(ಪೂರ್ವರಂಗ ಮುಗಿದುದು. ಸೂತ್ರಧಾರ ಪ್ರೇಕ್ಷಕರನ್ನು ಕುರಿತಾಗಿ ಸ್ವಗತ ಭಾಷಣವೆಂಬಂತೆ ಮಾತಾಡುತ್ತಿರುವಾಗ ಹಿಂದಿನವರೆಲ್ಲ ಗದ್ದಿಗೆಯ ಸುತ್ತ ಸೇರಲಾರಂಭಿಸುತ್ತಾರೆ.)

ಸೂತ್ರಧಾರ : ಕಾಯೋದ, ಹಾದೀ ನೋಡೋದ, ಕಾಯೋದ,-
ಮಾಡಾಕೇನೂ ಇಲ್ಲದ್ದಕ್ಕ ಕಾಯೋದ,
ನೋಡಾಕೇನೂ ಇಲ್ಲದ್ದಕ್ಕ ಕಾಯೋದ,
ಕಿರಿಬೆರಳ ಚಿವುಟಿದರು ಎಚ್ಚರಾಗದಷ್ಟು
ಮೈ ಮರಗಟ್ಟೋತನಕ ಕಾಯೋದ,-
ಹಳೀ ನೋವಿನ್ಹಾಂಗ ಎಲ್ಲೋ ಅಳಕತೈತಿ;
ನಮ್ಮನ್ನೇನ ಈ ತೆಪ್ಪ ಉಳಸಾಣಿಲ್ಲ.
ಮುಳಗೋದ ತಪ್ಪಸಾಣಿಲ್ಲ,
ಈಸಿ ಬರೋ ತಾಕತ್ತಿಲ್ಲ.
ಆದರ ನಂಬಾಕ ಮನಸ ಆಗಾಣಿಲ್ಲ.
ಯಾಕಂದರ ತೆಪ್ಪs ಇಲ್ಲ!
ದೇವರs, ನಾವ ಮಾಡತಾ ಇದ್ದದ್ದ ನಮಗs
ಗೊತ್ತಾದರ ಏನ ಮಾಡೋಣು?
ಹೊತ್ತ ಮುಣಗಿ ಕತ್ತಲಾತ ಇನ್ನೂ ಬರಲಿಲ್ಲಲ್ಲೊ!

ಇರಿಪ್ಯಾ : ಭರಿಮ್ಯಾ ಒಬ್ಬ ಹ್ವಾದಾ, ಭಾಳ ಹಳಹಳಿ
ಆತ ಮಾರಾಯಾ!

ಗುರ್ಯಾ : ಬಿಕನೇಸಿಗೋಳಿದ್ದರ ಇಷ್ಟ ಆಗೋದs ಮತ್ತ,
ಅದಕೇನ ನಾ ಇಲ್ಲ, ನೀ ಇಲ್ಲ.

ಯಮನ್ಯಾ : ಆದದ್ದರ ಏನ ಹೇಳ್ರೊ ನಮಗsಟು.

ಇರಿಪ್ಯಾ : ಸಜ್ಜನ ಬಂದ ನೋಡ್ರೆಪಾ, ಗೊತ್ತಿಲ್ಲದವನ್ಹಾಂಗ
ಆಡತೀಯಲ್ಲೊ.

ಯಮನ್ಯಾ : ಏ, ಏನ ಖರೇನ ನನ್ನಾಣಿ ನಿರ್ವಾಣೆಪ್ಪನ
ಆಣಿ ಗೊತ್ತಿಲ್ಲ, ಒಳತನ್ನು,

ಗದಿಗ್ಯಾ : ಹಳಬರ ಭರಿಮ್ಯಾ ಇರಾಕಿಲ್ಲಲೊ? ಅಂವ ಇಂದ ಹ್ವಾದ.

ಯಮನ್ಯಾ : ಅsಟ ನನಗೂ ಗೊತೈತೊ; ಹೆಂಗ ಹ್ವಾದಂದ್ರ?

ಇರಿಪ್ಯಾ : ಸರ್ವತ್ತಿನಾಗ ಮುದಿಗೌಡ ಬರಿಮ್ಯಾನ ಕರದ-
ಮಗನs ಹೊಲೇರ ಯಮನೀ ಮನಿಗಿ ಹೋಗು
ನಾಳಿ ಹರೀವತ್ತ ಗೌಡರ ಮನಿಗಿ ಬರಾಕ
ಹೇಳ್ಯಾರಂತs ಕರದ ಬಾ ಹೋಗು-ಅಂದಾರ.
ಈ ಮಗಾ ಹೋಗಿ ಬಾಗಲಾ ಬಡದ್ದಾನು-
ತೆರದಿತ್ತು. ಅಡ! ಈ ಯಾಳೇದಾಗ ಯಮನಿ
ಬಾಗಲಾ ಹಾಂಗs ಬಿಟ್ಟಾಳಲ್ಲಪಾ- ಅಂದವನ
ಒಳಗ ಹೊಕ್ಕಿದಾನು -ದೀಪಿಲ್ಲ, ಬೆಳಕಿಲ್ಲ-
ಕೈಯಾಡಿಸಿಕೋತ ಹೊಕ್ಕಿದಾನು, -ಹೊರಸ ಸಿಕ್ಕೈತಿ.
ಮ್ಯಾಲ ಯಮನಿ ಮಲಗಿದ್ದಳು. ಇಂದ ಯಾರ
ಗಿರಾಕಿ ಇಲ್ಲದ್ದಕ್ಕ ಕದಾ ತಗದೈತಂದವನ ಮಗಾ
ಇವನೂ ದೋತರ ಕಚ್ಚೀ ಬಿಚ್ಚಿದ!
ಗಳಿಗಿ ಹೊತ್ತಾಗಿ, ಮಗನ ಮದಾ ಇಳದ
ಕರದ್ದಾನು-ಮಾತಾಡಿಲ್ಲ. ಅಳಿಗ್ಯಾಡಿಸಿದಾನು-ಎದ್ದಿಲ್ಲ.
ಮುಟ್ಟತಾನು ಮೈ ತಣ್ಣಗ ಚೋಳ!
ಅಲ್ಲೆ ಒಮ್ಮಿ ಚೀರಿ, ಮತ್ತೇನ ತಿಳೀತೇನೊ
ಬಾಯಿಮಾಡಿ ಹಾಡಿಕೋತ ಹೊರಗ ಬಂದ.
ಸೀತೀನ ಎಬ್ಬಿಸಿ ಚಿಮಣಿ ತಗೊಂಡ್ಹೋಗಿ
ನೋಡತಾನು-ತೆರದ ಕಣ್ಣ ತೆರಧಾಂಗs
ಯಮನಿ ಗೊಟಕ್! ಇವನೂ
ಮಗಾ ಚೀರಿದವನs ಅಲ್ಲೇ ಗೊಟಕ್ಕಂದಬಿಟ್ಟ.

ಯಮನ್ಯಾ : ಮೊದಲ ಯಮನಿ ಹೆಂಗ ಹೋಗಿದ್ದಳು?

ಗುರ್ಯಾ: ಮೂರೂಸಂಜಿ ಮುದಿಗೌಡ ಯಮನಿs ಮನ್ಯಾಗ
ಹೊಕ್ಕದ್ದ ಪಾರಿ ಸ್ವತಾ ನೋಡಿದಾಳಂತಪಾ,
ಎಷ್ಟ ಖರೇನೊ ಎಷ್ಟ ಸುಳ್ಳೋ!

ಗದಿಗ್ಯಾ : ಒಟ್ಟ ಅದೆಲ್ಲ ಶಿವನ ಮಾಯೆ ಏನಪಾ.
ನಾವೇನ ಕಣಗಾಣಲಿಲ್ಲ, ಕಿವಿಗೇಳಲಿಲ್ಲ,
ಆಡಿಕೊಳ್ಳೋದ್ಯಾಕ? ಖರೆ ಸುಳ್ಳ?

ಸೂತ್ರಧಾರ : ಹೊತ್ತ ಮುಣಗಿ ಕತ್ತಲಾತ ಇನ್ನೂ ಬರಲಿಲ್ಲಲ್ಲೊ?

ಗುರ್ಯಾ : ಲಗು ಬರತೇನಂದಿರಲಿಲ್ಲ ಅಂವ?

ಇರಿಪ್ಯಾ : ಇಕ್ಕs ಈಗ ಬರತೇನಂದ ದೇವರುs
ಬರಾಣಿಲ್ಲೇನಪಾ.

ದೊಡಬಸ್ಯಾ (ಉದ್ವೇಗದಿಂದ ಬಂದು ಕುಳಿತು ಬೆವರು ಒರೆಸಿಕೊಳ್ಳುತ್ತ)
ಮತ್ತ ಒಬ್ಬ ಜಿಗದಪಾ.

ಇರಿಪ್ಯಾ : ಮತ್ಯಾರ ಹ್ವಾದರಪಾ?
ಈ ಮಂದೀನೆಲ್ಲ ಮೊದಲs ಎಣಿಸಲಿಲ್ಲ.
ನಾ ಅಂತೂ ಅಲ್ಲ? ನೀ ಯಾಕ ಹೋಗಿದ್ದಿ
ಸಾಯಾಕ?

ದೊಡಬಸ್ಯಾ : ಸಾಯಾಕ ಹ್ವಾದಂಗs ಹುಡುಗಾ! ಬರಿಮ್ಯಾಣ
ಹುಗ್ಯಾಕ ಒಂದ ಗೋರಿ ಹಡ್ಡಬೇಕಂತ-
ಮಣಕಾಲಮಟ ಹಡ್ಡೀದೇವೋ ಇಲ್ಲೊ-ಅಲ್ಲೆ
ಒಂದ ಹಸಿ ಹೆಣ-ಕೈ ಕಟಿಕೊಂಡ, ಚಪ್ಪಾಗಳಿ
ಹಕ್ಕ್ಯೊಂಡ-ಕಣ್ಣ ಮುಚ್ಚೇತಿ, ಇಲ್ಲ, ಟಬರಲೆ
ಕುಂತಿತ್ತಪಾ!

ಯಮನ್ಯಾ : ಏ ಹೌದ ಹೌದೊ; ಅದು ದಾಸರ ಗುರಿವ್ಯಾಂದ.
ಮನ್ನಿ ಮನ್ನಿ ಅವನೂ ಸತ್ತಿದ್ದ…

ದೊಡಬಸ್ಯಾ : ನಮಗೇನ ಗೊತ್ತೊ? ರಾತ್ರಿ ಯಾಳೆ.
ಈಟ ಲಾಟಾನ ಬೆಳಕಾ ಎದಕ್ಕ ಆಗೋದಾ?-
ಹಳಿ ಗೋರಿ ಇರಬೇಕಂತ ಹಡ್ಡಿದಿವು-
ಬೇವಿನ ಹಸಿ ತಪ್ಪಲ ಹಾಂಗs ಇತ್ತು!
ಹೊಸಾ ಅಂಗಿ, ಹೊಸಾ ದೋತರ, ದಡಿ ರುಮಾಲಾ
ಮಾತಾಡಸಬೇಕನ್ನಿಸ್ತು,
ಆsಟಗಾರ ನೋಡೋ, ಕಾಲಲೆ ಒದ್ದ ಕೈ
ಚಾಚಿ ಹಲ್ಲ ತೆರಕೊಂಡ ಚಿಟ್ಟನ ಚೀರಿತೊ ಚೀರಿತು-
ಕುರುಬರ ಪುಂಡ್ಯಾ ಅಲ್ಲೆ ಸೆಟದ.
ಉಳಿದವರೆಲ್ಲಾ ಜೀಂವಾ ಕೈಯಾಗ ಹಿಡಕೊಂಡ
ಆಗೊ ಈಗೊ ಅಂತ ಓಡಿ ಬಂದಿವಿ.
ನನಗರೆ ಶಿವನs ಮಾದೇವನs ಈ ಮಂದೆಲ್ಲಾ
ಹಾಂಗs ಕಾಣಸಾಕ ಹತ್ಯಾರ.

ಯಮನ್ಯಾ : ಮತ್ತೂ ನೀ ಭಾಳ ಗಟ್ಟಿ ಅಂತ ಉಳದ
ಬಂದಿ ಬಾ. ಮಾರಾಯಾ ಯಾರ ಸತ್ತಾಗೆಲ್ಲಾ
ನನಗ ನಾನs ಸತ್ಹಾಂಗ ಆಗತೈತಿ.

ಸೂತ್ರಧಾರೆ : ಹೊತ್ತ ಮುಣಗಿ ಕತ್ತಲಾತ ಇನ್ನೂ ಬರಲಿಲ್ಲಲ್ಲೊ?

ಗದಿಗ್ಯಾ : ಮನ್ನಿ ಹಿಂಗಾತು:
ಹಸಿ ಎಷ್ಟ ದೂರ ಹೋಗೇತಿ ನೋಡೋಣಂತ
ಗುದ್ದಲಿ ತಗೊಂಡ ಹೊಲಕ್ಕ ಹೋಗಿ
ಹಡ್ಡಬೇಕನ್ನೂದರಾಗ ನೋಡೊ-
ಎಡಕ್ಕೊಂದ ಗೋರಿ, ಬಲಕ್ಕೊಂದ ಗೋರಿ-
ಎಡಕಿನ ಗೋರಿ ಬಿರದ ಕಣ್ಣಿಗಿ ಕತ್ತಲಿ ಬಂದ
ನಾನs ಚೀರಿದರ ನನಗs ಕೇಳಸಲಿಲ್ಲ!
ಗೋರ್ಯಾಗ ಯಾರೋ ಎಳಕೊಂಡ್ಹೋಗಿ ತಂಬಾಕ ಮಾಡಿ
ತಿಂಧಾಂಗಾತ! ತಿಂದ ಚಟ್ಟಾ ಉಗುಳಿಧಾಂಗ ಸಟ್ಟಂತ
ಸಿಡದ ಬಿದ್ದ, ಹೆಂಗೊ ಏನೊ ಬಗಲಾಗ
ರುಂಬಾಲ ಹಿಡಕೊಂಡವನ ಓಡಿ ಓಡಿ ಬಂದಿನು.
ಮನಿಗಿ ಬಂದ ಕೆರಕೋಬೇಕಂದರ
ಕೈ ಎತ್ತಾಕ ಆಗವಾತು! ನನ್ನ ಹೇಂತಿ ಬಂದ
’ಹೊಲೇರ ಪಾರೀ ಮನಿಗಿ ಹೋಗಿದ್ಯಾನಂ’ತ ಕೇಳಿತ.
ಅಂದಿಂದ ನೋಡೋ, ಏನೋ ಕಳಕೊಂಡ್ಹಾಂಗ
ಕಳಕೊಂಡ್ಹಾಂಗ ಅನಸ್ತೈತಿ. ನೀ ಯಾಕ ಸುಮ್ಮನ
ಕುಂತಿ? ಏನಾರ ಮಾತಾಡಲಾ.

ಯಮನ್ಯಾ : ಏ, ಇನ್ನ ಸಾಕ ಸುಮ್ಮನ ಕುಂದರ್ಯೋ
ಹೆದರಿಕೆ ಬರತೈತಿ.

ಗುರ್ಯಾ : ಈಗ ನಾವಿರೋದ ಹಗಲಿ ಅಂತ ತಿಳಿಕೊಂಡ
ಕುಂಡ್ರೋ, ಹೆದರಿಕಿ ಬರಾಣಿಲ್ಲ.

ಸೂತ್ರಧಾರ : ಹೊತ್ತ ಮುಣಗಿ ಕತ್ತಲಾತ ಇನ್ನೂ ಬರಲಿಲ್ಲಲ್ಲೊ?

ಗದಿಗ್ಯಾ : ಅಲ್ಲೀತನಕ ನೀ ಏನsರೆ ಮಾತಾಡಲಾ.

ಗುರ್ಯಾ : ಏನ ಮಾತಾಡಲಿ?

ಗದಿಗ್ಯಾ : ಏನsರೆ, ಅದs ಇದs ನೇಮ ಐತಿ?
ಗಲಗಲ ಸಪ್ಪಳಿದ್ದರ ಅಂಜಿಕಿ ಬರಾಣಿಲ್ಲ,
ಯಾಕಪಾ? ಮಾತಾಡ ಮಾತಾಡ.

ಗುರ್ಯಾ : ಏನ ಮಾತಾಡಲಿ?

ಗದಿಗ್ಯಾ : ಹಿಂಗs ಏನರೆಪಾ. ನೀರಾಗ ಹೂಂಸ
ಬಿಟ್ಹಾಂಗ ನಾವ ಮಾತಾಡಲಿಲ್ಲ? ಹಂಗ ಏನರೆಪಾ.
ಕ್ವಾಣ ಗಬ್ಬ ಹೋತನ್ನು;
ಗುಡ್ಡದಾನ ಗವಿ ಮಾತಾಡಿತನ್ನು,
ಚಿನಿದಾಂಡ ಅನ್ನು, ನಿದ್ದಿ ಬಗರಿ ಅನ್ನು,
ಎಲ್ಲಿಗಿ ಬಂತೊ ಸಂಗಯ್ಯಾ ಅನ್ನು,
ಎಲ್ಲಿಗಿ ಬಂತೊ ಸಂಗಯ್ಯಾ ಅನ್ನು,
ಠರ್ ಅನ್ನು ಟುಸ್ ಅನ್ನು-
ಹಂಡೋಲ್ ಬಂಡೋಲ್
ಚಿಗರಿ ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಬಚ್ಚಾಬೋಲ್
ಬೋಲಾತಿ ಬೋಲ ತುಮಿ ಲಂಗೋಟಿ ಕೋಲ.

(ಒಳಗಿನಿಂದ ಕಮಲಿಅಯ್ಯೋ ಬರ್ಯೋ ಎಪ್ಪಾ ಕಾಯರ್ಯೋಎಂದು ಚೀರುವಳು.)

ಸೂತ್ರಧಾರ : ಯಾರಿಗೇನಾತು? ಏ ಹೋಗಿ ನೋಡೊ.

ಹಿಮ್ಮೇಳದವ : ಹೊಲೇರ ಕಮಲಿ ಢುರಕೀ ಹೊಡೀತಾಳ ಬಿಡೊ.

(ಒಳಗಿನಿಂದ ಕಮಲಿ ‘ಅಯ್ಯೋ ಬರ್ಯೋ ಎಪ್ಪಾ ಕಾಯರ್ಯೋ’ ಎಂದು ಚೀರುವಳು.)

ಹಿಮ್ಮೇಳದವ : ಢುರಕೀ ಸೈತ ರಾಗ ತಗದs ಹೊಡೀತಾಳ ನೋಡೊ! (ಕಮಲಿ ಅಳುತ್ತ ಪ್ರವೇಶಿಸುವಳು.)

ಕಮಲಿ : ಬರ್ಯೋ ಎಪ್ಪಾ ಕಾಯರ್ಯೋ

ಸೂತ್ರಧಾರ : ಏನಾತು? ಏನಾತು?

ಕಮಲಿ : ಎಲ್ಲಾ ಆತು.

ಹಿಮ್ಮೇಳದವ : (ಸೂತ್ರಧಾರನನ್ನು ಹಿಂದಕ್ಕೆ ಸರಿಸಿ) ಎಲ್ಲಾ ಏನಾತು?

ಕಮಲಿ : ಆಗಬಾರದ್ದೆಲ್ಲಾ ಆತು.

ಹಿಮ್ಮೇಳದವ : ಆಗಬಾರದ್ದೆಲ್ಲಾ ಅಂದರ ಏನೇನಾತು?

ಕಮಲಿ : ಹಾಲ ಚೆಲ್ಲಿಹೋಯ್ತು.

ಹಿಮ್ಮೇಳದವ : ಯಾವುದರ ಬೆಕ್ಕ ಬಂದಿತ್ತೇನ?

ಕಮಲಿ : ಯಾರೋ ಬಂದಿದ್ದರು.

ಹಿಮ್ಮೇಳದವ : ಯಾಂವ ಬಂದಿದ್ದ? ಹೆಂಗ ಇದ್ದ?

ಕಮಲಿ : ಬಿಳೀ ಕುದರೀ ಏರಿದ್ದಾ, ಜರದ ರುಮಾಲ ಸುತ್ತಿದ್ದಾ.
ಚಿಗರ ಮೀಸ್ಯಾಗ ಯಾಸಿ ನಗಿ ನಗತಿದ್ದಾ.
ಲಗಾಮ ಜಗ್ಗಿ ನನ್ನ ಮುಂದs ನಿಲ್ಲಿಸಿದಾ.
ಕುದರಿ ಇಳದ ಬಂದಾ…

ಹಿಮ್ಮೇಳದವ : ಬಂದಾ? ಹೂಂ ಬಂದ ಮುಂದೇನ ಮಾಡಿದಾ?

ಕಮಲಿ : ಸೀರೀ ಸೆರಗ ಹಿಡದಾ, –

ಹಿಮ್ಮೇಳದವ : ಹಿಡದ ಏನು ಮಾಡಿದಾ?

ಕಮಲಿ : ಹಿಡದಾ, ಹಿಡದವನ ಹಾಲ ಕೊಡ ಅಂದಾ…
ಅಂದವನ ಗಡಿಗಿ ಕಸಗೊಂಡಾ…
ಹಿಡದವನ… ಅಂದವನ… ಕಸಗೊಂಡವನ
ಕಂಟಕ ಬಾಯಿ ಹಚ್ಚಿ ಗಟಗಟಾ ಕುಡದಾ,
ಕಣ್ಣಿಗಿ ಕತ್ತಲಿ ಬಂದ,
ರೆಪ್ಪಿ ಹೀಂಗ ಮುಚ್ಚಿ ತಗ್ಯೂದರಾಗ ಕುದರಿ ಏರಿದ್ದಾ.

ಹಿಮ್ಮೇಳದವ : ಏರಿರಬೇಕ ಮತ್ತs. ಹಾಲ ಕುಡದ ಮ್ಯಾಲ
ಕೆಲಸೇನ ಇರತೈತಿ?

ಸೂತ್ರಧಾರ : ಎಲ್ಲಿಯಾಂವಾ? ಯಾವೂರ? ಎಂತೂರ?….

ಕಮಲಿ : ಹೆಸರ ಹೇಳ ಅಂದರ
ಕೊಳ್ಳಾಗಿನ ಮುತ್ತಿನ ಸರಕ್ಕ ಚಟಮುದ್ದ ಕೊಟ್ಟ
ನನ್ನ ಮ್ಯಾಲ ಒಗದ ಕುದರಿ ಓಡಿಸಿದಾ.

ಸೂತ್ರಧಾರ : ಯಾರಿದ್ದಿರಬೇಕು? ಕಮಲವ್ವಾ,
ಮುತ್ತಿನ ಸರಾ ತಕ್ಕೊಂಡ ನೀ ಮನಿಗಿ ಹೋಗು.
ಇಂದಿಲ್ಲ ನಾಳಿ ಯಾರನ್ನೋದ ಗೊತ್ತಾದೀತು.

ಹಿಮ್ಮೇಳದವ : ಅದs ಅಂತೀನ್ನಾನೂ. ಹಾಲಿನ ರುಚಿ ಹಲ್ಲಿಗಿಳದ ಮ್ಯಾಲ
ಬರದs ಇರತಾನ್ಹೆಂಗ?
ಅಂವ ಬರತಾನ ಹೋಗ ನೀ. ಪಾಪ ಹುಡಿಗಿ ಬಾಡಿ
ತಪ್ಪಲಾಗೇತಿ, ತಿಳೀಬಾರದs ಅವಂಗ? ಹೋಗ ನೀ.

(ಕಮಲಿ ಅಳುತ್ತ ಹೋಗುವಳು. ನೇಪಥ್ಯದಲ್ಲಿ ಸ್ತ್ರೀಯರ ಹಾಡು ಕೇಳಲಾರಂಭಿಸುತ್ತದೆ.)

ನೇಪಥ್ಯದಲ್ಲಿ : ಮೇಲಾದ ನಾಡಿಂದ ಬಾಲಯ್ಯ ಬರತಾನ
ಕುಲದ ಬಾಲೇರೆಲ್ಲ ಕರೆತನ್ನಿರೇ
ಹೆಚ್ಚೀನ ನಾಡಿಂದ ಅಚ್ಚೇದ ದೊರಿ ಬಂದ
ಅಚ್ಚ ಬಾಲೇರೆಲ್ಲ ಕರೆತನ್ನಿರೇ

ಹಿಮ್ಮೇಳದವನ : ಬಾಳಗೊಂಡ ಬಂದ! ಬಂದಾ! ಬಂದಾ!….

(ಎಲ್ಲರೂ ಎದ್ದು ರುಮಾಲು ಸುತ್ತಿಕೊಳ್ಳುತ್ತ, ಕುಂಡಿ ಜಾಡಿಸುತ್ತ ಸಡಗರದಿಂದ ಸಿದ್ಧರಾಗತೊಡಗುವರು.)

ನೇಪಥ್ಯದಲ್ಲಿ : ಚಿಗರ ಮೀಸೀ ಚೆಲುವ ದಿಗರನಾಡುತ ಬರುವ
ಒಗರ ಬಾಲೇರೆಲ್ಲ ಕರತನ್ನಿರೇ
ಚಿನ್ನದ ಗಿಂಡ್ಯಾಗ ಪನ್ನೀರ ತನ್ನಿರೆ
ಚೆನ್ನಾಗಿ ಚರಣಾ ತೊಳೆಯೀರೆ

(ರಂಗದ ಎಡಬದಿಯಿಂದ ಬಾಳಗೊಂಡ, ಅವನ ಹಿಂದೆ ಮುದಿಗೌಡ ಬರುತ್ತಲೂ ಒಬ್ಬನು ಮುಂದೆ ಹೋಗಿ ಸಂಭ್ರಮದಿಂದ ಬಾಳಗೊಂಡನ ಬಲಗೈಯನ್ನೂ ಹಿಮ್ಮೇಳದವನು ಎಡಗೈಯನ್ನೂ ಹಿಡಿದು ನಿಧಾನವಾಗಿ ಗದ್ದಿಗೆಯ ತನಕ ಕರೆತರುತ್ತಾರೆ. ಜನರಲ್ಲಿಯೇ ಒಬ್ಬನು ಬರಿ ಬಾಳಗೊಂಡನ ಹೆಜ್ಜೆಗಳನ್ನೇ ಎಣಿಸುತ್ತಿರುತ್ತಾನೆ. ಮುಂದಿನ ಪ್ರತಿ ಎರಡು ಸಾಲಿಗೊಂದರಂತೆ ಬಾಳಗೊಂಡ ಹೆಜ್ಜೆಯನ್ನಿಟ್ಟು ಗದ್ದಿಗೆಯ ಮೇಲೆ ಕೊನೆಯ ಪದ್ಯವಾದ ನಂತರ ಕುಳಿತುಕೊಳ್ಳಬೇಕು.)

ಒಬ್ಬ : ಬಾರೊ ಬಾರೊ ನಮ್ಮಯ್ಯಾ ಎದಿ
ಕದಗೋಳ ತೆರದೇವ ಕರದೇವ||

ಹಿಮ್ಮೇಳದವ : ಹಾಲದ ಬಳ್ಳಿ ಹಾದಿಗುಂಟ ಹಬ್ಬಿಸೇವ
ಬಾಡಧಾಂಗ ಬಾ ಸ್ವಾಮಿ ಅಂದೇವ||

ಒಬ್ಬ : ಹೆಜ್ಜಿಗಿ ಯೋಳ್ಯೋಳ ಎಳಿದೀಪ ಹಚ್ಚೇವ
ಕಳೀಧಾಂಗ ಬಾ ಸ್ವಾಮಿ ಮೆಲ್ಲಕರೆ||

ಹಿಮ್ಮೇಳದವ : ನಂಬುಗೆಯೆಂಬೊ ರತ್ನಗಂಬಳಿ
ಗದ್ದಿಗಿ ಮಾಡೇವ ಕುಂಡ್ರಾಕರೆ||

ಒಬ್ಬ ಮತ್ತು (ಬಾಳಗೊಂಡನೆದುರು ನಿಂತು ಕೈಮುಗಿದು)

ಹಿಮ್ಮೇಳದವ : ಕುಡಗೋಲ ನಿಂದೋ ಕುಂಬಳ ನಿಂದೊ
ಹೆಂಗರ ಹೆರಚಂತಂದೇವ||
ಬತಗೆಟ್ಟ ಬಂದೇವ ಬಲ್ಹಾಂಗ ಮಾಡೇವ
ಬಾಗಿ ನಮೋನಮ ಅಂದೇವ||

(ಬಾಳಗೊಂಡ ಕುಳಿತುಕೊಳ್ಳುವನು. ಹಿಮ್ಮೇಳದವನು ಉತ್ಸಾಹದಿಂದ ರಂಗದ ಬದಿಗೊಮ್ಮೆ ಬದಿಗೊಮ್ಮೆ ಓಡಾಡುತ್ತ ಹೇಳುವನು🙂

ಹಿಮ್ಮೇಳದವ : ಬಂದ! ಬಂದಾ! ಬಾಳಗೊಂಡ ಬಂದಾ!
ನಮ್ಮ ಹೊಲಗೋಳ ಹುಲ ಬಂದಾ!
ಹಂಗಾಮದ ಹರಿಚಂದ ಗಾಳಿ ಬಂದಾ!
ಕೊರತಿಗಿ ಭರತಿ ಆಗಿ ಬಂದಾ!
ಅಭಾವಕ ಆಸೇ ಆಗಿ ಬಂದಾ!

ಒಬ್ಬೊಬ್ಬರನ್ನೇ ಕರೆದು

ಏ, ನೀ ಹೋಗಿ ಹಸಿ ಎಷ್ಟ ದೂರ ಹೋಗೇತಿ ನೋಡಿ ಬಾರೊ
ಏ, ನೀ ಹೋಗಿ ಊರಾಗ ಹಸರ ಎಲಿ ಎಷ್ಟದಾವ ಎಣಿಸಿಕೊಂಬಾರೊ
ಏ, ನೀ ಹೋಗಿ ಮುಗಿಲಿನ್ಯಾಗ ಮೋಡ ಕಟ್ಟಿದುವೇನ ನೋಡೊ
ಏ, ನೀ ಹೋಗಿ ಹೇಳಿ ಹ್ವಾದ ಮಳಿ ಬಂತೇನ ನೋಡೊ

(ಇಲ್ಲಿಯವರೆಗೆ ಉಳಿದವರೆಲ್ಲ ಬಹಳ ಜನ ಸೇರಿರುವದನ್ನು ಸೂಚಿಸುವಂತೆ ಗುಬು ಗುಬು ಸದ್ದು ಮಾಡುತ್ತಿದ್ದು ಒಬ್ಬೊಬ್ಬರೇ ಹೋಗಿ ರಂಗಭೂಮಿ ಒಮ್ಮೆಲೆ ಸ್ತಬ್ಧವಾಗುತ್ತದೆ. ಒಬ್ಬ ಮತ್ತೆ ರಂಗದ ಮೇಲೆ ಬಂದಾಗ ಹಿಮ್ಮೇಳದವನುಯಾಕ ಎಲ್ಲಿಗೆ ಬಂತೋಎಂದಾಗ ಅವನು ಕುತ್ತಿಗೆಗೆ ಎರಡೂ ಕೈ ಹಚ್ಚಿಕೊಂಡುಇಲ್ಲಿಗೆ ಬಂತೋ ಸಂಗಯ್ಯಾಎಂದು ಹೇಳಿ ಬಾಳಗೊಂಡನನ್ನು ದುರುದುರು ನೋಡುತ್ತ ಹೊರಟುಹೋಗುವನು. ರಂಗದ ಮೇಲೆ ಸೂತ್ರಧಾರ, ಹಿಮ್ಮೇಳದವ, ಬಾಳಗೊಂಡ, ಮುದಿಗೌಡ ನಾಲ್ವರು ಮಾತ್ರ ಉಳಿಯುವರು. ರಂಗಭೂಮಿ ಈಗ ಶೂನ್ಯವಾಗುತ್ತದೆ.)

ಬಾಳಗೊಂಡ : ಎಲ್ಲರೂ ಹೋಗಿ ಬರೇ ಅವರ ನೆರಳಿನ್ಹಾಂಗ
ನಾವ ಉಳಿದಿವಿ. ಏನಿದು?
ಹಸಿ ಅಂದರು, ಹಸರೆಲಿ ಅಂದರು, ಹೋದ ಮಳಿ ಅಂದ,
ಕರದರ ಓ ಅನ್ನಧಾಂಗ ಹೋದರಲ್ಲ,-
ಯಾಕ ಹಿಂಗ್ಯಾಕ?

ಮುದಿಗೌಡ : ಯಾಕ, ಎಂತಾ ಹೆಂಗ ಹೇಳಲಿ?
ಬಂದರು, ಹ್ವಾದರು ಅಷ್ಟs. ಸಣ್ಣಸಣ್ಣ
ಮಾತಿಗೆಲ್ಲ ಹಿಂಗ ತೆಲಿ ಕೆಡಿಸಿಕೊಂಡರ ಹೆಂಗ ಹೇಳು?
ಹೇಳಿಕೇಳಿ ದನಾ, ಹಸರ ಇದ್ದಲ್ಲಿ ಮೇದ,
ನೆರಳಿದ್ದಲ್ಲಿ ಮಲಗಿ, ಮೆಲಕಾಡಸೋದೊಂದs ಗೊತ್ತವಕ್ಕ.

ಬಾಳಗೊಂಡ : ಬಹುಶಃ ನಿನಗ ಗೊತ್ತಿರಬೇಕು,-
ಯಾಕ ಬಂದರು? ಯಾಕ ಹೋದರು?

ಸೂತ್ರಧಾರ : ನಿಜ ಹೇಳಿದರ ನಿಷ್ಠೂರ, ಕಟ್ಟಿಗಿ ಹಚ್ಚಿದರ ಕಷ್ಟ.
ಗೊತ್ತೈತಿ. ಗೊತ್ತಿಲ್ಲ, ಗೊತ್ತಿದ್ದರೂ
ಹೇಳಾಕ ಆಗಾಣಿಲ್ಲ; ಯಾಕಂದರ ನೋಡೊ:
ಪ್ರತಿಯೊಂದ ಮಾತಿಗಿ ಹಿಂದೊಂದ ಮುಂದೊಂದ
ಇದ್ದs ಇರತಾವೇನಪಾ, ನಡುವಿಂದೊಂದs
ಹೇಳಿದರ ನಿನಗೇನ ತಿಳಿಬೇಕು? ಆದರೂ ನೋಡಪಾ…

ಮುದಿಗೌಡ : ಇಂವಗ ಇನ್ನೊಬ್ಬರಿಗಿ ತಿಳಿಯೋ ಹಾಂಗ ಮಾತಾಡಿ
ಗೊತ್ತs ಇಲ್ಲ. ಜರಾ ತಡವಿದರ ಸಾಕು
ಪನ್ನಾಸ ಪುರಾಣ ತಿರುವನಾತ. ಹುಲಿ ಹೆಂಗ
ಇರತೈತಂತ ಹುಡಗೋರ ಕೇಳಿದರ
ಮುದಿಗೌಡನ್ಹಾಂಗಂತ ನನ್ನ ತೋರತಾನ.
ಕೇಳಿದ್ದಕ್ಕ ಒಮ್ಮೆರೆ, ಬರೋಬರಿ, ಸರಳ, ಅಷ್ಟಕ್ಕಷ್ಟs
ಒಡಪ ಬಿಡಿಸಿ ಉತ್ತರ ಹೇಳೀದಿ? ನೋಡೋ,
ನೀ ಉಂಡ ಊಟಾ ಬಿಟ್ಟ ಹೂಂಸಾ ನನಗೆಲ್ಲ
ಗೊತ್ತದಾವ. ನೀ ದಿನ್ನಾ ಸೇದೋ ಚುಟ್ಟಾದ
ಲೆಕ್ಕಾ ಹೇಳಲೇನ? ಚೆಲ್ಲಿದ ರೊಟ್ಟಿ ತಿಂದ
ಹಲ್ಲಾಗ ನಾಲಿಗೀ ಇಟಗೊಂಡ,
ಸುಮ್ಮನ ಬಾಯಿ ಮುಚ್ಚಿಕೊಂಡ ಬಿದ್ದಿರು.
ಅನ್ನಾ ಹಾಕಿದವರಿಗೂ ಗುರ್ ಅನ್ನಬ್ಯಾಡ.
ನಿನ್ನ ಕೊಳ್ಳಾಗಿನ ಪಟ್ಟೀಮ್ಯಾಗ, ಯಾರ ಹೆಸರೈತಿ,
ನೋಡು, ಆ ಮ್ಯಾಲ ಮಾತಾಡು.
ನಡಿ ನಡಿಯೊ….

(ಬಾಳಗೊಂಡನ ರಟ್ಟಿ ಹಿಡಿದು ಜಗ್ಗಿಕೊಂಡು ಹೋಗುವನು. ರಂಗದ ಮೇಲೆ ಸೂತ್ರಧಾರ, ಹಿಮ್ಮೇಳದವ ಇಬ್ಬರೇ ಉಳಿಯುವರು.)

ಹಿಮ್ಮೇಳದವ: ನೀವೆಲ್ಲಾ ಜೀಂವಾ ಕೈಯಾಗ ಹಿಡಕೊಂಡ
ಕಾದ ಕುಂತಾಗs ನನಗ ಅನ್ನಿಸಿತ್ತಪಾ:
ಇವ ಬಾಳಗೊಂಡಲ್ಲಾ; ಬಾಳಗೊಂಡಾದರೂ
ಗೌಡನ ಮಗಾ ಅಲ್ಲಾ; ಗೌಡನ ಮಗಾ ಆದರೂ
ಗೌಡ ಇಂವನ ಹಡದಾವಲ್ಲಾ…
ಅದಕ್ಕs ಮಳೀ ಬರಲಿಲ್ಲಾ.

ಸೂತ್ರಧಾರ : ಗಚ್ಚಿನ ಗುಡ್ಯಾಗ ಹೆಚ್ಚಿನ ಹುಲೀ ಹೊಕ್ಕೈತಿ
ಬಾ ಅಂದರ ಹೆಂಗ ಬಂದೀತ ಮಳಿ?

ಹಿಮ್ಮೇಳದವ : ಏ ಏ ಏ ಪರಬೂ, ಹಂಗ್ಯಾಕ ಒಡಪಾ ಒಗೀತೀಯೊ?
ನಿನಗ ಮಾತಾಡಕ ಬರಾಣಿಲ್ಲಂತ ಊರ ಮಂದೆಲ್ಲಾ
ಹೇಳತಾರ. ನಾನs ಒಬ್ಬಾಂವ ಅದನ್ನ ನಂಬದಾಂವ.
ಹೇಳಬಾರದ ಬಿಡಿಸಿ-ಅದೇನೊ ಹಿಂದಿಂದಾ
ಮುಂದಿಂದಾ ನಡುವಿಂದಾ-ಅಂತಿದ್ದಿ, ಮೂರೂನೂ
ಬೇರೀಜ ಮಾಡಿ ಹೇಳಬಾರದ ತಿಳಿಸಿ?
ಬೇಕಂದರ ಬಾಯಿ ಮುಚ್ಚಿಕೊಂಡ ಹೂಂ ಅಂತೇನು.

ಸೂತ್ರಧಾರ : ನೋಡಪಾ; ಇಂದಿಗಿ ಎರಡಿಪ್ಪತ್ತ ವರ್ಷದ
ಹಿಂದಿನ ಮಾತು. ಊರಿಗಿ ಯೋಳಪಟ್ಟೀ ಹುಲಿ ಬಂದು
ಯೋಳೆಂಟ ದನಾ ತಿಂದು, ಬ್ಯಾಟಿ ಆಡಾಕ ಗೌಡ
ಹೋದ. ಹಗಲೀ ಹೋದ ಗೌಡ ರಾತ್ರೀ ಬಂದ.
ಹೆಗಲ ಮ್ಯಾಲ ಏನೋ ಹೊತ್ತಕೊಂಬಂದ. ಊರ ಮುಂದಿನ
ಹಾಳಬಾಂವ್ಯಾಂಗ ಚೆಲ್ಲಿ, ಯಾರೂ ಹಣಿಕಿ ಹಾಕಬ್ಯಾಡ್ರೀ
ಅಂತ ಡಂಗರಾ ಸಾರಿದ. ಅಂದಿಂದ ಗೌಡನ ಚೇರಾಪಟ್ಟೆ
ಯಾರಿಗೂ ತಿಳೀಧಾಂಗಾತ.

ಹಿಮ್ಮೇಳದವ : ಹುಲೀ ಕೊಂದ ಬಂದ ಹೌಂದಲ್ಲೊ?

ಸೂತ್ರಧಾರ : ಕೇಳಿಲ್ಲೆ, -ತಿಳೀಧಾಂಗಾತ. ನನಗಿಲ್ಲ. ನಿನಗಿಲ್ಲ, ಮ್ಯಾಲ
ಮಗಾ ರಾಮಗೊಂಡಗೂ ತಿಳೀಲಿಲ್ಲ. ತಿಳೀಲಾರಕ ಮಗ
ಊರ ಬಿಟ್ಟ ಬ್ಯಾರೇ ಊರಿಗಿ ಹೊಂಟ ನಿಂತ.
ಗೌಡ ಹೋಗಂದ. ಗೌಡ್ತಿ ‘ಬ್ಯಾನೀ ತಿಂತೇನು
ಬಯಕಿ ತೀರಸು’ ಅಂದ್ಳು, ‘ಹಂಗಾದರ ಏನ ತಂದ್ಕೊಡ್ಲಿ?’
’ಹುಲೀ ಹಾಲ ತಂದ್ಕೊಡು’. ಆಗಲೆಂದ ರಾಮ ಹೊಂಟ.
ಹಾಲ ಕೊಟ್ಟ ಹುಲೀ ಕೊಲ್ಲಾಕ ಬಂದರ, ಓಡಿಸಿ
ಹಾಲ ತಗೊಂಡ ಬರ್ತಿದ್ದ. ನಡುವ ಇಬ್ಬರು ಜಕ್ಕಜಲದೇರ
ಭೇಟ್ಯಾಗಿ ಹಣಿಕಿ ಹಾಕಬ್ಯಾಡಂದ ಹಾಳಬಾಂವಿಗ್ಯs
ಕರಕೊಂಬಂದೂವಪ! ಹಾಳಬಾಂವ್ಯಾಗ ಹಣಿಕಿ
ಹಾಕತಾನು: ಒಳಗ ಗೌಡನ ದೆವ್ವ!

ಹಿಮ್ಮೇಳದವ : ಏನಂದಿ?

ಸೂತ್ರಧಾರ : ಹುಡುಗ ಗಟ್ಟಿದ್ದಾ, ‘ಯಾರ್ ನೀ?’ ಅಂದ
’ಮಗನs, ನಾ ನಿಮ್ಮಪ್ಪ ಊರ ಗೌಡ. ಊರಿಗಿ
ಬಂದದ್ದ ಹುಲೀ ಅಲ್ಲ, ರಾಕ್ಷೇಸ, ನನ್ನ ಕೊಂದ
ನನ್ಹಾಂಗs ಆಗಿ ಊರ ಹೊಕ್ಕಾನ. ನನ್ನ ಎಲುವ
ಈ ಹಾಳಬಾಂವ್ಯಾಗ ಒಗದ್ದಾನು, ನನ್ನ ಪಾರಮಾಡೋ
ಮಗನs’ ಅಂದಿತು.

ಹಿಮ್ಮೇಳದವ : ಇಂವೇನಂದ?

ಸೂತ್ರಧಾರ : ಆಗಲೆಂದ ಬಂದರ ತಾಯಿ ರಾಕ್ಷೇಸನ ಗಾಳದಾಗ
ಸಿಕ್ಕ, ಒಂದ ತಿಂಗಳ ಚರ್ಮಾ, ಒಂದ ತಿಂಗಳ ಕಣ್ಣಾ,
ಮೂಗಾ, ಕಿವೀ, ನಾಲಿಗಿ, ಎದಿ -ಎಲ್ಲಾ ಕಸಗೊಂಡ
ಬಂಗಾರದಂಥಾ ಹುಡುಗನ್ನ ಹೆಣಾ ಮಾಡಿ
ಇಟ್ಳಲ್ಲs.

ಹಿಮ್ಮೇಳದವ : ಹಾಂಗಾದರ ಈಗ ಇದ್ದಾಂವ ಯಾರ ರಾಕ್ಷೇಸಾ?

ಸೂತ್ರಧಾರ : ಇನ್ಯಾರಂದಿ?

ಹಿಮ್ಮೇಳದವ : ಹಾಲ ಕೊಟ್ಟ ಕೊಲ್ಲಾಕ ಹ್ವಾದ ಹುಲಿ ಇವನs?

ಸೂತ್ರಧಾರ : ಇನ್ನೇನ ಅನ್ನಲಿ?

ಹಿಮ್ಮೇಳನದವ : ನಿನಾಪ್ಪನ. ನೀವೆಲ್ಲಾ ನಿಮ್‌ನಿಮ್ಮ ಗೋರ್ಯಾಗ
ಹೋಗಿ ಕುಂತಕೊಳ್ರಿ ಅನ್ನಬಾರದ ನಮಗ?

ಸೂತ್ರಧಾರ : ಬಾಳಗೊಂಡ ಏನಂದರೂ ಗೌಡ್ತೀ ಕುಡಿ ಅಂದಮ್ಯಾಲ
ನಮ್ಮವ್ವನ ಕಣ್ಣ ಅವನ ಮ್ಯಾಲ ಬೀಳಬಾರದ್ಯಾಕ?

ಹಿಮ್ಮೇಳದವ : ಹಿಂತಾ ಗುಟ್ಟ ಇಟ್ಟಕೊಂಡ ಸಾಯದs ಹೆಂಗಿದ್ದೀಯೊ?
ಕಡೀದೊಂದ ಮಾತ ಕೇಳತೇನು, ನಾ ಕೇಳಿ ಹ್ವಾದ
ಮ್ಯಾಲ ಜವಾಬ ಹೇಳಬೇಕs-
ಬಾಳಗೊಂಡಗ ಇದ ಗೊತ್ತಿಲ್ಲಾ?

(ಇಷ್ಟು ಹೇಳಿ ಕಿವಿಯಲ್ಲಿ ಬೆರಳಿಟ್ಟುಕೊಂಡು ಓಡಿಹೋಗುವನು.)