ಸೃಷ್ಟಿಯ ಎಲ್ಲ ಸದಸ್ಯರಿಗೂ ಭಾಷೆಯೆನ್ನುವುದು ಸಮಾನ ಲಕ್ಷಣವೇ ಆಗಿದೆ. ಬಿರುಬೇಸಿಗೆಯ ಬರಕ್ಕೆ ಬಾಡಿದ ಹಸಿರು ಗಿಡವೊಂದಕ್ಕೆ ನೀರು ಹನಿಸಿ ನೋಡಿ. ಅದರ ಕೃತಜ್ಞತೆಯ ನಗುವನ್ನು, ತಣಿದ ಸಂತಸವನ್ನು ಗ್ರಹಿಸುವ ಸೌಖ್ಯ ನಿಮ್ಮದಾಗುತ್ತದೆ. ಸಿಟ್ಟು, ಸಂತಸ, ಉಲ್ಲಾಸಗಳನ್ನು ದೈಹಿಕ ಚರ್ಯೆಯಿಂದಲೇ ಸಂವಹಿಸುವ ಸಾಕು ಪ್ರಾಣಿಗಳನ್ನು ಗಮನಿಸಿ, ಗುರ್ರೆನ್ನುವ ಸ್ವರ, ಮುಂಗಾಲುಗಳಿಂದ ಚರಪರ ನೆಲವನ್ನು ಕೆರೆಯುವ ಕ್ರಿಯೆ, ಕಳಚಿ ಬೀಳುವುವೋ ಎಂಬಷ್ಟು ಅಗಲಕ್ಕೆ ಅರಳಿಕೊಳ್ಳುವ ಕಣ್ಣುಗಳೆಲ್ಲವನ್ನೂ ಭಾಷೆಗೆ ಪರ್ಯಾಯವಾಗಿ ಅವುಗಳು – ಬಹಳ ಸಮರ್ಥವಾಗಿ – ಬಳಸಿಕೊಳ್ಳುತ್ತವೆ. ಶಬ್ದಗಳ ಪರಿಚಯವಿನ್ನೂ ಆಗದ ಹಸುಳೆಯು ಕೂಡಾ ಶಬ್ದೇತರವಾದ ಭಾಷೆಯ ಮೂಲಕವೇ ತನ್ನೆಲ್ಲ ಭಾವಗಳನ್ನು ಸಂವಹಿಸುವ ಪ್ರಯತ್ನವನ್ನು ಮಾಡುತ್ತದೆ. ಇದಿಷ್ಟು ಭಾಷೆಯ ಪ್ರಾಕೃತಿಕವಾದ, ಸಹಜವಾದ, ಕಲಿಸದೆ ಬರುವ ಪ್ರವೃತ್ತಿ(Instinct)ಗಳಿಗೆ ಸಂಬಂಧಿಸಿದ ಪ್ರವರ್ತನೆಗಳು.

ಹಾಗೆ ನೋಡಿದರೆ, ಶಾಬ್ದಿಕ ಭಾಷೆಯೆನ್ನುವುದು ಮನುಷ್ಯನ ಮನಸ್ಸಿನ ಅನ್ಯಾನ್ಯ ಸಂಸ್ಕಾರಗಳಿಗೆ ವಿಧೇಯವಾಗಿಯೇ ಬೆಳೆಯುವಂಥದ್ದು. ಮೂಲ ಸ್ವಭಾವವನ್ನು ಪರಿಷ್ಕರಿಸಿ, ಹೊಸತಿನ ಹುಡುಕಾಟಗಳಿಗೆ ತೊಡಗುವಂಥದ್ದು. ಹೀಗಾಗಿ, ಜಲವಾಸಿಯಲ್ಲದ ನಾಯಿಯ ಮರಿ ಈಜುವ ಕೌಶಲವನ್ನು ಕಲಿಸದೆಯೇ ಗಳಿಸುವ ಹಾಗೆ, ನಮ್ಮ ಮಗು ಭಾಷೆಯನ್ನು ತಂತಾನೇ ಕಲಿಯಲಾರದು. ಮಾಧ್ಯಮವೊಂದರ ಸಹಾಯವಿದ್ದಾಗ ಮಾತ್ರವೇ ಅದು ಆಶಯ-ಆಕೃತಿಗಳ ಸ್ವರೂಪವನ್ನು ಧರಿಸುತ್ತದೆ. ಇದು ಭಾಷೆಯ ಸಾಂಸ್ಕೃತಿಕ ಒಲವುಗಳನ್ನು ಲಕ್ಷಿಸುತ್ತದೆ; ‘ಭಾಷೆಯ ಕಲಿಕೆ’ಯ ಅನ್ಯಾನ್ಯ ಮಗ್ಗುಲುಗಳನ್ನೂ, ಸಾಧ್ಯತೆಗಳನ್ನೂ ಶೋಧಿ ಸಲು ಪ್ರೇರಣೆಯನ್ನು ನೀಡುತ್ತದೆ.

ಸಾಮಾನ್ಯವಾಗಿ ಈ ಪರಿಕಲ್ಪನೆಯನ್ನು ನಾವು ಪಠ್ಯಕ್ರಮ, ಬೋಧನಾಂಶ, ಶಿಕ್ಷಣ ವಿಧಾನ ಮುಂತಾದುವುಗಳ ಸಂದರ್ಭಗಳಲ್ಲಿಟ್ಟು ನೋಡುವ ಪರಿಪಾಠವನ್ನು ಬೆಳೆಸಿ ಕೊಂಡಿದ್ದೇವೆ. ಭಾಷೆಯು ತನ್ನ ಗೋಲಾರ್ಧದಲ್ಲಿ, ಈ ಎಲ್ಲ ಮೇರೆಗಳನ್ನು ನಿರಾಕರಿಸಿ, ಪೂರ್ಣತ್ವದತ್ತ ಧಾವಿಸುತ್ತಿರುತ್ತದೆ. ವಾಸ್ತವವಾಗಿ, ಮಗು ಶಾಲೆಯ ಸೀಮಿತ ಆವರಣಕ್ಕೆ ವಿನೀತವಾಗುವುದಕ್ಕೆ ಎಷ್ಟೋ ಮೊದಲೇ ತನ್ನೊಳಗಿನ ಭಾಷಾ ಕಟ್ಟಡದ ಅಸ್ತಿವಾರವನ್ನು ನಿರ್ಮಿಸಕೊಂಡಿರುತ್ತದೆ. ಅದನ್ನು ಒತ್ತಿ, ಕೆತ್ತಿ, ಮೊನೆ ಮಾಡಿ ಬೇರೆ ಬೆರೆ ಅಡೆಗಳಿಗೆ ಅಳವಡಿಸುವ ಕೆಲಸವನ್ನು ಮಾತ್ರವೇ ಶಿಕ್ಷಣವು ಮಾಡುತ್ತದೆ. ಎಂದರೆ, ಭಾಷೆಯ ಕಲಿಕೆಯಲ್ಲಿ ಶಿಕ್ಷಣ ಸಂಸ್ಥೆಗಳಷ್ಟೇ ಅಥವಾ ಅವುಗಳಿಗಿಂತ ಒಂದು ತೂಕ ಹೆಚ್ಚೇ ಆದ ಪಾತ್ರವನ್ನು ವಿಶಾವವಾದ ಬಾಹ್ಯ ಸಮಾಜವು ನಿರ್ವಹಿಸುತ್ತದೆ.

ಇಲ್ಲಿ ಭಾಷೆಯ ವಿಶಿಷ್ಟ ಮಗ್ಗುಲುಗಳಲ್ಲಿ, ನಿರಲಂಕಾರದ ವ್ಯವಹಾರದ ಭಾಷೆ, ನಿಷ್ಕೃಷ್ಟ ವಾದ ವಿಷಯ ಪ್ರತಿಪಾದನೆಯೇ ಪ್ರಮುಖ ಉದ್ದೇಶವಾಗಿರುವ ಶಾಸ್ತ್ರಗಳ ಭಾಷೆ, ಲೋಕಾನುಭವಕ್ಕಿಂತ ವಿಭಿನ್ನವಾದ ಕಲಾನುಭೂತಿಯೇ ಲಕ್ಷ್ಯವಾಗಿರುವ ಕಲೆಯ ಭಾಷೆ ಗಳೆಲ್ಲವೂ ಆಶ್ರಯವನ್ನು ಪಡೆಯುತ್ತವೆ. ಅಂದಾಗ, ಭಾಷೆಯ ವಿಶಿಷ್ಟ ಪ್ರಯೋಜನಗಳನ್ನೂ, ಅನ್ಯೂನ್ಯ ಸಂದರ್ಭಗಳ ಪರಿಕರವಾಗಿ ಅದು ವಿನಿಯೋಗವಾಗುವ ಪರಿಯನ್ನೂ ನಿರ್ದಿಷ್ಟ ವಿಧಾನಗಳ ಮೂಲಕ ತಿದ್ದಬೇಕೆನ್ನುವುದು ಗೃಹೀತವೇ ಆಗುತ್ತದೆ.

ಎಂಟು ವರ್ಷಗಳೊಳಗಿನ ಮಕ್ಕಳು ಭಾಷೆಯನ್ನು ಬಹು ಶೀಘ್ರವಾಗಿ ಕಲಿಯುತ್ತವೆ. ಇಲ್ಲಿ ‘ಭಾಷೆ’ಯೆಂದಾಗ ಕನ್ನಡ, ತುಳು, ಕೊಂಕಣಿ ಮುಂತಾದ ಭಾಷಾ ವರ್ಗಗಳೆನ್ನುವುದಕ್ಕಿಂತ ಹೆಚ್ಚಾಗಿ ‘ವಿಶಿಷ್ಟ ಭಾಷಾ ಸಾಮರ್ಥ್ಯ’ವೆನ್ನುವುದೇ ನನ್ನ ಲಕ್ಷ್ಯದಲ್ಲಿದೆ. ಇದನ್ನು ನಾನು ‘ಪರಿಸರದ ಕೊಡುಗೆ’ಯೆಂದು ಕರೆಯುತ್ತೇನೆ.

ಮುಂಬಯಿಯಂಥ ಮಹಾನಗರದಲ್ಲಿ ವಾಸಿಸುವ ನನಗೆ ಇದರ ನೇರ ಅನುಭವಗಳಿವೆ. ತುಳುವೋ ಕನ್ನಡವೋ ಮಾತೃಭಾಷೆಯಾಗಿರುವುದು ಇಲ್ಲಿ ಕಂಡು ಬರುತ್ತದೆ. ಅವುಗಳ ಆಂಗ್ಲ ಭಾಷಾ ಪ್ರಯೋಗಗಳಲ್ಲಿ ಐಕ್ಯವಿರುತ್ತದೆ. ಎಂದರೆ ‘May I know who is calling’ ಎಂದೇ ಪ್ರತಿಯೊಂದು ಮಗುವೂ ಕೇಳುತ್ತದೆ. ಆದರೆ, ತಮ್ಮವೇ ಭಾಷೆಗಳಲ್ಲಿ ತುಂಬ ವಿನಯ ಸೌಜನ್ಯಗಳಿಂದ, ‘ಏರ್ ಪಾತೆರುನಿ?’ ‘ತಾವು ಯಾರು ಮಾತಾಡ್ತೀರಿ’ ಎನ್ನುವವರು ಕೆಲವರಾದರೆ ತೀರಾ ಒರಟಾಗಿ, ‘ಯಾರು ನೀವು’ ಎಂದು ನಿರ್ಭಿಡೆಯಿಂದ ದಟ್ಟಿಸುವವರೆಗಿನ ವೈವಿಧ್ಯಗಳು ಇಲ್ಲಿ ಕಂಡು ಬರುತ್ತವೆ. ಎಂದರೆ, ಭಾಷೆಯೊಂದನ್ನು ಯಾಂತ್ರಿಕವಾಗಿ, ಯಥಾವತ್ತಾಗಿ, ಭಾವ ನಿರಪೇಕ್ಷವಾಗಿ ಅನುಕರಿಸುವ ಬಗೆಯೊಂದಾದರೆ, ನಮ್ಮ ನಮ್ಮ ಸಂಸ್ಕಾರ-ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಅದು ತಾಳುವ ರೂಪವೇ ಬೇರೊಂದು ಮತ್ತು ಅದೇ ನೈಜವಾದುದು ಕೂಡಾ.

ಈ ಹಂತದ ಅಪಾಯಗಳನ್ನೂ ನಾವು ಲಕ್ಷಿಸಬೇಕು. ಎಳೆಯ, ಹಸಿ ಮನಸ್ಸುಗಳು ತರ­ತಮಭಾವ ನಿಷ್ಕರ್ಷೆಗಾಗಲಿ, ಶೀಲ-ಅಶ್ಲೀಲಗಳ ಗೊಡವೆಗಾಗಲಿ, ಗೌರವ-ಅಗೌರವಗಳ ಪ್ರಜ್ಞೆಗಾಗಲಿ ತೆರೆದುಕೊಳ್ಳುವುದಲ್ಲ. ಹೀಗಾಗಿ, ಪುಟ್ಟ ಮಗುವಿಗೆ  ಪರಿಚಿತವಾಗುವ ‘ಹೇಬ್ಯ’ ಅಥವಾ ‘ಅಬ್ಬೆಪಾರಿ’ ಪದಗಳು ಮಾತ್ರವೇ ಆಗಿರುತ್ತವೆ ಹೊರತಾಗಿ ಅವುಗಳ ಅರ್ಥ ಪ್ರಪಂಚದ ಪರಿಚಯವಲ್ಲ. ಇಲ್ಲಿ ಮಗುವಿಗೆ ಸಿಗುವ ಭಾಷಾ ಪರಿಸರವು ಬಹುಮಟ್ಟಿಗೆ ಅದರ ಭಾಷಾ ಸಂಪನ್ನತೆ, ಸಾಮರ್ಥ್ಯ ಬಹುಶ್ರುತತ್ವ ಹಾಗೂ ಆನ್ವಯಿಕತೆಗಳನ್ನು ನಿರ್ಧರಿಸುತ್ತದೆ. ಈ ಬಿಂದುವಿನಲ್ಲಿ ಭಾಷೆ ಮತ್ತು ಸಂಸ್ಕೃತಿಗಳು ಅವಿನಾಭಾವ ಸಂಬಂಧಗಳಿಗೆ ಒಡಂಬಡುತ್ತವೆ.

ಉದಾಹರಣೆಗೆ, ನೇಜಿ, ಕಂಬಳ, ಬೀಸುವ ಕಲ್ಲು, ಮೊಸರು ಕಡೆಯುವ ಮಂತು, ತಳೆ, ಮೋರೆ ಮುಂತಾದ ಶಬ್ದಗಳನ್ನು ನಾವು ಕೋಶಗಳಲ್ಲಿಟ್ಟು ರಕ್ಷಿಸುವ ಕೆಲಸವನ್ನಾಗಲಿ, ಬೆಳೆಸುವ ಪ್ರಕ್ರಿಯೆಯನ್ನಾಗಲಿ ಸಾಧಿಸಲಾರೆವು. ಅವುಗಳೆಲ್ಲವೂ ಆಯಾ ಸಾಂಸ್ಕೃತಿಕ ಪರಿಸರ ದಲ್ಲಷ್ಟೇ ಉಸಿರಾಡಬಲ್ಲವುಗಳಾಗಿವೆ. ಅದಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಹಾಕಿಸಿ ಕೊಳ್ಳುತ್ತಲೇ ಬೆಳೆಯುವ ಮಗುವಿಗೆ ‘ಬೀಸಾಳೆ’ ಎನ್ನುವ ಪದವನ್ನು ಯಾವ ಪಾಠ ಶಾಲೆಯೂ ಕಲಿಸಬೇಕಾಗಿಲ್ಲ. ಪ್ರಾಯಶಃ ನಮ್ಮ ಶಿಕ್ಷಣ ಕ್ರಮದ ಹಲವು ಎಡವಟ್ಟುಗಳಿರುವುದೂ ಇಲ್ಲಿಯೇ. ಭಾಷೆಯನ್ನು ಒಂದು isolated ಪರಿಸರದಲ್ಲಿ ಕಲಿಯಬಹುದೆಂಬ ಭ್ರಾಂತಿಯಿಂದ ನಮಗಿನ್ನೂ ಮುಕ್ತಿ ಸಿಕ್ಕಿಲ್ಲ! ಅದು ತನ್ನ ಸಾಂಸ್ಕೃತಿಕ ಜಗತ್ತಿನಲ್ಲಿ ಸಂಚರಿಸುತ್ತ, ಸಂವಾದಿಸುತ್ತ, ಅದರೆಲ್ಲ ತಿರುವು, ತಿಲ್ಲಾನಗಳಿಗೆ ಒಲೆಯುತ್ತ, ಒಲಿಯುತ್ತ ಇದ್ದಾಗ ಮಾತ್ರ ಅದಕ್ಕೆ ಸಹಜ ಸೊಗಡು. ಇಲ್ಲವಾದಲ್ಲಿ ಅದಕ್ಕೆ ಅಪರಿಚಿತವಾದ, ಅಸಂಗತವಾದ, ಅಸಡ್ಡಾಳವಾದ ಪರಿವೇಷದ ತೊಡಕು, ಹಿಂಸೆ.

ಇಲ್ಲಿ ಮುಖ್ಯವಾಗಿ, ಭಾಷೆಗಿರುವ ಪಂಚೇಂದ್ರಿಯಗಳನ್ನು ಸಂವೇದನೆಗಳಿಗೆ ಒಳಪಡಿಸುವ ಕ್ಷಮತೆಯನ್ನು ನಾವು ಗೌರವಿಸಬೇಕಾಗುತ್ತದೆ. ಕಣ್ಣು, ಕಿವಿಗಳಿಗೆ ತಂಪೆರೆಯುವಂತೆಯೇ ಅದಕ್ಕಿರುವ ರಸಾರ್ದಕತ್ವವನ್ನೂ ಸ್ಪರ್ಶ ಗುಣವನ್ನೂ ನಾವು ಪರಿಗಣಿಸಬೇಕು. ನಿರ್ಮಾನುಷ, ನಿಷ್ಪಂದವಾಗಿರುವ ದಿಗಂತದ ಓರೆಯಿಂದ ಹಠಾತ್ತನೆ ದೃಶ್ಯ ಜಗತ್ತಿನೊಳಗೆ ನುಸುಳುವ ಹಕ್ಕಿ ಸಾಲಿನಂತೆ, ಭಾಷೆಗಿರುವ ಪರಿವರ್ತಕ ಶಕ್ತಿಯನ್ನು ನಾವು ಪರಿಭಾವಿಸಬೇಕು. ಕಳೆದ ಕಾಲದ ಅಂತರವನ್ನು ಸ್ಪಚ್ಛವಾಗಿ ಅಳಿಸಿ ಹಾಕಿ ಬಾಲ್ಯದ ಗುಡಿಯನ್ನು ಮತ್ತೆ ಕಟ್ಟುವ ಚೆಂಡೆಯ ನಾದದ ಭಾಷೆ, ಎಂದೋ ಮರೆವಿನಾಳಕ್ಕೆ ಜಾರಿದ್ದ ನಮ್ಮ ಭಾಷೆಯ ಚೆಂದದ ಪದವೊಂದು ಕಿವಿಗೆ ಬಿದ್ದಾಗ ಆಗುವ ರೋಮಾಂಚನ, ದೊಡ್ಡ ಓಲೆ, ಅಡ್ಡ ಕುಂಕುಮಗಳ ವಿವರಣೆಯ ಮೂಲಕ ನನ್ನೆದುರಿಗೆ ಪ್ರತ್ಯಕ್ಷವಾಗುವ ನನ್ನ ಅಜ್ಜಿಯ ಸ್ಮೃತಿಗಳೆಲ್ಲವೂ ಇದಕ್ಕೆ ನಿದರ್ಶನಗಳೇ. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ನಮ್ಮ ಕವಿವಾಣಿ ಹಾಡಿದುದೂ ಈ ಅರ್ಥದಲ್ಲೇ.

ಈ ಹಿನ್ನೆಲೆಯಲ್ಲಿ ನಾನು, ಕನ್ನಡದ ಅಥವಾ ಯಾವುದೇ ಭಾಷೆಯ ಕಲಿಕೆಯ ಕ್ರಮವನ್ನು ಅದರ ಗ್ರಹಿಕೆ, ಬಳಕೆ, ಗಳಿಕೆ ಹಾಗೂ ಉಳಿಕೆಗಳ ಚಕ್ರಾವೃತ್ತಿಯಾಗಿ ನೋಡಲು ಪ್ರಯತ್ನಿ ಸುತ್ತೇನೆ. ಇಲ್ಲಿ ಒಂದು ಅಂಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯವಿದೆ. ನಾವೆಲ್ಲರೂ ಮಾತೃಭಾಷೆ ಅಥವಾ ಬಾಲ್ಯದಲ್ಲೇ ಕಲಿಯುವ ಅನೇಕ ಭಾಷೆಗಳನ್ನು ಅನಾಯಾಸವಾಗಿ, ಸಮರ್ಪಕವಾಗಿ ಆಡುತ್ತೇವೆ. ಅವುಗಳ ಶಾಸ್ತ್ರೀಯ ವಿವರಣೆಗಳನ್ನೂ, ತಾರ್ಕಿಕತೆಗಳನ್ನೂ ಅನಂತರ ಕಲಿಯುತ್ತೇವೆ. ಆ ಕಲಿಕೆಯ ಹಂತವನ್ನು ಮುಟ್ಟುವ ಎಷ್ಟೋ ಮೊದಲೇ ಆ ಭಾಷಾ ಶರೀರವು ನಮ್ಮೊಳಗೆ ಸೃಷ್ಟಿಯಾಗಿರುತ್ತದೆ. ಹೆಚ್ಚೆಂದರೆ ಹೊರ ರಚನೆಗಳಲ್ಲಿ ಸ್ವಲ್ಪಮಟ್ಟಿಗಿನ ಬದಲಾವಣೆಗಳು ಕಂಡು ಬರಬಹುದಷ್ಟೇ. ಪರಕೀಯ ಭಾಷೆಗಳ ಸಂದರ್ಭ ಗಳಲ್ಲಿ ಅವುಗಳ ಸಂರಚನೆಗಳನ್ನು ಮೊದಲು ಕರಗತ ಮಾಡಿಕೊಂಡು ಅನಂತರ ಆ ಭಾಷೆಯನ್ನು ಬಳಸುತ್ತೇವೆ. ನಮ್ಮ ಜಿಲ್ಲೆಯ ಮಕ್ಕಳಿಗಿರುವ ಮುಖ್ಯ ಸಮಸ್ಯೆಯು ಇಷ್ಟು ಗಂಭೀರವಾದುದಲ್ಲವಾದರೂ ಮೂಲವೂ ಇದೇ ಆಗಿದೆ. ಎಂದರೆ, ಇಲ್ಲಿಯ ಬಹು ಜನ ಸಮುದಾಯಗಳು ಬೇರೆ ಬೇರೆ ಭಾಷೆಗಳನ್ನಾಡುವವುಗಳಾಗಿವೆ. ತುಳು, ಕನ್ನಡದ ಉಪಭಾಷೆ ಗಳು, ಮಲಯಾಳಂ, ಬ್ಯಾರಿ, ಮೋಯರ್, ಕೊಂಕಣಿ, ಮರಾಠಿ – ಹೀಗೆ ಹತ್ತು ಹಲವು ಭಾಷೆಗಳ ಹಿನ್ನೆಲೆಗಳಿರುವ ನಮ್ಮ ಮಕ್ಕಳಿಗೆ, ಕನ್ನಡವೂ ದ್ವಿತೀಯ ಭಾಷೆಯಾಗುತ್ತದೆ. ಕಲಿತ ಭಾಷೆಯಾಗುತ್ತದೆ. ಹೀಗಾಗಿ, ಕನ್ನಡದಲ್ಲಿ ಅಭಿವ್ಯಕ್ತಿ ಪಡೆಯುವ ಅವರ ಚಿಂತನೆಗಳೂ ಭಾಷಾಂತರಿತವಾದವುಗಳೇ ಆಗಿರುತ್ತವೆ. ಇದರಿಂದಾದ ಪ್ರಮುಖ ಲಾಭವೆಂದರೆ, ನಮ್ಮಲ್ಲಿ, ಅಪ್ರಯತ್ನವಾಗಿಯೇ ಕನ್ನಡ ಭಾಷೆಯು ಮಾನಕ ಸಂಪ್ರದಾಯ(Standardised Tradition)ದ ಅನುವರ್ತಿಯಾದುದು. ಗ್ರಂಥಸ್ಥ ಭಾಷೆಯು ಏಕರೂಪವನ್ನು ಒಪ್ಪಿ ಕೊಂಡುದು.

ಭಾಷೆಯ ಕಲಿಕೆಯೆನ್ನುವುದು ಅದರ ಗ್ರಹಿಕೆಯ ಮುಖಾಂತರವೇ ಮೊದಲಾಗುತ್ತದೆ. ಮೊದಮೊದಲು ಮೂಲಭೂತ ಅವಶ್ಯಕತೆಗಳನ್ನು ಸಂವಹಿಸಲು ಚಡಪಡಿಸುವ ಮಗು, ಅವುಗಳಿಗೆ ಸಂವಾದಿಗಳಾದ ಪದಗಳನ್ನು ತನ್ನ ಭಾಷಾ ವರ್ತುಲಗಳಿಂದ ಆಯ್ದುಕೊಳ್ಳುತ್ತದೆ. ಇದು, ಭಾಷೆಯೊಂದರ ನೆರವಿಲ್ಲದೆಯೇ ಅದನ್ನು ಕಲಿಯುವ ಬಗೆಗೆ ಉದಾಹರಣೆಯಾಗಿದೆ. ಜರ್ಮನ್, ಜಪಾನಿ ಮುಂತಾದ ವಿದೇಶಿ ಭಾಷೆಗಳನ್ನು ಈ ವಿಧಾನದ ಮೂಲಕವೇ ಕಲಿಸುತ್ತಾರೆ. ಎಂದರೆ, ತೆಂಗಿನಕಾಯಿಯನ್ನು ತೋರಿಸಿ, ಆ ಪದವನ್ನು ಪರಿಚಯಿಸುತ್ತಾರೆಯೇ ಹೊರತಾಗಿ, Coconut ಅಥವಾ ನಾರಿಯಲ್ ಎನ್ನುವ ಪದಕ್ಕೆ ಜರ್ಮನ್ ಸಮಾನಾರ್ಥಕ ಇದು ಎಂದು ಹೇಳುವ ಮೂಲಕವಲ್ಲ. ಈ ಸರಳ ನಿದರ್ಶನವನ್ನು ತೀರಾ ಸಂಕೀರ್ಣವಾದ ನೆಲೆಗಳಿಗೂ ವಿಸ್ತರಿಸಬಹುದು. ‘ಜರ್ಮನ್ ಭಾಷೆಯಲ್ಲಿ ಈ ಪದಾರ್ಥಕ್ಕೆ ಈ ಹೆಸರು’ ಎನ್ನುವುದು ಹತ್ತಿರದ ದಾರಿ. ‘This object, which is called coconut in English is called such and such in German’ ಎನ್ನುವುದು ದೂರಾನ್ವಯ, ಅನಗತ್ಯ ಮಾರ್ಗಾಯಾಸವನ್ನುಂಟುಮಾಡುವ ಕ್ರಮ.

ಪ್ರಯೋಗಶೀಲವಾದ ಇಂಥ ಹಲವು ಪ್ರಯತ್ನಗಳು ಈಗೀಗ ನಮ್ಮ ಸುತ್ತ ನಡೆಯುತ್ತಿವೆ. ಇದು, ಭಾಷೇತರ ಪರಿಕರ ಹಾಗೂ ಮಾಧ್ಯಮಗಳ ಮೂಲಕ ಭಾಷೆಯನ್ನು ಕಲಿಸುವ ವಿಧಾನ. ಎಂದರೆ, ಮರವೊಂದರ ಬೇರು, ಕಾಂಡ, ಎಲೆ, ಚಿಗುರು, ಕೊಂಬೆ, ತೊಗಟೆಗಳನ್ನು ಪುಸ್ತಕದ ಓದಿನ, ಪರೋಕ್ಷ ಮಾಧ್ಯಮದ ಮೂಲಕ ಕಲಿಯುವುದರ ಬದಲಿಗೆ, ವಾಸ್ತವವಾಗಿ ಮರವೊಂದನ್ನು ಅದರ ಅಂಗ ಪ್ರತ್ಯಂಗಗಳ ಸಮೇತವಾಗಿ ಪ್ರತ್ಯಕ್ಷ ಕಲಿಕೆಗೆ ಒಗ್ಗಿಸಿ ಕೊಳ್ಳುವುದು ಈ ಮಾದರಿಯ ಉದ್ದೇಶ. ಪರಿಸರ ಪ್ರೀತಿಯೇ ಶ್ರಮಸಂಸ್ಕೃತಿಯ ಅಳವಡಿಕೆಯೇ ಇದರ ಆನುಷಂಗಿಕ ಫಲಗಳು. ಯಕ್ಷಗಾನದ ಬಗೆಗಿನ ಸುದೀರ್ಘ ಲೇಖನವನ್ನು ಓದುವುದನ್ನೂ, ಅದರ ರಂಗಪ್ರದರ್ಶನವೊಂದನ್ನು ನೋಡುವ ಅನುಭವ ವನ್ನೂ ಹೋಲಿಸಿ ನೋಡಿದಾಗ ಈ ವ್ಯತ್ಯಾಸವು ಎದ್ದು ಕಾಣುತ್ತದೆ.

ಭಾಷೆಯ ಗ್ರಹಿಕೆಯ ಈ ನೆಲೆಯಲ್ಲಿ ಪ್ರಸ್ತುತವಾಗುವ ಇನ್ನೊಂದು ಅಂಶ, ಅದರ ಸ್ವಾದದ ರಕ್ಷಣೆ. ಈಗಾಗಲೇ ಪ್ರಸ್ತಾಪಿಸಿದಂತೆ, ಭಾಷೆಯ ಗ್ರಹಿಕೆಯೂ ಎರಡು ಶಕ್ತಿಗಳ ನಿಯಂತ್ರಣಕ್ಕೆ ಒಳಪಡುತ್ತದೆ. ಮೊದಲನೆಯದು, ಆಂತರಿಕ ತುರ್ತುಗಳಿಂದಾಗಿ ಪರಿಸರ ದಿಂದಲೇ ಆಯ್ಕೆಗೊಳ್ಳುವ ಭಾಷಾ ಪ್ರಭೇದ. ಇದನ್ನು ಮಗುವಿನ ಭಾಷಾ ಗ್ರಹಿಕೆಯ ರೂಪಕವು ಸಮರ್ಥವಾಗಿ ಸಂವಹಿಸುತ್ತದೆ. ಎಂದರೆ ಪತ್ರಿಕೋದ್ಯಮವನ್ನು ಆಯ್ದುಕೊಳ್ಳುವ ವ್ಯಕ್ತಿಯು ಆ ಭಾಷೆಯನ್ನು, ಅದರ ಸರಿಯಾದ ಸಂದರ್ಭದಲ್ಲಿಯೇ ಗ್ರಹಿಸಲು, ಸಂಪಾದಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಸೃಜನಶೀಲ ಬರೆಹಗಾರನು ಕಲೆಯ ಭಾಷೆಯನ್ನು ಗ್ರಹಿಸುತ್ತಾನೆ. ಇದು, ವ್ಯಕ್ತಿಗೆ ಬೇಕಾಗಿ ಗ್ರಹಿಸಲ್ಪಡುವ ಭಾಷೆಯ ವರ್ಗ. ಇನ್ನೊಂದು ಬಾಹ್ಯ ಒತ್ತಡಗಳೂ ಸಂಹಿತೆಗಳೂ ಅಗತ್ಯವೆಂದು ಪರಿಗಣಿಸುವ ಭಾಷೆಯ ವಿಭಾಗ. ಇದು, ಭಾಷೆಯನ್ನು ಕಲಿಸುವ (Structured, indentical) ನಿಯಮಬದ್ಧವಾದ ಅದರ ತಾತ್ತ್ವಿಕ ಮುಖವನ್ನು ಲಕ್ಷಿಸುತ್ತದೆ. ಇದು ಹೊರಗಿನ ಪ್ರೇರಣೆಗೂ, ನಿಯಂತ್ರಣಕ್ಕೂ ಒಳಪಡುತ್ತದೆ. ಈ ಗ್ರಹಿಕೆಯ ಹಂತ ಬಹು ಸೂಕ್ಷ್ಮವಾದುದೂ ಪ್ರತಿಕ್ರಿಯಾತ್ಮಕವಾದುದೂ ಆಗಿರುತ್ತದೆ. ಕಲಿಯುವ ಹಂತದ ಮಗುವು Sit out, Kitchen, Chair, Bedಗಳನ್ನೇ ಬಾಹ್ಯ ಸಹಾಯಕಗಳ ಮೂಲಕ ಗ್ರಹಿಸತೊಡಗಿದರೆ, ಅವು ಆ ಮಗುವಿನ ಶಾಬ್ದಿಕ ಮೂಲಾನುಭವಗಳೇ ಆಗುತ್ತವೆ. ಮೊಗಸಾಲೆ, ಅಟ್ಟುಂಬಳ, ಹಾಸಿಗೆ ಮುಂತಾದ ಪದಗಳು ಅದರ ಭಾಷಾವಲಯದ ಹೊರಗೆ ಉಳಿಯುತ್ತವೆ, ಪರಕೀಯವಾಗುತ್ತವೆ. ಇಂಥವುಗಳ ಸ್ಥಾನಪಲ್ಲಟಕ್ಕೆ ತುಂಬ ಶ್ರದ್ಧೆ, ತಾಳ್ಮೆ, ಸಮಯಗಳು ವಿನಿಯೋಗವಾಗಬೇಕಾಗುತ್ತವೆ. ಇವೆಲ್ಲವೂ ನಿವಾರ್ಯಗಳೇ. ಇದೇ ಪ್ರಮೇಯವನ್ನೇ ಭಾಷೆಯ ನಯಗಾರಿಕೆಗೂ, ಕಲೆಗಾರಿಕೆಗೂ ಅನ್ವಯಿಸಬಹುದಾಗಿದೆ.

ಈ ಹಂತದಲ್ಲಿ ಗ್ರಹಿಕೆಯ ಪ್ರಮಾಣವನ್ನು ಉಲ್ಲೇಖಿಸಬೇಕು. ಎಂದರೆ, ಗ್ರಹಿಕೆಯು ಪೂರ್ಣಪ್ರಮಾಣದಲ್ಲಿ ನಡೆಯದಿದ್ದಾಗ ಅದರ ಬಳಕೆಯೂ ಅಂಗ ಹೀನವಾಗುತ್ತದೆ. ಗಳಿಕೆಯಂತೂ ನಗಣ್ಯವೇ ಆಗುತ್ತದೆ. ಇದನ್ನು ಪದವೊಂದರ ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ಇಲ್ಲಿ ಒಂದು ಪದವು ಪಡೆಯಬಹುದಾದ ಅರ್ಥವಿಸ್ತಾರ, ವಾಚ್ಯ-ವ್ಯಂಗ್ಯ-ಧ್ವನಿಗಳ ವಿನ್ಯಾಸ, ಪ್ರಾದೇಶಿಕ ಪ್ರಯೋಗಗಳ ವೈವಿಧ್ಯಗಳೆಲ್ಲದರ ಪರಿಚಯವು ನಮಗಿರಬೇಕಾಗುತ್ತದೆ. ‘ಹರಿ’ ಎನ್ನುವ ಪದವು ಕ್ರಿಯಾಪದವೋ, ನಾಮಪದವೋ ಎನ್ನುವ ತಿಳಿವಳಿಕೆ, ಪ್ರತಿ ವಿಭಾಗದಲ್ಲೂ ಅದು ಪಡೆಯುವ ಅರ್ಥಾಂತರಗಳೆಲ್ಲವೂ ನಮ್ಮ ಪ್ರಜ್ಞಾವಾಸಿಗಳಾದಾಗ, ಈ ‘ಪೂರ್ಣತ್ವ’ದ ಅರಿವಾಗುತ್ತದೆ. ಇಲ್ಲಿ ಇವೆಲ್ಲಾ ಮಾಹಿತಿಗಳನ್ನು ನಾವು ನಮ್ಮ ಜ್ಞಾನಕೋಶಕ್ಕೆ ಸೇರಿಸಿಕೊಳ್ಳಬೇಕೆನ್ನುವುದು ನನ್ನ ಅಭಿಪ್ರಾಯವಲ್ಲ. ಬದಲಿಗೆ ಭಾಷೆಗೆ ಈ ಎಲ್ಲಾ ಆಯಾಮಗಳಿವೆ ಎನ್ನುವ ಅರಿವು ನಮಗೆ ಸದಾ ಇರಬೇಕೆನ್ನುವುದನ್ನು ಮಾತ್ರವೇ ಇಲ್ಲಿ ಸೂಚಿಸುತ್ತಿದ್ದೇನೆ. ಹೀಗೆ, ನಿಚ್ಚಳವಾಗುವ ದೃಷ್ಟಿಯು ತನ್ನ ಗ್ರಹೀತ ಗಳಾಚೆಗಿನ ಸಾಧ್ಯತೆಗಳನ್ನೂ ಮಾನ್ಯ ಮಾಡುತ್ತದೆ. ಇದು ಭಾಷೆಯ ಕಲಿಕೆಗೆ ಬೇಕಾಗುವ ಪೂರ್ವ ತಯಾರಿಯೂ ಹೌದು, ಭಾಷಾ ಕಲಿಕೆಯ ವಿಧಾನವನ್ನು ನಿರ್ಧರಿಸುವ ಮಾಪಕವೂ ಹೌದು. ಭಾಷಾಗ್ರಹಿಕೆಯೆನ್ನುವುದು ಸೀಮೆಗಳಿಲ್ಲದ ಮುಕ್ತವಲಯದಲ್ಲಿ ನಡೆಯ ಬೇಕೆನ್ನುವುದರ ಪ್ರತಿಪಾದನೆಯೂ ಹೌದು.

ಇದು, ಭಾಷೆಯ ಸಾಧ್ಯತೆಗಳನ್ನು ಹಿಗ್ಗಿಸುತ್ತಾ ಹೋಗುತ್ತದೆ. ಈ ದೃಷ್ಟಿ ವೈಶಾಲ್ಯವಿದ್ದಾಗ  ನಾನು ತಿಳಿದುದೆಲ್ಲವೂ ಸತ್ಯವಲ್ಲ, ‘ನನಗೆ ತಿಳಿದುದಷ್ಟೇ ಸತ್ಯವಲ್ಲ. ದಿಗಂತವನ್ನು ಎಲ್ಲೆ ಗಳೊಳಗೆ ಅಳವಡಿಸುವುದು ಸಾಧ್ಯವಿಲ್ಲ’ ಎನ್ನುವ ತಿಳಿವೂ ಸ್ಥಿರವಾಗುತ್ತದೆ.

ಇಲ್ಲಿ ನಾನು ಹಂತಗಳೆಂದಾಗ ಅವು ಕಾಲಾನುಕ್ರಮವಾದ ಅಥವಾ ಪ್ರಾಥಮಿಕ, ಮಾಧ್ಯಮಿಕ ಮುಂತಾದ ವಿಭಾಗಗಳನ್ನು ಲಕ್ಷಿಸುವ ಇಲ್ಲವೆ ಚಾರಿತ್ರಿಕವಾದ ವಿಭಜನೆಗಳೆಂದು ತಪ್ಪಾಗಿ ಅರ್ಥೈಸಬಾರದು. ಭಾಷೆಯ ಗ್ರಹಿಕೆಯೆನ್ನುವುದು ಎಲ್ಲ ವಯೋಮಾನದಲ್ಲಿಯೂ ನಡೆಯುತ್ತಲೇ ಇರುವ ಕ್ರಿಯೆಯಾಗಿದೆ. ಅದರ ಜಂಗಮ ಸ್ವರೂಪವನ್ನು ಅನುಸರಿಸಿ ಅದರ ಗ್ರಹಿಕೆಯೂ ನಿರಂತರವಾಗಿರುತ್ತದೆ.

ಹೀಗೆ, ಪ್ರಜ್ಞೆಯಲ್ಲಿ ನೆಲೆಗೊಳ್ಳುವ ಭಾಷೆಯು ಸರಿಯಾದ ಬಳಕೆಗೆ ಒಗ್ಗಿಕೊಂಡಾಗಲೇ ಗ್ರಹಿಕೆಯು ಸಾರ್ಥಕವಾಗುತ್ತದೆ. ಸದೃಢವಾದ ಗ್ರಹಿಕೆಯು ಮಾತ್ರವೇ ಸಮರ್ಪಕವಾದ ಬಳಕೆಯನ್ನು ನಿಷ್ಪನ್ನಗೊಳಿಸಬಲ್ಲುದು. ವ್ಯಕ್ತಿಯೊಬ್ಬ ಭಾಷೆಯನ್ನು ಬಳಸುವ ಕ್ರಮವೇ ಅವನ ಗ್ರಹಿಕೆಯ ಮಟ್ಟದ ನಿಕರ್ಷವಾಗುತ್ತದೆ. ಭಾಷೆಯೊಂದನ್ನು ಬಳಸುವಾಗ ಕೆಲವು ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದೆರಡು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು.

ಭಾಷೆಯನ್ನು ಯಾವ ಸಂದರ್ಭದಲ್ಲಿ ಬಳಸುತ್ತಿದ್ದೇವೆನ್ನುವ ಪ್ರಜ್ಞಾಪೂರ್ವಕವಾದ ಅರಿವು ಇಲ್ಲಿ ತೀರಾ ಅಗತ್ಯವೆನಿಸುತ್ತದೆ. ಎಂದರೆ, ಅದು ತಾತ್ಕಾಲಿಕವಾದ ತಿಳಿವಳಿಕೆಯನ್ನು ಮಾತ್ರವೇ ಲಕ್ಷಿಸುವ ವ್ಯವಹಾರಿಕವಾದ ಸಂವಾದದ ಸಂದರ್ಭವೇ, ಅಲ್ಲ ಶಾಶ್ವತವಾದ ಅಭಿವ್ಯಕ್ತಿಯ ಸಂದರ್ಭವೇ, ಇಲ್ಲ ತೀರಾ ಪಾರಿಭಾಷಿಕವಾದ ಶಿಸ್ತಿನ ಅಭ್ಯಾಸದ ಸಂದರ್ಭವೇ ಎನ್ನುವ ಪ್ರಶ್ನೆಗಳೆಲ್ಲವೂ ಈ ನೆಲೆಯಲ್ಲಿ ಗಮನಾರ್ಹವಾಗುತ್ತವೆ. ವ್ಯಾವಹಾರಿಕವಾದ ಭಾಷೆಯೇ ಆದರೂ ಸಾಂದರ್ಭಿಕವಾಗಿ ಬದಲಾಗುತ್ತಲೇ ಹೋಗುತ್ತದೆ. ಗೆಳೆಯರೊಂದಿಗೆ, ಸರೀಕರೊಂದಿಗೆ, ಹಿರಿಯರೊಂದಿಗೆ, ಗುರುವರ್ಗದವರೊಂದಿಗೆ ಸಂಭಾಷಿಸುವಾಗ ಕೂಡಾ ಭಾಷೆಯು ಲಘು-ಗುರು ದಾಟಿಗಳನ್ನು ಹಿಡಿಯುತ್ತದೆ. ಇದು ಪದನರಿತು ನುಡಿಯುವ ಹದಗೊಂಡ ಬಳಕೆಯ ವಿಧಾನ.

ಭಾಷೆಯು ಯಾವ ಮಾಧ್ಯಮದ ಮೂಲಕ ಸಂವಹನವನ್ನು ಪಡೆಯುತ್ತದೆಯೆನ್ನುವ ಪರಿಜ್ಞಾನವೂ ಇಷ್ಟೇ ಅವಶ್ಯಕ. ಮೌಖಿಕ ಸಂವಾದದ ಸಂದರ್ಭದಲ್ಲಿ ನಾವು ಭಾಷೆಯ ದೃಷ್ಟಿಯಿಂದ ಮಿತವ್ಯಯಿಗಳಾಗಿರುವುದಿಲ್ಲ. ಪುನರಾವರ್ತನೆಯ, ಸೃಷ್ಟೀಕರಣದ ಪುನಾರಾವ ಲೋಕನದ ಅವಕಾಶಗಳು ಇಲ್ಲಿರುವುದರಿಂದ, ಅದು ಸಮಂಜಸವೂ ಕೂಡಾ. ಅದುವೇ ಬರೆವಣಿಗೆಯ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆಯ, ಸಾರಾಸಾರ ವಿವೇಚನೆಯ ಮೂಲಕವೇ ಭಾಷೆಯ ಸ್ವರೂಪವನ್ನು ನಿಷ್ಕರ್ಷಿಸಬೇಕಾಗುತ್ತದೆ.

ನಮ್ಮ ಶ್ರೋತೃಗಳು, ಓದುಗರು ಯಾರೆಂಬುದರ ಮೇಲಿನಿಂದಲೂ ಭಾಷೆಯ ಬಳಕೆಯ ಕ್ರಮ ನಿಗದಿತವಾಗುತ್ತದೆ. ಸಿ.ಆರ್. ಚಂದ್ರಶೇಖರ ಅವರು ಮನೋವೈಜ್ಞಾನಿಕ ನಿಯತ ಕಾಲಿಕೆಯ ಲೇಖನದಲ್ಲಿ ಬಳಸುವ ಭಾಷೆಯೇ ಬೇರೆ. ಸುಧಾ, ತರಂಗಗಳಂಥ ಜನಪ್ರಿಯ ಪತ್ರಿಕೆಗಳಲ್ಲಿ ಬರೆಯುವ ಭಾಷೆಯೇ ಬೇರೆಯಾಗುತ್ತದೆ. ಬಿ.ಎಂ. ಹೆಗ್ಗಡೆಯವರು ವೈದ್ಯರ ಸಮ್ಮೇಳನದಲ್ಲಿ ಉಲ್ಲೇಖಿಸುವ ಕೊರೊನರಿ ಥ್ರಾಂಬೊಸಿಸ್ ರೋಗವೇ ವೈದ್ಯೇತರ ವೃತ್ತಿಯವರೊಂದಿಗೆ ಮಾತನಾಡುವಾಗ ‘ಹೃದಯದ ತೊಂದರೆ’ಯೆನಿಸುತ್ತದೆ. ಇದು, ‘ಭಾಷಾಪ್ರಯೋಗ ಪರಿಣತಮತಿತ್ವ’. ಭಾಷೆಯ ತಲಸ್ಪರ್ಶಿಯಾದ ಪರಿಚಯ, ಅದು ಬಳಕೆಯಾಗುವ ಪರಿಸರದ ಸಂಪೂರ್ಣ ಕಲ್ಪನೆ, ಸೂಕ್ತ ಶಬ್ದದ ಆಯ್ಕೆ, ಕೇಳುಗ/ಓದುಗನ ಮೇಲೆ ಅದು ಮಾಡಬಹುದಾದ ಪರಿಣಾಮಗಳ ಪೂರ್ವ ನಿರೀಕ್ಷೆಗಳಿದ್ದಾಗ ಮಾತ್ರವೇ ಭಾಷೆಯ ಬಳಕೆಯೆನ್ನುವುದು ನಮ್ಮ ಹಿಡಿತದೊಳಗೆ ಬರುತ್ತದೆ.

ಈ ಬಳಕೆಯ ಸಂದರ್ಭದಲ್ಲಿ, ಭಾಷೆಯ ಸಾಧ್ಯತೆಗಳ ವಿಸ್ತರಣೆಯೂ ಮಹತ್ವವನ್ನು ಪಡೆಯುತ್ತದೆ. ಎಂದರೆ, ಭಾಷೆಯ ಪರಿಚಯದ ಪೂರ್ವಾನುಭವದಿಂದ, ಸೋದರ ಭಾಷೆಗಳ ಸಂಪರ್ಕದಿಂದ, ಅನ್ಯಾನ್ಯ ಶಿಸ್ತುಗಳ ಒಡನಾಟದಿಂದ ಭಾಷೆಯ ಒಳರಚನೆಯ ಮೇಲೆ ದಾಳಿಯಿಡದೆಯೂ – ಅದನ್ನು ಮರುವಿನ್ಯಾಸಗೊಳಿಸುವ, ಹೊಸ ಜೋಡಣೆಗಳಿಗೆ ಮನಸ್ಸು ಮಾಡುವ ಪ್ರಯತ್ನಗಳು ನಡೆಯುತ್ತವೆ. ಇದರಿಂದ, ಹೊಸ ಶಬ್ದಗಳು ನಮ್ಮ ಭಾಷಾಕೋಶಕ್ಕೆ ಸೇರುತ್ತವೆ, ಮಾತ್ರವಲ್ಲದೆ ಅಷ್ಟಾಗಿ ಬಳಕೆಯಲ್ಲಿಲ್ಲದ ಶಬ್ದಗಳೂ ಭಾಷಾ ಶರೀರದ ಭಾಗಗಳಾಗುತ್ತವೆ. ಹೊಸ ಸೃಷ್ಟಿಗಳು ಅಸ್ತಿತ್ವಕ್ಕೆ ಬರುತ್ತವೆ. ‘ಕದ್ದಿಂಗಳು’, ‘ಯಂತ್ರಾಂಶ-ತಂತ್ರಾಂಶ’, ಮಣ್ಣಿನ ವಾಸನೆ, ಬೇರೆ ಬೇರೆ ಸಂವೇದನೆಗಳು … ಎಲ್ಲವೂ ಇಂಥ ಪ್ರಯತ್ನಗಳ ಫಲಿತಾಂಶಗಳೇ ಆಗಿವೆ. ಪಾರಿಭಾಷಿಕ ಪದಗಳ ವ್ಯಾಪಕ ಪ್ರಯೋಗಗಳನ್ನು ನಿರೀಕ್ಷಿಸುವ, ಭಿನ್ನ ಭಿನ್ನ ಜ್ಞಾನ ಕ್ಷೇತ್ರಗಳಿಗೆ ದೇಸೀ ನೆಲೆಯನ್ನು ಕಲ್ಪಿಸುವ ದೃಷ್ಟಿಯಿಂದ ಇಂಥ ಪ್ರಯತ್ನ ಗಳಿಗೆ ಸಮಕಾಲೀನ ಅಗತ್ಯಗಳು ಸಮ್ಮತಿಸುತ್ತವೆ.

ಇಂಥ ಸಂದರ್ಭಗಳಲ್ಲಿ ಹೊಸ ಶೋಧಗಳು, ಜನಮಾನಸದ ಅಂಗೀಕಾರದ ಅಂಕಿತ ವನ್ನೂ ಪಡೆಯಬೇಕಾಗುತ್ತದೆ. ‘ಕೃಷ್ಣ ವಿವರ’ ಎಂಬುದು ಸಮಾನಾರ್ಥಕವೊಂದು ‘Black hole’ನ ಅರ್ಥವನ್ನು ಚೆನ್ನಾಗಿ ಗ್ರಹಿಸುತ್ತದೆನ್ನುವುದನ್ನು ನಾವೆಲ್ಲ ಒಪ್ಪುತ್ತೇವೆ. ಎಷ್ಟೋ ಬಾರಿ ಇಂಥ ಪ್ರಯತ್ನಗಳು ಬೌದ್ದಿಕ ಕಸರತ್ತುಗಳಾಗಿಯೇ ಉಳಿಯುತ್ತವೆನ್ನುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ಸಬಲೀಕರಣ, ಡಾಮರೀಕರಣ, ಕೈಗಾರಿಕೀಕರಣಗಳಂತಹ ಹಲವು ಉದಾಹರಣೆಗಳು ಈ ಹೇಳಿಕೆಯನ್ನು ಸಮರ್ಥಿಸುತ್ತವೆ.

ಮೇಲ್ನೋಟಕ್ಕೆ ಇಲ್ಲಿಗೆ ಭಾಷೆಯ ಕಲಿಕೆಯ ವೃತ್ತವು ಪೂರ್ಣಗೊಂಡಿತೇನೋ ಎನ್ನುವ ಆಭಾಸವು ಉಂಟಾಗುತ್ತದೆ. ವಾಸ್ತವವಾಗಿ, ಇವುಗಳ ಮೇಲಿನ ಹಂತಗಳು ಆ ದೃಷ್ಟಿಯಿಂದ ಹೆಚ್ಚಿನ ಮೌಲ್ಯ ಉಳ್ಳವುಗಳಾಗಿವೆ. ಭಾಷೆಯ ಗಳಿಕೆಯು ಅವುಗಳಲ್ಲೊಂದಾಗಿದೆ. ತೀರಾ ವಾಚ್ಯ ನೆಲೆಯಿಂದ, ಭಾಷೆಯ ಗಳಿಕೆಯೆಂದರೆ, ಕೋಶಗಳಲ್ಲಿ ಅಂಥ ಪದಗಳು ಸೇರ್ಪಡೆಗೊಳ್ಳುವುದೆನ್ನಬಹುದು. ಉದಾಹರಣೆಗೆ, Oxford EnglishDictionaryಯು ಪಂಡಿತ, ಸತ್ಯಾಗ್ರಹ, ಸಂಧಿ ಮುಂತಾದ ಪದಗಳನ್ನು ಸೇರಿಸಿಕೊಂಡಿದೆ. ಪದಸಂಪತ್ತನ್ನು ಹೆಚ್ಚಿಸಿಕೊಂಡಿದೆ. ಇದನ್ನು ಒಂದು ಮಾದರಿ(Model)ಯಾಗಿ ಸ್ವೀಕರಿಸಿದಾಗ, ನಾನು ಹೇಳಲು ಪ್ರಯತ್ನಿಸುವುದೇನೆನ್ನುವುದು ಸ್ಪಷ್ಟವಾಗುತ್ತದೆ. ಇದು ಭಾಷೆಯ ಅತ್ಯಂತ ಕಿರಿಯ ಅರ್ಥಪೂರ್ಣ ಘಟಕವಾಗಿರುವ ಪದ, ಪದಗಳ ವಿಶಿಷ್ಟ ಸಂಪರ್ಕ ಸಂಯೋಜನೆಯಾಗಿರುವ ವಾಕ್ಯಗಳು ಅವುಗಳ ಸಮುಚ್ಚಯವಾಗಿರುವ ಭಾಷೆಯು ನಮ್ಮ ಸೊತ್ತಾಗುವ, ಸಂದೂಕದೊಳಗೆ ಸೇರುವ ಪರಿಕ್ರಮವನ್ನು ಸೂಚಿಸುತ್ತದೆ. ಇದು ಸಾಧ್ಯವಾಗುವುದು ಭಾಷೆಯ ನಿರಂತರ ಬಳಕೆಯಿಂದ, ಬೇರೆ ಬೇರೆ ಆಯಾಮಗಳ ಆಮೂಲಾಗ್ರ ಶೋಧಕ್ರಮದಿಂದ. ‘ನನ್ನ ಬಳಕೆಗೆ ಒಗ್ಗಿದ ಭಾಷೆಯ ಮೂಲಕ ನನ್ನ ಅಭಿವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮ ಗೊಳಿಸಬಹುದೇ, ಸಹೃದಯ ಮಾನ್ಯಗೊಳಿಸಬಹುದೇ, ಪೊದೆ ಪೊದೆಯಾಗಿ ಬೆಳೆಯುವ ಅದರ ರೀತಿಯನ್ನು ನಿಯಂತ್ರಿಸಬಹುದೇ ಹೇಗೆ’ ಎಂಬಿತ್ಯಾದಿಯಾಗಿ ಪ್ರತಿಯೊಬ್ಬರಲ್ಲೂ ಹುಟ್ಟಿಕೊಳ್ಳಬಹುದಾದ ಪ್ರಶ್ನೆಗಳಿಂದ ಮಾತ್ರವೇ. ಈ ಸ್ಥಿತಿಯನ್ನು ನಾವು ತಲುಪುವುದು ಸಾಧ್ಯವಾದಾಗ ನಮ್ಮ ಭಾಷೆಯ ಹರಿವು ಸರಾಗವಾಗುತ್ತದೆ. ಉಸಿರಾಟದಷ್ಟು ಸಹಜ ವಾಗುತ್ತದೆ, ವಾಹಿನಿಗಳ ಬದಲಾವಣೆಯೆನ್ನುವುದು ಅಪ್ರಯತ್ನವಾದ, ಪರಾವರ್ತಿತ ಪ್ರತಿಕ್ರಿಯೆಯೇ ಆಗುತ್ತದೆ. ಭಾಷೆಯೆನ್ನುವುದು ನಿಸ್ಸಂದಿಗ್ಧವಾಗಿದ್ದಷ್ಟೂ, ಹರಿತವಾಗಿದ್ದಷ್ಟೂ, ಚೂಪಾಗಿದ್ದಷ್ಟೂ ಅದರ ಪರಿಣಾಮಕಾರಿತ್ವವು ಹೆಚ್ಚುತ್ತದೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಂಪನಂಥವರು ಬಳಸಿದ ಭಾಷೆಗೆ ಪರ್ಯಾಯವಿಲ್ಲವೆನ್ನುವುದು ಈ ಅರ್ಥದಲ್ಲಿಯೇ. ‘\ರುವಾಟವಿಲ್ಲದಿದ್ದರೆ ಕೆಡುವ ಅನೇಕ ವಸ್ತು-ವಿಚಾರಗಳಲ್ಲಿ ಭಾಷೆಯೂ ಒಂದು’ ಎನ್ನುವ ಹೇಳಿಕೆಯನ್ನೂ ‘ಪದ ಪ್ರಯೋಗವೆಂದರೆ, ಘಂಟೆ ಹೊಡೆದಂತೆ. ಒಂದು ಕ್ಷಣ ಹಿಂದೆಯೂ ಆಗಲಾರದ, ಒಂದು ಕ್ಷಣದ ವಿಳಂಬವನ್ನೂ ಮಾಡಲಾರದ ಅದರ ನಿಷ್ಠೆಯಂತೆ’ ಎನ್ನುವ ಅಭಿಪ್ರಾಯವನ್ನೂ ಅಕ್ಕಪಕ್ಕಗಳಲ್ಲಿಟ್ಟು ನೋಡಿದಾಗ, ಈ ನೆಲೆಯ ಸಮತೋಲನದ ಅಗತ್ಯವು ಸ್ಫುಟವಾಗುತ್ತದೆ. ಹೀಗೆ ನಮ್ಮ ಅಧೀನಕ್ಕೆ ಬರುವ ಭಾಷೆಯು ಬೆಳೆಯಬಹುದೇ ಹೊರತಾಗಿ ಎಂದೂ ಅಳಿಯಲಾರದು. ಈ ಹೇಳಿಕೆಯನ್ನು ನಾನು ಈಗಷ್ಟೇ ಮಾತು ಕಲಿಯುತ್ತಿರುವ ಕಂದಮ್ಮಗಳಿಂದ ತೊಡಗಿ, ನಮ್ಮೊಂದಿಗಿರುವ ಶತಾಯುಷಿಗಳ ವರೆಗೂ ಅನ್ವಯ ಮಾಡಿಕೊಳ್ಳುತ್ತೇನೆ.

ಹೀಗೆ, ಭಾಷಾ ಗಳಿಕೆಯ ಹಿಂದೆ ಅಖಂಡವಾದ, ಕೇಂದ್ರೀಕೃತವಾದ ಪ್ರಯತ್ನಗಳ ಸರಪಳಿಯೇ ಇದೆ. ಅದರ ಒಂದು ಕೊಂಡಿ ಸಡಿಲಾದರೂ ಕಡಿದರೂ ಭಾಷಾ ಸಾತತ್ಯ ಕದಡುತ್ತದೆ. ಒಡ್ಡು ಕಟ್ಟಿಸಿಕೊಂಡ ಭಾಷಾ ಪರಿಸರವೂ ಕೆಡುತ್ತದೆ. ಈ ಸಂದರ್ಭದಲ್ಲಿ, ಕಷ್ಟಾರ್ಜಿತವಾದ ಭಾಷೆಯ ಉಳಿಕೆ, ನಾಳೆಯ ಬೆಳೆವಣಿಗೆಗಳೆರಡೂ ನಮಗೆ ಪ್ರಸ್ತುತ ವಾಗುತ್ತವೆ. ಈ ಒಟ್ಟು ಪ್ರಕ್ರಿಯೆಯನ್ನು ನಾನಾಗಲೇ ಚಕ್ರವೃತ್ತಿಯದೆಂದು ಕರೆದೆ. ಹಾಗಾಗಿ, ಈ ‘ಉಳಿಕೆ’ಯೆನ್ನುವ ಪರಿಕಲ್ಪನೆಯು ಗ್ರಹಿಕೆಯ ಮೂಲದೊಂದಿಗೆ ಬಾಂಧವ್ಯವನ್ನು ಬೆಸೆಯುತ್ತದೆನ್ನುತ್ತೇನೆ. ಭಾಷೆಯೊಂದು ಭಾವಸಾಮಗ್ರಿಯಾಗಿ, ಸಂಸ್ಕೃತಿದತ್ತವಾದ ನಮ್ಮ ಅಸ್ಮಿತೆಯ ಲಕ್ಷಣವಾಗಿ, ಅನನ್ಯ ಸಾಧಾರಣವಾಗಿ, ಸಂವಹನ ಸೌಖ್ಯದ ಒಡೆತನವನ್ನು ಅನುಭವಿಸಬೇಕಾದರೆ, ಅದರ ಗ್ರಹಿಕೆಯ ಹಂತವೇ ಆರೋಗ್ಯ ದೃಢವಾಗಬೇಕು.

ಎರಡು – ಮೂರು ವರ್ಷಗಳ, ಭಾಷೆಯ ವೈಚಿತ್ರ್ಯಗಳನ್ನೂ, ವೈವಿಧ್ಯಗಳನ್ನೂ ಬೆರಗು ಬಿಡಿಸಿದ ಕಣ್ಣುಗಳಿಂದ ನೋಡುವ, ಅದರ ನಾದಕ್ಕೂ, ಘೋಷಕ್ಕೂ ಕಿವಿಯೆತ್ತರಿಸುವ, ಅದರ ರುಚಿಗೆ ಬಾಯಿ ಚಪ್ಪರಿಸುವ ಮಗು, ನಾವು ಬಾಗಿಸಿದಂತೆ ಬಾಗುವ ನಮನಶೀಲತೆ ಯುಳ್ಳದ್ದಾಗಿರುತ್ತದೆ. ಅದರ ಅಬೋಧ ಚಿತ್ತಕ್ಕೆ ‘ಟ್ವಿಂಕಲ್, ಟ್ವಿಂಕಲ್, ಲಿಟ್ಲ ಸ್ಟಾರ್’ ಎಂದರೇನೋ ಗೊತ್ತಾಗಲಾರದು. ಅದಕ್ಕೆ ಗಣಿತದ ಮೂಲ ಪಾಠ ಮಾಡುವಾಗ ನಿಮ್ಮ One two, pick up the shoe ಬಹಳ ಉತ್ತೇಜನಕಾರಿಯೇನೂ ಆಗಲಾರದು. ಆದರೆ, ‘ನಮ್ಮ ಊರಿನ ಜಾತ್ರೆಯೀ ದಿನ ಬಾರೆ ಹೋಗುವ ಸಾಗುವ’ ಎಂದು ಅದರ ಮುಂದೆ ಸಾಭಿನಯವಾಗಿ ಅಂದು ನೋಡಿ. ಇಲ್ಲವೆ, ಧರಣಿ ಮಂಡಲ ಮಧ್ಯದೊಳಗೆ ನಡೆದ ಕಥೆಯನ್ನು ಸಾದ್ಯಂತವಾಗಿ, ಸರಳವಾಗಿ ಅದಕ್ಕೆ ವಿವರಿಸಿ ನೋಡಿ. ಮುಂಜಾವಿನ ಇಬ್ಬನಿಯ ಮೊದಲ ಸ್ಪರ್ಶಕ್ಕೆ ಪಟಪಟನೆ ದಳ ತೆರೆದು ಅರಳುವ ಹೆಸರಿಲ್ಲದ ಹೂವಿಗೆ ಹೆಸರಾಗುವಷ್ಟು ಮುಗ್ಧವಾಗಿ, ಮೋಹಕವಾಗಿ ಆ ಮೃದು ಮನಸ್ಸು ಅರಳುವುದಕ್ಕೆ ನೀವು ಸಾಕ್ಷಿಗಳಾಗುತ್ತೀರಿ. ಅಂಥ ಶಿಶುಗೀತೆಗಳು ಹೊತ್ತು ತರುವ ಸಾಂಸ್ಕೃತಿಕ ಸಂಪತ್ತಿನ ಮೊತ್ತವೂ ಹೇರಲಾರದಷ್ಟು ಹೊರವಾದುದೇ ಆಗಿದೆ. ಮಾವ, ಭಾವ ಮುಂತಾದ ಸಂಬಂಧ ವಾಚಕಗಳನ್ನು ಅರಿವೇ ಆಗದಂತೆ ಮಗುವಿನ ಭಾವಕೋಶದೊಳಗೆ ಸೇರಿಸುವ ಪರಿಯೋ, ದನಗಾಹಿಯ ದಿನಚರಿಗೆ ಮನಸ್ಸು ಕೊಡುತ್ತಾ ತನ್ನ ಚಟುವಟಿಕೆಗಳನ್ನು ಲಕ್ಷಿಸುವಂತೆ ಮಾಡುವ ಮನಃಶಾಸ್ತ್ರದ ರೀತಿಯೋ, ಎಲ್ಲವೂ ಚೆನ್ನವೇ.

ಭಾಷೆ ಉಳಿಯಬೇಕಾದರೆ, ನಮ್ಮ ಹಿರಿ ಸಂಸ್ಕತಿಯ ಆರಾಧನಾ ಪರಂಪರೆಯು ಇಲ್ಲಿಂದ ಬೇರು ಸಹಿತ ಒಕ್ಕಲೇಳಬೇಕು. ನಮ್ಮ ಚಿಂತನಕ್ರಮ, ಜೀವನ ವಿಧಾನ, ಪೀಠೋಪಕರಣಗಳು, ಅಡುಗೆ-ಉಡುಗೆಗಳೆಲ್ಲವೂ ಸ್ವಕೀಯವಾಗಬೇಕು, ವಂಶವಾಹಿಗಳಂತೆ ನಮ್ಮೊಳಗೆ ಸ್ಪಂದಿ ಸುತ್ತಿರುವ ಜೀವಂತಿಕೆಗೆ ಇದು ಕಾರಣವಾಗಬೇಕು. ಈ ಪ್ರೋತ್ಸಾಹ, ಪ್ರೇರಣೆ, ಉತ್ತೇಜನಗಳ ಪೋಷಕಾಂಗಳ ಸಿಂಪರಣೆಯಿಂದ ಭಾಷೆಯೂ ಹುಲುಸಾಗುತ್ತದೆ.