕ್ಷವಾದವುಗಳೇ ಆಗಿವೆ.

. ಮಾಹಿತಿ ಸಂಗ್ರಹ ವಿಧಾನ ಆಧಾರಿತ : ಸಂಶೋಧನೆಯ ಕಚ್ಚಾ ವಸ್ತುವಾದ ಮಾಹಿತಿಗಳನ್ನು ಸಂಗ್ರಹಿಸಲು ಸಂಶೋಧಕರು ಅವಲಂಬಿಸಿದ ವಿಧಾನಗಳನ್ನು ತಳಹದಿಯಾಗಿಟ್ಟುಕೊಂಡೂ ಈ ವಿಭಜನೆಯನ್ನು ಮಾಡಬಹುದು. ಕ್ಷೇತ್ರಕಾರ್ಯ ಪ್ರಧಾನ ಸಂಶೋಧನೆ, ಪೀಠಸ್ತ (deskwork) ಸಂಶೋಧನೆ, ಸರ್ವೇಕ್ಷಣ ಪ್ರಧಾನ ಸಂಶೋಧನೆ ಮುಂತಾದ ವರ್ಗಗಳು ಇಲ್ಲಿ ನಿಷ್ಪನ್ನವಾಗುತ್ತವೆ.

. ವ್ಯಾಪ್ತಿ ಆಧಾರಿತ : ಕೆಲವು ಸಂದರ್ಭಗಳಲ್ಲಿ, ಸಂಶೋಧನೆಯು ಒಂದೇ ಶಿಸ್ತನ್ನು ಹಿಡಿದು ನಡೆಯುತ್ತದೆ. ಕೆಲವೊಮ್ಮೆ ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು, ಒಂದಕ್ಕಿಂತ ಹೆಚ್ಚು ಶಿಸ್ತುಗಳ ನೆಲೆಯಲ್ಲಿಯೂ ನಡೆಯುತ್ತದೆ. ಈ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡಾಗ, ಸಂಶೋಧನೆಯು ಏಕಶಿಸ್ತೀಯ, ಅಂತರಶಿಸ್ತೀಯ ಅಥವಾ ಬಹುಶಿಸ್ತೀಯ ಪ್ರಭೇದಗಳನ್ನು ಒಳಗೊಳ್ಳುತ್ತದೆ. ಈ ಭಿನ್ನತೆಯು ಸಂಶೋಧನೆಯ ಒಟ್ಟು ಸಂರಚನೆಯ ಮೇಲೂ ಪರಿಣಾಮಗಳನ್ನು ಬೀರುತ್ತದೆ, ಅದನ್ನು ನಿಯಂತ್ರಿಸುತ್ತದೆ.

ಈ ಹಿನ್ನೆಲೆಯಲ್ಲಿ, ಇಂದು ನಡೆಯುತ್ತಿರುವ ‘ಕನ್ನಡ ಸಾಹಿತ್ಯ ಸಂಶೋಧನೆ’ಯ ಕ್ಷೇತ್ರವನ್ನು ಹೊಸದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ. ಅದನ್ನು ಒಂದು ಪ್ರತ್ಯೇಕ ಶಿಸ್ತಾಗಿ ಬೆಳೆಸುವ ಅನ್ಯೋನ್ಯ ಸಾಧ್ಯತೆಗಳನ್ನೂ ಪರಿಶೀಲಿಸಬೇಕಾಗಿದೆ.

ಸಾಂಸ್ಕೃತಿಕ ಸಂಕ್ರಮಣ ಸ್ಥಿತಿ : ಇಂದಿನ ಸಾಹಿತ್ಯಿಕ ಸಾಮಾಜಿಕ ಸಂದರ್ಭಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಮರುವಿಮರ್ಶೆಗೆ, ಮರುವಿವೇಚನೆಗೆ ಒಳಪಡಿಸಬೇಕಾದ ಅಗತ್ಯವಿದೆ. ಹೊಸ ಪಾರಿಭಾಷಿಕಗಳ ಸೇರ್ಪಡೆ, ಹೊಸ ಶಿಸ್ತುಗಳ ಪರಿಚಯ, ಪೂರ್ವಗೃಹೀತಗಳನ್ನು ಮುರಿದು ಹೊಸತುಗಳನ್ನು ಕಟ್ಟುವ ಕ್ರಮಗಳು ಇಂದು ಬಹಳ ವ್ಯಾಪಕವಾಗುತ್ತಿವೆ. ಹಾಗಾಗಿ, ಮೂಲಭೂತ ನೆಲೆಗಳಲ್ಲಿ ನಮ್ಮ ದೃಷ್ಟಿಗಳನ್ನು ಅಗಲಗೊಳಿಸಿಕೊಳ್ಳಬೇಕಾಗಿದೆ. ಒಂದೆರಡು ಉದಾಹರಣೆಗಳ ಸಹಾಯದಿಂದ ಈ ಹೇಳಿಕೆಯನ್ನು ಸ್ಪಷ್ಟಪಡಿಸಬಹುದು.

ಕೆಲವೇ ವರ್ಷಗಳ ಹಿಂದೆ ‘ಸಂಪನ್ಮೂಲ’ವೆನ್ನುವುದು ಕೇವಲ ಮೂರ್ತ ವಸ್ತುಗಳನ್ನು ಸೂಚಿಸುವ ಪದವಾಗಿತ್ತು. ಎಂದರೆ, ಕಚ್ಚಾವಸ್ತುಗಳು, ಖನಿಜ ಲವಣಗಳು, ಕೃಷಿ ಉತ್ಪನ್ನಗಳು ಮುಂತಾದವುಗಳ ಉತ್ಪಾದಕ ಗುಣಗಳಷ್ಟೇ ಗಣನೆಗೆ ಸಿಗುತ್ತಿದ್ದವು. ಈಗ ‘ಸಂಪನ್ಮೂಲ’ವೆನ್ನುವ ಪರಿಕಲ್ಪನೆಯು ಅನೇಕ ಸಾಮಗ್ರಿಗಳನ್ನೂ ಅಮೂರ್ತ ಶಕ್ತಿಗಳನ್ನೂ ಒಳಗೊಳ್ಳುತ್ತದೆ. ಸಮಯ, ಶ್ರಮ, ಯಂತ್ರೋಪಕರಣಗಳು, ಬೌದ್ದಿಕ ಸಾಮರ್ಥ್ಯ, ಆಡಳಿತ ವಿಧಾನ, ವಿತರಣಾ ಸೌಲಭ್ಯಗಳೆಲ್ಲವೂ ಇಂದು ಸಂಪನ್ಮೂಲಗಳಾಗಿವೆ. ಸದ ಭವಿಷ್ಯದಲ್ಲಿ ಇವುಗಳು ಇನ್ನೂ ವಿಸ್ತೃತಗೊಳ್ಳುವ ಸಾಧ್ಯತೆಗಳೂ ಕಾಣಿಸುತ್ತವೆ.

‘ಸಂವಹನ’ ಎನ್ನುವ ಪರಿಕಲ್ಪನೆಯಾದರೂ ಅಷ್ಟೇ. ‘ಮನುಷ್ಯ-ಮನುಷ್ಯರೊಳಗಿನ ಸಂವಾದ’ವೆನ್ನುವ ಸರಳ ನೆಲೆಯಲ್ಲಿದ್ದ ಅದರ ಅರ್ಥವ್ಯಾಪ್ತಿಯು ಈಗ ತುಂಬ ಹಿಗ್ಗಿದೆ. ಸಂವಹನ ಮಾಧ್ಯಮವಾಗಿದ್ದ ಭಾಷೆಯೊಂದಿಗೆ ಈಗ ಸಂಜ್ಞೆ, ಸಂಕೇತ, ಶರೀರ ಭಾಷೆಗಳೆಲ್ಲವೂ ಪರಿಗಣಿತವಾಗುತ್ತಿವೆ. ವಿದ್ಯುನ್ಮಾನ ಯಂತ್ರಗಳೂ ಈಗ ಸಂವಹನ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಕನ್ನಡ ಸಾಹಿತ್ಯ ಸಂಶೋಧನೆ: ಸಮಾಜದ ಇತರ ಕ್ಷೇತ್ರಗಳಿಗೆ ಸಂವಾದಿಯಾಗಿ ಕನ್ನಡ ಸಾಹಿತ್ಯ ಸಂಶೋಧನೆಯೂ ತನ್ನ ವಿನ್ಯಾಸಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಅದರ ಕಾರ್ಯಕ್ಷೇತ್ರವೂ ವಿಶಾಲಗೊಳ್ಳುತ್ತಿದೆ. ಇಲ್ಲಿ, ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ಅಂಶವೊಂದಿದೆ. ‘ಸಾಹಿತ್ಯ ಸಂಶೋಧನೆ’ ಎಂದ ತಕ್ಷಣ ಪಿಎಚ್.ಡಿ. ಪದವಿಯನ್ನು ಪಡೆದ ಮಹಾಪ್ರಬಂಧಗಳು ಎನ್ನುವ ನಿರ್ಧಾರಕ್ಕೆ ಬರುವ ಎಲ್ಲ ಅಪಾಯಗಳೂ ಇಲ್ಲಿವೆ. ಇದು ನಮ್ಮ ಗ್ರಹಿಕೆಯ ಮಿತಿಗಳನ್ನು ಸೂಚಿಸುತ್ತದೆ. ಸಾಹಿತ್ಯ ಸಂಶೋಧನೆಯನ್ನು ಒಂದು ಸಮಗ್ರ ಘಟಕವಾಗಿ ತೆಗೆದುಕೊಂಡಾಗ, ಸ್ವೋಪಜ್ಞ್ತೆಯಿರುವ, ವಿದ್ವಾಂಸರ ವಲಯಗಳಲ್ಲಿ ಸಾಕಷ್ಟು ಚರ್ಚೆಗಳಿಗೆ ಒಳಗಾದ ಕೃತಿಗಳೂ, ಲೇಖನಗಳೂ ಅದರಲ್ಲಿ ಸೇರಿಕೊಳ್ಳುತ್ತವೆ. ಎಂದರೆ, ಇಲ್ಲಿ ಬರೆಹದ ಗಾತ್ರಕ್ಕಿಂತ ಅದರ ಸಂಶೋಧನ ಮೌಲ್ಯಗಳು ಹೆಚ್ಚು ಮುಖ್ಯ ವಾಗುತ್ತವೆ. ಕನ್ನಡ ಸಾಹಿತ್ಯ ಸಂಶೋಧನೆಯ ಚರಿತ್ರೆಯನ್ನು ಹಿನ್ನೆಲೆಗೆ ಇಟ್ಟುಕೊಂಡು ಈ ವಿಶ್ಲೇಷಣೆಯನ್ನು ನಡೆಸುವುದು ಅವಶ್ಯವಾಗಿದೆ. ವಾಸ್ತವವಾಗಿ ನೋಡಿದರೆ, ಇದು ಒಂದು ಸರಪಳಿ ಕ್ರಿಯೆಯಾಗಿ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳ ಸಂಶೋಧಕರ ಮುಂದೆ ಅನೇಕ ಸಮಸ್ಯೆಗಳಿದ್ದವು. ಸಂಶೋಧನೆಗಳಿಗೆ ತೀರಾ ಅಗತ್ಯವಾಗಿದ್ದ ಆಕರ ಸಾಮಗ್ರಿಗಳ ಅಭಾವವೂ ಆಗ ಇತ್ತು. ಮೌಖಿಕ ಸಂಪ್ರದಾಯ ದಲ್ಲಿದ್ದ ಸಾಹಿತ್ಯ ಭಾಗಗಳನ್ನು ಸಂಗ್ರಹಿಸುವ, ಪ್ರಕಟಿಸುವ ಕೆಲಸಗಳೂ ನಡೆಯಬೇಕಾಗಿದ್ದವು. ಇವೆಲ್ಲವೂ ಒಂದು ಹಂತಕ್ಕೆ ಬಂದ ಅನಂತರವೇ ಕನ್ನಡ ಸಾಹಿತ್ಯ ಸಂಶೋಧನೆಗೆ ಒಂದು ವ್ಯವಸ್ಥಿತವಾದ ಬುನಾದಿಯು ದೊರೆತಂತಾಯಿತು.

ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳು, ಶಾಸನ ಸಂಪುಟಗಳು ಪ್ರಕಟವಾಗುತ್ತಿದ್ದಂತೆ, ವಿದ್ವದ್ವಲಯಗಳಲ್ಲಿ ಸಾಹಿತ್ಯ ಕರ್ತೃಗಳ ಬಗೆಗಿನ ಕುತೂಹಲವು ಹೆಚ್ಚತೊಡಗಿತು. ನಿರ್ದಿಷ್ಟ ಕಾವ್ಯದ ಮೇಲಿನ ಪ್ರಭಾವ ಹಾಗೂ ಅದರ ಪ್ರೇರಣೆಗಳ ಅಧ್ಯಯನಗಳಿಗೆ ಅದರ ಕರ್ತೃವಿನ ಚರಿತ್ರೆಯನ್ನು ಮಹತ್ವದ ಆಕರವಾಗಿ ಗುರುತಿಸುವ ಪ್ರಯತ್ನಗಳೂ ನಡೆದವು. ಅನಂತರದ ವರ್ಷಗಳಲ್ಲಿ ಸಾಹಿತ್ಯ ಸಂಶೋಧನೆಯು ಶಾಖೋಪಶಾಖೆಗಳಾಗಿ ಒಡೆದುಕೊಂಡುದನ್ನು ಕಾಣುತ್ತೇವೆ.

ಈ ಕೆಳಗಿನ ನಕ್ಷೆಯು ಅವುಗಳಲ್ಲಿ ಪ್ರಾತಿನಿಧಿಕವಾದ ಕೆಲವನ್ನು ಪರಿಚಯಿಸುತ್ತದೆ.

19_104_HHE_KUH

ಈ ವಿಭಜನೆಯು ಕೇವಲ ಅಭ್ಯಾಸದ ಸೌಲಭ್ಯಕ್ಕೆ ಎನ್ನುವುದು ಮೇಲುನೋಟಕ್ಕೆ ಹೊಳೆಯುತ್ತದೆ ಎಂದರೆ, ಅವುಗಳೆಲ್ಲವುಗಳ ನಡುವೆಯೂ ಪ್ರತ್ಯಕ್ಷವಾದ ಅಥವಾ ಪರೋಕ್ಷ ವಾದ ಸಂಬಂಧಗಳು ಇದ್ದೇ ಇರುತ್ತವೆ.

ಭಾಗ

ಕನ್ನಡ ಸಾಹಿತ್ಯ ಸಂಶೋಧನ ರಂಗದಲ್ಲಿ ಅಂತರಸಂಬಂಧಗಳು

ಸೂಕ್ಷ್ಮವಾಗಿ ಗಮನಿಸಿದರೆ, ಅನ್ಯೋನ್ಯ ಜ್ಞಾನಶಾಖೆಗಳೆಲ್ಲವೂ ಒಂದೇ ಶರೀರದ ಬೇರೆ ಬೇರೆ ಭಾಗಗಳು ಎನ್ನುವುದು ಸ್ಪಷ್ಟವಾಗುತ್ತದೆ. ಸಾಹಿತ್ಯದ ಸಂದರ್ಭದಲ್ಲಿ ನಡೆಯುವ ಅಧ್ಯಯನಗಳಂತೂ ಪರಸ್ಪರ ಹತ್ತಿರದ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಉದಾಹರಣೆಗೆ, ಕನ್ನಡದಲ್ಲಿ ಭಾವಗೀತೆಗಳು ಎನ್ನುವ ಸಂಶೋಧನಾ ವಸ್ತುವನ್ನು ಪರಿಶೀಲಿಸಬಹುದು. ಕನ್ನಡದಲ್ಲಿ ಭಾವಗೀತ ಪ್ರಕಾರದ ಉಗಮ, ವಿಕಾಸ, ಅದರ ಸಾಂಸ್ಕೃತಿಕ ಪ್ರೇರಣೆಗಳು, ಪ್ರಮುಖ ಕವಿಗಳ ಚರಿತ್ರೆಗಳು, ಕೊಡುಪಡೆಗಳ ವಿನ್ಯಾಸ, ಅದರ ಮೇಲೆ ಪ್ರಭಾವ ಬೀರಿದ ಸಾಹಿತ್ಯ ಚಳುವಳಿಗಳೆಲ್ಲವುಗಳ ಚರ್ಚೆಗಳನ್ನು ಇಲ್ಲಿ ನಡೆಸಬೇಕಾಗುತ್ತದೆ. ಮಾತ್ರವಲ್ಲ, ಕನ್ನಡ ಭಾವಗೀತೆಗಳ ಭವಿಷ್ಯದ ಬಗೆಗಿನ ಮುನ್ನೋಟಗಳೂ ಇಲ್ಲಿ ಇರಬೇಕಾಗುತ್ತವೆ.

ಇದೇ ಮಾದರಿಯಲ್ಲಿ, ‘ಜಗನ್ನಾಥದಾಸರು’, ‘ಪುರಂದರದಾಸರು’ ಮುಂತಾದ ನಿರ್ದಿಷ್ಟ ವ್ಯಕ್ತಿಗಳ ಅಧ್ಯಯನಗಳು, ದಾಸಪಂಥದ ರಚನೆ, ಕೀರ್ತನೆಗಳ ಲಕ್ಷಣಗಳು, ಸಮಾಜಸುಧಾರಕ ಧೋರಣೆಗಳೆಲ್ಲವನ್ನೂ ತಮ್ಮ ವ್ಯಾಪ್ತಿಯೊಳಗಿರಿಸಿಕೊಳ್ಳುತ್ತವೆ. ದಾಸಪಂಥವು ಪ್ರಸ್ತುತ ಪಡಿಸಲೆತ್ನಿಸಿದ ಸಾಮಾಜಿಕ ಕ್ರಾಂತಿಯ ಸ್ವರೂಪವನ್ನೂ ಅಂಥ ಸಂಶೋಧನೆಗಳು ಸ್ಪಷ್ಟಪಡಿಸ ಬೇಕಾಗುತ್ತದೆ. ಹೀಗೆಯೇ, ಸಾಹಿತ್ಯಿಕ ಚಳುವಳಿಗಳ ಹಿನ್ನೆಲೆಗಳು ಕೂಡಾ ಅಧ್ಯಯನಗಳ ಬೇರೆ ಬೇರೆ ವಲಯಗಳಲ್ಲಿ ಹರಡಿಕೊಳ್ಳುತ್ತವೆ.

ಇದರಿಂದ, ಸಾಹಿತ್ಯದ ಯಾವುದೇ ಅಧ್ಯಯನವೂ ಸರ್ವತಂತ್ರ ಸ್ವತಂತ್ರವಾಗಿ, ಪ್ರತ್ಯೇಕ ದ್ವೀಪವಾಗಿ ನಿಲ್ಲಲಾರದೆನ್ನುವುದು ಸ್ಪಷ್ಟವಾಗುತ್ತದೆ. ಇದೇ ವಾದವು ಇಡಿಯಾದ ಸಂಶೋಧನೆಯ ಜಗತ್ತಿಗೂ ಅನ್ವಯವಾಗುತ್ತದೆ. ಇದಕ್ಕೆ ಹಿನ್ನೆಲೆಯಾಗಿ, ಸಾಹಿತ್ಯದ ಒಟ್ಟೂ ಸ್ವರೂಪವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ವಾಸ್ತವವಾಗಿ, ಸಾಹಿತ್ಯವೆನ್ನುವುದು, ಜೀವನದ ಪ್ರತಿಬಿಂಬವೇ ಆಗಿದೆ. ಹಾಗಾಗಿ, ಬದುಕಿನ ರಾಗದ್ವೇಷಗಳು, ಆಸಕ್ತಿಕಾಳಜಿಗಳು, ಸಂಕೀರ್ಣತೆ ಗಳು, ಸಂಘರ್ಷಗಳು, ಸಮಸ್ಯೆಗಳು, ಸವಾಲುಗಳೆಲ್ಲವೂ ಅಲ್ಲಿ ಎಡೆ ಪಡೆಯುತ್ತವೆ. ಕಾಲದ ದೃಷ್ಟಿಯಿಂದ, ಚರಿತ್ರಪೂರ್ವಯುಗದಿಂದ ತೊಡಗಿ, ಕಾಲ್ಪನಿಕವಾದ ಭವಿಷ್ಯದ ವರೆಗೂ ಅದರ ಹರಹಿದೆ. ಸಾಹಿತ್ಯ ಕೃತಿಗಳ ಭೌತಿಕ ಪರಿಸರವು ಇಷ್ಟೇ ವ್ಯಾಪಕವಾಗಿದೆ, ವೈವಿಧ್ಯಪೂರ್ಣವಾಗಿದೆ. ಸಾಹಿತ್ಯ ಪ್ರಕಾರಗಳೂ ಕಾವ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ, ಪ್ರವಾಸ ಕಥನ, ಆತ್ಮಚರಿತ್ರೆ ಮುಂತಾದ ವಿಶಿಷ್ಟ ವರ್ಗಗಳಲ್ಲಿ ವ್ಯಾಪಿಸಿಕೊಳ್ಳುತ್ತವೆ. ಒಂದೊಂದು ಪ್ರಕಾರದ ಒಳಗೂ ಅನೇಕ ಒಳ ವಿಭಾಗಗಳೂ ಇವೆ. ಕಾದಂಬರಿ ಪ್ರಪಂಚದ ಉದಾಹರಣೆಯನ್ನೇ ನೋಡಬಹುದು. ಸಾಮಾಜಿಕ, ರಾಜಕೀಯ, ಚಾರಿತ್ರಿಕ, ಧಾರ್ಮಿಕ, ಪ್ರಾದೇಶಿಕ ಕಾದಂಬರಿಗಳ ವಿಸ್ತೃತವಾದ ಜಗತ್ತನ್ನೇ ಅಲ್ಲಿ ಕಾಣುತ್ತೇವೆ. ಗಾತ್ರವನ್ನು ಒಂದು ಮಾನಕವಾಗಿಟ್ಟುಕೊಂಡು, ಕನ್ನಡ ಕಾವ್ಯ ಮಾಧ್ಯಮವನ್ನು ಪರೀಕ್ಷಿಸಿದಾಗ ಈ ಬಿನ್ನತೆಯು ಸ್ಫುಟವಾಗಿ ಕಾಣಿಸುತ್ತದೆ. ಕೇವಲ ನಾಲ್ಕು ಸಾಲುಗಳ ಚುಟುಕಗಳಿಂದ ತೊಡಗಿ, ಮಹಾಕಾವ್ಯ ಗಳವರೆಗೂ ಈ ಪ್ರಕಾರದ ರಚನೆಗಳಿರುತ್ತವೆ. ಸಾಹಿತ್ಯ ಬರೆಹಗಳ ಭಾಷೆಯೂ ಸಾಹಿತಿಯಿಂದ ಸಾಹಿತಿಗೆ, ಕೃತಿಯಿಂದ ಕೃತಿಗೆ ಬದಲಾಗುತ್ತದೆ. ಇಷ್ಟು ಸಂಕೀರ್ಣವಾದ, ಅಂತರ ಸಂಬಂಧಗಳನ್ನು ಹೊಂದಿರುವ ಸಾಹಿತ್ಯದ ಅಧ್ಯಯನಗಳೂ ಅಂತರಶಿಸ್ತೀಯ ನೆಲೆಗಳಲ್ಲಿ ನಡೆಯಬೇಕಾದುದು ಸಮಕಾಲೀನ ಅಗತ್ಯವೇ ಆಗಿದೆ.

ಕನ್ನಡ ಸಾಹಿತ್ಯದ ಮರುನಿರ್ವಚನದ ಅಗತ್ಯ

ಮನುಷ್ಯನ ದೈನಂದಿನ, ವಿಶಿಷ್ಟ ವ್ಯಾಪಾರಗಳಿಗೆ ಸಂಬಂಧಿಸಿದ ಅನೇಕ ಪರಿಕಲ್ಪನೆಗಳ ನಿರ್ವಚನಗಳು ಹೇಗೆ ಬದಲಾಗುತ್ತ ನಡೆದಿವೆಯೆನ್ನುವುದು ಈ ಮೊದಲೇ ಸೂಚಿಸಲಾಗಿದೆ. ಆ ಮಾಲಿಕೆಗೆ ಈ ಕನ್ನಡ ಸಾಹಿತ್ಯವೆನ್ನುವ ಪರಿಕಲ್ಪನೆಯನ್ನೂ ಸೇರಿಸಬೇಕಾದ ಕಾಲವಿಂದು ಸನ್ನಿಹಿತವಾಗಿದೆ.

‘ಕನ್ನಡ ಸಾಹಿತ್ಯ’ವೆಂದೊಡನೆಯೇ, ‘ಕನ್ನಡದಲ್ಲಿ ರಚಿತವಾದ ಸಾಹಿತ್ಯ ಕೃತಿ’ ಎನ್ನುವ ಅಪೂರ್ಣ ನಿರ್ವಚನಕ್ಕೆ ನಾವು ಬದ್ಧರಾಗಿಬಿಡುತ್ತೇವೆ. ಈ ದಿಸೆಯಲ್ಲಿ ಚಿಂತನೆಗಳನ್ನು ಬೆಳೆಸಿದಾಗ, ಇದು ಕೂಡಾ ನಮ್ಮ ಗ್ರಹಿಕೆಯ ಮಿತಿಯನ್ನೇ ಸೂಚಿಸುತ್ತದೆನ್ನುವುದು ಅರಿವಾಗುತ್ತದೆ, ‘ಕನ್ನಡ ಸಾಹಿತ್ಯ’ವೆಂದಾಗ, ‘ಕನ್ನಡ ಭಾಷೆಯಲ್ಲಿ ರಚನೆಗೊಂಡ ಎಲ್ಲ ಸಾಹಿತ್ಯ’ವೆನ್ನುವ ವ್ಯಾಪಕಾರ್ಥವನ್ನು ಪಡೆಯಬೇಕಾದ ಸಂದರ್ಭದಲ್ಲಿ  ನಾವಿಂದು ನಿಂತಿದ್ದೇವೆ. ಹಾಗಾಗಿ “ಪಶ್ಚಿಮ ಘಟ್ಟದ ಜೀವವೈವಿಧ್ಯ”, “ವೈದ್ಯಕೀಯ ಪದಕೋಶ”, “ಹಸುರು-ಹೊನ್ನು” ಮುಂತಾದ ಕೃತಿಗಳ ಅಧ್ಯಯನಗಳೆಲ್ಲವೂ ‘ಕನ್ನಡ ಸಾಹಿತ್ಯ ಸಂಶೋಧನೆ’ಯ ವಿಶಾಲವಾದ-ವ್ಯಾಪ್ತಿ ಒಳಗೇ ಬರುತ್ತವೆ. ಎಂದರೆ, ಎಲ್ಲ ದೃಷ್ಟಿಗಳಿಂದ ಇಂದಿನ ಸಾಹಿತ್ಯವು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ, “ಜ್ಞಾನದ ಜಗತ್ತೆನ್ನುವುದು ಒಂದೇ ಆಗಿದೆ. ಅನ್ಯೋನ್ಯ ಶಾಸ್ತ್ರಗಳೆಲ್ಲವೂ ಆ ಜ್ಞಾನವೃಕ್ಷದ ಬೇರೆ ಬೇರೆ ಶಾಖೆಗಳು ಮಾತ್ರ. ಆ ಪ್ರತಿ ಶಾಖೆಗೆ ದೊರೆಯುವ ಸತ್ವವೂ ಆ ಜ್ಞಾನದ ಇಡಿಯ ಮೊತ್ತಕ್ಕೇ ಸೇರುತ್ತದೆ, ಅದನ್ನು ಬಲಪಡಿಸುತ್ತದೆ” ಎನ್ನುವ ಹೇಳಿಕೆಯನ್ನು ದೃಢಗೊಳಿಸುತ್ತದೆ.

ಕನ್ನಡ ಸಂಶೋಧನೆಪ್ರಸ್ತುತ ನೆಲೆ

ಕನ್ನಡ ಸಾಹಿತ್ಯದ ಅಧ್ಯಯನವು ಸಮಕಾಲೀನ ಬೇಡಿಕೆಗಳಿಗೆ ವಿಧಾಯಕವಾಗಿ ಸ್ಪಂದಿ ಸುತ್ತಲೇ ಬಂದಿರುವುದು ಅದರ ಚರಿತ್ರೆಯಿಂದ ಸ್ಪಷ್ಟವಾಗುತ್ತದೆ. ಆ ದೃಷ್ಟಿಯಿಂದ, ಅದರ ವಸ್ತುಗಳು, ವಿನ್ಯಾಸಗಳು ಹಾಗೂ  ಸಂವಿಧಾನಗಳಲ್ಲಿ ವ್ಯಾಪಕವಾದ ಬದಲಾವಣೆಗಳಾಗ ಬೇಕಾಗಿವೆ. ಇದಕ್ಕೆ ಹಿನ್ನಲೆಯಾಗಿ, ಕನ್ನಡ ಸಂಶೋಧನೆಯ ಇಂದಿನ ನೆಲೆಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ.

ಈಗಿನ ಸಂಶೋಧನೆಯು ಹಿಡಿದಿರುವ ದಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಂಶೋಧನಾ ಬರೆಹಗಳ ಕೆಲವು ಲಕ್ಷಣಗಳನ್ನು ಈ ರೀತಿ ಕ್ರೋಡೀಕರಿಸಬಹುದು.

೧. ಕನ್ನಡ ಸಾಹಿತ್ಯ ಸಂಶೋಧನೆಯು – ಬಹುಮಟ್ಟಿಗೆ-ಸಿದ್ಧಸೂತ್ರಗಳನ್ನು ಅವಲಂಬಿ ಸುತ್ತಿದೆ.

೨. ಅಧ್ಯಯನದ ಪರಿಮಾಣವು ಗಣನೀಯವಾಗಿ ಹೆಚ್ಚಿದೆ. ಆದರೆ ವಿಶ್ಲೇಷಣೆಗಳತ್ತ ಲಕ್ಷ್ಯವು ಕೈಚಿತ್ತಾಗಿಯಷ್ಟೇ ಹರಿಯುತ್ತಿದೆ.

೩. ಸ್ಥಾಪಿತ ಸಿದ್ಧಾಂತಗಳನ್ನಷ್ಟೇ ಅವಂಬಿಸದೆ, ಹೊಸ ಸಾಧ್ಯತೆಗಳನ್ನು ಹುಡುಕುವ ಕ್ಷೇತ್ರಕಾರ್ಯ ಪ್ರಜ್ಞೆಯು ಎಚ್ಚುತ್ತಿರುವುದು ಕಾಣಿಸುತ್ತದೆ.

೪. ಒಟ್ಟಾರೆಯಾದ ಕನ್ನಡ ಸಂಶೋಧನ ಕ್ಷೇತ್ರವು ಮಾಹಿತಿ ಸಂಗ್ರಹ, ಮಂಡನೆ ಮುಂತಾದ ವಿಧಾನಗಳಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿಯೇ ಉಳಿದಿದೆ.

೫. ತುಲನಾತ್ಮಕ ಅಧ್ಯಯನ, ಅಂತರ ಶಿಸ್ತೀಯ ಅಧ್ಯಯನಗಳು, ಜನಾಂಗಿಕ ಅಂತರ ಸಂಬಂಧಗಳು ವಿವರಣಾತ್ಮಕ ಮಟ್ಟದಲ್ಲಿಯೇ ಇವೆ.

೬. ಸಂಶೋಧನೆಯು ಬಹುಮಟ್ಟಿಗೆ ಶೈಕ್ಷಣಿಕ ಚಟುವಟಿಕೆ ಎಂದರೆ ನಿರ್ದಿಷ್ಟ ಪದವಿಯನ್ನು ಗಳಿಸುವ ಉದ್ದೇಶವಿರುವಂಥವುಗಳಿಗೆ ಸೀಮಿತವಾಗಿಬಿಟ್ಟಿದೆ.

೭. ಸಂಶೋಧನೆಗಳ ಫಲಿತಾಂಶಗಳು ಇತರ ಭಾಷಾ ವಲಯಗಳಲ್ಲೂ ದೊರೆಯುವ ವ್ಯವಸ್ಥೆಯಿಲ್ಲ. ಮೌಲಿಕ ಕೃತಿಗಳ ಸಾರಲೇಖ(Abstract)ಗಳಾದರೂ ಅನುವಾದ ಗೊಳ್ಳಬೇಕಾದ ಅಗತ್ಯವಿದೆ.

೮. ಸಂಶೋಧನ ಕೃತಿಗಳ ಬಗ್ಗೆ ಗಂಭೀರವಾದ ಚಿಂತನೆ-ವಿವೇಚನೆ-ಮೌಲ್ಯಮಾಪನಗಳು ಅತ್ಯಲ್ಪ ಪ್ರಮಾಣದಲ್ಲಿ ನಡೆಯುತ್ತಿವೆ. ಸಂಶೋಧನೆಗಳ ಫಲಿತಾಂಶಗಳು ಅಧಿಕೃತ ವಾದವುಗಳೇ ಅಲ್ಲವೇ ಎನ್ನುವ ಸಂಶಯಗಳು ನಿವಾರಣೆಯಾಗುತ್ತಿಲ್ಲ.

೯. ಮಾದರಿ ಪ್ರಮಾಣ (Sample Size) ಅಂತೆಯೇ, ಮಾಹಿತಿಗಳ ತುಲನೆ ಮುಂತಾದ ಸಂದರ್ಭಗಳಲ್ಲೆಲ್ಲ ವೈಜ್ಞಾನಿಕ ದೃಷ್ಟಿಕೋನದ ಕೊರತೆಯು ಎದ್ದು ಕಾಣುತ್ತದೆ.

೧೦. ಸಂಶೋಧನ ವಿಧಾನಗಳ ಪರಿಷ್ಕರಣೆ, ಹೊಸ ಪರಿಕಲ್ಪನೆಗಳ ಸ್ವೀಕಾರಗಳು ಬಹಳ ಕಡಿಮೆ ಪ್ರಮಾಣಗಳಲ್ಲಿ ನಡೆಯುತ್ತಿವೆ.

೧೧. ಅಧ್ಯಯನದ ಸೀಮೆಗಳನ್ನು ನಿಗದಿಗೊಳಿಸಿಕೊಳ್ಳುವಾಗಿನ ಗೊಂದಲಗಳಿಂದಾಗಿ ಹೆಚ್ಚಿನ ಬರೆಹಗಳು ಅತಿವಿಸ್ತಾರ, ಅಸ್ಪಷ್ಟತೆ, ಅನಗತ್ಯ ವಿಚಾರಗಳಿಗೇ ಅವಧಾರಣೆ ಮುಂತಾದ ಮಿತಿಗಳನ್ನು ಹೊಂದಿವೆ.

೧೨. ಇಂದಿನ ಸಾಹಿತ್ಯ ಸಂಶೋಧನೆಯು ಸದೃಢವಾದ, ಪ್ರಮಾಣೀಕೃತವಾದ ತಾರ್ಕಿಕ ಸೈದ್ಧಾಂತಿಕ ನೆಲೆಗಟ್ಟನ್ನು ಪಡೆಯಬೇಕಾದುದು ಇಲ್ಲಿ ಮುಖ್ಯವೇ ಆಗಿದೆ.

ಪ್ರಸ್ತುತ ಸಾಹಿತ್ಯ ಸಂಶೋಧನೆಯ ಕ್ಷೇತ್ರದಲ್ಲಿರುವ ಮಿತಿಗಳನ್ನು, ಕೊರತೆಗಳನ್ನೂ ಸೂಚಿಸುವುದರ ಉದ್ದೇಶವು ಸ್ಪಷ್ಟವೇ ಇದೆ. ಈ ಪರಿಸ್ಥಿತಿಯಲ್ಲಿ ಸೂಕ್ತ ಸುಧಾರಣೆಗಳನ್ನು ತರಬೇಕಾದ ಅಗತ್ಯವಿದೆ. ಇಂಥ ಪೂರಕ ಕ್ರಮಗಳಲ್ಲಿ ಒಂದಾಗಿ ‘ಅಂತರ ಶಿಸ್ತೀಯ’ ಅಥವಾ ‘ಬಹುಶಿಸ್ತೀಯ ಅಧ್ಯಯನ’ಗಳ ಸಾಧ್ಯತೆಗಳನ್ನು ಗಮನಿಸಬಹುದು.

ಅಂತರಶಿಸ್ತೀಯ ಅಧ್ಯಯನದ ನಿರ್ವಚನ

ವಾಸ್ತವವಾಗಿ, ಸತ್ಯಗಳ ಅನ್ವೇಷಣೆಗಳಿಗೆ ಹೊರಡುವ ಎಲ್ಲ ಅಧ್ಯಯನಗಳ ಸ್ವರೂಪ ಗಳೂ ಅಂತರಶಿಸ್ತೀಯವಾಗಿಯೇ ಇರುತ್ತವೆ. ಸಾಹಿತ್ಯಿಕ ಕೃತಿಗಳ ಅಧ್ಯಯನಗಳನ್ನೇ ಗಮನಿಸಿದರೂ ಈ ಅಂಶವು ಸ್ಪಷ್ಟವಾಗುತ್ತದೆ. ಅಲ್ಲಿ, ಭಾಷೆ, ಸಂಸ್ಕೃತಿ, ಚರಿತ್ರೆ, ಮನಶ್ಶಾಸ್ತ್ರ ಮುಂತಾದ ಹಲವು ಶಾಸ್ತ್ರಗಳ ಉಪಸ್ಥಿತಿಯು ಇದ್ದೇ ಇರುತ್ತದೆ. ಇದು ಅಂತರಶಿಸ್ತೀಯ ಅಧ್ಯಯನಗಳ ಸೂಕ್ಷ್ಮ ನೆಲೆಯಾಗಿದೆ, ಪರೋಕ್ಷವಾದ ಪ್ರವರ್ತನೆಯಾಗಿದೆ. ಸ್ಥೂಲ ನೆಲೆಯಲ್ಲಿ, ಅನ್ಯೋನ್ಯ ಶಿಸ್ತುಗಳಿಗೆ ಸಂಬಂಧಿಸಿದ ಸತ್ಯಗಳ, ಶೋಧಗಳ, ಪರಿಕಲ್ಪನೆಗಳ ನಡುವಿನ ಸಂಬಂಧವನ್ನು ಸ್ಥಾಪಿಸುವ ಅಧ್ಯಯನಗಳನ್ನು ಅಂತರಶಿಸ್ತೀಯವೆಂದು ಕರೆಯ ಬಹುದು. ಈ ಮಾದರಿಯ ಅಧ್ಯಯನಗಳು ಹಲವು ಆಯಾಮಗಳನ್ನು ಹೊಂದಿರುತ್ತವೆ. ಒಂದು ಅಥವಾ ಹೆಚ್ಚು ಶಿಸ್ತುಗಳು ಪ್ರಸ್ತುತ ವಸ್ತುವಿನ ಮೇಲೆ ಪ್ರಭಾವವನ್ನು ಬೀರಿರಬಹುದು ಇಲ್ಲವೆ, ಪ್ರಸ್ತುತ ವಸ್ತುವಿನ ಮುಖ್ಯ ಪ್ರವಾಹದೊಂದಿಗೆ ವಿಶಿಷ್ಟ ಉಪಪ್ರವಾಹಗಳಾಗಿ ಅವುಗಳು ಹರಿಯಬಹುದು. ಅಥವಾ ನಿರ್ದಿಷ್ಟ ಶಿಸ್ತುಗಳ ತತ್ವ, ಸಿದ್ಧಾಂತ, ನಿಯಮಗಳಿಗೆಲ್ಲ ಆ ಪ್ರಸ್ತುತ ವಸ್ತುವಿನ ಆಕೃತಿಯು ಆಶ್ರಯ ನೀಡಿರಬಹುದು.

ಈ ನೆಲೆಗಳನ್ನು ಸ್ಪಷ್ಟಪಡಿಸುವ ದೃಷ್ಟಿಯಿಂದ ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು.

ಪಂಪನಿಗಿದ್ದ ಯುದ್ಧ ತಂತ್ರಗಳ ಜ್ಞಾನ, ಸಮರ ಸನ್ನಾಹಗಳ ಪರಿಣತಿಯು ಅವನ ಕಾವ್ಯ ರಚನೆಯ ಮೇಲೆ ಬೀರಿದ ಪ್ರಭಾವವು ಸ್ಪಷ್ಟವಾಗಿಯೇ ಇದೆ. ಹಾಗೆಯೇ, ‘ಕರ್ವಾಲೋ’ ಕಾದಂಬರಿಯಲ್ಲಿ ಲೇಖಕರ ಪರಿಸರ ಪರಿಜ್ಞಾನ ಮತ್ತು ಮಾನವ ಸ್ವಭಾವಗಳ ಪರಿಚಯಗಳು ಸ್ಫುಟವಾಗಿ ಕಂಡುಬರುತ್ತವೆ. ಇದರ ಇನ್ನೊಂದು ನೆಲೆಯ ಮಾದರಿಯನ್ನು ‘ಭಾರತ ಸಿಂಧು ರಶ್ಮಿ’ಯಲ್ಲಿ ಕಾಣಬಹುದು. ಅಲ್ಲಿ ಕಂಡುಬರುವ ಭೌಗೋಳಿಕ ವಿವರಗಳಾಗಲಿ, ಸಾಂಸ್ಕೃತಿಕ ಸಂಘರ್ಷಗಳ ಚರಿತ್ರೆಗಳಾಗಲಿ ವಿಶಿಷ್ಟವಾದ ಸಾತತ್ಯ ಗುಣಗಳುಳ್ಳವಾಗಿವೆ. ಅವುಗಳು ಕಥಾಪ್ರವಾಹಕ್ಕೆ ಸಮಾನಾಂತರಗಳಲ್ಲಿ ಬೆಳೆಯುತ್ತಲೇ ಹೋಗುತ್ತವೆ. ಹೀಗೆಯೇ, ‘ಓಂಣಮೋ’ ಕಾದಂಬರಿಯಲ್ಲಿ ಧರ್ಮಸಂಬಂಧಿಗಳಾದ ತತ್ವಗಳೂ, ಜಿಜ್ಞಾಸೆಗಳೂ ನೇರ ವಾಗಿ ಪ್ರವೇಶಿಸಿವೆ.

ಇಲ್ಲಿ, ಬಹಳ ಮುಖ್ಯವಾದ ಅಂಶವೊಂದಿದೆ, ಅಂತರ ಶಿಸ್ತೀಯ ಅಧ್ಯಯನಗಳನ್ನು ಕೈಗೊಳ್ಳುವವರು ಸದಾ ನೆನಪಿಟ್ಟುಕೊಳ್ಳಬೇಕಾದ ವಿಚಾರವದು. ಅವರ ಲಕ್ಷ್ಯವು, ‘ಎರಡು ಅಥವಾ ಹೆಚ್ಚು ಶಿಸ್ತುಗಳ ಸಂಯೋಜನೆಯಿಂದ ವಿಶಿಷ್ಟವಾದ ಸಂಯುಕ್ತ ಶಿಸ್ತೊಂದು ಅಸ್ತಿತ್ವಕ್ಕೆ ಬಂದಿದೆಯೇ’ ಎನ್ನುವುದನ್ನು ಪರಿಶೀಲಿಸುವುದರ ಕಡೆಗಿರಬೇಕು. ಆ ಸಂಯೋಜನೆಯು ಬರಿಯ ನೀರು ಮಂಜುಗಡ್ಡೆಯಾಗುವಂಥ ಭೌತ ಬದಲಾವಣೆಯೇ, ಇಲ್ಲ ಕಾಯಿಮಾಗಿ ಹಣ್ಣಾಗುವಂಥ ರಾಸಾಯನಿಕ ಪ್ರಕ್ರಿಯೆಯೇ ಎನ್ನುವುದನ್ನು ಅವರು ಕಂಡುಕೊಳ್ಳಬೇಕು. ಎಂದರೆ, ಅಧ್ಯಯನ ವಸ್ತುವಿನಲ್ಲಿ ಎರಡು ಅಥವಾ ಹೆಚ್ಚು ಶಿಸ್ತುಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸೂಚಿಸಿ, ನಿಂತುಬಿಡುವುದಲ್ಲ. ಅವುಗಳು ಸಂಧಿಸುವ ಸ್ಥಾನಗಳ ವೈಶಿಷ್ಟ್ಯ, ಅಲ್ಲಿ ಕಾಣುವ ಸತ್ಯಗಳ ಸ್ವರೂಪದ ಅನ್ವೇಷಣೆಗಳು ಇಲ್ಲಿ ಪ್ರಧಾನವಾಗುತ್ತವೆ.

ಅಂತರಶಿಸ್ತೀಯಅಧ್ಯಯನಗಳ ಅಗತ್ಯ

ನಮಗೆಲ್ಲ ತಿಳಿದಿರುವಂತೆ, ಭೌತಿಕವಾಗಿ ವಿಶ್ವದ ಗಾತ್ರವು ಗಣನೀಯವಾಗಿ ಕುಗ್ಗುತ್ತಿದೆ. ವಿಶ್ವಗ್ರಾಮ (Global Village) ಸ್ಥಾಪನೆಯ ಕನಸುಗಳು ಬಹುಮಟ್ಟಿಗೆ ನನಸುಗಳಾಗಿವೆ. ಇದಕ್ಕೆ ವಿಲೋಮವಾಗಿ, ಜ್ಞಾನಕೋಶವು ಅಗಾಧವಾಗಿ ಬೆಳೆಯುತ್ತಿರುವುದಕ್ಕೆ ನಾವು ಸಾಕ್ಷಿಗಳಾಗಿದ್ದೇವೆ. ಹಾಗಾಗಿ, ಈ ಜಗತ್ತಿನೊಂದಿಗೆ ಸಜೀವ ಸಂಬಂಧಗಳ ಸ್ಥಾಪನೆಯ ಎಲ್ಲ ವಿಧಾನಗಳ ಬಳಕೆಯೂ ನಮ್ಮ ಅಸ್ತಿತ್ವದ ಅಗತ್ಯಗಳೇ ಆಗಿವೆ. ಇನ್ನೊಂದೆಡೆಯಿಂದ, ಸಾಹಿತ್ಯ ನಿರ್ಮಿತಿಯೂ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಲೇ ನಡೆಯುತ್ತಿದೆ. ಅನ್ಯೋನ್ಯ ಶಿಸ್ತುಗಳ ಹಿನ್ನೆಲೆಗಳಿರುವ ಸಾಹಿತಿಗಳು ತಮ್ಮ ಅನುಭವ ಸಂಪತ್ತಿಯನ್ನು ಸಾಹಿತ್ಯ ಮಾಧ್ಯಮದ ಮೂಲಕವೂ ಅಭಿವ್ಯಕ್ತಗೊಳಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಅಧ್ಯಯನಗಳು ಕೂಡಾ ಬೇರೆ ಬೇರೆ ಶಿಸ್ತುಗಳನ್ನು ಆಶ್ರಯಿಸಬೇಕಾಗುತ್ತದೆ.

ಒಂದು ಉದಾಹರಣೆಯ ಮೂಲಕ, ಅಂತರ ಶಿಸ್ತೀಯ ಅಧ್ಯಯನಗಳ ಅಗತ್ಯವನ್ನು ಪ್ರತಿಪಾದಿಸಬಹುದು.

ಆಧುನಿಕ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿರುವ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಈ ದೃಷ್ಟಿಯಿಂದ ಗಮನಿಸಬಹುದು. ಅಧ್ಯಯನದ ಹಲವಾರು ಸಾಧ್ಯತೆಗಳನ್ನು ಒಳಗೊಳ್ಳುವ ಆ ಕೃತಿಯ ಕೆಲವು ವಿಶಿಷ್ಟಾಂಶಗಳು ಹೀಗಿವೆ :

೧. ‘ಮಲೆಗಳಲ್ಲಿ ಮದುಮಗಳು’ ಕೃತಿಯು ಗದ್ಯ ಮಹಾಕಾವ್ಯದ ಮಾದರಿಯಾಗಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಿಲ್ಲುತ್ತದೆ. ಎಂದರೆ, ಕಾಲದ ದೃಷ್ಟಿಯಿಂದ, ಪಾತ್ರ ವೈವಿಧ್ಯಗಳ ದೃಷ್ಟಿಯಿಂದ, ನಾಟಕೀಯ ಘಟನೆಗಳ ನಿಬಿಡತೆಯಿಂದ, ಜೀವಪ್ರೀತಿಯ ಸಂದೇಶದಿಂದ ಅದಕ್ಕೆ ಈ ಅರ್ಹತೆಯು ಪ್ರಾಪ್ತವಾಗುತ್ತದೆ. ಇದು, ಆ ಕೃತಿಯನ್ನು ಪ್ರಕಾರಕ್ಕೆ ಸಂಬಂಧಿಸಿದಂತೆ, ನೋಡಬಹುದಾದ ಒಂದು ಕ್ರಮವಾಗಿದೆ.

೨. ಭಾಷಾ ವಿಜ್ಞಾನಿಯ ದೃಷ್ಟಿಯಿಂದ, ಸಾಹಿತಿಯ ಪದಸಂಪತ್ತು, ವಾಕ್ಯಸೃಷ್ಟಿ ಪ್ರಯೋಗ ಶೀಲತೆ, ಪ್ರಾದೇಶಿಕ ಭಾಷಾ ವಿನಿಯೋಗ ಕ್ರಮಗಳೆಲ್ಲವೂ ಅಭ್ಯಾಸಯೋಗ್ಯವಾದವುಗಳೇ ಆಗುತ್ತವೆ.

೩. ಮನೋವಿಜ್ಞಾನದ ಸಿದ್ಧಾಂತಗಳು, ಖಿನ್ನತೆಯಂಥ ಅಸಹಜ ಸ್ಥಿತಿಗಳು, ಅನ್ಯೋನ್ಯ ಸಂಕೀರ್ಣವಸ್ಥೆ(Complex)ಗಳು, ಮಾನಸಿಕ ಅಸ್ವಾಸ್ಥ್ಯದ ಲಕ್ಷಣ-ಪರಿಣಾಮಗಳೆಲ್ಲ ಈ ಕೃತಿಯಲ್ಲಿ ಚರ್ಚೆಗಳಿಗೆ ಒಳಪಡುತ್ತವೆ. ಮಾನಸಿಕ ಸಂತುಲನದ ವ್ಯಾಖ್ಯಾನವೂ ಇದರ ಉಪ ಉತ್ಪತ್ತಿಯೇ ಆಗಿದೆ.

೪. ಮಾನವ ಸ್ವಭಾವಗಳ ವಿಭಿನ್ನ ಮಗ್ಗುಲುಗಳ ಅನ್ವೇಷಣೆಗಳಿಗೂ ಇಲ್ಲಿ ಅವಕಾಶಗಳಿವೆ. ಪ್ರಕೃತಿಗೆ ಆಪ್ತವಾಗಿ ಐತ ಪೀಂಚಲು ಅವರಂಥವರಿಂದ ತೊಡಗುವ ಈ ವಿವರಣೆಯು ಸಮಾಜದ ಸ್ವಭಾವ ವೈವಿಧ್ಯಗಳ ಬೇರೆ ಬೇರೆ ಪದರಗಳನ್ನೂ ಪರಿಚಯ ಮಾಡಿ ಕೊಡುತ್ತದೆ.

೫. ಮಲೆನಾಡಿನ ಪುಟ್ಟ ಹಳ್ಳಿಯೊಂದರ  ಜೀವನ ಮಾರ್ಗವನ್ನು ದಾಖಲಿಸುತ್ತಾ ಹೋಗುವ ಈ ಕೃತಿಯು ಸಾಂಸ್ಕೃತಿಕ ಅಧ್ಯಯನಕ್ಕೂ ವಸ್ತುವಾಗುತ್ತದೆ.

೬. ಸಸ್ಯಶಾಸ್ತ್ರದ ದೃಷ್ಟಿಯಿಂದಲೂ ಮಹತ್ವದ ಮಾಹಿತಿಗಳನ್ನು ನೀಡುವ ಇದು ಆ ನೆಲೆಯ ಅಧ್ಯಯನಗಳಿಗೂ ಅವಕಾಶಗಳನ್ನು ಕಲ್ಪಿಸುತ್ತದೆ.

೭. ಇಪ್ಪತ್ತನೆಯ ಶತಮಾನದ ಮೊದಲ ವರ್ಷಗಳ ಗ್ರಾಮೀಣ ಚರಿತ್ರೆಯ ಅಭ್ಯಾಸ, ಸ್ಥಿತ್ಯಂತರಗಳ ಸ್ವರೂಪ ಪರಿಮಾಣ ಪ್ರಭಾವಗಳು, ವರ್ತಮಾನದ ಸ್ಥಿತಿಗತಿಗಳನ್ನು ಒಂದೇ ನೇರದಲ್ಲಿಟ್ಟು ನೋಡುವ ಸೌಲಭ್ಯವನ್ನು ಇದು ನೀಡುತ್ತದೆ. ನಾಗರಿಕ ಪರಿಕಲ್ಪನೆಗಳ ದಾಳಿಯನ್ನು ಅದು ಎದುರಿಸುವ ಬಗೆಯೂ ಅಭ್ಯಾಸಯೋಗ್ಯವಾದುದೇ ಆಗಿದೆ.

ಇವುಗಳಲ್ಲಿ ಯಾವುದೇ ಅಂಶವನ್ನು ಆಯ್ದುಕೊಂಡರೂ, ಅದು ಇತರ ಒಂದು ಅಥವಾ ಹೆಚ್ಚು ಅಂಶಗಳೊಂದಿಗೆ ಬೆಸೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ಈ ಅಧ್ಯಯನಗಳು ಅಂತರಶಿಸ್ತೀಯ ಚೌಕಟ್ಟಿನೊಳಗೆ ನಡೆಯುವುದು ಯುಕ್ತಿಯುಕ್ತವೇ ಆಗುತ್ತದೆ. ಇದು, ಸರಳವಾದ ಒಂದು ಉದಾಹರಣೆ ಮಾತ್ರವಾಗಿದೆ. ಬೇರೆ ಸಾಧ್ಯತೆಗಳನ್ನು ಶೋಧಿಸುತ್ತಾ ಹೋದಂತೆ, ಅದು ಹೆಚ್ಚು ಸೂಕ್ಷ್ಮವೂ, ಸಂಕೀರ್ಣವೂ ಆಗುತ್ತದೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಮಾದರಿಯ ಅಧ್ಯಯನಗಳು ಕನ್ನಡ ಸಂಶೋಧನೆಯ ಕ್ಷೇತ್ರವನ್ನು ಪುಷ್ಟಿಗೊಳಿಸುವ ದೃಷ್ಟಿಯಿಂದ ಅಗತ್ಯವೇ ಆಗಿವೆ.

ಅಂತರಶಿಸ್ತೀಯ ಅಧ್ಯಯನದ ಸ್ವರೂಪ

ಇಂದು ನಡೆಯುತ್ತಿರುವ ಅಂತರಶಿಸ್ತೀಯ ಅಧ್ಯಯನಗಳು, ಆ ಪರಿಕಲ್ಪನೆಯ ನಿರ್ವಚನವನ್ನು ಆಂಶಿಕವಾಗಿ ಮಾತ್ರ ಸ್ವೀಕರಿಸಿವೆ. ‘ಕನ್ನಡ ಸಾಹಿತ್ಯ ಮತ್ತು ಮನೋವಿಜ್ಞಾನ’ ಎನ್ನುವ ಒಂದು ಸಂಶೋಧನವಸ್ತುವಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಇದು, ನಿರ್ದಿಷ್ಟವಾದ ಇಲ್ಲಿ ಸಾಹಿತ್ಯ, ಒಂದು ಶಿಸ್ತನ್ನು ಆಶ್ರಯಿಸಿ, ಇನ್ನೊಂದು ಶಿಸ್ತು – ಈ ಸಂದರ್ಭದಲ್ಲಿ ಮನೋವಿಜ್ಞಾನ – ಅದರೊಳಗೆ ಹೇಗೆ ಎಡೆ ಪಡೆದಿದೆ ಎನ್ನುವುದನ್ನು ಶೋಧಿಸುತ್ತದೆ. ಮನೋವಿಜ್ಞಾನದ ಪ್ರಮೇಯಗಳೂ, ಆನ್ವಯಿಕತೆಗಳೂ ತ್ರಿವೇಣಿಯಂಥ ಸಾಹಿತಿಗಳ ಕೃತಿಗಳಲ್ಲಿ ಪ್ರಸ್ತುತಿಯನ್ನು ಪಡೆದ ರೀತಿಗಳನ್ನು ಚರ್ಚಿಸುವುದು ಇದರ ಒಂದು ವಿಧಾನ. ಈ ಸಂದರ್ಭದಲ್ಲಿ ಕನ್ನಡದಲ್ಲಿ ಅಭಿವ್ಯಕ್ತಿಯನ್ನು ಪಡೆದ ಮನೋವಿಜ್ಞಾನವನ್ನು ಕುರಿತ ಬರೆಹಗಳೂ ಅದರ ವ್ಯಾಪ್ತಿಗೆ ಒಳಪಡುತ್ತವೆನ್ನುವುದು-ಸಾಮಾನ್ಯವಾಗಿ-ಮರವೆಯಾಗುತ್ತಿದೆ. ಈ ಅಂಶವು ಅಂತರಶಿಸ್ತೀಯ ಅಧ್ಯಯನಗಳನ್ನು ಬಹಳ ಸೀಮಿತ ಚೌಕಟ್ಟುಗಳಿಗೆ ಒಳಪಡಿಸುತ್ತದೆ. ಈ ಸೀಮೆಗಳನ್ನು ಮೀರುವ ಸಾಧ್ಯತೆಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ.

ಅನ್ಯಶಿಸ್ತುಗಳು ಮತ್ತು ಕನ್ನಡ ಭಾಷೆಯ ಮುಖಾಮುಖಿಗಳ ಸಂದರ್ಭಗಳು ಇದಕ್ಕೆ ನಿದರ್ಶನಗಳಾಗುತ್ತವೆ. ‘ಜ್ಞಾನವಿಜ್ಞಾನಕೋಶ’ದಂಥ ಪರಾಮರ್ಶನ ಕೃತಿಯೊಂದು, ಒಂದೆಡೆಯಿಂದ ಸೃಜನೇತರ ಕನ್ನಡ ಸಾಹಿತ್ಯದ ಭಾಷೆಯನ್ನು ಲಕ್ಷಿಸುತ್ತದೆ. ಇನ್ನೊಂದೆಡೆಯಿಂದ, ವಿಜ್ಞಾನದ ವಸ್ತು ವಿಚಾರಗಳ ಅಭಿವ್ಯಕ್ತಿ ಕ್ರಮವನ್ನು ನಿರೂಪಿಸುತ್ತದೆ. ಇಂಥ ಕೃತಿಗಳ ವಿಶ್ಲೇಷಣೆಗಳು ಕೂಡಾ ಸಾಹಿತ್ಯ ಮತ್ತು ವಿಜ್ಞಾನಗಳ ಸಂಯುಕ್ತಾಶ್ರಯದಲ್ಲಿಯೇ ನಡೆಯಬೇಕಾಗುತ್ತದೆ ಎಂದರೆ, ಸಾಹಿತ್ಯ ಮತ್ತು ವಿಜ್ಞಾನಗಳು ಪರಸ್ಪರ ಐಕ್ಯಗೊಳ್ಳುವ ಪ್ರದೇಶವೊಂದು ಇಲ್ಲಿ ನಿರ್ಮಾಣವಾಗುತ್ತದೆ.

ಕೆಳಗಿನ ಆಕೃತಿಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ.

ಅಂತರಶಿಸ್ತೀಯ ಸಂಬಂಧಗಳು

ಅಂತರಶಿಸ್ತೀಯ ಸಂಬಂಧಗಳು

ಈ ಎರಡು ಅಥವಾ ಹೆಚ್ಚು ಶಿಸ್ತುಗಳಿಗೆ ಸಮಾನವಾಗಿರುವ ಅಂಶಗಳನ್ನು ಅಂತರ್‌ಶಿಸ್ತೀಯ ಅಧ್ಯಯನಗಳು ಲಕ್ಷಿಸುತ್ತವೆ.

ತೀರಾ ಸರಳವಾಗಿ ಹೇಳುವುದಾದರೆ, ‘ಕನ್ನಡದಲ್ಲಿ ವಿಜ್ಞಾನ ಬರೆಹಗಳು’ ಅಥವಾ ‘ಕನ್ನಡ ವೈಜ್ಞಾನಿಕ ಬರೆಹಗಳ ಸಾಹಿತ್ಯಕ ಮೌಲ್ಯ’ಗಳೆರಡೂ ಇಂಥ ಅಧ್ಯಯನಗಳ ಲಕ್ಷ್ಯ ಗಳಾಗುತ್ತವೆ. ಇಂಥ ಸಂದರ್ಭಗಳಲ್ಲಿ ಭಾಷೆಯ ಅಧಿಕೃತತೆ, ಸಂವಹನ ಸಾಮರ್ಥ್ಯ, ನಿಖರತೆ, ಪ್ರಮಾಣೀಕರಣಕ್ರಮ, ಆಕರ್ಷಕ ಶೈಲಿಗಳೆಲ್ಲವೂ ಪರೀಕ್ಷಿಸಲ್ಪಡುತ್ತವೆ. ಎಂದರೆ, ಏಕಶಿಸ್ತೀಯ ಅಧ್ಯಯನಗಳ ಸಿದ್ಧ, ಸ್ಥಾಪಿತ ಮಾದರಿಗಳ ಬದಲಿಗೆ, ಬಹುಶಿಸ್ತೀಯವಾದ ‘ವಿಶಿಷ್ಟ ಅಧ್ಯಯನ ಜಾಲ’ಗಳನ್ನು ಪ್ರಚಲಿತಗೊಳಿಸಬೇಕಾದ ಅಗತ್ಯವಿದೆ ಎಂದಂತಾಯಿತು.

ಇದನ್ನೇ ಸ್ವಲ್ಪ ವಿಸ್ತಾರಗೊಳಿಸಿದರೆ ‘ಬಹುಶಿಸ್ತೀಯ ಅಧ್ಯಯನ’ದ ಸಂದರ್ಭವು ನಿರ್ಮಾಣವಾಗುತ್ತದೆ ಎಂದರೆ, ಒಂದು ಅಧ್ಯಯನ ವಸ್ತುವು, ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಶಿಸ್ತುಗಳೊಡನೆ ಮುಖಾಮುಖಿಯಾಗುವ ಸಾಧ್ಯತೆಗಳನ್ನು ಇದು ಸೂಚಿಸುತ್ತದೆ. ಹಾಗಾಗಿ, ‘ಅಂತರಶಿಸ್ತು’ ಮತ್ತು ‘ಬಹುಶಿಸ್ತು’ಗಳ ಮಧ್ಯ ಇರುವ ವ್ಯತ್ಯಾಸವು ಆನ್ವಯಿಕ ನೆಲೆಯದೇ ಹೊರತಾಗಿ ತಾತ್ತ್ವಿಕ ತಳಹದಿಯದಲ್ಲ ಎನ್ನುವುದು ಸ್ಪಷ್ಟವೇ ಆಗುತ್ತದೆ.

ಕೆಳಗಿನ ಮಾದರಿಯು-ತೀರಾ ಸರಳವಾದ ನೆಲೆಯಲ್ಲಿ-ಬಹುಶಿಸ್ತೀಯ ಅಧ್ಯಯನ ಸಂದರ್ಭವೊಂದನ್ನು ಪ್ರಸ್ತುತಪಡಿಸುತ್ತದೆ.

ಬಹುಶಿಸ್ತೀಯ ಸಂಶೋಧನೆ

ಬಹುಶಿಸ್ತೀಯ ಸಂಶೋಧನೆ

ಈ ಸಂದರ್ಭದಲ್ಲಿ ಪ್ರತಿ ಶಿಸ್ತು ಕೂಡಾ ಅನ್ಯಶಿಸ್ತಿನೊಂದಿಗೆ ಸಂವಾದಕ್ಕೆ ಹೊರಡುತ್ತ ತಮ್ಮ ನಡುವಿನ ಸಮಾನ ಅಂಶಗಳನ್ನು ಗುರುತಿಸಿಕೊಳ್ಳುತ್ತದೆ. ಈ ಶೋಧನೆಯ ಅಂತ್ಯದಲ್ಲಿ ಸಿದ್ದಿಸುವ ಸತ್ಯವು, ಲಕ್ಷಿಸಿದ ಎಲ್ಲ ಶಿಸ್ತುಗಳಿಗೆ ಸಮಾನವಾಗಿರುತ್ತದೆ.

ಉದಾಹರಣೆಗೆ, ‘ಸಾರ್ಥ’ ಕಾದಂಬರಿಯ ಅಧ್ಯಯನ ಸಾಧ್ಯತೆಗಳಲ್ಲಿ ಒಂದನ್ನು ಪರಿಶೀಲಿ ಸಬಹುದು.

‘ಸಾರ್ಥ’ ಕಾದಂಬರಿಯಲ್ಲಿ ಧರ್ಮ-ಸಂಸ್ಕೃತಿ-ಸಾಹಿತ್ಯ ಇದನ್ನು ಅಧ್ಯಯನ ವಸ್ತುವೆಂದು ಕೊಳ್ಳೋಣ. ಆ ಅಧ್ಯಯನವನ್ನು ಕೆಲವು ಹಂತಗಳಲ್ಲಿ ನಡೆಸಬೇಕಾಗುತ್ತದೆ. ಉದಾಹರಣೆಗೆ, ಮೊದಲ ಹಂತದಲ್ಲಿ, ಆ ಕಾದಂಬರಿಯಲ್ಲಿ ಧರ್ಮ ಮತ್ತು ಸಾಹಿತ್ಯಗಳು ಸಮನ್ವಯ ಗೊಳ್ಳುವ ರೀತಿಯನ್ನು ನಿರ್ಧರಿಸಬಹುದು. ಎರಡನೆಯ ಹಂತದಲ್ಲಿ ಸಂಸ್ಕೃತಿ ಮತ್ತು ಸಾಹಿತ್ಯಗಳು ವಿಲೀನಗೊಳ್ಳುವ ಬಗೆಯನ್ನು ಪರಿಶೀಲಿಸಬಹುದು. ಮೂರನೆಯ ಹಂತದಲ್ಲಿ ಧರ್ಮ ಮತ್ತು ಸಂಸ್ಕೃತಿಗಳ ಸಮಾನ ಲಕ್ಷಣಗಳನ್ನು ಕ್ರೋಡೀಕರಿಸಬಹುದು. ಅಂತಿಮ ಹಂತದಲ್ಲಿ, ಧರ್ಮ, ಸಂಸ್ಕೃತಿ, ಸಾಹಿತ್ಯೆಗಳೆಲ್ಲವೂ ಒಪ್ಪಿಕೊಳ್ಳುವ ಲಕ್ಷಣಗಳನ್ನು ಗುರುತಿಸಬಹುದು.

ಅಂತರಶಿಸ್ತೀಯ ಅಥವಾ ಬಹುಶಿಸ್ತೀಯ ಅಧ್ಯಯನಗಳ ಮೂಲ ನೆಲೆಗಳನ್ನು ಅನುಸರಿಸಿ ಅವುಗಳ ಸ್ವರೂಪಗಳು ನಿರ್ಧಾರವಾಗುತ್ತವೆ. ಉದಾಹರಣೆಗೆ, ಕನ್ನಡ ಸಾಹಿತ್ಯ ಮತ್ತು ಧರ್ಮಶಾಸ್ತ್ರ ಈ ಅಧ್ಯಯನದಲ್ಲಿ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಧರ್ಮಶಾಸ್ತ್ರದ ಅಭಿವ್ಯಕ್ತಿ ಮತ್ತು ಕನ್ನಡದಲ್ಲಿ ಅಭಿವ್ಯಕ್ತಿ ಪಡೆದ ಧಾರ್ಮಿಕ ಸಾಹಿತ್ಯಗಳೆರಡೂ ಪ್ರಸ್ತುತ ವಾಗುತ್ತವೆಂಬುದನ್ನು ಈಗಾಗಲೇ ನೋಡಿದೆವು. ಇವುಗಳಲ್ಲಿ ಮೊದಲನೆಯ ಸಂದರ್ಭದಲ್ಲಿ ಸಾಹಿತ್ಯ ಮೂಲನೆಲೆಯಲ್ಲಿದ್ದರೆ, ಎರಡನೆಯ ಸಂದರ್ಭದಲ್ಲಿ ಧರ್ಮವು ಪ್ರಧಾನ ಆಸಕ್ತಿಯಾಗುತ್ತದೆ. ಹೀಗೆ, ಕೇಂದ್ರ ಮತ್ತು ಅಂಚುಗಳಲ್ಲಿ ನಿಂತು ನೋಡುವ ಸೌಲಭ್ಯವು ಇಲ್ಲಿ ಕಲ್ಪಿತವಾಗುತ್ತದೆ; ಅಧ್ಯಯನವು ಹೆಚ್ಚು ವ್ಯಾಪಕವಾಗುತ್ತದೆ.

“ಬೌದ್ಧ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ” ಎನ್ನುವ ವಸ್ತುವನ್ನೂ ಈ ದೃಷ್ಟಿಯಿಂದ ಗಮನಿಸ ಬಹುದು. ಇಲ್ಲಿ, ಧರ್ಮಪ್ರಸಾರವೇ ಬೌದ್ಧ ಸಾಹಿತ್ಯದ ಉದ್ದೇಶಗಳಲ್ಲೊಂದು ಎಂಬುದು ವಿದಿತವೇ ಇದೆ. ಅಲ್ಲಿ ಸಾಹಿತ್ಯ ಸಂವೇದನೆಯೊಂದರ ಪ್ರಸ್ತುತಿಯನ್ನು ಗುರುತಿಸುವುದರ ಮೂಲಕ ಬೌದ್ಧಧಾರ್ಮಿಕ ಬರೆಹಗಳ ಸಾಹಿತ್ಯಿಕ ಮೌಲ್ಯಗಳ ಒಂದು ಮಗ್ಗಲು ನಿರ್ಧಾರ ವಾಗುತ್ತಕದೆ.

ಈ ಚರ್ಚೆಯ ಆಧಾರದಿಂದ, ಅಂತರ ಅಥವಾ ಬಹುಶಿಸ್ತೀಯ ಅಧ್ಯಯನಗಳ ಸ್ವರೂಪವು ಬಹಳ ಸಂಕೀರ್ಣವಾದುದೆನ್ನುವುದು ಸ್ಪಷ್ಟವಾಗುತ್ತದೆ.

ಅಂತರಶಿಸ್ತೀಯ ಅಧ್ಯಯನಗಳ ಉದ್ದೇಶಗಳು

ಅಂತರಶಿಸ್ತೀಯ ಅಧ್ಯಯನಗಳ ಕೆಲವು ಉದ್ದೇಶಗಳನ್ನು ಈ ಕೆಳಗಿನಂತೆ ನಿರೂಪಿಸ ಬಹುದು.

೧. ಸಿದ್ಧ ಮಾದರಿಗಳನ್ನು ಬಳಸುತ್ತಿರುವ ಸಂಶೋಧನ ಬರೆಹಗಳಲ್ಲಿ ಕಂಡುಬರುವ ಏಕತಾನತೆಯ ನಿವಾರಣೆ.

೨. ‘ಸಾಹಿತ್ಯ’ ಪರಿಕಲ್ಪನೆಯ ವ್ಯಾಪ್ತಿಯ ವಿಸ್ತರಣೆ.

೩. ಅನ್ಯಶಿಸ್ತುಗಳ ಸಂದರ್ಭಗಳಲ್ಲಿಟ್ಟು ನೋಡುವುದರ ಮೂಲಕ ಕನ್ನಡ ಸಂಶೋಧನ ಕ್ಷೇತ್ರದ ಬಲಸಂವರ್ಧನೆ.

೪. ಅನ್ಯೋನ್ಯ ಶಿಸ್ತುಗಳ ಅಧ್ಯಯನಗಳಿಗೆ ಸೃಜನಶೀಲ ಆಕರಗಳಾಗಿ ಕನ್ನಡ ಸಾಹಿತ್ಯ ಕೃತಿಗಳ ಯೋಗ್ಯತೆಗಳ ಪ್ರಸಾರ.

೫. ಕನ್ನಡ ಸಾಹಿತ್ಯವನ್ನು ಭಿನ್ನ ಕೋನಗಳಿಂದ ನೋಡುವುದರ ಮೂಲಕ ಅದರ ಅಧ್ಯಯನಗಳಿಗೆ ಸಮಗ್ರತ್ವವನ್ನು ನೀಡುವ ಪ್ರಯತ್ನ.

೬. ಒಟ್ಟಾರೆಯಾದ ಜ್ಞಾನ ಶರೀರದ ಸಂತುಲನ ರಕ್ಷಣೆ.

ಈ ಉದ್ದೇಶಗಳು ಕನ್ನಡ ಸಂಶೋಧನೆಯ ಸಂವಿಧಾನದಲ್ಲಿರುವ ಕೊರತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತವೆ.

ಅಂತರಶಿಸ್ತೀಯ ಅಧ್ಯಯನ ವೈಶಿಷ್ಟ್ಯ

ಈ ಮೊದಲೇ ನಿರೂಪಿಸಿದಂತೆ, ಅಂತರ ಅಥವಾ ಬಹುಶಿಸ್ತೀಯ ಅಧ್ಯಯನಗಳಲ್ಲಿ ಬಳಕೆಯಾಗುವ ಮಾಹಿತಿಗಳು ವಿಶಿಷ್ಟವಾಗಿರುತ್ತವೆ ಅವುಗಳ ಮೂಲಗಳು ವೈವಿಧ್ಯಮಯವಾಗಿರುತ್ತವೆ. ಅವುಗಳ ಮಂಡನ ಕ್ರಮಗಳೂ ಭಿನ್ನವಾಗಿರುತ್ತವೆ. ಇವುಗಳನ್ನು ಆಯ್ದುಕೊಳ್ಳುವ ಸಂಶೋಧಕರಲ್ಲಿ ಇರಬೇಕಾದ ಕೆಲವು ಲಕ್ಷಣಗಳು ಇಲ್ಲಿ ಪ್ರಸ್ತಾಪಯೋಗ್ಯವೆನಿಸುತ್ತವೆ.

ಈ ವಿಧಾನದ ಅಧ್ಯಯನಗಳು ಅಪಾರವಾದ ತಾಳ್ಮೆ. ಶ್ರಮ ಹಾಗೂ ಸಮಯಗಳನ್ನು ನಿರೀಕ್ಷಿಸುತ್ತವೆ. “ಪು.ತಿ.ನರಸಿಂಹಾಚಾರರ ಕಾವ್ಯಶೈಲಿ’ ಮತ್ತು “ಪು.ತಿ.ನ. ಅವರ ಕಾವ್ಯಗಳಲ್ಲಿ ವೈಚಾರಿಕತೆ” ಎನ್ನುವ ಅಧ್ಯಯನ ವಸ್ತುಗಳಿವೆಯೆನ್ನೋಣ. ಮೇಲುನೋಟಕ್ಕೆ, ಮೊದಲನೆಯದು ಏಕಮುಖ ಅಧ್ಯಯನದ ಮಾದರಿ, ವಿವರಣಾ ಪ್ರಧಾನವಾದುದು ಎನಿಸಬಹುದು. ಸೂಕ್ಷ್ಮವಾಗಿ ನೋಡಿದರೆ, ಅದು ಶೈಲಿಶಾಸ್ತ್ರ ಮತ್ತು ಸಾಹಿತ್ಯ; ಸಾಹಿತ್ಯದಲ್ಲಿ ಶೈಲಿಗಳ ಬಗೆಗೆ ಅಭ್ಯಸಿಸುವಾಗ ಅನುಸರಿಸಬೇಕಾದ ನಿರ್ದಿಷ್ಟ ಸಂಶೋಧನಾ ವಿಧಾನ; ಅಲ್ಲಿ ಕಂಡುಬರುವ ಶೈಲಿ ವೈವಿಧ್ಯ, ಅದರ ಹಿಂದಿನ ಸಾಹಿತ್ಯಿಕ ಸಾಂಸ್ಕೃತಿಕ ಉತ್ತೇಜನಗಳೆಲ್ಲವನ್ನೂ ಆ ಅಧ್ಯಯನವು ಒಳಗೊಳ್ಳಬೇಕೆನ್ನುವುದು ಸ್ಪಷ್ಟವಾಗುತ್ತದೆ.

ಎರಡನೆಯ ಸಂದರ್ಭವಂತೂ ಹೆಚ್ಚಿನ ಸಂಕೀರ್ಣ ನೆಲೆಗಳನ್ನು ಪಡೆದುಕೊಳ್ಳುತ್ತದೆ. ‘ವಿಚಾರ’ ಅಥವಾ ‘ವೈಚಾರಿಕತೆ’ಯ ಪ್ರಸ್ತಾಪವು ಬಂದೊಡನೆಯೇ ಅದು ದೈವವಿರೋಧಿವಾದವೆನ್ನುವ ಅರೆತಿಳಿವಳಿಕೆಗೆ ನಾವು ತಲುಪಿಬಿಡುತ್ತೇವೆ. ಈ ತೊಡಕನ್ನು ನಿವಾರಿಸಿಕೊಂಡು, ವಿಚಾರವನ್ನು ಹೊಸತಾಗಿ ವ್ಯಾಖ್ಯಾನಿಸುವುದು ಸಂಶೋಧಕನ ಆದ್ಯತೆಗಳಲ್ಲಿ ಒಂದಾಗುತ್ತದೆ. ಈ ದೃಷ್ಟಿಯಿಂದ, ಆ ಅಧ್ಯಯನವು ಮೊದಲಾಗಿ ಒಂದು ಸಿದ್ಧಾಂತ ರೂಪಣೆ (Theory Building)ಯನ್ನು ಮಾಡಬೇಕಾಗುತ್ತದೆ. ಅನಂತರ, ಪು.ತಿ.ನ. ಅವರ ಧಾರ್ಮಿಕ ವಿಚಾರಗಳು, ಶಿಕ್ಷಣ ಸಂಬಂಧ ವಿಚಾರಗಳು, ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ವಿಚಾರಗಳು ಮುಂತಾದವುಗಳ ವಿಶ್ಲೇಷಣೆಗೆ ಆತ ಹೊರಡಬೇಕಾಗುತ್ತದೆ. ಅಹಲ್ಯೆಯಂಥ ಪೌರಾಣಿಕ ಪರಿಸರದ ಪಾತ್ರವೊಂದರ ‘ದ್ವಂದ್ವ ವ್ಯಕ್ತಿತ್ವ’ವನ್ನು ಚಿತ್ರಿಸುವಾಗ ಪು.ತಿ.ನ. ಅವರಲ್ಲಿ ಪ್ರಖರವಾಗುವ ನಿರೀಕ್ಷಣಾ ಪ್ರಜ್ಞೆಯಾಗಲಿ, ‘ಮಲೆದೇಗುಲ’ದಂಥ ಕವಿತೆಗಳಲ್ಲಿ ಪ್ರಕಟವಾಗುವ ಆಧ್ಯಾತ್ಮಿಕ ಸಂಗತಿಗಳಾಗಲಿ ಇಲ್ಲಿ ಪ್ರಧಾನವಾಗುವುದಿಲ್ಲವೇ?

ಒಂದು ನಿರ್ದಿಷ್ಟ ಸಾಹಿತ್ಯ ಕೃತಿಯ ಪಾತ್ರಗಳ ಅಧ್ಯಯನವನ್ನು ಮಾಡಬೇಕಾಗಿದೆ ಎನ್ನೋಣ. ಆಗ, ಸಾಹಿತಿಯ ಪಾತ್ರ ನಿರ್ಮಾಣ ಕೌಶಲ. ಅವುಗಳ ಪೋಷಣಾ ವಿಧಾನ, ವೈಲಕ್ಷಣ್ಯಗಳು ಅಧ್ಯಯನದ ಘಟಕಗಳಾಗುತ್ತವೆ. ಜೊತೆಗೇ, ಒಂದು ಪಾತ್ರದ ಮೇಲೆ ಪರಿಸರ ಪರಂಪರೆಗಳ ಪ್ರಭಾವ, ಅರಕ್ಷಿತ ಭಾವ, ಅರ್ಥವಾಗದ ಆಂತರಿಕ ಸಂವೇದನೆಗಳಂಥ ವಿಚಾರಗಳೂ ಅಲ್ಲಿ ಪ್ರಸ್ತುತವೇ ಆಗುತ್ತವೆ. ಈ ಎರಡನೆಯ ನೆಲೆಗೆ, ಮನಶ್ಶಾಸ್ತ್ರದಂಥ ಬೇರೊಂದು ಶಿಸ್ತಿನ ಬೆಂಬಲವಿದ್ದಾಗ ಅಧ್ಯಯನವು ಹೆಚ್ಚು ಅಧಿಕೃತವಾಗುತ್ತದೆ. ಈ ಅರಿವಿನ ಕೊರತೆಯಿದ್ದಾಗ, ಅಂತರಶಿಸ್ತು ಎನ್ನುವುದು ಬರಿಯ ಶೀರ್ಷಿಕೆಯಲ್ಲಿ ಉಳಿಯುತ್ತವೆ. ಒಂದಿಷ್ಟು ಸಾಹಿತ್ಯಿಕ ಅಂಶಗಳು, ಇನ್ನೊಂದಿಷ್ಟು ಅನ್ಯಶಿಸ್ತಿನ ಪರಿಕಲ್ಪನೆಗಳನ್ನು ಯಾದಿ ಮಾಡುವಷ್ಟಕ್ಕೆ ಅಧ್ಯಯನಗಳು ತೃಪ್ತವಾಗುತ್ತವೆ. ಅವುಗಳು ಪ್ರತ್ಯೇಕ ಶಿಸ್ತುಗಳಾಗಿ ಉಳಿಯುತ್ತವೆ.

ಈ ಅಂಶಗಳನ್ನು ಲಕ್ಷಿಸಿದಾಗ, ಅಂತರಶಿಸ್ತೀಯ ಅಧ್ಯಯನಗಳಿಗೆ ಹೊರಡುವವರಿಗೆ, ಉದ್ದೇಶಿತ ಶಿಸ್ತುಗಳಲ್ಲಿ ಆಳವಾದ ಪರಿಣತಿಯಿರಬೇಕು ಎನ್ನುವುದು ದೃಢವಾಗುತ್ತದೆ. ಇದು ಪ್ರವೃತ್ತಿ ಮತ್ತು ಪ್ರವೇಶಗಳೆರಡನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

ಇಷ್ಟೇ ಮುಖ್ಯವಾದುದು ಎರಡು ಅಥವಾ ಹೆಚ್ಚು ಶಿಸ್ತುಗಳ ಅಧ್ಯಯನ ವಿಧಾನಗಳ ಸಮತೂಕದ, ಸಂತುಲನದ ರಕ್ಷಣೆ. ಎಂದರೆ, ಸಾಹಿತ್ಯದ ವಿಶ್ಲೇಷೆಯು ವ್ಯಕ್ತಿ ಸಾಪೇಕ್ಷವಾಗಿ ನಡೆಯುತ್ತದೆ, ವಿವರಗಳ ನೆಲೆಯಲ್ಲಿಯೇ ಅದು ಬೆಳೆಯುತ್ತದೆ. ಅರ್ಥಶಾಸ್ತ್ರದಂಥ ಹೆಚ್ಚು ನಿಖರತೆಯನ್ನು ಅಪೇಕ್ಷಿಸುವ ಶಿಸ್ತಿನ ದೃಷ್ಟಿಯಿಂದ ಸಾಹಿತ್ಯವನ್ನು ವಿಶ್ಲೇಷಿಸಲು ಹೊರಡುವಾಗ, ವಸ್ತುನಿಷ್ಠತೆಯತ್ತ ಗಮನವನ್ನು ಹರಿಸಬೇಕಾಗುತ್ತದೆ. ಆದರೆ, ಇದೇ ಅಂಕಿಅಂಶಗಳ ಸುಸಂಬದ್ಧತೆಯನ್ನೇ ಸಾಹಿತ್ಯಕ್ಕೆ ಅನ್ವಯಿಸಿದಾಗ, ಫಲಿತಾಂಶವು ಏರು ಪೇರಾಗುವ ಸಂಭವವಿದೆ.

ಒಂದು ಸರಳ ಅಭಿವ್ಯಕ್ತಿಯನ್ನು ಗಮನಿಸಿ, “ಅವನು ವಾಯುವೇಗದಲ್ಲಿ ಪ್ರಯಾಣಿಸಿದ” ಎನ್ನುವುದು ಸಾಹಿತ್ಯಿಕ ಚೌಕಟ್ಟಿಗೆ ಸರಿ. ಅದುವೇ ಅರ್ಥಶಾಸ್ತ್ರದಲ್ಲಿ ಅವನು ಗಂಟೆಗೆ ೬೦ ಕಿ.ಮೀ. ವೇಗದಲ್ಲಿ ಸಂಚರಿಸಿದ ಎಂದು ನಿರ್ದಿಷ್ಟವಾಗಿಯೇ ಇರಬೇಕಾಗುತ್ತದೆ. ಈ ಹೇಳಿಕೆಗಳನ್ನು ವಿಶ್ಲೇಷಿಸುವಾಗ, ಸಾಹಿತ್ಯವು “ಅವನು ಶೀಘ್ರವಾಗಿ ಗುರಿಯನ್ನು ಮುಟ್ಟಿದನು” ಎನ್ನುವ ಅರಿವನ್ನು ಪಡೆಯುತ್ತದೆ. ಅರ್ಥಶಾಸ್ತ್ರವು, ಅವನ ವೇಗದಿಂದಾಗಿ, ಇಂಧನದ ದೃಷ್ಟಿಯಿಂದ ಅವನು ಮಿತವ್ಯಯವನ್ನು ಸಾಧಿಸಿದ ಸಮಯವನ್ನು ಹೆಚ್ಚು ವ್ಯಯಿಸಿದ ಎನ್ನುವ ಅರಿವನ್ನು ಹೊಂದುತ್ತದೆ.

ಹೀಗೆ, ಆಯ್ದುಕೊಂಡ ಶಿಸ್ತುಗಳ ಪ್ರತ್ಯೇಕ ವಿಧಾನಗಳ ಪರಿಚಯ ಮತ್ತು ಪ್ರಯೋಗU ಬಗೆಗೆ ಸಂಶೋಧಕನು ಲಕ್ಷ್ಯವನ್ನು ಹರಿಸಬೇಕಾಗುತ್ತದೆ. ಇದು, ಅಂತರಶಿಸ್ತೀಯ ಅಧ್ಯಯನಗಳಿಗೆ ಬೇಕಾದ ಬೌದ್ದಿಕ ಸನ್ನದ್ಧತೆಯ ಮಾತಾಯಿತು. ಇದರೊಂದಿಗೇ ಅಂಥ ಅಧ್ಯಯನಗಳಿಗೆ ಪೂರಕವಾಗುವ ಪರಾಮರ್ಶನ ಕೃತಿ (Reference Source)ಗಳ ಪರಿಜ್ಞಾನವೂ ಆ ನೆಲೆಯ ಸಂಶೋಧಕರಿಗೆ ಇರಬೇಕಾಗುತ್ತದೆ. ಅಲ್ಲದೆ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮಾಹಿತಿ ಮೂಲಗಳನ್ನೂ ಈ ಸಂಶೋಧಕಾರರು ಶೋಧಿಸ ಬೇಕಾಗುತ್ತದೆ. ಹಾಗೆ ಸಂಗ್ರಹಿಸಿದ ಮಾಹಿತಿಗಳನ್ನು ಬೇರೆ ಬೇರೆ ವಿಧಾನ, ಮಾಧ್ಯಮಗಳ ಸಹಾಯದಿಂದ ನಿರೂಪಿಸಬೇಕಾಗುತ್ತದೆ.

ಅಂತರಶಿಸ್ತೀಯ ಅಧ್ಯಯನಗಳಿಗೆ ಅಗತ್ಯವಾಗುವ ಪರಾಮರ್ಶನ ಕೃತಿಗಳು

ಅಂತರಶಿಸ್ತೀಯ ಸಂಶೋಧನೆಗಳ ಸಂದರ್ಭಗಳಲ್ಲಿ ಪ್ರಸ್ತುತವೆನಿಸುವ ಪರಾಮರ್ಶನ ಕೃತಿಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.

ಇತ್ತೀಚೆಗೆ ಬಹು ವ್ಯಾಪಕವಾಗಿ ಬೆಳೆಯುತ್ತಿರುವ ಗ್ರಂಥ ಪ್ರಕಾರಗಳಲ್ಲಿ ಪರಾಮರ್ಶನ ಕೃತಿಗಳದೂ ಒಂದಾಗಿದೆ. ವಿಷಯವೊಂದನ್ನು ಗ್ರಹಿಸುವ ದೃಷ್ಟಿಯಿಂದ, ಇವುಗಳ ಸಹಾಯವು ಸಂಶೋಧಕರಿಗೆ ಅಗತ್ಯವಾಗುತ್ತದೆ. ಇದು ಅಧ್ಯಯನದ ಅಧಿಕೃತತೆ ವಸ್ತುನಿಷ್ಠತೆಗಳನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ. ಎಂದರೆ, ಸಂಶೋಧಕರೆಂದೂ ಸ್ವಂತದ ಅನಿಸಿಕೆ ಅಥವಾ ಪೂರ್ವಾನುಭವಗಳನ್ನು ಮಾತ್ರವೇ ಅವಲಂಬಿಸಿ ಮುಂದುವರೆಯುವಂತಿಲ್ಲ. ಪರಿಕಲ್ಪನೆ ಯೊಂದರ ಅರ್ಥವು ಕಾಲದಿಂದ ಕಾಲಕ್ಕೆ ವ್ಯತ್ಯಾಸಗೊಳ್ಳುತ್ತದೆನ್ನುವುದು ಇದಕ್ಕೆ ಒಂದು ಕಾರಣವಾಗಿದೆ. ಪ್ರತಿ ಪದದ ಅರ್ಥವೂ ಸಂದರ್ಭ ಹಾಗೂ ವಿಷಯ ಸಂವಾದಿಯಾಗಿ ಬದಲಾಗುತ್ತದೆನ್ನುವುದು ಇದಕ್ಕೆ ಇನ್ನೊಂದು ಕಾರಣವಾಗಿದೆ. ಉದಾಹರಣೆಗೆ, ‘ಕಲ್ಪನೆ’ ಎನ್ನುವ ಪದವು ಸಾಮಾನ್ಯ ಭಾಷೆಯಲ್ಲಿ ಅಭಿವ್ಯಕ್ತವಾದಾಗ ಅದು ‘ಊಹೆ’ ಎನ್ನುವ ಅರ್ಥವನ್ನು ಕೊಡುತ್ತದೆ. ಅದುವೇ ಕಾವ್ಯಮೀಮಾಂಸೆಯ ಸಂದರ್ಭದಲ್ಲಿ, ಪ್ರಾಥಮಿಕ ಸ್ತರದ ಪ್ರತಿಭೆಯೆನ್ನುವ ಅರ್ಥದಲ್ಲಿ ಪ್ರಯೋಗಿಸಲ್ಪಡುತ್ತದೆ. ಈ ವಿಶಿಷ್ಟಾರ್ಥಗಳನ್ನು ತಿಳಿದುಕೊಳ್ಳುವುದು ಅಧ್ಯಯನದ ನಿಖರತೆಯ ದೃಷ್ಟಿಯಿಂದ ತೀರಾ ಅಗತ್ಯವಾಗಿದೆ. ಈ ಪ್ರಕಾರದ ಮಾಹಿತಿಗಳು ಈಗ ವಿದ್ಯುನ್ಮಾನ ಮಾಧ್ಯಮಗಳಲ್ಲೂ ಲಭ್ಯವಾಗುತ್ತಿವೆ. ಸಂಶೋಧನೆಯ ದೃಷ್ಟಿಯಿಂದ ಮಹತ್ವದ ಪಾತ್ರಗಳನ್ನು ವಹಿಸುತ್ತವೆ.

ಗ್ರಂಥ ರೂಪಗಳಲ್ಲಿರುವ, ಪರಾಮರ್ಶನ ಕೃತಿಗಳ ಕೆಲವು ಮಾದರಿಗಳನ್ನು ಪ್ರಾತಿನಿಧಿಕ ವಾಗಿ ಇಲ್ಲಿ ಪ್ರಸ್ತಾಪಿಸಬಹುದು.

ವಿಷಯ ಕೋಶಗಳು (Subject Dictionaries)

ನಿಘಂಟುಗಳಲ್ಲಿ ಕೆಲವು ವಿಶಿಷ್ಟ ಪ್ರಕಾರಗಳಿರುತ್ತವೆ. ಇವುಗಳು ನಿರ್ದಿಷ್ಟ ವೃತ್ತಿ, ಉದ್ಯೋಗ, ಉದ್ಯಮ ಅಥವಾ ಶೈಕ್ಷಣಿಕ ಶಿಸ್ತುಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ರಚನೆ ಯಾಗಿರುತ್ತವೆ. ಅಲ್ಲದೆ, ನಿರ್ದಿಷ್ಟ ಶಿಸ್ತಿನಲ್ಲಿ ವಿಶಿಷ್ಟಾರ್ಥವನ್ನು ಪಡೆಯುವ ಪದಗಳೂ ಆಯಾ ಶಿಸ್ತಿಗೆ ಸಂಬಂಧಿಸಿದ ಪದಕೋಶಗಳಲ್ಲಿ ಸೇರ್ಪಡೆಯಾಗಿರುತ್ತವೆ. ಉದಾಹರಣೆಗೆ, ಸಾಮಾನ್ಯ (General) ಪದಕೋಶದಲ್ಲಿ “ಮಡಿ” ಎನ್ನುವ ಪದದ ಅನೇಕ ಅರ್ಥಗಳು ಇರುತ್ತವೆ. ಆದರೆ, ತೋಟಗಾರಿಕೆಯನ್ನೇ ಲಕ್ಷಿಸುವ ಪದಕೋಶದಲ್ಲಿ ಆ ಪದಕ್ಕೆ ಕೇವಲ “ಬೀಜಾವಾಪನೆಯ ಸ್ಥಳ, ಸಸ್ಯ ಮಡಿ ಎನ್ನುವ ಅರ್ಥವಷ್ಟೇ ಇರುತ್ತದೆ. ಇಂಥ ಕೋಶಗಳು ಸಂಶೋಧಕರ ಸಮಯವನ್ನು ಉಳಿಸುವುದರ ಜೊತೆಗೇ, ಅರ್ಥ ಸಂದಿಗ್ಧಗಳಿಂದ ಅವರನ್ನು ಪಾರು ಮಾಡುತ್ತವೆ. ಆಂಗ್ಲಭಾಷೆಯ ಒಂದು ಉದಾಹರಣೆಯನ್ನು ಕೊಡುವುದಾದರೆ, ಶರೀರಶಾಸ್ತ್ರದ ಪದಕೋಶದಲ್ಲಿ ‘temple’ ಪದಕ್ಕೆ ಕೇವಲ ‘ಕಣತಲೆ’ ಅಥವಾ ‘ಗಂಡಸ್ಥಳ’ವೆನ್ನುವ ಅರ್ಥಗಳಿರುತ್ತವೆ. ಇದು ತೀರಾ ಸರಳವಾದ ಉದಾಹರಣೆಯಾಗಿದೆ. ಇಂಥ ಸಂದರ್ಭಗಳಲ್ಲಿ, ಅದು ದೇವಾಲಯ ಅರ್ಥದಲ್ಲಿ ಪ್ರಯೋಗವಾಗಿದೆಯೋ, ‘ಶರೀರದ ಭಾಗ’ವೆನ್ನುವ ಅರ್ಥದಲ್ಲೋ ಎನ್ನುವ ಅನುಮಾನವನ್ನು ಇಂಥ ವಿಷಯಕೋಶಗಳು ದೂರ ಮಾಡುತ್ತವೆ. ಈ ಮಾದರಿಯ ಕೆಲವು ಉದಾಹರಣೆಗಳು ಹೀಗಿವೆ :

Dictionary of Psychology
Dictionary of Legal Terms
ವಿಮರ್ಶೆಯ ಪರಿಭಾಷೆ

ವೈದ್ಯಕೀಯ ಪದಕೋಶ
Dictionary of Indian Mythology
Biographical Dictionary
Geographical Dictionary

ಇಂಥ ಪದಕೋಶಗಳು ಅಧಿಕ ಸಂಖ್ಯೆಯಲ್ಲಿ, ವೈವಿಧ್ಯಗಳಲ್ಲಿ ಪ್ರಕಟವಾಗುತ್ತಿವೆ. ಅಂತರಶಿಸ್ತೀಯ ಅಧ್ಯಯನಗಳಲ್ಲಿ ಆಸಕ್ತರಾದವರು ಇತರರಿಗಿಂತ ಹೆಚ್ಚಾಗಿ ಇವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ವಿಶಿಷ್ಟ ಕೋಶಗಳು

ನಿಘಂಟುಗಳ ಇನ್ನೊಂದು ಪ್ರಕಾರದಲ್ಲಿ, ವಿಶಿಷ್ಟಕೋಶಗಳಿವೆ. ಇವು, ನಾನಾರ್ಥ ಪದಕೋಶ, ಪಾರಿಭಾಷಿಕ ಪದಕೋಶ, ಪುರಾಣನಾಮ ಚೂಡಾಮಣಿಯಂಥ ಸಂದರ್ಭ ಗ್ರಂಥಗಳು, ಪದಪ್ರಯೋಗಕೋಶಗಳಂಥ ವಿಭಿನ್ನ ನೆಲೆಗಳನ್ನು ಲಕ್ಷಿಸುತ್ತವೆ. ಸಂಶೋಧಕರ ಅರಿವಿನ ಪರಿಧಿಯನ್ನು ವಿಸ್ತರಿಸುವ ದೃಷ್ಟಿಯಿಂದ ಇವಕ್ಕೆ ಮಹತ್ವವಿದೆ.

ವಿಷಯ ವಿಶ್ವಕೋಶಗಳು

ನಿರ್ದಿಷ್ಟ ಪರಿಕಲ್ಪನೆಯೊಂದರ ಬಗೆಗೆ ಮೂಲಭೂತ ವಿವರಗಳನ್ನು ಕೊಡುವ ಕೆಲಸವನ್ನು ವಿಷಯ ವಿಶ್ವಕೋಶಗಳು ಮಾಡುತ್ತವೆ. ಅಪರಿಚಿತ ಪರಿಕಲ್ಪನೆಗಳನ್ನು ಸಂಶೋಧಕರ ಗ್ರಹಿಕೆಗೆ ಒಗ್ಗಿಸುವ ಕೆಲಸವನ್ನು ಇವು ಮಾಡುತ್ತವೆ. ಉದಾಹರಣೆಗೆ “ಕರ್ನಾಟಕ ವಿಷಯ ವಿಶ್ವಕೋಶ”ವು ಕರ್ನಾಟಕಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗೆಗಿನ ವಿವರಗಳನ್ನು ಕೊಡುತ್ತದೆ.

ನಕ್ಷೆಗಳು

ಬಹುಶಿಸ್ತೀಯ ಅಧ್ಯಯನಗಳನ್ನು ಕೈಗೊಳ್ಳುವ ಸಂಶೋಧಕರ ನೆರವಿಗೆ ಬರುವ ಇನ್ನೊಂದು ಪ್ರಕಾರದಲ್ಲಿ ಅನ್ಯಾನ್ಯ ನಕ್ಷೆಗಳು ಬರುತ್ತವೆ. ವಿವಿಧ ಭೂಪಟಗಳು (ರಾಜಕೀಯ, ಖನಿಜ, ಲವಣ, ಅರಣ್ಯ, ಸಂಪರ್ಕ ವ್ಯವಸ್ಥೆ ಇತ್ಯಾದಿಗಳನ್ನು ಸೂಚಿಸುವಂಥವು) ಜನಸಂಖ್ಯಾ ಸೂಚಿಗಳ ಮಾದರಿಗಳ (model) ಮುಂತಾದವುಗಳೆಲ್ಲ ಈ ವಿಭಾಗದಲ್ಲಿ ಬರುತ್ತವೆ.

ಸರಕಾರೀ ಪ್ರಕಟಣೆಗಳು

ಸರಕಾರೀ ಸಂಸ್ಥೆಗಳೂ, ವಿಭಾಗಗಳೂ ನಿಯತವಾಗಿ ತಮಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸುತ್ತವೆ. ಆಯೋಗಗಳು ವರದಿಗಳು, ರಾಜ್ಯಪತ್ರಗಳು, ಶಾಸಕಾಂಗದ ನಡೆವಳಿಕೆಗಳೆಲ್ಲ ಈ ವರ್ಗದಲ್ಲಿ ಬರುತ್ತವೆ. ಇವುಗಳಿಗೆಲ್ಲ ಸಂಶೋಧಕರ ದೃಷ್ಟಿಯಿಂದ ಮೌಲ್ಯವಿದೆ.

ಇವಿಷ್ಟೇ ಪರಾಮರ್ಶನ ಗ್ರಂಥಗಳು ಸಂಶೋಧಕರಿಗೆ ಅಗತ್ಯವಾದವುಗಳೆಂದು ತಿಳಿಯ ಬಾರದು ಇಲ್ಲಿ. ಸಮಗ್ರತ್ವವನ್ನು ಸಾಧಿಸಲು ಸಾಧ್ಯವಿಲ್ಲ. ಮಾಹಿತಿ ಕ್ಷೇತ್ರದಲ್ಲಿ ನಡೆಯುತ್ತಿ ರುವ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ ಹೊಸ ಕೃತಿಗಳೂ, ಪ್ರಕಾರಗಳೂ ಬೆಳಕು ಕಾಣುತ್ತಲೇ ಇವೆ. ಈ ಮಾದರಿಯ ಕೃತಿಗಳನ್ನು ಉದಾಹರಣೆಗಳಾಗಿ ಪರಿಚಯ ಮಾಡಿಕೊಡಬಹುದೇ ಹೊರತಾಗಿ, ಸಾಮಾನ್ಯ(General)ವೂ, ಸಂಪೂರ್ಣವೂ ಆದ ಪಟ್ಟಿ ಯನ್ನು ಕೊಡುವುದು ಕಷ್ಟ. ಮಾತ್ರವಲ್ಲದೆ, ಈ ನೆಲೆಯ ಆಯ್ಕೆಗಳೂ, ನಿರ್ಧಾರಗಳೂ ನಿರ್ದಿಷ್ಟ ಅಧ್ಯಯನದ ಸಂದರ್ಭದಲ್ಲೇ ನಡೆಯಬೇಕಾಗುತ್ತದೆ. ಒಟ್ಟಿನಲ್ಲಿ ಎಲ್ಲ ಸಂಶೋಧಕರಿಗೆ, ಅದರಲ್ಲೂ ವಿಶೇಷವಾಗಿ ಅಂತರಶಿಸ್ತೀಯ ಸಂಶೋಧಕರಿಗೆ ಈ ಕೃತಿಗಳ ಪರಿಚಯ ಪರಿಜ್ಞಾನವಿರಬೇಕಾದುದು ಅಗತ್ಯ.

ಅಂತರಶಿಸ್ತೀಯ ಅಧ್ಯಯನಗಳಲ್ಲಿ ಬಳಕೆಯಾಗುವ ಮಾಹಿತಿಮೂಲ (Source of Information)ಗಳ ಸ್ವರೂಪಗಳು

ಮಾಹಿತಿಗಳು ಎಲ್ಲ ರೀತಿಯ ಸಂಶೋಧನೆಗಳ ಮೂಲದ್ರವ್ಯಗಳಾಗಿವೆ. ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ವರ್ಗೀಕರಿಸಿ, ವಿಶ್ಲೇಷಿಸುವ ಮೂಲಕವೇ ಸಂಶೋಧಕರು ನಿರ್ದಿಷ್ಟ ನಿರ್ಧಾರಗಳಿಗೆ ತಲುಪುತ್ತಾರೆ. ಹೆಚ್ಚು ಹೆಚ್ಚು ಮಾಹಿತಿ ಮೂಲಗಳನ್ನು ಅಥವಾ ಆಕರಗಳನ್ನು ಶೋಧಿಸಿದಂತೆಲ್ಲ ಸಂಶೋಧನೆಯ ತೂಕ ಮಹತ್ವಗಳು ಹೆಚ್ಚುತ್ತವೆ. ಇದರಿಂದ, ಸಂಶೋಧನ ವಸ್ತುವಿನ ಎಲ್ಲ ಮಗ್ಗುಲುಗಳನ್ನು ಗಮನಿಸುವುದು ಸಾಧ್ಯವಾಗುತ್ತದೆ.

ಈ ಮಾಹಿತಿಗಳು ಅನೇಕ ಮೂಲಗಳಲ್ಲಿ ಹಂಚಿಹೋಗಿರುತ್ತವೆ. ಅವುಗಳ ಪರಿಮಾಣ ಹಾಗೂ ಸ್ವರೂಪಗಳೂ ವೈವಿಧ್ಯಮಯವಾಗಿವೆ. ಆ ನೆಲೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.

. ಪಠ್ಯಮೂಲ ಮಾಹಿತಿಗಳು

ಅಕ್ಷರ ಮಾಧ್ಯಮದಲ್ಲಿ ದಾಖಲಿತವಾದ ಮಾಹಿತಿಗಳನ್ನು ಒಟ್ಟಾಗಿ, “ಪಠ್ಯಮೂಲ ಮಾಹಿತಿಗಳು” ಎಂದು ಕರೆಯಬಹುದು. ಸ್ಥೂಲವಾಗಿ ಹೇಳುವುದಾದರೆ, ಇವುಗಳಲ್ಲಿ ‘ಪ್ರಕಟಿತ’ ಮತ್ತು ‘ಅಪ್ರಕಟಿತ’ ಎನ್ನುವ ಎರಡು ವರ್ಗಗಳಿವೆ ಪ್ರಕಟಿತ ವಿಭಾಗದಲ್ಲಿ, ಗ್ರಂಥಗಳು, ನಿಯತಕಾಲಿಕೆಗಳು ಮತ್ತು ಗ್ರಂಥ ಹೊರತಾದ ಮುದ್ರಿತ ಸಾಹಿತ್ಯಗಳು ಸೇರ್ಪಡೆಯಾಗುತ್ತವೆ. ಗ್ರಂಥಗಳೆನ್ನುವಾಗ, ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳು, ಸಂದರ್ಭ ಗ್ರಂಥಗಳು, ನಿಯತಕಾಲಿಕೆಗಳು ಪರಿಗಣಿತವಾಗುತ್ತವೆ. ನಿಯತಕಾಲಿಕೆಗಳಲ್ಲೂ ಸಾಮಾನ್ಯ ನಿಯತಕಾಲಿಕೆಗಳು, ಸಂಶೋಧನೆಗಳ ಪ್ರಸಾರ ಪರಿಚಯಗಳಿಗೇ ಮೀಸಲಾದವುಗಳು ಮತ್ತು ವಿಶಿಷ್ಟ ವಿಷಯಕವಾದವುಗಳೇ ಮುಂತಾದ ಪ್ರಕಾರದವುಗಳಿವೆ. ಉದಾಹರಣೆಗೆ, ಸಂಶೋಧನ ವ್ಯಾಸಂಗವೆನ್ನುವ ಮಾಸಪತ್ರಿಕೆಯು ಸಂಶೋಧನೆಯನ್ನೇ ಪ್ರಧಾನವಾಗಿ ಲಕ್ಷಿಸುತ್ತದೆ. ಹೀಗೇ Journal of Medieval Sciencesನಂಥ ವಿಶಿಷ್ಟ ವಿಷಯಕವಾದ ನಿಯತಕಾಲಿಕೆಗಳೂ ಲಭ್ಯವಾಗಿವೆ. ಪ್ರಕಟಿತವಾದ ಪಠ್ಯೇತರ ಮಾಹಿತಿ ಮೂಲಗಳಲ್ಲಿ ಕರಪತ್ರಗಳು, ಘೋಷಣಾಪತ್ರಗಳು, ಕಾರ್ಯಕ್ರಮಪಟ್ಟಿಗಳು, ವ್ಯಕ್ತಿ ವಿವರ (Bio-data)ಗಳು ಸೇರುತ್ತವೆ. ಸಂಶೋಧಕರ ದೃಷ್ಟಿಗಳಿಂದ ಇವೆಲ್ಲವುಗಳಿಗೂ ಮಹತ್ವವಿದೆ.

ಪಠ್ಯ ಮೂಲವಾದ ಅಪ್ರಕಟಿತ ಮಾಹಿತಿಗಳು ತುಂಬ ವಿಸ್ತೃತವಾಗಿದೆ. ಇವುಗಳಲ್ಲಿ ಸಾಮಾನ್ಯ (General) ಮತ್ತು ಗೋಪ್ಯ (Confidental) ಎನ್ನುವ ಎರಡು ಪ್ರಮುಖ ವಿಭಾಗಗಳಿವೆ. ಅಪ್ರಕಟಿತ ಸಾಮಾನ್ಯ ಮಾಹಿತಿ ಮೂಲಗಳಲ್ಲಿ ಮಹಾಪ್ರಬಂಧಗಳು, ವಿಚಾರ ಸಂಕಿರಣಗಳಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ನ್ಯಾಯಾಲಯಗಳ ತೀರ್ಪುಗಳು. ವರದಿಗಳು ಮುಂತಾದವುಗಳು ಬರುತ್ತವೆ. ರಹಸ್ಯ ದಾಖಲೆಗಳು ಸರಕಾರೀ, ಸಾರ್ವಜನಿಕ ಮತ್ತು ವೈಯಕ್ತಿಕ ನೆಲೆಗಳಲ್ಲಿ ಹಂಚಿಹೋಗುತ್ತವೆ. ಇವು ಸಾಮಾನ್ಯವಾಗಿ, ಸರಳವಾಗಿ, ಉಪಯೋಗಗಳಿಗೆ ಸಿಗುವುದಿಲ್ಲ. ಯುಕ್ತವಾದ ಪರವಾನಿಗೆಗಳೊಂದಿಗೆ ಇವುಗಳನ್ನು ಬಳಸಬೇಕಾಗುತ್ತದೆ. ಈ ಮಾದರಿಯ ಮಾಹಿತಿಗಳನ್ನು ಬೇರೆ ಮೂಲಗಳಿಂದ ಸಂಗ್ರಹಿ ಸುವುದು ಕಷ್ಟ. ಹಾಗಾಗಿಯೇ ಇವುಗಳ ಉಪಯುಕ್ತತೆಗಳೂ ಸ್ಪಷ್ಟವಾಗಿಯೇ ಇವೆ.

. ವ್ಯಕ್ತಿ ಮೂಲ ಮಾಹಿತಿಗಳು

ಸಂಶೋಧಕರಿಗೆ ವ್ಯಕ್ತಿಗಳಿಂದ ದೊರೆಯುವ ಮಾಹಿತಿಗಳು ತುಂಬ ಮೌಲಿಕವೆನಿಸುತ್ತವೆ. ಸಾಮಾನ್ಯವಾಗಿ, ಸಂದರ್ಶನ ಅಥವಾ ವಕ್ತೃಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಗಳನ್ನು ಮಾತ್ರವೇ ನಮ್ಮ ಸಂಶೋಧಕರು ಬಳಸುತ್ತಿದ್ದಾರೆ. ವಾಸ್ತವವಾಗಿ, ವ್ಯಕ್ತಿಮೂಲ ಮಾಹಿತಿಗಳು ಮೌಖಿಕ ಮತ್ತು ದಾಖಲಿತ ವರ್ಗಗಳಾಗಿ ವಿಭಜನೆಗೊಳ್ಳುತ್ತವೆ. ಮೌಖಿಕ ಮಾಹಿತಿಗಳು ಮತ್ತೆ ಭಾಷಿಕ ಮತ್ತು ಭಾಷೇತರ ಮಾಹಿತಿಗಳಾಗಿ ಮರು ವರ್ಗೀಕರಣಗೊಳ್ಳುತ್ತವೆ. ವ್ಯಕ್ತಿ ಮೂಲವಾದ ಭಾಷಿಕ ಮಾಹಿತಿಗಳಲ್ಲಿ ಸಂದರ್ಶನ, ಉಪನ್ಯಾಸಗಳ ಸಂದರ್ಭಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳು. ಚರ್ಚಾಗೋಷ್ಠಿಯಲ್ಲಿ ಅಭಿವ್ಯಕ್ತಿ ಪಡೆಯುವ ಅನಿಸಿಕೆಗಳು, ಅನೌಪಚಾರಿಕ ವಿಚಾರ ವಿನಿಮಯಗಳ ಸಂದರ್ಭಗಳಲ್ಲಿ ಸ್ಫುಟವಾಗುವ ನಿಲುವುಗಳೆಲ್ಲವೂ ಸೇರುತ್ತವೆ. ಈ ಮಾಹಿತಿಗಳು ವ್ಯವಸ್ಥಿತವಾಗಿ ದಾಖಲೆಗೊಳ್ಳುವುದಿಲ್ಲವೆನ್ನುವ ಅಂಶವು ಇಲ್ಲಿ ಗಮನಾರ್ಹವಾಗುತ್ತದೆ. ವ್ಯಕ್ತಿಮೂಲವಾದ ಭಾಷೇತರ ಮಾಹಿತಿಗಳಲ್ಲಿ ಮುಖಮುದ್ರೆ (ಪ್ರದರ್ಶನ ಕಲೆಗಳ ಸಂದರ್ಭಗಳಲ್ಲಿ) ವರ್ಣವಿನ್ಯಾಸ (ಸೃಜನಶೀಲ ಹಾಗೂ ಪ್ರದರ್ಶನ ಕಲೆ, ನಾಗಮಂಡಲದಂಥ ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ) ಸಂಜ್ಞೆ, ಸಂಕೇತಗಳು, ವೇಷಭೂಷಣ ಕ್ರಮಗಳು, ವಾದನ ವಿಧಾನಗಳೆಲ್ಲವೂ ಸೇರುತ್ತವೆ.

“ವ್ಯಕ್ತಿಮೂಲವಾದ, ಅನ್ಯೋನ್ಯ ಮಾಧ್ಯಮಗಳಲ್ಲಿ ದಾಖಲಿತವಾದ ಮಾಹಿತಿಗಳೂ” ಈ ಸಂದರ್ಭದಲ್ಲಿ ಮುಖ್ಯವಾಗುತ್ತವೆ. ಇವುಗಳು ಕೂಡಾ ಭಾಷಿಕ ಮತ್ತು ಭಾಷೇತರ ನೆಲೆ ಗಳಲ್ಲಿ ವ್ಯಾಪಿಸಿಕೊಳ್ಳುತ್ತದೆ. ಭಾಷಿಕ ವರ್ಗದಲ್ಲಿ ವೈಯಕ್ತಿಕ ಪತ್ರಗಳು, ದಿನಚರಿಗಳು, ಪ್ರವಾಸ ದಾಖಲೆಗಳು, ಲೆಕ್ಕಪತ್ರಗಳ ವಿವರಗಳು ಸೇರುತ್ತವೆ ಮಾತ್ರವಲ್ಲದೆ, ಲೇಖನಗಳ ಕರಡುಗಳು, ಕಾನೂನು ದಾಖಲೆಗಳು ಕೂಡಾ ಎಡೆ ಪಡೆಯುತ್ತವೆ. ಈ ಪ್ರಕಾರದ ಭಾಷೇತರ ಮಾಹಿತಿಗಳ ವರ್ಗದಲ್ಲಿ, ಕಟ್ಟಡ ನಿರ್ಮಾಣಗಳ ವಿವರಗಳು, ಭಾವಚಿತ್ರಗಳು, ಕಲಾ ಅಭಿವ್ಯಕ್ತಿಗಳು (ಚಿತ್ರ, ಶಿಲ್ಪ ಮುಂತಾದ) ಪ್ರತಿಕೃತಿಗಳು (models) ಸೇರುತ್ತವೆ. ಇವೆಲ್ಲವುಗಳ ಸಂಶೋಧನ ಮೌಲ್ಯಗಳನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

. ಸಂಸ್ಥಾಮೂಲ ಮಾಹಿತಿಗಳು

ಅನ್ಯೋನ್ಯ ಸಂಘಸಂಸ್ಥೆಗಳಲ್ಲಿ ದೊರೆಯುವ ಮಾಹಿತಿಗಳಿಗೆ ಚಾರಿತಿಕ ದೃಷ್ಟಿಯಿಂದ, ಅಂಕಿಅಂಶಗಳ ದೃಷ್ಟಿಯಿಂದ ತುಂಬ ಬೆಲೆಯಿದೆ. ಸಾಮಾನ್ಯವಾಗಿ, ಇವುಗಳು ಸಂಶೋಧಕರ ಉಪಯೋಗಗಳಿಗೆ ಮುಕ್ತವಾಗಿ ಸಿಗುತ್ತವೆ. ಕನ್ನಡ ಸಂಘಗಳಂಥ ಸಂಶೋಧಕರ ಉಪಯೋಗಗಳಿಗೆ ಮುಕ್ತವಾಗಿ ಸಿಗುತ್ತವೆ. ಕನ್ನಡ ಸಂಘಗಳಂಥ ಭಾಷಾ ಸಂಬಂಧಿಯಾದ ಸಂಘಟನೆಗಳು, ಮಠ, ಮಸೀದಿ, ಚರ್ಚು, ಗುರುದ್ವಾರಗಳಂಥ ಧಾರ್ಮಿಕ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸರಕಾರಿ ಮತ್ತು ಅರೆ ಸರಕಾರಿ (ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ ಮಾದರಿಯವುಗಳು) ಮತ್ತು ಯುವಕ ಸಂಘ, ಮಹಿಳಾ ಮಂಡಳಿಗಳಂಥ ಸೇವಾಸಾಂಸ್ಥೆಗಳು ಈ ವರ್ಗದಲ್ಲಿ ಸೇರುತ್ತವೆ. ಇವುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವುದು ಸಂಶೋಧಕರ ಹೊಣೆಯಾಗಿದೆ.

. ವಸ್ತುಮೂಲ ಮಾಹಿತಿಗಳು

ಅಂತರಶಿಸ್ತೀಯ ಸಂಶೋಧನೆಗಳಿಗೆ ಹೊರಡುವವರು ವಿವಿಧ ವಸ್ತು(Object)ಗಳನ್ನೂ ಮಾಹಿತಿ ಮೂಲಗಳಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಈ ವರ್ಗದಲ್ಲಿ ವಾಸ್ತು, ಶಾಸನ (ಅಪ್ರಕಟಿತ) ಆಭರಣ, ನಾಣ್ಯ, ಆಯುಧ, ಅಲಂಕಾರ ಸಾಮಗ್ರಿ, ಪೀಠೋಪಕರಣ, ವೃತ್ತಿ ಸಂಬಂಧಿಯಾದ ಉಪಕರಣಗಳು, ನಿತ್ಯ ಬಳಕೆಯ ವಸ್ತುಗಳೆಲ್ಲವೂ ಸೇರ್ಪಡೆಯಾಗುತ್ತವೆ.

. ಸಂದರ್ಭಮೂಲ ಮಾಹಿತಿಗಳು

ಅಂತರಶಿಸ್ತೀಯ ಅಧ್ಯಯನಗಳಿಗೆ ಕ್ಷೇತ್ರಕಾರ್ಯವು ಸಹಾಯಕವಾಗುತ್ತದೆ. ಆ ಮೂಲಕ ಸಿಗುವ ಮಾಹಿತಿಗಳೂ ವಿಪುಲವಾಗಿವೆ. ಬಲಿ, ಜಾತ್ರೆ, ಉತ್ಸವ, ಮೊಹರಂ, ಉರುಸು ಮುಂತಾದ ಧಾರ್ಮಿಕ ಸಂದರ್ಭಗಳು, ಕೋಳಿ ಅಂಕ, ಕಂಬಳ ಇತ್ಯಾದಿ ಸಾಮಾಜಿಕ ವಿನೋದ ಕೂಟಗಳು, ಮದುವೆ, ನಾಮಕರಣ, ಉತ್ತರಕ್ರಿಯೆ ಮುಂತಾದ ಜೀವನಾವರ್ತನ ಆಚರಣೆಗಳು, ಯಕ್ಷಗಾನ ಬಯಲಾಟಗಳಂಥ ಜಾನಪದ ಸಾಂಸ್ಕೃತಿಕ ಪ್ರದರ್ಶನ ಕಲೆಗಳು ಇಂಥ ಮಾಹಿತಿಗಳ ಮೂಲಗಳಾಗಿವೆ. ಇವುಗಳು ಅನೇಕ ದೃಷ್ಟಿಗಳಿಂದ ಸಂಶೋಧಕರ ನೆರವಿಗೆ ಬರುತ್ತವೆ.

. ಮಾಧ್ಯಮ ಮೂಲ ಮಾಹಿತಿಗಳು

ಸಂಶೋಧಕರು ಯಾವುದೇ ಮಾಹಿತಿ ಮೂಲವನ್ನೂ ನಗಣ್ಯವೆಂದು ನಿರ್ಲಕ್ಷಿಸುವಂತಿಲ್ಲ. ದಿನಪತ್ರಿಕೆ, ಚಲನಚಿತ್ರ, ಸಾರ್ವಜನಿಕ ಸಭೆಗಳು, ಆಕಾಶವಾಣಿ, ದೂರದರ್ಶನಗಳೆಲ್ಲವೂ ಮಹತ್ವದ ಮಾಹಿತಿಗಳನ್ನು ಪ್ರಸಾರ ಮಾಡುತ್ತಿರುತ್ತವೆ. ಆಧುನಿಕ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಮಹತ್ವವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕಾಗಿಲ್ಲ. ಈ ಮಾಧ್ಯಮಗಳು ಕೆಲವೊಮ್ಮೆ ಅತ್ಯಂತ ವಿಶಿಷ್ಟ ಮತ್ತು ಸೂಕ್ಷ್ಮವಾದ ಮಾಹಿತಿಗಳನ್ನೂ ನೀಡುತ್ತವೆ. ತಮ್ಮ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ಸಂಶೋಧಕರು ಇವುಗಳನ್ನು ಬಳಸಿಕೊಳ್ಳ ಬೇಕಾಗುತ್ತದೆ.

ಮಾಹಿತಿ ಮಂಡನ ಕ್ರಮಗಳು

ಅಂತರಶಿಸ್ತೀಯ ಅಧ್ಯಯನಗಳ ಸ್ವರೂಪಗಳು ವಿಶಿಷ್ಟವಾಗಿರುತ್ತವೆನ್ನುವುದನ್ನು ಈಗಾಗಲೇ ಗುರುತಿಸಿದ್ದೇವೆ. ಈ ಅಂಶಗಳಿಗೆ ಅನುಗುಣವಾಗಿ, ಸಂಗ್ರಹವಾದ ಮಾಹಿತಿ ಗಳನ್ನು ಮಂಡಿಸುವ ಕ್ರಮಗಳೂ ಅಲ್ಲಿ ಭಿನ್ನವಾಗಿರುತ್ತವೆ. ಅಧಿಕೃತತೆ, ಸಂಕ್ಷಿಪ್ತತೆ, ನಿಖರತೆ, ನಿರ್ದಿಷ್ಟತೆ, ಸಂವಹನಾರ್ಹತೆಗಳನ್ನು ಗಳಿಸಿಕೊಳ್ಳುವ ದೃಷ್ಟಿಯಿಂದ ಈ ಕ್ರಮಗಳು ಅನಿವಾರ್ಯವಾಗಿವೆ. ಆದುದರಿಂದ, ಶಾಬ್ದಿಕ ವಿವರಣೆಗಳಷ್ಟೇ ತಖ್ತೆ, ಕೋಷ್ಟಕ, ನಕ್ಷೆ, ಮಾದರಿಗಳು, (Specimen) ಜ್ಯಾಮಿತೀಯ ಆಕೃತಿಗಳು, (Chart) ಇಲ್ಲಿ ಬಳಕೆಯಾಗಬೇಕಾ ಗುತ್ತವೆ. ಇಂಥ ಪ್ರಯೋಗಗಳು ಸಂಶೋಧನ ಬರೆಹಗಳಿಗೆ ಹೊಸತನಗಳನ್ನು ಕಲ್ಪಿಸುವ ದೃಷ್ಟಿಯಿಂದಲೂ ಉಪಯುಕ್ತವೆನಿಸುತ್ತವೆ.

ಇಲ್ಲಿಯವರೆಗಿನ ಚರ್ಚೆಯಿಂದ, ಅಂತರಶಿಸ್ತೀಯ ಅಥವಾ ಬಹುಶಿಸ್ತೀಯ ಸಂಶೋಧನೆಯ ಪರಿಕಲ್ಪನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆನ್ನುವುದು ಸ್ಪಷ್ಟವಾಗುತ್ತದೆ. ಎಂದರೆ, ಎರಡು ಅಥವಾ ಹೆಚ್ಚು ಶಿಸ್ತುಗಳ ಸಂಯುಕ್ತ ಮಂಥನ ಕ್ರಮದಿಂದ ಹುಟ್ಟುವ ಸತ್ಯಗಳ ಅನ್ವೇಷಣಾ ವಿಧಾನಗಳಾಗಿ ಅವುಗಳು ಪ್ರಚಲಿತವಾಗ ಬೇಕಾಗಿವೆ. ಇದಕ್ಕೆ ಹಿನ್ನೆಲೆಯಾಗಿ, ಪ್ರತಿ ಅಧ್ಯಯನವು ಕೂಡಾ, ವ್ಯಾಪಕಾರ್ಥದಲ್ಲಿ ಅಂತರಶಿಸ್ತೀಯವಾದುದೇ ಆಗಿರುತ್ತದೆನ್ನುವುದನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಅಂತರಶಿಸ್ತೀಯ ಅಧ್ಯಯನಗಳ ಚಿಂತನಕ್ರಮಗಳ ಒಂದು ಮಾದರಿ

ಅಂತರಶಿಸ್ತೀಯ ಅಧ್ಯಯನಗಳ ಚಿಂತನಕ್ರಮಗಳು ಸಾಂಪ್ರದಾಯಿಕ ಜಾಡಿನಿಂದಾಚೆಗೆ ಸರಿಯುತ್ತವೆ. ಪರಂಪರೆಯ ಎಲ್ಲ ಸತ್ವಗಳನ್ನು ಸ್ವೀಕರಿಸಿ, ಅದನ್ನು ಸಾಮಯಿಕಗೊಳಿಸುವ, ಅನ್ವಯಿಕ ಪ್ರಸ್ತುತತೆಯನ್ನು ಕಲ್ಪಿಸುವ ಪ್ರಯತ್ನಗಳನ್ನು ಅಲ್ಲಿ ಕಾಣುತ್ತೇವೆ. ಈ ಸಂದರ್ಭದಲ್ಲಿ, ‘ಸಂಸ್ಕೃತಿ’ಯನ್ನು ಒಂದು ಪ್ರತೀಕವಾಗಿ ಇಟ್ಟುಕೊಂಡು, ಈ ನೆಲೆಗಳನ್ನು ಸ್ಥೂಲವಾಗಿ ಪರಿಶೀಲಿಸಬಹುದು.

ವಾಸ್ತವವಾಗಿ, ಸಂಸ್ಕೃತಿ ಮತ್ತು ಸಾಹಿತ್ಯಗಳ ಮಧ್ಯೆ ಅನ್ಯೋನ್ಯವಾದ ಸಂಬಂಧಗಳಿವೆ. ಸಾಹಿತ್ಯವು ಸಂಸ್ಕೃತಿಯ ಶಿಶುವೂ ಹೌದು ಅದನ್ನು ನಿಯಂತ್ರಿಸುವ ಶಕ್ತಿಯೂ ಹೌದು. ಈ ಸೂಕ್ಷ್ಮಗಳನ್ನು ಅರ್ಥೈಸಿಕೊಂಡೇ ಇಂಥ ಅಧ್ಯಯನಗಳಿಗೆ ತೊಡಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಹಲವು ಅಂಶಗಳಿವೆ; ನಿವಾರಿಸಿಕೊಳ್ಳಬೇಕಾದ ಕೆಲವು ಸಂದಿಗ್ಧಗಳೂ ಇವೆ.

೧. ಸಂಸ್ಕೃತಿ ಎಂದಾಗ ಒಂದು ಪ್ರದೇಶ ಅಥವಾ ಸಮಾಜದ ಆಚಾರ, ವಿಚಾರ, ನಂಬಿಕೆ, ಆಹಾರ, ವಿಹಾರ ಮುಂತಾದ ಬಾಹ್ಯ ಸಾಂಸ್ಕೃತಿಕಾಂಶಗಳನ್ನು ಮಾತ್ರವೇ ಲಕ್ಷಿಸುವುದು ನಮ್ಮ ಸಂಶೋಧಕರಿಗೆ ರೂಢಿಯೇ ಆಗಿದೆ. ಸಂಸ್ಕೃತಿ ಶಾಸ್ತ್ರವನ್ನು ಒಂದು ಪ್ರತ್ಯೇಕ ಶಿಸ್ತಾಗಿ ಲಕ್ಷಿಸುವ ಉಪಕ್ರಮವು ಸದ್ಯಕಾಲೀನ ಅಗತ್ಯವೇ ಆಗಿದೆ. ಆ ಶಾಸ್ತ್ರದ ಪರಿಕಲ್ಪನೆಗಳಾದ, ಸಾಂಸ್ಕೃತಿಕ ಸಂವಹನ ಸಂವಾದ; ಸಾಂಸ್ಕೃತಿಕ ಶೈಥಿಲ್ಯ; ಜಾಗತಿಕ ಸಂಸ್ಕೃತಿ-ಪ್ರಾದೇಶಿಕ ಸಂಸ್ಕೃತಿಗಳ ಬಾಂಧವ್ಯ; ಸಾಂಸ್ಕೃತಿಕ ಚರಿತ್ರೆಗಳ ಅಭ್ಯಾಸ, ಅಸ್ಮಿತೆಗಳ ಅಸ್ತಿತ್ವಗಳೆಲ್ಲವೂ ಇಲ್ಲಿ ಪ್ರಸ್ತುತವಾಗುತ್ತವೆ. ಈ ತತ್ವಪ್ರಣಾಳಿಗಳ ಸಮರ್ಪಕವಾದ, ಆನ್ವಯಿಕ ಮುಖಗಳ ಅನ್ವೇಷಣೆಯು ಇಲ್ಲಿ ಮುನ್ನೆಲೆಗೆ ಬರಬೇಕಾಗುತ್ತದೆ.

೨. ಸಾಹಿತ್ಯವನ್ನು ಒಂದು ಮಾಧ್ಯಮವಾಗಿಟ್ಟುಕೊಂಡು, ಅಲ್ಲಿ ವ್ಯಕ್ತಿವಾಗುವ ಸಾಂಸ್ಕೃತಿಕ ವಿನ್ಯಾಸಗಳನ್ನು ಸ್ಪಷ್ಟಪಡಿಸಿಕೊಳ್ಳುವುದು, ಇಂಥ ಅಧ್ಯಯನಗಳ ಒಂದು ವಿಧಾನ ಮಾತ್ರವಾಗಿದೆ. ಉದಾಹರಣೆಗೆ, ಸಮಾಜವೊಂದರಲ್ಲಿ ಕಂಡುಬರುವ ಸಾಂಸ್ಕೃತಿಕ ಜ್ಞಾನ ಮೀಮಾಂಸೆಯನ್ನು ಗ್ರಹಿಸುವ ಕ್ರಮಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಸ್ಥೂಲ ನೆಲೆಯಲ್ಲಿ, ಒಂದು ಸಂಸ್ಕೃತಿಯೊಳಗೆ ನಡೆಯುವ ಮೌಲ್ಯ ಸಂಘರ್ಷಗಳನ್ನು ನಮ್ಮ ಸಾಹಿತಿಗಳು ಅನನ್ಯವಾಗಿ ಹಿಡಿದಿಟ್ಟಿದ್ದಾರೆ. ಅದೇ ಮಾತನ್ನು ಮೌಲ್ಯ ನಿರ್ಣಯದ ಬಗೆಗೆ ಹೇಳುವುದು ಕಷ್ಟವೇ ಆಗುತ್ತದೆ. ಕನ್ನಡ ಸಾಹಿತ್ಯವು ಈ ಕೊರತೆಗಳನ್ನು ತುಂಬಬಹುದಾದ ಅನ್ಯೋನ್ಯ ಸಾಧ್ಯತೆಗಳನ್ನು ಇಲ್ಲಿ ಅವಲೋಕಿಸಬೇಕಾಗುತ್ತದೆ.

೩. ಕನ್ನಡ ಸಾಹಿತ್ಯದ ಆಕೃತಿ (Form)ಯೊಳಗೆ ನಡೆದ ಸಂಸ್ಕೃತಿಯ ಬಗೆಗಿನ ಚಿಂತನೆಗಳು, ಬರೆಹಗಳು (ಉದಾ:- ಡಿ.ವಿ.ಜಿ.ಯವರ ‘ಸಂಸ್ಕೃತಿ’ ಮುಳಿಯ ತಿಮ್ಮಪ್ಪಯ್ಯ ನವರ ‘ಸಂಸ್ಕೃತಿ’ ಅಥವಾ ಶಿವರಾಮ ಕಾರಂತರ, ದೇವುಡು, ಸೇಡಿಯಾಪು, ಶಂಬಾ ಜೋಶಿ ಮುಂತಾದವರ ಸಂಸ್ಕೃತಿಯ ಬಗೆಗಿನ ಒಳನೋಟಗಳು ಇಂಥ ಅಧ್ಯಯನಗಳ ಭಾಗಗಳಾಗ ಬೇಕಾಗಿವೆ.

೪. ಸಮುದಾಯದ ಸಾಂಸ್ಕೃತಿಕ ಅಗತ್ಯಗಳಿಗೆ ಅನುಗುಣವಾಗಿ ಸಾಹಿತ್ಯದ ರೂಪ ಆಶಯಗಳು ಬದಲಾಗುವ ನಮ್ಮ ಸಂಶೋಧಕರ ಲಕ್ಷ್ಯಕ್ಕೆ ಬರಬೇಕಾಗಿದೆ. ಉದಾಹರಣೆಗೆ ವಚನ ಸಾಹಿತ್ಯವು, ಶಿವಶರಣರ ಚಳವಳಿಯನ್ನು ಹುಟ್ಟುಹಾಕಲಿಲ್ಲ. ಬದಲಿಗೆ, ಆ ಚಳವಳಿಯ ಉತ್ಪತ್ತಿಯಾಗಿ ವಚನ ಸಾಹಿತ್ಯವು ಅಸ್ತಿತ್ವಕ್ಕೆ ಬಂತು. ಈ ಸಾಂಸ್ಕೃತಿಕ ನಿರೀಕ್ಷೆ ಅಥವಾ ಬೇಡಿಕೆಗಳ ನಿಷ್ಕರ್ಷೆಯು ಇಂಥ ಅಧ್ಯಯನಗಳಿಗೆ ಹೆಚ್ಚಿನ ಕಸುವನ್ನು ಒದಗಿಸುತ್ತದೆ.

೫. ‘ನಿರ್ದಿಷ್ಟ ಸಾಹಿತ್ಯದಲ್ಲಿ ಸಂಸ್ಕೃತಿ’ ಎಂದಾಕ್ಷಣ ಸಾಹಿತ್ಯಿಕ ಅಧ್ಯಯನವನ್ನು ಅಂಚಿಗೆ ಸರಿಸಬೇಕಾಗಿಲ್ಲ. ಹಾಗೆ ನಡೆದ ಅಧ್ಯಯನಗಳು ‘ಅಂತರಶಿಸ್ತೀಯ’ ಸಂಜ್ಞೆಗೆ ಅರ್ಹವಾಗುವುದೂ ಇಲ್ಲ. ನಿರ್ದಿಷ್ಟ ಕೃತಿಯೊಂದರಲ್ಲಿ ಇಷ್ಟು ಪ್ರತಿಶತ ಅಥವಾ ಇಂತಿಂಥ ಸಾಂಸ್ಕೃತಿಕ ಅಂಶಗಳಿವೆ ಎಂದು ಉಲ್ಲೇಖಿಸಿದ ಮಾತ್ರಕ್ಕೆ ಸಂಶೋಧಕರು ಏನೂ ಹೇಳಿದಂತಾಗುವುದಿಲ್ಲ. ವಾಸ್ತವವಾಗಿ, ಸಾಹಿತ್ಯವು ಒಂದು ನೆಲದ ಸಂಸ್ಕೃತಿಯೊಂದಿಗೆ ಸಂವಾದಕ್ಕೆ, ತಿಕ್ಕಾಟಕ್ಕೆ, ವಾಗ್ವಾದಕ್ಕೆ, ಚರ್ಚೆಗೆ ಇಳಿದಾಗ ಉತ್ಪನ್ನವಾಗುವ ಸತ್ಯಗಳ ಶೋಧನೆಯೇ ಇಲ್ಲಿಯ ಗುರಿಯಾಗಬೇಕು. ಹಾಗಾದಾಗ ಮಾತ್ರವೇ ಇಂಥ ಅಧ್ಯಯನಗಳಿಗೆ ಸಂಶೋಧನ ಮೌಲ್ಯಗಳು ಸಿದ್ದಿಸುತ್ತವೆ.

೬. ಸಾಹಿತ್ಯ ಮತ್ತು ಸಂಸ್ಕೃತಿಗಳು ನಿರಂತರವಾಗಿ ಕೊಡುಪಡೆಗಳ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಕ್ರಮವನ್ನು ಸಂಶೋಧಕರು ಗ್ರಹಿಸಬೇಕಾಗುತ್ತದೆ. ಹಾಗಾದಾಗ ಮಾತ್ರ ಇಂಥ ವಿಶ್ಲೇಷಣೆಗಳಿಗೆ ಅರ್ಥವಂತಿಕೆಯು ಪ್ರಾಪ್ತವಾಗುತ್ತದೆ. ಎಂದರೆ, ಸಂಸ್ಕೃತಿಯು ತನ್ನ ಸತ್ಯವನ್ನು ಸಾಹಿತ್ಯದ ಮುಖಾಂತರ ಸ್ಪಷ್ಟಪಡಿಸುವ ವಿಧಾನವನ್ನು ಅವಲಂಬಿಸುತ್ತವೆ. ಸಾಹಿತ್ಯವು, ಸಂಸ್ಕೃತಿಯ ಸ್ವರೂಪದ ಶೋಧಕ್ರಮಕ್ಕೆ ತನ್ನ ಮೂಲಕ ಅಭಿವ್ಯಕ್ತಿ ಪಡೆಯುವ ಅವಕಾಶಗಳನ್ನು ನೀಡುತ್ತದೆ. ಈ ನಿಷ್ಪತ್ತಿಯ ಕ್ರಮಾಗತವಾದ ಗ್ರಹಿಕೆಯೇ, ಅಂತರಶಿಸ್ತೀಯ ಅಧ್ಯಯನದ ಮೂಲ ತತ್ವಗಳಲ್ಲಿ ಒಂದಾಗುತ್ತದೆ.

ಇದು, ‘ಸಂಸ್ಕೃತಿ-ಸಾಹಿತ್ಯ’ದ ಅಂತರ ಸಂಬಂಧಗಳ ಕುರಿತಾದ ಚಿಂತನೆಗಳ ಸ್ಥೂಲ ನಕ್ಷೆಯಾಗಿದೆ. ಈ ಮಾದರಿಯು ಸೂಕ್ತ, ಸಾಂದರ್ಭಿಕವಾದ ಬದಲಾವಣೆಗಳೊಂದಿಗೆ ವಿವಿಧ ನೆಲೆಗಳ ಅಂತರಶಿಸ್ತೀಯ ಅಧ್ಯಯನಗಳಿಗೂ ಅನ್ವಯಗೊಳ್ಳುತ್ತದೆ. ಉದಾಹರಣೆಗೆ, ವೆಂಕಟೇಶ ಅಯ್ಯಂಗಾರರ ‘ಚಿಕವೀರ ರಾಜೇಂದ್ರ’ ಕೃತಿಯ ಚಾರಿತ್ರಿಕಾಂಶಗಳ ಅಧ್ಯಯನವನ್ನು ಮಾಡಬೇಕಾಗಿದೆಯೆನ್ನೋಣ. ಆ ಸಂದರ್ಭದಲ್ಲಿ ಪ್ರಸ್ತುತ ಕೃತಿ ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದ ರಾಜೇಂದ್ರ ನಾಮೆ ವಿಲ್ಕ್ಸ್ ಅವರು ಬರೆದ ಮೈಸೂರಿನ ಇತಿಹಾಸ (History of Mysore)ಗಳನ್ನೆಲ್ಲ ಒಂದು ನೇರದಲ್ಲಿಟ್ಟು ನೋಡಬೇಕಾಗುತ್ತದೆ. ಚರಿತ್ರೆ ಸಾಹಿತ್ಯಗಳು ಐಕ್ಯವಾಗುವ ಅಂಶಗಳ ಪರಿಗಣನೆಯನ್ನು ಮಾಡಬೇಕಾಗುತ್ತದೆ. ಎಂದರೆ, ಸಾಹಿತ್ಯ ಕೃತಿಯಲ್ಲಿ ಚಾರಿತ್ರಿಕ ಸತ್ಯಗಳು ಅಭಿವ್ಯಕ್ತವಾಗುವಂತೆಯೇ, ಚರಿತ್ರೆಯ ಕೃತಿಗಳಲ್ಲೂ ಕಾಲ್ಪನಿಕ ಅಂಶಗಳು, ಉತ್ಪ್ರೇಕ್ಷತೆಗಳು, ಅತಿಶಯೋಕ್ತಿಗಳು ನುಸುಳಿಕೊಳ್ಳುವ ಸಾಧ್ಯತೆಗಳಿವೆ. (ಆದರ್ಶದ ಪರಿಸರದಲ್ಲಿ, ಚಾರಿತ್ರಿಕ ದಾಖಲೆಗಳು ಅಧಿಕೃತವಾಗಿರಬೇಕೆಂಬುದು ಗೃಹೀತವಾಗಿ ರುತ್ತದೆ. ಆದರೆ. ಚರಿತ್ರಕಾರರೂ ಮನುಷ್ಯರೇ ಆಗಿರುವುದರಿಂದ, ಮನುಷ್ಯ ಸಹಜವಾದ ಒಲವುಗಳು, ರಾಗ-ದ್ವೇಷಗಳು, ಆಸಕ್ತಿ-ಜಿಗುಪ್ಸೆಗಳು ಅಲ್ಲಿ ಎಡೆಪಡೆಯುತ್ತ ವೆನ್ನುವುದು ವಾಸ್ತವವಾಗಿರುತ್ತದೆ.) ಹೀಗಾಗಿ, ಸಾಹಿತ್ಯ ಕೃತಿ ಚರಿತ್ರೆಯಾಗುವುದು, ಚಾರಿತ್ರಿಕ ದಾಖಲೆಗಳು ಸಾಹಿತ್ಯಿಕ ಲಕ್ಷಣಗಳನ್ನು ಒಳಗೊಳ್ಳುವುದೂ ಇಲ್ಲಿ ನಡೆಯುತ್ತಲೇ ಇರುತ್ತದೆ. ಇವುಗಳ ಸಂಧಿಬಿಂದುಗಳ ಅನ್ವೇಷಣೆಯೇ ಅಂತರಶಿಸ್ತೀಯ ಅಧ್ಯಯನಗಳ ಉದ್ದೇಶಗಳಲ್ಲಿ ಒಂದಾಗಿರುತ್ತದೆ.

ಅನ್ಯಶಿಸ್ತುಗಳ ಅಧ್ಯಯನಗಳ ಆಕರಗಳಾಗಿ ಕನ್ನಡ ಸಾಹಿತ್ಯ ಕೃತಿಗಳ ಪ್ರಸ್ತುತತೆ

ಸಾಹಿತ್ಯ ಕೃತಿಗಳ ಅಧ್ಯಯನಗಳ ಆಕಾರಗಳಾಗಿ ಶಾಸನಗಳು, ನಿರ್ದಿಷ್ಟ ಕಾಲದ ಚರಿತ್ರೆ, ಪುರಾತನ ಅವಶೇಷಗಳ ಆಕರಗಳಾಗಿ ಶಾಸನಗಳು, ನಿರ್ದಿಷ್ಟ ಕಾಲದ ಚರಿತ್ರೆ, ಪುರಾತನ ಅವಶೇಷಗಳು, ನಾಣ್ಯಗಳು, ಪ್ರವಾಸಕಥನಗಳೆಲ್ಲವೂ ಬಳಕೆಯಾಗುತ್ತವೆ. ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇದರ ಇನ್ನೊಂದು ಮಗ್ಗುಲಿನಲ್ಲಿ, ಅನ್ಯಶಿಸ್ತೀಯ ಅಧ್ಯಯನ ಗಳಿಗೆ, ಕನ್ನಡ ಸಾಹಿತ್ಯ ಕೃತಿಗಳು ಸೃಷ್ಟಿಶೀಲ ಆಕರಗಳಾಗುತ್ತವೆನ್ನುವುದು ಇಲ್ಲಿ ಗಮನಾರ್ಹ ವಾಗುತ್ತದೆ. ಈ ನೆಲೆಯ ಒಂದೆರಡು ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ.

ಸಮಾಜವಿಜ್ಞಾನಕ್ಕೆ ಸಂಬಂಧಿಸಿದ ‘ಕುಡಿತದ ದುಷ್ಪರಿಣಾಮಗಳು’ ಅಥವಾ ‘ಪಾನಗೋಷ್ಠಿ ಗಳ ಚಾರಿತ್ರಿಕತೆ’ ಇಂಥ ಅಧ್ಯಯನ ವಸ್ತುಗಳಿವೆಯೆನ್ನೋಣ. ಕ್ರಿಸ್ತಶಕ ಹತ್ತನೆಯ ಶತಮಾನದಷ್ಟು ಹಿಂದಿನ ಕಾಲದ ಪಂಪನಲ್ಲಿ ಸಿಗುವ ಈ ನೆಲೆಯ ಉಲ್ಲೇಖಗಳು ಇಲ್ಲಿ ಮಹತ್ವವನ್ನು ಗಳಿಸುತ್ತವೆ.

ಪಂಪ ಭಾರತದಲ್ಲಿ, ಸುಭದ್ರೆಯನ್ನು ಕಂಡು ಮೋಹಿತನಾದ ಅರ್ಜುನನು, ರಾತ್ರಿಯ ವೇಳೆ ನಡೆಸಿದ ನಗರ ಸಂಚಾರದಲ್ಲಿ ಅವನು ಇಂಥ ಒಂದು ಪಾನಗೋಷ್ಠಿಯನ್ನು ಗಮನಿಸುತ್ತಾನೆ. ಅಲ್ಲಿ, ಮುನ್ನೂರ ಅರವತ್ತು ಜಾತಿಯ ಕಳ್ಳುಗಳ ವಿವರ, ಅವುಗಳನ್ನು ಕುಡಿಯಲು ಬಳಸುವ ಪಾತ್ರೆಗಳ ಆಕಾರ, ಕುಡಿತದೊಂದಿಗಿನ ಆಚರಣೆಗಳು, ಆಗ ನಂಜಿಕೊಳ್ಳುವ ಪದಾರ್ಥಗಳೆಲ್ಲವುಗಳನ್ನೂ ಇಲ್ಲಿ ನಮೂದಿಸಲಾಗಿದೆ.

ಕನ್ನಡ ಸಾಹಿತ್ಯ ಕೃತಿಗಳಲ್ಲಿ ಅನ್ಯಾನ್ಯ ಶಿಸ್ತುಗಳಿಗೆ ಸಂಬಂಧಿಸಿದ ಅನೇಕ ಮಾಹಿತಿಗಳು ಉಪಲಬ್ಧವಾಗುತ್ತವೆ. ಅವುಗಳನ್ನು ಸಂಶೋಧನ ಪ್ರಪಂಚಕ್ಕೆ ಪರಿಚಯಿಸುವ ಹೊಣೆಗಾರಿಕೆಯು ಅಂತರಶಿಸ್ತೀಯ ಅಧ್ಯಯನಗಳದ್ದಾಗಿದೆ.

ಆಧುನಿಕ ಸಾಹಿತ್ಯ ಕೃತಿಗಳೂ ಇಂಥ ಸೌಲಭ್ಯಗಳನ್ನು ಕಲ್ಪಿಸುತ್ತವೆ. ಉದಾಹರಣೆಗೆ, ಸಿ.ಕೆ. ನಾಗರಾಜರಾಯರ ‘ಪಟ್ಟ ಮಹಾದೇವಿ ಶಾಂತಲಾದೇವಿ’ ಕಾದಂಬರಿಯನ್ನು ಗಮನಿಸ ಬಹುದು. ಕ್ರಿಸ್ತಶಕ ೧೨ನೆಯ ಶತಮಾನದ ಇತಿಹಾಸದ ಎಷ್ಟೆಲ್ಲ ಮಗ್ಗುಲುಗಳನ್ನು ಇದು ಸ್ಪರ್ಶಿಸುತ್ತದೆ! ಕಲೆಯಂಥ ಒಂದು ಅಂಗವನ್ನೇ ತೆಗೆದುಕೊಂಡರು, ರಂಗಸಜ್ಜಿಕೆ, ಹಿಮ್ಮೇಳ, ರಂಗಚಲನೆ, ನೃತ್ಯಶಾಸ್ತ್ರದ ಸಿದ್ಧಾಂತಗಳು, ರಸಸೃಷ್ಟಿ ಕ್ರಮಗಳೆಲ್ಲವೂ ಅಲ್ಲಿ ವಿವರವಾಗಿ ನಿರೂಪಿತವಾಗಿವೆ. ಭಾರತೀಯ ಕಲೆಗಳ ಇತಿಹಾಸದ ಪುನಾರೂಪಣೆಯ ದೃಷ್ಟಿಯಿಂದ ಇವುಗಳೆಲ್ಲ ಮೌಲಿಕವೆನಿಸುತ್ತವೆ. ಹಾಗೆಯೇ, ಆ ಕಾಲದ ಧಾರ್ಮಿಕ ಸ್ಥಿತ್ಯಂತರಗಳು, ಧರ್ಮಾಂತರಗಳಂಥ ಸೂಕ್ಷ್ಮ ಸನ್ನಿವೇಶಗಳು, ಅಲ್ಲಿ ಉದ್ಭವವಾಗುವ ಸಂಕೀರ್ಣತೆಗಳೆಲ್ಲವೂ ಅಲ್ಲಿ ಅಭಿವ್ಯಕ್ತಿಯನ್ನು ಪಡೆದಿವೆ. ಇದೇ ಮಾದರಿಯಲ್ಲಿ, ಆ ಕಾಲದ ರಾಜಕೀಯ ಸ್ಥಿತಿಗತಿಗಳು, ಅರ್ಥವ್ಯವಸ್ಥೆ, ಕರಪದ್ಧತಿಗಳು, ಸಾಮಾಜಿಕ ಶ್ರೇಣೀಕರಣಗಳೆಲ್ಲ ಅಲ್ಲಿ ಉಲ್ಲೇಖಗೊಂಡಿವೆ. ಶಿಲ್ಪಶಾಸ್ತ್ರದ ಇತಿಹಾಸದ ಮೇಲೂ ಈ ಕೃತಿಯು ಬೆಳಕು ಚೆಲ್ಲುತ್ತದೆ. ಇಂಥ ಅನೇಕ ಸಂಶೋಧನ ಮೌಲ್ಯಗಳುಳ್ಳ ಅಂಶಗಳನ್ನು ಈ ಕಾದಂಬರಿಯು ಒಳಗೊಂಡಿದೆ. ಇಂಥ ಕೃತಿಗಳನ್ನು ಅನ್ಯೋನ್ಯ ನೆಲೆಗಳ ಅಧ್ಯಯನಗಳಿಗೆ ಒಡ್ಡಬೇಕಾದುದು ಸಮಕಾಲೀನ ಅಗತ್ಯವೇ ಆಗಿದೆ.

ಅಂತರಶಿಸ್ತೀಯ ಅಧ್ಯಯನಗಳ ಸಾಧ್ಯತೆಗಳು

ಈಗಾಗಲೇ ನಿರೂಪಿಸಿದಂತೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂತರಶಿಸ್ತೀಯ ಅಧ್ಯಯನ ಗಳಿಗೆ ಹೇರಳವಾದ ಅವಕಾಶಗಳಿವೆ. ನಿದರ್ಶನಾರ್ಥವಾಗಿ ಒಂದೆರಡು ಅಧ್ಯಯನ ವಸ್ತುಗಳನ್ನು ಇಲ್ಲಿ ಸೂಚಿಸಬಹುದು.

೧. ಕನ್ನಡ ಸಾಹಿತ್ಯ ಮತ್ತು ಸಂಖ್ಯಾಶಾಸ್ತ್ರ, (ಉದಾ:- ದ.ರಾ. ಬೇಂದ್ರೆಯವರ ಕಾವ್ಯದಲ್ಲಿ ಸಂಖ್ಯಾಶಾಸ್ತ್ರ)

೨. ಕನ್ನಡ ಸಾಹಿತ್ಯ ಮತ್ತು ತಂತ್ರಾಗಮಶಾಸ್ತ್ರ (ಉದಾ:- ಸತ್ಯಕಾಮರಂಥವರ ಬರೆಹಗಳು)

೩. ಸಾಹಿತ್ಯ ಮತ್ತು ತತ್ತ್ವಶಾಸ್ತ್ರ (ಎಸ್.ಎಲ್. ಭೈರಪ್ಪನವರ ಕಾದಂಬರಿಗಳು)

೪. ಸಾಹಿತ್ಯ ಮತ್ತು ಧರ್ಮಶಾಸ್ತ್ರ

೫. ಸಾಹಿತ್ಯ ಮತ್ತು ರಾಜಕೀಯ

೬. ಸಾಹಿತ್ಯ ಮತ್ತು ಮನೋವಿಜ್ಞಾನ

೭. ಸಾಹಿತ್ಯ ಮತ್ತು ಅನುಭಾವ

ಸಂಶೋಧಕರ ಸಾಮರ್ಥ್ಯ, ಆಸಕ್ತಿ, ಪ್ರತಿಭೆಗಳಿಗನುಗುಣವಾಗಿ ಈ ಯಾದಿಯು ವಿಸ್ತಾರ ಗೊಳ್ಳುತ್ತ ಹೋಗಬಹುದು. ಸಂಕೀರ್ಣ ನೆಲೆಗಳನ್ನು, ಬಹುಶಿಸ್ತೀಯ ಪರಿಸರಗಳನ್ನು ಅನ್ವೇಷಿಸಬಹುದು. ಇವುಗಳು ಕೇವಲ ಉದಾಹರಣೆಗಳಷ್ಟೇ.

ಒಟ್ಟಿನಲ್ಲಿ, ‘ಅಂತರಶಿಸ್ತೀಯ’ ಅಥವಾ ‘ಬಹುಶಿಸ್ತೀಯ’ ಸಂಶೋಧನೆಗಳು ಇಂದಿನ ಸಂಶೋಧನ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ದೃಷ್ಟಿಯಿಂದ ತೀರಾ ಅಗತ್ಯವಾಗಿವೆ. ಸಂಶೋಧನೆಯ ತಳಹದಿಯಾದ ಸತ್ಯದ ಅನ್ವೇಷಣೆಯ ವಿಧಾನಗಳಾಗಿ ಇವಕ್ಕೆ ಮಹತ್ವವಿದೆ. ಕನ್ನಡ ‘ಸಾಹಿತ್ಯ ಸಂಶೋಧನೆ’ಯ ಇಡಿಯ ಪರಿಕಲ್ಪನೆಯನ್ನೇ ಬದಲಾಯಿಸಬೇಕಾದುದೂ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.

ಕನ್ನಡ ಸಂಶೋಧನೆಯೆನ್ನುವುದೊಂದು ದ್ವೀಪವಾಗಿ ಉಳಿಯಲಾರದು. ಅದು ಪ್ರತ್ಯಕ್ಷ ಅಥವಾ ಪರೋಕ್ಷ ನೆಲೆಗಳಲ್ಲಿ ಅನ್ಯೋನ್ಯ ಶಿಸ್ತುಗಳೊಂದಿಗೆ ತನ್ನ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಲೇ ಇದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯವೆಂದಾಗ, ಬರಿಯ ಸಾಹಿತ್ಯ ಕೃತಿಗಳಷ್ಟೇ ಅಲ್ಲ, ಕನ್ನಡ ಭಾಷೆಯಲ್ಲಿ ಪ್ರಕಟವಾದ ಎಲ್ಲ ಪ್ರಕಾರಗಳ ಸಾಹಿತ್ಯಗಳು ಎನ್ನುವ ಅರಿವು ಅಸ್ತಿತ್ವಕ್ಕೆ ಬರಬೇಕಾಗಿದೆ.

ಕನ್ನಡ ಸಂಶೋಧನೆಯು ಬಹುಮಟ್ಟಿಗೆ, ಸಿದ್ಧ ಸೂತ್ರಗಳನ್ನು ಅವಲಂಬಿಸುತ್ತಾ, ಏಕತಾನತೆಯತ್ತ ವಾಲುತ್ತಿದೆ. ಅದಕ್ಕೆ ಚೈತನ್ಯವನ್ನೂ, ವೈವಿಧ್ಯಗಳನ್ನೂ ತುಂಬಿಸುವ ದೃಷ್ಟಿ ಯಿಂದ, ಅನ್ಯೋನ್ಯ ಸಾಧ್ಯತೆಗಳ ಶೋಧಕ್ರಮಗಳಲ್ಲಿ ತೊಡಗಿಕೊಳ್ಳಬೇಕಾದುದು ಅಗತ್ಯ ವಾಗಿದೆ. ಇವುಗಳಲ್ಲಿ ಒಂದಾಗಿ ಅಂತರಶಿಸ್ತೀಯ ಅಧ್ಯಯನವು ಉಲ್ಲೇಖಾರ್ಹವಾಗುತ್ತದೆ.

ಒಂದಕ್ಕಿಂತ ಹೆಚ್ಚು ಶಿಸ್ತುಗಳಿಗೆ ಸಂಬಂಧಿಸಿದ ಸತ್ಯಗಳ, ಸಿದ್ಧಾಂತಗಳ, ತತ್ವಗಳ, ಪರಿಕಲ್ಪನೆಗಳ ನಡುವಿನ ಸಂಬಂಧಗಳನ್ನು ಅಧಿಕೃತವಾಗಿ ಸ್ಥಾಪಿಸುವ ಪ್ರಯತ್ನಗಳನ್ನು ಅಂತರಶಿಸ್ತೀಯ ಅಧ್ಯಯನಗಳೆಂದು ಕರೆಯಬಹುದು. ವಾಸ್ತವವಾಗಿ, ಬಹುಶಿಸ್ತೀಯ ಅಧ್ಯಯನ ಮತ್ತು ಅಂತರಶಿಸ್ತೀಯ ಅಧ್ಯಯನಗಳ ಮಧ್ಯದ ವ್ಯತ್ಯಾಸವು ಕೇವಲ ಅನ್ವಯಿಕ ನೆಲೆಯದಾಗಿರುತ್ತದೆ. ತಾತ್ತ್ವಿಕವಾಗಿ, ಅವುಗಳ ಉದ್ದೇಶ, ಸ್ವರೂಪಗಳು ಸಮಾನವಾಗಿ ರುತ್ತವೆ. ಇಂಥ ಅಧ್ಯಯನಗಳ ಆತ್ಯಂತಿಕ ಲಕ್ಷ್ಯವು ಎರಡು ಅಥವಾ ಹೆಚ್ಚು ಶಿಸ್ತುಗಳ ಸಂಯೋಜನೆಯಿಂದ ಅಸ್ತಿತ್ವಕ್ಕೆ ಬರುವ ವಿಶಿಷ್ಟ ಶಿಸ್ತಿನ ಸ್ವರೂಪ ಆಗಿರಬೇಕಾಗುತ್ತದೆ.

ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ಹಾಗೂ ಹೊರಗಿನ ಸತ್ವಗಳನ್ನು ಬರಮಾಡಿಕೊಳ್ಳುವ ಮೂಲಕ ಅದನ್ನು ಸಂಪದ್ಭರಿತಗೊಳಿಸುವ ದೃಷ್ಟಿಗಳಿಂದ ಅಂತರಶಿಸ್ತೀಯ ಅಧ್ಯಯನಗಳು ಅಗತ್ಯವಾಗಿವೆ.

ಅಂತರಶಿಸ್ತೀಯ ಅಧ್ಯಯನಗಳು ತಮ್ಮ ಆಕರಗಳು, ಮಾಹಿತಿ ಸಂಗ್ರಹ ವಿಧಾನ, ಮಾಹಿತಿ ಮಂಡನಾ ಕ್ರಮ ಮುಂತಾದ ಅನೇಕ ದೃಷ್ಟಿಗಳಿಂದ ವಿಶಿಷ್ಟವಾಗಿವೆ. ಆ ನೆಲೆಯ ಸಂಶೋಧಕರಿಗೆ, ಲಕ್ಷಿತ ಶಿಸ್ತುಗಳಲ್ಲಿ ಆಸಕ್ತಿ, ಪ್ರವೃತ್ತಿಗಳೆರಡೂ ಅವಶ್ಯವೇ ಆಗುತ್ತವೆ. ಅವುಗಳ ಚಿಂತನಕ್ರಮಗಳೂ ವಿಭಿನ್ನ ನೆಲೆಗಳಲ್ಲಿ ಪ್ರವರ್ತಿಸುತ್ತವೆ. ಅನ್ಯಶಿಸ್ತುಗಳ ಅಧ್ಯಯನ ಗಳ ಆಕರಗಳಾಗಿ ಕನ್ನಡ ಸಾಹಿತ್ಯ ಕೃತಿಗಳ ಮಹತ್ವವನ್ನು ಪ್ರಸ್ತುತ ಪಡಿಸುವುದು, ಈ ಮಾದರಿಯ ಸಂಶೋಧನೆಯ ಉಪಉತ್ಪಾದನೆಯೇ ಆಗಿದೆ.

ಕನ್ನಡ ಸಾಹಿತ್ಯ ಸಂಶೋಧಕರ ಮುಂದೆ, ಅಂತರಶಿಸ್ತೀಯ ಅಧ್ಯಯನಗಳ ಅಪಾರ ಸಾಧ್ಯತೆಗಳೂ ಅವಕಾಶಗಳೂ ಇವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಕನ್ನಡ ಸಂಶೋಧನೆಯ ಕ್ಷೇತ್ರವನ್ನು ಸುಪುಷ್ಟಗೊಳಿಸುವುದು, ಅದರ ವ್ಯಾಪ್ತಿಯನ್ನು ವಿಸ್ತರಿಸುವುದು, ಹೆಚ್ಚಿನ ಅರ್ಥವಂತಿಕೆಯನ್ನು ಆನ್ವಯಿಕ ಮೌಲ್ಯವನ್ನು ಅದಕ್ಕೆ ನೀಡುವುದು ನಮ್ಮ ಸಂಶೋಧನ ಜಗತ್ತಿನ ಆದ್ಯತೆಯಾಗಬೇಕಾಗಿದೆ.