ಕರ್ನಾಟಕದ ಹಿರಿಯ ತಲೆಮಾರಿನ ಪಿಟೀಲು ವಾದಕರಲ್ಲೊಬ್ಬರಾಗಿರುವ ಬೆಳಗಾವಿಯ ಶ್ರೀ ಹಣಮಂತ ಗಣೇಶ ಲಟಕನ್‌ ಅವರು ಪಿಟೀಲು ಸ್ವತಂತ್ರ ವಾದನ ಹಾಗೂ ಸಾಥ್‌ ಸಂಗತ ಎರಡರಲ್ಲೂ ಸಮಾನ ಪಾಂಡಿತ್ಯ ಪಡೆದವರು. ಸಂಗೀತ ಶಾಲೆ ತೆರೆದು ಸಂಗೀತ ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿರುವ ಶ್ರೀಯುತರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು. ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ೧೯೨೭ರಲ್ಲಿ ಜನಿಸಿದ ಶ್ರೀ ಲಟಕನ್‌ ಅವರು ಚಿಕ್ಕಪ್ಪನವರ ಆಶ್ರಯ ಹಾಗೂ ಸಂಗೀತದ ಮಾರ್ಗದರ್ಶನದಲ್ಲಿ ಬೆಳೆದವರು. ೧೨ ವರ್ಷಗಳ ಕಾಲ ಶ್ರೀ ಗಣಪತ್‌ರಾವ್‌ ಗುರುವ ಅವರಲ್ಲಿ ಪಿಟೀಲು ವಾದನ ಅಭ್ಯಾಸ ಮಾಡಿದ ಶ್ರೀಯುತರು ತದನಂತರ ಶ್ರೀ ಗಜಾನನರಾವ್‌ ಜೋಶಿ ಹಾಗೂ ಶ್ರೀ ಶ್ರೀಧರ್ ಪಾರ್ಸೇಕರ್ ಅವರಿಂದ ಹೆಚ್ಚಿನ ಜ್ಞಾನ ಪಡೆದುಕೊಂಡರು.

೧೯೭೫ರಲ್ಲಿ ಗಂಧರ್ವ ಮಹಾ ಮಂಡಳದ ಸಂಗೀತ ಅಲಂಕಾರ ಪರೀಕ್ಷೆ ತೇರ್ಗಡೆ ಹೊಂದಿದ ಶ್ರೀ ಲಟಕನ್‌ ಅವರು ಸಂಗೀತ ಲೋಕದ ಹಲವಾರು ಅತಿರಥ ಮಹಾರಥರಿಗೆ ಸಾಥಿ ನೀಡಿರುವುದಲ್ಲದೇ, ಭಾರತದ ಹಲವಾರು ಪ್ರಮುಖ ನಗರಗಳಲ್ಲಿ ಸೋಲೋ ಕಾರ್ಯಕ್ರಮ ಕೂಡ ನೀಡಿದ್ದಾರೆ. ಶ್ರೀ ಬಾಲೇಖಾನ (ಸಿತಾರ), ಶ್ರೀ ಬಂಡೋಪಂತ ಸೊಲ್ಲಾಪುರ ಕರ (ಕ್ಲಾರಿಯೋನೆಟ್‌), ಶ್ರೀ ಶೈಲೇಶ ಭಾಗವತ ಠಾಣೆ (ಸನಾದಿ), ಶ್ರೀ ರಮಾಕಾಂತ ನೇವಳೇಕರ (ಸನಾದಿ) ಇವರುಗಳೊಂದಿಗೆ ಶ್ರೀಯುತರು ನಡೆಸಿದ ಜುಗಲ್‌ಬಂದಿ ಕಾರ್ಯಕ್ರಮಗಳು ಪ್ರಶಂಸೆಗೆ ಪಾತ್ರವಾಗಿವೆ.

ಪ್ರಸ್ತುತ ಸ್ವರಸಾಧನಾ ಸಂಗೀತ ವಿದ್ಯಾಲಯ ತೆರೆದು ಹಲವಾರು ಯುವ ಪ್ರತಿಭಾವಂತರನ್ನು ಮಾಧ್ಯಮಕ್ಕೆ ಕೊಡುವ ಸ್ತುತ್ಯ ಕಾರ್ಯ ಮಾಡುತ್ತಿದ್ದಾರೆ. ಶ್ರೀ ಹಣಮಂತ ಗಣೇಶ ಲಟಕನ್‌ ಅವರ ಸಂಗೀತ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.