ಸೂಚನೆ ||
ಹಂಸಧ್ವಜನ ಸುತನ ಸಮರಮರಿದಾಗಿ ಬರೆ |
ಕಂಸಾರಿ ಬಂದು ಸಾರಥಿಯಾಗಿ ನರನ ಶರ |
ದಿಂ ಸುಧನ್ವನ ಶಿರವನರಿಸಿದಂ ಮೇಲೆ ಸುರಗಣಮೈದೆ ಕೊಂಡಾಡಲು ||

ಕೇಳೆಲೆ ನೃಪಾಲಕುಲಮೌಳಿ ಬಳಿಕರ್ಜುನಂ |
ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ |
ವಾಳಪಡೆಯಂ ತೆಗೆಸಿ ಬರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ ||
ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ |
ಮೇಳಮುಂ ದಾವಾಗ್ನಿಯಾಟೋಪಮಂತಕನ |
ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು ||೧||

ಕುದುರೆಗಳ ಖುರಪುಟಧ್ವನಿ ನಿಜವರುಥ ಚ |
ಕ್ರದ ರವಂ ದೇವದತ್ತದ ಘೋಷಮೆಸೆವ ಸಿಂ |
ಧದ ತುದಿಯ ಕಪಿಯಬ್ಬರಣೆ ಧನುರ್ಜ್ಯನಾದಮೊಂದಾಗಿ ಭೀಕರದೊಳು ||
ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ |
ಕದನದಾರವಮೆಂದು ತಿಳಿದಂಬುಜಾಸನಂ ||
ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು ||೨||

ವಾನರಸಮುನ್ನತ ಧ್ವಜವರೂಥದೊಳೈದು |
ವಾ ನರ ಸಮರ ಭರವನರಿದು ಕಾಳಗಕೆ ತಾ ||
ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ ||
ದಾನವರನಾನಿಮಿಷರೊಳ್ ನೀನೆ ಭಟನಹ ನಿ |
ದಾನವನನೇಕಮುಖದಿಂ ಕೇಳ್ದು ಸಂಗ್ರಾಮ |
ದಾನವನರಸಿ ಬಂದೆನೆಂದೆಚ್ಚನಾ ಸುಧನ್ವ ಪಾರ್ಥನಂ ಧುರದೊಳು ||೩||

ಕ್ರುದ್ಧನಾದಂ ಧನಂಜಯನಿದೇಕೆಮ್ಮೊಡನೆ |
ಯುದ್ಧವನಪೇಕ್ಷಿಸುವೆ ಶಿವಶಿವಾ ನೀನಪ್ರ |
ಬುದ್ಧನಲ್ಲವೆ ದೇವದೈತ್ಯಮಾನರೊಳ್ ಮದೀಯವೈರದೊಳೆ ಬಾಳ್ದ ||
ಉದ್ಧತಪರಾಕ್ರಮಿಗಳುಂಟೆ ಸಂಗರಕೆ ಸ |
ನ್ನದ್ಧರಾದಿನಸುತ ದ್ರೋಣ ಭೀಷ್ಮಾದ್ರಿ ಪ್ರ |
ಸಿದ್ಧಭಟರೀನಾದರರಿಯಲಾ ಮರುಳೆ ಹೋಗೆನುತೆಚ್ಚನಾ ಪಾರ್ಥನು ||೪||

ಸಾರಥಿಯ ಬಲ್ಪಿಂದೆ ಕೌರವಬಲದ ನಿಖಿಳ |
ವೀರರಂ ಗೆಲ್ದೆಯಲ್ಲದೆ ನಿನ್ನನೀಧರೆಯೊ |
ಳಾರರಿವಕಟ ನಿಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು ||
ಸಾರನ್ನೆಗಂ ಬರಿದೆ ಬಳಲಬೇಡೆಮ್ಮಲ್ಲಿ |
ಹಾರೈಸದಿರ್ ಜಯವನೆನುತೆಚ್ಚೊಡರ್ಜುನನ |
ತೇರಿರದೆ ತಿರ್ರನೆ ತಿಗುರಿಯಂತೆ ತಿರುಗಿತದನೇನೆಂಬೆನದ್ಭುತವನು ||೫||

ಪೂತರೆ ಸುಧನ್ವ ಸತ್ವಾತಿಶಯದಿಂದೆ ವಿ |
ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ |
ಪಾತಾಳ ಸುರನಿಲಯಭೂತಳದ ಪಟುಭಟವ್ರಾತದೊಳ್ ಕಾಣೆನಿನ್ನು ||
ನೀ ತರಳನಕಟ ಬರಿದೇತಕಳಿದಪೆ ನಿನ್ನ |
ತಾತನಂ ಬರಹೇಳು ಗಾತಿಸುವರಲ್ಲ ನಾ |
ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರನೆಚ್ಚನು ||೬||

ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ |
ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ |
ತನ್ನನಳುಕಿಸಲಯೆ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ ||
ಸನ್ನುತತುರಂಗಮೇಧಾಧ್ವರಕೆ ದೀಕ್ಷೆಗೊಂ |
ಬಂ ನರೇಂದ್ರಾಗ್ರಣಿ ಮರಾಲಧ್ವಜಂ ಬಳಿಕ |
ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚನು ||೭||

ಈ ಚಾಪವಿ ಬಾಣವಿ ದಿವ್ಯರಥವಿ ವ |
ನೇಚರಧ್ವಜವಿ ಮಹಾಶ್ವಂಗಳೀ ಸವ್ಯ |
ಸಾಚಿತ್ಯವಿ ದೇವದತ್ತಶಂಖಂ ತನಗಿದೇಕೆ ನಿನ್ನಂ ಜಯಿಸದೆ ||
ಈ ಚತುರ್ದಶಗವನಣುವೆಂದರಿವೆನಕಟ |
ಗೋಚರವೆ ನೀನೆಗ ಫಡಯೆನುತೆ ತೆಗಿದು ನಾ |
ರಾಚವೇಳ್ನೂರನೆಚ್ಚಂ ಸುಧನ್ವನಮೇಲೆ ಪಾರ್ಥನೆಣ್ದೆಸೆ ಕಂಪಿಸೆ ||೮||

ದಿವ್ಯಹಯ ರಥ ಶರ ಕೇತು ಕಂಬುಗಳ್ |
ಸವ್ಯಸಾಚಿತ್ಯಮಿವು ನಿನಗೊದಗಿದವು ರಣದೊ |
ಳವ್ಯಯಂ ಸಾರಥ್ಯಮಂ ಮಾಡಲಿನ್ನು ಜಯವಹುದೆ ಹುಲುಸೂತನಿಂದೆ ||
ಹವ್ಯವಾಹನಸಕಂ ತೊಲಗಿಸುವ ಬಹಳಮೇ |
ಘ ವ್ಯೂಹಸಂಘಾತದೊಡ್ಡವಣೆ ಮುರಿವುದೆ ಕೃ |
ತವ್ಯಜನವಾತದಿಂದೆಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು ||೯||

ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ |
ತಾತಂಡನಂತಿಹ ಕಲಿಸುಧನ್ವನಂ ಕಂಡು ಮಿಗೆ |
ಖಾಂಡವದಹನಲಬ್ಧವಾಗಿ ಮೂಡಿಗೆಯೊಳಿರ್ದಾಗ್ನೇಯಮಾರ್ಗಣವನು ||
ಗಾಂಡೀವಕಳವಡಿಸಿ ತೆಗೆವಿನಂ ಕರ್ಬೊಗೆಯ |
ಜಾಂಡಮಂ ತೀವಿದುದು ಕಾದುವು ಕುಲಾದ್ರಿಗಳ್ |
ಬಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಪೇಳಲೇನದ್ಭುತವನು ||೧೦||

ಆವಗಂ ಪೀರ್ವೊಡಸಗೊಮಡು ತೀರದ ಮ |
ಹಾವಾಧಿಜಲವನೊಂದೇಸಾರಿ ಸುರಿಗೊಂಬ |
ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಪಣೆಯ ಕಣ್ಗೆಚ್ಚಿದೋ ||
ಬಾವಿಸುವೊಡರಿದೆಂಬೊಲಾದುಡು ಧನಂಜಯನ |
ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ |
ಡೀವದಿಂ ಪಾರಿಸಿದೊಡಾ ಸುಧನ್ವನ ಸರಸಕಡರಿತುರಿ ಕಡುಭರದೊಳು ||೧೧||

ತೆಕ್ಕೆವರೆದೇಳ್ವ ಕರ್ಬ್ಬೊಗೆಯ ಹೊರಳಿಗಳ ದಶ |
ದಿಕ್ಕುಗಳನವ್ವಳಿಪ ಕೇಸುರಿಯ ಚೂಣಿಗಳ |
ಮಿಕ್ಕು ಸೂಸುವ ತೂರುಗಿಡಿಗಳಾ ಕೌರಿಡುವ ಪೊತ್ತುಗೆಗಳ ||
ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ |
ಮುಕ್ಕುಳಿಸಿ ಮೊಗೆವ ಪೆರ್ಗಿಚ್ಚುಗಳ ವೆಂಕೆ ಮೇ |
ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು ||೧೨||

ಕಾದವು ಭಟರ ಕೈದುಗಳ ಪಿಡಿಯಲರಿದೆನ |
ಲ್ಕಾದವು ಶರಾಗ್ನಿ ಗಾಹುತಿ ಗಜಹಯಾದಿಗಳ್ |
ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು ||
ಕೋದಂಡಕತಿವೇದೊಳ್ ವಾರುಣಾಸ್ತ್ರಮಂ |
ಕೋದಂಡಲೆವ ಶಿಖಿಜ್ವಾಲೆಯಂ ನಿಲಿಸಲಿದ |
ಕೋ ದಂಡಮೆನ್ನೊಳೆನುತಾರ್ದು ತೆಗೆದೆಚ್ಚನುರಿ ನಂದಿ ಜಲಮಯವಾಗಲು ||೧೩||

ನಾದವು ಸಮಸ್ತಬಲಮಖಿಳವಾದ್ಯಗಳ ನಿ |
ನಾದವುಡುಗಿತು ನನೆದು ಗಜ ವಾಜಿ ನಿಕರಮೇ |
ನಾದವುದಕದೊಳೆಂಬುದಂ ಕಾಣೆನಾ ಸುಧನ್ವನ ವಾರುಣಾಸ್ತ್ರದಿಂದೆ ||
ತೋದಳವಳಿದರೆಲ್ಲ ರಂಬುಧಾರೆಗಳದೆಂ |
ತೋ ಹಳವನೊರಸಿದವರ್ಜುನಂ ಬೆರಗುವೆ |
ತ್ತೋದಲಳವಡದ ವಟುವಂತಿರ್ದನಾಹವದೊಳರಸ ಕೇಳ್ ಕೌತುಕವನು ||೧೪||

ಬಳಿಕ ವಾಯವ್ಯಾಸ್ತ್ರದಿಂದೆ ಶೋಷಿಸಿದನಾ |
ಜಲವನರ್ಜುನ ನದ್ರಿಬಾಣಮಂ ಪೂಡಿದಂ |
ಕಲಿ ಸುಧನ್ವಂ  ತೊಟ್ಟನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು ||
ಸೆಳದಂ ಮರಾಳಧ್ವಜನ ಸುತಂ ತೆಗೆದನು |
ಜ್ವ್ಯಲರವಿಕಳಂಬಮಂ ಭೀಭತ್ಸು ತುಡುಕಿದಂ |
ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮುಖವನು ||೧೫||

ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ |
ಚಾತುರ್ಯದಿಂದೊರ್ವರೊರ‍್ವರಂ ಗೆಲ್ವ ಸ |
ತ್ವಾತಿಶಯದಿಂದೆ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದೆ ||
ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ |
ಶ್ವೇತವಾಹನನಾರ್ದಿಸಲ್ಕೆ ಹಂಸಧ್ವಜನ |
ಜಾತಂ ಪ್ರತೀಕಾರಕಾ ಪಿತಾಮಹಶರವನೆಚ್ಚೊಡನೆ ಬೊಬ್ಬಿರಿದನು ||೧೬||

ಆ ವರ ಬ್ರಹ್ಮಾಸ್ತ್ರಂಗಳೆರಡುಂ ಪೊಣರ್ದಡಗ |
ಲಾ ವಿಜಯನೆಣಿಕೆಗೊಂಡೀತನಂ ಗೆಲ್ವ ಬಗೆ |
ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ನ ರಥಕವನ ತೇರ್ಗೆ ||
ತೀವಿದುವು ಬಾಣಂಗಲಾಕಾಶಮಂ ಕಾಣೆ |
ನೀವಸುಧೆಯೆತ್ತನದು ಶಶಿರವಿ ಕುಲಾದ್ರಿ ತಾ |
ರಾವಳಗಳೇನಾದು ವೆಣ್ದಾಸೆಯ ನರಿವರಾರೆಂಬಿನಂ ಕೈಗೈದನು ||೧೭||

ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ |
ಬಚ್ಚಳೆಯ ಪೊಸಮಸೆಯ ನಿಚ್ಚಳದ ನಿಡುಸರಳ್ |
ಪೆಚ್ಚದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನು ||
ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ |
ಚುಚ್ಚಿದವು ಕೂಡೆ ಥಟ್ಟುಚ್ಚಿದವು ಸೀಳಾಗಿ |
ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರಗಲು ಮಚ್ಚಿದವು ನೆಣವಸೆಯನು ||೧೮||

ಗೌರಿಯರಸನ ಕೂಡೆ ಕಾದಿದ ಪರಾಕ್ರಮದ |
ಸೌರಂಭಮಿಂತುಟೆ ನಿವಾತಕವಚರನಿರಿದ |
ಗೌರವಮಿದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ ||
ಕೌರವಬಲದೊಳಖಿಳ ವೀರಭಟರಂ ಗೆಲ್ದ |
ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ |
ಶೌರಿಯಂ ಕರೆಸನುತೆ ಕಣೆಗಳಂ ಕಡಿದೆಚ್ಚನಾ  ಸುಧನ್ವಂ ನರನನು ||೧೯||

ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ |
ಪೇಳಲರಿಯೆಂ ತಿರುಗುತಿರ್ದುದು ವರೂಥಂ ಕು |
ಲಾಲಚಕ್ರದ ವೊಲಸವಳಿದಂ ಕಪೀಶ್ವರಂ ಭ್ರಮಣೆಯಿಂ ಧ್ವಜದಮೇಲೆ ||
ಕಾಲಾಟವಡಗಿದುವು ಕುದುರೆಗಳ್ ಸೂತನಂ |
ಕಾಲನೊಯ್ದಂ ಧನಂಜಯನೊಡಲೊಳಂಬುಗಳ್ |
ಕೀಲಿಸಿದುವಿಕ್ಕೆಲದ ಸೇಣೆಯಂ ಸವರಿದುವು ಹೊಗರುಗುವ ಹೊಸಗಣೆಗಳು ||೨೦||

ವ್ಯಥಿಸಿದಂ ಗಾಯದಿಂ ಸೂತನಳಿಯಲ್ಕೆ ಸಾ |
ರಥಿತನವನುಂ ತಾನೆ ಮಾಡುತಿದಿರಾದನತಿ |
ರಥರೊಳಗ್ಗಳೆಯನರ್ಜುನನಾ ಸುಧ್ವನ್ವಂಗೆ ಬಳಿಕೀತನಂ ಧುರದೊಳು ||
ಮಥಿಸದಿರ್ದೊಡೆ ತನ್ನನೇಕೆ ಪಡೆದಳೊ ಬರಿದೆ |
ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ |
ಪೃಥಿವಿಪನ ಮಖಕೆಡರಕಟಯೆನುತೆ ಮನದೊಳಗೆ ಕೃಷ್ಣನಂ ಧ್ಯಾನಿಸಿದನು ||೨೧||

ಅರಸ ಕೇಳರ್ಜುನಂ ಧಾನಿಸಲ್ಕಾಗಳಿಭ |
ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ |
ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳ್ಗೆ ||
ತೆರಳದು ಕಿರೀಟಿಗಾಹವಮೆಂದು ವಹಿಲದಿಂ |
ಗರುಡವಾಹನಾಗಿ ಬಂದನಾ ಕ್ಷಣಕಲ್ಲಿ |
ಗರವಿಂದನಾಭನಾನತರ ನೆನಹಿಗೆ ನಿತ್ಯನೆಂಬುದಂ ತೋರುವಂತೆ ||೨೨||

ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರಾ |
ಲಸ್ಯಮಿಲ್ಲದೆ ಮಾಡುವ ಧ್ಯಾನಕೊಮ್ಮೆ ಯುಂ |
ದೃಶ್ಯಮಿಲ್ಲದ ಚಿನ್ಮಯಾನಂದರೂಪನೀಕುಂತೀಕುಮಾರಕರ್ಗೆ ||
ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ |
ಘಶ್ಯಾಮಲನ ಲೀಲೆ ಪೊಸೆತೆಮದು ಸುರರುಲಿಯೆ |
ಸ್ವಸ್ಯಾಲಕನ ರತಾಗ್ರಕೆ ಸುಪರ‍್ಣಸ್ಕಂಧದಿಂದೆ ಮುರಹರನಿಳಿದನು ||೨೩||

ಮೊಳಗಿದುವು ನಿಸ್ಸಾಳಕೋಟಿಗಳ್ ಫಲುಗುಣನ |
ದಳದೊಳಗೆ ತನತನಗೆರಗುತಿರ್ದುದುತ್ಸವದ |
ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಮಬ್ಧಿ ಘೋಷಣವನು ||
ಬಳಿಕ ನಸುನಗುತೆ ಚರಣಕೆ ಮಣಿದ ಪಾರ್ಥನಂ |
ಸೆಳೆದು ಬಿಗಿಯಪ್ಪಿ ಮೈದಡವಿ ಬೋಳೈಸಿ ರಥ |
ದೊಳಗೆ ಕುಳ್ಳಿರ್ದು ನಲವಿಂದೆ ಮುರರಿಪು ಕುದುರೆಗಳ ವಾಘೆಯಂ ಕೊಂಡನು ||೨೪||

ಇನಿತೆಲ್ಲಮಂ ನೋಡುತಿರ್ದಂ ಸುಧನ್ವನನು |
ದಿನಮಂತರಂಗದೊಳ್ ಧ್ಯಾನಿಸುತೆ ನಿರ್ಮಲಾ |
ತ್ಮನ ದಿವ್ಯಮೂರ್ತಿಯಂ ಪಾರ್ತನ ರತಾಗ್ರದೊಳ್ ಕಂಡು ಪುಳಕೋದ್ಗಮದೊಳು ||
ತನುವನೀಡಾಡಿ ಸಾಷ್ಟಾಂಗಪ್ರಣಾಮದಿಂ |
ಮನದೊಳಗೆ ಹಿಗ್ಗಿ ತನ್ನಾಳ್ತನಕ್ಕೆ ಸಾಕಿನ್ನು |
ನೆನೆದೆಣಿಕೆ ಕೈಸಾರ್ದುದೆಂದು ಕಣ್ದಣಿಯದಚ್ಚಯತನಂ ನಿರೀಕಿಸಿದನು ||೨೫||

ಆತಸೀಕುಸುಮಗಾತ್ರನಂ ಕಮಲನೇತ್ರನಂ |
ಸ್ಮಿತ ರುಚಿರ ಶುಭ ರದನನಂ ಚಾರು ವದನನಂ |
ಕೃತಮೃಗಮ ದೋಲ್ಲಸತ್ಸುಲಲಾಟನಂ ಮಣಿಕರೀಟನಂ ಕಂಬುಗಲದಾ |
ಆತುಲ ತುಲಸೀಮಾಲನಂ ರಮಾಲೋಲನಂ |
ಧೃತಕೌಸ್ತುಭೋದ್ಬಾಸನಂ ಪೀತವಾಸನಂ |
ನುತಸಮಸ್ತಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು ||೨೬||

ಜಯ ಚತುರ್ಮುಖಜನಕ ಜಯ ಚಾರುಚಾರಿತ್ರ |
ಜಯ ಚಿದಾನಂದ ಜಯ ಚೀರಾಂಬರಜ್ಞೇಯ |
ಜಯ ಜಯ ಚ್ಯುತಿದೂರ ಜಯ ಚೂಡನರ್ಹಶೋಭಿತ ಚೇತನಸ್ವರೂಪ ||
ಜಯ ಚೈದ್ಯಮಥನ ಜಯ ಚೋದಿತಾಖಿಳಲೋಕ |
ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ |
ಜಯ ಚಕ್ರಧರಯೆಂದು ಕೃಷ್ಣನಂ ಕಲಿಸುಧನ್ವ ಪೊಗಳ್ದ ಮನದೊಳು ||೨೭||

ಜೀಯ ಜಗದಂತರಾತ್ಮಕ ಸರ‍್ವಚೈತನ್ಯ |
ಜೀಯ ಶುದ್ಧಾದ್ವಯ ನಿರಂಜನ ನಿರಾವರಣ |
ಜೀಯ ನಿನ್ನೊಳಗೀ ಸಮಸ್ತಮಧ್ಯಮಾಗಿದೆ ನೀನೆ ಸತ್ಯರೂಪ ||
ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ |
ಜೀಯ ಚಕ್ರಿಯೆ ಪೀತವಾಸ ಲಕ್ಷ್ಮೀಲೋಲ |
ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾತಶದಿಂದೆನ್ನನೆಂದು ||೨೮||

ಭಯಭರಿತಭಕ್ರಿಯಿಂ ಭಾವಿಸಿದನಾ ಜಗ |
ನ್ಮಯನಂ ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ |
ತೆಯನೆನಗೆ ತೋರಿಸಿದೆ ಲೇಸಾಯ್ತು ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ ||
ಜಯಮೆತ್ತಣದು ಲೋಕದೊಳ್ ಸಾಕದಂತಿರಲಿ |
ಬಯಲ ಭಂಜನೆ ಬೇಡ ಮಾಡಲೊಂದು ಪ್ರತಿ |
ಜ್ಞೆಯನರ್ಜುನಂ ನಿನ್ನ ಮುಂದೆನ್ನಮೇಲೆನುತ್ತಾ ಸುಧನ್ವಂ ನುಡಿದನು ||೨೯||

ಅರ್ಜುನಂ ಕೇಳ್ದನೆಲೆ ಮರುಳೆ ನೋಡಾದೊಡಿ |
ನ್ನಾಜಿಸಿದ ಸುಕೃತಮೆಳ್ಳನಿತಿಲ್ಲದಿಹ ಪುಣ್ಯ |
ವರ್ಜಿತನ ಲೋಕಮಾಗಲಿ ತನಗೆ ನಿನ್ನ ತಲೆಯಂ ಮೂರುಬಾಣದಿಂದೆ ||
ನಿರ್ಜರರ್ ಮೆಚ್ಚಲರಿಯದೊಡೆಂದು ನುಡಿಯಲ್ಕೆ |
ದುರ್ಜಯನಿವಂ ನಿನಗೆ ಸಾಧ್ಯನಲ್ಲೆಂದು ಹರಿ |
ಗರ್ಜಿಸಿದನಾ ಪಾರ್ಥನಂ ಬಳಿಕ ಹಂಸಧ್ವಜನ ತನಯನಿಂತೆಂದನು ||೩೦||

ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ |
ಗೀರ್ವಾಣರೆಲ್ಲ ರುಂ ನೋಡುತಿರಲೀಗ ನೀಂ |
ಸರ್ವಶಕ್ತಿಯೊಳಿಸುವ ಮೂರುಬಾಣಂಗಳಂ ನಡುವೆ ಖಂಡಸದಿರ್ದೊಡೆ ||
ಉರ್ವಿಯೊಳ್ ಪಾತಕಿಗಲಾಗಿರ್ದವರ ಗತಿಗ |
ಡರ್ವೆನೆಂದಾ ಸುಧನ್ವಂ ಬಳಿಕ ಮೇದಿನಿಯ |
ದಿರ್ವಿನಂ ತೆಗೆದಚ್ಚನರ್ಜುನನ ತೇರೊಂದು ನಲ್ವಮಾತ್ರಂ ತೊಲಗಲು ||೩೧||

ತೇರ್ಮಗುಳ್ದಳವಿಯಿಂ ತೊಲಗಿ ಬೆಂಡಾಗಿ ನಾ |
ನೂರ‍್ಮೊಳಂ ಪೋಗಲ್ಕೆ ತಲೆದೂಗಿ ಬೆಂಡಾಗಿ ನಾ |
ಕಾರ‍್ಮೊಳಗುವಂತಿದೆ ಸುಧನ್ವನಂ ಕೊಂಡಾಡಿ ನೋಡಿ ಪಾರ್ಥನ ಮೊಗವನು ||
ಘರ್ಮಿಸಿದನಂದಿನ ಜಯದ್ರಥನ ಕಥೆ ಬಂದು |
ಡಾರ್ಮುಳಿದೊಡಂ ಮಣಿವನಲ್ಲ ಮೇಣಿವನೊಡನೆ |
ಮಾರ್ಮೆಲೆವರಿಲ್ಲ ನೀನೆನ್ನೊಳಾಲೋಚಿಸದೆ ನುಡಿದೆ ಬಾಷೆಯನೆಂದನು ||೩೨||

ಇವನೇಕಪತ್ನೀವ್ರತಸ್ಥನಾಗಿಹುದರಿಂ |
ತವೆ ತಾತನಾಜ್ಞೆಯಂ ಪಾಲಿಸುತೆ ಬಹುದರಿಂ |
ಕವಲಿಲ್ಲದೆಮ್ಮನರ್ಚಿಪ ಭಕ್ತನಹುದರಿಂದಜ ಭವ ಸುರೇಶ್ವರರ್ಗೆ ||
ಬವರದೊಳ್ ಮಣಿವನಲ್ಲಿನ್ನಿವನ ಶೌರ್ಯಮಂ |
ಜವಗೆಡಿಸಿ ನಮ್ಮನುರೆ ಬಳಲಿಸುವ ಧೈರ್ಯಮಂ |
ಭುನತ್ರಯವನಂಜಿಸುವ ವಿಪುಳವೀರ‍್ಯಮಂ ನೋಡೆಂದು ಹರಿ ನುಡಿದನು||೩೩||

ಅನಿತರೊಳ್ ಕಲಿಸುಧನ್ವಮ ಕೇಳ್ದು ನುಡಿದನೆಲೆ |
ವನಜಾಕ್ಷ ಬೆಟ್ಟಮಂ ಕೊಡೆವಿಡಿದು ಪಟ್ಟಿಯಂ |
ನನೆಯಲೀದೊಡೇನಹುದಿನ್ನು ಪಾರ್ಥನಂ ರಕ್ಷಿಸುವೆ ನೀಂ ಕೃಪೆಯೊಳಾವು ಬರಿದೆ ||
ತೊನೆದೊಡೇನಹುದಿನ್ನು ರಣದೊಳೀ ದೇಹಮಂ |
ನಿನಗೊಪ್ಪಿಸದೆ ಬಿಡೆಂ ಸಾಕದಂತಿರಲೊಮ್ಮೆ |
ಮುನಿದು ನೋಡುಳುಕಿದೊಡೆ ನಿನ್ನ ಕಿಂಕರನಲ್ಲೆನುತ ರಥವನೊಡೆಯೆಚ್ಚನು ||೩೪||

ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ |
ಕಿರ್ರನೆ ಕಪೀಶ್ವರಂ ಪಲ್ಗಿರಿದು ಚೀರಲ್ಕೆ |
ಕರ್ರನೆ ಕವಿಯೆ ಕಣ್ಗೆ ಕತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ ||
ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಿಂ |
ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿಂ |
ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನನಸುರಾರಿ ಬಣ್ಣಿಸಿದನು ||೩೫||

ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತಾಗೆ |
ಕುಡಿಹುಬ್ಬು ಧೂಮಲತೆಯೆಂಬೊಲಿರೆ ಹುಂಕಾರ |
ದೊಡನೆ ನಿಶ್ವಾಸಮಂ ಬಿಡುವ ನಾಸಾಪುಟಂ ಜ್ವಾಲೆಯಂದದೊಳೊಪ್ಪಿರೆ ||
ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ |
ಕಡೆಗಾಲದಂದಿನ ಧನಂಜಯಂ ತಾನೆನಲ್ |
ಪಡೆ ನಡುಗೆ ಬೊನ್ನಿರಿದು ಪೂಡಿದಂ ಬಾಣಮಂ ಸೆಳೆದು ನಿಜಕಾರ್ಮುಕವನು ||೩೬||

ಖತಿಯಿಂದೆ ಫಲುಗುಣಂ ಪುಡಿದ ಮಹಾಸ್ತ್ರಮಂ |
ಶತಪತ್ರಲೋಚನಂ ಕಂಡದಕೆ ಮುನ್ನ ತಾ |
ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತ್ತು ||
ಅತಿಶಯದ ಶಕ್ತಿಯಂ ನೆಲೆಗೊಳಿಸಿ ಬೇಗದಿಂ |
ಪ್ರತಿಭಟನ ತಿರವನಿಳುಹಿನ್ನೆಂದು ಬೆಸೆಸಲು |
ನ್ನತಪರಾಕ್ರಮಿ ಧನಂಜಯನಾರ್ದು ಕಿವಿವರೆಗೆ ತೆಗೆದಚ್ಚನಾ ಶರವನು ||೩೭||

ಅಹಹ ಮುರಹರ ಪಾರ್ಥನಿಸುವ ಬಾಣಕೆ ನಿನ್ನ |
ಬಹಳ ಸುಕೃತವನಿತ್ತೆ ಲೇಸಾದುದಿದನರಿಯ |
ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸರಿಸಕೆ ನಭದೊಳು ||
ಬಹ ಸರಳನೆಚ್ಚು ನಿಮಿಷಾರ್ದದೊಳ್ ಕಡಿದು ಗಹ |
ಗಹಿಸುವ ಸುಧನ್ವನಂ ಕಂಡವನ ಸೈನ್ಯದೊಳ್ |
ಕಹಳೆಗಳ್ ಸೂಳೈಸಿದವು ಮೆಚ್ಚಿದರ್ ದಿವಿಜರಚ್ಯುತಂ ಬೆರಗಾದನು ||೩೮||

ಮೂರುಬಾಣದೊಳಿವನ ತಲೆಯನರಿದಪೆನೆಂದು |
ತೋರಿಯಾಡಿದೆನಾಂ ಪ್ರತಿಜ್ಞೆಯನದರೊಳೊಂದು |
ವಿರಿಪೋದುದು ಕೋಲೆರಡರಿಂದೆ ರಿಪುಶಿರವನಿಳುಹಬೇಕೆನುತೆ ನರನು ||
ಏರಿಸಿದೆ ನಂಬಂ ಶರಾಸನಕೆ ಬಳಿಕದಕೆ |
ಹೇರಿದಂ ಹರಿ ಕೃಷ್ಣಾವತಾರದೊಳ್ |
ವಿರಿಧರೆಯಂ ಪುಣ್ಯಮಂ ಮೇಲೆ ಪಲುಗುಣನೆಚ್ಚನಾ ಕಣೆಯನು ||೩೯||

ಅಗಳತಿ ರೋಷದಿಂದಾಲಿಗಳ್ ಕೆಂಪಡರ |
ಲೀಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ |
ನೀಗಿದೆಯಲಾ ದೇವ ನೋಡು ಬಹ ದಿವ್ಯಾಸ್ತ್ರಮಂ ಕತ್ತರಿಸದಿರ್ದೊಡೆ ||
ಭೋಗದೊಳರುಂಧತಿಯ ದುರ್ಗತಿಗೆ ಕೂಡಿದ ವಸಿಷ್ಠನಂ |
ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು |
ತಾಗಸದೊಳರ್ಕನಂತೈಪ್ಪ ಸರಳಂ ಸುಧನ್ವನಿಕ್ಕಡಿಗೈದನು ||೪೦||

ಕೂಡೆ ಮೊಳಗಿದವು ನಿಸ್ಸಾಳಂಗಯದೆ ಕೊಂ |
ದಾಡಿದರ್ ಸುರರಭ್ರದೊಳ್ ಬಳಿಕ ಕೃಷ್ಣನಂ |
ನೋಡಿ ನುಡಿದಂ ಪಾರ್ಥನೆರಟಂಬು ಮುರಿದುದಿನ್ನೊಂದರೊಳಿವನ ಶಿರವನು |
ರೂಢಿಯಿಂದಯದೊಡೆ ಹರಿಹರ ವಿಭೇದಮಂ |
ಮಾಡಿ ನಿಂದಿಸಿದವನ ಗತಿಯಾಗಲೆನಗೆನುತೆ |
ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳದ್ಭುತವನು ||೪೧||

ಆ ಹೂಡಿದರ್ಜುನನ ಮಾರ್ಗಣದ ಮೊದಲೊಳಾ |
ವಾಹನಂಗೈದು ಕಮಲಜನಂ ನಿಲಿಸಿ ವೃಷಭ |
ವಾಹನದ ಕೋಲ್ದದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ ||
ಕಾಹುಗಳನುರೆ ಬಲಿದು ರಾಮಾವತಾರದೊಳ್ |
ದೇಹಮಳ್ಳನಿತುದಿನ ಮಾರ್ಜಿಸಿದ ಪುಣ್ಯಮಂ |
ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂ ತೋಳ್ವೊಯ್ದನು ||೪೨ ||

ಕಂಡ ನೀತೆರನಂ ಸುಧನ್ವನಿಂತೆಂದನೆಲೆ |
ಪುಂಡರೀಕಾಕ್ಷ ನಿನ್ನಯ ಪುಣ್ಯಮಂ ಸೂರೆ |
ಗೊಂಡವಂ ತಾನೋ ಧನಂಜಯನೊ ಪುಸಿಯದುಸಿರೆನಗೆ ಸಾಕಿನ್ನು ಬರಿದೆ ||
ಕೊಂಡಾಡಬೇಡ ಬಿಡಿಸಂಬನದನೆಡೆಯೊಳಾಂ |
ಕಂಡಿಸದೊಡೆನ್ನಣುಗನೆಂಬಲೇ ಮಾತೆ ಸತಿ |
ಗಂಡನೆಂದೆಣಿಸುವಳೆ ಸುತನೆ ತಾತಂಗೆ ಕೇಳ್  ಪ್ರತಿಜ್ಞೆಯನೆಂದನು ||೪೪||

ಭೂಸುರರ್ ಬಂದು ಕಾಶಿಯೊಳೆಪೆವ ಮಣಿಕರ್ಣಿ |
ಕಾಸಲಿಲದೊಳ್ ಮಿಂದು ಶಾಸ್ತ್ರವಿಧಿಯಿಂದಮುಪ |
ವಾಸಮಂ ಮಾಡಿ ಶಿವರಾತ್ರಿಯೊಳ್ ವಿರಚಿಸಿದ ವಿಶ್ವೇಶಪೂಜೆಗಳನು ||
ಹೇಸದೆಡಗಾಲಿಂದೆ ನೂಕಿದನ ದೋಷಮೆನ |
ಗೀಸಾಯಕವನೆಡೆಯೊಳರಿಯದಿರಲಾಗಲೆಂ |
ದಾ ಸುಧನ್ವಲ ತನ್ನ ಭುಜಬಲದೊಳಾರ್ದು ನಿಜಧನುವನೊದರಿಸುತಿರ್ದನು ||೪೫||

ಅನಿತರೊಳ್ ತ್ರೈಮೂರ್ತಿಗಳ ದಿವ್ಯಶಕ್ತಿಯಿಂ |
ವಿನುತ ರಾಮಾವತಾರದ ಪುಣ್ಯಶಕ್ತಯಿಂ |
ದನುಪಮ ಧನುರ‍್ವೇದದುರುಮಂತ್ರಶಕ್ತಿಯಿಂ ತೀವಿದ ಮಹಾಶರವನು ||
ತನಗೆ ಬೂಜಬಲದೊಳುಂಟಾದ ನಿಜಶಕ್ತಿಯಿಂ |
ಕನಲಿ ಕಿವಿವರೆಗೆ ತೆಗೆದಾರ್ದು ಫಲುಗುಣನೆಚ್ಚ |
ನೆನಿತು ಸತ್ವಾಧಿಕನೊ ಕಲಿಸುಧನ್ವಂ ಧರೆಯೊಳೇನೆಂದೆನದ್ಭುತವನು ||೪೬||

ಹೆದರಿತುಭಯದ ಸೇನೆ ಕೆದರಿತು ಸುರಸ್ತೋಮ |
ಮೊದರಿತಿನಮಂಡಲಂ ಬೆದರಿತು ಜಗತ್ತ್ರಯಂ |
ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹಮದಿರಿತಿಳೇ ತತ್ಕ್ಷಣದೊಳು ||
ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ |
ಪುದುಗಿತೆಣ್ದೆಸೆಯಾನೆ ಹುದುರದಂ ಭೋಗಿಪಂ |
ಗದಗದಿಸಿತಾ ಸಾಯಕದ ಸಾಯಕದ ಬ್ರಹ್ಮಾಂಡಮದನೇನ ಬಣ್ಣೆಸುವೆನು ||೪೭||

ಬೆಚ್ಚದನೆ ಬೆದರಿದನೆ ಚಿತ್ತದೊಳ್ ಕಲಿತನದ |
ಕೆಚ್ಚು ಕೊರಗಿದೆ ಮಹಾಶರವನಾಗಳಾ |
ರ್ದೆಚ್ಚಂ ಸುಧನ್ವನಿಕ್ಕಡಿಯಾದುದಂಬು ಬಿದ್ದುದು ಹಿಂದಣರ್ಧಮಿಳೆಗೆ ||
ಉಚ್ಚಳಿಸಿ ಬಂದು ಕೋಲ್ದುದಿಯವನ ಕಂಠಮಂ |
ಕೊಚ್ಚಿ ಹಾಯ್ದತ್ತಳಲ್ದುದು ಮೇದಿನಿಯೊಳಾಗ |
ಳಚ್ಯುತ ಮುರಾರಿ ಕೇಶವ ರಾಮ ಯೆನುತಿರ್ದುದಾ ತಲೆ ಚಿಗಿದು ನಭದೊಳು ||೪೮||

ಕಂದು ಕುಂದಿಲ್ಲದ ಸುವೃತ್ತದಿಂದೆಸೆವ ತನ |
ಗೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ |
ಮೆಂದು ನಿಜವೈರಮಂ ಬಿಟ್ಟು ಕಮಲಮಗಳಂ ಸಂತೈಸೆ ಗಗನದಿಂದೆ ||
ಬಂದಪನೊ ಸಂಪೂರ್ಣಕಲೆಗಳಿಂದಾ ರಾಜಿ |
ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕೈ |
ತಂದು ಬಿದ್ದುದು ಸುಧಣ್ವನ ಶಿರಂ ಹರಿಯ ನಾಮಾವಳಿಯನುಚ್ಚರಿಸುತೆ ||೪೯||

ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ |
ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೋಳ್ಗಳಂ |
ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು ||
ಅಪ್ಪಳಿಸಿ ಹೊಯ್ದೆಳೆದು ಸದೆದಿಟ್ಟೊರಸಿ ಮೆಟ್ಟಿ |
ಸಿಪ್ಪಿಸಿ ಪೊರಳ್ದರೆದು ತೆವರಿ ಪರಿದರೆಯುಟ್ಟಿ |
ಚಿಪ್ಪು ಚೀರಾಗಿಸಿತು ಸಕಲಪರಿವಾರಮಂ ಮುರಹರಂ ಬೆರಗಾಗಲು ||೫೦||

ಹೊಳೆವ ಕುಂಡಲದ ಕದಪಿನ ಮುರಿದೆಸೆವ ವಿಸೆ |
ಗಳ ನಗೆಮೊಗೆದ ರದನಪಜ್ಕ್ತಗಳ ಬಿಟ್ಟ ಕಂ |
ಗಳ ಬಿಗಿದ ಹುಬ್ಬುಗಳ ಪೆರೆನೊಸಲ ಲಿತಕದ ನವಿರ ಹಿಣಿಲ ಕಾಂತಿಯಿಂದೆ ||
ಕಳಕಳಿಪ ತನಿವೀರರಸದುರುಳಿಯಂತೆ ತೊಳ |
ತೊಳಗುವ ಸುಧನ್ವನ ಶಿರವನೆರಡು ಕೈಗಳಿಂ |
ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನವನದೇಂ ಸುಕೃತಿಯೊ ||೫೧||

ಕೈದಳದೊಳೆಸೆವ ತಲೆಯಂ ನಾಸಿಕಾಗ್ರದೆಡೆ |
ಗೊಯ್ದು ಮುರಮಥನನಾಘ್ರಾಣಿಸಿದನಾತನೇ |
ಗೈದನೆಂಬುದನಚ್ಯುತನೆ ಬಲ್ಲನಾಗಲಾ ಮೊಗದಿಂದೆ ತನ್ನ ಮೊಗಕೆ ||
ಐದಿತವನಾತ್ಮವತಿತೇಜದಿಂ ಬಳಿಕಮರ |
ರೈದೆ ಬಣ್ಣಿಸಿದರಾ ಶಿರವನಸುರಾಂತಕಂ |
ಮೈದುನಂಗುರೆ ತೋರಿ ಹಂಸಧ್ವಜನ ಮುಂದಕಿಡಲಟ್ಟೆ ಬಿದ್ದುದಿಳೆಗೆ ||೫೨||

ಭೂಪಾಲ ಕೇಳ್ ನೋಡುತಿರ್ದಂ ಸುಧನ್ವನಾ |
ಟೋಪಮಂ ತಲೆ ಪಾರ್ಥನಸ್ತ್ರದಿಂ ಪರಿಯೆ ಸಂ |
ತಾಪದಿಂ ಮರುಗುತಿಯೊಳ್ ಪೊರಳ್ವಿನಮಾಶಿರಂ ತನ್ನ ಬಳಿಗೆ ಬರಲು ||
ಹಾ ಪುತ್ರಯೆನುತೆತ್ತಿಕೊಂಡು ಮುಂಡಾಡಿ ಪಣೆ |
ಗಾಪಣೆಯನೊಂದಿಸಿ ಪೊಸೆದು ಚೀರ‍್ದು ಬಹಳ ಪ್ರ |
ಲಾಪದಿನಳಲ್ದಂ ಮರಾಳಧ್ವಜಂ ಪೊರೆಯ ಕಲ್ಮರಂ ಕರಗುವಂತೆ ||೫೩||

ಬೀಳ್ವೆನೋ ಶೈಲಾಗ್ರದಿಂದೆ ಕರ್ಮಡುವಿನೊಳ |
ಗಾಳ್ವೆನೋ ನಿನ್ನ ನಿಟ್ಟಿಪ ತನ್ನ ಕಂಗಳಂ |
ಕೀಳ್ವೆನೋ ಪರಸಿ ಪಡೆದೊಡಲನುರೆ ಸೀಳ್ವೆನೋ ನಿನ್ನ ನುಡಿಗಳನೆಂದಿಗೆ ||
ಕೇಳ್ವೆನೋ ಜನ್ಮ ಜನ್ಮಾಮತರದೊಳಾದೊಡಂ |
ಪೇಳ್ವೆನೋ ನಿನಗೆ ಬೆಸನಂ ಮಗನೆ ಶೋಕಮಂ |
ತಾಳ್ವೆನೋ ತಾನೆನ್ನೊಳುಸಿರಲಾಗದೆ ಮೌನಮೇಕಕಟ ನಿನಗೆಂದನು ||೫೪||

ಕೊಳುಗುಳಕೆ ನಡೆತಂದೆ ಬಿಲ್ವಿಡಿಯುತೈತಂದೆ |
ಫಲುಗುಣನೊಡನೆ ಹೋರಿ ಜಯಿಸಬೇಡವೆ ಹೋರಿ |
ಕಲಿತದೊಳುಕ್ಕಂದದಾತ ನೀನೇಕಂದವಳಿದೆ ರಣದೊಳಗೆ ಕಂದ ||
ನಿಲಿಯಕೆಂತಾಂ ಪುಗುವೆನುಳಿದು ನಿನ್ನಂ ಮಗುವೆ |
ಸಲಹು ಬಾ ನಮ್ಮಯ್ಯ ಮಾತಾಡು ದಮ್ಮಯ್ಯ |
ಬಳಲಿಸದಿರೈ ತಮ್ಮನೊಮ್ಮೆ ನೊಡೈ ತಮ್ಮಯೆಂದಳಲೊಳವನಾಳ್ದನು ||೫೫||

ಮೋಹಮುಳ್ಳೊಡೆ ತಪ್ತ ತೈಲಪೂರಿತ ಘನಕ |
ಟಾಹದೊಳ್ ಕೆಡಪಿಸುವನೇ ತಂದೆ ತನಯನಂ |
ಬಾಹಿರಂಗದ ಶೋಕವೆಂದು ಜರೆಯದ ಲೋಕವಿಗ ಹಲುಬಲ್ ತನ್ನನು ||
ದ್ರೋಹಮಂ ಮಾಡಿದೆಂ ನಿನಗೆನ್ನ ಮೇಲೆ ಮುಳಿ |
ದಾಹವದೊಳಳಿದೈ ಸುಧನ್ವ ಕಾಯ್ದೆಣ್ಣೆಯೊಳ್ |
ದೇಹಮಂ ಕಾದ ಕೃಷ್ಣಂ ಕಾದಲಹಿತನೇಕಾದನೈ ನಿನಗೆಂದನು ||೫೬||

ಅಣ್ಣದೇವಂ ಕದನಮಂ ಜಯಿಸಿ ಬಹನೆಂದು |
ಬಣ್ಣದ ಸೊಡರ್ಗಳಂ ಕೈಗೈಸುವನುಜೆಯಂ |
ಹುಣ್ಣೆಮೆಯ ಶಶಿಯಂದದಾಸ್ಯದೆಳನಗೆಯೊಳೈತಹ ನಿನ್ನ ವಲ್ಲಭೆಯನು ||
ಹುಣ್ಣಿದುತ್ಸಾಹಮಂ ಕೇಳ್ದು ತನ್ನೊಡಲೊಳಗೆ |
ತಣ್ಣಸಂ ತಳ್ತು ಬಹ ನಿನ್ನ ನಿಜಮಾತೆಯಂ |
ಕಣ್ಣಾರೆ ಕಾಣ್ಣೆನೆಂತಕಟ ವಿಪರೀತಮಾದೊಡೆ ತನಯ ಹೇಳೆದನು ||೫೭||

ತಾತನಲ್ಲವೆ ನಿನಗೆ ತಾನೆನ್ನೊಳಿಂತಕಟ |
ಮಾತಾಡದಿಹರೆ ನಿನ್ನಂ ಪಡೆದಳಂ ವೀರ |
ಮಾತೆಯೆಂಬರ್ ಕಟ್ಟು ನರನ ಹಯಮಂ ಕಾದು ನಡೆ ಕೃಷ್ಣಫಲುಗುಣರೊಳು ||
ಏತಕೆ ಬರಿದೆ ಸುಮ್ಮನಿಹೆ ಕಂಠಮಾಲೆಯೊಳ್ |
ಜಾತಿನಾಯಕರತ್ನಮಂ ತೆಗೆದು ಬಿಸುಟಂತೆ |
ಧಾತುಗೆಟ್ಟಿದೆ ತಮ್ಮ ಬಲಮೆಂದು ಹಲುಬಿದಂ ಧರೆಯೊಳ್ ಪೊರಳ್ದು ಮರುಗಿ ||೫೮||

ಲಂಬಿಸಿದನತಿಶೋಕ ಭಾರದಿಂ ಮೊಗಮಿಟ್ಟು |
ಚುಂಬಿಸಿದನಡಿಗಡಿಗೆ ನಾನಾಪ್ರಕಾರದಿಂ |
ಪಂಬಲಿಸಿ ಸುತನ ಗುಣಶೀಲಮಗಳಂ ನೆನೆದು ಹಳವಳಸಿದಂ ಪೆರ್ಚಿದ ||
ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ |
ಯೆಂಬಿನಂ ಕಾಣಿಸುವಳಲ್ಗಿಚಿಗವನೊಡಲ |
ನಿಂಬುಗೊಟ್ಟಂ ಮರುಗುತಿರ್ದುದು ಸಮಸ್ತಪರಿವಾರಮಾತನ ಸುತ್ತಲು ||೫೯||

ಕಾಳಗಕೆ ಮುಂಕೊಂಡು ನಡೆವರಾರಿನ್ನು ತಮ |
ಗೂಳಿಗವನಿತ್ತು ಬೆಸಸುವರುಂಟೆ ನೀನೆ ಕ |
ಟ್ಟಾಳೆಂಬರೀಗಳಿಂತಳಿದಪರೆ ದಾತಾರ ವೀರ ಸುಕುಮಾರ ಧಿರ ||
ಕಾಳಾದುದಕಟ ಚಂಪಕನಗರದರಸುಗಳ |
ಬಾಳುವೆ ಮಹಾದೇವ ಹಾಯೆಂದೊರಲ್ದು ಪಡೆ |
ಗೋಳಿಟ್ಟುದಾನೆ ಕುದುರೆಗಳೊರೆವ ಕಂಬನಿ ಬಳಲ್ಗಿವಿಗಳಿಂ ಜೋಲ್ದುವು ||೬೦||

ಬಳಿಕಾ ಸುಧನ್ವನ ಸಹೋದರಂ ಸುರಥಂ ಬ |
ಹಳಶೋಕಭಾರಮಂ ತಳೆದಿರ್ದವಂ ಕೂಡೆ |
ತಿಳಿದು ಕಡುಗೋಪದಿಂ ಬಿಲ್ಗೊಂಡು ನುಡಿದನೆಲೆ ತಾತ ಕೇಳೀತನಿಂದು ||
ನಳಿನನಾಭನ ಮುಂದೆ ಭಾಷೆಯಂ ಪೂರೈಸಿ |
ಕೊಳುಗುಳದೊಳಳಿದನಿದಕಿನ್ನು ದುಃಖಿಸಲೇತ |
ಕಳಲದಿರ್ ಧುರದೊಳೆನ್ನಾಟೋಪಮಂ ನೋಡೆನಲ್ಕರಸನಿಂತೆಂದನು ||೬೧||

ಉಂಟು ಕೃಣ್ಣನ ಮುಂದೆ ಭಾಷೆಯಂ ಪೂರೈಸಿ |
ಟೆಂಟಣಿಸದೊಡಲಂ ತೊರೆದು ಮುಕ್ತಿರಾಜ್ಯಮಂ |
ವೆಂಟಣಿಸಿಕೊಂಡಂ ಸುಧನ್ವನಿಂತಿದಕಾಗಿ ಧರತಿಗೆಟ್ಟಳಲ್ದುದಿಲ್ಲ |
ಕಂಠಮಂ ಕತ್ತರಿಸಲಾ ಶಿರಂ ತನ್ನೆಡೆಗೆ |
ಬಂಟುಗೆಡದೈದಿದೊಡೆ ತೆಗೆದೆತ್ತಿಕೊಂಡು ವೈ |
ಕುಂಠನೀಕ್ಷಿತ ಮತ್ತೆ ಬಿಸುಟನೆಂಬುದಕೆ ಮರುಗುವೆನೆಂದೊಂಡಿತೆಂದನು ||೬೨||

ತಾತ ಚಿತ್ತೈಸಿದರೊಳೆನಹುದು ತಿರುಗಿ ಬಿಸು |
ಡೀತಲೆಯನುಸುರಾಂತಕನ ಚರಣದೆಡೆಗೆ ಸಹ |
ಜಾತನಂ ಕೊಂದಾತನಂ ಕೊಲ್ವೆನೆಂದು ಸುರಥಂ ರಥಕಡರ್ದಬಳಿಕ ||
ಕಾತಿಯಿಂದಾ ಶಿರವನಾ ಮರಾಳಧ್ವಜಂ |
ಪೀತಾಂಬರನ ಪೊರೆಗೆ ಹಾಯ್ಕಲಾ ಮುರಹರಂ |
ಪ್ರೀತಿಯಿಂ ತೆಗೆದು ನಭಕಿಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||೬೩||

ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ |
ಪಡೆಸಹಿತ ನಿಂದನಾಹವಕೆ ಸನ್ನಾಹದಿಂ |
ದೊಡಹುಟ್ಟಿದಂ ಮಡಿದಳಲ್ಗೆ ಸುರತಂ ರಥಕಡರ್ದು ನಿಜಕಾರ‍್ಮುಕವನು ||
ಮಿಡಿದು ಕೃಷ್ಣಾರ್ಜುನರ ಸರಿಸಕೈತರಲವನ |
ಕಡುಶೌರ‍್ಯಮಂ ಕಂಡು ಶಂಕೆಯಿಂ ದೇವಪುರ |
ದೊಡೆಯ ಲಕ್ಷ್ಮೀವರಂ ಮಾಡಿದಂ ತನ್ನ ಮೈದುನನೊಳಾಲೊಚನೆಯನು ||೬೪||