ಸೂಚನೆ ||
ಸ್ತ್ರೀರಾಜ್ಯದೊಳ್ ಪ್ರವಿಳೆಯನೊಡಂಬಡಿಸಿ ವಿ |
ಸ್ತಾರಮಾಗಿರ್ದ ಬಹುದೇಶಂಗಳಂ ತೊಳಲಿ |
ಘೋರಭೀಷಣದೈತ್ಯನಂ ಮುರಿದು ಫಲುಗುಣಂ ಮಣಿಪುರಕೆ ನಡೆತಂದನು ||

ಕೇಳವನಿಪಾಲಕುಲತಿಲಕ ತುರಗದ ಕೂಡೆ |
ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ |
ಪೇಳಿದಂತಿರುತಿರ್ದುದನ್ನೆಗಂ ಕುದುರೆ ತನ್ನಿಚ್ಛೆಯಿಂದೈದೆ ಕಂಡು ||
ಭಾಳಪಟ್ಟದ ಲೇಖನವನೋದಿಕೊಂಡು ನೀ |
ಲಾಳಕೆಯರಾಗ ನಡೆತಂದು ಕೈಮುಗಿದು ಪ್ರ |
ವಿಳೆಯೆಂಬರಸಾಗಿಹ ಸ್ತ್ರೀಶಿರೋಮಣಿಗೆ ಸಂಭ್ರದೊಳಿಂತೆಂದನು ||೧||

ಶಶಿಕುಲೋದ್ಭವ ಯುಧಿಷ್ಠಿರನ್ನಪನ ಕುದುರೆ ಗಡ |
ವಸುಧೆಯೊಳಿದಂ ಬಲ್ಲಿದರ್ ಕಟ್ಟಬೇಕು ಗಡ |
ದೆಸೆಯೊಳಿದಕರ್ಜುನನ ಕಾಪಿನಾರೈಕೆ ಗಡ ಪಿಡಿದೊಡೆ ಬಿಡಿಸುವರ್ಗಡ ||
ಪೊಸತಲಾ ನಮಗೆಂದು ನಾರಿಯರ್ ಬಿನ್ನೈಸೆ |
ನಸುನಗುತೆ ಲಾಯದೊಳ್ ಕಟ್ಟಿಸಿದೊಳಾ ಹಯವ |
ನೆಸೆವ ಭದ್ರಾಸನವನಿಳಿದು ಸಂಗ್ರಾಮಕ್ಕೆ ಪೊರಮಟ್ಟಳಾ ಪ್ರವಿಳೆ ||೨||

ಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ |
ತಿಣ್ಣಮೊಲೆಯಲಸಗಮನೆಯರಾನೆ ಲಕ್ಷದಿಂ |
ಹುಣ್ಣಿಮೆಯ ಶಶಿಯಂತೆಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದೆ ||
ಸಣ್ಣನಡುವಿನ ಸೊಕ್ಕುಜೌವನದ ಪೊಸಮಿಸಿನಿ |
ವಣ್ಣದಂಗದ ಬಾಲೆಯರ ಮೂರುಲಕ್ಷದಿಂ |
ಪೆಣ್ಣ ದಳಮೈದೆ ಜೋಡಿಸಿತು ಪಾರ್ಥನ ಸಮರಕಾ ಪ್ರವಿಳೆಯ ಸುತ್ತಲು ||೩||

ತೆಗೆದುಟ್ಟ ಚಲ್ಲಣದ ಬಿಗಿದ ಮೊಲೆಗಟ್ಟುಗಳ |
ಪೊಗರುಗುವ ವೇಣೀಗಳ ಮೃಗಮದದ ಬೊಟ್ಟುಗಳ |
ತಿಗುರಿದನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವಾಭರಣದ |
ನಗೆಮೊಗದ ಮಿಂಚುಗಳ ದೃಗುಯುಗದ ಕಾಂತಿಗಳ |
ಮಿಗೆತೊಳಗುವಂಘ್ರಿಗಳ ಸೊಗಯಿಸುವ ಬಾಹುಗಳ |
ಬಗೆಬಗೆಯ ಕೈದುಗಳ ವಿಗಡೆಯರ್ ನೆರೆದು ಕಾಳಗಕೆ ಮುಂಕೊಳುತಿರ್ದರು ||೪||

ಮಂದಗತಿಯಿಂದೆ ನಳಿತೋಳಿಂದೆ ಕುಂಭಕುಚ |
ದಿಂದೆ ಜೌವನದ ಮದದಿಂದೆ ಭದ್ರಾಕಾರ |
ದಿಂದೆಸೆವ ಕನಕಮಣಿಬಂಧ ನಿಗಳಂಗಳಿಂ ಭೃಂಗಾಳಕಂಗಳಿಂದೆ ||
ಸಿಂದೂರದಿಂದಮಾರಾಜಿಸುವ ಸೀಮಂತ |
ದಿಂದೆ ಮಂಜುಳಕಿಂಕಿಣಿಗಳ ಕಾಂಚೀದಾಮ |
ದಿಂದೆಸೆವ ಪೆಣ್ಗಳಾನೆಗಳ ಮೇಲೈತಂದರವರಾಯತಂಗಳಿಂದೆ ||೫||

ಸುರದುತ್ಕಟಾಕ್ಷದಿಂ ಲಲಿತೋರುಯುಗದಿಂದೆ |
ಗುರುಪಯೋಧರವಿಜಿತ ಚಕ್ರಶೋಭಿದಿಂದೆ |
ಪರಿಲುಳಿತ ಚಾಪಲತೆಯಿಂ ಪ್ರಣಯ ಕಲಹದೊಳಗಲ್ದಿನಿಯರಂ ಜಯಿಸುವ ||
ವರಮನೋರಥದೊಳೈದುವ ಕಾಮಿನಿಯರೀಗ |
ನರನ ಸಂಗರಕೆ ಪೊಂದೇರ್ಗಳನಡರ್ದು ಬರು |
ತಿರೆ ಚಿತ್ರಮೆಂದು ಸಲೆ ನೋಡುತಿರ್ದರು ಸಕಲಪರಿವಾರದೊಳ್ ವೀರರು ||೬||

ಚಂಚಲಾಕ್ಷಿಯರ ತಳತಳಿಪ ಕಡೆಗಣ್ಣ ಕುಡಿ |
ಮಿಂಚವರಡರ್ದ ತೇಜಿಗಳ ಡೂವಾಳಿಯಂ |
ಮುಂಚಿದುವು ನಳಿತೋಳ್ಗಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು ||
ಹೊಂಚಿದುವು ವಜ್ರಮಣಿಭೂಷಣದ ಕಾಂತಿಯಂ |
ಪಂಚಬಾಣ ಪ್ರಯೋಗದೊಳನೇಕಾಸ್ತ್ರ ಪ್ರ |
ಪಂಚವಡಗಿತ್ತೆಸೆವ ಸಿಂಗಾಡಿಗಳನವರ ಪುರ್ಬಿನ ಗಾಡಿಗಳ್ ಮಿಕ್ಕುವು ||೭||

ಲೀಲೆ ಮಿಗೆ ಪೆಣ್ದಳಂ ಬಂದು ವಿಜಯನ ಪಡೆಯ |
ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ |
ಸಾಲೆಸಲೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗರೆಯುತೆ ||
ಬಾಲಾರ್ಕಬಿಂಬಮುಂ ಶಶಿಮಂಡಲಮುಮೇಕ |
ಕಾಲದೊಳ್ ಮೂಡಿ ಬರ್ಪಂತೆ ಪೊಂದೇರೊಳ್ ಪ್ರ |
ವಿಳೆ ಮುಖಕಾಂತಿ ಕಳಕಳಿಸೆ ನಡೆತರುತಿರ್ದಳರಸುಮೋಹರದ ನಡುವೆ ||೮||

ಬಳಿಕಾ ಪ್ರವಿಳೆ ಪಾರ್ಥನ ಮೋಹರಕೆ ತನ್ನ |
ದಳಸಹಿತ ನಡೆತಂದು ಕಂಡಳೂನ್ನತ ಕಪಿಯ |
ಪಳವಿಗೆಯ ಮಣಿರಥದೊಳೊಪ್ಪುವ ಕಿರೀಟಿಯಂ ನಗುತೆ ಮಾತಾಡಿಸಿದಳು ||
ಫಲುಗಣಂ ನೀನೆ ನಿನ್ನಶ್ವಮಂ ತಡೆದೆನಾಂ |
ಚಲವೊ ವಿನಯವೊ ಬಿಡಿಸಿಕೊಳ್ವ ಬಗೆಯಾವುದಿ |
ನ್ನಳವಿಯೊಳ್ ಕಾಣಬಹುದೆನುತೆ ಬಿಲ್ತೆಗೆದು ಜೇಗೆಯ್ಯೆ ನರನಿಂತೆಂದನು ||೯||

ನಾರಿಯೊಳ್ ಕಾಳಗವೆ ತನಗಕಟ ಕಡುಗಿ ಮದ |
ನಾರಿಯೊಳ್ ಕಾದಿದುಗ್ಗಡದ ನಿಜಕಾರ್ಮುಕದ |
ನಾರಿಯೊಳ್ ಕಣೆಯಂ ತುಡುವೆನೆಂತೊ ಶಿವಶಿವಾ ಪರ‍್ಯಂಕಮಂ ಸಾರ್ದೊಡೆ ||
ನೀರಜಶರಾಹವದೊಳೊದಗುವೊಡೆ ಕಡುಚದುರೆ |
ನೀ ರಣದೊಳಾಳ್ತನವನೆನ್ನೊಡನೆ ತೋರಿದೊಡೆ |
ನೀರಪವೆನಿಸದೆ ಪೇಳೆಂದು ಕುಂತೀಸುತಂ ನುಡಿದೊಡವಳಿಂತೆಂದಳು ||೧೦||

ಪರಿಯಂಕಮಂ ಸಾರ್ದೊಡಂಗಜಾಹವದೊಳಗ |
ಪರಿಮಿತಸುಖಾವಹದ ಸುರತ ತಂತ್ರದ ಕಲೆಯ |
ಪರಿವಿಡಿಗಳಂ ತೋರಿಸುವೆನೀಗಳೆನ್ನಂ ವರಿಸುವುದಲ್ಲದೊಡೆ ನಿನ್ನ |
ತುರಗಮಂ ಬಿಡುವುದಿಲ್ಲದಟಿಂದೆ ಕಾದುವಾ |
ತುರಮುಳ್ಳೊಡಿದಿರಾಗಿ ನೋಡು ಸಾಕೆನ್ನೊಳೆನು |
ತುರಣಿಸುತವಳೆಚ್ಚೊಡರ್ಜುನಂ ಸೈರಿಸುತ್ತೆಳನಗೆಯೊಳಿಂತೆಂದನು ||೧೧||

ವಿಷಯೋಪಭೋಗಮಂ ಬಯಿಸಿ ನಿನಗಾನೊಲಿಯೆ |
ವಿಷಯೋಗಮಾಗದಿರ್ದಪುದೆ ಪೇಳ್ ಪುರುಷರೀ |
ವಿಷಯೋದ್ಭವ ಸ್ತ್ರೀಯರಂ ಬೆರಸಿ ಬಾಳ್ದಪರೆ ಸಾಕದಂತಿರಲಿ ನಿನಗೆ |
ರುಷಭಾಯಿತದೊಳಾಂತ ಭಟರೊಳ್ ಪಳಂಚುವ ಪ |
ರುಷಭಾಷಿತವನಬಲೆ ನಿನ್ನೊಳಾಡುವುದು ಪೌ |
ರುಷಭಾವಮಲ್ಲ ಬಿಡು ವಾಜಿಯಂ ಪೆಣ್ಗೊಲೆಗಳುಕುವೆನೆಂದಂ ಪಾರ್ಥನು ||೧೨||

ಕಾದಲಂಬಿಂದೆ ಕೊಂದಪೆನೀಗಳಲ್ಲದೊಡೆ |
ಕಾದಲಂ ನೀನಾಗೆ ಸುರತಮೋಹಕೆ ಪ |
ಕ್ಕಾದಲಂಪಿನ ಸೌಖ್ಯಮಂ ತಳೆದ ಬಳಿಕಹುದು ಮೃತಿ ತಪ್ಪದೆಂತುಮಳಿವು ||
ಸಾದರದೊಳೆನ್ನೊಡನೆ ರಮಿಸಿವುದು ನಿನಗೆ ಸೊಗ |
ಸಾದರದನನುಕರಿಸು ಮೇಣೆ ಕಲಹಕೃತವೆ ಲೇ |
ಸಾದರದಟಂ ತೋರಿಸೆಂದಾ ಪ್ರವಿಳೆ ಪಾರ್ಥನ ಮೇಲೆ ಕಣಡಗರೆದಳು ||೧೩||

ಹಿಂದೆ ಶೂರ್ಪಣಖೆ ಲಕ್ಷ್ಮಣನನಂಡಲೆದು ಪಡೆ |
ದಂದಮಂ ನೆನೆದಿವಳನೀಕ್ಷನವೆ ಭಂಗಿಸುವೆ |
ನೆಂದು ಸಮ್ಮೊಹನಾಸ್ತ್ರವನುಗಿದು ಗಾಂಡೀವದೊಳ್ ಪೂಡಿ ಪಾರ್ಥನಿಸಲು ||
ಮಂದಸ್ಮಿತದೊಳದಂ ಕಡಿದು ಬಿಲ್ದಿರುವನೆ |
ಚ್ಚಿಂದುಮುಖಿ ಶಕ್ರಸುತನಂ ನೋಯಿಸಲ್ಕೆ ಮ |
ತ್ತೊಂಡುಹೆದೆಯಂ ಚಾಪಕೇರಿಸಿ ನರಂ ಪೂಡಿದಂ ದಿವ್ಯಮಾರ್ಗಣವನು ||೧೪||

ಆ ಸಮಯದೊಳ್ ನುಡಿದುದಶರೀರವಾಕ್ಯಮಾ |
ಕಾಶದೊಳ್ ಬೇಡಬೇಡಲೆ ಪಾರ್ಥ  ಹೆಂಗೊಲೆಗೆ |
ಹೇಸದೆ ಮಹಾಸ್ತ್ರಮಂ ತುಡುವೆ ನೀಂ ಮುಳಿದಯುತವರ್ಷಮಿನ್ನಿವಳಕೂಡೆ ||
ಬೇಸರದೆ ಕಾದಿದೊಡೆ ತೀರಲರಿಯದು ಮನದ |
ವಾಸಿಯಂ ಬಿಟ್ಟು ವರಿಸೀಕೆಯಂ ಸತಿಯಾಗೆ |
ಲೇಸಹುದು ಮುಂದೆ ನಿನಗೆಂದು ನಿಡುಸರದಿಂದೆ ಸಕಲಜನಮುಂ ಕೇಳ್ವೊಲು ||೧೫||

ಆಲಿಸಿದನಶರೀರವಾಣೆಯಂ ಪೂಡಿರ್ದ |
ಕೋಲನೊಯ್ಯನೆ ಶರಾಸನದಿಂದಮಿಳಿಪಿದಂ |
ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನಾಳೋಚಿಸಿದನಾಪ್ತರೊಡನೆ ||
ಆ ಲಲನೆಯಂ ತನ್ನೆಡೆಗೆ ಬರಿಸಿಕೊಂಡು ತ |
ತ್ಕಾಲೋಚಿತದೊಳೊಡಂಬಡಿಸಿ ಕೈವಿಡಿದನನು |
ಕೂಲೆಯಾಗಿರೆ ಬಳಿಕ ನಸುನಗುತೆ ವಿನಯದಿಂ ಕಲಿಪಾರ್ಥನಿಂತೆಂದನು ||೧೬||

ಕಣ್ಣಳವಿದಬಲ್ಲಬಲೆ ಕೇಳ್ ದೀಕ್ಷೆಗೊಂಡಿರ್ಪ |
ನಣ್ಣದೇವಂ ತಾನುಮನ್ನೆಗಂ ವ್ರತಿಯಾಗಿ |
ಪೆಣ್ಣೊಳ್ ಬೆರೆಯೆನೆಂದು ಪೊರಮಟ್ಟೆನಶ್ವರಕ್ಷೆಗೆ ಮುಂದೆ ಗಜಪುದೊಳು ||
ಪಣ್ಣುವಧ್ವರಕೆ ನೀಂ ಬಂದು ಕನ್ನೈದಿಲೆಯ |
ಬಣ್ಣದ ಮುರಾರಿಯಂ ಕಂಡು ವಿಷವಧುತನದ |
ತಿಣ್ಣಮಂ ಕಳೆದೆನ್ನೊಳೊಡಗೂಡು ಸೌಖ್ಯಮಹುದಲ್ಲಿಗೈತಹುದೆಂದನು ||೧೭||

ಎನಲಾ ಪ್ರವಿಳೆ ಪಾರ್ಥನ ಮಾತಿಗೊಪ್ಪಿ ಕರ |
ವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ |
ಮನೆಯಿಂ ತರಿಸಿಕೊಟ್ಟುತನ್ನಾಲಯದೊಳಿರ್ದ ವಿವಿಧರತ್ನಾವಳಿಗಳನು ||
ಜನಪದದೊಳಿರ್ದ ವಸ್ತುಗಳೆಲ್ಲಮಂ ಕೊಂಡು |
ವನಿತೆಯರ ಮೋಹರಂಬೆರಸಿ ಪೊರಮಟ್ಟು ಯಮ |
ತನಯನಂ ಕಾಣ್ಬ ಕಡುತವಕದಿಂ ಬಂದಳಿಭನಗರಿಗತಿಸಂಭ್ರದೊಳು ||೧೮||

ಗಜನಗರಿಗಾರಿಕೆಯಂ ಕಳುಹಿ ಕುದುರೆಯ ಕೂಡೆ |
ವಿಜನೈತರೆ ಮುಂದೆ ದೇಶಂಗಳಜಮನುಜ |
ಗಜ ಗೋಶ್ವ ಮಹಿಷಾದಿ ನಿಕರಂಗಳಿಂದೆ ಪೂರಿತಮಾಗಿ ಕಂಗೊಳಿಸಲು ||
ಕುಜಕುಜಂಗಳ ಪೊದರೊಳತಿ ಸೂಕ್ಷ್ಮಜೀವರಂ |
ಬುಜಮಿತ್ರನುದಯಕುದ್ಭವಿಸಿ ಮಧ್ಯಾಹ್ನದೊಳ್ |
ನಿಜದ ಜೌವನದಿಂದೆ ಬಾಳ್ದಸ್ತಮಯಕಳಿಯುತಿರೆ ಕಂಡು ಬೆರಗಾದನು ||೧೯||

ಮತ್ತೆ ಮುಂದೈದುವ ತುರಂಗಮದ ಕೂಡೆ ನಡೆ |
ಯುತ್ತೆ ಬರಿದೊಗಲುಡಿಗೆಯವರ ವಕ್ರಾಂಗಿಗಳ |
ನೊತ್ತೋಳವರನೊಂದು ಕಾಲವರನೊಂದು ಕಣ್ಣವರ ಮೂರಡಿಗಳವರ ||
ಉತ್ತುಂಗ ನಾಸಿಕದವರ ಮೂರು ಕೆಣ್ಣವರ |
ನೆತ್ತಿಗೋಡೆರಡುಳ್ಳವರನೊಂದು ಕೋಡುವರ |
ಕತ್ತೆಮೊಗದವುರ ಕುದುರೆಮೊಗದವರ ದೇಶಂಗಳಂ ಕಂಡನಾ ಕಲಿಪಾರ್ಥನು ||೨೦||

ಅಲ್ಲಿಗಲ್ಲಿಗೆ ತುರಂಗದ ಕೂಡೆ ಕೌಂತೇಯ |
ನಿಲ್ಲದಿಲ್ಲದ ಚಿತ್ರಮಂ ನೋಡುತೈತರಲ್ |
ಮೆಲ್ಲಮೆಲ್ಲನೆ ಹಯಂ ಪೋಯ್ತು ಭೀಷಣನೆಂಬಸುರನ ಪುರಕದರೊಳವನ ||
ಸೊಲ್ಲುಸೊಲ್ಲಿಗೆ ಮಿಗೆ ಹಸಾದವೆನುತವನಿಯೊಳ್ |
ಸಲ್ಲಸಲ್ಲದ ಕೃತ್ಯಮೆಲ್ಲಮಂ ನೆರೆ ಮಾಡ |
ಬಲ್ಲ ಬಲ್ಲಿದ ರಕ್ಕಸರ್ ಮೂರುಕೋಟಿ ತಳ್ತಿಹರತಿಭಯಂಕರದೊಳು ||೨೧||

ರಕ್ಕಸರನಿಬರೆಲ್ಲರುಂ ದೀರ್ಘದೇಹಿಗಳ್ |
ವೆಕ್ಕಸದ ಕೋಪಿಗಳ್ ಮೇಲೆ ಪುರುಷಾದಕರ್ |
ಕಕ್ಕಸದ ಮುಸುಡವರ್ ಬಹಳಮಾಯಾವಿಗಳ್ ನಿರ್ದಯರ್ ಕೊಲೆಗಡಿಕರು ||
ಹೊಕ್ಕ ಸಮರಕ್ಕೆ ಹಿಮ್ಮೆಟ್ಟರುನ್ಮತ್ತರೆನೆ |
ಮಿಕ್ಕಸದಳವನದೇವೇಳ್ವೆನರ್ಜುನನ ಹಯ |
ಮೆಕ್ಕರಸದೊಳ್ ಬಂದುದಲ್ಲಿಗವನೀಶ ಕೇಳಿನ್ನಾ ಮಹಾದ್ಭುತವನು ||೨೨||

ಆಹಾರಕಡವಿಯಂ ತೊಳಲಿ ಬರುತಿರ್ದ ಮೇ |
ದೋಹೋತನೆಂಬವಂ ದಾನವೇಂದ್ರಂಗೆ ಪೌ |
ರೋಹಿತ್ಯಮಂ ಮಾಡುವಂ ಬ್ರಹ್ಮರಾಕ್ಷಸಂ ಕಂಡು ಪಾರ್ಥನ ಹಯವನು ||
ಊಹಿಸಿದನಿದು ಯಜ್ಞತುರಗವಿ ದಳಮಿದರ |
ಕಾಹಿನದು ಮೇಣಿದಕೆ ಕರ್ತೃನರನೆಂದರಿದು |
ಬಾಹುವಂ ಚಪ್ಪರಿಸಕೊಂಡುತ್ಸದೊಳಸುರನೋಲಗಕೆ ಪರಿತಂದನು ||೨೩||

ನರವಿನುಪವೀತದಿಂ ಕಣ್ಣಾಲಿಗಳೊಳ್ ಕೋದ |
ಕೊರಳ ತಾವಡದಿಂದೆ ನರರ ತಲೆಗಳ ಜಪದ |
ಸರದಿಂದೆ ಪಂದೊವಲ ಧೋತ್ರದಿಂದೊಟ್ಟೆಯೆಲುಗಳ ಕುಂಡಲಂಗಳಿಂದೆ ||
ಕರಿಶಿರದ ಡೊಗೆಯ ಸಲಿಲದ ಕಮಂಡುಲದಿಂದೆ |
ಯುರುಗಜದ ಬೆನ್ನಸ್ಥಿಯಷ್ಟಿಯಿಂ ಸಲೆ ಭಯಂ |
ಕರರೂಪನಾದ ಮೇದೋಹೋತನೈತಂದೊಡಿದಿರೆದ್ದನಸುರೇಂದ್ರನು ||೨೪||

ಏನು ಬಿಜಯಂಗೈದಿರೆನಲಟ್ಟಹಾಸದಿಂ |
ದಾನವಂಗೆಮದನೇತಕೆ ಸುಮ್ಮನಿರ್ದಪೆ ನಿ |
ಧಾನವನೆಡಹಿ ಕಂಡುವೋಲಾಯ್ತು ನಿಮ್ಮಯ್ಯ ಬಕನಂ ಕೊಂದ ಭೀಮನೆಂಬ |
ಮಾನವನ ತಮ್ಮನರ್ಜುನನೀಗ ಬಂದನದೆ |
ಕೋ ನಿನ್ನ ಪೊಲಸೀಮೆಗಾತನಂ ಪಿಡಿತಂದು |
ನೀನುರುವ ನರಮೇಧಮಂ ಮಾಡೆನಲ್ಕವಮಗಸುರೇಂದ್ರನಿಂತೆಂದನು ||೨೫||

ಮತ್ತಾತನಂ ಕೊಂದವನ ತಮ್ಮನಂ ಪಿಡಿದು |
ಮತ್ತಾತನಂ ಸದೆವೆನವನ ಹರಿಬಕೆ ಬಂದ |
ಮತ್ತಾತನಂ ಸೀಳ್ವೆನಂತಿರಲಿ ನಿನೆನ್ನೊಳಂದೆ ಯಜ್ಞದ ಪಶುವಿಗೆ  ||
ಸತ್ತಾತನಾದಪೆನೆ ಪೇಳ್ ಸಾಕು ನಿನ್ನಿಂದೆ |
ಸತ್ತಾತನಾದಪನವಂ ನಿನ್ನ ನುಡಿಗೆ ಬೇ |
ಸತ್ತಾತನಾದಪನೆ ನಾನಕಟ ನೋಡೆನುತೆ ಭೀಷಣಂ ಗರ್ಜಿಸಿದನು ||೨೬||

ರಾಕ್ಷಸೋತ್ತಮರೊಳರ್ ಪಿಂತೆ ನರಮೇಧಮಖ |
ದೀಕ್ಷೆಯಂ ಕೈಕೊಂಡರಿದಕೆ ಋತ್ವಿಜರಾರ |
ಪೇಕ್ಷಿತವದೇನಾರ್ಗೆ ಸಂತುಷ್ಟಿ ಪೇಳೆಂದು ಭೀಷಣಂ ಬೆಸಗೊಳಲ್ಕೆ ||
ರೂಕ್ಷವದನವನವಂ ತೆರೆದಟ್ಟಹಾಸದಿಂ |
ದಾಕ್ಷೇಪಿಸುತೆ ನುಡಿದನೆಲೆ ಮರುಳೆ ರಾವಣಂ |
ಸಾಕ್ಷಿಯಲ್ಲವೆ ತತ್ಕ್ರತುವನೆಸಗಿ ಮೂಜಗವನೈದೆ ಗೆಲ್ದುದಕೆಂದನು ||೨೭||

ಸುರೆ ನೆತ್ತರಿಂದೆ ಚಾತುರ‍್ಮಾಸ್ಯಮಂ ಕಳೆದ |
ಹಿರಿಯರಿದೆ ಮಾಸೋಪವಾಸಿಗಳ ತಲೆಮಿದಳ |
ನುರುತರಶ್ರಾವಣಕೊದಗಿಪರಿದೆ ಯತಿಮಾಂಸಮಂ ಭಾದ್ರಪದಕೆ ಬಿಡದೆ ||
ದೊರಯಿಸುವರಿದೆ ವರಾಶ್ವಿಜಕೆ ಜಡೆಮುಡಿಯವರ ||
ಕರುಳನಾರ್ಜಿಸುವರಿದೆ ಕಾರ್ತಿಕಕ್ಕೆಳವೆಣ್ಗ |
ಳುರದ ಗುಂಡಿಗೆಯನರಸುವ ಮಹಾವ್ರತಿಗಳದೆ ಬೊಮ್ಮರಕ್ಕಸರೆಂದನು ||೨೮||

ಇನ್ನುಮಿವರಲ್ಲದೆ ಮಹಾಬ್ರಹ್ಮರಾಕ್ಷಸರ್ |
ಮುನ್ನಿನ ಯುಗಂಗಳವರಿರ್ದಪರ್ ಪಿರಿಯರ್ ಸ |
ಮುನ್ನತ ವಟದ್ರುಮ ನಿವಾಸಿಗಳನೇಕ ಪುರುಷಾದಕರ್ ದುರ್ದರ್ಶರು ||
ನಿನ್ನ ನರಮೇಧಕಾರ‍್ತ್ವಿಜ್ಯಮಂ ಮಾಳ್ಪರಿದ |
ಕೆನ್ನನಾಚಾರ‍್ಯನಾಗಿಯೆ ವರಿಸು ತದ್ಯಾಗ |
ಮಂ ನೆಗಳ್ಚಸುರರ್ಗೆ ತುಷ್ಟಿಯಪ್ಪುದು ಜಯಂ ನಿನಗೆ ಸಮನಿಪುದೆಂದನು ||೨೯||

ದಾನವರ ದಂಪತಿಸಹಸ್ರಮಂ ಪ್ರತಿದಿನಂ |
ಮಾನವರ ಮಾಂಸಭೋಜನದಿಂದೆ ತಣಿಸಬೇ |
ಕಾನವರನುಪಚರಿಪೆನಧ್ವರವನೆಸಗು ನೀಂ ಮಂಟಪವನಿಲ್ಲಿ ರಚಿಸು ||
ಸೇನೆಸಹಿತಾ ಪಾರ್ಥನಂ ಪಿಡಿದು ತಂದೊಡೆ ಸ |
ಮಾನಮಿಲ್ಲಸುರರೊಳ್ ನಿನಗೆ ನಡೆದಪುದು ಮಖ |
ಮೇನೆಂಬೆನಿದರುತ್ಸವವನೆನೆ ಪುರೋಹಿತಂಗಾ ದೈತ್ಯನಿಂತೆಂದನು ||೩೦||

ಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ |
ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು |
ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತಿರಲು ||
ಮುಕ್ಕೋಟಿರಕ್ಕಸರ್ ಪೊರಮಟ್ಟರವನ ಕೂ |
ಡಕ್ಕರಿಂ ಜಗವನೊಂದೇಬಾರಿ ಕೊಳ್ವ ತವ |
ಕಕ್ಕೆ ಬಹುರೂಪಮಂ ತಾಳ್ದನೋ ಕಾಲಭೈರವನೆಂಬ ತೆರನಾಗಲು ||೩೧||

ಭೀಷಣನೊಡನೆ ಮುರುಕೋಟಿ ದೈತೇಯರತಿ |
ರೋಷದಿಂದೈದುತಿರ್ದರು ಕಾಳಗಕೆ ಘೋರ |
ವೇಷದ ಮಹಾರಾಕ್ಷಸಿಯರಂ ದೊಡಲ್ಗಳಂ ರುಧಿಮಾಸಂಗಳಿಂದೆ ||
ಪೋಷಿಸುವ ತವಕದಿಂ ಪೊರಮಟ್ಟು ಬಂದು ಸಂ |
ತೋಷದಿಂ ಬೆಟ್ಟದುದಿಗಳನಡರಿ ಕಂಡರು |
ಧ್ಛೋಷದಿಂದಬ್ಧಿಯಂ ಜರೆವಂತೆ ನಡೆದು ಬಹ ಪಾರ್ಥನ ಪತಾಕಿನಿಯನು ||೨೨||

ಆ ರಾಕ್ಷಸಿಯರೊಳೊರ್ವಳ್ ಧನಂಜಯನ ಪೊಂ |
ದೇರ ಪಳವಿಗೆದುದಿಯ ಹನುಮಂತನಂ ಕಂಡು |
ದೂರಕೋಡಿದಳಂದು ಲಂಕಿಣಿಯನೊದೆದ ಕೋಡಗಮೆಂದು ಮತ್ತೋರ್ವಳು ||
ಊರು ಸುಡುವುದೆಂದು ತನ್ನ ಸದನದ ಸರಕ |
ನಾರೈವುದಕ್ಕೆ ಪೋದಳ್ ದನುಜೆ ಮತ್ತೋರ‍್ವ |
ಳೋರಂತೆಣಿಸಿಕೊಂಡಳೀ ಕಪಿ ನೆಳಲ್ಗೆ ಸೈರಿಸದೆಂದು ಸೈವರಿದೊಳು ||೩೩||

ಆಗಸಕೆ ಚಿಗಿದು ರವಿಯಂ ತುಡಿಕಿ ಧಿಂಕಿಟ್ಟು |
ಸಾಗರಕೆ ಸೀತೆಯಂ ಕಂಡು ಬನಮಂ ಕಿಳ್ತು |
ತಾಗಿದ ನಿಶಾಟರಂ ಸದೆದು ಲಂಕೆಯನುರುಪಿ ದಶವದನನಂ ಭಂಗಿಸಿ ||
ಪೋಗಿ ಪಾತಾಲದಸುರರನೊಕ್ಕಲಿಕ್ಕಿ ಪಿರಿ |
ದಾಗಿ ಬೆಟ್ಟಂಗಳಂ ಪೊತ್ತು ವಿರಿದೆ ಕಪಿಯ |
ನೀಗ ನಿಟ್ಟಿಸಿ ಬೆದರಿದಿರ್ಡಪೆನದೆಂತುಟೆಂದೊರ್ವರಕ್ಕಸಿ ನುಡಿದಳು ||೩೪||

ಬೆದರದಿರಿ ಬರಿದೆ ನೀವೀ ಕೋತಿಯಂ ತನ್ನ |
ತುದಿಮೊಲೆಗಳಿಂದಪ್ಪಳಿಸಿ ನರನ ಸೈನ್ಯಮಂ |
ಸದೆದು ಕಡಪುವೆನೆಂದು ಯೋಜನಸ್ತನಿಯೆಂಬ ರಕ್ಕಸಿ ನುಡಿಯೆ ಲಾಲಿಸಿ ||
ಗದಗದಿಸಬೇಡ ಪೇರೊಡಲೊಳಡಸುವೆನಿನಿತು |
ಸದರಮಂ ನೋಡುತಿರಿ ಸಾಕೆಂದು ರೋಷದಿಂ |
ದೊದರಿದಳ್ಮತ್ತೊರ್ವಳಸುರಿ ಲಂಬೋದರಿ ನಿಶಾಚರಿ ಮಹಾಭಯಕರಿ ||೩೫||

ಬಳಿಕುಳಿದ ರಕ್ಕಸಿಯರೆಲ್ಲರುಂ ಫಲುಗುಣನ |
ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿ |
ಗಳನುಗುಳುತಾರ್ಭಟಿಸುತೈದಿದರ್ ಕೂಡೆ ಲಂಬೋದರಿ ನರನ ಪಡೆಯನು ||
ಸೆಳೆದಣಲ್ಗಡಸಿಕೊಳುತಿರ್ದಲೋಡನೊಡನೆ ಬಾಂ |
ದಳಕಡರ್ದೇಳ್ವ ನಿಡುಮೊಲೆಗಳಿಂ ಬಲವನ |
ಪ್ಪಳಿಸಿದಳ್ ತಿರುಗಿ ಬೀಸುತ್ತೆ ಯೋಜನಸ್ತನಿ ಕನಲ್ದಾ ಕ್ಷಣದೊಳು ||೩೬||

ಅಸುರಕೋಟಿತ್ರಯದೊಡನೆ ಬಂದು ಭೀಷಣಂ |
ಮುಸುಕಿದಂ ಕೈದುಗಳ್ ಮಳೆಗಳಂ ಕರೆಯುತ್ತೆ |
ಮಸಗಿದುರಿ ಪೊಗೆ ಸಿಡಿಲ್ಮಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳ್ಗಳಿಂದೆ ||
ದೆಸೆಗೆಡಿಸುತಹಿ ಸಿಂಹ ಶರಭ ಗಜ ಬೇರುಂಡ |
ಪಸಿದ ಪುಲಿ ಪಂದಿ ವೃಕ ವಯಷಭಂಗಳಾಗಿ ಗ |
ರ್ಜಿಸುತುಗ್ರಭೂತಂಗಳಾಗಿ ಬಾಯ್ದೆದಬ್ಬರಿಸುತೆ ಪಾರ್ಥನ ಪಡೆಯನು ||೩೭||

ಮಸಗಿದಂ ಬಳಿಕ ರನಭೀಷಣಂ ಭೀಷಣಂ |
ವಸುಮತಿಗೆ ಕಾಲಾಂತರಕೋಪಮಂ ಕೋಪಮಂ |
ಪಸರಿಸಿದನರಿದಂ ನಿದಾನವಂ ದಾನವಂ ಫಲುಗುಣನ ಮುಂದೆ ನಿಂದು ||
ಒಸೆದೆನ್ನನೈದೆ ಪೆತ್ತಾತನಂ ತಾತನಂ |
ಕುಸುರಿದರಿದನಿಲಜನ ತಮ್ಮನೇ ತಮ್ಮನೇ |
ಳಿಸುತೆ ಬಹೆ ನಿನ್ನೆ ಹದನಾವುದೈ ನಾವು ದೈತ್ಯರ್ ಕ್ಕೊಲ್ಲದಿರೆವೆಂದನು ||

ಈಗಳದರಿಂದೆ ನಿನ್ನಂ ಪಿಡಿದು ನರಮೇಧ |
ಯಾಗಕ್ಕೆ ಪಶುಮಾಳ್ಪೆನೆಂದು ಫಲುಗುಣನ ರಥ |
ಕಾಗಿ ಭೀಷಣನರಗಲರ್ಜುನಂ ನಗುತೆ ರಕ್ಷೆಘ್ನ ಬಾಣವನೆ ಪೂಡಿ ||
ಬೇಗದಿಂದಿಸಲಸುರನಳವಳಿದನವನ ಪಡೆ |
ಸಾಗಿದುದು ಬಿರುಗಾಳಿ ಬಿಸಿದೊಡೆ ಬಿಣ್ಪಿಡಿದ |
ಮೇಘಸಂಕುಲಮಿರದೆ ಪರಿವಂತೆ ಶರಘಾತಿಗೊಗ್ಗೊಡೆದು ಕಂಡಕಡೆಗೆ ||೩೯||

ಮಡಿದವರ್ ಕೆಲರಂಗಭಂಗದಿಂ ಕೈಕಾಲ್ಗ |
ಳುಡಿದವರ್ ಕೆಲರೆಚ್ಚ ಕೂರ್ಗಣೆಗಳವಯವದೊ |
ಳಿಡಿದವರ್ ಕೆಲರೇರ್ಗಳಿಂದೆ ವೇದನೆಗಳಂ ಸೈರಿಸದೆ ಗಳದಸುವನು ||
ಪಿಡಿದವರ್ ಕೆಲರಲ್ಲಿ ಗಿಡುಮರವನೆಡೆಗೊಂಡು |
ಸಿಡಿದವರ್ ಕೆಲರೋಡಿ ಬದುಕಿದೆವು ತಾವೆಂದು |
ನುಡಿದವರ್ ಕೆಲರಾದರರ್ಜುನನಿಸುಗೆಯಿಂದಮಾಕ್ಷಣಂ ರಾಕ್ಷಸರೊಳು ||೪೦||

ಓಡಿಸಿ ಬಲೌಘಮಂ ಬೀಸಿ ಬಿರುಮೊಲೆಗಳಿಂ |
ತಾಡಿಸುವ ಯೋಜನಸ್ತನಿಯನುರೆ ಬಾಯ್ದೆರೆದು |
ನಾಡೆ ಪಡೆಯಂ ತುತ್ತುಗೊಂಬ ಲಂಬೋದರಿಯನುಳಿದಸುರಿಯರ ಕೃತ್ಯವ ||
ನೋಡಿ ವಿಸ್ಮಿತನಾಗಿ ಪೂರ್ವವಂ ನೆನೆದು ಕೊಂ |
ಡಾಡಿ ನಸುನಗುತೆ ದೆಸೆದೆಸೆಗೆ ವಾಲಾಗ್ರಮಂ |
ನೀಡಿ ತೆಗೆತೆಗೆದಿಳಯೊಳಪ್ಪಳಿಸಿ ಕೊಂದನವರೆಲ್ಲರಂ ಕಲಿಹನುಮನು ||೪೧||

ನರನ ಶರಜಾಲದಿಂ ಕಡಿವಡೆದು ವೀರವಾ |
ನರನ ಲಾಂಗೋಲದಿಂ ಬಡಿವಡೆದು ರಕ್ಕಸರ |
ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಬೀತಿಗೊಂಡು ||
ವಿರಚಿತದನೊಂದುಪಾಯಾಂತರವನಲ್ಲಿ ಮೈ |
ಗರೆದನಾಗಳೆ ಮಾಯದಿಂದೆ ಮುನಿಯಾದನದು |
ಸುರನದಿಯ ತೀರಮಾದುದು ಕಣ್ಗೆ ಕಾಣಿಸಿತು ಪುಣ್ಯಾಶ್ರಮಂ ಪೊಸತೆನೆ ||೪೨||

ಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲ |
ವೆಲ್ಲಿ ನೋಡಿದೊಡೆ ಪುಣ್ಯಾಶ್ರಮಕುಟೀರಂಗ |
ಳೆಲ್ಲಿ ನೋಡಿದೊಡೆ ನಿಬಿಡದ್ರುಮಚ್ಚಾಯೆಗಳ್ ಕುಸುಮಫಲಮೂಲಂಗಳು ||
ಎಲ್ಲಿ ನೋಡಿದೊಡೆ ಶುಕ ಪಿಕ ಮಯೂರ ಧ್ವನಿಗ |
ಳೆಲ್ಲಿ ನೋಡಿದೊಡೆ ಸಾತ್ವಿಕಮಾದ ಮೃಗನಿಕರ |
ಮೆಲ್ಲಿ ನೋಡಿದೊಡೆ ಸಂಚರಿಪ ತಾಪಸವಟುದರರ್ಜುನನ ಕಣ್ಗೆ ||೪೩||

ಆ ದಿವ್ಯಋಷಿಗಳಾಶ್ರಮದಿಂದಮೊರ್ವಮುನಿ |
ಸಾದರದೊಳೈತಂದು ಫಲುಗುಣನ ಮುಂದೆ ನಿಂ |
ದೀದನುಜರಂ ಕೊಂದಡೇನಹುದು ಹರಹಿಂಸೆ ಲೇಸಲ್ಲ ಬಲ್ಲವರ್ಗೆ ||
ಮಾಧವ ಮಹೇಶ್ವರಾರಾಧನತಪೋ ಜಪ ಸ |
ಮಾಧಿಗಳನುತ್ತಮ ಸ್ವಾಧಾಯಗತಿಗಳಂ |
ಸಾಧಿಸುವೊಡಿದು ಪುಣ್ಯನದಿ ಗಂಗೆ ಶುದ್ಧಪ್ರದೇಶಮಿದು ನಿನಗೆಂದನು ||೪೪||

ಬೆರಗಾದನರ್ಜುನಂ ದಾನವನ ಕೃತಕವೆಂ |
ದರಿದು ಮುನಿಯಾಗಿರ್ದವನ ತುಡುಕಲಾ ಮಾಯೆ |
ಬರೆತು ಮುನ್ನಿನ ರಾಕ್ಷಸಾಕೃತಿಗೆ ನಿಲಲಾಗಿ ಪಿಡಿದಾಕ್ರಮಿಸಿ ಮನೆಯೊಳೂ ||
ತುರುಗಿರ್ದ ಸಕಲಭೂಷಣ ವಿವಿಧಮಣಿಗಳಂ |
ತರತರದ ವಸ್ತುಗಳನುತ್ತಮಗಜಂಗಳಂ |
ಮಿರುಪ ಹಯ ರತ್ನಂಗಳಂ ಕೊಂಡು ದೈತ್ಯರಂ ದೆಸೆಗೆಡಿಸಿದಂ ಪಾರ್ಥನು ||೪೫||

ಕೋಳೊಡವೆ ಮುಂತಾಗಿ ತಿರುಗಿದಂ ಫಲುಗುಣಂ |
ಮೇಲೆ ನಡೆದುದು ಕುದುರೆ ತೆಂಕದೆಸೆಗೊಡನೆ ಕೆಂ |
ದೂಳೀಡುತೆ ಬಹ ಬಹಳಬಲಸಹಿತ ಮಣಿನಗರವೆಂಭ ಪಟ್ಟನದ ಬಳಿಗೆ ||
ಪೇಳಲೇನರ್ಜುನಸುತಂ ಬಭ್ರುವಾಹನಂ
ಪಾಲಿಸುವನಾ ಪೊಳಲನೀ ನರಂ ಬಂದುದಂ |
ಕೇಳಲೇಗೈದಪನೊ ದೇವಪುರನಿಲಯ ಲಕ್ಷ್ಮೀಪತಿಯ ಮೈದುನಂಗೆ ||೪೬||