ಹುಟ್ಟಿದ ಮಗು ಬೆಳೆದು ಪ್ರೌಢನಾಗಲು ಇಪ್ಪತ್ತು ವರ್ಷಗಳ ಅವಧಿ ಬೇಕಾಗುತ್ತದೆ. ಈ ಬೆಳವಣಿಗೆ ಐದು ಬಗೆಯದು. ೧ ಶಾರೀರಕ ಬೆಳವಣಿಗೆ, ೨ ಬೌದ್ಧಿಕ ಬೆಳವಣಿಗೆ, ೩ ಭಾವನಾತ್ಮಕ ಬೆಳವಣಿಗೆ, ೪ ಸಾಮಾಜಿಕ ಬೆಳವಣಿಗೆ ಹಾಗೂ ೫ ನೈತಿಕ

ಬೆಳವಣಿಗೆ. ಹೀಗೆ ವ್ಯಕ್ತಿ ಪರಿಪೂರ್ಣನಾಗಲು ಈ ಪಂಚಮುಖೀ ಬೆಳವಣಿಗೆಯಲ್ಲಿ ಗರಿಷ್ಠಮಟ್ಟವನ್ನು ತಲುಪಬೇಕು. ಅನುವಂಶೀಯ ಆಂಶಗಳು, ಆಹಾರ, ಪರಿಸರ, ತಂದೆತಾಯಿ ಮತ್ತು ಕುಟುಂಬದವರ ಲಾಲನಾ ಪಾಲನಾ ವಿಧಾನ, ಶಿಕ್ಷಣ,

ಅನಾರೋಗ್ಯ ಹಾಗೂ ಸಕಾರಾತ್ಮಕ ಅಥವಾ ನಕಾರಾತ್ಮಕ ಘಟನೆಗಳು, ಬೆಳವಣಿಗೆಯ ಗತಿ ಮತ್ತು ಮಟ್ಟವನ್ನು ನಿರ್ಧರಿಸುತ್ತವೆ. ಹೀಗಾಗಿ ಒಂದೇ ತಂದೆತಾಯಿಗಳ

ಮಕ್ಕಳು ಅಥವಾ ಒಂದೇ ಕುಟುಂಬದ ಮಕ್ಕಳು ಬೆಳವಣಿಗೆಯ ಗತಿ ಮತ್ತು ಮಟ್ಟದಲ್ಲಿ ಭಿನ್ನರಾಗಿ ನಿಲ್ಲುತ್ತಾರೆ. ಒಂದು ಮಗು ಸೈಂಧವನಾದರೆ, ಇನ್ನೊಂದು ಮಗು ವಾಮನನಾಗುತ್ತಾನೆ. ಒಬ್ಬ ಬುದ್ಧಿವಂತನಾದರೆ, ಇನ್ನೊಬ್ಬ ದಡ್ಡನಾಗುತ್ತಾನೆ. ಒಬ್ಬ ರುದ್ರಮೂರ್ತಿಯಾದರೆ, ಮತ್ತೊಬ್ಬ ಶಾಂತಮೂರ್ತಿಯಾಗುತ್ತಾನೆ. ಒಬ್ಬ ಜುಗ್ಗನಾದರೆ, ಇನ್ನೊಬ್ಬ ಉದಾರಿಯಾಗುತ್ತಾನೆ. ಒಬ್ಬ ಪರಮ ಸ್ವಾರ್ಥಿಯಾದರೆ, ಮತ್ತೊಬ್ಬ ತ್ಯಾಗಮಯಿಯಾಗಿ, ಇತರರ ಸೇವೆ ಮಾಡಿ ಸಂತೋಷಪಡುವವನಾಗುತ್ತಾನೆ. ಬೆಳವಣಿಗೆಯ ಉತ್ತರಾರ್ಧವಾದ ಹರೆಯದಲ್ಲಿ ಈ ಎಲ್ಲ  ಗುಣಲಕ್ಷಣಗಳು ನಿರ್ದಿಷ್ಟ ರೂಪವನ್ನು ಪಡೆಯುತ್ತವೆ. ಕೊರತೆ ಮತ್ತು ನ್ಯೂನತೆಗಳನ್ನು ಗುರುತಿಸಿ, ಸರಿಪಡಿಸಬೇಕು. ತಂದೆತಾಯಿಗಳು, ಶಿಕ್ಷಕರು ಈ ದಿಸೆಯಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಾರೆ.

ಶಾರೀರಿಕ ಬೆಳವಣಿಗೆ: ಹತ್ತು ವರ್ಷದಲ್ಲಿ ಚಿಕ್ಕ ಆಕಾರದ ಮಗು ೨೦ ವರ್ಷ ತಲುಪುವ ವೇಳೆಗೆ, ಪುರುಷ ಆಥವ ಸ್ತ್ರೀಯಾಗಿ ಬೆಳೆದು ನಿಲ್ಲುತ್ತದೆ. ಎತ್ತರ ಗಾತ್ರ, ಶಾರೀರಿಕ ಬಲ, ಲಿಂಗ ನಿರ್ದಿಷ್ಟ ಲಕ್ಷಣಗಳು, ವ್ಯಕ್ತಿಗೆ ವಿಶಿಷ್ಟವಾಗಿರುತ್ತವೆ. ಬೆಳವಣಿಗೆಯ ಹಾರ್ಮೋನು (Growth Hormone) ಆಹಾರ, ವ್ಯಾಯಾಮ ದೈಹಿಕಚಟುವಟಿಕೆ, ಆರೋಗ್ಯ-ಅನಾರೋಗ್ಯ ಸ್ಥಿತಿಗಳು ಶಾರೀರಿಕ ಬೆಳವಣಿಗೆಯ ಮಟ್ಟವನ್ನು ನಿರ್ಧರಿಸುತ್ತವೆ.

ಬೆಳವಣಿಗೆಯ ಹಾರ್ಮೋನು ಪಿಟ್ಯೂಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಹೆಚ್ಚು ಉತ್ಪತ್ತಿಯಾದರೆ, ವ್ಯಕ್ತಿ ಸೈಂಧವನಾಗುತ್ತಾನೆ. ಕಡಿಮೆ ಉತ್ಪತ್ತಿಯಾದರೆ ವ್ಯಕ್ತಿ ವಾಮನನಾಗುತ್ತಾನೆ. ಪಿಟ್ಯೂಟರಿ ಗ್ರಂಥಿಯಲ್ಲಿ ಬೆಳೆಯುವ ಗೆಡ್ಡೆ ಅಥವಾ ಗ್ರಂಥಿಗೆ ಆಗುವ ಹಾನಿಯಿಂದ ಈ ಸಮಸ್ಯೆ ಉದ್ಭವಾಗುತ್ತದೆ. ಮಗುವಿನ ಶಾರೀರಿಕ ಬೆಳವಣಿಗೆ ತೀರಾ ಕುಂಠಿತವಾದಾಗ ಅಥವಾ ತೀರಾವೇಗವಾಗಿ ಆದಾಗ, ಹಾರ್ಮೋನು ತಜ್ಞ ವೈದ್ಯರನ್ನು ಕಾಣಬೇಕು. ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆಗೆ ಪ್ರೇರಣೆ ನೀಡುವ ಇತರ ಹಾರ್ಮೋನುಗಳೆಂದರೆ ಥೈರಾಯಿಡ್ ಮತ್ತು ಟೆಸ್ಟೋಸ್ಟೀರಾನ್ ಹಾಗೂ ಈಸ್ಟ್ರೋಜನ್ ಹಾರ್ಮೋನು. ಟೆಸ್ಟೋಸ್ಟಿರಾನ್ ಹುಡುಗನಲ್ಲಿ ಪುರುಷಲಕ್ಷಣಗಳಿಗೆ ಕಾರಣವಾದರೆ, ಈಸ್ಟ್ರೋಜನ್ ಹುಡುಗಿಯಲ್ಲಿ ಸ್ತ್ರೀತನದ ಲಕ್ಷಣಗಳಿಗೆ ಕಾರಣವಾಗುತ್ತದೆ. ಅಗತ್ಯ ಕಂಡು ಬಂದರೆ, ವೈದ್ಯರು ಹಾರ್ಮೋನು ಪ್ರಮಾಣವನ್ನು ಗಮನಿಸಿ (ರಕ್ತಪರೀಕ್ಷೆಯಿಂದ) ಕೊರತೆ ಇದ್ದರೆ, ಸರಿಪಡಿಸಲು ಪ್ರಯತ್ನಿಸುತ್ತಾರೆ.

ಆಹಾರ: ಕೋಟಿ-ಕೋಟಿ ಜೀವಕೋಶಗಳು ಉತ್ಪತ್ತಿಯಾಗುತ್ತಾ ಶರೀರ ಬೆಳೆಯುತ್ತದೆ. ಅಂಗಾಂಗಗಳು ದೊಡ್ಡವಾಗುತ್ತವೆ. ಈ ಬೆಳವಣಿಗೆ ಮತ್ತು ಸಂಖ್ಯಾವೃದ್ಧಿಗೆ ಮುಖ್ಯವಾಗಿ ಪ್ರೋಟೀನ್, ಕಬ್ಬಿಣ, ಐಯೋಡಿನ್, ವಿಟಮಿನ್‌ಗಳು ಬೇಕು. ಪ್ರತಿ ಜೀವಕೋಶ ನಿರಂತರವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಲು ಪಿಷ್ಟ ಪದಾರ್ಥ (ತತ್ ಕಾಲದ ಇಂಧನ) ಹಾಗೂ ಕೊಬ್ಬು (ಸಂಗ್ರಹಿತ ಇಂಧನ) ಬೇಕು. ಬೆಳೆಯುವ ಮಗುವಿಗೆ ಪುಷ್ಠಿಕರವಾದ ಹಾಗೂ ಸಮತೋಲನ ಆಹಾರವನ್ನು ನೀಡಬೇಕು. ನಾಲಿಗೆಗೆ ರುಚಿಯಾದದ್ದನ್ನೇ ಮಕ್ಕಳು ತಿನ್ನಲು ಬಯಸುತ್ತಾರೆ. ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು, ಎಲ್ಲಿ ತಿನ್ನಬೇಕು ಎಂಬುದನ್ನು ಮಕ್ಕಳಿಗೆ ಕಲಿಸಬೇಕು.

ಹೆಚ್ಚು ತಿನ್ನಬೇಕಾದದ್ದು:

ಎಲ್ಲಾ ಬಗೆಯ ಹಣ್ಣುಗಳು, ತರಕಾರಿ, ಸೊಪ್ಪು, ಬೇಳೆ-ಕಾಳುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ನೀರಿನಲ್ಲಿ ಮತ್ತು ಹಬೆಯಲ್ಲಿ ಬೆಂದ ಪದಾರ್ಥಗಳು (ಮೀನು ಮತ್ತು ಕೊಬ್ಬಿಲ್ಲದ ಮಾಂಸ, ಮಾಂಸಾಹಾರಿಗಳಿಗೆ)

ಕಡಿಮೆ ತಿನ್ನಬೇಕಾದದ್ದು:

ಎಣ್ಣೆ, ಬೆಣ್ಣೆ, ತುಪ್ಪದಲ್ಲಿ ಕರಿದ ಪದಾರ್ಥಗಳು, ಚಾಕೋಲೇಟ್, ಐಸ್‌ಕ್ರೀಂಗಳು, ಸಿಹಿ ತಿಂಡಿಗಳು, ಕೊಬ್ಬಿರುವ ಮಾಂಸ.

ತಿನ್ನಲೇ ಬಾರದಂಥದ್ದು:

ಹಾದಿ ಬೀದಿಯಲ್ಲಿ, ಧೂಳು, ನೊಣ, ಸೊಳ್ಳೆ ಮುತ್ತಿದ, ಕೊಯ್ದ ಹಣ್ಣುಗಳು, ತಿಂಡಿ ಪದಾರ್ಥಗಳು, ಕೋಲ ಇತ್ಯಾದಿ ತಂಪು ಪಾನೀಯಗಳು ಹಾಗೂ ಮದ್ಯಸಾರ ಇರುವ ಪಾನೀಯಗಳು (ಬೀರ್, ಬ್ರಾಂದಿ, ವೈನ್)

ಆಹಾರವನ್ನು ಸ್ವಚ್ಚವಾದ ಜಾಗದಲ್ಲಿ ಕುಳಿತು ಬಂಧು ಮಿತ್ರರೊಡನೆ ಕಲೆತು ತಿನ್ನಬೇಕು. ಆತುರಾತುರವಾಗಿ ತಿನ್ನಬಾರದು. ಆಹಾರವನ್ನು ಚೆನ್ನಾಗಿ ಜಗಿದರೆ, ಬಾಯಲ್ಲಿರುವ ಜೊಲ್ಲು ಆಹಾರದೊಂದಿಗೆ ಮಿಶ್ರವಾಗಿ ಸುಲಭವಾಗಿ ಜೀರ್ಣವಾಗುತ್ತದೆ. ಆಹಾರವನ್ನು ಬಿಸಿಯಾಗಿರುವಾಗಲೇ ತಿನ್ನುವುದು ಉತ್ತಮ. ಆರಿ, ತಂಗಳಾದ ಪದಾರ್ಥಗಳು ಬೇಡ. ಆಹಾರವನ್ನು ಸೇವಿಸುವ ಮೊದಲು, ಕೈಗಳನ್ನು ಸೋಪಿನಿಂದ ತೊಳೆದು ಸ್ವಚ್ಛವಾಗಿಡಬೇಕು. ತುಂಬಾ ಬಿಸಿ, ತುಂಬಾ ತಂಪು ಪದಾರ್ಥಗಳು ಒಳ್ಳೆಯದಲ್ಲ. ವೇಳೆಗೆ ಸರಿಯಾಗಿ ಆಹಾರ ಸೇವನೆ ಮಾಡುವುದನ್ನು ಪ್ರಾಕ್ಟೀಸ್ ಮಾಡಿದರೆ, ಆಹಾರ ಸೇವನೆಯ ಸಮಯಕ್ಕೆ ಸರಿಯಾಗಿ ಜೀರ್ಣ ರಸಗಳು ಉತ್ಪತ್ತಿಯಾಗಿ ಜೀಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಉಪವಾಸವೂ ಬೇಡ, ಫುಲ್‌ಮೀಲ್ಸೂ ಬೇಡ!

ವ್ಯಾಯಾಮ ಮತ್ತು ಶರೀರ ಚಟುವಟಿಕೆ: ನಡಿಗೆ, ವೇಗದ ನಡಿಗೆ, ಓಟ, ಈಜುವುದು, ಸೈಕಲ್ ತುಳಿಯುವುದು, ಸ್ಕಿಪ್ಪಿಂಗ್ ಮಾಡುವುದು, ಬಯಲಲ್ಲಿ ಓಡಾಡಿ ಆಡುವ ಆಟಗಳು, ಬೆಳೆಯುವ ಮಕ್ಕಳಿಗೆ ಅತ್ಯಗತ್ಯ. ಇದರಿಂದ ಅವರ ದೇಹದ ಉದ್ದನೆಯ ಮೂಳೆಗಳು, ಗರಿಷ್ಠ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಸುಮ್ಮನೆ ಕುಳಿತು, ಮಲಗಿ, ಯಾವುದೇ ಚಟುವಟಿಕೆ ಇಲ್ಲದ ಮಗು ದಿನ ದೈಹಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಅದರ ದೈಹಿಕ ತೂಕ ಹೆಚ್ಚಿ, ಬೊಜ್ಜು ಬರಲು ಕಾರಣವಾಗುತ್ತದೆ. ಆದ್ದರಿಂದ ಮನೆಯ ಬಳಿ ಹಾಗೂ ಶಾಲೆಯಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಕ್ಕಳಿಗೆ ತಂದೆ-ತಾಯಿ-ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಅಧ್ಯಯನವನ್ನು ಬಿಟ್ಟರೆ, ಆಟೋಟಗಳಿಗೇ ಹೆಚ್ಚು ಕಾಲವನ್ನು ವಿನಿಯೋಗಿಸಲು ಪ್ರೇರಣೆ ನೀಡಬೇಕು.

ಆಗಾಗ ವೈದ್ಯರನ್ನು ಕಂಡು, ಹುಡುಗ-ಹುಡುಗಿಯ ಶಾರೀರಕ ಬೆಳವಣಿಗೆ ಮತ್ತು ತೂಕ ಸರಿ ಇದೆಯೋ, ಏನಾದರೂ ನ್ಯೂನತೆ-ಕೊರತೆ ಇದೆಯೋ ಎಂದು ಕೇಳಬೇಕು. ಅನಾರೋಗ್ಯದ ಲಕ್ಷಣಗಳನ್ನು ಆದಷ್ಟು ಬೇಗ ಗುರುತಿಸಿ ಸರಿಪಡಿಸಬೇಕು. ಅಂಗವೈಕಲ್ಯಗಳಿದ್ದರೆ, ಅವುಗಳಿಂದುಂಟಾಗುವ ತೊಂದರೆ, ನ್ಯೂನತೆಗಳನ್ನು ಎಷ್ಟು ಸಾಧ್ಯವಾದರೆ ಅಷ್ಟು ಸರಿಪಡಿಸಬೇಕು. ಶರೀರ ಗಟ್ಟಿ ಮುಟ್ಟಿಯಾಗಿರುವಂತೆ ಹಾಗೂ ಗರಿಷ್ಠ ಮಟ್ಟದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಶರೀರಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ಕೆಲಸ ಚಟುವಟಿಕೆಗಳನ್ನು ಮಾಡಬಾರದು.

ಬೌದ್ಧಿಕ ಬೆಳವಣಿಗೆ : ಬುದ್ಧಿ ಎಂದರೆ

೧. ಆಲೋಚನೆ ಮಾಡುವುದು, ತರ್ಕಬದ್ಧವಾಗಿ, ಅರ್ಥಪೂರ್ಣವಾಗಿ, ವಿಶ್ಲೇಷಣಾತ್ಮಕವಾಗಿ, ಹೊಸ ರೀತಿಯಲ್ಲಿ ಆಲೋಚಿಸುವುದು.

೨. ವಿಷಯ, ಸನ್ನಿವೇಶ, ಸಂದರ್ಭ, ಸಮಸ್ಯೆಗೆ ತಕ್ಕಂತೆ ಸರಿಯಾದ ನಿರ್ಧಾರ, ತೀರ್ಮಾನಗಳನ್ನು ಕೈಗೊಳ್ಳುವುದು.

೩. ಕಲಿಕೆ ಮತ್ತು ನೆನಪಿನ ಶಕ್ತಿ.

೪. ಸಂವಹನ: ಅನಿಸಿಕೆ, ಅಭಿಪ್ರಾಯ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದು.

೫. ಭಾಷಾ ಸಾಮರ್ಥ್ಯ : ಭಾಷೆ, ಭಾಷೆಗಳನ್ನು ಸಮರ್ಪಕವಾಗಿ ಬಳಸುವುದು, ಮಾತಾಡುವ ಕಲೆ, ಬರೆಯುವ ಕಲೆಯನ್ನು ರೂಢಿಸಿಕೊಳ್ಳುವುದು.

೬. ಕಾರ್ಯ-ಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು.

೭. ಕ್ಷೇತ್ರ, ಜ್ಞಾನ: ಪರಿಸರದಲ್ಲಿ ಯಾವ ವಸ್ತು ಎಲ್ಲಿದೆ, ತನ್ನಿಂದ ಎಷ್ಟು ದೂರದಲ್ಲಿದೆ, ದಿಕ್ಕುಗಳನ್ನು ಅರ್ಥಮಾಡಿಕೊಳ್ಳುವುದು.

೮. ಗಣಿತ, ಅಂಕಿ- ಅಂಶ ಸಾಮರ್ಥ್ಯ.

೯. ವ್ಯವಹಾರಿಕ ಜ್ಞಾನ ಇತ್ಯಾದಿ.

ಹದಿಹರೆಯದಲ್ಲಿ ಈ ಎಲ್ಲ ಬುದ್ಧಿ ಪ್ರಕಾರಗಳು ವಿಕಾಸಗೊಳ್ಳಬೇಕು. ಗರಿಷ್ಠ ಮಟ್ಟಕ್ಕೆ ಬೆಳೆಯಬೇಕು. ಬುದ್ಧಿ ಶಕ್ತಿಯನ್ನು ಕೇವಲ ಪರೀಕ್ಷಾ ಅಂಶಗಳ ಮೇಲೆ ನಿರ್ಧರಿಸಬಾರದು ಅಥವಾ ವಿಜ್ಞಾನ, ಗಣಿತದಲ್ಲಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಎಷ್ಟು ಅಂಶಗಳು ಬರುತ್ತವೆ ಎನ್ನುವುದರ ಮೇಲೆ ನಿರ್ಧಾರವಾಗಬಾರದು. ಆದ್ದರಿಂದ ಹರೆಯದ ಹುಡುಗ ಹುಡುಗಿಗೆ ಅನೇಕ ಬೌದ್ಧಿಕ ಚಟುವಟಿಕೆಗಳನ್ನು ಹಮ್ಮಿಕೊಡಬೇಕು. ಉದಾಹರಣೆಗೆ:

 • ಪಠ್ಯ ಪುಸ್ತಕಗಳನ್ನಲ್ಲದೆ ಬೇರೆ ಬೇರೆ ವಿಷಯಗಳ ಪುಸ್ತಕಗಳನ್ನು, ವೃತ್ತ ಪತ್ರಿಕೆ, ನಿಯತಕಾಲಿಕೆಗಳನ್ನು ಓದಲು ಹೇಳಬೇಕು. ಓದಿದ ವಿಷಯಗಳನ್ನು ಚರ್ಚಿಸಲು ಪ್ರೋತ್ಸಾಹ ನೀಡಬೇಕು.
 • ಆಶುಭಾಷಣಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೇಳಬೇಕು.
 • ಸರಳವಾಗಿ, ಸರಾಗವಾಗಿ, ನಿರರ್ಗಳವಾಗಿ, ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಮಾತನಾಡಲು, ಬರೆಯಲು ತರಬೇತಿ ನೀಡಬೇಕು.
 • ಪದ ಜೋಡಿಸುವ, ಪದಬಂಧಗಳನ್ನು ಬಿಡಿಸುವ, ಅಂತ್ಯಾಕ್ಷರಿ ಆಡುವ ಆಟವನ್ನು, ಸ್ಪರ್ಧೆಯನ್ನು ಏರ್ಪಡಿಸಬೇಕು.
 • ಪ್ರಚಲಿತ ಸಮಸ್ಯೆಗಳ ವಿಶ್ಲೇಷಣೆ ಮಾಡಿ, ವಿವಿಧ ರೀತಿಯ ಪರಿಹಾರಗಳನ್ನು ಹುಡುಕು ಎನ್ನಬೇಕು.
 • ಅಂಗಡಿಗೆ ಹೋಗು, ಸರಿಯಾದ ಬೆಲೆ ಏನು, ಮೋಸ ಹೋಗದಂತೆ ಎಚ್ಚರಿಕೆ ವಹಿಸುವುದು, ವಿವಿಧ ಜನ, ಸಂಸ್ಥೆಗಳಿಗೆ ಭೇಟಿ, ವ್ಯವಹಾರದಲ್ಲಿ ನಿಪುಣನಾಗು ಎಂದು ಹೇಳಿ.
 • ಒಂಟಿಯಾಗಿ ಪ್ರಯಾಣ ಮಾಡು. ಹೊಸ ಸ್ಥಳಗಳಿಗೆ ಹೋಗಿ ಬಾ, ಸಮಸ್ಯೆಗಳನ್ನು ನಿಭಾಯಿಸು ಎಂದು ಪ್ರೋತ್ಸಾಹಿಸಬೇಕು.
 • ನಿತ್ಯ ಯಾವುದಾದರೂ ಒಂದು ಹೊಸ ವಿಷಯ, ವಿಚಾರ, ತಿಳುವಳಿಕೆ, ಜ್ಞಾನ, ಕೌಶಲ್ಯವನ್ನು ಕಲಿ ಎನ್ನಿ. ಕಲಿತದ್ದನ್ನು ನೆನೆಸಿಕೋ ಎನ್ನಿ. ಆದ ತಪ್ಪುಗಳಿಂದ ಏನು ಪಾಠ ಕಲಿಯಬಹುದು ಎಂದು ಕೇಳಿ.

ಭಾವನಾತ್ಮಕ ಬೆಳವಣಿಗೆ:

ಭಾವನೆಗಳು ಮನುಷ್ಯನಿಗೆ ಸಹಜ. ಹಿತಕರವಾದ ಸನ್ನಿವೇಶ, ಅನುಭವ, ಪ್ರಚೋದನೆಗಳಿಂದ ಸಕಾರಾತ್ಮಕ ಭಾವನೆಗಳು ಬಂದರೆ, ಅಹಿತಕಾರಿ ಅನುಭವ, ಪ್ರಚೋದನೆಗಳಿಂದ ನಕಾರಾತ್ಮಕ ಭಾವನೆಗಳು ಹುಟ್ಟುತ್ತವೆ.

ಸಕಾರಾತ್ಮಕ ಭಾವನೆಗಳು:

ಪ್ರೀತಿ, ವಾತ್ಸಲ್ಯ, ಸ್ನೇಹ, ದಯೆ, ಅನುಕಂಪ,ಸಹಾನುಭೂತಿ, ಸ್ವಾಭಿಮಾನ, ಧೈರ್ಯ, ಸಂತೋಷ, ಪ್ರಶಾಂತತೆ.

ನಕಾರಾತ್ಮಕ ಭಾವನೆಗಳು:

ಆತಂಕ, ಭಯ, ಸಿಟ್ಟು, ಕೋಪ, ಬೇಸರ, ದುಃಖ, ದ್ವೇಷ, ಮತ್ಸರ, ದುರಭಿಮಾನ, ಕೀಳರಿಮೆ, ಅಹಂಕಾರ, ಜಿಗುಪ್ಸೆ, ಅತಿ ನಾಚಿಕೆ.

ಭಯ- ಸಿಟ್ಟು ಪ್ರೀತಿಯನ್ನು ಪ್ರಾಥಮಿಕ ಭಾವನೆಗಳೆನ್ನುತ್ತಾರೆ. ಈ ಭಾವನೆಗಳು ಹುಟ್ಟಿದ ಎರಡು ಮೂರು ತಿಂಗಳಲ್ಲೇ ಕಾಣಿಸಿಕೊಳ್ಳುತ್ತವೆ. ಅಪಾಯವಿದೆ ಎಂದಾಗ ಭಯ, ಅಗತ್ಯಗಳ ಪೂರೈಕೆಯಾಗದಿದ್ದಾಗ ಸಿಟ್ಟು ಹಾಗೂ ಆರೈಕೆ ಮಾಡುವ ತಾಯಿ ಅಥವಾ ಪಾಲಕರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಆನಂತರ ಉಳಿದ ಭಾವನೆಗಳು ಮೂಡುತ್ತವೆ. ಪ್ರಾರಂಭದಲ್ಲಿ ಮಗು ಭಾವನೆಗಳನ್ನು ಕೂಡಲೇ ಹಾಗೂ ಸೆನ್ಸಾರ್ ಮಾಡದೇ ವ್ಯಕ್ತಪಡಿಸುತ್ತದೆ. ತಂದೆ, ತಾಯಿಗಳು, ಕುಟುಂಬದ ಇತರರು, ಸುತ್ತಮುತ್ತಲಿನ ಜನ, ಟೀವಿ, ಸಿನೆಮಾಗಳಲ್ಲಿ ಭಾವನೆಗಳು ಹೇಗೆ ಪ್ರಕಟಿಸುತ್ತಾರೆ ಎಂಬುದನ್ನು ಗಮನಿಸಿದ ಮಗು ತಾನೂ ಹಾಗೇ ಪ್ರಕಟಿಸುತ್ತದೆ. ದುಃಖವಾದಾಗ ಅಳುತ್ತದೆ. ಕೋಪ ಬಂದಾಗ ಕಿರಿಚುತ್ತದೆ. ಕೆಟ್ಟ ಪದಗಳನ್ನು ಉಪಯೋಗಿಸುತ್ತದೆ. ಹೊಡೆಯಲು, ಕಚ್ಚಲು ಪ್ರಯತ್ನಿಸುತ್ತದೆ. ಭಯವಾದಾಗ, ಅಮ್ಮನನ್ನೋ, ಇತರರನ್ನೋ ತಬ್ಬಿ ಹಿಡಿಯುತ್ತದೆ. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ. ಸ್ನೇಹ, ಪ್ರೀತಿಯನ್ನು ತಬ್ಬಿಕೊಂಡು ಮುತ್ತು ಕೊಟ್ಟು ಪ್ರಕಟಿಸುತ್ತದೆ. ಹರೆಯಕ್ಕೆ ಬಂದಾಗ, ಭಾವನೆಗಳ ಪ್ರಕಟಣೆಯ ವಿಧಾನಗಳನ್ನು ಹರೆಯದವರು ಬದಲಿಸುತ್ತಾರೆ, ಸಾಮಾಜಿಕ ಶಿಷ್ಟಾಚಾರವನ್ನೋ ಅಥವಾ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರಕಟಿಸುತ್ತಾರೆ. ಹಾಗೆಯೇ ಇತರರು ವಿರೋಧಿಸುತ್ತಾರೆ. ಇಷ್ಟಪಡುವುದಿಲ್ಲ ಎನಿಸಿದರೆ, ಭಾವನೆಗಳನ್ನು ಪ್ರಕಟಿಸದೇ ಮುಚ್ಚಿಡುತ್ತಾರೆ.

ನನ್ನ ದೊಡ್ಡ ಮಗ, ಕೋಪ ಬಂದಾಗ ಏನೂ ಮಾತಾಡದೇ ಎದ್ದು ಹೋಗಿಬಿಡುತ್ತಾನೆ. ಆದರೆ ಚಿಕ್ಕವನು ಬಾಯಿಗೆ ಬಂದಂತೆ ಬೈದು, ಕಿರಿಚಾಡುತ್ತಾನೆ.

ಊಟಮಾಡುವುದಿಲ್ಲ, ಮಾಡಬೇಕಾದ ಕೆಲಸವನ್ನು ಮಾಡುವುದಿಲ್ಲ, ರೂಮಿಗೆ ಸೇರಿ ಬಿಡುತ್ತಾಳೆ ಎಂದರೆ ನನ್ನ ಮಗಳಿಗೆ ಕೋಪ ಬಂದಿದೆ ಎಂದರ್ಥ.

ಉಗುರು ಕಚ್ಚುವುದು, ಕರ್ಚಿಫನ್ನು ಉಂಡೆ ಮಾಡುವುದು, ಸುಮ್ಮನೆ ಒಂದೆಡೆ ಕೂರದೇ, ಸುಟ್ಟ ಕಾಲಿನ ಬೆಕ್ಕಿನಂತೆ ಅಡ್ಡಾಡುತ್ತಿದ್ದರೆ, ಮಗುವಿಗೆ ಭಯ, ಆತಂಕವಾಗಿದೆ ಎಂದು ನಮಗರ್ಥವಾಗುತ್ತದೆ.

“ದುಃಖವಾದಾಗ ದೊಡ್ಡವಳು ಹೋ ಎಂದು ಅತ್ತು ರಂಪಾಟ ಮಾಡುತ್ತಾಳೆ. ಆದರೆ ಎರಡನೆಯವಳು ಪೂಜಾ ರೂಮಿಗೆ ಹೋಗಿ, ಕಣ್ಣು ಮುಚ್ಚಿ ಕೂರುತ್ತಾಳೆ. ಯಾರೊಂದಿಗೂ ಮಾತಾಡುವುದಿಲ್ಲ. ತನ್ನ ಬೇಕು, ಬೇಡಗಳನ್ನು ಗಮನಿಸುವುದಿಲ್ಲ

“ಏನಾಗಿದೆಯೋ, ಒಂಥರಾ ಇದ್ದೀಯಲ್ಲೋ, ಬೇಸರವೇನೋ, ಕೋಪವೇನೋ, ಏನಾಗಿದೆ ಹೇಳೋ ಎಂದು ಒತ್ತಾಯ ಮಾಡಿ ಕೇಳಿದರೂ, ಬಾಯಿ ಬಿಡುವುದಿಲ್ಲ. ಮುಖದ ಮೇಲೆ ಯಾವ ಭಾವನೆಯೂ ಕಾಣುವುದಿಲ್ಲ. ನೀವೇ ಬಾಯಿ ಬಿಡಿಸಬೇಕು ಎಂದರು ಅಶೋಕನ ತಾಯಿ.

ಭಾವನೆಗಳನ್ನು ಪ್ರಕಟಿಸುವಾಗ ವ್ಯಕ್ತಿಗೂ ಅಹಿತ, ಹಿಂಸೆಯಾಗಬಾರದು. ಇತರರಿಗೂ ಅಹಿತ, ಹಿಂಸೆಯಾಗಬಾರದು. ಹಿತಕರವಾಗಿ, ನಾಜೂಕಾಗಿ, ಆದರೆ ಪರಿಣಾಮಕಾರಿಯಾಗಿ ಭಾವನೆಗಳ ಪ್ರಕಟಣೆಯ ಕೌಶಲವನ್ನು ಹರೆಯದವರು ಕಲಿಯಬೇಕು. ತಂದೆ-ತಾಯಿಗಳು ಕಲಿಸಬೇಕು.

ಸಾಮಾಜಿಕ ಬೆಳವಣಿಗೆ:

ನಾವೆಲ್ಲ ಸಂಘ ಜೀವಿಗಳು. ಗುಂಪಿನಲ್ಲಿ ವಾಸ ಮಾಡುವವರು. ಚಿಕ್ಕವರೊಂದಿಗೆ ದೊಡ್ಡವರೊಂದಿಗೆ, ಬಂಧುಗಳೊಂದಿಗೆ, ಸ್ನೇಹಿತರೊಂದಿಗೆ, ಪರಿಚಿತರೊಂದಿಗೆ, ಅಪರಿಚಿತರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಸೋದರ-ಸೋದರಿಯರೊಂದಿಗೆ ಸ್ನೇಹ ವಿಶ್ವಾಸವನ್ನು ಉಳಿಸಿಕೊಂಡು ಬೆಳೆಸುವುದು ಹೇಗೆ ? ತನ್ನ ಬೇಕು ಬೇಡಗಳನ್ನು ಪೂರೈಸಿಕೊಳ್ಳುವಾಗ ಇತರರಿಗೆ ತೊಂದರೆಕೊಡದಿರುವುದು ಹೇಗೆ? ಜೊತೆಗೆ ಇತರರ ಬೇಕು ಬೇಡಗಳನ್ನು ಪೂರೈಸುವುದು ಹೇಗೆ ? ಪ್ರತಿಯೊಬ್ಬ ವ್ಯಕ್ತಿ, ಏಕ ಕಾಲದಲ್ಲಿ ಮಗನಾಗಿ, ಸೋದರನಾಗಿ, ಸ್ನೇಹಿತನಾಗಿ, ಆನಂತರ ತಂದೆಯಾಗಿ, ಹಿರಿಯನಾಗಿ, ನಾಯಕನಾಗಿ ವರ್ತಿಸುವುದು ಹೇಗೆ, ಪ್ರತಿಯೊಂದು ಪಾತ್ರದ ಹಕ್ಕು ಬಾದ್ಯತೆಗಳೇನು, ಸ್ವಹಿತಕ್ಕೆ ಎಷ್ಟು ಆದ್ಯತೆ, ಪ್ರಾಮುಖ್ಯತೆ, ಪರಹಿತಕ್ಕೆ ಎಷ್ಟು ಆದ್ಯತೆ, ಪ್ರಾಮುಖ್ಯತೆ, ಎಷ್ಟು ಸ್ವಾರ್ಥ, ಎಷ್ಟು ತ್ಯಾಗ, ವಿವಿಧ ವ್ಯಕ್ತಿತ್ವದ ಜನರೊಂದಿಗೆ ಹೇಗೆ ವರ್ತಿಸಬೇಕು, ಕ್ರಿಯೆ, ಪ್ರತಿಕ್ರಿಯೆಗಳನ್ನು ಹತೋಟಿಯಲ್ಲಿಡುವುದು ಹೇಗೆ, ಸಾಮಾಜಿಕವಾಗಿ ಯಾವುದು ಸಭ್ಯತೆ, ಯಾವುದು ಅಸಭ್ಯತೆ, ಯಾವುದು ಶಿಷ್ಟಾಚಾರ, ಯಾವುದು ದುರಾಚಾರ. ಇತರರು ಅನುಚಿತವಾಗಿ ನಡೆದು ಕೊಂಡರೆ ಏನು ಮಾಡಬೇಕು. ಮೋಸ, ವಂಚನೆ, ಪಕ್ಷಪಾತ ಮಾಡಿದರೆ ಏನು ಮಾಡಬೇಕು. ಇತರರನ್ನು ತಿದ್ದುವುದು ಹೇಗೆ, ತಿದ್ದಲು ಆಗದಿದ್ದಾಗ ಅಂಥವರನ್ನು ಹೇಗೆ ನಿಭಾಯಿಸಬೇಕು. ಸಾಮಾಜಿಕ ಸನ್ನಿವೇಶಗಳಲ್ಲಿ ಉದಾಹರಣೆ ಮದುವೆ, ನಾಮಕರಣ, ಪಾರ್ಟಿ, ಸಭೆ, ತಿಥಿ, ವೈಕುಂಠ ಸಮಾರಾಧನೆ, ವ್ಯವಹಾರವನ್ನು ನಡೆಸುವ ಗುಂಪುಗಳು, ಮನರಂಜನಾ ಕೂಟಗಳಲ್ಲಿ ನಮ್ಮ ನಡವಳಿಕೆ ಹೇಗಿರಬೇಕು, ಹೇಗಿರಬಾರದು, ಇವೆಲ್ಲವನ್ನೂ ಹರೆಯದವರು ಕಲಿಯಬೇಕು. ಮಕ್ಕಳ ಹಂತದಲ್ಲಿ ತಪ್ಪುಗಳಾದಾಗ, ಅಸಹಜತೆ ಕಂಡು ಬಂದಾಗ, ಜನ ತೀವ್ರವಾಗಿ ಗಮನಿಸುವುದಿಲ್ಲ. ಆದರೆ ಹರೆಯಕ್ಕೆ ಬಂದ ನಂತರ, ೧೮ ವರ್ಷವಾದ ನಂತರ, ಪ್ರೌಢ ನಡೆವಳಿಕೆ, ಸೌಜನ್ಯಯುತ ವರ್ತನೆ, ಸಾಮಾಜಿಕ ಸಂಪ್ರದಾಯಗಳು ರೀತಿ ರಿವಾಜುಗಳ ಒಳ್ಳೆಯ ಮಟ್ಟದ ಪಾಲನೆಯನ್ನು ನೀರೀಕ್ಷಿಸಲಾಗುತ್ತದೆ. ಈ ಸಾಮಾಜಿಕ ನಡೆ ನುಡಿಗಳನ್ನು ಕಲಿಯುವಾಗ, ಬೆಳೆಯುತ್ತಿರುವ ಮಗು ಮನೆಯವರನ್ನು ಗಮನಿಸುತ್ತದೆ. ಬಂಧು-ಮಿತ್ರರನ್ನು ಗಮನಿಸುತ್ತದೆ, ನೆರೆ-ಹೊರೆಯವರನ್ನೂ ನೋಡುತ್ತದೆ. ಟೀವಿ, ಸಿನಿಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸುತ್ತದೆ. ಆದ್ದರಿಂದ ಬೆಳೆಯುವ ಮಗುವಿನ ಮನಸ್ಸಿನ ಮೇಲೆ ಯಾರು ಹೆಚ್ಚು ಪ್ರಭಾವ ಬೀರುತ್ತಾರೋ, ಅವರ ನಡೆ-ನುಡಿಗಳನ್ನು ಮಗು ಅನುಕರಿಸುವ ಸಂಭವ ಹೆಚ್ಚಾಗುತ್ತದೆ. ಆ ದೃಷ್ಟಿಯಿಂದ ನಮ್ಮ ಸಮಾಜದಲ್ಲಿ ‘ಮಾದರಿ ವ್ಯಕ್ತಿಗಳು, ವಿಶೇಷವಾಗಿ ನಮ್ಮ ಸಿನೇಮಾ ತಾರೆಯರು, ಕ್ರೀಡಾಪಟುಗಳು, ಸಮಾಜದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವವರು, ಜನನಾಯಕರು, ಅಧಿಕಾರದಲ್ಲಿರುವವರು, ತಾನೇನು ಮಾಡುತ್ತಿದ್ದೇವೆ, ಹೇಗೆ ನಡೆದುಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರವಹಿಸಬೇಕು. ಅವರ ಪಾತ್ರ ನಿರ್ವಹಣೆ, ಮಾತಿನ ಶೈಲಿ, ವರ್ತನೆ, ವೈವಿಧ್ಯತೆ, ಭಾವನೆಗಳ ಪ್ರಕಟಣೆ, ಅಭ್ಯಾಸ, ಚಟಗಳನ್ನು ಹರೆಯದವರೂ ಅನುಕರಿಸತೊಡಗುತ್ತಾರೆ.

ಬೆಳೆಯುವ ಮಕ್ಕಳಿಗೆ, ಸಾಮಾಜಿಕ ಶಿಷ್ಟಾಚಾರ, ಸಭ್ಯ ನಡವಳಿಕೆ, ಸಾಮಾಜಿಕ ರೀತಿನೀತಿಗಳು, ವಿವಿಧ ಸ್ವಭಾವದ ಜನರೊಂದಿಗೆ ಹೇಗೆ ವ್ಯವಹರಿಸುವುದು, ಸ್ನೇಹ, ವಿಶ್ವಾಸ, ನಂಬಿಕೆಗಳ ಪ್ರಕಟಣೆ ಹೇಗೆ, ನಾನೂ ಕ್ಷೇಮ, ಇತರರೂ ಕ್ಷೇಮವಾಗಿರಲಿ ಎಂಬ ತತ್ವವನ್ನು ಪಾಲಿಸುವುದು ಹೇಗೆ ಇತ್ಯಾದಿ ವಿಷಯಗಳನ್ನು ತಂದೆ-ತಾಯಿಗಳು ಶಿಕ್ಷಕರು ಹೇಳಿ ಕೊಡಬೇಕು. ಅಸಭ್ಯ, ಅಸೌಜನ್ಯ, ಅಹಂಕಾರ, ಅತಿ ಸ್ವಾರ್ಥ, ಇತರರಿಗೆ ನೋವು ಅವಮಾನ ಮಾಡುವ ಮೋಸ ವಂಚನೆ ಮಾಡುವ, ಪ್ರವೃತ್ತಿಯನ್ನು ತಡೆಗಟ್ಟಬೇಕು. ಹಂಚಿಕೊಂಡು, ಹೊಂದಿಕೊಂಡು, ಬದಕುವ ರೀತಿಯನ್ನು ಕಲಿಸಬೇಕು.

ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಇಂದಿಗೂ ಸಾಮಾಜಿಕ ನಡವಳಿಕೆಯನ್ನೂ ಕಲಿಸಬಲ್ಲ ಉತ್ಕೃಷ್ಟ ಆಕರಗಳು. ತಂದೆ-ತಾಯಿ ಹೇಗೆ ನಡೆದುಕೊಳ್ಳಬೇಕು, ಮಕ್ಕಳು ಹೇಗಿರಬೇಕು, ಸೋದರ-ಸೋದರಿಯರ ಸಂಬಂಧ ಹೇಗಿರಬೇಕು, ಪತಿ-ಪತ್ನಿ ಹೇಗಿರಬೇಕು. ನಾಯಕ-ನಾಯಕಿಯ ಕರ್ತವ್ಯ ಮತ್ತು ಲಕ್ಷಣಗಳೇನು, ಮಾಲೀಕ ಮತ್ತು ಸೇವಕ, ಸ್ನೇಹಿತರು ಹೇಗಿರಬೇಕು. ಎಲ್ಲವನ್ನೂ ಪಾತ್ರಗಳ ಮೂಲಕ ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತವೆ. ರಾಮ-ಲಕ್ಷ್ಮಣ, ರಾಮ-ಸುಗ್ರೀವ, ರಾಮ-ಹನುಮಂತ, ಅರ್ಜುನ-ಕೃಷ್ಣ, ಕೃಷ್ಣ-ಕುಚೇಲ, ದುರ‍್ಯೋಧನ-ಕರ್ಣ, ಸೀತೆ-ಮಂಡೋದರಿ, ದ್ರೋಣ-ಏಕಲವ್ಯ ಒಂದೊಂದು ಪಾತ್ರ ಸಂಬಂಧಗಳು ನಮಗೆ ಆದರ್ಶ ಪ್ರಾಯವಾಗಬಲ್ಲವು.

ನೈತಿಕ ಬೆಳವಣಿಗೆ

ಬೆಳೆಯುವ ಮಗು ಒಳ್ಳೆಯ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಶಾರೀರಕವಾಗಿ ಗಟ್ಟಿಮುಟ್ಟಿ, ಸುಂದರ, ಮಾನಸಿಕವಾಗಿ ಬುದ್ಧಿವಂತ, ಸಾಮಾಜಿಕ ವ್ಯವಹಾರಗಳಲ್ಲಿ ನಿಪುಣ. ಆದರೆ ಅವನು ಕಳ್ಳನಾದರೆ, ಸುಳ್ಳನಾದರೆ, ಸ್ವಾರ್ಥಿಯಾದರೆ, ಅತ್ಯಾಚಾರಿಯಾದರೆ, ಕಾನೂನನ್ನು ಪಾಲಿಸದವನಾದರೆ, ಕುಟುಂಬವೂ ತೊಂದರೆಗೀಡಾಗುತ್ತದೆ. ಸಮಾಜವೂ ಕಷ್ಟನಷ್ಟಗಳಿಗೀಡಾಗುತ್ತದೆ. ಅಂತಹ ವ್ಯಕ್ತಿ ಎಲ್ಲರ ಪಾಲಿಗೆ ಮಗ್ಗುಲಮುಳ್ಳಾಗುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ನೀತಿ-ನಿಯಮಗಳ ಚೌಕಟ್ಟಿನಲ್ಲಿ ತನ್ನ ಬೇಕು-ಬೇಡಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಕುಟುಂಬ, ಸಮಾಜ ಎಲ್ಲರ ಹಿತಕ್ಕಾಗಿ ರೂಪಿಸುವ ರೀತಿ, ರಿವಾಜು, ಲಿಖಿತ-ಅಲಿಖಿತ ನಿಯಮ-ಕಾನೂನುಗಳನ್ನು ವ್ಯಕ್ತಿ ಸ್ವ-ಇಚ್ಚೆಯಿಂದ ಪಾಲಿಸಬೇಕಾಗುತ್ತದೆ. ಯಾವುದು ಸರಿ, ಯಾವುದು ತಪು, ಯಾವುದು ನ್ಯಾಯ, ಯಾವುದು ಅನ್ಯಾಯ, ಯಾವುದು ಧರ್ಮ, ಯಾವುದು ಧರ್ಮವಲ್ಲ ಎಂಬುದನ್ನು ಅರ್ಥ ಮಾಡಿಕೊಂಡು, ಸರಿಯಾದ, ನ್ಯಾಯವಾದ, ಧರ್ಮಮಾರ್ಗದಲ್ಲೇ ನಡೆಯಬೇಕು. ಚಿಕ್ಕದಿರಲಿ, ದೊಡ್ಡದಿರಲಿ, ನಿರ್ಧಾರ ಕೈಗೊಳ್ಳುವಾಗ, ಆಹಾರ, ವಸ್ತ್ರ, ವಸತಿ, ಹಣ, ಆಸ್ತಿ, ಅಧಿಕಾರಗಳನ್ನು ಸಂಪಾದಿಸುವಾಗ, ಸುಖಪಡಲು ಪ್ರಯತ್ನಿಸುವಾಗ, ಧರ್ಮಾಧರ್ಮಗಳ, ಸರಿ ತಪ್ಪುಗಳ ಲಕ್ಷ್ಮಣ ರೇಖೆಯನ್ನು ಗುರುತಿಸಿ, ಅದನ್ನು ದಾಟಬಾರದು. ಎಲ್ಲ ಧರ್ಮ, ಸಮಾಜಗಳಲ್ಲಿ ಪ್ರಾಥಮಿಕ ನೀತಿ ನಿಯಮಗಳು ಒಂದೇ ರೀತಿಯವಾಗಿರುತ್ತವೆ. ಉದಾಹರಣೆಗೆ:

೧. ಸುಳ್ಳುಹೇಳಬಾರದು (ವಿಶೇಷವಾಗಿ ಸ್ವಾರ್ಥಕ್ಕೆ/ಲಾಭಕ್ಕೆ)

೨. ಸತ್ಯವನ್ನೇ ಹೇಳಬೇಕು.

೩. ಕಳ್ಳತನ ಮಾಡಬಾರದು.

೪. ಯಾರಿಗೇ ಆಗಲೀ ಮೋಸ, ವಂಚನೆ ಮಾಡಬಾರದು.

೫. ಸಾಧ್ಯವಾದಷ್ಟು ದಾನ, ಧರ್ಮ, ಪರೋಪಕಾರವನ್ನು ಮಾಡಬೇಕು.

೬. ಬಡವರಿಗೆ, ದೀನ, ದುರ್ಬಲರಿಗೆ, ಪಶು ಪಕ್ಷಿಗಳಿಗೆ ದಯೆ ಅನುಕಂಪವನ್ನು ತೋರಿಸಬೇಕು.

೭. ಯಾರಿಗೆ ಆಗಲೀ, ಹಿಂಸೆ ನೋವು ಅವಮಾನವನ್ನು ಮಾಡಬಾರದು.

೮. ಇತರರನ್ನು ಪ್ರೀತಿ, ವಿಶ್ವಾಸ, ಗೌರವಗಳಿಂದ ಕಾಣಬೇಕು, ಹಿರಿಯರಿಂದ ಬರುವ ಮಾತು, ಸಲಹೆಗಳನ್ನು ಪಾಲಿಸಬೇಕು.

೯. ಸ್ವಾರ್ಥವನ್ನು ಕಡಿಮೆ ಮಾಡಿ, ಪರಹಿತವನ್ನು ಬಯಸಬೇಕು.

೧೦. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ‍್ಯವನ್ನು ಹತೋಟಿಯಲ್ಲಿಡಬೇಕು. ಆಸೆ, ಆಕಾಂಕ್ಷೆಗಳು ಅತಿಯಾಗಬಾರದು.

೧೧. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಸ್ತ್ರೀಯರು, ಮಕ್ಕಳು ಹಾಗೂ ದುರ್ಬಲರನ್ನು ಶೋಷಿಸುವುದು- ಮಾಡಬಾರದು.

೧೨. ಆತ್ಮಹತ್ಯೆ ಮಾಡಿಕೊಳ್ಳಬಾರದು.

೧೩. ಸೋಮಾರಿಯಾಗಬಾರದು, ಕೆಲಸ, ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು, ಪ್ರಾಮಾಣಿಕನಾಗಿರಬೇಕು.

೧೪. ಕುಟುಂಬ, ಸಮಾಜದಲ್ಲಿ ವ್ಯಕ್ತಿ ತಾನು ನಿರ್ವಹಿಸಬೇಕಾದ ಪಾತ್ರದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು.

೧೫. ಮಾನವಾತೀತ ಶಕ್ತಿ(ದೇವರು)ಯೊಂದರಲ್ಲಿ ನಂಬಿಕೆ ಇಡಬೇಕು. ಧರ್ಮಪಾಲನೆ ಮಾಡಬೇಕು ಇತ್ಯಾದಿ.

 

ಮಕ್ಕಳ ನೈತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವವರು

೧. ತಂದೆ-ತಾಯಿಗಳು, ಸೋದರ-ಸೋದರಿಯರು.

೨. ಅಜ್ಜ-ಅಜ್ಜಿಯರು, ಕುಟುಂಬದ ಇತರ ಸದಸ್ಯರು.

೩. ಟೀವಿ, ಸಿನೇಮಾ, ಸಾಹಿತ್ಯ, ವೃತ್ತಪತ್ರಿಕೆಗಳಲ್ಲಿ ಬರುವ ಪಾತ್ರಗಳು.

೪. ಶಾಲೆ, ಕಾಲೇಜು, ಶಿಕ್ಷಕರು.

೫. ಸಹವಯಸ್ಕರು, ಸಹಪಾಠಿಗಳು.

೬. ಸಮಾಜದ ಕಾನೂನು ಪಾಲನಾ ವ್ಯವಸ್ಥೆ.

೭. ನ್ಯಾಯಯುತ, ಧರ್ಮಯುತ ನಡವಳಿಕೆಗಳಿಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಹಾಗೂ ಅನ್ಯಾಯಕ್ಕೆ ನಡವಳಿಕೆಗಳಿಗೆ ಸಿಗುವ ಶಿಕ್ಷೆ, ಅಸಮ್ಮತಿಗಳು.

ಇವುಗಳೆಲ್ಲದರ ಪ್ರಭಾವದಿಂದ ಪ್ರತಿಯೊಂದು ಮಗು ಮತ್ತು ವ್ಯಕ್ತಿ ತನ್ನದೇ ಆದ ನಿರ್ದಿಷ್ಟಮಟ್ಟದ ನೈತಿಕ ಪ್ರಜ್ಞೆ, ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾನೆ/ಳೆ. ವ್ಯಕ್ತಿ ಸಮಾಜಮುಖಿಯಾಗುತ್ತಾನಾ, ಸಮಾಜ ವಿರೋಧಿಯಾಗುತ್ತಾನಾ? ನಿರ್ದಿಷ್ಟ ತತ್ವಗಳ ಪಾಲನೆ ಮಾಡುವನಾಗುತ್ತಾನಾ ಅಥವಾ ಅನುಕೂಲ ಸಿಂಧು ಪಾಲಿಸಿಯನ್ನು ಪಾಲಿಸುವಂಥವನಾಗುತ್ತಾನಾ, ಇತರರಿಂದ ಒಳ್ಳೆಯವನು ಎನಿಸಿಕೊಳ್ಳುತ್ತಾನಾ ಅಥವಾ ಕೆಟ್ಟವನು ಎನಿಸಿಕೊಳ್ಳುತ್ತಾನಾ, ಸಂತನಾಗುತ್ತಾನಾ, ಕ್ರೂರಿ-ಖಳನಾಯಕನಾಗುತ್ತಾನಾ ಎನ್ನುವುದು ನಿರ್ಧಾರವಾಗುತ್ತದೆ.

ಆರೋಗ್ಯಕರ ವ್ಯಕ್ತಿತ್ವದ ಲಕ್ಷಣಗಳು

ಬೆಳೆಯುತ್ತಿರುವ ಹರೆಯದ ಮಕ್ಕಳು ೨೦ ಅಥವಾ ೨೨ ವರ್ಷ ವಯಸ್ಸಿಗೆ ಬಂದು ಪ್ರೌಢರಾದಾಗ ಐದೂ ಕ್ಷೇತ್ರಗಳಲ್ಲಿ ಅವರ ಬೆಳವಣಿಗೆ ಸರಿ ಪ್ರಮಾಣದಲ್ಲಿ ಆಗಿದ್ದರೆ, ಅವರದು ಆರೋಗ್ಯಕರ ವ್ಯಕ್ತಿತ್ವವಾಗಿದ್ದರೆ, ಅವರಲ್ಲಿ ಈ ಗುಣವಿಶೇಷಗಳು ಕಂಡು ಬರುತ್ತವೆ.

೧. ನಿಜವನ್ನು, ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವಿರುತ್ತದೆ. ಅವರು ನಿಜವನ್ನು, ವಾಸ್ತವವನ್ನು ನಿರಾಕರಿಸುವುದಿಲ್ಲ. ತಮ್ಮದೇ ಆದ ಕಲ್ಪನಾಲೋಕದಲ್ಲಿರುವುದಿಲ್ಲ. ಅವರ ‘ಪ್ಲಾನಿಂಗ್ ವಾಸ್ತವಿಕವನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತದೆ. ಗಾಳಿ ಗೋಪುರವನ್ನು ಕಟ್ಟುವ ಪ್ರವೃತ್ತಿ ಅವರಲ್ಲಿ ಇರುವುದಿಲ್ಲ.

೨. ತಮ್ಮ ಐ.ಕ್ಯೂ, (ಮಿದುಳಿನ ಸಮಾರ್ಥ್ಯ)ವನ್ನು ಗರಿಷ್ಠ ಮಟ್ಟಕ್ಕೆ ಬಳಸಿ, ವಿದ್ಯಾ, ಬುದ್ಧಿ, ಕೌಶಲಗಳನ್ನು ಸಂಪಾದಿಸುತ್ತಾರೆ.

೩. ತಮ್ಮ ಬಗ್ಗೆ ಅಭಿಮಾನವಿಟ್ಟುಕೊಳ್ಳುತ್ತಾರೆ. ಕೀಳರಿಮೆಯನ್ನಾಗಲೀ, ದುರಭಿಮಾನ, ಅಹಂಕಾರಗಳನ್ನಾಗಲೀ ಬೆಳೆಸಿಕೊಳ್ಳುವುದಿಲ್ಲ. ತಮ್ಮ ಬಲಾಬಲಗಳನ್ನು, ಸಾಮರ್ಥ್ಯ ಕೊರತೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.

೪. ಇತರರ ಬಗ್ಗೆ ಸ್ನೇಹ-ಪ್ರೀತಿ, ಗೌರವಗಳನ್ನಿಟ್ಟುಕೊಳ್ಳುತ್ತಾರೆ. ಇತರರ ಬಗ್ಗೆ ದ್ವೇಷ ಸಾಧಿಸುವುದಿಲ್ಲ. ಇತರರ ತಪ್ಪುಗಳನ್ನು ಕ್ಷಮಿಸುತ್ತಾರೆ. ಎಲ್ಲ ರೀತಿಯ ಜನರೊಂದಿಗೆ ಹೊಂದಿಕೊಳ್ಳುತ್ತಾರೆ, ವ್ಯವಹರಿಸುತ್ತಾರೆ.

೫. ಯಾವುದೇ ವಿಷಯ, ಸಂದರ್ಭ, ಸನ್ನಿವೇಶ, ಘಟನೆ, ಆಗು ಹೋಗುಗಳ ಬಗ್ಗೆ ತಮ್ಮದೇ ಆದ ನಿಲುವು ಅಭಿಪ್ರಾಯಗಳನ್ನು ಹೊಂದುತ್ತಾರೆ. ಇದನ್ನು ಇತರರ ಮೇಲೆ ಹೇರುವುದಿಲ್ಲ ಹಾಗೇ ಇತರರು ತಮ್ಮ ನಿಲುವು ಅಭಿಪ್ರಾಯಗಳನ್ನು ತಮ್ಮ ಮೇಲೆ ಹೇರಲು ಬಿಡುವುದಿಲ್ಲ.

೬. ಉತ್ತಮ ಸಂವಹನ ಕೌಶಲವನ್ನು ಹೊಂದಿರುತ್ತಾರೆ. ಮಾತು, ಬರವಣಿಗೆ ಮತ್ತಿತರ ಸಂವಹನ ವಿಧಾನಗಳಿಂದ ಸಮರ್ಪಕವಾಗಿ ಎಲ್ಲರೊಡನೆ ಸಂಪರ್ಕವನ್ನು ಸಾಧಿಸುತ್ತಾರೆ.

೭. ಭಾವನೆಗಳ ಪ್ರಕಟಣೆ ಚೆನ್ನಾಗಿರುತ್ತದೆ. ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ಸಂದರ್ಭ, ಸನ್ನಿವೇಶ ಭಾವೋದ್ವೇಗವನ್ನು ಪ್ರೇರೇಪಿಸಿದರೂ ತತ್‌ಕ್ಷಣ, ಹತೋಟಿಯನ್ನು ಸಾಧಿಸಬಲ್ಲರು. ಇತರರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ.

೮. ಯಾವುದೇ ತೀರ್ಮಾನ ಕೈಗೊಳ್ಳುವಾಗ, ನಿರ್ಧಾರ ಮಾಡುವಾಗ, ಭಾವನೆಗಳಿಗಿಂತ, ಆಲೋಚನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಾಧಕ ಬಾಧಕಗಳನ್ನು ಚಿಂತಿಸಿ, ಯುಕ್ತ ನಿರ್ಧಾರಕ್ಕೆ ಬರುತ್ತಾರೆ.

೯. ಯಾವುದು ಸರಿ, ಯಾವುದು ತಪ್ಪು, ಯಾವುದು ದೀರ್ಘಾವಧಿಯಲ್ಲಿ ಲಾಭಕಾರಿ ಅಥವಾ ಅನುಕೂಲಕಾರಿ ಎಂಬುದನ್ನು ಯೋಚಿಸಬಲ್ಲರು ಅಥವಾ ಆತ್ಮೀಯರನ್ನು ಕೇಳುತ್ತಾರೆ, ಮಾರ್ಗದರ್ಶನವನ್ನು ಪಡೆಯುತ್ತಾರೆ.

೧೦. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ತಾವು ನಿರ್ವಹಿಸಬೇಕಾದ ಪಾತ್ರಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಪಾತ್ರಗಳ ಹಕ್ಕು ಬಾದ್ಯತೆಗಳ ಅರಿವು ಅವರಿಗಿರುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ.

೧೧. ಕುಟುಂಬ, ಸಮಾಜದ ನೀತಿ ನಿಯಮಗಳನ್ನು ಸ್ವ ಇಚ್ಚೆಯಿಂದ ಪಾಲಿಸುತ್ತಾರೆ. ಪಾಲಿಸಲು ಇತರರಿಗೆ ಒತ್ತಾಸೆ ನೀಡುತ್ತಾರೆ.

೧೨. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ, ಕೆಟ್ಟ, ಹಾನಿಕಾರಕ ಹವ್ಯಾಸ ಅಭ್ಯಾಸವನ್ನು, ಧೂಮಪಾನ, ಮದ್ಯ, ಮಾದಕವಸ್ತು ಸೇವನೆ, ಜೂಜಾಡುವುದು, ಇತ್ಯಾದಿ ಪ್ರಾರಂಭಿಸುವುದಿಲ್ಲ.

೧೩. ಆಹಾರ ಸೇವನೆ, ನಿದ್ದೆ-ಮೈಥುನ,ಮನರಂಜನೆ-ಬಿಡುವಿನ ವೇಳೆಯ ಚಟುವಟಿಕೆಗಳಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ.

೧೪. ತಮ್ಮ ಆರೋಗ್ಯವನ್ನು ಉಳಿಸಿ, ವರ್ಧಿಸಲು ಪ್ರಯತ್ನಿಸುತ್ತಾರೆ. ರೋಗಗಳು ಬಾರದಂತೆ ಎಚ್ಚರ ವಹಿಸುತ್ತಾರೆ. ಇರುವ, ಬರುವ ರೋಗಗಳನ್ನು ಆದಷ್ಟು ಬೇಗ ಗುರುತಿಸಿ ವೈದ್ಯರ ಮಾರ್ಗದರ್ಶನದಲ್ಲಿ ಹತೋಟಿಯಲ್ಲಿಡುತ್ತಾರೆ. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ.

೧೫. ಒತ್ತಡದ ಸನ್ನಿವೇಶ ಸಂದರ್ಭಗಳಲ್ಲಿ, ಕಷ್ಟ-ನಷ್ಟ, ಸೋಲು, ನಿರಾಶೆ ಅವಮಾನಗಳುಂಟಾದ ಸಮಯ ಸ್ಥಳಗಳಲ್ಲಿ, ಆಘಾತಕ್ಕೆ ಒಳಗಾಗದೆ ಸಮಚಿತ್ತದಿಂದ, ಸಮತೋಲನದಿಂದ ಪ್ರತಿಕ್ರಿಯಿಸುತ್ತಾರೆ, ನಿಭಾಯಿಸುತ್ತಾರೆ.

೧೬. ತಮ್ಮ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡಿ ಸಂತೋಷಿಸುತ್ತಾರೆ.

೧೭. ಜ್ಞಾನಾರ್ಜನೆಗೆ, ಹೊಸ ಕೌಶಲಗಳನ್ನು ಕಲಿಯಲು ಸದಾ ಆಸಕ್ತಿ ತೋರಿಸುತ್ತಾರೆ.

೧೮. ಸಮಾಜಕ್ಕೆ ಶತೃಗಳಾಗದೇ, ಕಂಟಕರಾಗದೇ, ಮಿತ್ರರಾಗಿ ಬದುಕಲು ಪ್ರಯತ್ನಿಸುತ್ತಾರೆ. ಸಮುದಾಯ ಮತ್ತು ಸಮಾಜದ ಪ್ರಗತಿ ಮತ್ತು ಒಳಿತನ್ನು ಬಯಸುತ್ತಾರೆ.

೧೯. ಹಣ, ಸಂಪನ್ಮೂಲಗಳನ್ನು ಅಪವ್ಯಯ ಮಾಡುವುದಿಲ್ಲ, ನಾಶ ಮಾಡುವುದಿಲ್ಲ. ಸಂಪನ್ಮೂಲಗಳನ್ನು ಉಳಿಸಿ, ಬೆಳೆಸಲು ಪ್ರಯತ್ನಿಸುತ್ತಾರೆ.

೨೦. ಯಾವುದಾದರೂ ಒಂದು ಮಾನವಾತೀತ ಶಕ್ತಿಯಲ್ಲಿ, ಧರ್ಮದಲ್ಲಿ ನಂಬಿಕೆ ಇಡುತ್ತಾರೆ. ಅದರೆ ಮೂಢನಂಬಿಕೆಗಳಿಗೆ ಪ್ರೋತ್ಸಾಹ ಕೊಡುವುದಿಲ್ಲ.

ಜೀವನ ಕೌಶಲಗಳು

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಹತ್ತುಜೀವನ ಕೌಶಲಗಳು: ಯಾವುದೇ ದೇಶ, ಸಮಾಜದಲ್ಲಿ ಹುಟ್ಟಿ ಬೆಳೆಯುವ ಮಗು ಆರೋಗ್ಯವಾಗಿ, ದೃಢವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅನುವಾಗುವಂತೆ ಹತ್ತು ಜೀವನ ಕೌಶಲಗಳನ್ನು ಆಯ್ಕೆ ಮಾಡಿದೆ. ಪೋಷಕರು ಮತ್ತು ಶಿಕ್ಷಕರು ಈ ಕೌಶಲಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ಶಿಫಾರಸು ಮಾಡಿದೆ. ಆ ಹತ್ತು ಜೀವನ ಕೌಶಲಗಳೆಂದರೆ:

೧. ಸಮಸ್ಯೆಯ ಪರಿಹಾರ: ಯಾವುದೇ ಸಮಸ್ಯೆ ಚಿಕ್ಕದಿರಲಿ, ದೊಡ್ಡದಿರಲಿ, ಅದರ ಹುಟ್ಟು, ಸ್ವರೂಪವನ್ನು ವಿಶ್ಲೇಷಿಸಿ, ಅದಕ್ಕೆ ಯಾರು, ಯಾವ ಸನ್ನಿವೇಶ, ಧೋರಣೆ ಕಾರಣವಾಯಿತು. ಯಾವ ಅಂಶಗಳು ಅವನ್ನು ಉಲ್ಬಣಗೊಳಿಸಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಭಯ, ತಪ್ಪಿತಸ್ಥ ಭಾವನೆ, ಕೋಪ, ದುಃಖವನ್ನಾಗಲೀ ಪಡದೇ, ಸಮಸ್ಯೆಯ ಪರಿಹಾರ ಮಾರ್ಗಗಳೇನು ಎಂದು ಚಿಂತಿಸಿ. ನಿಮಗೆ ಹೊಳೆಯದಿದ್ದರೆ ಇತರರ ನೆರವನ್ನು ಕೇಳಿ, ಕಾರ್ಯೋನ್ಮುಖರಾಗಿ. ಪರಿಹಾರವಿಲ್ಲದ ಸಮಸ್ಯೆಯಾದರೆ ಅದರೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯಿರಿ.

೨. ನಿರ್ಧಾರ ಮಾಡುವುದು: ಜೀವನುದ್ದದ್ದಕ್ಕೂ ಪ್ರತಿದಿನ ನಾವು ಅನೇಕ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಮಾಡಬೇಕೇ ಬೇಡವೇ, ಯಾವುದನ್ನು ಆಯ್ಕೆ ಮಾಡಬೇಕು, ಯಾವ ದಾರಿಯನ್ನು ಹಿಡಿಯಬೇಕು, ಏನು ಗುರಿ ಇತ್ಯಾದಿ ಸಾಧಕ-ಬಾಧಕಗಳನ್ನು ಪಟ್ಟಿ ಮಾಡಿ, ಯಾವುದು ಹೆಚ್ಚು ಅನುಕೂಲಕಾರಿಯೋ ಯಾವುದು ಕಡಿಮೆ ಹಾನಿಕಾರಿಯೋ ಆ ನಿರ್ಧಾರವನ್ನು ಮಾಡಿ, ಮುನ್ನಡೆಯಿರಿ.

೩. ವಿಮರ್ಶಾತ್ಮಕ ಆಲೋಚನೆ: ಪ್ರತಿಯೊಂದು ವಸ್ತು, ವಿಷಯ, ಸನ್ನಿವೇಶ, ಘಟನೆ, ಇತರರ ಸಲಹೆ, ಬುದ್ಧಿವಾದಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಚಿಂತನೆ ಮಾಡುವುದನ್ನು ಕಲಿಯಬೇಕು. ಇತರರು ಹೇಳಿದ್ದನ್ನು ಸುಲಭವಾಗಿ ನಂಬಬಾರದು. ಜಾಹೀರಾತಿಗೆ ಮೋಸ ಹೋಗಬಾರದು, ಆಡಂಬರ, ಹೊರರೂಪಕ್ಕೆ ಮರುಳಾಗಬಾರದು.

೪. ಸೃಜನಾತ್ಮಕ ಚಿಂತನೆ: ಹಳೆಯ ಧಾಟಿಯಲ್ಲಿ, ಸೀಮಿತ ರೀತಿಯಲ್ಲಿ ಸಂಪ್ರದಾಯ ಬದ್ಧವಾಗಿ, ಜಿಗಟಾಗಿ ಚಿಂತಿಸುವ ಬದಲು, ಹೊಸ ರೀತಿಯಲ್ಲಿ, ಸೃಜನಾತ್ಮಕವಾಗಿ ಪೂರ್ವಗ್ರಹ ಪೀಡಿತರಾಗದೇ ಮುಕ್ತವಾಗಿ ಆಲೋಚಿಸಬೇಕು. ಹೊಸ ವಿಧಾನ, ಮಾರ್ಗಗಳ ಆವಿಷ್ಕಾರ ಮಾಡಬೇಕು.

೫. ಪರಿಣಾಮಕಾರಿ ಸಂವಹನ: ಹೇಳಬೇಕಾದ್ದನ್ನು, ಅಭಿಪ್ರಾಯ, ಅನಿಸಿಕೆಗಳನ್ನು, ಪ್ರತಿಭಟನೆಯನ್ನು ನೇರವಾಗಿ, ನಿಖರವಾಗಿ ಗೊಂದಲಕ್ಕೆಡೆ ಇಲ್ಲದಂತೆ, ಹಾಗೆಯೇ ಕೇಳುವವರಿಗೆ ಕಸಿವಿಸಿಯಾಗದಂತೆ, ಮನಸ್ಸು ನೋಯದಂತೆ ಹೇಳುವ, ಬರೆಯುವ, ಅಭಿವ್ಯಕ್ತಿ ಮಾಡುವ ಕಲೆಯನ್ನು ರೂಢಿಸಿಕೊಳ್ಳಬೇಕು.

೬. ವ್ಯಕ್ತಿಗಳೊಂದಿಗೆ ಒಳ್ಳೆಯ ಸ್ನೇಹ ಸಂಬಂಧ: ಮನೆಯವರೊಂದಿಗೆ ಬಂಧು ಮಿತ್ರ, ಸಹೋದ್ಯೋಗಿಗಳೊಂದಿಗೆ, ನೆರೆಹೊರೆಯವರೊಂದಿಗೆ, ನಮ್ಮೊಡನೆ ತಾತ್ಕಾಲಿಕವಾಗಿ ಅಥವಾ ದೀರ್ಘ ಕಾಲ ವ್ಯವಹರಿಸುವ ಎಲ್ಲರೊಂದಿಗೆ ಆದಷ್ಟು ಸ್ನೇಹ, ವಿಶ್ವಾಸ, ಗೌರವಗಳನ್ನಿಟ್ಟುಕೊಳ್ಳಬೇಕು. ವಿರಸ, ದ್ವೇಷ, ತಿರಸ್ಕಾರಗಳಿಗೆ ಎಡೆಮಾಡಿಕೊಡಬಾರದು.೦ಸ

೭. ತನ್ನನ್ನು ಅರ್ಥ ಮಾಡಿಕೊಳ್ಳುವುದು: ನಾವು ನಮ್ಮ ಇತಿಮಿತಿ ಸಾಮರ್ಥ್ಯಗಳನ್ನು ವಸ್ತುನಿಷ್ಟವಾಗಿ ತಿಳಿದುಕೊಳ್ಳಬೇಕು. ಅವುಗಳ ಔಕಟ್ಟಿನಲ್ಲೇ ವ್ಯವಹರಿಸಬೇಕು.

೮. ಇತರರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು: ಇತರರ ಇತಿಮಿತಿ ಸಾಮರ್ಥ್ಯ, ಅವರ ನೋವು ಭಾವನೆಗಳನ್ನು, ಅವರಂತೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಸಹಾನುಭೂತಿಯನ್ನು ತೋರಿಸಬೇಕು.

೯. ಭಾವನೆಗಳ ಹತೋಟಿ: ಪ್ರೀತಿ,ಪ್ರೇಮ, ದಯೆ, ಅನುಕಂಪ, ಸ್ವಾಭಿಮಾನ, ಲೈಂಗಿಕ ಭಾವನೆ, ಸಂತೋಷಗಳಂತಹ ಸಕಾರಾತ್ಮಕ ಭಾವನೆಗಳನ್ನು ರೂಢಿಸಿಕೊಳ್ಳುವುದು ಮತ್ತು ದುಃಖ, ಕೋಪ, ಮತ್ಸರ, ಕೀಳರಿಮೆ, ಅತಿ ವಿಕೃತ ಕಾಮ, ಅತಿ ನಾಚಿಕೆ, ಅಕ್ರಮಣಕಾರಿ ಭಾವನೆಗಳನ್ನು ಹತೋಟಿಯಲ್ಲಿಡುವುದು ನಮ್ಮೆಲ್ಲರಿಗೂ ಮುಖ್ಯ. ನಮಗೂ ಮತ್ತು ಇತರರಿಗೂ ಸಹ್ಯವಾಗುವಂತೆ ನಮ್ಮ ಭಾವನೆಗಳನ್ನು ಪ್ರಕಟಿಸುವುದನ್ನು ಕಲಿಯಬೇಕು.

೧೦. ಮಾನಸಿಕ ಒತ್ತಡಗಳನ್ನು ನಿಭಾಯಿಸಿ: ಸದಾ ಸಮಾಧಾನಚಿತ್ತರಾಗಿ ಇರುವುದು,ಒತ್ತಡಕ್ಕೆ ಕಾರಣವಾಗುವ ಅತೃಪ್ತಿ, ಅತಿ ನಿರೀಕ್ಷೆ,  ಅವಾಸ್ತವಿಕ ಗುರಿಗಳು, ಅತಿ ಸ್ಪರ್ಧೆ, ಅನಿಶ್ಚಿತತೆ, ಅಶಿಸ್ತು, ನಕಾರಾತ್ಮಕ ಆಲೋಚನೆಗಳು, ಚಿಂತೆ ವ್ಯಥೆ, ಒಂಟಿತನ, ಅನಾರೋಗ್ಯಗಳನ್ನು ನಿವಾರಿಸಿಕೊಳ್ಳಬೇಕು, ಮಾನಸಿಕ ಆರೋಗ್ಯ ವರ್ಧನೆಗೆ ಪ್ರಯತ್ನಿಸಬೇಕು.

ಮಾನಸಿಕ ಆರೋಗ್ಯ ವರ್ಧನೆಗೆ ೧೨ ಸೂತ್ರಗಳು

೧. ನಿಮ್ಮ ಅಗತ್ಯಗಳನ್ನು ತಗ್ಗಿಸಿ, ಸರಳ ತೃಪ್ತ ಜೀವನ ಮಾಡಿ. ಹಣವನ್ನು ವಿವೇಚನೆಯಿಂದ ಸಂಪಾದಿಸಿ ಮತ್ತು ಬಳಸಿ. ಆದಾಯಕ್ಕಿಂತ ಖರ್ಚು ಹೆಚ್ಚುವುದು ಬೇಡ.

೨. ಇತರರ ಬಗ್ಗೆ ನಿರೀಕ್ಷೆಗಳನ್ನು ಕಡಿಮೆ ಮಾಡಿ. ಅವರು ನಿಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶಕೊಡಿ. ಎಲ್ಲರೊಡನೆ ಸ್ನೇಹದಿಂದಿರಿ. ಅವರನ್ನು ಅರ್ಥಮಾಡಿಕೊಳ್ಳಿ.

೩. ನಿರಾಶಾವಾದ ಬೇಡ. ಒಳ್ಳೆಯದಾಗುತ್ತದೆ ಎಂಬ ಭರವಸೆ ಇರಲಿ. ಎಲ್ಲರಲ್ಲಿ ಮತ್ತು ಎಲ್ಲದರಲ್ಲಿ ಒಳ್ಳೆಯದನ್ನು ನೋಡಿ.

೪. ವರ್ತಮಾನ ಮುಖ್ಯ. ನಿನ್ನೆ ಮತ್ತು ನಾಳೆಯ ಬಗ್ಗೆ ಚಿಂತೆ ಬೇಡ.

೫. ವಾಸ್ತವಿಕತೆಯನ್ನು ಒಪ್ಪಿಕೊಳ್ಳಿ ಮತ್ತು ಅದಕ್ಕೆ ಹೊಂದಿಕೊಳ್ಳಿ, ನಿಮ್ಮನ್ನು, ಇತರರನ್ನು ಶ್ಲಾಘಿಸಿ.

೬. ಒಬ್ಬಂಟಿಯಾಗಿರಬೇಡಿ, ಜನರೊಂದಿಗೆ ಬೆರೆಯಿರಿ, ಸಂಘ ಸಂಸ್ಥೆಗಳ ಸದಸ್ಯರಾಗಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಕೆಗಳನ್ನು ಹಮ್ಮಿಕೊಳ್ಳಿ.

೭. ಸೃಜನಶೀಲ ಚಟುವಟಿಕೆಗಳು, ಸಂಗೀತ, ಸಾಹಿತ್ಯ, ಯೋಗ, ಧ್ಯಾನ, ಕ್ರೀಡೆಗಳಿಗೆ ದಿನವೂ ಒಂದು ಗಂಟೆ ಮೀಸಲಿಡಿ.

೮. ನಿಮ್ಮ ಭಾವನೆ, ಅನಿಸಿಕೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳಿ, ನಿಮ್ಮ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಿ.

೯. ಸದಾ ಚಟುವಟಿಕೆಯಿಂದಿರಿ, ನೀವು ಮಾಡುವ ಕೆಲಸಗಳಿಂದ ಸಂತೋಷಪಡಿ.

೧೦. ನಿಮ್ಮ ಜ್ಞಾನ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಿ, ಜೀವನ ಘಟನೆಗಳಿಗೆ ಪೂರ್ವಸಿದ್ಧತೆ ಮಾಡಿ, ಸರಿಯಾಗಿ ನಿಭಾಯಿಸಿ.

೧೧. ಪಾಲಿಗೆ ಬಂದದ್ದನ್ನು ಸ್ವೀಕರಿಸಿ, ಹಲವು ಸಮಸ್ಯೆಗಳಿದ್ದಾಗ, ಒಂದೊಂದು ಸಮಸ್ಯೆಯನ್ನು ಇತರರ ನೆರವಿನೊಂದಿಗೆ ನಿಭಾಯಿಸಿ, ಸಾಧಿಸಬಹುದಾದ ಗುರಿಗಳಿರಲಿ.

೧೨. ಸೊಪ್ಪು, ತರಕಾರಿ, ಹಾಲು, ಹಣ್ಣು ಇರುವ ಆಹಾರವನ್ನು ಹಿತಮಿತವಾಗಿ, ವೇಳೆ ವೇಳೆಗೆ ಸರಿಯಾಗಿ ಸೇವಿಸಿ. ಸ್ವಚ್ಛತೆ ಬಗ್ಗೆ ಗಮನ ಕೊಡಿ. ನಿತ್ಯ ವ್ಯಾಯಾಮ, ನಡಿಗೆ ಮಾಡಿ. ಒಬ್ಬ ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಹರೆಯದವರ ಸಮಸ್ಯೆಗಳು

ಹದಿಹರೆಯವು ಬಾಲ್ಯ ಮತ್ತು ಪ್ರೌಢತೆಯ ನಡುವಿನ ಸಂಧಿಕಾಲ. ವ್ಯಕ್ತಿತ್ವ ವಿಕಾಸದ ಅಂತಿಮ ಹಂತ. ಶಾರೀರಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಅನೇಕ ಅಡ್ಡಿ, ಆತಂಕಗಳು, ಏರುಪೇರುಗಳು ಕಾಣಿಸಿಕೊಳ್ಳುವ ಕಾಲ. ಅಸ್ಪಷ್ಟತೆ, ಗೊಂದಲಗಳು ಹೆಚ್ಚು. ಹೀಗಾಗಿ ಹರೆಯದ ಮಕ್ಕಳು ಅನೇಕ ಬಗೆಯ ಸಮಸ್ಯೆ, ಸಂಕಟಗಳಿಗೆ ತುತ್ತಾಗುತ್ತಾರೆ. ಅವರ ಮಾತು, ವರ್ತನೆ, ಕ್ರಿಯೆ, ಪ್ರತಿಕ್ರಿಯೆಗಳು ಮನೆಯವರಿಗೆ, ಶಿಕ್ಷಕರಿಗೆ,ಮತ್ತು ಸಂಬಂಧಪಟ್ಟವರಿಗೆ ಕಿರಿಕಿರಿ, ಆತಂಕಕಾರಿಯಾಗಿ ಕಾಣಬಹುದು. ಹರೆಯದವರ ಸಮಸ್ಯೆಗಳನ್ನು ಈ ರೀತಿ ವಿಂಗಡಿಸಹುದು. Adolescent ಎಂಬ ಆಂಗ್ಲ ಪದದ ಒಂದೊಂದು ಅಕ್ಷರ ಒಂದೊಂದು ಸಮಸ್ಯೆಯನ್ನು ಪ್ರತಿನಿಧಿಸುತ್ತದೆ.

 • A. Academic problems: ಕಲಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ/ ಹಿಂದುಳಿಯುವಿಕೆ.
 • D.Disappointments: ನಿರಾಶೆಗಳು
 • O. Old v/s new traditions and life style: ಹಳೆ ಸಂಪ್ರದಾಯಗಳೇ, ಹೊಸ ಜೀವನ ಶೈಲಿಯೇ?
 • L.Low self esteem: ಕೀಳರಿಮೆ, ತಮ್ಮ ಬಗ್ಗೆ ಹೀನಾಯ ಭಾವನೆ.
 • E. Expressions- communications: ಅಭಿವ್ಯಕ್ತಿ ಮತ್ತು ಸಂವಹನದ ಸಮಸ್ಯೆಗಳು.
 • S.Sexuality:  ಲೈಂಗಿಕತೆ
 • C.Conflicts and confusion: ದ್ವಂದ್ವಗಳು ಮತ್ತು ಗೊಂದಲಗಳು
 • E.Expression of anger and aggression: ಸಿಟ್ಟು, ಕೋಪ, ಆಕ್ರಮಣಶೀಲತೆ.
 • N.Need for substance use and abuse: ಮದ್ಯ, ಮಾದಕ ವಸ್ತುಗಳ ಬಳಕೆ ಮತ್ತು ದುರ್ಬಳಕೆ
 • T.Targets: ಗುರಿ ಉದ್ದೇಶಗಳು.

ಮುಂದಿನ ಅಧ್ಯಾಯಗಳಲ್ಲಿ ಈ ಒಂದೊಂದು ಸಮಸ್ಯೆಯನ್ನೂ ವಿವರವಾಗಿ ಪ್ರಸ್ತಾಪಿಸಲಾಗಿದೆ ಹಾಗೂ ಕಾರಣ ಮತ್ತು ಪರಿಹಾರಗಳನ್ನು ಕೊಡಲಾಗಿದೆ.