ಸೂತ್ರಧಾರ : ಬಿಟ್ಟಂಥ ಬೇರ ಹರದಾವ
ಕೂಸ ಚೀರ್ಯಾವ|
ಮುಗಲ ನೋಡ್ಯವ|
ಮಣ್ಣ ಬಗದಾವ|
ಖೂನ ಗುರುತು ಎಲ್ಲಾಪಾಕ ಮರತ
ತಿರಿಗ್ಯಾವ ಸುತ್ತ ಮುತ್ತ.||

ದೂರ ದೂರ ಹಸರ ಹಾರೇತಿ
ಹಸೀ ಸರದೈತಿ|
ಬಾವಲಿ ಜೋತಾವ|
ಹದ್ದ ಹಾರ್ಯಾವ|

ಕಣ್ಣ ಮುಚ್ಚಿದಾನೊ ಒಳಗ ದೊರಿ
ಜರಾ ಕಣ್ಣ ತೆರಿ||

ಮೈಮ್ಯಾಗ ಬರಿಯಲೇನ ಗೆರಿ
ಯೋಳಪಟ್ಟಿ ಕರಿ|
ಗೆರೀಗೊಂದ ಗಂಟ|
ಗಂಟಿಗೊಂದ ತೂತ|
ತೂತಿಗೊಂದ ಕಣ್ಣ ಮಾಡಿ
ನೋಡಲೇನ ಬಿಳಿ ಮೋಡಾ.||

(ರಾತ್ರಿ ಸಮಯ. ಬಾಳಗೊಂಡ ಅತ್ತಿಂದಿತ್ತ ವಿಶ್ರಾಂತಿಯಿಲ್ಲದೆ ಅಡ್ಡಾಡುತ್ತಿದ್ದಾನೆ. ರಂಗದ ಒಂದು ಮೂಲೆಯಲ್ಲಿ ಮುದಿಗೌಡ ವೇಷಾಂತರದಿಂದ ಚಿಲುಮೆ ಸೇದುತ್ತ ಕುಳಿತಿದ್ದಾನೆ. ಸ್ಪಷ್ಟವಾಗಿ ಆತನ ಅಸ್ತಿತ್ವ ಗೊತ್ತಾಗುವದು ಮುಮದೆ ಅವನು ಕೆಮ್ಮಿದ ಮೇಲೆಯೇ.)

ಬಾಳಗೊಂಡ : ಅಪ್ಪಾ ಸೂತ್ರಧಾರ

ಸೂತ್ರಧಾರ : ಹಾ

ಬಾಳಗೊಂಡ : ಎಷ್ಟ ಭಾರ ಅದsನೊ ಈ ಮೌನ?
ಏನಾರ ಮಾತಾಡೊ,
ಈ ಮೌನ ಗಪ್ಪಗಾರಿಕಿ ಬ್ಯಾಡೊ ನನಗ.
ತುಸು ಸುಮ್ಮನಿದ್ದರೂ ಮುದಿ ಎತ್ತೊಂದ
ಹೋರಿಗೊಳ ಉಚ್ಚೀ ಮೂಸಿ ನೋಡತಾ,
ಮೈಮ್ಯಾಲಿನ ನೊಣಕ್ಕ ಬಾಲಾ ಎತ್ತಲಿಕ್ಕೂ ಆಗದ
ಎದಿಯೊಳಗ ನಿಂತ್ಹಾಂಗ ಅನ್ನಸ್ತದ: ಜೋತ ಕಿವಿ,
ಗುಳಿಬಿದ್ದ ಕಣ್ಣ, ಹರಕ ತೊಗಲ ತೊಟಗೊಂಡ
ಢುರಕೀ ಹೊಡೀಬೇಕಂದ, ಉಸರ ಹಾಕೇ ಹಾಕತದ,
ಅದನ್ನ ಕಂಡರ ನನಗ…
ಏ ಹಿಂದಿಂದೆಲ್ಲಾ ನೆನಪಾಗೋ ಹಾಂಗ ಏನಾದರೂ ಮಾತಾಡೊ.
ಹಾಂ ಹೂಂ ಅನ್ನು, ಯಾಕನ್ನು, ಏನ ಅನ್ನು-
ಏನಾರ ಮಣ್ಣ ಮಸಿ ಅನ್ನು.
ಅಂದ್ಹಾಂಗ ನಿನ್ನ ವಯಸ್ಸೆಷ್ಟ?

ಸೂತ್ರಧಾರ : ಮೂರಿಪ್ಪತ್ತರ ಹತ್ತು.

ಬಾಳಗೊಂಡ : ಈ ವಯಸ್ಸಿನಾಗ
ನಾ ಏನೇನಾಗಬೇಕಂತ ಕನಸ ಕಂಡಿದ್ದೆ!
ಕಣ್ಣಿಗಿ ಏಳ ಬಣ್ಣದ ಚಷ್ಮಾ,
ಏನ ಕಂಡಿ ಏನ ಬಿಟ್ಟಿ?
ಬಾಯಿ ತಗದರ ಹಾಡ ಉಕ್ಕಬೇಕ.
ಹರೆ ಅರಳಿ ಅದs ಪರಕಾರ ಕಳದ, ಸೀರೀ ಉಟ್ಟ
ಘಮಘಮಾ ನಾರತಾ
ಹಾಲಗಡಿಗೀ ಹಾಂಗ ಇದರ ಬಂದರ-
ತೊಡಿ, ತೋಳ, ನಡ, ರಕ್ತ ಮಾಂಸದಾಗ ಕೊಳಲ ಮಾಡಿ
ಹೊಸಾ ಹಾಡ ನುಡಿಸೇ ನುಡಿಸಬೇಕ, ನುಡಿಸೇ ನುಡಿಸಬೇಕ.
ಇಲ್ಲಿ ಬಂದರ ಒಂದ ಬಣ್ಣಿಲ್ಲ,
ಒಂದ ಸಪ್ಪಳಿಲ್ಲ, -ಹಾಳ ಹಾಳ!
ಊರಂತಾರs ಇದಕ್ಕ ಯಾರಾದರೂ?
ಕದ್ದ ಹಾದರಾ ಮಾಡಾವರೂ ಹೆದರಬೇಕಂಥಾ ಹಾಳಮನಿ;
ಬಾಗಲ ಪಡಕ ಮುಚ್ಚೋರಿಲ್ಲ, ತೆರೆಯೋರಿಲ್ಲ,
ಕರದರ ಓ ಅನ್ನೋರಿಲ್ಲ.
ಜೇಡಹುಳ ಬಲಿ ಹೆಣ್ಯಾಕ, ಹಾಂವ ಗುದ್ದಾ ತೋಡಾಕ
ಅಷ್ಟs ಯೋಗ್ಯದ ಇದು,

ಸೂತ್ರಧಾರ : ಹಿಂಗೆಲ್ಲಾ ಕಣ್ಣಾಗ ಸೂಚಿ ಚುಚ್ಚಿ
ಸರಸ ಆಡಬಾರದು ಏನಪಾ, ಮೊದಲs
ನೊಂದ ಮಂದಿ, ಹಳೀದ ನೆನಪಾದರ ಮೈತುಂಬ
ಉರುಪ ಬಿಡತೈತಿ. ಕರ್ಮ ಬೆನ್ನ ಹತ್ತಿದವರನ್ನ
ಏನಂತ ಮಾತಾಡತಿ?

ಬಾಳಗೊಂಡ : ಆಗಲಿ ಪ್ರಭೂ,
ಸುತ್ತಮುತ್ತ ಯಾರೂ ಇಲ್ಲ, ಈಗs ಖರೆ ಹೇಳೊ
ನಮ್ಮಣ್ಣನ ಕತಿಯೇನ?

ಸೂತ್ರಧಾರ : ಕೇಳೋವಂಥಾ ನೀ ಯಾರನ್ನೋದs
ನನಗ ಗೊತ್ತಿಲ್ಲ, ಕೂತ ಮಂದಿಗಿ ಗೊತ್ತಿಲ್ಲ.
ಇನ್ನ ನಿಮ್ಮಣ್ಣನ ಕತಿ ಕೇಳಿದರ ಏನ ಹೇಳಲಿ?

ಬಾಳಗೊಂಡ : ಸಣ್ಣಂದಿರತ ಇದs ತೊಡೀಮ್ಯಾಲ ತಗೊಂಡ,
ಆಡಿಸಿ, ಈಗ ನಾ ಗೌಡನ ಮಗಾನs ಅಲ್ಲ
ಅಂಬವರ ಹಾಂಗ ಹೆಸರ ಕೇಳತಿ, ನಾ ಏನ ಹೇಳಲಿ?
ಊರಂತೂರೆಲ್ಲ ನಾ ಅಂದರ ಹೊಳಿಗಿ ಬಂದ
ಹೆಣಧಾಂಗ ಮೂಗ ಮುಚ್ಚತೀರಿ.
ನನ್ನ ಕಂಡ ಕೂಡಲೆ ಕಳಕೊಂಡದ್ದ ನೆನಪಾಧಾಂಗಾಗಿ
ಅದನ್ನ ಭರ್ತಿ ಮಾಡಿಕೊಳ್ಳಾಕ ಒದರಿ ಒದರಿ
ಓಡಿತೀರಿ. ನಾ ಏನ ದೆವ್ವನs? ಭೂತನs?
ನನ್ನ ಉಗಳ ಸಿಡಿದರ ಮೈಲಿಬ್ಯಾನಿ ಬರತದನ?
ನಾ ದಾಟಿ ಹ್ವಾದಮ್ಯಾಲ ಹೆಂಗಸರ ಹಾಂಗ
ಗುಂಪುಗೂಡಿ ಮಾತಾಡತೀರಿ. ಏನ ಏನಿದರ ಅರ್ಥ?
ನಾ ಬರಬರಾ ಬರಬೇಕಂದರೇನ?
ಊರ ಅಗಸ್ಯಾಗ ಮೂರ ಹೆಜ್ಜಿ ಇಡಬೇಕಂದರೇನ?
ಫಳಫಳ ಮಳಿ ಬರಬೇಕಂದರೇನ? ಮಳಿ
ತರತೇನಂತ ಮಾತ ಕೊಟ್ಟಿದ್ನೇನ ನಿಮಗ?
ಮಳಿ ಬರಲಿಲ್ಲ; ಅದರಿಂದೇನ ಸಿದ್ಧ ಆದ್ಹಾಂಗಾಯ್ತು?
ಮರದಿನ ಪಾಟೀಮ್ಯಾಲಿನ ಅಕ್ಷರ ಅಳಿಸಿದಷ್ಟ
ಸಸಾರಾಗಿ ನನ್ನ ಹೆಸರಿ ಮರತ ಕುಂತಿರಿ.
ನಾ ಇಷ್ಟ ಮಾತಾಡಿದರೂ ನಿನ್ನ ಎದ್ಯಾಗ
ನನ್ನ ಒಂದ ಬೇರ ಕೂಡ ಅಳಕಲಿಲ್ಲೇನು?

ಸೂತ್ರಧಾರ : ಅಪ್ಪಾ ಬಾಲಕಾ, ನಿನ್ನ ನಾಮಾಂಕಿತವೇನು? ಅದs
ಗೊತ್ತಿಲ್ದ ಹಿಂದಮುಂದಿಂದ ಹೆಂಗ ಹೇಳಲಿ?

ಬಾಳಗೊಂಡ : ಏ -ನಿಮ್ಮನ್ನ ಕೊಂದ ಬೆಳಗಾಂವ್ಯಾಗ
ಚರ್ಮದ ಅಂಗಡಿ ಇಡೋವಂಥಾ ಕಸಾಬಂತ ತಿಳಕೊ!
ನಿಮ್ಮ ಹೆಜ್ಜ್ಯಾಗ ನವಣಿ ಬಿತ್ತಿ ರಾಶಿ ಒಕ್ಕೋವಂಥಾ
ದುರಗವ್ವನ ಬ್ಯಾನಿ ಅಂತ ತಿಳಕೊ!
ಪಾರಂಬಿ ಕಡದ ಸಿವುಡ ಮಾಡಿ ಸುಡೋವಂಥಾ
ಕೊಳ್ಳೀದೆವ್ವಂತ ತಿಳಕೊ! ಸಾಕೊ ಬೇಕೊ!
ಇನ್ನ ಹೇಳ ಆ ಕತೀಯಾದರು ಖರೆ ಏನು?

ಸೂತ್ರಧಾರ : ಕತಿ ಯಾವತ್ತು ಖರೆ ಇರತಾವೇನಪಾ.

ಬಾಳಗೊಮಡ : ಗೌಡಗೊಬ್ಬ ಬಾಳಗೊಮಡಂತ ಮಗ ಇದ್ದದ್ದ
ಆ ಕತ್ಯಾಗಿಲ್ಲೇನು?

ಸೂತ್ರಧಾರ : ಗೌಡ್ತಿಗೊಬ್ಬ ಅಂಥ ಮಗ ಇದ್ದದ್ದ ಖರೆ.

(ಚಿಲುಮೆ ಸೇದುವ ಮುದುಕ ಕೆಮ್ಮತೊಡಗುವನು.)

ಬಾಳಗೊಂಡ : ಅವನs ನಾ ಅಂತ ತಿಳಿದು ಆ ಕತಿ ಹೇಳು.

ಮುದುಕ : ತಮ್ಮಾ, ನಾವ್ ಸುರಕೊಳ್ಳೋ ನಶೀಬ ನನಗೂ
ಬೇಕಂತ ಹಟ ಯಾಕೋ ನಿನಗ? ನನ್ನ ಮಾತ
ಕೇಳೇನಂದರ ಸುಮ್ಮನ ಕಲ್ಯಾಕಿದ್ದ ಊರಿಗಿ
ತಿರಿಗಿ ಹೋಗಿ ಹುಡಿಗೇರ ಬೆನ್ನಹತ್ತಿ ಸಿಳ್ಳಹೊಡಿ ಹೋಗು.
ಮಾಡಿದವರ ಉಣ್ಣತಾರ ಮಾಡಿದಂಥಾ ಕರ್ಮ.
ನೀ ಮಾಡೋದರೊಳಗs ಇರಲಿಲ್ಲ, ಉಣ್ಣೋದರೊಳಗ
ಯಾಕ? ತಿರಿಗಿ ಕೇಳಿದರ ನಮ್ಮ ಕರ್ಮದ
ಹಿಂದ ಮುಂದಾದರೂ ನಿನಗೇನ ಗೊತ್ತೈತಿ?

ಬಾಳಗೊಂಡ : ಖರೆ, ನನಗೇನ ಗೊತ್ತದ?
ನಿಂತ ಈ ಹಾದಿ ಯಾರ ಮನಿಗಿ, ಯಾವ ಓಣಿಗಿ
ಒಯ್ತದs ಅಂತ ಗೊತ್ತಿಲ್ಲ. ಯಾರ್ಯಾರಿಗಿ ಎಷ್ಟೆಷ್ಟ
ಮಕ್ಕಳಂಬೂದ ಗೊತ್ತಿಲ್ಲ. ದೂರ್ಯಾಕ?
ನಮ್ಮ ಮನೀ ಒಬ್ಬ ಹಳಬಂದೂ ಗುರತಿಲ್ಲ.
ಆದರ ಕತಿ ತಿಳದ ಮ್ಯಾಳ ನಾನೂ ಭಾಳಿಲ್ಲ,
ತುಸುವಾದರೂ ನಿರ್ಧಾರ ಕೈಕೊಳ್ಳಬೇಕು,
ನಾನೂ ನನ್ನ ಪಾಲಿನ ಮಾತ ಆಡಬೇಕು,
ಮಾಡಬೇಕು-ಅದಕ್ಕಾಗಿ ಹೇಳು.

ಮುದುಕ : ನೀ ಆಡಿಮಾಡೋದರಿಂದ ಮುಂದಿನ ಕತಿ
ಬದಲಾಗತೈತೆಂತ ತಿಳಕೋಬ್ಯಾಡೋ ತಮ್ಮ.
ಮಾಡೋದೆಲ್ಲ ಮುಗದು ಸುರಕೊಳ್ಳೋದೊಂದs
ಈಗ ಉಳದೈತಿ. ಆತು ಸುರಕೋತೀವು.
ಕೇಳಿದರೆ ಕಿವಿಗುಂಟ ಸೀಸಾಗಿ ಒಲಗಿಳಿಯೋದನ್ನ
ಕೇಳೇನಂಬೊ ಹಟ ಯಾಕೊ ನಿನಗ?
ಈ ಹರೆ, ಈ ರೂಪಕ್ಕ ಈ ಬಿರಸ ಕತಿ ಒಪ್ಪಾಣಿಲ್ಲ.
ಕನಸ ಮೂಡೋ ಕೆಂದ ತೊಗಲಿಗಿ
ಅಲಾಬಿ ಹುಲೀ ಬಣ್ಣಾ ಬಳೀಬಾರದೇನಪಾ.
ಎಳಕಿದ್ದಿ, ನನ್ನ ಮಗನ ಸರಿ ಅಂತ ಬುದ್ದಿ
ಹೇಳತೇನು, ಸುಮ್ಮನ ಈ ಊರ ಬಿಟ್ಟ ಹೋಗಿಬಿಡ.

ಬಾಳಗೊಂಡ : ಹೋಗಲಿ ಅಜ್ಜಾ, ಊರಿಗಿ ಹೋಗಿ ನನ್ನ
ಹುಡಿಗೇರ ಹುಸಿ ಸಿಟ್ಟ ಶಾಂತ ಮಾಡೋದಕ್ಕಾದರೂ
ಈ ಕತಿ ಹೇಳಬಹುದು. ನಡದ ಹಕೀಕತ್ತ ಏನದು?

ಮುದುಕ : ನಿನ್ನ ಹಟ ಕೇಳಿ ನನ್ನ ಮಗಂದs ನೆನಪಾಗತೈತಿ.
ಅದs ದಿಗರಾ, ನಿಲಿವಿಕಿ, ಅದs ನದರಾ…
ಕತಿ ಕೇಳಾಕ ನಿನ್ಹಾಂಗ ಬಲೆ ಹುರುಪ ಅವನೂ,
ಆಗ ನೋಡಪಾ, ಏನ ಕನಸ ಬಿದ್ದರೂ ಅವನ ಸುತ್ತಮುತ್ತs:
ಮಗಾ ದೊಡ್ಡಾಂವಾಗಿ ಹೊಲಮನಿಗೆಲ್ಲ ಮಾಲಕ ಆಗತಾನ,
ಹಂಗಾಮದಾಗ ಹೊಲಾ ಉತ್ತಿ ಬೀಜಾ ಬಿತ್ತತಾನ….
ಹೊಲ ತುಂಬ ಬೆಳಿ…. ದಂಟಿಗೆಂಟ ತೆನಿ,
ತೆನಿಗಿ ನಾಕ ಹಕ್ಕಿ, ಹರ್ಯಾಗೊಮ್ಮಿ ಸಂಜಿಕೊಮ್ಮಿ
ಹಾಡೇ ಹಾಡತಾವ: ಬೀಜಧಾಂಗ ಬೆಳಿ! ಬೀಜಧಾಂಗ ಬೆಳಿ!
….ಛೇ! ಎಷ್ಟಂದರೂ ರಂಡೀs ಮಗಾ.

ಬಾಳಗೊಂಡ : ಯಾಕ ಏನ ಮಾಡಿದಾ?

ಮುದುಕ : ಕುಲಕಣ್ಣಿ ಪುಸ್ತೇಕ ಬರ‍್ಕೋವಾಗ, ನಿಮ್ಮಪ್ಪನ ಹೆಸರೇನಂದರ, – ನಂದ ಬಿಟ್ಟ ತಮ್ಮವ್ವನ ಹಳೀ ಗಂಡನ ಹೆಸರ ಹೇಳಿಬಿಟ್ಟ. ನನ್ನ ತೊಡಿ ಮಣಕಾಲ ಮ್ಯಾಲ ಮೂರ ಬರೆ ಥೂ ಥೂ ಥೂ ಉಗಳಿಧಾಂಗಾತ. ಆಮ್ಯಾಲ ಸುಡಗಾಡ ಗಟ್ಟ್ಯಾಗ ಭೆಟ್ಟ್ಯಾದ. ನಾ ಬಿಟೇನ? ಹೇಳ ಮಗನs ನಿಮ್ಮ ಅಪ್ಪನ ಹೆಸರೇನ?

ಬಾಳಗೊಂಡ : ಏನಂದ?

ಮುದುಕ : ನೀ ಏನಂತಿ?

ಬಾಳಗೊಂಡ : ನಾ ಏ ಅನ್ನಲಿ?

ಮುದುಕ : ನೀನs ಅವನಾಗಿದ್ದರ ಏನಂತಿದ್ದಿ?

ಬಾಳಗೊಂಡ : ನಾ ಯಾಕ ಅವನಾಗಲಿ?

ಮುದುಕ : ನಿನ್ನ ಪಾಲಿನ ಮಾತ ಆಡಬೇಕಂತಿದ್ದೆಲ್ಲ-ಆಡು.

ಬಾಳಗೊಂಡ : ಛೇ ಛೇ! ನಾ ಏನಾಡಲಿ? ಅವನ ಮೆಟ್ಟ
ನಾ ಹೆಂಗ ಮೆಡ್ಲಿ? ಅಥವಾ
ಒಬ್ಬ ಮನುಷ್ಯ ಇನ್ನೇನಾಗೋದ ಸಾಧ್ಯ?
ಮುದುಕಾ ನಿನ್ನ ಹೆಸರೇನಾ?

ಮುದುಕ : ಯಾವನರೆ, ಬಾಳ್ಯಾ ಬಸ್ಯಾ ಅನ್ನು. ಯಾ ಹೆಸರಲೆ
ಕರೆದರೂ ಮೊದಲಿನ್ಹಾಂಗ ಸಿಟ್ಟs ಬರಾಣಿಲ್ಲ.

ಬಾಳಗೊಂಡ : ಅಜ್ಜಾ, ಲಗು ಹೇಳ, ಅವನೇನಂದ?

ಮುದುಕ : ಕಡ್ಡೀ ಮುರದಾ, ಎರಡ ತುಂಡ ಮಾಡಿದಾ,
ನನ್ನ ಕೈಯಾಗೊಂದ ಕೊಟ್ಟಾ, ತನ್ನ ಕೈಯಾಗೊಂದ ಹಿಡಿದಾ,
ಹೇಳಿದ: ನಿನ್ನ ಮಾತ ಖರೆ. ಅಪ್ಪಿಲ್ಲದs ಮಗ
ಹುಟ್ಟಾಣಿಲ್ಲ- ಅಂದ, ಹೋದ. ನೀ ಏನಂತಿ?

ಬಾಳಗೊಂಡ : ಮುದುಕಾ ಒಂದs ಉಸರಿನ್ಯಾಗ
ಹೇಳಿಬಿಡು: ಗೌಡ-ಅಂದರ ದೊಡ್ಡಗೌಡನ,
ಕತಿ-ಅಂದರೆ ಆದ ಮಜಕೂರ,
ಏನೇಂದರ-ಖರೆ ಏನು?

ಮುದುಕ : ಕಡ್ಯಾಕ ಹೊಂಟವರ್ಹಾಂಗ ಇಷ್ಟ್ಯಾಕ ಅವಸರ
ಮಾಡತೀಯೋ ತಮ್ಮ?

ಬಾಳಗೊಂಡ : ಅವಸರ ಮಾಡಂದ್ರ-
ಇನ್ನೊಂದ ನಾಲ್ಕ ದಿನಕ್ಕ, ಬ್ಯಾಡ ನಾಲ್ಕು ತಾಸಿಗಿ,
ಅದ್ಯಾಕ ಇನ್ನೊಂದ ಗಳಿಗ್ಗಿ ನಾ ಹ್ಯಾಂಗಾಗಬಹುದು,
ಹ್ಯಾಂಗಿರಬಹುದು-ಒಂದೂ ಗೊತ್ತಿಲ್ಲ.
ನಾ ಅಂದಕೊಂಡಷ್ಟು ಕೂದಲಾದರೂ ತಲೀಮ್ಯಾಲ
ಇರತಾವೊ ಇಲ್ಲೊ, ಲಗು ಹೇಳ.

ಮುದುಕ : ಸಿಟ್ಟಿಗೇಳೋದಂದ್ರ ಹರೆದವರ ಹಕ್ಕಿನ ಚೈನಿ
ಏನಪಾ. ಇಷ್ಟ ಗಟ್ಟಿದ್ದರ ಹೇಳತೇನ ಕೇಳ:
ಆಯ್ತು, ಇಂದಿಗಿ ಐದ ಕಡಿಮಿ ಎರಡಿಪ್ಪತ್ತು ವರ್ಷದ
ಹಿಂದಿನ ಮಾತೇನಪಾ. ಅದs ಆಗಳೆ ಅಂದೆನಲ್ಲ-
ನನ್ನ ರಂಡಿ ಹಿರೀಮಗನ್ನ ಅದs ಹಡದಿದ್ದಳು.
ಏನ ದಿನಮಾವು! ಉಡ್ಯಾಗ ಚೈನೀ ಕಟ್ಟಿಕೊಂಡ
ತಿನ್ನಕೋತ ತಿರಗ್ಯಾಡಬೇಡ! ಬಿತ್ತೋದಷ್ಟs ತಡ,
ಹೊತುಂಬ ಬೆಳಿ, ಕಣತುಂಬ ರಾಶಿ, ಮನಿತುಂಬ ಕಾಳ!
ಆಗಿನ ಹೆಂಗಸರ ಹಂತವರಂತಿ? – ನಡಾ ಹಿಡಿದ
ಅಲಗಿದರ ನಾಕೈದ ಕೂಸ ಹಾಂಗs ಬೀಳಬೇಕ!
ಪಾರಿ? ಹೊಲೇರ ಪಾರಿ ಇಲ್ಲ?-ಆಕಿ ಊರಾಗ
ಹೊಕ್ಕರ ಹಾಡಾಹಗಲಿ ಸಂದಿಗೊಂದ್ಯಾಗ ಹಾಯೋಹಾಂಗs
ಇರಲಿಲ್ಲ. ಆಕೀ ಮಗಳ ಕಮಲೀಕಿಂತ ಕಣ್ಣ ಮೂಗಲೆ
ಚೆಲಿವಿ ಪಾರಿ. ಅಂಧಾಂಗ ಕಮಲೀನ
ನೋಡಿಯೊ ಇಲ್ಲೊ?

ಬಾಳಗೊಂಡ : ಕತಿ ಹೇಳ ಮಾರಾಯ.

ಮುದುಕ : ಹೂಂ ಆಗ ನೋಡಪಾ, ಯೋಳಪಟ್ಟಿ ಹುಲಿ ಬಂದ
ಯೋಳೆಂಟ ದನಾ ತಿಂದ, ಬ್ಯಾಟಿ ಆಡಾಕ ಗೌಡ ಹ್ವಾದ.
ಹ್ವಾದ ಹ್ವಾದ ಅತ್ತs ಹ್ವಾದ.
ಹೊತ್ತ ಮುಣಗಿ ಕೆತ್ತಲಾದರೂ ಗೌಡನ ಸುದ್ದಿಲ್ಲ.
ಜನ ಕತ್ತಲಂತಿ? ಕತ್ತಲಿ ಕೆಸರಾಗಿ
ಕಣ್ಣಿಗೆಲ್ಲ ಮೆತ್ತಿ ನನ್ನ ಮೋತಿ ನಿನಗಿಲ್ಲ, ನಿಂದ ನನಗಿಲ್ಲ.
ಯಾರೋ ಗುಗ್ಗಳ ಹೋಗಿ ಬ್ಯಾರಿ ಹಾಕಬೇಕs ಸುಟ್ಟಬರಲಿ?
ಯಾರ್ಯಾರ ಎಲ್ಲೆಲ್ಲಿದ್ದರ ಅಲ್ಲೆ ನಿದ್ದಿ!
ಹರೀವತ್ತರ ಕೈಮಾರ ಹೊತ್ತೇರಿದ ಮ್ಯಾಲ
ನೋಡತೇನು: ಎಲಾ, ಮೊದಲಿದ್ದ ನಮ್ಮೂರ ಕೆಡಿಸಿ
ದೇವರು, ಹೊಸದಾಗಿ ಮಾಡಿರಬೇಕೇನಪಾ!
ಮನಿ, ಓಣಿ, ಗುಡಿ, ಎಲ್ಲಾ ಅದಲಬದಲ!
ನಿನ್ನಿ ಕಂಡ ಹರೇದ ಹುಡಗೋರೆಲ್ಲ ಇಂದ
ಮುದುಕರಾಗಿ ಆಕಳಿಸಾಕ ಹತ್ತ್ಯಾರ! ಶಿವನs
ಮಾದೇವನs ಏನಾತಿದಾ? ನನಗರೆ ನೋಡಪಾ-
ಖರೆ ಹೇಳಿದರು ಕೇಳತಿ, ಖೊಟ್ಟಿ ಹೇಳಿದರು ಕೇಳತಿ,-
ಬೆರಗs ಬೆರಗ! ನನಗೂ ಒಂದ ಆಕಳಿಕಿ
ಬಂತಪಾ. ಹೀಂಗ ಆಕಳಿಸಿ ಚಿಟಕಿ ಹೊಡದ
ನೋಡತೇನು: ಇದರಿಗಿ ನಿಮ್ಮಣ್ಣ ರಾಮಗೊಂಡ! ಕಣ್ಣಮೂಗಿಲ್ಲ.
ಕಿವಿ ನಾಲಿಗಿಲ್ಲ, ತೊಗಲಿಲ್ಲ, ನಿಂತ ಬಿಟ್ಟಿದ್ದಪಾ
ಮತ್ತ ನಕ್ಕೋತ! ಅಂದಿಂದ ಹಿಂಗs ಆಕಳಿಸಿ
ಆಕಳಿಸಿ ಆಯುಸ್ಸೆಲ್ಲಾ ಆಗಿಹೋತ. ಇಂದಿಲ್ಲಿ
ನಾಳಿ ಗೋರ್ಯಾಗ, ನಡುವ ಬಂದ ನೀ ಕೇಳಿದಿ
ನಾ ಹೇಳಿನು.

ಬಾಳಗೊಂಡ : ಈಗ ರಾಮಗೊಂಡ ಎಲ್ಲಿ?

ಸೂತ್ರಧಾರ : ಅವನೆಲ್ಲಿ ಸಿಗತಾನ? ಇಂದ ಎದ್ಯಾಗ
ನಾಳಿ ನೆನಿಪಿನ್ಯಾಗ, ಮರತೇನಂದರ ಮರ್ಯಾಕಿಲ್ಲ.
ಬಿಟ್ಟೇನಂದರ ಬಿಡಾಕಿಲ್ಲ, ಆಳದೊಳಗೆ ಒಂದಳತಿ
ಚುಚ್ಚೇ ಚುಚ್ಚತಾನ. ಕನ್ನಡಿ ಕಂಡರ
ಅವನs ಮೂಡಿ ಬಂದ, ಒದ್ದಿಗೈಲೆ ಮೈ ಸವರಿ
ಕುಲುಕುಲು ನಗತಾನ. ಆ ನಗಿ ನಮ್ಮ
ತುಟ್ಯಾಗ ಹೆಪ್ಪಹಾಕಬೇಕನ್ನೂದರಾಗs
ಕಿಲಬ ಹಿಡದ ನಾರತೈತಿ. ನಾರೂ ನಗಿ ನಕ್ಕ ನಕ್ಕ
ನಾವs ಕನ್ನಡಿ ಆಗತೀವು, ನೆರಳ ಆಗತೀವು,
ಕಟ್ಟಕಡೀಕ ಏನ ಆಗತೀವಂದರ,
ಏನ ಆಗತೀವಂದರ…

ಬಾಳಗೊಂಡ : ಏನ ಏನಾ?

ಮುದುಕ : ಏನೂ ಇಲ್ಲ. ಕವಿಗಾರ ಕವಿ ಮಾಡಿ ಹೇಳೋ ಹಾಂಗ ಆತ ಅವನ ಕತಿ; ತಮ್ಮಾ ಏನ ಹೇಳಲಿ?

ಬಾಳಗೊಂಡ : ಹಾಂಗೆಲ್ಲಾ ನನಗ್ಯಾಕ ಅನ್ನಸೋದಿಲ್ಲ?

ಮುದುಕ : ಹ್ಯಾಂಗನ್ನಸಬೇಕು? ನನ್ನ ಹಣಿಮ್ಯಾಲಿಂದ ಇದೇನ ಹೇಳು?

ಬಾಳಗೊಂಡ : ಒಲ್ಯಾಗಿನ ಬೂದಿ.

ಮುದುಕ : ಇದ ನಮಗ ದೇವರ ಪರಸಾದ ಏನಪಾ.
ಏಕದಮ್ಮ ಎಷ್ಟ ದೂರ ಹ್ವಾದಿ ನೊಡು!

ಬಾಳಗೊಂಡ : ಬ್ಯಾಡೊ ಮುದುಕಾ ತಡಿಯೊ. ಒಮ್ಮಿಂದೊಮ್ಮೆಲೆ ಹೀಂಗ ತೂರಬ್ಯಾಡೊ…
ಅಥವಾ, ನಿಮ್ಮ ಜೋಡಿ ನಾ ರಾಜಿ ಯಾಕ ಮಾಡಿಕೊಳ್ಳಲಿ?
ನೀವು ಹೇಳಿಧಾಂಗ, ಹೇಳಿದಷ್ಟ, ಅಳತಿ ಮಾಡಿ
ಬೆಳ್ಯಾಕ ನಾಯೇನ ನಿಮ್ಮ ಕುಂಡದಾಗಿನ
ಹೂವಿನ ಬಳ್ಳಿ ಅಲ್ಲ. ಕಸುವಿದ್ದರ ಬೆಳದೇನು
ಇಲ್ಲಾಂದರ ಕಮರೇನು, ಏನಂತಿ?

ಮುದುಕ : ನಾನೂ ಅದನ್ನ s ಅಂತೀನೋ ತಮ್ಮ,
ನಿನ್ನ ಬೆಳಸಾಕ ನಾವೇನ ನೀರಾಗಿಲ್ಲ, ಗೊಬ್ಬರಾಗಿಲ್ಲ.
ಅದಕ್ಕs ನೀ ಇಲ್ಲಿ ಬೇರ ಬಿಡಲಿಲ್ಲ.
ಕಾಗೀ ಬಳಗದಾಗ ಕೋಗಿಲ ಹ್ಯಾಂಗಿರತೈತಿ ಹೇಳು?

ಸೂತ್ರಧಾರ : ಕೋಗಿಲ ಹುಟ್ಟಿದ್ದಾದರೂ ಕಾಗೀ ಗೂಡಿನೊಳಗs
ಅಲ್ಲೇನ? ಇದಕ್ಕೇನಂತಿ?

ಮುದುಕ : ನಿನಾಪ್ಪನ ಮತ್ತು ಅದನs ತೀಡತಾನಲ್ಲೊ,
ಕೋಗಿಲ ಬೆಳದ ಮ್ಯಾಲ ಕಾಗೀ ಬಳಗದಾಗ
ಇರತೈತೇನ ಹೇಳಂತೀನು.

ಬಾಳಗೊಂಡ : ಖರೆ, ಏ ಹಳಬಾ.

ಹಳಬ : (ಪ್ರವೇಶ) ಬಂದೇನ್ರಿ, ಧನಿ.

ಬಾಳಗೊಂಡ : ನನ್ನ ಬಿಳೀಕುದರಿ ಬಿಚ್ಚಿಕೊಂಬಾ ಹೋಗು

ಹಳಬ : ಇಂಥಾ ರಾತ್ರ‍್ಯಾಗ ಹಿಂಗs ಹೋಗತೇರಿ?

ಬಾಳಗೊಂಡ : ಮತ್ತ ಯಾವಾಗ ಹೆಂಗ ಹೋಗಬೇಕಂತಿ?

ಹಳಬ : ಬರಿಗೈಲೆ ಹಾಂಗs ಹೋಗತೇರಿ?

ಬಾಳಗೊಂಡ : ಇನ್ನೇನ ತುಂಬಿಕೊಂಡ ಹೋಗಬೇಕಂತಿ?

ಹಳಬ : ಗೌಡ್ತಿ ಕೇಳಿದರ ಏನ ಹೇಳಲಿ?

ಬಾಳಗೊಂಡ : ಬ್ಯಾರೇ ಕಡೆ ಬೇರ ಹುಡಕೋದಕ್ಕ ಹೋದಂತ ಹೇಳು.

ಹಳಬ : ದೊಡ್ಡಗೌಡ ಕೇಳಿದರ…

ಬಾಳಗೊಂಡ : ಸಣ್ಣಗೌಡ ಸತ್ತಂತ ಹೇಳು.

ಹಳಬ : ಯಾಕ ಹ್ವಾದಂತ ಕೇಳಿದರ…

ಬಾಳಗೊಂಡ : ಇರಲಿಕ್ಕೇನೂ ಕಾರಣ ಇಲ್ಲದ್ದಕ್ಕ ಹೋದಂತ ಹೇಳು.

ಹಳಬ : ನಿಮ್ಮ ಕಡೆ ಮಂದಿ ಕಾರಣ ಇದ್ದಾಗ ಬದಕತಾರೇನ್ರಿ?

ಬಾಳಗೊಂಡ : ಹೇಳಿದಷ್ಟ ಕೇಳು. ಸರಳ ಹೋಗು, ತಡೀ ಹಾಕು,
ಕುದರಿ ಬಿಚ್ಚು, ಹೋದ ಹಾದೀ ಹಿಡದ
ಎಡಕ್ಕ ಎಡಾ ಅನ್ನಬ್ಯಾಡ. ಬಲಕ್ಕ ಬಲಾ ಅನ್ನಬ್ಯಾಡಾ.
ಯಾರ ಕೇಳಿದರೇನೂ ಹೇಳಬ್ಯಾಡಾ.
ತಿಳೀತೊ ಇನ್ನೊಮ್ಮಿ ಹೇಳಲ್ಯೊ?

ಹಳಬ : ತಿಳೀತೆಪ್ಪ ತಿಳೀತು. (ಹೋಗುವನು)

ಮುದುಕ : (ಎದ್ದು ಕೈಮುಗಿದು)
ಬಾಳಗೊಂಡಾ, ಬಂದ ಕೆಲಸಂತೂ ಗಂಡಾತು.
ನಿನ್ನ ಹುಡಿಗೇರ ಮುಂದ ಆ ಕತಿ ಹೇಳೋವಾಗ
ಈ ಮುದುಕಂದಷ್ಟ ಹೇಳಾಕ ಮರೀಬ್ಯಾಡಪಾ ಮತ್ತ.

ಬಾಳಗೊಂಡ : ಏನ ಹೇಳಲಿ?

ಮುದುಕ : ಹಿಂಗ ಏನರೆ, ಹಿಹಿ ಬೀಜಧಾಂಗ ಬೆಳಿ…
ಬೀಜಧಾಂಗ ಬೆಳಿ…. (ನಿಷ್ಕ್ರಮಿಸುವನು)

ಬಾಳಗೊಂಡ : ಅಪ್ಪಾ ಸೂತ್ರಧಾರ.

ಸೂತ್ರಧಾರ : ಹಾಂ

ಬಾಳಗೊಂಡ : ಕಡೀದೊಂದ ಮಾತ ನಡಿಸಿಕೊಡತೀಯೇನು?

ಸೂತ್ರಧಾರ : ಏನ ಹೇಳಲ್ಲ.

ಬಾಳಗೊಂಡ : ಯಾವುದಾದರು ಹುಡಿಗಿ ಬಂದ, ನನ್ನ ಗುರುತಾ ಹೇಳಿ
ಹುಡಿಕ್ಯಾಡಿದರ, ನಿನ್ನ ದೊರಿ ಊರ ಬಿಟ್ಟ ಹೀಂಗs
ಹೋದಂತ ಹೇಳು.

ಸೂತ್ರಧಾರ : ಅಪ್ಪಾ, ಕೆಟ್ಟ ಕಾಲ ಬಂದ ಗಂಡುಳ್ಳ ಬಾಲೇರಸೈತ
ಗಂಡ ಗಂಡಸರನ್ನ ಸಿಕ್ಕಾರೊ ಸಿಗಾಕಿಲ್ಲೊ ಅಂತ
ಹುಡಿಕ್ಯಾಡಿ ತಿರಗತಾರ. ನನಗ ನಿನ್ನ ಹುಡಿಗಿ
ಗುರುತ ಏನ? ಆಕಿ ಖೂನ ಗುರುತ ಹೇಳಿದರ
ನಾನಾದರೂ ನಿನ್ನ ಸುದ್ದಿ ಹೇಳೇನು.

ಬಾಳಗೊಂಡ : ಹೂವಂದರ ಹೂವಲ್ಲ, ಮಗ್ಗಿ ಅಂದರ ಮಗ್ಗಿ ಅಲ್ಲ-
ಮುಗ್ಧ ಬಾಲಿ ಬಂದು ನನ್ನ ಗಡಿಗಿ ಹಾಲ ಕುಡದ
ಧೀರನ್ನ ಯಾರಾದರೂ ಕಂಡೀರೇನಂದರ ಅದs
ಗುರುತ ನೋಡು.

ಸೂತ್ರಧಾರ : ಅಪ್ಪಾ, ಹರದಾಡೋ ಹರೇದ ಬೆಕ್ಕಗೋಳನ್ನ
ಮುದಿಕೇರ ಸೈತ ಕದ್ದ ಕರದ ತಮ್ಮ ಹಾಲಗಡಿಗಿ
ಮ್ಯಾಲ ಮುಚ್ಚಿಕೋತಾರ. ನೀ ನೆಕ್ಕಿದ
ಗಡಿಗಿ ಗುರುತಾ ಹೆಂಗ ಹಿಡೀಲಿ?

ಬಾಳಗೊಂಡ : ಹೊತ್ತು ಮುಳಗಿತ್ತು, ಇಲ್ಲ, ಅಂಥಾ ಹೊತ್ತಿನ್ಯಾಗ
ಮುಕ್ಕಾಗದ ಗಡಿಗ್ಯಾಗಿನ ಹಾಲ ಕುಡದ ಹಾರ
ಕೊಟ್ಟ ಹೋದಾಂವೆಲ್ಲಿ-ಅಂದರ, ಅದs
ಗುರುತ ನೋಡು.

ಸೂತ್ರಧಾರ : ಹಾಂಗಿದ್ದರ ನಾನಾದರೂ ಹೇಳೇನು, ನೀನಾದರು
ನಿಶ್ಚಿಂತನಾಗಿ ಹೋಗುವಂಥವನಾಗು.