ಸೂಚನೆ ||
ವಿನಯದಿಂದೈ ತಂದು ಕಾಣಲ್ಕೆ ಬಭ್ರುವಾ |
ಪನನಂ ಜರೆದು ನರಂ ನೂಕಿದೊಡೆ ಬಳಿಕವಂ |
ಕನಲಿ ಪಾರ್ಥನ ಚಾತುರಂಗದೊಳ್ ಕಾದಲ್ಕೆ ಸೇನೆಸಹಿತಿದಿರಾದನು ||

ಭೂಭುಜಲಲಾಮ ಕೇಳಿಂದ್ರತನಯನ ತುರಗ |
ಮಾಭೀಷಣನ ಸೀಮೆಯಂ ಕಳೆದು ಬರೆ ಮುಂದೆ |
ಶೋಭಿಸಿತು ವರ್ಷಾಗಮಂ ಧರೆಯ ಬೇಸಗೆಯ ಬೇಸರಂ ತವೆ ತವಿಸುತೆ ||
ಲಾಭಿಸುವ ಚಾತಕಪ್ರೀತಿಯಂ ಕಂಡಸೂ |
ಯಾಭರವನಂಚೆಗಳ್ ತಾಳಲಾರದೆ ಘನ |
ಕ್ಷೆಭದಿಂದೋಡಿದುಪು ಪರರ ಸಿರಿಯಂ ಸೈರಿಸರು ವಿಜಾತಿಯ ಜನರೆನೆ ||೧||

ಎದ್ದುವು ಮುಗಿಲ್ಗಳೆಣ್ದೆಸೆಗಳೊಳ್ ತರತರದೊ |
ಳಿದ್ದುವು ಗಿರಿಗಳಂತೆ ಮಿಂಚಿದವು ದಿಗ್ವಧುಗ |
ಳುದ್ದಂಡದಿಂದೆ ಪರ್ಜನ್ಯನಂ ಸೆಣಸಿ ನೋಡುವಚಲಾಪಾಂಗದಂತೆ ||
ಸದ್ದಾತೃವಾಗಿ ತನ್ನವೊಲಿರದ ಲೋಭಿಯಂ |
ಗದ್ದಿಸುವ ತೆರದಿಂದೆ ಮೊಳಗಿದುವು ಧರಣಿಯೊಳ್ |
ಬಿದ್ದ ಮುಂಬನಿಯ ಕಂಪಿಗೆ ಸೊಗಸಲಾನೆಗಳ್ ಕೃಷಿಕತತಿ ನಲಿಯಲೊಡನೆ ||೨||

ವರ ನೀಲಕಂಠ ನೃತ್ಯದಿನನಂಧಕಾಸುರ ಸ |
ಮರ ಧರಣೆಯಂ ಕುವಲಯಾನಂದಕರದ ಘನ |
ಪರಿಶೋಭೆಯಿಂದೆ ಚಂದ್ರೋದಯವನಾಲೋಕ ಚಂಚಲೋದ್ಭಾಸದಿಂದೆ ||
ತರುಣಿಯ ಕಟಾಕ್ಷಮಂ ರಾಜಹಂಸಪ್ರಭಾ |
ಹರಣದಿಂ ಪರಶುರಾಮಪ್ರತಾಪವನಧಿಕ |
ತರವಾಹಿನೀಘೋಸದಿಂದೆ ನೃಪಯಾತ್ರೆಯಂ ಪೋಲ್ತು ಕಾರೆಸೆದಿರ್ದುದು ||೩||

ಜಾತ ನವ ಶಾಡ್ವಲದ ಸೊಂಪಿಡಿದೆಸೆವ ನೆಲದ |
ಪೂತೆಸೆವ ಜಾಜಿಗಳ ವರಕುಟಜ ರಾಜಿಗಳ |
ಕೇತಕಿಯ ಧೂಳಿಗಳ ಕೆದರುತಿಹ ಗಾಳಿಗಳ ಲಸದಿಂದ್ರಗೋಪಚಯದ ||
ಕಾತೆಳೆಯ ಮಾವುಗಳ ಬನಬನದ ಠಾವುಗಳ |
ನೂತನ ಸುವಾರಿಗಳ ನಡೆಗುಡದ ದಾರಿಗಳ |
ಭೂತಳದ ಸಿರಿ ಮೆರೆಯ ಮುಗಿಲೈದು ಮಳೆಗರೆಯೆ ವರ್ಷತು ಚೆಲ್ವಾದುದು ||೪||

ತುಂಗ ನವಚಿತ್ರ ಮಯ ಸುಪ್ರಭಾಸುರ ಕಾರ್ಮು |
ಕಂಗಳಿಂ ಸುರಕಾರ್ಮುಕಂಗಳಂ ವಿವಿಧ ವಾ |
ದ್ಯಂಗಳ ಗಭೀರ ಘನ ಘೋಷಂಗಳಿಂದೆ ಘನಘೋಷಂಗಳಂ ನೆಗಳ್ದ ||
ಸಂಗತ ನೃಪಾಲ ವಾಹಿನಿಗಳಿಂ ವಾಹಿನಿಗ |
ಳಂಗೆಲ್ದು ವೀರಪಾಂಡವ ಸೈನ್ಯಸಾಗರಂ |
ಕಂಗೊಳಿಪ ಕಾರ್ಗಾಲದಂತೆಸೆಯೆ ವಾಜಿ ಮಣಿಪುರಕಾಗಿ ನಡೆತಂದುದು ||೫||

ಕ್ಷೆಣೀಂದ್ರ ಕೇಳರ್ಜುನನ ಕಣ್ಗೆ ಮಣಿಪುರಂ |
ಕಾಣಿಸಿತು ಕನಕರಜತದ ಕೋಂಟೆ ಕೊತ್ತಳದ |
ಮಾಣಿಕದ ವಜ್ರವೈಡೂರ‍್ಯ ಗೋಮೇಧಿಕದ ಮುಗಿಲಟ್ಟಳೆಯ ಸಾಲ್ಗಳ ||
ಶೋಣಪ್ರವಾಳ ತೋರಣದ ಸೂಸಕದ ಕ |
ಟ್ಟಾಣಿ ಮುತ್ತುಗಳ ಲೋವೆಗಳ ಗೋಪುರದ ಬಿ |
ನ್ನಾಣದ ಸುಚಿತ್ರ ಪತ್ರದ ಕುಸುಕದೆಸಕದಿಂ ಮೆರೆವ ಬಾಗಿಲ್ಗಳಿಂದೆ ||೬||

ಪಗಲ ದೆಸೆಗಳುಕಿ ಪರೆದಿರ್ದ ಬೆಳ್ದಿಂಗಳೀ |
ನಗರಮಂ ಪೊಕ್ಕು ವೆಂಟಣಿಸಿ ಮಾರ್ಮಲೆತಿರಲ್ |
ಮಿಗೆ ಮೋಹರಿಸಿ ಬಂದು ಮುತ್ತಿಗೆಯ ನಿಕ್ಕಿಕೊಂಡಿರ್ಪೆಳವಿಲ್ಗಳೆನಲು ||
ಗಗನವನಡರ್ದ ಸೌಧಂಗಳ ಮರೀಚಿಯಿಂ |
ಪೊಗರುಗುವ ಪೊಚ್ಚೆಪೊಸಪೊನ್ನ ಕೋಂಟೆಗಳ ಕಾಂ |
ತಿಗಳೈದೆ ಮುಸುಕಿಕೊಂಡೆಸೆದಿರ್ದುವರ್ಜುನನ ಕಣ್ಗೆ ಕೌತುಕಮಾಗಲು ||೭||

ಮೇರುಗಿರಿಯಂ ಜರೆವ ಕಾಂಚನದ ಗೋಪುರಂ |
ತೋರುಮೊಲೆ ರಾಜಮಾರ್ಗಂ ಬಾಹುಲತೆ ನೃಪಾ |
ಗಾರಂ ಮುಖಾಂಬುಜಂ ಚಿತ್ರಿತಪತಾಕೆಗಳ್ ಚಲಿಸುವಳಕಾವಳಿಗಳು ||
ತೋರಣಂ ಮಣಿಹಾರಮೆಸೆವ ಕೋಟಾವಲಯ |
ಮಾರಾಜಿಪಂಬರಂ ಪರಿಖೆ ಮೇಖಲೆ ಗೃಹಸು |
ಧಾರೋಚಿ ದರಹಾಸಮಾಗಲಾ ನಗರಿ ಚಿಲ್ವಿನ ನಾರಿಯಂತಿರ್ದುದು ||೮||

ಕೋಟೆಗಾವಲ ಭಟರ ವಿವಿಧಾಯುಧಂಗಳ ಕ |
ವಾಟರಕ್ಷೆಯ ಬಲದ ಸನ್ನಾಹಸಾಧನದ |
ಕೂಟದತಿಭೀಕರದ ದುರ್ಗದಭೀಮಾನದೇವತೆ ಸಕಲಭೂವಲಯಕೆ ||
ವಿಟೆನಿಸುವಾತನೀ ವೊಳಲಾಣ್ಮನೋರ್ವನೆ ಸ |
ಘಾಟಿಕೆಯೊಳೆಂದು ಬೆರಲೆತ್ತಿ ತೋರಿಸುವಂತೆ |
ನೋಟಕರ ಕಣ್ಗೆ ಕಾಣಿಸಿದುವೆಣ್ದೆಸೆಯ ಡೆಂಕಣಿಯ ಪಳವಿಗೆಗಯ್ಗಳು ||೯||

ತಂಡತಂಡದೊಳಾ ಪೊಳಲ ಪುಗುವ ಪೊರಮಡುವ |
ಶುಂಡಾಲ ವಾಜಿಗಳ ಪುರಜನದ ಪರಿಜನದ |
ಮಂಡಲಾಧಿಪರೆನಿಪ ಹಂಸಧ್ವಜಾದಿ ಭೂಭುಜರನುದಿನಂ ತಪ್ಪದೆ ||
ಕೊಂಡುಬಂದೀವ ಕಟ್ಟಳೆಯ ಕಪ್ಪದ ಪೊನ್ನ |
ಬಂಡಿಗಳ ಸಾಸಿರದ ಸಂದಣಿಯ ಕಾಣಬಹ |
ಕಂಡು ಮರುಳುವ ಮನ್ನೆಯರ ಮಹಾವಿಭವಂಗಳೆಸೆದುವಾ ಪುರದ ಪೊರೆಗೆ ||೧೦||

ನೆಟ್ಟನೆ ಹಯಂ ಪೋಗಿ ವಹಿಲದಿಂ ಪೊಕ್ಕುದಾ |
ಪಟ್ಟನವನದರೊಡನೆ ನಡೆತಂದು ಪಾಳೆಯಂ |
ಬಿಟ್ಟುದು ಪುರೋದ್ಯಾನವಿಧಿಗಳೊಳರ್ಜುನಂ ನಗರಮಂ ನೋಡಿ ನಗುತೆ ||
ಕಟ್ಟೆಸಕದಿಂದೆ ಕಂಗೊಳಿಸುತಿದೆ ಪೊಳಲಿದಂ |
ಮುಟ್ಟಿ ಪಾಲಿಪ ವೀರನಾರವಂ ಕುದುರೆಯಂ |
ಕಟ್ಟುವನೆ ಪೇಳೆಂದು ಹಂಸಧ್ವಜಕ್ಷಿತಿಪನಂ ಕೇಳ್ದೊಡಿಂತೆಂದನು ||೧೧||

ನೀನರಿದುದಿಲ್ಲಲಾ ಪಾರ್ಥ ಮಣೀಪುರಮೆಂಬ |
ರೀನಗರಮಂ ಭಭ್ರುವಾಹನಂ ಪ್ರಖ್ಯಾತ |
ಭೂನಾಥನಿಲ್ಲಿಗರಸವನಿಪರೊಳಗ್ಗಳೆಯನಿವನ ಸಿದ್ಧಾಯಕಾಗಿ ||
ಏನೆಂಬೆನೊಂದು ಸಾಸಿರ ಬಂಡಿ ಕನಕಮಂ |
ನ್ಯೂನಮಿಲ್ಲದೆ ತೆತ್ತು ಬಹೆವು ನಾವೆಲ್ಲರುಂ |
ಹೀನಮಾದೊಡೆ ದಮಡಿಸುವನೆಂಬ ಭೀತಿಯಿಂ ಪ್ರತಿದಿನದೊಳಂ ತಪ್ಪದೆ ||೧೨||

ಈತಂಗೆ ಸಚಿವಂ ಸುಬುದ್ದಿಯೆಂಬವನೋರ್ವ |
ನಾತನೇ ಪಾಲಿಸುವನಿವನ ಭೂತಳಮಂ ನಿ |
ಜಾತಿಶಯ ಧರ್ಮದಿಂದೆಳ್ಳನಿತು ದೋಷಮಿಲ್ಲದೆ ಸಾವಧಾನವಾಗಿ ||
ನೀತಿಪಥಮಂ ಬಿಡದೆ ವಿವಿಧವರ್ಣಾಶ್ರಮದ |
ಜಾತಿಭೇದವನರಿದು ಸಂತತಂ ಪ್ರಜೆಗಳಂ |
ಪ್ರೀತಿಯಿಂ ಪೊರೆದು ಪರಿಜನಕೆ ಪದುಳಿಗನಾಗಿ ಭೂಪನಂ ಪೋಷಿಸುವನು ||೧೩||

ಒಂದು ಕೊಡಕೆಯ ಕಪ್ಪಿನಿಂದೆಸೆವ ತೇಜಿಗಳ್ |
ಕುಂದೇಂದುಧವಳಾಂಗದಾನೆಗಳ್ ಮಣಿಮಯದ |
ಪೊಂದೇರ್ಗಳಿನಿತೆಂದರಿಯರಿವನ ಕರಣಿಕರ್ ಮಿಕ್ಕ ರಥ ಘಟೆಗಳ ||
ಮಂದಿ ಕುದುರೆಯ ಪವಣನರಿವರಾರ್ ಭೂಪಾಲ |
ವೃಂದದೊಳ್ ಪಡಿಯುಂಟೆ ಬಭ್ರುವಾಹಂಗೆ ಕಡು |
ಪೊಂದಿದತಿಶಯವೀರನೀ ತುರಗಮಂ ಕಟ್ಟದಿರ್ದಪನೆ ಪೇಳೆಂದನು ||೧೪||

ಈ ಪುರದೊಳಿರ್ಪಮಾನವರೆಲ್ಲರಂ ಸದಾ |
ಶ್ರೀಪತಿಯ ಭಜನೆಯಲ್ಲದೆ ಪೆರತರಿಯರತಿದೆ |
ಯಾಪರರ್ ವೇದಾರ್ಥಕೋವಿದರ್ ಸತ್ಯವ್ರತಾಚಾರಸಂಪನ್ನರು ||
ಕೋಪವರ್ಜಿತರಹಿಂಸಾಮತಿಗಳಾತ್ಮಸ್ವ |
ರೂಪಜ್ಞರತಿಬಲರ್ ದಾನಿಗಳ್ ಶುಚಿಗಳ್ ಪ್ರ |
ತಾಪಿಗಳ್ ವೀರರ್ಕಳತಿಪುಣರನಸೂಯರಸ್ತ್ರಶಸ್ತ್ರಪ್ರೌಢರು ||೧೫||

ಯೋಗಿಜನದಂತೆ ಮುಕ್ತಾಹಾರದಿಂ ಪೂಜ್ಯ |
ಮಾಗಿಹುದು ಪಾತಾಳನಿಳಯದಂತಾವಗಂ |
ಭೋಗಿಪವಿಲಾಸಮಂ ತಳೆದಿಹುದು ಸಂತತಂ ಗಾಂಧರ್ವಶಾಸ್ತ್ರದಂತೆ ||
ರಾಗಾನುಬಂಧ ಮೋಹನ ಮಧೂರತಾಲಂಬ |
ಮಾಗಿಹುದು ಪಾರ್ಥ ಕೇಳೀಪುರದ ಸಕಲ ನಾ |
ರೀಗಣಂ ಮೇಣಂತುಮಲ್ಲದೆ ಪತಿವ್ರತಾಶೀಲಮಂ ತಾಳ್ದೆಸೆವುದು ||೧೬||

ಇಲ್ಲಿ ಪುರುಷಸ್ತ್ರೀಯರೋರ್ವರುಂ ಪಾತಕಿಗ |
ಳಲ್ಲದಿಹ ಕಾರಣಂ ಸಾನ್ನಿಧ್ಯದಿಂ ರಮಾ |
ವಲ್ಲಭಂ ಪೊರೆವನೀ ನಗರಮಂ ತನಗಿದೆರಡನೆಯ ವೈಕುಂಠಮೆಂದು ||
ನಿಲ್ಲದೆ ತುರಂಗಮಂ ಪೋಗಿ ಪೊಕ್ಕುದು ಬಿಡಿಸ |
ಬಲ್ಲರಂ ಕಾಣೆನಾಂ ಫಲಗುಣ ಮುರಾಂತಕನ |
ಮೆಲ್ಲಡಿದು ಕರುಣಮೆಂತಿಹುದೆಂದರಿಯೆನೆಂದನಾ ಹಂಸಕೇತು ನೃಪನು ||೧೭||

ಭೂಲೋಲ ಕೇಳ್ ಮರಾಳಧ್ವಜನ ಮಾತನಿಂ |
ತಾಲಿಸುವ ಪಾರ್ಥನ ಕರೀಟಾಗ್ರದೊಳ್ ಬಂದು |
ಕಾಲೂರಿ ನಿಂದಿರ್ದುದೊಂದು ಪರ್ದೇನೆಂಬೆನುತ್ಪಾತದದ್ಭುತವನು ||
ನೀಲಧ್ವಜಾದಿ ನೃಪರೆಲ್ಲರುಂ ತಮತಮಗೆ |
ಮೇಲಣಪಜಯಸೂಚನೆಯಲಾ ನರಂಗಕಟ |
ಕಾಲಗತಿಯೆಂತಿಹುದೊ ಶಿವಶಿವಾಯೆನುತೆ ಮನವಳುಕಿ ಚಿಂತಿಸುತಿರ್ದರು ||೧೮||

ಇತ್ತಲೀ ತೆರದೊಳಿರುತಿರಲತ್ತಲಾ ಪುರದೊ |
ಳುತ್ತಮಹಯಾಗಮವನೊಡನೆ ಬಂದಿಹ ನೃಪರ |
ವೃತ್ತಾಂತಮಂ ಬಭ್ರುವಾಹನಂ ಕೇಳ್ದು ಭಟರಂ ಕಳುಹಿ ತೊಳತೊಳಗುವ ||
ಮುತುಗಳ ಮಾಲೆಯಿಂ ಕನಕದಾಭರಣದಿಂ |
ಬಿತ್ತರದ ಗಮಧಮಾಲಾಕ್ಷತೆಗಳಿಂ ಪೂಜೆ |
ವೆತ್ತೆಸೆವ ತುರಗಮಂ ತರಿಸಿ ಕಟ್ಟಿದನೋದಿಕೊಂಡು ಪಟ್ಟದ ಲಿಪಿಯನು ||೧೯||

ಅರಸ ಕೇಳಾದುದನಿತರೊಳಸ್ತಮಯ ಸಮಯ |
ಮರವಿಂದದಲರ್ಗಳೊಳ್ ಸೆರೆಯಾದುವಾರಡಿಗ |
ಳಿರದೆ ಸರಿಚುವು ಬಿಸಿಲ ಬೀಡುಗಳ್ ಗೂಡುಗೊಂಡವು ಕೂಡೆ ಪಕ್ಷಿಜಾತಿ ||
ಪಿರಿದೆನಿಪ ಕತ್ತಲೆಯ ರಾಶಿಯಂ ಪೊತ್ತಿಕೊಂ |
ಡುರಿವ ಬೆಂಕಿಯ ಕಡೆಯೊಳುಳಿದ ಕೆಂಗೆಂಡಮೆನೆ |
ತರುಣಿಮಂಡಲಮೆಸೆದುದಪರದಿಗ್ಭಾಗದೊಳ್ ಕೊರಗಿದುವು ಕೋಕಂಗಳು ||೨೦||

ವಿಳಸಿತಾಂಬರ ಮಣಿ ವಿಭೂಸಣವನುಳಿದು ಮಂ |
ಗಳರಾಗಮಂ ತಾಳ್ದು ತಾರಾಭರಣವನಾಂ |
ತಳೊ ಸಂಜೆವೆಣ್ಣೆಂಬ ತೆರದಿಂದೆ ಕೆಂಪಿಡಿದುಡುಗಳೆಸೆದುವಾಗದೊಳು ||
ನಳಿನಾಳಿ ನಾಳಿನಳಿಕುಲಕಿರಲಿ ಸರಸ ಪರಿ |
ಮಳಸಾರ ಮಧುವೆಂದು ಬಾಗಿಲ್ಗಳಂ ಪೂಡಿ |
ಕೊಳುತಿರ್ಪುವೆಂಬಂತೆ ಮುಗಿಯುತಿರ್ದುವು ಕೂಡೆ ತೀವಿದುವು ಕತ್ತಲೆಗಳು ||೨೧||

ಏನೆಂಬೆನರ್ಜುನನ ಕಟಕಮಿರ್ದುದು ಮಹಾಂ |
ಭೋನಿಧಿಯ ಮಸಕದಿಂ ಪೊಳಲು ಪೊರವಳಹುದು |
ದ್ಯಾನವೀಧಿಗಳೊಳತ್ತಲ್ ಬಭ್ರುವಾಹನಂ ನಗರದೊಳೆಣೆಕೆಗೊಳ್ಳದೆ ||
ತಾನಮಲ ಸಂಧ್ಯಾವಿಧಿಗಳನಾಚರಿಸಿ ಸು |
ಮ್ಮಾನದಿಂ ಪತ್ತುಸಾಸಿರ ಕಂಭದೆಸಕದಾ |
ಸ್ಥಾನಮಂಟಪಕೆ ಬಂದೋಲಗಂಗೊಟ್ಟನತಿಸಂಭ್ರಮದೊಳಂದಿನಿರುಳು ||೨೨||

ಪಳುಕುಗಳ ನೆಲಗಟ್ಟು ಮರಕತಂಗಳ ಜಗಲಿ |
ಪೊಳೆವ ನೀಲದ ಭಿತ್ತಿ ಬಜ್ಜರದ ಕಂಭಮುರೆ |
ತೊಳೆಪ ವೈಡೂರಿಯದ ಮದನಕೈ ಮಿರುಪ ಗೋಮೇಧಿಕದ ಬೋದಿಗೆಗಳು ||
ಸಲೆ ಪುಷ್ಯರಾಗದ ತೊಲೆಗಳೆಸೆವಮಾಣಿಕಂ |
ಗಳ ಲೋವೆ ಮುತ್ತುಗಳ ಸೂಪಕಂ ಮುಸುಪಾ ಪ |
ವಳದ ಪುತ್ತಳಿ ಪೊನ್ನ ಪೊದಕೆ ರಂಜಿಸಿತು ಚಾವಡಿಯ ಚೌರಸದೆಡೆಯೊಳು ||೨೩||

ಸಜ್ಜುಕಂ ಮುಡಿವ ತಿಲಕಮನಿಡುವ ಮೊಗಮುರಿದ |
ಕಜ್ಜಳಂಬರೆವ ಕನ್ನಡಿಯ ನಿಟ್ಟಿಪ ಪಾಡು |
ವುಜ್ಜುಗದ ನರ್ತನದ ಕೋಪುಗಳ ವೀಣಾದಿವಾದ್ಯಮಂ ಬಿತ್ತರಿಸುವ ||
ಕಜ್ಜದ ಪಲವುಕಲೆಗಳಂ ತೋರುವಭಿನವದ |
ಸಜ್ಜೀವಮಾಗಿರ್ದು ಪುತ್ತಳಿಗಳವಯವದ |
ಪಜ್ಜಳಿಪ ನವರತ್ನಭೂಷಣದ ಕಾಂತಿಗಳ್ ಕಣ್ಗೆಸೆದುವಾ ಸಭೆಯೊಳು ||೨೪||

ಅಂಚೆಗಳ್ ಕೊಳರ್ವಕ್ಕಿಗಳ್ ಜೊನ್ನವಕ್ಕಿಗಳ್ |
ಪಿಂಚೆಗಳ್ ಗಿಳಿಗಳೆಣೆವಕ್ಕಿಗಳ್ ಪರಮೆಗಳ್ |
ಕೊಂಚೆಗಳ್ ಕೋಗಿಲೆಗಳಲ್ಲಲ್ಲಿಗೊಪ್ಪಿದುವು ಸಜ್ಜೀವಭಾವದಿಂದೆ ||
ಪಂಚಾನನಾದಿ ಮೃಗತತಿ ಗಜಹಯಾವಳಿ ವಿ |
ರಿಂಚಿಸೃಷ್ಟಿಯೊಳುಳ್ಳ ಮೂಜಗದ ನಾನಾಪ್ರ |
ಪಂಚುಗಳ ಚಿತ್ರಪತ್ರಂಗಳೆಸೆದಿರ್ದುವಾ ಸಭೆಯೊಳ್ ಮನೋಹರಮೆನೆ ||೨೫||

ನೀಲಮಣೀಕಾಂತಿಗಳ ಕತ್ತಲೆಯ ಮುತ್ತಗಳ |
ಡಾಳಗಳ ಕೌಮುದಿಯ ಮಾಣೀಕದ ರಶ್ಮಿಗಳ |
ಬಾಲಾತಪದ ಮಿದ್ರುಮಚ್ಛವಿಯ ಸಂಜೆಗೆಂಪಿನ ಪಗಲಿರುಳ್ಗಳಲ್ಲಿ ||
ತೇಲದಿಹುವಲ್ಲದೆ ದಿವಾರಾತ್ರಿಯುಂಟೆಂಬ |
ಕಾಲಭೇದವನರಿಯದಾ ಮಹಾಸಭೆ ಸುರಪ |
ನೋಲಗದ ಮಂಟಪದ ಸೌಭಾಗ್ಯಕೆಂಟುಮಡಿಯಾಗಿರ್ದುದಚ್ಚರಿಯೆನೆ ||೨೬||

ಕಸ್ತುರಿ ಜವಾಜಿಗಳ ಸಾರಣೆಯ ಕುಂಕುಮ ಪ |
ರಿಸ್ತರಣದಗುರು ಚಂದನ ಧೂಪ ವಾಸಿತದ |
ವಿಸ್ತರದ ಕರ್ಪೂರತೈಲದಿಂದಲ್ಲಲ್ಲಿಗುರಿವ ಬೊಂಬಾಳಂಗಳ ||
ಶಸ್ತರತ್ನ ಪ್ರದೀಪ ಜ್ವಾಲೆಗಳ ಸಭೆ ಸ |
ಮಸ್ತ ಸೌಭಾಗ್ಯದಿಂದೊಪ್ಪುತಿರಲಾಗ ಭೂ |
ಪಸ್ತೋಮಸಹಿತ ಬಂದಾ ಭಭ್ರುವಾಹನಂ ಕುಳ್ಳಿರ್ದನೋಲಗದೊಳು ||೨೮||

ಓಲಗಕೆ ಬಂದ ನೃಪಕೋಟಿ ಕೋಟೀರ ಪ್ರ |
ಭಾಲಹರಿ ಹರಿದು ಮುಸುಕಿತು ತತ್ಸಭಾವಣಿ |
ಜ್ವಾಲೆಗಳ ನಿಕರಮಂ ಕರಮಂ ಮುಗಿವ ಭಟರ ಸಂಘಸಂಘರ್ಷಣದೊಳು ||
ತೇಲಿ ಕಡಿಕಿದ ಕಂಠಮಾಲೆಗಳ ಗಳಿತಮು |
ಕ್ತಾಳಿಗಳಗಲಕೆ ಪರಿದೆಸೆವ ಮುತ್ತಿನ ರಂಗ |
ವಾಲಿಗಳನಿಕ್ಕಿದರು ದರ್ಶನೋತ್ಸವಕೆಂಬ ತೆರನಾದುದಾ ಸ್ಥಳದೊಳು ||೨೮||

ವಿಭ್ರಾಜಿಸುವ ರಾಜಮಂಡಲದಿರವನೆ ಕಂ |
ಡಭ್ರದಲ್ಲಿಯ ರಾಜಮಂಡಲಂ ತನಗಿನ್ನು |
ವಿಭ್ರಮದ ವೃತ್ತಮೇಕೆಂದು ಲಜ್ಜಿಸಿ ನೀಳ್ದಚ ತೆರದಿಂದೆ ಕಂಗೊಳಿಸುವ ||
ಶುಭ್ರಚಾಮರಮಂ ನಿಮಿರ್ದು ಚಿಮ್ಮಿಸಿದರ್ |
ಲಭ್ರಮರಕುಂತಲದ ಕಮಲದಳನೇತ್ರೆಯರ್ |
ಬಭ್ರುವಾಹನ ಮಹೀಪಾಲಕನ ಕೆಲಬಲದೊಳಂದಿನಿರುಳೋಲಗದೊಳು ||೨೯||

ಬಳಿಕಾ ಮಹಾಸ್ಥಾನದೊಳ್ ಬಭ್ರುವಾಹನಂ |
ನಲವಿಂದೆ ಕುಳ್ಳಿರ್ದು ನಗುತೆ ಪರಮಂಡಲ |
ಸ್ಥಳದಿಂದೆ ಬಂದ ರಾಯರ ಯಜ್ಞತುರಗಮಂ ಕಟ್ಟಿಕೊಂಡೆವು ಮನೆಯೊಳು ||
ಕೊಳುಗುಳಕೆ ಮಿಡುಕುವರ್ ನಾಳೆ ನಾವಿನ್ನು ಹಿಂ |
ದುಳಿಯಬಾರದು ಕದನಕನುವಾಗಿರಲಿ ಪಾಯ |
ದಳಮೆಂದು ನುಡಿದಂ ಸುಬುದ್ಧಿಮೊದಲಾಗಿಹ ಶಿರಃಪ್ರಧಾನಿಗಳ ಕೂಡೆ ||೩೦||

ಇಂತಿಲ್ಲಿ ನಡೆದಖಿಲವೃತ್ತಾತಮಂ ಕೇಳ್ದ |
ಳಂತಃಪುರದೊಳರ್ಜುನನ ಗುಣಾವಳಿಗಳಂ |
ಸಂತತಂ ನೆನೆದು ಚಿಂತಿಪ ಬಭ್ರಯವಾಹನನ ನಿಜಮಾತೆ ಚಿತ್ರಾಂಗದೆ ||
ಸಂತೋಷಮಂ ತಾಳ್ದು ತನಯನೋಲಗಕೆ ಭರ |
ದಿಂ ತಳರ್ದಿರೇಳ್ವ ಕುವರನಂ ತೆಗೆದಪ್ಪಿ |
ಕುಂತೀಸುತನ ವಾಜಿಯಂ ಕಟ್ಟಿದೈ ಮಗನೆ ಲೇಸುಮಾಡಿದೆ ಯೆಂದಳು ||೩೧||

ಕ್ಷುದ್ರಬುದ್ದಿಯನೆಲ್ಲಿ ಕಲಿತೆ ನೀನೀಪರಿ ಗು |
ರುದ್ರೋಹಕೆಂತು ತೊಡರ್ದುದು ನಿನ್ನ ಮನಮಕಟ |
ಮದ್ರಮಣನಾಗಮಂ ನಿನಗೆ ವಿರಹಿತಮಾದುದಾತನುದರದೊಳೆ ಜನಿಸಿ ||
ಉದ್ರೇಕದಿಂದೆ ಕಟ್ಟಿದೆಯಲಾ ತುರಗಮಂ |
ಭದ್ರಮಾದುದು ರಾಜಕಾರ‍್ಯಮೀಂದಮೃತಕೆ ಸ |
ಮುದ್ರಮಂ ಮಥಿಸೆ ವಿಷಮುದಿಸಿದವೊಲಾಯ್ತು ನಿನ್ನುದ್ಭವಂ ತನಗೆಂದಳು ||೩೨||

ಮಾತೆಯ ನುಡಿಗೆ ನಡುನಡುಗಿ ಬಭ್ರುವಾಹನಂ |
ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ |
ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ |
ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ |
ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳ್ಪೆ |
ನೇತಕಾತುರಮೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿಸಿದಳು ||೩೩||

ಮಗನೆ ಕೇಳೆನ್ನನೆಂದರ್ಜುನಂ ಬಿಟ್ಟು ನಿಜ |
ನಗರಿಗೈದಿದನಂದು ಮೊದಲಾಗಿ ತಾನವನ |
ನಗಲ್ದ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಂದೆ ಬಂದನಿಂದು ||
ಬಗೆಯದಿರ್ದಪೆನೆಂತು ಕಾಂತನಂ ನೀನಿಂದು |
ಮೊಗದೋರಿ ನಿನ್ನ ಸರ್ವಸ್ವಮಂ ತಾತನಂ |
ಘ್ರಿಗೆ ಸಮಪಿಶಿದೊಟಾಂ ಮಾಡಿದ ತಪೋನಿಷ್ಠೆ ಸಫಲಮಾದಪುದೆಂದಳು ||೩೪||

ಕಂದ ನೀನಿಂದು ನಿನ್ನಖಿಳಿ ಪ್ರಕೃತಿಗಳಂ |
ತಂದೆಗೊಪ್ಪಿಸಿ ಯುದಿಷ್ಠಿರನೃಪನ ವೈರಿಗಳ |
ಮುಂದೆ ತೋರಿಸು ನಿನ್ನ ಶೌರ‍್ಯಮಂ ತನುಧನಪ್ರಾಂಗಳವರದಾಗೆ ||
ನಿಂದೆಗೊಳಗಾಗದಿರ್ ದುಷ್ಟಸಂತಾನದಂ |
ತೊಂದಿಸದಿರತಿಯಂ ತನ್ನ ಪಾತಿವ್ರತ್ಯ |
ಕೆಂದು ಸೂನುಗೆ ಬುದ್ಧಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ ||೩೫||

ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ |
ಹನನಾ ಸುಬುದ್ಧಿಯಂ ನೋಡಿ ಪಿತನಂ ಕಾಣ್ಬು |
ದನುಚಿತವೊ ಮೇಣುಚಿತಮಾದಪುದೊ ಪೇಳೀದರ ನಿಶ್ಚಯವನೀಗಲೇನಲು ||
ನಿನಗೆಣೀಕೆ ಬೇಡ ಮೊದಲರಿಯದಾದಿವು ಧರ್ಮ |
ತನಯಂಗೆ ನಿಮ್ಮಯ್ಯನನುಜನಾತನ ರಕ್ಷೆ |
ವಿನುತಹಯಕದನಿನ್ನು ಕಲಿತನದೆ ಕಟ್ಟುವುದು ನೀತಿಪಥಮಲ್ಲೆಂದನು ||೩೬||

ಇನ್ನು ಕಟ್ಟಿಸು ಗುಡಿಗಳಂ ಬೇಗ ಪಟ್ಟಣಕೆ |
ನಿನ್ನಖಿಳ ರಾಜ್ಯಪದವಿಯನೊಪ್ಪಿಸಯ್ಯಂಗೆ |
ಮನ್ನೆಯರ್ ಚಾತುರಂಗದ ಸೇನೆ ನಾಗರಿಜನಮಲಂಕರಿಸಿಕೊಳಲಿ ||
ಕನ್ನೆಯರ್ ರಾಜ ದಧಿ ದೂರ್ವಾಕ್ಷತೆಗಳಿಂದೆ |
ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ |
ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ಧಿ ||೩೭||

ವರಸುಬುದ್ಧಿಯ ಬುದ್ಧಿಯಂ ಕೇಳ್ದನಾ ಪಾರ್ಥಿ |
ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ |
ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನು ||
ತರಿಸಿದಂ ಕನಕಪೂರಿತ ಶಕಟನಿಕರಮಂ |
ತರುಣಿ ಗೋಮಹಿಷಿ ಮದ ಕುಂಜರ ಕುಲಾಶ್ವಮಣಿ |
ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು ||೩೮||

ನವ್ಯಚಿತ್ರಾಂಬರಾಭರಣಂಗಳಂ ವಿವಿಧ |
ದಿವ್ಯರತ್ನಂಗಳಂ ಪರಿಪರಿಯ ಪರಿಮಳ |
ದ್ರವ್ಯಂಗಳಂ ಕನಕ ಖಟ್ವ ನುತಹಂಸತೂಲದ ಮೃದುಲ ತಲ್ವಗಳನು ||
ಸುವ್ಯಜನ ಚಾಮರ ಸಿತಾತಪ್ತರಂಗಳಂ |
ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ |
ರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನು ||೩೯||

ಸ್ವರಗೈದುದನಿತರೊಳ್ ಚರನಾಯುದಂ ಜಾರೆ |
ಯರ ಮನಂ ಬೆಚ್ಚಿದುದು ಮೂಡದೆಸೆ ಬೆಳತುದು ಪ |
ಸರಿದುದು ತಂಗಾಳಿ ಖಗನಿಕರಮುಲಿದೆದ್ದು ವರಳಿದುವು ತಾವರೆಗಳು ||
ಮೊರೆದುದಾರಡಿ ನೆರೆದುವೆಣೆಕ್ಕಿ ತಾರೆಗಳ್ |
ಪರಿದುವಿಡಿದಿರ್ದ ಕತ್ತಲೆ ತೊಲಗಿತುತ್ಪಲಂ |
ಕೊರಗಿದುದು ಜನದ ಕಣ್ಣೆವೆದೆರೆದುದೊದರಿದುವು ದೇಗುಲರ ವಾದ್ಯಂಗಳು ||೪೦||

ಅರಳ್ದ ಶೋಣಾಂಬುಜಚ್ಚಾಯೆಗಳಡರ್ದುವೆನೆ |
ಭರದಿಂದೆ ಕತ್ತಲೆಯ ಮೇಲೆ ಬಹ ರವಿಯ ರಥ |
ತುರಗ ಖುರಪುಟದಿಂದ ಮೇಳ್ವ ಕೆಂದುಳ್ಗಳೆನೆ ಪ್ರ್ರಾಚೀ ನಿತಂಬವತಿಗೆ ||
ಸರಸದಿಂ ತರಣಿಯೊಳ್ ನೆರೆವ ಸಮಯದೊಳಾದ |
ಕರರುಹಕ್ಷತದ ಕಿಸುಬಾಸುಳ್ಗಳೆವ ಸವಿ |
ಸ್ತರದ ಸಂಧ್ಯಾರಾಗಮೈದೆ ರಂಜಿಸುತಿರ್ದುದಂದು ಮೂಡಣದೆಸೆಯೊಳು ||೪೧||

ಜಿತತಮಂ ಭುವನಮಧ್ಯಪ್ರಕಾಶಂ ವಿರಾ |
ಜಿತ ವರಾಹ ಶ್ರೀಧರಂ ಪಂಚಮುಖಮೂರ್ತಿ |
ನ ತಕಾಶ್ಯಪಂ ರಾಜತೇಜೋಹರಂ ದೂಷಣಾರಿ ಗೋಕುಲಜಾತನು ||
ಅತಿಕಾಂತಿ ಶೋಭಿತ ದಿಗಂಬರಂ ಕಲಿತಾಪ |
ಹೃತಕುವಲಯಂ ಚಕ್ರಿಯವತಾರದಶಕದು |
ನ್ನತಿಗಳಂ ತಳೆದೆಸೆವ ಡಿನಪನುದಯಂಗೈದನಂದು ಪೂರ್ವಾಚಲದೊಳು ||೪೨||

ಒಂದು ಮಾರ್ಗದೊಳೆ ನಡೆಯದೆ ಸದಾ ದ್ವಿಜನಿಕರ |
ದಂದಮಂ ಕಿಡಿಸಿ ಗುರುಬುಧ ಮಂಗಳೋನ್ನತಿಗೆ |
ಕುಂದನಿತ್ತುದರಿಂದ ಸಾರಥಿ ಹೆಳವನಾದನಾತ್ಮಜಂ ಲೋಕವರಿಯೆ ||
ಮಂದನಾದಂ ನಿನ್ನ ಪತಿಗೆಂದು ಪದ್ಮಿನಿಯ |
ಮುಂದೆ ನಗುವಸಿತೋತ್ಪಲಂಗಳಿನನುದಯದೊಳ್ |
ಕಂದಿದುವು ಪರನಿಂದೆಗೈದರ್ಗೆ ಪರಿಭವಂ ಕಯ್ಯೊಡನೆ ತೋರದಿಹುದೆ ||೪೩||\

ಆದಿತ್ಯನುದಯದೊಳ್ ಫಲುಗುಣನ ಸೂನು ಸಂ |
ಧ್ಯಾದಿಗಳನಾಚರಿಸಿ ವಸ್ತುಗಳನೈದೆ ಸಂ |
ಪಾದಿಸಿ ಕಿರೀಟಿಯಂ ಕಾಣಲನುವಾದರ್ಜುನನಿತ್ತಪಾಳೆಯದೊಳು ||
ಸಾಧಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು |
ಸೂದನನ ಚರಣಮಂ ನೆನೆದು ವೃಷಕೇತು ಮೊದ |
ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ ||೪೪||

ಅನುಸಾಲ್ವಕನ ಸೇನೆ ಯಾದವರ ಚತುರಂಗ |
ಮಿನಸುತನ ಸೂನುವಿನ ಮೋಹರಂ ಯೌವನಾ |
ಶ್ವನ ಪಾಯದಳ ಮತುಲಹಂಸಕೇತುವಿನ ಪಡೆ ನೀಲಧ್ವಜನ ವಾಹಿನಿ |
ದನುಜಾರಿ ನಂದನನ ನೇಮದಿಂ ಸಂಗ್ರಾಮ |
ಕನುವಾಗಿ ಪೊರಮಟ್ಟುದಾಗ ಸನ್ನಾಹದಿಂ |
ಘನವಾದ್ಯ ರಭಸದಿಂದರ್ಜುನಂ ಬಂದುನಿಂದಂ ಮುಂದೆ ದೊರೆಗಳೊಡನೆ ||೪೫||

ಆ ಸಮಯದೊಳ್ ಬಭ್ರುವಾಹನಂ ಪೊರಮಟ್ಟ |
ನಾ ಸುಬುದ್ಧಿ ಪ್ರಮುಖ ಮಂತ್ರಿಗಳ ಗಡಣದಿಂ |
ದಾಸಕಲ ವಸ್ತುಸಹಿತಾ ಕುದುರೆಯಂ ಕೊಂಡು ನಿಖಿಳ ಚತುರಂಗದೊಡನೆ ||
ಬಾಸುರನ ಕಳಸ ಕನ್ನಡಿವಿಡಿದು ನಡೆತಹ ವಿ |
ಲಾಸಿನಿಯರೊಗ್ಗಿನಿಂ ಸಂದಣಿಯ ಪುರಜನದ |
ಭೂಸುರಸ್ತೋಮದಿಂ ಗುಡಿತೋರಣಾಳಿಯ ಸಿಂಗರದ ಪದಪಿನಿಂದೆ ||೪೬||

ಎಲ್ಲಿ ಕೌಂತೇಯನಿರ್ದಪನಲ್ಲಿಗಾಗಿ ನಿಂ |
ದಲ್ಲಿನಿಲ್ಲದೆ ಸಂಭ್ರಮದೊಳೆ ನಡೆತಂದು ಮೈ |
ಭುಲ್ಲವಿಸೆ ಹರ್ಷದಿಂ ಪಾರ್ಥನಂ ಕಂಡು ನಿಜಮೌಳಿಯಂ ತೆಗೆದು ನರನ ||
ಮೆಲ್ಲಡಿಗನರ್ಘ್ಯ ರತ್ನಂಗಳಂ ಸುರಿದು ಕರ |
ಪಲ್ಲವದ್ವಿತಯಮಂ ಮುಗಿದು ಭಯಭಕ್ತಿಯಿಂ |
ಚೆಲ್ಲಿದನೊಡಲನಿಳೆಯೊಳಾ ಬಭ್ರುವಾಹನಂ ನೀಡಿ ಸಾಷ್ಟಾಂಗದಿಂದೆ ||೪೭||

ಅರಸ ಕೇಳಾ ಬಭ್ರುವಾಹನನೊಡನೆ ಬಂದ |
ಪರಿವಾರಮಾ ಪುರಜನಂಗಳಾ ಕಾಮಿನಿಯ |
ರರಳೆ ಮಳೆ ಮುಕ್ತಾಫಲಂಗಳಂ ಸುರಿದರರ್ಜುನನ ಮಸ್ತಕದಮೇಲೆ ||
ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರೊ |
ತ್ತರಿಸಿ ಕಾಣೀಕೆಗೊಂಡು ಬಳಿಕ ವಿಸ್ಮಿತನಾಗಿ |
ನರನೆಲೆ ನೃಪಾಲ ನೀನಾರೆನಲ್ಕವನೆದ್ದು ಕೈಮುಗಿಯುತಿಂತೆಂದನು ||೪೮||

ತಾತ ಚಿತ್ತೈಸು ನಿನ್ನಾತ್ಮಜಂ ತಾನೆನ್ನ |
ಮಾತೆ ಚಿತ್ರಾಂಗದೆ ಸಲಹಿದವಳುಲೂಪಿ ಸಂ |
ಪ್ರೀತಿಯಿಂದಿವರಾದರರಸಿಯರ್ ನೀನಂದು ತೀರ್ಥಯಾತ್ರೆಗೆ ಬಂದಿರೆ ||
ಜಾತನಾದೆಂ ಬಭ್ರುವಾಹನಂ ತಾನೀಗ |
ಳೀತುರಗಮಂ ಪಿಡಿದು ಕಟ್ಟಿ ತಪ್ಪಿದೆ ಗುಣಾ |
ತೀತಮಂ ಕ್ಷಮಿಸೆಂದು ಮಗುಳೆರಗಿದಂ ಪಾರ್ಥ ನಡಿಗವಂ ಭೀತಿಯಿಂದೆ ||೪೯||

ಮಗುಳೆ ಮಗುಳಡಿಗೆರಗಿ ಭಯಭರಿತಭಕ್ತಿಯಿಂ |
ಮಿಗೆ ಬೇಡಿಕೊಳುತೆ ಕಾಲ್ಪಡಿದಿರ್ಪ ತನಯನಂ |
ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ ||
ಬಗೆಯನೀಕ್ಷಿಸಿ ಹಂಸಕೇತು ನೀಲಧ್ವಜಾ |
ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ |
ರಗಿದರತಿ ಕರುಣರಸಬಾವದಿಂದೇನೆಂಬೆನಪಕೃತದ ಸೂಚಕವನು ||೫೦||

ಪ್ರದ್ಯುಮ್ನ ಹಂಸಧ್ವಜಾದಿಗಳ್ ಬಳಿಕಿದೇ |
ನುದ್ಯೋಗಮೆಲೆ ಪಾರ್ಥ ನಿನ್ನ ತನುಭವನೀತ |
ನುದ್ಯತ್ಪರಾಕ್ರಮಿ ಮಹಾವೈಭವಶ್ಲಾಘ್ಯನಭಿಮಾನಿ ಮಾನ್ಯನಿಳೆಗೆ ||
ಖದ್ಯೋತಸನ್ನಿಭಂ ನಿನ್ನ ಹೋಲುಮೆಯ ನಿರ |
ವದ್ಯರೂಪಂ ಪದಾವನತನಾಗಿರ್ದಪಂ |
ಹೃದ್ಯನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸಮ್ಮನಿರ್ದಪೆಯೆಂದರು ||೫೧||

ಭೂಪ ಕೇಳಿವರಿಂತೆನಲ್ಕೆ ಬಳಿಕರ್ಜುನಂ |
ಕೋಪದಿಂದವನ ನಿಟ್ಟಿಸುತೆಂದನಾಗ ತಲೆ |
ಪೋಪುದಕೆ ತನ್ನ ಕಾಲ್ಪೊಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುನೆಲು ||
ಆ ಪುತ್ರನಹ ಬಭ್ರುವಾಹನನೊದೆದೆಲವೊ |
ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ |
ನೀಪರಿಯೊಳಂಜುವನೆ ಮೊದಲಶ್ವಮಂ ಕಟ್ಟಿ ಮತ್ತೆಬಿಡುವನೆ ಕಾದದೆ ||೫೨||

ಚಿತ್ರಾಂಗದೆ ವೈಶ್ಯನಿಂದೆ ಸಂಭವಿಸಿರ್ದ |
ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ |
ಕ್ಷತ್ರಿಯರ ಮತಮಂ ಸುಭದ್ರೆಗೆನ್ನಿಂ ಜನಿಸಿದಭಿಮನ್ಯು ತಾನೋರ್ವನೆ ||
ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ದ |
ರಿತ್ರೀಶನಂ ವಿರಿ ನಡೆದು ಸಮಗ್ರಾಮದೊಳ |
ಮಿತ್ರಭಟರಂ ಗೆಲ್ದಳಿದನಾತನಲ್ಲದಾತ್ಮಜರುಂಟೆ ತನಗೆಂದನು ||೫೩||

ಜಂಬುಕಂ ಜನಿಸುವುದೆ ಸಿಂಗದುದರಕೊಳಕಟ |
ಹೆಂಬೇಡಿ ನೀನೆಲವೊ ಕುಲಗೇಡಿ ತನ್ನ ಬಸಿ |
ರಿಂ ಬಂದವನೆ ಖೂಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ ||
ಡೊಂಬಿನ ಚತುಲಮಿದೇಕೆ ಭೂಪಾಲರಾ |
ಡಂಬರದ ಛತ್ರಚಮರಂಗಳೇತಕೆ ಬಯಲ |
ಡಂಬಕದ ಕೈದುಗಳಿವೇಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು ||೫೪||

ಅಹಹ | ನರ್ತಕಿಯಲಾ ಗಂಧರ್ವನಾಯಕನ |
ದುಹಿತೃವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ |
ವಿಹಿತಮಲ್ಲಿದು ನಿನಗೆ ಭೂಮಿಪರೆ ವೇಷಮಂ ತಳೆದ ನಾಟಕದ ರಚನೆ ||
ಬಹಳ ಫೌರಷಮಾದುದಿಂದು ಹಯಮಂ ತಡೆದ |
ರಹಣಿ ರಾಯರಮುಂದೆ ಹೋಗೆಂದು ದುಷ್ಕೃತಿಯ |
ಕುಹಕದಿಂ ಬೈದು ಭಂಗಿಸಿ ಜರೆದನಾತ್ಮಜನನರ್ಜುನಂ ಕೋಪದಿಂದೆ ||೫೫||

ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ |
ಜರೆದೊಡಾತನ ಬಗೆಯನಾ ಸುಬುದ್ದಿಗೆ ತೋರು |
ತುರೆ ಕನಲ್ದಿರದೆದ್ದು ಪಳಿದೆಲಾ ಮಾತೆಯಂ ನನಗೆ ಸೀವರಿಸಿದೆಯಲಾ ||
ಅರಿಯಬಹುದಿನ್ನು ಕೇಳ್ ನಿನ್ನ ತಲೆಗೆಡಹದೊಡೆ |
ಕುರುಹಿಟ್ಟು ನೀನಾಡಿದಿನಿತೆಲ್ಲಮುಂ ದಿಟಂ |
ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನನಂದು ಕುದುರೆಸಹಿತ ||೫೬||

ತೆಗೆಸಿದಂ ತಮದಖಿಳವಸ್ತುವಂ ಕುದುರೆಯಂ |
ಬಿಗಿಸಿದಂ ಲಾಯದೊಳ್ ಪುರಜನಸ್ತ್ರೀಯರಂ |
ಪುಗಿಸಿದಂ ಪಟ್ಟಣಕೆ ಕರೆಸಿದಂ ಸಚಿವರಂ ಸೇನಾಧಿನಾಯಕರನು ||
ಜಗಿಸಿದಂ ಚತುರಂಗಮಂ ನರಹಿ ಧಾತ್ರಿಯಂ |
ಮಿಗಿಸಿದಂ ವಾದ್ಯರವದಿಂದೆ ಘೋಷಮಂ |
ಮುಗಿಸಿದಂ ತಾವರೆಯನಾ ಬಭ್ರುವಾಹನಂ ಧೂಳ್ಗಳಿನನಂ ಮುಸುಕಲು ||೫೭||

ಕೇಳೆಲೆ ನೃಪಾಳಕುಲತಿಲಕ ಮುಂದದ್ಭುತ ಕ |
ಥಾಳಾಪಮಂ ಬಳಿಕ ಪೂಡಿದುದು ಕರ್ಕಶದ |
ಕಾಳಗಂ ಸವ್ಯಸಾಚಿಗೆ ಬಭ್ರುವಾಹನನ ಕೂಡೆ ಮಹದಾಹವದೊಳು ||
ಹೇಳಲೇನಂದು ಸುರಪಂಗೆ ಪಾರ್ಥನೊಳಾದ |
ಕೋಳಾಹಳದ ಕದನದಂತೆ ಮುನ್ನಧ್ವರದ |
ಬೇಳಂಬದಿಂದೆ ರಾಮಂಗೆ ಕುಶಲವರೊಡನೆ ಬಂದ ಸಂಗ್ರಾಮದಂತೆ ||೫೮||

ಆಲಿಸಿದನಲ್ಲಿ ಪರಿಯಂತ ಜನಮೇಜಯಂ |
ಮೇಲಣ ಕಥೆಯನೊಲ್ದು ಬೆಸಗೊಂಡನೆಲೆ ಮುನಿಪ |
ಹೋಲಿಸಿ ನುಡಿದೆ ಸುರಪಫಲುಗಣರ ಸಮರಮಂ ಕೇಳ್ದೆನದನಾಂ ನಿನ್ನೊಳು ||
ಹೇಳಬೇಹುದು ರಾಘವಂಗೆ ಸುತನೊಡನಾದ |
ಕಾಳಗದ ಸಂಗತಿಯನೆನಗೆಂದೆನಲ್ಕೆ ಭೂ |
ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳೂ ||೫೯||

ಪ್ರೇಮದಿಂದೈದೆ ವಿಸ್ತ್ರರಿಸಿದಂ ನೃಪಕುಲೋ |
ದ್ದಾಮ ಜನಮೇಜಯಂ ಬೆಸಗೊಳಲ್ ಜೈಮಿನಿ ಮ |
ಹಾಮುನೀಂದ್ರಂ ಕೂರ್ತು ಕೇಳ್ವರ್ಗೆ ರೋಮಾಂಚನಂ ಪೂಣ್ಮೆ ಹರುಷಮುಣ್ಮೆ ||
ರಾಮಾವತಾರದೊಳ್ ದೇವಪುರನಿಲಯ ಲ |
ಕ್ಷ್ಮೀಮನೋವಲ್ಲಭಂ ತನ್ನ ಸುತರೊಡನೆ ಸಂ |
ಗ್ರಾಮದೊಳ್ ಕಾದಿದ ಕಥಾಮೃತವನದರ ಕಾರಣಸಹಿತ ತುದಿಮೊದಲ್ಗೆ ||೬೦||