ಸೂಚನೆ ||
ಚಂಡಸುರಥನ ಶಿರವನಸುರಹರನಾಜ್ಞೆಯಿಂ |
ಕೊಂಡು ಗರುಡಂ ಪ್ರಯಾಗವನೈದಲೀಶ್ವರಂ |
ಕಂಡು ವೃಷರಾಜನಂ ಕಳುಹಿ ತರಿಸಿದನದಂ ರುಂಡಮಾಲೆಯ ತೊಡವಿಗೆ ||

ಕೇಳ್ದೈ ನೃಪಾಲಕ ಸುಧನ್ವನಗ್ಗಳಿಕೆಯಂ |
ಪೇಳ್ದಪೆಂ ನಿನಗಾಲಿಪುದು ಸುರಥನಂಕಮಂ |
ತಾಳ್ದನತಿರೋಪಮಂ ರಥವೇರಿ ವಿನುತಕೋದಂಡಮಂ ಜೇಗೈಯ್ಯುತೆ ||
ಬಾಳ್ದಪನೆ ಫಲುಗುಣಂ ಮೇಣಿಳಾಮಂಡಲವ |
ನಾಳ್ದಪನೆ ಧರ್ಮಜಂ ಕಾಣಬಹುದಿಂದೆನ್ನ |
ತೋಳ್ದೀಂಟೆಯಂ ಕಳೆವೆನೆನುತೆ ಕೃಷ್ಣಾರ್ಜುನರ ಸರಿಸಕೈತರುತಿರ್ದನು ||೧||

ಸುರಥೈತಹ ರಣೋತ್ಸಾಹಮಂ ಕಂಡು ಹರಿ |
ನರನೊಳಾಲೋಚಿಸಿ ನುಡಿದನಿವಂ ಧರೆಯೊಳಾ |
ಚರಿಸದಿಹ ಪುಣ್ಯಕರಂಗಳೊಂದಿಲ್ಲವಂ ಮರೆದಾದೊಡಂ ಮಾಡಿದ ||
ದುರಿತಲವಮಂ ಕಾಣೆನಾರ್ ಜಯಿಪರೀತನಂ |
ಸರಿಸದೊಳ್ ನಿಂದೆಡೆ ಬಹುದು ನಮಗೀಗ |
ಪರಿಭವಂ ಪ್ರದ್ಯುಮ್ನ ಮೊದಲಾದ ಪಟುಭಟರ್ ಕಾದಲಿವನೊಡನೆಂದನು ||೨||

ರಾಜೀವನೇತ್ರನಿಂತೆನುತುಮಂಧಕವೃಷ್ಣಿ |
ಭೋಜರೆನಿಪಖಿಳ ಯಾದವಕುಲದ ಪಟುಭಟ ಸ |
ಮಾಜಮಂ ಪ್ರದ್ಯಮ್ನನೊಡನೆ ಸುರಥನ ರಥಕ್ಕೆಣೆಯೊಡ್ಡಿ ನರನ ರಥದ ||
ವಾಜಿಗಳ ವಾಘೆಯಂ ತಿರುಹಿ ಹಿಂದಕೆ ಮೂರು |
ಯೋಜನದೊಳಿಟ್ಟಣಿಸಿ ನಿಂದು ಗರ್ಜಿಸುವ ಸೇ |
ನಾಜಲಧಿಮಧ್ಯದೊಳ್ ಬಂದು ನಿಂದರನೆಲೆಯ ಸುಯಿದಾನಮಂ ಬಲಿದನು ||೩||

ಇತ್ತಲಾಹವಕೆ ಮುಂಕೊಂಡು ಬಹ ಸುರಥನಂ |
ತೆತ್ತಿಸಿದನಂಬಿನಿಂ ಪ್ರದ್ಯಮ್ನನಾತನಂ |
ಮೆತ್ತಿಸಿದನವಂ ಬಾಣದಿಂ ಪಾರ್ಥನೆತ್ತ ಜಾರಿದನೀಗ ಶೌರಿಸಹಿತ ||
ಮತ್ತಗಜದಗ್ಗಳಿಕೆ ಮಕ್ಷಿದೊಳಹುದು ಗಡ |
ಮುತ್ತಿದುವು ಕರಿ ತುರಗ ರಥ ಪದಾತಿಗಳಲ್ಲಿ |
ಹೊತ್ತುಗಳೆವೊಡೆ ಸುಧನ್ವನ ಹರಿಬವಲ್ಲೆನುತೆ ತೆಗೆದೆಚ್ಚನಾ ಭಟರನು ||೪||

ತವಕದಿಂ ಪ್ರದ್ಯಮ್ನನಂ ಗೆಲ್ದು ಸಾತ್ಯಕಿಯ |
ನವಗೆಡಿಸಿ ಕೃತವರ್ಮ ಸಾಂಬಾನುಸಾಲ್ವರಂ |
ಜನಗೆಡಿಸಿ ಕಲಿಯೌವನಾಶ್ವನಂ ಸದೆದು ನೀಲಧ್ವಜನನುರೆಘಾತಿಸಿ ||
ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾ |
ದವ ಸುಭಟರಂ ಜಯಿಸಿ ಚತುರಂಗಸೈನ್ಯಮಂ |
ಸವರಿ ಸಮರಥ ಮಹಾರಥರನೊಂದೇ ರಥದೊಳಾ ಸುರಥನೊಡೆದುಳಿದನು ||೫||

ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂ |
ತಕ್ಕಜದೊಳೌಕ್ಕಲಿಕ್ಕಿದನಖಿಳಸೈನ್ಯಮಂ |
ಮಿಕ್ಕು ನೊಂದೆಕ್ಕಲಂ ಬೀದಿವರಿದಟ್ಟುವಂತೋಡಿಸಿದನತಿಬರಲರನು ||
ಕಕ್ಕಸದೊಳೆಕ್ಕತುಳಕೈತಂದ ವೀರರಂ |
ಮುಕ್ಕುರುಕಿ ತೆಕ್ಕೆಗೆಡಿಸಿದನಾ ರಣಾಗ್ರದೊಳ್ |
ಪೆಕ್ಕಳಿಸಿದುಕ್ಕಂದದದಟಿಂದೆ ಸುರಥನರಸಿದನಚ್ಯುತಾರ್ಜುನರನು ||೬||

ಘೋರಸಂಸಾರದೊಳ್ ಮುಸುಕುವವರವೆಯಂ ನಿ |
ವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ |
ಚಾರಿಸುವ ತೆರದಿಂದೆ ರಿಪುಮೋಹರದೊಳೆತ್ತಿ ಕವಿವ ಭಟರಂ ಗಣಿಸದೆ ||
ವೀರಸುರಥಂ ಕೃಷ್ಣಫಲ್ಗುಣರನರಸಿದನು  |
ದಾರ ವಿಕ್ರಮ ಪರಿಜ್ಞಾನದಿಂದೆಡಬಲನ |
ನಾರಯ್ಯದೇಕಾಗ್ರಚಿತ್ತದಿಂ ವಸುಮತೀಕಾಂತ ಕೇಳದ್ಭುತವನು ||೭||

ಅದ್ಭುತ ಪರಾಕ್ರಮದೊಳಾ ನಿಖಿಳಸೇನೆಗೆ ಮ |
ಹದ್ಭಯವ ಬೀರುತೈತಹ ಸುರಥನಂ ಕಾಣು |
ತುದ್ಭವಿಸಿತರ್ಜುನಂಗತಿರೋಷಮೆಂದನಸುರಾಂತಕನೊಳಿವನ ಜಯಕೆ ||
ತ್ವದ್ಭಾವದೊಳ್ ತೋರಿದೆಣಿಕೆಯೇನೆಲೆ ದೇವ |
ಮದ್ಭುಜದೊಳೀ ಚಾಪಮಿರ್ದುಮಾವವ ನಸ್ತ್ರ |
ವಿದ್ಭುವನಕಮಮ ನೋಡುವೆನೆನುತೆ ಬಿಲ್ದಿರುವನೊದರಿ ನರನಿದಿರಾದನು ||೮||

ಎಲವೊ ಸೋದರನಳಿದಳಲ್ಗಾಗಿ ನಮ್ಮೊಡನೆ |
ಕಲಹಕೈದುವ ನಿನ್ನನಿಸುವುದನುಚಿತಮೆಂದು |
ತೊಲಗಿದೊಡೆ ನೀನರಿದುದಿಲ್ಲಲಾ ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ ||
ಕಲಿಯಾಗಿ ಸಮರದೊಳ್ ಕಾದಿಡೊಡೆ ನಿನಗಿಲ್ಲಿ |
ಗೆಲವಹುದೆ ಮರುಳಾಗಬೇಡ ಹಯಮಂ ಬಿಟ್ಟು |
ನೆಲದೆರೆಯ ಧರ್ಮಸುತನಂ ಕಂಡು ಬದುಕುವುದು ಲೇಸೆಂದು ನರನೆಚ್ಚನು ||೯||

ಗಣ್ಯವೇ ಮತ್ಸಹಭವಂಗೆ ನೀಂ ಹರಿ ಹರ ಹಿ |
ರಣ್ಯಗರ್ಭಾದಿಗಳ್ ಮುಳುದೊಡಳಿದಪನೆ ಕಾ |
ರುಣ್ಯದಿಂ ನಿನ್ನನುದ್ಧರಸಲೆಂದುಚ್ಯುತಂ ಕೊಟ್ಟ ತನ್ನವತಾರದ ||
ಪುಣ್ಯದಿಂ ಮಡಿದು ಮುಕ್ತಿಗೆ ಸಂದನಿದಕೆ ನೈ |
ರ್ವಿಣ್ಣ್ಯ ಮೆಮಗಿಲ್ಲ ನಾವಿನ್ನು ಹಯಮಂ ಬಿಡಲ |
ರಣ್ಯವಾಸಿಗಳಲ್ಲ ನೋಡೆಮ್ಮ ಸಾಹಸವನೆನುತೆಚ್ಚನಾ ಸುರಥನು ||೧೦||

ಇಸಲುಚ್ಚಳಿಸಿ ಪಾಯ್ವ ಸುರಥನಂಬಿನ ಗರಿಯ |
ಬಿಸಿಯ ಗಾಳಿಯ ಬಾಧೆಯಿಂದುರಿದು ಭೂಗಿಲೆಂದು |
ಮಸಗಿದತಿಶಯದ ರೋಷಜ್ವಾಲೆಯಿಂ ಧನಂಜಯನಾದನೀ ನರನೆನೆ ||
ದೆಸೆಯಾವುದಿಳೆಯಾವುದಿನಬಿಂಬಮಾವುದಾ |
ಗಸಮಾವುದೆಂಬಿನಂ ಪೊಸಮೊಸೆಯ ವಿಶಿಖಮಂ |
ಮುಸುಕಿದಂ ಸಾರಥಿ ಧ್ವಜ ಹಯಗಳಡಗೆಡೆಯ ಸುರಥಂ ವಿರಥನಾಗಲು ||೧೧||

ಕೂಡೆ ಮತ್ತೊಂದು ಪೊಸರಥವನಳವಡಿಸಿಕೊಂ |
ಡೀಡಿರಿದನಂಬಿನಿಂ ಪಾರ್ಥನ ವರೂಥಮಂ |
ಕೂಡೆ ಹಿಂಭಾಗಕೈನೂರ ಬಿಲ್ಲಂತರಕೆ ಪೋದು ದದು ಸಂಗರದೊಳು ||
ಮಾಡಿದಂ ಕೃಷ್ಣನ ಶರೀರದೊಳ್ ಗಾಯಮಂ |
ತೋಡಿದಂ ಕುದುರೆಗಳೊಡಲ್ಗಳಂ ನರನಂ ವಿ |
ಬಾಡಿಸಿದನಾ ಸುರಥನೊಂದು ಶಪಥದೊಳಿಸುವುದಿದರೊಳೇನಹುದೆಂದನು ||೧೨||

ಶಪಥಮೇನಿದಕಿನ್ನು ನಿನ್ನನಾಂ ಕೊಲ್ಲದೊಡೆ |
ವಿಪುಲಪಾತಕರಾಶಿ ತನಗೆ ಸಂಘಟಿಸದಿ |
ರ್ದಪುದೆ ಪೇಳೆನುತ ತೆಗೆದೆಚ್ಚೋಡಾ ಬಾಣಮಂ ಸುರಥಂ ನಡುವೆ ಖಂಡಿಸಿ ||
ಅಪಹಾಸದಿಂದಿಳೆಗೆ ನಿನ್ನನೀ ರಥದಿಂದೆ |
ನಿಪತನಂಗೆಯ್ಸದೊಡೆ ತನಗೆ ಪರಲೋಕದೊಳ್ |
ವಿಪರೀತಗತಿಯಾಗದಿರ್ದಪುದೆ ಪೇಳೆಂದು ತೆಗೆದೆಚ್ಚು ಬೊಬ್ಬಿರಿದನು ||೧೩||

ಸುರಥನಿಸುಗೆಯೊಳರ್ಜುನಂ ನೊಂದು ಮುಂಗಾಣ |
ದಿರೆ ಮುರಾಂತಕನಿವನ ತೊಳ್ಗಳಂ ಬೇಗ ಕ |
ತ್ತರಿಸು ದಿವ್ಯಾಸ್ತ್ರಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು ||
ನರನಾ ನುಡಿಗೆ ಮುನ್ನಮೆಚ್ಚು ಕೆಡಪಿದನಾತ |
ನುರುಭುಜವನೈವೆಡೆಯ ಭುಜಗೇಂದ್ರನಂದದಿಂ |
ಧರೆಯೊಳ್ ಪೊರುಳ್ದುದು ಪೊಯ್ದುದುರೆ ಕೊಂದುದಾಕ್ಷಣಂ ಪರಬಲವನು ||೧೪||

ಒತ್ತೋಳನುತ್ತರಿಸಲೊತ್ತೋಳ ಸತ್ವದಿಂ |
ಮತ್ತಾತನುರವಣಿಸಿ ಮತ್ತದಂತಿಯ ತೆರದಿ |
ನೊತ್ತಿ ಭರದಿಂ ಪಾರ್ಥನೊತ್ತಿಗೈತರೆ ಕಂಡು ಹರಿ ವಿಜಯನಂ ಜರೆಯಲು ||
ತ್ತಳಂಗೊಳದೆಚ್ಚು ತ್ತಳವಿಗೆಯ್ದುನವ |
ನತ್ತಲ್ ಭೂಜವನರಿಯೆ ನೆತ್ತರಾಗಸಕೆ ಚಿ |
ಮ್ಮಿತ್ತು ರಣದೋಕುಳಿಯ ಮಿತ್ತುವಿನ ಜೀರ್ಕೊಳವಿಯುಗಳ್ವ ಕೆನ್ನೀರೆಂಬೊಲು ||೧೫||

ತೋಳ್ಗಳೆರಡುಂ ಕತ್ತರಿಸಿ ಬೀಳೆ ಮತ್ತೆ ಕ |
ಟ್ಟಾಳ್ಗಳ ಶಿರೋಮಣಿ ಸುರಥನಾ ಕಿರೀಟಿಯಂ |
ಕಾಲ್ಗಳುಂದೊದೆದು ಕೆಡಹುವೆನೆಂದು ಭರದಿಂದೆ ಬೊಬ್ಬಿರಿಯುತೈತರಲ್ಕೆ |
ಕೋಲ್ಗಳಿಂ ತೊಡೆಗಳಂ ಕತ್ತರಿಸೆ ನಾದಿದುವು |
ಧೂಳ್ಗಳರುಣಾಂಬುವಿಂದೆದೆಯೊಳ್ ತೆವಳ್ದಹಿಯ |
ವೊಲ್ಗಂಡುಗಲಿ ಧನಂಜಯನ ಸಮ್ಮುಖಕೆ ಮೇಲ್ವಾಯ್ದನವನೇವೇಳ್ವೆನು ||೧೬||

ಆಗ ಮುರಹರನಾಜ್ಞೆಯಿಂದೆಚ್ಚು ಫಲುಗುಣಂ |
ಬೇಗ ಸುರಥನ ಶಿರವನರಿಯಲಾ ತಲೆ ಬಂದು |
ತಾಗಿತತಿಭರದೊಳ್ ನರನ ವಕ್ಷವಂ ಕಡಹಿತಾ ವರೂಥಾಗ್ರದಿಂದೆ ||
ನೀಗಿದಂ ವ ರವೆಯಿಂದರಿವಂ ಧನಂಜಯಂ |
ಮೇಗೆ ಕೃಷ್ಣನ ಚರಣಕೈತಂದು ಬಿದ್ದು ಹರಿ |
ರಾಘವ ಜನಾರ್ದನ ಮುಕುಂದ ಯೆನುತಿರ್ದುದಾ ಶಿರಮತಿವಿಕಾಸದಿಂದೆ ||೧೭||

ಶ್ರೀಕರಾಂಬುಜಯುಗ್ಮದಿಂದೆತ್ತಿಕೊಂಡು ಕಮ |
ಲಾಖಾಂತನಾ ಶಿರವನೀಕ್ಷಿಸಿ ಕರುಣದಿಂದೆ |
ಮಾಕಾಶದೆಡೆಯೊಳಿಹ ಗರುಡನಂ ಕರೆದಿತ್ತು ಜವದಿಂ ಪ್ರಯಾಗಕೈದಿ ||
ಈ ಕಪಾಲವನಲ್ಲಿ ಹಾಯ್ಕೆಂದು ಬೆಸಸಲದ |
ನಾ ಖಗೇಶ್ವರನೊಯ್ಯುತಿರೆ ಗಗನಪಥದೊಳ್ ಪಿ |
ನಾಕಿ ಕಂಡಳ್ತಿಯಿಂದಾ ತಲೆಗೆ ಕಳುಹಿದಂ ಭೃಂಗೀಶನಂ ಮುದದೊಳು ||೧೮||

ಎಲ್ಲಿಗೊಯ್ದಪನೀ ಸುರಥನ ತಲೆಯಂ ಗರುಡ |
ನಿಲ್ಲಿಹುದು ರುಂಡಮಾಲೆಯೊಳಿವನ ಸೋದರನ |
ಸಲ್ಲಲಿತ ಶಿರಮಿದರ ಸಂಗಡಕೆ ಕೊಂಡು ಬಾರೆಂದು ಮದನಾತಿ ಬೆಸಸೆ ||
ನಿಲ್ಲದೈತಮದು ಭೃಂಗೀಶ್ವರಂ ಬೇಡೆ ಖಗ |
ವಲ್ಲಭಂ ಪತಿನಿರೂಒವನೊಮ್ಮೆಯುಂ ವಿರ್ವ |
ನಲ್ಲೆಂದತಿಕ್ರಮಿಸಿ ನಡೆಯಲಾ ಪಕ್ಷಘಾತದೊಳಾತನಳವಳಿದನು ||೧೯||

ಗರುಡದ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ |
ತಿರುಗಿ ಬಂದಭವಂಗೆ ಭೃಂಗಿಪಂ ಬಿನ್ನೈಸು |
ತಿರೆ ಕೇಳ್ದು ಗಿರಿಜೆ ನಸುನಗುತೆ ಹರಿವಾಹನನ ಬಲ್ಮೆಯಂ ನೆರೆ ಪೊಗಳ್ದು ||
ಪಿರಿದಾತನಂ ಜರೆಯೆ ತಲೆವಾಗಿ ಲಜ್ಜಿಸಲ್ |
ಪುರಹರಂ ಕೃಪೆಯೊಳವನಂ ಮತ್ತೆ ಸಂತಯಸಿ |
ಕರೆದು ವೃಷರಾಜಂಗೆ ಬಸಸೆ ಬೆಂಬತ್ತದಂ ಪಕ್ಷೀಂದ್ರನಂ ನಭದೊಳು ||೨೦||

ಬೇಗದಿಂದೈದಿ ನಂದೀಶ್ವರಂ ಗರುಡನಂ |
ಪೋಗದಿರ್ ತಲೆಯನಾಭರಣಕ್ಕೆ ತಾರೆಂದು |
ನಾಗಭೂಸಣನಟ್ಟಿದಂ ತನ್ನನೀಯದೊಡೆ ನಿನಗೆ ಬಹುದುಪಹತಿಯೆನೆ ||
ಆಗಲದಕೇನಸುರಮರ್ದನನ ಬೆಸದಿಂ ಪ್ರ |
ಯಾಗದೊಳ್ ಬಿಸುವೆನೀ ಶಿರಮಂ ಬರಿದೆ ಗಾಸಿ |
ಯಾಗದಿರ್ ತಿರುಗು ನೀನೆಂದು ವಿನತಾಸುತಂ ಸೈವರಿದನಾಗಸದೊಳು ||೨೧||

ತ್ರಿಭುವನವನಲ್ಲಾಡಿಸುವ ಗರಿಯ ಗಾಳಿಗಳ |
ರಭಸದಿಂದೈದುವ ಸುಪರ್ಣನಂ ಹಿಂದಣ ವೃ |
ಷಭನ ಮುಖದುಚ್ಛ್ವಾಸನಿಶ್ವಾಸಮಾರುತಂ ತಡೆದತ್ತಲಿತ್ತಲೆಳೆಯೆ ||
ನಭದೊಳೊಯ್ಯಯ್ಯನಾಯಾಸದಿಂ ಪೋಗಿದು |
ರ್ಲಭವೆನೆಸುವಮಲಪ್ರಯಾಗದೊಳ್ ಕಲಿವೊಗರೊ |
ಳಭಿಶೋಭಿಸುವ ಸುರಥಶಿರವನಾ ಗೋಪತಿಗೆ ಕಂಡದೆ ಬಿಸುಟಂ ಗರುಡನು ||೨೨||

ಆ ಗರುಡನಾ ಶಿರವನಾಪ್ರಯಾಗದ ಜಲದೊ |
ಳಾ ಗಗನದಿಂದೆ ಬಿಸುಟಾ ಕೃಷ್ಣನಿದ್ದ ಬಳಿ |
ಗಾಗಿ ತಿರುಗಿದನಾಗಳಾ ತಲೆಯನಲ್ಲಿಂದಮಾ ವೃಷಭನೆತ್ತಿಕೊಂಡು ||
ಆ ಗಿರೀಶನ ರಾಜಿಪಾ ಸಭೆಗೆ ತಂದು ಕುಡ |
ಲಾ ಗೋಪತಿಯ ಮೆಚ್ಚುತಾ ರುಂಡಮಾಲೆಗದ |
ನಾ ಗೌರಿ ಕೊಂಡಾಡಲಾನಂದದಿಂದೆ ನಲಿದಾ ಶಂಕರಂ ತಾಳ್ದನು ||೨೩||

ಇತ್ತಲರ್ಜುನಕೃಷ್ಣರಿಂದೆ ಸುರಥಂ ಮಡಿದ |
ವೃತ್ತಾಂತಮಂ ಕಂಡು ಹಂಸಧ್ವಜ ತನ್ನ |
ಚಿತ್ತದೊಳ್ ಕಡುನೊಂದಳಲ್ದು ಮಿಗೆ ಮರಣಮಂ ನಿಶ್ಚೈಸಿ ರೋಷದಿಂದೆ ||
ತತ್ತರನದೊಳ್ ಕಾದಿ ಮುರಹರಂ ಮೆಚ್ಚಲಾ |
ನುತ್ತಮದ ಗತಿವಡೆವೆನೆಂದು ರಥವೇರಿ ಬಾ |
ಗೊತ್ತಿ ನಿಜಚಾಪಮಂ ಜೇಗೈದು ಪಡೆಸಹಿತ ಪಲುಗುಣಂಗಿದಿರಾದನು ||೨೪||

ಮುಳಿದು ಹಂಸಧ್ವಜಂ ಕಾಳೆಗಕೆ ನಿಲಲಾಗ |
ನಳಿನಭವನಳ್ಕಿದಂ ಲೋಕಸೃಷ್ಟಿಗೆ ಮತ್ತೆ |
ಬಳಲಬೇಕೆಂದು ರವಿಮಂಡಲಂ ನಡುಗಿತೊನೈದುವ ಭಟರ ರಭಸಕೆ ||
ಪ್ರಳಯಮಿಂದಹುದೆಂದು ಕಂಪಿಸಿತು ಧರೆ ಸಗ್ಗ |
ವೊಳಲೊಳಗೆ ತೆರಪಿಲ್ಲವೆಂದು ಗಜಬಜಿಸಿ ಸುರ |
ಕುಲಮೈದೆ ಕಂಗೆಟ್ಟುದಸುರಾರಿ ಚಿಂತಿಸಿದನರಸ ಕೇಳದ್ಭುತವನು ||೨೫||

ಹಂಸಧ್ವಜ ಕಾದಲೆಂತಹುದೊ ಎನುತಮಾ |
ಕಂಸಾಂತಕಂ ನಿದಾನಿಸಿಕೊಂಡು ಶಕ್ರಸುತ |
ನಂ ಸೈರಿಸೆನುತೆ ಕುದುರೆಗಳ ವಾಘೆಯನಿಲಿಸಿ ಜಗುಳ್ದ ಪೀತಾಂಬರವನು ||
ಅಂಸದೊಳ್ ಸಾರ್ಚುತೆ ವರೂಥಮನಿಳಿದು ಸಿಂಹ |
ಮಂ ಸೋಲಿಸುವೆ ಗತಿಯೊಳೈತಂದನಾಗು ತ |
ನ್ನಂ ಸೇವಿಪರ್ಗೆ ಸೇವಕನೆಂಬುದಂ ತೋರುತಾತನ ಸವಿಪಕಾಗಿ ||೨೬||

ಮಿಸುಪ ಮಕುಟದ ನೊಸಲ ತಲಕದಿಂದಲಕದಿಂ |
ದೆಸಳುಗಂಗಳ ತೊಳಪ ಕದಪಿನಿಂ ಪದಪಿನಿಂ |
ಪಸರಿಸುವ ನಸುನಗೆಯ ವದನದಿಂ ರದನದಿಂ ಪೊಳೆವ ಚುಬಕಾಗ್ರದಿಂದೆ |
ತ್ರಿಸರಕೌಸ್ತುಭ ಸುಕೇಯೂರದಿಂ ಹಾರದಿಂ |
ದೊಸೆದುಟ್ಟ ಪೊಂಬಟ್ಟಿ ಯುಡುಗೆಯಿಂ ತುಡುಗೆಯಿಂ |
ದೆಸೆವ ನೀಲೋತ್ಪಲಶ್ಯಾಮಲಂ ಕೋಮಲಂ ಬರುತಿರ್ದನವನಿದಿರೊಳು ||೨೭||

ರಥದಿಂದಮಿಳಿದು ತನಗಿದಿರಾಗಿ ಬಹ ದನುಜ |
ಮಥನನಂ ಕಾಣುತೆ ಮರಾಳಧ್ವಜಂ ಮನೋ |
ವ್ಯಥೆಯೆಲ್ಲಮಂ ಮರೆದು ಹರ್ಷದಿಂ ಪಿಡಿದ ಶರಧನುಗಳಂ ಕೆಲಕೆ ಸಾರ್ಚಿ ||
ಪೃಥಿವಿಗೆ ವರೂಥದಿಂ ಧುಮ್ಮಿಕ್ಕಿ ಹರಿಯ ಮುಂ |
ಪಥದೊಳಡಗೆಡೆಯುತೆಲೆ ದೇವ ಬಿಜಯಂಗೈದ |
ಕಥನವನೆನಗೆ ನಿರೂಪಿಸಬೇಹುದೆಂದಾತನೆದ್ದು ಕೈಗಳ ಮುಗಿದನು ||೨೮||

ಆ ಮಹೀಪತಿಯ ನುಡಿಗಸುರಾರಿ ನಗುತೆ ಸಂ |
ಗ್ರಾಮದೊಳ್ ಪಾರ್ಥನಂ ಗೆಲ್ವೆನೆಂಬೀ ಕ್ಷಾತ್ರ |
ತಾಮಸಮಿದೇಕೆ ವಿಜಯಂಗಾವು ಮಾಡುವ ಸಹಾಯಮಂ ಕಂಡು ಕಂಡು ||
ನೀ ಮಕ್ಕಳಂ ಬರಿದೆ ಕೊಲಿಸಿ ಕಿಡಿಸಿದೆ ಸಾಕು |
ಬಾ ಮಿತ್ರಭಾವದಿಂದೆಮ್ಮನಾಲಂಗಿಸು ವೃ |
ಥಾ ಮನೋವ್ಯಥೆ ಬೇಡ ತುರಗಮಂ ಬಿಡು ಯಜ್ಞಕನುಕೂಲನಾಗೆಮದನು ||೨೯||

ಕ್ಷತ್ರಯಂ ಬಿರುದಿನ ಹಯಂ ಬರಲ್ಕಟ್ಟದೆ ಧ |
ರಿತ್ರಿಯನದೆಂತಾಳ್ದಪಂ ಬಳಿಕ ಗೆಲ್ದೊಡಂ |
ಶತ್ರುವಿಂದಳಿದೊಡಂ ಕೇಡಾವುದಾತಂಗೆ ಸಾಕದಂತಿರಲಿ ನಿಮ್ಮ ||
ಮಿತ್ರಬಾವದೊಳೊಪ್ಪಿದೊಡೆ ಮೇಲೆ ತನಗಿನ್ನು |
ಪುತ್ರಶೋಕಾದಿಗಳ ದುಃಖಗಳಿರ್ದಪುವೆ |
ಚಿತ್ರಮಿದು ಜಾಹ್ನವಿಯೊಳಾಲ್ದಂಗೆ ದಾಹಮೆತ್ತಣದೆನಗೆ ಬೆಸಸೆಂದನು ||೩೦||

ಅದೊಡೆಲೆ ನೃಪ ಸಖ್ಯದಿಂದೆಮ್ಮನೀಗ ನೀ |
ನಾದರಿಸಿ ಪಾರ್ಥನಂ ಕಂಡು ಧರ್ಮಜನ ಹಯ |
ಮೇಧಕೆ ಸಹಾಯಮಾಗಿಹುದೆಂದು ಕೃಷ್ಣನವನಂ ತೆಗೆದು ತಕ್ಕೈಸಲು ||
ಕಾದಿ ಮಡಿದಾತ್ಮಜರ ಶೋಕಮಂ ಮರೆದು ಮಧು |
ಸೂದನಂಗೆರಗಿದೊಡೆ ಮಗುಳಪ್ಪಿ ಸಂತೈಸು |
ತಾ ದಯಾಂಬುಧಿ ವಿಜಯನಂ ಕರೆದು ಮೈತ್ರಿಯಿಂದಾತನಂ ಕೂಡಿಸಿದನು ||೩೧||

ಅರಸ ಕೇಳ್ ಬಳೀಕುಲದ ಸೇನೆಯಂ ಸುತ ಸಹೋ |
ದರ ಬಂಧು ವರ್ಗಮಂ ಸಚಿವ ಸಾಮಂತರಂ |
ಗುರುಪುರೋಹಿತರಂ ಚಮೂಪರಂ ಚತುರಂಗದಗ್ಗಳೆಯ ಪಟುಭಟರನು ||
ಕರೆದು ಹರಿಪಾರ್ಥರಂ ಕಾಣಿಸಿ ನಗರದಿಂದೆ |
ತರಿಸಿದಂ ಬಿಬಿಧಭಂಡಾರದರ್ಥಂಗಳಂ |
ಪರಿಪರಿಯ ವಸ್ತುಗಳನಿಭ ಹಯ ವರೂಥಮಂ ಗೋ ಮಹಿಷಿ ಯುವತಿಯರನು ||೩೨||

ಕಡೆಯಮಾತೇನವಂ ಸಪ್ತಪ್ರಕೃತಿಗಳಂ |
ತಡೆಯದೆಲ್ಲವನಿರ್ಗೊಪ್ಪಿಸಿದನಾ ನಗರ |
ದಡೆಯೊಳೈದಿರುಳಿರ್ದು ಹಂಸಧ್ವಜಂ ಸಹಿತ ಪಾರ್ಥನಂ ತುರುಗದೊಡನೆ ||
ಪಡೆಯ ಸನ್ನಾಹದಿಂ ಕಳುಹು ಮುಂದಕೆ ಹಯಂ |
ನಡೆಯಲಲ್ಲಿಯ ವಸ್ತುಗಳ್ವೆರಸಿ ದೇವಪುರ |
ದೊಡೆಯ ಲಕ್ಷ್ಮೀವರಂ ಗಜನಗರಿಗೈತಂದು ಭೂಪಾಲನಂ ಕಂಡನು ||೩೩||