ಈ ಮುರುಕು ಗುಡಿಸಲಲಿ
ಕಿರಿಹಣತೆ ಬೆಳಗುತಿದೆ
ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ !
ಬಡವರಾತ್ಮದ ಹಣತೆ
ಇಂತೆ ಬೆಳಗುವುದಲ್ತೆ
ಅಜ್ಞಾತವಾಸದಲಿ ದೀನವಾಗಿ.

ಅಲ್ಲಿ ಸೌಧಗಳಲ್ಲಿ
ಬೀದಿ ಸಾಲುಗಳಲ್ಲಿ
ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ.
ಧ್ಯಾನಗಾಂಭೀರ್ಯದಲಿ
ಮತ್ತೆ ಸರಳತೆಯಲ್ಲಿ
ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?

ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ,
ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ?
ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ
ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ.

ಯಾವ ಚಿತ್‌ಶಕ್ತಿಯದು
ಸೂರ್ಯನಲಿ ಬೆಳಕಾಗಿ
ತಾರೆಯಲಿ ಹೊಳಪಾಗಿ
ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ,

ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ
ಹರಿಯುತಿರೆ, ಕಿರಿಹಣತೆ ಕಿರಿದಾದರೇನು ?
ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ?