ಸೂಚನೆ ||
ಸಾಮ್ರಾಜ್ಯಮಂ ತಾಳ್ದೆಸವ ರಾಘವೇಂದ್ರನಿಂ |
ದಾಮ್ರಪ್ರವಾಳದಂತಿರೆ ವಿರಾಜಿಸುತಿರ್ಪ |
ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ಠಳು ||

ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ |
ಜಾಪತಿಯ ಕುಶಲವರ ಸಂಗರದ ಕೌತುಕವ |
ನಾಪನಿತತೊರಿವೆನಿಕ್ಷ್ವಾ ಮೊದಲಾದ ರವಿಕುಲದ ನೃಪರೇಳ್ಗೆಗಳನು ||
ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೋ |
ಧಾಪುರದೊಳವತರಿಸಿದಂ ಮಹಾವಿಷ್ಣುಸುತ |
ರೂಪದಿಂ ರಾಮಾಭಿಧ್ಯಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ ||೧||

ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ |
ಬಳೆದು ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ |
ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು ||
ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ |
ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ |
ತಳೆದುತ್ಸವದೊಳಯೋಧಾಪುರಿಗೆ ದಶರಥನೊಡನೆ ರಾಘವಂ ಬಂದನು ||೨||

ವಧಿಪ ಕುಮಾರಂಗೆ ಭೂವಿಶ್ವರಂ ಬಳಿಕ |
ಮೂಧಾಭಿಷೇಚನಂ ಮಾಡಲನುಗೈಯೆ ನೃಪ |
ನಧಾಂಗಿ ತಡೆದು ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ ||
ಸ್ವಧಾಮಕಡರೆ ಕೇಳುತೆ ಭರತನಂ ಕಳುಹಿ |
ದುರ್ಧರದರಣ್ಯಪ್ರವೇಶಮಂ ಮಾಡಿದಂ |
ಸ್ಪಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸ್ಥನು ||೩||

ದಂಡಕಾರಣ್ಯದೊಳಿರಲ್ದೆ ಶೂರ್ಪಣಖೆ ಬಂ |
ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ |
ಖಂಡಿಸಿ ಕನಕಮ್ಮಗ ವ್ಯಾಜ್ಯದಿಂದೈದೆ ಲಕ್ಷ್ಮಣಬಗಲೆ ಕಪಟದಿಂದೆ ||
ಕೊಂಡೊಯ್ಯೆ ರಾವಣಂ ಸೀತೆಯಂ ಕಾಣದುರೆ |
ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ |
ಕಂಡು ಪೊಲಬಂ ಕೇಳ್ದ ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು ||೪||

ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ |
ರಥಮಂ ಸಲಿಸಿ ಕರುಣದಿಂದಾಂಜನೇಯನಂ |
ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ ||
ಮಥಿಸಿ ರಾವಣನ ಮೇಲಣ ರಾಜಕಾರಿಯದ |
ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ |
ಪೃಥಿವಿಯನರಸಲ್ಕೆ ವೀರಹನುಮಂತನಂ ಕಳುಹಿದಂ ಕಾಕುತ್ಸ್ಥನು ||೫||

ಧಿಂಕಿಟ್ಟು ಶರಧಿಯಂ ದಾಂಟೀ ಮೇದಿನಿಯ ಸುತೆ |
ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ |
ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂ ಮರ್ದಿಸಿ ||
ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ |
ದಂಕೆಯೊಳ್ ನಿಂದು ವಾಲಧಿಗಿಕ್ಕಿದುರಿಯಿಂದೆ |
ಲಂಕೆಯಂ ಸುಟ್ಟು ಬಂದೊಸಗೇವೇಳ್ದನಿಲಜನನಸುರಾರಿ ಮನ್ನಿಸಿದನು ||೬||

ಗಣೆಯಿಲ್ಲದ ಕಪಿಗಳಂ ಕುಡಿಕೊಂಡು ತೆಂ |
ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ |
ಪಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ ||
ರಣದೊಳಸುರರ ಕುಲದ ಹೆಸರುಳಿಯದಂತೆ ರಾ |
ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ |
ಹಣಿದವಾಡಿದನುರವಣಿಸಿ ಧೂಳಿಗೊಟೆಯಂ ಕೊಂಡನಾ ರಘುವೀರನು ||೭||

ರಾವಣನ ಪದಮಂ ವಿಭೀಷಣಂಗೊಲಿದಿತ್ತು |
ದೇರ್ವಳಂ ಪೊರೆದು ಸೆರೆಯಿರ್ದ ಸೀತೆಯಂ |
ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು ||
ಭೂವರಂ ಸೌಮಿತ್ರಿ ದಶಮುಖಾವರಜ ಸು |
ಗ್ರೀವಾದಿಗಳ ಗಡಣದಿಂದಯೋಧಾಪುರಿಗೆ |
ದೂವಾಳಿಸಿದನಮಲ ಮಣಿಪುಷ್ಪಕದ ಮೇಲೆ ಭರತನಂ ಪಾಲಿಸಲ್ಕೆ ||೮||

ವರಪುಷ್ಪಕವನಿಳಿದು ಭರತಶತ್ರುಘ್ನರಂ |
ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಠಾದಿ |
ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ ||
ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ |
ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು |
ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನಭಿವಂದಿಸಿದನು ||೯||

ಕಯ್ದಳದೊಳೊಯ್ಯನೊಯ್ಯನೆ ಘನಸ್ನೇಹದಿಂ |
ಮೆಯ್ದಡವಿ ತನಯನಂ ತಕ್ಕೈಸಿ ಮುಂಡಾಡಿ |
ಕಯ್ದುಗಳ ಗಾಯಮಂ ಕಂಡು ಕರುಗುತೆ ಮಗನೆ ನಿನ್ನ ಕೋಮಲತನುವನು ||
ಪೊಯ್ದವರದಾರಕಟ ಬೆಂದುದೆನ್ನೊಡಲೆಂದು |
ಸುಯ್ದು ಮುಗ್ಧಾಭಾವದಿಂ ತನ್ನ ಸವತಿಯಂ |
ಬಯ್ದು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ ||೧೦||

ಮೇಲೆ ತಾಳ್ದಂ ಶುಭಮೂಹೂರ್ತದೊಳ್ ವಾರಿನಿಧಿ |
ವೇಲೆಯಾದವನಿಯಂ ಪಟ್ಟಾಭಿಷೇಚನದ |
ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು |
ಮೂಲೋಕಮೈದೆ ಕೊಂಡಾಡೆ ಬಳಿಕುರ್ವಿಯಂ |
ಪಾಲಿಸುತಿರ್ದುನೊಂಬತ್ತು ಸಾಸಿರವರ್ಷ |
ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರಿತಿಯಿಂದೆ ||೧೧||

ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ |
ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕಾ |
ಲಾಪಮಯವಾಯ್ತು ವನಯೆಲ್ಲಮುಂ ವಧಿಪ ಪ್ರಜೆಗಳಿಂ ಸಂಚರಿಸುವ ||
ಗೋಪಮಯವಾಯ್ತುಗಿರಿಯೆಲ್ಲಮುಂ ರತ್ನಪ್ರ |
ದೀಪಮಯವಾಯ್ತು ತಮಮೆಲ್ಲಮುಂ ರಘುಜಪ್ರ |
ತಾಪಮಯವಾಯ್ತು ಮೂಜಗಮೆಲ್ಲಮಂ ದಾಶರಥಿ ರಾಜ್ಯಮಂ ಪಾಲಿಸೆ ||೧೨||

ಪಣ್ಗಾಯಿ ಪೊ ತಳಿರ್ ಬೀತ ತರುಲತೆಯಿಲ್ಲ |
ತಣ್ಗೊಳಂ ಕರೆಕಾಲ್ಬೆಳೆಗಳಿಲ್ಲದಿಳೆಯಿಲ್ಲ |
ಪೆಣ್ಗಂಡುಗಳೊಳೊರ್ವರುಂ ನಿಜಾಚಾರ ವಿರಹಿತರಾಗಿ ನಡೆವರಿಲ್ಲ ||
ಬಿಣ್ಗೆಚ್ಚಲಿಕ್ಕಿ ಕೊಡವಾಲ್ಗರೆಯದಾವಿಲ್ಲ |
ನುಣ್ಗಾಡಿವೆತ್ತಿರದ ಪಶುಪಕ್ಷಿ ಮೃಗವಿಲ್ಲ |
ಕಣ್ಗೊಳಿಪ ರಾಮರಾಜ್ಯದೊಳಕಾಲ ಮರಣಮಿಲ್ಲಖಿಳಜೀವಿಗಳ್ಗೆ ||೧೩||

ಕಾಳಿಂದಿ ಸುರನದಿಗೆ ಕೃಷ್ಣನಮೃತಾಬ್ಧಿಗಳ |
ಕಾಳಿ ವಾಣಿಗೆ ಕಳಂಕಿಂದುಮಂಡಲಿಕೆ ವರ |
ಕಾಳಿ ಕಾಪಾಲಿಗೆ ಮದಂ ದೇವಗಜಕೆ ನಂಜಹಿಪತಿಗೆ ತೊಡವಾಗಿರೆ ||
ಕಾಳಿಮದ ಕೂಟಮೆನಗಿಲ್ಲೆಂಬ ಮುಳಿಸತಿವಿ |
ಕಾಳಿಸಲಮಳಕೀರ್ತಿಕಾಂತೆ ಪೊರಮಟ್ಟು ಲೋ |
ಕಾಳಿಯಂ ತಿರುಗುವಳೆನಲ್ಕೆ ರಾಮನ ಯಶೋವಿಸ್ತರವನೇ ವೊಗಳ್ವೆನು ||೧೪||

ಸರ್ವಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ |
ನಿರ್ವಿರ್ಘ್ನಮಾಗಿ ಸಕಲಪ್ರಕೃತಿ ಜಾತಿ ಚಾ |
ತುರ್ವರ್ಣ್ಯಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಳ್ಗೆ ಪಳಿವೊರಿಸದೆ ||
ಉರ್ವಿಯಂ ನವಸಹಸ್ರಾಬ್ದಮುರೆ ಪಾಲಿಸಿದ |
ನುರ್ವಸಂತಾನಮಂ ಕಾಣದಿಕ್ಷ್ವಾಕುಕುಲ |
ನಿರ್ವಾಹಮಂ ನೆನೆದು ನುಡಿದನೇಕಾಂತದಿಂ ಜಾನಕಿಯೊಳು ||೧೫||

ಕಾಂತೆ ಕೇಳೀಕ್ಷ್ವಾಕುವಂಶಮೆನ್ನಲ್ಲಿ ಬಂ |
ದಾಂತುದಿಲ್ಲಿಂದೆ ಸಂತತಿ ನಡೆಯದಿರ್ದೊಡೆ ಕು |
ಲಾಂತಕಂ ತಾನಾದಪೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ ||
ಭ್ರಾಂತಿಯಂ ಬಿಡಿಸುವೊಡಪತ್ಯದೇಳ್ಗೆಗಳೆ ವಿ |
ಶ್ರಾಂತಿಯಲ್ಲದೆ ಪೆರತದೇನುಂಟು ಮುಂದೆ ಪು |
ತ್ರಾಂತರವನ್ಯೆದದಿರ್ದಪೆನೆಂತೊ ಪೇಳೆಂದು ದಾಶರಥಿ ಬಿಸುಸುಯ್ದನು ||೧೬||

ಸಂತಾನಮಂದಾದೊಳ್ ಪಡೆದತುಳವಿಭವ |
ಮಂ ತಳೆದು ನಂದನೋತ್ಸವದಮೃತಪಾನದ |
ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ ಬರಿದೆ ||
ಸಂತತಂ ಜಾತರೂಪವನೆ ಕಾಣದೆ ತಾಪ |
ದಿಂ ತೊಳಲಿ ಬಳಲುವ ದರದ್ರಿನಂದದೊಳೈದೆ |
ಚಿಂತಿಸುವ ಸಂಸಾರಮೇಕೆ ಮಾನವಜ್ಮಕೆಂದು ರಘುಪತಿ ನುಡಿದನು ||೧೭||

ನೀರಿರ್ದ ಕಾಸಾಕರವಿಂದಮಿಲ್ಲದೊಡೆ |
ತಾರಕೆಗಳಿರ್ದ ಗಗನಕೆ ಚಂದ್ರ ನಿಲ್ಲದೊಡೆ |
ಚಾರುಯೌವನಮಿರ್ದ ಪೆಣ್ಗೆನಿಯನಿಲ್ಲದೊಡೆ ಸನ್ನುತಪ್ರಜೆಗಳಿರ್ದ ||
ಧಾರಿಣಿಗೆ ಧರ್ಮದರಸಿಲ್ಲದೊಡೆ ಸಿರಿಯಿರ್ದು |
ದಾವಂಶಕೆ ಕುವರನಿಲ್ಲದೊಡೆ ಮೆರೆದಪುದೆ |
ನಾರಿ ಪೇಳೆನೆ ಲಜ್ಜೆಯಿಂದೆ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು ||೧೮||

ಕಾಂತ ನೀಂ ಪೇಳ್ದೊಡೇಂ ಪುತ್ರವತಿಯಹುದು ಜ |
ನ್ಮಾಂತರದ ಪುಣ್ಯಮೈಸೆಲೆ ಪೆಣ್ಗೆ ಮುನ್ನತಾಂ |
ನೋಂತುದಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು ||
ಆಂತೊಳಗೆ ಪುದಗಿರ್ದ ಪರಿಮಳದೊಳೊಪ್ಪುವ ಲ |
ತಾಂತಕುಟ್ಮಲದಂತೆಗರ್ಭಲಾಂಛನದ |
ಕಾಂತಿಯಂ ತಳೆವುದಂಗನೆಯರೆಲ್ಲರ್ಗೆ ದೊರವುದೆ ಮೇದಿನಿಯೊಳೆಂದಳು ||೧೯||

ಕಂದನಾಡುವ ಬಾಲಲೀಲೆಯಂ ನೋಡಿ ತೊದ |
ಲೊಂದಿದಿನವಾತನುರೆ ಕೇಳ್ದು ಮುದ್ದಿನ ಮುದ್ದೆ |
ಯಂದದಂಗನೆತ್ತಿಕೊಂಡು ನಳಿತೋಳ್ಗಳಿಂದಪ್ಪಿ ಕೆಂಗುರುಳ್ಗಳೊಲೆವ ||
ಮುಂದಲೆಯ ಕಂಪನಾಫ್ರಾಣಿಸಿ ತೊರೆದ ಜೊಲ್ಲ |
ಚೆಂದುಟಿಯ ಬಾಯ್ದೆರೆಯನೈದೆ ಚುಂಬಿಸಿ ಸೊಗಸು |
ಗುಂದದಾಯೆಂದು ಪಂಚೇಂದ್ರಿಯಪ್ರೀತಿಯಂ ಪಡೆವರಿನ್ನಾವ ಕೃತರೊ ||೨೦||

ತೇಲ್ದೋಸರಿಸಿ ಮೇಲುದಂ ಸೆಳೆವ ಕಮಲಮಂ |
ಪೋಲ್ದ ಕಣ್ಗೊನೆಯಿಂದೆ ತಾಯ ಮೊಗಮಂ ನೋಳ್ಪ |
ಕಾಲ್ದುದಿಗಳಂ ಬಿದಿರಿ ತಡವರಿಸಿ ಕೈಯ್ಯಿಡುವ ಬಾಲಂಗೆ ಮೋಹದಿಂದೆ ||
ಜೋಲ್ದೊಲೆವ ಹಾರಮಂ ತೆಗೆದು ಮುಯ್ಪಿಗೆ ಸಾರ್ಚಿ |
ಪಾಲ್ದೊರೆವ ಮೊಲೆಯೂಡಿ ಕೂಡೆ ತೊಟ್ಟಿಲೊಳಿಟ್ಟು |
ಸಾಲ್ದ ಸೈಪಿಂದೆ ಜೋಗುಳವಾಡಿ ತೂಗುವಳದೇಂ ಸುಕೃತಿಯೋ ಧರೆಯೊಳು ||೨೧||

ಇಂತು ಸುತರಲ್ಲದಾರೊಳವರ್ಗವಳಿರ್ವರುಂ |
ಚಿಂತಿಸುವ ಸಮಯಕೆ ವಸಿಷ್ಠ ಮುನಿಪತಿ ಬಂದು |
ಸಂತಾನದಬ್ಯುದಯಮಾದಪುದು ಮುಂದೆ ನಿಮಗೆಂದು ಸಂಪ್ರೀತಿಯಿಂದೆ ||
ಸಂತೈಸೆ ಬಳಿಕ ರಘುಕುಲ ಸಾರ್ವಭೌಮನ |
ತ್ಯಂತಹರ್ಷಿತನಾಗಿರಲ್ಕೆ ತಲೆದೋರಿತು ವ |
ಸಂತಕಾಲಂ ವಿರಾಜಿತ ರಸಾಲಂ ವಿರಹಿಹೃದಯಸೂಲಂ ತಾನೆನೆ ||೨೨||

ಅರಸಂಜೆ ಸರಸಿಯಂ ಕಲಪಿಕಂ ತಳಿತ ಮಾ |
ಮರನಂ ಚಕೋರತತಿ ಚಂದ್ರಿಕೆಯನಳಿಕುಲಂ |
ಬಿರಿಮುಗಳ ನರಗಿಳಿ ಬನಂಗಳಂ ವಿರಹಿಗಳ್ ಕೂರ್ಪರಂ ಸಾರ್ದೆಸೆಯಲು ||
ಧರೆಯೊಳೆಳಗಾಳಿಯಂ ಸೀತಳದ ವಾರಿಯಂ |
ತರುಗಳ ನೆಳಲ್ಗಳಂ ಸೇರತೊಡಗಿತು ಜನಂ |
ಪರಿವೃತ ವಸಂತಕಾಲದೊಳಿಂತಿರಲ್ ಬಳಿಕ ಸೀತೆ ಋತುಮತಿಯಾದಳು ||೨೩||

ಮಲ್ಲಿಕಾಸ್ಮಿತರುಚಿರೆ ಕುಂದಕುಟ್ಮಲರದನೆ |
ಪಲ್ಲವಾಧರೆ ಭೃಂಗಕುಂತಳೆ ಕುಸುಮಗಂಧಿ |
ಸಲ್ಲಲಿತಕೋಕಿಲಾಲಾಪೆ ಚಂಪಕವರ್ಣೆ ಮೃದುಮದುರ ಕೀರವಾಣಿ ||
ಪುಲ್ಲಲೋಚನೆ ಚಾರು ಚಂದ್ರಬಿಂಬಾನನೆ ಲ |
ಸಲ್ಲತಾಗಾತ್ರಿ ಜಾನಕಿ ವಿರಾಜಿಸಿದಳ್ ಸ |
ಮುಲ್ಲಾಸದಿಂ ಪುಷ್ಪವತಿಯಾಗಿ ವಿಕಸಿತ ವಸಂತಲಕ್ಷ್ಮಿಯ ತೆರದೊಳು ||೨೪||

ಮೊಡವಿ ಮೂಡಿದ ಮೊಗಂ ಸೊಗಡುಗಂಪೊಗೆದ ಮೈ |
ತೊಡವುಗಳ ತೊಡಕಿಲ್ಲದವಯಂ ಪೂಗಳಂ |
ಮುಡಿಯದ ಬಳಲ್ದುರುಬು ನಿಚ್ಚಳದ ಕಣ್ಮಲರ್ ತೊಳಪ ಪಣೆ ಮಿರುಪ ಕದಪು ||
ಕಡುಬಿಣ್ಣಿಡಿದ ಕುಚಂ ಮಾಧವೀಲತೆಯ ಸೆಳೆ |
ವಿಡಿದಕೈ ನಿರಿಯಳಿದ ನಸುಮಾಸಿದಂಬರಂ |
ಕುಡಿವರಿವ ಲಜ್ಜೆ ಸಿಂಗರಕೆ ಮಿಗಿಲಾಯ್ತುವನಿಸುತೆಗೆ ಋತುಮತಿಯಾಗಲು ||೨೫||

ಸಮುಚಿತ ಸ್ತ್ರೀಧರ್ಮದಿಂದೆ ನಾಲ್ಕನೆಯದಿನ |
ದಮಲ ಮಜ್ಜನದಲಂಕಾದೊಳಿಸೆದಳಂದು |
ನಿಮಿಷದೊಳ್ ತ್ರಿಜಗಮಂ ಗೆಲ್ವೆನೆಂದಂಗಜಂ ಮಸೆದಡಾಯುಧವೊ ಮೇಣು ||
ಕ್ರಮದಿಂದೆ ಮನ್ಮಥಂ ಕಲುಷಮಂ ಶೋಧಿಸಿದ |
ರಮಣೀಯ ಸೌಂದರ‍್ಯಸಾರವೋ ಸ್ಮರನ ನಿರು |
ಪಮಯಶಶ್ಯ್ರೀಯ ಸಾಕಾರಮೋ ಪೇಳೆನಲ್ ಸೀತೆ ರಾಘವನ ಕಣ್ಗೆ ||೨೬||

ಸುರದುತ್ಕಟಾಕ್ಷ ಚಂಚಲದಿಂದೆ ಚಾರು ಪೀ |
ವರಪಯೋಧರದಿಂದೆ ಪರಿವೃತ ಸುಮೇಖಲಾ |
ತರಳ ಸತ್ಕಲ ಕಿಂಕಿಣೀ ಘನಸ್ವರದಿಂದೆಸೆವ ಕಂಕಣಂಗಳಿಂದೆ ||
ಸರಸತರ ಲಾವಣ್ಯಪೂರ ಪ್ರವಾಹದಿಂ |
ಭರಿತ ಕಬರೀಬರ್ಹಿ ಲೀಲೆಯಿಂ ಮಳೆಗಾಲ |
ದಿರವನೆಚ್ಚರಿಪರಸಿಯಂ ಕಂಡು ರಾಮನ ಮನಶ್ಚಾತಕಂ ನಲಿದುದು ||೨೭||

ಮಂದಗಮನೆಯ ಮಂದಹಾಸದ ವಿಲಾಸಮಂ |
ಕುಂದರದನೆಯ ಕುಂದದವಯವದ ಸೌಂದರ್ಯ |
ದಂದಮಂ ವಕ್ರಕುಂತೆಯ ವಕ್ರಾವಲೋಕನದ ಭಾವದ ಬಗೆಯನು ||
ಚಂದನ ಸುಗಂಧಿನಿಯ ಚಂದ್ರಾಸ್ಯದೆಸಕಮಂ |
ಬಂದುಗೆದುಟಿಯಳ ಬಂಧುರದ ಸಿಂಗರವನೇ |
ನೆಂದು ಬಣ್ಣಿಸಬಹುದು ರಾಮಣೀಯಕಮಾದ ರಾಮನ ಮಡದಿಯಿರವನು ||೨೮||

ನೊಸಲೊಳಾ ರಾಜಿಸುವ ತಿಲಕದಿಂದಲಕದಿಂ |
ಮಿಸುಪ ಮೈ ನಸುದಪಿನಿಂ ವಸನದಿಂ ದಶನದಿಂ |
ಪಸರಿಪೆಳನಗೆಯ ತೆಳ್ಗದಪಿನಿಂ ಪದಪಿನಿಂದಮರ್ದ ಪೊಂದುಡುಗೆಯಿಂದ ||
ಅಸಿವೆರಲ್ಗ ಳೊಳೊಪ್ಪುವುಗುರ್ಗಳಿಂ ತಿಗುರ್ಗಳಿಂ |
ಪೊಸತೆನಿಪ ಕುಂಕುಮದ ಕಂಪಿನಿಂದಿಂಪಿನಿಂ |
ತ್ರಿಸರದೊಳ್ ಮೆರೆವ ಗುರುಕುಚದಿಂದೆ ಕಾಂತೆ ಕಣ್ಗೆಸೆದಿರ್ದಳು ||೨೯||

ಪಜ್ಜಳಿಪ ರತ್ನಪ್ರದೀಪಂಗಳಿಂದೆ ಪೊಸ |
ಬಜ್ಜರದ ಮಣಿಮಂಚದಿಂದಂ ಚೆದುಪ್ಪುಳಿನ |
ಸಜ್ಜುಕದಲರ್ಗಳಿಂದೆಸೆವ ಮೇಲ್ವಾಸಿನಿಂ ರಾಜೋಪಭೋಗ್ಯಮಾದ ||
ಸಜ್ಜೆವನೆಯೊಳ್ ವಿರಾಜಿಪ ಕಾಂ ತನೆಡೆಗೆ ನಸು |
ಲಜ್ಜೆ ಮಂದಸ್ಮಿತಂ ಕಿರುಬೆಮರ್ ಕಾತರಂ |
ಪಜ್ಜೆದೋರಲ್ ಮೊಗದೊಳಯತಂದು ಸಾರ್ದಳೊಯ್ಯನೆ ಮತ್ತಗಜಗಾಮಿನಿ ||೩೦||

ಸಾಗರದ ನಡುವೆ ಫಣಿತಲ್ಪದೊಳ್ ಸಿರಿಯೊಡನೆ |
ಭೋಗಿಸುವ ತೆರದಿಂ ಮಿಥಿಳೇಂದ್ರಸುತೆಯ ಸಂ |
ಭೋಗದಿಂ ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು ||
ರಾಗರಸದಿಂಜಿ ಪುಳಕಂ ಪೊಣ್ಮೆ ನಲಿದು ಮದ |
ನಾಗಮಪ್ರೌಢಿಯಿಂ ಸಕಲ ರತಿಕಲೆಗಳಿಂ |
ಪಾಗಲ್ ಪರಸ್ಪರವಿಚಾರಮಂ ಮರೆದೈಕ್ಯಭಾವದಿಂ ಸೊಗಸುಗೊಳಿಸಿ ||೩೧||

ಬೆಂಗೊಡದೆ ಮೋಸವೋಗದೆ ತವಕಮುಡುಗಿ ಪೆರ |
ಪಿಂಗದೆ ವಿಘಾತಿಗಳುಕದೆ ಕೈಮರೆಯದೆ ಚದು |
ರಿಂಗದೆ ನೆಗಳ್ದ ಪುಳಕಂ ಬಿಡದೆ ತಳ್ತಳ್ಕರಡಗದಲಸಿಕೆದೋರದೆ ||
ಅಂಗಜಶ್ರಮವ ನಿಟ್ಟಿಸದೆ ಸಲೆ ರಂಜಿಸುವ |
ಸಂಗರ ಸದಾಲಾಪದಿಂದೆಸದರೊಂದಿನಿಸು |
ಭಂಗಮಿಲ್ಲದೆ ವೀರಭಟರೊದಗುವಂತೆ ಸಮರತಿಯೊಳಾ ದಂಪತಿಗಳು ||೩೨||

ಇಂತೆಸೆವ ಸಮರತಿಯ ಸೊಬಗಿನಿಂದವವರೀರ್ವ |
ರುಂ ತೊಳಗುತಿರೆ ಬಳಿಕ ವರವಿಷ್ಣುನಕ್ಷತ್ರ |
ದಂತದೊಳ್ ವೈದೇಹಿಗಾಯ್ತು ಗರ್ಭಾದಾನ ಮದರ ಫಲಮಂ ನೋಡಲು ||
ಎಂತಾದೊಡಂ ತನ್ನ ಕಾಂತನನಗಲ್ದು ಸೀ |
ಮಂತಿನಿ ಪರಸ್ಥಳದೊಳನುಗರಂ ಪಡೆದಪಳ |
ದಂ ತಿಳಿಯದುತ್ಸದೊಳಿರ್ದಳಾಕಾಂತೆ ಬಸಿರಾದ ಲಾಂ ಛನವನಾಂತು ||೩೩||

ಸಣ್ಣನಡು ಬಳೆಯೆ ತಿವಳಿಗಳಡಗೆ ತೆಳ್ವಾಸೆ |
ನುಣ್ಣಗೆ ಪೊಗರ್ವಡೆಯೆ ಚೂಚಕದ ಕಪ್ಪುಣ್ಮೆ |
ತಿಣ್ಣಮೊಲೆ ಬಿಣ್ಪಡರೆ ಕಾಲ್ಮಂದಗತಿಗಲಸೆ ನಗೆಮೊಗಂ ಬೆಳ್ಪುದೊರೆ ||
ಕಣ್ವೆವೆಯ ಪುರ್ಬಿನ ನವಿರ್ಮಿಚುದಳೆಯೆ ತನು |
ತಣ್ಣಸದೊಳೆಸೆಯೆ ಪೊಸಗಾಡಿವೆತ್ತಿರ್ದಳೇ |
ವಣ್ಣಿಸುವೆನುಲ್ಲಸತ್ಕಾಂಚನಲತಾಂಗಿ ಸುತ ಲಾಂಛನದ  ಗರ್ಭದಿಂದೆ ||೩೪||

ಬೆಳ್ದಾವರೆಯೊಳೆರಗಿದಳಿಕುಲಂ ಗಗನಾಗ್ರ |
ದೊಳ್ದಿನದಿನಕೆ ಬೆಳೆವ ಚಂದ್ರಕಲೆ ಕನಕಾದ್ರಿ |
ಯೋಳ್ದಿಟ್ಟಿಗೊಳಿಸುವ ಸಿತಾಂಬುಜಂ ರಾರಾಜಿಸುವ ತೆರದೊಳಾ ಕಾಂತೆಯ ||
ಒಳ್ದಳೆದ ಚೆಲ್ವಿನಾನದೊಳುರೆ ಮಿರುಗುವ ಕು |
ರುಳ್ದೊಂಗಲಸಿನಡುವಿನೊಳ್ ಪೊಳೆವ ಗರ್ಭಂ ನೆ |
ಗಳ್ದಕುಚದೊಳ್ ಮಿಸುಪ ಚೂಚಕದ ಕಪ್ಪು ಚೆಲ್ವಿಂದೆ ಕಣ್ಗೆಸೆದಿರ್ದುದು ||೩೫||

ಚಂದ್ರಮುಖಿಯಾದ ವೈದೇಹಿಯ ಜಠರಮೆಂಬ |
ಚಂದ್ರಕಾಂತದ ಮಣಿಯ ಮಧ್ಯದೊಳ್ ತವೆ ರಾಮ |
ಚಂದ್ರನೆಂಬಖಿಳ ಲೋಕಾನಂದಕರಮಾದ ಸಂಪೂರ್ಣ ಕಲೆಗಳುಳ್ಳ ||
ಚಂದ್ರನ ವಿರಾಜಿತ ಪ್ರತಿಬಿಂಬಮಾಗಿರ್ದ |
ಚಂದ್ರನೆನೆ ಶಿಶು ಗರ್ಭದೊಳ್ ತೊಳಗಿ ಕೂಡಿರ್ದ |
ಚಂದ್ರಿಕೆವೊಲಂಗರುಚಿ ಬೆಳ್ಪಡರಲೊಳ್ಪನಿದೊಪ್ಪಿರ್ದಳುತ್ಪಲಾಕ್ಷಿ ||೩೬||

ಕಾಂಚನಲತಾ ಕೋಮಲಾಂಗಿ ಗರ್ಭಿಣಿಯಾದ |
ಲಾಂಛನವನಿನಕುಲಾಧಿಶ್ವರಂ ಕಂಡು ರೋ |
ಮಾಂಚನದ ಹರ್ಷದಿಂ ನಾಲ್ಕನೆಯ ತಿಂಗಳೊಳ್ ವಿಭವದಿಂ ಭೂಸುರರ್ಗೆ ||
ವಾಂಛಿತವನಿತ್ತು ಪುಂಸವನ ವಿಸ್ತರಸಿದಂ |
ತಾಂ ಚಾರು ಲೋಚನೆಗೆ ವಿಸ್ತರಿಸಿದಂ ಚಿತ್ತ |
ಚಾಂಚಲ್ಯಮಿಲ್ಲದೆ ವಸಿಷ್ಠ ವಿಶ್ವಾಮಿತ್ರರುಕ್ತದಿಂ ಮಾಡಿಸಲ್ಕೆ ||೩೭||

ಯೋಜನತ್ರಯದಗಲದುತ್ಸವದ ಶಾಲೆಯಂ |
ರಾಜಿಸಲ್ ಕೈಗೈಸಿ ಬಳಿಕಲ್ಲಿ ನೆರೆದ ನಾ |
ನಾಜನಕೆ ದಿವಿಜರ್ಗೆ ಸುಗ್ರೀವ ಮೊದಲಾದ ಕಪಿಗಳ್ಗೆ ಭೂಸುರರ್ಗೆ ||
ರಾಜವರ್ಗಕೆ ವಿಭೀಷಣಮುಖ್ಯದೈತ್ಯರ್ಗೆ |
ಭೋಜನ ಸುಗಂಧ ತಾಂಬೂಲ ಪುಷ್ಪಾಕ್ಷತೆಯ |
ಪೂಜೆ ವಸ್ತ್ರಾಭರಣದುಡುಗೊರೆಗಳಂ ಕೊಟ್ಟು ರಾಘವಂ ಮನ್ನಿಸಿದನು ||೩೮||

ಉತ್ಸವಕ್ಕೆ ಬಂದನಿಬರೆಲ್ಲರಂ ಶರಣಜನ |
ವತ್ಸಲಂ ಸತ್ಕರಿಸಿ ಬೀಳ್ಕೊಟ್ಟು ರಾಜಸಂ |
ಪತ್ಸುಖದೊಳಿರ್ವನಿತರೊಳ್ ಬಳಿಕ ಸೀತೆ ನಿಜಕಾಂತನೇಕಾಂತಕೈದಿ ||
ಕುತ್ಸಿತಂ ಪೊರ್ದದಾಶ್ರಮದ ಋಷಿಪತ್ನಿಯರ |
ಸತ್ಸಂಗದೊಳ್ ತನ್ನ ಬೇಸರಂ ತವಿಸುವೆ ನಿ |
ದುತ್ಸಕಂ ತನಗದರಿನಿನ್ನಲಮ್ಮೆ ಬನಕೆ ತನ್ನಂ ಕಳುಹಬೇಕೆಂದಳು ||೩೯||

ಆ ಕ್ಷಿತಿಜೆ ಬಯಕೆಯಂ ಬಿನೈಸೆ ಕೇಳ್ದು ನಗು |
ತಾಕ್ಷೇಪದಿಂದೆ ಕಳುಹುವನಾಗಿ ಸಂತೈಸಿ |
ರಾಕ್ಷಸಾಂತಕ ನಿರಲ್ಕೊಂದಿರುಳ್ ಕನಸುಗಂಡೇಳುತೆ ವಸಿಷ್ಠನೊಡನೆ ||
ಈ ಕ್ಷೆಣಿಸುತೆ ಗಂಗೆಯಂ ಕಳೆದು ಕಾಡೊಳ್ ಮ |
ಹಾ ಕ್ಷೀಣೆಯಾಗಿ ದೇಸಿಗರಂತೆ ದೆಸೆದೆಸೆಯ |
ವೀಕ್ಷಿಸುತೆ ಮರುಗುತಳುತಿರ್ದುದಂ ಕಂಡೆನಿದು ಲೇಸಹುದೆ ಪೇಳೆಂದನು ||೪೦||

ಎನೆ ಕನಸಿದೊಳ್ಳಿತಲ್ಲೆಂದದಕೆ ಶಾಂತಿಯಂ |
ಮುನಿವರ ವಸಿಷ್ಠಂ ನೆಗಳ್ಚಿದಂ ಬಳಿಕ ಮನ |
ದನುತಾಪದಿಂ ಪ್ರಜೆಯ ನಾರೈವುದಂ ಮರೆದೆರಡು ಮೂರುದಿವಸಮಿರ್ದು ||
ಜನಮಲಸಿದಪುದೆಂದು ರಾತ್ರಿಯೊಳ್ ಪೊರಮುಟ್ಟು |
ದಿನಪ ಕುಲತಿಲಕನೇಕಾಂತದೊಳ್ ನಗರ ಶೋ |
ದನೆಯ ಚಾರರೊಳೊರ್ವನಂ ಕರೆಸಿ ಕೇಳ್ದನಿಂತೆಂದು ವಿನಯೋಕ್ತಿಯಿಂದೆ ||೪೧||

ನಿಂದಿಸರಲೇ ಪ್ರಜೆಗಳಿನ್ನೆಗಂ ತನ್ನ ಗುಣ |
ಕೊಂದಿಸರಲೇ ಪಳಿವನಮಲತರ ಕೀರ್ತಿಯಂ |
ಕಂದಿಸರಲೇ ದೂಸರಿಂದೆ ಭುಜವಿಜಯ ಪ್ರತಾಪ ತೇಜವಳೆಯೊಳು ||
ನಂದಿಸರಲೇ ಜರೆದು ನಿಜವಂಶದೇಳ್ಗೆಯಂ |
ಕುಂದಿಸರಲೇ ಖೋಡಿಗಳೆದು ವಹಮಾನದೊಳ್ |
ಸಂಧಿಸರಲೇ ಕೊಂಕುಕೊರತೆಗಳನೆಂದವನನಸುರಾರಿ ಬೆಸಗೊಂಡನು ||೪೨||

ದೇವ ನಿನ್ನಂ ಪೆಸರಿಸದನೀಶನಾದಪಂ |
ಸೇವಿಸಿದವಂ ಚತುರ್ಮುಖನಾಗಲುಳ್ಳವಂ |
ಕಾವುದೆಂದೈದೆ ಮರೆಹೊಕ್ಕವಂ ಜಗದೊಳಾಚಂದ್ರಾರ್ಕಮಾಗಿ ಬಾಳ್ವಂ ||
ಶ್ರೀವಿಭವದಿಂ ಶಕ್ರಪದವಿಯಂ ಜರೆದಪಂ |
ಭೂವಲಯದೊಳ್ ನಿಂದಿಸುವರುಂಟೆ ತರಣಿಯಂ |
ಕಾವಳಂ ಮುಸುಕಿರ್ದೊಡೇನಪ್ಪುದೆಂದವಂ ಬಿನೈಸಿ ಕೈಮುಗಿದನು ||೪೩||

ಎನಾದೊಡಂ ಕಟಕಿಯಾಗಿರ್ಪುದೀಮಾತು |
ಭಾನುವಂ ಕಾವಳಂ ಮುಸುಕಲೇನೆನಲೆನ್ನ |
ಧಿನವಾದರಸುತಕಾವುದೂಣೆಯವೆಂಬರೆಂದು ರಘುಪತಿ ಕೇಳಲು ||
ನೀನೆ ಪಾವನರಪನೆಂಬುದಂ ಮುನಿಯವದು |
ತಾನೆ ತೋರಿಸಳೆ ಲೋಕದ ಜನಕೆ ಜಗದೊಳ |
ಜ್ಞಾನಿಗಳ್ ನುಡಿದ ನಿಂದೆಯನುಸಿರಲಮ್ಮೆನೆಂದವನೆರಗಿದಂ ಪದದೊಳು ||೪೪||

ಏಳಂಜಬೇಡಿನ್ನು ಮಾಜದಿರ್ ತನ್ನಾಣೆ |
ಹೇಳೆಂದು ರಘುಕುಲಲಲಾ ಮನೊತ್ತಾಯದಿಂ |
ಕೇಳಲವನೆಂದನವಧರಿಸೊರ‍್ವ ಮಡಿವಾಳಿ ಮಲಿನಮಂ ತೊಳೆವನಾಗಿ ||
ಕಾಳುಗೆಡದಂ ಜೀಯ ಸದ್ಗುಣಚರಿತ್ರನಾ |
ಮಾಳಿಯಿಂ ಜಗಮಂ ಪುಣೀತಮಂ ಮಾಳ್ಪ ನಿ |
ನ್ನೇಳಿಗೆಯನವನೆತ್ತ ಬಲ್ಲನೆನೆಲೇನೆಂದನೆನಲಾತನಿಂತೆಂದನು ||೪೫||

ಪೆಂಡತಿ ತವರ‍್ಮನೆಗೆ ಮುಳಿದು ಪೇಳದೆ ಪೋದ |
ಚಂಡಿತನಕವಳ ತಾಯ್ತಂದೆಗಳ್ ಕಳಹಬಂ |
ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ ||
ಕೊಂಡಾಳುವವನಲ್ಲ ತಾನೆಂದು ರಜಕ ನು |
ದ್ದಂಡದೊಳ್ ನುಡಿಯೆ  ಕಿವಿಮುಚ್ಚಿಕೊಳುತೆಯ್ದಿದೆನ |
ಖಂಡಿತದ ಮಂತ್ರಪೂತದ ಹವಿಯನರಿದೆಂಜಲಿಪುದೆ ವಾಯಸಮೆಂದನು ||೪೬||

ಎಂದು ಬಿನ್ನೈಸೆ ಕೇಳ್ದಾತನಂ ಕಳುಹಿ ರಘು |
ನಂದನಂ ಬಮಧನಕ್ಕೊಳಗಾದ ಮತ್ತಗಜ |
ದಂದದಿಂ ನಿಜಶಿರವನೊಲೆದು ಮೂಗಿನಮೇಲೆ ಬೆರಳಿಟ್ಟು ಮೌನದಿಂದೆ ||
ನಿಂದು ಸೈವೆರಗಾಗಿ ನೆನ ನೆನೆದು ಚಿತ್ತದೊಳ್ |
ನೊಂದು ಬಿಸುಸುಯ್ದು ಕಡುವಳಿದು ಕಾತರಿಸಿ ಕಳೆ |
ಗುಂದಿ ದುಮ್ಮಾನದಿಂ ಪೊಕ್ಕನಂತಃಪುರಕೆ ಪುತ್ತವುಗುವಹಿಪನಂತೆ ||೪೭||

ಓಲಗಂಗುಡದೆ ಬಾಗಿಲ್ಗೆ ಬಂದಖಿಳ ಭೂ |
ಪಾಲರಂ ಕರೆಸಿ ಕಾಣಿಸಿಕೊಳದೊಳಗೆ ಚಿಂ |
ತಾಲತಾಂಗಿಯ ಕೇಳಿಗೆಡೆಗೊಟ್ಟು ರಾಜೇಂದ್ರನಿರೆ ಕೇಳ್ದು ಭೀತಿಯಿಂದೆ ||
ಆ ಲಕ್ಷ್ಮಣಾದಿಗಳ್ ಪೊಕ್ಕರಂತಃಪುರವ |
ನಾಲಿಂಗಿಸಿದ ಜಾಡ್ಯದಿಂದೆ ಜಡಿದವಯವದ |
ನೀಲಾಂಗನಂ ಕಂಡು ಕಾಳ್ಗೆರಗಿ ನುಡಿಸಲಮ್ಮದೆ ಮುಮ್ಮನಿರುತಿರ್ದರು ||೪೮||

ಎದ್ದು ಕುಳ್ಳಿರ್ದ ಕರುಣಾಳುಗಳ ಬಲ್ಲಹಂ |
ಮುದ್ದುಗೈದನುಜಂ ಕರೆದಿಳೆಯೊಳಿಂದೆನಗೆ |
ಪೊದ್ದಿದಪವಾದಮಂ ನೀವರಿದುದಿಲ್ಲಕಟ ಸಾಕಿನ್ನು ನೆರವಿಗಳೊಳು ||
ಕದ್ದ ಕಳ್ಳನವೊಲಾಡಿಸಿಕೊಳ್ಳಲಾರೆನೊಡ |
ಲಿದ್ದಲ್ಲಿ ನಿಂದೆಗೊಳಗಾಗಿಬದುಕುವನಲ್ಲ |
ತಿದ್ದಿ ತೀರದ ವಿಲಗಕಂಜುವೆಂ ಸೀತೆಯಂ ಬಿಟ್ಟೆಲ್ಲದಿರೆನೆಂದನು ||೪೯||

ಇವಳಯೋನಿಜೆ ರೂಪ ಗುಣ ಸೀಲಸಂಪನ್ನೆ |
ಭೂವನಪಾವೆ ಪುಣ್ಯಚರಿತೆ ಮಂಗಳ ಮಹೋ |
ತ್ಸವೆ ಪತಿವ್ರತೆಯೆಂಬುದಂ ಬಲ್ಲೆನಾದೊಡಂ ನಿಂದೆಗೊಳಗಾದಬಳಿಕ ||
ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ |
ರವಿಕುಲದ ರಾಯರಪಕೀರ್ತಿಯಂ ತಾಳ್ದಪರೆ |
ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ ||೫೦||

ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ |
ಹಲವುಮಾತೇನಿನ್ನು ಸೀತೆಯಂ ಬಿಟ್ಟೆನೆನೆ |
ಬಲುಗರಮಿದೆತ್ತಣದೊ ಕಾರುಣ್ಯನಿಧಿಗೆನುತೆ ನಡನಡುಗಿ ಭೀತಿಯಿಂದೆ ||
ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ |
ಸಲೆ ನಿಂದಿಸಿದೊಡದಂ ಮಾಣ್ದಪರೆ ದ್ವಿಜರಕಟ |
ಕುಲವಧಿನಿಯನೆಂತು ಬಿಡುವೆ ನೀಂ ಪೇಳೆಂದರನುಜಾತರಗ್ರಜಂಗೆ ||೫೧||

ಭಯಶೋಕದಿಂದೆ ಗದ್ಗದಿತ ಕಂಠದೊಳಶ್ರು |
ನಯನದೊಳ್ ತುಳಕೆ ಭರತಂಕರೆವ ಕಪಿಲೆಯಂ |
ನಯವಿದರ್ ಪೊಡೆದಡಗಟ್ಟುವರೆ ಪಾವನಕನೊಳರಸಿಯಂ ಪುಗಿಸಿದಂದು ||
ಪ್ರಿಯೆ ನಿನಗೆ ಪರಿಶುದ್ಧೆ ಕುಲಕೆ ಮಂಗಳೆ ಸುತೋ |
ದಯಕೆ ನಿರ‍್ಮಲೆ ತನಗೆ ಗತಿಗೆಡುವ ಸೊಸೆಯೆಂದು |
ಬಯಸಿದೊಡೆ ಬಂದಯ್ಯನಾಡನೆ ಸುರಾಸುರರ ಮುಂದೆ ಕಪಿಕಟಕವರಿಯೆ ||೫೨||

ಅದನೆಲ್ಲಮಂ ಮರೆದು ಹುಲುಮನುಜ ರಜಕನಾ |
ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ |
ಹದನಾವುದಕಟ ಗುರುಲಘುವಿನಂತರವನೆಣಿಸದೆ ಬರಿದೆ ಮೂಢರಂತೆ ||
ಎದೆಗೆಟ್ಟು ದೇವಿಯಂ ದೋಷಿಯೆಂಬರೆ ಜೀಯ |
ಪದುಳಿವಿಹುದೆಂದು ವಿನಯದೊಳಗ್ರಜಾತನಂ |
ಕದುಬಿ ನುಡಿದಂ ಭರತನಾತನಂ ನೋಡುತೊಯ್ಯನೆ ಭೂಪನಿಂತೆಂದನು ||೫೩||

ತಮ್ಮ ನೀನಾಡಿದಂತವನಿಸುತೆ ನಿರಜೆಯಹು |
ದುಮ್ಮಳಿಸಬೇಡ ಸೈರಿಸಲಾರೆ ನೀದೂಸ |
ರಂ ಮಹಿಯೊಳುಳಿದರೆ ಪೃಥು ಪುರೂರವ ಹರಿಶ್ಚಂದ್ರಾದಿ ನರಪತಿಗಳು ||
ಸುಮ್ಮನಪಕೀರ್ತಿಗೊಳಗಾಗಲೇತಕೆ ಮಮತೆ |
ಯಂಮಹಾಯೋಗಿ ಬಿಡುವಂತಿವಳನುಳಿವೆನೆನೆ |
ಹಮ್ಮೈಸಿ ಲಕ್ಷ್ಮಣಂ ಕಂಪಿಸುತೆ ಕಿವಿಮುಚ್ಚುತಗ್ರಜಂಗಿಂತೆಂದನು ||೫೪||

ಕಾಯಸುಖಕೋಸುಗಂ ಕೃತಧರ‍್ಮಮಂ ಬಿಡುವೊ |
ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು |
ವಾಯದಪವಾದಕಿಂತರಸಿಯಂ ತೊರೆಯಬೇಕೆಂಬುರೇ ಕರುಣಮಿಲ್ಲದೆ ||
ಜೀಯ ! ತುಂಬಿದಬಸುರ್ ಬೆಸಲಾದ ದೇವಿಯಂ |
ಪ್ರೀಯದಿಂದಾರೈದು ಸಲಹಬೇಕೆಂದು ರಘು |
ರಾಯಂಗೆ ಲಕ್ಷ್ಮಣಂ ಬಿನ್ನೈಸೆ ಮೇಳ್ವಾಯ್ದು ಶತ್ರುಘ್ನನಿಂತೆಂದನು ||೫೫||

ಬಿಡುವರೆಂತಿಕ್ಷ್ವಾಕು ವಮಶದವರರಸಿಯಂ |
ನುಡಿವರೆಂತಿಳೆಯೊಳಾರಾದೊಡಂ ದೂಸರಂ |
ಪಡೆವರೆಂತಮಲ ಸತ್ಕೀರ್ತಿಯಂ ಬುದ್ದಿವೇಳ್ಪುದಕೊಡೆಯರಿಲ್ಲವಾಗಿ ||
ಕಡಿವರೆಂತೇಳ್ಗೆಯಂ ಪೆಣ್ಣಳಲ್ವೆಂಕಿಯಿಂ |
ಸುಡುವರೆಂತನ್ವಯದ ಬಾಳ್ಕೆಯನಿದಕ್ಕೆ ಕಿವಿ |
ಗುಡುವರೆಂತೀಗಳೆನ್ನೊಡಹುಟ್ಟಿದವರೆನುತ ಶತ್ರುಘ್ನನುರಿದೆದ್ದನು ||೫೬||

ಅರಸ ಕೇಳನುಜರಾಡಿದ ನುಡಿಗೆ ತಲೆವಾಗಿ |
ತರಣಿಕುಳ ತಿಲಕನೊಯ್ಯನೆ ಧೈನ್ಯಭಾವದಿಂ |
ತರಹರಿಸಬಾರದಪವಾದ ಹೃಚ್ಚೂಲಮಂ ತನಗೆ ಜಾನಕಿಯನುಳಿದು ||
ಪೆರೆಯುರ್ಚಿದುರಗನಂತಿರ್ದಪೆಂ ಸಾಕು ನಿಮ |
ಗೊರೆದೊಡೇನಹುದೆಂದು ಬೇಸರಿಂಮನೆಗಳ್ಗೆ |
ಭರತ ಶತ್ರುಘ್ನರುಂ ಕಳುಹುತೇಕಾಂತದೊಳ್ ಸೌಮಿತ್ರಿಗಿಂತೆಂದನು ||

ತಮ್ಮ ಬಾ ನೀನಿಂದುವರೆಗೆ ನಾನೆಂದಮಾ |
ತವಿರಿದವನಲ್ಲ ಕೆಲಬಲವನಾರಯ್ಯ |
ತಮ್ಮರುಗದಿರು ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು ||
ಉಮ್ಮಳಿಸದೊಯ್ದು ಗಂಗೆಯ ತಡಿಯರಣ್ಯದೊಳ್ |
ಸುಮ್ಮನೆ ಕಳುಹಿ ಬರ್ಪುದವಳೆನ್ನೊಳಾಡಿರ್ಪ |
ಳೊಮ್ಮೆ ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು ||೫೮||

ಎನೆ ರಾಘವೇಂದ್ರ ನಿನ್ನಾಜ್ಞೆಯಂ ವಿರಲ್ಕೆ |
ತನಗೆ ರೌರವಮಪ್ಪುದೆಂದುದಂ ಮಾಡಲ್ಕೆ |
ಜನನಿಯಂ ಕೊಂದುಗ್ರಗತಿಯಪ್ಪುದೇಗೈವೆನೆಂದು ಕಡುಶೋಕದಿಂದೆ ||
ತನು ಝೊಂಪಿಸಲ್ಕೆ ಸೆರೆಬಿಗಿದು ಕಂಬನಿಯಿಂದೆ |
ನನೆದಳಲ್ದೊರೆಯೊಳಾಳ್ವನುಜಂ ಪೋರ್ಮಿಸುತೆ |
ನಿನಗೆ ದೊಷಮೆ ತಾನಿರಲ್ಕೆ ನಡೆ ಕಳೂಹೆಂದರಸನೇಂ ದಯೆದೊರೆದನೊ ||೫೯||

ಅಣ್ಣದೇವನನೊಳಿಡಿದ ವಾತ್ಸಲ್ಯವೆಂಬ ಬ |
ಲ್ಗಣ್ಣಿಯೊಳ್ ಕಟ್ಟುವಡೆದಲ್ಲೆನಲರಿಯದೆ ನಿ |
ರ್ವಿಣ್ಣಭಾವದೊಳಂದು ಲಕ್ಷ್ಮಣಂ ತುರಗಳ್ ಸಾರಥಿಕೇತನಂಗಳಿಂದೆ ||
ಹಣ್ಣಿದ ವರೂಥಮಂ ತರಿಸಿ ಪೊರರಿಸಿ ನೆಲ |
ವೆನ್ಣಮಗಳಿರುತಿರ್ದ ರಾಜಮಂದಿರಕೈದಿ |
ಕಣ್ಣೂಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದಾ ಸೀತೆಗಿಂತೆಂದನು ||೬೦||

ತಾಯೆ ನೀನೇತಕೆಳಿಸಿದೆ ನಿನ್ನನೀಗ ರಘು |
ರಾಯಂ ತಪೋವನಕೆ ಕಳುಹಿ ಬರಹೇಳಿದಂ |
ಪ್ರೀಯಮುಳ್ಳಡೆ ರಥಂ ಪಣ್ಣಿ ಬಂದಿದೆಕೊ ಬಿಜಯಂಗೈವುದೆಂದು ಮರುಗಿ ||
ಛಾಯೆಗಾಣಸಿ ಸುಮಿತ್ರಾತ್ಮಜಂ ನುಡಿದಬಿ |
ಪ್ರಾಯಮಂ ತಿಳಿಯದತಿ ಸಂಭ್ರಮಾನ್ವಿತೆಯಾದ |
ಳಾಯತಾಂಬಕಿ ತನ್ನಭೀಷ್ವಮಂ ಸಲಿಸುವಂ ಕಾಂತನೆಂಬುತ್ಸವದೊಳೂ ||೬೧||

ಅಂಬುಜಾನನೆ ಬಳಿಕ ಪಯಣಮಂ ನಿಶ್ಚೈಸಿ |
ನಂಬಿದರಭೀಷ್ವಮಂ ಸಲಿಸುವ ಕೃಪಾಳು ತಾ |
ನೆಂಬುದಂ ಕಾಣಿಸಿದನಿಂದೆನ್ನ ಕಾಂತನೆನಗೆಂದು ಕಾಸಲೆಗೆ ಪೇಳ್ದು ||
ಮುಂಬರಿದೊಡಂಬಡಿಸಿ ಬಲವಂದು ಕಾಲ್ಗೆರಗಿ |
ತುಂಬಿದ ಪರಕೆವೆತ್ತು ಕೈಕೆಯಾದೇವಿಗೆ ಶಿ |
ರಂಬಾಗಿ ವರಸುಮಿತ್ರೆಗೆ ನಮಿಸಿ ಸಖಿಯರಂ ಸಂತೈಸಿ ಬೀಳ್ಕೊಂಡಳೂ ||೬೨||

ಮಿಗೆ ತಪೋವನದ ಋಷಿಗಳ್ಗೆ ಮುನಿಪತ್ನಿಯ |
ರ್ಗಗುರು ಚಂದನ ಕುಂಖುಮಾನುಲೇಪನಗಳಂ |
ಬಗೆಬಗೆಯ ದಿವ್ಯಾಂಬರಗಳಂ ವಿವಿಧ ಮಣಿಭೂಷಣಸುವಸ್ತುಗಳನು ||
ತೆಗೆದು ಕಟ್ಟಿಸಿ ರಥದೊಳಿಂಬಿಟ್ಟು ರಾಮನಂ |
ಘ್ರಿಗಳಂ ಚೆಂಬೊನ್ನ ಪಾವುಗೆಗಳಂ ತರಿಸಿಕೊಂ |
ಡೊಗುಮಿಗೆಯ ಹರುಷದೊಳಡರ್ದಳಂಗನೆ ಮಣಿವರೂಥಮಂ ನಿಜಮಿದೆಂದು ||೬೩||

ಅಗ್ರಜಂ ತರಿಸಂದು ತನ್ನೊಳಾಡಿದ ಕಜ್ಜ |
ದುಗ್ರಮಂ ಬನಕೆ ಪೋದಪೆನೆಂಬದೇವಿಯ ಸ |
ಮಗ್ರಸಂತೋಷಮಂ ಕಂಡು ಸೌಮಿತ್ರಿ ಮನದೊಳ್ ಮರುಗಿ ಕಂಬನಿಯನು ||
ನಿಗ್ರಹಿಸಿಕೊಂಡು ಸಾರಥಿಗೆ ಸೂಚನೆಗೈದು |
ವ್ಯಗ್ರದಿಂದೈದಿಸಿದನಾರಥವನಾಗ ದೇ |
ವಗ್ರಾಮ ನಿಲಯ ಲಕ್ಷ್ಮೀಶನುಂಗುಟದೊಳೊಗೆದಮಲಜಾಹ್ನವಿಯ ತಡಿಗೆ ||೬೪||