ಸೂಚನೆ ||
ತಣ್ಗ ದಿರನನ್ವಯದ ಪಾರ್ಥನ ತುರಂಗಮದು |
ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ |
ಕಣ್ಗೊಳಿಸುವಮರಾಶ್ವಮಾಗಿ ಯಾಶ್ಚರ‍್ಯದಿಂ ಸ್ತ್ರೀರಾಜ್ಯಮಂ ಪೊಕ್ಕುದು ||

ವಿಸ್ತರಿಪೆನಿನ್ನು ಮೇಲ್ಗತೆಯನಾಲಿಸು ನೃಪರ |
ಮಸ್ತಕದ ಮೌಳಿ ಜನಮೇಜಯ ಧರಾನಾಥ |
ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದೆ ತಂದ ||
ವಸ್ತುಗಳನವನಿಪತಿಗೊಪ್ಪಿಸಿದನಲ್ಲಿಯ ಸ |
ಮಸ್ತವೃತ್ತಾಂತಮಂ ವಿವರಿಸಿದನಿತ್ತ ಸುಭ |
ಟಿಸ್ತೋಮಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ ||೧||

ಅಲ್ಲಿಂದ ಮುಂದೆ ನಡೆದುದು ಗ್ರೀಷ್ಮಕಾಲದೊಳ್ |
ಸಲ್ಲಲಿತವಾಜಿ ಪಾರಿಪ್ಲವಕೆ ಭೂತಲದೊ |
ಳೆಲ್ಲಿಯುಂ ಕೆರೆತೊರೆಗಳೊರತೆ ಬರೆತುವು ನೀರ‍್ನೆಳಲ್ಗಳನರಸಿ ಪಾಂಥರು ||
ಘಲ್ಲಿಸುವ ಬೇಸಗೆಯ ಬಿಸಿಲಿಂದೆ ಮೂಜಗಂ |
ತಲ್ಲಣಿಸಿತಿಳೆಯ ಕಾಹಿಳಿದು ಪಾತಾಳದಹಿ |
ವಲ್ಲಭನ ಪಡೆವಣಿಯ ರುಚಿಗಳಾತಪದಂತೆ ಕಾಣಿಸದೆ ಮಾಣವೆನಲು ||೨||

ಒಂದುಕಡೆಯೆಳ್ ಸೋವಲೊಂದುಕಡೆಯೊಳ್ ತಮಕೆ |
ನಿಂದು ಮರೆಯಾಗಿರ್ಪ್ಪುದಿನ್ನಿದಂ ಕರಗಿಸುವೆ |
ನೆಂದು ಕನಕಾಚಲವನುಚರಿಪುವನೊ ತರಣಿ ಕಿರಣದೊಳೆನೆ ಬಿಸಲ್ಗರೆಯಲು ||
ಬೆಂದು ಬೆಂಡಾಗಿ ಕುಲಶೈಲಂಗಳಾಸರಿಂ |
ಕಂದರದ ಮೊಗದಿಂದೆ ಬಿಡುವ ಬಿಸುಸುಯ್ಯೆಲರ್ |
ಬಂದಪುದೆನಲ್ಕೆ ಝಳದಿಂ ಬಿಡದೆ ಬೀಸುತಿರ್ದುದು ಗಾಳಿ ಬೇಸಗೆಯೊಳು ||೩||

ಅವನಿಯೊಳ್ ಸಕಲ ಭೂಭೃತ್ಕುಲದ ಸೀಮೆಗಳ |
ನವಗಡಿಸಿ ಪೊಕ್ಕು ನಿಖಿಳಪ್ರಾಣಿ ಗಳ್ಗೆ ತಾ |
ಪವನೊದವಿಸುವ ದುರ್ಧರ ಗ್ರೀಷ್ಮರಾಜನ ನೆಗಳ್ದ ಚತುರಂಗಮೆನಲು ||
ರವಿಯ ಕಡುಗಾಯ್ಪುಗಳ್ ತೇರೈಸಲೊತ್ತರಿಸಿ |
ಕವಿದುವು ಬಿಲ್ಗುದುರೆಗಳ್ ಕಾಯ್ದರಿಯ ಕರಿಗ |
ಳವಧಿಯಿಲ್ಲಿದೆ ಮುಸುಕಿದುವು ಬಹಳ ತರುಗಳಿತ ದಳದಳಾಳಿಗಳಿಡಿದುವು ||೪||

ಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ |
ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ |
ಲ್ದೊರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು ||
ಉರುವ ಕಾಂತೆಯರ ಕೂಟದ ಸೊಕ್ಕುದಕ್ಕೆಯೊಳ್ |
ಮಿರುಗುವಧರಾಮೃತವನೀಂಟಿ ಸೊಗಸುವ ಸುಖಿಗ |
ಳುರೆ ಜರೆವ ತನಿವೇಸಗೆಯ ದಿನದೊಳಧ್ವರಾಶ್ವದ ಕೂಡೆ ಪಡೆ ನಡೆದುದು ||೫||

ಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾ |
ಶ್ವನ ತನಯ ನೀಲಧ್ವಜರ್ ನರಂಗಿವರೈವ |
ರನುವರ್ತಿಗಳ್ ಬಳಿಕ ಹಂಸಧ್ವಜನ ಸಖ್ಯಮಾದುದದಕಿಮ್ಮಡಿಯೆನೆ ||
ತನತನಗೆ ಮುಂಕೊಂಡು ನಡೆದುದಾ ತುರಗದೊಡ |
ನನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ |
ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣಿಯಂತೆ ಸಮಮಾಗಲು ||೬||

ಹಯಮುತ್ತರಾಭಿಮುಖಮಾಗಿ ಪಾರಪ್ಲವ ಧ |
ರೆಯೊಳೈದಿ ಪೆಣ್ಗುದುರೆಯಾಗಿ ಪುಲಿಯಾಗಿ ವಿ |
ಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದೆ ಮುನ್ನಿನಂತೆ ||
ನಿಯಮಿತಮಖಾಶ್ವಮಾದತ್ತೆನಲ್ಕಾಗ ಸಂ |
ಶಯದಿಂದೆ ಜನಮೇಜಯಂ ಮುನಿಪ ತಿಳಿಪು ನಿ |
ಶ್ಚಯವನೀ ತುರಗಮಿಂತಾದ ಕಥನವನಿಂದು ಬೆಸಗೊಂಡೊಡಿಂತೆಂದನು ||೭||

ಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು |
ಧರನಂ ಮನೋಭಾವದಿಂದರ್ಚಿಸುವೆನೆಂದು |
ಗಿರಿತನುಜೆ ತಪಕೆ ಪುಣ್ಯಾರಣ್ಯಮಾವುದೆಂದರಸಿಕೊಂಡೈತರಲ್ಕೆ ||
ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧು |
ಕರ ಕೋಕ ಮಧುರ ಮೃದುತರ ಕಲಮದೋತ್ಕರ |
ಸ್ವರ ಕಮಲ ಕುವಲಯ ವಿರಾಜಿತಶ್ರೀಕರಂ ಪದ್ಮಾಕರಂ ಚೆಲ್ವೆನೆ ||೮||

ಲಸದಮಲರತ್ನ ಸೋಪಾನದಿಂ ವಿನದಿಂ |
ಬಿಸವನಾಸ್ವಾದಿಸುವ ಚಕ್ರದಿಂ ನಕ್ರದಿಂ |
ದೆಸೆದೆಸೆಗೆ ಬೀರ್ವ ತನಿಗಂಪಿನಿಂ ತಂಪಿನಿಂ ತೊಳಪ ತೊಳಪ ಹಿಂಕರಕಾಂತದ ||
ಪೊಸಸಣ್ಣಿಗೆವೊಲಿಡಿದ ಪುಳಿನದಿಂ ನಳಿನದಿಂ |
ದೊಸೆದು ಬಿನದಿಪ ಹಂಸಕೇಳೀಯಿಂದೋಳಿಯಿಂ |
ದೆಸೆವ ನೀರ್ವಕ್ಕಿಗಳ ಸಂಗದಿಂ ಬೃಂಗದಿಂದಾಕೊಳಂ ಕಣ್ಗೆಸೆದುದು ||೯||

ತಳದೊಳೊಪ್ಪುವ ಪಸುರೆಸಳ ರೋಚಿಯಿಂ ನಡುವೆ |
ತೊಳಪ ಕೆಂದಳದ ದೀಧಿತಿಯಿಂದೆ ಮೇಲೆ ಕಂ |
ಗೊಳಿಪ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದೆ ||
ಹೊಳೆಹೊಳೆವ ಕೋಕನದ ಪಂಜ್ಕ್ತಿಗಳ ಬಣ್ಣಮು |
ಜ್ವಲದಿಂದ್ರಚಾಪದಾಕಾರಮಂ ಸಂತತಂ |
ಪಳಿವಂತೆ ಕೊಳದೊಳಾರಾಜಿಸಿತು ತುಹಿನ ಗಿರಿ ರಾಜ ನಂದನೆಯ ಕಣ್ಗೆ ||೧೦||

ನಿರುತಂ ಕುಮುದಶೋಭಿ ನೈರುತ್ಯದಂತೆ ವಾ |
ನರಸೈನ್ಯದಂತೆ ಕಮಲೋದರೋದ್ಬಾಸಿ ಭಾ |
ಸುರ ಶುಕ್ಲಪಕ್ಷದಂತಹಿತಲ್ಪದಂತೆ ಕವಿಸೇವಿತಂ ಗಗನದಂತೆ ||
ಧರಣಿಪಾಲಯದಂತೆ ಸುಮನೋಹರಂ ನಿಶಾ |
ಚರವಮಶದಂತೆ ಮಾಲಾಕಾರಜನದಂತೆ |
ಹರಿಜನ್ಮಭೂಮಿ ಗೋಕುಲದಂತೆ ವನದಂತೆ ತತ್ಸರಂ ಕಂಗೊಳಿಸಿತು ||೧೧||

ವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು |
ವನಕುಕ್ಷಿ ಭುವನಕುಕ್ಷಿಯ ತೆರದ ಹಂಸಲೋ |
ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ಕರಿಯವೊಲು ||
ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ |
ಯೆನೆ ಕುವಲಯಾಧಾರಿ ಕುವಲಯಾಧಾರಿವೋಲ್ |
ವನಮಾಲಿಯೆನಿಸಿ ರಂಜಿಸುವ ಕಾಸಾರಮಂ ಸರ‍್ವಮಂಗಳೆ ಕಂಡಳು ||೧೨||

ಅಳಿಯ ವರ್ಗವನಾದರಿಸುತೆ ಮಿತ್ರಸ್ನೇಹ |
ದೊಳೆ ಸಂದು ಸುತರಂಗಲೀಲೆಯಂ ಲಾಲಿಸುತೆ |
ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತನುಕೂಲರಮಣೀಯಮಾಗಿ ||
ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂ |
ಗಳವಿಭವಕೆಡೆಗೊಟ್ಟು ಸಕಲಸೌಭಾಗ್ಯಮಂ |
ತಳೆದ ಸಂಸಾರಿಕನ ತೆರದಿಂದೆ ವಿಮಲಪದ್ಮಾಕರಂ ಕಣ್ಗಾಸೆದುದು ||೧೩||

ಕಳಹಂಸಮಾಕೀರ್ಣಮಾಗಿರ್ದು ಕಾಳೆಗದ |
ಕಳನಲ್ಲ ವಿಷಭರಿತಮಾಗಿರ್ದು ಸರ್ಪಸಂ |
ಕುಳಮಲ್ಲ ಕುಮುದಯುತಮಾಗಿರ್ದು ಖಳರಂತರಂಗದಾಳಾಪಮಲ್ಲ ||
ಆಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪ |
ದಳಮಲ್ಲ ಬಹುವಿಚಾರಸ್ಥಾನಮಾಗಿರ್ದು |
ತಿಳೀಯಲ್ಕು ಪದ್ರವಸ್ಥಳಮಲ್ಲಮೆನಿಸಿರ್ದುದಾ ವಿಮಲಸರಸಿ ಕಣ್ಗೆ ||೧೪||

ಆ ಸರಸ್ತಟದಲ್ಲಿ ಕಲ್ಪಿಸಿದಳಾಶ್ರಮ ನಿ |
ವಾಸಮಂ ಭಕ್ತಿಯಿಂ ಭಜಿಸಿದಳಗೇಂದ್ರಜೆ ಸು |
ಧಾಸೂತಿಮೌಳಿಯಂ ಮೆಚ್ಚಿದಂ ಶಂಭ ವರಮಂ ಕೊಟ್ಟನಿಲ್ಲಿ ನಿನ್ನ ||
ವಿಸಲ ತಪಕ್ಕೆಡರ್ ಬಾರದಿರಲೆಂದು ಬಳಿ |
ಕೋಸರಿಸದಲ್ಲಿ ಚಿರಕಾಲಮಿರುತಿರ್ದಳು |
ಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೊ ತಾನೆಂಬ ಬನದೊಳು ||೧೫||

ಇಂದುಮೌಳಿಯ ಪದಧ್ಯಾನಮಂ ಮಾಡುವಾ |
ನಂದಮಿನ್ನೇತಿರತಶಯಮೋ ಶಿವನರೆಮೈಯೊ |
ಳೊಂದಿರ್ದಸೌಖ್ಯಮಂ ಮರೆದು ಪಾರ್ವತಿ ತಪಸ್ವಿನಿಯಾಗಿ ತಿಳಿಗೊಳದೊಳು ||
ಮಿಂದನುದಿನಂ ಜಪ ತಪೋನಿಯಮ ಯೋಗಂಗ |
ಳಿಂದೆ ಭಜಿಸಿದಳಂತರಾತ್ಮನಂ ಸಕಲಸುರ |
ವೃಂದವಂದಿತ ಪಾದಪದ್ಮನಂ ಸುಜ್ಞಾನಸದ್ಮನಂ ಕಾನನದೊಳು ||೧೬||

ಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ |
ಕಾಸದು ದವಾಗ್ನಿ ಪುಲ್ಗಳೊಳೊಂದನಾದೊಡಂ |
ಬೇಸದು ಮುಗಿಲ್ಗಳತಿಭರದಿಂ ಸಿಡಿಲ್ಮಿಂಚುಗಳ ಕೂಡೆ ಪೆರ್ಮಳೆಯನಾ ||
ಸೂಸದು ತಳೆದ ಪೂತಳಿರ್ಗಳಿಂಪಿನ ಸೊಂಪು |
ಮಾಸದು ತರುಗಳಲ್ಲಿ ಪಣ್ಗಾಯ್ಗಳಂ ಬೀಯ |
ಲೀಸದು ಸಮಸ್ತಋತುಸಮಯಂಗಳಚಲೇಂದ್ರ ತನುಜೆ ತಪಮಿರೆ ಬನದೊಳು ||೧೭||

ಅಂಚೆದಗಳುಡುಗವು ಮಳೆಗಾಲದೊಳ್  ಕೋಗಿಲೆಗ |
ಳಿಂಚರವನುಳಿದಿರವು ಮಾಗಿಯೊಳ್ ಬೇಸಗೆಯೊ |
ಳುಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದಲದು ಚಕ್ರಮಿಥನಮಿರುಳು ||
ಹೊಂಚದು ಪಗಲ್ ಗೂಗೆ ಸಂಪಗೆಯಲರ್ಗಳಂ |
ಚಂಚರೀಕಂಗಳಡರದೆ ಮಾಣವೆಸೆವಕಮ |
ಲಂ ಚಂದ್ರನುದಯಕುತ್ಪಲಮಿನಕಿರಣಕೆ ಬಾಡದು ಬನದೊಳುಮೆ ಯಿರಲ್ಕೆ ||೧೮||

ಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆ |
ಯೂಡುವುವು ಪುಲ್ಲೆಗಳ್ ಪೆರ್ಬುಲಿಗಳೊಳ್ ಸರಸ |
ವಾಡುವುವು ಪಾವು ಮುಂಗುಲಿಗಳೊಡಗುಡುವುವು ಮೂಷಕಂ ಮೇಲೆ ಬಿದ್ದು ||
ಕಾಡುವುವು ಮಾರ್ಜಾಲಮಂ ಮೊಲಂ ತೋಳನಂ |
ಬೇಡುವುವು ಮೇವುಗಳನೊಂದುಬಳಿಯೊಳ್ ಗೂಡು |
ಮಾಡುವುವು ಪದ್ದು ಕಾಗೆಗಳೆಂತೊ ಸಾತ್ವಿಕಮಪರ್ಣೆಯ ತಪೋವನದೊಳು ||೧೯||

ಪರಿಚರೈಯಂ ಮಾಡುವುವು ಕೋಡುಗಂಗಳಿ |
ರ್ದರಗಿಳಿಗಲಾಡುವುವು ಕೂಡೆ ಸರಸೋಕ್ತಿಯಂ |
ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪುವು ||
ಪಿರಿದು ಬಯಸಿದ ವಸ್ತುಗಳನಿತ್ತಪುವು ಕಲ್ಪ |
ತರುಗಳೆಡೆಯಾಟದಾರ್ಗಳಂ ಕಳೆದಪುವು |
ಪರಿಮಳದಲರ್ಗಳಗಜೆಯ ತಪೋವನದೊಳಾವಾಸಮಾಗಿರ್ಪವರ್ಗೆ ||೨೦||

ಅಪ್ಟಯೋಗಿನಿಯರಣಿಮಾದಿಗಳ್ ವಿನುತ ಚೌ |
ಪಷ್ಟಿಕಲೆಗಳ್ ಸಪ್ತಮಾತೃಗಳ್ ಜಗದೊಳು |
ತ್ಕೃಷ್ವನದಿಗಳ್ ದಿವಾರಾತ್ರಿಗಳ್ ತಿಥಿತಾರಕಾಪ್ಸರೋವಿಸರಂಗಳು ||
ತುಷ್ಟಿದಯೆ ಪುಷ್ಟಿ ಧೃತಿ ಮತಿ ಶಾಂತಿ ದಾಂತಿ ಕೃತಿ |
ನಿಷ್ಠೆ ನುತಿಗಳ್ ಸಕಲವರಮಂತ್ರಶಕ್ತಿಗಳ್ |
ಸೃಷ್ಟಿಯ ಸಮಸ್ತಾಭಿಮಾನದೇವತೆಯರಿರ್ದರು ದೇವಿಯಂ ಸೇವಿಸಿ ||೨೧||

ಆ ವನದೊಳೆಸಗಿದಳ್ ಪಾವನಚರಿತ್ರನ ಕೈ |
ಪಾವನಧಿಯ ವಿಶ್ವಸಂಭಾವನನ ಭಕ್ತಸಂ |
ಜೀವನದ ತ್ರಿಜಗಮಂ ಕಾವನ ಸುವಾಂಛತವನೀವನ ಹಿಮಾಂಶುಧರನ ||
ದೇವ ನರ ನಾಗ ದೈತ್ಯಾವನತ ಪಾದರಾ |
ಜೀವನ ಭವಾಂಭೋಧಿನಾವನ ದುರಿತ ವಿಪಿನ |
ದಾವನ ಕಲಿತ ವಿಷಗ್ರೀವನ ಶಿವನ ಮಹಾದೇವನ ಭಜನೆಯನಗಜೆ ||೨೨||

ನಿಜನಿರ್ಮಲಿತರೂಪನಂ ಪೂರ್ವಪೂರ್ವನಂ |
ಗಜದಾನವ ಧ್ವಂಸಿಯಂ ಕಾಲಕಾಲನಂ |
ರಜನೀಶ ಕೋಟೀರನಂ ಭಕ್ತಭಕ್ತನ ಬಹಳ ತೇಜೋಮಯನನು ||
ಅಜಿನಾಂಬರನನಖಿಳದಿಕ್ಪಾಲ ಪಾಲನಂ |
ಭುಜಗ ಧರನಂ ಸಖೀಕೃತ ರಾಜ ರಾಜನಂ |
ಸುಜನರಕ್ಷಾ ಶೀಲನಂ ದೇವದೇವನಂ ಭಜಿಸಿದಳಜೆ ಬನದೊಳು ||೨೩||

ಆಗುರು ಚಂದನ ಸುಗಂಧಾಕ್ಷತೆಯ ಪರಿಮಳದ |
ಬಗೆಬಗೆಯ ಬಿರಿಮುಗಳ ಮಂಜರಿಯ ಗುಗ್ಗುಳದ |
ಪೊಗೆಯ ಧೂಪದ ಬಹಳವರ್ತಿಗಳ ಕರ್ಪೂರ ನೀರಾಜನದ ಕಂಪಿನ |
ಒಗುಮಿಗೆಯ ವಿವಿಧೋಪಹಾರದ ಸುವಾಸಿತದ |
ಮೊಗಮಾಸದಮಲ ತಾಂಬೂಲದ ಪರಿಕ್ರಮದ |
ಸೊಗಸಿನ ಕೃತೋಪಚಾರಂಗಳಿಂದರ್ಚಿಸಿದಳಭವನಂ ಕಾತ್ಯಾಯಿನಿ ||೨೪||

ಮೋಕ್ಷದಾಯಕಿ ಸಕಲಮಂತ್ರನಾಯಕಿ ಮಾಯೆ |
ಸಾಕ್ಷಾಜ್ಜಗನ್ಮಾತೆ ನಿಜಶಕ್ತಿ ತಾನೆಂಬ |
ದಾಕ್ಷಾಯಣಿಗೆ ತಪಮಿದೇಕೆಂದು ಪಂಕಜಭವಾದಿ ನಿರ್ಜರಮುಖ್ಯರು ||
ಆಕ್ಷೇಪಿಸಲ್ಕೆ ವಿಪಿನದೊಳಿಂತು ಬಿಡದೆ ಭಾ |
ಳಾಕ್ಷನಂ ಧ್ಯಾನಿಸುತೆ ಗಿರಿಜೆಯಿರುತಿರಲೋರ್ವ |
ರಾಕ್ಷಸಂ ಕಾಂತಾರಮಂ ತಿರುಗತೈತಂದು ಕಂಡನಾ ಪಾರ್ವತಿಯನು ||೨೫||

ಹೈಮವತಿಯಂ ಕಾಣೂತಭಿವಂದಿಸದೆ ಖಳಂ |
ಕೈಮಾಡುವಂಗಜನ ಪೂಗೋಲ ಗಾಯದಿಂ |
ಮೈಮೆರೆದು ಕಾತರಿಸಿ ಮುಂದುಗೆಟ್ಟೆದೆಯಾರಿ ಬೇಟದ ಕಟಕಿಗಳಿಂದೆ ||
ಐಮೊಗನ ರಾಣಿಯಂ ನುಡಿಸಿದೊಡೆ ಭೂಪ ಕೇ |
ಳೈ ಮುಳಿದು ನೋಡಿದಳ್ ಭುವನಮಾತೆಯ ಖತಿಯ |
ವೈಮನಸ್ಯದೊಳುಳಿವರಾರಸುರನುರಿಯ ಪೋದಂ ಕೂಡೆ ಬೂದಿಯಾಗಿ ||೨೬||

ಬೆಂದುಪೋದಂ ದಾನವಂ ಬಳಿಕ ದೇವಿ ಖತಿ |
ಯಿಂದ ನುಡಿದಳ್ ಶಾಪರೂಪದಿಂದೀ ವನ |
ಕ್ಕಿಂದು ಮೊದಲಾಗಿ ಪುರುಷಪ್ರಾಣಿಗಳೊಳ್ ಪೊಕ್ಕೊಡಾಗಲೇ ಸ್ತ್ರೀತ್ವಮವಕೆ ||
ಬಂದು ಸಮನಿಸಲಿ ತನ್ನಾಜ್ಞೆ ತಪ್ಪದೆ ನಡೆಯ |
ಲೆಂದು ಸಕಲ ಸ್ಥಾವರಾಧಿದೇವತೆಯರೊಡ |
ನಂದು ಸಾರಿದಳಲ್ಲಿ ಚಿರಕಾಲಮಿರ್ದು ಪೂರೈಸಿದಳ್ ಕಲ್ಪಿತವನು ||೨೭||

ತನ್ನನರ್ಚಿಸಿದರ್ಗಭೀಷ್ಟಮಂ ಕುಡುವ ಸಂ |
ಪನ್ನೆ ವರಗೌರಿ ತಪದಿಂದೊಲಿಸಲೀಶಂ ಪ್ರ |
ಸನ್ನನಾದಂ ಕೆಲವುಕಾಲದಿಂ ಮೇಲೆ ಬಿಜಯಂಗೈದಳುತ್ಸವದೊಳು ||
ಉನ್ನತದ ಕೈಲಾಸಗಿರಿ ಶಿಖರಕಂದುಮೊದ |
ಲಿನ್ನುಮಾ ವನಕೆ ಪೊಕ್ಕೊಡೆ ಗಮಡು ಪೆಣ್ಣಹುದು |
ಪನ್ನಗ ಮೃಗಾದಿ ಪಶು ಪಕ್ಷಿಗಳ ಮುಂತಾದ ಜಂತುಜಾಲಂಗಳೆಲ್ಲ ||೨೮||

ರಾಜೇಂದ್ರ ಕೇಳಾಗಳಾ ವನಕೆ ಪೊಕ್ಕಲ್ಲಿ |
ರಾಜಿಸುವ ತಿಳಿಗೊಳದ ನೀರ್ಗುಡಿದು ಫಲುಗುಣನ |
ವಾಜಿ ಪೊರಮಟ್ಟು ಬಂದಾಗಳದು ಪೆಣ್ಗುದುರೆಯಾಗಿರ್ದುದೇವೇಳ್ವೆನು ||
ಸೋಜಿಗಮಿದೆಂದು ಸೈವೆರಗಾಗುತಿರ್ದುದೆ |
ಲ್ಲಾಜನಂ ಪಾಂಡವಂ ಕಂಡು ಶಿವಶಿವ ಪೊಸೆತ |
ಲಾ ಜಗದೊಳೀಕಥನಮೆಂದು ವಿಸ್ಮಿತನಾಗಿ ಕೃಷ್ಣನಂ ಧ್ಯಾನಿಸಿದನು ||೨೯||

ಎಣೆಕೆಗೊಳುತಿರ್ದನಾ ಪಾರ್ಥನಂದಿತ್ತ ಹಿಂ |
ದಣ ಕೃತಯುಗದ ಮೊದಲ ಕಾಲದೊಳ್ ಸಕಲ ಧಾ |
ರಿಣಿಯ ತೀರ್ಥಂಗಳಂ ಬಳಸಿ ಬರುತಕೃತವ್ರಣಾಖ್ಯ ಭೂಸುರನೋರ್ವನು ||
ಪ್ರಣುತ ಸಲಿಲ ಸ್ನಾನಕೊಂದು ಸರಕಿಳಿದು ವಾ |
ರುಣಮಂತ್ರಮಂ ವಾರಿಯೊಳ್ ಜಪಿಸುತಿರ್ದನಾ |
ಕ್ಷಣದೊಳವನಂಘ್ರಿಯಂ ಬಂದು ಪಿಡಿದುದು ನೆಗಳ್ ಬಿಗಿದು ದಂತಂಗಳಿಂದೆ ||೩೦||

ತನ್ನ ಕಾಲ್ವಿಡಿದು ನಡುನೀಗೆಳೆವಜಂತುವಿದು |
ಪನ್ನಗನೋಮೇಣಸುರಮಾಯೆಯೋ ಜಲದೊಳು |
ತ್ಪನ್ನಮತ್ಸ್ಯವೊ ಮಹಾಗ್ರಾಹಮೋ ಶಿವಶಿವಾ ದುಷ್ಟಬಾವಿತಮಾಯ್ತಲಾ ||
ಇನ್ನಿದಕುಪಾಯಮೇನೆಂದು ಚಿಂತಿಸಿ ವಿಪ್ರ |
ನುನ್ನ ತ ತಪೋಬಲದೊಳಂಘ್ರಿಯಂ ಬಿದಿರಲ್ಕೆ |
ಭಿನ್ನಸದೆ ಬಿಗಿದಿರ್ದ ಬಲ್ಮೆಗಳ ದಂತಂಗಳೂಡಿದುವದನೇನೆಂಬೆನು ||೩೧||

ಮಡುವಿನೊಳು ಮಡವಿಡಿದ ಬಲಾತ್ಕರಿಸಿ |
ಬಿಡಿಸಿಕೊಂಡೋಡಮುರಿದು ತಡಿಗಡರಿ ಕೋಪದಿಂ |
ನುಡಿದನುದಕಸ್ಥಮಾಗಿರ್ದ ದೇವತೆಗಳ್ಗೆ ದುಷ್ಟಭಾವದ ಜಲಮಿದು ||
ಕಡುಭಯಂಕರದಿಂದೆನಗೆ ತೋರಿತದರಿಂದ |
ಪೊಡವಿಗತಿಭೀತಿಯಂ ಮಾಡುವಂತಿಲ್ಲಿ ನೀ |
ರ್ಗುಡಿದ ಜೀವಿಗಳನ್ನು ಪುಲಿಯಾಗಲಿಂದುಮೊದಲೆಮದು ಮುನಿ ಶಾಪಿಸಿದನು ||

ಎಂದಾದುದಕೃತವ್ರಣನ ಶಾಪಮಾ ಸರಸಿ |
ಗಂದುಮೊದಲಾಗಿ ಭೀಕರಮೆನಿಸುತಿರ್ಪುದಿಳೆ |
ಗೊಂದುಜೀವಿಗಳುಮುದುಕಮನೊಲ್ಲವದರೊಳುಗ್ರವ್ಯಾಘ್ರಮಪ್ಪಭಯಕೆ ||
ಅಂದು ಪೆಣ್ಗುದುರೆಯಾಗಿರ್ದ ವಿಜಯನ ವಾಜಿ |
ಬಂದು ಕೊಳನಂ ಪೊಕ್ಕು ನೀರ್ಗುಡಿದು ಪುಲಿಯಾಗಿ |
ಮುಂದುಗೆಡಿಸಿತು ಮತ್ತೆ ಪಲುಗುಣಂ ಕಂಡು ವಿಸ್ಮಿತನಾಗಿ ಚಿಂತಿಸಿದನು ||೩೩||

ನೃಪನ ಹಯಮೇಧವಿನ್ನೆಂತಹುದೊ ಮೂಜಗದೊ |
ಳಪಹಾಸಕೆಡೆಯಾದುದಾರ ಶಾಪದ ಫಲವೊ |
ವಿಪರೀತಮಿದು ಶಿವಶಿವಾಯೆನುತ ನಡುನಡುಗಿ ಪಾರ್ಥನತೀಭೀತಿಯಿಂದೆ ||
ಕಪಟದೊಳ್ ಪಿಂತೆ ದುರ‍್ಯೋಧನಾದಿಗಳೆಸಗಿ |
ದುಪಹತಿಗಳಂ ತೆಗೆಸಿ ತಲೆಗಾಯ್ದೆಲೈ ಕೃಷ್ಣ |
ಕೃಪೆಮಾಡಬೇಹುದೆನಗೆಂದು ಮುರವೈರಿಯಂ ನೆನೆದು ಚಿಂತಿಸುತಿರ್ದನು ||೩೪||

ಭಯನಿವಾರಣ ಸಕಲಸೃಷ್ಟಿಕಾರಣ ಜಗ |
ನ್ಮಯ ಜನಾರ್ದನ ದುಷ್ಟದೈತ್ಯಮರ್ದನ ನತಾ |
ಶ್ರಯ ಧರಾಧರ ಕಮಲಸಂಭವೋದರ ಘನಶ್ಯಾಮ ಯದುಕುಲಲಲಾಮ ||
ಲಯವಿವರ್ಜಿತ ಪುಣ್ಯನಾಮ ನಿರ್ಜಿತದುರಿತ |
ಚಯ ವಿರಾಜಿತ ಸರ್ವಲೋಕ ಪೂಜಿತಪದ |
ದ್ವಯ ಕೃಪಾಕರ ಕೃಷ್ಣ ಬಿಡಿಸು ಭೀಕರವನೆಂದರ್ಜುನಂ ಘೋಸಿಸಿದನು ||೩೫||

ಪುಷ್ಕರ ಗದಾ ಶಂಖ ಚಕ್ರ ಶೋಭಿತ ಕರಚ |
ತುಷ್ಕದಿಂ ಶ್ರೀವತ್ಸ ಕೌಸ್ತುಭಾಭರಣದಿಂ |
ನಿಷ್ಠಳಂಕೇಂದುಮಂಡಲ ಸದೃಶ ವದನದಿಂ ನವಪೀತವಾಸದಿಂದೆ ||
ಪುಷ್ಕಲಶ್ಯಾಮ ಕೋಮಲ ರಾಮಣೀಯಕ ವ |
ಪುಷ್ಕಾಂತಿಯಿಂದೆಸೆವ ನಿನ್ನ ರೂಪೆರ್ದೆಯೊಳಿರೆ |
ದುಷ್ಕಂಟಕದ ಭೀತಿಯೆಮಗದೇಕೆಲೆ ದಶವ ಸಲಹೆಂದನಾ ಪಾರ್ಥನು ||೩೬||

ನಿನ್ನೊಂದು ಪೆಸರ ಪೋಲ್ವೆಯೊಳಂದಜಾಮಿಳಂ |
ತನ್ನ ಪಾತಕಕೋಟಿಯಂ ಪರಿಹರಿಸಿಕೊಂಡ |
ನಿನ್ನು ನೀನೆಂದು ನಂಬಿರ್ದ ನಿಜಶರಣರ್ಗೆ ಬೈಮುಂಟೆ ಮೂಜಗದೊಳು ||
ಎನ್ನ ಭೀತಿಯನೀಗ ಬಿಡಿಸುವೊಡೆ ಕೃಪೆಯೊಳ್ ಪ್ರ |
ಸನ್ನನಾಗಚ್ಯುತ ಮುಕುಂದ ಕೇಶವ ಕೃಷ್ಣ |
ಪನ್ನಗಾರಿಧ್ವಜನೆ ಯೆನುತೆ ನರಹರಿಯ ನಾಮಂಗಳಂ ವಾಚಿಸಿದನು ||೩೭||

ಅದ್ಭುತವ್ಯಾಘ್ರಮಾದಶ್ವಮಂ ಕಾಣುತೆ ಮ |
ಹದ್ಭಯದೊಳಸುರಾರಿಯಂ ಪಾರ್ಥ ನಿಂತಿಂತು |
ಸದ್ಭಾವದಿಂ ಪ್ರಾರ್ಥಿಪನ್ನಗಂ ದೈವವಶದಿಂ ತನ್ನ ತಾನೆ ಬಳಿಕ ||
ಉದ್ಭವಿಸಿತಾ ಹಯಕೆ ಮುನ್ನಿನಾಕಾರಮಾ |
ಪದ್ಭೀತಿ ಪಾಂಡವರ್ಗೆತ್ತಣದು ಮುರರಿಪು ಸು |
ಹೃದ್ಭಂಗಮಂ ಸೈರಿಸುವನಲ್ಲೆನುತ್ತೆ ಕಟಕದ ಮಂದಿ ಕೊಂಡಾಡಲು ||೩೮||

ಅಟವಿಕನೊಂದೊಂದು ಬಹುರೂಪಮಂ ತಾಳ್ದು |
ನಾಟಕವನಾಡಿ ಮುನ್ನಿನ ತನ್ನ ರೂಪದಿಂ |
ನೋಟಕದ ಕಣ್ಗೆ ಕಾಣಿಸುವಂತೆ ಪೆಣ್ಗುದುರೆಯಾಗಿ ಪುಲಿಯಾಗಿ ಮತ್ತೆ ||
ಘೋಟಕೋತ್ತಮಮಾದುದೆಂದಿನಂದದೊಳಾ ನಿ |
ಶಾಟದಲ್ಲಣನಂ ಪೊಗಳ್ದುದೆಲ್ಲಾ ಜನಂ |
ಕೋಟಿಸಂಖ್ಯೆಯೊಳೊದರಿದುವು ನಿಖೀಲವಾದ್ಯಂಗಳುತ್ಸವದೆ ಪಾಳೆಯದೊಳು ||೩೯||

ಸೇವ್ಯಮಾಗಿರ್ದುದೆಮದಿನವೋಲ್ ತುರಂಗಂ ಮ |
ಹಾ ವ್ಯಾಘ್ರರೂಪಡಗಿತಸುರಾರಿ ಭಕ್ತ ರ |
ಕ್ಷಾ ವ್ಯಸನಿಯೆಂಬುದಂ ಕಾಣಿಸಿದನಡಿಗೆ ಕಟಕದ ಸಮಸ್ತ ಜನರು ||
ಈ ವ್ಯಾಳೆರಾಜ ಶಾಯಿಗೆ ಬಂದಬಂದನಾ |
ನಾ ವ್ಯಥೆಯನಪಹರಿಸಿ ಪಾಂಡುಸುತರಂ ಪೊರೆವು |
ದೇ ವ್ಯವಹರಣೆಯೆಂದು ಕೃಷ್ಣನಂ ಕೊಂಡಾಡಲುಬ್ಬೇರಿದಂ ಪಾರ್ಥನು ||೪೦||

ಬಳಿಕ ಪಾರಿಪ್ಲವ ಧರಿತ್ರಿಯಿಂದಾ ಹಯಂ |
ತಳರ್ದುದತಿವೇಗದಿಂ ಬಹಳ ದೇಶಂಗಳಂ |
ಕಳೆಕಳೆದು ಬರಿಯ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದೆ ||
ಫಲಗುಣನ ಸೇನೆ ನಡೆದುದು ಕೂಡೆ ಬಾರದಿಂ |
ದಿಳೆ ಮುಂದಕೊರ್ಗುಡಿಸಿ ಮುಗ್ಗಲೊಂದೆಸೆಯೊಳೋ |
ಬ್ಬುಳಿಸಿದುವು ಮಂದಿ ಕುದುರೆಗಳೆಂಬ ತೆರದಿಂದೆ ಸಂದಣಿಸಿತೇವೇಳ್ವೆನು ||೪೧||

ರಾಯ ಕೇಳಾರಾಜ್ಯದೊಳ್‌ಬರಿಯ ನಾರಿಯರ್ |
ಪ್ರಾಯತೆಯರಾಗಿ ಮಧುಪಾನಮತ್ತೆಯರಾಗಿ |
ಕಾಯಜ ಕಲಾಕೋವಿದೆಯರಾಗಿ ರೂಪ ಲಾವಣ್ಯ ವಿಲಸಿತೆಯರಾಗಿ ||
ಗೇಯ ನರ್ತನ ವೇಣು ವೀಣಾ ವಿನೋದ ರಮ |
ಣೀಯಭೋಗಾನ್ಪಿತೆಯರಾಗಿ ಮತ್ತದರೊಳಾ |
ಸ್ತ್ರೀಯೋರ್ವಳರಸಾಗಿರಲ್ಕವಳ ಕೆಳಗಾಗಿ ಬದುಕುವರ್ ಭಾಗ್ಯದಿಂದೆ ||೪೨||

ಅಲ್ಲಿಗೈದಿದ ಪುರುಷರೋರ್ವರುಂ ಜೀವಿಸುವು |
ದಿಲ್ಲ ಬಂದಾತನಂ ಕಂಡು ಲಲಿತಾಂಗಿಯರ್ |
ಚೆಲ್ಲೆಗಂಗಳ ನೋಟಮಂ ಬೀರಿ ಸವಿವೇಟಮಂ ತೊರಿ ಮಿಗೆ ಸೊಗಸುವ ||
ಸೆಳ್ಳುಗುರ್ಗಳನೂರಿ ಮೆಲ್ಲಮೆಲ್ಲನೆ ಕೀರಿ |
ಲಲ್ಲೆಗೈಯುತೆ ವಿರಿ ಬಲ್ಮೊಲೆಗಳಂ ಪೇರಿ |
ಪುಲ್ಲಶರಕೇಳಿಯೊಳ್ ಮದವೇರಿಸುವರವರ್ ಮರುಳಹವೊಲರಿವು ಜಾರಿ ||೪೩||

ಸಮರತಿಯೊಳೊಮ್ಮೆ ಬೆರಸಿದ ಬಳಿಕ ವಿಷಯದಾ |
ಭ್ರಮೆಯಿಂದೆ ಮಗ್ನರಾಗಿಹರಾ ಪುರುಷರಲ್ಲಿ |
ರಮಿಸುವರವರ ಕೂಡೆ ನಾನಾಪ್ರಕಾರದಿಂದಾ ಪಂಕರುಹಮುಖಿಯರಯ ||
ಕ್ರಮದೊಳೀ ತೆರದೆ ಸುಖೀಸುವರೊಂದು ತಿಂಗಳು |
ತ್ತಮಸುಗಂಧಾನುಲೇಪನದಿಂದೆ ಮೊಗವಾಸ |
ದಮಲತಾಂಬೂಲದಿಂ ಮಧುರ ಮಧುಪಾನದಿಂದೆಸೆವ ಸಂಯೋಗದಿಂದೆ ||೪೪||

ವಿಧವಿಧದೊಳೆಸೆವ ಕುಸುಮೋತ್ಕರದ ಪರಿಮಳದ |
ಮಧುರಾಸವಕೆ ಮುಖವಾಸದೊಳ್ಗಂಪಿ |
ನಧರದಿನದಂ ಬೆರಸುವಂತೆ ಮೊಗಮಿಟ್ಟು ಪೊಂಬಟ್ಟಲೊಳ್ ಸವಿದು ಮಿಕ್ಕ |
ಮಧುವಂ ಮದಿರನೇತ್ರದಿಂ ನೋಡಿ ನಸುನಗೆಯ |
ಸುಧೆಯನೊಯ್ಯನೆ ಸೂಸಿ ಸರಸದಿಂದಾದರಿಸಿ |
ವಿಧುಬಿಂಬವದನೆಯರ್ ಕೊಟ್ಟರೀಂಟುವ ಸೊಗಸಿಗೆಳಸದವರಾರಿಳಿಯೊಳು ||೪೫||

ಪೊಂಬಟ್ಟಲೋಳ್ ತೀವಿದಾಸವದ ರುಚಿಗಿರ್ವ |
ರುಂ ಬಿಡದೆ ಮೊಗಮಿಟ್ಟಿರಲ್ಕದರೊಳೆಸೆವ ಪಡಿ |
ಬಿಂಬದಾನನದ ಭಾವಮಗಳಂ ಕಾಣೂತನ್ಯೋನ್ಯಸಂಪ್ರೀತಿಯಿಂದೆ ||
ತುಂಬಿರ್ದ ಚಷಕಮಧು ತೀರಲ್ಕೆ ಬಯಲಪ್ಪು |
ದೆಂಬ ಶಂಕೆಯೊಳೊಯ್ಯನೊಯ್ಯುನಾಸ್ವಾದಿಸಿ ವಿ |
ಳಂಬಮಂ ಮಾಡುವರದೆಂತೊ ಪುರುಷಸ್ತ್ರೀಯರೊಂದಾಗಿ ಸವಿವ ಸೊಗಸು ||೪೬||

ಕವಿಸುವರ್ ಮೋಹನವನೆಸೆವ ರತಿಕೇಳಿಯೋಳ್ |
ಸವಿಸುವರ್ ಚೆಂದುಟಿಯ ತನಿರಸವನಾಸರಂ |
ತವಿಸುವರ್ ಬಲ್ಮೊಲೆಯೊಳೊತ್ತಿ ಬಿಗಿಯಪ್ಪಿ ದನಿಗೈವ ಪಾರಿವದಂತಿರೆ ||
ರವಿಸುವರ್ ಕಂಠದೊಳ್ ಬಂಧಗಳ ಬಗೆಯನನು |
ಭವಿಸುವರ್ ಕೂಲದೊಳ್ ಮನಮುಳುಗಿ ಸೌಖ್ಯದಿಂ |
ದ್ರ್ರವಿಸುವರ್ ಕಾಮಕಲೆಯರಿದಂಗನೆಯರಲ್ಲಿ ದೊರೆಕೊಂಡ ಪುರುಷರೊಡನೆ ||೪೭||

ಮರಣಮಹುದೆಂದರಿದು ನಡುವೆ ಮುರಿದೊಲ್ಲದನ |
ಚರಣಕೆರಗುವರೊಡಂಬಡಿಸುವರ್ ದೈನ್ಯದಿಂ |
ಕರುಣಭಾವಂಗಳಂ ತೋರುವರ್ ವಿರಿದೊಡೆ ಚೀರುವರ್ ಘಾತಿಸುವರು ||
ಅರುಣಾಧರದ ಚುಂಬನವನಿತ್ತು ಕರಜಪ್ರ |
ಹರಣದಿಂ ಕಲೆಗಳಂ ತುಡಕಿ ಸೊಗಸಂ ಬಲಿದು |
ಹರಣವಳಿವಲ್ಲಿಪರಿಯಂತರಂ ಬಿಡರವನನಲ್ಲಿಯ ವಿಷಾಂಗನೆಯರು ||೪೮||

ಅಚ್ಚಸಂಪಗೆಯಲರ್ಗೆರಗಿದಾರಡಿಯಂತೆ |
ಮೆಚ್ಚಿ ಮಡಿವಂ ಮಾಸಮಾತ್ರ ಮಾಗಲ್ಯವಂ |
ಕಿಚ್ಚಿನೊಳ್ ಪುಗುವಳವಳಲ್ಲದೊಡೆ ಗರ್ಭಮಂ ಧರಿಸಿ ಪೆಣ್ಣಂ ಪಡೆವಳು ||
ಪೆಚ್ಚಿರ್ಪರಂತಲ್ಲಿ ನಾರಿಯರ್‌ಬಳಿಕ ಬಂ |
ದಚ್ಚರಿಯನರ್ಜುನಂ ಕೇಳ್ದಾಗ ತನ್ನ ಪಡೆ |
ಗೆಚ್ಚರಿಕೆಯಾಗಿರ್ಪುದೆಂದೊರೆದು ಕೂಡೆ ಪಾಳೆಯದೊಳಗೆ ಸಾರಿಸಿದನು ||೪೯||

ವಿಷಕನ್ನಿಕೆಯರಿವರ್ ಕಂಡವಾತ್ರದೊಳಾಕ |
ರುಷಣಮಂ ಮಾಡುವರ್ ಬೆರಸಿದೊಡೆ ಪುರುಷನಾ |
ಯುಷವನಪಹರಿಪರಿದು ನಿಶ್ಮಯಂ ನೀವಿಲ್ಲಿ ಮರೆದಾದೊಡಂ ಮನದೊಳು ||
ವಿಷಯಕೆಳಸದೆ ಬುದ್ಧಿವಂತರಾಗಿಹುದೆಂದು |
ವೃಷಕೇತು ಮೊದಲಾದ ವೀರರ್ಗೆ ಪೇಳುತನಿ |
ಮಿಷನಗರದೊಡೆಯ ಲಕ್ಷ್ಮೀಪತಿಯ ಮೈದುನಂ ಕಟಕದೊಳ್ ಸಾರಿಸಿದನು ||೫೦||