ಹರೆಯವನ್ನು ಬಾಳಿನ ವಸಂತ ಕಾಲ ಎನ್ನುತ್ತಾರೆ. ಮರಗಿಡಗಳು ಚಿಗುರೊಡೆದು, ಹೂಬಿಟ್ಟು ನಳನಳಿಸುವ, ಹಾಗೆ, ಹರೆಯದಲ್ಲಿ ಹುಡುಗ ಹುಡುಗಿಯರು ಪುರುಷ ಮತ್ತು ಸ್ತ್ರೀತನದ ಲಕ್ಷಣಗಳನ್ನು ಪಡೆದು ಆಕರ್ಷಕವಾಗಿ ಕಾಣುತ್ತಾರೆ. ಮನಸ್ಸಿನ ತುಂಬಾ ಆಸೆ ಕನಸುಗಳನ್ನು ತುಂಬಿಕೊಳ್ಳುತ್ತಾರೆ. ಆದರೆ ಈ ಅವಧಿಯನ್ನು Age of Turbulance ಎಂದೂ ಕರೆಯುತ್ತಾರೆ. ದ್ವಂದ್ವಗಳು, ಗೊಂದಲಗಳು, ಒತ್ತಡಗಳು, ನಿರಾಶೆಗಳು, ಸಮಸ್ಯೆಗಳು, ಸಂಕಷ್ಟಗಳು ಹರೆಯದಲ್ಲಿ ಹೆಚ್ಚು. ಹರೆಯದವರು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಎಲ್ಲರೂ ಒತ್ತಡ ಹಾಕುತ್ತಾರೆ. ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ಅವರು ಗರಿಷ್ಠ ಮಟ್ಟವನ್ನು ತಲುಪಬೇಕು. ಆದರೆ ಬಹಳಷ್ಟು ಹರೆಯದವರ ಬೆಳವಣಿಗೆ ಕುಂಠಿತವಾಗುತ್ತದೆ. ತತ್ಪಲವಾಗಿ ಹರೆಯದವರು ಅನೇಕ ತೊಂದರೆದಾಯ  ಸಮಸ್ಯಾತ್ಮಕ ನಡೆ ನುಡಿಗಳನ್ನು ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತಾರೆ.

  • ಕಲಿಕೆಯಲ್ಲಿ ನಿರಾಸಕ್ತಿ, ಪರೀಕ್ಷೆಗಳಲ್ಲಿ ಕಳಪೆ ಅಂಕಗಳು.
  • ವಿದ್ಯಾಭ್ಯಾಸವನ್ನು ನಿಲ್ಲಿಸುವುದು.
  • ಭಾವೋದ್ವೇಗಗಳು, ಆತ್ಮಹತ್ಯೆ, ಆಕ್ರಮಣಶೀಲತೆ, ಹಿಂಸಾಚಾರ
  • ಸುಳ್ಳು, ಕಳ್ಳತನ, ಸಮಾಜ ವಿರೋಧಿ ಚಟುವಟಿಕೆ, ಲೈಂಗಿಕ ದುರ್ನಡತೆ, ಮೋಸ, ವಂಚನೆ ಮಾಡುವುದು, ಆವಿಧೇಯತನ
  • ಕೀಳರಿಮೆಯನ್ನು ಬೆಳೆಸಿಕೊಂಡು ಸಿನಿಕರಾಗುವುದು.
  • ಪ್ರೀತಿ-ವಿಶ್ವಾಸ, ದಯೆ, ಧೈರ್ಯ, ಸಹನೆ ಇತ್ಯಾದಿ ಸಕಾರಾತ್ಮಕ ಭಾವನೆಗಳಿಗಿಂತ ಭಯ, ದುಃಖ, ಕೋಪ ಮತ್ಸರಗಳಂತಹ ನಕಾರಾತ್ಮಕ ಭಾವನೆಗಳನ್ನೇ ಅನುಭವಿಸುವುದು.
  • ಮನರಂಜನೆ, ಭೋಗ ಭಾಗ್ಯಗಳನ್ನು ಅನುಭವಿಸುವುದಕ್ಕೆ ಪ್ರಾಶಸ್ತ್ಯ ಕೊಟ್ಟು, ಶ್ರದ್ಧೆ, ಶ್ರಮ, ಪ್ರಗತಿ, ಅಭಿವೃದ್ಧಿಗಳ ಬಗ್ಗೆ ಒಲವು ತೋರಿಸದಿರುವುದು.
  • ಕುಟುಂಬ, ಸಮಾಜ ನೀತಿ ನಿಯಮಗಳ ಪಾಲನೆಯಲ್ಲಿ ದಿವ್ಯ ನಿರ್ಲಕ್ಷ್ಯ ತೋರುವುದು, ಕಾನೂನು ಭಂಗ ಮಾಡಲು ಮುಂದಾಗುವುದು.
  • ಮನೆಯೊಳಗೆ ಮತ್ತು ಹೊರಗೆ ಸಂಬಂಧಗಳನ್ನು ಉಳಿಸಿಕೊಳ್ಳದಿರುವುದು.
  • ವಾಸ್ತವಿಕ ಜಗತ್ತಿಗೆ/ಪರಿಸರಕ್ಕೆ ಹೊಂದಿಕೊಳ್ಳದಿರುವುದು.

ಹೀಗೆ ಅನೇಕ ಆತಂಕಕಾರೀ ನಡವಳಿಕೆಗಳಿಂದ ಪಾಲಕರಿಗೆ, ಶಿಕ್ಷಕರಿಗೆ ಸವಾಲಾಗುತ್ತಾರೆ.

ಶೇಕಡಾ ೫೦ರಷ್ಟು ಹರೆಯದವರು, ಧೂಮಪಾನ, ಮದಪಾನವನ್ನು ಪ್ರಾರಂಭಿಸುತ್ತಾರೆ. ಅಷ್ಟೇ ಸಂಖ್ಯೆಯ ಹರೆಯದವರು, ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಶೇಕಡ ೩೫ರಷ್ಟು ಆತ್ಮಹತ್ಯಾಪ್ರಕರಣಗಳಲ್ಲಿ, ವ್ಯಕ್ತಿಗಳ ವಯಸ್ಸು ೧೫ರಿಂದ ೨೫ ವರ್ಷವಿರುತ್ತದೆ. ಶೇಕಡಾ ೬೫ರಷ್ಟು ಅಪರಾಧ ಪ್ರಕರಣಗಳಲ್ಲಿ, ಅಪರಾಧ ಮಾಡುವವರ ವಯಸ್ಸು ೧೫ರಿಂದ ೨೫ ವರ್ಷ ಎಂಬುದು ಗಾಬರಿ ಹುಟ್ಟಿಸುವ ಅಂಶ

ಹರೆಯದವರ ಈ ಎಲ್ಲ ಸಮಸ್ಯೆಗಳಿಗೆ ಕಾರಣಗಳೇನು? ತಂದೆ-ತಾಯಿಗಳೇ, ಕುಟುಂಬವೇ, ಶಾಲೆಗಳೇ, ಸಮಾಜವೇ? ಈ ಸಮಸ್ಯೆಗಳಿಗೆ ಪರಿಹಾರವೇನು? ಈ ಎಲ್ಲಾ ವಿಷಯಗಳನ್ನು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಪರಿಹಾರ ಮತ್ತು ನಿವಾರಣೋಪಾಯಗಳನ್ನು ಸೂಚಿಸಲಾಗಿದೆ. ಪಾಲಕರು, ಶಿಕ್ಷಕರು, ಹರೆಯದವರು ಈ ಪುಸ್ತಕದ ಉಪಯೋಗವನ್ನು ಪಡೆದುಕೊಳ್ಳುತ್ತಾರೆಂದು ಆಶಿಸುತ್ತೇನೆ. ಪ್ರಕಾಶಕರಿಗೆ, ಮುದ್ರಕರಿಗೆ ನನ್ನ ಧನ್ಯವಾದಗಳು.

ಡಾ|| ಸಿ.ಆರ್.ಚಂದ್ರಶೇಖರ್

ಪ್ರಾಧ್ಯಾಪಕರು, ಮನೋವೈದ್ಯ ವಿಭಾಗ,

ನಿಮ್ಹಾನ್ಸ್, ಬೆಂಗಳೂರು-೨೯