ಶೇಕಡಾ ೪೦ ರಿಂದ ೫೦ರಷ್ಟು ಹದಿಹರೆಯದವರಿಗೆ ದೈಹಿಕ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳಿಂದಾಗಿ ಅವರ ಸಾಮರ್ಥ್ಯ ಮತ್ತು ನಿರ್ವಹಣಾ ಕೌಶಲಗಳು ಕುಂಠಿತವಾಗುತ್ತವೆ. ಮನಸ್ಸಿನ ಮೇಲೂ ಸಾಕಷ್ಟು ದುಷ್ಪರಿಣಾಮಗಳಾಗುತ್ತವೆ. ಆದ್ದರಿಂದ ಅನಾರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತಿದ್ದಂತೆ ಗುರುತಿಸಿ, ಸರಿಪಡಿಸಬೇಕು. ಜೊತೆಗೇ ಅವು ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

೧. ಅನೀಮಿಯ/ರಕ್ತ ಕೊರೆ: ಇದು ಅತಿ ಸಾಮಾನ್ಯ ಸಮಸ್ಯೆ. ಗ್ರಾಮೀಣ, ನಗರ, ಎಲ್ಲ ವರ್ಗಗಳ ಹರೆಯದವರಲ್ಲಿ ಅದರಲ್ಲೂ ವಿಶೇಷವಾಗಿ ಹುಡುಗಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ರಕ್ತಕ್ಕೆ ಕೆಂಪುವರ್ಣವನ್ನು ಕೊಡುವ, ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಕೆ ಮಾಡುವ ‘ಹಿಮೋಗ್ಲಾಬಿನ್ ಪ್ರತಿ ನೂರು ಮಿಲಿ ರಕ್ತದಲ್ಲಿ ೧೨ ರಿಂದ ೧೪ ಗ್ರಾಂ ಇರಬೇಕು. ಇದು ೧೦ ಗ್ರಾಂಗಿಂತ ಕಡಿಮೆಯಾದರೆ ‘ಅನೀಮಿಯಾ ಇದೆ ಎಂದು ಹೇಳಲಾಗುತ್ತದೆ. ಅನೀಮಿಯಾದ ಸಾಮಾನ್ಯ ರೋಗಲಕ್ಷಣಗಳೆಂದರೆ ಆಯಾಸ, ಸುಸ್ತು, ತಲೆಸುತ್ತು, ನಿಶ್ಯಕ್ತಿ, ಮೇಲುಸಿರು ಬರುವುದು, ಎದೆ ಜೋರಾಗಿ ಬಡಿದುಕೊಳ್ಳುವುದು. ಏಕಾಗ್ರತೆಯ ಕೊರತೆ, ಮರೆವು, ಸಿಟ್ಟು, ಕೋಪ, ಬೇಸರ, ದುಃಖ, ಅನಾಸಕ್ತಿ, ನಿದ್ರಾಹೀನತೆ, ನಿರುತ್ಸಾಹ ಇತ್ಯಾದಿ. ಕೈ ಬೆರಳುಗಳ ಉಗುರುಗಳನ್ನು ಗಮನಿಸಿ, ನಾಲಿಗೆಯನ್ನು ಮತ್ತು ಕಣ್ಣಿನ ಒಳಭಾಗವನ್ನು ಗಮನಿಸಿ, ನಸುಗೆಂಪಾಗಿರದೆ, ಬಿಳಚಿಕೊಂಡಿದ್ದರೆ, ಅನೀಮಿಯಾ ಇದೆಯೇ ಎಂದು ಯೋಚಿಸಿ, ರಕ್ತದ ಹಿಮೋಗ್ಲಾಬಿನ್ ಮಟ್ಟವನ್ನು ಅಳೆಯಲು ವೈದ್ಯರನ್ನು ಕೇಳಿ.

ಅನೀಮಿಯಾಗೆ ಕಾರಣಗಳು

 • ಕಬ್ಬಿಣಾಂಶ, ಪ್ರೋಟೀನ್ ಕೊರತೆ.
 • ಕರುಳಿನಲ್ಲಿ ಮನೆಮಾಡಿರುವ ಅಸಂಖ್ಯಾತ ಜಂತು ಹುಳುಗಳು (ಕೊಕ್ಕೆ ಹುಳು, ದುಂಡು ಹುಳು, ಚಾಟಿ ಹುಳು ಇತ್ಯಾದಿ)
 • ಪದೇ-ಪದೇ ಆಮಶಂಕೆ ಬೇಧಿ.
 • ರಕ್ತ ಸೋರುವ ವಸಡುಗಳು, ಜಠರ, ಕರುಳಿನ ಹುಣ್ಣುಗಳ ಮೂಲಕ ರಕ್ತಸ್ರಾವ, ಮೊಳೆ ರೋಗ (ಪೈಲ್ಸ್).
 • ಅಪಘಾತ, ಗಾಯಗಳಿಂದ ರಕ್ತ ಸೋರಿಕೆ.
 • ಹುಡುಗಿಯರಲ್ಲಿ ಋತು ಚಕ್ರದಲ್ಲಿ, ಹೆಚ್ಚು ರಕ್ತ ಸ್ರಾವವಾಗುವುದು.

ಅನೀಮಿಯಾಗೆ ಚಿಕಿತ್ಸೆ

 • ಜಂತುಹುಳುಗಳನ್ನು ನಾಶ ಮಾಡಲು ಔಷಧಿ.
 • ಎಲ್ಲೇ ರಕ್ತಸ್ರಾವವಾಗುತ್ತಿರಲಿ ಅದನ್ನು ನಿಲ್ಲಿಸುವುದು
 • ಕಬ್ಬಿಣಾಂಶ, ವಿಟಮಿನ್‌ಗಳಿರುವ ಮಾತ್ರೆ, ಟಾನಿಕ್ ಇಂಜೆಕ್ಷನ್.
 • ತೀವ್ರ ರಕ್ತ ಕೊರೆಯಲ್ಲಿ ರಕ್ತ ಪೂರಣ ಮಾಡುವುದು.
 • ಪುಷ್ಟಿಕರ ಆಹಾರವನ್ನು ಸೇವಿಸುವುದು.
 • ಆಹಾರ, ನೀರು, ಮಲದಿಂದ ಮಲಿನವಾಗದಂತೆ ಎಚ್ಚರ ವಹಿಸುವುದು. ಪ್ರತಿಯೊಬ್ಬರೂ ಮಲವಿಸರ್ಜನೆಯ ನಂತರ, ಸೋಪು ನೀರಿನಿಂದ ಕೈಗಳನ್ನು ಸ್ವಚ್ಚಮಾಡಿಕೊಳ್ಳುವುದು. ರಸ್ತೆ ಬದಿಯಲ್ಲಿ ಮಾರುವ, ಸೊಳ್ಳೆ, ನೊಣ ಮುತ್ತಿದ ತಿಂಡಿಗಳನ್ನು, ಹಣ್ಣುಗಳನ್ನು ತಿನ್ನದಿರುವುದು. ಪ್ರತಿಯೊಬ್ಬರೂ ವೈಯುಕ್ತಿಕ ಸ್ವಚ್ಛತೆಗೆ ಗಮನ ಕೊಡುವುದು. ಶೌಚಾಲಯದಲ್ಲೇ ಮಲ ವಿಸರ್ಜನೆ ಮಾಡುವುದು. ಬಯಲು, ರಸ್ತೆ ಬದಿಯಲ್ಲಿ, ಮಕ್ಕಳನ್ನು ಮಲವಿಸರ್ಜನೆ ಮಾಡಲು ಬಿಡದಿರುವುದು.

೨. ಹಲ್ಲು ಮತ್ತು ವಸಡಿನ ರೋಗ

ಚಿಕ್ಕಂದಿನಿಂದಲೂ ಚಾಕೋಲೇಟ್, ಪೆಪ್ಪರ್‌ಮಿಂಟ್‌ಗಳು, ಸಿಹಿತಿಂಡಿಗಳು, ಐಸ್‌ಕ್ರೀಂ, ಕೇಕ್ – ತಿಂದು, ಅನೇಕರು, ಹರೆಯಕ್ಕೆ ಬರುವಷ್ಟರಲ್ಲೇ ಹಲ್ಲು ಮತ್ತು ವಸಡಿನ ರೋಗಗಳಿಗೆ ತುತ್ತಾಗಿರುತ್ತಾರೆ. ಯಾವುದೇ ಆಹಾರ ಸೇವನೆಯ ನಂತರ ಬಾಯಿ ಸ್ವಚ್ಚ ಮಾಡುವುದು ಮತ್ತು ಬೆಳಿಗ್ಗೆ-ರಾತ್ರಿ ಒಳ್ಳೆಯ ಬ್ರಶ್‌ನಿಂದ ಹಲ್ಲುಗಳನ್ನು ಸ್ವಚ್ಚಮಾಡುವ ಅಭ್ಯಾಸವನ್ನು ಯಾರು ಮಾಡುವುದಿಲ್ಲ. ಅವರಿಗೆ ಹಲ್ಲು ನೋವು, ವಸಡು ರೋಗ ಕಟ್ಟಿಟ್ಟ ಬುತ್ತಿಯಾಗುತ್ತದೆ. ಊದಿಕೊಂಡು, ಕೀವು-ರಕ್ತ ಆಡುವ ವಸಡುಗಳು, ಹಲ್ಲುಗಳ ಎನಾಮೆಲ್ ಸವೆದು ಕುಳಿಗಳಾಗಿ, ಸೋಂಕು ತಗುಲಿ ಹಲ್ಲು ಬಾಧೆಯಿಂದ ನರಳಿದವರಿಗಷ್ಟೇ ಗೊತ್ತು ಅದರ ನೋವು ನರಳಿಕೆ.

ಅನಾರೋಗ್ಯಕರ ಹಲ್ಲು, ವಸಡುಗಳು ಇಡೀ ದೇಹದ ಆರೋಗ್ಯದ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಆಹಾರವನ್ನು ಸರಿಯಾಗಿ ಜಗಿಯಲಾರದೇ, ಅಜೀರ್ಣಕ್ಕೆ ತುತ್ತಾಗುತ್ತಾರೆ. ಬಾಯಿ/ಉಸಿರು ದುರ್ವಾಸನೆಯಿಂದ ಕೂಡಿ, ವ್ಯಕ್ತಿ ಇತರರೊಡನೆ ಮಾತನಾಡಲು, ವ್ಯವಹರಿಸಲು ಹಿಂಜರಿಯುತ್ತಾನೆ. ಇತರರೂ ಆತನನ್ನು/ಆಕೆಯನ್ನು ದೂರ ಮಾಡುತ್ತಾರೆ. ಕೀಳರಿಮೆ ಇವರನ್ನು ಕಾಡತೊಡಗುತ್ತದೆ. ಆದ್ದರಿಂದ ಹಲ್ಲು, ವಸಡು ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವರ್ಷಕ್ಕೊಂದಾವರ್ತಿಯಾದರೂ ದಂತ ವೈದ್ಯರ ಸಲಹೆ ಪಡೆಯಬೇಕು.

೩. ದೃಷ್ಟಿ ಮತ್ತು ಶ್ರವಣ ದೋಷಗಳು:

ಸಣ್ಣ ಅಕ್ಷರಗಳನ್ನು ಓದಲಾಗದಿರುವುದು, ಬೋರ್ಡ್ ಮೇಲೆ ಬರೆದಿರುವುದನ್ನು ಕಾಣಲಾಗದಿರುವುದು, ಸ್ವಲ್ಪ ಹೊತ್ತು ಓದಿದರೆ ಸಾಕು, ಕಣ್ಣು ಉರಿ, ನೋವು ಹಾಗೂ ಕಣ್ಣಲ್ಲಿ ನೀರು ಸುರಿಯುವುದು, ಕಣ್ಣು ಕೆಂಪಾಗುವುದು, ವ್ಯಕ್ತಿಗೆ ದೃಷ್ಟಿದೋಷವಿರುವುದನ್ನು ಸೂಚಿಸುತ್ತದೆ. ಕಿವಿ ಸೋರುವುದು, ಕಿವಿ ಸರಿಯಾಗಿ ಕೇಳಿಸದಿರುವುದು, ಕಿವಿ ಗುಂಯ್ ಎಂದು ಶಬ್ದ ಮಾಡುವುದು, ಶ್ರವಣ ದೋಷವನ್ನು ಸೂಚಿಸುತ್ತದೆ. ಹರೆಯದವರು ಕಣ್ಣಿನ ಮತ್ತು ಕಿವಿ ವೈದ್ಯರನ್ನು ಕಾಣಲು ಹಿಂಜರಿಯುತ್ತಾರೆ. ಎಲ್ಲಿ ಕನ್ನಡಕ ಹಾಕಬೇಕಾದೀತೋ ಎಲ್ಲಿ  ಶ್ರವಣ ಯಂತ್ರವನ್ನು ಧರಿಸಬೇಕಾದೀತೋ ಎಂದು ಹೆದರುತ್ತಾರೆ. ಅವರಿಗೆ ತಿಳಿಯಹೇಳಿ, ದೃಷ್ಟಿ ಮತ್ತು ಶ್ರವಣ ದೋಷವನ್ನು ಸರಿಪಡಿಸಬೇಕು. ಕಣ್ಣು ಮತ್ತು ಕಿವಿ ತಜ್ಞ ವೈದ್ಯರನ್ನು ಕಾಣಬೇಕು.

೪. ಮೊಡವೆ: ‘ಹರೆಯದ ಒಡವೆ-ಮೊಡವೆ ಎನ್ನುತ್ತಾರೆ. ಮುಖದಲ್ಲಿ ಮೊಡವೆಗಳು ಬಂದಾಗ ಹರೆಯದವರು ಚಕಿತರಾಗುತ್ತಾರೆ. ಚರ್ಮದ ಜಿಡ್ಡು ಗ್ರಂಥಿಗಳು ಹೆಚ್ಚು ಸಕ್ರಿಯವಾಗಿ, ಜಿಡ್ಡನ್ನು ಉತ್ಪತ್ತಿ ಮಾಡುತ್ತವೆ. ಬೆವರು, ಧೂಳು ಸೇರಿ ಕೂದಲ ಬುಡವು ಸೋಂಕಿಗೆ ಈಡಾಗುವುದೇ ಮೊಡವೆ. ಮೊಡವೆಗಳು ನೋವುಂಟುಮಾಡುತ್ತವೆ. ವಾಸಿಯಾದ ಮೇಲೆ ಕಲೆಗಳನ್ನು ಬಿಟ್ಟು ಹೋಗುತ್ತವೆಯಾಗಿ, ಇದನ್ನು ಅನಿಷ್ಟ ಪೀಡೆ ಎಂದೇ ಹರೆಯದವರು ಭಾವಿಸುತ್ತಾರೆ. ಮೊಡವೆ ನಿವಾರಕ ಕ್ರೀಮ್‌ಗಳನ್ನು ಕೊಂಡು ಹಚ್ಚುತ್ತಾರೆ. ಅದರಿಂದ ಉಪಯೋಗವಾಗದಿದ್ದಾಗ ಹತಾಶರಾಗುತ್ತಾರೆ. ತೀವ್ರ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.

ಮೊಡವೆಗೆ ಪರಿಹಾರ

 • ಪ್ರತಿದಿನ ಮೂರು ನಾಲ್ಕು ಬಾರಿ, ಶುದ್ದ ನೀರು ಹಾಗೂ ಗ್ಲಿಸೆರಿನ್‌ಯುಕ್ತ ಸೋಪ್, ಕಡ್ಲೆ ಹಿಟ್ಟಿನಿಂದ ಮುಖವನ್ನು ತೊಳೆದು ಸ್ವಚ್ಚ ಮಾಡಿ.
 • ಬೆವರಿದಾಗ ಮುಖವನ್ನು ಬಟ್ಟೆಯಿಂದ. ಕೈಯಿಂದ ಒರೆಸಬೇಡಿ, ನೀರಿನಿಂದ ತೊಳೆಯಿರಿ.
 • ಯಾವುದೇ ಕ್ರೀಂನ್ನು ಬಳಸಬೇಡಿ.
 • ಮನೆಯ ವಾತಾವರಣ ಸ್ವಚ್ಚವಾಗಿರಲಿ, ಧೂಳು, ಕೊಳೆ ಹೆಚ್ಚಿರದಂತೆ ನೋಡಿಕೊಳ್ಳಿ.
 • ಚರ್ಮ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ.
 • ಮೊಡವೆಯನ್ನು ಕೆರೆಯಬೇಡಿ, ಚಿವುಟಬೇಡಿ.
 • ಆಹಾರದಲ್ಲಿ ಹೆಚ್ಚು ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಿ. ಜಿಡ್ಡು ಪದಾರ್ಥಗಳನ್ನು ತಗ್ಗಿಸಿ.
 • ಚರ್ಮ ವೈದ್ಯರನ್ನು ಆಗಾಗ ಕಾಣಿರಿ.

೪. ಗಂಟಲ ಸೋಂಕು, ಶ್ವಾಸನಾಳದ ಸೋಂಕು (ಟಾನ್ಸಿಲೈಟಿಸ್, ಬ್ರಾಂಕೈಟಿಸ್)

ಕೆಮ್ಮು, ಗಂಟಲ ಕೆರೆತ-ನೋವು, ಜ್ವರ, ಉಸಿರಾಟ ತೊಂದರೆ, ಸಾಮಾನ್ಯ ಲಕ್ಷಣಗಳು ವೈದ್ಯರ ನೆರವು ಅಗತ್ಯ.

೫. ತಲೆನೋವು/ಒತ್ತಲೆ ನೋವು

ಚಿಂತೆ, ವ್ಯಥೆ, ಮಾನಸಿಕ ಒತ್ತಡಗಳಿಂದ, ಈ ಎರಡೂ ಬಗೆಯ ತಲೆನೋವು ಬರುತ್ತದೆ. ಮೈಗ್ರೇನ್ ಅನುವಂಶೀಯವಾಗಿಯೂ ಬರಬಹುದು.

ಮೈಮನಸ್ಸು ರಿಲ್ಯಾಕ್ಸ್ ಆಗುವುದು. ಪ್ರಶಾಂತ ಜೀವನವನ್ನು ಮಾಡುವುದು. ಚಿಂತೆ ವ್ಯಥೆಗಳನ್ನು ತಗ್ಗಿಸುವುದು. ವೇಳೆಗೆ ಸರಿಯಗಿ ಆಹಾರ ಸೇವನೆ, ನಿದ್ರೆ ಮಾಡುವುದು. ವೈದ್ಯರ ಮಾರ್ಗದರ್ಶನದಲ್ಲಿ ಔಷಧಿಯನ್ನು ಸೇವಿಸುವುದರಿಂದ  ಈ ಎರಡೂ ತಲೆನೋವುಗಳೂ ಹತೋಟಿಗೆ ಬರುತ್ತವೆ.

೬. ಇತ್ತೀಚಿನ ವರ್ಷಗಳಲ್ಲಿ, ಒತ್ತಡ ಸಂಬಂಧೀ ರೋಗಗಳು ಹರೆಯದವರಲ್ಲೂ ಕಾಣಿಸಿಕೊಳ್ಳುತ್ತವೆ. ಉದಾ: ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಆಸ್ತಮಾ, ಅಧಿಕ ಆಮ್ಲಸ್ಥಿತಿ (ಗ್ಯಾಸ್ಟಿಕ್ ಪ್ರಾಬ್ಲಂ) ಜಠರದ ಹುಣ್ಣು, ಕೀಲುಬೇನೆ, ಬೊಜ್ಜು ಇತ್ಯಾದಿ. ಶಾಲೆಯಲ್ಲಿ ಟೆನ್ಷನ್, ಮನೆಯಲ್ಲಿ ಟೆನ್ಷನ್, ಸಮಾಜದಲ್ಲಿ ಟೆನ್ಷನ್, ಕೀಳರಿಮೆಗಳು, ವೇಗದ ಜೀವನ ಇವೆಲ್ಲ ಒತ್ತಡ ಸಂಬಂಧೀ ರೋಗಗಳಿಗೆ ಎಡೆ ಮಾಡಿಕೊಡುತ್ತಿವೆ.

ಬೊಜ್ಜು, ದೇಹದ ತೂಕ ಹೆಚ್ಚುವುದು, ಅನೇಕ ಹರೆಯದವರು ತಮ್ಮ ವಯಸ್ಸು, ಎತ್ತರಕ್ಕೆ ಅಧಿಕವಾದ ತೂಕವನ್ನು ಪಡೆಯುತ್ತಿದ್ದಾರೆ. ಹೈ ಕೆಲೋರಿ ತಿಂಡಿ, ಆಹಾರ ಪದಾರ್ಥಗಳನ್ನು, ಪದೇ-ಪದೇ ಸೇವಿಸುವುದು. ಕುಳಿತು, ನಿಂತು ಕಾಲ ಕಳೆಯುವುದು, ಟೀವಿ ವೀಕ್ಷಣೆಯಲ್ಲಿ ಹೆಚ್ಚು ಸಮಯ ಕಳೆಯುವುದು. ಯಾವುದೇ ರೀತಿಯ ಶಾರೀರಕ ಚಟುವಟಿಕೆ ಇಲ್ಲದಿರುವುದು, ಇದಕ್ಕೆ ಕಾರಣ. ಆದ್ದರಿಂದ ಹರೆಯದವರು ತಮ್ಮ ನಾಲಿಗೆ ಚಪಲಕ್ಕೆ ಕಡಿವಾಣ ಹಾಕಬೇಕು. ಐಸ್‌ಕ್ರೀಂ, ಬೇಕರಿ ಪದಾರ್ಥಗಳು, ಕರಿದ ತಿಂಡಿಗಳು, ಕೋಲಾಗಳು, ಸಿಹಿತಿಂಡಿಗಳನ್ನು ಸೇವನೆಯನ್ನು ಮೊಟಕುಗೊಳಿಸಬೇಕು. ನಿತ್ಯ ಶರೀರಕ್ಕೂ ವ್ಯಾಯಾಮವಾಗುವಂತಹ ಚಟುವಟಿಕೆಗಳನ್ನು ಮಾಡಬೇಕು. ತೂಕ ಕಡಿಮೆ ಮಾಡಲು ಉಪವಾಸ ಮಾಡಬಾರದು. ಆಹಾರ ಸೇವನೆಯ ಪ್ರಮಾಣವನ್ನು ಶೇಕಡಾ ೨೫ರಷ್ಟು ತಗ್ಗಸಿ, ನಿಧಾನವಾಗಿ ಹಂತಹಂತವಾಗಿ ತೂಕವನ್ನು ತಗ್ಗಿಸಬೇಕು.

೭. ಗಾಯಗಳು, ಪೆಟ್ಟುಗಳು

ನಡೆಯುವಾಗ, ಓಡುವಾಗ, ಆಟವಾಡುವಾಗ, ಬೀಳುವುದು, ಪೆಟ್ಟಾಗುವುದು, ಹರೆಯದಲ್ಲಿ ಮಾಮೂಲು, ಜೊತೆಗೆ ವಾಹನ ಚಾಲಿಸುವಾಗ ಅಪಘಾತಗಳಾಗಿ ತೀವ್ರ ರೀತಿಯ ಪೆಟ್ಟು ಮೂಳೆ ಮುರಿತ, ತಲೆಗೆ ಪೆಟ್ಟಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಅನೇಕ ಹರೆಯದವರು, ಅಪಘಾತಗಳಲ್ಲಿ ಅಂಗವಿಕಲರಾಗುತ್ತಿದ್ದಾರೆ. ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ತರಬೇತಿ ಇಲ್ಲದೆ ಲೈಸನ್ಸ್ ಇಲ್ಲದೆ ಯಾವುದೇ ವಾಹನವನ್ನು ಚಾಲಿಸಬಾರದು. ಅತಿವೇಗವಾಗಿ ಹೋಗುವುದು. ಸಂಚಾರ-ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು. ವಾಹನವನ್ನು ಸುಸ್ಥಿತಿಯಲ್ಲಿಡದೇ ಇರುವುದು. ಮದ್ಯಪಾನ ಮಾಡಿ ಗಾಡಿ ಓಡಿಸುವುದು. ನಿದ್ದೆಗೆಟ್ಟು ವಾಹನವನ್ನು ಚಾಲಿಸುವುದು. ವಾಹನ ಚಾಲನೆ ಮಾಡುವಾಗ ಸಂಗೀತ ಕೇಳುತ್ತಾ ಹರಟೆ ಹೊಡೆಯುತ್ತಾ ಅನ್ಯ ಮನಸ್ಕನಾಗಿರುವುದು. ಇತರ ವಾಹನಗಳೊಂದಿಗೆ ವೇಗದ ವಿಚಾರದಲ್ಲಿ ಸ್ಪರ್ಧೆ ಮಾಡುವುದು.ಅಪಘಾತಕ್ಕೆ ಕಾರಣಗಳಾದ್ದರಿಂದ, ಇವನ್ನೆಲ್ಲಾ ನಿವಾರಿಸಿಕೊಳ್ಳಬೇಕು. ಗಾಯ-ಪೆಟ್ಟಾದಾಗ ಉದಾಸೀನ ಮಾಡದೇ, ವೈದ್ಯ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು.