ಸೂಚನೆ ||
ಹರಿ ಶಿಲೆಯಮೇಲೆ ನಡೆಗಿ ಸವ್ಯಸಾಚಿ ಸೌ |
ಭರಿಯ ದೆಸೆಯಿಂದ ಮುದ್ದಾಲಕನ ಕಥೆಗೇಳು |
ತಿರದೆ ಹಂಸಧ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು ||

ಆಲಿಸೆಲೆ ಜನಮೇಜಯಕ್ಷಿತಿಪೆ ಮುಂದಣ ಕ |
ಥಾಲಾಪ ಕೌತುಕವನುಚಿತದಿಂ ಫಲುಗುಣಂ |
ನೀಲಧ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ ||
ಮೇಲೆ ನಡೆದಂ ತೆಂಕಮೊಗಮಾಗಿ ಹಯದೊಡನೆ |
ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ |
ಸಾಲದೇಳುವ ಧೂಳಿಗೆಣ್ದೆಸೆ ಕಠೋರ ವಾದ್ಯಧ್ವನಿಗೆ ನೆರೆಯದೆನಲು ||೧||

ಸಹದೇವನಾಗಿ ಸಮುದಿತ ನಕುಲನಾಗಿ ಸ |
ನ್ನಿಹಿ ತಾರ್ಜುನನುಮಾಗಿ ವರ ವೃಕೋದರನಾಗಿ |
ಮಹದಿಳಾ ಭೃದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ ||
ಅಹಿತರುಗಳಂ ಧಾರ್ತರಾಷ್ಟ್ರರಂ ಕೂಡಿಕೊಂ |
ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ |
ಬಹ ಪಾರ್ಥನಂ ಕರೆದು ಮೂದಲಿಪ ತೆರದಿಂದೆ ವಿಂಧಾದ್ರಿ ಮುಂದೆಸೆದುದು ||೨||

ಎಸೆದುದಾ ಗಿರಿ ಗಗನ ಮಂಡಲವನಂಡಲೆವ |
ಲಸದುನ್ನತದ ಶೃಂಗದುತ್ಕರದ ಸತ್ಕರದ |
ಶಶಿಕಾಂತಮಯವಾದ ರಮಣೀಯ ಕಮನೀಯ ಕಂದರದ ಸೌಂದರದೊಳು ||
ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ |
ದಶನದುಗ್ರಾಹಿಗಳ ಪುತ್ತಗಳ ಮುತ್ತಗಳ |
ಬೆಸಲಾದ ಪೆರ್ಬಿದಿರ ಕಾಡುಗಳ ಬೀಡುಗಳ ಶಬರಿಯರ ಸಂಕುಲದೊಳು ||೩||

ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ  ರಮಿಸುತಿಹ |
ಯಕ್ಷ ಕಿನ್ನರ ಕೀಮಪುರುಷ ಗಂಧರ‍್ವ !
ರಕ್ಷೆಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ ||
ಋಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದೆ |
ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಗಳಿಂದ |
ಮಕ್ಷಿಗಚಲೇಂದ್ರಮೆಸೆದಿರ್ದುದು ಪುಳಿಂದಿಯರ ತನುಗಂಧ ಬಂಧುರದೊಳು ||೪||

ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ |
ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ |
ನಭದಂತೆ ಕುಜಯುತಂ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ ||
ಶುಭ ಸುರಭಿ ಸಂಭೃತಂ ರಣದಂತೆ ಶರವೃತಂ |
ಸಭೆಯಂತೆ ಚಿತ್ರ ಪತ್ರಾನ್ವಿತಂ ದಿನಕರ |
ಪ್ರಭೆಯಂತೆ ಪುಂಡರೀಕೋಲ್ಲಾಸಕರಮಾಗಿ ಸಚ್ಛೈಲಮೆಸೆದಿರ್ದುದು ||೫||

ನಾಗಭೂಷಣವಾಗಿ ಶಿವನಲ ಹರಿಗಿರ್ಕೆ |
ಯಾಗಿ ಪಾಲ್ಗಡಲಲ್ಲಿ ಶಿಖೀ ನಿವಾಸಸ್ಥಾನ |
ಮಾಗಿ ದಿಗ್ಭಾಗಮಲ್ಲಷ್ಟಾಪದೋದ್ಭಾಸಮಾಗಿ ನೈಪಥ್ಯಮಲ್ಲ ||
ಗೋ ಗಣಾನ್ವಿತಮಾಗಿ ವ್ರಜಮಲ್ಲ ಖಡ್ಗ ಧರ |
ನಾಗಿ ಪಟುಭಟನಲ್ಲ ಮಹಿಷೀ ವಿಲಾಸಕರ |
ಮಾಗಿ ನೃಪಗೇಹಮಲ್ಲೆನಿಸಿರ್ದುದಾಶ್ಚರ್ಯ ಸಾಂದ್ರಮಚಲೇಂದ್ರಮೆಸೆದು ||೬||

ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ |
ತಂಗಮಯಮನುಪಮ ಭೂಜಂಗಮಯಮುನ್ನತ ಲ |
ವಂಗಮಯಮವಿತ ಸಾರಂಗಮಯಮದ್ಭುತದ ಸಿಂಗಮಯ ಶರಭಮಯವು ||
ಭೃಂಗಯಮವಿರಳ ವಿಹಂಗಮಯಮೊಪ್ಪುವ ಕು |
ರಂಗಮಯಮವರಿಯರನಂಗಮಯ ಕೇಳಿಗಳ |
ಸಂಗಮಯಮೆನಿಪ ಗಿರಿ ಭಂಗಮಯಮಲ್ಲದುತ್ತುಂಗಮಯ ಮಾಗಿರ್ದುದು ||೭||

ಬಹು ಕಾಲಮೆನಗೆ ನೀರ‍್ಮಳೆಗರೆದ ಪುರುಷಾರ್ಥ |
ಕಹಹ ಮೃದ್ಬಿಂದುಗಳನೀಗ ಸುರಿದಪೆನೆಂದು |
ಮಹಿ ನಭಸ್ಥಳಕೂರ್ಧ್ವಮುಖಮಾಗಿ ಸೂಸುವ ರಜದ ಸೋನೆಯನೆ ದೂಳಿಡೆ ||
ಬಹುಳ ತರು ಗುಲ್ಮಲತೆ ಮೃಗ ಪಕ್ಷಿ ಕ್ರಿಮಿ ಕೀಟ |
ಗುಹೆ ದೊಣೆ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು |
ಗಹನ ಗಹ್ವರದ ವಿಂಧಾದ್ರಿಯಂ ಫಲುಗುಣನ ಸೇನೆ ತುಳಿದಸಿಯರೆದುದು ||೮||

ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ |
ಗಿರಿಯ ದುರ‍್ಮಾರ್ಗಮುಂ ಸನ್ಮಾರ್ಗಮಾಯ್ತು ದು |
ರ್ಧರ ಹೃದಯ ವನಜಾಂಧಕಾರಮುಂ ಸುಪ್ರಕಾಶಿತಮಾಯ್ತು ವಿಕೃತಿಯಡಗಿ ||
ಉರುತರ ಪ್ರಭವ ದವಮುಕ್ತ ಭಾವಿತಮಾಯ್ತು |
ನಿರುಪಮಾಶಾ ಪರಜ್ಞಾನಮಾಯ್ತಿರದೆ ಗೋ |
ಚರಮಾಯ್ತು ವಿಷ್ಣುಪದಮೆನೆ ನಡೆದುದಾ ಹಯಂ ಬೆಂಬಿಡದ ಸೇನೆ ಸಹಿತ ||೯||

ಮಂದಿ ಸಂದಣಿಸಿ ಬೆಂಕೊಂಡು ನಡೆತರೆ ಕುದುರೆ |
ಮುಂದೆ ಬರೆವರೆ ಕಂಡುದೊಂದು ಯೋಜನದಗಲ |
ದಿಂದೆಸೆವೆ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು ||
ಬಂದಡರ್ದಾ ಕಲ್ಲ ಮೇಲೆ ಹರಿ ಕಾಲಿಟ್ಟು |
ದಮದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ |
ಣಿಂದಾಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು ||೧೦||

ಕಾಲಿಡಲ್ಕಾ ಶಿಲೆಯೊಳಾ ತುರಂಗದ ಖುರಂ |
ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ |
ಮೇಲೆ ನಡೆಗೆಟ್ಟು ನಿಂದುದು ದರದ್ರನ ಮನೋರಥದಂತೆ ನಿಜ ತನುವಿನ |
ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್ |
ಭೂಲೋಲ ಕೇಳೈಕ್ಯಮಾಗಿರ್ದುದಾ ಕಲ್ಲೊ |
ಳಾ ಲಲಿತ ವಾಜು ಪೂರ್ಣೇಂದು ಮಂಡಲದೊಳೊಪ್ಪುವ ಮೃಗಾಂಕದ ತೆರದೊಳು ||೧೧||

ಗಾಳಿಯಂ ಮುಕ್ಕು ನಡೆವಾ ಹಯಂ ಕಾಲ್ಗಳಂ |
ಕೀಳಲಾರದೆ ನಿಂದುದರೆಯೊಳೇನಚ್ಚರಿಯೊ |
ಪೇಳಬೇಕೆಂದು ಚರರೈತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು ||
ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ |
ಗಾಳನಟ್ಟಿದನಬ್ಬರಿಸಿ ಸೇಳೆಗಳಿಂದ ಪೊ |
ಯ್ದೆಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡಿಯೊಳು ||೧೨||

ಬಳಿಕ ಚಿಂತಿಸಿದನರ್ಜುನನಿದೇನಾದೊಡಂ |
ಮುಳಿದ ಮುನಿಪನ ಶಾಪಮಾಗಬೇಕೀ ವನ |
ಸ್ಥಳದೊಳಾಶ್ರಮಮುಂಟೆ ನೋಳ್ಪುದಗಲದೊಳೆಂದು ಚಾರರಂ ಕಳುಹಲವಾರು ||
ತೊಳಲಿ ನಿಮಿಷದೊಳರಸಿ ಬಮದು ಬಿನ್ನೈಸಲ್ಕೆ |
ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ |
ಕಲಿ ಯೌವನಾಶ್ವ ನೀಲಧ್ವಜರನೈವರಂ ಕೂಡಿಕೊಂಡೈತಂದನು ||೧೩||

ವೆಗ್ಗಳಿಸರಿನ ಚಂದ್ರ ಪವನ ಶಿಖೀ ಪರ್ಜನ್ಯ  |
ರೊಗ್ಗಿಹವು ವೈರಮಿಲ್ಲದೆ ನಿಖಿಳ ಮೃಗಪಕ್ಷಿ |
ಮೊಗ್ಗಲರ್ ಕಾಯ್ಪಣ್ತಳಿರ್ಗಳಿಂ ಬೀಯವೆಂದೆಂದುಮೆಲ್ಲಾ ತರುಗಳು ||
ಸಗ್ಗದವರಂತೆ ಬೇಡಿದನೀವುವಾವಗಂ ||
ಸುಗ್ಗಿಯಾಗಿಹುವಾರು ಋತುಗಳುಂ ಸಲೆ ಪೆಚ್ಚು |
ತಗ್ಗು ಶೀತೋಷ್ಣ ಸುಖದುಃಖಂಗಳೊಗೆ ಯದಾಶ್ರಮವೊಂದು ಮುಂದೆಸೆದುದು ||೧೪||

ವೇದಶಾಸ್ತ್ರಾಗಮ ಸ್ಮ*ತಿ ಪುರಾಣಾವಳಿಯ |
ನೋದಿಸುವ ಕುಶ ಸಮಿತ್ಪುಷ್ಪ ಫಲ ಮೂಲ ಪ |
ರ್ಣಾದಿಗಳನೊದವಿಸುವ ಜಪ ತಪಸ್ಸ್ನಾನಾಗ್ನಿಹೋತ್ರ ವಿಧಿ ವೇಳೆಗಳನು ||
ಸಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ |
ರಾಧನೆಗಳಂ ಮಾಡುವತಿಥಿಗಳನಳ್ತಿಯಿಂ |
ದಾದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು ||೧೫||

ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ |
ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ |
ಮೃಡನೊ ಗಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣುವೊ ||
ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ |
ದೊಡಲೊ ಪೇಳೆಂಬ ಸೌಭರಿ ಮುನಿಪನಾಶ್ರಮದ ||
ನಡುವೆ ಕುಳ್ಳಿರ್ದು ಸಿಖಯೋಗದೊಳಿರಲ್ಕೆ ನಡೆತಂದರ್ಜುನಂ ಕಂಡನು ||೧೬||

ಬಂದು ಸಾಷ್ಟಾಂಗದಿಂದೆರಗಿ ಸೌಭರಿ ಮುನಿಯ |
ಮುಂದೆ ಕೈಮುಗಿದು ನಿಲಲಾ ಪಾರ್ಥನಂ ಪ್ರೀತಿ |
ಯಿಂದೆ ಸತ್ಕರಿಸಿ ಕುಶಲಂಗಳಂ ಕೇಳ್ದಿಲ್ಲಿಗೇಕೆ ಬರವಾಯಿತೆನಲು ||
ಅಂದು ಕುಲಗೋತ್ರಮಂ ಕೊಂದ ಪಾಪಂ ಪೋಗ |
ಲೆಂದಶ್ವಮೇಥಮಂ ತೊಡಗಿ ಯೆನ್ನಂ ಧರ‍್ಮ |
ನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿತದು ಶಿಲೆಯೊಳು ||೧೭||

ಎಲೆ ಮುನೀಶ್ವರ ತವಾನುಗ್ರಹದೊಳಲ್ಲದೀ |
ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ |
ನುಳುಹಬೇಕೆಂದೆರಗಲರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು ||
ತಿಳುಹಿದಂ ಪಿಂತೆ ಬಾರತ ಯುದ್ಧ ಮಧ್ಯದೊಳ್ |
ನಳಿನನಾಭಂ ನಿನಗೆ ಮತ್ತೆಯುಮಹಂಕಾರ |
ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದನು ||೧೮||

ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ |
ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ |
ದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ ||
ಆ ಕೃತಾಂತಕ ನರಿದುದಿಲ್ಲಲಾ ಲೋಕದೊಳ್ |
ಪ್ರಾಕೃತರ ತೆರದಿಂದೆ ಹರಿ ಮನೆಯೊಳಿರೆ ಗರ್ದ |
ಭಾಕೃತಿಯ ಹರಿಯೊಡನೆ ಬಂದೆ ಸುರ ಭೂಜಮಿರೆ ಶಾಲ್ಮಲಿಯನರಸುವಂತೆ ||೧೯||

ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ |
ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊಂದೆಯ |
ಕಟ್ಟುವೆಯಲಾ ತುರಗಮೇಮೆಧಗೈವುದಾ ಹರಿಯ ಸಾನ್ನಿಧ್ಯಮಿರಲು ||
ಹುಟ್ಟಿತಿಲ್ಲವೆ ನಿನಗರಿವು ಧರ‍್ಮಸೂನು ಮತಿ |
ಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿಮ |
ಗಟ್ಟಿತೆಂದಮರೇಂದ್ರ ತನಯನಂ ಜರೆದು ಸೌಭರಿ ನುಡಿದೊಡಿಂತೆಂದನು ||೨೦||

ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ |
ಭರಿತನಾಗಿಹನಾವಗಂ ಧರ‍್ಮಸೂನು ಮರೆ |
ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು ||
ತರಳತೆಯ ಮೆರೆವಗಿಂತರಿವನುಪದೇಶಿಪೊಡೆ |
ಗುರುಗಳಲ್ಲದೆ ನೀವು ಧನ್ಯರಾದಪೆವಿನ್ನು |
ಕರುಣದಿಂದೀ ಶಿಲೆಯೊಳೊಂದಿದ ತುರುಂಗಮಂ ಬಿಡಿಸಿಕೊಡಬೇಕೆಂದನು ||೨೧||

ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ |
ನಿನ್ನ ಹಸ್ತಸ್ಪರ್ಶನಂ ಗೆಯ್ದೊಡಾ ಕುದುರೆ |
ಮುನ್ನಿನಂತವನಿಯೊಳ್ ನಡೆದಪುದು ಪೋಗು ನೀನೆಂದು ಸೌಭರಿ ನುಡಿಯಲು ||
ತನ್ನೊಳಗೆ ತಾನೆ ವಿಸ್ಮಿತನಾಗಿ ಪಾರ್ಥನದ |
ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ |
ಪನ್ನ ತಾಪಸನರ್ಜುನಂಗೆ ವಿಸ್ತರಿಸಿದಂ ಮತ್ತೆ ಪೂರ್ವಾಪರವನು ||೨೨||

ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು |
ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ  |
ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂಬಾಕೆ ಬಳಿಕ ||
ಕಾಲಕಾಲದ ಜಪಾನುಷ್ಠಾನಪೂಜೆಗಳಿ |
ಗಾಲಸ್ಯಮಂ ಮಾಡದೆನ್ನ ಪರಿಚರ‍್ಯೆಗನು |
ಕೂಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು ||೨೩||

ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ |
ಗೊಳ್ಳದಿರ್ ಪರಿಚರೈ ಮನೆವಾಳ್ತೆಯೆಂದೆಂಬ |
ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ ||
ಮುಳ್ಳಿಡಿದ ಮರವೇರಿದಂತಾದುದಿಹಪರಕಿ |
ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ |
ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಾಲಕಂ ಚಿಂತಿಪಂ ಪ್ರತಿದೊನದೊಳು ||೨೪||

ಇಂತಿರುತಿರಲ್ಮೆ ಕೌಂಡಿನ್ಯನೆಂಬೊರ್ವಮುನಿ |
ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ |
ಚಿಂತೆವೆತ್ತಿರಲನಿದೇನೆಂದು ಬೆಸೆಗೊಂಡೊವಳ ಪ್ರತಿಕೂಲತೆಯನು ||
ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ |
ಮುಂತೆ ವಿಪರೀತಮಂ ಮಾಡಲಾದಪುದೆಂದು |
ಸಂತಾಪಮಂ ಬಿಡಿಸಿ ಬೀಳ್ಕೊಂಡವಂ ತೀರ್ಥಯಾತ್ರೆಗೈದಿದನಿತ್ತಲು ||೨೫||

ಉದ್ದಾಲಕಂ ಬಳಿಕ ತನ್ನ ಮಂದಿದೊಳಿರು |
ತಿದ್ದಸಮಯಕೆ ಪಿತೃಶ್ರಾದ್ಧದಿವಸಂ ಬಂದೊ |
ಡೆದ್ದು ಚಂಡಿಯೊಳೆಲಗೆ ನಾಳೆ ಪೈಸೃಕಮದಂ ನಾಡಿದಲ್ಲದೆ ಮಾಡೆನು ||
ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ |
ಪೊದ್ದಲೀಯೆಂ ಶುದ್ಧವಸ್ತುಗಳ ನೋಂದುಮಂ |
ತದ್ದಿನಕೆ ಮರುದಿವಸದೊಳ್ ಪೇಳ್ದು ಬಹೆನಪಾತ್ರಂಗೆಂದೊಡಿಂತೆಂದಳು ||೨೬||

ನಾಳೆ ಮಾಡಿಸುವೆನಂ ಪೈತೃಕವನುತ್ತಮದ |
ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆ |
ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ ||
ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ |
ಶಾಲಗುಣಸಂಪನ್ನ ವೇದಪಾರಂಗತ ಸು |
ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು ||೨೭||

ಅದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ |
ಳಾದರಿಸೆನಾಂ ಬಂದ ವಿಪ್ರರಂ ಪಾಕನ ನ |
ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಬೋಜ್ಯಾದಿಗಳನು ||
ಸ್ವಾದುಫಲ ಶರ್ಕರ ವಿನುತ ಶಾಕ ನಿರ‍್ಮಲ ಪ |
ಯೋಧಧಿಗಳಂ ಸಕುತ್ಸಿತಮಾಗದಂತೆ ಸಂ |
ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ||೨೮||

ಎಂದೊಡೆ ಕುತುಪಕಾಲಮಂ ವಿರಲೀಯೆನಾಂ |
ಬಂದ ವಿಪ್ರರನಾದರಿಸಿ ಪೂಜೆಗೈದಿರೆ |
ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣೆನು ||
ತಂದಮಲವಸ್ತ್ರ ತಾಂಬೂಲ ವರದಕ್ಷಣೆಗ |
ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ |
ವಿಂದೊದವಿಸಿದಳಖಿಲಸದ್ದ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು ||೨೯||

ಕಂಡನೀತೆರನನುದ್ದಾಲಕಂ ಸಂತಸಂ |
ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ |
ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ ||
ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ |
ಪಿಂಡಮಂ ತೆಗೆದು ಮಡುವಿನೊಳ್ ಹಾಯ್ಕೆಂದೊಡು |
ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷನಾದನು ||೩೦||

ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ |
ಛಲಿತಕಲಿಸಿದೆ ನೀನರೆಯಾಗಿ ಹೋಗೆಂದು |
ಸಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದಾ ||
ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು |
ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು |
ತೊಲಗಿದಂ ಸಂನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲು ||೩೧||

ಮೋಕ್ಷಮಹುದಾಗಿ ಚಂಡಿಗೆ ಶಾಪವಿಗಳುಪ |
ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ |
ಲೀಕ್ಷಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು ||
ರಾಕ್ಷಸಾರಿಯನೆ ಮರೆಯದಿರೆಮದು ಸೌಭರಿ ನಿ |
ರೀಕ್ಷಿಸಿ ಕೃಪಾವಲೀಕನದಿಂದೆ ವರಸಹ |
ಸ್ರಾಕ್ಷನ ಕುಮಾರನಂ ಕಳೂಹಲಾನತನಾಗಿ ವಿನಯದಿಂ ಬೀಳ್ಕೊಂಡನು ||೩೨||

ತದನಂತರದೊಳರ್ಜುನಂ ಬಂದು ಕುದುರೆಯಂ |
ಮುದದಿಂದೆ ಮುಟ್ಟಲದು ಬಿಟ್ಟು ನಡೆದುದು ಮುಂದ |
ಕೊದರಿಕೊಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು ||
ಒದವಿದ ಸಮಸ್ತ ಜನಮಾಗ ವಿಸ್ಮಿತವಾದುದು |
ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ |
ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ ||೩೩||

ಘನಘೋಷದಿಂದ ವಾಹಿನಿಗಳೈತರುತಿರಲ್ |
ವನಧಿ ಮೇರೆಯನತಿಕ್ರಮಿಸಿ ಬಂದಪುದೆಂದು |
ಮುನಿದು ಭೂಮಂಡಲಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತಿರಲು ||
ಅನುಸಾಲ್ವ ಸಾತ್ಯಕಿ ಪ್ರದ್ಯುಮ್ನ ಯೌವನಾ |
ಶ್ವನರೇಶ ವೃಷಕೇತು ನೀಲಧ್ವಜರ ಸೈನ್ಯ |
ಮನುಪಮಿತಮಾಗಿ ನಡೆದುದು ಚಂಪಕಾನಗರಿಗರ್ಜುನನ ಹಯದಕೂಡೆ ||೩೪||

ತವೆ ಸರ‍್ವಮಂಗಳಾಸ್ಪದಮಾದೊಡಂ ಪರಾ |
ಭವಯುಕ್ತಮಾಗಿರ್ಪುದೆಂದು ಕೈಲಾಸಾಚ |
ಲವನತುಳಲಕ್ಷ್ಮೀನಿಳಯಮಾದೊಡಂ ಭಂಗಸಹಿತಮಾಗಿರ್ಪುದೆಂದು ||
ಅವಿರಳಪಯೋನಿಧಿಯನಟ್ಟಹಾಸಂ ಮಾಡು |
ವವೊಲಿರ್ದುದಾಪುರಂ ಪ್ರಾಸಾದಕೋಟೆಗಳ |
ಧವಳಿದು ಸುಧಾಕೀರ‍್ಣ ರುಚಿಗಳಿಂ ಪೊರೆಗೆ ನೋಡುವ ಜನರ್ಗೇವೇಳ್ವೆನು ||೩೫||

ಇದು ಪುರಸ್ತ್ರೀಯ ಮಣಿಕಾಂಚೀವಲಯವೊ ಭೂ |
ಸುದತಿಯ ಕೊರಳ ವಿರಾಜಿಪ ರತ್ನಮಾಲಿಕೆಯೊ |
ಶ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಿಶದಾ |
ಪೊದರುವೆಳಗಿಳೆಗಿಳಿದು ವಜ್ರಮಯಮಾಗಿ ನಿಂ |
ದುದೊ ವಿಮಲಕೀರ್ತಿಚಂದ್ರಿಕೆಯಂ ಪರಪುವ ನಗ |
ರದ ರಾಜಮಂಡಲದ ಪರವೇಷಮೋ ಪೇಳೆನಲ್ ಕೋಟೆ ಕಣ್ಗೆಸೆದುದು ||೩೬||

ಆ ನಗರದರಸು ಹಂಸಧ್ವಜಂ ಕೇಳ್ದನೀ |
ಸೇನೆಸಹಿತರ್ಜುನಂ ವರಮಖ ತುರಂಗ ರ |
ಕ್ಷಾನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದೆ ಬಳಿಕ ||
ಧಾನಿಸಿದನೊಂದೆರಡುಗಳಿಗೆ ತನ್ನಾಪ್ತಪ್ರ |
ಧಾನರೆಲ್ಲರನಾಗ ಕರೆಸಿಕೊಂಡವರೊಳ್ ನಿ |
ಧ್ಯಾನಿಸಿ ನುಡಿದನಂದು ಶ್ರದ್ದಾಳು ಸುಮತಿ ಪ್ರಮತಿಯೆಂಬ ಮಂತ್ರಿಗಳ್ಗೆ ||೩೭||

ಈ ಧನಂಜಯನ ತುರಗವನೀಗ ಕಟ್ಟಿದೊಡೆ |
ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ |
ನೀಧರೆಯೊಳಿರುತಿರ್ದಮಿನ್ನೆಗಂ ಕಂಡುದಿಲ್ಲಚ್ಯುತನ ಮೂರುತಿಯನು ||
ಬಾಧಿಸುವುದೀ ದೇಹಮಂ ನರೆತೆರೆಗಳಿನ್ನು |
ಸಾಧಿಸುವುದೇನಸುರರಿಪು ಬಂದು ತನ್ನೊಳ್‌ವಿ |
ರೋಧಿಸಿದೊಡಿನಿತರಿಂದಳಿದೊಡೇನುಳಿದೊಡೇನೆಂದನೆ ನೃಪತಿ ನಗುತೆ ||೩೮||

ಆ ನರಾಧಿಪತಿ ನಿಶ್ಚೈಸಿದಂ ಕದನಮಂ |
ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ |
ತಾನಾಳ್ವ ದೇಶದೊಳ್ ತನ್ನನಗರದೊಳೇಕಪತ್ನೀವ್ರತದೊಳಿರದೊಡೆ ||
ದಾನವಾರಿಯ ಪೂಜೆಗೈಯ್ಯದೊಡೆ ಸಂತತಂ |
ದಾನಧರ್ಮಂಗಳಂ ಮಾಡದೊಡೆ ಗತಿಗೆಟ್ಟು |
ಹೀನಜಾತಿಗಳೊಡನೆ ಕೂಡಿದೊಡೆ ಸೈರಿಸಂ ಪರಿವಾರದೊಳ್ ಪ್ರಜೆಯೊಳು ||೩೯||

ಅಂತುಮದರಿಂದೆಲ್ಲರೇಕಪತ್ನೀವ್ರತರ |
ನಂತಪೂಜಾರತರ್ ಸೌಭಾಗ್ಯಸಂಯುತರ್ |
ಸಂತತಮಲಂಕಾರಮಂಡಿತರ್ ನೀತಿಶಾಸ್ತ್ರಸ್ಮ*ತಿವಿಚಾರರತರು ||
ಕಂತುಶರನಿರ್ಜಿತರ್ ಮದಲೋಭವರ್ಜಿತರ್ |
ಸಂತೋಷಭಾಷಿತರ್ ಸದ್ಗುಣವಿಭೂಷಿತರ್ |
ಚಿಂತಿತಫಲಾಗತರ್ ಸಕಲಭೋಗಾನ್ವಿತರ್ ಪರಿವಾರದೊಳ್ ಪ್ರಜೆಯೊಳು ||೪೦||

ಏಕಪತ್ನೀವ್ರತಂ ಪ್ರಾಯತಂ ಕೋಮಲಂ |
ಮಾಕಾಂತ ಕಿಂಕರನಲಂಕಾರ ಪೂಜ್ಯಂ ಶು |
ಭಾಕಾರನಾರೋಗ್ಯಪಟು ಕರಣನಿರ್ಮಲನ ಕೈತವಂ ಬಲವಂತನು ||
ಭೀಕರ ಪರಾಕ್ರಮ ವಿಶಾರದಂ ಸಂಗರವಿ |
ವೇಕಿಯೆಂಬಿನಿತುಗುಣವೊರ್ವನೊಳಿರಲ್ಕವನ |
ನೇ ಕರೆದು ಮನ್ನಿಸುವನಲ್ಲದರನುಳಿವನಂತೆಲ್ಲಿರೀತೆಂದ ನರರು ||೪೧||

ಉಣಲುಡಲ್ ತೊಡಳಿಯಲಿರಲೆಯ್ದಲುಂಟಾಗಿ |
ತಣಿದಿಹುದಲಂಕಾರಪೂಜ್ಯದಿಂ ವಸ್ತ್ರಭೂ |
ಪಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೊಗಸಿರ್ಪುದು |
ಸೆಣಸುಗಳ ಬಿರುದಗಳ ಪಚ್ಚಿರ್ದ ಮುಡುಹುಗಳ |
ಹೊಣಕೆಗಳ ತಡಹುಗಳ ಕಲಿತನದ ಕಡುಹುಗಳ |
ರಣದವಕದಿಂ ಕುದಿಯುತಿಹುದು ಹಂಸಧ್ವಜನ ಪರಿವಾರಮನುದಿನದೊಳು ||೪೨||

ಮಣಿಮಯ ವರೂಥಮೆಪ್ಪತ್ತೊಂದು ಸಾಸಿರಂ |
ಗಣನೆಗೆಪ್ಪತ್ತೊಂದುಸಾಸಿರಗಜಂ ತುರಗ |
ಮೆಣಿಸುವೊಡೆ ಲಕ್ಕಂ ಪದಾತಿ ಸಾಸಿರಮುಳಿಯೆ ಲಕ್ಷವೊರ್ವನ ಬಳಿಯೊಳು ||
ಗಣಿತಕಿಹುದಿನಿತು ಬಲಮಿನಿತುಬಲದಿಂದ ವೆಂ |
ಟಿಣಿಸಿರ್ಪ ದಳಪತಿಗಳೆಪ್ಪತ್ತುಮಂದಿ ಸಂ |
ದಣಿಸಿ ಬರುತಿಹುದು ಹಂಸಧ್ವಜ ನೃಪಾಲಕಂ ಪೊರಮಟ್ಟುನಡೆವೆಡೆಯೊಳು ||೪೩||

ಆತಂಗೆ ಧನಬಲಂ ಚಂದ್ರಸೇನಂ ಚಂದರ |
ಕೇತು ವರಚಂದ್ರದೇವಂ ವಿಡೂರಥನತಿ |
ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುಮಂದಿ ||
ಜಾತರ್ ಸುದರ್ಶನ ಸುಧನ್ವ ಸಮನಸ್ಸುರಥ |
ರೀತೆರದ ನಾಲ್ವರಿವರೆಲ್ಲರ್ ಸಮರ್ಥರ್ ಮ |
ಹಾತಿಬಲರಮಲಧರ್ಮಜ್ಞರಪ್ರತಿಮರ್ ಪರಾಕ್ರಮಯುತರ್ ವೀರರು ||೪೪||

ವರಶಂಖಲಿತರೆಂಬವರನ್ಣತಮ್ಮಂದಿ |
ರಿರಲರೊಳಾ ಲಿಖಿತನಾಶ್ರಮಕೆ ಶಂಖನೈ |
ತರುತೆ ಪೇಳದ ಬಿದ್ದ ಪನ್ಣನಾಸ್ವಾದಿಸಲ್ ಕರೆದಿವಂ ದೋಷಿಯೆಂದು ||
ಅರಮನೆಗೆ ತಂದೊಪ್ಪಿಸಲ್ಕಾ ನೃಪಂ ಕರವ |
ನರಿಸಲ್ಕೆ ಮತ್ತೆ ಲಿಡಿತನ ತಪೋಬಲದಿಂದೆ |
ಮರಳಿ ಕೈಯಂ ಪಡೆದನಾ ಶಂಖನವರಿರ್ವರುಂ ಪುರೋಹಿತರವಂಗೆ ||೪೫||

ಆ ಶಂಖಲಿಖಿತರೆಂದವೊಲಾತನಿರ್ದಪನಿ |
ಳೇಶ ಕೇಳವನದಿನ್ನೊಂದು ಕಟ್ಟಳೆಯಂ ಹು |
ತಾಶನಜ್ವಾಲೆಯಿಂ ಕಯ್ದುಕ್ಕು ವೆಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ ||
ಅಶುವಿಂ ಪೊರಮಡುವ ದುಂದುಭಿಯ ಭಟನಂ ಸನ್ನೆಯ ಮ |
ಹಾಶಬ್ದಮಂ ಕೇಳ್ದು ಹಿಂದುಳಿದ ಭಟನಂ ಪ್ರ |
ವೇಶಮಂ ಮಾಡಿಸುವುದಲ್ಲದೊಡೆ ತನ್ನ ಭಾಷೆಗೆ ಭಂಗಮಪ್ಪುದೆಂದು ||೪೬||

ಬಳಿಕನಿಬರೆಲ್ಲರಂ ಕರೆಸಿ ಹಂಸಧ್ವಜಂ |
ಸೆಲವಿತ್ತು ಫಲಗುಣನ ತುರಗಮಂ ಪಿಡಿತಂದು |
ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಂಬೊಯ್ಸಿ ಪೊರಮಡುತಿರೆ ||
ಮೊಳಗಿದವು ಮೇಲೆ ನಿಸ್ಸಾಳಂಗಳಾಹವಕೆ |
ದಳದುಳಿಸಿತಾಗ ಸುಭಟಪ್ರತತಿ ಜೋಡಿಸಿತ |
ಖಿಳ ಕರಿ ರತಾಶ್ವಕುಲಮೊದಗಿತು ಪದಾತಿ ಸನ್ನಾಹದಿಂದಾ ಕ್ಷಣದೊಳು ||೪೭||

ಸುರಪಸುತನೆಂಬ ವೈರಕೆ ಧನಂಜಯನ ಮೇ |
ಲಿರದೆ ಮುಳಿದೆದ್ದದೊ ಕುಲಾದ್ರಿಗಳ ಬಳಗಮೆನೆ |
ಕರಿಘಟೆಗಳೈದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ದು |
ತರಣಿ ತಾಳ್ದನೋ ನಿಜಾಕಾರಕೋಟಿಗಳನೆನೆ |
ತೆರಳಿದುವು ಮಣಿಮಯವರೂಥಂಗಳೀದುದೋ |
ಧರೆ ಮಂದಿ ಕುದುರೆಗಳನೆನೆ ನಡೆದುದಾಹವಕೆ ಪರಿವಾರಮಾನೃಪತಿಯ ||೪೮||

ಕಂಸಾರಿ ಬಾರದೆ ನರಂಗೆ ಸೋಲ್ವವನಲ್ಲ |
ಹಂಸಧ್ವಜ ಧುರದೊಳಿನ್ನು ಕೃಷ್ಣನ ದರ‍್ಯ |
ನಂ ಸುಲಭಮೆಲ್ಲರ್ಗೆ ಸಂದೇಹಮಿಲ್ಲ ದೇಹಮನಾಂತು ಜನಿಯಿಸಿರ್ದ ||
ಸಂಸಾರಕಿದು ಸಫಲಮಹುದೆಂದು ಪರಿತೋಷ |
ದಿಂ ಸಮರಕೈದುತಿರ್ದುದು ಸಕಲಪಟುಭಟರ |
ದಂ ಸತಿಯರೀಕ್ಷಿಸಿದರುಪ್ಪರಿಗೆಗಳ ಮೇಲಿನಿಯರನಾದರಿಸಿ ಕಳುಹಿ ||೪೯||

ಆಳಿಲಾದ ನಿರಿಯ ಬಳಲಿದ ಮುಡಿದು ಸೊಪ್ಪಾದ |
ತಿಳಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ |
ಪುಳಕದಯವದ ಕೆಂಬಾಸುಳೇರುಗಳ ಪರೆದನುಲೇಪನದ ತೊಡಕಿದ ||
ಗಳದ ಹಾರದ ಕೆಂಪುಗದಡಿದಧರದ ನುಡಿಯ |
ಕಳವಳದ ಕಡೆಗಣ್ಣ ಕೊಂಬೆಗರ ಕದಪುಗಳ |
ಕಲೆಯ ಕೋಮಲೆಯರಿನಿಯರ್ಕಳಂ ಕಳಿಪಿ ನೆಲೆವಾಡವನಡರ್ದರಂದು  ||೫೦||

ಇನ್ನುಮರ್ಜುನಕೃಷ್ಣರೊಡನೆ ಸಂಗರಕೆ ಸಂ |
ಪನ್ನಪಟುಭಟರೊದಗಿ ರಾಯವಡೆಯದಮುನ್ನ |
ನಿನ್ನಧರಕೆಂತಾದುದಬಲೆ ಕೃಷ್ಣಕ್ಷತಂ ಪೇಳೆಂದಸಿಯಳೊರ್ವಳು ||
ಕನ್ನೆ ಮತ್ತೊರ್ವಳಂ ಕೇಳ್ದೊಡವಳೆಂದಳೆಲೆ |
ಪನ್ನಗಸುವೇಣಿ ಕೃಷ್ಣಾಂಕಮಿಲ್ಲದವದನ |
ಮುನ್ನಿಸಲ್ ಬಿಲಕೆ ಸರಿಯೆಂಬುದಂ ನೀನರಿಯದಕಟ ಮರುಳಾದೆಯೆಂದು ||೫೧||

ಒದಗದಿನ್ನುಂ ಮುರಾರಿಯ ಸಮರಮರ್ಜುನನ |
ಕದನಂ ಪ್ರವರ್ತಿಸದು ಪ್ರದ್ಯಮ್ನನಾಹವಂ |
ಮೊದಲೆ ತಲೆದೋರಿತಿಂದೊರೊಳೆಂದೊರ್ವಳೀ ಪೊಸವಾರ್ತೆಯಂ ಪೇಳಲು ||
ಚದುರೆ ಮತ್ತೊರ್ವಳಿದು ಜಗದೊಳಚ್ಚರಿಯೆ ಹರೆ |
ಯದರ ಕೈ ಮಂಚುವುದು ವರಸಂಗರಂಜಿತವ |
ಹುದು ವರ್ತಮಾನದೊಳ್ ಜನಜನಿತಮಿಲ್ಲಿ ನೂತನದ ಮಾತೇನೆಂದಳು ||೫೨||

ಇಂದುಮಂಡಲದ ಸಿರಿಯಂ ಸೂರೆಯಾಡಿದರ್ |
ಬಂದು ವಿಷಯದೊಳೂರುಗಳನಿರಿದರೊತ್ತಾಯ |
ದಿಂದ ದುರ್ಗಮಗಳಂ ಕೈಕೊಂಡರೊದಗಿದರ್ ಸೆಳೆಸೂರೆಗಾತುರದೊಳು ||
ಮುಂದುವರಿದಂಕವೇರಿದರೀಗ ವರಸುಭಟ |
ರೆಂದು ಪೊಸವಾರ್ತೆಯಂ ಪ್ರೌಢೆಯೋರ್ವಳ್ ಪೇಳ್ದೊ |
ಡಂದು ಬಾಲೆಯರಾಕೆಯಂ ಜರೆದರರಸನಿಲ್ಲವೆ ಗೆಲ್ವೊಡೆಂದು ನಗುತೆ ||೫೩||

ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು ||
ಕ್ರಮದೊಳಾರತಿಗಳಂ ತಂದೆತ್ತಿ ಯಕ್ಷ ಕ |
ರ್ದಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು ||
ರಮನಂ ತೆಗೆದು ಬಿಗಿಯಪ್ಪಿ ಶುಭವಾಕ್ಯದಿಂ |
ಸಮರಬೂಮಿಗೆ ಕಳುಹಿ ಸತಿಯರ್ ಸುರತ್ನಕು |
ಟ್ಟಿಮದ ಹರ‍್ಮ್ಯಂಗಳನಡರ್ದರ್ ದಿವಿಜಪುರದ ಲಕ್ಷ್ಮೀಶನಂ ನೋಡಲು ||೫೪||