ಸೂತ್ರಧಾರ: ಕುಂತಿರೊ ಅಣ್ಣಗೋಳ್ರಾ ನಿಂತಿರೋ ತಮ್ಮಗೋಳ್ರಾ,-
ಗರಡಿ ಹುಡಗೋರು ಹಾಂಗs ಬಂ ದ ಅಟ್ಟ ಏರಿದೇವು.
ಇದನ್ನ ಕವಿ ಮಾಡಿದಾಂವಿನ್ನೂ ಹಣ್ಣಾಗಿಲ್ಲ,
ಆಡಾವರಿನ್ನೂ ಬಲಿತಿಲ್ಲ; ಅಜ್ಞಾನ ಬಾಲಕರು
ಜೋಲಿ ತಪ್ಪಿ ಏನಾರ ತಪ್ಪ ಮಾಡಿದರ
ಚಪ್ಪಾಳಿ ಹೊಡದ ನಗಬ್ಯಾಡರಿ;
ಜೋಡೆಳಿ ಸಿಳ್ಳ ಹಾಕಬ್ಯಾಡರಿ;
ಇದ್ಯಾತರ ಆಟಂತ ಏಳಬ್ಯಾಡರಿ;
ತಿಳೀಲಾರ ಕುರ್ಚಿ ತಿಕ್ಕಿ ಆಕಳಿಸಬ್ಯಾಡರಿ,-
ಗೀತರೂಪದಿಂದ ಗೀತೀ ಮಾಡದs ಪ್ರೀತಿಲೆ
ನೀತೀ ಹೇಳತೇವು-
ಇದೆಲ್ಲಾ ನಮ್ಮ ನಿಮ್ಮೊಳಗs ಹುಟ್ಟಿ, ಒಳಗೊಳಗs
ಬೆಳದದ್ದಂತ ತಿಳಕೊಂಡು, ಶರಣಂದವರನ್ನ
ಕರುಣದಿಂದ ಕೇಳಬೇಕಂತ ಹೇಳಿ,
ಹಿರೇರೆಲ್ಲಾರಿಗೂ ನಮೋ ನಿಮ್ಮ ಪಾದಕ.

(ತೆಂಗಿನಕಾಯಿ ಒಡೆದು ಅದರ ಎರಡೂ ಭಾಗಗಳನ್ನು ರಂಗದ ಎರಡೂ ಬದಿಗೆ ಎಸೆಯುವನು. ಇದೇ ಈಗ ಹೊತ್ತು ಮುಳುಗಿದೆ. ಊರ ಅಗಸಿ. ರಂಗದ ಬಲಬದಿಯಲ್ಲಿ ಒಂದು ಗದ್ದಿಗೆಯಿದೆ. ತೀರ ಹಿಂಭಾಗದಲ್ಲಿ ಜನ ಸೇರಿದ್ದು ರಂಗದ ಮುಂಭಾಗದಲ್ಲಿ ನಡೆಯುವ ಪೂರ್ವರಂಗದ ಬಗೆಗೆ ಅವರೆಲ್ಲ ನಿಷ್ಕಾಳಜಿಯಿಂದ, ಶೂನ್ಯ ಮನಸ್ಕರಾಗಿದ್ದು ಪೂರ್ವರಂಗ ಮುಗಿದಾದ ಮೇಲೆ ಮುಂಭಾಗದಲ್ಲಿ ಗದ್ದಿಗೆಯ ಸುತ್ತ ಸೇರುತ್ತಾರೆ. ಪೂರ್ವರಂಗದ ಸಂಭಾಷಣೆ, ಧಾಟಿ, ನಟನೆಇವೆಲ್ಲವೂ ಶ್ರೀ ಕೃಷ್ಣ ಪಾರಿಜಾತದಂತೆಯೇ ಇರಬೇಕು.)

ಸೂತ್ರಧಾರ : ಹೆಂಗ ಹೇಳಲಿ? ಹೆಂಗ ಹೇಳಲಾರದs ಇರಲಿ?
ಹೆಂಗ ಹೇಳಿದರೂ, ಮತ್ಹೆಂಗ ತಿಳಿಸಿದರೂ
ಒಡಕ ಗಡಿಗಿ ಹಾಂಗ ಬರೀ ಸಪ್ಪಳಾಗತೈತಿ,
ಅರ್ಥಂಬೋ ಒಳದನಿ ಸಿಗೋದs ಇಲ್ಲ.
ನಾವ ಆಡೋದs ಒಂದು, ಅದು ಇರೋದs ಇನ್ನೊಂದು,-
ತಾಳಿಲ್ಲ ಮೇಳಿಲ್ಲ; ಇಲ್ಲಂತ ಬಿಡಾಕಾಗಣಿಲ್ಲ.
ಮಾತಾಡಿ ಹಿಡ್ಯಾಕ, ಹಿಡದ ನೋಡಾಕ, ನೋಡಿ ಕೇಳಾಕ
ತಿಣಿಕೀ ತಿಣಕತೀವಿ; ಹೀಂಗ ಖುದ್ದ
ಕೇಳೋದಕ್ಕ ಬಾಯಿ ತೆರದರೂ ಅಂದರ
ತೆರದ ಹೇಳಿದರೂ
ನಾ ಹೇಳೋದs ಒಂದು, ನೀವು ಕೇಳೋದs ಇನ್ನೊಂದು,
ಕೇಳಿ ತಿಳಿಕೊಳ್ಳೋದ ಇನ್ನೂ ಮತ್ತೊಂದು!
ಹಾಂಗ ಹೇಳಿದ್ದ ಸೈತ ಹೇಳಬೇಕಂದದ್ದs ಏನಲ್ಲ!
ಮೂಲ ಮೀಸಲ, ಶಿವಾ ಮುರೀದs ಉಳೀತೈತಿ
ಎಲ್ಲಿಂದ ಹೊರಟು ಎಲ್ಲಿಗಿ ಬಂದಿವಿ?

ಈಗ ಬೇಕಂದರ ನಮ್ಮ ನಿಮ್ಮ ಅಸ ಮಾತs
ತಗೋರೆಲ್ಲ;
ಆಡಕಾ ಅಟ್ಟಾ ಏರಿದೇವಂದರ, ಆಟೇನೂ ಹೊಸಾದಲ್ಲ.
ಹಾಂಗ ನೋಡಿದರ, ಬ್ಯಾಡ ಅದನs ಹೀಂಗ ಹೇಳಬೇಕಂದರ
ಅಥವಾ ಹೆಂಗ ಹೇಳಿ ತಿಳಿಕೊಂಡರೇನಾ,-
ನಮ್ಮ ನಿಮ್ಮ ಮುಖಗೋಳೆಲ್ಲ ಆಟದ ಅಟ್ಟನs.
ಹೌದೊ ಅಲ್ಲೋ ನೋಡ್ರೆಲಾ,-
ಹರೀವತ್ತೆದ್ದ ಮಲಗೋತನಕ ಎಷ್ಟ ಬಯಲಾಟ
ಮಾಡತೇವ, ಎಷ್ಟ ಸೋಗ, ಎಷ್ಟ ಮುಖವಾಡ!
ಹೊರಗಾ ಒಳಗಾ ಒಂದಮಾಡೋ ನಿಜಲಿಂಗ
ಎಲ್ಲಿ, ಯಾ ಕಡೆ, ಯಾ ಗವ್ಯಾಗಿದಾನೋ!
ಆಡತೇವ, ಕುಡೀತೇವ, ತಿಂತೇವ, ನಡೀತೇವ,-
ಏನಂದರೂ ನಮ್ಮ ಗುರುತ ನಮಗಿಲ್ಲ.
ಜಳಕಾ ಮಾಡಾಕ ಹೋದಾಗ ಬಾಂವ್ಯಾಗ ಒಮ್ಮೊಮ್ಮಿ
ಗುರುತ ಹತ್ತಿಧಾಂಗಾಗಿ ಕೈಚಾಚತೇವು, ಆದರ
ಮುಟ್ಟಿದರೆ ತೆಕ್ಯಾಗಿಲ್ಲ, ಹಿಡಿದರ ಹಿಡ್ಯಾಗಿಲ್ಲ.
ಮೂಗ ಹಿಡದ ಅಳಬೇಕಂದರ, ಹೆಣಾ ಕಂಡ ಅಳೋದ
ಭಾಳ ಹಳೀ ಪದ್ಧತಿ, ಏನ ಮಾಡೋಣ?

ಗಚ್ಚಿನ ಮಾನ್ಯಾಗ ಹೆಚ್ಚಿನ ಹುಲಿ ಹೊಕ್ಕ
ತಟ್ಟಂತ ಒಂದ ಹನಿ ಮಳಿಯಿಲ್ಲ, ಬೆಳಿಯಿಲ್ಲ.
ಬಿತ್ತಿದ ಬೀಜ ಹುರದ ಹೋಗಿ, ಬಿರಕ ಬಿಟ್ಟ ಬೀಳನೆಲ
ಆs ಅಂತ ಬಾಯಿ ತೆರಕೊಂಡೈತಿ!
ಮಂದೀ ಮಕಾ ಕರಕಾಗಿ, ಹಸರಿನ ಜೋಡಿ ಕಣ್ಣಾಗಿನ
ಹೌಸಿ ಒಣಗಿ, ಬೆವತೇನಂದರ ಬೆವರ ಸೈತ
ಸುರೀದಂಥಾ ತೊಗಲ ಜೋಳಿಗಿ ತೊಟಗೊಂಡ
ಮುಗಿಲೆದರ ತೆರಕೊಂಡ, ಇಲ್ಲಿ ನಿಂತೀವಿ.
ಲೆಕ್ಕಲೆ ಹಳೇಬೇಕಂದರ,-
ಈಗ, ಈ ಸೂರ ಸೋರಬೇಕಾಗಿತ್ತು,
ನಾವಾ ನೀವಾ ಮಣ್ಣಿನ ಹದದಾಗ ರೆಂಟಿ ಹಲ್ಲ ಊರಿ
ಬೀಜಾ ಬಿತ್ತಬೇಕಾಗಿತ್ತು. ಅದರ ಶಿವಾ!-
ಹುಟ್ಟಿದ ಹೋರಿಗೋಳ ಆಗs ಎತ್ತಾಗಿ,
ಕೂಳಿಲ್ಲದ್ದಕ್ಕ ಎತ್ತಿನ ಎಲುವ ಅರದ ತಿಂದು,
ಊರ ಮಂದಿ ಗುಳೆ ಎದ್ದರೂ
ಮುಗಿಲಿಗೇನಾ ಕರುಣಾ ಬರಲಿಲ್ಲ.
ತಪ್ಪಿದ ಲೆಕ್ಕಾ ಬರೋಬರಿ ಮಾಡಾವರು ಯಾರಾ?
ಒಂದs ಒಂದು ಭರೋಸ ಬೀಜ ಕಳಕೊಂಡ
ಗುಡ್ಡ ಸೇರಿತು, ಬಸವಾ ಬಸವಾ!
ಇದನ್ನೆಲ್ಲ ನೆನದಾಗ ಹಗಲೆಲ್ಲ ಅನಸತೈತಿ,-
ನರಮನಿಶ್ಯಾ ಭೂಮಿ ತಲಿಮ್ಯಾಲ ಹುಟ್ಟಿದ ಬಳಿಕ
ಇಲ್ಲಾ ಕಸಾಬಾದರೂ ಆಗಬೇಕು-
ಇಲ್ಲಾ, ದನಾ ಆದರೂ ಆಗಬೇಕು.

(ಹೊಲೇರ ಕಮಲಿ ರಂಗಮಧ್ಯಕ್ಕೆ ಬಂದು ಬೆದರಿ ತಕ್ಷಣವೇ ಒಳಕ್ಕೆ ಓಡಿ ಹೋಗುವಳು)

ಅಡ! ಇಷ್ಟ ಅನ್ನೂದರಾಗs ಯಾವುದೋ ಬೆದಿಮಣಕ
ಹೀಂಗ ಬಂದ  ಹಾಂಗ ಹೋಯ್ತಲ್ಲೊ! ಯಾರವರಾ?
ಯಾರ ಯಾರವರಾ? ಅಪ್ಪೂ ಹಿಮ್ಯಾಳ್ಯಾ

ಹಿಮ್ಮೇಳದವ :  (ಪ್ರವೇಶಿಸಿ)
ಯಾಕ ಕರದಿ? ಯಾಕ ಕರದಿ?
ಮಣಕ ಅನ್ನೋದಷ್ಟs ತಡ, ಕಣ್ಣೀ ಹರಕೊಂಡ
ಹಾಂಗs ಬಂದೇನ, ಎಲ್ಲಿ ಐತಿ?

ಸೂತ್ರಧಾರ :  ಅಕಾ ಅವಸರ ಮಾಡಬ್ಯಾಡ, ಅಲ್ಲಿ ಹೌದಾ?
ಯಾರಾ, ಏನಾ ಕೇಳೋಣು, ಹೋಗಿ ಕರದು ಬಾ

ಹಿಮ್ಮೇಳದವ : (ಹೋಗದೆ ಹಾಗೇ ಕಣ್ಣು ತೆರೆದು ವರ್ಣಿಸುತ್ತ ನಿಲ್ಲುವನು)
ಕುಡಿಹಬ್ಬ ಕೊಂಕೇನ!
ಕಣ್ಣ ಕಾಡಿಗಿಯೇನ!
ಸಣ್ಣಾನೆಸಳ ಬೈತಲದಾಕಿ ಯಾಕಿಕ್ಕಿ?

ಸೂತ್ರಧಾರ : ಮೀರಿ ಹೊಗತಾಳ ಕೂಗ ಹೊಡದ ಕರಿಯೊ.

ಹಿಮ್ಮೇಳದವ : ಬಿರಿ ಬಿರಿ ನಡಿವಾಕಿ
ತಿರ ತಿರಗಿ ನೋಡುವಾಕಿ
ವಾರಿ ನೋಡಿ ವಯ್ಯಾರ ಮಾಡೋ ಹುಡಿಗಿ ಯಾರಿಕ್ಕಿ?

ಸೂತ್ರಧಾರ : ದೂರ ಹೋಗತಾಳ ಒದರಿ ಕರಿಯೊ

ಹಿಮ್ಮೇಳದವ : ಸಣ್ಣದಡಿ ಪಾವಡದಾಕಿ
ಕಿರಿ ನಿರಿಗಿ ಹೆಚ್ಚಿನ ಸೀರಿ
ಮಿರಿ ಮಿರಿ ಮಿಂಚೊ ಬಾಲಿ ಯಾರಿಕ್ಕಿ?

ಸೂತ್ರಧಾರ : ಏ, ಮರಿಗಾಗತಾಳ ಚೀರಿ ಕರಿ ಅಂದರ

ಹಿಮ್ಮೇಳದವ : ಏ ಅವೂ, ಪರಿಬ್ಯಾ ಕರೀತಾನ ಬಂದ,
ಎಲಿ ಅಡಿಕಿ ತಿಂದ,
ನಾಕ ಮಾತ ಮಾತಾಡಿ ಹೋಗ.
ಏ ಹತ್ತ ಬರೆ ಅವೂ…

(ತುಸು ಹೊತ್ತು ಇಬ್ಬರೂ ಸುಮ್ಮನಾಗಿ ಅದೇ ದಿಕ್ಕನ್ನು ನೋಡುತ್ತಿರುವಂತೆ ಕಮಲಿ ನಿಧಾನವಾಗಿ ರಂಗದ ಬಲಭಾಗದಿಂ ಬಂದು ಗಂಭೀರವಾಗಿ ನಿಲ್ಲುವಳು. ಎಡಗೈಯಲ್ಲಿ ಹಾಲಿನ ಗಡಿಗೆಯಿದೆ. ಪಾರಿಜಾತದ ಗೊಲ್ಲತಿಯಂತೆ ಅವಳ ಭಂಗಿ, ಉಡುಪು. ಕೊನೆಯ ತನಕ ಹಿಮ್ಮೇಳದವನ ಬಗ್ಗೆ ನಿರ್ಲಕ್ಷ್ಯದಿಂದ ಇರುತ್ತಾಳೆ)

ಸೂತ್ರಧಾರ : ಸೂರ್ಯ ತಾಯೀ ಹೊಟ್ಯಾಗ ಹೋದ ಯಾಳೇದಲ್ಲಿ
ಹಾಲಗಡಿಗಿ ಹಿಡಕೊಂಡ, ಕೈಬೀಸಿ,
ಬಿರಿಬಿರಿ ಹೊಂಟೀದಿ, -ತಂಗೀ
ನೀನು ಯಾರು?

ಹಿಮ್ಮೇಳದವ :    (ಕಮಲಿ  ಸುಮ್ಮನೆ ನಿಂತುದನ್ನು ನೋಡಿ)
ಉದ್ದಕ ಈಚಲಬಡ್ಡೀ ಹಾಂಗ ಹಾಂಗs ನಿಂತಾಳಲ್ಲೊ!
ದೇವರ ಇದಕ ಮೋತಿ ಮಕಾ ಮಾಡಿದಾನಿಲ್ಲೊ?
ಇನ್ನೊಮ್ಮಿ ಮಾತಾಡಿಸಿ ನೋಡು,

ಸೂತ್ರಧಾರ : ತಂಗೀ, ಇಲ್ಲಿ ಬಂದಂಥವಳು ನೀನು ದಾರು?

ಕಮಲಿ : ಹರೇದ ಹುಡಿಗೇರನ್ನ ತರಿಬಿ, ಹೆಸರ ಕೇಳೋವಂಥಾ ನೀನು ದಾರು?

ಹಿಮ್ಮೇಳದವ : ನಿಮ್ಮಂಥಾ ಹೊತ್ತ ಗೊತ್ತಿಲ್ಧs ತಿರಗಾವರಿಗಿ ಹಗ್ಗಾಹಚ್ಚಿ ಹಂತೀಹೂಡೋ ಮೇಟಿ ತಾಳ ಅಂತಾರ.
ಅಟ್ಟದ ಮ್ಯಾಲಿ ಬಂದಂಥವರನ್ನ ಗಟ್ಟಿಸಿ ಮಾತಾಡಿಸುವಂತಾ
ಸೂತ್ರಧಾರ ಅಂತಾರ.
ಹೋಗೂ ಬಾರೊ ಪರಬೂ ಅಂತಾರ.
ನನಗ ಬಂದ ಹಿಮ್ಮ್ಯಾಳ್ಯಾ ಅಂತಾರ

(ಪ್ರತಿಕ್ರಿಯೆಗಾಗಿ ಕಾದು ಆಗಲೂ ಅವಳು ಸುಮ್ಮನೆ ನಿಂತುದನ್ನು ನೋಡಿ)

ತೋದ ಹೊರಸಿನ್ಹಾಂಗ ಇನ್ನೂ ಬಿಗದ್ದಾಳಲ್ಲೊ
ನಾರೊ ಎಣ್ಣಿ ಹಚ್ಚಿದಾಳಂತ
ಭಾಳ ದಿಗರ ಮಾಡತಾಳೇನಿಕ್ಕಿ?

ಸೂತ್ರಧಾರ : ತಂಗೀ ಬಂದಂಥವಳು ನೀನು ದಾರು?
ನಿನ್ನ ನಾಮಾಂಕಿತವೇನು?

ಹಿಮ್ಮೇಳದವ : ಕನ್ನಡದಾಗ ಕೇಳೊ, ತಂಗೀ, ಓಣ್ಯಾಗಿನ
ಅವ್ವಕ್ಕಗೋಳು, ಹೇಲಗುಗ್ಗರಿ ತಿಂದ
ಇಟ್ಟಂಥಾ ನಿನ್ನ ಹೆಸರೇನು?

ಕಮಲಿ : ಅಪ್ಪಾ ಸೂತ್ರಧಾರ, ಹೇಳಾಕs ಬೇಕ?

ಸೂತ್ರಧಾರ : ಹೇಳಿದರ ನನಗಾದರೂ ತಿಳಿದೀತು.
ಕುಂತ ನಾಕ ಮಂದಿಗಾದರೂ ತಿಳಿದೀತು.

ಹಿಮ್ಮೇಳದವ : ಮ್ಯಾಲ ನನಗಾದರೂ ತಿಳಿಬಂದೀತು.

ಕಮಲಿ : ಸೂತ್ರಧಾರ, ಬಲಕ್ಕ ಬೇವಿನ ಮರ, ಎಡಕ್ಕ
ತೆಂಗಿನ ಮರ, ನಡಕಿನ ಹೊಲಗೇರ್ಯಾಗಿರುವಂಥಾ
ಹೊಲೇರ ಪಾರೀ ಮಗಳು,
ಕಮಲಿ ಕಮಲಿ ಅಂತಾರ ನೋಡು.

ಹಿಮ್ಮೇಳದವ : ಪಾರಿ? ಊರ ಹೋರಿಗೋಳೆಲ್ಲಾ ಅಕಿ ಕಾಲಾಗs
ಎತ್ತಾದವು ಬಿಡೋ.

ಸೂತ್ರಧಾರ : ಅವೂ ಕಮಲವ್ವ,
ಹೊತ್ತ ಮುಣಗಿದ ಯಾಳೇದಲ್ಲಿ
ಮನೀ ಮುಂದಿನ ಹೊರಸಿನ ಮ್ಯಾಲ ಕುಂಡ್ರೂದ ಬಿಟ್ಟ
ಹಾಲಗಡಿಗಿ ಹಿಡಕೊಂಡ
ಈ ಸಭಾಕ ಬಂದ್ಯಾಕ? ಹ್ವಾದ್ಯಾಕ?

ಹಿಮ್ಮೇಳದವ : ಹಾಂಗೆಲ್ಲಾ ಹೋಗಬ್ಯಾಡೊ ಹಂತ್ಯಾಕ ಹಾದರ
ಗಬ್ಬ ಆಗೂ ಜಾತಿ ಅದು!

ಕಮಲಿ : ಅಪ್ಪಾ ಸೂತ್ರಧಾರ
ಕಾಲಾಗ ಕೆಟ್ಟ ಅಮಾಸಿ ಬಂತು.
ಇಂದಿಗೆ ಮೂರ ದಿನದಿಂದ ಕೆಟ್ಟ ಕನಸ ಬಿದ್ದ,
ಕನಸಿನಾಗ ಯೋಳಹೆಡಿ ಸರ್ಪ ಕಂಡ್ಹಾಂಗಾಗಿ,
ದೇವರಿಗಿ ಹಾಲೆರದ, ಬೇಡಿಕೊಂಬರಾಕ ಹೊಂಟೇನಿ.

ಸೂತ್ರಧಾರ : ಯೋಳಹೆಡಿ ಸರ್ಪ ಕಂಡರ ಕೆಟ್ಟ ಕನಸ ಹೆಂಗ ಆಯ್ತು?

ಕಮಲಿ : ಅಯ್ ಶಿವನ! ಹೆಂಗ ಹೇಳಲೆ?

ಹಿಮ್ಮೇಳದವ : ಏ. ಹೆಂಗಾರ ಮಾಡಿ ಹೇಳಾಕs ಬೇಕ ತಗಿ.

ಕಮಲಿ : ಅವಯ್ಯ! ಏನ ಹೇಳಲೆ?

ಹಿಮ್ಮೇಳದವ : ಏನಾರ ಹೇಳಾಕs ಬೇಕ ಬಿಡು. ನಿಂದ ಕೇಳಾಕs
ನಾ ಹುಟ್ಟಿಧಾಂಗ ಅನ್ನಸಾಕ ಹತ್ತೇತಿ!

ಕಮಲಿ : ಅಪ್ಪಾ ಸೂತ್ರಧಾರ,
ಇಂದಿಗಿ ಮೂರ ರಾತ್ರಿ ಆತು, ಕೆಟ್ಟ ಕನಸ
ಬೀಳಲಿಕ್ಹತ್ಯಾವ…

ಸೂತ್ರಧಾರ : ತಂಗೀ ಕನಸಿನೊಳಗ ಏನೇನ ಕಂಡಿ?

ಕಮಲಿ : ಹಾಂಗಾದರ ಹೇಳುತ್ತೇನೆ ಕೇಳುವಂಥವನಾಗು

ಸೂತ್ರಧಾರ : ಕೇಳುತ್ತೇನೆ, ನೀನಾದರೂ ಹೇಳುವಂಥವಳಾಗು

ಕಮಲಿ : (ಉಚಿತ ಅಭಿನಯ, ನೃತ್ಯದೊಂದಿಗೆ)
ಅಪ್ಪಾ ಸೂತ್ರಧಾರ ಕೇಳೊ ಕನಸ ಕಂಡಿನೆ
ಸುಖದ ನೋವ ಸದ್ದಮಾಡಿ ಹೆಂಗ ಹೇಳಲೆ? ||ಪ||

ಬೆಳ್ಳಿತೊಡಿಯ ಬಿಳಿಯ ಕುದರಿ ಬೆರಗ ಕಂಡಿನೆ
ಬೆನ್ನನೇರಿ ಚಿನ್ನದುರಿಯ ಕಾಡ ಕಂಡಿನೆ||

ಅಯ್ ನನ ಶಿವನ ಆರ್ಯಾಣದಾಗ ಅರಳಿ ಶಿರಸ
ಎಲ್ಲಿ ಕೈಯ ಹಾಕಿದಲ್ಲಿ ಗೊಂಚಲs ಗೊಂಚಲ||

ಹಿಂದ ಮುಂದ ತಂಪಗಾಳಿ ತೀಡಿ ಸಳಸಳ
ಚಿನ್ನ ತೊಡಿಯ ಊರಿ ಸುರಿಸೇನ ಹೂವ ಬಳಬಳ||

ಹೂವ ಕರಗಿ ಕೆಂಪ ನೀರ ಕೆರಿಯ ಕಂಡಿನೆ
ಯೋಳ ಹೆಡಿಯ ಕಾಳನಾಗ ದೊರಿಯ ಕಂಡಿನೆ||

ಸಂದಿಗೊಂದಿ ಬೆಂಕಿ ಹಚ್ಚಿ ಹೆಡಿಯ ಚುಚ್ಚಿದಾ
ಮೈಯನೊಟ್ಟಿ ಮೆಟ್ಟಿ ತುಳಿದು ಮುದ್ದಿ ಮಾಡಿದಾ||

ಬಳಸಿ ಆಗುಮಾಡಿ ಸಾಗಿ ಸಂದು ಹೋದನೊ
ಸುಖದ ನೋವ ಎದಿಗಿ ನಟ್ಟು ದಾಟಿ ಹೋದನೊ

ಅಪ್ಪಾ ಸೂತ್ರಧಾರ

ಸೂತ್ರಧಾರ : ಹಾ.

ಕಮಲಿ : ಕಾಣಾ ಕಾಣಾ ಇದರಿಗೊಂದ ಬಿಳಿ ಕುದರ್ಯಾಗಿ
ಕುದರೀ ಏರಿ ಸೆರಗ ಬೀಸಿಧಾಂಗಾತು
ಕಣ್ಣಮುಚ್ಚಿ ಕಣ್ಣ ತೆರೆಯೋದರೊಳಗ
ನಿರ್ವಾಣೆಪ್ಪನ ಗುಡ್ಡ ಆಗಿ, ಗುಡ್ಡದ ತುಂಬ
ಎಲ್ಲಿ ನೋಡತಿ ಅಲ್ಲಿ, ಎಲ್ಲಿ ಕೈ ಹಾಕತಿ ಅಲ್ಲಿ
ಕೆಂಪ ಹೂವಿನ ಗೊಂಚಲs ಗೊಂಚಲ!
ನನ್ನ ಮೈ ಸಂದಿಗೊಂದ್ಯಾಗೆಲ್ಲ ಮೂಡಗಾಳಿ ಸುಳುಸುಳು ಅಂದ,
ಶಿವನs ಇದೇನಂತ ನೋಡಿಕೊಂಡರ,-
ನಾನs ಬಂಗಾರ ತೊಡಿ ಊರಿ ಗಿಡಾ ಆಧಾಂಗಾತು!
ನಡುಕ ಹುಟ್ಟಿ ಮೈ ಹೀಂಗ ಅಲುಗಿದರ,
ಬಳಬಳಾ ಹೂ ಉದರಿ, ಉದುರಿದ ಹೂವ ಕೆಂಪ ಕೆರಿಯಾಗಿ
ಕೈಮಾಡಿ ಕರಧಾಂಗಾತು!
ಕುಡೀಬೇಕಂದರ ಬಗಸ್ಯಾಗ ಬಂತು ಇಲ್ಲಾ,-
ಯೋಳ ಹೆಡಿ ನಾಗರಹಾಂವ ನಡಾ ಬಿಗಧಾಂಗಾಗಿ
ಎವ್ವಾs ಅಂತ ಚಿಟ್ಟನ ಚೀರಿ ಎಚ್ಚರಾತು.
ಕರೆವ್ವಗ ಹಾಲೆರಿ ಅಂತ ಅವ್ವ ಅಂದಳು.
ಅದಕ್ಕs ಹೊಂಟೇನಿ.

ಹಿಮ್ಮೇಳದವ : ಅಂತೂ ಹಾಲಿನ ಗಡಿಗಿನ್ನೂ ಮುಕ್ಕಾಗಿಲ್ಲಂಧಾಂಗಾತು.

ಸೂತ್ರಧಾರ : ಅಷ್ಟ ಸಸಾರಲ್ಲೊ ಈ ಗಣಿತ. ಕಮಲವ್ವಾ,
ನೀ ಎಲ್ಲಿ, ಯಾಕ ಹೊಂಟೀದಿ ಅನ್ನೋದು ನನಗಾದರೂ
ತಿಳೀತು, ಕುಂತ ಸಭಾಕಾದರು ತಿಳಿದಬಂತು.
ಆದರ ಮೊದಲ ಬಂದ್ಯಾಕ? ಹ್ವಾದ್ಯಾಕ?

ಕಮಲಿ : ಹಿಂಗs ಹೋಗೂಣಂತ ಸನೆ ನೋಡಿ ಬಂದರ
ಗುಬುಗುಬು ಮಂದಿ ಕೂಡಿತ್ತು, ತಿರಿಗಿನಿ.
ಮಂದ್ಯಾಗ ನಂದೇನೈತಿ? ಅಂಧಾಂಗ ಮಂದಿ
ಯಾಕ ಕೂಡೇತಿ?

ಸೂತ್ರಧಾರ : ನಮಗ ನಿನಗ ಹೇರಪೇರ ಆಗೋದs ಇಲ್ಲಿ.
ನೀ ಯಾಕ ಹೊಂಟೀದಿ ಅನ್ನೋದರ ನಿನಗ ಗೊತ್ತೈತಿ:
ನಮಗ ಎಂದ ಗೊತ್ತಿತ್ತು?
ಮರತವರ್ಹಾಂಗ ಹುಡಿಕ್ಯಾಡಾಕ ಸೇರೇವಿಲ್ಲ.
ಏನ ಮರತಿದೇವ ಅದs ಗೊತ್ತಿಲ್ಲಾ, ಹುಡುಕೋದೇನಾ?
ಬಿಳೀ ಮುಗಲ ಸಂಜಿ ಮುಂಜಾನೆ
ಒಣಾ ಬಣ್ಣಾ ನಕ್ಕ ತಿರಿಗೇ ತಿರಿಗತೈತಿ.
ಭೂಮಿಮ್ಯಾಲ ಲಂಗೋಟಿಯಷ್ಟ ನೆರಳ ಬೀಳೋದಿಲ್ಲ;
ಹದಾ ಬಾಯ್ತೆರದ ಹಾಂಗs ನಿಂತೈತಿ,-

ಹಿಮ್ಮೇಳದವ : ಮಂದೀದೊಂದಾದರ ನಿಂದs ಒಂದಪಾ!
ನೆಟ್ಟಗ ಮಾತಾಡಾಕೇನ ರೊಕ್ಕ ಬೀಳತಾವು?
ಮಾರಾಯಾ, ಸರಳ ಹಾದೀ ಹಿಡದ ಮಾತಾಡಿದರs
ಒಬ್ಬನ ಮಾತ ಇನ್ನೊಬ್ಬಗ ಮುಟ್ಟೋ ದಿನಮಾನ ಅಲ್ಲಿವು;
ಅಂತಾದರಾಗ ಒಂಕ ಒಗಟಾ ಹಾಕಿದರ?
ನೋಡ ಕಮಲವ್ವಾ, ಹೇಳಿ ಹ್ವಾದ ಮಳಿ ಬರಲಿಲ್ಲ.
ಊರಿಗಿ ಊಟಾ ಹಾಕಿ ಐದ ದಿನಾ ಹಸೀ ಒದ್ದೀಲೆ
ಬಜನಿ ಮಾಡಿದರೂ ಮುಗಲ ಯಾಕನ್ನಲಿಲ್ಲ.
ಯಾಕನ್ನಬೇಕನ್ನಲಾ. ಗೌಡ್ರ ಮಗ ಬಾಳಗೊಂಡ
ಸಾಲಿ ಬರ್ಯಾಕ ಬ್ಯಾರೇ ದೇಸಕ ಹೋಗಿದ್ದ.
ಅಷ್ಟೂ ಬರದ ಇಂದ ಬರತಾನ.
ಮನ್ನಿ, ಪಾರಂಬಿ ಕರ್ರೆವ್ವ ಪೂಜೇರಿ ಮೈಯಾಗ ತುಂಬಿ
‘ಬಾಳಗೊಂಡ ಬಂದ ಊರ ಅಗಸ್ಯಾಗ
ಮೂರ ಹೆಜ್ಜಿ ಇಟ್ಟದ್ದಾದರ,
ಪಳಪಳ ಮಳಿ ಬರತೈತಿ’ ಅಂತ ಹೇಳ್ಯಾಳ.
ಮೂರ್ಯಾಕ? ಅಗಸ್ಯಾಗ ಐದ ಹೆಜ್ಜಿ ಬಿಟ್ಟ, ಗದ್ದಿಗೀ ಮಾಡೇವ!
ಎಲ್ಲಾ ಆತು. ಇನ್ನ ಅವನ ಕಾಲಗುಣಲೆ ಆದರೂ
ಮಳಿ ಬರತೈತೇನಂತ ಅಗಸ್ಯಾಗ ನಿಂತೇವ.
ಹೊತ್ತ ಮುಣಗಿ ಕತ್ತಲಾಗಾಕ ಹತ್ತೇತಿ
ಇನ್ನೇನ ಬರೋ ಹೊತ್ತಾತ.

ಸೂತ್ರಧಾರ : ಅವೂ ಕಮಲವ್ವ,
ಪೂಜಿಗಿ ಹೋಗೋದ ಹೋಗತಿ.
ನೀ ಎರದ ಹಾಲಿನ್ಹಾಂಗ ಮುಗಲ ಸುರೀಲೆಂತ
ಬೇಡಿಕೋ ಹೋಗು.

ಕಮಲಿ : ಹಾಂಗಾದರ, ಅಪ್ಪಾ ಸೂತ್ರಧಾರ ನಾ ಬರಲ್ಯಾ?
ಅಪ್ಪೂ ಹಿಮ್ಯಾಳ್ಯಾ ನಾ ಬರಲ್ಯಾ?
(ಹೋಗುವಳು)