ranga_column

‘ದುಡ್ಡೇ ದೊಡಪ್ಪ’, ‘ಹಣವಿದ್ದವನದೇ ಜಗತ್ತು’, ‘ಮನಿ ಮೇಕ್ಸ್ ದಿ ವರ್ಲ್ಡ್ ಗೋ ಅರೌಂಡ್’ ಎಂದು ಹಿರಿಯರೋ ಸ್ನೇಹಿತರೋ ಹೇಳುವುದು ನೀವು ಕೇಳಿರಬಹುದು. ಹೌದು, ಅವರು ಹೇಳುವುದು ನಿಜ. ಇವತ್ತು ಹಣವಿಲ್ಲದೆ ಯಾವುದೇ ಕೆಲಸ ನಡೆಯುವುದನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಜಗತ್ತನ್ನೇ ಆಕ್ರಮಿಸಿರುವ ಈ ಹಣದ ಸೃಷ್ಟಿಗೆ ಮುಂಚೆ ನಮ್ಮ ಹಿರಿಯರು ಹೇಗೆ ಬದುಕಿದ್ದರು? ಅವರ ಕಾಲದಲ್ಲೂ ಕೊಡು-ಕೊಳ್ಳುವಿಕೆಯ ಮಾಧ್ಯಮವಾಗಿ ವರ್ತಿಸಲು ಹಣವಲ್ಲದಿದ್ದರೆ ಮತ್ತೇನೋ ಇದ್ದಿರಲೇಬೇಕು. ಹಾಗಾದರೆ ಇಂದಿನ ರೂಪದ ಹಣ ಚಾಲ್ತಿಗೆ ಬರುವ ಮುಂಚೆ ಯಾವೆಲ್ಲಾ ವಸ್ತುಗಳು ವಿನಿಮಯ ಮಾಧ್ಯಮವಾಗಿ ಬಳಕೆಯಲ್ಲಿದ್ದವು ಗೊತ್ತೇ ?

* ಬ್ಯಾಟ್ ಗ್ವಾನೊ: ದಕ್ಷಿಣ ಅಮೇರಿಕಾ ದೇಶಗಳ ಕೆಲವು ಗುಹೆಗಳಲ್ಲಿ ಬಾವಲಿಗಳ, ಸಮುದ್ರದ ಹಕ್ಕಿಗಳ ಹಿಕ್ಕೆ ಸಂಗ್ರಹವಾಗುತಿತ್ತು. ಇದನ್ನು ಅಂದಿನ ಜನ ತಮ್ಮ ವ್ಯವಸಾಯದಲ್ಲಿ ಗೊಬ್ಬರದಂತೆ ಬಳಸುತ್ತಿದ್ದರು. ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರದಿಂದಾಗಿ ಇದನ್ನು ವಿನಿಮಯ ಮಾಧ್ಯಮವಾಗಿ ಅಂದಿನ ಜನ ಒಪ್ಪಿರಬಹುದು.

* ರಕ್ತ: ಆಶ್ಚರ್ಯ ಅನಿಸಿದರೂ ನಿಜ, ರಕ್ತ ಕೂಡ ವಿನಿಮಯ ಮಾಧ್ಯಮವಾಗಿತ್ತು (ರಕ್ತ ನೀಡಿದರೆ ಹಣ ನೀಡುವ ಬ್ಲಡ್ ಬ್ಯಾಂಕ್‌ಗಳು ಇಂದಿಗೂ ಇವೆಯಲ್ಲ!).

* ಮಸಾಲೆ ಪದಾರ್ಥಗಳು: ಎಲ್ಲಾ ಮಸಾಲೆ ಪದಾರ್ಥಗಳು ವಿನಿಮಯ ಮಾಧ್ಯಮವಾಗಿ ರಾಜರಂತೆ ಮೆರೆದ ಉದಾಹರಣೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಜಾಯಿಕಾಯಿ (ಆಡು ಭಾಷೆಯಲ್ಲಿ ಜಾಕಾಯಿ) ವ್ಯಾಪಾರದ ಮೇಲಿನ ಸ್ವಾಮ್ಯಕ್ಕಾಗಿ ಘೋರ ಯುದ್ಧವೇ ನಡೆದುಹೋಗಿದೆ: ಇಂಡೋನೇಷ್ಯಾದಲ್ಲಿರುವ ‘ರನ್’ ಎನ್ನುವ ದ್ವೀಪದ ಮೇಲಿನ ಆಧಿಪತ್ಯಕ್ಕಾಗಿ ಈ ಯುದ್ಧ ನಡೆದಿತ್ತಂತೆ!

* ಚರ್ಮ: ಸಿಂಹ, ಹುಲಿ, ಜಿಂಕೆಗಳ ಚರ್ಮದಿಂದ ಮಾಡಿದ ಹಾಸು (ಕಾರ್ಪೆಟ್), ನಡುಪಟ್ಟಿ (ಬೆಲ್ಟ್) ಅಲ್ಲದೆ ಗುಂಡಾಗಿ ನಾಣ್ಯದ ರೀತಿಯಲ್ಲಿ ಕತ್ತರಿಸಿದ ಚರ್ಮದ ತುಂಡುಗಳು ಕೂಡ ವಿನಿಮಯ ಮಾಧ್ಯಮವಾಗಿ ಬಳಸಲ್ಪಟ್ಟಿವೆ.

* ಟೀ ಸೊಪ್ಪು: ಟೀ ಸೊಪ್ಪು ವಿನಿಮಯ ಮಾಧ್ಯಮವಾಗಿ ಪ್ರಚಲಿತವಾಗಿದ್ದ ಸಮಯದಲ್ಲಿ ಟೀ ಬೆಳೆಯುವ ಪ್ರದೇಶಗಳ ಮೇಲಿನ ಏಕಸ್ವಾಮ್ಯಕ್ಕಾಗಿ ಅಂದಿನ ಜನಾಂಗಗಳ ನಡುವೆ ಬಹಳಷ್ಟು ಕದನಗಳು ನಡೆದಿವೆ.

* ಹೊಳೆಯುವ ಕಲ್ಲುಗಳು (ಪ್ರೆಶಿಯಸ್ ಸ್ಟೋನ್ಸ್): ವಜ್ರ ಸೇರಿದಂತೆ ಹಲವು ಬಗೆಯ ಹೊಳೆಯುವ ಕಲ್ಲುಗಳನ್ನು ಜನ ವಿನಿಮಯ ಮಾಧ್ಯಮವಾಗಿ ಉಪಯೋಗಿಸಿದ್ದಾರೆ. ನಿಗದಿತ ತೂಕ ಮತ್ತು ಆಕಾರದಲ್ಲಿ ಅವುಗಳನ್ನ ವಿಭಜಿಸಿ ವಿನಿಮಯದಲ್ಲಿ ಬಳಸಲು ನಮ್ಮ ಹಿಂದಿನವರು ಕಲಿತಿದ್ದರು.

* ಲೋಹಗಳು: ನಾಗರೀಕತೆ ಬೆಳೆದಂತೆ ವಿನಿಮಯ ಮಾಧ್ಯಮವಾಗಿ ಲೋಹಗಳ ಬಳಕೆ ಪ್ರಾರಂಭವಾಯಿತು. ತಾಮ್ರ, ಬೆಳ್ಳಿ, ಬಂಗಾರ ಲೋಹಗಳ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆಯುತ್ತವೆ . ಯಾವುದರ ಸಿಗುವಿಕೆ ವಿರಳವೋ ಅವು ಹೆಚ್ಚು ಮಾನ್ಯತೆ ಪಡೆಯುತ್ತಿದ್ದವು . ಹೀಗಾಗಿ ಲೋಹಗಳು ವಿನಿಮಯ ಮಾಧ್ಯಮವಾಗಿ ಜನಪ್ರಿಯಗೊಂಡವು. ಈ ಪೈಕಿ ಬಂಗಾರದ ಬಗೆಗಿನ ಮೋಹ ಮಾತ್ರ ಮಿಕ್ಕೆಲ್ಲಾ ವಿನಿಮಯ ಮಾಧ್ಯಮಗಳಿಂತ ಒಂದು ಕೈ ಹೆಚ್ಚು. ಮೊಟ್ಟಮೊದಲ ಬಾರಿಗೆ ಕ್ರಿಸ್ತ ಪೂರ್ವ ೫೫೦ರ ವೇಳೆಯಲ್ಲಿ ಇಂದಿನ ಟರ್ಕಿ ದೇಶದಲ್ಲಿ ಬಂಗಾರವನ್ನು ವಿನಿಮಯ ಮಾಧ್ಯಮವಾಗಿ ಬಳಸಿದ್ದಾಗಿ ಚರಿತ್ರೆಯಲ್ಲಿ ಉಲ್ಲೇಖವಿದೆ. ೧೯ನೇ ಶತಮಾನದ ವೇಳೆಗೆ ಜಗತ್ತಿನ ಬಹುತೇಕ ದೇಶಗಳು ಕಾಗದದ ಹಣವನ್ನು (ಪೇಪರ್ ಕರೆನ್ಸಿ) ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದವು. ಆದರೂ ಬಂಗಾರದ ಮೇಲಿನ ಮೋಹ ಮಾತ್ರ ಇಳಿಯಲಿಲ್ಲ. ಅಂದರೆ ಮೂಲ ಬಂಗಾರವೇ! ಸರಳವಾಗಿ ಹೇಳಬೇಕೆಂದರೆ ಪೇಪರ್ ಹಣ ಮುದ್ರಿಸಲು ನಿಗದಿತ ಮಟ್ಟದ ಬಂಗಾರ ಇರಬೇಕಿತ್ತು. ಇದನ್ನು ಗೋಲ್ಡ್ ಸ್ಟ್ಯಾಂಡರ್ಡ್ ಎಂದು ಕರೆಯಲಾಗುತ್ತದೆ. ಅಂದರೆ, ೧೦೦ ರೂಪಾಯಿ ಮೌಲ್ಯದ ನೋಟು ಮುದ್ರಿಸಿದರೆ ಬ್ಯಾಂಕಿನ ಬಳಿ ನೂರು ರೂಪಾಯಿ ಮೌಲ್ಯದ ಬಂಗಾರ ಇರಬೇಕಿತ್ತು. ಹೀಗೆ ನೂರಕ್ಕೆ ನೂರು ಗೋಲ್ಡ್ ಠೇವಣಿ ಕುಸಿಯುತ್ತ ಬಂದು, ಎರಡನೇ ಮಹಾಯುದ್ಧದ ನಂತರ ಅಮೇರಿಕಾ ದೇಶವು ನೋಟ್ ಮುದ್ರಿಸಲು ಗೋಲ್ಡ್ ಸ್ಟ್ಯಾಂಡರ್ಡ್ ಅನ್ನು ತೆಗೆದುಹಾಕಿದೆ. ಮೌಲ್ಯ ಅಳೆಯಲು ಯಾವುದೇ ಮಾನದಂಡ ಇಲ್ಲದ ಅಮೇರಿಕಾ ಡಾಲರ್ ಇಂದು ವಿತ್ತ ಜಗತ್ತನ್ನ ಆಳುತ್ತಿರುವುದು ಜಗತ್ತಿನ ವಿಪರ್ಯಾಸಗಳಲ್ಲೊಂದು.

* ಇತರ ವಸ್ತುಗಳು: ಉಪ್ಪು, ಬಾರ್ಲಿ, ಮೀನು, ಅಕ್ಕಿ, ಬಟ್ಟೆ ಹಾಗೂ ಜಾನುವಾರುಗಳನ್ನು ಕೂಡ ವಿನಿಮಯ ಮಾಧ್ಯಮದಂತೆ ಬಳಸಿದ್ದಕ್ಕೆ ಇತಿಹಾಸದಲ್ಲಿ ಅನೇಕ ಸಾಕ್ಷಿಗಳು ಸಿಗುತ್ತವೆ. ಸಮುದ್ರದಲ್ಲಿ ಸಿಗುವ ಮುತ್ತು, ಹವಳ, ಶಂಖದ ಚಿಪ್ಪುಗಳೂ ವಿನಿಮಯ ಮಾಧ್ಯಮವಾಗಿ ಚಾಲ್ತಿಯಲ್ಲಿದ್ದವಂತೆ. ಮದ್ದುಗುಂಡುಗಳನ್ನು, ಶಸ್ತ್ರಾಸ್ತಗಳನ್ನೂ ಹಿಂದಿನ ರಾಜಮಹಾರಾಜರು ವಿನಿಮಯ ಮಾಧ್ಯಮವಾಗಿ ಬಳಸುತ್ತಿದ್ದದ್ದುಂಟು. ನಾಗರೀಕತೆಯೇ ನಾಚುವಂತೆ ಮಾಡುವ ‘ಜೀತ ಪದ್ಧತಿ’ ಕೂಡ ಒಂದು ರೀತಿಯ ವಿನಿಮಯ ಮಾಧ್ಯಮವೇ! ಮನುಷ್ಯರನ್ನು ಗುಲಾಮರಂತೆ ಮಾರುತ್ತಿದ್ದುದು ಕೂಡ ಒಂದು ರೀತಿಯ ವಿನಿಮಯದ ಅಡಿಯಲ್ಲಿಯೇ ಬರುತ್ತದೆ ಎನ್ನಬಹುದು.

ಇವೆಲ್ಲದಕ್ಕಿಂತ ವಿಭಿನ್ನವಾಗಿ ಸೇವೆಯನ್ನೇ ಮುಖ್ಯವಾಗಿಟ್ಟುಕೊಂಡು ಮಹಾನ್ ಸಾಮ್ರಾಜ್ಯ ಕಟ್ಟಿದ್ದು ಇಂಕಾ ನಾಗರೀಕತೆಯ ವೈಶಿಷ್ಟ್ಯ.

ಇಂಕಾ ನಾಗರೀಕತೆಯ ಬಗ್ಗೆ ಕೇಳಿಲ್ಲದವರು ಯಾರು? ಇಂಕಾ ಎಂದ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಅಮೆರಿಕಾದ ಪೆರು ದೇಶ. ಆದರೆ ಇಂಕಾ ಮಹಾಸಾಮ್ರಾಜ್ಯ ಪೆರುವಷ್ಟೇ ಅಲ್ಲ, ಬೊಲಿವಿಯಾ, ಈಕ್ವಾಡೋರ್, ಮಧ್ಯ ಚಿಲಿ, ಉತ್ತರ ಅರ್ಜೆಟೀನಾ, ದಕ್ಷಿಣ ಕೊಲಂಬಿಯಾಗಳನ್ನೂ ಒಳಗೊಂಡಿತ್ತು. ಅಲ್ಲಿನ ಜನರು ವಿನಿಮಯಕ್ಕಾಗಿ ಯಾವುದೇ ವಸ್ತು ಬಳಸದೆ ಇಷ್ಟೆಲ್ಲ ದೊಡ್ಡ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಇಂದಿಗೂ ನಂಬಲು ಕಷ್ಟವಾಗುವ ಸಂಗತಿ!

ಇಂಕಾ ಸಾಮ್ರಾಜ್ಯದ ನೆರೆಹೊರೆಯಲ್ಲಿ ಇದ್ದ ಅಜ್ಟೆಕ್ ಮತ್ತು ಮಾಯನ್ನರು ಹುರಳಿ ಬೀಜ ಹಾಗೂ ಬಟ್ಟೆಯನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು. ಆದರೆ ಇಂಕನ್ನರು ಮಾತ್ರ ಇಂತಹ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮದೇ ಆದ ‘ಮಿತ’ ಎನ್ನುವ ಪದ್ದತಿಯನ್ನು ಜಾರಿಗೆ ತಂದಿದ್ದರು. ಅದರ ಪ್ರಕಾರ ೧೫ ವರ್ಷ ತುಂಬಿದ ಪ್ರತಿ ಇಂಕಾ ಪುರುಷ ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಎಷ್ಟು ಕೆಲಸವಿದೆ ಎನ್ನುವುದರ ಮೇಲೆ ವರ್ಷದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎನ್ನುವುದು ನಿರ್ಧಾರವಾಗುತ್ತಿತ್ತು. ಹೆಚ್ಚೆಂದರೆ ವರ್ಷದ ಶೇ.೭೦ ಭಾಗ ಕೆಲಸ ಉಳಿದ ೩೦ ಭಾಗ ವಿಶ್ರಾಂತಿ. ಇದಕ್ಕೆ ಬದಲಾಗಿ ವಾಸಿಸಲು ಕಟ್ಟಡ, ಉಡಲು ಬಟ್ಟೆ, ಸೇವಿಸಲು ಆಹಾರ, ವಿಹಾರಕ್ಕೆ ಉತ್ತಮ ರಸ್ತೆ – ಹೀಗೆ ಬದುಕಲು ಏನು ಬೇಕೋ ಅವೆಲ್ಲವೂ ಪುಕ್ಕಟೆ ಸಿಗುತಿತ್ತು. ಮನೋದೈಹಿಕ ಸ್ಥಿತಿಗೆ ಅನುಗುಣವಾಗಿ ಕೆಲಸ ಹಂಚಲಾಗುತಿತ್ತು. ಅದೊಂದು ರೀತಿಯಲ್ಲಿ ‘ಎಲ್ಲವೂ ಎಲ್ಲರಿಗೂ ಸೇರಿದ್ದು’ ಎನ್ನುವ ಭಾವನೆ ಮೇಲೆ ಕಟ್ಟಲಾಗಿದ್ದ ನಾಗರೀಕತೆ.

ಸೂಕ್ಷ್ಮವಾಗಿ ನೋಡಿದರೆ ಇಲ್ಲಿಯೂ ವಿನಿಮಯ ಉಂಟು, ಅದರೆ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ ಅಷ್ಟೇ. ಇಲ್ಲಿ ಸೇವೆಯೇ (ಸರ್ವಿಸ್) ವಿನಿಮಯ. ಸೇವೆ ಸಂಗ್ರಹಿಸಿಡಲು ಆಗದಿರುವ ವಿನಿಮಯವಾದ್ದರಿಂದ ಆ ನಾಗರೀಕತೆ ಹೆಚ್ಚು ಸಂತೋಷದಿಂದ ಬದುಕಲು ಸಾಧ್ಯವಾಯಿತು. ಸಂಗ್ರಹಿಸಿ ಇಡಬಹುದಾದ ಯಾವುದೇ ವಿನಿಮಯ ಬದುಕಲ್ಲಿ ಬೇಕಿಲ್ಲದ ಪೈಪೋಟಿ ಅಲ್ಲದೆ ಮತ್ತೇನನ್ನೂ ನೀಡದು.

ನಾವೂ ಇಂಕನ್ನರಿಂದ ಕಲಿಯೋಣವೇ?

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]