ಬಾಳೆಎಲೆ ಮಾರಾಟಕ್ಕೆ ಸಿದ್ಧ!

“ಕೃಷಿ ಅಂದ್ರೆ ಬರೀ ನಷ್ಟ ಅಲ್ಲ, ಇಲ್ಲಿ ಲಾಭವಿದೆ, ನೆಮ್ಮದಿಯೂ ಇದೆ. ವ್ಯವಸ್ಥಿತವಾಗಿ ಕೃಷಿ ಮಾಡುವುದಾದರೆ ಸಾಕಷ್ಟು ಆದಾಯವನ್ನೂ ಗಳಿಸಬಹುದು. ಇದಕ್ಕೆ ನನ್ನ ಶ್ರೀ ಹೊಂಬಾಳಮ್ಮ ಕೃಷಿ ಫಾರಂ ಒಂದು ಉತ್ತಮ ಉದಾಹರಣೆ. ನಿತ್ಯ, ಮಾಸಿಕ, ವಾರ್ಷಿಕ ಹಾಗೂ ಬಹುವಾರ್ಷಿಕದಲ್ಲಿ ಆದಾಯ ಬರುವಂತೆ ಬೆಳೆಗಳನ್ನು ಬೆಳೆಯುವುದರಿಂದ ಇದು ಸಾಧ್ಯವಾಗುತ್ತದೆ. ಇದು 12 ವರ್ಷಗಳ ನನ್ನ ಪರಿಶ್ರಮದಿಂದ ರೂಪುಗೊಂಡ ತೋಟ”

ಹಾಸನ ತಾಲ್ಲೂಕಿನ ಉಗನಿ ಸಿದ್ದಾಪುರದ ಶ್ರೀ ಹೊಂಬಾಳಮ್ಮ ಕೃಷಿ ಫಾರಂನ ಕೆ.ಎಂ. ಲಕ್ಷ್ಮಿ ಅವರ ಅನುಭವದ ಮಾತುಗಳಿವು. ಬಿ.ಎ ಪದವಿ ಮುಗಿಸಿ ಸರ್ಕಾರಿ ಕೆಲಸಕ್ಕೆ ಸಂದರ್ಶನ ಬಂದಾಗ ತಮ್ಮ ಮಾವನ ಮಾತಿನ ಮೇರೆಗೆ ಕೆಲಸ ತಿರಸ್ಕರಿಸಿ ಕೃಷಿ ಕೆಲಸಕ್ಕೆ ಕೈ ಹಾಕಿದ್ದರು. ಹಾಸನದಲ್ಲಿ ವಾಸವಿದ್ದು, 12 ಕಿ.ಮೀ. ದೂರದ ಸಿದ್ದಾಪುರದಲ್ಲಿರುವ ತಮ್ಮ ಜಮೀನಿಗೆ ಹೋಗಿ ಕೃಷಿ ಮಾಡುವುದು ಮೊದ- ಮೊದಲು ತುಸು ಶ್ರಮವೆನಿಸಿದರೂ ಅವರ ತೋಟ ಕಟ್ಟುವ ಗುರಿ ಪ್ರತಿ ದಿನವೂ ಜಮೀನಿನತ್ತ ಬರುವಂತೆ ಪ್ರೇರೇಪಿಸಿತು.

ಆರಂಭದಲ್ಲಿ ಹಾಸನದಿಂದ ಬಸ್ಸಿನಲ್ಲಿ ಬಂದು 4 ಕಿ.ಮೀ. ಜಮೀನಿಗೆ ನಡೆದು ಬರಬೇಕಾಗಿತ್ತು. ಇಂತಹ ತೊಡಕುಗಳನ್ನು ಲೆಕ್ಕಿಸದೆ ಹುಮ್ಮಸ್ಸಿನಿಂದ ತೋಟ ಕಟ್ಟ ಹೊರಟರು. ಗಿಡ-ಗಂಟೆ ಬೆಳೆದು ಪಾಳು ಬಿದ್ದಿದ್ದ ಹೊಲವನ್ನು ಅಳತೆ ಮಾಡಿಸಿ ಬೇಲಿ ನಿರ್ಮಿಸಿದರು. ತೋಟ ಮಾಡಬೇಕೆಂಬ ಹಂಬಲದಿಂದ 3 ಕೊಳವೆ ಬಾವಿ ಕೊರೆಸಿದರೂ ನೀರು ಬರಲಿಲ್ಲ. ಆದರೆ, ತೋಟ ಕಟ್ಟುವ ಅಚಲ ನಿರ್ಧಾರದಿಂದ ಮಾತ್ರ ಅವರು ಹಿಂದೆ ಸರಿಯಲಿಲ್ಲ.

ನೀರು ಸಿಕ್ಕಿತು! “ಒಮ್ಮೆ ನಾನು ಮತ್ತು ಮನೆಯವರು ಜಮೀನಿಗೆ ಬಂದು ಹಿಂತಿರುಗುವಾಗ ಜೋರು ಮಳೆ ಇತ್ತು. ಜಮೀನಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಹಳ್ಳದಂತೆ ಹರಿಯುತ್ತಿದ್ದ ಕೆನ್ನೀರನ್ನು ಕಂಡು ಆಶ್ಚರ್ಯವಾಯಿತು. ಈ ನೀರನ್ನು ಸಂಗ್ರಹಿಸಿ ತೋಟ ಕಟ್ಟಬಾರದೇಕೆ? ಎಂಬ ಆಲೋಚನೆ ಹೊಳೆಯಿತು. ಮರುದಿನವೇ ತೋಟದ 4 ಮೂಲೆಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಹೊಲಗಳಿಂದ ರಸ್ತೆಯುದ್ದಕ್ಕೂ ಹರಿದು ಬರುವ ಕೆನ್ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹವಾಗುವಂತೆ ಕಾಲುವೆ ತೋಡಲಾಯಿತು. ತೋಟದ ಅಲ್ಲಲ್ಲಿ ನಿರ್ಮಿಸಿದ್ದ ಇಂಗು ಗುಂಡಿಗಳಿಗೆ ಕೃಷಿ ಹೊಂಡಗಳಿಂದ ಪೈಪುಗಳ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಯಿತು. ಇದರಿಂದ ಒಂದೆರಡು ವರ್ಷಗಳಲ್ಲಿ ಖಾಲಿ ಇದ್ದ ಕೊಳವೆ ಬಾವಿಗಳಲ್ಲಿ ನೀರು ಜಿಲುಪಿಸತೊಡಗಿತು. ಅಂದಿನ ನೀರಿಂಗಿಸುವ ಕೆಲಸ ಇಂದಿಗೂ ಮುಂದುವರಿದಿದೆ. ಅಕ್ಕಪಕ್ಕದ ಜಮೀನುಗಳಲ್ಲಿಯೂ ಈಗ ಜಲ ಬರವಿಲ್ಲ” ಎನ್ನುತ್ತಾರೆ ಲಕ್ಷ್ಮಿ ಅವರು.

ಗಿಡ ನೆಟ್ಟು ತೋಟ ಕಟ್ಟಿದರು: ಹೀಗೆ ಆರಂಭಗೊಂಡ ನೀರಿಂಗಿಸುವ ಕೆಲಸ ಹಂತ- ಹಂತವಾಗಿ ತೋಟ ಕಟ್ಟುವೆಡೆಗೆ ತಿರುಗಿತು. ತೆಂಗು, ಅಡಿಕೆ, ಬಾಳೆ, ಪಪ್ಪಾಯ ಸಸಿಗಳನ್ನು ಆರಂಭದಲ್ಲಿಯೇ 10 ಎಕರೆ ಜಮೀನಿಗೂ ನೆಟ್ಟು ಬೆಳೆಸತೊಡಗಿದರು. ಜಮೀನಿನ ಸುತ್ತಲಿರುವ ಬೇಲಿ ಹಾಗೂ ಮಧ್ಯೆ ಇರುವ ಬದುಗಳ ಮೇಲೆ ತೇಗ, ಸಿಲ್ವರ್, ಹಲಸು ಸೇರಿದಂತೆ ಅನೇಕ ಬಗೆಯ ಕಾಡು ಜಾತಿಯ ಸಸಿಗಳನ್ನು ನೆಟ್ಟರು. ವಿಶೇಷವೆಂದರೆ ಮಿಶ್ರ ಕೃಷಿಯಿಂದ ಉತ್ತಮ ಲಾಭ ಎಂಬುದನ್ನು ಪತ್ರಿಕೆಗಳಲ್ಲಿ ಓದಿ ಕೃಷಿ ಮಾಡ ಹೊರಟಿದ್ದರು.

ತೋಟದ ಏಕೈಕ ಕೊಳವೆಬಾವಿ ಬಳಿ ಕೃಷಿ ಸಾಧಕಿ ಶ್ರೀಮತಿ ಲಕ್ಷ್ಮಿ

ಪತ್ರಿಕೆ, ನಿಯತಕಾಲಿಕೆ, ಆಕಾಶವಾಣಿ ಮತ್ತು ದೃಶ್ಯ ಮಾಧ್ಯಮದಲ್ಲಿ ತಿಳಿದ ಕೃಷಿ ವಿಷಯ ಬಿಟ್ಟರೆ ಇನ್ನಾವುದೇ ಮೂಲದಿಂದ ಲಕ್ಷ್ಮಿಯವರಿಗೆ ಅನುಭವ ದೊರೆತಿರಲಿಲ್ಲ. ಈ ಮಾರ್ಗದರ್ಶನದಲ್ಲಿ ಗಿಡ ನೆಟ್ಟು ಬೆಳೆಸಲು ಮುಂದಾದರು. ಮೊದ- ಮೊದಲು ತೋಟ ನಿರ್ಮಿಸುವಾಗ ಬಹಳಷ್ಟು ಹಣ ಖರ್ಚಾಗುತ್ತಿತ್ತು ಇಂತಹ ಹೊತ್ತಲ್ಲಿ ತೋಟದಲ್ಲಿದ್ದ ಪಪ್ಪಾಯ ಫಸಲು ನೀಡಿ ಈ ಖರ್ಚನ್ನು ನೀಗಿಸಿತ್ತು. ವಾರಕ್ಕೆ ಸರಾಸರಿ 200 ಕೆ.ಜಿಯಷ್ಟು ಪಪ್ಪಾಯ ಸಿಗುತ್ತಿತ್ತು. ಕೆ.ಜಿ.ಗೆ 7 ರೂಪಾಯಿಯಂತೆ ಮಾರಾಟವಾಗುತ್ತಿತ್ತು. ವರ್ಷ ಪೂರ್ತಿ ಇದೇ ರೀತಿ ಬರುತ್ತಿದ್ದ ಆದಾಯದಿಂದ ತೋಟಕ್ಕೆ ಬೇಕಾಗಿದ್ದ ಗೊಬ್ಬರ, ಕೂಲಿ ಆಳು, ವ್ಯವಸಾಯ ಹೀಗೆ ಎಲ್ಲವೂ ಸಾಗುತ್ತಿತ್ತು.

ತೆಂಗು, ಅಡಿಕೆಗಳು ಫಸಲು ಬರುವಷ್ಟರಲ್ಲಿ ತೋಟದಲ್ಲಿದ್ದ ಖಾಲಿ ಜಾಗದಲ್ಲೆಲ್ಲ ಮಾವು, ಸಪೋಟ, ನಿಂಬೆ, ಎರಳಿ, ನೆಲ್ಲಿ, ಗೋಡಂಬಿ, ಬಾಳೆ ಹಾಗೂ ಇನ್ನಿತರೆ ಹಣ್ಣಿನ ಗಿಡಗಳನ್ನು ನೆಡಲಾಯಿತು. ಜೊತೆಗೆ ಬೆಳೆದು ನಿಂತಿದ್ದ ತೇಗ, ಸಿಲ್ವರ್ ಮರಗಳಿಗೆ ಕಾಳುಮೆಣಸಿನ ಬಳ್ಳಿಯನ್ನು ಹಬ್ಬಿಸಿದರು. ತೋಟದ ಒಂದು ಭಾಗದಲ್ಲಿ ಅರ್ಧ ಎಕರೆಯಲ್ಲಿ ಪ್ರತ್ಯೇಕವಾಗಿ ನೆಟ್ಟಿದ್ದ ಸಿಲ್ವರ್, ತೇಗದ ಮರಗಳಿಗೂ ಕಾಳುಮೆಣಸಿನ ಬಳ್ಳಿಯನ್ನು ಹಬ್ಬಿಸಿದರು. ಇಲ್ಲಿ ಹೆಚ್ಚಾಗಿ ನೆರಳು ಇದ್ದಿದ್ದರಿಂದ ಕಾಫಿ ಗಿಡಗಳನ್ನು ನೆಟ್ಟರು. ಈ ಎಲ್ಲಾ ಕೆಲಸಗಳಿಗೂ ಖರ್ಚಾದ ಹಣ ಬಹುಪಾಲು ಪಪ್ಪಾಯಿ ಮತ್ತು ಬಾಳೆಯಿಂದ ಬಂದ ಆದಾಯದ್ದು.

10 ಎಕರೆಯೂ ಸಾವಯವ: ಇಷ್ಟೂ ಜಮೀನನ್ನು ಮೊದಲೆರಡು ವರ್ಷ ರಾಸಾಯನಿಕ ಕೃಷಿಯಿಂದ ಆರಂಭಿಸಿದರು. ಅಧಿಕ ಬಂಡವಾಳ ಹಾಗೂ ಹೆಚ್ಚು ನೀರು ಬೇಕಾಗಿದ್ದರಿಂದ ಕೃಷಿ ತೀರಾ ಕಷ್ಟವಾಯಿತು. ಆ ಹೊತ್ತಿಗಾಗಲೇ ಪತ್ರಿಕೆಗಳಲ್ಲಿ ಸಾವಯವದಲ್ಲಿ ಯಶಸ್ಸು ಕಂಡ ರೈತರ ಲೇಖನಗಳು ಲಕ್ಷ್ಮಿಯವರ ಗಮನ ಸೆಳೆದಿದ್ದವು. ಇದರಿಂದ ಪ್ರೇರಿತರಾಗಿ ಸಾವಯವ ವಿಧಾನಗಳನ್ನು ಅನುಸರಿಸಲು ಮುಂದಾದರು. ತೋಟದಲ್ಲಿ ಕೆಲಸ ಮಾಡಲು ಬರುತ್ತಿದ್ದ ಕೆಲಸದವರಿಗೆ 2 ಹಸುಗಳನ್ನು ಕೊಡಿಸಿದರು. ಇವುಗಳಿಂದ ಬರುವ ಗೊಬ್ಬರವನ್ನು ತೋಟಕ್ಕೆ ಹಾಕುವಂತೆ ತಿಳಿಸಿದರು. ತೋಟದ ಅಲ್ಲಲ್ಲಿ ಗುಂಡಿಗಳನ್ನು ನಿರ್ಮಿಸಿ ತ್ಯಾಜ್ಯ ವಸ್ತುಗಳನ್ನು ಗುಂಡಿಗಳಲ್ಲಿ ತುಂಬಿ ಕಾಂಪೋಸ್ಟ್ ತಯಾರಿಸಿಕೊಂಡರು. ಎರೆಗೊಬ್ಬರ ತೊಟ್ಟಿ ನಿರ್ಮಿಸಿ ಗೊಬ್ಬರ ಉತ್ಪಾದಿಸಿ ಎಲ್ಲಾ ಬೆಳೆಗಳಿಗೂ ನೀಡಿದರು. ತೋಟದಲ್ಲಿ ಸಿಗುತ್ತಿದ್ದ ಕಸ-ಕಡ್ಡಿಯನ್ನು ಅಲ್ಲಿಯೇ ಕೊಳೆಯಿಸಿದರು.

ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿದ್ದ ಹೊಲಗಳ ಫಲವತ್ತಾದ ಹೂಳನ್ನು ವರ್ಷಕ್ಕೊಮ್ಮೆ ಎತ್ತಿ ಬೆಳೆಗಳಿಗೆ ಕೊಡುತ್ತಿದ್ದರು. ಹೀಗೆ ಅವಶ್ಯಕತೆಗಿಂತಲೂ ಹೆಚ್ಚಾಗಿಯೇ ಗೊಬ್ಬರ ನೀಡಿ ತೋಟ ಬೆಳೆಸಿದರು. ಇಲ್ಲಿ ಗೊಬ್ಬರಕ್ಕಾಗಿ ಆಳುಗಳ ಹೊರತಾಗಿ ಯಾವುದೇ ಖರ್ಚು ಬರಲಿಲ್ಲ.

“ಪ್ರತಿದಿನ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ಮಾವನಿಗೆ ಬೆಳಗಿನ ಉಪಾಹಾರ ನೀಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಸಿದ್ದ ಮಾಡಿ, ಮನೆಯವರು ಕೆಲಸಕ್ಕೆ ಹೋದ ನಂತರ ನಾನು ಒಂದಿಷ್ಟು ಊಟ ಕಟ್ಟಿಕೊಂಡು ತೋಟಕ್ಕೆ ಬರುತ್ತೇನೆ. ತೋಟದಲ್ಲಿರುವ ಕೆಲಸದವರ ಜೊತೆ ಸೇರಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ. ಇದರಿಂದ ನನಗೆ ತುಂಬಾ ತೃಪ್ತಿ ಇದೆ. ಶಾಲೆಯಿಂದ ಮಕ್ಕಳು ಬರುವ ಮುನ್ನ ಮನೆ ಸೇರಿರುತ್ತೇನೆ. ಹೀಗೆ ತೋಟದಿಂದ ಬರುವಾಗ ಬಾಳೆ ಎಲೆ, ಹಣ್ಣು – ತರಕಾರಿಗಳನ್ನು ಅಂಗಡಿಗೆ ಕೊಟ್ಟು ಬರುತ್ತೇನೆ. ಇದು ನನ್ನ ದಿನಚರಿ. ಮನೆಯವರು ಸಾರಿಗೆ ಇಲಾಖೆಯಲ್ಲಿ ನೌಕರ. ಹಾಗಾಗಿ ವಾರಕ್ಕೊಮ್ಮೆ ತೋಟಕ್ಕೆ ಬರುತ್ತಾರೆ” ಎಂದು ತಮ್ಮ ಕೃಷಿ ದಿನಚರಿ ವಿವರಿಸುವಾಗ ಲಕ್ಷ್ಮಿ ಅವರ ಕಣ್ಣುಗಳಲ್ಲಿ ಧನ್ಯತೆಯ ಭಾವ ಪುಟಿಯುತ್ತದೆ.

ಬಂದದ್ದೆಲ್ಲಾ ಆದಾಯ! ಇಡೀ ತೋಟವನ್ನು ನಾನು ಮತ್ತು ಜೊತೆಗೆ ಒಬ್ಬ ಹೆಣ್ಣಾಳು ನಿರ್ವಹಿಸುತ್ತೇವೆ. ನಾನು ಹಾಸನದಿಂದ ಪ್ರತಿದಿನ 12 ಕಿ.ಮೀ. ತೋಟಕ್ಕೆ ಬಂದು ಹೋಗುತ್ತೇನೆ. ಇದಕ್ಕಾಗಿ ವ್ಯಾನಿನ ಪೆಟ್ರೋಲ್ ಖರ್ಚು ತಿಂಗಳಿಗೆ ಸುಮಾರು 3,000/- ರೂಪಾಯಿ, ಒಬ್ಬ ಮಹಿಳೆಗೆ ತಿಂಗಳಿಗೆ 4,500/- ರೂಪಾಯಿ ಕೂಲಿ ಮತ್ತು ಹೆಚ್ಚು ಕೆಲಸವಿದ್ದಾಗ ಬರುವ ಆಳುಗಳಿಗೆ 3,000/- ರೂಪಾಯಿ, ಒಟ್ಟು 7,500/- ರೂಪಾಯಿ ಕೂಲಿ ಮತ್ತು 1,000/- ರೂಪಾಯಿ ಇತರೆ ಖರ್ಚು. ಇವೆಲ್ಲವೂ ಸೇರಿ ತಿಂಗಳಿಗೆ ಸರಾಸರಿ 13,000/- ರೂಪಾಯಿಗಳು ಖರ್ಚಾಗುತ್ತದೆ. ಉಳುಮೆ, ಹೊರಗಿನ ಗೊಬ್ಬರ, ಬೀಜ, ಔಷಧಿ ಈ ಯಾವುದೇ ಖರ್ಚುಗಳಿಲ್ಲದಿರುವುದರಿಂದ ತೋಟ ನಿರ್ವಹಣೆ ಅಷ್ಟೇನು ಕಷ್ಟಕರವೆನಿಸಿಲ್ಲ. ಜೊತೆಗೆ ತೋಟದಲ್ಲಿನ ಆದಾಯದ ಮೂಲಗಳು ಹೆಚ್ಚಿವೆ ಎನ್ನುತ್ತಾರೆ ಲಕ್ಷ್ಮಿ.

ತೋಟದೊಳಗೆ ಸುಮಾರು 2000 ಬಾಳೆ ಸಸಿಗಳಿವೆ. ಬಾಳೆ ಗೊನೆಯಿಂದ ಪ್ರತೀ ವರ್ಷ ಸುಮಾರು 75,000/- ರೂಪಾಯಿ ಸಿಗುತ್ತದೆ. ಬಾಳೆ ಮರದ ಬುಡದಲ್ಲಿನ ಮರಿಗಳನ್ನು ಕತ್ತರಿಸುವುದಿಲ್ಲ. ಏಕೆಂದರೆ ಕಂದೇ ಅವರಿಗೆ ನಿತ್ಯದ ಆದಾಯ ಮೂಲ. ಬಾಳೆ ಮರಿಗಳಿಂದ ಬರುವ ಎಳೆಯ ಎಲೆಗಳನ್ನು ಕತ್ತರಿಸಿ ವಾರಕ್ಕೆರಡು ಬಾರಿ ನಿರಂತರವಾಗಿ ಹಾಸನದ ಹೋಟೆಲುಗಳಿಗೆ ಕೊಡುತ್ತಾರೆ. ಪ್ರತೀ ಸಾರಿ 500 ಎಲೆಗಳಂತೆ ತಿಂಗಳಿಗೆ 4000 ಎಲೆಗಳಾಗುತ್ತವೆ. ಪ್ರತೀ ಎಲೆಗೆ 65 ಪೈಸೆಯಂತೆ ತಿಂಗಳಿಗೆ 2,600/- ರೂಪಾಯಿ ಸಿಗುತ್ತದೆ. ಜೊತೆಗೆ ಮದುವೆ ಇತರೆ ಸಮಾರಂಭಗಳು ಹೆಚ್ಚಿದ್ದಾಗ ಎರಡ್ಮೂರು ಸಾವಿರ ಎಲೆಗಳನ್ನು ಆಗಾಗ ಕೊಂಡೊಯ್ಯುತ್ತಾರೆ. ಇದರಿಂದ ಸುಮಾರು 15,000/- ರೂಪಾಯಿ ವರ್ಷಕ್ಕೆ ಸಿಗುತ್ತದೆ. ಈಗ ತೋಟದಲ್ಲಿರುವ ಪ್ರತೀ ಬೆಳೆಯಿಂದಲೂ ಆದಾಯ ಬರುತ್ತಿದೆ.

ಲಕ್ಷ್ಮಿ ಅವರು ನೀಡಿದ ಈ ವರ್ಷದ ಫಸಲಿನ ಕಟಾವಿನಲ್ಲಿ ಬಂದಿರುವ ಆದಾಯದ ವಿವರ ಹೀಗಿದೆ.

ತೆಂಗು 1,50,000/-
ಅಡಿಕೆ 30,000/-
ಬಾಳೆ 75,000/-
ಬಾಳೆ ಎಲೆ 45,000/-
ಕಾಫಿ 40,000/-
ಕಾಳುಮೆಣಸು 50,000/-
ಗಜಲಿಂಬೆ, ಎರಳಿ 5,000/-
ಮಾವು, ಸಪೋಟ, ಇತರೆ ಹಣ್ಣುಗಳು 5,000/-
ಒಟ್ಟು 4,00,000/-

ಮೂರ್ನಾಲ್ಕು ವರ್ಷಕ್ಕೊಮ್ಮೆ ಬೋನಸ್: ಇದಲ್ಲದೆ ತೋಟದಲ್ಲಿ 10 ವರ್ಷಗಳ ಹಿಂದೆ ನೆಟ್ಟಿದ್ದ 1500 ಸಿಲ್ವರ್, 500 ತೇಗ, ಹಲಸು ಹೀಗೆ ಅನೇಕ ಮರಗಳಿವೆ. ಕಳೆದ ವರ್ಷ 300 ಸಿಲ್ವರ್ ಮತ್ತು ಕೆಲವು ಮರಗಳನ್ನು ಮಾರಾಟ ಮಾಡಲಾಯಿತು. ಇದರಿಂದ 4,00,000/- ರೂಪಾಯಿ ಬಂತು. ಇದೇ ರೀತಿ ಪ್ರತೀ ಮುರ್ನಾಲ್ಕು ವರ್ಷಕ್ಕೊಮ್ಮೆ ಮರಗಳು ಕಟಾವಿಗೆ ಬರುತ್ತವೆ. ಈಗ ಮರಗಳ ನೆರಳು ಹೆಚ್ಚಾಗಿದೆ. ಹಾಗಾಗಿ ಹೊಸದಾಗಿ ಸಸಿಗಳನ್ನು ನೆಟ್ಟಿಲ್ಲ. ಮುಂದಿನ ಸಾರಿ ಮರಗಳ ಕಟಾವಿನ ನಂತರ ಸಸಿಗಳನ್ನು ನೆಡುವ ಯೋಚನೆಯಲ್ಲಿದ್ದಾರೆ. ಮಾವು, ಸಪೋಟ, ಅಡಿಕೆ ಬೆಳೆಗಳಲ್ಲಿ ಈಗ ಫಸಲು ಆರಂಭವಾಗಿದ್ದು, ಮುಂದಿನ ವರ್ಷದಿಂದ ಆದಾಯ ಹೆಚ್ಚಾಗುವ ನಿರೀಕ್ಷೆ ಲಕ್ಷ್ಮಿ ಅವರಿಗಿದೆ.

ತೋಟದ ತುಂಬಾ ಅವರ ಮನೆಗೆ ಹಾಗೂ ತೋಟದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಹಣ್ಣುಗಳು ನಿರಂತರವಾಗಿ ಸಿಗುತ್ತವೆ. ಮೇವು, ಗೊಬ್ಬರಕ್ಕೂ ಜಮೀನಿನಲ್ಲಿ ಸಂಪನ್ಮೂಲಗಳಿವೆ. “ಹೆಚ್ಚಾದ ಹಣ್ಣುಗಳು, ತರಕಾರಿ, ಬಾಳೆ ಎಲೆಗಳನ್ನು ವ್ಯಾನಿನಲ್ಲಿ ತುಂಬಿ ನಾನೇ ತೆಗೆದುಕೊಂಡು ಹೋಗಿ ಹೋಟೆಲ್, ಅಂಗಡಿಗಳಿಗೆ ಕೊಡುತ್ತೇನೆ. ಸಾವಯವ ಪದಾರ್ಥಗಳಾದ್ದರಿಂದ ಜನ ಮುಗಿಬಿದ್ದು ಕೊಳ್ಳುತ್ತಾರೆ. ಆದರೂ ಸಹ ಮಾರುಕಟ್ಟೆಯ ಬೆಲೆಗಿಂತ ಸ್ವಲ್ಪ ಕಡಿಮೆ ಬೆಲೆಗೆ ಕೊಡುತ್ತಿದ್ದೇನೆ” ಎಂಬ ಮಾತು ಲಕ್ಷ್ಮಿ ಅವರ ಕೃಷಿ, ವ್ಯಾವಹಾರಿಕ ಜಾಣ್ಮೆ ಹಾಗೂ ಜನೋಪಯೋಗಿ ಚಿಂತನೆಗೆ ಸಾಕ್ಷಿ.

ಕೃಷಿಯ ವೈಫಲ್ಯಗಳ ಸರಮಾಲೆಗಳ ನಡುವೆ ಎಲ್ಲೋ ಅಪರೂಪಕ್ಕೆ ಕಾಣಸಿಗುವ ಲಕ್ಷ್ಮಿ ಅಂತಹವರ ಯಶೋಗಾಥೆಯ ಬಗ್ಗೆ ಕುತೂಹಲವಿದ್ದವರು, ಖುದ್ದು ಅವರನ್ನೇ ಮುಂದಿನ ವಿಳಾಸದಲ್ಲಿ ಸಂಪರ್ಕಿಸಬಹುದು. ಸಂಪರ್ಕ ವಿಳಾಸ: ಶ್ರೀಮತಿ ಕೆ.ಎಂ. ಲಕ್ಷ್ಮಿ ಕೇರಾಫ್ ಬಲರಾಮೇಗೌಡ, ಶ್ರೀ ಹೊಂಬಾಳಮ್ಮ ಕೃಷಿ ಫಾರಂ, ಸಿದ್ದಾಪುರ, ಉಗನೆ ವೃತ್ತ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು. ದೂರವಾಣಿ: 9481669305.