(ಬಾಳಗೊಂಡ ಹೊರಡಬೇಕೆಂಬುವಷ್ಟರಲ್ಲಿ ಸೂತ್ರಧಾರ ಹಾಡು ಹೇಳುತ್ತಾನೆ. ಬಾಳಗೊಂಡ ತುಸು ಹೊತ್ತು ಕಡೆಗೆ ಓಡಾಡಿ ಕೊನೆಗೆ ಏನೋ ನೆನಪಾದಂತಾಗಿ ಕುಡಗೋಲು ಮಸಿಯುತ್ತ ಕುಳಿತುಕೊಳ್ಳುವನು.)

ಸೂತ್ರಧಾರ : ಏ ಕುರುಬರಣ್ಣಾ ಸತ್ತ್ಯುಳ್ಳ ಶರಣಾ
ಕಾಪಾಡೊ ಕುರಿಗಳನಾ
ಮಾಡುವೆ ನಮನಾ           ||ಪ||

ಅರಿಯಬಾರದ ಅರಸ ಒಳಗೆ ಬಾರದೆ ಕುಳಿತ
ಒಳಹೊರಗ ಆದಾವೊ ಹೊರತ
ಹೊಲಿದ ಹೊಲಿಗೆಯ ಭೇದ ಗೊತ್ತಿಲ್ಲದಾದೇವು
ಮರತಾನೊ ದೊಡ್ಡಿಯ ಗುರುತ
ಕಳಕೊಂಡು ಹಳಹಳಿಸಿ ತಿಳಿಯದೆ ತಿರಿಗೇವ
ಮತಿಗೆಟ್ಟ ಮರುಳಾದೆವಣ್ಣ  ||೧||

ಒಳಗ ಗದ್ದಿಗಿ ಮ್ಯಾಲ ಹುಲಿ ಬಂದ ಕುಂತಾವ
ತಳಕಿತ್ತು ಓಡದಿರೊ ಧೀರಾ
ಪ್ರಳಯಕ್ಕೆ ಹೊರತಾಗಿ ಹೊರಗ ಹೆಂಗರೆ ಉಳಿವಿ
ಕಾರ್ಯಕಾರಣಕಾದ ವೀರಾ
ನಮ್ಮೊಳಗ ನೀನಡಕ, ನಿನ್ನೊಳಗ ನಾವಡಕ
ಬಿಟ್ಟರೇನಿದೆ? ಬರಿಯ ಬಣ್ಣ ||೨||

ಕಂಡಕಂಡವರೀಗ ಕೈ ಮುಗದ ಕೇಳೇವ
ಕಂಡೀರೇನರಿ ನಮ್ಮ ದೊರಿಯ
ಬಿಳಿಯ ಹೊಳಪಿನ ಯಕ್ಷಿ ಕ್ಷಿತಿದಂಚಿನ ಬೆಳಕ
ಕಣ್ಣೊಳಗ ಕುಕ್ಕಿದಳಯ್ಯ
ಅಕ್ಷಿಯೊಳಗಡಿಗಿರುವ ನಿಕ್ಷೇಪವೇ ಬಾರ
ಅಳಿಸೊ ಉಳಿಸುವ ಹಕ್ಕಿನಣ್ಣ          ||೩||

(ಹಾಡು ಮುಗಿಯುತ್ತಲೂ ಹೋದ ಹಳಬ ಹಿಂದಿರುಗಿ ಬರುತ್ತಾನೆ.)

ಹಳಬ : ಅಪ್ಪಾ, ಬಾಳಗೊಂಡಾ, ನಾನಾದರೂ ಬಂಗಾರ ಕುದರಿ
ಹೊಡಕೊಂಡ ಬಂದಿದ್ದೇನ್ನೋಡು.

ಬಾಳಗೊಂಡ : ತಾ ಅಂದರ ಬಾ ಅಂತಾನಲ್ಲೊ? ಹೊಟ್ಟಿಗೇನ
ಕನಿಕಿ ತಿಂತಿ? ಯಾವ ಕುದರಿ ಹೊಡಕೊಂಬಾ ಅಂದಿದ್ದೆ.

ಹಳಬ : ಬಿಳೀ ಕುದರಿ ಇರಲಿಲ್ಲಂತೀನು…

ಬಾಳಗೊಂಡ : ಅದ್ಯಾಕ ಇರಲಿಲ್ಲ?

ಹಳಬ : ಅದs ನನಗೂ ಹೊಯ್ಕಾತಂತೀನು…

ಬಾಳಗೊಂಡ : ಏನೊ ನಿನ್ನ ಗೋಳು? ಹೇಳಬಿಡ ಒಮ್ಮಿ,
ಗಟ್ಟಿ ಮನಸ ಮಾಡಿ ಕೇಳತೇನ.

ಹಳಬ : ಆ ಕತೀನs ಹೇಲತೇನೊ ಎಪ್ಪ. ನೀ ಹೇಳಿದಿ,
ನಾ ಹ್ವಾದಿನು. ಒಕ್ಕಲಗೇರ್ಯಾಗ ಹೊಕ್ಕ, ಹಾರೂಗೇರ್ಯಾಗ
ಹರದ, ನಿಮ್ಮ ಮನಿಗಿ ಹೋಗಿ ಕದ ತೆರದಿನು.
ಹಕ್ಕ್ಯಾಗ ಸಣ್ಣ ಮಿಣಕ ಮಿಣಕ ಪಣತಿ. ಸಾಲ
ದನಾ ಕರ್ರಗ ಅಮಾಸಿ ದೆವ್ವಿನ್ಹಾಂಗ ನಿಂತಾವಲಾ!
ನಾನs ಕನಿಕಿ ಅಂಬಾವರಹಾಂಗ ಎಲ್ಲಾ ನನ್ನs
ನೋಡಬೇಕ? ಕಟ್ಟಕಡೀಕ ಮೇವಿನ ಕಟ್ಟಿ ಹಂತ್ಯಾಕ
ಕೆಂಪ ಕುದರಿ ನಿಂತಿತ್ತು, ಬಿಳೀದಿಲ್ಲ.
ಇನ್ನೇನ ಆ ಕಡೆ ನೋಡಬೇಕಂದರ-ನೋಡಪಾ-
ದೇವರ ಸರಿ ನಿನ್ನ ಮುಂದ ಹೇಳತೇನು-ಇದರ ಕರ್ರೆವ್ವ!
ನನ್ನಾಣಿ, ನಿರ್ವಾಣೆಪ್ಪನ ಆಣಿ, ಕೆಟ್ಟದೇವರಾಣಿಪಾ
ಕರ್ರೆವ್ವನs! ಕುದರಿ ತೊಡ್ಯಾಗ ಕೈಹಾಕಿ
ತಿಕ್ಕತಿದ್ದಳು! ಬೆವರ ಬಂದ ಗಡಗಡ ತೊಡಿ
ನಡಿಗಿ, ಆಡೇನಂದರ ಬಾಯಿಲ್ಲ, ಓಡೇನಂದರ
ಕಾಲಿಲ್ಲ! ಹಣಿತುಂಬ ಕುಂಕುಮ, ಎಣ್ಣಿ ಹಚ್ಚಿದ
ಹಸೀ ತಲಿ! ಬಿಟ್ಟ ಕೂದಲ ಬೆನ್ನ ದಾಟಿ ನೆಲಕ್ಕ ಚವರಿ
ಬೀಸತಿದ್ದವು! ಮೈಮಾಲ ಸೀರಿ ಐತಿ, ಇಲ್ಲ-
ಗಲ್ಲ, ಮಲಿ, ಕುತ್ತಿಗಿ, ಕೈಗೆಲ್ಲ ಸೆಗಣಿ ಹಚ್ಚಿಕೊಂಡಿದ್ದಳು!
“ಹಡದವ್ವಾ ನೀ ತಾಯಿ ಖರೆ, ನಾ ಮಗಾ ಖರೆ
ಆದರ ನನ್ನ ಕಾಪಾಡ ಎವ್ವಾs” ಅಂದವನ
ಉದ್ದಕ ಬಿದ್ದಿನು. ಅವ್ವಗ ಕರುಣಾ ಬಂತು.
“ಕುದರಿ ನನ್ನ
ಬಾಳಣ್ಣಗ ಹೌದಲ್ಲೊ?” ಅಂದಳು. “ಹೌದೆವ್ವ”
ಅಂದಿನು. “ಬಿಳೀ ಕುದರಿ ಹೋಗೇತಿ, ಬಂಗಾರ
ಕುದರಿ ಒಯ್ ಮಗನs” ಅಂದಳು.
“ಆಗಲಿ ಹಡದವ್ವಾ” ಅಂದ ಹೊಡಕೊಂಡ
ಬಂದಿನು. ನನಗ ಜೊರಾ ಬಂದಾವೇನ್ನೋಡು.

ಬಾಳಗೊಂಡ : ದೀಡ ಪಂಡಿತ ಇದ್ದಿ, ಶರಣಂದ ಹೋಗು.
ಅಪ್ಪಾ ಸೂತ್ರಧಾರ, ನಾನಾದರು ಹೊರಟು ನಿಂತೆ.
ಇದರ ನೋಡಿದರ ಕವಲದಾರಿ. ನಾ ಹೋಗಬೇಕಾದ
ದಾರಿ ನೀನಾದರು ತೋರಿಸುವಂಥವನಾಗು.

ಸೂತ್ರಧಾರ : ಇಕಾ ಈ ದಾರಿ ಸರಳ ಹೊಲಗೇರ್ಯಾಗ ಹಾದ,
ಪಾರೀ ಮನಿ ಮುಟ್ಟಿ ಊರ ಸೇರತೈತಿ.
ಈ ದಾರಿ ಸುಡುಗಾಡದೊಳಗ ಹಾದ ಹಳ್ಳದ ಗುಂಟ
ಹರದ ಐದಾರಾಗಿ ಮೆಳಿ ಸೇರಿ ಪಾರ ಹಾಯತೈತಿ.
ಆರಿಸಿಕೊಳ್ಳೋದ ನಿಂದ ಏನಪಾ.

ಬಾಳಗೊಂಡ : ಹೋಗತೇನ ಶರಣು

(ರಂಗದ ಎಡಬದಿಗೆ ಸೂತ್ರಧಾರನಿಗೆ ಕೈ ಮುಗಿದು ಹೊರಡುವನು. ಒಂದೆರಡು ಹೆಜ್ಜೆ ಹೋಗಿ ಹಿಂದಿರುಗಿದಾಗ ಹಳಬ ಹಾಗೆ ಬೆನ್ನುಹತ್ತಿದ್ದನ್ನು ನೋಡಿ ನಿಂತು) – ನಿಂದೇನಪಾ ಮತ್ತ? ಇನ್ನು ಮುಗೀಲಿಲ್ಲ ನಿನ್ನ ಕತಿ?

ಹಳಬ : ಅಲ್ಲ, ಏನೋ ಕೇಳಬೇಕಾಗಿತ್ತs ಎಪ್ಪ.

ಬಾಳಗೊಂಡ : ಏನಾ?

ಹಳಬ : ನನ್ನ ಗುರುತ ಇನ್ನೂ ಹತ್ತಲಿಲ್ಲ ಅನ್ನಬಾರದ?

ಬಾಳಗೊಂಡ : ಇಲ್ಲ.

ಹಳಬ : ಅಡ, ನಿನ್ನ ಹೆಸರ ಯೆರ್ತ ನೆನಪಿಟ್ಹಾಂಗ ಅತೆಲ್ಲ.

ಬಾಳಗೊಂಡ : ಹೌದು

ಹಳಬ : ಗಬರು, ಸಣ್ಣಂದಿರತ ಅಲಾಬದಾಗ ಹುಲೀ ಸೋಂಗಾ ಹಾಕತಿದ್ದಿ ನೀನs ಹೌದಲ್ಲೊ?

ಬಾಳಗೊಂಡ : (ಬೇಸರದಿಂದ) ಹೂಂ

ಹಳಬ : ಪಂಚಮೀ ಹೊಳಿ ಏರಿಬಂದಾಗ ನಾ ನೀ ಕೂಡಿಕೊಂಡ
ಹೊಳ್ಯಾಗ ಹಂದಿ ಓಡಿಸಿ, ಅವು ದಂಡಿಗಿ ಬರಧಾಂಗ
ಕಲ್ಲ ಹೇರಿ ಹೇರಿ ಸೀಮಿ ದಾಟಿಸಿ, ಬರತಿದ್ದಿ,
ನೆನಪೈತಿ?

ಬಾಳಗೊಂಡ : (ಕುತೂಹಲದಿಂದ) ಹೂಂ ಮುಂದ ಹೇಳು.

ಹಳಬ : ನಿರ್ವಾಣೆಪ್ಪನ ಜಾತ್ರಿಗಿ ಇಬ್ಬರೂ ಕೂಡಿಕೊಂಡ
ಹೋಗತಿದ್ವಿ…

ಬಾಳಗೊಂಡ : ಹಾಂ ಹಾಂ ನಿರ್ವಾಣೆಪ್ಪನ ಜಾತ್ರಿಗಿ ನಾ ಮುಂದ
ನೀ ಮುಂದಂತ ಮುನ್ನೂರಾ ಹದಿನೆಂಟ
ಮೆಟ್ಟಲಾ ಓಡೋಡಿ ಏರತಿದ್ವಿ! ಜಾತ್ರಿ
ಪನಿವಾರ ತಿನ್ನತಾ ಗುಡ್ಡತುಂಬ ಓಡಾಡತಿದ್ವಿ…

ಹಳಬ : ಹುಲಿಮರಿ ತೋರಸ್ತೇನಂತ ಒಕ್ಕಲಿಗೇರ
ನಿಂಗೀನ ರಮಿಸಿ ಗವ್ಯಾಗ ಕರಕೊಂಡ
ಹೋಗಿದ್ದಿ. ಆಮ್ಯಾಲ ನಾ ಬಂದ ಹುರಪಲೆ
ನಿಂಗಿ ದನಿ ತಗದ ಅಳಲಿಕ್ಹತ್ತಿದ್ದಳು…

ಬಾಳಗೊಂಡ : ಯಾರ ಮುಂದ ಹೇಳೋದಿಲ್ಲ ಸುಮ್ಮಕಿರಂತ
ಹೇಳಿ, ನೀ ನನ್ನ ಹೊರಗ ಕಳಿಸಿದ್ದಿ….

ಹಳಬ : ಹೇ ಹೇ… ಬಲೆ ಮೋಜಿನ ದಿನಗೋಳೇನಪಾ ಅವು.
ಬಾಳೇವಂದರ ಬಗಲೆತ್ತಿ ಹೌರಗ ಕುಣಧಾಂಗಿರತಿತ್ತ!
ನಮ್ಮ ಆಟಕ ಈ ಜಗತ್ತೆಲ್ಲಾ ಸಣ್ಣ
ಅಂಗಳಾಗಿ ಸಾಲತಿರಲಿಲ್ಲ ಹೌದ? ತುಂಬಿದ
ಹೋಳಿಹಾಂಗ ಅದs ಬಣ್ಣ, ಅದs ಅರಭಾಟ,
ಅದs ಭರಪೂರದಿಂದ ಬಾಳಬೇಕಂತೈತಿ
ಮಗನ ಮನಸ್ಸು

ಬಾಳಗೊಂಡ : (ಹಳಬನ ಹೆಗಲ ಮೇಲೆ ಕೈ ಹಾಕಿ)
ಎಷ್ಟ ದೂರ ಓಡಿಸಿಕೊಂಡ ಹೋಗಿ ಸಿಕ್ಕ್ಯೊ-
ಹಳಬರ ಲಸಿಮ್ಯಾ ಅಲ್ಲಾ ಮಗನ ನೀ?

ಹಳಬ : ಗೌಡರ ಬಾಳ್ಯಾ ಅಲ್ಲಾ ಮಗನ ನೀ?

(ಇಬ್ಬರೂ ಚಪ್ಪಾಳೆ ತಟ್ಟಿ ನಗಲಾರಂಭಿಸುವರು. ಮಾತು ಬರದಷ್ಟು ನಗುವರು. ಮಧ್ಯದಲ್ಲಿ ಏನೋ ಹೇಳಲು ಹೋಗಿ ಮತ್ತೆ ನಗುವರು.)

ಹಳಬ : ಕಣ್ಣ ಮುಚ್ಚಾಟ ಆಡಿಕೋತ ಅಂದ
ಯಾರ ಮನ್ಯಾಗ ಅಡಗಿದ್ದೀ ಮಗನ?

(ಮತ್ತೆ ನಗುವರು. ಬಾಳಗೊಂಡ ಯಾರನ್ನೋ ಅಣಕಿಸುವ ಹಾಗೆ ಎದ್ದು ಶರ್ಟನೊಳಕ್ಕೆ ಕೈ ಹಾಕಿ ತಾನು ಮೂಸಿ ನೋಡಿ ಅವನ ಮೂಗಿಗೂ ಹಿಡಿಯುವನು.)

ಬಾಳಗೊಂಡ : ಮೈಯಾನ ಮಣ್ಣ ಹೆಂಗ ನಾರತೈತಿ (ನಗುವನು)

ಹಳಬ : ಅಲ್ಲೊ; ಕ್ವಾಣಾ ಹೊಡ್ಯಾಕ ಹೋಗಿ ಅದರ ಜೋಡಿ
ಕೆಸರಿನ್ಯಾಗ ಅಂದ ಹೆಂಗ ಸಿಗಬಿದ್ದಿದ್ದಿ-ನೆನಪೈತಿ? (ನಗುವನು)

ಬಾಳಗೊಂಡ : (ತೊಡೆ ಬಾರಿಸಿ ನಗುತ್ತ)
ನನಗ ಈಗಲೂ ಕೆಸರಿನ್ಯಾಗ ಕಾಲ ಹುಗಧಾಂಗ
ಆಗತೈತಿ, ಹ ಹ ಹೌದ?

ಹಳಬ : ಹಾಂಗಾದರ ಕ್ವಾಣಿನ್ಹಾಂಗ ಒಮ್ಮಿ ಒದರಲಾ ಮಗನ.

ಬಾಳಗೊಂಡ : ಏ ಸುಮ್ಮಕಿರೊ ಮಾರಾಯಾ, ಕೆಸರಿನ್ಯಾಗ ಸಿಗಬಿದ್ದಾಂಗ
ತಿಳಕೊಂಡರs‌ ಮನಸ್ಸಿಗಿ ಒಂದ ನಮೂನಿ
ಖುಶಿ ಆಗತೈತಿ

ಹಳಬ : ಹಿಂತಾದೆಲ್ಲಾ ಬಿಟ್ಟ, ಊರ ನಂದಲ್ಲ
ಅಂಬಾವರ್ಹಾಂಗ-ರಾತ್ರೋರಾತ್ರಿ ಹೋಂಟೀದಿ,-
ಬುದ್ಧಿ ಎಲ್ಲಿಟ್ಟಿದ್ದೀಯಲೆ ಮಗನ?

ಬಾಳಗೊಂಡ : ಖರೆ, ಲಸಿಮ್ಯಾ, ನೀ ಬಂದ ಮತ್ತ
ಹಣಗಲಕ ಹಾಕಿದಿ. ತಡ ಅದರ ಮತ್ತೆಲ್ಲಿ
ಕ್ವಾಣ ಡೊಗಾಲಮಂಡೀ ಚೆಲ್ಲೀತಂತೇನ.

ಹಳಬ : ಬೇರ ಹರಕೊಂಡ ಬ್ಯಾರೇ ಕಡೆ  ಹೋಗೋದ
ಇಷ್ಟ ಸಸಾರಿದ್ದರ ಈ ಊರಾಗ ಯಾರ ಇರತಿದ್ರ
ಹೇಳು? ಈ ಮಣ್ಣೇನ ಒಂದs ಎರಡs ಮಾಡತೈತಿ?
ಇಷ್ಟs ಲೆಕ್ಕಾ ಹಾಕಲಾ, -ಬಿದ್ದ ಬೀಜ ಎಲ್ಲೆ-
ಬೆಳದ ಮರಾ ಎಲ್ಲೆ? ಸಿಡದ, ಮ್ಯಾಲ
ಬರಬೇಕಂದರ ಅದರ ಎದಿ ತುಂಬ ಬೇರ
ಬಿಟ್ಟಿರತೇವ. ಬೇಕಾದರ ಹೌದನ್ನು, ಸಾಕಾದರ ಅಲ್ಲನ್ನು.
ಬೇಕಬೇಕಾಧಾಂಗ ಒಂದ ಬಿಟ್ಟ ಒಂದ ಮಾಡೀತ
ಖರೆ, ನಮ್ಮ ಮ್ಯಾಲಿನ ಹಿಡತಾ ಬಿಡೋದಿಲ್ಲ
ಮಗಂದು. ಕಾಣಬಾರದ?-ಹೋಗತಿ ಅಂತ
ಕುದರೀ ಬಿಚ್ಚಿಕೊಂಬರೋವಾಗ ಹೇಳಿದ್ದಷ್ಟs ಆತು,
ಹೊಲೇರ ಪಾರಿ ಮೈ ತುಂಬಿ ‘ನನ್ನ ತಲ್ಯಾನ
ಕೂದಲಾ ಯಾರೋ ಸಿವುಡ ಕಟ್ಟಿ ಕೊಯ್ತಾರ
ಕಾಪಾಡ್ರೋ’ ಅಂತ ಚೀರಿದಳಪಾ!

ಬಾಳಗೊಂಡ : ಹೊಲೇರ ಪಾರಿ? ಆಕಿ ಮೈಯಾಗ ಬಂದಿತ್ತು?
ಏನಂದಳು? ಏನಂದಳು?

ಹಳಬ : ಈ ಗೋಕಾಂವಿ ನಾಡಿನಾಗಿನ ಕೆಟ್ಟ ಕೆಟ್ಟ
ದೇವರೆಲ್ಲ ಆಕಿ ಮೈಯಾಗ ತುಂಬತಾವೇನಪಾ.
ಯಾಕೋ ನೀ ಹೊಂಟ ಯಾಳೆ ಸುಮಾರೈತಿ,
ನಿನ್ನ ಬಿಡಬ್ಯಾಡರೆಂತ ಆಕೀನs ಹೇಳಿದಳು.

ಬಾಳಗೊಂಡ : ನೋಡ ಲಸಿಮ್ಯಾ….

ಹಳಬ : ಏ, ಅಲ್ಲಂದರ ಮತ್ತ ಅದನs ಹಾಡತಾನಲ್ಲೊ:
ಒಂದ ಮಾತ ಹೇಳತೇನ, ಬೇಕಾದರ ಕೇಳು,
ಸಾಕಾದರ ಬಿಡು: ಹೊಲೇರ ಪಾರಿ ಹೇಳಿದ್ದ
ಇಲ್ಲೀತನಕ ಒಂದ ಮಾತ ಸುಳ್ಳು ಬಂದಿಲ್ಲೇನಪಾ.
ಇದs ಈಗ ನಿನಗೊಬ್ಬ ಮುದುಕ ಭೆಟ್ಟಿ
ಆಗಿದ್ದೋ ಇಲ್ಲೊ?

ಬಾಳಗೊಂಡ : ಹೌದು.

ಹಳಬ : ನೋಡ ಹಾಂಗಾದರ, ಅಲ್ಲಿ ಕೂತಗೊಂಡs
ಅದನೆಲ್ಲ ಹೇಳಿದಳು-ಸುಳ್ಳಂತಿ? ಬ್ಯಾಡಾದವರ
ಬೇಕಾದ್ದs ಹೇಳತಾರ: ಹೇಳಿದ್ದವರನ್ನೆಲ್ಲಾ
ಕೇಳಿಕೋತ ಹ್ವಾದರ ಹೆಂಗೊ ಹುಡಗ?
ಸುಮ್ಮನ ಗಿಣಿಗಿ ಹೇಳಿಧಾಂಗ ಹೇಳತೇನ.
ನನ್ನ ಮಾತ ಕೇಳ, ಅದನ್ನೆಲ್ಲಾ ಏನ ಮಾಡತಿ?
ಮನಿಗಿ ನಡಿ…

ಬಾಳಗೊಂಡ : ನೋಡ ಲಸಿಮ್ಯಾ, ಇನ್ನ ಜುಲುಮಿ ಮಡಬ್ಯಾಡ.
ಏನೋ ಇದೊಂದ ಎಳಿತನದ ಹಳೀ ನೆನಪ
ಉಳದsದ. ಆದs ಅನ್ನೋದಕ್ಕ ಅದೊಂದಾದರೂ
ಇರಲಿ, -ನೀ ಹೋಗಿಬಿಡ.

ಹಳಬ : ಹಾಂಗಿದ್ದರ ಖರೆ ಅನ್ನು, ಸುಳ್ಳನ್ನು. ನನಗ
ನೀ ಬಾಳ್ಯಾ ಹೌಂದು, ನಿನಗ ನಾ ಲಸಿಮ್ಯಾ ಹೌಂದು.
’ಏ ನಿನಗ ನಾ ಬಾಳಗೊಂಡಲ್ಲಪಾ’ ಅನ್ನು-ಹೋಗು.
ಇದು ನಿಮ್ಮ ಅಣ್ಣನ ಅಳಿಕಿ ಜಾಗಾ; ನಾ
ಹೋಗತೇನ, ಇಕಾ ಶರಣು. ಹಾದ್ಯಾಗೇನರೆ
ಹರೀದ ಸುಖ ಸಿಕ್ಕರ ಈ ಹಳಬನ್ನ ಮರಿಬ್ಯಾಡ.

(ಹಿಂದೆ ನೋಡದೆ ಹೋಗುವನು. ಹಳಬನ ಸ್ಥಳವನ್ನು ನಿಧಾನವಾಗಿ ಬಂದ ಸೂತ್ರಧಾರನು ಆಕ್ರಮಿಸುವನು. ಬಾಳಗೊಂಡ ಅವನನ್ನು ಗಮನಿಸದೆ ಸ್ವಗತವೆಂಬಂತೆ ಆಡುತ್ತಾನೆ.)

ಬಾಳಗೊಂಡ : ನಾ ಕೇಳೋದs ಒಂದ, ನೀವೆಲ್ಲ ಹೇಳೋದs ಒಂದ.

ಸೂತ್ರಧಾರ : ಖರೆ ಬೇರ ಹುಡುಕಬೇಕಲ್ಲ.
ಬಾಳಗೊಂಡ : ಇದ ನನ್ನ ಮಣ್ಣs ಅಲ್ಲ, ತಿಳೀತಿಲ್ಲ?
ನೋಡಲಿಲ್ಲ ಆ ಮುದಕನ್ನ? ಇಷ್ಟಿದ್ದಾಂವ
ಇಷ್ಟ ದೊಡ್ಡಾಂವಾಗಿ ಕಾಣಾ ಕಾಣಾ
ಎದರಾ ಇದರ ನೆಲಕ್ಕ ಮುಗಿಲಿಗೆ ಏಕಾಗಿ
ಬೆಳದ. ಅವನಾಡಿದ್ದೆಲ್ಲ ಖರೆ, ಮುಟ್ಟಿದ್ದೆಲ್ಲ
ಬಣ್ಣ! -ನಾ? ನಾ ಸಣ್ಣ ಸಣ್ಣಾಂವಾಗಿ
ತೆಳ್ಳಗ ಗಾಳ್ಯಾಗಿ ಸುಳಿಧಾಂಗಾಯ್ತು. ನೋಡು,
ಇಷ್ಟs ತಿಳಿ: ಕೆಲವರು ಹುಟ್ಟೋ ಮುನ್ನ
ತಮ್ಮ ದಾರಿ ನಿರ್ಧಾರಿ ಮಾಡಿಕೊಂಡs ಬರತಾರ
ಕೆಲವರು ಹುಟ್ಟಿದ ಮ್ಯಾಲ ಆರಿಸಿಕೊಳ್ಳತಾರೇನಪಾ.
ಆಮ್ಯಾಲ ಆರಿಸಿಕೊಂಡವರ ಎದಿ ತಟ್ಟಿ,
ಹೇಳತಾರ: ಇದ ನನ್ನ ಹಾದಿ, ನಾನs ಆರಿಸಿದೆ
ಅಂತ. ನನಗಿದೂ ಇಲ್ಲ. ನೆತ್ತರಿನಾಗ
ಇದ್ದು, ಒಂದಾಗಿ, ಒತ್ತಿ ಒತ್ತಡಾ ಹಾಕಿ, ನೂಕಿ
ದಾರಿ ತೋರೋ ಮೂಲ ಗುರು ಎಲ್ಲಿದ್ದಾನೊ!
ನಾ ಹಿಡಿದ ಹಾದೀ ನೋಡಿ ನನ್ನ ಹುಟ್ಟ, ಹೊಂದ
ಅಳದ ಸುರಿಯೋದಕ್ಕ ಇಷ್ಟೆಲ್ಲಾ ಮಂದಿ
ಕೂಡ್ಯಾರ. ನಮ್ಮಣ್ಣ ಸಿಕ್ಕಿದ್ದರ ಹೆಗಲ ಮ್ಯಾಲ
ಕೈ ಹಾಕಿ ತಮ್ಮಾ ಅಂತಿದ್ದ. ಇದ ಹೀಂಗ
ಅದ ಹಾಂಗ, ಅದಕ್ಕ ಇದs ನಿನ್ನ ಹಾದಿ ಅಂತಿದ್ದ.
ಈಗ? ಊರಾಗಿನ ಗಂಡಗೂಗಿ, ಹೆಣ್ಣಬೆಕ್ಕ,
ಕೆಮ್ಮಿನ ಮುದುಕರು-ಎಲ್ಲಾ ಸತ್ತು, ಜೋಡೆಳಿ
ಉಡದಾರ ಕಟ್ಟಿದ ಗಂಡಸರೆಲ್ಲಾ ಹೆಂಡರ
ಬದ್ದ್ಯಾಗ ಬಿದ್ದ ಬಡಬಡಿಸ್ತಿರಬೇಕ ಮಕ್ಕಳು!
ಕಾಣಬಾರದ? ನನ್ನ ಉಪಯೋಗಕ್ಕ ಬರೋವಂಥಾ
ಒಂದು ವಸ್ತುವೂ ಈ ಊರಾಗಿಲ್ಲ. ಮುಚ್ಚಿದ
ಕಣ್ಣ ತೆರೀಬೇಕನ್ನಸೋದಿಲ್ಲ. ಒಂದೊಂದ ಶಬ್ದ
ಅಂದರ ಸಾಕು, ಮಾತs ಮುಗಧಾಂಗ.
ನಾ ಹೇಳಬೇಕಾದದ್ದ ಏನೂ ಇಲ್ಲಧಾಂಗ,
ಅನ್ನಸ್ತದ. ನಾಲಿಗಿ ಚಟಕ್ಕಾಗಿ ಏನಾದರು
ಅಂದರೂ ಯಾರೋ ಮಾತಾಡಿಧಾಂಗ-ನಾನs
ಮಾತಾಡಿದೇ ಅಂತ ಅನ್ನಿಸೋದೇ ಇಲ್ಲ.
ನಗಲೊ? ಬಯಲಾಟದ ಪದಾ ಹೇಳಿ ಕುಣೀಲೊ?
ನನ್ನಮೂಗ ನಾನs ಹಿಡಿದ ಅಳಲೊ?
ಮೈತುಂಬ ಗುಲ್ಲ ಕೊಟ್ಟಕೊಳ್ಳಲೊ?
ರಾಮೂ ರಾಮಣ್ಣಾs ರಾಮಗೊಂಡಾss
ನನ್ನ ಕರಳ ಕಿತ್ತ ಮಾಲಿ ಹಾಕಬೇಕಂತೇನ
ಎಲ್ಲಿದ್ದಿಯೋ? ನನ್ನ ಎದಿ ಮ್ಯಾಲ ಭೂತ
ಬಂದ ಬಯಲಾಟ ಮಾಡತಾವ ಕಾಪಾಡೋ
ಅಣ್ಣಾ-ರಾಮಣ್ಣಾs….

(ಬಾಳಗೊಂಡ ಎರಡೂ ಕೈ ಮೇಲೆತ್ತಿ ಕಿರುಚುತ್ತಿದ್ದಾಗಲೇ ದೊಡ್ಡಾಟದತಾಂ ತಕದಿನ ತೋಂ ತಕದಿನ ತಾಂ ತಕದಿನ ತಾ| ತಯಾ| ತೋಂ ತಕದಿನ ತಾ|’ ಎಂಬ ಧ್ರುವ ದೂರದಿಂದೆಂಬಂತೆ ಕೇಳಿಸಿ ಬರಬರುತ್ತ ಸ್ಪಷ್ಟವಾಗುತ್ತದೆ. ತಾಳಕ್ಕನುಗುಣವಾಗಿ ದೊಡ್ಡಾಟದ ಸ್ತ್ರೀಪಾತ್ರದಂತೆ ಲಾಸ್ಯವಾಡುತ್ತ ಒಬ್ಬ ಯಕ್ಷಿಣಿ ಬಂದು ಧ್ರುವ ಮುಗಿದೊಡನೆ ನರ್ತನದಲ್ಲಿ ಮುಕ್ತಾಯಮಾಡಿ ನಿಂತುಕೊಳ್ಳುತ್ತಾಲೆ. ಬಾಳಗೊಂಡ ಅವಳು ಕಾಣಿಸಿದೊಡನೆ ಚಕಿತನಾಗಿ ಭಯಭಕ್ತಿಯಿಂದ ನೋಡುತ್ತಿದ್ದು ಅವಳು ನಿಂತೊಡನೆ ಮೊಣಕಾಲೂರಿ ನಮಸ್ಕರಿಸುತ್ತಾನೆ.)

ಬಾಲಗೊಂಡ : ಕಣ್ಣಲ್ಲಿ ಬೆಳಕಾಗಿ
ತುಳುಕುವ ಬಿಳಿಯ ದೇವಿ, ನೀನಾರೆಂಬ
ಕುರುಹು ಹೇಳೌ ತಾಯೆ, ಸೌಖ್ಯಪ್ರದಾಯೆ.

ಯಕ್ಷಿಣಿ : ಅಪ್ಪಾ ಬಾಲಕ, ಧೀರನಾದ ನಿಮ್ಮಣ್ಣ ರಾಮನ ಪೂಜ್ಯ
ಪಾದಕ್ಕೆ ನಮೋ ಎಂದು ಬದುಕಿದ ಓರ್ವ
ಯಕ್ಷಿಣಿ ಎಂದು ಭಾವಿಸ್ಯೆ ಕಂದಾ,
ನಿನ್ನ ಮಾತೆನಗೆ ಚಂದಾ

ಬಾಲಗೊಂಡ : ಸಂದೇಹಕ್ಕೆ ನಿಸ್ಸಂದೇಹವಾಗಿ ಹೊಳೆವ ತಾಯೇ
ನನ್ನ ಒಳಗನರಿವ ಹದನ ಹೇಳಿ,
ಸಾವವನ ಬದುಕಿಸೌ ತಾಯೇ
ಸೌಖ್ಯಪ್ರದಾಯೆ.

ಯಕ್ಷಿಣಿ : ನಿಮ್ಮಣ್ಣ ನಿನಗೊಂದು ಒಸಗೆಯನ್ನು ಇತ್ತಾನು.
ಸೆರಗೊಡ್ಡು ಕಂದಾ,-
ಮಾಣಿಕವಿದು. ಉತ್ತಮಾಂಗದಲಿ ಇದ ಧರಿಸಿ
ಹಾಲಗಡಿಗೆಯ ಮುಗ್ಧೆಯ, ಹಾಸಿಗೆ ಮಾಡಿ
ಸಹವಾಸ ಮಾಡೆ, ಅಂತ್ಯದ ತಿಳಿ ಬೆವರು
ಮಳೆಯಾಗಿ ಸುರಿಯುವುದು. ತುದಿಯಲ್ಲಿ
ತಾನೆ ಬಂದು ನಿನ್ನ ನಿಲವ ತೋರುವನು ರಾಮ.
ಅಲ್ಲಿಯ ವರೆಗೆ ಇದನಾಚರಿಸು, ಜೋಕೆಯಿಂದಿರು,
ಹರಕೆ; ಬರುವೆ ಕಂದಾ
ನಿನ್ನ ಕೃತಿಯೆನಗೆ ಚಂದಾ.

(ಬಾಳಗೊಂಡ ಅವಳು ಕೊಟ್ಟ ರತ್ನವನ್ನು ಸ್ವೀಕರಿಸಿ ಕಣ್ಣಿಗೊತ್ತಿಕೊಂಡುಆಗಲಿ ತಾಯೇ ಸೌಖ್ಯಪ್ರದಾಯೆಎಂದು ಹೇಳಿ ಮಣಿಯುತ್ತಿದ್ದಂತೆಯೇಲಾಲಿ | ಲಾಲಿಮ| ಲಾಲಿಮ| ಲಾಲಿಮ |’ ಎಂಬ ಲಾಲಿಮ ಧ್ರುವ ಕೇಳಿಸುತ್ತದೆ. ಯಕ್ಷಿಣಿ ನರ್ತಿಸುತ್ತ ಮಾಯವಾಗುತ್ತಾಳೆ. ಬಾಳಗೊಂಡ ರತ್ನ ಸಹಿತ ಎರಡೂ ಕೈ ಹೊತ್ತುಕೊಂಡು ರಂಗದ ಬಲಭಾಗಕ್ಕೆ ಹೋಗುತ್ತಾನೆ. ಈವರೆಗೆ ಯಾರ ಗಮನಕ್ಕೂ ಬಾರದೆ ಅಡಗಿಕೊಂಡ ಮುದುಕ, ಮುದಿಗೌಡ ರಂಗದ ಮಧ್ಯಕ್ಕೆ ಬಂದು ಬಾಳಗೊಂಡ ಹೋದ ದಿಕ್ಕನ್ನೇ ನೋಡುತ್ತ ಏನೋ ಎಣಿಕೆ ಹಾಕಿದಂತೆ ಗುಣಿಸಿ ತಕ್ಷಣ ಪರಿಹಾರ ಕಂಡಂತೆ ವಿರುದ್ಧ ದಿಕ್ಕಿನಲ್ಲಿ ಮಾಯವಾಗುತ್ತಾನೆ.)