ಸೂಚನೆ ||
ರಮಣಂ ತೊರೆದನೆಂಬುದಂ ಕೇಳ್ದು ಶೋಕದಿಂ |
ಭ್ರಮಿಸುತಡವಿಯೊಳಿರಲ್ ಕಂಡು ವಾಲ್ಮೀಕಿಯಾ |
ಶ್ರಮಕೊಯ್ದೊಡಲ್ಲಿ ಮಿಥಿಳೇಂದ್ರಸುತೆ ತನಯರಂ ಪಡೆದು ಪದುಳದೊಳಿರ್ದಳು ||

ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು |
ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘು |
ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೋಡುಹುವಂತಿರಲ್ಕೆ ||
ಪರಮದಾರುಣಮಾಯ್ತಿದೆಂದಯೋಧಾಪುರದ |
ನೆರವಿಯ ಜನಂ ಗುಜುಗುಜಿಸಿ ಮನದೆ ಕರಗಿ ಕಾ |
ತರಿಸುತಿರೆ ಪರಿಸಿದಂ ಕಲ್ಬಟ್ಟೆಗೊಂಡನಿಳವೇಗದಿಂದಾ ರಥವನು ||೧||

ಧುರದೊಳಾಂತರನಿರಿದು ಮೆರೆಯಲೇರುವ ರಥಂ |
ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು |
ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು ||
ಕರುಣಮಿಲ್ಲದೆ ಹೊರೆವ ಹರಣಂ ಸುಡಲಿ ನಿ |
ಷ್ಠುರದೊಳೆಂತೀಕೃತ್ಯಮೆಸಗುವನೊ ರಾಘವೇ |
ಶ್ವರನೆಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು ||೨||

ಒಳ್ಳೊರಲ್ದುದು ಮುಂದೆ ಮಾರ್ಗವಂ ದಾಂಟಿದುವು |
ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂ |
ಡಳ್ಳೆದೆಯಲವನಿಸುತೆ ನೋಡು ಲಕ್ಷ್ಮಣ ಧುರ್ನಿಮಿತ್ತಂಗಳಂ ಪಥದೊಳು ||
ಡಿಳ್ಳಮಾದಪುದೀಗಳೆನ್ನ ಮನಮಿದಕೆ ಮುಂ |
ದೊಳ್ಳಿತಾಗಲಿ ರಾಮನಾಯುಷ್ಯಕೈಶ್ವರ‍್ಯ |
ಕುಳ್ಳ ಭುಜಬಲಕಸುರರಂಗೆಲ್ದ ರಾಘವಂ ನಮ್ಮ ಸಲಹಲೆಂದಳು ||೩||

ಅನ್ನೆಗಂ ಜಾನಕಿಯ ಕಣ್ಗೆ ತೋರಿತು ಮುಂದೆ |
ಸನ್ನುತ ರಘೂಧ್ವರನ ಕೀರ್ತಿಯೆನೆ ಮೂವಟ್ಟೆ |
ಯನ್ನಡೆದು ಮುಕ್ಕಣ್ಣನಂ ಸಾರ್ದು ಮೂಜಗದ ಪಾಪಮಂ ಮುರಿದು ಮುಕ್ಕಿ ||
ಮುನ್ನೀರು ಮುಂತಾಗಿ ಮೂದೇವರೊಳಗಾದ |
ಮುನ್ನುಳ್ಳ ಮೂವತ್ತು ಮೂಕೋಟಿ ವಿಬುಧರಂ |
ತನ್ನೊಳ್ ಮುಳುಗಿದರಣಕಿಪ ಪೊಂಪೊದವಿ ಪರಿವ ಬೆಳ್ವೊನಲ್ ದಿವಿಜ ನದಿಯ ||೪||

ತೆರತೆರದ ಕಲ್ಲೋಲ ಮಾಲೆಗಳ ಲೀಲೆಗಳ |
ಬೆರೆಬೆರೆವ ರಾಜಹಂಸಾಳಿಗಳ ಕೇಳಿಗಳ |
ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳಿಯ ಸುಳಿಯ ||
ಮೊರೆಮೊರೆದು ಘೂರ್ಮಿಸುವ ಪರಿವುಗಳ ಮುರಿವುಗಳ |
ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ |
ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು ||೫||

ತೆಂಗೆಗಳಗವುಂಗು ಪನಸಂ ದ್ರಾಕ್ಷೆ ಜಂಬು ನಾ |
ರಂಗ ಜಂಬೀರ ಖರ್ಜೂರ ಕಿತ್ತಳೆ ಮಾತು |
ಳಂಗ ತಿಂತ್ರಿಣಿ ಚೂತ ನೆಲ್ಲಿ ಬೊಲ್ವ ಕಪಿತ್ಥಮೆಂಬ ನಾನಾ ತರುಗಳು ||
ತೊಂಗುವ ಫಲಾವಳಿಯ ಭಾರಂಗಳಾವಗಂ |
ಪಿಂಗವಿವನಿಳೆಗಿಳುಪಬೇಕೆಂದು ಬಾಗಿದೊಂ |
ದಂಗಮನೆ ಕಣ್ಗೆಸೆದುವಿಕ್ಕೆಲದೊಳಾ ಜಾಹ್ನಿವಿಯ ತಡಿಯ ಬನದೆಡೆಯೊಳು ||೬||

ಇಳಿದು ರಥದಿಂದೆ ಮಂದಾಕಿನಿಗೆ ಪೊಡಮಟ್ಟು |
ಬಳಿಕ ನಾವಿಕರೊಡನೆ ನವದೊಳ್ ಗಂಗೆಯಂ |
ಕಳೆದು ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ||
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ ಮುಂ |
ದಳೆದುಗ್ರ ಮೃಗಪಕ್ಷಿ ಗಣದಿಂದೆ ಘೂರ್ಮಿಸುವ |
ಹಳುವಮಂ ಪೊಕ್ಕನಡಿಯಿಡುವೊಡಸದಳಮೆಂಬ ಕರ್ಕಶದ ಮಾರ್ಗದಿಂದೆ ||೭||

ಶಕುನಿ ಚೀತ್ಕಾರ ಘೋಷಣಂಯಂ ತೃಣಮಯಂ |
ವಿಕಿರದುಪಲಾಳಿ ಕರ್ಕಶಮಯಂ ಶಶಮಯಂ |
ಪ್ರಕಟ ಕಂಟಕ ಕೀರ್ಣ ತರುಮಯಂ ರುರುಮಯಂ ವಿವಿಧೋಗ್ರಜಂತು ಮಯವು ||
ನಕುಲ ಮೂಷಕ ಸರೀಸೃಪ ಮಯಂ ದ್ವಿಪಮಯಂ |
ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ |
ವೃಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು ||೮||

ಇರುಳಂತೆ ಪಗಲಂತೆ ಮಖದಂತೆ ದಿವದಂತೆ |
ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ |
ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತಶಿವಾವಾಸಮಾಗಿ ||
ಧುರದಂತೆ ಕೊಳದಂತೆ ಕಡಲಂತೆ ನಭದಂತೆ |
ಶರ ಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ |
ದಿರುತಿರ್ದುದಾ ಮಹಾಟವಿ ಕಣ್ಗೆ ಘೋರತರಮಾಗಿ ಮುಂದೆ ||೯||

ಅಟವಿಯ ಮಹಾಘೋರ ಗಹ್ವರಂ ಮುಂದೆ ದು |
ರ್ಘಟಮಾಗೆ ನಡುನಸುಗಿ ಭೀತಿಯಿಂ ಸೀತೆ ಸಂ |
ಕಟದಿಂ ರಾಮನಾಮಂಗಳಂ ಜಪಿಸುತೆಲೆ ಸೌಮಿತ್ರಿ ಕಾನನಮಿದು ||
ಅಟನಕಸದಳಮಪ್ಪುದಿಲ್ಲಿ ಪುಣ್ಯಾಶ್ರಮದ |
ಜಟಿಗಳಂ ವಲ್ಕಲವನುಟ್ಟಿ ಮುನಿವಧುಗಳಂ |
ವಟುಗಳಂ ಶ್ರುತಿಘೋಷ ಹೋಮಧೂಂಗಳಂ ಕಾಣೆನೆಂದಳವಳಿದಳು ||೧೦||

ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗೆ |
ಳೆಲ್ಲಿ ಸಿದ್ದಾಶ್ರಮಂಗಳ ಮಂಗಳಸ್ಥಳಗ |
ಳೆಲ್ಲಿ ಸುಹವಿಗಳ ಕಂಪೊಗೆದ ಪೊಗೆದಳೆದಗ್ನಿಹೋತ್ರದ ಕುಟೀರಂಗಳು |
ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗ |
ಳಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ |
ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು ||೧೧||

ಪಾವನಕೆ ಪಾವನಂ ಮಂಗಳಕೆ ಮಂಗಳಮ |
ದಾವನಚರಿತ್ರ ನಾಮಂಗಳಾ ರಾಘವನೆ |
ಜೀವೇಶನಾಗಿರಲ್ಕಾತನಂಘ್ರಿಯ ನಗಲ್ದೀಗ ನಾಂ ಬಂದಬಳಿಕ ||
ಈವನದೊಳಿನ್ನು ಪುಣ್ಯಾಶ್ರಮಂ ಗೋಚರಿಪು |
ದೇ ವನಜದರಳನುಳಿದಾಂಡಿಗೆ ಬೊಬ್ಬುಳಿಯ |
ಪೂನಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಸೀತೆ ಪೊದಕುಳಿಗೊಂಡಳು ||೧೨||

ನರನಾಥ ಕೇಳವನಿಸುತೆ ನುಡಿದಮಾತಿಗು |
ತ್ತರದನಾಡದೆ ಮನದೊಳುರೆ ನೊಂದು ರಾಘವೇ |
ಶ್ವರನೆಂದ ಕಷ್ಟಮಂ ಪೇಳ್ದಪೆನೊ ಮೇಣುಸಿರದಿರ್ದಪೆನೊ ನಿಷ್ಠುರದೊಳೂ ||
ತರಣಿಕುಲಸಾರ್ವ ಭೌಮನ ರಾಣಿಯಂ ಬನದೊ |
ಳಿರಿಸಿ ಪೋದಪೆನೆಂತೂ ಪೋಗದಿರ್ದೊಡೆ ಸಹೋ |
ದರನದೇನೆಂದಪನೊ ಹಾಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು ||೧೩||

ಉಕ್ಕಿದುವು ಕಂಬನಿಗಳಧರೋಷ್ಠಮದಿರಿತಲ |
ಗಿಕ್ಕಿ ತಿರುಪಿದವೊಲಾಯ್ತೊಡಲೊಳೆಡೆವರಿಯದುಸಿ |
ರೊಕ್ಕುದುರೆ ಕಂಪಿಸಿದುದವಯವಂ ಕರಗಿತೆರ್ದೆ ಸೈರಣೆ ಸಮತೆಗೆಟ್ಟುದು ||
ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು |
ಮಿಕ್ಕು ವಿರುವ ಶೋಕದಿಂದೆ ಬೆಂಡಾಗಿ ಕಡು |
ಗಕ್ಕಸದ ಕೆಲಸಮನುಸಿರಲರಿಯ ದವನೊಯ್ಯ ನವನಿಸುತೆಗಿಂತೆಂದನು ||೧೪||

ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ |
ಮಾವರಿಸಿ ನಿನ್ನನೊಲ್ಲದ ರಘುಕುಲೋದ್ವಹಂ |
ಸೀಮಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ |
ಆ ವಿಭುವಿನಾಜ್ಞೆಯಂ ವಿರಲರಿಯದೆ ನಿಮ್ಮ |
ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯೊಯ್ಯ ||
ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು ||೧೫||

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ |
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ |
ಧರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತೆ ||
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ |
ಮರುಗಿ ಕಣ್ದೀರ್ದಳೆದು ಪ್ರದೊಳ್ ಕೊಡೆವಿಡಿದು |
ಸೆರಗಿಂದೆ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು ||೧೬||

ಒಯ್ಯನರೆಗಳಿಗೆಯೊಳ್ ಕಣ್ದೆರದು ದೈನ್ಯದಿಂ |
ಸುಯ್ಯೆಲರನುರೆ ಸೂಸಿ ಸೌಮಿತ್ರಿಯಂ ನೋಡಿ |
ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ ||
ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ |
ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದ |
ನಯ್ಯಯ್ಯೊ ರಾಘವಂ ಕಾರುಣ್ಯನಿಧಿ ಯೆಂದಲ್ದಳಂಭೋಜನೇತ್ರೆ ||೧೭||

ಬಿಟ್ಟನೆ ರಘುಶ್ರೇಷ್ಠನೆನ್ನ ನಕಟಕಟ ತಾ |
ಮುಟ್ಟನೆ ನೆಗಳ್ದ ಬಾಳ್ಕೆಗೆ ಸಂಚಕಾರಮಂ |
ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ ಕಳುಹಿ ಬಾಯೆಂದು ನಿನಗೆ ||
ಕೊಟ್ಟನೆ ನಿರೂಪವಂ ತಾನೆನ್ನ ಕಣ್ಬಟ್ಟೆ |
ಗೆಟ್ಟನೆ ಮನೋವಲ್ಲಭನನಗಲ್ದಡವಿಯೊಳ್ |
ನೆಟ್ಟನೆ ಪಿಶಾಚವೊಲೆಂತಿಹೆನೊ ಕೆಟ್ಟೆನಲ್ಲಾ ಯೆಂದೊರಲ್ದಳಬಲೆ ||೧೮||

ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ |
ಬಂದು ಹರಧನುವ ಮುರಿದೆನ್ನಂ ಮದುವೆಯಾದ |
ವಂದುಮೊದಲಾಗಿ ರಮಿಸಿದನೆನ್ನೊಳಾನಗಲ್ದೊಡೆ ತಾಂ ನವೆದನಲ್ಲದೆ ||
ಬಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ |
ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ |
ಕೊಂದಗ್ನಿಮುಖದೊಳ್ ಪರೀಕ್ಷಿಸಿದ ನೆನ್ನೊಳಪರಾಧಮಂ ಕಾಣಿಸಿದನೇ ||೧೯||

ಕಲ್ಮುಳ್ಳಿಡಿದಕಾಡೊಳಂದೆನ್ನ ನುಪಚರಿಸಿ |
ಪಲ್ಮೊರೆದು ಗರ್ಜಿಪ ವಿರಾಧನಂ ಮರ್ದಿಸಿದೆ |
ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆ ರಾಘವನ ಬಳಿಗೆ ||
ನಲ್ಮೆಯಿಂ ಮರೆದಪೆನೆ ಸೌಮಿತ್ರಿ ನೀನೆಲ್ಲ |
ರೊಲ್ಮೈದುನನೆ ತನಗೆ ಕಾನನದೊಳೆನ್ನನಿಲಿ |
ಸಲ್ಮನಂ ಬಂದಪುದೆ ತಂದೆ ನಿನಗೆಂದು ಕಂಬನಿಮಿಡಿದಳಂಬುಜಾಕ್ಷಿ ||೨೦||

ತೊಳಪ ನಾಸಿಕದ ನುಣ್ಗದಪುಗಳ ಪೊಳೆವ ಕಂ |
ಗಳ ತುರುಗಿದೆವೆಯ ನಿಡುಪುರ್ಬುಗಳ ಪೆರೆನೊಸಲ |
ಥಳಥಳಿಪ ಮಕುಟದ ಕಿವಿಯ ಮಕರಕುಂಡಲದ ಕೋಮಲಿತ ಚುಬುಕಾಗ್ರದ ||
ಲಲಿತಾರುಣಾಧರನ ಮಿರಿಗುವ ರದನಪಂಙ್ಕ್ತ |
ಗಳ ಸೂಸುವೆಳೆನಗೆಯ ಮೋಹನದ ಚೆಲ್ವಿನೊ |
ಬ್ಬುಳಿಯೆನಿಪ ರಾಘವನ ಸಿರಿಮೊಗವನೆಂತು ನೋಡದೆಮಾಣ್ಬೆನಕಟೆಂದಳು ೨೧||

ರಾಮನಂ ಭುವನಾಭಿರಾಮನಂ ಗುಣರತ್ನ |
ಧಾಮನಂ ರಘುಕುಲೋದ್ಧಾಮನಂ ರೂಪಜಿತ |
ಕಾಮನಂ ಸತ್ಕೀರ್ತಿಕಾಮನಂ ಶರಣಜನವಾಧಿಯಂ ಮಿಗೆ ಪೆರ್ಚಿಪ ||
ಸೋಮನಂ ಸೌಭಾಗ್ಯಸೋಮನಂ ಕುವಲಯ |
ಶ್ಯಾಮನಂ ನಿಜತನುಶ್ಯಾಮನಂ ಘನಪುಣ್ಯ |
ನಾಮನಂ ಸಂತತಂ ನಾ ಮನಂದಣಿಯೆ ರಮಿಸದೆ ಬಾಳ್ವೆನೆಂತೆಂದಳು ||೨೨||

ರಾಯಕೇಳಿಂತಿಂತು ರಾಘವೇಶ್ವರನ ರಮ |
ಣೀಯ ಗುಣಮಾಲೆಯಂ ನೆನೆನೆದು ಹಂಬಲಿಸು |
ತಾಯತಾಂಬಕಿ ಮತ್ತೆ ಮೈಮರೆಯುತೆಚ್ಚರುತೆ ಪಾವಗಿದ ಪಸುಳೆವೊಲಿರೆ ||
ತಾಯೆ ನಿನ್ನಂಬಿಟ್ಟು ಪೋಗಲಾರೆಂ ಪೋಗ |
ದೀಯವಸ್ಥೆಯೊಳಿರ್ದೊಡಣ್ಣ ನೇಗೈದಪನೊ |
ಹಾಯೆಂದು ಲಕ್ಷ್ಮಣಂ ಶೋಕಗದ್ಗದನಾಗೆ ಸೀತೆ ಮಗುಳಿಂತೆಂದಳು ||೨೩||

ತಂದೆ ಲಕ್ಷ್ಮಣ ನಿನ್ನೊಳೆಂದೊಡಿನ್ನೇನಹುದು |
ಹಿಂದಣ ಜನಸ್ಥಾನದಂದದೊಳ್‌ಪೋಗು ನೀಂ |
ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರ ದಂದುಗಂ ಕಾನನದೊಳು ||
ಬಂದುದಂ ಕಾಣ್ಬೆನಾನಿಂದು ಕೌಸಲೆಯಡಿಗೆ |
ವಂದಿಸಿದೆನಪರಾಧಮೊಂದುಮಿಲ್ಲದೆ ತನ್ನ |
ಕಂದನೆನ್ನಂ ತೊರಿದುದಂ ದೇವಿಗೊರೆವುದೆನುತಂದಳಲ್ದಳ್ ಮೃಗಾಕ್ಷಿ ||೨೪||

ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ |
ಕಾಕುತ್ಥ್ಸನಿಲ್ಲಿ ತಳುವಿದೊಡೆ ನೆರವುಂಟು ತನ |
ಗೀಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು ||
ಲೋಕದರಸೇಗೈದೊಡಂ ತನ್ನ ಕಿಂಕರರ್ |
ಬೇಕುಬೇಡೆಂದು ಪೇಳರ್ ಭರತ ಶತ್ರುಘ್ನ |
ರೀಕೆಲಸಕೊಪ್ಪಿದರೆ ಹನುಮಂತನಿರ್ದಪನೆ ಪೇಳೆಂದಳಲ್ದಳಬಲೆ ||೨೫||

ಅರಿರ್ದೊಡೇಗೈವರಿದು ತನ್ನ ಮರುಳಾಟ |
ಮಾ ರಾವಣನ ತಮ್ಮನೈಸಲೆ ವಿಭೀಷಣಂ |
ಭೀರುಗಳನರಿದಪನೆ ಸೋದರಂಗುರೆ ಮುಳಿದ ಸುಗ್ರೀವನೆಂಬವಂಗೆ ||
ಕಾರುಣ್ಯಮಿರ್ದಪುದೆ ಮತ್ತುಳಿದ ಮಂತ್ರಿಗಳ |
ದಾರುಂಟು ಪೇಳುವರ್ ದೇವಂಗೆ ನೀನೊಪ್ಪಿ |
ಘೋರಾಟವಿಗೆ ಕೊಂಡುಬಂದೆ ಕಳಫುವೊಡಿನ್ನೊರಲ್ದೊಡೇನಹುದೆಂದಳು ||೨೬||

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ |
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ |
ದೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಲ್ಬೇಡ ನೀನು||
ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗ |
ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ |
ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳ್ಗೆ ||೨೭||

ಎಲೆ ವನಸ್ಥಳಗಳಿರ ವೃಕ್ಷಂಗಳಿರ ಮೃಗಂ |
ಗಳಿರ ಕ್ರಿಮಿಕೀಟಂಗಳಿರ ಪಕ್ಷಿಗಳ ಲತೆ |
ಗಳಿರ ತೃಣಗುಲ್ಮಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು ||
ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ |
ಸಲಹಿಕೊಳ್ವುದು ತನ್ನ ಮಾತೆಯಂ ಜಾನಕಿಯ |
ನೆಲೆತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌಮಿತ್ರಿ ಕೈಮುಗಿದನು  ||೨೮||

ಮಾಳ್ಕೆಯಿನ್ನಾವುದಿಬ್ಬಗಿಯಾಗಿ ತನ್ನೊಡಲ |
ಸೀಳ್ಕೆಡಹಬೇಡವೆ ಧರಿತ್ರಿಯೊಳ್ ನಿಷ್ಠುರದ |
ಬಾಳ್ಕೆಯಂ ಸುಡಲೆನುತೆ ದೇವಿಯಂ ಬಲವಂದು ಲಕ್ಷ್ಮಣಂ ನಮಿಸಿ ಬಳಿಕ ||
ಬೀಳ್ಕೊಂಡು ನಡೆಯಲ್ಕೆ ಹಿಂದುಹಿಂದಕೆ ಮನಂ |
ನೀಳ್ಕುಳಿಗೊಳಲ್ಕೆಂದುಮಗಲದಣ್ಣನ ಕಡೆಗೆ |
ದೊಳ್ಕಾಯದೊಳ್ ಪತ್ತಿ ಪೊರಳ್ವಸೀತೆಯ ಕಡೆಗೆ ತೂಗುಯ್ಯಲೆವೊಲಾದನು ||೨೯||

ನಡೆಗೊಳಲ್ ಕಂಡು ಬಾಯಾರ್ವಳಂ ಚೀರ್ವಳಂ ||
ಕಡಲಿಡುವ ಕಂಬನಿಯೊಳಾಳ್ವಳಂ ಬೀಳ್ವಳಂ |
ಪುಡಿಯೊಳ್ ಪೊರಳ್ದು ಬಸವಳಿವಳಂ ಸುಳಿವಳಂ ಭರತಾವರಜನಗಲ್ದು ||
ಅಡಿಗಡಿಗೆ ತಿರುತಿರುಗಿ ನೋಡುವಂ ಬಾಡುವಂ |
ಬಿಡದೆ ಬಿಸುಸುಯ್ದು ಬೆಂಡಾದಪಂ ಪೋದಪಂ |
ಪೊಡೆಮರಳ್ವಂ ನಿಲ್ವನಳಲುವಂ ಬಳಲುವಂ ಬಟ್ಟೆಯೊಳ್ ದಿಟ್ಟಿಗೆಟ್ಟು ||೩೦||

ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ |
ತ್ಯಾಯಾಸದಿಂದಗಲ್ದಮಂನದಿಯಂ ದಾಂಟಿ |
ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲಿವಳಿತ್ತಲು ||
ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮರಸ |
ರಾಯೆಂದೊರಲ್ದು ಭಯಶೋಕದಿಂದಸವಳಿದು |
ಕಾಯಮಂ ಮರೆದವನಿಗೊರಗಿದಳ್ ಬೇರ್ಗೊಯ್ದುಬಿಸುಟೆಳೆಯ ಬಳ್ಳಿಯಂತೆ ||೩೧||

ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ |
ಧರಣಿಸುತೆಯಂ ಬಳಸಿ ಮೈಯೊಡಗಿ ಜೋ |
ಲ್ದಿರದೆ ಕಂಬನಿಗರೆದು ನಿಜವೈರಮಂ ಮರೆದು ಪುಲ್ಮೇವುಗಳನೆ ತೊರೆದು ||
ಕೊರಗುರ್ತಿರ್ದುವು ಕೂಡೆ ವೃಕ್ಷಲತೆಗಳ್ ಬಾಡಿ |
ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ |
ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ ||೩೨||

ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ |
ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ |
ಕರೆಯಲೊಲ್ಲವು ಪಿಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ ||
ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ |
ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ |
ಮರರೆ ಜಾನಕಿಯ ಶೋಕಂ ತಮ್ಯದೆಂದಾಕೆಯಂಗಮಂ ನೋಡಿನೋಡಿ ||೩೩||

ಬೀಸಿದುವು ಬಾಲದೊಳ್ ಚಮರಿಗಳ ಚಮರಮಂ |
ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ |
ಸೂಸಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು ||
ಆ ಸಿರಿಮೊಗಕ್ಕೆ ಬಿಸಿಲಾಗದಮತಾಗಸದೊ |
ಳೋಸರಿಸದಂಚೆಗಳೆರಂಕೆಯನಗಲ್ಚಿನೆಳ |
ರಾಸೆಗೈದುವು ರಾಘವನ ರಾಣಿ ದುಃಖಸಂತಪ್ತೆಯಾಗಿರುತಿರಲ್ಕೆ ||೩೪||

ಸುರನದಿಯ ತೆರೆತೆರದು ನಡುನಡುವೆ ಬಿದ್ದೆದ್ದು |
ಬರಲಾದಿರ್ದೊಡಂ ಮತ್ತೆ ಗಂಗೆಯೊಳಲ |
ರ್ದರವಿಂದಿರ್ದೊಡಂ ಭಾರವಂ ಪೊರಲಾರದಿರ್ದೊಡಂ ಧರಣಿಸುತೆಯ ||
ಪರಿತಾಪಮಂ ತವಿಸದಿರಬಾರದೆಮದು ತರ |
ಹರದೊಳೊಯ್ಯೊಯ್ಯನೈತಂದು ಬೀಸಿತು ಸುಖ |
ಸ್ಪರುಶಶವಾತಂ ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ ||೩೫||

ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು |
ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ |
ಶಿಥಿಲಮಾದವಯವದ ಧೂಳಿಡಿದ ಮೈಯ್ಯ ಬಿಡುಮುಡಿದು ವಿಕೃತಿಯನೆಣಿಸದೆ ||
ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ |
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ |
ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ ||೩೬||

ಕೇಣಮಂ ಬಿಟ್ಟಾತ್ಮಘಾತಕದೊಳೀ ಕ್ಷಣಂ |
ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ |
ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ ||
ಏಣಾಕ್ಷಿ ನಡೆದಳಡವಿಯೊಳುಪಲ ಕಂಟಕ |
ಶ್ರೇಣಿಗಳ್ ಸೊಂಕಿ ಮೆಲ್ಲಡಿಗಳಿಂ ಬಸಿವ ನವ |
ಶೋಣಿತಂ ನೆಲದೊಳ್ ಪೊನಲ್ವರಿಯಲರಸ ಕೇಳ್ ಪೆಣ್ಣೊಡಲ್ವಿಡಿಯಬಹುದೆ ||೩೭||

ಅನ್ನೆಗಂ ಮಖಕೆ ಯೂಪವನರಸುತಾ ಬನಕೆ |
ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ |
ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳಿರ್ವಳೆ ಪುಗಲ್ದೆಸೆಗಾಣದೆ ||
ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತು |
ವಿನ್ನವೆದ ಕಾಂತಾರದಧಿದೇವಿ ತಾನೆನಲ್ |
ಸನ್ನಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು ||೩೮||

ಆರಿವಳಿದೇತಕಿರ್ದಪಳೀ ವನಾಂತರದೊ |
ಳಾರೈವೆನಿದನೆಂದು ನಡೆತಂದು ಕರುಣದಿಂ |
ದಾರುಷಿ ನುಡಿಸಿದನೆಲೆ ತಾಯೆ ನೀನಾವಳೌ ಕಂಡ ಕುರುಪಾಗಿರ್ಪುದು |
ಘೋರತರ ಗಹನಕೊರ್ವಳೆ ಬಂದೆಯೆಂತಕಟ |
ಭೀರು ಹೇಳಾ ಹೆದರಬೇಡ ವಾಲ್ಮೀಕಿ ನಾಂ |
ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು ||೩೯||

ಹರುಷಮೊತ್ತರಿಸಿದುದು ಶೋಕವಿಮ್ಮಡಿಸಿದುದು |
ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ಗದ |
ಸ್ವರದಿಂದೆ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದೆ ತನ್ನನು ||
ತರಣಿಕುಲಸಂಭವಂ ಬಿಟ್ಟನೆಂದೀವನದೊ |
ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವಮಂ |
ಪೊರೆಯವೇಳ್ಪುದೆ ಗರ್ಭಮೊಡಳಿಹುದೇಗೈವೆನೆಂದೆರಗಿದಳ್ ಮುನಿಪದದೊಳು ||೪೦||

ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವ |
ಬಾವಿಸದಿರಿನ್ನು ಸಂದೇಹಮಂ ಜನಕಂಗೆ |
ನಾವನ್ಯರಲ್ಲ ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ||
ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ |
ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ |
ರಾವಣಾರಿಯ ರಾಣಿಯಂ ನಿಜಪೋವನಕೆ ವಾಲ್ಮೀಕಿ ಕರೆತಂದನು ||೪೧||

ಚಿತ್ರಮಯಮಾಗಿ ಕಟ್ಟಿತು ಪರ್ಣಶಾಲೆ ಶತ |
ಪತ್ರಲೋಚನೆಗೆ ಬಳಿಕಲ್ಲಿ ಋಷಿಪತ್ನಿಯರ |
ಮಿತ್ರತ್ವಮಂ ತಳೆದು ವಾಲ್ಮೀಕಿಮುನಿಪನಾರೈಕೆಯಿಂ ಸೀತೆ ತನ್ನ ||
ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ |
ರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ‍್ಮಲ ಚ |
ರಿತ್ರಮೆಂತಾದೊಡಂ ವಿಪರೀತಮಾದಪುದೆ ಭೂಪಾಲ ಕೇಳೆಂದನು ||೪೨||

ಜಾತಿವೈರಂಗಳಿಲ್ಲದ ಪಕ್ಷಿಮೃಗದ ಸಂ |
ಘಾತದಿಂ ಋತುಭೇದಮಿಲ್ಲದ ಲತಾದ್ರುಮ |
ವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂಗೊಳಂಗಳ ವಿಕಾಸದಿಂದೆ ||
ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ |
ಪ್ರೀತಿವಿರಹಿತ ದುಃಖಸುಖದ ಜಂಜಡಮಿಲ್ಲ |
ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು ||೪೩||

ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ್ಪ |
ರಿನಿದಾದವಸ್ತುವಂ ಋಷಿವಧುಗಳಿತ್ತಪರ್ |
ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು ||
ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ |
ಬನದೊಳಿಂತಿರುತಿರ್ದಳವನಿಸುತೆ ರಾಘವೇಂ |
ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು ||೪೪||

ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ |
ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ |
ಳವಳಿಮಕ್ಕಳನುಪಚರಿಪೆ ವಿದಗ್ಧಾಂಗನೆಯರಾ ಸೂತಿಕಾಗೃಹದೊಳು ||
ತವಕದಿಂದೈತಂದು ಮುನಿವಟುಗಳುಸಿರಲು |
ತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶ |
ಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನರ್ಭಕರ್ಗೆ ||೪೫||

ದೆಸೆಗಳ್ ಪ್ರಸನ್ನತೆಯೊಳೆಸೆದ ವಾಗಸದೊಳುಡು |
ವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ |
ಪಸರಿಸಿತು ತವೆ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು ||
ವಸುಧೆ ನಲಿದುದು ತಿಳಿದು ಪರಿದುವು ನದಿಗಳಂದು |
ಶಶಿರವಿಗಳುದಯಿಸಿದರೇಕಕಾಲದೊಳೆನಲ್ |
ಶಿಶುಗಳಾಶ್ರಮದ ಮುನಿಗಳ ಕಣ್ಗೆ ಕಾಣಿಸಿದರೊಸಗೆ ಮೂಜಗಕಾದುದು ||೪೬||

ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ |
ಬಾಲಲೀಲೆಗಳನಾಡಿಸಿ ಮುದ್ದುಮಾಡುವೆಂ |
ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು ||
ಲಾಲಿಸುವನಾವಗಂ ಜಪ ಸಮಾಧಿ ತಪಗಳ |
ಕಾಲಮಂ ಬಗೆಯದೆ ಮುನೀಶ್ವರಂ ಕುಶಲವರ |
ಮೇಲಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದುದು ದಿನದಿನದೊಳು ||೪೭||

ದಶರಥ ನೃಪಾಲ ಸುತರಮನೆಯ ಬೇಳವಿಗೆಯ |
ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕ |
ರ್ಕಶಮಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತೆ ||
ವಿಶದಮಾಸನಾಗಿ ವಾಲ್ಮೀಕಿಮುನಿವರಂ |
ಕುಶಲವರನೋವಿದಂ ವಿವಿಧವೈಭವದಿಂದೆ |
ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವಧಿಸಿದರು ||೪೮||

ಚೆಲ್ವೆರಡುರೂಪಾಯ್ತೊ ವಿಮಲತೆ ಕವಲ್ತುದೋ |
ಗೆಲ್ವದೆಸೆ ಗೆಳೆಗೊಂಡಡರ್ದಪುದೊ ಕೀರ್ತಿಯ ಮ |
ಡಲ್ವಸುಧೆಯೊಳ್ ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ ||
ಸಲ್ವಕುಲದೇಳ್ಗೆಯ ಸಸಿಯ ಕೋಡೊ ಮೋಹನದ |
ಬಲ್ವೊನಲ ಸವಡಿಯೋ ಸೊಗಸಿನವಳಿಯ ಫಲವೊ |
ಸೊಲ್ವೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರಾಶ್ರಮದೊಳು ||೪೯||

ತೊಟ್ಟಿಲೊಳ್ ನಲಿವ ನೆವಮಿಲ್ಲದೆ ನಗುವ ಬಾಯ್ಗೆ |
ಬೆಟ್ಟಿಕ್ಕಿ ಪದಿದೊಡೆ ಚೀರ್ವ ಮೊಲೆಯುಂಬ |
ಪಟ್ಟಿರಿಸೆ ಪೊರಳ್ವಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ ||
ದಟ್ಟಡಿಯಿಡುವ ನಿಲ್ವ ತೊಡರ್ವ ಬೇಡುವ ಪರಿವ |
ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ |
ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿಮುನಿವರಂಗೆ ||೫೦||

ಬಿಡದೆ ಪಾಲ್ಪೀರ್ವುದಂ ಕಳಿಯಲೋರಗೆ ಮಕ್ಕ |
ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ |
ವಿಡಿಯಿಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರ‍್ಮಂಗಳಂ ಮಾಡಿಸಿ ||
ತೊಡಗಿಸಿದನಕ್ಷರಾಭ್ಯಾಸಮಂ ಬಳಿಕ ನಡೆ |
ನುಡಿದು ಜಾಣ್ಮೆಯ ಕಲೆಯ ರಾಜಲಕ್ಷಣದ ಚೆ |
ಲ್ವಿಡಿದು ಲಲಿತಾಂಗದಿಂ ಕುಶಲವರ್ ಕುಶಲ ವರ್ಧನರಾಗಿ ||೫೧||

ಶ್ರೀಮಾಧವನ ಮನೋಹರದ ಸೌಂಧರ‍್ಯಮಂ |
ಕಾಮನ ಜನಕನ ಕಮನೀಯ ಲಾವಣ್ಯಮಂ |
ರಾಮಚಂದ್ರನ ರಾಮಣೀಯದ ಕದ ರೂಪಮಂ ತಾಳ್ದೊಗೆದ ಸುಕುಮಾರರ ||
ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ |
ಭೂಮಿಯೊಳ್ ಚೆಲ್ವಿಗೆ ವಸಂತನಂ ಮದನನಂ |
ಸೋಮನಂ ಪಡಿಯಿಡಲ್ ಪುನರುಕ್ತಮಪ್ಪುದೆನೆ ಕುಶಲವರ್ ಕಣ್ಗೆಸೆದರು ||೫೨||

ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ |
ವೇದೋಕ್ತದಿಂದಮುಪನಯನಂಗಳಂ ಮಾಡಿ |
ಭೂದೇವನಿರಕೆ ವಸಿಷ್ಠನೊಳ್ ವರಕಾಮಧೇನುವಂ ಬೇಡಿ ತಂದು ||
ಅದರಿಸೆ ಭೋಜನ ಸುಗಂಧಾಕ್ಷತೆಗಳಿಂದ |
ಮಾದುದತಿವಿಭವದಿಂದುತ್ಸವಂ ಬಳಿಕ ತರು |
ಣಾದಿತ್ಯಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕಾನಂದಮಾಗೆ ||೫೩||

ಸರ್ವಕರ್ಮದ ವಿಧಿಯನಖಿಳ ನಿಗಮದ ಕಡೆಯ |
ನುರ್ವ ಶಾಸ್ತ್ರದ ಬಗೆಯನುದಿತಧರ‍್ಮನ ನೆಲೆಯ |
ನುರ್ವೀಶ ನೀತಿಗಳ ನಿಶ್ಚಯವನೈದೆ ಸಾಂಗೋಪಾಂಗವಾಗಿ ಬರಿಸಿ ||
ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧ |
ನುರ್ವೇದಮಂ ಶಿಕ್ಷೆಗೈದು ರಾಮಾಯಣನ |
ನಿರ್ವರುಂ ಪಾಡುವಂತೋದಿಸಿದನತಿಮಧುರಭಾವದಿಂ ತುದಿ ಮೊದಲ್ಗೆ ||೫೪||

ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊ |
ಳಾತಪೋವನದ ಮುನಿಗಣಮೈದೆ ಕೊಂಡಾಡ |
ಲಾ ತರುಣರೀರ‍್ವರುಂ ಮಧುರವೀಣೆಗಳ ಮೇಳಾಪದಾಪಂಗಳ ||
ಗೀತದೊಳ್ ಸಂಕೀರ್ಣ ಶುದ್ಧ ಸಾಲಗದಿಂ ರ |
ಸಾತಿಶಯಮನೆ ಪಾಡುವರ್ ದೇವನಗರೀ ನಿ |
ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನುದಿನದೊಳು ||೫೫||