ಸೂತ್ರಧಾರ  ಮತ್ತು ಜನರು:

ಹೊಯ್ಯೊ ಹೊಯ್ಯೊ ಮಳೆರಾಯಾ
ಹೊಯ್ಯೊ ಹೊಯ್ಯೋರೇ   ||ಪ||

ಈಗ ಬರತೇನಂತ ಹೇಳಿ ಹೋದವನೆಲ್ಲಿ
ನೀ ಎಲ್ಲಿ ನಿನ್ನ ಹಾದೆಲ್ಲಿ       |
ನೆಲ ಬಿರಿತು ಪಾತಾಳ ಬಿಸಿಯುಸಿರ ಹಾಕೀತು
ಹಸಿರೆಂಬೊ ಶಬುದ ಮರೆಯಾಗಿ      |
ಮರುಗುವ ಮಣ್ಣೀನ ಮೈಯಾನ ಹಸಿ ಅರಿ
ತೊಡಿಯ ಬೆಂಕಿಯ ಮರೆತೆ ಮಳೆರಾಯಾ     ||
ಸುರಿಯೊ | ಪಾತಾಳ ತುಳುಕಲಿ ಮಳೆರಾಯಾ           ||೧||

ಕೆರೆ ಬಾವಿ ತಳ ಒಣಗಿ ಬರಿ ಮೂರ ಹನಿ ನೀರು
ಒಂಟಿ ತಾರಿಯ ನೆರಳು ಮಾಡ್ಯಾವ  |
ಹೆಚ್ಚೀನ ಹೊಳಿಗೋ||ಳ ಬರಿ ಬಚ್ಚಲಾದಾವ
ಮರಿಮೀನು ಹೊಟ್ಟೀಯ ಹೊಸದಾವ            |
ಮೈ ತೊಗಲ ಕಪ್ಪಾನ ಕಂಬಳಿ ಮಾಡೇವ
ಗುರಚೀಯ ತಿರಿಗೇವ ಮಳೆರಾಯಾ
ಸುರಿಯೊ| ಪಾತಾಳ ತುಳಕಲಿ ಮಳೆರಾಯಾ ||೨||

(ಹಾಡುತ್ತ ಕುಣಿದು ಮುಗಿದಾದನಂತರ ಹೊತ್ತಿಸಿದ ಬೆಂಕಿಯ ಸುತ್ತ ಕೆಲವರು ಕಾಸಿಕೊಳ್ಳುತ್ತ ಕೆಲವರು ಚಿಲುಮೆ, ಚುಟ್ಟಾ ಸೇದುತ್ತ ಮನಸ್ಸಿಗೆ ಬಂದಂತೆ ಕುಳಿತುಕೊಳ್ಳುವರು. ಮೊದಮೊದಲು, ಮಾತಾಡುವವರು ಇನ್ನೊಬ್ಬರು ತಮ್ಮ ಮಾತು ಕೇಳುತ್ತಿದ್ದಾರೆಂಬುದರ ಅರಿವಿಲ್ಲದೇ ಆಡುವರು. ಉಳಿದವರೂ ನಿಷ್ಕಾಳಜಿಯಿಂದ ಇರುತ್ತಾರೆ. ಮುಂದೆ, ಇನ್ನೊಬ್ಬರು ಕೇಳುತ್ತಿದ್ದಾರೆ ಎಂದು ಗೊತ್ತಾದಾಗ ವಿನಾಕಾರಣ ಮೈಪರಚಿಕೊಳ್ಳುತ್ತಾರೆ.)

ಗುರ್ಯಾ : ಇನ್ನೂ ಬೆಳಕ ಹರೀಲಿಲ್ಲ?

ಇರಿಪ್ಯಾ : ಕೋಳಿ ಕೂಗೇತಿ ಹೌಂದಲ್ಲ?

ಗುರ್ಯಾ : ಕೋಳಿ ಕೂಗಿದರೂ ಬೆಳಕ ಹರೀಲಿಲ್ಲ

ಯಮನ್ಯಾ : ಬೆಳ್ಳಿಚಿಕ್ಕಿ ಮೂಡೇತಿಲ್ಲ?

ಗುರ್ಯಾ : ಬೆಳಕ ಹರ್ಯಾಕ ಏನೇನ ಬೇಕದೆಲ್ಲಾ
ಆಗೇತಪಾ, ಆಕಳಿಸಿದಿವಿ, ಕಣ್ಣ ತಿಕ್ಕೊಂಡಿವಿ,
ಮೈ ಮುರದಿವಿ…

ಎಲ್ಲ್ಯಾ : ಬೆಳಕಾಗೂ ಕಾಲಕ್ಕ ಆಗಲಿ ಬಿಡ್ರಪಾ,
ಅಷ್ಟೇನ ಅವಸರ? ಮುಂದೇನೇನ ಹೋನಾರ
ಕಾದsತ್ಯೊ!

ಗುರ್ಯಾ : ಅಲ್ಲೊ, ಬರಬೇಕಾದವರೂ ಬರೋ ಕಾಲಕ್ಕ
ಬರಬಾರದಂದರ…?

ಇರಿಪ್ಯಾ : ಈ ಗೊತ್ತ ಮುಟ್ಟಾಕಂತ ಹೊಂಟವರು ತ್ವಾಡೆ
ಮಂದಿ ಹೊಲಗೇರಿಗಿ, ಇನ್ನ ತ್ವಾಡೆ ಮಂದಿ
ಸುಡಗಾಡಕ, ಗೌಡ್ರ ಮನೀಗೆ ಹ್ವಾದರಂತ
ಹೇಳಲಿಲ್ಲs ಅಂವ? ನನಗ ಗೊತ್ತಿತ್ತಪಾ,-
ಈ ಹಾದಿ ಯಾವ ಗೊತ್ತಿಗಿ ಮುಟ್ಟಸಾಣಿಲ್ಲ,
ಭಾಳಾದರ ಸುಡಗಾಡಕ ಒಯ್ಯತೇತಿ, ಅಂತ.
ನೋಡಲಿಲ್ಲs ಮನ್ನಿ? ಹಾಡಾಹಗಲಿ ಅಡೀಗಿ
ಸೆಗಣೀ ಒಗದ ಬರಾಕ ಹ್ವಾದ ಹುಡಿಗಿ
ಸುಡಗಾಡಗಟ್ಟಿಗಿ ಹೋಗಿದ್ದಳಂತ!

ಯಮನ್ಯಾ : ಎಲ್ಲೆಲ್ಲಿ ದೆವ್ವೆಲ್ಲಾ ಅಲ್ಲೆ ಬಂದ ಸೇರತಾವೊ ಎಪ್ಪ!
ಮನ್ನಿ ಮದ್ದಿನದಾಗ ಥೇಟ ಮುದಿಗೌಡನ್ಹಾಂಗs
ಆಗಿ, ನನ್ನ ಹೇಂತೀನ್ನ ಮೂರಬರೆ ಕೈಮಾಡಿ
ಕರೀತಂತ, ಏನ ಮಾಡತಿ| ಏನೊ
ಗಟ್ಟಿವಾನಿ, ರಾಮಗೊಂಡ ಅಂತ ಕೂಗಿದರ
ಗಪ್ಪಗಾರ! ಅದs ಸಿಟ್ಟ ನಮ್ಮ ಗಬ್ಬದೆಮ್ಮಿ
ಮ್ಯಾಲ ಹಾಕಿತು ಮಗಂದು! ಇದs
ಮುದಿಗೌಡ ‘ರೂಪಾಯಿ ತೀನಸೆ, ಕರಿ ಕಂಬಳಿ
ಗದ್ದಿಗಿ ಮ್ಯಾಲ ಎಣಿಸಿ ಕೊಡತೇನ ಮಗನs
ಈ ಎಮ್ಮಿ ನನಗ ಕೊಡ’ ಅಂದಿದ್ದ.
ಮುಂದಿನ ಹೋನಾರ ಯಾರಿಗ್ಗೊತ್ತಾ? ಮೇಯಾಕ
ಹ್ವಾದ ಎಮ್ಮಿ ಮನಿಗಿ ಬರಲಿಲ್ಲ

ಗುರ್ಯಾ : ಅವು ಬಿದ್ದಾವಂತಿ?

ಎಲ್ಲ್ಯಾ : ಮಾತಾಡಾಕ ನಿನಗ ಮತ್ತೊಂದ ಮಾತs
ಇಲ್ಲೇನಪಾ?

ಗುರ್ಯಾ : ಅಂಧಾಂಗ ಮನ್ನಿ ರಾತ್ರಿ ಗೋಕಾಂವಿ ನಾಡಿನ್ಯಾಗ
ರಗತದ ಮಳಿ ಬಿತ್ತಂತೊ. ಯಾವುದೊ ಊರ
ತಳವಾರ ರಾತ್ರಿ ಎದ್ದ ನೋಡಿದಂತs-
ಮಿಂಚಿನ್ಯಾಗ ಬರೀ ಕೆಂಡs ಬೀಳತಿದ್ದುವಂತ!
ಅಂಜಿ ಕಣ್ಣ ಕಿಸದಾಂವ ಮತ್ತು ಮುಚ್ಚಲಿಲ್ಲಂತ!

ಇರಿಪ್ಯಾ : ಒಟ್ಟ ಹುಟ್ಟಿದ್ದs ದೊಡ್ಡ ತಪ್ಪೇನಪಾ.

ಯಮನ್ಯಾ : ಏ ನನಗೂ ಮೊದಲ ಬಲೆ ಸಿಟ್ಟ ಬರತಿತ್ತೇನಪಾ.
ಸಿಟ್ಟ ಬಂದಾಗೊಮ್ಮೆ ಕಾಲ ಕೆದರಿತಿದ್ನು,
ದೆದರಿದಾಗೊಮ್ಮಿ ತಗ್ಗ ಬಿದ್ದು, ಬಿದ್ದ ತಗ್ಗ
ಗೋರಿ ಹಾಂಗ ಕಾಣತಿತ್ತು. ಅದಕ್ಕs ಈಗ
ನನ್ನ ಹೇಂತೀ ಮ್ಯಾಲ ಸೈತ ಸಿಟ್ಟಿಗೇಳೋದಿಲ್ಲ ನಾ.

ಗುರ್ಯಾ : ಸಿಟ್ಟಿಗೇಳದಿದ್ದರ ಅವು ಬಿದ್ದಾವಂತಿ?

ಎಲ್ಲ್ಯಾ : ಏ ಅಲ್ಲೊ ದಾಸ ಅಂದರ ಮತ್ತ ಅದನs
ಹಾಡತಾನಲ್ಲೊ?

ಗುರ್ಯಾ : ಖರೆ, ಆ ಪರಿಸ್ಯಾನ ಅಂವs ಕೊಲ್ಲಿಸಿದನಂತಲ್ಲೊ.

ಇರಿಪ್ಯಾ : ಯಾಂವ ಯಾಂವ? ಆ ಮುದುವನ??

ಎಲ್ಲ್ಯಾ : ಆ ಆ ಅರೆದವನ್ಹಾಂಗ ಆಡತಾನ್ನೋಡೋ.

ಇರಿಪ್ಯಾ : ನನಗ ಗೊತ್ತೈತಿ ಖರೆ. ಎಷ್ಟ ಬರೆ ಕೇಳಿದರೂ
ಮತ್ತ ಕೇಳೋಹಾಂಗs ಆಗತೈತಿ. ಕೇಳಿದಾಗೊಮ್ಮಿ
ನಾ ಸತ್ತ್ಹಾಂಗs ಆಗತೈತಿ, ಅಂಧಾಂಗಂವ
ಹೆಂಗ ಸತ್ತ?

ಗುರ್ಯಾ : ಪರಿಸ್ಯಾ ಮುದಿಗೌಡನ ಹಂತ್ಯಾಕ ಹೋಗಿ
’ಆಕಳಾ ಹಾರಸಾಕ ಹೋರಿ ಬಿಡ್ರಿ ಗೌಡ್ರ’ ಅಂದ.
ಮುದಿಗೌಡ ಹೋರಿ ಬಿಟ್ಟ ಯಾಡ್ರೂಪಾಯಿ
ಕೇಳಿದ. ಫರಿಸ್ಯಾ ಮಗಾ ‘ನಾ ಪಟ್ಟದಲ್ಲಿ
ಕೊಡಾಣಿಲ್ಲಂ’ತ ಹಾರ್ಯಾಡಿದ.

ಇರಿಪ್ಯಾ : ಆ ಪರಿಸ್ಯಾಂದ ತಪ್ಪಲ್ಲೇನ ಮತ್ತ?

ಗುರ್ಯಾ : ಏ ಅಷ್ಟ ಲಗು ಅಳದ ಸುರೀಬ್ಯಾಡೊ.
ಹೋರಿ ಬರೋಬರಿ ಹಾರಿದರ ಯಾಡ್ರೂಪಾಯಿ
ಕೊಡಬೇಕ ಖರೆ, ಹಾಂಗs ಮೂಸಿ ನೋಡಿ
ಗದ್ದಾ ಊರಿದರ?

ಇರಿಪ್ಯಾ : ಅದೂ ಖರೇನs. ನಾವಂದರ ಅವನ
ಹೊಲದಾಗಿನ ಪುಂಡಿಪಲ್ಲೆ ಇದ್ಹಾಂಗೇನಪಾ.
ಬೇಕಾದರ ಇಡತಾನು, ಬ್ಯಾಡಾದರ ಚೆಂಡಿ
ಚಿವುಟತಾನು.

ಗುರ್ಯಾ : ಮಾರಾಯ ಪರಿಸ್ಯಾ ಸಾಯೂತ್ಲೆ ನಾ ಇನ್ನೊಮ್ಮೆ
ಸತ್ಹಾಂಗಾತ! ಊರಾಗ ಇಷ್ಟ ಪಾಪ ಇದ್ದರ
ಬೀಳೋವು ಬಿದ್ದಾವಂತಿ?

ಎಲ್ಲ್ಯಾ : ಹೇಳಬ್ಯಾಡೊ ಎಪ್ಪಾ, ನನಗದು ನೆನಪಾದರ
ಸಾಕು ಯಾರೋ ನನ್ನ ಹುರಿಮಾಡಿ
ಹೊಸಧಾಂಗ ಆಗತೈತಿ.

ಯಮನ್ಯಾ : ನನಗರೆ ನಾಯಿ ಮುಂದಿನ ಮಾಂಸಧಾಂಗ,
ಅದರ ಜೊಲ್ಲಲೆ ನನ್ನ ಮೈ ಒದ್ದಿ
ಆಧಾಂಗ ಆಗತೈತಿ.

ಎಲ್ಲ್ಯಾ : ಅದಕs ನನ್ನ ಕನಸಿನಾಗ ನಂದಿಕಂಬ
ಮುರಧಾಂಗಾತ

ಯಮನ್ಯಾ : ಮತ್ತ ನನ್ನ ಕನಸಿನಾಗ? ಅದನsಟ
ಹೇಳತೇನ ಕೇಳೋ ಎಪ್ಪ! ಒಬ್ಬ
ಮುದುಕ ಆಕಾಸ ಹಿಡಿದ ಹಿಂಗ ಝಾಡಿಸಿದರ
ತಾರಿಕ್ಕಿ ಬುಳುಬುಳು ಉದರಿಧಾಂಗಾತ.

ಇರಿಪ್ಯಾ : ಹಿಂಗ ಉದರಿ ಬಿದ್ದ ತಾರಕ್ಕಿ ಅವs
ಆಗಿ ಬಿದ್ದರ?…

ಗುರ್ಯಾ : ನಂದಿಕಂಬ ಬ್ಯಾರಿ ಮುರದೈತೆಲ್ಲೊ, ಅದಕೇನರೆ
ಆಧಾರ ಬೇಕಲಾ,-

ಇರಿಪ್ಯಾ : ಆ ಮುದೋಡ್ಯಾ ಗೊಟ್ಟಕ್ಕಂತಾನೊ ಏನೊ.

ಗುರ್ಯಾ : ಹಿಡದ ಝಾಂಡಸಾಂವ ಹೆಂಗ
ಗೊಟಕ್ಕಂತಾನೋ?

ಇರಿಪ್ಯಾ : ಆಕಾಸ ಹಿಡದ ಝಾಡಿಸಿಕ್ಯಾರ ಗೊಟಕ್ಕಂದರ?

ಯಮನ್ಯಾ : ಹಿಂತಾವೆಲ್ಲಾ ಹೊಲೇರ ಪಾರಿಗ್ಯನs ಗೊತ್ತೇನಪಾ.
ಪಾರೀನ ಕರತರಾಕ ಇನ್ನೂ ಯಾರೂ
ಹೊಗಲಿಲ್ಲೇನೊ? ಹೋಗಲೇ ಸೀಪ್ಯಾ, ಆಕಿಗಿ
ಎಚ್ಚರಾಗಿ ಪೂಜಿಗೀಜಿ ಮಾಡಿಕೊಬೇಕ ಹೋಗೊ.

(ಅವನು ಎದ್ದು ಹಾಗೆ ಹೆದರಿ ನಿಲ್ಲುವನು)

ದೊಡ್ಡ ದೊಡ್ಡ ಮಾತ ಮಾತಾಡತಿ ಹೋಗಾಕs
ಗಂಡಸ. ಅಂಜಿಕಿ ಬಂದರ ಹಾಡಿಕೋತ ಹೋಗು.

(ಅವನು ಹೋಗುವನು. ಅವನಿಗೆ ಚೀರಿ ಹೇಳುತ್ತ)

ಏ, ಆಕಿ ಪೂಜಿ ಮಾಡಿದ ನೀರ ಮಡೀಲೆ
ತರೋವಾಗ ಯಾರೂ ಮುಟ್ಟಿ ಮೈಲಿಗಿ
ಮಾಡಧಾಂಗ ಕರಕೊಂಬಾ ಮತ್ತ. ಪೂಜಿ
ನೀರ ಯಾರರ ಮುಟ್ಟಿದರ ಭಾಳ ಕೆಟ್ಟ,
ಊರಿಗೇನರೆ ಬಂತs ಅಂತ ತಿಳಿಕೊಳ್ಳೋದ…

(ಮತ್ತೆ ಪಕ್ಕದವರಿಗೆ ಸಾಮಾನ್ಯ ಧ್ವನಿಯಲ್ಲಿ ಹೇಳುವನು)

ಹೆಂತೆಂತಾವೆಲ್ಲಾ ಹೇಳತಾಳ ಇದನ್ನ
ಬಿಟ್ಟಾಳು? ಇದಕ್ಕೇನರೆ ಒಂದು ಅರ್ಥ
ಹೇಳ್ಯಾಳಂತೇನ ನಾ. ನೀ ಏನಂತಿ?

ಗುರ್ಯಾ : ಆಕಿ ಹೇಳಿದರ ಬಿದ್ದಾವಂತಿ?

ಯಮನ್ಯಾ : ಬೀಳಾಕಿಲ್ಲಂತಿ?

ಗುರ್ಯಾ : ಹೆಂಗ ಬೀಳಾಕಿಲ್ಲಂತಿ?

ಯಮನ್ಯಾ : ಯಾಕ ಬಿದ್ದಾವಂತಿ?

ಚೆನಬಸ್ಯಾ : ಕಾಕಾ ಏನ ಬೀಳೂವ?

ಎಲ್ಲ್ಯಾ : ನಿನ ಹೆಪ್ಪನ, ಸಣ್ಣಾಂವದಿ ನಿನಗ್ಯಾಕ
ಬೇಕಿದೆಲ್ಲಾ? ಹಲ್ಲಾಗ ನಾಲಿಗಿ ಇಟಗೊಂಡ
ಸುಮ್ಮನ ಕುಂತರಾಯ್ತು ಇದನ ಕೇಳಬೇಕು,
ಇದನ ಕೇಳಬಾರದು ತಿಳಿಯಾಣಿಲ್ಲಾ? ಹೊಟ್ಟಿಗೇನ
ಕನಿಕಿ ತಿಂತಿ? ಬೀಳೂವಿದ್ರ ಬಿದ್ದಾವು,
ಬಿಡೂವಿದ್ರ ಬಿಟ್ಟಾವು! ನಮ್ಮ ನಶೀಬ
ಯಾರರೆ ಕಸಕೋತಾರೇನ? ನಶೀಬದಾಗs ಇದ್ದರ
ಗೌಡನ ಪಾಪೇನ ಮಾಡೀತ? ನಮ್ಮ ಪಾಪೇನ
ಮಾಡೀತ? ಯಾಕಪಾ?

ಗುರ್ಯಾ : ಹೂಂ… ಒಟ್ಟ ಎದಕೆಲ್ಲ ನಶೀಬ ಬೇಕಂತಿ?

ಯಮನ್ಯಾ : ಅಲ್ಲೇನ ಮತ್ತ?

ಇರಿಪ್ಯಾ : ನಶೀಬದಾಗಿನ ಭರೋಸ ಹೋಗೇತ್ರೆಪಾ,
ಅದs ಖೊಟ್ಟಿ ಇದ್ದರ ಹೆಂಗಾ?

ಯಮನ್ಯಾ : ಹಾಂಗಿಲ್ಲಾ- ಹೀಂಗಿಲ್ಲಾ-ಏ ನಮ್ಮ ನಶೀಬ
ಖೊಟ್ಟಿ ಅಂತ ಅಂಜಸ್ತಿ ಏನೋ ನೀ?
ಗೆಜ್ಜ್ಯಾಗಿನ ಹುರುಕ ಕೆರಕೋವಾಗ ನನ್ನ ಹೇಂತಿ
ನೋಡಿದರs ಹೆದರಿಲ್ಲ, ನಿನ್ನ ಮಾತಿಗಿ
ಹೆದರತೇನೇನೊ?

ಇರಿಪ್ಯಾ : ಹೋಗಲೇ ಕುರಸಾಲ್ಯಾ. ಒಂದ ದಿನ ಹೇಂತಿನ
ಓಣಿಗಿ ತಂದ ಬಡ್ಯಾಕಾಗಿಲ್ಲ, ಬಡಿವಾರ ಹೇಳತಾನ,
ಬಲ್ಲಿನ ಹೋಗೊ.

ಎಲ್ಲ್ಯಾ : ನಮ್ಮ ನಶೀಬ ಖೊಟ್ಟಿ ಇದ್ದದ್ದ ನಿನಗ
ಹ್ಯಾಂಗ ಗೊತ್ತಾತಲೇ? ತಿಂದರ ಹೊಟ್ಟ್ಯಾಗ
ಬೆಣ್ಣಿ ಕರಗಾಣಿಲ್ಲ, ದೊಡ್ಡ ದೊಡ್ಡ ಮಾತ
ಮಾತಾಡತಿ? ಹೀಂತಾ ಮಕ್ಕಳ ಚರ್ಮಾ
ಸುಲದ ತೂಗ ಹಾಕಬೇಕ.

ಯಮನ್ಯಾ : ಮಾರಾಯಾ, ಇವನ ಸಲುವಾಗಿ ಮನ್ನಿ
ರಾತ್ರಿ, ನನ್ನ ಹೇಂತಿ ಖಾಲಿ ಚೀಲ ಆಗ್ಯಾನಂತ
ಬೈಲಿಲ್ಲs ನನಗ?

ಇರಿಪ್ಯಾ : ಏ ಯಾಂವೇನ ಮಾಡತೇರ್ಯೊ?
ಹೇಳತೇನ್ಯಾಕ ಹೇಳತೇನ, ಕೇಳೊ ಹುಡುಗ;
ನಮ್ಮ ನಶೀಬ ಖೊಟ್ಟಿ ಇದ್ದದ್ದ ಖರೆ, -ಈ
ಸೆಗಣಿ ಗುಂಪಿನ್ಯಾಗ…

ಎಲ್ಲ್ಯಾ : (ನಡುವೇ ತಡೆದು) ಏ ಕೈಮುಗದ ಕುಂಡೀ
ಎಳೀತೇನೋ ಮಾರಾಯಾ. ಮೊದಲs ಊರ ತುಂಬ
ರಂಡಿಮುಂಡೇರs ಕಾಣತಾರಂತ ಹೊಲೇರ
ಪಾರಿ ಅಂತಿದ್ಳು; ಅಂತಾದರಾಗ ಇಂತಾದೊಂದು!
ಆ ಸಬುದ ನನ್ನ ಕಿವಿಮ್ಯಾಲ ಬಿಳಬಾರದಪಾ
ದೇವರ. ಅದನ ಮರೀಬೇಕಂತ ಮಲಗಿ
ಏಳಬಾರದಂದರ ಮತ್ತ ಬೆಳಗ ಬರತೈತಿ,
ಮತ್ತ ಚೆಂಜಿ ಮತ್ತ ಬೆಳಗ… ಯಾಕೊ
ನಿನ್ನ ಮೋತಿ ಹೆಸರಾಗೇತೆಲ್ಲೊ?

ಇರಿಪ್ಯಾ : ನನ್ನ ಮೋತಿ ಯಾಕ ಹಸರ ಕಂಡೀತ ಬಿಡಲೇ.
ರಂಡಿಮುಂಡೇರ ಕಾಣತಾರಂತ. ಅದ್ಯಾಕ
ನನ್ನ ಹೇಂತಿ ರಂಡಿಮುಂಡಿ ಹಾಂಗ ಕಂಡಳಂತ
ಹೇಳಲಾ, ಮುಚ್ಚಿ ಯಾಕ ಇಟಕೋತಿ?
ನಿನ್ನ ಮುಂದ ಪಾರಿ ಏನೇನ ಹೇಳ್ಯಾಳೆಲ್ಲಾ
ಗೊತ್ತೈತಿ, ಹೇಳಲೇನಾ? ನೋಡ್ರೆಪಾ:
ಮನ್ನಿ ಹೊಳ್ಯಾಗ ನಾ ಜಳಕಾ ಮಾಡಾಕ ಹತ್ತಿದ್ನು
ಹೊಲ್ಯಾರ ನಿಂಗಿ ತೊಡೀ ಕಾಣೋ ಹಾಂಗ
ಕಚ್ಚೀಹಾಕಿ ಸೀರೀ ಒಗ್ಯಾಕ ಹತ್ತಿದ್ಳು.
ಯಾವ ಮಾಯಲೇನೊ, ಆಕಿ ಸೀರಿ ಕಳೀತು,
ಗಬಕ್ಕನ ಕಲ್ಲಪಡಿ ಮರೀಗಿ ಕೂತಳಪಾ.
ನಾ ಇಕಡೆ ಮೋತಿ ಮಾತಿನು. ಮತ್ತ
ಎಲ್ಲಾ ಕಾಣೂ ಹಾಂಗ ಎದ್ದನಿಂತ ‘ಸಿಳ್ಳ
ಹಾಕಾಕ ಬರಾಣಿಲ್ಲೇನಲಾ ಕುರಸಾಲ್ಯಾ’
ಅಂದ್ಳು. ನಾ ಮಾನವಂತ ಮಗ ಹುಸಾ ಅನ್ನಲಿಲ್ಲ.
ಬಡಬಡಾ ಸೀರೀ ಉಟಕೊಂಡ ಬಂದ್ಳು, ಎಲಿ
ತಿಂದ ನನ್ನ ಕಡೆ ಮೋತಿ ಮಾಡಿ ಮೂರ ಬರೆ
ಉಗಳಿದಳು. ಆಗೂ ನಾ ಸುಮ್ಮಕ ಇದ್ನು.
’ನೀ ದನಾ ಅಂತ ತಿಳೀಲ್ಯೊ ಕಸಾಬಂತ
ತಿಳೀಲ್ಯೊ?’ ಅಂದ್ಳು, ‘ದನಾ ಅಂತ ತಿಳಕೊ’
ಅಂದಿನು. ಅಟ್ಟಕs ‘ನಿನ ಹೇಂತಿ ರಂಡಿಮುಂಡಿ
ಆಗ್ಯಾಳ ಹೋಗಲಾ ಕುರಸಾಲ್ಯಾ; ಅಂದಳು,
ಹೋದಳಪಾ! ಆಕಿ ಪಾರೀ ಮುಂದ ಆಡ್ಯಾಳ,
ಪಾರಿ ಇವನ ಮುಂದ ಗೊಜ್ಜಿಕೊಂಡಾಳ, ಅದನ್ನ
ಇಂವ ಇಲ್ಲಿ ಬಂದ ಕಾರಿಕೊಂಡ. ನಂದೇನರೆ
ತಪ್ಪೈತೇನ ಇದರಾಗ?

ಗುರ್ಯಾ : ಹಳೀ ಚೀಲ ಹಗಲೆಲ್ಲ ಯಾಂವ ಹಾಸಿಗೋತಾನ ಬಿಡಲೇ.

ಯಮನ್ಯಾ : ನಮಗೆಲ್ಲ ಮಳೀ ಚಿಂತಿ, ಆಕೀಗಿ ಮಿಂಡರ ಚಿಂತಿ!

ಎಲ್ಲ್ಯಾ : ಮಲಗು ಹೊರಸಾ, ಮಗ್ಗಲ ಗೆಣ್ಯಾನ
ಬಿಟ್ಟರ ಆಕೀಗೇನ ತಿಳೀತೈತಿ ಬಿಡೊ.

ಯಮನ್ಯಾ : ಮತ್ತ ಇಂವ ಯಾಕ ಬಾಯಿ ಹಾಕಬೇಕ ಕೇಳಲಾ.

ಇರಿಪ್ಯಾ : ನಾ ಏನ ಅನ್ನಬಾರದ ಅಂದಿನು ಬಿಡಲಾ. ನಾ
ಅಂದ ಆಡೋದರಿಂದ ಸೆಗಣಿ ಗುಂಪಿನ್ಯಾಗ
ಹುಳಾ ಬೀಳೂವಿದ್ರೇನ ಬಿಡತಾವು?

ಎಲ್ಲ್ಯಾ: ಏ ಏ ಆಡಬ್ಯಾಡೊ, ಆಡಬ್ಯಾಡೊ,
ಮಗನ, ನೀ ಯಾರನ್ನೂದ
ನನಗ ಗೊತ್ತೈತೊ. ಸಾಲಿ ಪುಸ್ತೇಕದಾಗ
ನಿಮ್ಮಪ್ಪನ ಹೆಸರಿದ್ದರೇನಾತ, ನಿನ್ನ ಮೋತಿ
ಮ್ಯಾಲ ನಿನ್ನಖರೇ ಅಪ್ಪನ ಹೆಸರ
ಬರದೈತಲೇ! ನಿಮ್ಮವ್ವನ ಕೊಳ್ಳಾಗಿನ
ಗೆಜ್ಜಿಟಿಕ್ಕೆ ಯಾರ ಕೊಟ್ಟದ್ದು ಕೇಳಿಕೊಂಬಾ,
ಆಮ್ಯಾಲ ಮಾತಾಡು, ಹೌದಂತೀನು.

ಇರಿಪ್ಯಾ : ನನಗ ಕಲಸಾಕ ಬರತಿ? ನಿನ್ನ ಎಲುವ
ಪುಡಿ ಪುಡಿ ಮಾಡೇನ ಮಗನ. ನೀ ಏನ
ಸುದ್ಧ ಇದ್ದೀಯಲೆ? ನಿಮ್ಮಪ್ಪನ ಗುರುತ
ಇಲ್ಲದ್ದಕ್ಕs ಅಲ್ಲೇನ, ‘ನಾ ಯಾರ ಗೊತ್ತೈತಿ?’
ಅಂತ ಹೊಲೇರ ಕಮಲೀನ ಕೇಳತಿದ್ದಿ?
ಲಡ್ಡುಪಿಶಿಕ್ಯಾ, ಹೆಂತಾಂವರ ಆಗವಲ್ಲ್ಯಾಕ
ನಮ್ಮಪ್ಪನ ಹೆಸರಾರ ಗೊತ್ತೈತಿ ನಮಗ.
ಅದೂ ಮರತರ ಲಜ್ಜಿಗೆಟ್ಟ ಮುದಿಗೌಡನ
ಹೆಸರಾರ ಹೇಳತೀವು, ನಿನಗೇನೈತೊ? ನಾಲಿಗ್ಗಿ
ಎಲುವಿಲ್ಲಂತ ಗಲಗಲ ಮಾತಾಡತಾನ, ಮೀಸಿ
ಕಿತ್ತ ಕೈಯಾಗ ಕೊಟ್ಟೇನ ಲುಚ್ಚ್ಯಾ.

ಎಲ್ಲ್ಯಾ : ಯಾರಿಗಿ ಲುಚ್ಚ್ಯಾ ಅಂದಿಯೊ ನೀ? ನನಗ
ಲುಚ್ಚ್ಯಾ ಅನ್ನಾವ ನೀ ಯಾರ? ಗುಂಡನ?
ಗಜಗನ?

ಗುರ್ಯಾ : ನೀ ಯಾಕಿಷ್ಟ ಮನಸ್ಸಿಗಿ ಹಚಿಕೋತೀ ಬಿಡೊ.
ನಿನಗ ಅಂದದ್ದೇನ, ನನಗ ಅಂದದ್ದೇನ,
ಎಲ್ಲಾ ಒಂದs ಅಲ್ಲ? ಮನ್ನಿ ಆ ಸೂಳಿಮಗ್ಗ
ಮುಕಳಿ ಮ್ಯಾಲೊಂದು ಕುರುವಾಗೇತಿ, ಆ
ಕುರುವಿನ್ಯಾಗಿಂದ ಮಾತಾಡತಾನಂವ. ಹಿಂತಾ
ಮಾತ ಇನ್ಹೆಂಗ ನಾರಬೇಕು?

ಎಲ್ಯಾ : ಏ ಕುರುವ? ಏನ ಕುರುವ?

ಗುರ್ಯಾ : ಮನ್ನಿ ಹರೀವತ್ತ ಎದ್ದ ಕನ್ನಡಿ ನೋಡಿದಾನ,-
‘ಕನ್ನಡ್ಯಾಗಿಂದ ನನ್ನಾಂಗಿಲ್ಲ ಇಂವ್ಯಾರ?’ ಅಂತ
ಹೇಂತೀನ ಕೇಳ್ಯಾನ. ‘ಊರಾಗ ಇಷ್ಟ ಮಂದಿ
ಅದಾರ, ಅದರಾಗ ಯಾಂವರೆ ಒಬ್ಬನಂತ
ತಿಳಕೊಳ್ಳಾ’ ಅಂತ ಹೇಂತಿ ಹೇಳಿದರ ಆ
ಸಿಟ್ಟ ನಮ್ಮ ಮ್ಯಾಲ ತೀರಿಸಿಕೊಳ್ತಾನ, ಸೂಳೀಮಗ.

ಇರಿಪ್ಯಾ : ಸೂಳೀಮಗಾ ಅಂತ ಯಾರಿಗಂದ್ಯೊ ನೀ? ಮಗನs,
ನಮ್ಮವ್ವ ಹಾದರ ಮಾಡಿದ್ದ ಕಣ್ಣಮುಟ್ಟ
ನೋಡೀದೀ ನೀ? ಇಂದ ಏನಂಬೂದ
ನನಗ ನಿನಗ ಒಮ್ಮಿ ಆಗಿ ಹೋಗಲಿ, ಸೆಗಣಿ
ಗುಂಪಿನ್ಯಾಗ ಹುಳಾ ಬಿದ್ದರೆಷ್ಟು, ಬಿಟ್ಟರೆಷ್ಟು.
ಬಿದ್ದರ ಊರಾಗಿದ್ದೇವು, ಬಿಟ್ಟರ ಊರ ಬಿಟ್ಟೇವು.

(ಉಳಿದವರು ಅವನನ್ನು ತಡೆಯಬೇಕೆಂದು ಪ್ರಯತ್ನಿಸಿದರೂ ಕೇಳದೆ ಎದ್ದುನಿಂತು ಮಾತಾಡುವನು.)

ಇಂದ ತೀರಿ ಹೋಗಲಿ, ಇಂದ ನಿನ್ನ
ರಗತಾ ಕುಡದರs ಹೌದನ್ನ ಮುದೋಡ್ಯಾ…

(ಗುರ್ಯಾನ ಮೇಲೆ ಹಾರಿ ಅವನ ಕುತ್ತಿಗೆ ಹಿಚುಕಲು ಹೋಗುವನು. ಎಲ್ಲರೂ ಅವರಿಬ್ಬರನ್ನು ಬಿಡಿಸಿಕೊಂಡು ಬೇರೆ ಬೇರೆ ನಿಲ್ಲಿಸಲೆತ್ನಿಸಿದರೂ ಆಗದೆ ರಂಗದ ತುಂಬ ಗದ್ದಲ ವ್ಯಾಪಿಸುತ್ತದೆ. ಆಗ ಈವರೆಗೆ ಯಾರ ಗಮನಕ್ಕೂ ಬರದೆ ಮೂಲೆಯಲ್ಲಿ ಕುಳಿತಿದ್ದ ಮುದುಕ ಕುಳಿತಲ್ಲಿಂದಲೇ ಚೀರುವನು. ಅವನು ಇನ್ನಾರೂ ಆಗಿರದೆ ಎರಡನೆಯಂಕದಲ್ಲಿ ಬಾಳಗೊಂಡನಿಗೆ ಭೆಟ್ಟಿಯಾದ ಮುದುಕನೇ ಆಗಿರುತ್ತಾನೆ. ಹಣಿತುಂಬ ಭಂಡಾರ ಹಚ್ಚಿ ಮೈತುಂಬ ಕಂಬಳಿ ಹೊದ್ದುಕೊಂಡು ಎಡಗೈಯಲ್ಲಿ ತತ್ರಾಣಿ ಹಿಡಿದಿರುತ್ತಾನೆ. ದೇವರು ತುಂಬಿದಂತೆ ಚೀರುತ್ತಾನೆ.)

ಮುದುಕ : ಏ s s s ಏs… (ಎಲ್ಲರೂ ಸ್ತಬ್ಧರಾಗುವರು)
ಸೆಗಣಿ ಗುಂಪಿನ್ಯಾಗ ಹುಳ ಬೀಳತಾವಲೇ
ಮಗನsss….

(ಎಲ್ಲರೂ ಜಗಳ ಮರೆತು ಅವನ ರಟ್ಟೆಯಲ್ಲಿ ಹೈಹಾಕಿ ಭಯಭಕ್ತಿಯಿಂದ ಮುಂದೆ ಕರೆದು ತಂದು ಕೂಡ್ರಿಸಿ ಅವನ ಸುತ್ತಲೂ ಕುಳಿತುಕೊಳ್ಳುವರು.)

ಎಲ್ಯಾ : ಏನೇನೂ ಅಂಜಿಕಿಲ್ಲದ ಹುಳ ಅಂತಾನ್ನೋಡೊ!

ಯಮನ್ಯಾ : ಹುಳಾ ಬೀಳತಾವ ಅಂತಾನ್ನೋಡೊ!

ಗುರ್ಯಾ : ಇವನ ಮೈಯಾಗ ಯಾವುದೋ ದೇವರ
ತುಂಬೇತೇನ ನೋಡೊ!

ಇರಿಪ್ಯಾ : ಸುಮ್ಮಕಿರ್ರೆಪಾ, ಗುಡ್ಯಾಗಿನ ದೇವರ್ಹಾಂಗ
ಮಾತಾಡತಾನು, ಒಂದೀಟ ಬಾಯ್ಮುಚ್ಚಿ ಕೇಳ್ರಿ.
ಆಡ ಮಾತಾಡ ಮುದುಕಾ.

ಎಲ್ಯಾ : ಇಂವನ್ನ ಗುಡ್ಯಾಗಿಟ್ಟ ಪೂಜಿ ಮಾಡಬೇಕಂತೇನ
ನಾ, ನೀಯೇನಂತಿ? ನೋಡಬಾರದ? ಮಲ್ಲಿಗಿ
ಹೂ ಉದರಿಧಾಂಗ ಮಾತಾಡತಾನ,
ಮಾತಾಡ ಎಜ್ಜಾ, ಮಾತಾಡ.

ಮುದುಕ : ನನ್ನs ನೋಡ್ರೆಲ್ಲ,-ಹಳಿ ಮನಿಶ್ಯಾ.
ಹದ್ದಿಗಾದಷ್ಟು ವಯಸ್ಸಾಯ್ತು. ಮಣಕಾಲದಾಗ
ತಲೀ ಹಾಕಿ ಕುಂಡ್ರೂ ಕಾಲ ಏನಪಾ.
ಕುಂತಟ್ಟರಾಗs ನಾ ಹರೇದಾವಂತ ಯಾಕ
ತಿಳಿಕೋಬಾರದು? ತಿಳಕೊಂಡರ ಒಳಗ ಇಳೀಬೇಕಲಾ!
ಅದಕ್ಕ ಸಾದೂರ ಕೇಳಿನು, ಶರಣರಾದರು,
ಸಿದ್ದರಾದರು, ಕಡೀಕಂದರ ನಿರ್ವಾಣೆಪ್ಪನ ಗುಡ್ಡದಾಗ
ಪಾರೀ ಹಾಂಗ ಆಗಿಬಂದ ‘ಇದನ್ನ ಕುಡೀ
ಮಗನ’ ಅಂತ ಪಾರಂಬಿ ಕರ್ರೆವ್ವ ಬಂದ
ಕೊಟ್ಟಳು. ಕುಡೀತೇನು,-ಇಲ್ಲಿ ಹರೆ,
ಅಲ್ಲಿ ಹರೆ, ಕೈಯಾಗ ಹರೆ, ಕಾಲಾಗ ಹರೆ,
ಎಲ್ಲೆಲ್ಲಾ ಹರೇನs ಹರೆ, ಚಿಗರ ಮೀಸ್ಯಾಗ
ಯಾಸಿ ನಗಿ, ವಾರಿರುಮ್ಯಾಲ ಸುತಕೊಂಡ
ಬಿಳೀ ಕುದರಿ ಏರಿ ಸರದಾರ ಬರತಾನಲಾ!
ಇಂವ್ಯಾರಪಾ ಅಂತ ನೋಡತೇನು: ನಾನs!
ಹರೇದ ಹುಡಿಗೇರ ಹಾಲಗಡಿಗಿ ಹಿಡಕೊಂಡ
ಹಾದೀ ತರಿಬಿ ಕರದs ಕರೀತಾವ!…
ಮಾಮಾ ನನ್ನ ಹಾಲ ಕುಡಿ, ಮಾಮಾ
ನನ್ನ ಹಾಲ ಕುಡಿ!

ಯಮನ್ಯಾ : ಎಜ್ಜಾ ನಂಗsಟ ಕೊಡೊ.

(ಮುದುಕ ತತ್ರಾಣಿ ಕೊಟ್ಟನಂತರ ಬಾಯಿಗೆ ಹಚ್ಚಿ ಕುಡಿಯುವನು. ಅಷ್ಟರಲ್ಲಿ ಇನ್ನೊಬ್ಬನು ಕೈಚಾಚಿದಾಗ ಅವನಿಗೆ ಕೊಟ್ಟು ಅದಕ್ಕೆ ಕೈಮುಗಿಯುವನು. ಅವನೊ ತೆಗೆದುಕೊಳ್ಳುವಾಗೊಮ್ಮೆ ಇನ್ನೊಬ್ಬನಿಗೆ ಕೊಡುವಾಗೊಮ್ಮೆ ಅದಕ್ಕೆ ನಮಿಸುವನು. ಹೀಗೆ ಎಲ್ಲರೂ ಕುಡಿಯುತ್ತಿರುವಾಗಲೇ ಮಾತು ಆರಂಭವಾಗುತ್ತದೆ. ಇನ್ನು ಮೇಲೆ ಎಲ್ಲರೂ ಕುಡುಕರಂತೆ ಆಡುತ್ತಾರೆ.)

ಮುದುಕ : ಅಲ್ರ್ಯೊ? ಈ ಸೆಗಣಿ ಗುಂಪಿನ್ಯಾಗ ಹುಳಾ
ಬಿದ್ದಾವಂತ ಯಾಕ ತಿಳಕೊಬಾರದು?

ಯಮನ್ಯಾ : ಏನ ಬೀಜಮಾತ ಆಡಿದ್ಯೊ ನಮ್ಮಪ್ಪಾ!
ಬರೇ ಹುಳಾ ಯಾಕ ಇನ್ನೂ ಏನೇನ
ತಿಳಿಕೊಳ್ಳೋಣ ಹೇಳೊ ನಮ್ಮಪ್ಪಾ!
ಸೆಗಣಿ ಗುಂಪಿನ್ಯಾಗ ಹುಳಾ ಬಿದ್ದೂವ… ಫಳಫಳ
ಮಳಿ ಬಂದ, ಸಳಸಳ ಬೆಳಿ ಎದ್ದ-ಮಣಕಾಲ
ಮಟ-ನಡಮಟ-ಎದಿಮಟ-ಗೌಡ್ತೀ
ಮಾರಿಹಾಂಗ ತೆನಿ ಅರಳಿ, ನತ್ತಿನ್ಹಾಂಗ
ಕಾಳ ಮೂಡಿ, ಸೀರೀ ಹಾಂಗ ಗರಿ ಹಾರ್ಯಾಡಿ
ಆಹಾ…. ಎಜ್ಜಾ ಇನ್ನೊಮ್ಮಿ ನೀನs ಹೇಳೊ,
ಬರಿಬರಿ ನೀನs ಮಾತಾಡೊ.

ಎಲ್ಲ್ಯಾ : ಕುಡದ ಸೆರೆ ಕುತಿಗಿ ಮಟ ಇಳೀತಪ!

ಗುರ್ಯಾ : ಎದಿಮಟ ಇಳೀತಪಾ!

ಇರಿಪ್ಯಾ : ಮಣಕಾಲಮಟ ಇಳೀತಪಾ!

ಮುದುಕ : ಹರೇದ ಹುಡಿಗೇರ ಹಾಲಗಡಿಗಿ ಹಿಡಕೊಂಡ
ಕರದs ಕರೀತಾವ: ಮಾಮಾ ನನ್ನ ಹಾಲ
ಕುಡಿ, ಮಾಮಾ ನನ್ನ ಹಾಲ ಕುಡಿ.
ಎಷ್ಟ ಕುಡಿದಿ!

ಗುರ್ಯಾ : ಏನ ಗೊತ್ತಿಗಿ ಹಚ್ಚಿ ಮಾತಾಡ್ತೀನೊ
ಮುದುಕ? ನನ್ನ ಗುಂಡಗಡಿಗ್ಯಾಗಿನ ಲಿಂಗ
ಮಾತಾಡಿಧಾಂಗ ಮಾತಾಡ್ತಿಯಲ್ಲೊ!

ಎಲ್ಲ್ಯಾ : ಏನ ಆಡತಿ! ಏನ ಮಾತಾಡ್ತೀನೊ! ನನಗ
ನೋಡಪಾ ನಿನಗ ಅಜ್ಜಾ ಅನ್ನೋವಷ್ಟ,
ಹಂಗ್ಯಾಕ, ಒಮ್ಮೊಮ್ಮಿ ಅಪ್ಪಾ ಅನ್ನೋವಷ್ಟ
ಅಕ್ಕರತಿ ಬರಾಕ ಹತ್ತೇತಿ, ಏನ ಮಾಡಲಿ?
ನೀ ಓ ಅನ್ನು ಬಿಡು, ಸಾಯೂದರೊಳಗ
ನಾ ಒಮ್ಮೆರೆ ಕರದs ಬಿಡಾಂವ ಮತ್ತ.
ನನ್ನ ಹೇಂತೀನ ಬಿಟ್ಟ ಇನ್ನೂ ತನಕ
ಒಬ್ಬರಿಗೂ ಸುಳ್ಳಬಿದ್ದಿಲ್ಲ, -ಹಂ… ಇದs
ಹೊಲೇರ ಸೀತಿ ಬರೇ ಒಂದ ಬೋರಮಳ
ಬೇಡಿದರ ಅರ್ಧಾ ಹೊಲಾ ಮಾರಿ ಅಚ್ಚೇರ
ಬಂಗಾರ ಹಾಕಿದ ಗಂಡಮಗಾ ನಾ!
ಕೊಳ್ಳಿಗಿ ಒಜ್ಜಿ ಆಗಿ ಹೆಜ್ಜಿಗೊಮ್ಮಿ
ಕಾಲ ಬಿದ್ದ ‘ಮಾಮಾ’ ಅಂತಿದ್ಳು,-ಇವನ್ನ
ಕೇಳ ಬೇಕಾದರ, ಅಲ್ಲೇನಪಾ?

ಇರಿಪ್ಯಾ : ನನ್ನ ಬಗಲಾಗ ಯಾರೋ ಕೈ ಹಾಕಿ
ನಗಿಸಿಧಾಂಗ ಆಗತೈತಲ! ಆಟ ಮಾಡೋಣು.
ನೀ ಚಿಮಣಾ ಆಗೋ

ಯಮನ್ಯಾ : ಹಾ ಪ್ರಿಯತಮಾ! ನಿಂಗ್ಯಾತರಿಂದಾಯ್ತು ಭ್ರಮಾ?

ಗುರ್ಯಾ : ಜಗತ್ತೆಲ್ಲ ನಿನ್ನಿ ಹುಟ್ಟಿ ನಾವೆಲ್ಲ ಇದs
ಹುಟ್ಟಿದ್ದೀವಂತಪಾ, ಹಾ? ಏನ ಜಗತಪಾ?
ಏನ ಜಗತಪಾ!

(ಕೈಯಲ್ಲಿ ಪಾತ್ರೆ ಹಿಡಿದ ಪಾರಿ ಪ್ರವೇಶಿಸಿ ಇವರ ಸ್ಥಿತಿ ನೋಡಿ ಚಕಿತಳಾಗಿ)

ಪಾರಿ : ಅಯ್ ಶಿವನ! ಇದೇನ ಮಾಡತಾವs
ಮೂಳಗೋಳ? ಮುಟ್ಟಿ ಮೈಲಿಗಿ ಮಾಡೀ
ತಗೀಯತ್ತ!

ಎಲ್ಲ್ಯಾ : ಅರೆ! ಹಾಲಿನ ಹುಡಿಗಿ ಬಂದ ಅಡ್ಡ
ನಿಂತಳಪಾ! ಮಾಮಾ ನನ್ನ ಹಾಲ ಕುಡಿ,
ನನ್ನ ಹಾಲ ಕುಡಿ.

(ಪಾರಿಯ ಬೆನ್ನು ಹತ್ತುವನು. ಉಳದವರೂ ಬೆನ್ನುಹತ್ತುತ್ತಾರೆ. ‘ನನ್ನ ಹಾಲಕುಡಿ ಮಾಮಾ ನನ್ನ ಹಾಲ ಕುಡಿಎಂದು ಎಲ್ಲರೊಂದಿಗೆ ರಂಗವನ್ನು ಒಂದೆರಡು ಸುತ್ತು ಓಡಾಡಿ ತಪ್ಪಿಸಿಕೊಳ್ಳಲೆತ್ನಿಸುವಳು.)

ಯಮನ್ಯಾ : ಸಕ್ಕರಿಗೊಂಬಿ ಆಗ್ಯಾಳ ನೋಡೊ!

ಇರಿಪ್ಯಾ : (ಅವಳನ್ನು ಹಿಡಿದು ಬಿಟ್ಟು) ಬೆಣ್ಣಿಮುದ್ದಿ
ಆಗ್ಯಾಳ ನೋಡೊ!

(ಪಾರಿ ಹಿಡಿದ ಒಬ್ಬನ ಕೈ ಬಿಡಿಸಿಕೊಂಡು ಥೂ ಎಂದವನ ಮುಖದ ಮೇಲೆ ಉಗುಳಿ ಓಡಿ ಹೋಗುವಳು. ಉಳಿದವರೆಲ್ಲ. ‘ನನ್ನ ಹಾಲ ಕುಡಿ ನನ್ನ ಹಾಲ ಕುಡಿಎಂದು ಬೆನ್ನುಹತ್ತಿ ಹೋಗುವರು. ಸೂತ್ರಧಾರ ಮತ್ತು ಮುದುಕ ಇಬ್ಬರೇ ಉಳಿಯುವರು.)

ಮುದುಕ : ಯಾಕ, ಏನಂತಿ?

ಸೂತ್ರಧಾರ : ಅಪ್ಪಾ, ನನಗ ಹಸೀನೂ ಒಂದ; ಬಿಸೀನೂ
ಒಂದs. ನನ್ನೇನ ಕೇಳತಿ?

ಮುದುಕ : ಈಗ ಬಾಳಗೊಂಡ ಬಂದ ನನ್ನ ಕೇಳಿದರ
ಪಡುವ ದಿಕ್ಕಿನ್ಯಾಗಿನ ಅಡಿವ್ಯಾಗ ಇರತೇನಂತ
ಹೇಳು, ಏನ ಹೇಳತಿ?

(ಇಷ್ಟು ಹೇಳಿ ಮುದಿಗೌಡ ಹೊರಟುಹೋಗುವನು. ಸೂತ್ರಧಾರ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡುವನು.)

ಸುತ್ರಧಾರ : ಬಾಲಕಾ,
ಪಡುವ ದಿಕ್ಕಿನಾಗೊಂದು ಕೆಂಪುಸಮುದ್ರ,
ಸಮುದ್ರದಾಗೊಂದು ಹಸಿರು ನಡುಗಡ್ಡೆ.
ನಡುಗಡ್ಡದೊಳಗೊಂದ ದಟ್ಟ ಅಡವಿ,
ಅಡಿವ್ಯಾಗೊಂದು ಬಣ್ಣದ ಅರಮನಿ ಐತಿ,
ಅರಮನಿ ಹೊರಗಡೆ ಒಂದು ರಣಹದ್ದು
ಒಂದು ಕಾಲಾಗ ಚಿನ್ನದ ತಕ್ಕಡಿ,
ಇನ್ನೊಂದು ಕಾಲಾಗ ಬಂದೂಕ ಐತಿ.
ಅರಮನಿ ಹೊರಗ ಚೌರ್ಯಾಂಸಿ ಲಕ್ಷ
ಮಿಕಗಳನ್ನ ಬ್ಯಾಟಿ ಆಡಿಕೊಂಡು
ರಾಜ್ಯಭಾರ ಮಾಡತೈತಿ. ನೀನಾದರೂ ಅಲ್ಲಿಗೆ ಹೋಗಿ
ಭೇಟಿ ಮಾಡುವಂಥವನಾಗು.